ಕ್ರೈಂ
Bantwal-ಬಂಟ್ವಾಳ : ಚಿನ್ನಕ್ಕಾಗಿ 80 ವರ್ಷದ ವೃದ್ಧೆಯ ಉಸಿರುಗಟ್ಟಿಸಿ ಕೊಲೆ..! ಆರೈಕೆದಾಕೆಯ ಭಯಾನಕ ಸಂಚು – ಮೂವರಿಗೆ ಜೀವಾವಧಿ
ಮಂಗಳೂರಿನ ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಪಾಂಡೀಲಿ ಎಂಬ ಪ್ರಶಾಂತ ಹಳ್ಳಿ. ಅಲ್ಲಿನ ಒಂದು ಹಳೆಯ ಮನೆಯಲ್ಲಿ 80 ವರ್ಷದ ಬೆನೆಡಿಕ್ಟ್ ಕಾರ್ಲೋ ತಮ್ಮ ಅನಾರೋಗ್ಯ ಪೀಡಿತ ಪತಿಯ ಜೊತೆ ನೆಮ್ಮದಿಯ ದಿನಗಳನ್ನು ಕಳೆಯುತ್ತಿದ್ದರು. ಆದರೆ, ಅದೇ ಮನೆಯಲ್ಲಿ ಸುಳಿದಾಡುತ್ತಿದ್ದ ವ್ಯಕ್ತಿಯೊಬ್ಬಳು ಕೇವಲ ಚಿನ್ನಾಭರಣಕ್ಕಾಗಿ ರಾಕ್ಷಸಿಯಾಗಿ ಬದಲಾಗುತ್ತಾಳೆ ಎಂಬ ಸಣ್ಣ ಸುಳಿಹೂ ಆ ಮುಗ್ಧ ವೃದ್ಧೆಗೆ ಸಿಕ್ಕಿರಲಿಲ್ಲ! 2021ರಲ್ಲಿ ಕರಾವಳಿಯನ್ನೇ ಬೆಚ್ಚಿಬೀಳಿಸಿದ್ದ ಈ ಭೀಕರ ಕೊಲೆ ಪ್ರಕರಣದ ಹಿಂದೆ ಅಡಗಿದ್ದಭೀಭತ್ಸತೆ ತನಿಖಾ ಹಾದಿ ಮತ್ತು ಅಂತಿಮವಾಗಿ ಸಿಕ್ಕ ನ್ಯಾಯದ ಪೂರ್ಣ ವಿವರ ಇಲ್ಲಿದೆ.
ಆರೈಕೆಯ ಮುಖವಾಡದ ಹಿಂದೆ ಅಡಗಿದ್ದ ಹಸಿದ ಹದ್ದು!
ಅಸಹಾಯಕ ಪತಿಯ ಉಪಚರಿಸಲು ಹಾಗೂ ತಮಗೊಂದು ಆಸರೆಯಾಗಲಿ ಎಂದು ಬೆನೆಡಿಕ್ಟ್ ಕಾರ್ಲೋ ಅವರು ಅಮ್ಮಾಡಿ ಗ್ರಾಮದ ವಿಲ್ಮಾ ಪ್ರಶ್ಚಿತಾ ಬರೆಟ್ಟೊ (30) ಎಂಬಾಕೆಯನ್ನು ಮನೆಗೆ ಆರೈಕೆದಾಕೆಯಾಗಿ ಸೇರಿಸಿಕೊಂಡಿದ್ದರು. ವೃದ್ಧೆಯ ಕತ್ತಿನಲ್ಲಿದ್ದ, ಕೈಯಲ್ಲಿದ್ದ ಚಿನ್ನದ ಆಭರಣಗಳನ್ನು ಕಂಡ ವಿಲ್ಮಾಳ ಕಣ್ಣಲ್ಲಿ ದುರಾಸೆಯ ಕಿಡಿ ಹೊತ್ತಿಕೊಂಡಿತ್ತು. ಕಷ್ಟಪಟ್ಟು ಕೆಲಸ ಮಾಡಿ ಸಂಪಾದಿಸುವುದಕ್ಕಿಂತ, ಜೀವ ತೆಗೆದಾದರೂ ಸರಿ ಒಂದೇ ರಾತ್ರಿಯಲ್ಲಿ ಶ್ರೀಮಂತಳಾಗಬೇಕೆಂಬ ಕ್ರೂರ ಆಸೆ ಆಕೆಯ ತಲೆಯಲ್ಲಿ ಹುಟ್ಟಿತ್ತು.
ಚಿನ್ನ ದೋಚಲು ಆಕೆ ಹೆಣೆದ ಪ್ಲಾನ್ ಸಾಮಾನ್ಯವಾದದ್ದಲ್ಲ;
ಸಂಚಿನ ಭಾಗವಾಗಿ ವಿಲ್ಮಾ ತನ್ನ ಸ್ನೇಹಿತ ನರಿಕೊಂಬು ಗ್ರಾಮದ ಸತೀಶ್ (33) ಎಂಬಾತನನ್ನು ಸಂಪರ್ಕಿಸಿದಳು. ಸತೀಶ್ ಕೊಟ್ಟ ಮಾರಕ ವಿಷವನ್ನು ವೃದ್ಧೆಗೆ ಉಣಿಸುವ ಆಹಾರದಲ್ಲಿ ಬೆರೆಸಿ ಕೊಟ್ಟಳು. ಆಹಾರ ತಿಂದ ವೃದ್ಧೆ ಪ್ರಾಣ ಬಿಡುತ್ತಾಳೆ ಎಂದು ವಿಲ್ಮಾ ಕಾಯುತ್ತಿದ್ದಳು. ಆದರೆ, ತಡರಾತ್ರಿಯಾದರೂ ವೃದ್ಧೆಯ ಉಸಿರಾಟ ನಿಂತಿರಲಿಲ್ಲ!
ಪ್ಲಾನ್ ಕೈಕೊಡುತ್ತಿದ್ದಂತೆ ಗಾಬರಿಯಾದ ವಿಲ್ಮಾ ತಕ್ಷಣ ಮತ್ತೆ ಸತೀಶ್‌ಗೆ ಕರೆ ಮಾಡಿದಳು. ಆತ ಸ್ಥಳಕ್ಕೆ ತಕ್ಷಣವೇ ತನ್ನ ಮತ್ತೊಬ್ಬ ಸ್ನೇಹಿತ ಚರಣ್ ಕುಮಾರ್ (34) ಎಂಬಾತನನ್ನು ಕಳುಹಿಸಿಕೊಟ್ಟ. ಇಬ್ಬರೂ ಸೇರಿ ಮಲಗಿದ್ದ ಸ್ಥಿತಿಯಲ್ಲೇ ಇದ್ದ 80 ವರ್ಷದ ಬೆನೆಡಿಕ್ಟ್ ಅವರ ಮುಖಕ್ಕೆ ತಲೆದಿಂಬು ಮತ್ತು ‘ಬೈರಾಸ್’ (ಸಣ್ಣ ಟವೆಲ್) ಬಳಸಿ ಬಲವಾಗಿ ಒತ್ತಿ ಹಿಡಿದರು. ಅಸಹಾಯಕ ವೃದ್ಧೆ ಜೀವಕ್ಕಾಗಿ ಒದ್ದಾಡಿದರೂ, ಈ ರಾಕ್ಷಸರಿಗೆ ಕರುಣೆ ಬರಲಿಲ್ಲ. ಉಸಿರುಗಟ್ಟಿ ವೃದ್ಧೆ ಅಂತಿಮ ಉಸಿರೆಳೆದ ತಕ್ಷಣವೇ, ಆಕೆಯ ಮೈಮೇಲಿದ್ದ ಸುಮಾರು 2.75 ಲಕ್ಷ ರೂ. ಮೌಲ್ಯದ ಆಭರಣಗಳನ್ನು ದೋಚಿ ಅಲ್ಲಿಂದ ಪರಾರಿಯಾದರು!
ಅಸ್ವಾಭಾವಿಕ ಕಥೆಯಿಂದ ಹತ್ಯೆಯ ರಹಸ್ಯದವರೆಗೆ: ಪತ್ತೆಯಾಗಿದ್ದು ಹೇಗೆ?
ಮರುದಿನ ಸಂಜೆ ನೆರೆಮನೆಯವರು ಮಾತನಾಡಿಸಲು ಬಂದಾಗ ಬೆನೆಡಿಕ್ಟ್ ಶವವಾಗಿ ಬಿದ್ದಿರುವುದು ಬೆಳಕಿಗೆ ಬಂದಿತ್ತು. ವಯಸ್ಸಾದವರಾದ್ದರಿಂದ ಸಹಜ ಸಾವಿರಬಹುದು ಅಥವಾ ಅಸ್ವಾಭಾವಿಕ ಸಾವಿರಬಹುದು ಎಂದು ಆರಂಭದಲ್ಲಿ ಭಾವಿಸಲಾಗಿತ್ತು.
ಆದರೆ, ತನಿಖೆಗೆ ಇಳಿದ ಪೊಲೀಸರ ಕಣ್ಣಿಗೆ ಬಿದ್ದಿದ್ದು ಎರಡೆರಡು ಪ್ರಮುಖ ಸುಳಿವುಗಳು:
ಬೆನೆಡಿಕ್ಟ್ ಅವರ ಮೃತದೇಹದ ಮೇಲಿದ್ದ ಅನುಮಾನಾಸ್ಪದ ಗಾಯದ ಗುರುತುಗಳು.
ಘಟನೆ ನಡೆದ ಕ್ಷಣದಿಂದಲೇ ಆರೈಕೆದಾಕೆ ವಿಲ್ಮಾ ಫೋನ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದು!
ಸಂಶಯಗೊಂಡ ಪೊಲೀಸರು ಮೃತದೇಹವನ್ನು ತಕ್ಷಣವೇ ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ವೈದ್ಯಕೀಯ ವರದಿಯಲ್ಲಿ ಬಂದ ಸತ್ಯ ಪೊಲೀಸ್ ಪಡೆಯನ್ನೇ ಬೆಚ್ಚಿಬೀಳಿಸಿತ್ತು—ವೃದ್ಧೆಯ ದೇಹದಲ್ಲಿ ವಿಷದ ಅಂಶ ಪತ್ತೆಯಾಗಿತ್ತು ಮಾತ್ರವಲ್ಲದೆ, ಆಕೆಯ ಸಾವು ಉಸಿರುಗಟ್ಟಿಸುವಿಕೆಯಿಂದಲೇ ಸಂಭವಿಸಿದೆ ಎಂದು ವರದಿ ಸ್ಪಷ್ಟಪಡಿಸಿತು! ಅಲ್ಲಿಂದ ಸಾಗಿದ ತನಿಖಾ ತಂಡ, ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ನಾಪತ್ತೆಯಾಗಿದ್ದ ವಿಲ್ಮಾ, ಸತೀಶ್ ಮತ್ತು ಚರಣ್ ಕುಮಾರ್‌ಗೆ ಕೋಳ ತೊಡಿಸಿತು.
ಅಪರಾಧಿಗಳಿಗೆ ಜೀವಾವಧಿ!
ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಕಾವೇರಿತ್ತು. ನ್ಯಾಯಾಧೀಶರಾದ ಜಗದೀಶ ವಿ.ಎನ್ ಅವರ ಮುಂದೆ ಸರಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ ನಾಯಕ ಅವರು ಬಲವಾದ ಸಾಕ್ಷ್ಯಾಧಾರಗಳನ್ನು ಮಂಡಿಸಿದರು. ಒಟ್ಟು 32 ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಲಯಕ್ಕೆ, ಕೊಲೆಗಾರರು ಮಾಡಿದ ಕ್ರೂರ ಕೃತ್ಯ ಎಳ್ಳಷ್ಟೂ ಅನುಮಾನವಿಲ್ಲದಂತೆ ಸಾಬೀತಾಯಿತು.
ನ್ಯಾಯಾಲಯ ನೀಡಿದ ಕಠಿಣ ತೀರ್ಪು:
- ಮೂವರೂ ಅಪರಾಧಿಗಳಿಗೆ (ವಿಲ್ಮಾ, ಸತೀಶ್, ಚರಣ್) ಜೀವಾವಧಿ ಜೈಲು ಶಿಕ್ಷೆ.
- ಪ್ರತಿಯೊಬ್ಬರಿಗೂ ತಲಾ 5,000 ರೂ. ದಂಡ.
- ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಕಾರಣಕ್ಕಾಗಿ ಹೆಚ್ಚುವರಿ ಶಿಕ್ಷೆ ಮತ್ತು ದಂಡ.
- ದಂಡದ ಮೊತ್ತದಲ್ಲಿ 25,000 ರೂ.ಗಳನ್ನು ತಾಯಿಯನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈತೊಳೆಯುತ್ತಿರುವ ಮೃತ ವೃದ್ಧೆಯ ಪುತ್ರನಿಗೆ ಪರಿಹಾರವಾಗಿ ನೀಡಲು ಆದೇಶ!
ಕ್ರೈಂ
Murder-7 ಮಂದಿಯ ಹತ್ಯೆ ಪ್ರಕರಣ: ಶವದ ಜೊತೆ ಖಾರದ ಪುಡಿ, ಒಣಮೆಣಸಿನಕಾಯಿ ತುಂಬಿಸುತ್ತಿದ್ದ ಹಂತಕ..!
ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಮೃತದೇಹಗಳನ್ನು ವಿಲೇವಾರಿ ಮಾಡುವುದಕ್ಕೂ ಮುನ್ನ ಆರೋಪಿ ಇಂದುಶೇಖರ್ ಅನುಸರಿಸಿದ್ದ ಆಘಾತಕಾರಿ ತಂತ್ರಗಳು ಬೆಳಕಿಗೆ ಬಂದಿವೆ.
ಬೆಂಗಳೂರು: ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಮೃತದೇಹಗಳನ್ನು ವಿಲೇವಾರಿ ಮಾಡುವುದಕ್ಕೂ ಮುನ್ನ ಆರೋಪಿ ಇಂದುಶೇಖರ್ ಅನುಸರಿಸಿದ್ದ ಆಘಾತಕಾರಿ ತಂತ್ರಗಳು ಬೆಳಕಿಗೆ ಬಂದಿವೆ.
ಏಳು ಮಂದಿಯನ್ನು ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಬಳಿಕ ಮೃತದೇಹಗಳ ಕೈ-ಕಾಲುಗಳನ್ನು ಹಗ್ಗದಿಂದ ಕಟ್ಟಿದ್ದ ಆರೋಪಿ, ಸೆಲೋ ಟೇಪ್ ಸುತ್ತಿ ಗೋಣಿ ಚೀಲ ಹಾಗೂ ಬೆಡ್‌ಶೀಟ್‌ಗಳಲ್ಲಿ ಪ್ಯಾಕ್ ಮಾಡಿದ್ದ ಎನ್ನಲಾಗಿದೆ. ಈ ವೇಳೆ ಮೃತದೇಹಗಳ ಮೇಲೆ ಖಾರದ ಪುಡಿ ಸಿಂಪಡಿಸಿ, ಒಣಮೆಣಸಿನಕಾಯಿಗಳನ್ನೂ ಹಾಕಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶಿರಾಡಿಘಾಟ್‌ನಲ್ಲಿ ಪತ್ತೆಯಾದ ನಳಿನಿ ಮತ್ತು ಶಂಕರ್ ಅವರ ಮೃತದೇಹಗಳ ಪರಿಶೀಲನೆ ವೇಳೆ ಒಣಮೆಣಸಿನಕಾಯಿ ಹಾಗೂ ಖಾರದ ಪುಡಿ ಪತ್ತೆಯಾಗಿದೆ. ಪ್ರಾಣಿ, ಪಕ್ಷಿಗಳು ಮೃತದೇಹಗಳನ್ನು ಕಿತ್ತು ತಿನ್ನದಂತೆ ತಡೆಯಲು ಹಾಗೂ ಪೊಲೀಸ್ ಶ್ವಾನಗಳಿಗೆ ಮೃತದೇಹಗಳ ಸುಳಿವು ಸಿಗದಂತೆ ಮಾಡಲು ಆರೋಪಿ ಈ ತಂತ್ರ ಅನುಸರಿಸಿದ್ದ ಎನ್ನಲಾಗಿದೆ. ಇದರಿಂದ ಪೊಲೀಸರಿಗೆ ತನ್ನನ್ನು ಪತ್ತೆಹಚ್ಚಲು ಕಷ್ಟವಾಗಬಹುದು ಎಂದು ಆತ ಭಾವಿಸಿದ್ದ ಎಂದು ಮೂಲಗಳು ತಿಳಿಸಿವೆ.
ಮಗಳಿಗೆ 10 ದಿನಗಳ ಪೊಲೀಸ್ ವಶ
ಸರಣಿ ಹತ್ಯೆ ಪ್ರಕರಣದಲ್ಲಿ ತಂದೆಗೆ ಸಹಕರಿಸಿದ ಆರೋಪ ಎದುರಿಸುತ್ತಿರುವ ಮಗಳನ್ನು ಬಾಲ ನ್ಯಾಯಮಂಡಳಿಗೆ ಹಾಜರುಪಡಿಸಿದ ಪೊಲೀಸರು, 10 ದಿನಗಳ ವಶಕ್ಕೆ ಪಡೆದು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ ಪೊಲೀಸ್ ವಶದಲ್ಲಿರುವ ಇಂದುಶೇಖರ್‌ನನ್ನು ತನಿಖಾಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪತ್ನಿಯ ಕಿರುಕುಳದ ಆರೋಪದ ಜೊತೆಗೆ ಆಸ್ತಿ ವಿಚಾರಕ್ಕಾಗಿ ಹತ್ಯೆ ನಡೆಸಿರುವ ಸಾಧ್ಯತೆಯ ಆಯಾಮದಲ್ಲಿಯೂ ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.
ಮನೆಗೆ ಲುಮಿನಾಲ್ ಪರೀಕ್ಷೆ
ಹತ್ಯೆಯಾದವರ ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಮತ್ತೊಂದೆಡೆ, ಆರೋಪಿಯ ಮನೆಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಹಾಗೂ ಸುಕೋ ತಂಡಗಳು ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸಿವೆ.
ಆರೋಪಿ ರುಬ್ಬುವ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ ಬಳಿಕ ಮನೆಯ ಹಾಲ್, ಸ್ನಾನಗೃಹ ಹಾಗೂ ರುಬ್ಬುವ ಕಲ್ಲಿನ ಮೇಲಿದ್ದ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದ ಎನ್ನಲಾಗಿದೆ. ಹೀಗಾಗಿ ಕಣ್ಣಿಗೆ ಕಾಣದ ರಕ್ತದ ಗುರುತುಗಳನ್ನು ಪತ್ತೆಹಚ್ಚಲು ತಜ್ಞರು ಮನೆಯಲ್ಲಿ ಲುಮಿನಾಲ್ ಪರೀಕ್ಷೆ ನಡೆಸಿದ್ದಾರೆ.
ಏನಿದು ಲುಮಿನಾಲ್ ಪರೀಕ್ಷೆ?
ಲುಮಿನಾಲ್ ಪರೀಕ್ಷೆಯು ಕಣ್ಣಿಗೆ ಕಾಣದ ರಕ್ತದ ಕಲೆಗಳನ್ನು ಪತ್ತೆಹಚ್ಚಲು ಬಳಸುವ ವೈಜ್ಞಾನಿಕ ವಿಧಾನವಾಗಿದೆ. ರಕ್ತವಿರುವ ಸ್ಥಳವನ್ನು ಸ್ವಚ್ಛಗೊಳಿಸಿದರೂ ರಕ್ತದಲ್ಲಿರುವ ಹಿಮೋಗ್ಲೋಬಿನ್‌ನ ಅಂಶಗಳು ಉಳಿದಿರಬಹುದು. ಅಂತಹ ಸ್ಥಳಗಳಿಗೆ ನಿರ್ದಿಷ್ಟ ರಾಸಾಯನಿಕ ದ್ರಾವಣವನ್ನು ಸಿಂಪಡಿಸಿದಾಗ ರಾಸಾಯನಿಕ ಪ್ರತಿಕ್ರಿಯೆಯಿಂದ ಬೆಳಕು ಕಾಣಿಸಿಕೊಳ್ಳುತ್ತದೆ. ಈ ಮೂಲಕ ಸ್ವಚ್ಛಗೊಳಿಸಲಾದ ಸ್ಥಳಗಳಲ್ಲಿಯೂ ರಕ್ತದ ಗುರುತುಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ.
ಲುಮಿನಾಲ್ ಪರೀಕ್ಷೆ ವೇಳೆ ಸಂಗ್ರಹಿಸಿದ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರೈಂ
Murder-ಬೆಂಗಳೂರು: ಕುಟುಂಬದವರ ಎದುರೇ ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ
ರಾಜಧಾನಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಹಾಡಹಗಲೇ ಕುಟುಂಬದವರ ಎದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ. ಹತ್ಯೆಯಾದವರನ್ನು ಚರಣ್ ಗೌಡ (39) ಎಂದು ಗುರುತಿಸಲಾಗಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಹಾಡಹಗಲೇ ಕುಟುಂಬದವರ ಎದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.
ಹತ್ಯೆಯಾದವರನ್ನು ಚರಣ್ ಗೌಡ (39) ಎಂದು ಗುರುತಿಸಲಾಗಿದೆ.
ಶುಕ್ರವಾರ ಬೆಳಗ್ಗೆ ಸುಮಾರು 10.30ರ ವೇಳೆಗೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಮೀಪ ಚರಣ್ ಗೌಡ ಅವರು ಕುಟುಂಬದವರೊಂದಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಬಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಅವರ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ದುಷ್ಕರ್ಮಿಗಳು ಕುಟುಂಬದವರ ಎದುರೇ ಚರಣ್ ಗೌಡ ಅವರ ಮೇಲೆ ಮನಬಂದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ತೀವ್ರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಆಯುಧಗಳ ಸಮೇತ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಹಳೆಯ ದ್ವೇಷದ ಶಂಕೆ
ಚರಣ್ ಗೌಡ ಅವರ ಹತ್ಯೆಗೆ ಹಳೆಯ ದ್ವೇಷವೇ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಂಬಂಧಿಸಿದಂತೆ ಅವರಿಗೆ ಕೆಲವರೊಂದಿಗೆ ವೈಷಮ್ಯವಿತ್ತು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಘಟನಾ ಸ್ಥಳಕ್ಕೆ ಯಲಹಂಕ ನ್ಯೂಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
ಕ್ರೈಂ
Seven murder case-ಏಳು ಕೊಲೆ ಪ್ರಕರಣಕ್ಕೆ ₹4 ಕೋಟಿ ಆಸ್ತಿ ನಂಟು? ತಂದೆ-ಮಗಳನ್ನು ಒಟ್ಟಿಗೆ ಕೂರಿಸಿ ವಿಚಾರಣೆ; ಮಗಳಿಗೆ ಆಸ್ತಿ ಆಮಿಷವೊಡ್ಡಿ ಸಂಚಿಗೆ ಬಳಸಿಕೊಂಡ ತಂದೆ
ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಅತ್ತೆ ಮನೆಯ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಪಡೆಯುವ ಉದ್ದೇಶದಿಂದ ಆರೋಪಿ ಇಂದುಶೇಖರ್ ಹತ್ಯೆಗಳಿಗೆ ಸಂಚು ರೂಪಿಸಿದ್ದನೇ ಎಂಬ ಶಂಕೆ ಪೊಲೀಸರಲ್ಲಿ ಮೂಡಿದೆ. ಈ ಹಿನ್ನೆಲೆಯಲ್ಲಿ ಕೌಟುಂಬಿಕ ಕಲಹದ ಜತೆಗೆ ಹಣಕಾಸಿನ ವ್ಯವಹಾರ ಮತ್ತು ಆಸ್ತಿ ವಿವಾದದ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.
ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಅತ್ತೆ ಮನೆಯ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಪಡೆಯುವ ಉದ್ದೇಶದಿಂದ ಆರೋಪಿ ಇಂದುಶೇಖರ್ ಹತ್ಯೆಗಳಿಗೆ ಸಂಚು ರೂಪಿಸಿದ್ದನೇ ಎಂಬ ಶಂಕೆ ಪೊಲೀಸರಲ್ಲಿ ಮೂಡಿದೆ. ಈ ಹಿನ್ನೆಲೆಯಲ್ಲಿ ಕೌಟುಂಬಿಕ ಕಲಹದ ಜತೆಗೆ ಹಣಕಾಸಿನ ವ್ಯವಹಾರ ಮತ್ತು ಆಸ್ತಿ ವಿವಾದದ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.
ಪತ್ನಿ ಹಾಗೂ ಆಕೆಯ ತವರು ಮನೆಯವರು ನೀಡುತ್ತಿದ್ದ ಮಾನಸಿಕ ಕಿರುಕುಳ ಮತ್ತು ಹಿಂಸೆಯನ್ನು ಸಹಿಸಲಾಗದೆ ಎಲ್ಲರನ್ನೂ ಮನೆಗೆ ಕರೆಸಿ ಹತ್ಯೆ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ. ಆದರೆ, ಕೌಟುಂಬಿಕ ಕಲಹವೇ ಹತ್ಯೆಗಳಿಗೆ ಪ್ರಮುಖ ಕಾರಣವೇ ಅಥವಾ ಇದರ ಹಿಂದೆ ಬೇರೆ ಉದ್ದೇಶಗಳಿವೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಮೂರ್ನಾಲ್ಕು ಕೋಟಿ ಆಸ್ತಿಗಾಗಿ ಹತ್ಯೆ ಸಂಚು?
ಶ್ರೀರಾಂಪುರದಲ್ಲಿ ಅಜ್ಜಿಗೆ ಸೇರಿದ ಸುಮಾರು ₹3ರಿಂದ ₹4 ಕೋಟಿ ಮೌಲ್ಯದ ಆಸ್ತಿ ಇದೆ. ಈ ಆಸ್ತಿಯಲ್ಲಿ ಅತ್ತೆ, ಮಾವ ಸೇರಿದಂತೆ ಕುಟುಂಬದ ಇತರ ಸದಸ್ಯರಿಗೂ ಪಾಲು ನೀಡಬೇಕಾಗುತ್ತದೆ. ಎಲ್ಲರನ್ನೂ ಹತ್ಯೆ ಮಾಡಿದರೆ ಆಸ್ತಿಯನ್ನು ಯಾರೊಂದಿಗೂ ಹಂಚಿಕೊಳ್ಳುವ ಅಗತ್ಯವಿರುವುದಿಲ್ಲ ಎಂದು ಆರೋಪಿ ಇಂದುಶೇಖರ್ ತನ್ನ ಮಗಳಿಗೆ ಆಮಿಷವೊಡ್ಡಿ ಸಂಚಿನಲ್ಲಿ ಭಾಗಿಯಾಗಿಸಿದ್ದ ಎನ್ನಲಾಗಿದೆ.
ತಂದೆಯ ಮಾತು ನಂಬಿದ ಪಿಯುಸಿ ವಿದ್ಯಾರ್ಥಿನಿ ಹತ್ಯೆ ಕೃತ್ಯದಲ್ಲಿ ಸಹಕರಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ವಿಚಾರಣೆ ವೇಳೆ, ‘ತಂದೆ ಹೇಳಿದ ಕೆಲಸವನ್ನಷ್ಟೇ ಮಾಡುತ್ತಿದ್ದೆ. ಬೇರೆ ಏನೂ ಗೊತ್ತಿಲ್ಲ’ ಎಂದು ಆಕೆ ಹೇಳಿದ್ದಾಳೆ ಎನ್ನಲಾಗಿದೆ.
ವಿಚಾರಣೆಗೆ ತಂದೆ ಮತ್ತು ಮಗಳು ಸಮರ್ಪಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನೂ ಒಟ್ಟಿಗೆ ಕೂರಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಅಪ್ರಾಪ್ತ ವಯಸ್ಸಿನ ಕಾರಣ ಕಾನೂನು ರಕ್ಷಣೆ?
ಹತ್ಯೆ ನಡೆದ ಸಂದರ್ಭದಲ್ಲಿ ಆರೋಪಿಯ ಮಗಳಿಗೆ 17 ವರ್ಷ ವಯಸ್ಸಾಗಿತ್ತು. ನವೆಂಬರ್ 8ರಂದು ಆಕೆ 18 ವರ್ಷಕ್ಕೆ ಕಾಲಿಟ್ಟಿದ್ದಾಳೆ. ಕೃತ್ಯ ನಡೆದ ಸಮಯದಲ್ಲಿ ಅಪ್ರಾಪ್ತೆಯಾಗಿದ್ದ ಕಾರಣ ಬಾಲ ನ್ಯಾಯ ಕಾಯ್ದೆಯಡಿ ಕಾನೂನು ರಕ್ಷಣೆ ದೊರೆಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಮುಂದಾಗಿದ್ದಾರೆ.
ಮೃತದೇಹ ಸಾಗಣೆ, ಸಾಕ್ಷ್ಯ ನಾಶಕ್ಕೂ ಸಂಚು!
ಏಳು ಮಂದಿಯ ಹತ್ಯೆಯ ಬಳಿಕ ಮೃತದೇಹಗಳನ್ನು ಸಾಗಿಸುವುದು ಹಾಗೂ ಸಾಕ್ಷ್ಯಗಳನ್ನು ನಾಶಪಡಿಸುವುದಕ್ಕೂ ಆರೋಪಿ ಮೊದಲೇ ಯೋಜನೆ ರೂಪಿಸಿದ್ದ ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಈಗಾಗಲೇ ಮೃತರ ಅಂತ್ಯಕ್ರಿಯೆ ನೆರವೇರಿಸಿರುವ ಕುಟುಂಬದವರು ಶ್ರೀರಂಗಪಟ್ಟಣದಲ್ಲಿ ಅಸ್ಥಿ ವಿಸರ್ಜನೆ ಮಾಡಿದ್ದಾರೆ. ಏಳು ಮಂದಿಯ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಹತ್ಯೆಗೆ ಬಳಸಿದ ವಿಧಾನ ಸೇರಿದಂತೆ ಹಲವು ಮಹತ್ವದ ಸಂಗತಿಗಳು ತಿಳಿದುಬರಲಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಸ್ತಿ ವಿವಾದವೂ ಹತ್ಯೆಗೆ ಪ್ರಮುಖ ಕಾರಣ: ಪೊಲೀಸ್ ಆಯುಕ್ತ
ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಮಾತನಾಡಿ, ಸರಣಿ ಹತ್ಯೆ ಪ್ರಕರಣದಲ್ಲಿ ಆರೋಪಿಯ ವೈಯಕ್ತಿಕ ದ್ವೇಷದ ಜತೆಗೆ ಹಣಕಾಸಿನ ವಿಚಾರವೂ ಪ್ರಮುಖ ಕಾರಣವಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ.
ಎಲ್ಲ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಬಳಿಕ ತನಿಖಾಧಿಕಾರಿಯೂ ಆಗಿರುವ ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
-
ಸ್ಥಳೀಯ16 hours agoWedding-ಕ್ಯಾಸೆಟ್ಗಳ ಅಬ್ಬರವಿಲ್ಲ, ಡ್ಯಾನ್ಸ್ಗಳ ಹಂಗಿಲ್ಲ; ಅದ್ದೂರಿತನಕ್ಕೆ ಬ್ರೇಕ್ ಹಾಕಿ ಸರಳತೆಯಲ್ಲೇ ಮದುವೆ ಸಂಭ್ರಮ..!
-
ಶಿಕ್ಷಣ9 hours agoVidyamata Academy-ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆಯಲ್ಲೂ ಅಮೋಘ ಸಾಧನೆ ಮುಂದುವರಿಸಿದ ವಿದ್ಯಾಮಾತಾ ಅಕಾಡೆಮಿ
-
ಬಿಗ್ ನ್ಯೂಸ್15 hours agoRailway-ರೈಲ್ವೆ ಗುಂಪು ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಬರ್ತ್ಗಳ ಸಂಖ್ಯೆಗೆ ಮಿತಿ ರದ್ದು, ಬೆಳಗ್ಗೆ 9ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ..!
-
ಮಂಗಳೂರು9 hours agoGirish Mattannavar-ಸೌಜನ್ಯ ಪ್ರಕರಣ: ಎಸ್ಐಟಿಗೆ ದಾಖಲೆಗಳ ʼಬ್ಯಾಗ್ʼ ಸಲ್ಲಿಸಿದ ಗಿರೀಶ್ ಮಟ್ಟಣ್ಣನವರ್; ಸೌಜನ್ಯ ಪ್ರಕರಣದಲ್ಲಿ ಆರ್. ಅಶೋಕ್ ಪಾತ್ರದ ಕುರಿತು ಸ್ಪೋಟಕ ಹೇಳಿಕೆ..!
-
ಬಿಗ್ ನ್ಯೂಸ್11 hours agoRakesh Shetty-ಸ್ಟಿಂಗ್ ಹೆಸರಿನಲ್ಲಿ ಜನಪ್ರತಿನಿಧಿಗಳ ಬ್ಲ್ಯಾಕ್ಮೇಲ್ ಆರೋಪ: ರಾಕೇಶ್ ಶೆಟ್ಟಿ ವಿರುದ್ಧ ಕ್ರಮಕ್ಕೆ ಒಳಾಡಳಿತ ಇಲಾಖೆಯಿಂದ ಡಿಜಿಪಿಗೆ ಪತ್ರ
-
ಕಾರ್ಯಕ್ರಮಗಳು10 hours agoVitla-ವಿಟ್ಲ: ನ.25ರಂದು ಮೈತ್ರೇಯಿ ಆಯುರ್ವೇದ ಗುರುಕುಲಂ ಮತ್ತು ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ನೂತನ ಕಟ್ಟಡ ಶಿಲಾನ್ಯಾಸ ಸಮಾರಂಭ; 20 ಹಾಸಿಗೆಗಳ ಮೈತ್ರೇಯಿ ಆಯುರ್ವೇದ ಆಸ್ಪತ್ರೆಯ ಉದ್ಘಾಟನಾ ಸಮಾರಂಭ; ಆಯುರ್ವೇದದ ಅಮೂಲ್ಯವಾದ ಸನಾತನ ಜ್ಞಾನವನ್ನು ಸಂರಕ್ಷಿಸಿ, ಬೆಳೆಸಿ, ಮುಂದಿನ ಪೀಳಿಗೆಗೆ ತಲುಪಿಸುವುದು ಅಜೇಯ ಟ್ರಸ್ಟ್ನ ಪ್ರಮುಖ ಉದ್ದೇಶವಾಗಿದೆ- ಡಾ. ಸುಧಾರಾವ್
-
ಅಪರಾಧ9 hours agoArrest-ಸಾಲದ ಇಎಂಐ ಕಟ್ಟಲು ಸ್ನೇಹಿತನನ್ನೇ ಕೊಂದು ₹63 ಸಾವಿರ ದೋಚಿದ ಆರೋಪ: ಉತ್ತರ ಪ್ರದೇಶದಲ್ಲಿ ಆರೋಪಿ ಬಂಧನ
-
ಶಿಕ್ಷಣ17 hours agoPhilomena-ಸಂತ ಫಿಲೋಮಿನಾ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಐದು ದಿನಗಳ ಡಿಜಿಟಲ್ ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗ ಸಿದ್ಧತಾ ತರಬೇತಿ ಕಾರ್ಯಕ್ರಮ















