ಮಂಗಳೂರು
Vande Bharat Train-ಕರಾವಳಿ–ರಾಜಧಾನಿ ಸಂಪರ್ಕ ಮತ್ತಷ್ಟು ಸುಗಮ: ಮಂಗಳೂರು–ಮಡಗಾಂವ್ ವಂದೇ ಭಾರತ್ ಇನ್ಮುಂದೆ ಯಶವಂತಪುರದವರೆಗೆ
ಕರಾವಳಿ ಕರ್ನಾಟಕ ಹಾಗೂ ರಾಜಧಾನಿ ಬೆಂಗಳೂರು ನಡುವಿನ ರೈಲು ಸಂಪರ್ಕಕ್ಕೆ ಮತ್ತಷ್ಟು ವೇಗ ಸಿಗುವ ಸಾಧ್ಯತೆ ಮೂಡಿದೆ. ಪ್ರಸ್ತುತ ಮಂಗಳೂರು ಮತ್ತು ಗೋವಾದ ಮಡಗಾಂವ್ ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಬೆಂಗಳೂರಿನ ಯಶವಂತಪುರದವರೆಗೆ ವಿಸ್ತರಿಸಲು ಕೇಂದ್ರ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿದೆ.
ಬೆಂಗಳೂರು: ಕರಾವಳಿ ಕರ್ನಾಟಕ ಹಾಗೂ ರಾಜಧಾನಿ ಬೆಂಗಳೂರು ನಡುವಿನ ರೈಲು ಸಂಪರ್ಕಕ್ಕೆ ಮತ್ತಷ್ಟು ವೇಗ ಸಿಗುವ ಸಾಧ್ಯತೆ ಮೂಡಿದೆ. ಪ್ರಸ್ತುತ ಮಂಗಳೂರು ಮತ್ತು ಗೋವಾದ ಮಡಗಾಂವ್ ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು ಬೆಂಗಳೂರಿನ ಯಶವಂತಪುರದವರೆಗೆ ವಿಸ್ತರಿಸಲು ಕೇಂದ್ರ ರೈಲ್ವೆ ಇಲಾಖೆ ಹಸಿರು ನಿಶಾನೆ ತೋರಿದೆ.
ಕರಾವಳಿ ಭಾಗದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ನಿರ್ಧಾರವನ್ನು ತಿಳಿಸಿದ್ದಾರೆ.
2023ರ ಡಿಸೆಂಬರ್ನಿಂದ ಮಂಗಳೂರು ಸೆಂಟ್ರಲ್–ಮಡಗಾಂವ್ ನಡುವೆ ಸಂಚರಿಸುತ್ತಿರುವ ವಂದೇ ಭಾರತ್ ಎಕ್ಸ್ಪ್ರೆಸ್ ಇನ್ನು ಮುಂದೆ ಮಂಗಳೂರು ಜಂಕ್ಷನ್ ಮೂಲಕ ಯಶವಂತಪುರ–ಮಡಗಾಂವ್–ಯಶವಂತಪುರ ಮಾರ್ಗದಲ್ಲಿ ಸಂಚರಿಸುವ ನಿರೀಕ್ಷೆಯಿದೆ. ರೈಲಿಗೆ ಹೊಸ ವೇಳಾಪಟ್ಟಿ ಹಾಗೂ ರೈಲು ಸಂಖ್ಯೆಗಳನ್ನೂ ನಿಗದಿಪಡಿಸಲಾಗುತ್ತಿದೆ.
ಸಂಭಾವ್ಯ ವೇಳಾಪಟ್ಟಿ, ನಿಲ್ದಾಣಗಳು
ರೈಲ್ವೆ ಇಲಾಖೆ ಅಧಿಕೃತ ವೇಳಾಪಟ್ಟಿಯನ್ನು ಇನ್ನಷ್ಟೇ ಪ್ರಕಟಿಸಬೇಕಿದೆ. ಲಭ್ಯವಿರುವ ಮಾಹಿತಿಯಂತೆ ಯಶವಂತಪುರದಿಂದ ಬೆಳಗ್ಗೆ ಹೊರಟು ಮಧ್ಯಾಹ್ನ ಮಂಗಳೂರು ತಲುಪಿ, ಸಂಜೆ ಗೋವಾ ತಲುಪುವ ರೀತಿಯಲ್ಲಿ ವೇಳಾಪಟ್ಟಿ ರೂಪಿಸುವ ಸಾಧ್ಯತೆಯಿದೆ. ಮಡಗಾಂವ್ನಿಂದ ಬೆಳಗ್ಗೆ ಹೊರಟು ಸಂಜೆ ಬೆಂಗಳೂರಿನ ಯಶವಂತಪುರ ತಲುಪುವ ನಿರೀಕ್ಷೆಯಿದೆ.
ಪ್ರಸ್ತಾವಿತ ವೇಳಾಪಟ್ಟಿಯಂತೆ ಯಶವಂತಪುರ–ಮಡಗಾಂವ್ ರೈಲು (26655) ಬೆಳಗ್ಗೆ 6.05ಕ್ಕೆ ಯಶವಂತಪುರದಿಂದ ಹೊರಟು ರಾತ್ರಿ 7.15ಕ್ಕೆ ಮಡಗಾಂವ್ ತಲುಪಲಿದೆ. ಮಡಗಾಂವ್–ಯಶವಂತಪುರ ರೈಲು (26656) ಬೆಳಗ್ಗೆ 5.30ಕ್ಕೆ ಮಡಗಾಂವ್ನಿಂದ ಹೊರಟು ಸಂಜೆ 6.40ಕ್ಕೆ ಯಶವಂತಪುರ ತಲುಪಲಿದೆ.
ರೈಲು ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಬೈಂದೂರು, ಮುರ್ಡೇಶ್ವರ, ಗೋಕರ್ಣ ರೋಡ್ ಹಾಗೂ ಕಾರವಾರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದುವ ಸಾಧ್ಯತೆಯಿದೆ.
ಘಾಟ್ ಮಾರ್ಗದಲ್ಲಿ ಸುರಕ್ಷತೆಗೆ ವಿಶೇಷ ವ್ಯವಸ್ಥೆ
ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ನಡುವಿನ ಘಾಟ್ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಈ ಮಾರ್ಗದಲ್ಲಿ ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್ ವ್ಯವಸ್ಥೆ ಅಗತ್ಯವಿದ್ದು, ಗರಿಷ್ಠ 30 ಕಿ.ಮೀ ವೇಗದ ಮಿತಿ ಇರಲಿದೆ ಎಂದು ತಿಳಿಸಲಾಗಿದೆ.
ಇದಕ್ಕಾಗಿ ಅತ್ಯಾಧುನಿಕ ಬ್ರೇಕಿಂಗ್ ವ್ಯವಸ್ಥೆ ಹೊಂದಿರುವ ಎಂಟು ಬೋಗಿಗಳ ಎರಡು ರೇಕ್ಗಳನ್ನು ಬಳಸುವ ಸಾಧ್ಯತೆಯಿದೆ. ಸೆ.10ರಂದು ಇದೇ ಮಾರ್ಗದಲ್ಲಿ 16 ಬೋಗಿಗಳ ರೈಲಿನ ಪ್ರಾಯೋಗಿಕ ಸಂಚಾರವನ್ನು ಯಶಸ್ವಿಯಾಗಿ ನಡೆಸಲಾಗಿತ್ತು.
ಪ್ರಯಾಣದ ಅವಧಿ ಕಡಿತಕ್ಕೆ ಪ್ರಯಾಣಿಕರ ಒತ್ತಾಯ
ವಂದೇ ಭಾರತ್ ರೈಲನ್ನು ಯಶವಂತಪುರದವರೆಗೆ ವಿಸ್ತರಿಸುವ ಕ್ರಮಕ್ಕೆ ಕರಾವಳಿಯ ಪ್ರಯಾಣಿಕರಿಂದ ಸ್ವಾಗತ ವ್ಯಕ್ತವಾಗಿದ್ದರೂ, ಪ್ರಸ್ತಾವಿತ ವೇಳಾಪಟ್ಟಿಯ ಬಗ್ಗೆ ಅಸಮಾಧಾನವೂ ವ್ಯಕ್ತವಾಗಿದೆ.
ಪ್ರಸ್ತುತ ಪ್ರಸ್ತಾವನೆಯಂತೆ ಸುಮಾರು 13 ಗಂಟೆಗಳ ಪ್ರಯಾಣದ ಅವಧಿ ಇರಲಿದ್ದು, ಇದನ್ನು ಕನಿಷ್ಠ 11 ಗಂಟೆಗಳಿಗೆ ಇಳಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ಮಂಗಳೂರು–ತಿರುವನಂತಪುರಂ ವಂದೇ ಭಾರತ್ ಮಾದರಿಯಲ್ಲಿ ಬೆಳಗ್ಗೆ ಮಂಗಳೂರಿನಿಂದ ಬೆಂಗಳೂರಿಗೆ ಹೊರಟು, ಸಂಜೆ ಅಥವಾ ರಾತ್ರಿ ಮಂಗಳೂರಿಗೆ ಮರಳುವ ರೀತಿಯಲ್ಲಿ ವೇಳಾಪಟ್ಟಿ ರೂಪಿಸಿದರೆ ಕಚೇರಿ ಕೆಲಸ, ಉದ್ಯಮ ಹಾಗೂ ವೈದ್ಯಕೀಯ ಉದ್ದೇಶಗಳಿಗಾಗಿ ಬೆಂಗಳೂರಿಗೆ ತೆರಳುವವರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂಬುದು ಪ್ರಯಾಣಿಕರ ಅಭಿಪ್ರಾಯವಾಗಿದೆ.
ಮಂಗಳೂರು
Mangalore-ಮಂಗಳೂರು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಹೊಸ ತಿರುವು: ಮನೆಯವರ ಜೊತೆ ತೆರಳಲು ಯುವತಿ ನಕಾರ..!
ಮಂಗಳೂರಿನ ದೇರಳಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜು ಆವರಣದಿಂದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಮಹೀಂದ್ರಾ ಥಾರ್ ವಾಹನದಲ್ಲಿ ಬಲವಂತವಾಗಿ ಕರೆದೊಯ್ದಿದ್ದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕೇರಳಂನಲ್ಲಿ ವಿದ್ಯಾರ್ಥಿನಿಯನ್ನು ಪತ್ತೆಹಚ್ಚಿದ ಪೊಲೀಸರು ಆಕೆಯ ಹೇಳಿಕೆ ದಾಖಲಿಸಿದ್ದು, ಮನೆಯವರ ಜೊತೆ ತೆರಳಲು ತನಗೆ ಇಷ್ಟವಿಲ್ಲ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ.
ಮಂಗಳೂರು: ಮಂಗಳೂರಿನ ದೇರಳಕಟ್ಟೆಯ ಖಾಸಗಿ ವೈದ್ಯಕೀಯ ಕಾಲೇಜು ಆವರಣದಿಂದ ವೈದ್ಯಕೀಯ ವಿದ್ಯಾರ್ಥಿನಿಯನ್ನು ಮಹೀಂದ್ರಾ ಥಾರ್ ವಾಹನದಲ್ಲಿ ಬಲವಂತವಾಗಿ ಕರೆದೊಯ್ದಿದ್ದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಕೇರಳಂನಲ್ಲಿ ವಿದ್ಯಾರ್ಥಿನಿಯನ್ನು ಪತ್ತೆಹಚ್ಚಿದ ಪೊಲೀಸರು ಆಕೆಯ ಹೇಳಿಕೆ ದಾಖಲಿಸಿದ್ದು, ಮನೆಯವರ ಜೊತೆ ತೆರಳಲು ತನಗೆ ಇಷ್ಟವಿಲ್ಲ ಎಂದು ಯುವತಿ ಸ್ಪಷ್ಟಪಡಿಸಿದ್ದಾಳೆ.
ಏನಿದು ಪ್ರಕರಣ?
ನ.19ರ ಗುರುವಾರ ಸಂಜೆ ಕಾಲೇಜು ಆವರಣದಿಂದ ಕರೆದೊಯ್ಯಲ್ಪಟ್ಟ ಯುವತಿ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಮೂಲದವರಾಗಿದ್ದು, ದೇರಳಕಟ್ಟೆಯ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ ಎನ್ನಲಾಗಿದೆ.
ಯುವತಿ ಮಂಗಳೂರಿನ ಮತ್ತೊಂದು ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಡಿಎಸ್ ವ್ಯಾಸಂಗ ಮಾಡುತ್ತಿರುವ ಯುವಕನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ವಿಚಾರ ತಿಳಿದ ಯುವತಿಯ ಪೋಷಕರು ಹಾಗೂ ಸಂಬಂಧಿಕರು ಕಾಲೇಜು ಆವರಣಕ್ಕೆ ಆಗಮಿಸಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಬಲವಂತವಾಗಿ ಎಳೆದೊಯ್ದು ಮಹೀಂದ್ರಾ ಥಾರ್ ವಾಹನದಲ್ಲಿ ಕರೆದೊಯ್ದಿದ್ದರು. ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಘಟನೆಯ ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೇರಳಂನ ಸಂಬಂಧಿಕರ ಮನೆಯಲ್ಲಿದ್ದ ವಿದ್ಯಾರ್ಥಿನಿಯನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಮಂಗಳೂರಿಗೆ ಕರೆತಂದಿದ್ದಾರೆ.
ಮನೆಯವರ ಜೊತೆ ಹೋಗಲು ನಿರಾಕರಣೆ
ಪೊಲೀಸರು ರಕ್ಷಿಸಿದ ಬಳಿಕ ಯುವತಿಯ ಹೇಳಿಕೆ ದಾಖಲಿಸಿದ್ದು, ತನ್ನ ಪೋಷಕರು ಅಥವಾ ಮನೆಯವರ ಜೊತೆ ಹೋಗಲು ಇಚ್ಛಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ ಎನ್ನಲಾಗಿದೆ. ಯುವತಿ ವಯಸ್ಕಳಾಗಿರುವುದರಿಂದ ತಾನು ಎಲ್ಲಿ ವಾಸಿಸಬೇಕು ಎಂಬುದನ್ನು ನಿರ್ಧರಿಸುವ ಕಾನೂನುಬದ್ಧ ಹಕ್ಕು ಆಕೆಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ವೈದ್ಯಕೀಯ ತಪಾಸಣೆಯ ಬಳಿಕ ಯುವತಿಯ ಇಚ್ಛೆಯ ಸ್ಥಳಕ್ಕೆ ಅಥವಾ ಸಾಂತ್ವನ ಕೇಂದ್ರಕ್ಕೆ ಪೊಲೀಸ್ ರಕ್ಷಣೆಯಲ್ಲಿ ಕಳುಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವರದಿಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 140(3) ಮತ್ತು 126ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ವಿಚಾರಣೆಗೆ ಕರೆಸಲಾಗಿದೆ. ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಯಿರುವ ಅಪರಾಧವಾಗಿರುವ ಹಿನ್ನೆಲೆಯಲ್ಲಿ ಬಿಎನ್ಎಸ್ಎಸ್ ಅಡಿಯಲ್ಲಿ ನೋಟಿಸ್ ಜಾರಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ವರದಿಯಾಗಿದೆ.
ನಿಧನ ವಾರ್ತೆ
Mudbidri-ಮಂಗಳೂರಿನಲ್ಲಿ ಮೇಲ್ಛಾವಣಿ ಕೆಲಸದ ವೇಳೆ ಅವಘಡ: ಮೂಡುಬಿದಿರೆ ತಾ.ಪಂ. ಮಾಜಿ ಉಪಾಧ್ಯಕ್ಷ ಸಾವು
ಮೂಡುಬಿದಿರೆ ತಾಲೂಕು ಪಂಚಾಯತ್ನ ಮಾಜಿ ಉಪಾಧ್ಯಕ್ಷ ಸಂತೋಷ್ ಅವರು ಮಂಗಳೂರಿನಲ್ಲಿ ಮನೆಯ ಮೇಲ್ಛಾವಣಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಗುರುವಾರ ಸಂಭವಿಸಿದ ಈ ದುರಂತ ಘಟನೆ ದುಃಖಕ್ಕೆ ಕಾರಣವಾಗಿದೆ.
ಮೂಡುಬಿದಿರೆ, ನ.20: ಮೂಡುಬಿದಿರೆ ತಾಲೂಕು ಪಂಚಾಯತ್ನ ಮಾಜಿ ಉಪಾಧ್ಯಕ್ಷ ಸಂತೋಷ್ ಅವರು ಮಂಗಳೂರಿನಲ್ಲಿ ಮನೆಯ ಮೇಲ್ಛಾವಣಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ. ಗುರುವಾರ ಸಂಭವಿಸಿದ ಈ ದುರಂತ ಘಟನೆ ದುಃಖಕ್ಕೆ ಕಾರಣವಾಗಿದೆ.
ಮೂಡುಬಿದಿರೆ ತಾಲೂಕಿನ ಬೆಳುವಾಯಿ ನಿವಾಸಿಯಾಗಿದ್ದ ಸಂತೋಷ್ ಅವರು ಬೆಳುವಾಯಿ ಕ್ಷೇತ್ರದಿಂದ ತಾಲೂಕು ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಹೊಸದಾಗಿ ರಚನೆಯಾಗಿದ್ದ ಮೂಡುಬಿದಿರೆ ತಾಲೂಕು ಪಂಚಾಯತ್ನ ಮೊದಲ ಅವಧಿಯಲ್ಲಿ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಸಂತೋಷ್ ಅವರು ಪ್ರತಿದಿನ ಕೆಲಸದ ನಿಮಿತ್ತ ಮಂಗಳೂರಿಗೆ ತೆರಳುತ್ತಿದ್ದರು. ಗುರುವಾರ ಬೇರೆ ಸ್ಥಳದಲ್ಲಿ ಬದಲಿ ಕೆಲಸಗಾರನಾಗಿ ಕೆಲಸಕ್ಕೆ ತೆರಳಿದ್ದ ಅವರು, ಮನೆಯೊಂದರ ಮೇಲ್ಛಾವಣಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆಳಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.
ಅಪರಾಧ
Mangalore-ಮಂಗಳೂರು: ಕೆಲಸ ಮಾಡಿದ ಹಣ ನೀಡದ ವಿಚಾರಕ್ಕೆ ಮನೆ ಮಾಲೀಕನ ಕೊಲೆ; ಆರೋಪಿಗೆ ಜೀವಾವಧಿ ಶಿಕ್ಷೆ, ಮತ್ತೊಬ್ಬ ಖುಲಾಸೆ
ಕೆಲಸ ಮಾಡಿದ ಹಣ ನೀಡದ ವಿಚಾರಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣದಲ್ಲಿ ಮೊದಲನೇ ಆರೋಪಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದ ಎರಡನೇ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಮಂಗಳೂರು: ಕೆಲಸ ಮಾಡಿದ ಹಣ ನೀಡದ ವಿಚಾರಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣದಲ್ಲಿ ಮೊದಲನೇ ಆರೋಪಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದ ಎರಡನೇ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದ ಮಲ್ಲಿ ಲೇಔಟ್ನಲ್ಲಿರುವ ಸುರೇಂದ್ರನ್ ಅವರ ಮನೆಯಲ್ಲಿ 2020ರ ನವೆಂಬರ್ 3ರಂದು ಈ ಕೊಲೆ ನಡೆದಿತ್ತು.
ಪ್ರಕರಣದ ಮೊದಲನೇ ಆರೋಪಿ ಸಂತು ಅಲಿಯಾಸ್ ಸಂತೋಷ್, ತಾನು ಕೆಲಸ ಮಾಡಿದ ಹಣವನ್ನು ಸುರೇಂದ್ರನ್ ನೀಡಿಲ್ಲವೆಂದು ಎರಡನೇ ಆರೋಪಿ ಸಿದ್ದು ಅಲಿಯಾಸ್ ಸಿದ್ದಪ್ಪನೊಂದಿಗೆ ಹಣ ಕೇಳಲು ಅವರ ಮನೆಗೆ ತೆರಳಿದ್ದನು. ಈ ವೇಳೆ ಸಿದ್ದಪ್ಪನ ಪ್ರೇರಣೆಯಿಂದ ಸಂತೋಷ್ ಮನೆಯೊಳಗೆ ಹೋಗಿ ಸುರೇಂದ್ರನ್ ಅವರಲ್ಲಿ ಹಣ ಕೇಳಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಜಗಳ ವಿಕೋಪಕ್ಕೆ ತಿರುಗಿದಾಗ ಸಂತೋಷ್ ಪೇಪರ್ ಕತ್ತರಿಸುವ ಬ್ಲೇಡ್ನಿಂದ ಸುರೇಂದ್ರನ್ ಅವರ ಕುತ್ತಿಗೆ, ಮುಖ ಹಾಗೂ ತಲೆಯ ಭಾಗಕ್ಕೆ ಕೊಯ್ದಿದ್ದಾನೆ. ಅಲ್ಲದೆ, ವ್ಯಾಯಾಮಕ್ಕೆ ಬಳಸುವ ರಾಡ್ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪ್ರಕರಣದ ಆರೋಪಪಟ್ಟಿಯಲ್ಲಿ ತಿಳಿಸಲಾಗಿತ್ತು.
ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 88/2020ರಂತೆ ಐಪಿಸಿ ಕಲಂ 302, 392, 201, 114 ಜೊತೆಗೆ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಕಾವೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಘವ್ ಪಡೀಲ್ ಅವರು ಸಂತೋಷ್ ಮತ್ತು ಸಿದ್ದಪ್ಪನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತನಿಖೆ ಪೂರ್ಣಗೊಳಿಸಿ ಇಬ್ಬರು ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು, ಸಾಕ್ಷ್ಯಾಧಾರಗಳ ಪರಿಶೀಲನೆಯ ಬಳಿಕ ಮೊದಲನೇ ಆರೋಪಿ ಸಂತು ಅಲಿಯಾಸ್ ಸಂತೋಷ್ ದೋಷಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಎರಡನೇ ಆರೋಪಿ ಸಿದ್ದು ಅಲಿಯಾಸ್ ಸಿದ್ದಪ್ಪನನ್ನು ಖುಲಾಸೆಗೊಳಿಸಿದ್ದಾರೆ.
ಆರೋಪಿಗೆ ವಿಧಿಸಿದ ಶಿಕ್ಷೆ:
- ಐಪಿಸಿ ಕಲಂ 302 (ಕೊಲೆ): ಜೀವಾವಧಿ ಶಿಕ್ಷೆ ಹಾಗೂ 25,000 ರೂ. ದಂಡ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಜೈಲು ಶಿಕ್ಷೆ.
- ಐಪಿಸಿ ಕಲಂ 392 (ದರೋಡೆ): ಎರಡು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 5,000 ರೂ. ದಂಡ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಒಂದು ತಿಂಗಳ ಶಿಕ್ಷೆ.
- ಐಪಿಸಿ ಕಲಂ 201 (ಸಾಕ್ಷ್ಯ ನಾಶ): ಆರು ತಿಂಗಳ ಕಾರಾಗೃಹ ಶಿಕ್ಷೆ ಹಾಗೂ 2,000 ರೂ. ದಂಡ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ 15 ದಿನಗಳ ಶಿಕ್ಷೆ.
ಒಟ್ಟು 32,000 ರೂ. ದಂಡದ ಮೊತ್ತದಲ್ಲಿ 7,000 ರೂ. ಸರಕಾರಕ್ಕೆ ಹಾಗೂ 25,000 ರೂ.ಗಳನ್ನು ಕೊಲೆಯಾದ ಸುರೇಂದ್ರನ್ ಅವರ ಪತ್ನಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ಅವರು ವಾದ ಮಂಡಿಸಿದ್ದರು.
-
ಬಿಗ್ ನ್ಯೂಸ್10 hours agoBail rejected-ಸಿದ್ದರಾಮಯ್ಯ ವಿರುದ್ಧದ ‘ಸ್ಟಿಂಗ್’ ಪ್ರಕರಣ: ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿ 6 ಮಂದಿಯ ಜಾಮೀನು ಅರ್ಜಿ ವಜಾ
-
ಅಂತರ ರಾಜ್ಯ8 hours agoFormer CBI officer-ಅಧಿಕಾರ, ಹಣ, ಐಷಾರಾಮಿ ಬದುಕಿಗೆ ಗುಡ್ಬೈ; ಗುಹೆಯಲ್ಲಿ ಧ್ಯಾನ ಮಾಡುತ್ತಿರುವ ಮಾಜಿ ಸಿಬಿಐ ಅಧಿಕಾರಿ..!
-
ನಿಧನ ವಾರ್ತೆ9 hours agoHeart attack-ಸಾಲಿಗ್ರಾಮ: ಕಚೇರಿಯಲ್ಲೇ ಹೃದಯಾಘಾತ; ಬಹುಮುಖ ಪ್ರತಿಭೆ ದಿನೇಶ್ ಹೊಳ್ಳ ನಿಧನ
-
ನಿಧನ ವಾರ್ತೆ9 hours agoMudbidri-ಮಂಗಳೂರಿನಲ್ಲಿ ಮೇಲ್ಛಾವಣಿ ಕೆಲಸದ ವೇಳೆ ಅವಘಡ: ಮೂಡುಬಿದಿರೆ ತಾ.ಪಂ. ಮಾಜಿ ಉಪಾಧ್ಯಕ್ಷ ಸಾವು
-
ಸಿನೆಮಾ8 hours agoDawood-‘ಧುರಂಧರ್ ‘ ನಲ್ಲಿ ದಾವೂದ್ ನ ತೋರಿಸಿದ ರೀತಿ ವಾಸ್ತವವಲ್ಲ…! ಮೋಸ್ಟ್ ವಾಂಟೆಡ್ ಪಾತಕಿ ಈಗ ಹೇಗಿದ್ದಾನೆ ಗೊತ್ತೇ..? ಮಾಜಿ FBI ಅಧಿಕಾರಿ ಹೇಳಿದ್ದೇನೂ..?
-
ನಿಧನ ವಾರ್ತೆ9 hours agoOne-sided love-ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಮೇಲಿನ ಒನ್ಸೈಡೆಡ್ ಲವ್; ಹಲ್ಲೆಗೊಳಗಾದ ಯುವಕ ಸಾವು
-
ಮಂಗಳೂರು3 hours agoMangalore-ಮಂಗಳೂರು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಹೊಸ ತಿರುವು: ಮನೆಯವರ ಜೊತೆ ತೆರಳಲು ಯುವತಿ ನಕಾರ..!
-
ಸ್ಥಳೀಯ9 hours agoBail-ಬೆಳ್ತಂಗಡಿ: ಯತೀಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ರಿಲೀಫ್; ಮತ್ತಿಬ್ಬರಿಗೆ ಜಾಮೀನು















