Uncategorized
Kepu Koli Anka Police Raid ವಿಟ್ಲ: ಕೇಪು ಕೋಳಿ ಅಂಕಕ್ಕೆ ಮತ್ತೆ ಪೊಲೀಸರ ‘ಬ್ರೇಕ್’; ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್, ರಾಜಕೀಯ ಜಿದ್ದಾಜಿದ್ದಿಗೆ ಸಾಕ್ಷಿಯಾದ ಧಾರ್ಮಿಕ ಆಚರಣೆ
ವಿಟ್ಲದ ಕೇಪು ಉಳ್ಳಾಲ್ತಿ ದೇವಸ್ಥಾನದ ಕಜಂಬು ಉತ್ಸವದ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಪೊಲೀಸರು ದಾಳಿ ನಡೆಸಿದ್ದಾರೆ. ಕಾನೂನು ಉಲ್ಲಂಘನೆ ಆರೋಪದಡಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಸೇರಿದಂತೆ 27 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಕೇಪು ಉಳ್ಳಾಲ್ತಿ (ದುರ್ಗಾಪರಮೇಶ್ವರಿ) ದೇವಸ್ಥಾನದಲ್ಲಿ ಕಜಂಬು ಉತ್ಸವದ ಅಂಗವಾಗಿ ನಡೆಯುತ್ತಿದ್ದ, ಶತಮಾನಗಳ ಇತಿಹಾಸವಿರುವ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಪೊಲೀಸರು ಎರಡನೇ ಬಾರಿ ದಾಳಿ ನಡೆಸಿದ್ದಾರೆ. ಈ ಬೆಳವಣಿಗೆಯು ಈಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಶಾಸಕ ಸೇರಿದಂತೆ 27 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಜಕೀಯ ಪ್ರತಿಷ್ಠೆಯಾದ ಅಂಕದ ಅಖಾಡ
ಶನಿವಾರ (ಮೊದಲ ದಿನ) ಕೋಳಿ ಅಂಕಕ್ಕೆ ಪೊಲೀಸರು ತಡೆಯೊಡ್ಡಿದಾಗ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಖುದ್ದಾಗಿ ಸ್ಥಳಕ್ಕೆ ಆಗಮಿಸಿ, ಮೊಕ್ಕಾಂ ಹೂಡಿ ಅಂಕ ನಡೆಯುವಂತೆ ನೋಡಿಕೊಂಡಿದ್ದರು. ಅಲ್ಲದೆ, ಬಂಧಿತರನ್ನು ಬಿಡಿಸಿ ನ್ಯಾಯಾಲಯದ ವೆಚ್ಚವನ್ನೂ ಭರಿಸುವ ಭರವಸೆ ನೀಡಿದ್ದರು. ಶಾಸಕರ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾನುವಾರ ಬಿಜೆಪಿ ತನ್ನ ಬಲ ಪ್ರದರ್ಶನಕ್ಕಿಳಿದಿದ್ದು, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹಾಗೂ ಮಾಜಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ ಅಂಕಕ್ಕೆ ಬೆಂಬಲ ವ್ಯಕ್ತಪಡಿಸಿತು.
ಖಾಕಿ ಪಡೆ ದಾಳಿ: 27 ಮಂದಿ ವಿರುದ್ಧ ಕೇಸ್
ಬಿಜೆಪಿ ನಾಯಕರು ಸ್ಥಳೀಯರೊಂದಿಗೆ ಚರ್ಚೆ ನಡೆಸಿ, ಇದು ಧಾರ್ಮಿಕ ನಂಬಿಕೆಯ ಭಾಗ ಎಂದು ವಾದಿಸುತ್ತಿದ್ದಂತೆಯೇ ಸ್ಥಳಕ್ಕೆ ಕೆಎಸ್ಆರ್ಪಿ (KSRP) ತುಕಡಿಯೊಂದಿಗೆ ಧಾವಿಸಿದ ವಿಟ್ಲ ಪೊಲೀಸರು ಕಾರ್ಯಾಚರಣೆ ನಡೆಸಿದರು. ಸ್ಥಳದಲ್ಲಿದ್ದ 20 ಹುಂಜಗಳು ಹಾಗೂ ಕತ್ತಿಗಳನ್ನು (ಬಾಳು) ವಶಪಡಿಸಿಕೊಂಡಿದ್ದಾರೆ. ಕಾನೂನುಬಾಹಿರ ಕೃತ್ಯಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಉಜಿರೆಮಾರು, ಪದಾಧಿಕಾರಿಗಳಾದ ಹರಿಪ್ರಸಾದ್ ಯಾದವ್, ಅಶೋಕ್ ಶೆಟ್ಟಿ ವಿಟ್ಲ, ರಾಜೇಶ್ ಬಾಳೆಕಲ್ಲು ಮತ್ತು ಸ್ಥಳದ ಮಾಲೀಕ ಕೇಪು ಮುರಳೀಧರ ರೈ ಸೇರಿದಂತೆ ಒಟ್ಟು 27 ಜನರ ವಿರುದ್ಧ ಬಿಎನ್ಎಸ್ (BNS) ಕಾಯ್ದೆ ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸ್ ದೂರಿನ ಸಾರಾಂಶ:
“ಕೇಪು ಗ್ರಾಮದ ಗದ್ದೆಯಲ್ಲಿ ಹಿಂಸಾತ್ಮಕವಾಗಿ ಕೋಳಿ ಅಂಕ ನಡೆಸಲಾಗುತ್ತಿತ್ತು. ನೆರೆದಿದ್ದ ಜನರಿಗೆ ಕಾನೂನು ತಿಳಿವಳಿಕೆ ನೀಡಿದರೂ ಸಂಜೀವ ಮಠಂದೂರು, ಸತೀಶ್ ಕುಂಪಲ ಮತ್ತಿತರರು ಜನರನ್ನು ಪ್ರಚೋದಿಸಿ ಅಂಕ ಮುಂದುವರಿಸಲು ದುಷ್ಪ್ರೇರಣೆ ನೀಡಿದ್ದಾರೆ” ಎಂದು ಪೊಲೀಸರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬಡವರ ಬಂಧನ ಸರಿಯಲ್ಲ!
ವಿವಿಧ ವಾಹನಗಳಲ್ಲಿ ಕೋಳಿ ಅಂಕ ನಡೆಯುತ್ತಿದ್ದ ಸ್ಥಳಕ್ಕೆ ಪೊಲೀಸರು ಆಗಮಿಸಿದ ವೇಳೆ ಬಿಜೆಪಿ ನಿಯೋಗವು ಅವರ ಜೊತೆ ಮಾತುಕತೆ ನಡೆಸುವ ಪ್ರಯತ್ನ ನಡೆಸಿತ್ತು. ಆದರೆ ಪೊಲೀಸರು ಆ ಬಗ್ಗೆ ಗಮನ ಕೊಡದೆ, ನೇರವಾಗಿ ಸ್ಥಳಕ್ಕೇ ವಾಹನ ನುಗ್ಗಿಸಿದ್ದಾರೆ. ಈ ಸಂದರ್ಭದಲ್ಲಿ ಕೈಗೆ ಸಿಕ್ಕವರನ್ನೆಲ್ಲಾ ಬಸ್ಗೆ ತುಂಬಿಸಿಕೊಂಡಿದ್ದಾರೆ. ಇವರಲ್ಲಿ ಓಡಲಾಗದವರು ಮತ್ತು ಆರೋಗ್ಯ ಸಮಸ್ಯೆ ಇದ್ದವರೂ ಇದ್ದರು. “ಬಡವರನ್ನು ಬಂಧಿಸಿರುವುದು ಸರಿಯಲ್ಲ” ಎಂದು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಠಾಣೆಗೆ ವಿಧಾನ ಪರಿಷತ್ ಸದಸ್ಯರ ಭೇಟಿ: ಬಿಡುಗಡೆ
ಪೊಲೀಸರು ಸುಮಾರು 20 ಮಂದಿಯನ್ನು ವಶಕ್ಕೆ ಪಡೆದ ಸುದ್ದಿ ತಿಳಿಯುತ್ತಿದ್ದಂತೆಯೇ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ವಿಟ್ಲ ಠಾಣೆಗೆ ಧಾವಿಸಿದರು. ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಸ್ಥಳೀಯ ಸಂಪ್ರದಾಯದ ಮಹತ್ವವನ್ನು ವಿವರಿಸಿ ವಶದಲ್ಲಿದ್ದವರನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾದರು.

ನಾಯಕರ ಆಕ್ರೋಶದ ನುಡಿಗಳು:
“ಹಿಂದೂ ಸಮಾಜದ ಸಂಪ್ರದಾಯದ ಮೇಲೆ ಆಘಾತ ಮಾಡುವ ಕೆಲಸವಾಗುತ್ತಿದೆ. ಪೊಲೀಸರು ಯಾರದ್ದೋ ತಾಳಕ್ಕೆ ಕುಣಿಯುತ್ತಿದ್ದಾರೆ. ಇದನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ.”ಸಂಜೀವ ಮಠಂದೂರು, ಮಾಜಿ ಶಾಸಕರು
“ದಕ್ಷಿಣ ಕನ್ನಡದ ಆರಾಧನಾ ಪದ್ಧತಿಯ ಮೇಲೆ ಕಾಂಗ್ರೆಸ್ ಸರ್ಕಾರ ಸವಾರಿ ಮಾಡುತ್ತಿದೆ. ಜೂಜಿನ ಮೇಲೆ ಕ್ರಮ ಕೈಗೊಳ್ಳಲಿ, ಆದರೆ ಭಕ್ತರ ಹರಕೆ ರೂಪದ ಸಂಪ್ರದಾಯ ತಡೆಯುವುದು ಸರಿಯಲ್ಲ.” ಸತೀಶ್ ಕುಂಪಲ, ಬಿಜೆಪಿ ಜಿಲ್ಲಾಧ್ಯಕ್ಷ
“ಇದು ಕೇವಲ ಕ್ರೀಡೆಯಲ್ಲ, ದೈವದ ಸನ್ನಿಧಿಯಲ್ಲಿ ನಡೆಯುವ ಪವಿತ್ರ ಆಚರಣೆ. ಇದನ್ನು ಕಾನೂನುಬಾಹಿರ ಎನ್ನುವುದು ಭಕ್ತರ ಶ್ರದ್ಧೆಗೆ ಮಾಡಿದ ಅವಮಾನ.” ಕಿಶೋರ್ ಕುಮಾರ್, ವಿಧಾನ ಪರಿಷತ್ ಸದಸ್ಯ
ಒಟ್ಟಾರೆಯಾಗಿ, ಕೇಪುವಿನ ಕೋಳಿ ಅಂಕವು ಧಾರ್ಮಿಕ ಆಚರಣೆಗಿಂತ ಹೆಚ್ಚಾಗಿ ರಾಜಕೀಯ ಪಕ್ಷಗಳ ‘ಕ್ರೆಡಿಟ್ ವಾರ್’ಗೆ ವೇದಿಕೆಯಾಗಿದೆ. ಒಂದೆಡೆ ಶಾಸಕ ಅಶೋಕ್ ರೈ ಅವರ ನಡೆಗೆ ಪ್ರತಿಯಾಗಿ ಬಿಜೆಪಿ ತನ್ನ ಅಸ್ತಿತ್ವ ಪ್ರದರ್ಶಿಸಲು ಮುಂದಾಗಿದ್ದರೆ, ಇನ್ನೊಂದೆಡೆ ಕಾನೂನು ಪಾಲನೆಯ ಹೆಸರಿನಲ್ಲಿ ಪೊಲೀಸರು ದಾಖಲಿಸಿರುವ ಎಫ್ಐಆರ್ ಜಿಲ್ಲೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
Uncategorized
ಹಿರಿಯ ಸಹಕಾರಿ ಧುರೀಣ ಕೆ.ಕೆ. ನಾರಾಯಣ ಚಳ್ಳಂಗಾರು ನಿಧನ

ಕಲ್ಮಡ್ಕ: ತಾಲೂಕಿನ ಹಿರಿಯ ಸಹಕಾರಿ ಧುರೀಣ, ಸಾಮಾಜಿಕ ಮುಖಂಡ, ಬಹುಮುಖ ಚಿಂತಕ ಕಲ್ಮಡ್ಕ ಗ್ರಾಮದ ಚಳ್ಳಂಗಾರು ಕೆ.ಕೆ. ನಾರಾಯಣ (88) ಅವರು ವಯೋಸಹಜ ಅನಾರೋಗ್ಯದಿಂದ ಗುರುವಾರ ಸಂಜೆ ನಿಧನರಾದರು.
ಮಂಡಲ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ತಮ್ಮ ಅವಧಿಯಲ್ಲಿ ಗ್ರಾಮದಲ್ಲಿ ಅಭಿವೃದ್ಧಿಯ ಹೊಸ ಶಕೆಗೆ ನಾಂದಿ ಹಾಡಿದ್ದರು. ಕಲ್ಮಡ್ಕ ಸಹಕಾರಿ ಸಂಘದ ನಿರ್ದೇಶಕರಾಗಿ ಸಂಸ್ಥೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದ ಅವರು, ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದರು. ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು.
ಕಲ್ಮಡ್ಕ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ವಿಶೇಷ ಶ್ರಮ ವಹಿಸಿದ್ದ ಅವರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಅರ್ಥಧಾರಿಯಾಗಿ ಕಲಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದ ನಾರಾಯಣ ಅವರು, ಸಂಗಮ ಕಲಾ ಸಂಘದ ನಿರ್ದೇಶಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಉತ್ತಮ ಓದುಗ ಹಾಗೂ ವಿಮರ್ಶಕರಾಗಿದ್ದ ಅವರು ಸಾಹಿತ್ಯ, ಕಲೆ, ಸಹಕಾರ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಮೃತರು ಪತ್ನಿ ಸುಬ್ಬಮ್ಮ, ಪುತ್ರಿಯರಾದ ವಿದ್ಯಾ, ಜಯಶ್ರೀ, ದೀಪಿಕಾ, ಪುತ್ರ, ಕ್ಯಾಂಪ್ಕೋ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ನ್ಯಾಯವಾದಿ ಮುರಳಿಕೃಷ್ಣ ಚಳ್ಳಂಗಾರು, ಸೊಸೆ ರಮ್ಯಾ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Uncategorized
ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನ- ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಭಿಯಾನಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಚಾಲನೆ

ಪುತ್ತೂರು: ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಏಕತೆಯ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪುತ್ತೂರು ತಾಲೂಕಿನ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ 29ರವರೆಗೆ ನಡೆಯಲಿರುವ ಪಂಚಮುಖಿ ಆಂಜನೇಯ ಹವನದ ಪ್ರಚಾರಾರ್ಥ ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಭಿಯಾನಕ್ಕೆ ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ಚಾಲನೆ ನೀಡಿದರು.
ನ.19ರಂದು ಪುತ್ತೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ವೀರಾಂಜನೇಯ ಕ್ಷೇತ್ರದಲ್ಲಿ ನಡೆಯುವ ಪಂಚಮುಖಿ ಆಂಜನೇಯ ಹವನದ ಸ್ಟಿಕ್ಕರ್ ಅನ್ನು ಆಟೋ ರಿಕ್ಷಾಗಳಿಗೆ ಅಂಟಿಸುವ ಮೂಲಕ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಯಶಸ್ಸು ಕೋರಿದರು.
ಆಟೋ ರಿಕ್ಷಾಗಳ ಎದುರಿನ ಮತ್ತು ಹಿಂಬದಿಯ ಭಾಗಕ್ಕೆ ತಾವೆ ಸ್ವತಃ ಸ್ಟಿಕ್ಕರ್ ಅಂಟಿಸಿ ಎಲ್ಲರೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಪಂಚಮುಖಿ ಆಂಜನೇಯ ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳಿಕೃಷ್ಣ ಹಸಂತಡ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಧಾನ ಕಾರ್ಯದರ್ಶಿ ಸುನಿಲ್ ದಡ್ಡು, ಯಾಗ ಸಮಿತಿಯ ಪ್ರಮುಖರಾದ ಶ್ಯಾಮ ಸುದರ್ಶನ್ ಹೊಸಮೂಲೆ, ಜಯಂತ ಶೆಟ್ಟಿ ಕಂಬಳತ್ತಡ್ಕ, ಶ್ರೀಧರ್ ತೆಂಕಿಲ ಸಹಿತ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರು ಉಪಸ್ಥಿತರಿದ್ದರು.
Uncategorized
Puttur-ಪುತ್ತೂರು: ಕೃಷ್ಣನಗರದಲ್ಲಿ ಮನೆ ಕಳ್ಳತನ- 2.19 ಲಕ್ಷ ರೂ. ಮೌಲ್ಯದ ಸೊತ್ತು ಕಳವು
ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತರಾಗಿ ಊರಿಗೆ ತೆರಳಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಕಳ್ಳರು ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಹಣ ಕಳವು ಮಾಡಿರುವ ಘಟನೆ ಪುತ್ತೂರು ತಾಲೂಕಿನ ಚಿಕ್ಕಮುಡೂರು ಗ್ರಾಮದ ಕೃಷ್ಣನಗರದಲ್ಲಿ ನಡೆದಿದೆ.
ಪುತ್ತೂರು: ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತರಾಗಿ ಊರಿಗೆ ತೆರಳಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಕಳ್ಳರು ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಹಣ ಕಳವು ಮಾಡಿರುವ ಘಟನೆ ಪುತ್ತೂರು ತಾಲೂಕಿನ ಚಿಕ್ಕಮುಡೂರು ಗ್ರಾಮದ ಕೃಷ್ಣನಗರದಲ್ಲಿ ನಡೆದಿದೆ.
ಕೃಷ್ಣನಗರದಲ್ಲಿ ಉದಯ ಕುಮಾರ್ ಅವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಹಿರೇಬಂಡಾಡಿ ಮೂಲದ ಯತೀಶ್ ಅವರು ಕುಟುಂಬ ಸಮೇತರಾಗಿ ವಾಸವಾಗಿದ್ದಾರೆ. ಸಹೋದರ ತಿಲಕ್ ಅವರ ಮದುವೆ ಕಾರ್ಯಕ್ರಮದ ನಿಮಿತ್ತ ನ.12ರಂದು ರಾತ್ರಿ ಮನೆಗೆ ಬೀಗ ಹಾಕಿ ಕುಟುಂಬದೊಂದಿಗೆ ಹಿರೇಬಂಡಾಡಿ ಗ್ರಾಮದ ಕೆಮ್ಮಾರದಲ್ಲಿರುವ ತಮ್ಮ ಮನೆಗೆ ತೆರಳಿದ್ದರು.
ಮದುವೆ ಕಾರ್ಯಕ್ರಮ ಮುಗಿಸಿ, ನ.16ರಂದು ರಾತ್ರಿ ನಡೆಯಲಿದ್ದ ಔತಣಕೂಟಕ್ಕೆ ತೆರಳುವ ಮೊದಲು ಮಗುವಿನ ಬಟ್ಟೆ ಹಾಗೂ ಇತರ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಲು ಸಂಜೆ ವೇಳೆ ಬಾಡಿಗೆ ಮನೆಗೆ ಬಂದಾಗ ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದಿರುವುದು ಗಮನಕ್ಕೆ ಬಂದಿದೆ.
ತಕ್ಷಣ ಮನೆಯೊಳಗೆ ತೆರಳಿ ಪರಿಶೀಲಿಸಿದಾಗ ಎರಡು ಕಬ್ಬಿಣದ ಕಪಾಟುಗಳ ಬಾಗಿಲುಗಳನ್ನು ಯಾವುದೋ ಸಾಧನದಿಂದ ಮೀಟಿ ತೆರೆಯಲಾಗಿತ್ತು. ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣ ಕಳವಾಗಿರುವುದು ಬೆಳಕಿಗೆ ಬಂದಿದೆ.
ಕಳ್ಳರು ಮೂರು ಜೊತೆ ಚಿನ್ನದ ಬೆಂಡೋಲೆ (12 ಗ್ರಾಂ), ಒಂದು ಮೂಗುತಿ (1 ಗ್ರಾಂ), ಮಗುವಿನ ಎರಡು ಜೊತೆ ಕಿವಿಯೋಲೆಗಳು (ಒಟ್ಟು 5 ಗ್ರಾಂ), ಎರಡು ಮಗುವಿನ ಬಳೆಗಳು (4 ಗ್ರಾಂ), 40 ಸಾವಿರ ರೂ. ಮೌಲ್ಯದ ಡೈಮಂಡ್ ಪೆಂಡೆಂಟ್ ಹಾಗೂ 3 ಸಾವಿರ ರೂ. ನಗದು ಹಣವನ್ನು ಕಳವು ಮಾಡಿದ್ದಾರೆ.
ಕಳವಾದ ಚಿನ್ನಾಭರಣಗಳ ಒಟ್ಟು ತೂಕ ಸುಮಾರು 22 ಗ್ರಾಂ ಆಗಿದ್ದು, ನಗದು ಹಣ ಹಾಗೂ ಡೈಮಂಡ್ ಪೆಂಡೆಂಟ್ ಸೇರಿದಂತೆ ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 2.19 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
ಶಿಕ್ಷಣ15 hours agoVivekananda-ವಿವೇಕಾನಂದ ಪಾಲಿಟೆಕ್ನಿಕ್ – ನೂತನ ಆಡಳಿತ ಮಂಡಳಿಯ ರಚನೆ : ಅಧ್ಯಕ್ಷರಾಗಿ ಕೃಷ್ಣಕುಮಾರ್ ಅತ್ರಿಜಾಲು, ಸಂಚಾಲಕರಾಗಿ ನರಸಿಂಹ ಪೈ
-
ಅಪರಾಧ9 hours agoMangalore-ಕಣಚೂರು ಮೆಡಿಕಲ್ ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿ ಅಪಹರಣ..! ಹಿಂದೂ ಯುವಕ ಲವ್ ಆರೋಪ – ವಿಡಿಯೋ ವೈರಲ್ : ತನಿಖೆಗೆ ಕಮಿಷನರ್ ಸೂಚನೆ
-
ಚಿನ್ನ-ಬೆಳ್ಳಿ ದರ14 hours agoGold Rate Today-ಆಭರಣಪ್ರಿಯರಿಗೆ ಗುಡ್ನ್ಯೂಸ್: ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ: 12 ಸಾವಿರ ರೂ. ಗಡಿಯೊಳಗೆ ಬಂದ ಆಭರಣ ಚಿನ್ನ..!
-
ರಾಜಕೀಯ8 hours agoBJP leaders-ಗಡಿಪಾರಿಗೊಳಗಾದ ನರಸಿಂಹ ಮಾಣಿ ಮನೆಗೆ ಬಿಜೆಪಿ ಮುಖಂಡರ ಭೇಟಿ; ಕುಟುಂಬಕ್ಕೆ ಆತ್ಮಸ್ಥೈರ್ಯ
-
ಸಿನೆಮಾ13 hours agoArjun Sarja-ಪುತ್ರಿ ಐಶ್ವರ್ಯಾ ವಿರುದ್ಧ ಅವಹೇಳನಕಾರಿ ವರದಿ: ಮಾಧ್ಯಮಗಳ ವಿರುದ್ಧ ಸಿಡಿದೆದ್ದ ಅರ್ಜುನ್ ಸರ್ಜಾ; ಅಧಿಕೃತ ದೂರು ದಾಖಲು
-
ಸ್ಥಳೀಯ14 hours agoBaindoor-ರೈಲಿನಲ್ಲಿ ಮೊಬೈಲ್ ಕಳವು, UPI ಮೂಲಕ ಹಣ ವರ್ಗಾವಣೆ: ಬೈಂದೂರು ಪೊಲೀಸರಿಂದ ಕುಖ್ಯಾತ ಆರೋಪಿ ಬಂಧನ
-
ಅಪರಾಧ14 hours agoManipal police-ಪಟಾಕಿ ಪ್ರಕರಣ: ಮಣಿಪಾಲ ಪೊಲೀಸರ ವಿರುದ್ಧ ದೌರ್ಜನ್ಯ ಆರೋಪ: ಸಿಎಂಗೆ ಇ-ಮೇಲ್ ಮಾಡಿದ ವಿದ್ಯಾರ್ಥಿಗಳು
-
ಅಪರಾಧ14 hours agoMangalore-ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ: ಮತ್ತೊಂದು ಪೋಕ್ಸೋ ಪ್ರಕರಣದಲ್ಲಿ ಧರ್ಮಗುರು ಮರುಬಂಧನ















