Uncategorized
ಪುತ್ತೂರು ಬಿಜೆಪಿ ಪಾಲಿಟಿಕ್ಸ್ : ಅರುಣ್ vs ಅರುಣ್ : ಶ್ಯಾಮ್ ಎಂಟ್ರಿ, ಪುತ್ತಿಲಗೆ ಗೇಟ್ಪಾಸ್? ಪ್ರಶಿಕ್ಷಣ ಮಹಾಭಿಯಾನದಲ್ಲಿ ಬಿಗ್ ಡೆವಲಪ್ಮೆಂಟ್

ಎರಡು ದಿನಗಳ ಕಾಲ ( ಮೇ 16 ಮತ್ತು 17) ಪುತ್ತೂರಿನಲ್ಲಿ ನಡೆದ ಬಿಜೆಪಿಯ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನದಲ್ಲಿ ಖ್ಯಾತ ನ್ಯಾಯವಾದಿ ಹಾಗೂ ಧಾರ್ಮಿಕ ಮುಖಂಡ ಅರುಣ್ ಶ್ಯಾಮ್ ಅವರ ಉಪಸ್ಥಿತಿ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಗೆ ಇನ್ನೆರಡು ವರ್ಷಗಳಿರುವಾಗಲೇ ಬಿಜೆಪಿಯು ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಈ ಪ್ರಶಿಕ್ಷಣ ಶಿಬಿರದಲ್ಲಿ ಅರುಣ್ ಶ್ಯಾಮ್ ಅವರಿಗೆ ವಿಶೇಷ ಆಹ್ವಾನ ನೀಡಲಾಗಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಅರುಣ್ ಶ್ಯಾಮ್: ಬಿಜೆಪಿಯ ಸಂಭಾವ್ಯ ಅಭ್ಯರ್ಥಿ?
ಸಾಂಪ್ರದಾಯಿಕವಾಗಿ, ಇಂತಹ ವರ್ಗಗಳಲ್ಲಿ ಪಕ್ಷದ ಚೌಕಟ್ಟಿನಲ್ಲಿ ಗುರುತಿಸಿಕೊಂಡವರನ್ನೇ ಗಣ್ಯರಾಗಿ ಆಹ್ವಾನಿಸುವುದು ವಾಡಿಕೆ. ಆದರೆ, ಅರುಣ್ ಶ್ಯಾಮ್ ಅವರು ನೇರವಾಗಿ ಪಕ್ಷದ ಭಾಗವಲ್ಲದಿದ್ದರೂ, ಪಕ್ಷದ ಹಿತೈಷಿಯಾಗಿ ಗುರುತಿಸಿಕೊಂಡಿದ್ದಾರೆ. ಪುತ್ತೂರಿನ ಗಡಿಭಾಗವಾದ ಬಂಟ್ವಾಳ ತಾಲೂಕಿನ ಪದ್ಯಾಣದ ಬ್ರಹ್ಮಕಲಶೋತ್ಸವದ ನೇತೃತ್ವ ವಹಿಸಿದ್ದು, ಇತ್ತೀಚೆಗೆ ಪ್ರಧಾನಿ ಮೋದಿ ಕರ್ನಾಟಕಕ್ಕೆ ಆಗಮಿಸಿದಾಗ ಅವರನ್ನು ಸ್ವಾಗತಿಸುವವರಲ್ಲಿ ಅರುಣ್ ಶ್ಯಾಮ್ ಅವರ ಉಪಸ್ಥಿತಿಯಿದ್ದುದು, ಅವರು ಪುತ್ತೂರು ಬಿಜೆಪಿಯ ಸಂಭಾವ್ಯ ಅಭ್ಯರ್ಥಿ ಎಂಬ ಚರ್ಚೆಯನ್ನು ಹುಟ್ಟುಹಾಕಿತ್ತು. ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಿಂದ ಅರುಣ್ ಶ್ಯಾಮ್ ಅವರಿಗೆ ಟಿಕೆಟ್ ನೀಡಬೇಕೆಂದು ಸಂಘ ಪರಿವಾರದ ಪ್ರಮುಖ ನಾಯಕ ಪ್ರಸಾದ್ ಭಂಡಾರಿ ಬಿಜೆಪಿ ಹೈಕಮಾಂಡ್ಗೆ ಪತ್ರ ಬರೆದಿದ್ದರು ಎನ್ನಲಾಗಿದೆ. ಈ ಬಾರಿಯ ಪ್ರಶಿಕ್ಷಣ ವರ್ಗದಲ್ಲಿ ಅವರು ಒಂದು ಗಂಟೆಯ ಅನೌಪಚಾರಿಕ ಅವಧಿಯನ್ನು ತೆಗೆದುಕೊಂಡಿರುವುದು ಈ ಊಹಾಪೋಹಗಳಿಗೆ ಇನ್ನಷ್ಟು ರೆಕ್ಕೆ ಪುಕ್ಕ ಬಂದಿದೆ.
ನಾವಿಕನಿಲ್ಲದ ದೋಣಿ!
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಅವರಿಂದ ಆದ ಆಘಾತದಿಂದ ಪುತ್ತೂರಿನಲ್ಲಿ ಬಿಜೆಪಿ ಅನಿರೀಕ್ಷಿತವಾಗಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ಜನಸಂಘ ,ಜನಾತ ಪಾರ್ಟಿ ಹಾಗೂ ಬಿಜೆಪಿಯ 60 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಕ್ಷ ತೃತೀಯ ಸ್ಥಾನ ಗಳಿಸಿತು. ಈ ಹೀನಾಯ ಸೋಲಿನಿಂದ ಹೊರಬಂದು ಮತ್ತೆ ವಿಜಯದ ಮೆಟ್ಟಿಲೇರಲು ಪುತ್ತೂರು ಬಿಜೆಪಿ ಹರಸಾಹಸ ಪಡುತ್ತಿದೆ.
ಸಂಘಟನಾತ್ಮಕವಾಗಿ ಪುತ್ತೂರಲ್ಲಿ ಬಿಜೆಪಿ ಇನ್ನೂ ಬಲಿಷ್ಠವಾಗಿದೆ ಎಂಬುದಕ್ಕೆ ವಿದಧಾನ ಸಭೆ ಚುನಾವಣೆಯ ವರ್ಷದ ಬಳಿಕ ನಡೆದ ಲೋಕಸಭಾ ಚುನಾವಣೆಯ ಫಲಿತಾಂಶವೇ ಸಾಕ್ಷಿ. ಕಾಂಗ್ರೆಸ್ ಅಭ್ಯರ್ಥಿಗಿಂತ 30 ಸಾವಿರಕ್ಕೂ ಅಧಿಕ ಮತಗಳ ಮುನ್ನಡೆ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟಾ ಅವರಿಗೆ ಇಲ್ಲಿ ದೊರೆತಿತ್ತು. ಆದರೂ, ವಿಧಾನಸಭಾ ಮಟ್ಟದಲ್ಲಿ ಪಕ್ಷ ನಾವಿಕನಿಲ್ಲದ ದೋಣಿಯಂತಾಗಿದೆ ಎಂಬ ಭಾವನೆ ಕಾರ್ಯಕರ್ತರಲ್ಲಿದೆ.
ಕಳೆದ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಯನ್ನು ಹೈಕಮಾಂಡ್ ನೀಡದ ಕಾರಣ ಕಾರ್ಯಕರ್ತರು ಮತ್ತು ಬೆಂಬಲಿತ ಮತದಾರರು ಪಕ್ಷೇತರ ಅಭ್ಯರ್ಥಿಗೆ ಮತ ಚಲಾಯಿಸಿದ್ದರು. ಹೀಗಾಗಿ, ಚುನಾವಣೆಗೆ ಎರಡು ವರ್ಷ ಬಾಕಿ ಇರುವಾಗಲೇ ಕಾರ್ಯಕರ್ತರು ಅಭ್ಯರ್ಥಿ ಯಾರು ಎಂಬ ಪ್ರಶ್ನೆಯನ್ನು ಮುಖಂಡರ ಮುಂದೆ ಇಡುತ್ತಿದ್ದಾರೆ. ಸಾಮಾನ್ಯವಾಗಿ ಬಿಜೆಪಿ ಚುನಾವಣಾ ಘೋಷಣೆಯಾದ ಬಳಿಕವೇ ಅಭ್ಯರ್ಥಿಗಳನ್ನು ಘೋಷಿಸುತ್ತದೆಯಾದರೂ, ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಕಾರ್ಯಕರ್ತರಿಗೆ ಮೊದಲೇ ಸುಳಿವು ಇರುತ್ತಿತ್ತು. ಕಳೆದ ಬಾರಿ ಈ ಸಂಪ್ರದಾಯ ಮೀರಿದ ಕಾರಣವೇ ಬಿಜೆಪಿಗೆ ಸೋಲಾಗಿತ್ತು ಎಂದು ವಿಶ್ಲೇಷಿಸಲಾಗಿದೆ.
ಹೀಗಾಗಿ, ಅರುಣ್ ಶ್ಯಾಮ್ ಅವರನ್ನು ಅಭ್ಯರ್ಥಿಯಾಗಿ ಕಾರ್ಯಕರ್ತರ ಮಧ್ಯೆ ಪರೋಕ್ಷವಾಗಿ ಬಿಂಬಿಸಲು ಮತ್ತು ಈ “ನಾವಿಕನಿಲ್ಲದ ನಿರ್ವಾತವನ್ನು ತುಂಬಲು” ಜಿಲ್ಲಾ ಬಿಜೆಪಿ ಹೈಕಮಾಂಡ್ ಅವರನ್ನು ಪ್ರಶಿಕ್ಷಣ ವರ್ಗಕ್ಕೆ ಆಹ್ವಾನಿಸಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಡುತ್ತಿದ್ದಾರೆ.
“ಚಿಂತಕರ ಚಾವಡಿ” ನಿರ್ಧಾರ

ಪಕ್ಷದ ಮೂಲಗಳ ಪ್ರಕಾರ, ಅರುಣ್ ಶ್ಯಾಮ್ ಅವರನ್ನು ಆಹ್ವಾನಿಸುವ ನಿರ್ಧಾರವನ್ನು ಜಿಲ್ಲೆಯ ಸಂಘ ಹಾಗೂ ಪಕ್ಷದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ತಂಡವಾದ “ಚಿಂತಕರ ಚಾವಡಿ” ತೆಗೆದುಕೊಂಡಿದೆ. ಇದಕ್ಕೆ ರಾಜ್ಯ ಹೈಕಮಾಂಡ್ನ ಒಪ್ಪಿಗೆಯನ್ನು ಮುಂಚಿತವಾಗಿ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಅರುಣ್ ಪುತ್ತಿಲ ಅವರ ಬಂಡಾಯವನ್ನು ನಿರರ್ಥಕಗೊಳಿಸಲು ಅರುಣ್ ಶ್ಯಾಮ್ ಅವರೇ ಸೂಕ್ತ ಎಂಬ ತೀರ್ಮಾನಕ್ಕೆ ಪಕ್ಷದ ಚಿಂತಕರ ಚಾವಡಿ ಬಂದಿದೆ ಎಂದು ಹೇಳಲಾಗುತ್ತಿದೆ.
ಪುತ್ತಿಲ ಬಂಡಾಯಕ್ಕೆ ಮದ್ದು !
ಅರುಣ್ ಶ್ಯಾಮ್ ಅವರು ಅರುಣ್ ಪುತ್ತಿಲ ಅವರಂತೆಯೇ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಹಲವು ಹಿಂದೂ ಕಾರ್ಯಕರ್ತರು ಮತ್ತು ಪಕ್ಷದ ಕಾರ್ಯಕರ್ತರು ಕಾನೂನು ಸಂಕಷ್ಟಕ್ಕೆ ಒಳಗಾದಾಗ ಅವರ ಪರವಾಗಿ ಹೈಕೋರ್ಟ್ನಲ್ಲಿ ಉಚಿತವಾಗಿ ವಾದ ಮಾಡುವ ಮೂಲಕ ನೆರವಾಗಿದ್ದಾರೆ. ಹಿಂದೂ ಮಠಗಳು ಮತ್ತು ಯತಿಗಳು ಕಾನೂನಿನ ತೊಂದರೆಗೊಳಗಾದಾಗ ಅವರ ಪರವಾಗಿಯೂ ನ್ಯಾಯಾಲಯದಲ್ಲಿ ವಾದ ಮಾಡಿದವರು ಅರುಣ್ ಶ್ಯಾಮ್. ಹೀಗಾಗಿ ಪುತ್ತಿಲರಂತೆ ಅರುಣ್ ಶ್ಯಾಮ್ ಮೇಲೂ ಹಿಂದೂ ಪರ ಸಂಘಟನೆಗಳ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಅತೀವವಾದ ಒಲವಿದೆ. ಅರುಣ್ ಶ್ಯಾಮ್ ಯುವ ನಾಯಕರು ಆಗಿರುವುದು ಹಾಗೂ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಕಾಂಟ್ಯಾಕ್ಟ್ ಗಳನ್ನು ಹೊಂದಿರುವುದು ಅವರಿಗಿರುವ ಇನ್ನೊಂದು ಪ್ಲಸ್. ಕಾರ್ಯಕರ್ತರ ಜತೆ ಇಲ್ಲದಿದ್ದರೂ ಕಾರ್ಯಕರ್ತರಿಗಾಗಿಯೇ ಇರುವವರು ಎಂಬ ಅಭಿಮಾನದ ಮಾತುಗಳು ಶ್ಯಾಮ್ ಬಗ್ಗೆ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ
ಪುತ್ತಿಲರಿಗೆ ಬಹುತೇಕ ಮುಚ್ಚಿದ ಪಕ್ಷದ ಬಾಗಿಲು !!!
ಬಿಜೆಪಿ ಹೈಕಮಾಂಡ್ನ ನಡೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಬಿಜೆಪಿಯಲ್ಲಿ ಅರುಣ್ ಪುತ್ತಿಲ ಅವರಿಗೆ ಪಕ್ಷದ ಬಾಗಿಲು ಬಹುತೇಕ ಮುಚ್ಚಿದಂತೆ ಕಾಣಿಸುತ್ತಿದೆ. ಕಳೆದ ಡಿಸೆಂಬರ್ನಲ್ಲಿ ಪುತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಅರುಣ್ ಪುತ್ತಿಲ ಗೈರು ಹಾಜರಾಗಿದ್ದು, ಅವರಿಗೆ ಪಕ್ಷದೊಳಗೆ ದೊಡ್ಡ ಮಟ್ಟದಲ್ಲಿ ಹಿನ್ನಡೆಯಾದಂತೆ ಕಂಡುಬರುತ್ತಿದೆ. ಈ ಎಲ್ಲಾ ಬೆಳವಣಿಗೆಗಳು ಪುತ್ತೂರು ಬಿಜೆಪಿಯಲ್ಲಿ ಹೊಸ ರಾಜಕೀಯ ಸಮೀಕರಣಗಳಿಗೆ ನಾಂದಿ ಹಾಡಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿಯ ರಾಜಕೀಯ ಬದಲಾವಣೆಗಳು ನಡೆಯಲಿವೆ ಎಂಬುದನ್ನು ಕಾದು ನೋಡಬೇಕಿದೆ.
Uncategorized
ಫುತ್ತೂರು : ಗುತ್ತಿಗೆದಾರರ ಸಹಾಯಕಿಗೆ ಲೈಂಗಿಕ ದೌರ್ಜನ್ಯ, ವಿಡಿಯೋ ಚಿತ್ರೀಕರಣ , ಕಾರು ಹತ್ತಿಸಲು ಯತ್ನ ಆರೋಪ; ಮೆಸ್ಕಾಂ ಸಿಬ್ಬಂದಿ ವಿರುದ್ಧ ಕೇಸ್

ಪುತ್ತೂರು: ವಿದ್ಯುತ್ ಕಾಮಗಾರಿಯ ಪರಿಶೀಲನೆಯ ನೆಪದಲ್ಲಿ ಗುತ್ತಿಗೆದಾರರ ಸಹಾಯಕಿಯನ್ನು ಸ್ವಂತ ಕಾರಿನಲ್ಲಿ ಕರೆದೊಯ್ದ ಮೆಸ್ಕಾಂ ಸಿಬ್ಬಂದಿಯೊಬ್ಬರು, ಮೆಸ್ಕಾಂ ಕ್ವಾಟ್ರಸ್ಗೆ ಬಲವಂತವಾಗಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಮೆಸ್ಕಾಂ ಸಿಬ್ಬಂದಿ ದುರ್ಗಾ ಸಿಂಗ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಪ್ರಕಾರ, ವಿದ್ಯುತ್ ಕಾಮಗಾರಿಯ ಪರಿಶೀಲನೆ ಮುಗಿದ ಬಳಿಕ ಮನೆಗೆ ಕರೆದೊಯ್ಯುವುದಾಗಿ ಹೇಳಿ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮೆಸ್ಕಾಂ ಕ್ವಾಟ್ರಸ್ಗೆ ಕರೆದೊಯ್ದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಕೃತ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ ಎನ್ನಲಾಗಿದೆ. ಮಹಿಳೆ ಬೊಬ್ಬೆ ಹಾಕಿ ಪ್ರತಿರೋಧ ವ್ಯಕ್ತಪಡಿಸಿ ಅಲ್ಲಿಂದ ತಪ್ಪಿಸಿಕೊಂಡು ಹೊರಬಂದಿದ್ದಾರೆ ಎಂದು ದೂರಲಾಗಿದೆ
ಘಟನೆ ಬಳಿಕ ಮೊಬೈಲ್ನಲ್ಲಿ ಚಿತ್ರೀಕರಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಉಂಗುರ ಕದ್ದಿರುವುದಾಗಿ ದೂರು ದಾಖಲಿಸುವುದಾಗಿ ಹೆದರಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜನಸಂಪರ್ಕ ಸಭೆಯಲ್ಲೂ ಪ್ರಸ್ತಾಪವಾಗಿತ್ತು!
ಈ ಪ್ರಕರಣದ ವಿಚಾರ ನ.5ರಂದು ಪುತ್ತೂರಿನಲ್ಲಿ ನಡೆದ ಮೆಸ್ಕಾಂ ಪುತ್ತೂರು ನಗರ ಹಾಗೂ ಗ್ರಾಮಾಂತರ ಉಪವಿಭಾಗದ ಜನಸಂಪರ್ಕ ಸಭೆಯಲ್ಲೂ ಪ್ರಸ್ತಾಪವಾಗಿತ್ತು. ಗುತ್ತಿಗೆದಾರರ ಸಹಾಯಕಿಯೊಬ್ಬರಿಗೆ ದೌರ್ಜನ್ಯ ಎಸಗಿರುವ ಆರೋಪ ಹಾಗೂ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ ಎಂಬ ಗಂಭೀರ ಆಕ್ಷೇಪ ಸಭೆಯಲ್ಲಿ ವ್ಯಕ್ತವಾಗಿತ್ತು. ಆದರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಮರ್ಪಕ ಉತ್ತರ ನೀಡದೆ ಅಧಿಕಾರಿಗಳು ನುಣುಚಿಕೊಂಡಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.
ದೂರು ದಾಖಲಿಸಲು ಹಿಂದೇಟು?
ಸಂತ್ರಸ್ತ ಮಹಿಳೆ ಪ್ರಕರಣ ದಾಖಲಿಸುವ ಉದ್ದೇಶದಿಂದ ಒಂದು ದಿನದ ಹಿಂದೆ ಪೊಲೀಸ್ ಠಾಣೆಗೆ ತೆರಳಿದ್ದರೂ, ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಅವರನ್ನು ಸಂಪರ್ಕಿಸಿದ ಹಿನ್ನೆಲೆಯಲ್ಲಿ, ಅವರ ಸೂಚನೆಯ ಮೇರೆಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ದೇವಸ್ಥಾನದ ಮುಂಭಾಗದಲ್ಲೂ ಬೆದರಿಕೆ ಆರೋಪ
ಸೋಮವಾರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ದುರ್ಗಾ ಸಿಂಗ್ ಅವರು ಸಂತ್ರಸ್ತೆಯನ್ನು ಕಾರಿಗೆ ಹತ್ತಿಸಲು ಯತ್ನಿಸಿದ್ದು, ವೇಗವಾಗಿ ಕಾರು ಚಲಾಯಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವನ್ನೂ ದೂರಿನಲ್ಲಿ ದಾಖಲಿಸಲಾಗಿದೆ.
ಕಾಮಗಾರಿಯ ಪರಿಶೀಲನೆಯ ನೆಪದಲ್ಲಿ ನಡೆದಿದೆಯೆನ್ನಲಾದ ಈ ಘಟನೆ, ಬಳಿಕ ಬೆದರಿಕೆ ಹಾಗೂ ಪ್ರಕರಣ ಮುಚ್ಚಿಹಾಕುವ ಯತ್ನದ ಆರೋಪಗಳೊಂದಿಗೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರಕರಣದ ಕುರಿತು ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.
Uncategorized
Vivekananda-ವಿವೇಕಾನಂದ ವಸತಿನಿಲಯದಲ್ಲಿ ತುಳಸಿಪೂಜೆ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಸಂಸ್ಕಾರಯುತ ಜೀವನದಿಂದ ನಿತ್ಯ ಸಂಭ್ರಮ:ವಿಜಯನಾರಾಯಣ ಕೆ.ಎಂ.
ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಗಳ ವಸತಿನಿಲಯದ ವತಿಯಿಂದ ನಡೆದ ತುಳಸಿಪೂಜೆ ಹಾಗೂ ವಸತಿ ನಿಲಯದ ಪಾಕಶಾಲಾ ಸಿಬ್ಬಂದಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ. ಮಾತನಾಡಿದರು.
ಪುತ್ತೂರು, ನ.21: ಪ್ರತಿಯೊಂದು ಪರ್ವಾಚರಣೆಗಳಿಗೂ ಅವುಗಳದ್ದಾದ ಹಿನ್ನೆಲೆಗಳಿದ್ದು ಹಿರಿಯರು ಅವುಗಳನ್ನು ಅರ್ಥಪೂರ್ಣವಾಗಿ ಆಚರಿಸಿ ನಮ್ಮ ತಲೆಮಾರಿಗೆ ಹಸ್ತಾಂತರಿಸಿದ್ದಾರೆ. ಯುವಕರಿಗೆ ವಿದ್ಯಾಭ್ಯಾಸ ಹಾಗೂ ಉದ್ಯೋಗ ಗಳಿಕೆ ಅತ್ಯಂತ ಮುಖ್ಯ ಹೌದು, ಆದರೆ ಬದುಕನ್ನು ಆ ಚೌಕಟ್ಟಿಗೆ ಮಾತ್ರ ಸೀಮಿತವಾಗಿಸದೇ ಅದರಿಂದಾಚೆಗಿನ ಅನೇಕ ಮೌಲ್ಯಯುತ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ನಾವು ನಮ್ಮ ಹಿರಿಯರ ಜೀವನೋತ್ಸಾಹದಿಂದ ಪ್ರೇರಣೆ ಪಡೆದು ಅನುದಿನದ ಪ್ರತೀಕ್ಷಣವನ್ನು ಹಬ್ಬದಂತೆ ಕಾಣಬೇಕಲ್ಲದೇ ನಮ್ಮ ಉತ್ತಮ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಬೇಕು ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ ನುಡಿದರು.
ಇವರು ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಗಳ ವಸತಿನಿಲಯದ ವತಿಯಿಂದ ನಡೆದ ತುಳಸಿಪೂಜೆ ಹಾಗೂ ವಸತಿ ನಿಲಯದ ಪಾಕಶಾಲಾ ಸಿಬ್ಬಂದಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದೇವಿಚರಣ್ ರೈ, ದೀಪಾವಳಿಗೆ ಬಲಿ ಚಕ್ರವರ್ತಿ ಭೂಮಿಗೆ ಬರುತ್ತಾನೆ ಎನ್ನುವ ಹಿನ್ನೆಲೆಯಿದ್ದು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ನಮ್ಮ ಹಬ್ಬಗಳು ಮತ್ತು ಪಾಲಿಸುವ ಸಂಸ್ಕೃತಿಯಿಂದ ಜೀವನುದ್ದಕ್ಕೂ ನಾವು ಅನೇಕ ವಿಷಯಗಳನ್ನು ಕಲಿಯುತ್ತೇವೆ. ಯುವಕರು ಜೀವನದ ನಿಜಾರ್ಥ ಏನೆಂಬುದನ್ನು ತಿಳಿಯುವ ಮೊದಲೇ ಅನಗತ್ಯ ಯೋಚನೆಗಳನ್ನು ಮೈಗೂಡಿಸಿಕೊಳ್ಳುವುದರ ಬದಲಾಗಿ ವಿದ್ಯಾಭ್ಯಾಸ ಹಾಗೂ ಉನ್ನತ ಸಂಸ್ಕಾರಗಳನ್ನು ಪಡೆದು ಸತ್ಪçಜೆಗಳಾಗಬೇಕು. ಹಬ್ಬದ ಒಳ್ಳೆಯ ವಾತಾವರಣ ಜೀವನದ ಉನ್ನತಿಗೆ ಸ್ಫೂರ್ತಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ವಿವೇಕಾನಂದ ವಸತಿನಿಲಯದ ಅಧ್ಯಕ್ಷ ರಮೇಶ್ ಪ್ರಭು ಪಾಕಶಾಸ್ತ್ರ ಎನ್ನುವುದು ಅತ್ಯುನ್ನತವಾದ ಸೇವೆ. ಬಾಣಸಿಗರು, ನಿಲಯಪಾಲಕರು ಮೊದಲಾದ ಸಿಬ್ಬಂದಿಗಳು ತಮ್ಮ ಸಮರ್ಪಣಾಭಾವದಿಂದ ವಸತಿನಿಲಯದ ವಿದ್ಯಾರ್ಥಿಗಳ ಕ್ಷೇಮಕ್ಕೋಸ್ಕರ ಕೆಲಸ ನಿರ್ವಹಿಸುತ್ತಾರೆ. ಅವರಿಗೆ ಗೌರವ ಸಮರ್ಪಿಸುವ ಕಾರ್ಯ ಶ್ಲಾಘನೀಯವಾದುದು ಎಂದು ತಿಳಿಸಿದರು.
ವಿವೇಕಾನಂದ ವಸತಿನಿಲಯದಲ್ಲಿ ಸೇವೆ ಸಲ್ಲಿಸುವ ಪಾಕಶಾಲಾ, ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮವನ್ನು ವಿವೇಕಾನಂದ ವಸತಿನಿಲಯದ ಆಡಳಿತಾಧಿಕಾರಿ ಗೋವಿಂದ ರಾಜ ಶರ್ಮ ಸ್ವಾಗತಿಸಿ, ಕಾರ್ಯದರ್ಶಿ ಸಚಿನ್ ಶೆಣೈ ವಂದಿಸಿದರು. ವಸತಿನಿಲಯದ ವಿದ್ಯಾರ್ಥಿನಿ ದೀಪಿಕಾ ನಿರೂಪಿಸಿದರು.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿರುವ ವಿವಿಧ ವಸತಿನಿಲಯಗಳಲ್ಲಿ ತುಳಸಿಪೂಜೆ ನೆರವೇರಿತು.
ವಸತಿನಿಲಯದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಿಡಿಮದ್ದು ಪ್ರದರ್ಶನ ಜರುಗಿದವು.
Uncategorized
Philomena-ಫಿಲೋಮಿನಾ ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಾಗಾರ
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವೃತ್ತಿ ಮಾರ್ಗದರ್ಶನ ವಿಭಾಗದ ಆಶ್ರಯದಲ್ಲಿ ನ 20 ರಂದು ಕಾಲೇಜು ಸಭಾಂಗಣದಲ್ಲಿ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು.
ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವೃತ್ತಿ ಮಾರ್ಗದರ್ಶನ ವಿಭಾಗದ ಆಶ್ರಯದಲ್ಲಿ ನ 20 ರಂದು ಕಾಲೇಜು ಸಭಾಂಗಣದಲ್ಲಿ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ವಂದನ ಶಂಕರ್ ಮಾತನಾಡಿ, ಪಿ ಯು ಸಿ ನಂತರದ ಅವಕಾಶಗಳು, ಇಂಜಿನಿಯರಿಂಗ್ ವಿಭಾಗಗಳಲ್ಲಿ ಇರುವ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಚೇತನ್ ಮಾತನಾಡಿ, ಮಾದಕ ವಸ್ತುಗಳು ಹಾಗೂ ದೂಮಪಾನದ ವ್ಯಸನ ನಮ್ಮ ನೆನಪಿನ ಶಕ್ತಿಯನ್ನು ಕುಗ್ಗಿಸುತ್ತದೆ ಮತ್ತು ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಹಾಗೆಯೇ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ನಮ್ಮ ಏಕಾಗ್ರತೆಯನ್ನು ಭಂಗ ಗೊಳಿಸುತ್ತದೆ ಎಂದು ಹೇಳಿದರು.

ವೃತ್ತಿ ಮಾರ್ಗದರ್ಶನ ವಿಭಾಗದ ನಿರ್ದೇಶಕರಾದ ರವಿಪ್ರಸಾದ್ ಬಿ. ಜಿ ನಿರಂಜನ್ ಜಿ. ಯು, ಕವಿತಾ ಕೆ ಹಾಗೂ ಕಾಲೇಜಿನ ಬೋಧಕ /ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
-
ಅಪರಾಧ17 hours agoMangalore-Big Breaking:ಮಂಗಳೂರು: ಕದ್ರಿ ಯುದ್ಧ ಸ್ಮಾರಕದಲ್ಲಿರುವ ಟಿ-55 ಟ್ಯಾಂಕ್ ಮೇಲೆ ಹತ್ತಿ ಯುವಕರ ಹುಚ್ಚಾಟ; ವಿಡಿಯೋ ವೈರಲ್, ಸಾರ್ವಜನಿಕರ ಆಕ್ರೋಶ
-
ಬಿಗ್ ನ್ಯೂಸ್14 hours agoBantwal-ಬಂಟ್ವಾಳ: ತಂದೆ ಗದರಿಸಿದ್ದಕ್ಕೆ ಮನೆ ಬಿಟ್ಟ ಬ್ಯಾಂಕ್ ಉದ್ಯೋಗಿ ಯುವತಿ ನಾಪತ್ತೆ..!
-
ಸ್ಥಳೀಯ14 hours agoBank-ಚಿನ್ನದ ಬೆಲೆ ಕುಸಿತದ ಎಫೆಕ್ಟ್: ಗೋಲ್ಡ್ ಲೋನ್ ಪಡೆದವರಿಗೆ ಬ್ಯಾಂಕ್ಗಳಿಂದ ಶಾಕ್; ಒಡವೆ ಹರಾಜಿನ ಎಚ್ಚರಿಕೆ..!
-
ಮಂಗಳೂರು15 hours agoPugasarum-ಅಡಕೆ, ವೀಳ್ಯದೆಲೆಯ ‘ಪೂಗಸಾರಂ’ನಿಂದ ಕ್ಯಾನ್ಸರ್ ಬೆಳವಣಿಗೆಗೆ ಕಡಿವಾಣ? ಮಂಗಳೂರಿನ ವಿಜ್ಞಾನಿಗಳ ಸಂಶೋಧನೆಯಲ್ಲಿ ಮಹತ್ವದ ಅಂಶ ಪತ್ತೆ..!
-
ನಿಧನ ವಾರ್ತೆ10 hours agoBabu Gowda-ಧರ್ಮಸ್ಥಳ: ದಿ. ಸೌಜನ್ಯ ಅಜ್ಜ ಪಾಂಗಳ ನಿವಾಸಿ ಬಾಬು ಗೌಡ ನಿಧನ
-
ಅಂತರ ರಾಜ್ಯ15 hours agoFIR-ಮದುವೆಯಾಗುವ ಭರವಸೆ ನೀಡಿ ದೈಹಿಕ ಸಂಪರ್ಕ: ಬಿಗ್ ಬಾಸ್ ವಿಜೇತ ಮುತ್ತುಕುಮಾರನ್ ವಿರುದ್ಧ ಇನ್ಫ್ಲುಯೆನ್ಸರ್ ವಹಿದಾ ದೂರು – ಎಫ್ಐಆರ್ ದಾಖಲು..!
-
ಮಂಗಳೂರು16 hours agoMangalore-ಮಂಗಳೂರು: ರಾತ್ರಿ 11:45ರಿಂದ ಬೆಳಗ್ಗೆ 5:30ರವರೆಗೆ ವ್ಯಾಪಾರ ನಿರ್ಬಂಧ; ಪೊಲೀಸ್ ಆಯುಕ್ತರಿಂದ ಹೊಸ ಆದೇಶ
-
ಸ್ಥಳೀಯ15 hours agoSubrahmanya-ಸುಬ್ರಹ್ಮಣ್ಯ: ಮನೆಗೆ ರಾತ್ರಿ ನಕ್ಸಲರ ಭೇಟಿ ಪ್ರಕರಣ: ಮಾಜಿ ನಕ್ಸಲರಾದ ರವೀಂದ್ರ, ಸುಂದರಿ, ದಿಶಾರಿಂದ ಸ್ಥಳ ಮಹಜರು















