Uncategorized
ಮುರುಳ್ಯ : ಆಟವಾಡುತ್ತಾ ತೋಟದತ್ತ ಹೋದ ಐದು ವರ್ಷದ ಅವಳಿ ಮಕ್ಕಳು ಕೆರೆಗೆ ಬಿದ್ದು ದುರ್ಮರಣ

ಕಾಣಿಯೂರು: ಆಟವಾಡಲು ತೋಟಕ್ಕೆ ತೆರಳಿದ್ದ ಐದು ವರ್ಷದ ಅವಳಿ ಬಾಲಕರು ಕೃಷಿ ಹೊಂಡಕ್ಕೆ ಬಿದ್ದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ತಾಲ್ಲೂಕಿನ ಕಾಣಿಯೂರು ಸಮೀಪದ ಮುರುಳ್ಯ ಗ್ರಾಮದ ಕಡೀರದಲ್ಲಿ ಶನಿವಾರ (ಜೂನ್ 20) ಸಂಜೆ ನಡೆದಿದೆ.
ಮೃತರನ್ನು ಜಸ್ಟಿನ್ ಹಾಗೂ ಯಶ್ವಿನ್ ಎಂದು ಗುರುತಿಸಲಾಗಿದೆ. ಇವರು ಕಡೀರ ನಿವಾಸಿಗಳಾದ ವಸಂತ ಹಾಗೂ ದಿವ್ಯಾ ದಂಪತಿಯ ಪುತ್ರರು. ಇವರು ಮುರುಳ್ಯ ಶಾಂತಿನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಯುಕೆಜಿ ವಿದ್ಯಾರ್ಥಿಗಳಾಗಿದ್ದರು.
ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಮಕ್ಕಳನ್ನು ತಂದೆ ವಸಂತ್ ಅವರು ಶಾಲೆಯಿಂದ ಮನೆಗೆ ಕರೆದುಕೊಂಡು ಬಂದಿದ್ದರು. ಮಕ್ಕಳು ಮನೆಯ ಸಮೀಪ ಆಟವಾಡುತ್ತಾ ಅಪರಾಹ್ನ 4 ಗಂಟೆಯ ಬಳಿಕ ತೋಟದಲ್ಲಿರುವ ಕೃಷಿ ಹೊಂಡದತ್ತ ಹೋಗಿದ್ದು, ಅಲ್ಲಿ ಕಾಲು ಜಾರಿ ಸುಮಾರು 15 ಅಡಿ ಆಳದ ಹೊಂಡಕ್ಕೆ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ವೃದ್ಧರೊಬ್ಬರು ಮಾತ್ರ ಇದ್ದು, ತಾಯಿ-ತಂದೆ ಕೆಲಸಕ್ಕೆ ಹೋಗಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅಜ್ಜ, ಅಂಗಳ ಬಿಟ್ಟು ಕೆಳಗೆ ಹೋಗದಂತೆ ಮಕ್ಕಳಿಗೆ ಎಚ್ಚರಿಕೆ ನೀಡಿದ್ದರು. ಆದರೆ ಅಜ್ಜನ ಕಣ್ಣು ತಪ್ಪಿಸಿ ಮಕ್ಕಳು ಪಕ್ಕದ ತೋಟದತ್ತ ತೆರಳಿದ್ದಾರೆ ಎನ್ನಲಾಗಿದೆ.
ಬಹಳ ಹೊತ್ತಾದರೂ ಮಕ್ಕಳು ಮನೆಗೆ ಮರಳದಿದ್ದಾಗ ಆತಂಕಗೊಂಡ ಅಜ್ಜ ಹಾಗೂ ನೆರೆಹೊರೆಯವರು ಹುಡುಕಾಟ ನಡೆಸಿದ್ದಾರೆ. ತೋಟದ ಕೃಷಿ ಹೊಂಡದ ದಂಡೆಯ ಮೇಲೆ ಮಕ್ಕಳು ಧರಿಸಿದ್ದ ಟೊಪ್ಪಿಗಳು ಪತ್ತೆಯಾದಾಗ ಅನಾಹುತದ ಶಂಕೆ ಮೂಡಿದೆ. ತಕ್ಷಣವೇ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು.

ಹುಡುಕಾಟ: ಸ್ಥಳಕ್ಕೆ ಧಾವಿಸಿದ ಬೆಳ್ಳಾರೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಗುಡ್ಡ ಹಾಗೂ ಕೃಷಿ ಹೊಂಡದಲ್ಲಿ ತೀವ್ರ ಹುಡುಕಾಟ ನಡೆಸಿದರು. ಸಂಜೆಯ ವೇಳೆಗೆ ಇಬ್ಬರೂ ಬಾಲಕರ ಮೃತದೇಹಗಳು ಕೃಷಿ ಹೊಂಡದಲ್ಲಿ ಪತ್ತೆಯಾಗಿವೆ.
ವಸಂತ ಮತ್ತು ದಿವ್ಯಾ ದಂಪತಿಗೆ ಜಸ್ಟಿನ್ ಹಾಗೂ ಯಶ್ವಿನ್ ಇಬ್ಬರೇ ಮಕ್ಕಳು. ವಿಧಿಯಾಟಕ್ಕೆ ಅವಳಿ ಮಕ್ಕಳಿಬ್ಬರೂ ಜತೆಯಾಗಿಯೇ ಪ್ರಾಣ ತೆತ್ತಿದ್ದು, ತಂದೆ-ತಾಯಿಯ ರೋದನ ಮುಗಿಲು ಮುಟ್ಟಿತ್ತು. ತಾಯಿ ಹೆಚ್ಚಾಗಿ ಮನೆಯಲ್ಲೇ ಇರುತ್ತಿದ್ದು, ಶನಿವಾರ ಕೆಲಸಕ್ಕೆ ಹೋಗಿದ್ದರು.
ವಸಂತ ಅವರೂ ನಿತ್ಯ ವೆಲ್ಡಿಂಗ್ ಕೆಲಸಕ್ಕೆ ಹೋಗುತ್ತಿದ್ದರು. ಸ್ವಲ್ಪ ಕೃಷಿಯೂ ಇದೆ. ಒಂದೇ ಮನೆಯ ಎರಡು ಕುಡಿಗಳು ಜಲಸಮಾಧಿಯಾದ ಸುದ್ದಿ ಕೇಳಿ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ
Uncategorized
Philomena-ಫಿಲೋಮಿನಾ ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಾಗಾರ
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವೃತ್ತಿ ಮಾರ್ಗದರ್ಶನ ವಿಭಾಗದ ಆಶ್ರಯದಲ್ಲಿ ನ 20 ರಂದು ಕಾಲೇಜು ಸಭಾಂಗಣದಲ್ಲಿ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು.
ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವೃತ್ತಿ ಮಾರ್ಗದರ್ಶನ ವಿಭಾಗದ ಆಶ್ರಯದಲ್ಲಿ ನ 20 ರಂದು ಕಾಲೇಜು ಸಭಾಂಗಣದಲ್ಲಿ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ವಂದನ ಶಂಕರ್ ಮಾತನಾಡಿ, ಪಿ ಯು ಸಿ ನಂತರದ ಅವಕಾಶಗಳು, ಇಂಜಿನಿಯರಿಂಗ್ ವಿಭಾಗಗಳಲ್ಲಿ ಇರುವ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಚೇತನ್ ಮಾತನಾಡಿ, ಮಾದಕ ವಸ್ತುಗಳು ಹಾಗೂ ದೂಮಪಾನದ ವ್ಯಸನ ನಮ್ಮ ನೆನಪಿನ ಶಕ್ತಿಯನ್ನು ಕುಗ್ಗಿಸುತ್ತದೆ ಮತ್ತು ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಹಾಗೆಯೇ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ನಮ್ಮ ಏಕಾಗ್ರತೆಯನ್ನು ಭಂಗ ಗೊಳಿಸುತ್ತದೆ ಎಂದು ಹೇಳಿದರು.

ವೃತ್ತಿ ಮಾರ್ಗದರ್ಶನ ವಿಭಾಗದ ನಿರ್ದೇಶಕರಾದ ರವಿಪ್ರಸಾದ್ ಬಿ. ಜಿ ನಿರಂಜನ್ ಜಿ. ಯು, ಕವಿತಾ ಕೆ ಹಾಗೂ ಕಾಲೇಜಿನ ಬೋಧಕ /ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Uncategorized
ಹಿರಿಯ ಸಹಕಾರಿ ಧುರೀಣ ಕೆ.ಕೆ. ನಾರಾಯಣ ಚಳ್ಳಂಗಾರು ನಿಧನ

ಕಲ್ಮಡ್ಕ: ತಾಲೂಕಿನ ಹಿರಿಯ ಸಹಕಾರಿ ಧುರೀಣ, ಸಾಮಾಜಿಕ ಮುಖಂಡ, ಬಹುಮುಖ ಚಿಂತಕ ಕಲ್ಮಡ್ಕ ಗ್ರಾಮದ ಚಳ್ಳಂಗಾರು ಕೆ.ಕೆ. ನಾರಾಯಣ (88) ಅವರು ವಯೋಸಹಜ ಅನಾರೋಗ್ಯದಿಂದ ಗುರುವಾರ ಸಂಜೆ ನಿಧನರಾದರು.
ಮಂಡಲ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ತಮ್ಮ ಅವಧಿಯಲ್ಲಿ ಗ್ರಾಮದಲ್ಲಿ ಅಭಿವೃದ್ಧಿಯ ಹೊಸ ಶಕೆಗೆ ನಾಂದಿ ಹಾಡಿದ್ದರು. ಕಲ್ಮಡ್ಕ ಸಹಕಾರಿ ಸಂಘದ ನಿರ್ದೇಶಕರಾಗಿ ಸಂಸ್ಥೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದ ಅವರು, ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದರು. ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು.
ಕಲ್ಮಡ್ಕ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ವಿಶೇಷ ಶ್ರಮ ವಹಿಸಿದ್ದ ಅವರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಅರ್ಥಧಾರಿಯಾಗಿ ಕಲಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದ ನಾರಾಯಣ ಅವರು, ಸಂಗಮ ಕಲಾ ಸಂಘದ ನಿರ್ದೇಶಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಉತ್ತಮ ಓದುಗ ಹಾಗೂ ವಿಮರ್ಶಕರಾಗಿದ್ದ ಅವರು ಸಾಹಿತ್ಯ, ಕಲೆ, ಸಹಕಾರ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಮೃತರು ಪತ್ನಿ ಸುಬ್ಬಮ್ಮ, ಪುತ್ರಿಯರಾದ ವಿದ್ಯಾ, ಜಯಶ್ರೀ, ದೀಪಿಕಾ, ಪುತ್ರ, ಕ್ಯಾಂಪ್ಕೋ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ನ್ಯಾಯವಾದಿ ಮುರಳಿಕೃಷ್ಣ ಚಳ್ಳಂಗಾರು, ಸೊಸೆ ರಮ್ಯಾ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Uncategorized
ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನ- ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಭಿಯಾನಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಚಾಲನೆ

ಪುತ್ತೂರು: ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಏಕತೆಯ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪುತ್ತೂರು ತಾಲೂಕಿನ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ 29ರವರೆಗೆ ನಡೆಯಲಿರುವ ಪಂಚಮುಖಿ ಆಂಜನೇಯ ಹವನದ ಪ್ರಚಾರಾರ್ಥ ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಭಿಯಾನಕ್ಕೆ ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ಚಾಲನೆ ನೀಡಿದರು.
ನ.19ರಂದು ಪುತ್ತೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ವೀರಾಂಜನೇಯ ಕ್ಷೇತ್ರದಲ್ಲಿ ನಡೆಯುವ ಪಂಚಮುಖಿ ಆಂಜನೇಯ ಹವನದ ಸ್ಟಿಕ್ಕರ್ ಅನ್ನು ಆಟೋ ರಿಕ್ಷಾಗಳಿಗೆ ಅಂಟಿಸುವ ಮೂಲಕ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಯಶಸ್ಸು ಕೋರಿದರು.
ಆಟೋ ರಿಕ್ಷಾಗಳ ಎದುರಿನ ಮತ್ತು ಹಿಂಬದಿಯ ಭಾಗಕ್ಕೆ ತಾವೆ ಸ್ವತಃ ಸ್ಟಿಕ್ಕರ್ ಅಂಟಿಸಿ ಎಲ್ಲರೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಪಂಚಮುಖಿ ಆಂಜನೇಯ ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳಿಕೃಷ್ಣ ಹಸಂತಡ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಧಾನ ಕಾರ್ಯದರ್ಶಿ ಸುನಿಲ್ ದಡ್ಡು, ಯಾಗ ಸಮಿತಿಯ ಪ್ರಮುಖರಾದ ಶ್ಯಾಮ ಸುದರ್ಶನ್ ಹೊಸಮೂಲೆ, ಜಯಂತ ಶೆಟ್ಟಿ ಕಂಬಳತ್ತಡ್ಕ, ಶ್ರೀಧರ್ ತೆಂಕಿಲ ಸಹಿತ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರು ಉಪಸ್ಥಿತರಿದ್ದರು.















