ಅಂತರ ರಾಜ್ಯ
Socialist Party-ಬಿಜೆಪಿ ಜೊತೆ ಸಮಾಜವಾದಿ ಪಾರ್ಟಿ ವಿಲೀನ? ಗೃಹ ಸಚಿವ ಅಮಿತ್ ಶಾಗೆ ರಹಸ್ಯ ಪತ್ರ..!
ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ ವಿಭಜನೆ ಹಾಗೂ ಮಹಾರಾಷ್ಟ್ರದಲ್ಲಿ ಶಿವಸೇನೆಯ ಠಾಕ್ರೆ ಬಣದ ಸಂಸದರು ಎನ್‌ಡಿಎ ಸೇರುವ ಸುದ್ದಿಯ ಬೆನ್ನಲ್ಲೇ, ಈಗ ಉತ್ತರ ಪ್ರದೇಶದ ಸಮಾಜವಾದಿ ಪಾರ್ಟಿ (SP) ಕೂಡ ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಲಖನೌ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಮುಕ್ತಾಯಗೊಳ್ಳುತ್ತಿದ್ದಂತೆಯೇ ದೇಶದ ರಾಜಕಾರಣದಲ್ಲಿ ಭಾರೀ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ನ ವಿಭಜನೆ ಹಾಗೂ ಮಹಾರಾಷ್ಟ್ರದಲ್ಲಿ ಶಿವಸೇನೆಯ ಠಾಕ್ರೆ ಬಣದ ಸಂಸದರು ಎನ್‌ಡಿಎ ಸೇರುವ ಸುದ್ದಿಯ ಬೆನ್ನಲ್ಲೇ, ಈಗ ಉತ್ತರ ಪ್ರದೇಶದ ಸಮಾಜವಾದಿ ಪಾರ್ಟಿ (SP) ಕೂಡ ಬಿಜೆಪಿಯೊಂದಿಗೆ ವಿಲೀನಗೊಳ್ಳಲಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.
ಸಚಿವ ಓಂ ಪ್ರಕಾಶ್ ರಾಜಭರ್ ನೀಡಿದ ಸುಳಿವು:
ಉತ್ತರ ಪ್ರದೇಶದ ಸಚಿವ ಹಾಗೂ ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಓಂ ಪ್ರಕಾಶ್ ರಾಜಭರ್ ಈ ಕುರಿತು ಸಂಚಲನ ಮೂಡಿಸುವ ಹೇಳಿಕೆ ನೀಡಿದ್ದಾರೆ. ಸಮಾಜವಾದಿ ಪಾರ್ಟಿಯ ಹಿರಿಯ ನಾಯಕ ರಾಮ್ ಗೋಪಾಲ್ ಯಾದವ್ ಅವರು ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಹಸ್ಯ ಪತ್ರವೊಂದನ್ನು ಬರೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇಡೀ ಸಮಾಜವಾದಿ ಪಾರ್ಟಿಯೇ ಬಿಜೆಪಿಯೊಂದಿಗೆ ವಿಲೀನಗೊಳ್ಳಲು ತೆರೆಮರೆಯಲ್ಲಿ ಸಿದ್ಧತೆ ನಡೆಸುತ್ತಿದೆ ಎಂದು ರಾಜಭರ್ ಪ್ರತಿಪಾದಿಸಿದ್ದಾರೆ.
ಹಗರಣಗಳ ತನಿಖೆಯ ಭೀತಿ:
ಸಮಾಜವಾದಿ ಪಾರ್ಟಿಯ ಈ ದಿಢೀರ್ ಬದಲಾವಣೆಗೆ ತನಿಖಾ ಸಂಸ್ಥೆಗಳ ಬಿಗಿ ಕುಣಿಕೆಯೇ ಕಾರಣ ಎಂದು ಹೇಳಲಾಗುತ್ತಿದೆ. ಉತ್ತರ ಪ್ರದೇಶದ ಬಹುಕೋಟಿ ಗಣಿಗಾರಿಕೆ ಹಗರಣ ಮತ್ತು ಗೋಮತಿ ರಿವರ್ ಫ್ರಂಟ್ ಹಗರಣಗಳಲ್ಲಿ ರಾಮ್ ಗೋಪಾಲ್ ಯಾದವ್ ಸೇರಿದಂತೆ ಹಲವು ನಾಯಕರ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಕಾನೂನು ಕ್ರಮದಿಂದ ಪಾರಾಗಲು ಸಮಾಜವಾದಿ ಪಾರ್ಟಿಯ ನಾಯಕರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ ಎನ್ನಲಾಗಿದೆ.
ರಾಜಕೀಯ ಲೆಕ್ಕಾಚಾರ:
ಪ್ರಸ್ತುತ ಲೋಕಸಭೆಯಲ್ಲಿ 37 ಸದಸ್ಯರನ್ನು ಹೊಂದುವ ಮೂಲಕ ಮೂರನೇ ಅತಿದೊಡ್ಡ ಪಕ್ಷವಾಗಿರುವ ಸಮಾಜವಾದಿ ಪಾರ್ಟಿ, ಒಂದು ವೇಳೆ ಬಿಜೆಪಿಯೊಂದಿಗೆ ವಿಲೀನವಾದರೆ ಅದು ದೇಶದ ರಾಜಕಾರಣದಲ್ಲಿ ದೊಡ್ಡ ಮಟ್ಟದ ಸ್ಥಿತ್ಯಂತರಕ್ಕೆ ಕಾರಣವಾಗಲಿದೆ. ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಸಚಿವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆದರೆ ಈ ಬಗ್ಗೆ ಸಮಾಜವಾದಿ ಪಾರ್ಟಿಯ ಅಧಿಕೃತ ಪ್ರತಿಕ್ರಿಯೆ ಇನ್ನೂ ಹೊರಬಿದ್ದಿಲ್ಲ.
ಅಂತರ ರಾಜ್ಯ
YouTuber-89 ವರ್ಷದ ವೃದ್ಧನ 5 ಸವರನ್ ಚಿನ್ನದ ಸರ ಕಳವು ಆರೋಪ; 118 ಸವರನ್ ಚಿನ್ನ ಕಳವು ಪ್ರಕರಣದ ಯೂಟ್ಯೂಬರ್ ವಿರುದ್ಧ ಪ್ರಕರಣ ದಾಖಲು
ತಮ್ಮ ಮನೆಯಲ್ಲಿ 118 ಸವರನ್ ಚಿನ್ನಾಭರಣ ಕಳುವಾಗಿದ್ದ ಬಗ್ಗೆ ದೂರು ನೀಡಿ ಸುದ್ದಿಯಾಗಿದ್ದ ಪ್ರಸಿದ್ಧ ಯೂಟ್ಯೂಬರ್ ಮಧುಮಿತಾ ಅವರ ಪ್ರಕರಣಕ್ಕೆ ಇದೀಗ ಅನಿರೀಕ್ಷಿತ ತಿರುವು ಸಿಕ್ಕಿದೆ. 2022ರಲ್ಲಿ 89 ವರ್ಷದ ವೃದ್ಧ ಕಟ್ಟಡ ಗುತ್ತಿಗೆದಾರರ 5 ಸವರನ್ ತೂಕದ ಚಿನ್ನದ ಸರ ಕಳವು ಮಾಡಿದ ಆರೋಪದಲ್ಲಿ ರಾಜಕ್ಕಮಂಗಲಂ ಪೊಲೀಸರು ಮಧುಮಿತಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ನಾಗರಕೋಯಿಲ್, ಅ.6: ತಮ್ಮ ಮನೆಯಲ್ಲಿ 118 ಸವರನ್ ಚಿನ್ನಾಭರಣ ಕಳುವಾಗಿದ್ದ ಬಗ್ಗೆ ದೂರು ನೀಡಿ ಸುದ್ದಿಯಾಗಿದ್ದ ಪ್ರಸಿದ್ಧ ಯೂಟ್ಯೂಬರ್ ಮಧುಮಿತಾ ಅವರ ಪ್ರಕರಣಕ್ಕೆ ಇದೀಗ ಅನಿರೀಕ್ಷಿತ ತಿರುವು ಸಿಕ್ಕಿದೆ. 2022ರಲ್ಲಿ 89 ವರ್ಷದ ವೃದ್ಧ ಕಟ್ಟಡ ಗುತ್ತಿಗೆದಾರರ 5 ಸವರನ್ ತೂಕದ ಚಿನ್ನದ ಸರ ಕಳವು ಮಾಡಿದ ಆರೋಪದಲ್ಲಿ ರಾಜಕ್ಕಮಂಗಲಂ ಪೊಲೀಸರು ಮಧುಮಿತಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ತಿರುನಲ್ವೇಲಿ ಮೂಲದ 89 ವರ್ಷದ ಗುತ್ತಿಗೆದಾರರೊಬ್ಬರು ಈ ಕುರಿತು ದೂರು ನೀಡಿದ್ದಾರೆ. ಬೆನ್ನುನೋವಿನ ಸಮಸ್ಯೆಗೆ ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮಧುಮಿತಾ ಅವರ ಪರಿಚಯವಾಗಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
2022ರಲ್ಲಿ ಮಧುಮಿತಾ ಕರೆ ಮಾಡಿ ತಿರುನಲ್ವೇಲಿ ನ್ಯಾಯಾಲಯದ ಬಳಿ ಕರೆದುಕೊಂಡು ಹೋಗಿ ಬಸ್ ನಿಲ್ದಾಣದಲ್ಲಿ ಬಿಡುವಂತೆ ಮನವಿ ಮಾಡಿದ್ದರು. ಅದರಂತೆ ಗುತ್ತಿಗೆದಾರರು ತಮ್ಮ ಕಾರಿನಲ್ಲಿ ಆಕೆಯನ್ನು ಕರೆದುಕೊಂಡು ಹೋಗಿ ಬಿಟ್ಟಿದ್ದರು. ಆದರೆ, ಮಧುಮಿತಾ ಕಾರಿನಿಂದ ಇಳಿದು ಹೋದ ಬಳಿಕ ತಮ್ಮ ಕತ್ತಿನಲ್ಲಿದ್ದ 5 ಸವರನ್ ತೂಕದ ಚಿನ್ನದ ಸರ ಕಾಣೆಯಾಗಿರುವುದು ಗಮನಕ್ಕೆ ಬಂದಿತ್ತು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಮಧುಮಿತಾ ಅವರನ್ನು ಪ್ರಶ್ನಿಸಿದಾಗ ಸರವನ್ನು ಹಿಂದಿರುಗಿಸದೆ ಜೀವ ಬೆದರಿಕೆ ಹಾಕಿದ್ದರು ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ. ಮಾನಹಾನಿ ಹಾಗೂ ಅವಮಾನಕ್ಕೆ ಹೆದರಿ ಅಂದು ಪೊಲೀಸರಿಗೆ ದೂರು ನೀಡಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ ರಾಜಕ್ಕಮಂಗಲಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಘಟನೆ ನಡೆದ ಸ್ಥಳ ತಿರುನಲ್ವೇಲಿ ಪೊಲೀಸ್ ವ್ಯಾಪ್ತಿಗೆ ಬರುವುದರಿಂದ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ತಿರುನಲ್ವೇಲಿ ಪೊಲೀಸರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿಸಲಾಗಿದೆ. ಮಧುಮಿತಾ ವಿರುದ್ಧದ ಆರೋಪಗಳು ಸದ್ಯಕ್ಕೆ ಸಾಬೀತಾಗಿಲ್ಲ.
118 ಸವರನ್ ಚಿನ್ನ ಕಳವು ಪ್ರಕರಣದಲ್ಲಿ ಸಂತ್ರಸ್ತೆಯಾಗಿದ್ದ ಯೂಟ್ಯೂಬರ್
ನಾಗರಕೋಯಿಲ್ ಬಳಿಯ ತಂಬತುಕೋಣಂನಲ್ಲಿರುವ ಮಧುಮಿತಾ ಅವರ ಮನೆಯಲ್ಲಿ ಇತ್ತೀಚೆಗೆ ಕಳ್ಳತನ ನಡೆದಿತ್ತು. ಸುಮಾರು 118 ಸವರನ್ ಚಿನ್ನಾಭರಣ ಕಳವಾಗಿದ್ದ ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರನ್ನು ಬಂಧಿಸಿ 98 ಸವರನ್ ಚಿನ್ನವನ್ನು ವಶಪಡಿಸಿಕೊಂಡಿದ್ದರು.
ಮಧುಮಿತಾ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಚಿನ್ನಾಭರಣ ಹಾಗೂ ಹಣವನ್ನು ಪ್ರದರ್ಶಿಸುತ್ತಿದ್ದ ವೀಡಿಯೊಗಳನ್ನು ಗಮನಿಸಿದ್ದ ಕಳ್ಳರು, ಅದರಿಂದ ಪ್ರೇರಿತರಾಗಿ ಕಳ್ಳತನ ನಡೆಸಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿತ್ತು ಎನ್ನಲಾಗಿದೆ.
ತಮ್ಮ ಮನೆಯಲ್ಲಿನ ಭಾರೀ ಕಳ್ಳತನದ ಪ್ರಕರಣದಲ್ಲಿ ಸಂತ್ರಸ್ತೆಯಾಗಿ ಸುದ್ದಿಯಾಗಿದ್ದ ಮಧುಮಿತಾ ವಿರುದ್ಧವೇ ಇದೀಗ 2022ರ ಹಳೆಯ ಕಳವು ಆರೋಪದಡಿ ದೂರು ದಾಖಲಾಗಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ನಿಧನ ವಾರ್ತೆ
Kerala-ಕೇರಳ: ಸಿಡಿಲು ಬಡಿದು ಖ್ಯಾತ ‘ಪಲ್ಲಟ್ಟು ಬ್ರಹ್ಮದತ್ತನ್’ ಆನೆ ದಾರುಣ ಸಾವು
ಕೇರಳದ ದೇವಾಲಯ ಉತ್ಸವಗಳಲ್ಲಿ ತನ್ನ ಭವ್ಯ ನಿಲುವು ಹಾಗೂ ಸೌಮ್ಯ ಸ್ವಭಾವದಿಂದ ಲಕ್ಷಾಂತರ ಆನೆ ಪ್ರಿಯರ ಮನಗೆದ್ದಿದ್ದ ಪ್ರಸಿದ್ಧ ಆನೆ ‘ಪಲ್ಲಟ್ಟು ಬ್ರಹ್ಮದತ್ತನ್’ ಸಿಡಿಲು ಬಡಿದು ದಾರುಣವಾಗಿ ಮೃತಪಟ್ಟಿದೆ. ಎರಟ್ಟುಪೆಟ್ಟಾ ಸಮೀಪದ ಮೇಲಂಪಾರದಲ್ಲಿ ಭಾನುವಾರ ಈ ಘಟನೆ ನಡೆದಿದೆ.
ಕೊಟ್ಟಾಯಂ (ಕೇರಳ): ಕೇರಳದ ದೇವಾಲಯ ಉತ್ಸವಗಳಲ್ಲಿ ತನ್ನ ಭವ್ಯ ನಿಲುವು ಹಾಗೂ ಸೌಮ್ಯ ಸ್ವಭಾವದಿಂದ ಲಕ್ಷಾಂತರ ಆನೆ ಪ್ರಿಯರ ಮನಗೆದ್ದಿದ್ದ ಪ್ರಸಿದ್ಧ ಆನೆ ‘ಪಲ್ಲಟ್ಟು ಬ್ರಹ್ಮದತ್ತನ್’ ಸಿಡಿಲು ಬಡಿದು ದಾರುಣವಾಗಿ ಮೃತಪಟ್ಟಿದೆ. ಎರಟ್ಟುಪೆಟ್ಟಾ ಸಮೀಪದ ಮೇಲಂಪಾರದಲ್ಲಿ ಭಾನುವಾರ ಈ ಘಟನೆ ನಡೆದಿದೆ.
ಕಳೆದ ಒಂದು ತಿಂಗಳಿನಿಂದ ಮಾಲೀಕ ರಾಜೇಶ್ ಪಲ್ಲಟ್ ಅವರ ನಿವಾಸದ ಸಮೀಪದ ತಾತ್ಕಾಲಿಕ ಶೆಡ್‌ನಲ್ಲಿ ಬ್ರಹ್ಮದತ್ತನ್ ವಿಶ್ರಾಂತಿ ಪಡೆಯುತ್ತಿತ್ತು. ಈ ವೇಳೆ ಸಿಡಿಲು ಬಡಿದು ಮೃತಪಟ್ಟಿದೆ ಎನ್ನಲಾಗಿದೆ.
ಸುಮಾರು 28 ವರ್ಷಗಳ ಹಿಂದೆ ಅರುಣಾಚಲ ಪ್ರದೇಶದ ದಟ್ಟ ಕಾಡುಗಳಲ್ಲಿ ಮರದ ಆನೆಯಾಗಿ ಕೆಲಸ ಮಾಡುತ್ತಿದ್ದ ಬ್ರಹ್ಮದತ್ತನ್‌ನ್ನು ಕೊಟ್ಟಾಯಂನ ಪುತುಪ್ಪಳ್ಳಿಯ ಪೋಥನ್ ವರ್ಗೀಸ್ ಹಾಗೂ ಚಾಕೊ ಸಹೋದರರು ಕೇರಳಕ್ಕೆ ಕರೆತಂದಿದ್ದರು. ಆರಂಭದಲ್ಲಿ ‘ಪುತುಪ್ಪಳ್ಳಿ ಬ್ರಹ್ಮದತ್ತನ್’ ಎಂದು ಕರೆಯಲಾಗುತ್ತಿದ್ದ ಆನೆಯನ್ನು 16 ವರ್ಷಗಳ ಹಿಂದೆ ಪಲ್ಲಟ್ ಕುಟುಂಬ ಖರೀದಿಸಿದ ಬಳಿಕ ‘ಪಲ್ಲಟ್ಟು ಬ್ರಹ್ಮದತ್ತನ್’ ಎಂದು ಮರುನಾಮಕರಣ ಮಾಡಲಾಗಿತ್ತು.
10 ಅಡಿ 2 ಇಂಚು ಎತ್ತರ, ಅಗಲವಾದ ಹಣೆ ಹಾಗೂ ಉದ್ದನೆಯ ದಂತಗಳನ್ನು ಹೊಂದಿದ್ದ ಬ್ರಹ್ಮದತ್ತನ್ ಮಧ್ಯ ಕೇರಳದ ಪ್ರಮುಖ ದೇವಾಲಯ ಉತ್ಸವಗಳಲ್ಲಿ ಪ್ರಸಿದ್ಧಿ ಪಡೆದಿತ್ತು. ತ್ರಿಶೂರ್ ಪೂರಂನ ಪರಮೆಕ್ಕಾವು ದೇವಸ್ಥಾನದ ‘ರಾತ್ರಿ ಪೂರಂ’ನಲ್ಲಿ ದೇವರ ವಿಗ್ರಹವನ್ನು ಹೊತ್ತು ಸಾಗುತ್ತಿದ್ದ ಇದು, ಎಟ್ಟುಮನೂರು ಎಝರಪೊನ್ನನ ಹಾಗೂ ವೈಕಥಷ್ಟಮಿ ಉತ್ಸವಗಳ ಪ್ರಮುಖ ಆಕರ್ಷಣೆಯಾಗಿತ್ತು.
ತ್ರಿಶೂರ್ ಪೂರಂ ಬಳಿಕ ಗುರುವಾಯೂರು ದೇವಸ್ಥಾನಕ್ಕೆ ತೆರಳಿ ದೇವರಿಗೆ ಸೊಂಡಿಲೆತ್ತಿ ನಮಸ್ಕರಿಸುತ್ತಿದ್ದ ದೃಶ್ಯವೂ ಭಕ್ತರ ಗಮನ ಸೆಳೆಯುತ್ತಿತ್ತು. ಸಾಮಾಜಿಕ ಜಾಲತಾಣದಲ್ಲೂ ‘ಗಜಕೌಸ್ತುಭಂ ಪಲ್ಲಟ್ಟು ಬ್ರಹ್ಮದತ್ತನ್’ ಹೆಸರಿನ ಇನ್‌ಸ್ಟಾಗ್ರಾಂ ಪುಟದ ಮೂಲಕ ಆನೆಗೆ ಅಪಾರ ಅಭಿಮಾನಿಗಳಿದ್ದರು.
ಮಾವುತನೊಂದಿಗೆ ಅಪರೂಪದ ಬಾಂಧವ್ಯ
ಬ್ರಹ್ಮದತ್ತನ್ ತನ್ನ ದೀರ್ಘಕಾಲದ ಮಾವುತ ದಾಮೋದರನ್ ನಾಯರ್ ಅವರೊಂದಿಗೆ ವಿಶೇಷ ಭಾವನಾತ್ಮಕ ಬಾಂಧವ್ಯ ಹೊಂದಿತ್ತು. ಆರಂಭದಲ್ಲಿ ಮಲಯಾಳಂ ಅರ್ಥವಾಗದಿದ್ದ ಆನೆಗೆ ದಾಮೋದರನ್ ಪ್ರೀತಿಯಿಂದ ಹಿಂದಿ ಭಾಷೆಯ ಮೂಲಕ ತರಬೇತಿ ನೀಡಿದ್ದರು.
ವಡನಪ್ಪಳ್ಳಿ ಗಣೇಶಮಂಗಲಂ ಉತ್ಸವದ ವೇಳೆ ಮತ್ತೊಂದು ಆನೆ ದಾಮೋದರನ್ ನಾಯರ್ ಅವರ ಮೇಲೆ ದಾಳಿ ಮಾಡಲು ಮುಂದಾದಾಗ, ಬ್ರಹ್ಮದತ್ತನ್ ಮಧ್ಯಪ್ರವೇಶಿಸಿ ಆ ಆನೆಯನ್ನು ಓಡಿಸಿ ತನ್ನ ಮಾವುತನನ್ನು ರಕ್ಷಿಸಿತ್ತು ಎನ್ನಲಾಗಿದೆ.
2021ರ ಜೂನ್‌ನಲ್ಲಿ ದಾಮೋದರನ್ ನಾಯರ್ (74) ನಿಧನರಾದಾಗ, ಬ್ರಹ್ಮದತ್ತನ್ ಅವರ ಪಾರ್ಥಿವ ಶರೀರದ ಬಳಿ ಸೊಂಡಿಲೆತ್ತಿ ಅಂತಿಮ ನಮನ ಸಲ್ಲಿಸಿದ್ದ ದೃಶ್ಯ ಭಾರೀ ವೈರಲ್ ಆಗಿತ್ತು. ಈ ಘಟನೆ ಆನೆ ಮತ್ತು ಮಾವುತನ ನಡುವಿನ ಅಪರೂಪದ ಬಾಂಧವ್ಯಕ್ಕೆ ಸಾಕ್ಷಿಯಾಗಿತ್ತು.
ಇದೀಗ ಬ್ರಹ್ಮದತ್ತನ್ ನಿಧನದ ಸುದ್ದಿ ತಿಳಿದು ಸಾವಿರಾರು ಅಭಿಮಾನಿಗಳು ಹಾಗೂ ಸ್ಥಳೀಯರು ಮೇಲಂಪಾರಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸುತ್ತಿದ್ದಾರೆ. ಗಜರಾಜನ ಅಕಾಲಿಕ ನಿಧನಕ್ಕೆ ಕೇರಳದ ದೇವಸ್ವಂ ಮಂಡಳಿ ಹಾಗೂ ಉತ್ಸವ ಪ್ರಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಅತ್ಯಂತ ಶಾಂತ ಸ್ವಭಾವದ ಬ್ರಹ್ಮದತ್ತನ್ ಜೊತೆ ಮಾವುತರು ಸಾಮಾನ್ಯವಾಗಿ ಅಂಕುಶ ಬಳಸುತ್ತಿರಲಿಲ್ಲ. ಜಾತ್ರೆ ಹಾಗೂ ಉತ್ಸವಗಳ ಸಂದರ್ಭಗಳಲ್ಲಿ ಮಾತ್ರ ನೆಪಕ್ಕಾಗಿ ಅಂಕುಶವನ್ನು ಕೈಯಲ್ಲಿ ಹಿಡಿದುಕೊಳ್ಳುತ್ತಿದ್ದರು ಎನ್ನಲಾಗಿದೆ. ಗಾಂಭೀರ್ಯದ ನಡೆ ಹಾಗೂ ಸೌಮ್ಯ ಸ್ವಭಾವದಿಂದ ‘ಗಜರಾಜ’ ಎಂಬ ಹೆಸರಿಗೆ ಅನ್ವರ್ಥವಾಗಿದ್ದ ಬ್ರಹ್ಮದತ್ತನ್‌ನ ದುರಂತ ಅಂತ್ಯ ಆನೆ ಪ್ರಿಯರಲ್ಲಿ ತೀವ್ರ ನೋವು ಮೂಡಿಸಿದೆ.
ಅಂತರ ರಾಜ್ಯ
ID-ಪ್ರತಿಭಟನೆ ವರದಿ ಮಾಡುವ ಪತ್ರಕರ್ತರಿಗೆ ಐಡಿ ಕಡ್ಡಾಯ; ಮಹಿಳಾ ಪತ್ರಕರ್ತರ ಲೈಂಗಿಕ ಕಿರುಕುಳ ಆರೋಪ ಬೆನ್ನಲ್ಲೇ ದಿಲ್ಲಿ ಪೊಲೀಸರ ಹೊಸ ಮಾರ್ಗಸೂಚಿ
ಪ್ರತಿಭಟನೆಗಳು ಹಾಗೂ ಧರಣಿಗಳನ್ನು ವರದಿ ಮಾಡುವ ಪತ್ರಕರ್ತರು ತಮ್ಮ ಸಂಸ್ಥೆ ನೀಡಿರುವ ಮಾನ್ಯ ಗುರುತಿನ ಚೀಟಿ ಮತ್ತು/ಅಥವಾ PIB/DIP ಮಾನ್ಯತಾ ಕಾರ್ಡ್‌ಗಳನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕು. ಅಲ್ಲದೆ, ಗುರುತಿನ ಚೀಟಿಯನ್ನು ಎಲ್ಲ ಸಮಯದಲ್ಲೂ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು ಹಾಗೂ ಪೊಲೀಸ್ ಕಾರ್ಯಾಚರಣೆ ಅಥವಾ ಕಾನೂನು ಜಾರಿ ಸಿಬ್ಬಂದಿಯ ಚಲನವಲನಕ್ಕೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ದಿಲ್ಲಿ ಪೊಲೀಸರು ಮಾರ್ಗಸೂಚಿ ಹೊರಡಿಸಿದ್ದಾರೆ.
ಹೊಸದಿಲ್ಲಿ: ಪ್ರತಿಭಟನೆಗಳು ಹಾಗೂ ಧರಣಿಗಳನ್ನು ವರದಿ ಮಾಡುವ ಪತ್ರಕರ್ತರು ತಮ್ಮ ಸಂಸ್ಥೆ ನೀಡಿರುವ ಮಾನ್ಯ ಗುರುತಿನ ಚೀಟಿ ಮತ್ತು/ಅಥವಾ PIB/DIP ಮಾನ್ಯತಾ ಕಾರ್ಡ್‌ಗಳನ್ನು ಕಡ್ಡಾಯವಾಗಿ ಕೊಂಡೊಯ್ಯಬೇಕು. ಅಲ್ಲದೆ, ಗುರುತಿನ ಚೀಟಿಯನ್ನು ಎಲ್ಲ ಸಮಯದಲ್ಲೂ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸಬೇಕು ಹಾಗೂ ಪೊಲೀಸ್ ಕಾರ್ಯಾಚರಣೆ ಅಥವಾ ಕಾನೂನು ಜಾರಿ ಸಿಬ್ಬಂದಿಯ ಚಲನವಲನಕ್ಕೆ ಅಡ್ಡಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ದಿಲ್ಲಿ ಪೊಲೀಸರು ಮಾರ್ಗಸೂಚಿ ಹೊರಡಿಸಿದ್ದಾರೆ.
ಜಂತರ್ ಮಂತರ್‌ನಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯನ್ನು ವರದಿ ಮಾಡುತ್ತಿದ್ದ ಮಹಿಳಾ ಪತ್ರಕರ್ತರ ಮೇಲೆ ಪೊಲೀಸ್ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿರುವ ಬೆನ್ನಲ್ಲೇ ಈ ಮಾರ್ಗಸೂಚಿ ಪ್ರಕಟಿಸಲಾಗಿದೆ.
‘ಸುದ್ದಿ ಮುಖ್ಯ, ಅದನ್ನು ಹೇಗೆ ಪಡೆಯುತ್ತೀರಿ ಎಂಬುದೂ ಮುಖ್ಯ’ ಎಂಬ ಸಂದೇಶದೊಂದಿಗೆ ದಿಲ್ಲಿ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪತ್ರಕರ್ತರು ಕರ್ತವ್ಯ ನಿರ್ವಹಿಸುವ ವೇಳೆ ಪಾಲಿಸಬೇಕಾದ ನಾಲ್ಕು ಪ್ರಮುಖ ನಿರ್ದೇಶನಗಳನ್ನು ಹಂಚಿಕೊಂಡಿದ್ದಾರೆ.
ಪ್ರತಿಭಟನೆಗಳನ್ನು ವರದಿ ಮಾಡಲು ನಿಯೋಜಿಸಲ್ಪಟ್ಟಿರುವ ಎಲ್ಲ ಪತ್ರಕರ್ತರು ತಮ್ಮ ಸಂಸ್ಥೆಗಳು ನೀಡಿರುವ ಮಾನ್ಯ ಗುರುತಿನ ಚೀಟಿ ಮತ್ತು/ಅಥವಾ ಮಾನ್ಯ PIB/DIP ಮಾನ್ಯತಾ ಕಾರ್ಡ್‌ಗಳನ್ನು ಕೊಂಡೊಯ್ಯಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.
ಸ್ಥಳದಲ್ಲಿರುವ ಕಾನೂನು ಜಾರಿ ಸಿಬ್ಬಂದಿಗೆ ಪತ್ರಕರ್ತರ ಗುರುತು ಸುಲಭವಾಗಿ ತಿಳಿಯುವಂತೆ ಗುರುತಿನ ಚೀಟಿಗಳನ್ನು ಸದಾ ಗೋಚರಿಸುವಂತೆ ಪ್ರದರ್ಶಿಸಬೇಕು ಎಂದು ತಿಳಿಸಿದ್ದಾರೆ.
ಅದೇ ರೀತಿ, ಪತ್ರಕರ್ತರ ಉಪಸ್ಥಿತಿ ಅಥವಾ ಚಟುವಟಿಕೆಗಳು ಪೊಲೀಸ್ ಕಾರ್ಯಾಚರಣೆಗಳಿಗೆ ಹಾಗೂ ಕಾನೂನು ಜಾರಿ ಸಿಬ್ಬಂದಿಯ ಚಲನವಲನಕ್ಕೆ ಯಾವುದೇ ರೀತಿಯಲ್ಲೂ ಅಡ್ಡಿಯಾಗದಂತೆ ನೋಡಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಉದ್ವಿಗ್ನ ಪರಿಸ್ಥಿತಿಗಳಲ್ಲಿ ಘಟನೆಗಳನ್ನು ವರದಿ ಮಾಡುವಾಗ ಹಾಗೂ ದೃಶ್ಯಗಳನ್ನು ದಾಖಲಿಸುವಾಗ ಪತ್ರಕರ್ತರು ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು. ಪ್ರತಿಭಟನಾಕಾರರಿಂದ ತಮ್ಮನ್ನು ಸ್ಪಷ್ಟವಾಗಿ ಪ್ರತ್ಯೇಕಿಸುವ ರೀತಿಯಲ್ಲಿ ಅಂತರ ಕಾಯ್ದುಕೊಂಡು ವರದಿ ಮಾಡಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.
#EthicsofJournalism ಹ್ಯಾಶ್‌ಟ್ಯಾಗ್‌ನೊಂದಿಗೆ ದಿಲ್ಲಿ ಪೊಲೀಸರು ಈ ನಾಲ್ಕು ನಿರ್ದೇಶನಗಳನ್ನು ಪ್ರಕಟಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ವಿರುದ್ಧ ಮೂವರು ಮಹಿಳಾ ಪತ್ರಕರ್ತರಿಂದ ಲೈಂಗಿಕ ಕಿರುಕುಳ ಆರೋಪ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಶನಿವಾರ ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮೂವರು ಮಹಿಳಾ ಪತ್ರಕರ್ತರು ದಿಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಈ ಸಂಬಂಧ ದಿಲ್ಲಿ ಪೊಲೀಸರು ದೂರುಗಳನ್ನು ಸ್ವೀಕರಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಅವುಗಳನ್ನು ಅಪರಾಧ ಶಾಖೆಗೆ ವರ್ಗಾಯಿಸಿದ್ದಾರೆ.
ಅಕ್ಟೋಬರ್ 3ರಂದು ಹೊಸದಿಲ್ಲಿ ಪ್ರದೇಶದಲ್ಲಿ ನಡೆದ ಪ್ರತಿಭಟನೆ ವೇಳೆ ‘ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿ’ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಮೂವರು ಮಹಿಳಾ ಪತ್ರಕರ್ತರು ಪೊಲೀಸ್ ಅಧಿಕಾರಿಗಳ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ ಎಂದು ದಿಲ್ಲಿ ಪೊಲೀಸರು ರವಿವಾರ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದರು.
ಮೂವರು ಮಹಿಳಾ ಪತ್ರಕರ್ತರಿಂದ ಬಂದ ದೂರುಗಳನ್ನು ಹೊಸದಿಲ್ಲಿ ಜಿಲ್ಲೆ ಸ್ವೀಕರಿಸಿದ್ದು, ನ್ಯಾಯಯುತ ಹಾಗೂ ನಿಷ್ಪಕ್ಷಪಾತ ವಿಚಾರಣೆಗಾಗಿ ಅವುಗಳನ್ನು ಅಪರಾಧ ಶಾಖೆಗೆ ವರ್ಗಾಯಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಆರೋಪಗಳ ಬಳಿಕ ಹಲವು ಸ್ವತಂತ್ರ ಪತ್ರಕರ್ತರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ ಹೊರಗೆ ಪ್ರತಿಭಟನೆ ನಡೆಸಿದರು. ಆರೋಪ ಎದುರಿಸುತ್ತಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಅವರು ಒತ್ತಾಯಿಸಿದರು.
-
ದಕ್ಷಿಣ ಕನ್ನಡ14 hours ago
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ
-
Uncategorized20 hours ago
ಬೆಳೆ ವಿಮೆ ಪರಿಹಾರ ಕಡಿತ: ಸರ್ಕಾರದ ಮುಂದೆ ಅರುಣ್ ಪುತ್ತಿಲ ಆಕ್ರೋಶ – ಪ್ರಶ್ನೆಗಳ ಸುರಿಮಳೆ
-
ಸಿನೆಮಾ20 hours agoPrema Da Ooralli-ಅಮ್ಮನ ಮಂಗಳಸೂತ್ರವನ್ನೇ ಗಿರವಿಡಲು ಮುಂದಾಗಿದ್ದ ನಿರ್ದೇಶಕ; ಇಂದು ₹17 ಕೋಟಿಯತ್ತ ಸಿನಿಮಾ! ‘ಪ್ರೇಮದ ಊರಲ್ಲಿ’ ಸೃಷ್ಟಿಸಿದ ಬಾಕ್ಸ್ ಆಫೀಸ್ ಅಚ್ಚರಿ
-
ದಕ್ಷಿಣ ಕನ್ನಡ21 hours ago
ವಿಟ್ಲ :ಬ್ಯಾಂಕ್ ಉದ್ಯೋಗದ ಆಸೆ ತೋರಿಸಿ ಹಣ ವಂಚನೆ: 15 ವರ್ಷಗಳ ಬಳಿಕ ವಾರೆಂಟ್ ಆರೋಪಿ ಬಂಧನ
-
ಅಪರಾಧ20 hours agoMangalore-ಮಂಗಳೂರು: ಜೈಲಿನಲ್ಲೇ ವಾರ್ಡನ್ ಮೇಲೆ ಹಲ್ಲೆ ಪ್ರಕರಣ : ಆರೋಪಿಗೆ 5 ವರ್ಷ ಜೈಲು, 40,000 ರೂ. ದಂಡ
-
ಅಪರಾಧ13 hours agoSomasekhar-ನಕಲಿ ದಾಖಲೆ ಸೃಷ್ಟಿಸಿ ಕೈದಿಯ ಬಿಡುಗಡೆ..! ಪ್ರತಿಯಾಗಿ ಆತನ ಪತ್ನಿಯನ್ನು ಲೈಂಗಿಕವಾಗಿ ಬಳಸಿಕೊಳ್ಳುವ ಒಪ್ಪಂದ ಮಾಡಿಕೊಂಡಿದ್ದ ಡಿಐಜಿ ಎಂ. ಸೋಮಶೇಖರ್
-
ಬಿಗ್ ನ್ಯೂಸ್19 hours agoPuttur-ಪುತ್ತೂರಿನಲ್ಲಿ ಆಸರೆ ಇಲ್ಲದೆ ಭಿಕ್ಷಾಟನೆ ಮಾಡುತ್ತಿದ್ದ 60ರ ವ್ಯಕ್ತಿಗೆ ನೆರವು; ಪಚ್ಚನಾಡಿ ಪುನರ್ವಸತಿ ಕೇಂದ್ರಕ್ಕೆ ದಾಖಲು
-
ಮಂಗಳೂರು20 hours agoPandamburu-ಪಣಂಬೂರು ಬೀಚ್ನಲ್ಲಿ ಹುಲಿವೇಷ ತರಬೇತಿಗೆ ಬಂದಿದ್ದ ಬಾಲಕ ನೀರುಪಾಲು


















