ಸಿನೆಮಾ
Prema Da Ooralli-ಅಮ್ಮನ ಮಂಗಳಸೂತ್ರವನ್ನೇ ಗಿರವಿಡಲು ಮುಂದಾಗಿದ್ದ ನಿರ್ದೇಶಕ; ಇಂದು ₹17 ಕೋಟಿಯತ್ತ ಸಿನಿಮಾ! ‘ಪ್ರೇಮದ ಊರಲ್ಲಿ’ ಸೃಷ್ಟಿಸಿದ ಬಾಕ್ಸ್ ಆಫೀಸ್ ಅಚ್ಚರಿ
ದೊಡ್ಡ ತಾರೆಯಿಲ್ಲ… ಅದ್ದೂರಿ ಪ್ರಚಾರವಿಲ್ಲ… ಕೋಟ್ಯಂತರ ರೂಪಾಯಿ ಬಜೆಟ್ ಕೂಡ ಇಲ್ಲ. ಆದರೂ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ಸಿನಿಮಾ ಇದು. ಆರಂಭದಲ್ಲಿ ಬೆರಳೆಣಿಕೆಯಷ್ಟು ಪ್ರದರ್ಶನಗಳೊಂದಿಗೆ ತೆರೆಕಂಡಿದ್ದ ‘ಪ್ರೇಮದ ಊರಲ್ಲಿ’ ಇದೀಗ ಕನ್ನಡ ಚಿತ್ರರಂಗದ ಅಚ್ಚರಿಯ ಯಶೋಗಾಥೆಯಾಗಿ ಹೊರಹೊಮ್ಮಿದೆ.
ಬೆಂಗಳೂರು: ದೊಡ್ಡ ತಾರೆಯಿಲ್ಲ… ಅದ್ದೂರಿ ಪ್ರಚಾರವಿಲ್ಲ… ಕೋಟ್ಯಂತರ ರೂಪಾಯಿ ಬಜೆಟ್ ಕೂಡ ಇಲ್ಲ. ಆದರೂ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸದ್ದು ಮಾಡುತ್ತಿರುವ ಸಿನಿಮಾ ಇದು. ಆರಂಭದಲ್ಲಿ ಬೆರಳೆಣಿಕೆಯಷ್ಟು ಪ್ರದರ್ಶನಗಳೊಂದಿಗೆ ತೆರೆಕಂಡಿದ್ದ ‘ಪ್ರೇಮದ ಊರಲ್ಲಿ’ ಇದೀಗ ಕನ್ನಡ ಚಿತ್ರರಂಗದ ಅಚ್ಚರಿಯ ಯಶೋಗಾಥೆಯಾಗಿ ಹೊರಹೊಮ್ಮಿದೆ.
ಕೇವಲ ₹2.5 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿರುವ ಈ ಕನ್ನಡ ಪ್ರೇಮಕಥನ, ಹತ್ತನೇ ದಿನದ ವೇಳೆಗೆ ಭಾರತದಲ್ಲಿ ಸುಮಾರು ₹16.96 ಕೋಟಿ ನಿವ್ವಳ ಗಳಿಕೆ ದಾಖಲಿಸಿದೆ. ಹತ್ತನೇ ದಿನವೊಂದರಲ್ಲೇ ಸುಮಾರು ₹3.5 ಕೋಟಿ ಗಳಿಸಿರುವುದು ಚಿತ್ರದ ವೇಗವನ್ನು ತೋರಿಸುತ್ತದೆ. ಹೀಗಾಗಿ ‘ಪ್ರೇಮದ ಊರಲ್ಲಿ’ ಈಗ ಕನ್ನಡದ ಅತ್ಯಂತ ಲಾಭದಾಯಕ ಸಿನಿಮಾಗಳ ಸಾಲಿನಲ್ಲಿ ಸ್ಥಾನ ಪಡೆಯುವತ್ತ ಮುನ್ನಡೆದಿದೆ.
₹9 ಲಕ್ಷದಿಂದ ಆರಂಭ… ಕೋಟಿ ಕೋಟಿ ಗಳಿಕೆಯತ್ತ
ಚಿತ್ರದ ಆರಂಭವೇನೂ ಅದ್ಧೂರಿಯಾಗಿರಲಿಲ್ಲ. ಪ್ರಮುಖ ತಾರೆಯರಿಲ್ಲದ ಕಾರಣ ಮೊದಲ ದಿನ ಕೇವಲ 60 ಪ್ರದರ್ಶನಗಳಲ್ಲಿ ₹9 ಲಕ್ಷ ಗಳಿಸಿತ್ತು. ಆದರೆ ಎರಡನೇ ದಿನದಿಂದಲೇ ಚಿತ್ರಕ್ಕೆ ಪ್ರೇಕ್ಷಕರ ಮಾತು ಪ್ರಚಾರದ ಕೆಲಸ ಮಾಡತೊಡಗಿತು.
ಮೂರನೇ ದಿನದ ವೇಳೆಗೆ 155 ಪ್ರದರ್ಶನಗಳಲ್ಲಿ ಶೇ 55ರಷ್ಟು ಆಕ್ಯುಪೆನ್ಸಿಯೊಂದಿಗೆ ₹55 ಲಕ್ಷ ಗಳಿಸಿತು. ಮೊದಲ ಸೋಮವಾರ ₹65 ಲಕ್ಷ, ಮಂಗಳವಾರ ₹95 ಲಕ್ಷ ಗಳಿಸಿದ ಸಿನಿಮಾ, ಎರಡನೇ ಭಾನುವಾರ ಬರೋಬ್ಬರಿ ₹3.85 ಕೋಟಿ ಗಳಿಸಿತು.
ಇದು ಕೇವಲ ಬಾಕ್ಸ್ ಆಫೀಸ್ ಅಂಕಿ-ಅಂಶಗಳ ಏರಿಕೆಯಲ್ಲ; ಪ್ರೇಕ್ಷಕರಿಂದ ಪ್ರೇಕ್ಷಕರಿಗೆ ಹರಡಿದ ಮೆಚ್ಚುಗೆಯ ಅಲೆ.
ಬಿಡುಗಡೆಯಾದ ಹತ್ತನೇ ದಿನದೊಳಗೆ ಚಿತ್ರವು ಚಿತ್ರಮಂದಿರಗಳಲ್ಲಿ 10 ಲಕ್ಷಕ್ಕೂ ಅಧಿಕ ಪ್ರೇಕ್ಷಕರನ್ನು ಸೆಳೆದಿದೆ ಎನ್ನಲಾಗಿದೆ. ಬೆಂಗಳೂರಿನಲ್ಲೂ ಸೋಮವಾರದಂತಹ ವಾರದ ದಿನಗಳಲ್ಲಿ ಹಲವು ಪ್ರದರ್ಶನಗಳು ಭರ್ತಿಯಾಗುತ್ತಿರುವುದು ಚಿತ್ರದ ಬೇಡಿಕೆಯನ್ನು ಮತ್ತಷ್ಟು ಕುತೂಹಲಕರವಾಗಿಸಿದೆ.
‘ಲವ್ ಮಾಕ್ಟೇಲ್ 3’ ದಾಖಲೆಗೆ ಸವಾಲು?
ಕನ್ನಡದ ಕಡಿಮೆ ಬಜೆಟ್ನ ಸಿನಿಮಾಗಳು ದೊಡ್ಡ ಮಟ್ಟದ ಲಾಭ ಗಳಿಸಬಹುದು ಎಂಬುದಕ್ಕೆ ಇತ್ತೀಚಿನ ವರ್ಷಗಳಲ್ಲಿ ‘ಲವ್ ಮಾಕ್ಟೇಲ್ 3’ ಪ್ರಮುಖ ಉದಾಹರಣೆಯಾಗಿತ್ತು. ಸುಮಾರು ₹2 ಕೋಟಿ ಬಜೆಟ್ನಲ್ಲಿ ನಿರ್ಮಾಣಗೊಂಡಿದ್ದ ಆ ಸಿನಿಮಾ ₹18.55 ಕೋಟಿ ಗಳಿಸಿತ್ತು.
ಈಗ ಕೇವಲ ಹತ್ತು ದಿನಗಳಲ್ಲೇ ₹16.96 ಕೋಟಿಯ ಗಡಿ ತಲುಪಿರುವ ‘ಪ್ರೇಮದ ಊರಲ್ಲಿ’, ಆ ಚಿತ್ರದ ಜೀವಿತಾವಧಿ ಗಳಿಕೆಯನ್ನು ಮೀರುವ ಸಾಧ್ಯತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ಇದೇ ವೇಳೆ, ನೂರಾರು ಕೋಟಿ ರೂಪಾಯಿ ಬಜೆಟ್ನ ದೊಡ್ಡ ಸಿನಿಮಾಗಳಿಗೆ ಎದುರಾಗುವ ಬಾಕ್ಸ್ ಆಫೀಸ್ ಸವಾಲುಗಳ ನಡುವೆ, ₹2.5 ಕೋಟಿಯಂತಹ ಸಣ್ಣ ಬಜೆಟ್ನ ಚಿತ್ರವೊಂದು ತೋರಿಸುತ್ತಿರುವ ಈ ಬೆಳವಣಿಗೆ ಗಮನ ಸೆಳೆಯುತ್ತಿದೆ.
ತಾರೆಯರಿಗಿಂತ ಕಥೆಯೇ ‘ಹೀರೋ’?
ಚಿತ್ರದಲ್ಲಿ ರಂಗಾಯಣ ರಘು, ಶ್ರೀರಾಮ್, ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ಸೇರಿದಂತೆ ಕಲಾವಿದರು ನಟಿಸಿದ್ದಾರೆ. ಬಹುತೇಕ ಹೊಸ ಮುಖಗಳನ್ನೊಳಗೊಂಡ ಈ ಸಿನಿಮಾವನ್ನು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮನೋಜ್ ಕುಮಾರ್ ನಿರ್ದೇಶಿಸಿದ್ದಾರೆ.
ಅವರ ಚೊಚ್ಚಲ ಚಿತ್ರ ‘ಅಕ್ಷಿ’ಗೆ ಕನ್ನಡದ ಅತ್ಯುತ್ತಮ ಫೀಚರ್ ಫಿಲ್ಮ್ಗಾಗಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿತ್ತು. ಕೇವಲ ₹23 ಲಕ್ಷ ಬಜೆಟ್ನಲ್ಲಿ ನಿರ್ಮಾಣಗೊಂಡಿದ್ದ ಆ ಚಿತ್ರವನ್ನು 55 ದಿನಗಳಲ್ಲಿ ಚಿತ್ರೀಕರಿಸಲಾಗಿತ್ತು.
ಹೀಗಾಗಿ ‘ಪ್ರೇಮದ ಊರಲ್ಲಿ’ಯ ಯಶಸ್ಸು ನಿರ್ದೇಶಕರಿಗೆ ಮತ್ತೊಂದು ಮಹತ್ವದ ಮೈಲಿಗಲ್ಲು.
ಪ್ರಚಾರಕ್ಕೆ ಹಣವಿಲ್ಲ… ಕೈಯಲ್ಲಿ ಉಳಿದದ್ದು ‘ಭರವಸೆ’!
‘ಪ್ರೇಮದ ಊರಲ್ಲಿ’ಯ ಯಶೋಗಾಥೆಯ ಅತ್ಯಂತ ಕುತೂಹಲಕಾರಿ ಅಧ್ಯಾಯವೆಂದರೆ ಅದರ ಪ್ರಚಾರ.
ಚಿತ್ರದ ಚಿತ್ರೀಕರಣ ಮುಗಿಯುವಷ್ಟರಲ್ಲಿ ಪ್ರಚಾರಕ್ಕೆ ಹಣವೇ ಉಳಿದಿರಲಿಲ್ಲ. ಹಾಗಾಗಿ ನಿರ್ಮಾಪಕರು ಸಾಂಪ್ರದಾಯಿಕ ಪ್ರಚಾರದ ಬದಲು ಮದುವೆ ಆಮಂತ್ರಣ ಪತ್ರಿಕೆಯ ಮಾದರಿಯಲ್ಲಿ ಕಾರ್ಡ್ಗಳನ್ನು ಮುದ್ರಿಸಿ, ಬಸ್ ಮತ್ತು ರೈಲುಗಳಲ್ಲಿ ಪ್ರಯಾಣಿಸುತ್ತಿದ್ದವರಿಗೆ ಹಂಚಿ, “ಒಮ್ಮೆ ಸಿನಿಮಾ ನೋಡಿ, ಅವಕಾಶ ನೀಡಿ” ಎಂದು ಮನವಿ ಮಾಡಿದರು.
ಆಟೊರಿಕ್ಷಾಗಳ ಮೇಲೂ ಪೋಸ್ಟರ್ಗಳನ್ನು ಅಂಟಿಸಲಾಯಿತು. ಹೀಗೆ ಹಣಕ್ಕಿಂತ ಜನರ ಮೇಲಿನ ನಂಬಿಕೆಯನ್ನು ಬಂಡವಾಳವನ್ನಾಗಿಸಿಕೊಂಡ ಪ್ರಚಾರ ನಿಧಾನವಾಗಿ ಫಲ ನೀಡಿತು.
ನಿರ್ದೇಶಕ ಮನೋಜ್ ಕುಮಾರ್ ಹೇಳಿರುವಂತೆ, ಶುಕ್ರವಾರ ಬೆಳಿಗ್ಗೆ 10.30ರವರೆಗೆ ಚಿತ್ರದ ಬಗ್ಗೆ ಯಾವುದೇ ಸದ್ದು ಇರಲಿಲ್ಲ. ಮಧ್ಯಾಹ್ನವೂ ಪರಿಸ್ಥಿತಿ ಬದಲಾಗಲಿಲ್ಲ. ಆದರೆ ಸಂಜೆ 6.30ರ ಪ್ರದರ್ಶನದ ಬಳಿಕ ಮಾತಿನ ಮೂಲಕ ಸಿನಿಮಾ ಹರಡತೊಡಗಿತು. ಸುಮಾರು 60 ಕೇಂದ್ರಗಳಿಂದ ಆರಂಭವಾದ ಪ್ರದರ್ಶನಗಳು ಭಾನುವಾರದ ವೇಳೆಗೆ 450ಕ್ಕೆ ಏರಿದವು.
ಒಂದು ‘ಥಾಳಿ’ಯ ಹಿಂದೆ ಅಡಗಿರುವ ಸಿನಿಮಾ
ಈ ಸಿನಿಮಾದ ನಿರ್ಮಾಣದ ಕಷ್ಟಗಳು ಇಲ್ಲಿಗೇ ಮುಗಿಯುವುದಿಲ್ಲ. ಚಿತ್ರೀಕರಣದ ವೇಳೆ ಬಜೆಟ್ ಮುಗಿದುಹೋಗಿದ್ದ ಸಂದರ್ಭದಲ್ಲಿ, ಚಿತ್ರ ಪೂರ್ಣಗೊಳಿಸಲು ನಿರ್ದೇಶಕ ಮನೋಜ್ ಕುಮಾರ್ ತಮ್ಮ ತಾಯಿಯ ಮಂಗಳಸೂತ್ರವನ್ನು ಗಿರವಿಡುವಂತೆ ಕೇಳಿಕೊಂಡಿದ್ದ ಘಟನೆಯನ್ನೂ ಚಿತ್ರತಂಡ ಹಂಚಿಕೊಂಡಿದೆ.
ನಟಿ ತಪಸ್ವಿನಿ ಪೂಣಚ್ಚ ನೆನಪಿಸಿಕೊಂಡಿರುವ ಆ ಘಟನೆ ಸಿನಿಮಾದ ಹೋರಾಟದ ಮತ್ತೊಂದು ಮುಖವನ್ನು ತೆರೆದಿಡುತ್ತದೆ.
ಕೃತಕ ಮಳೆಯ ದೃಶ್ಯ ಚಿತ್ರೀಕರಣದ ವೇಳೆ ನೀರು ಮುಗಿದುಹೋಗಿತ್ತು. ಸ್ಥಳೀಯರು ಬೋರ್ವೆಲ್ನಿಂದ ನೀರು ಒದಗಿಸಿದರು. ಅದೇ ಸಂದರ್ಭದಲ್ಲಿ ಬಜೆಟ್ ಮುಗಿದಿರುವ ಬಗ್ಗೆ ನಿರ್ದೇಶಕರು ತಾಯಿಯೊಂದಿಗೆ ಮಾತನಾಡಿದ್ದರು ಎನ್ನಲಾಗಿದೆ.
ಆದರೆ ಒಂದು ಟೆಕ್ನಲ್ಲೇ ದೃಶ್ಯ ಯಶಸ್ವಿಯಾದ ಬಳಿಕ, “ಥಾಳಿ ಗಿರವಿಡಬೇಡಿ, ದೃಶ್ಯ ಮುಗಿಸಿದ್ದೇವೆ” ಎಂದು ತಾಯಿಗೆ ತಿಳಿಸಿದ ಕ್ಷಣ ಚಿತ್ರತಂಡಕ್ಕೆ ಭಾವುಕ ಕ್ಷಣವಾಗಿತ್ತು.
ಹಾಡುಗಳಿಗೂ ಪ್ರೇಕ್ಷಕರ ಸ್ಪಂದನೆ
ಚಿತ್ರದ ಟ್ರೇಲರ್ ಈಗಾಗಲೇ 23 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದಿದೆ. ಹಾಡುಗಳೂ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿವೆ. ಅದರಲ್ಲೂ ‘ಏರು ಪೇರು ಹೃದಯ’ ಹಾಡು ಯೂಟ್ಯೂಬ್ನಲ್ಲಿ 45 ಲಕ್ಷಕ್ಕೂ ಅಧಿಕ ವೀಕ್ಷಣೆ ಗಳಿಸಿರುವುದು ಚಿತ್ರದ ಬಗ್ಗೆ ಆನ್ಲೈನ್ನಲ್ಲೂ ಆಸಕ್ತಿ ಮೂಡಿರುವುದಕ್ಕೆ ಸಾಕ್ಷಿ.
ಇದು ಕೇವಲ ಸಿನಿಮಾ ಯಶಸ್ಸೇ?
‘ಪ್ರೇಮದ ಊರಲ್ಲಿ’ಯ ಬಾಕ್ಸ್ ಆಫೀಸ್ ಓಟವನ್ನು ಕೇವಲ ಗಳಿಕೆಯ ಅಂಕಿ-ಅಂಶಗಳಲ್ಲಿ ಅಳೆಯಲು ಸಾಧ್ಯವಿಲ್ಲ. ದೊಡ್ಡ ತಾರೆಯಿಲ್ಲದಿದ್ದರೂ, ಭಾರಿ ಪ್ರಚಾರ ಬಜೆಟ್ ಇಲ್ಲದಿದ್ದರೂ, ಒಳ್ಳೆಯ ಮಾತು ಪ್ರೇಕ್ಷಕರ ನಡುವೆ ಹರಡಿದರೆ ಒಂದು ಸಣ್ಣ ಸಿನಿಮಾ ಎಷ್ಟು ದೂರ ಸಾಗಬಹುದು ಎಂಬುದಕ್ಕೆ ಇದು ಹೊಸ ಉದಾಹರಣೆ.
ಮೊದಲ ದಿನ ₹9 ಲಕ್ಷದಿಂದ ಆರಂಭವಾದ ಪಯಣ ಹತ್ತನೇ ದಿನ ₹3.5 ಕೋಟಿಯವರೆಗೆ ಬಂದಿದೆ. ಈಗ ಪ್ರಶ್ನೆ ಒಂದೇ—
₹2.5 ಕೋಟಿಯಲ್ಲಿ ನಿರ್ಮಾಣವಾದ ‘ಪ್ರೇಮದ ಊರಲ್ಲಿ’, ಕನ್ನಡದ ಅತ್ಯಂತ ಲಾಭದಾಯಕ ಸಿನಿಮಾಗಳ ಪಟ್ಟಿಯಲ್ಲಿ ಹೊಸ ದಾಖಲೆ ಬರೆಯುತ್ತದೆಯೇ?
ಮುಂದಿನ ದಿನಗಳ ಗಲ್ಲಾಪೆಟ್ಟಿಗೆ ಉತ್ತರಿಸಬೇಕಿದೆ.
ಸಿನೆಮಾ
Dawood-‘ಧುರಂಧರ್ ‘ ನಲ್ಲಿ ದಾವೂದ್ ನ ತೋರಿಸಿದ ರೀತಿ ವಾಸ್ತವವಲ್ಲ…! ಮೋಸ್ಟ್ ವಾಂಟೆಡ್ ಪಾತಕಿ ಈಗ ಹೇಗಿದ್ದಾನೆ ಗೊತ್ತೇ..? ಮಾಜಿ FBI ಅಧಿಕಾರಿ ಹೇಳಿದ್ದೇನೂ..?
‘ಧುರಂಧರ್’ ಸಿನಿಮಾದಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಾ ಹಾಸಿಗೆ ಹಿಡಿದಿರುವ ವೃದ್ಧನಂತೆ ಚಿತ್ರಿಸಲಾಗಿರುವ ದಾವೂದ್, ವಾಸ್ತವದಲ್ಲಿ ಇನ್ನೂ ಸಕ್ರಿಯನಾಗಿದ್ದು ತನ್ನ ಅಪರಾಧ ಜಾಲವನ್ನು ಮುನ್ನಡೆಸುತ್ತಿದ್ದಾನೆ ಎಂದು ಅಮೆರಿಕದ ಮಾಜಿ ಎಫ್ಬಿಐ ಅಧಿಕಾರಿ ಕಮ್ರಾನ್ ಫರೀದಿ ಇಂಡಿಯಾ ಟುಡೇಗೆ ನೀಡಿದ ಪಾಡ್ಕಾಸ್ಟ್ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನವದೆಹಲಿ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟಗಳ ಬಳಿಕ ಭಾರತದಿಂದ ಪರಾರಿಯಾಗಿ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎನ್ನಲಾದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬದುಕು ಇಂದಿಗೂ ನಿಗೂಢವಾಗಿದೆ. ಕಳೆದ ಹಲವು ವರ್ಷಗಳಿಂದ ಆತನ ಯಾವುದೇ ಅಧಿಕೃತ ಛಾಯಾಚಿತ್ರ ಸಾರ್ವಜನಿಕವಾಗಿ ಲಭ್ಯವಾಗಿಲ್ಲ. ಇದೀಗ ದಾವೂದ್ನ ಡಿ-ಕಂಪನಿಯೊಳಗೆ ರಹಸ್ಯವಾಗಿ ಕಾರ್ಯನಿರ್ವಹಿಸಿದ್ದಾಗಿ ಹೇಳಿಕೊಂಡಿರುವ ಅಮೆರಿಕದ ಮಾಜಿ ಎಫ್ಬಿಐ ಅಧಿಕಾರಿ ಕಮ್ರಾನ್ ಫರೀದಿ, ಡಾನ್ನ ವೈಯಕ್ತಿಕ ಜೀವನ, ಭದ್ರತಾ ವ್ಯವಸ್ಥೆ ಹಾಗೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆಗಿನ ಸಂಪರ್ಕದ ಕುರಿತು ಹಲವು ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
‘ಧುರಂಧರ್’ ಸಿನಿಮಾದಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಾ ಹಾಸಿಗೆ ಹಿಡಿದಿರುವ ವೃದ್ಧನಂತೆ ಚಿತ್ರಿಸಲಾಗಿರುವ ದಾವೂದ್, ವಾಸ್ತವದಲ್ಲಿ ಇನ್ನೂ ಸಕ್ರಿಯನಾಗಿದ್ದು ತನ್ನ ಅಪರಾಧ ಜಾಲವನ್ನು ಮುನ್ನಡೆಸುತ್ತಿದ್ದಾನೆ ಎಂಬುದು ಫರೀದಿ ಅವರ ಪ್ರಮುಖ ಹೇಳಿಕೆ. ಇಂಡಿಯಾ ಟುಡೇಗೆ ನೀಡಿದ ಪಾಡ್ಕಾಸ್ಟ್ ಸಂದರ್ಶನದಲ್ಲಿ ಅವರು ಈ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಧುರಂಧರ್ ಸಿನಿಮಾದ ದಾವೂದ್ಗೂ ನೈಜ ವ್ಯಕ್ತಿಗೂ ವ್ಯತ್ಯಾಸ!
‘ಧುರಂಧರ್’ ಚಿತ್ರದಲ್ಲಿ ‘ಬಡೇ ಸಾಹಬ್’ ಎಂದು ಉಲ್ಲೇಖಿಸಲಾಗಿರುವ ದಾವೂದ್ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾನೆ. ಆದರೆ, ದಾವೂದ್ ಜೊತೆ ಹಲವು ಪಾರ್ಟಿ ಹಾಗೂ ವ್ಯವಹಾರಿಕ ಸಭೆಗಳಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿಕೊಂಡಿರುವ ಫರೀದಿ, ಆತ ಇಂದಿಗೂ ತನ್ನ ಅಪರಾಧ ಜಾಲದ ಕಾರ್ಯಾಚರಣೆಗಳನ್ನು ನಿಯಂತ್ರಿಸುತ್ತಿದ್ದಾನೆ ಎಂದು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮಾದಕವಸ್ತು ವ್ಯಾಪಾರದ ಮೇಲೂ ದಾವೂದ್ ನಿಗಾ ಇರಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಪಾಕಿಸ್ತಾನದ ಭದ್ರತಾ ವಲಯದಲ್ಲಿ ಆತನನ್ನು ‘ಬಡೇ ಸಾಹಬ್’ ಅಥವಾ ‘ಬಡೆ ವಾಲೆ’ ಎಂದು ಕರೆಯಲಾಗುತ್ತದೆ ಎಂದಿದ್ದಾರೆ.
ಕರಾಚಿಯ ಕ್ಲಿಫ್ಟನ್ನಲ್ಲೇ ಡಾನ್ ವಾಸ!
ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾದರೂ ದಾವೂದ್ ತನ್ನ ವಾಸಸ್ಥಳವನ್ನು ಬದಲಿಸಿಲ್ಲ. ಕರಾಚಿಯ ಅತ್ಯಂತ ಬಿಗಿ ಭದ್ರತೆಯ ಕ್ಲಿಫ್ಟನ್ ಪ್ರದೇಶದಲ್ಲಿ ಕುಟುಂಬದ ಸದಸ್ಯರೊಂದಿಗೆ ವಾಸಿಸುತ್ತಿದ್ದಾನೆ ಎಂದು ಫರೀದಿ ಹೇಳಿಕೊಂಡಿದ್ದಾರೆ.
ಆದರೆ, ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾದ ಸಂದರ್ಭಗಳಲ್ಲಿ ಆತ ಇಸ್ಲಾಮಾಬಾದ್ ಸೇರಿದಂತೆ ಮೂರು ಸುರಕ್ಷಿತ ಅಡಗುತಾಣಗಳಿಗೆ ಸ್ಥಳಾಂತರಗೊಳ್ಳುತ್ತಾನೆ ಎಂದು ತಿಳಿಸಿದ್ದಾರೆ.
ದಾವೂದ್ ನಿವಾಸದ ಕೆಳಗೆ ರಹಸ್ಯ ಸುರಂಗವಿದೆ ಎಂಬ ವದಂತಿಯನ್ನು ತಳ್ಳಿಹಾಕಿರುವ ಅವರು, ಮನೆಯ ಹಿಂಭಾಗದಿಂದ ಜನಸಂದಣಿ ಹೆಚ್ಚಿರುವ ದರ್ಗಾವೊಂದಕ್ಕೆ ಸಂಪರ್ಕ ಕಲ್ಪಿಸುವ ಪರ್ಯಾಯ ನಿರ್ಗಮನ ಮಾರ್ಗವಿದೆ ಎಂದು ಹೇಳಿದ್ದಾರೆ.
ಡಿ-ಕಂಪನಿಯೊಳಗೆ ನುಸುಳಿದ್ದೇಗೆ?
ದಾವೂದ್ನ ಅಪರಾಧ ಜಾಲದೊಳಗೆ ತಾನು ಹೇಗೆ ಪ್ರವೇಶಿಸಿದೆ ಎಂಬುದನ್ನೂ ಫರೀದಿ ವಿವರಿಸಿದ್ದಾರೆ. 1995ರಲ್ಲಿ ಎಫ್ಬಿಐಗೆ ಸೇರ್ಪಡೆಯಾಗಿದ್ದ ತಮಗೆ 2009ರಲ್ಲಿ ದಾವೂದ್ ಗ್ಯಾಂಗ್ನೊಳಗೆ ರಹಸ್ಯವಾಗಿ ನುಸುಳುವ ಜವಾಬ್ದಾರಿ ನೀಡಲಾಗಿತ್ತು ಎಂದು ಹೇಳಿದ್ದಾರೆ.
ಈ ಕಾರ್ಯಾಚರಣೆಗಾಗಿ ರಷ್ಯಾದ ಮಾಫಿಯಾ ಸದಸ್ಯನಂತೆ ಗುರುತಿಸಿಕೊಂಡು, ತಮ್ಮ ಪಾಕಿಸ್ತಾನಿ ಮೂಲವನ್ನು ಮರೆಮಾಚಿದ್ದಾಗಿ ತಿಳಿಸಿದ್ದಾರೆ. ದಾವೂದ್ನ ಆಪ್ತ ಸಹಚರ ಜಬೀರ್ ಮೊತಿವಾಲಾ ಮೂಲಕ ಆತನಿಗೆ ಪರಿಚಯವಾಗಿತ್ತು ಎಂದಿದ್ದಾರೆ.
2018ರಲ್ಲಿ ಲಂಡನ್ನಲ್ಲಿ ಜಬೀರ್ ಮೊತಿವಾಲಾ ಬಂಧನಕ್ಕೂ ತಾನೇ ಕಾರಣ ಎಂದು ಫರೀದಿ ಹೇಳಿಕೊಂಡಿದ್ದಾರೆ. ಕರಾಚಿಯಲ್ಲಿ ಡಿ-ಕಂಪನಿಗಾಗಿ ಹವಾಲಾ ಹಣಕಾಸು ವ್ಯವಹಾರಗಳನ್ನು ಸ್ಥಾಪಿಸಲು ಸಹಾಯ ಮಾಡಿದ್ದಾಗಿಯೂ ತಿಳಿಸಿದ್ದಾರೆ. ದಾವೂದ್ನ ಸಹೋದರ ಅನೀಸ್ ಇಬ್ರಾಹಿಂ ಪುತ್ರ ಅಲಿ ಕಾಸ್ಕರ್ ತಮ್ಮ ಮಾಹಿತಿಯ ಪ್ರಮುಖ ಮೂಲವಾಗಿದ್ದ ಎಂದು ಹೇಳಿದ್ದಾರೆ.
ರಾತ್ರಿ 10ರ ಬಳಿಕವೇ ಹೊರಗೆ ಬರುವ ಡಾನ್!
ದಾವೂದ್ನ ದಿನಚರಿಯ ಕುರಿತು ಮಾತನಾಡಿರುವ ಫರೀದಿ, ಆತ ಹಗಲು ಹೊತ್ತಿನಲ್ಲಿ ಮನೆಯಿಂದ ಹೊರಬರುವುದಿಲ್ಲ ಎಂದು ತಿಳಿಸಿದ್ದಾರೆ. ರಾತ್ರಿ 10 ಗಂಟೆಯ ಬಳಿಕ ಹೊರಗೆ ಬಂದು, ಮುಂಜಾನೆ ಫಜರ್ ಪ್ರಾರ್ಥನೆಗೂ ಮುನ್ನ ಮನೆಗೆ ಮರಳುತ್ತಾನೆ. ಈ ಕಾರಣದಿಂದ ಆತನನ್ನು ‘ರಾತ್ ಕಾ ಬಾದ್ಶಾ’ ಎಂದು ಕರೆಯಲಾಗುತ್ತದೆ ಎಂದಿದ್ದಾರೆ.
ದಾವೂದ್ಗೆ ದಿನದ 24 ಗಂಟೆಯೂ ಬಿಗಿ ಭದ್ರತೆ ಇರುತ್ತದೆ. ಸುಮಾರು 35ರಿಂದ 45 ಮಂದಿ ಭದ್ರತಾ ಸಿಬ್ಬಂದಿ ಆತನ ಸುತ್ತಲೂ ಕಾವಲು ಕಾಯುತ್ತಾರೆ. ಅವರ ಬಳಿ ಎಕೆ-47 ಸೇರಿದಂತೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿರುತ್ತವೆ ಎಂದು ಫರೀದಿ ಆರೋಪಿಸಿದ್ದಾರೆ.
ದಾವೂದ್ನ ಭದ್ರತಾ ವ್ಯವಸ್ಥೆಯನ್ನು ಛೋಟಾ ಶಕೀಲ್ ನಿರ್ವಹಿಸುತ್ತಾನೆ. ಆತ ಪಾಕಿಸ್ತಾನದ ಐಎಸ್ಐ ಜೊತೆ ಸಂಪರ್ಕ ಹೊಂದಿದ್ದು, ಪ್ರತಿ ಶುಕ್ರವಾರ ಆ ಸಂಸ್ಥೆಯ ಕೇಂದ್ರ ಕಚೇರಿಗೆ ತೆರಳಿ ಭದ್ರತಾ ವರದಿಗಳನ್ನು ಪಡೆಯುತ್ತಾನೆ ಎಂದು ಫರೀದಿ ಹೇಳಿದ್ದಾರೆ.
ದಾವೂದ್ ಮತ್ತು ಛೋಟಾ ಶಕೀಲ್ ದುಬೈನಿಂದ ತರಿಸಿಕೊಂಡಿರುವ ಗುಂಡು ನಿರೋಧಕ ವಾಹನಗಳಲ್ಲಿ ಸಂಚರಿಸುತ್ತಾರೆ. ಬಾಂಬ್, ರಾಕೆಟ್ ಹಾಗೂ ಸ್ನೈಪರ್ ದಾಳಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಈ ವಾಹನಗಳಿಗಿದೆ ಎಂದು ತಿಳಿಸಿದ್ದಾರೆ.
ಐಎಸ್ಐ, ಲಷ್ಕರ್ ಜೊತೆ ನಂಟಿನ ಆರೋಪ
ದಾವೂದ್ ಪಾಕಿಸ್ತಾನದ ಐಎಸ್ಐ ಆಶ್ರಯದಲ್ಲಿದ್ದಾನೆ ಎಂದು ಫರೀದಿ ನೇರ ಆರೋಪ ಮಾಡಿದ್ದಾರೆ. ಲಷ್ಕರ್-ಎ-ತೊಯ್ಬಾ ಸಂಘಟನೆ ಹಾಗೂ 26/11 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಹಫೀಜ್ ಸಯೀದ್ ಜೊತೆ ದಾವೂದ್ಗೆ ನಿಕಟ ವ್ಯವಹಾರಿಕ ಸಂಪರ್ಕವಿದೆ ಎಂದೂ ಹೇಳಿದ್ದಾರೆ.
1993ರ ಮುಂಬೈ ಸ್ಫೋಟ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಟೈಗರ್ ಮೆಮನ್ ಬಗ್ಗೆಯೂ ಮಾತನಾಡಿರುವ ಅವರು, ಮೆಮನ್ ಹೆಚ್ಚು ಹೊರಗೆ ಸಂಚರಿಸುವುದಿಲ್ಲ ಎಂದಿದ್ದಾರೆ. ಇದೇ ವೇಳೆ, ಅನೀಸ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ನಡುವೆ ಗ್ಯಾಂಗ್ನ ನಿಯಂತ್ರಣ ಹಾಗೂ ಉತ್ತರಾಧಿಕಾರದ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ ಎಂದು ಆರೋಪಿಸಿದ್ದಾರೆ.
ಐಷಾರಾಮಿ ಜೀವನ, ಕೊಕೇನ್ ಸೇವನೆ, ಎರಡನೇ ಮದುವೆ!
ಧಾರ್ಮಿಕ ವ್ಯಕ್ತಿಯಂತೆ ತನ್ನನ್ನು ಬಿಂಬಿಸಿಕೊಳ್ಳುವ ದಾವೂದ್ ಖಾಸಗಿ ಬದುಕಿನಲ್ಲಿ ಐಷಾರಾಮಿ ಜೀವನ ನಡೆಸುತ್ತಾನೆ ಎಂದು ಫರೀದಿ ಆರೋಪಿಸಿದ್ದಾರೆ. ಮುಜ್ರಾ ನೃತ್ಯ ಕಾರ್ಯಕ್ರಮಗಳನ್ನು ವೀಕ್ಷಿಸುವ ಆಸಕ್ತಿ ಹೊಂದಿದ್ದಾನೆ. ಹಿಂದೆ ಮದ್ಯ ಸೇವಿಸುತ್ತಿದ್ದ ಆತ ಇದೀಗ ಕೊಕೇನ್ ಸೇವನೆಗೆ ಹೆಚ್ಚು ಒಲವು ತೋರಿದ್ದಾನೆ ಎಂದು ಹೇಳಿದ್ದಾರೆ.
ದಾವೂದ್ಗಾಗಿ ತಾನೇ ಮದ್ಯ ಖರೀದಿಸಿದ್ದಾಗಿ ಹಾಗೂ ಸುಮಾರು 1.78 ಲಕ್ಷ ರೂಪಾಯಿ ಮೌಲ್ಯದ ದುಬಾರಿ ಮದ್ಯದ ಬಾಟಲಿಯನ್ನು ಆತ ತರಿಸಿಕೊಂಡಿದ್ದಾಗಿ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಕರಾಚಿಯ ’22 ಜಮ್ಮಮಾ’ ಎಂಬ ಅತ್ಯಂತ ಬಿಗಿ ಭದ್ರತೆಯ, ಶಬ್ದ ನಿರೋಧಕ ಕಟ್ಟಡದಲ್ಲಿ ದಾವೂದ್ ಪಾಕಿಸ್ತಾನದ ಅಧಿಕಾರಿಗಳು ಮತ್ತು ಉದ್ಯಮಿಗಳೊಂದಿಗೆ ಸಭೆ ನಡೆಸುತ್ತಾನೆ ಎಂದಿದ್ದಾರೆ.
ಒಂದು ಸಂದರ್ಭದಲ್ಲಿ ತನ್ನ ಸಹಾಯಕನಿಗೆ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ನಲ್ಲಿ ಉದ್ಯೋಗ ಕೊಡಿಸುವ ಸಲುವಾಗಿ ದಾವೂದ್ ಮಧ್ಯರಾತ್ರಿಯಲ್ಲಿ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ಕರೆ ಮಾಡಿದ್ದನ್ನು ನೋಡಿದ್ದೇನೆ ಎಂದೂ ಫರೀದಿ ಹೇಳಿಕೊಂಡಿದ್ದಾರೆ.
ಇದಲ್ಲದೆ, ದಾವೂದ್ ಪಾಕಿಸ್ತಾನದಲ್ಲಿ ಎರಡನೇ ಮದುವೆಯಾಗಿದ್ದಾನೆ ಎಂಬ ಮಾಹಿತಿಯನ್ನೂ ಅವರು ಬಹಿರಂಗಪಡಿಸಿದ್ದಾರೆ. ಆಯೇಷಾ ಭಾಭಿ ಎಂದು ಕರೆಯಲಾಗುವ ಈ ಮಹಿಳೆ ದಾವೂದ್ಗಿಂತ ಸುಮಾರು 20 ವರ್ಷ ಚಿಕ್ಕವಳು. ಆಕೆ ಕರಾಚಿಯಲ್ಲಿ ಕಪ್ಪು ಬಣ್ಣದ ಮರ್ಸಿಡಿಸ್ ಕಾರಿನಲ್ಲಿ ಸಂಚರಿಸುತ್ತಾಳೆ ಎಂದು ತಿಳಿಸಿದ್ದಾರೆ.
2023ರಲ್ಲಿ ದಾವೂದ್ನ ಸಹೋದರಿ ಹಸೀನಾ ಪಾರ್ಕರ್ ಪುತ್ರ ಅಲಿಶಾ ಪಾರ್ಕರ್ ಕೂಡ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮುಂದೆ ಇದೇ ರೀತಿಯ ಮಾಹಿತಿ ನೀಡಿದ್ದ ಎನ್ನಲಾಗಿದೆ. ಮೊದಲ ಪತ್ನಿ ಮೆಹಜಬೀನ್ ಜೊತೆಗಿನ ವಿವಾಹ ಸಂಬಂಧ ಮುಂದುವರಿದಿರುವಾಗಲೇ ದಾವೂದ್ ಪಾಕಿಸ್ತಾನದ ಪಠಾಣ್ ಸಮುದಾಯದ ಮಹಿಳೆಯನ್ನು ಎರಡನೇ ಮದುವೆಯಾಗಿದ್ದಾನೆ ಎಂದು ಅಲಿಶಾ ಹೇಳಿದ್ದ.
ದಾವೂದ್ ಜೊತೆಗಿದ್ದ ಮುಂಬೈನ ಫಕೀರ!
ದಾವೂದ್ ಪಾಕಿಸ್ತಾನಕ್ಕೆ ತೆರಳುವಾಗ ಮುಂಬೈ ಮೂಲದ ‘ಇಸ್ಲಾಂ ಬಾಬಾ’ ಎಂಬ ಫಕೀರನನ್ನೂ ತನ್ನೊಂದಿಗೆ ಕರೆದೊಯ್ದಿದ್ದ ಎಂದು ಫರೀದಿ ತಿಳಿಸಿದ್ದಾರೆ. ಡಿ-ಕಂಪನಿಯ ಯಾವುದೇ ಕಾರ್ಯಾಚರಣೆ ಆರಂಭಿಸುವ ಮೊದಲು ಈ ಫಕೀರನ ಅನುಮತಿ ಪಡೆಯಲಾಗುತ್ತದೆ ಎಂಬ ಕುತೂಹಲಕಾರಿ ವಿಚಾರವನ್ನೂ ಅವರು ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ, ದಶಕಗಳಿಂದ ನಿಗೂಢವಾಗಿರುವ ದಾವೂದ್ ಇಬ್ರಾಹಿಂನ ವೈಯಕ್ತಿಕ ಬದುಕು, ಭದ್ರತಾ ವ್ಯವಸ್ಥೆ ಹಾಗೂ ಅಪರಾಧ ಜಾಲದ ಕುರಿತು ಕಮ್ರಾನ್ ಫರೀದಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆದರೆ, ಸಂದರ್ಶನದಲ್ಲಿ ಅವರು ನೀಡಿರುವ ಮಾಹಿತಿಗಳಿಗೆ ಸ್ವತಂತ್ರ ದೃಢೀಕರಣ ಲಭ್ಯವಾಗಿರುವ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಈ ಹೇಳಿಕೆಗಳನ್ನು ದೃಢಪಟ್ಟ ಅಧಿಕೃತ ಮಾಹಿತಿಯೆಂದು ಪರಿಗಣಿಸಲಾಗದು.
ಸಿನೆಮಾ
Arjun Sarja-ಪುತ್ರಿ ಐಶ್ವರ್ಯಾ ವಿರುದ್ಧ ಅವಹೇಳನಕಾರಿ ವರದಿ: ಮಾಧ್ಯಮಗಳ ವಿರುದ್ಧ ಸಿಡಿದೆದ್ದ ಅರ್ಜುನ್ ಸರ್ಜಾ; ಅಧಿಕೃತ ದೂರು ದಾಖಲು
ಹಿರಿಯ ಪುತ್ರಿ ಐಶ್ವರ್ಯಾ ಅವರ ವೈಯಕ್ತಿಕ ಜೀವನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಧಾರರಹಿತ ಮತ್ತು ಅವಹೇಳನಕಾರಿ ಆರೋಪಗಳ ವಿರುದ್ಧ ಬಹುಭಾಷಾ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಅರ್ಜುನ್ ಸರ್ಜಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಅಧಿಕೃತ ದೂರು ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ಚೆನ್ನೈ: ಹಿರಿಯ ಪುತ್ರಿ ಐಶ್ವರ್ಯಾ ಅವರ ವೈಯಕ್ತಿಕ ಜೀವನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಧಾರರಹಿತ ಮತ್ತು ಅವಹೇಳನಕಾರಿ ಆರೋಪಗಳ ವಿರುದ್ಧ ಬಹುಭಾಷಾ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಅರ್ಜುನ್ ಸರ್ಜಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಅಧಿಕೃತ ದೂರು ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿಯ ವಿವಾಹ ಸಮಾರಂಭದಲ್ಲಿ ಅಳಿಯ ಉಮಾಪತಿ ರಾಮಯ್ಯ ಅವರು ಹೆಚ್ಚಾಗಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ, ಐಶ್ವರ್ಯಾ ಮತ್ತು ಉಮಾಪತಿ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಗಳು ಕೆಲವು ಆನ್ಲೈನ್ ಪೋರ್ಟಲ್ಗಳಲ್ಲಿ ಪ್ರಕಟವಾಗಿದ್ದವು. ಇದರ ಬೆನ್ನಲ್ಲೇ ಕೆಲವು ಮಾಧ್ಯಮಗಳು ಐಶ್ವರ್ಯಾ ಅವರನ್ನು ಮದ್ಯವ್ಯಸನಿ ಎಂದು ಬಿಂಬಿಸುವ ವರದಿಗಳನ್ನೂ ಪ್ರಸಾರ ಮಾಡಿದ್ದವು.
ಈ ವರದಿಗಳ ವಿರುದ್ಧ ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅರ್ಜುನ್ ಸರ್ಜಾ, ವ್ಯಕ್ತಿಯ ಗೌರವ ಮತ್ತು ಘನತೆಯ ವಿಚಾರದಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ ಎಂದು ಖಡಕ್ ಸಂದೇಶ ನೀಡಿದ್ದಾರೆ.
“ಕಲಾವಿದರ ಸಾರ್ವಜನಿಕ ಜೀವನದಲ್ಲಿ ಊಹಾಪೋಹಗಳು ಮತ್ತು ಟೀಕೆಗಳು ಸಹಜ. ಆದರೆ ಊಹಾಪೋಹಗಳಿಗೂ ಉದ್ದೇಶಪೂರ್ವಕವಾಗಿ ಆಧಾರರಹಿತ ಆರೋಪಗಳನ್ನು ಹರಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಾರ್ವಜನಿಕ ವಿಮರ್ಶೆಯ ಹೆಸರಿನಲ್ಲಿ ಕಟ್ಟುಕಥೆಗಳನ್ನು ಸೃಷ್ಟಿಸಲು ಅಥವಾ ವ್ಯಕ್ತಿಯ ಚಾರಿತ್ರ್ಯವಧೆ ಮಾಡಲು ಯಾರಿಗೂ ಅಧಿಕಾರವಿಲ್ಲ. ಯಾವುದೇ ಆಧಾರವಿಲ್ಲದೆ ಮಹಿಳೆಯೊಬ್ಬರನ್ನು ಮದ್ಯವ್ಯಸನಿ ಎಂದು ಕರೆಯುವುದು ಅತ್ಯಂತ ಬೇಜವಾಬ್ದಾರಿಯುತ ಮತ್ತು ಸ್ವೀಕಾರಾರ್ಹವಲ್ಲದ ವರ್ತನೆ” ಎಂದು ಅವರು ಕಿಡಿಕಾರಿದ್ದಾರೆ.
ಮೌನವನ್ನು ಒಪ್ಪಿಗೆ ಎಂದು ಭಾವಿಸಬೇಡಿ
ತಂದೆಯಾಗಿ ಪುತ್ರಿಯ ವಿರುದ್ಧದ ಇಂತಹ ಆರೋಪಗಳನ್ನು ಸಹಿಸಿಕೊಂಡು ಮೌನವಾಗಿರಲು ಸಾಧ್ಯವಿಲ್ಲ ಎಂದು ಅರ್ಜುನ್ ಸರ್ಜಾ ಸ್ಪಷ್ಟಪಡಿಸಿದ್ದಾರೆ.
“ಮೌನವೇ ಅತ್ಯಂತ ಘನತೆಯ ಪ್ರತಿಕ್ರಿಯೆ ಎಂದು ನಾವು ನಂಬಿದ್ದೇವೆ. ಆದರೆ ನಮ್ಮ ಮೌನವನ್ನು ಒಪ್ಪಿಗೆ ಎಂದು ಭಾವಿಸಬಾರದು. ತಪ್ಪು ಮಾಹಿತಿಯನ್ನು ಪದೇಪದೆ ಹರಡಲು ಅವಕಾಶ ನೀಡಲೂ ಸಾಧ್ಯವಿಲ್ಲ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಧಿಕೃತ ದೂರು ಸಲ್ಲಿಸಿ ಸೂಕ್ತ ಕ್ರಮಕ್ಕೆ ಮುಂದಾಗಿದ್ದೇವೆ” ಎಂದು ತಿಳಿಸಿದ್ದಾರೆ.
ಇದು ಕೇವಲ ತಮ್ಮ ಪುತ್ರಿಗೆ ಸಂಬಂಧಿಸಿದ ವಿಚಾರವಲ್ಲ. ಮಹಿಳೆಯರ ಘನತೆಗೆ ಧಕ್ಕೆ ಉಂಟಾದಾಗ ಹಾಗೂ ಅವರ ವೈಯಕ್ತಿಕ ಆಯ್ಕೆಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸಿದಾಗ ಎದುರಾಗುವ ನೋವಿನ ವಿಚಾರವೂ ಹೌದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕುಟುಂಬದ ಬೆಂಬಲವಿಲ್ಲದ ಮಹಿಳೆಯರಿಗೆ ಇಂತಹ ಆರೋಪಗಳು ಮತ್ತಷ್ಟು ನೋವುಂಟುಮಾಡಬಹುದು. ಯಾವುದೇ ಮಹಿಳೆ ಇಂತಹ ಪರಿಸ್ಥಿತಿಯನ್ನು ಏಕಾಂಗಿಯಾಗಿ ಎದುರಿಸುವಂತಾಗಬಾರದು ಅಥವಾ ತನ್ನ ಜೀವನಶೈಲಿಯನ್ನು ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಾರದು ಎಂದು ಅರ್ಜುನ್ ಸರ್ಜಾ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.
ಸಿನೆಮಾ
Ramya Krishnan-ಪತಿಯಿಂದ ದೂರವಿದ್ದರೂ ದಾಂಪತ್ಯ ಗಟ್ಟಿಯಾಗಿದೆ..! ವಿಚ್ಛೇದನ ವದಂತಿಗೆ ರಮ್ಯಾ ಕೃಷ್ಣನ್ ಸ್ಪಷ್ಟನೆ
ತೆಲುಗು ಚಿತ್ರರಂಗದ ಖ್ಯಾತ ನಟಿ ರಮ್ಯಾ ಕೃಷ್ಣನ್ ಮತ್ತು ನಿರ್ದೇಶಕ ಕೃಷ್ಣ ವಂಶಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ನಟಿ ರಮ್ಯಾ ಕೃಷ್ಣನ್ ಸ್ಪಷ್ಟನೆ ನೀಡಿದ್ದು, ತಮ್ಮ ದಾಂಪತ್ಯ ಜೀವನದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದ್ದಾರೆ.
ತೆಲುಗು ಚಿತ್ರರಂಗದ ಖ್ಯಾತ ನಟಿ ರಮ್ಯಾ ಕೃಷ್ಣನ್ ಮತ್ತು ನಿರ್ದೇಶಕ ಕೃಷ್ಣ ವಂಶಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ವದಂತಿಗಳು ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೀಗ ಈ ಎಲ್ಲಾ ಊಹಾಪೋಹಗಳಿಗೆ ನಟಿ ರಮ್ಯಾ ಕೃಷ್ಣನ್ ಸ್ಪಷ್ಟನೆ ನೀಡಿದ್ದು, ತಮ್ಮ ದಾಂಪತ್ಯ ಜೀವನದಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ತಿಳಿಸಿದ್ದಾರೆ.
ವೃತ್ತಿಪರ ಕಾರಣಗಳಿಂದಾಗಿ ತಾವು ಮತ್ತು ಪತಿ ಕೃಷ್ಣ ವಂಶಿ ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿದ್ದೇವೆ. ಆದರೆ, ಇದರಿಂದ ತಮ್ಮ ಸಂಬಂಧಕ್ಕೆ ಯಾವುದೇ ಧಕ್ಕೆಯಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ‘ರಾ ಟಾಕ್ಸ್ ವಿತ್ ವಿಕೆ’ ಪಾಡ್ಕಾಸ್ಟ್ನಲ್ಲಿ ಮಾತನಾಡಿದ ರಮ್ಯಾ ಕೃಷ್ಣನ್, “ನಾವಿನ್ನೂ ದಂಪತಿಯಾಗಿಯೇ ಇದ್ದೇವೆ. ನಮ್ಮ ಅನುಕೂಲಕ್ಕೆ ತಕ್ಕಂತೆ ಬೇರೆ ಬೇರೆ ನಗರಗಳಲ್ಲಿ ಸಂತೋಷದಿಂದ ವಾಸಿಸುತ್ತಿದ್ದೇವೆ. ನಮ್ಮ ವೃತ್ತಿಜೀವನದ ಕಾರಣದಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ” ಎಂದು ಹೇಳಿದ್ದಾರೆ.
ಮಗನ ಆರೋಗ್ಯಕ್ಕಾಗಿ ಬೇರೆ ನಗರಗಳಲ್ಲಿ ವಾಸ!
ತಮ್ಮ ಕುಟುಂಬದ ನಿರ್ಧಾರದ ಹಿಂದಿನ ಕಾರಣವನ್ನು ವಿವರಿಸಿದ ರಮ್ಯಾ ಕೃಷ್ಣನ್, ಹೈದರಾಬಾದ್ನಿಂದ ಚೆನ್ನೈಗೆ ಪ್ರತಿ 15 ದಿನಗಳಿಗೊಮ್ಮೆ ಚಿತ್ರೀಕರಣಕ್ಕಾಗಿ ಪ್ರಯಾಣಿಸಬೇಕಾಗುತ್ತಿತ್ತು. ಈ ನಿರಂತರ ಪ್ರಯಾಣವು ಮಗನ ಆರೋಗ್ಯದ ಮೇಲೆ ಪರಿಣಾಮ ಬೀರಲು ಆರಂಭಿಸಿತ್ತು ಎಂದು ತಿಳಿಸಿದ್ದಾರೆ.
“ನಾನು ಪ್ರತಿ ಬಾರಿ ನಗರದಿಂದ ಹೊರಟಾಗಲೂ ನನ್ನ ಮಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದ. ಹೀಗಾಗಿ, ಆತನ ಆರೋಗ್ಯದ ದೃಷ್ಟಿಯಿಂದ ಚೆನ್ನೈನಲ್ಲಿರುವ ಶಾಲೆಗೆ ಸೇರಿಸಲು ನಿರ್ಧರಿಸಿದೆವು. ಅಂದಿನಿಂದ ನಾವು ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿದ್ದೇವೆ. ಈ ವ್ಯವಸ್ಥೆಯು ನಮ್ಮ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಅಲ್ಲದೆ, ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನೂ ಕಡಿಮೆ ಮಾಡಿದೆ” ಎಂದು ರಮ್ಯಾ ವಿವರಿಸಿದ್ದಾರೆ.
2003ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
ರಮ್ಯಾ ಕೃಷ್ಣನ್ ಮತ್ತು ಕೃಷ್ಣ ವಂಶಿ ಅವರು 2003ರ ಜೂನ್ 12ರಂದು ವಿವಾಹವಾಗಿದ್ದರು. 2005ರ ಫೆಬ್ರುವರಿಯಲ್ಲಿ ಈ ದಂಪತಿಗೆ ಪುತ್ರ ರಿತ್ವಿಕ್ ವಂಶಿ ಜನಿಸಿದ್ದಾನೆ.
ಇವರಿಬ್ಬರೂ ಮೊದಲ ಬಾರಿಗೆ 1998ರಲ್ಲಿ ಬಿಡುಗಡೆಯಾದ ತೆಲುಗಿನ ರೊಮ್ಯಾಂಟಿಕ್ ಕಾಮಿಡಿ-ಥ್ರಿಲ್ಲರ್ ಸಿನಿಮಾ ‘ಚಂದ್ರಲೇಖಾ’ದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.
‘ರಾಕಾ’ ಸಿನಿಮಾದಲ್ಲಿ ರಮ್ಯಾ ಕೃಷ್ಣನ್
ಸದ್ಯ ರಮ್ಯಾ ಕೃಷ್ಣನ್ ಅವರು ನಿರ್ದೇಶಕ ಅಟ್ಲಿ ಅವರ ಬಹುನಿರೀಕ್ಷಿತ ಆ್ಯಕ್ಷನ್-ಥ್ರಿಲ್ಲರ್ ಸಿನಿಮಾ ‘ರಾಕಾ’ದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲು ಅರ್ಜುನ್ ಮತ್ತು ದೀಪಿಕಾ ಪಡುಕಣೆ ನಟನೆಯ ಈ ಸಿನಿಮಾ 2027ರ ಡಿಸೆಂಬರ್ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.
ಇದರ ಜೊತೆಗೆ, ಮಂಚು ಮನೋಜ್ ಮತ್ತು ಮಾರಿಯಾ ರಯಾಬೊಶಪ್ಯಾ ನಟನೆಯ ‘ಡೇವಿಡ್ ರೆಡ್ಡಿ’ ಸಿನಿಮಾದಲ್ಲೂ ರಮ್ಯಾ ಕೃಷ್ಣನ್ ಅಭಿನಯಿಸುತ್ತಿದ್ದಾರೆ.















