Uncategorized
ಡಿಜಿಟಲ್ ಅರೆಸ್ಟ್ ಪ್ರಕರಣ ಸಹಿತ ಹಲವು ಕೇಸ್‌ಗಳಲ್ಲಿ ತಲೆಮರೆಸಿಕೊಂಡಿದ್ದ ವಿಟ್ಲದ ಜುಬೈರ್ ಪೊಲೀಸ್ ಬಲೆಗೆ!

ಮಂಗಳೂರು: ಹಲವು ಸೈಬರ್ ವಂಚನೆ ಹಾಗೂ ಇತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯೊಬ್ಬನನ್ನು ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿಗಳು ಯಶಸ್ವಿಯಾಗಿ ದಸ್ತಗಿರಿ ಮಾಡಿದ್ದಾರೆ.
ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕುಡ್ತಮುಗೇರು ನಿವಾಸಿ ಜುಬೈರ್ (32) ಬಂಧಿತ ಆರೋಪಿಯಾಗಿದ್ದಾನೆ.
ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಹೈಪ್ರೊಫೈಲ್ ‘ಡಿಜಿಟಲ್ ಅರೆಸ್ಟ್’ ವಂಚನೆ ಪ್ರಕರಣಕ್ಕೆ (ಅ.ಕ್ರ. 104-2025, U/S 66(C), 66(D) IT Act ಮತ್ತು BNSನ ವಿವಿಧ ಕಲಂಗಳು) ಸಂಬಂಧಿಸಿದಂತೆ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ವೇಳೆ ಸಾರ್ವಜನಿಕರಿಂದ ಬ್ಯಾಂಕ್ ಖಾತೆಗಳನ್ನು ಪಡೆದು, ಅವುಗಳನ್ನು ಸೈಬರ್ ವಂಚನೆಯ ಹಣದ ಅಕ್ರಮ ವಹಿವಾಟಿಗೆ (Cyber Fraud Transactions) ಒದಗಿಸಿ, ವಂಚಕರಿಗೆ ಸಹಕರಿಸುತ್ತಿದ್ದ ಜಾಲದಲ್ಲಿ ಜುಬೈರ್ ಸಕ್ರಿಯನಾಗಿರುವುದು ಬೆಳಕಿಗೆ ಬಂದಿದೆ.
ಜಿಲ್ಲಾ ಸೈಬರ್ ಕ್ರೈಂ ಪೊಲೀಸರು ಜುಲೈ 3ರಂದು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
4 ಪ್ರಕರಣಗಳಲ್ಲಿ ವಾಂಟೆಡ್;
ಬಂಧಿತ ಆರೋಪಿಯ ಹಿನ್ನೆಲೆಯನ್ನು ಜಾಲಾಡಿದಾಗ ಆತ ಸರಣಿ ಅಪರಾಧಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಈತನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯ ಒಂದು ಪ್ರಕರಣ (ಅ.ಕ್ರ 180/2022) ಸೇರಿದಂತೆ ರಾಜ್ಯದ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಒಟ್ಟು 4 ಪ್ರಕರಣಗಳು ದಾಖಲಾಗಿವೆ. ಹಲವು ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ, ಪೊಲೀಸರ ಕೈಗೂ ಸಿಗದೆ ದೀರ್ಘಕಾಲದಿಂದ ಈತ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Uncategorized
Philomena-ಫಿಲೋಮಿನಾ ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಾಗಾರ
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವೃತ್ತಿ ಮಾರ್ಗದರ್ಶನ ವಿಭಾಗದ ಆಶ್ರಯದಲ್ಲಿ ನ 20 ರಂದು ಕಾಲೇಜು ಸಭಾಂಗಣದಲ್ಲಿ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು.
ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವೃತ್ತಿ ಮಾರ್ಗದರ್ಶನ ವಿಭಾಗದ ಆಶ್ರಯದಲ್ಲಿ ನ 20 ರಂದು ಕಾಲೇಜು ಸಭಾಂಗಣದಲ್ಲಿ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ವಂದನ ಶಂಕರ್ ಮಾತನಾಡಿ, ಪಿ ಯು ಸಿ ನಂತರದ ಅವಕಾಶಗಳು, ಇಂಜಿನಿಯರಿಂಗ್ ವಿಭಾಗಗಳಲ್ಲಿ ಇರುವ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಚೇತನ್ ಮಾತನಾಡಿ, ಮಾದಕ ವಸ್ತುಗಳು ಹಾಗೂ ದೂಮಪಾನದ ವ್ಯಸನ ನಮ್ಮ ನೆನಪಿನ ಶಕ್ತಿಯನ್ನು ಕುಗ್ಗಿಸುತ್ತದೆ ಮತ್ತು ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಹಾಗೆಯೇ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ನಮ್ಮ ಏಕಾಗ್ರತೆಯನ್ನು ಭಂಗ ಗೊಳಿಸುತ್ತದೆ ಎಂದು ಹೇಳಿದರು.

ವೃತ್ತಿ ಮಾರ್ಗದರ್ಶನ ವಿಭಾಗದ ನಿರ್ದೇಶಕರಾದ ರವಿಪ್ರಸಾದ್ ಬಿ. ಜಿ ನಿರಂಜನ್ ಜಿ. ಯು, ಕವಿತಾ ಕೆ ಹಾಗೂ ಕಾಲೇಜಿನ ಬೋಧಕ /ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Uncategorized
ಹಿರಿಯ ಸಹಕಾರಿ ಧುರೀಣ ಕೆ.ಕೆ. ನಾರಾಯಣ ಚಳ್ಳಂಗಾರು ನಿಧನ

ಕಲ್ಮಡ್ಕ: ತಾಲೂಕಿನ ಹಿರಿಯ ಸಹಕಾರಿ ಧುರೀಣ, ಸಾಮಾಜಿಕ ಮುಖಂಡ, ಬಹುಮುಖ ಚಿಂತಕ ಕಲ್ಮಡ್ಕ ಗ್ರಾಮದ ಚಳ್ಳಂಗಾರು ಕೆ.ಕೆ. ನಾರಾಯಣ (88) ಅವರು ವಯೋಸಹಜ ಅನಾರೋಗ್ಯದಿಂದ ಗುರುವಾರ ಸಂಜೆ ನಿಧನರಾದರು.
ಮಂಡಲ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ತಮ್ಮ ಅವಧಿಯಲ್ಲಿ ಗ್ರಾಮದಲ್ಲಿ ಅಭಿವೃದ್ಧಿಯ ಹೊಸ ಶಕೆಗೆ ನಾಂದಿ ಹಾಡಿದ್ದರು. ಕಲ್ಮಡ್ಕ ಸಹಕಾರಿ ಸಂಘದ ನಿರ್ದೇಶಕರಾಗಿ ಸಂಸ್ಥೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದ ಅವರು, ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದರು. ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು.
ಕಲ್ಮಡ್ಕ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ವಿಶೇಷ ಶ್ರಮ ವಹಿಸಿದ್ದ ಅವರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಅರ್ಥಧಾರಿಯಾಗಿ ಕಲಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದ ನಾರಾಯಣ ಅವರು, ಸಂಗಮ ಕಲಾ ಸಂಘದ ನಿರ್ದೇಶಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಉತ್ತಮ ಓದುಗ ಹಾಗೂ ವಿಮರ್ಶಕರಾಗಿದ್ದ ಅವರು ಸಾಹಿತ್ಯ, ಕಲೆ, ಸಹಕಾರ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಮೃತರು ಪತ್ನಿ ಸುಬ್ಬಮ್ಮ, ಪುತ್ರಿಯರಾದ ವಿದ್ಯಾ, ಜಯಶ್ರೀ, ದೀಪಿಕಾ, ಪುತ್ರ, ಕ್ಯಾಂಪ್ಕೋ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ನ್ಯಾಯವಾದಿ ಮುರಳಿಕೃಷ್ಣ ಚಳ್ಳಂಗಾರು, ಸೊಸೆ ರಮ್ಯಾ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Uncategorized
ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನ- ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಭಿಯಾನಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಚಾಲನೆ

ಪುತ್ತೂರು: ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಏಕತೆಯ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪುತ್ತೂರು ತಾಲೂಕಿನ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ 29ರವರೆಗೆ ನಡೆಯಲಿರುವ ಪಂಚಮುಖಿ ಆಂಜನೇಯ ಹವನದ ಪ್ರಚಾರಾರ್ಥ ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಭಿಯಾನಕ್ಕೆ ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ಚಾಲನೆ ನೀಡಿದರು.
ನ.19ರಂದು ಪುತ್ತೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ವೀರಾಂಜನೇಯ ಕ್ಷೇತ್ರದಲ್ಲಿ ನಡೆಯುವ ಪಂಚಮುಖಿ ಆಂಜನೇಯ ಹವನದ ಸ್ಟಿಕ್ಕರ್ ಅನ್ನು ಆಟೋ ರಿಕ್ಷಾಗಳಿಗೆ ಅಂಟಿಸುವ ಮೂಲಕ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಯಶಸ್ಸು ಕೋರಿದರು.
ಆಟೋ ರಿಕ್ಷಾಗಳ ಎದುರಿನ ಮತ್ತು ಹಿಂಬದಿಯ ಭಾಗಕ್ಕೆ ತಾವೆ ಸ್ವತಃ ಸ್ಟಿಕ್ಕರ್ ಅಂಟಿಸಿ ಎಲ್ಲರೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಪಂಚಮುಖಿ ಆಂಜನೇಯ ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳಿಕೃಷ್ಣ ಹಸಂತಡ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಧಾನ ಕಾರ್ಯದರ್ಶಿ ಸುನಿಲ್ ದಡ್ಡು, ಯಾಗ ಸಮಿತಿಯ ಪ್ರಮುಖರಾದ ಶ್ಯಾಮ ಸುದರ್ಶನ್ ಹೊಸಮೂಲೆ, ಜಯಂತ ಶೆಟ್ಟಿ ಕಂಬಳತ್ತಡ್ಕ, ಶ್ರೀಧರ್ ತೆಂಕಿಲ ಸಹಿತ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರು ಉಪಸ್ಥಿತರಿದ್ದರು.















