Uncategorized
ಧರ್ಮ ಮತ್ತು ಸಂಸ್ಕೃತಿ ಭಾರತದ ಆತ್ಮವಾಗಿದ್ದು, ಇದರ ಮೇಲೆ ದಾಳಿಗಳಾದಾಗಲೆಲ್ಲ ದೇಶ ಜಾಗೃತವಾಗಿದೆ : ಶ್ರೀಕಾಂತ ಶೆಟ್ಟಿ ; 20 ಸಾವಿರ ವಿದ್ಯಾರ್ಥಿಗಳಿಂದ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ರಾಷ್ಟ್ರಭಕ್ತಿಯ ಅಲೆ

ಪುತ್ತೂರು: “ಧರ್ಮ ಮತ್ತು ಸಂಸ್ಕೃತಿ ಭಾರತದ ಆತ್ಮವಾಗಿದ್ದು, ಇದರ ಮೇಲೆ ದಾಳಿಗಳಾದಾಗಲೆಲ್ಲ ದೇಶ ಜಾಗೃತವಾಗಿದೆ. ಇಂದು ಭಾರತೀಯತೆಯ ಪುನರುತ್ತಾನದೊಂದಿಗೆ ದೇಶದ ಅಂತಶಕ್ತಿ ಜಾಗೃತಗೊಳ್ಳುತ್ತಿದ್ದು, ಬದಲಾಗುತ್ತಿರುವ ಪರಂಪರೆಗೆ ನಾವೆಲ್ಲ ಸಾಕ್ಷಿಯಾಗುತ್ತಿದ್ದೇವೆ,” ಎಂದು ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಪ್ರಮುಖ್ ಶ್ರೀಕಾಂತ ಶೆಟ್ಟಿ ಕಾರ್ಕಳ ಹೇಳಿದರು.
ನೆಹರುನಗರದ ವಿವೇಕಾನಂದ ಆವರಣದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ಸೋಮವಾರ ಹಮ್ಮಿಕೊಳ್ಳಲಾಗಿದ್ದ ‘ಯುವ ಜನತೆ ಮತ್ತು ದೇಶಭಕ್ತಿ’ ಪರಿಕಲ್ಪನೆಯ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಭಾರತವು ಜಗತ್ತಿಗೆ ‘ಮೃತ್ಯುಂಜಯ ತತ್ತ್ವ’ವನ್ನು ಪರಿಚಯಿಸಿದೆ. ಸೋಮನಾಥ ಮಂದಿರದ ಪುನರ್ನಿರ್ಮಾಣ ಭಾರತದ ಅಮರಗಾಥೆಗೆ ಸಾಕ್ಷಿ. ರಾಷ್ಟ್ರೀಯ ಸ್ವಯಂಸೇವಕ ಸಂಘವು ನೂರು ವರ್ಷ ಪೂರೈಸುತ್ತಿರುವುದು ಮತ್ತು ‘ವಂದೇ ಮಾತರಂ’ ಗೀತೆ 150 ವರ್ಷಗಳಿಂದ ಮೊಳಗುತ್ತಿರುವುದು ಭಾರತದ ಜೀವಂತಿಕೆಯನ್ನು ಎತ್ತಿ ತೋರಿಸುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಖುದಿರಾಮ್ ಬೋಸ್, ಪ್ರೀತಿಲತಾ ವಡ್ಡೇದಾರ್, ಬಿಪಿನ್ ಚಂದ್ರಪಾಲ್ ಅಂತಹ ಕ್ರಾಂತಿಕಾರಿಗಳಿಗೆ ವಿವೇಕಾನಂದರ ಸಾಹಿತ್ಯವೇ ಸ್ಫೂರ್ತಿಯಾಗಿತ್ತು. ಇಂದು ಸಂಘವು ಯುವಕರನ್ನು ಬಲಿಷ್ಠಗೊಳಿಸುವ ಕೆಲಸ ಮಾಡುತ್ತಿದೆ. ನಾವು ನಮ್ಮತನವನ್ನು ಜಾಗೃತಗೊಳಿಸಿ, ಸಮಾಜವನ್ನು ಗಟ್ಟಿಗೊಳಿಸಬೇಕು ಹಾಗೂ ಬಂಗಾಳದ ಹಿಂದೂಗಳ ಪರವಾಗಿ ನಿಲ್ಲುವ ಕಾರ್ಯವಾಗಬೇಕು ಎಂದು ಅವರು ಕರೆ ನೀಡಿದರು.

ಜಾತಿ ಗಣತಿ ಹೆಸರಿನಲ್ಲಿ ಹಿಂದೂಗಳನ್ನು ಒಡೆಯುವ ಕೆಲಸ: ಡಾ. ಕಲ್ಲಡ್ಕಪ್ರಭಾಕರ ಭಟ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, “ನೈಜ ಪರಂಪರೆಯನ್ನು ಮರೆತು ಆತ್ಮವಿಸೃತಿಯಲ್ಲಿರುವವರಿಗೆ ದಾರಿ ತೋರಿಸಿದವರು ವಿವೇಕಾನಂದರು. ರಕ್ತಪಾತವಿಲ್ಲದೆ ಆಧ್ಯಾತ್ಮಿಕ ಚಿಂತನೆಯ ಮೂಲಕ ಜಗತ್ತನ್ನು ಗೆಲ್ಲಬಹುದು ಎಂದು ತೋರಿಸಿಕೊಟ್ಟ ಮಹಾನ್ ವ್ಯಕ್ತಿ ಅವರು. ನಾವು ಕುರಿ-ನರಿಗಳಂತೆ ಬದುಕದೆ ಸಿಂಹದಂತೆ ಬದುಕಬೇಕು,” ಎಂದರು.
ಮುಂದುವರಿದು ಮಾತನಾಡಿದ ಅವರು, “ಇಂದು ಅಲ್ಪಸಂಖ್ಯಾತರ ಹೆಸರಿನಲ್ಲಿ ಅನ್ಯಾಯ ನಡೆಯುತ್ತಿದೆ. ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಜಾತಿಗಣತಿಯ ಹೆಸರಿನಲ್ಲಿ ಹಿಂದೂ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ. ಬ್ರಿಟಿಷರ ವಿರುದ್ಧ ಹೋರಾಡಲು ವಂದೇ ಮಾತರಂ ಹಾಡಿಗೆ ಭಾವ ತುಂಬಿದ್ದೇ ವಿವೇಕಾನಂದರ ನುಡಿಗಳು. ಎಲ್ಲರಿಗೂ ಒಳ್ಳೆಯದನ್ನು ಬಯಸುವ ಸಂಸ್ಕೃತಿ ನಮ್ಮದು,” ಎಂದು ತಿಳಿಸಿದರು.
20 ಸಾವಿರ ವಿದ್ಯಾರ್ಥಿಗಳಿಂದ ಸಮೂಹ ಗಾಯನ:
ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯ ಪ್ರಯುಕ್ತ ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಗಳ ವಿವಿಧ ವಿಭಾಗದ ಸುಮಾರು 10 ಸಾವಿರ ಹಾಗೂ ಗ್ರಾಮಾಂತರ ಶಾಲೆಗಳ 10 ಸಾವಿರ ಸೇರಿ ಒಟ್ಟು 20 ಸಾವಿರ ವಿದ್ಯಾರ್ಥಿಗಳು ಏಕಕಾಲದಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡಿದರು. ‘ತಾಯಿ ಭಾರತಿಯ ಪಾದ ಪದ್ಮಗಳ ಪೂಜಿಸೋಣ ಬನ್ನಿ’, ‘ಸದ್ವಿಚಾರ ಧಾರೆಯಿಂದ ಚಿಮ್ಮಲಿ ಸ್ಫೂರ್ತಿ’, ‘ದೇಶ ದೇಶ ದೇಶ ನನ್ನದು’, ‘ಹಿಂದುತ್ವದ ಜಯಘೋಷವ ಮೊಳಗಿಸಿ’ ಹಾಗೂ ‘ವಂದೇ ಮಾತರಂ’ ಗೀತೆಗಳು ಮೈದಾನದಲ್ಲಿ ರಾಷ್ಟ್ರಭಕ್ತಿಯ ಅಲೆ ಎಬ್ಬಿಸಿದವು.
ಸಂಘ ಶತಾಬ್ದಿ ಸಾಂಸ್ಕೃತಿಕ ಕಾರ್ಯಕ್ರಮ:
ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ನೂರನೇ ವರ್ಷದ ನೆನಪಿಗಾಗಿ ‘ಸಂಘ ಶತಾಬ್ದಿ’ ಪರಿಕಲ್ಪನೆಯಡಿ ಸಂಘ ನಡೆದು ಬಂದ ಹಾದಿಯನ್ನು ಬಿಂಬಿಸುವ ಒಂದೂವರೆ ಗಂಟೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿವೇಕಾನಂದ ವಿದ್ಯಾರ್ಥಿಗಳು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಸತೀಶ್ ರಾವ್ ವಂದಿಸಿದರು. ಪಾಲಿಟೆಕ್ನಿಕ್ ಉಪನ್ಯಾಸಕಿ ಉಷಾಕಿರಣ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Uncategorized
ಮಂಗಳೂರು : ಸಹಪಾಠಿಯೊಂದಿಗೆ ಜಗಳ: ಬಿಸಿಎ ವಿದ್ಯಾರ್ಥಿಗೆ ಚೂರಿಯಿಂದ ಇರಿತ; ಇಬ್ಬರು ವಶಕ್ಕೆ

ಮಂಗಳೂರು, ಅ.4: ಸಣ್ಣ ವಿಚಾರಕ್ಕೆ ಸಹಪಾಠಿಗಳ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಅಂತಿಮ ವರ್ಷದ ಬಿಸಿಎ ವಿದ್ಯಾರ್ಥಿಯೊಬ್ಬನ ಮೇಲೆ ಸಹಪಾಠಿ ಸೇರಿದಂತೆ ಆರು ಮಂದಿ ಚೂರಿಯಿಂದ ಹಲ್ಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಲ್ಲೆಗೊಳಗಾದ ವಿದ್ಯಾರ್ಥಿಯನ್ನು ಮಹಮ್ಮದ್ ಉನೈಸ್ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಮಂಗಳೂರು ನಗರದ ಸರ್ಕಾರಿ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಅ.3ರಂದು ನಡೆದಿದೆ. ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಸಿಎ ವ್ಯಾಸಂಗ ಮಾಡುತ್ತಿರುವ ಉನೈಸ್ ಅವರು ಬೆಳಿಗ್ಗೆ 11.30ರ ಸುಮಾರಿಗೆ ಕಾಲೇಜಿನ ಸಮೀಪದ ಟರ್ಫ್‌ಗೆ ಕಬಡ್ಡಿ ಆಡಲು ತೆರಳಿದ್ದರು. ಈ ವೇಳೆ ಟರ್ಫ್ ಎದುರಿನ ರಸ್ತೆಯಲ್ಲಿ ಅವರ ಸ್ನೇಹಿತ ಹಾಗೂ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ರಾಯಿಝ್ ಮತ್ತು ಅದೇ ಕಾಲೇಜಿನ ಬಿಕಾಂ ವಿದ್ಯಾರ್ಥಿ, ಕಾಟಿಪಳ್ಳ ನಿವಾಸಿ ರಿಯಾನ್ ನಡುವೆ ಸಣ್ಣ ವಿಚಾರಕ್ಕೆ ಜಗಳ ನಡೆದಿದೆ ಎನ್ನಲಾಗಿದೆ.
ಜಗಳ ಬಿಡಿಸಲು ಉನೈಸ್ ಸೇರಿದಂತೆ ಕೆಲ ವಿದ್ಯಾರ್ಥಿಗಳು ಮಧ್ಯಪ್ರವೇಶಿಸಿದಾಗ ರಿಯಾನ್ ಉನೈಸ್‌ಗೆ ಕೈಯಿಂದ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬಳಿಕ ಉನೈಸ್ ಹಾಗೂ ಇತರ ವಿದ್ಯಾರ್ಥಿಗಳು ಕಾಲೇಜಿಗೆ ವಾಪಸಾಗಿದ್ದರು.
ಮಧ್ಯಾಹ್ನ 1.45ರ ಸುಮಾರಿಗೆ ಉನೈಸ್ ಕಾಲೇಜಿನ ಕ್ಯಾಂಟೀನ್ ಬಳಿ ನಿಂತಿದ್ದಾಗ ರಿಯಾನ್ ಹಾಗೂ ಐವರು ಸಹಚರರು ಎರಡು ದ್ವಿಚಕ್ರ ವಾಹನಗಳಲ್ಲಿ ಅಲ್ಲಿಗೆ ಬಂದಿದ್ದಾರೆ ಎನ್ನಲಾಗಿದೆ. ಆರೋಪಿಗಳು ಉನೈಸ್ ಅವರನ್ನು ಸುತ್ತುವರಿದು ಹಲ್ಲೆ ನಡೆಸಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ಈ ವೇಳೆ ಚೂರಿಯಿಂದ ಉನೈಸ್ ಅವರ ತಲೆ, ಬೆನ್ನು, ಎಡ ಕಿವಿ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಇರಿದು ಗಾಯಗೊಳಿಸಿದ್ದಾರೆ ಎನ್ನಲಾಗಿದೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.
ಗಾಯಗೊಂಡ ಉನೈಸ್ ಅವರನ್ನು ತಕ್ಷಣ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.
Uncategorized
ಸೌಜನ್ಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಕೀಲ ಮೋಹಿತ್ ಕುಮಾರ್ ಗೆ ಮಾತೃ ವಿಯೋಗ

ಪುತ್ತೂರು: ಧರ್ಮಸ್ಥಳದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ನಡೆದ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಹೈಕೋರ್ಟ್ ವಕೀಲ ಮೊಹಿತ್ ಕುಮಾರ್ ಅವರ ತಾಯಿ, ಕೊಳ್ತಿಗೆ ಗ್ರಾಮದ ಕುಂಡಡ್ಕ ನಿವಾಸಿ ಪಾರ್ವತಿ ಕುಂಡಡ್ಕ ಅವರು ಅಲ್ಪಕಾಲದ ಅಸ್ವಸ್ಥತೆಯಿಂದ ಅ.3ರಂದು ಸ್ವಗೃಹದಲ್ಲಿ ನಿಧನರಾದರು.
ಪಾರ್ವತಿ ಅವರು ಚಾರ್ವಕ ಕಪಿಲೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಹಾಗೂ ಪುತ್ತೂರಿನ ಪಶುವೈದ್ಯ ಧರ್ಮಪಾಲ ಕರಂದ್ಲಾಜೆ ಅವರ ಸಹೋದರಿ.
ಮೃತರು ಪುತ್ರರಾದ ತೀರ್ಥಪ್ರಸಾದ್ ಕೆ., ಚಿತ್ರಶೇಖರ್, ಮೋಹಿತ್ ಕುಮಾರ್ ಹಾಗೂ ಚಿರಣ್ ಕುಮಾರ್ ಅವರನ್ನು ಅಗಲಿದ್ದಾರೆ.
ವಕೀಲ ಮೋಹಿತ್ ಕುಮಾರ್ ಅವರು ಸೌಜನ್ಯ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ಪರ ಸಿಬಿಐ ವಿಶೇಷ ನ್ಯಾಯಾಲಯ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಿದ್ದರು. ಸೌಜನ್ಯ ಪ್ರಕರಣದ ನ್ಯಾಯಾಂಗ ಹೋರಾಟದಲ್ಲಿ ಅವರು ಪ್ರಮುಖವಾಗಿ ಗುರುತಿಸಿಕೊಂಡಿದ್ದರು.
ಸೌಜನ್ಯ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ ಸಹಿತ ಹಲವು ನಾಯಕರು ಅಂತಿಮ ನಮನ ಸಲ್ಲಿಸಿದರು.
Uncategorized
Dharmasthala-28ನೇ ವರ್ಷದ ಭಜನಾ ಕಮ್ಮಟದ ಉಪನ್ಯಾಸ ಕಾರ್ಯಕ್ರಮ: ಸಾಮರಸ್ಯದ ಸಂಕೇತವೇ ಈ ಭಜನೆ : ಪ್ರೊ. ಪವನ್ ಕಿರಣಕೆರೆ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಅ.02, ಶುಕ್ರವಾರದಂದು ನಡೆದ 28ನೇ ವರ್ಷದ ಭಜನಾ ಕಮ್ಮಟದ ಐದನೇ ದಿನ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕ ನೆಲೆಯಲ್ಲಿ ಆಸೆಮ್ಸ್ ಶಿಕ್ಷಣ ಸಂಸ್ಥೆ ಕಲ್ಮಾಡಿ, ಉಡುಪಿ ಇಲ್ಲಿನ ಪ್ರಾಂಶುಪಾಲ ಪ್ರೊ. ಪವನ್ ಕಿರಣಕೆರೆ ಮಾತನಾಡಿದರು.

ಧರ್ಮಸ್ಥಳ, ಅ.02 : ಯಾವುದೇ ಮತ ಪಂಥಗಳ ತಾರತಮ್ಯವಿಲ್ಲದೆ ಸಾಮರಸ್ಯದಿಂದ ದೇವರನ್ನು ಸ್ಮರಿಸುವ ಏಕೈಕ ಮಾರ್ಗವೇ ಭಜನೆಯಾಗಿದ್ದು, ಇಡೀ ಸಮಾಜಕ್ಕೆ ಸಾಮರಸ್ಯವನ್ನು ಸಾರುವ ಕಾರ್ಯವನ್ನು ಈ ಭಜನಾ ಕಮ್ಮಟ ಮಾಡುತ್ತಿದೆ ಎಂದು ಪ್ರಸಂಗಕರ್ತರು, ಅರ್ಥಧಾರಿಗಳು ಹಾಗೂ ಆಸೆಮ್ಸ್ ಶಿಕ್ಷಣ ಸಂಸ್ಥೆ ಕಲ್ಮಾಡಿ, ಉಡುಪಿ ಇಲ್ಲಿನ ಪ್ರಾಂಶುಪಾಲ ಪ್ರೊ. ಪವನ್ ಕಿರಣಕೆರೆ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಅ.02, ಶುಕ್ರವಾರದಂದು ನಡೆದ 28ನೇ ವರ್ಷದ ಭಜನಾ ಕಮ್ಮಟದ ಐದನೇ ದಿನ ಶಿಬಿರದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕ ನೆಲೆಯಲ್ಲಿ ಮಾತನಾಡಿದರು.
ಮನುಷ್ಯನ ಮನಸ್ಸಿನಲ್ಲಿರುವ ಅಸೂಯೆ, ಮತ್ಸರಗಳೇ ದುಃಖದ ಮೂಲವಾಗಿದ್ದು, ಅವೆಲ್ಲವನ್ನೂ ಕಳೆಯಲು ಭಜನೆ ಹಾಗೂ ಆಧ್ಯಾತ್ಮದಿಂದ ಮಾತ್ರ ಸಾಧ್ಯ. ಸುಖದಲ್ಲಿ ಹಿಗ್ಗದೆ, ಕಷ್ಟ ಬಂದಾಗ ಕುಗ್ಗದೆ ಎಲ್ಲವನ್ನೂ ಸಮಚಿತ್ತವಾಗಿ ಸ್ವೀಕರಿಸುವ ಮೂಲಕ ಸಾಮರಸ್ಯದ ಬದುಕನ್ನು ಭಜನೆಯಿಂದ ಕಂಡುಕೊಳ್ಳಬಹುದಾಗಿದೆ. ಭಗವಂತನ ದೃಷ್ಟಿಯಲ್ಲಿ ಭಕ್ತಿಗೆ ಪ್ರಾಧಾನ್ಯತೆಯೇ ಹೊರತು ಯಾವುದೇ ಆಡಂಬರದ ಆಚರಣೆಗಳಿಗಲ್ಲ. ಭಗವಂತನನ್ನು ಒಲಿಸಿಕೊಳ್ಳಲು ಶ್ರದ್ಧೆಯೇ ಅತ್ಯಂತ ಉತ್ತಮ ಹಾದಿಯಾಗಿದೆ ಎಂದು ಎಲ್ಲಾ ಶಿಬಿರಾರ್ಥಿಗಳಿಗೆ ಭೋದಿಸಿದರು.
ರಾಜ್ಯಾದ್ಯಂತ ಎಲ್ಲಾ ಭಕ್ತರನ್ನು ಒಗ್ಗೂಡಿಸಿ ಎಲ್ಲರ ಮಾನಸಿಕ ಶುದ್ಧತೆಯನ್ನು ಕಾಪಾಡುವ ಮೂಲಕ ಭಜನಾ ಕಮ್ಮಟವು ಅತಿ ಮುಖ್ಯ ಪಾತ್ರ ವಹಿಸಿದ್ದು, ಈ ಕಮ್ಮಟವನ್ನು ಪರ್ವವಾಗಿಸುವಲ್ಲಿ ಕಾರಣಿಭೂತರಾದ ಹೆಗ್ಗಡೆ ದಂಪತಿಗಳ ಪರಿಶ್ರಮ ಬಲು ದೊಡ್ಡದು ಎಂದು ಶ್ಲಾಘಿಸಿದರು.
-
ಪುತ್ತೂರು21 hours ago
ಮಾಣಿ : ಲೈನ್ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶ: ಪವರ್ಮ್ಯಾನ್ ಮೃತ್ಯು
-
ಬಿಗ್ ನ್ಯೂಸ್23 hours agoNagalakshmi Chowdary-ಬಂಗ್ಲೆಗುಡ್ಡೆ ಏನೂ ಸ್ಮಶಾನ ಅಲ್ಲ : ಅಲ್ಲಿ ಯಾಕೆ ಅಷ್ಟು ಅಸ್ಥಿಪಂಜರಗಳು ಸಿಕ್ಕಿದವು..? ಧರ್ಮಸ್ಥಳ ಎಸ್ಐಟಿಗೆ ಹೆಚ್ಚಿನ ಅಧಿಕಾರ ನೀಡಬೇಕು..! : ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ
-
ಅಪರಾಧ23 hours agoMangalore-ಮಂಗಳೂರು: ಸರಣಿ ಮನೆಕಳ್ಳತನ: ದೆಹಲಿ ಮೂಲದ ಇಬ್ಬರು ಕುಖ್ಯಾತ ಕಳ್ಳರ ಬಂಧನ; ₹18 ಲಕ್ಷ ಮೌಲ್ಯದ ಸೊತ್ತು ವಶ
-
ಶಿಕ್ಷಣ24 hours agoNarendra-ನರೇಂದ್ರ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ
-
Uncategorized2 hours ago
ಸೌಜನ್ಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ವಕೀಲ ಮೋಹಿತ್ ಕುಮಾರ್ ಗೆ ಮಾತೃ ವಿಯೋಗ
-
Uncategorized2 hours ago
ಮಂಗಳೂರು : ಸಹಪಾಠಿಯೊಂದಿಗೆ ಜಗಳ: ಬಿಸಿಎ ವಿದ್ಯಾರ್ಥಿಗೆ ಚೂರಿಯಿಂದ ಇರಿತ; ಇಬ್ಬರು ವಶಕ್ಕೆ


















