Uncategorized
ಮಾಣಿ-ಸಂಪಾಜೆ ರಸ್ತೆ ದುರಸ್ತಿಗೆ ಕೇಂದ್ರ ಸರ್ಕಾರದಿಂದ 49.22 ಕೋಟಿ ರೂ. ವಿಶೇಷ ಅನುದಾನ ಮಂಜೂರು

ದ.ಕ.ಜಿಲ್ಲೆಯ ಪ್ರಮುಖ ಹೆದ್ದಾರಿ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸಚಿವಾಲಯ ಕಾರ್ಯದರ್ಶಿ ಭೇಟಿಯಾದ ದ.ಕ. ಸಂಸದ ಕ್ಯಾ.ಚೌಟ
ದಕ್ಷಿಣ ಕನ್ನಡ ಹಾಗೂ ಒಳನಾಡು ಪ್ರದೇಶಗಳ ಸಂಪರ್ಕ ಕೊಂಡಿಯಾಗಿರುವ ರಾ.ಹೆ. 275ರ ಮಾಣಿ-ಸಂಪಾಜೆ ಹೆದ್ದಾರಿಯ ದುರಸ್ತಿ ಕಾಮಗಾರಿಗಳಿಗಾಗಿ ಕೇಂದ್ರ ಸರ್ಕಾರವು 49.22 ಕೋಟಿ ರೂ.ಗಳ ವಿಶೇಷ ಅನುದಾನ ಮಂಜೂರು ಮಾಡಿದೆ. ಇದರ ಬೆನ್ನಲ್ಲೇ ಈ ಹೆದ್ದಾರಿಯನ್ನು ಚತುಷ್ಪಥವಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ಪ್ರಕ್ರಿಯೆ ತ್ವರಿತಗೊಳಿಸುವಂತೆ ಕೋರಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಬಿ. ಉಮಾಶಂಕರ್ ಅವರನ್ನು ಭೇಟಿಯಾಗಿ ಮಹತ್ವದ ಚರ್ಚೆ ನಡೆಸಿದ್ದಾರೆ.
ನವದೆಹಲಿಯಲ್ಲಿ ಸಚಿವಾಲಯದ ಕಾರ್ಯದರ್ಶಿಯವನ್ನು ಮಂಗಳವಾರ ಖುದ್ದು ಭೇಟಿ ಮಾಡಿರುವ ಸಂಸದರು, ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ರಸ್ತೆ ಮೂಲಸೌಕರ್ಯಗಳನ್ನು ಮತ್ತಷ್ಟು ಬಲಪಡಿಸಲು ನಿಟ್ಟಿನಲ್ಲಿ ಸುಧೀರ್ಘ ಸಮಾಲೋಚನೆ ನಡೆಸಿದ್ದಾರೆ. ಕರಾವಳಿ ಮತ್ತು ಒಳನಾಡು ಪ್ರದೇಶಗಳ ನಡುವಿನ ಸಂಪರ್ಕವನ್ನು ಸುಧಾರಿಸಿ ವಾಹನ ಸಂಚಾರ ಸುಗಮಗೊಳಿಸುವ ಅತ್ಯಂತ ನಿರ್ಣಾಯಕ ಹಾಗೂ ದೀರ್ಘಕಾಲದಿಂದ ಬಾಕಿ ಉಳಿದಿರುವ NH-275ರ ಮಾಣಿ-ಸಂಪಾಜೆ ರಸ್ತೆಯ ಮೇಲ್ದರ್ಜೀಕರಣ ಯೋಜನೆಗೆ ಶೀಘ್ರದಲ್ಲೇ ಅಲೈನ್‌ಮೆಂಟ್ ಅನುಮೋದನೆ ಮತ್ತು ಹಾಗೂ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕಾರ್ಯದರ್ಶಿ ಉಮಾಶಂಕರ್ ಅವರನ್ನು ಒತ್ತಾಯಿಸಿದ್ದಾರೆ. ಈ ಮಾರ್ಗದಲ್ಲಿ ಸಂಚಾರ ಸುರಕ್ಷತೆ ಹೆಚ್ಚಿಸಲು ಹಾಗೂ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಮೂಲಕ ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೆ ಈ ಯೋಜನೆ ಕಾಲಮಿತಿಯೊಳಗೆ ಅನುಷ್ಠಾನಗೊಳ್ಳಬೇಕಾದ ಅತ್ಯಗತ್ಯತೆಯಿದೆ ಎಂದು ಕ್ಯಾ. ಚೌಟ ಅವರು ಇದೇ ಸಂದರ್ಭದಲ್ಲಿ ಕಾರ್ಯದರ್ಶಿಗಳಿಗೆ ಮನವರಿಕೆ ಮಾಡಿದ್ದಾರೆ.
ಇದೇ ವೇಳೆ, ಮಂಗಳೂರು -ಬೆಂಗಳೂರು ಎಕ್ಸ್‌ಪ್ರೆಸ್ ವೇಗೆ ಸಂಬಂಧಿಸಿದಂತೆಯೂ ಚರ್ಚಿಸಿದ್ದು, ಈ ಯೋಜನೆಯ ಮಹತ್ವದ ಭಾಗವಾಗಿರುವ ಶಿರಾಡಿ ಘಾಟ್ ವಿಭಾಗದ ನೂತನ ರಸ್ತೆ ವಿನ್ಯಾಸಕ್ಕೆ ’ಅಲೈನ್‌ಮೆಂಟ್ ಅಪ್ರೂವಲ್ ಕಮಿಟಿ’ ಅನುಮೋದನೆಯನ್ನು ಕ್ಯಾ. ಚೌಟ ಶ್ಲಾಘಿಸಿದ್ದಾರೆ. ಪ್ರಸ್ತುತ ಈ ಯೋಜನೆಯು DPR ತಯಾರಿ ಹಂತದಲ್ಲಿದ್ದು, ಇದರೊಂದಿಗೆ ಪರಿಸರ, ಅರಣ್ಯ ಮತ್ತು ವನ್ಯಜೀವಿ ಇಲಾಖೆ ಅನುಮತಿ ಪಡೆಯುವ ಪ್ರಕ್ರಿಯೆಗಳು ಕೂಡ ಪ್ರಗತಿಯಲ್ಲಿವೆ.
ದಕ್ಷಿಣ ಕನ್ನಡದ ರಸ್ತೆಗಳ ಮೂಲಸೌಕರ್ಯ ಅಭಿವೃದ್ದಿಯ ಜೊತೆಗೆ ಮಂಗಳೂರು- ಬೆಂಗಳೂರು ನಡುವಿನ ಸಂಪರ್ಕವನ್ನು ಇನ್ನಷ್ಟು ಬಲಪಡಿಸುವುದು ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಪುನರುಚ್ಚರಿಸಿದ ಸಂಸದರು, ಜಿಲ್ಲೆಯ ಹಾಗೂ ಕರಾವಳಿ ಪ್ರದೇಶದ ಹಿತದೃಷ್ಟಿಯಿಂದ ಈ ನಿರ್ಣಾಯಕ ಮೂಲಸೌಕರ್ಯ ಯೋಜನೆಗಳನ್ನು ಸಮಯಕ್ಕೆ ಸರಿಯಾಗಿ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವಾಲಯಗಳ ಜತೆಗೆ ನಿರಂತರ ಫಾಲೋಅಪ್ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಭೇಟಿ ಬಳಿಕ ಪ್ರತಿಕ್ರಿಯಿಸಿದ ಸಂಸದ ಕ್ಯಾ.ಚೌಟ ಅವರು, ಹೆಚ್ಚಿನ ಜನರು “ಬ್ಯಾಕ್ ಟು ಊರಿಗೆ” ಬರಬೇಕಾದರೆ ನಾವು ಮೊತ್ತ ಮೊದಲನೆಯದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶ್ವದರ್ಜೆಯ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು. ಉತ್ತಮ ರಸ್ತೆ ಸಂಪರ್ಕವೂ, ಹೂಡಿಕೆ, ಆರ್ಥಿಕ ಮತ್ತು ಉದ್ಯೋಗ ಅವಕಾಶಗಳಿಗೆ ಹೆಬ್ಬಾಗಿಲುಗಳಾಗಿವೆ. ಇವು ದಕ್ಷಿಣ ಕನ್ನಡದಲ್ಲಿ ವಾಸಿಸಲು, ಕೆಲಸ ಮಾಡಲು ಮತ್ತು ಉತ್ತಮ ಭವಿಷ್ಯವನ್ನು ನಿರ್ಮಿಸಲು ಸೂಕ್ತವಾದ ಸ್ಥಳವನ್ನಾಗಿ ಮಾಡುತ್ತವೆ. ಅದಕ್ಕಾಗಿಯೇ ಈ ಯೋಜನೆಗಳು ಸಾಕಾರಗೊಳ್ಳುವವರೆಗೆ ನಾನು ನಿರಂತರವಾಗಿ ಶ್ರಮಿಸಲು ಬದ್ಧನಾಗಿದ್ದೇನೆ” ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.
ಮಾಣಿ-ಸಂಪಾಜೆ ಹೆದ್ದಾರಿಯ ದುರಸ್ತಿಗಾಗಿ ₹49.22 ಕೋಟಿ ವಿಶೇಷ ಅನುದಾನ
ದ.ಕ. ಸಂಸದರ ನಿರಂತರ ಪ್ರಯತ್ನದ ಫಲವಾಗಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಾಣಿ-ಸಂಪಾಜೆ ವಿಭಾಗದ ಒಟ್ಟು 71.60 ಕಿ.ಮೀ. ರಸ್ತೆಯ ವಿಶೇಷ ತುರ್ತು ದುರಸ್ತಿ ಕಾಮಗಾರಿಗಾಗಿ ಇಪಿಸಿ ಮಾದರಿಯಲ್ಲಿ ಒಟ್ಟು ₹49.22 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಮಂಜೂರು ಮಾಡಿದೆ. ವಾಹನಗಳ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕಾಗಿ ಇಡೀ ರಸ್ತೆಗೆ 40 ಮಿ.ಮೀ ದಪ್ಪದ ಬಿಟುಮಿನಸ್, ರಸ್ತೆ ಇಕ್ಕೆಲಗಳ ನಿರ್ವಹಣೆ, ಸಂಚಾರ ಸೂಚಕ ಫಲಕಗಳು ಮತ್ತು ರೋಡ್ ಮಾರ್ಕಿಂಗ್ ಸೇರಿದಂತೆ ಅಗತ್ಯ ಅಭಿವೃದ್ದಿ ಕಾಮಗಾರಿಗಳು ನಡೆಯುವ ಸಾಧ್ಯತೆ ಇದೆ.
ಸಚಿವಾಲಯದಿಂದ ಆರ್ಥಿಕ ಮಂಜೂರಾತಿ ಮತ್ತು ಟೆಂಡರ್ ದಾಖಲೆಗಳ ಅನುಮೋದನೆ ಸಿಕ್ಕ ತಕ್ಷಣವೇ ಅತ್ಯಂತ ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದು. ಇದರ ಜೊತೆಯಲ್ಲೇ, ಈ ಹೆದ್ದಾರಿಯನ್ನು ಪೇವ್ಡ್ ಶೋಲ್ಡರ್ ಒಳಗೊಂಡ ಚತುಷ್ಪಥ (4-ಲೇನ್) ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವ ಮಹತ್ವದ ಯೋಜನೆಯನ್ನು ಈಗಾಗಲೇ 2026-27ರ ವಾರ್ಷಿಕ ಯೋಜನೆಯಲ್ಲಿ ಸೇರಿಸಲಾಗಿದ್ದು, ಪ್ರಸ್ತುತ ಇದರ ವಿಸ್ತೃತ ಯೋಜನಾ ವರದಿ (DPR) ಸಿದ್ಧತೆಯ ಹಂತದಲ್ಲಿದ್ದು ಶೀಘ್ರದಲ್ಲೇ ರಸ್ತೆ ವಿನ್ಯಾಸಕ್ಕೆ (Alignment) ಅನುಮೋದನೆ ಸಿಗುವ ನಿರೀಕ್ಷೆಯಿದೆ.
Uncategorized
ಹಿರಿಯ ಸಹಕಾರಿ ಧುರೀಣ ಕೆ.ಕೆ. ನಾರಾಯಣ ಚಳ್ಳಂಗಾರು ನಿಧನ

ಕಲ್ಮಡ್ಕ: ತಾಲೂಕಿನ ಹಿರಿಯ ಸಹಕಾರಿ ಧುರೀಣ, ಸಾಮಾಜಿಕ ಮುಖಂಡ, ಬಹುಮುಖ ಚಿಂತಕ ಕಲ್ಮಡ್ಕ ಗ್ರಾಮದ ಚಳ್ಳಂಗಾರು ಕೆ.ಕೆ. ನಾರಾಯಣ (88) ಅವರು ವಯೋಸಹಜ ಅನಾರೋಗ್ಯದಿಂದ ಗುರುವಾರ ಸಂಜೆ ನಿಧನರಾದರು.
ಮಂಡಲ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ತಮ್ಮ ಅವಧಿಯಲ್ಲಿ ಗ್ರಾಮದಲ್ಲಿ ಅಭಿವೃದ್ಧಿಯ ಹೊಸ ಶಕೆಗೆ ನಾಂದಿ ಹಾಡಿದ್ದರು. ಕಲ್ಮಡ್ಕ ಸಹಕಾರಿ ಸಂಘದ ನಿರ್ದೇಶಕರಾಗಿ ಸಂಸ್ಥೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದ ಅವರು, ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದರು. ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು.
ಕಲ್ಮಡ್ಕ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ವಿಶೇಷ ಶ್ರಮ ವಹಿಸಿದ್ದ ಅವರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಅರ್ಥಧಾರಿಯಾಗಿ ಕಲಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದ ನಾರಾಯಣ ಅವರು, ಸಂಗಮ ಕಲಾ ಸಂಘದ ನಿರ್ದೇಶಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಉತ್ತಮ ಓದುಗ ಹಾಗೂ ವಿಮರ್ಶಕರಾಗಿದ್ದ ಅವರು ಸಾಹಿತ್ಯ, ಕಲೆ, ಸಹಕಾರ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಮೃತರು ಪತ್ನಿ ಸುಬ್ಬಮ್ಮ, ಪುತ್ರಿಯರಾದ ವಿದ್ಯಾ, ಜಯಶ್ರೀ, ದೀಪಿಕಾ, ಪುತ್ರ, ಕ್ಯಾಂಪ್ಕೋ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ನ್ಯಾಯವಾದಿ ಮುರಳಿಕೃಷ್ಣ ಚಳ್ಳಂಗಾರು, ಸೊಸೆ ರಮ್ಯಾ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Uncategorized
ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನ- ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಭಿಯಾನಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಚಾಲನೆ

ಪುತ್ತೂರು: ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಏಕತೆಯ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪುತ್ತೂರು ತಾಲೂಕಿನ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ 29ರವರೆಗೆ ನಡೆಯಲಿರುವ ಪಂಚಮುಖಿ ಆಂಜನೇಯ ಹವನದ ಪ್ರಚಾರಾರ್ಥ ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಭಿಯಾನಕ್ಕೆ ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ಚಾಲನೆ ನೀಡಿದರು.
ನ.19ರಂದು ಪುತ್ತೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ವೀರಾಂಜನೇಯ ಕ್ಷೇತ್ರದಲ್ಲಿ ನಡೆಯುವ ಪಂಚಮುಖಿ ಆಂಜನೇಯ ಹವನದ ಸ್ಟಿಕ್ಕರ್ ಅನ್ನು ಆಟೋ ರಿಕ್ಷಾಗಳಿಗೆ ಅಂಟಿಸುವ ಮೂಲಕ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಯಶಸ್ಸು ಕೋರಿದರು.
ಆಟೋ ರಿಕ್ಷಾಗಳ ಎದುರಿನ ಮತ್ತು ಹಿಂಬದಿಯ ಭಾಗಕ್ಕೆ ತಾವೆ ಸ್ವತಃ ಸ್ಟಿಕ್ಕರ್ ಅಂಟಿಸಿ ಎಲ್ಲರೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಪಂಚಮುಖಿ ಆಂಜನೇಯ ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳಿಕೃಷ್ಣ ಹಸಂತಡ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಧಾನ ಕಾರ್ಯದರ್ಶಿ ಸುನಿಲ್ ದಡ್ಡು, ಯಾಗ ಸಮಿತಿಯ ಪ್ರಮುಖರಾದ ಶ್ಯಾಮ ಸುದರ್ಶನ್ ಹೊಸಮೂಲೆ, ಜಯಂತ ಶೆಟ್ಟಿ ಕಂಬಳತ್ತಡ್ಕ, ಶ್ರೀಧರ್ ತೆಂಕಿಲ ಸಹಿತ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರು ಉಪಸ್ಥಿತರಿದ್ದರು.
Uncategorized
Puttur-ಪುತ್ತೂರು: ಕೃಷ್ಣನಗರದಲ್ಲಿ ಮನೆ ಕಳ್ಳತನ- 2.19 ಲಕ್ಷ ರೂ. ಮೌಲ್ಯದ ಸೊತ್ತು ಕಳವು
ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತರಾಗಿ ಊರಿಗೆ ತೆರಳಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಕಳ್ಳರು ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಹಣ ಕಳವು ಮಾಡಿರುವ ಘಟನೆ ಪುತ್ತೂರು ತಾಲೂಕಿನ ಚಿಕ್ಕಮುಡೂರು ಗ್ರಾಮದ ಕೃಷ್ಣನಗರದಲ್ಲಿ ನಡೆದಿದೆ.
ಪುತ್ತೂರು: ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತರಾಗಿ ಊರಿಗೆ ತೆರಳಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಕಳ್ಳರು ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಹಣ ಕಳವು ಮಾಡಿರುವ ಘಟನೆ ಪುತ್ತೂರು ತಾಲೂಕಿನ ಚಿಕ್ಕಮುಡೂರು ಗ್ರಾಮದ ಕೃಷ್ಣನಗರದಲ್ಲಿ ನಡೆದಿದೆ.
ಕೃಷ್ಣನಗರದಲ್ಲಿ ಉದಯ ಕುಮಾರ್ ಅವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಹಿರೇಬಂಡಾಡಿ ಮೂಲದ ಯತೀಶ್ ಅವರು ಕುಟುಂಬ ಸಮೇತರಾಗಿ ವಾಸವಾಗಿದ್ದಾರೆ. ಸಹೋದರ ತಿಲಕ್ ಅವರ ಮದುವೆ ಕಾರ್ಯಕ್ರಮದ ನಿಮಿತ್ತ ನ.12ರಂದು ರಾತ್ರಿ ಮನೆಗೆ ಬೀಗ ಹಾಕಿ ಕುಟುಂಬದೊಂದಿಗೆ ಹಿರೇಬಂಡಾಡಿ ಗ್ರಾಮದ ಕೆಮ್ಮಾರದಲ್ಲಿರುವ ತಮ್ಮ ಮನೆಗೆ ತೆರಳಿದ್ದರು.
ಮದುವೆ ಕಾರ್ಯಕ್ರಮ ಮುಗಿಸಿ, ನ.16ರಂದು ರಾತ್ರಿ ನಡೆಯಲಿದ್ದ ಔತಣಕೂಟಕ್ಕೆ ತೆರಳುವ ಮೊದಲು ಮಗುವಿನ ಬಟ್ಟೆ ಹಾಗೂ ಇತರ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಲು ಸಂಜೆ ವೇಳೆ ಬಾಡಿಗೆ ಮನೆಗೆ ಬಂದಾಗ ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದಿರುವುದು ಗಮನಕ್ಕೆ ಬಂದಿದೆ.
ತಕ್ಷಣ ಮನೆಯೊಳಗೆ ತೆರಳಿ ಪರಿಶೀಲಿಸಿದಾಗ ಎರಡು ಕಬ್ಬಿಣದ ಕಪಾಟುಗಳ ಬಾಗಿಲುಗಳನ್ನು ಯಾವುದೋ ಸಾಧನದಿಂದ ಮೀಟಿ ತೆರೆಯಲಾಗಿತ್ತು. ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣ ಕಳವಾಗಿರುವುದು ಬೆಳಕಿಗೆ ಬಂದಿದೆ.
ಕಳ್ಳರು ಮೂರು ಜೊತೆ ಚಿನ್ನದ ಬೆಂಡೋಲೆ (12 ಗ್ರಾಂ), ಒಂದು ಮೂಗುತಿ (1 ಗ್ರಾಂ), ಮಗುವಿನ ಎರಡು ಜೊತೆ ಕಿವಿಯೋಲೆಗಳು (ಒಟ್ಟು 5 ಗ್ರಾಂ), ಎರಡು ಮಗುವಿನ ಬಳೆಗಳು (4 ಗ್ರಾಂ), 40 ಸಾವಿರ ರೂ. ಮೌಲ್ಯದ ಡೈಮಂಡ್ ಪೆಂಡೆಂಟ್ ಹಾಗೂ 3 ಸಾವಿರ ರೂ. ನಗದು ಹಣವನ್ನು ಕಳವು ಮಾಡಿದ್ದಾರೆ.
ಕಳವಾದ ಚಿನ್ನಾಭರಣಗಳ ಒಟ್ಟು ತೂಕ ಸುಮಾರು 22 ಗ್ರಾಂ ಆಗಿದ್ದು, ನಗದು ಹಣ ಹಾಗೂ ಡೈಮಂಡ್ ಪೆಂಡೆಂಟ್ ಸೇರಿದಂತೆ ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 2.19 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
ಶಿಕ್ಷಣ14 hours agoVivekananda-ವಿವೇಕಾನಂದ ಪಾಲಿಟೆಕ್ನಿಕ್ – ನೂತನ ಆಡಳಿತ ಮಂಡಳಿಯ ರಚನೆ : ಅಧ್ಯಕ್ಷರಾಗಿ ಕೃಷ್ಣಕುಮಾರ್ ಅತ್ರಿಜಾಲು, ಸಂಚಾಲಕರಾಗಿ ನರಸಿಂಹ ಪೈ
-
ಅಪರಾಧ8 hours agoMangalore-ಕಣಚೂರು ಮೆಡಿಕಲ್ ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿ ಅಪಹರಣ..! ಹಿಂದೂ ಯುವಕ ಲವ್ ಆರೋಪ – ವಿಡಿಯೋ ವೈರಲ್ : ತನಿಖೆಗೆ ಕಮಿಷನರ್ ಸೂಚನೆ
-
ಚಿನ್ನ-ಬೆಳ್ಳಿ ದರ13 hours agoGold Rate Today-ಆಭರಣಪ್ರಿಯರಿಗೆ ಗುಡ್ನ್ಯೂಸ್: ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ: 12 ಸಾವಿರ ರೂ. ಗಡಿಯೊಳಗೆ ಬಂದ ಆಭರಣ ಚಿನ್ನ..!
-
ರಾಜಕೀಯ7 hours agoBJP leaders-ಗಡಿಪಾರಿಗೊಳಗಾದ ನರಸಿಂಹ ಮಾಣಿ ಮನೆಗೆ ಬಿಜೆಪಿ ಮುಖಂಡರ ಭೇಟಿ; ಕುಟುಂಬಕ್ಕೆ ಆತ್ಮಸ್ಥೈರ್ಯ
-
ಸ್ಥಳೀಯ13 hours agoBaindoor-ರೈಲಿನಲ್ಲಿ ಮೊಬೈಲ್ ಕಳವು, UPI ಮೂಲಕ ಹಣ ವರ್ಗಾವಣೆ: ಬೈಂದೂರು ಪೊಲೀಸರಿಂದ ಕುಖ್ಯಾತ ಆರೋಪಿ ಬಂಧನ
-
ಸಿನೆಮಾ12 hours agoArjun Sarja-ಪುತ್ರಿ ಐಶ್ವರ್ಯಾ ವಿರುದ್ಧ ಅವಹೇಳನಕಾರಿ ವರದಿ: ಮಾಧ್ಯಮಗಳ ವಿರುದ್ಧ ಸಿಡಿದೆದ್ದ ಅರ್ಜುನ್ ಸರ್ಜಾ; ಅಧಿಕೃತ ದೂರು ದಾಖಲು
-
ಅಪರಾಧ13 hours agoManipal police-ಪಟಾಕಿ ಪ್ರಕರಣ: ಮಣಿಪಾಲ ಪೊಲೀಸರ ವಿರುದ್ಧ ದೌರ್ಜನ್ಯ ಆರೋಪ: ಸಿಎಂಗೆ ಇ-ಮೇಲ್ ಮಾಡಿದ ವಿದ್ಯಾರ್ಥಿಗಳು
-
ಅಪರಾಧ13 hours agoMangalore-ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ: ಮತ್ತೊಂದು ಪೋಕ್ಸೋ ಪ್ರಕರಣದಲ್ಲಿ ಧರ್ಮಗುರು ಮರುಬಂಧನ















