ಬಿಗ್ ನ್ಯೂಸ್
Bannur-ಬನ್ನೂರು ರೈತರ ಸೇವಾ ಸಹಕಾರಿ ಸಂಘಕ್ಕೆ ₹1.85 ಕೋಟಿ ಲಾಭ; ಆಡಳಿತ ಮಂಡಳಿಯಲ್ಲಿ ಎಲ್ಲಾ ಪಕ್ಷದವರೂ ಇದ್ದು ಅನ್ನೋನ್ಯತೆಯಿಂದ ಹಾಗೂ ಒಗ್ಗಟಿನಿಂದ ಸಂಘದ ಅಭಿವೃದ್ಧಿಯಾಗುತ್ತಿದೆ: ಪಂಜಿಗುಡ್ಡೆ ಈಶ್ವರ್ ಭಟ್
ಕಳೆದ 50 ವರ್ಷಗಳಿಂದ ರೈತರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬನ್ನೂರು ರೈತರ ಸೇವಾ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ₹391 ಕೋಟಿ ವಹಿವಾಟು ನಡೆಸಿದ್ದು, ₹1.85 ಕೋಟಿ ನಿವ್ವಳ ಲಾಭ ಗಳಿಸಿದೆ. ಈ ಹಿನ್ನೆಲೆಯಲ್ಲಿ ಸಂಘದ ಸದಸ್ಯರಿಗೆ ಶೇ.11ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಘೋಷಿಸಿದರು.
ಪುತ್ತೂರು: ಕಳೆದ 50 ವರ್ಷಗಳಿಂದ ರೈತರ ಸೇವೆಯಲ್ಲಿ ತೊಡಗಿಸಿಕೊಂಡಿರುವ ಬನ್ನೂರು ರೈತರ ಸೇವಾ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ₹391 ಕೋಟಿ ವಹಿವಾಟು ನಡೆಸಿದ್ದು, ₹1.85 ಕೋಟಿ ನಿವ್ವಳ ಲಾಭ ಗಳಿಸಿದೆ. ಈ ಹಿನ್ನೆಲೆಯಲ್ಲಿ ಸಂಘದ ಸದಸ್ಯರಿಗೆ ಶೇ.11ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಘೋಷಿಸಿದರು.

ಬೊಳ್ಳಾರು ವಿಶ್ವಕರ್ಮ ಸಭಾಭವನದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಗತಿ ಪಥದಲ್ಲಿ ಸಾಗುತ್ತಿರುವ ಸಂಘದ ಸಾಧನೆಯನ್ನು ಪರಿಗಣಿಸಿ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸತತ 8 ವರ್ಷಗಳಿಂದ ಅತ್ಯುತ್ತಮ 5 ಸಂಘ ಎಂಬ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಅಭಿವೃದ್ಧಿಯ ಮೂಲಕ ಸಂಘ ಜಿಲ್ಲೆಯಲ್ಲಿ ಗುರುತಿಸಿಕೊಂಡಿದೆ. ಹಲವಾರು ಹಿರಿಯ ಸದಸ್ಯರ ಕಠಿಣ ಪರಿಶ್ರಮ ಹಾಗೂ ರೈತ ಸದಸ್ಯರ ಸಂಪೂರ್ಣ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ.

ಸಂಘದ ಆಡಳಿತ ಮಂಡಳಿಯಲ್ಲಿ ಎಲ್ಲಾ ಪಕ್ಷದವರೂ ಇದ್ದು ಅನ್ನೋನ್ಯತೆಯಿಂದ ಹಾಗೂ ಒಗ್ಗಟಿನಿಂದ ಸಂಘದ ಅಭಿವೃದ್ಧಿಯಲ್ಲಿ ಕೈಜೋಡಿಸಿದ್ದೇವೆ. ಸದಸ್ಯರ ಸಹಕಾರದಿಂದ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ ನಡೆಯುತ್ತಿದೆ. ಈ ಮೂಲಕ ಸಂಘಕ್ಕೆ ಚುನಾವಣೆಗಾಗಿ ಖರ್ಚಾಗುವ ಸುಮಾರು 8 ಲಕ್ಷ ರೂ. ಉಳಿತಾಯ ಆಗುತ್ತಿದೆ ಎಂದು ಪಂಜಿಗುಡ್ಡೆ ಈಶ್ವರ ಭಟ್ ಹೇಳಿದರು.
ಸಂಘವು ಸದಸ್ಯರ ಆರ್ಥಿಕ ಅವಶ್ಯಕತೆಗಳನ್ನು ಪೂರೈಸುತ್ತಾ ಅಭಿವೃದ್ಧಿಪಥದಲ್ಲಿ ಸಾಗುತ್ತಿದೆ. ವರದಿ ವರ್ಷದಲ್ಲಿ ಸಂಘದಲ್ಲಿ 6825 ಎ ತರಗತಿ ಸದಸ್ಯರಿದ್ದು 5.79 ಕೋಟಿ ರೂಪಾಯಿ ಪಾಲು ಬಂಡವಾಳ ಹೊಂದಿದೆ. ಈ ಪಾಲು ಬಂಡವಾಳವನ್ನು 6 ಕೋಟಿ ರೂ.ಗೆ ತಲುಪುವಂತೆ ಪ್ರಯತ್ನಿಸಲಾಗುವುದು. ಸಂಘದಲ್ಲಿ 29,61,41,195 ರೂ. ಠೇವಣಿ ಇದ್ದು ಮುಂದಕ್ಕೆ 32 ಕೋಟಿ ರೂ.ಠೇವಣಿ ಸಂಗ್ರಹದ ಗುರಿ ಇಟ್ಟುಕೊಳ್ಳಲಾಗಿದೆ. ಸದಸ್ಯರ ಸಾಲವು ರೂ.55.31 ಕೋಟಿ ಇದ್ದು ಮುಂದಕ್ಕೆ 60 ಕೋಟಿ ರೂ.ಸಾಲ ವಿತರಣೆಯ ಗುರಿ ಹೊಂದಿದ್ದೇವೆ. ವರದಿ ವರ್ಷದಲ್ಲಿ ಸಂಘವು 1.85 ಕೋಟಿ ರೂ. ನಿವ್ವಳ ಲಾಭಗಳಿಸಿದ್ದು 2026-27ನೇ ಸಾಲಿನಲ್ಲಿ 2.15 ಕೋಟಿ ರೂ. ನಿವ್ವಳ ಲಾಭಗಳಿಸಲು ಯೋಜನೆ ಹಾಕಿಕೊಂಡಿದ್ದೇವೆ. ಜಿಲ್ಲಾ ಕೇಂದ್ರ ಬ್ಯಾಂಕಿನ ಸಾಲಗಳ ಪೈಕಿ ಪಡಕೊಂಡ ಸಾಲಗಳನ್ನು ಕ್ಲಪ್ತ ಸಮಯಕ್ಕೆ ಮರುಪಾವತಿ ಮಾಡಿದ್ದು ವಾಯಿದೆ ದಾಟಿದ ಸಾಲಗಳು ಇರುವುದಿಲ್ಲ ಎಂದು ಅವರು ತಿಳಿಸಿದರು.

ಕಬಕ, ಕೊಡಿಪಾಡಿ, ಬನ್ನೂರು, ಪಡೂರು, ಬೆಳ್ಳಿಪಾಡಿ, ಕೋಡಿಂಬಾಡಿ, 3, ಚಿಕ್ಕಮುಳ್ಳೂರು, ಕುಳ, ಪುತ್ತೂರು ಕಸಬಾ ಗ್ರಾಮಗಳ ವ್ಯಾಪ್ತಿಯನ್ನು ಸಂಘ ಹೊಂದಿದೆ. ಬನ್ನೂರು, ಕೊಡಿಪಾಡಿ, ಪಡೂರು, ಬೆಳ್ಳಿಪಾಡಿ ಶಾಖೆಗಳಲ್ಲಿ 100 ಟನ್ ಪ್ರಮಾಣದ ದಾಸ್ತಾನು ಮಳೆಗೆಗಳು ಇವೆ. ಶಾಖೆಗಳಲ್ಲಿ ಪಡಿತರ ಸಾಮಾಗ್ರಿ, ಮೈಲುತುತ್ತು, ಸುಣ್ಣ ವಿತರಿಸಲಾಗುತ್ತಿದೆ. ಸದಸ್ಯರಿಗೆ ಕೃಷಿ ಸಾಲ, ಮಧ್ಯಮಾವಧಿ ಸಾಲ, ದೀರ್ಘಾವಧಿಸಾಲ, ಚಿನ್ನಾಭರಣ ಈಡಿನ ಸಾಲ, ಉತ್ಪತ್ತಿ ಈಡಿನ ಸಾಲ, ಇತರ ಉದ್ದೇಶ ಸಾಲ, ದೀರ್ಘಾವಧಿ ಸಾಲ, ಭಾಗ್ಯ ನಿಧಿ, ಪಿಗ್ಗಿ ಸಾಲ, ವಾಹನ ಖರೀದಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಸಂಘದ ಭದ್ರತೆಗಾಗಿ ಸಿಸಿ ಕ್ಯಾಮೆರಾ, ಸೈರನ್ ಅಳವಡಿಸಲಾಗಿದೆ. ಗ್ರಾಹಕರ ಅನುಕೂಲಕ್ಕಾಗಿ ಸೇಫ್ ಲಾಕರ್ ವ್ಯವಸ್ಥೆ ಮಾಡಲಾಗಿದೆ. ತ್ವರಿತ ಸೇವೆಗಾಗಿ ನೆನ್ಸ್. ಆರ್ ಟಿಜಿಎಸ್ ಸೌಲಭ್ಯವಿದೆ. 163 ನವೋದಯ ಸ್ವಸಹಾಯ ಗುಂಪು ಹಾಗೂ ಇತರ 17 ಗುಂಪುಗಳಿದೆ.

“ಕೇಂದ್ರ ಮತ್ತು ರಾಜ್ಯ ಸರಕಾರದ ಬಡ್ಡಿ ರಿಯಾಯಿತಿ ಸೌಲಭ್ಯ ನೀಡಲಾಗುತ್ತಿದೆ. ವರ್ಷಾಂತ್ಯಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರದ ಬಡ್ಡಿ ರಿಯಾಯಿತಿ ಮತ್ತು ಸಾಲ ಮನ್ನಾ ಮೊತ್ತ ರೂ. 1,11,25 837 ಸಂಘಕ್ಕೆ ಬರಲು ಬಾಕಿ ಇದೆ ಎಂದು ಹೇಳಿದರು.
ನಷ್ಟದಿಂದ ‘ಎ’ ತರಗತಿಗೆ
21 ವರ್ಷದ ಹಿಂದೆ ಸಂಘವು ಸುಮಾರು ನಷ್ಟದಲ್ಲಿದ್ದು ಅತಂತ್ರ ಸ್ಥಿತಿಯಲ್ಲಿತ್ತು. ಈ ಸಂದರ್ಭದಲ್ಲಿ ಸಂಘದ ಸದಸ್ಯರು ಸ್ಯರು ನೀಡಿದ ಪೂರ್ಣ ಸಹಕಾರದಿಂದ ಆಡಳಿತ ಮಂಡಳಿಯ ದಕ್ಷ, ಪ್ರಾಮಾಣಿಕ ಸೇವೆ ಮತ್ತು ಸಿಬ್ಬಂದಿಗಳ ಪರಿಶ್ರಮದಿಂದ ಎಲ್ಲಾ ನಷ್ಟವನ್ನು ಹೋಗಲಾಡಿಸಿ 2013-14ನೇ ಸಾಲಿನಲ್ಲಿ ಪ್ರಥಮವಾಗಿ ಶೇ.3 ಡಿವಿಡೆಂಡ್ ನೀಡಲಾಗಿತ್ತು. ಆಡಿಟ್ ವರ್ಗಿಕರಣದಲ್ಲಿ ಹಲವಾರು ವರ್ಷಗಳಿಂದ ಸಿ ತರಗತಿಯಲ್ಲಿದ್ದ ಸಂಘ ಕಳೆದ 8 ವರ್ಷಗಳಿಂದ ಎ ತರಗತಿ ಪಡೆಯುತ್ತಿದೆ ಎಂದರು.
ಸಂಘದ ಸದಸ್ಯ ಸುದರ್ಶನ್ ಮುರ ಮಾತನಾಡಿ, ಸಂಘವು ರೈತ ಸದಸ್ಯರ ಸಮಸ್ಯೆಗಳನ್ನು ಅರಿತು ಅವರ ತೋಟಗಳಿಗೆ ಮದ್ದು ಬಿಡಲು ಕೂಲಿಯಾಳುಗಳ ಸಹಿತ ಇನ್ನಿತರ ವ್ಯವಸ್ಥೆ ಮಾಡಿಕೊಟ್ಟಿದೆ. ಆಪದ್ಭಾಂಧವರಾದ ಸಂಘದ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಯವರ ಸೇವೆ ಶಾಘ್ಲನೀಯವಾಗಿದ್ದು ಅವರನ್ನು ರೈತರ ಪರವಾಗಿ ಅಭಿನಂದಿಸುವುದಾಗಿ ಹೇಳಿದರು. ಸದಸ್ಯರಾದ ಶಿವಣ್ಣಗೌಡ, ಜಯಾನಂದ ಮತ್ತಿತರರು ಸಲಹೆ ಸೂಚನೆ ನೀಡಿದರು.
ಶಶಿಕುಮಾರ್ ರೈ ಅವರಿಗೆ ಸನ್ಮಾನ
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ಆಡಳಿತ ಮಂಡಳಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರೂ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರು ಆಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶಶಿಕುಮಾರ್ ರೈ ಅವರು, ಬನ್ನೂರು ರೈತರ ಸೇವಾ ಸಹಕಾರಿ ಸಂಘವು ಅತ್ಯುತ್ತಮ ಸೇವೆ ನೀಡುವ ಮೂಲಕ ಜೆಲೆ ಜಿಲ್ಲೆಯಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಆಡಳಿತ ಮಂಡಳಿ, ಸಿಬ್ಬಂದಿಗಳ ಪರಿಶ್ರಮವೇ ಕಾರಣವಾಗಿದೆ. ಪ್ರತಿಯೊಬ್ಬ ರೈತರಿಗೂ ಈ ಸಹಕಾರಿ ಸಂಘವು ಉತ್ತೇಜನ ನೀಡುವ ಮೂಲಕ ಮಾದರಿ ಸಂಸ್ಥೆಯಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಸನ್ಮಾನ
ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಮಹಾಸಭೆಯಲ್ಲಿ ಸನ್ಮಾನಿಸಲಾಯಿತು. ಸದಸ್ಯ ಕೋಡಿಂಬಾಡಿ ದೇವದಾಸ ಪೂಜಾರಿಯವರ ಪುತ್ರ ದಿಗಂತ, ಶಾಂತಿನಗರ ಅಣ್ಣಿ ಪೂಜಾರಿಯವರ ಪುತ್ರ ಪವನ್, ಬೆಳ್ಳಿಪಾಡಿ ವಿಶ್ವಕುಮಾರ್ ಎಂ.ರವರ ಪುತ್ರ ಶ್ರವಣ್ ಅವರನ್ನು ಸನ್ಮಾನಿಸಲಾಯಿತು.
ಬೆಳೆವಿಮೆ ಸಮೀಕ್ಷೆಯ ರೈತರಿಗೆ ಸನ್ಮಾನ
ಬೆಳೆ ವಿಮೆ ಸಮೀಕ್ಷೆ ನಡೆಸಿದ ಬನ್ನೂರು ವಲಯದ ಪುರುಷೋತ್ತಮ ಕೆ.. ಸುಮಿತ್ರ ಬಿ., ಬೆಳ್ಳಿಪ್ಪಾಡಿಯ ಕವಿತಾ, ಚಿಕ್ಕಮುಡ್ನರುನ ಯೋಗೀಶ ಎಂ., ಯೋಗೀಶ್, ಕಬಕದ ಪೂರ್ಣಿಮಾ ಕೆ.ಪಿ., ಮನೋಹರ ಪಿ., ಕೋಡಿಂಬಾಡಿಯ ಪಿ.ವೀರಪ್ಪಗೌಡ, ಕೊಡಿಪ್ಪಾಡಿಯ ಪುಷ್ಪರಾಜ ಜಿ., ಪಡ್ನರಿನ ರೂಪಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಅಗಲಿದ ಸದಸ್ಯರಿಗೆ ಸಂತಾಪ:
ಸಂಘದ ಉಪಾಧ್ಯಕ್ಷರಾಗಿದ್ದು ಇತ್ತೀಚೆಗೆ ನಿಧನರಾದ ನಿರಂಜನ ರೈ ಮಠಂತಬೆಟ್ಟು ಹಾಗೂ ಅಗಲಿದ ಇನ್ನಿತರ ಸದಸ್ಯರಿಗೆ ಒಂದು ನಿಮಿಷ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ನಿರ್ದೇಶಕರಾದ ಎನ್. ಸುಭಾಷ್ ನಾಯಕ್, ಜಯಲಕ್ಷ್ಮಿ ಸುರೇಶ್, ಕೆ.ದೇವಾನಂದ, ಶಶಿಕಲ ಡಿ.ಶೆಟ್ಟಿ, ರಾಜು, ಸುಬ್ರಹ್ಮಣ್ಯ ಗೌಡ ಹನಿಯೂರು, ಶ್ರೀನಿವಾಸ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರ್ದೇಶಕ ಮೊಹಮ್ಮದ್ ಅಶ್ರಫ್ ಕಲ್ಲೇಗ ಸ್ವಾಗತಿಸಿ, ನಿರ್ದೇಶಕ ಪೂವಪ್ಪ ಗೌಡಡಿ. ವಂದಿಸಿದರು. ನಿರ್ದೇಶಕ ಮೋಹನ್ ಪಕ್ಕಳ ಕುಂಡಾಪು ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಧಾ ಬಿ.ರೈ ವರದಿ ವಾಚಿಸಿದರು.
ಸಿಬ್ಬಂದಿಗಳಾದ ಪುರಂದರ ನಾಯ್ಕ ಕೆ., ಮಾಲತಿ, ಈಶ್ವರ ಪೂಜಾರಿ, ಪ್ರತಿಮಾ ಎ., ಪ್ರಮೋದ್ ಕುಮಾರ್ ಪಿ., ದಿವಾಕರ ಗೌಡ, ಉದಯ ಕೆ., ಯಶವಂತ ಟಿ.ಬಿ., ಕಾರ್ತಿಕ್ ಗೌಡ ಡಿ., ದಿಲೀಪ್ ಕೆ., ಅನಿಶಾ ಕೆ.ರೈ, ರಂಜಿತ್ ಕುಮಾರ್ ಬಿ., ಭರತ್ ಎ.ಶೆಟ್ಟಿ, ಪಿಗ್ಗಿ ಸಂಗ್ರಾಹಕರಾದ ಬಾಳಪ್ಪ ಕೆ., ಉದಯ ಪ್ರಸಾದ್, ಸುಮಂತ್, ಮಹಾಬಲ ಶೆಟ್ಟಿ ಮೊದಲಾದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಅಂತರ ರಾಜ್ಯ
Nana Patekar-ಕಾರ್ಗಿಲ್ ಯುದ್ಧದ ವೇಳೆ ಸೈನಿಕನಾಗಿಯೂ ದೇಶ ಸೇವೆ ಮಾಡಿದ್ದ ನಾನಾ ಪಾಟೇಕರ್
ರಂಗಭೂಮಿ, ಮರಾಠಿ ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಹಿರಿಯ ನಟ ನಾನಾ ಪಾಟೇಕರ್ (75) ಗುರುವಾರ ಮುಂಜಾನೆ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗೋವಾದ ತಮ್ಮ ನಿವಾಸದಲ್ಲಿ ಅಸ್ವಸ್ಥರಾಗಿ ಪತ್ತೆಯಾದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರ ಪ್ರಯತ್ನ ಫಲಿಸದೆ ಬೆಳಗ್ಗೆ 5.20ರ ಸುಮಾರಿಗೆ ನಿಧನರಾದರು.
ನವದೆಹಲಿ: ರಂಗಭೂಮಿ, ಮರಾಠಿ ಹಾಗೂ ಹಿಂದಿ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಹಿರಿಯ ನಟ ನಾನಾ ಪಾಟೇಕರ್ (75) ಗುರುವಾರ ಮುಂಜಾನೆ ಗೋವಾದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗೋವಾದ ತಮ್ಮ ನಿವಾಸದಲ್ಲಿ ಅಸ್ವಸ್ಥರಾಗಿ ಪತ್ತೆಯಾದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರ ಪ್ರಯತ್ನ ಫಲಿಸದೆ ಬೆಳಗ್ಗೆ 5.20ರ ಸುಮಾರಿಗೆ ನಿಧನರಾದರು.
ನಾನಾ ಪಾಟೇಕರ್ ಕೇವಲ ಬೆಳ್ಳಿತೆರೆಯ ನಟನಾಗಿ ಮಾತ್ರ ಗುರುತಿಸಿಕೊಂಡವರಲ್ಲ. ಸರಳತೆ, ಸಾಮಾಜಿಕ ಕಳಕಳಿ ಹಾಗೂ ದೇಶಪ್ರೇಮಕ್ಕೂ ಅವರು ಹೆಸರಾಗಿದ್ದರು. ಭಾರತೀಯ ಸೇನೆಯೊಂದಿಗೆ ಅವರಿಗಿದ್ದ ನಂಟು ಕೂಡ ಅವರ ಬದುಕಿನ ಪ್ರಮುಖ ಅಧ್ಯಾಯವಾಗಿತ್ತು.
ಸೇನಾ ತರಬೇತಿ ಪಡೆದು ಟೆರಿಟೋರಿಯಲ್ ಆರ್ಮಿಗೆ ಸೇರ್ಪಡೆ
1991ರಲ್ಲಿ ತೆರೆಕಂಡ ತಮ್ಮ ಪ್ರಸಿದ್ದ ‘ಪ್ರಹಾರ್: ದಿ ಫೈನಲ್ ಅಟ್ಯಾಕ್’ ಸಿನಿಮಾದ ಕಮಾಂಡೋ ಪಾತ್ರಕ್ಕಾಗಿ ನಾನಾ ಪಾಟೇಕರ್ ಅವರು ಯಾವುದೇ ಶಾರ್ಟ್‌ಕಟ್ ಬಳಸದೆ, ಮರಾಠಾ ಲೈಟ್ ಇನ್ವೆಂಟ್ರಿ ಜೊತೆ ಮೂರು ವರ್ಷಗಳ ಕಾಲ ಕಠಿಣ ಮಿಲಿಟರಿ ತರಬೇತಿ ಪಡೆದಿದ್ದರು. ಈ ತರಬೇತಿಯ ನಂತರ ಅವರು 1980ರ ದಶಕದ ಉತ್ತರಾರ್ಧದಲ್ಲಿ ಟೆರಿಟೋರಿಯಲ್ ಆರ್ಮಿಗೆ (ಪ್ರಾದೇಶಿಕ ಸೇನೆ) ಅಧಿಕೃತವಾಗಿ ಸೇರ್ಪಡೆಗೊಂಡಿದ್ದರು.
1999ರಲ್ಲಿ ಕಾರ್ಗಿಲ್ ಯುದ್ಧ ಆರಂಭವಾದಾಗ ಗಡಿಯಲ್ಲಿ ಸೈನಿಕರೊಂದಿಗೆ ಸೇವೆ ಸಲ್ಲಿಸುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದ್ದರು. ಅನುಮತಿ ಪಡೆದ ಬಳಿಕ ತಮ್ಮ ನಟನಾ ವೃತ್ತಿಜೀವನವನ್ನು ಕೆಲಕಾಲ ಬದಿಗೊತ್ತಿ ಸೇನೆಯ ಕ್ವಿಕ್ ರಿಯಾಕ್ಷನ್ ಟೀಮ್‌ನೊಂದಿಗೆ ಗಡಿ ಪ್ರದೇಶದಲ್ಲಿ ಸೇವೆ ಸಲ್ಲಿಸಿದ್ದರು.
ಶ್ರೀನಗರ, ಡ್ರಾಸ್ ಹಾಗೂ ಲೇಹ್ ಸೇರಿದಂತೆ ಕಠಿಣ ಹವಾಮಾನವಿರುವ ಪ್ರದೇಶಗಳಲ್ಲಿ ಸೈನಿಕರೊಂದಿಗೆ ಸುಮಾರು ಎರಡು ತಿಂಗಳು ಕಳೆದಿದ್ದರು. ಈ ಅವಧಿಯಲ್ಲಿ ಸುಮಾರು 20 ಕೆ.ಜಿ. ತೂಕ ಕಳೆದುಕೊಂಡಿದ್ದಾಗಿ ಅವರು ಹಿಂದಿನ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು.
ಗಣ್ಯರಿಂದ ಸಂತಾಪ
ನಾನಾ ಪಾಟೇಕರ್ ಅವರ ಅಗಲಿಕೆಗೆ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ರಿತೇಶ್ ದೇಶ್‌ಮುಖ್ ಸೇರಿದಂತೆ ದೇಶದ ಪ್ರಮುಖ ರಾಜಕಾರಣಿಗಳು, ಚಲನಚಿತ್ರ ರಂಗದ ಗಣ್ಯರು ಹಾಗೂ ಕ್ರೀಡಾಪಟುಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ”ಎಕ್ಸ್”ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ನಾನಾ ಪಾಟೇಕರ್‌ಜಿ ಅವರ ಅಭಿನಯದಲ್ಲಿನ ವಿಶಿಷ್ಟತೆ, ತೀವ್ರತೆ ಹಾಗೂ ಪ್ರಭಾವಶಾಲಿ ವ್ಯಕ್ತಿತ್ವ ಕೆಲವೇ ಕೆಲವು ಕಲಾವಿದರಲ್ಲಿ ಮಾತ್ರ ಕಾಣಸಿಗುತ್ತದೆ. ತಮ್ಮ ಪಾತ್ರಗಳ ಮೂಲಕ ಜ್ವಾಲಾಮುಖಿಯಂತೆ ಸ್ಫೋಟಿಸುವ ಪ್ರತಿಭೆ ಹಾಗೂ ಸೃಜನಶೀಲತೆಯನ್ನು ಅವರು ಪ್ರದರ್ಶಿಸುತ್ತಿದ್ದರು. ಬೆಳ್ಳಿತೆರೆಯ ಮೇಲೆ ಅವರು ಜೀವ ತುಂಬಿದ ಪಾತ್ರಗಳು ಹಲವು ತಲೆಮಾರುಗಳ ನೆನಪಿನಲ್ಲಿ ಶಾಶ್ವತವಾಗಿ ಉಳಿಯಲಿವೆ. ನೇರ ಹಾಗೂ ಸ್ಪಷ್ಟ ಅಭಿಪ್ರಾಯಗಳಿಗೆ ಹೆಸರಾಗಿದ್ದ ನಾನಾ ಪಾಟೇಕರ್ ಅವರದು ಅದೇ ವಿಶಿಷ್ಟ ಛಾಪು. ತಾವು ಕಂಡ ಸಂಗತಿಗಳ ಕುರಿತು ಯಾವುದೇ ಮುಚ್ಚುಮರೆಯಿಲ್ಲದೆ ಅತ್ಯಂತ ಸ್ಪಷ್ಟವಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು’ ಎಂದು ಹೇಳಿದ್ದಾರೆ.
ಅವರ ಅಗಲಿಕೆಗೆ ಸಂತಾಪ ಸೂಚಿಸಿರುವ ನಟ ಅಕ್ಷಯ್ ಕುಮಾರ್, “ಅವರ ಗಂಭೀರ ಧ್ವನಿ, ನಟನೆಯಲ್ಲಿನ ತೀವ್ರತೆ ಹಾಗೂ ಪ್ರಾಮಾಣಿಕತೆ ಅವರನ್ನು ಅನನ್ಯ ವ್ಯಕ್ತಿಯನ್ನಾಗಿ ಮಾಡಿತ್ತು. ವೆಲ್ಕಮ್ ಹಾಗೂ ಇತ್ತೀಚಿನ ಹೌಸ್‌ಫುಲ್ 5 ಚಿತ್ರಗಳಲ್ಲಿ ಅವರೊಂದಿಗೆ ಕೆಲಸ ಮಾಡಿದ ನೆನಪುಗಳು ಎಂದಿಗೂ ನನ್ನೊಂದಿಗಿರುತ್ತವೆ” ಎಂದಿದ್ದಾರೆ.
ನಟ ರಿತೇಶ್ ದೇಶ್‌ಮುಖ್ ಪ್ರತಿಕ್ರಿಯಿಸಿ, “ನಾನಾ ಪಾಟೇಕರ್ ಅವರು ಬೆಳ್ಳಿಪರದೆಯ ಮೇಲಷ್ಟೇ ಅಲ್ಲದೆ, ನಿಜ ಜೀವನದಲ್ಲೂ ಒಬ್ಬ ರಿಯಲ್ ಹೀರೋ ಆಗಿದ್ದರು. ಅವರು ಕೈಗೊಂಡ ಸಾಮಾಜಿಕ ಕಾರ್ಯಗಳು ಅಪಾರವಾದವು. ನಾಯಕನಾಗಿ, ಖಳನಾಯಕನಾಗಿ ಹಾಗೂ ಹಾಸ್ಯನಟನಾಗಿ ಎಲ್ಲಾ ರೀತಿಯ ಪಾತ್ರಗಳಿಗೂ ಜೀವ ತುಂಬುತ್ತಿದ್ದ ಅವರ ಅಗಲಿಕೆ ಚಿತ್ರರಂಗಕ್ಕೆ ಬಹುದೊಡ್ಡ ನಷ್ಟ” ಎಂದು ಸ್ಮರಿಸಿದ್ದಾರೆ.
ಬಿಗ್ ನ್ಯೂಸ್
Reservation-ದ.ಕ. ಜಿ.ಪಂ., ತಾ.ಪಂ. ಮೀಸಲಾತಿ ಪ್ರಕಟ: ಮಹಿಳೆಯರಿಗೆ ತಾ.ಪಂ. 65, ಜಿ.ಪಂ. 18 ಸ್ಥಾನ ಮೀಸಲು
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ವರ್ಗವಾರು ಮೀಸಲಾತಿ ವಿವರ ಪ್ರಕಟಗೊಂಡಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರ ಆರಂಭವಾಗಿದೆ.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ವರ್ಗವಾರು ಮೀಸಲಾತಿ ವಿವರ ಪ್ರಕಟಗೊಂಡಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರ ಆರಂಭವಾಗಿದೆ.
ಜಿಲ್ಲೆಯ ವಿವಿಧ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳನ್ನು ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗದಡಿ ಮೀಸಲಿಡಲಾಗಿದೆ.
ತಾಲೂಕು ಪಂಚಾಯಿತಿ:
ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ಪಂಚಾಯಿತಿಗಳಲ್ಲಿ ಒಟ್ಟು 126 ಸ್ಥಾನಗಳಿದ್ದು, 65 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಜಾತಿಗೆ 13 ಸ್ಥಾನಗಳಿದ್ದು, ಈ ಪೈಕಿ 9 ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಪಂಗಡಕ್ಕೆ 10 ಸ್ಥಾನಗಳಿದ್ದು, 9 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ಹಿಂದುಳಿದ ವರ್ಗ ‘ಎ’ಗೆ 29 ಸ್ಥಾನಗಳು ಮೀಸಲಾಗಿದ್ದು, 16 ಸ್ಥಾನಗಳು ಮಹಿಳೆಯರಿಗೆ ಮೀಸಲು. ಹಿಂದುಳಿದ ವರ್ಗ ‘ಬಿ’ಗೆ 7 ಸ್ಥಾನಗಳಿದ್ದು, 4 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಸಾಮಾನ್ಯ ವರ್ಗದ 67 ಸ್ಥಾನಗಳ ಪೈಕಿ 27 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ತಾಲೂಕುವಾರು ಗಮನಿಸಿದರೆ ಮೂಲ್ಕಿಯಲ್ಲಿ 7, ಮೂಡುಬಿದಿರೆಯಲ್ಲಿ 9, ಸುಳ್ಯದಲ್ಲಿ 11, ಉಳ್ಳಾಲದಲ್ಲಿ 12, ಪುತ್ತೂರಿನಲ್ಲಿ 12, ಮಂಗಳೂರಿನಲ್ಲಿ 14, ಬೆಳ್ತಂಗಡಿಯಲ್ಲಿ 14, ಕಡಬದಲ್ಲಿ 22 ಹಾಗೂ ಬಂಟ್ವಾಳದಲ್ಲಿ 25 ತಾಲೂಕು ಪಂಚಾಯಿತಿ ಕ್ಷೇತ್ರಗಳಿವೆ. ಬಂಟ್ವಾಳದಲ್ಲಿ ಅತಿ ಹೆಚ್ಚು 25 ಹಾಗೂ ಮೂಲ್ಕಿಯಲ್ಲಿ ಅತಿ ಕಡಿಮೆ 7 ಕ್ಷೇತ್ರಗಳಿವೆ.
ಜಿಲ್ಲಾ ಪಂಚಾಯಿತಿ:
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯಲ್ಲಿ ಒಟ್ಟು 35 ಸ್ಥಾನಗಳಿದ್ದು, 18 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿದೆ. ಪರಿಶಿಷ್ಟ ಜಾತಿಗೆ 3 ಸ್ಥಾನಗಳಿದ್ದು, 2 ಮಹಿಳೆಯರಿಗೆ ಮೀಸಲು. ಪರಿಶಿಷ್ಟ ಪಂಗಡಕ್ಕೆ 2 ಸ್ಥಾನಗಳಿದ್ದು, 1 ಸ್ಥಾನ ಮಹಿಳೆಯರಿಗೆ ಮೀಸಲಾಗಿದೆ.
ಹಿಂದುಳಿದ ವರ್ಗ ‘ಎ’ಗೆ 10 ಸ್ಥಾನಗಳಿದ್ದು, 5 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. ಹಿಂದುಳಿದ ವರ್ಗ ‘ಬಿ’ಗೆ 2 ಸ್ಥಾನಗಳಿದ್ದು, 1 ಸ್ಥಾನ ಮಹಿಳೆಯರಿಗೆ ಮೀಸಲು. ಸಾಮಾನ್ಯ ವರ್ಗದ 18 ಸ್ಥಾನಗಳ ಪೈಕಿ 9 ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ.
ಮೀಸಲಾತಿ ವಿವರ ಪ್ರಕಟಗೊಂಡಿರುವ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳಲ್ಲಿ ಟಿಕೆಟ್ ಆಕಾಂಕ್ಷಿಗಳ ಲೆಕ್ಕಾಚಾರ ಆರಂಭವಾಗಿದೆ. ಯಾವ ಕ್ಷೇತ್ರದಲ್ಲಿ ಯಾವ ವರ್ಗಕ್ಕೆ ಮೀಸಲಾತಿ ದೊರೆತಿದೆ ಎಂಬುದನ್ನು ಆಧರಿಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಳ್ಳುವ ನಿರೀಕ್ಷೆಯಿದೆ.
ಅಂತರ ರಾಜ್ಯ
CEC Jnanesh Kumar-ವಿಪಕ್ಷಗಳ ಪ್ರತಿಭಟನೆ ತೀವ್ರ: ಸಿಇಸಿ ಜ್ಞಾನೇಶ್ ಕುಮಾರ್ ನಿವಾಸಕ್ಕೆ ತೀವ್ರ ಭದ್ರತೆ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಗೆ ಸಂಬಂಧಿಸಿದಂತೆ ವಿಪಕ್ಷಗಳ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ನಿವಾಸದ ಹೊರಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಭದ್ರತೆ ಹೆಚ್ಚಿಸಲಾಗಿದೆ.
ಹೊಸದಿಲ್ಲಿ: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR)ಗೆ ಸಂಬಂಧಿಸಿದಂತೆ ವಿಪಕ್ಷಗಳ ಪ್ರತಿಭಟನೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ನಿವಾಸದ ಹೊರಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಭದ್ರತೆ ಹೆಚ್ಚಿಸಲಾಗಿದೆ.
ಜ್ಞಾನೇಶ್ ಕುಮಾರ್ ಅವರಿಗೆ ಈಗಾಗಲೇ Z-ಪ್ಲಸ್ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಇತ್ತೀಚಿನ ಗುಪ್ತಚರ ಮಾಹಿತಿ ಹಾಗೂ ದಿಲ್ಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಗಮನದಲ್ಲಿಟ್ಟುಕೊಂಡು ಅವರ ನಿವಾಸದ ಸುತ್ತಮುತ್ತ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಿಲ್ಲಿಯಲ್ಲಿ ವಿವಿಧ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ಭದ್ರತಾ ಏಜೆನ್ಸಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ವಿಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ. ಈ ಹಿನ್ನೆಲೆಯಲ್ಲಿ ಸಿಇಸಿ ಜ್ಞಾನೇಶ್ ಕುಮಾರ್ ಅವರ ವಿರುದ್ಧ ಪ್ರತಿಭಟನೆಗಳು ದೇಶದ ವಿವಿಧೆಡೆ ತೀವ್ರಗೊಳ್ಳುತ್ತಿರುವ ನಡುವೆಯೇ ಅವರ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.
-
Uncategorized13 hours ago
Naana Paatekar No More : ವ್ಯವಸ್ಥೆಯ ವಿರುದ್ಧದ ಧ್ವನಿಗೆ ರೂಪ ನೀಡಿದ, ತನ್ನ ಡೈಲಾಗ್ ನಿಂದಲೇ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದ ಅಭಿಜಾತ ಕಲಾವಿದ ನಾನಾಪಾಟೇಕರ್ ಇನ್ನಿಲ್ಲ
-
ಮಂಗಳೂರು10 hours agoMangalore-ರಿಕ್ಷಾದಲ್ಲಿ ಬಿಟ್ಟುಹೋದ 48 ಗ್ರಾಂ ಚಿನ್ನದ ನೆಕ್ಲೇಸ್ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಚಾಲಕ
-
Uncategorized11 hours agoAshok Rai-ಬದ್ಯಾರ್ನಲ್ಲಿ 50 ವರ್ಷದ ರಸ್ತೆ ವಿವಾದಕ್ಕೆ ತೆರೆ ಎಳೆದ ಶಾಸಕ ಅಶೋಕ್ ರೈ
-
ಅಪರಾಧ12 hours agoUppinangadi-ಉಪ್ಪಿನಂಗಡಿ: ತೋಟದ ಕೆಲಸಕ್ಕೆ ಬರುತ್ತೇನೆಂದು ಹಣ ಪಡೆದು ನಾಪತ್ತೆ
-
ನಿಧನ ವಾರ್ತೆ11 hours agoBeltangadi-ಬೆಳ್ತಂಗಡಿ: ಅಡಿಕೆ ಕೊಯ್ಯುವ ವೇಳೆ ವಿದ್ಯುತ್ ತಂತಿಗೆ ದೋಟಿ ತಾಗಿ ವ್ಯಕ್ತಿ ಸಾವು
-
ಬಿಗ್ ನ್ಯೂಸ್7 hours agoSting Operation | ಸ್ಟಿಂಗ್ ಆಪರೇಷನ್ ಚರ್ಚೆ: ಪುತ್ತೂರಿಗೂ ವ್ಯಾಪಿಸಿದೆಯೇ ರಾಜಕೀಯದ ‘ಸ್ಟಿಂಗ್’ ಸದ್ದು..?
-
ನಿಧನ ವಾರ್ತೆ11 hours agoAccident-ಮೂಡುಬಿದಿರೆ: ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದು ಕಾಲೇಜು ವಿದ್ಯಾರ್ಥಿ ಸಾವು
-
ಬಿಗ್ ನ್ಯೂಸ್12 hours agoHalf helmet-ಕರ್ನಾಟಕದಲ್ಲಿ ಹಾಫ್ ಹೆಲ್ಮೆಟ್ ಸಂಪೂರ್ಣ ನಿಷೇಧ


















