ದಕ್ಷಿಣ ಕನ್ನಡ
ನಗರಸಭೆ ಉಪಚುನಾವಣೆ – ಬಿಜೆಪಿಯಿಂದ ಅಭ್ಯರ್ಥಿ ಘೋಷಣೆ : ಪುತ್ತಿಲ ಪರಿವಾರ ಸ್ಪರ್ಧೆ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷರು ಹೇಳಿದ್ದೇನು?
ಪುತ್ತೂರು ನಗರ ಸಭೆಯ ಎರಡು ವಾರ್ಡ್ ಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ ನಗರ ಸಭೆಯ 1 ನೇ ವಾರ್ಡ್ಗೆ ಸುನೀತಾ ಹಾಗೂ ನಗರಸಭೆಯ 11 ವಾರ್ಡ್ ಗೆ ರಮೇಶ್ ರೈಯವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ.
ಅಭ್ಯರ್ಥಿ ಆಯ್ಕೆಗೆ ಮುಂಚೆ ಪುತ್ತೂರಿನ ರೋಟರಿ ಮನಿಷಾ ಹಾಲ್ ನಲ್ಲಿ ಪುತ್ತೂರಿನ ಬಿಜೆಪಿ ಪ್ರಮುಖರ ಸಭೆ ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಅವರ ನೇತ್ರತ್ವದಲ್ಲಿ ನಡೆಯಿತು. ಇಲ್ಲಿ ಈ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಲಾಯಿತು. ಬಳಿಕ ಪುತ್ತೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರು.
ಎರಡೂ ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಆ ಮೂಲಕ ನಗರಸಭೆಯ 31 ಸ್ಥಾನಗಳಲ್ಲಿ 26 ಸ್ಥಾನಗಳನ್ನು ಬಿಜೆಪಿ ಸದಸ್ಯರು ಪಡೆದುಕೊಂಡು ಪಾರಮ್ಯ ಮೆರೆಯಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪುತ್ತಿಲ ಪರಿವಾರ ಸ್ಪರ್ಧೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧ್ಯಕ್ಷರು, ಪ್ರಜಾಪ್ರಭುತ್ವದಲ್ಲಿ ಯಾರಿಗೂ ಸ್ಪರ್ಧೆ ಮಾಡಬಹುದು. ನಾವು ರಾಷ್ಟ್ರೀಯ ಪಕ್ಷವಾಗಿ ಸ್ಪರ್ಧಿಸುತ್ತೇವೆ ಮತ್ತು ಗೆಲ್ಲುತ್ತೇವೆ. ಪಕ್ಷಕ್ಕೆ ಒಂದು ವ್ಯವಸ್ಥೆ, ಚೌಕಟ್ಟು ಇದೆ. ಅಲ್ಲಿ ಚರ್ಚೆ, ವಿಮರ್ಶೆಗಳು ನಡೆದು ಗೊಂದಲಗಳನ್ನು ಸರಿಪಡಿಸಲಾಗುತ್ತದೆ ಎಂದು ಹೇಳಿದರು.

ನಾಳೆ (ಡಿ 15ರಂದು) ಬೆಳಿಗ್ಗೆ ನಾಮ ಪತ್ರ ಸಲ್ಲಿಸುವ ಅಭ್ಯರ್ಥಿಗಳು ಹಾಗೂ ಪಕ್ಷದ ಪ್ರಮುಖರು ಶ್ರೀ ಮಹಾಲೀಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಅಲ್ಲಿಂದ ಪುತ್ತೂರು ನಗರ ಸಭೆ ಕಛೇರಿಯವರೆಗೆ ಮೆರವಣಿಗೆಯಲ್ಲಿ ಸಾಗಿ ತದನಂತರ ಅಲ್ಲಿಂದ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ.

ಅಭ್ಯರ್ಥಿಗಳ ಪರಿಚಯ

ರಮೇಶ್ ರೈಯವರು ಬಿಜೆಪಿಯ ಹಿರಿಯ ಕಾರ್ಯಕರ್ತರಾಗಿದ್ದು, ಪುತ್ತೂರು ಪುರಸಭೆಯಾಗಿದ್ದ ಸಂದರ್ಭ 2012ರಲ್ಲಿ ನಡೆದ ಚುನಾವಣೆಯಲ್ಲಿ ಮೊಟ್ಟೆತಡ್ಕ ವಾರ್ಡ್ ನಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ವೇಳೆ ಆ ವಾರ್ಡ್ ನಲ್ಲಿ ಹಲವು ಅಭಿವೃದ್ದಿ ಕಾರ್ಯಗಳನ್ನು ನಡೆಸಿದ್ದರು. ಕಳೆದ ಬಾರಿ ನಡೆದ ನಗರ ಸಭೆ ಚುನಾವಣೆಯಲ್ಲಿ ವಾರ್ಡ ನಂ 11 ರಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಶಕ್ತಿ ಸಿನ್ಹಾರವರ ಎದುರು ಅವರು ಪರಭಾವಗೊಂಡಿದ್ದರು. ಸುಳ್ಯ ಮಂಗಳ ಡ್ರೈವಿಂಗ್ ಸ್ಕೂಲನ್ನು ನಡೆಸುತ್ತಿರುವ ಅವರು ನೆಲ್ಲಿಕಟ್ಟೆ ಖಾಸಗಿ ಬಸ್ಸು ನಿಲ್ದಾಣದ ಬಳಿ ನಿವಾಸಿ .

ಬಿಜೆಪಿ ಸದಸ್ಯ ಶಿವರಾಮ ಸಪಲ್ಯರವರ ನಿಧನದಿಂದ ತೆರವಾಗಿರುವ ವಾರ್ಡ್ 1 ಕ್ಕೆ ಅವರ ಅಣ್ಣನ ಪತ್ನಿ ಸುನೀತಾ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಇವರು ಎರಡು ಬಾರಿ ಕಲ್ಲೇಗ ಕಲ್ಕುಡ ಕಲ್ಲುರ್ಟಿ ದೇವಸ್ಥಾನದ ಟ್ರಸ್ಟಿಯಾಗಿದ್ದಾರೆ. ಧರ್ಮಸ್ಥಳ ಗ್ರಾಮೀಣಾ ಅಭಿವೃದ್ದಿ ಯೋಜನೆಯ ಪುತ್ತೂರು ಘಟಕದಲ್ಲಿ ವಿವಿಧ ಜವಬ್ದಾರಿಗಳನ್ನು ನಿರ್ವಹಿಸಿದ ಅನುಭವ ಅವರದಾಗಿದೆ.
ಶಿಕ್ಷಣ
Science Fair-ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಕೋಡ್ಕ್ರಾಫ್ಟ್ ವಿಜ್ಞಾನ ಮೇಳ-2026: ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ
ಆಕಾಂಕ್ಷಾ ಚಾರಿಟಬಲ್ ಟ್ರಸ್ಟ್ (ರಿ.), ಪುತ್ತೂರು ಹಾಗೂ ಕೋಡ್ಕ್ರಾಫ್ಟ್ ಟೆಕ್ನಾಲಜೀಸ್, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ‘ಜಿಲ್ಲಾ ಮಟ್ಟದ ಕೋಡ್ಕ್ರಾಫ್ಟ್ ವಿಜ್ಞಾನ ಮೇಳ – 2026’ ಶನಿವಾರ, ನವೆಂಬರ್ 21ರಂದು ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ಜರುಗಿತು.
ಪುತ್ತೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಕುತೂಹಲ ಹಾಗೂ ಪ್ರಾಯೋಗಿಕ ಕಲಿಕೆಯನ್ನು ಬೆಳೆಸುವ ಉದ್ದೇಶದಿಂದ ಆಕಾಂಕ್ಷಾ ಚಾರಿಟಬಲ್ ಟ್ರಸ್ಟ್ (ರಿ.), ಪುತ್ತೂರು ಹಾಗೂ ಕೋಡ್ಕ್ರಾಫ್ಟ್ ಟೆಕ್ನಾಲಜೀಸ್, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ‘ಜಿಲ್ಲಾ ಮಟ್ಟದ ಕೋಡ್ಕ್ರಾಫ್ಟ್ ವಿಜ್ಞಾನ ಮೇಳ – 2026’ ಶನಿವಾರ, ನವೆಂಬರ್ 21ರಂದು ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ಜರುಗಿತು.

ಶಾಲಾ ಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ಯಶಸ್ವಿ ಪಯಣ:
“ಉತ್ತಮ ಜೀವನಕ್ಕಾಗಿ ವಿಜ್ಞಾನ” ಎಂಬ ಆಶಯದೊಂದಿಗೆ ಆರಂಭಗೊಂಡ ಈ ಅಭಿಯಾನದ ಮೊದಲ ಹಂತದಲ್ಲಿ ಜಿಲ್ಲೆಯ 41 ಗ್ರಾಮೀಣ ಶಾಲೆಗಳಲ್ಲಿ ಶಾಲಾ ಮಟ್ಟದ ವಿಜ್ಞಾನ ಮೇಳಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ 1,189 ವಿದ್ಯಾರ್ಥಿಗಳು ಭಾಗವಹಿಸಿ ಸುಮಾರು 650 ವಿನೂತನ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದ್ದರು. ಶಾಲಾ ಮಟ್ಟದಲ್ಲಿ ವಿಜೇತರಾದ ತಂಡಗಳು ಜಿಲ್ಲಾ ಮಟ್ಟದ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು.

ಜಿಲ್ಲಾ ಮಟ್ಟದ ಅಂತಿಮ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ ವಿಭಾಗದ 66 ಹಾಗೂ ಪ್ರೌಢಶಾಲಾ ವಿಭಾಗದ 57 ತಂಡಗಳು ಸೇರಿದಂತೆ ಒಟ್ಟು 123 ತಂಡಗಳು ಭಾಗವಹಿಸಿದ್ದವು. ಇದೇ ಸಂದರ್ಭದಲ್ಲಿ ಬಂಟರ ಭವನದಲ್ಲಿ ಸಂಪನ್ಮೂಲ ವ್ಯಕ್ತಿ ಅನಿರುದ್ಧ್ ವಾಗ್ಳೆ ವಿದ್ಯಾರ್ಥಿಗಳಿಗೆ ವಿಶೇಷ ಪ್ರೇರಣಾದಾಯಕ ಅವಧಿ ನಡೆಸಿಕೊಟ್ಟರು. ಮಾರ್ಗದರ್ಶಿ ಶಿಕ್ಷಕರಿಗಾಗಿ ಶಾಲೆಯ ಅಟಲ್ ಟಿಂಕರಿಂಗ್ ಪ್ರಯೋಗಾಲಯದಲ್ಲಿ ಸಂವಾದ ಹಾಗೂ ಮಾರ್ಗದರ್ಶನ ಕಾರ್ಯಕ್ರಮ ನಡೆಯಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ, “ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ನಿರಂತರ ಪರಿಶ್ರಮವಿದ್ದಾಗ ಮಾತ್ರ ಹೊಸ ಆವಿಷ್ಕಾರಗಳು ಸಾಧ್ಯವಾಗುತ್ತವೆ. ನಿರಂತರ ಕಲಿಕೆಯಿಂದ ವಿದ್ಯಾರ್ಥಿಗಳು ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬಹುದು” ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಕೋಡ್ಕ್ರಾಫ್ಟ್ ಟೆಕ್ನಾಲಜೀಸ್ನ ಸಹ-ಸಂಸ್ಥಾಪಕ ಶ್ರೀ ಪ್ರವೀಣ್ ಕ್ಯಾಸ್ಟಲಿನೋ, “ವಿದ್ಯಾರ್ಥಿಗಳಲ್ಲಿರುವ ಕುತೂಹಲವೇ ಹೊಸ ಆವಿಷ್ಕಾರಗಳಿಗೆ ದಾರಿ ಮಾಡಿಕೊಡುತ್ತದೆ. ಪ್ರಶ್ನಿಸುವ ಹಾಗೂ ಪ್ರಯೋಗ ಮಾಡುವ ಮನೋಭಾವ ಬೆಳೆಸಿಕೊಂಡಾಗ ಗ್ರಾಮೀಣ ಪ್ರತಿಭೆಗಳು ದೊಡ್ಡ ಮಟ್ಟದ ಸಾಧನೆ ಮಾಡಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕೋಡ್ಕ್ರಾಫ್ಟ್ ಟೆಕ್ನಾಲಜೀಸ್ನ ಆಪರೇಷನ್ಸ್ ಲೀಡ್ ಜೋಬಿನ್ ಜೋಸೆಫ್ ಹಾಗೂ ಆಕಾಂಕ್ಷಾ ಚಾರಿಟಬಲ್ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿ ಡಾ. ಶ್ರೀಶ ಬೈಪದವು ಉಪಸ್ಥಿತರಿದ್ದರು. ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಗಾಯತ್ರಿ ಎಸ್. ಸ್ವಾಗತಿಸಿದರು. ರಾಜೇಶ್ವರಿ ಎನ್. ನಿರೂಪಿಸಿ, ನೇತ್ರಾ ಡಿ. ರಾವ್ ವಂದಿಸಿದರು.
ಶಿಕ್ಷಣ
Philomena-ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಐದು ದಿನಗಳ ಡಿಜಿಟಲ್ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಿದ್ಧತಾ ತರಬೇತಿ ಕಾರ್ಯಕ್ರಮ
ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಇದರ ತರಬೇತಿ ಮತ್ತು ಉದ್ಯೋಗ ನಿಯೋಜನಾ ಘಟಕದ ವತಿಯಿಂದ ಕಾಲೇಜಿನ ಎಲ್ಲಾ ಸ್ನಾತಕೋತ್ತರ ಪದವಿ ವಿಭಾಗಗಳ ವಿದ್ಯಾರ್ಥಿಗಳಿಗೆ ನವೆಂಬರ್ 16ರಿಂದ 20ರವರೆಗೆ ಐದು ದಿನಗಳ ಡಿಜಿಟಲ್ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಿದ್ಧತಾ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಪುತ್ತೂರು, ನ. 22: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಇದರ ತರಬೇತಿ ಮತ್ತು ಉದ್ಯೋಗ ನಿಯೋಜನಾ ಘಟಕದ ವತಿಯಿಂದ ಕಾಲೇಜಿನ ಎಲ್ಲಾ ಸ್ನಾತಕೋತ್ತರ ಪದವಿ ವಿಭಾಗಗಳ ವಿದ್ಯಾರ್ಥಿಗಳಿಗೆ ನವೆಂಬರ್ 16ರಿಂದ 20ರವರೆಗೆ ಐದು ದಿನಗಳ ಡಿಜಿಟಲ್ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಿದ್ಧತಾ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಈ ತರಬೇತಿ ಕಾರ್ಯಕ್ರಮವು ಕಾಲೇಜಿನ ನಿರಂತರ ಉದ್ಯೋಗ ಸಿದ್ಧತಾ (Placement Readiness) ಉಪಕ್ರಮದ ಭಾಗವಾಗಿದ್ದು, ವಿದ್ಯಾರ್ಥಿಗಳನ್ನು ಕ್ಯಾಂಪಸ್ ಮತ್ತು ಆಫ್-ಕ್ಯಾಂಪಸ್ ಉದ್ಯೋಗ ನೇಮಕಾತಿ ಪ್ರಕ್ರಿಯೆಗಳಿಗೆ ಸಮರ್ಥವಾಗಿ ಸಿದ್ಧಗೊಳಿಸುವ ಉದ್ದೇಶವನ್ನು ಹೊಂದಿದೆ. ಉದ್ಯಮಗಳ ಪ್ರಸ್ತುತ ಅಗತ್ಯಗಳಿಗೆ ಅನುಗುಣವಾಗಿ ವಿದ್ಯಾರ್ಥಿಗಳ ಡಿಜಿಟಲ್ಕೌ ಶಲ್ಯ, ಉದ್ಯೋಗಾರ್ಹ ಸಾಮರ್ಥ್ಯ, ಸಂವಹನ ಕೌಶಲ್ಯ ಹಾಗೂ ವೃತ್ತಿಪರ ಆತ್ಮವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ತರಬೇತಿಯನ್ನು ರೂಪಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence – AI) ಮತ್ತು ಉದ್ಯೋಗಾರ್ಹತಾ ಕೌಶಲ್ಯಗಳು (Employability Skills – Lifelong Profession) ಎಂಬ ಪ್ರಮುಖ ವಿಷಯಗಳ ಕುರಿತು ತರಬೇತಿ ನೀಡಲಾಯಿತು.

ತರಬೇತುದಾರರಾದ ದೀಪಕ್ ಬಡಿಗೇರ್ ಮತ್ತು ಆಯೆಶತ್ ಹಫೀಝಾ ಅವರು ವಿವಿಧ ಪ್ರಾಯೋಗಿಕ ಚಟುವಟಿಕೆಗಳು ಹಾಗೂ ಸಂವಾದಾತ್ಮಕ ಅಧಿವೇಶನಗಳ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಕೃತಕ ಬುದ್ಧಿಮತ್ತೆಯ ಮೂಲ ಪರಿಕಲ್ಪನೆಗಳು, ಉದಯೋನ್ಮುಖ ತಂತ್ರಜ್ಞಾನಗಳ ಬಳಕೆ, ಸಂವಹನ ಕೌಶಲ್ಯ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ, ತಂಡದೊಂದಿಗೆ ಕಾರ್ಯನಿರ್ವಹಿಸುವ ಕೌಶಲ್ಯ ಹಾಗೂ ವೃತ್ತಿಪರ ಜೀವನಕ್ಕೆ ಅಗತ್ಯವಾದ ಸಾಮರ್ಥ್ಯಗಳ ಕುರಿತು ಮಾರ್ಗದರ್ಶನ ನೀಡಲಾಯಿತು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ IBM SkillsBuild ಡಿಜಿಟಲ್ ಕಲಿಕಾ ವೇದಿಕೆಯ ಪರಿಚಯ
ಮಾಡಿಕೊಡಲಾಯಿತು. ನಿಗದಿತ ಕಲಿಕಾ ಅವಶ್ಯಕತೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ IBM SkillsBuild ವತಿಯಿಂದ ಪ್ರಮಾಣಪತ್ರಗಳನ್ನು ನೀಡಲಾಯಿತು. ಈ ಪ್ರಮಾಣಪತ್ರಗಳು ವಿದ್ಯಾರ್ಥಿಗಳ ಶೈಕ್ಷಣಿಕ ಅರ್ಹತೆಯೊಂದಿಗೆ ಹೆಚ್ಚುವರಿ ವೃತ್ತಿಪರ ಕೌಶಲ್ಯಗಳನ್ನು ಗುರುತಿಸಲು ಸಹಕಾರಿಯಾಗಲಿವೆ.
ಶೈಕ್ಷಣಿಕ ಜ್ಞಾನ ಮತ್ತು ಉದ್ಯಮ ಕ್ಷೇತ್ರದ ನಿರೀಕ್ಷೆಗಳ ನಡುವಿನ ಅಂತರವನ್ನು ಕಡಿಮೆ ಮಾಡಿ, ವಿದ್ಯಾರ್ಥಿಗಳನ್ನು ಉದ್ಯೋಗಕ್ಕೆ ಸನ್ನದ್ಧರನ್ನಾಗಿಸುವ ನಿಟ್ಟಿನಲ್ಲಿ ಈ ಐದು ದಿನಗಳ ತರಬೇತಿ ಕಾರ್ಯಕ್ರಮ ಮಹತ್ವದ ಪಾತ್ರ ವಹಿಸಿತು.
ಉದ್ಯೋಗಮುಖಿ ಶಿಕ್ಷಣದೊಂದಿಗೆ ಉಜ್ವಲ ಭವಿಷ್ಯಕ್ಕೆ ಮುನ್ನುಡಿ!
ಸಂತ ಫಿಲೋಮಿನಾ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉದ್ಯಮ ಕ್ಷೇತ್ರದ ಅಗತ್ಯಗಳಿಗೆ ಪೂರಕವಾದ ಕೌಶಲ್ಯಗಳನ್ನು ಬೆಳೆಸಲು ವಿಶೇಷ ಆದ್ಯತೆ ನೀಡಲಾಗುತ್ತಿದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪದವಿ ಮಾತ್ರವಲ್ಲದೆ, ಡಿಜಿಟಲ್ ಜ್ಞಾನ, ಕೃತಕ ಬುದ್ಧಿಮತ್ತೆಯ ಅರಿವು, ಸಂವಹನ ಕೌಶಲ್ಯ ಮತ್ತು ವೃತ್ತಿಪರ ಸಾಮರ್ಥ್ಯಗಳೂ ಅತ್ಯಂತ ಅವಶ್ಯಕವಾಗಿವೆ.
ಸ್ವಾಯತ್ತ ಶಿಕ್ಷಣ ವ್ಯವಸ್ಥೆಯಡಿ ನವೀನ ಕಲಿಕಾ ವಿಧಾನಗಳು, ಕೌಶಲ್ಯಾಧಾರಿತ ತರಬೇತಿ, ಉದ್ಯೋಗ ನಿಯೋಜನೆಗೆ ಪೂರಕ ಕಾರ್ಯಕ್ರಮಗಳು ಹಾಗೂ ಉದ್ಯಮ ಸಂಪರ್ಕದ ಮೂಲಕ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಕಾಲೇಜು ಬದ್ಧವಾಗಿದೆ.
ನಿಮ್ಮ ಉನ್ನತ ಶಿಕ್ಷಣದ ಕನಸುಗಳಿಗೆ ಸಂತ ಫಿಲೋಮಿನಾ ಕಾಲೇಜು ಸೂಕ್ತ ವೇದಿಕೆ. ಜ್ಞಾನ, ಕೌಶಲ್ಯ ಮತ್ತು ಮೌಲ್ಯಗಳೊಂದಿಗೆ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇಂದೇ ನಮ್ಮ ಕಾಲೇಜನ್ನು ಆಯ್ಕೆಮಾಡಿ. ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು – ನಿಮ್ಮ ಉಜ್ವಲ ಭವಿಷ್ಯದತ್ತ ಮೊದಲ ಹೆಜ್ಜೆ!
– ರೆವ್. ಡಾ. ಆಂಟನಿ ಪ್ರಕಾಶ್ ಮೊಂತೆರೋ
ಪ್ರಾಂಶುಪಾಲರು, ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರು
ದಕ್ಷಿಣ ಕನ್ನಡ
Puttur Medical College : ಮೆಡಿಕಲ್ ಕಾಲೇಜು ಆರಂಭಕ್ಕೆ ಪುತ್ತೂರು ಸಜ್ಜು; ಪ್ಲಾನ್ “ಬಿ” ಗೆ ವೇಗ; ಮೂಲಸೌಕರ್ಯ ಪರಿಶೀಲಿಸಿದ ತಜ್ಞರ ತಂಡ – ನವೆಂಬರ್ 30ರೊಳಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ

ಪುತ್ತೂರು: ಪುತ್ತೂರಿನಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಆರಂಭಿಸುವ ಕನಸು ನನಸಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದ್ದು, 2027-28ನೇ ಶೈಕ್ಷಣಿಕ ಸಾಲಿನಲ್ಲಿ ಮೊದಲ ಹಂತವಾಗಿ 50 ವಿದ್ಯಾರ್ಥಿಗಳ ಪ್ರವೇಶಕ್ಕೆ ಅಗತ್ಯ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ನಿಟ್ಟಿನಲ್ಲಿ ಕಾಲೇಜಿನ ಮೂಲಸೌಕರ್ಯ, ಬೋಧನಾ ವ್ಯವಸ್ಥೆ, ಆಸ್ಪತ್ರೆಯ ಸೌಲಭ್ಯಗಳು ಹಾಗೂ ಅಗತ್ಯ ದಾಖಲೆಗಳ ಪರಿಶೀಲನೆಗಾಗಿ ಬೆಂಗಳೂರು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ತಜ್ಞರ ತಪಾಸಣಾ ಸಮಿತಿ ಶನಿವಾರ ಪುತ್ತೂರಿಗೆ ಆಗಮಿಸಿ ಪರಿಶೀಲನೆ ನಡೆಸಿತು. ಪುತ್ತೂರಿನಲ್ಲಿರುವ ಹಳೇಯ ಕೋರ್ಟ್ ಕಟ್ಟಡ ಹಾಗೂ ಪುತ್ತೂರು ಸರಕಾರಿ ಆಸ್ಫತ್ರೆಗೆ ತಂಡವು ತೆರಳಿ ಪರಿಶೀಲಿಸಿತ್ತು
ಶಾಸಕ ಅಶೋಕ್ ಕುಮಾರ್ ರೈ ಅವರ ನಿರಂತರ ಪ್ರಯತ್ನ ಮತ್ತು ಕಾಲೇಜು ಸ್ಥಾಪನೆಯ ನಿಟ್ಟಿನಲ್ಲಿನ ಚಟುವಟಿಕೆಗಳ ನಡುವೆ ನಡೆದಿರುವ ಈ ಪರಿಶೀಲನೆ, ಪುತ್ತೂರು ಮೆಡಿಕಲ್ ಕಾಲೇಜಿನ ಆರಂಭದ ಪ್ರಕ್ರಿಯೆಯಲ್ಲಿ ನಿರ್ಣಾಯಕ ಹಂತವೆಂದು ಪರಿಗಣಿಸಲಾಗಿದೆ. ನಿಯೋಗವು ಹಳೇಯ ಕೋರ್ಟ್ ಕಟ್ಟಡಕ್ಕೆ ಭೇಟಿ ನೀಡಿದ ವೇಳೆ ಶಾಸಕ ಅಶೋಕ್ ರೈಯವರು ಅಲ್ಲಿಗೆ ಆಗಮಿಸಿ ನಿಯೋಗಕ್ಕೆ ಅಗತ್ಯ ಮಾಹಿತಿ ನೀಡಿದರು.
ಮೂರು ಮಂದಿ ತಜ್ಞರಿಂದ ಸಮಗ್ರ ಪರಿಶೀಲನೆ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳ ಆದೇಶದಂತೆ ಆಗಮಿಸಿದ ಮೂರು ಮಂದಿ ತಜ್ಞರ ತಂಡ ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸಿತು. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡಾ. ಸುರೇಶ್ ಎಸ್. ಕನಕಣ್ಣವರ್ ತಂಡದ ಅಧ್ಯಕ್ಷರಾಗಿದ್ದು, ಶಿವಮೊಗ್ಗದ ಸುಬ್ಬಯ್ಯ ದಂತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡಾ. ಮಿಥುನ್ ಕೆ.ಎಂ. ಹಾಗೂ ಶಿವಮೊಗ್ಗದ ಎಸ್.ಐ.ಎಂ.ಎಸ್.ನ ಡಾ. ರಮೇಶ್ ಬಾಬು ಸದಸ್ಯರಾಗಿದ್ದರು.
ಕಾಲೇಜಿನ ಬೋಧನಾ ವಿಭಾಗಗಳಿಗೆ ಅಗತ್ಯವಿರುವ ಕೊಠಡಿಗಳು, ಪ್ರಯೋಗಾಲಯಗಳು, ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯ, ವೈದ್ಯಕೀಯ ಉಪಕರಣಗಳು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳ ವಸತಿ ವ್ಯವಸ್ಥೆ ಸೇರಿದಂತೆ ವೈದ್ಯಕೀಯ ಶಿಕ್ಷಣ ಆರಂಭಿಸಲು ಅಗತ್ಯವಿರುವ ಮೂಲಸೌಕರ್ಯಗಳನ್ನು ತಂಡ ಪರಿಶೀಲಿಸಿತು.
ನವೆಂಬರ್ 21ರೊಳಗೆ ಪರಿಶೀಲನೆ ಪೂರ್ಣಗೊಳಿಸಿ, ಸಮಗ್ರ ವರದಿಯನ್ನು 24 ಗಂಟೆಗಳ ಒಳಗೆ ವಿಶ್ವವಿದ್ಯಾಲಯದ ಕುಲಸಚಿವರಿಗೆ ಸಲ್ಲಿಸುವಂತೆ ಕುಲಪತಿಗಳು ಸೂಚನೆ ನೀಡಿದ್ದಾರೆ.

6 ಮೃತದೇಹಗಳ ವ್ಯವಸ್ಥೆ; ಮಾನವ ಅಂಗಾಂಗಗಳ ಆಗಮನ
ಮೆಡಿಕಲ್ ಕಾಲೇಜಿನ ಆರಂಭಿಕ ಸಿದ್ಧತೆಗಳ ಭಾಗವಾಗಿ ಅಗತ್ಯ ವೈದ್ಯಕೀಯ ಪರಿಕರಗಳು ಮತ್ತು ಉಪಕರಣಗಳನ್ನು ಪುತ್ತೂರಿಗೆ ತರಿಸಲಾಗುತ್ತಿದೆ. ಶಿವಮೊಗ್ಗ, ಹಾಸನ ಹಾಗೂ ಮಡಿಕೇರಿ ವೈದ್ಯಕೀಯ ಕಾಲೇಜುಗಳಿಂದ ಒಟ್ಟು ಆರು ಮೃತದೇಹಗಳನ್ನು ವ್ಯವಸ್ಥೆ ಮಾಡಲಾಗಿದೆ. ವೈದ್ಯಕೀಯ ವಿದ್ಯಾರ್ಥಿಗಳ ಅಂಗರಚನಾ ಶಾಸ್ತ್ರದ ಅಧ್ಯಯನಕ್ಕೆ ಅಗತ್ಯವಿರುವ ಮಾನವ ದೇಹದ ವಿವಿಧ ಅಂಗಾಂಗಗಳೂ ಪುತ್ತೂರಿಗೆ ಆಗಮಿಸಿದ್ದು, ಅವುಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಿಡುವ ವ್ಯವಸ್ಥೆ ಮಾಡಲಾಗುತ್ತಿದೆ.
ವಿವಿಧ ವಿಭಾಗಗಳಿಗೆ ಕೊಠಡಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದ್ದು, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಆಸನ ವ್ಯವಸ್ಥೆಯನ್ನೂ ಸಿದ್ಧಪಡಿಸಲಾಗಿದೆ. ಈಗಾಗಲೇ ಆಗಮಿಸಿರುವ ವೈದ್ಯಕೀಯ ಉಪಕರಣಗಳ ಜೋಡಣೆ ಕಾರ್ಯ ಪ್ರಗತಿಯಲ್ಲಿದ್ದು, ಇನ್ನಷ್ಟು ಉಪಕರಣಗಳು ಹಂತ ಹಂತವಾಗಿ ಬರಲಿವೆ.
92 ವೈದ್ಯರು, 175 ಸಿಬ್ಬಂದಿ ನೇಮಕಕ್ಕೆ ಪ್ರಕ್ರಿಯೆ
ಮೆಡಿಕಲ್ ಕಾಲೇಜಿನ ಜೊತೆಗೆ ಆಸ್ಪತ್ರೆಯ ಸಾಮರ್ಥ್ಯವನ್ನೂ ಹೆಚ್ಚಿಸುವ ಉದ್ದೇಶದಿಂದ ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತಿದೆ. ಕಾಲೇಜು ಮತ್ತು ಆಸ್ಪತ್ರೆಯ ಕಾರ್ಯನಿರ್ವಹಣೆಗೆ 92 ವೈದ್ಯರು, 175 ಸಿಬ್ಬಂದಿ ಹಾಗೂ 80 ನರ್ಸಿಂಗ್ ಸಿಬ್ಬಂದಿ ಸೇರಿದಂತೆ ಅಗತ್ಯ ಮಾನವ ಸಂಪನ್ಮೂಲ ನೇಮಕಾತಿಗೆ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ.
ವಿದ್ಯಾರ್ಥಿಗಳ ಹಾಸ್ಟೆಲ್ ವ್ಯವಸ್ಥೆಗಾಗಿ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣ ಕಾರ್ಯವೂ ನಡೆಯುತ್ತಿದೆ. ಸೇಡಿಯಾಪು ನಿವೇಶನದಲ್ಲಿ ಕಟ್ಟಡಗಳು ಸಿದ್ಧಗೊಂಡ ಬಳಿಕ ಕಾಲೇಜಿನ ವಿವಿಧ ಚಟುವಟಿಕೆಗಳನ್ನು ಅಲ್ಲಿಗೆ ಸ್ಥಳಾಂತರಿಸುವ ಯೋಜನೆಯಿದೆ.
ಇದರಿಂದ ಪುತ್ತೂರು ಮಾತ್ರವಲ್ಲದೆ ವಿಟ್ಲ, ಕಡಬ, ಬೆಳ್ತಂಗಡಿ ಸೇರಿದಂತೆ ಸುತ್ತಮುತ್ತಲಿನ ತಾಲೂಕುಗಳ ಜನರಿಗೆ ಸುಧಾರಿತ ವೈದ್ಯಕೀಯ ಸೇವೆ ಹಾಗೂ ವೈದ್ಯಕೀಯ ಶಿಕ್ಷಣದ ಅವಕಾಶಗಳು ಲಭ್ಯವಾಗುವ ನಿರೀಕ್ಷೆಯಿದೆ.
ಎಲ್ಲವೂ ಸರಾಗವಾಗಿ ನಡೆದರೆ ಸೆಪ್ಟೆಂಬರ್ 2027ರಲ್ಲಿ ದಾಖಲಾತಿ
ಪರಿಶೀಲನೆ ಬಳಿಕ ಮಾತನಾಡಿದ ತಪಾಸಣಾ ತಂಡದ ಅಧ್ಯಕ್ಷ ಡಾ. ಸುರೇಶ್ ಎಸ್. ಕನಕಣ್ಣವರ್, “ಪುತ್ತೂರಿಗೆ ಮೆಡಿಕಲ್ ಕಾಲೇಜು ಬರಬೇಕೆಂಬ ನಿಟ್ಟಿನಲ್ಲಿ ಶಾಸಕ ಅಶೋಕ್ ಕುಮಾರ್ ರೈ ಸಾಕಷ್ಟು ಪ್ರಯತ್ನ ಮತ್ತು ಹೋರಾಟ ನಡೆಸಿದ್ದಾರೆ. ಅದರ ಫಲವಾಗಿ ಇಂದು ತಪಾಸಣಾ ಪ್ರಕ್ರಿಯೆ ನಡೆಯುತ್ತಿದೆ. ವೈದ್ಯಕೀಯ ಶಿಕ್ಷಣಕ್ಕೆ ಅಗತ್ಯವಿರುವ ಬೋಧನಾ ವ್ಯವಸ್ಥೆ, ಆಸ್ಪತ್ರೆಯ ಸೌಕರ್ಯ, ವಿದ್ಯಾರ್ಥಿಗಳ ವಸತಿ, ಬೋಧಕರ ವಸತಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳು ಲಭ್ಯವಿದೆಯೇ ಎಂಬುದನ್ನು ಪರಿಶೀಲಿಸಿ ವರದಿ ಸಿದ್ಧಪಡಿಸಲಾಗುತ್ತದೆ.
ಎಲ್ಲವೂ ಸರಾಗವಾಗಿ ನಡೆದರೆ 2027ರ ಸೆಪ್ಟೆಂಬರ್ನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಆರಂಭವಾಗುವ ಸಾಧ್ಯತೆಯಿದೆ. ಸೋಮವಾರ ಸಿಂಡಿಕೇಟ್ ಸಭೆ ನಿಗದಿಯಾಗಿದ್ದು, ಅನುಮೋದನೆಗೆ ಸಂಬಂಧಿಸಿದಂತೆ ಆಂತರಿಕ ಸಮಿತಿಯೂ ಇದೆ. ಪ್ರಸ್ತುತ 75 ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸ್ಥಳಾವಕಾಶವಿದೆ” ಎಂದು ತಿಳಿಸಿದರು.
ನವೆಂಬರ್ 30ರೊಳಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ
ಪುತ್ತೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ವಿಶೇಷ ಅಧಿಕಾರಿ ಡಾ. ಲೋಹಿತ್ ಕುಮಾರ್ ಮಾತನಾಡಿ, “ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಂಬಂಧಿಸಿದಂತೆ ಅಕ್ಟೋಬರ್ 8ರಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಇದೀಗ ತಜ್ಞರ ತಂಡ ಮೂಲಸೌಕರ್ಯಗಳ ಪರಿಶೀಲನೆ ನಡೆಸುತ್ತಿದೆ. ತಂಡದ ವರದಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭೆಯ ಮುಂದೆ ಮಂಡನೆಯಾಗಲಿದೆ.
ಸಿಂಡಿಕೇಟ್ನಿಂದ ಸಮ್ಮತಿ ಪತ್ರ ದೊರೆತ ಬಳಿಕ ಕೇಂದ್ರ ಸರ್ಕಾರಕ್ಕೆ ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ನವೆಂಬರ್ 30ರೊಳಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗಿದೆ. ನಂತರ ಫಾರ್ಮ್ ಬಿ ಪ್ರಕಾರ ಸಿಬ್ಬಂದಿ ಹಾಗೂ ಕ್ಲಿನಿಕಲ್ ಮೆಟೀರಿಯಲ್ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಹಂತ ಹಂತವಾಗಿ ಭರ್ತಿ ಮಾಡಬೇಕಿದೆ. ಸುಮಾರು 63 ದಾಖಲೆಗಳನ್ನು ಡಿಸೆಂಬರ್ 30ರೊಳಗೆ ಸಲ್ಲಿಸಬೇಕಾಗುತ್ತದೆ. ಜನವರಿ ಮೊದಲ ವಾರದಿಂದ ಕೇಂದ್ರ ಸರ್ಕಾರದ ಪರಿಶೀಲನಾ ತಂಡ ಆಗಮಿಸುವ ನಿರೀಕ್ಷೆಯಿದೆ” ಎಂದು ವಿವರಿಸಿದರು.
ಪುತ್ತೂರಿನ ವೈದ್ಯಕೀಯ ಶಿಕ್ಷಣದ ಕನಸಿಗೆ ಹೊಸ ವೇಗ
ಪುತ್ತೂರಿನಲ್ಲಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಯಾದರೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಹೊಸ ಅವಕಾಶ ಸಿಗಲಿದೆ. ಅದೇ ರೀತಿ ಪುತ್ತೂರು ಹಾಗೂ ಸುತ್ತಮುತ್ತಲಿನ ತಾಲೂಕುಗಳ ಜನರಿಗೆ ಸುಧಾರಿತ ವೈದ್ಯಕೀಯ ಸೇವೆ ಸ್ಥಳೀಯವಾಗಿಯೇ ಲಭ್ಯವಾಗುವ ನಿರೀಕ್ಷೆಯಿದೆ.
ಸದ್ಯ ವಿಶ್ವವಿದ್ಯಾಲಯದ ತಪಾಸಣೆ ಪೂರ್ಣಗೊಂಡು ವರದಿ ಸಲ್ಲಿಕೆ, ಸಿಂಡಿಕೇಟ್ ಅನುಮೋದನೆ, ಕೇಂದ್ರ ಸರ್ಕಾರದ ಅನುಮತಿ ಹಾಗೂ ಅಂತಿಮ ಪರಿಶೀಲನೆಗಳ ಹಂತಗಳು ಬಾಕಿಯಿವೆ. ಈ ಎಲ್ಲ ಪ್ರಕ್ರಿಯೆಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಂಡರೆ 2027ರ ಶೈಕ್ಷಣಿಕ ವರ್ಷದಲ್ಲಿ ಪುತ್ತೂರು ಮೆಡಿಕಲ್ ಕಾಲೇಜಿನ ಮೊದಲ ಬ್ಯಾಚ್ ಆರಂಭವಾಗುವ ನಿರೀಕ್ಷೆ ಗರಿಗೆದರಲಿದೆ.
ಶಾಸಕ ಅಶೋಕ್ ಕುಮಾರ್ ರೈ, ವಿಶೇಷ ಅಧಿಕಾರಿ ಡಾ. ಲೋಹಿತ್ ಕುಮಾರ್, ಡಾ. ಶಶಾಂಕ್, ಪುತ್ತೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಯದು ರಾಜ್, ಶಾಸಕರ ಆಪ್ತ ಕಾರ್ಯದರ್ಶಿ ಪ್ರದೀಪ್, ರಂಜಿತ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
-
ಸ್ಥಳೀಯ35 minutes agoWedding-ಕ್ಯಾಸೆಟ್ಗಳ ಅಬ್ಬರವಿಲ್ಲ, ಡ್ಯಾನ್ಸ್ಗಳ ಹಂಗಿಲ್ಲ; ಅದ್ದೂರಿತನಕ್ಕೆ ಬ್ರೇಕ್ ಹಾಕಿ ಸರಳತೆಯಲ್ಲೇ ಮದುವೆ ಸಂಭ್ರಮ..!
-
ಶಿಕ್ಷಣ2 hours agoPhilomena-ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಐದು ದಿನಗಳ ಡಿಜಿಟಲ್ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಿದ್ಧತಾ ತರಬೇತಿ ಕಾರ್ಯಕ್ರಮ
-
ಶಿಕ್ಷಣ2 hours agoScience Fair-ಪುತ್ತೂರಿನಲ್ಲಿ ಜಿಲ್ಲಾ ಮಟ್ಟದ ಕೋಡ್ಕ್ರಾಫ್ಟ್ ವಿಜ್ಞಾನ ಮೇಳ-2026: ಗ್ರಾಮೀಣ ವಿದ್ಯಾರ್ಥಿಗಳ ಪ್ರತಿಭಾ ಅನಾವರಣ















