ಶಿಕ್ಷಣ
Philomena-ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ 2026-27ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ; ನಾಯಕತ್ವಕ್ಕೆ ಸಮನ್ವಯ, ಸಹಕಾರವೇ ಆಧಾರ: ಡಾ. ಹೆಚ್. ಮಾಧವ ಭಟ್
ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ 2026-27ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಶನಿವಾರ ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು.
ಪುತ್ತೂರು, ಸೆ. 19: ಇಲ್ಲಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ 2026-27ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಶನಿವಾರ ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು.

ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ. ಹೆಚ್. ಮಾಧವ ಭಟ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಾಯಕತ್ವದ ಮೊದಲ ಕರ್ತವ್ಯವೆಂದರೆ ತನ್ನನ್ನೇ ತಾನು ಪ್ರಭಾವಿಸಿಕೊಳ್ಳುವುದಾಗಿದೆ. ಬಳಿಕ ಇತರರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು. ಅದೇ ವೇಳೆ ಇತರರಿಂದ ಪ್ರಭಾವಿತರಾಗಲು ಸಹ ನಾಯಕ ಸಿದ್ಧನಿರಬೇಕು. ಒಬ್ಬ ಉತ್ತಮ ನಾಯಕನು ಉತ್ತಮ ಅನುಯಾಯಿಯೂ ಆಗಿರುತ್ತಾನೆ.

ನಾಯಕನಿಗೆ ಯಾವುದು ಸರಿ ಎಂಬುದರ ಅರಿವು ಇರಬೇಕು. ‘ನಮ್ಮ ಮನೆ’ ಎನ್ನುವುದು ನಮ್ಮ ಮನಸ್ಸಿನಲ್ಲೇ ಇದೆ. ಆದ್ದರಿಂದ ನಾಯಕರು ಸಮನ್ವಯತೆ ಮತ್ತು ಸಹಕಾರದ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಕ್ರಾಂತಿಯನ್ನು ತರಲು ಪ್ರಯತ್ನಿಸುವ ಬದಲು ವಿಕಾಸ ಹಾಗೂ ಸತತ ಬೆಳವಣಿಗೆಯನ್ನು ನಂಬಬೇಕು. ಜೀವನವು ಸಣ್ಣ ಸಣ್ಣ ಸಂಗತಿಗಳಿಂದ ರೂಪುಗೊಂಡಿದ್ದು, ಸಾವಿರ ಮೈಲುಗಳ ಸುದೀರ್ಘ ಪ್ರಯಾಣವೂ ಒಂದು ಸಣ್ಣ ಹೆಜ್ಜೆಯಿಂದಲೇ ಆರಂಭವಾಗುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಡಾ. ಆ್ಯಂಟನಿ ಪ್ರಕಾಶ್ ಮೊಂತೆರೋ ಅವರು ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ, ಅಧ್ಯಕ್ಷೀಯ ನುಡಿಗಳನ್ನಾಡಿದರು.
ಇಂದಿನ ದಿನಗಳಲ್ಲಿ ಸಂಬಂಧಗಳು ಹಾಗೂ ಪರಸ್ಪರ ಸಂವಹನಗಳು ಷರತ್ತುಗಳು, ಆಕರ್ಷಣೆ ಮತ್ತು ಅಗತ್ಯಗಳನ್ನು ಆಧರಿಸುತ್ತಿವೆ. ನಾಯಕರು ತಮ್ಮ ಅನುಯಾಯಿಗಳೊಂದಿಗಿನ ಸಂವಹನಗಳನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸ್ವಾರ್ಥಿಗಳಾಗಿದ್ದರೆ ಎಂದಿಗೂ ಉತ್ತಮ ನಾಯಕರಾಗಲು ಸಾಧ್ಯವಿಲ್ಲ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚರ್ಚ್ ಪಾಲನ ಸಮಿತಿಯ ಉಪಾಧ್ಯಕ್ಷ ರೋಷನ್ ಲಾಸ್ರದೋ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ನಾಯ್ಕ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿಗಳು, ವಾಣಿಜ್ಯ ಆಡಳಿತ ವಿಭಾಗದ ಡೀನ್ ಹಾಗೂ ಮುಖ್ಯಸ್ಥ ಡಾ. ರಾಧಾಕೃಷ್ಣ ಗೌಡ, ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸ್ಪರ್ಲ್ ಫಿಯೋನಾ ಪಿರೇರಾ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಸತೀಶ್ ನಾಯ್ಕ್ ಕಡಬ ಹಾಗೂ ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ತೇಜಸ್ವಿ ಭಟ್ ಉಪಸ್ಥಿತಿಯಲ್ಲಿ ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ತೃತೀಯ ಬಿ.ಕಾಂ. ವಿದ್ಯಾರ್ಥಿ ಜಯಕೃಷ್ಣ ಇ. ಅವರು ಉದ್ಘಾಟಕರನ್ನು ಪರಿಚಯಿಸಿದರು. ಲಲಿತ ಕಲಾ ಸಂಘದ ವಿದ್ಯಾರ್ಥಿನಿಯರು ಪ್ರಾರ್ಥನೆ ನೆರವೇರಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ತೃತೀಯ ಬಿ.ಬಿ.ಎ. ವಿದ್ಯಾರ್ಥಿ ಲಿಖಿತ್ ಜೆ.ಡಿ. ಅವರು ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ತೃತೀಯ ಬಿ.ಎಸ್ಸಿ. ವಿದ್ಯಾರ್ಥಿನಿ ನಿಶ್ಮಿತಾ ರೈ ವಂದಿಸಿ, ತೃತೀಯ ಬಿ.ಬಿ.ಎ. ವಿದ್ಯಾರ್ಥಿನಿ ಪ್ರಿಯಾ ಎಂ.ಕೆ. ನಿರೂಪಿಸಿದರು.
ಶಿಕ್ಷಣ
Narendra-ನರೇಂದ್ರ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬೆಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಇದರ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಇಚ್ಚಿಕ ಜೈನ್ ಇವರು ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಬೆಂಗಳೂರು ಇಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಇದರ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ವಿಜ್ಞಾನ ವಿಭಾಗದ ಇಚ್ಚಿಕ ಜೈನ್ ಇವರು ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಮಧ್ಯಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಇವರು ಪುತ್ತೂರಿನ ನಿವಾಸಿಗಳಾದ ಪ್ರದೀಪ್ ಜೈನ್ ಮತ್ತು ಪ್ರೇಕ್ಷ ದಂಪತಿಗಳ ಪುತ್ರಿ.
ಹೈದರಾಬಾದ್ ನಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ಇದರ ಕ್ಷೇತ್ರಮಟ್ಟದ ಕ್ರೀಡಾಕೂಟದಲ್ಲಿ ನರೇಂದ್ರ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾದ ಲಿಖಿತ್ ಎನ್. ಇವರು 1500ಮೀ., 3000ಮೀ ರೇಸ್ ನಲ್ಲಿ ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನವನ್ನು ಪಡೆದು ಉತ್ತರ ಪ್ರದೇಶದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.ಇವರು ಪುಣಚ ನಿವಾಸಿಗಳಾದ ಮೋಹನ ನಾಯ್ಕ್ ಎನ್. ಮತ್ತು ಭವ್ಯ ದಂಪತಿಗಳ ಪುತ್ರ.
ವಿದ್ಯಾಭಾರತಿ ಕರ್ನಾಟಕ ಆಯೋಜಿಸಿದ, ಬಳ್ಳಾರಿಯಲ್ಲಿ ನಡೆದ ಪ್ರಾಂತೀಯ ಮಟ್ಟದ ಗಣಿತ ವಿಜ್ಞಾನ ಮೇಳ, ಸಂಸ್ಕೃತಿ ಮಹೋತ್ಸವದ ಸ್ಪರ್ಧೆಗಳಲ್ಲಿ ನರೇಂದ್ರ ಪದವಿಪೂರ್ವ ಕಾಲೇಜಿನ ದ್ವಿತೀಯ ವಿಜ್ಞಾನ ವಿಭಾಗದ ಕುಶಿತ್ ಆರ್. ಗೌಡ ಇವರು ಫಿಸಿಕ್ಸ್ ಎಕ್ಸ್ ಪರಿಮೆಂಟ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಪುತ್ತೂರಿನ ನಿವಾಸಿಗಳಾದ ರಾಜೇಶ್ ಮತ್ತು ನಳಿನಿ ದಂಪತಿಗಳ ಪುತ್ರ.
ಶಿಕ್ಷಣ
Vivekananda-ವಿವೇಕಾನಂದ ಕಾಲೇಜಿನಲ್ಲಿ ತರಬೇತಿ ಕಾರ್ಯಾಗಾರ; ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ವಸಿದ್ಧತೆ ಅಗತ್ಯ : ಪ್ರತಿಮಾ
ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ಐಕ್ಯೂಎಸಿಯ ಸಹಯೋಗದೊಂದಿಗೆ ನಡೆದ ಐದು ದಿನಗಳ ‘ಯುಜಿಸಿ-ನೆಟ್/ಕೆ-ಸೆಟ್ ಪರೀಕ್ಷೆಗಳ ಪ್ರಿಪರೇಷನ್ ಟೂಲ್ಸ್’ ವಿಷಯದ ಕುರಿತಾದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಬೆಳ್ಳಾರೆಯ ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪವಿತ್ರಾ ಮಾತನಾಡಿದರು.
ಪುತ್ತೂರು,ಅ.1: ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಸರ್ಟಿಫಿಕೇಟ್ ಮಾತ್ರವಲ್ಲ, ಉಜ್ವಲ ಭವಿಷ್ಯ, ಒಳ್ಳೆಯ ವೇತನ ಹಾಗೂ ಹೆಸರು ಇತ್ಯಾದಿಗಳೆಲ್ಲವೂ ಲಭಿಸಲಿದೆ. ಇಂದಿನ ಕಾಲದಲ್ಲಿ ಕಲಿಕೆಗೆ ಬೇಕಾದ ಅನೇಕ ಸಂಪನ್ಮೂಲಗಳು ಲಭ್ಯವಿರುವಾಗ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಪೂರ್ವಸಿದ್ಧತೆ ಎಂಬುದು ನಾವು ಉತ್ತೀರ್ಣರಾಗಲು ಅತ್ಯಗತ್ಯ. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಸಕ್ರಿಯರಾಗಿ ಅಧ್ಯಯನ ನಡೆಸಿ ಎಲ್ಲಾ ರೀತಿಯಿಂದಲೂ ಸಿದ್ಧರಾಗಿ ಪರೀಕ್ಷೆಯನ್ನು ಜಯಿಸಬೇಕು ಎಂದು ಬೆಳ್ಳಾರೆಯ ಶಿವರಾಮ ಕಾರಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪವಿತ್ರಾ ತಿಳಿಸಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ಸ್ನಾತಕೋತ್ತರ ವಾಣಿಜ್ಯ ವಿಭಾಗ ಹಾಗೂ ಐಕ್ಯೂಎಸಿಯ ಸಹಯೋಗದೊಂದಿಗೆ ನಡೆದ ಐದು ದಿನಗಳ ‘ಯುಜಿಸಿ-ನೆಟ್/ಕೆ-ಸೆಟ್ ಪರೀಕ್ಷೆಗಳ ಪ್ರಿಪರೇಷನ್ ಟೂಲ್ಸ್’ ವಿಷಯದ ಕುರಿತಾದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಮಾತನಾಡಿ ಅಧ್ಯಾಪಕ ವೃತ್ತಿಯನ್ನು ಬಯಸಿ ಹೋಗುವವರಿಗೆ, ಸಂಶೋಧನಾ ಕ್ಷೇತ್ರವನ್ನು ಆರಿಸುವವರಿಗೆ ನೆಟ್ ಹಾಗೂ ಕೆ-ಸೆಟ್ ಪರೀಕ್ಷೆಗಳನ್ನು ಪೂರ್ಣಗೊಳಿಸುವುದು ಅಗತ್ಯ. ಪರೀಕ್ಷೆಗೆ ಸಿದ್ಧರಾಗಲು ನಿರಂತರವಾಗಿ ಓದಿನಲ್ಲಿ ತೊಡಗಿಸಿಕೊಳ್ಳುವುದು ಮುಖ್ಯ. ಇವುಗಳ ಪಠ್ಯಕ್ರಮಗಳನ್ನು ಅಭ್ಯಾಸಿಸಿ ಪರಿಣತರಿಂದ ಮಾರ್ಗದರ್ಶನವನ್ನು ಪಡೆದು ಯಶಸ್ಸು ಗಳಿಸಬೇಕಿದೆ ಎಂದರು.
ಕಾರ್ಯಕ್ರಮವನ್ನು ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯಸರಸ್ವತಿ.ಬಿ ಸ್ವಾಗತಿಸಿ ಪ್ರಥಮ ಎಂಕಾಂ ವಿದ್ಯಾರ್ಥಿ ಧನರಾಜ್ ವಂದಿಸಿದರು. ಪ್ರಥಮ ಎಂಕಾಂ ವಿದ್ಯಾರ್ಥಿನಿ ಪ್ರತೀಕ್ಷಾ ಯು.ಕೆ ನಿರೂಪಿಸಿದರು.
ಶಿಕ್ಷಣ
Philomena-ಸಂತ ಫಿಲೋಮಿನಾ ಪ ಪೂ ಕಾಲೇಜಿನಲ್ಲಿ ಗಾಂಧಿ ಜಯಂತಿ ಆಚರಣೆ
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಆಚರಣೆಯು ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಆಚರಣೆಯು ಕಾಲೇಜು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು
ಫಾ. ಮರ್ವಿನ್ ಲೋಬೊ ಮಾತನಾಡಿ, ಗಾಂಧೀಜಿಯವರ ಜೀವನ ನಮಗೆ ದಾರಿದೀಪವಾಗಿದ್ದು, ಪ್ರತಿಯೊಬ್ಬರು ಅವರು ತೋರಿಸಿಕೊಟ್ಟ ಹಾದಿಯಲ್ಲಿ ಮುನ್ನಡೆಯಬೇಕು.
ಮುಖ್ಯವಾಗಿ ಸತ್ಯ ಮತ್ತು ಅಹಿಂಸೆ ಗಾಂಧೀಜಿಯವರು ತೋರಿಸಿದ ಎರಡು ಮಾರ್ಗಗಳು. ಇಂದು ಅಹಿಂಸೆ ಕೇವಲ ಭೌತಿಕವಾಗಿ ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣ ಗಳಲ್ಲಿ ಕೂಡ ಪಾಲನೆಯನ್ನು ಮಾಡಬೇಕಾಗಿದೆ. ಗಾಂಧೀಜಿಯ ಮರಣದ 78 ವರ್ಷಗಳ ನಂತರವೂ ಗಾಂಧೀಜಿಯವರ ಜೀವನ ಅತ್ಯಂತ ಪ್ರಸ್ತುತವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಮಹಾತ್ಮಾ ಗಾಂದೀಜಿಯವರ ಸರಳ ಜೀವನ ನಮಗೆ ಪಾಠವಾಗಬೇಕು. ಅವರಿಗೆ ಅತ್ಯಂತ ವಿಲಾಸಿ ಜೀವನವನ್ನು ನಡೆಸುವ ಅವಕಾಶ ಇದ್ದರೂ, ಕೂಡ ಭಾರತೀಯರಿಗಾಗಿ ಅವರು ಸರಳ ಮತ್ತು ನ್ಯಾಯ ಸಮ್ಮತ ಜೀವನವನ್ನು ಆಯ್ಕೆ ಮಾಡಿಕೊಂಡರು.

ಸತ್ಯದೊಂದಿಗಿನ ನನ್ನ ಪ್ರಯೋಗಗಳು ಎನ್ನುವ ಪುಸ್ತಕದಲ್ಲಿ ಅವರು ಅವರ ಜೀವನದಲ್ಲಿ ನಡೆದಂತಹ ಘಟನೆಗಳನ್ನು ವಿವರಿಸಿದ್ದು, ಇಂದಿನ ಯುವಕರು ಕಡ್ಡಾಯವಾಗಿ ಈ ಪುಸ್ತಕವನ್ನು ಓದಬೇಕೆಂದು ತಿಳಿಸಿದರು.
ಉಪನ್ಯಾಸಕರಾದ ಭರತ್ ಕುಮಾರ್ ಗಾಂಧೀಜಿಯವರ ತತ್ವ, ಸಿದ್ಧಾಂತಗಳ ಕುರಿತು ಮಾತನಾಡಿದರು. ವೇದಿಕೆಯಲ್ಲಿ ಉಪನ್ಯಾಸಕರಾದ ಯಶವಂತ್ ಎಂ ಡಿ ಹಾಗೂ ಗೋವಿಂದ್ ಪ್ರಕಾಶ್ ಸಿ. ಏಚ್ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಕಾಲೇಜಿನ ಬೋಧಕ/ ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ಉಪನ್ಯಾಸಕರಾದ ಸುಮಾ ಡಿ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.


















