ಸ್ಥಳೀಯ
Dharmasthala-BIG Breaking: SIT ನ್ಯಾಯಾಲಯಕ್ಕೆ ನೀಡಿದ ವರದಿಯಲ್ಲಿ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ರೂಪಿಸಿರುವುದು ಸ್ಪಷ್ಟಗೊಂಡಿದೆ : ತಕ್ಷಣ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು : ಶ್ರೀಕ್ಷೇತ್ರ ಧರ್ಮಸ್ಥಳ
ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರಗಳ ಕುರಿತು ಗಂಭೀರ ಆರೋಪಗಳು ಕೇಳಿಬಂದಿದ್ದು, ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶ್ರೀಕ್ಷೇತ್ರ ಧರ್ಮಸ್ಥಳ ಆಗ್ರಹಿಸಿದೆ. ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ರಚಿಸಲಾದ ವಿಶೇಷ ತನಿಖಾ ತಂಡ (SIT) ನ್ಯಾಯಾಲಯಕ್ಕೆ ಪ್ರಾಥಮಿಕ ತನಿಖಾ ಮಾಹಿತಿಯನ್ನು ಸಲ್ಲಿಸಿದೆ. ಈ ಮಾಹಿತಿ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ರೂಪಿಸಿರುವುದನ್ನು ಸ್ಪಷ್ಟಪಡಿಸಿದೆ ಎಂದು ಧರ್ಮಾಧಿಕಾರಿಗಳ ಕಚೇರಿಯ ವಕ್ತಾರರಾದ ಕೆ. ಪಾಶ್ವನಾಥ್ ಜೈನ್ ಹೇಳಿದ್ದಾರೆ.
ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ಷಡ್ಯಂತ್ರಗಳ ಕುರಿತು ಗಂಭೀರ ಆರೋಪಗಳು ಕೇಳಿಬಂದಿದ್ದು, ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶ್ರೀಕ್ಷೇತ್ರ ಧರ್ಮಸ್ಥಳ ಆಗ್ರಹಿಸಿದೆ. ಇತ್ತೀಚೆಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಪ್ರಕಾರ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ರಚಿಸಲಾದ ವಿಶೇಷ ತನಿಖಾ ತಂಡ (SIT) ನ್ಯಾಯಾಲಯಕ್ಕೆ ಪ್ರಾಥಮಿಕ ತನಿಖಾ ಮಾಹಿತಿಯನ್ನು ಸಲ್ಲಿಸಿದೆ. ಈ ಮಾಹಿತಿ ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ರೂಪಿಸಿರುವುದನ್ನು ಸ್ಪಷ್ಟಪಡಿಸಿದೆ ಎಂದು ಧರ್ಮಾಧಿಕಾರಿಗಳ ಕಚೇರಿಯ ವಕ್ತಾರರಾದ ಕೆ. ಪಾಶ್ವನಾಥ್ ಜೈನ್ ಹೇಳಿದ್ದಾರೆ.
ವ್ಯವಸ್ಥಿತ ಷಡ್ಯಂತ್ರದ ಆರೋಪ:
“ಧಾರ್ಮಿಕ ಶ್ರದ್ಧಾಕೇಂದ್ರಗಳ ಮೇಲಿನ ವ್ಯವಸ್ಥಿತ ಷಡ್ಯಂತ್ರಗಳು ಮೇಲಿಂದ ಮೇಲೆ ನಡೆಯುತ್ತಾ ಬಂದಿದೆ ಎನ್ನುವುದಕ್ಕೆ ಇದೂ ಕೂಡ ಒಂದು ಉದಾಹರಣೆಯೇ” ಎಂದು ಕೆ. ಪಾಶ್ವನಾಥ್ ಜೈನ್ ಆತಂಕ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಮಧ್ಯಪ್ರವೇಶಕ್ಕೆ ಆಗ್ರಹ:
ಇದೇ ರೀತಿಯ ಷಡ್ಯಂತ್ರಗಳು ಭವಿಷ್ಯದಲ್ಲಿ ಯಾವುದೇ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ನಡೆಯದಂತೆ ತಡೆಯಲು ಸರ್ಕಾರ ಈ ವಿಚಾರದಲ್ಲಿ ಗಂಭೀರ ಗಮನ ಹರಿಸಬೇಕೆಂದು ಅವರು ವಿನಂತಿಸಿದ್ದಾರೆ. ಅಲ್ಲದೆ, ಈ ಷಡ್ಯಂತ್ರದ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಿ, ಅವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಬೇಕೆಂದು ಧರ್ಮಸ್ಥಳದ ವಕ್ತಾರರು ಒತ್ತಾಯಿಸಿದ್ದಾರೆ.
ಹಿನ್ನೆಲೆ:
ಶ್ರೀ ಕ್ಷೇತ್ರ ಧರ್ಮಸ್ಥಳವು ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿದ್ದು, ಲಕ್ಷಾಂತರ ಭಕ್ತರನ್ನು ಹೊಂದಿದೆ. ಮುಸುಕುಧಾರಿ ವ್ಯಕ್ತಿಯೊಬ್ಬ ಮಾನವನ ಬುರುಡೆಯೊಂದಿಗೆ ಬೆಳ್ತಂಗಡಿಯ ನ್ಯಾಯಾಲಯಕ್ಕೆ ಆಗಮಿಸಿ ಶ್ರೀಕ್ಷೇತ್ರದ ಆಡಳಿತ ಮಂಡಲಿಯ ವಿರುದ್ಧ ಹಲವು ಗುರುತರ ಆರೋಪಗಳನ್ನು ಮಾಡಿದ್ದ. ಈ ಬೆಳವಣಿಗೆಗಳು ರಾಜ್ಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.
ಈ ಹಿನ್ನಲೆಯಲ್ಲಿ ರಾಜ್ಯ ಸರಕಾರ ಈ ಪ್ರಕರಣಗಳ ತನಿಖೆಗೆ ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೋಹಾಂತಿಯವರ ನೇತ್ರತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿತ್ತು.
ದೂರುದಾರ ತೋರಿಸಿದ 17ಕ್ಕೂ ಹೆಚ್ಚು ಸ್ಥಳಗಳಲ್ಲಿ ಉತ್ಖನನ ನಡೆಸಿ ತನಿಖೆ ನಡೆಸಿದ ಎಸ್ ಐಟಿಯು ದೂರುದಾರನ ಆರೋಪದಲ್ಲಿ ಹುರುಳಿಲ್ಲ ಎಂಬ ತೀರ್ಮಾನಕ್ಕೆ ಬಂದು ಆತನನ್ನು ಬಂಧಿಸಿತ್ತು. ಆರೋಪಿಯು ನೀಡಿದ ದೂರಿನ ಹಿಂದೆ ಕೆಲವೊಂದು ವ್ಯಕ್ತಿಗಳ ಷಡ್ಯಂತ್ರವಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿರುವುದಾಗಿ ಹಲವು ಮಾದ್ಯಮಗಳು ವರದಿ ಮಾಡಿದ್ದು, ಈ ಕುರಿತು ಎಸ್ ಐಟಿಯು ಸರಕಾರಕ್ಕೆ ವರದಿ ನೀಡಿರುವುದಾಗಿ ಅದು ತಿಳಿಸಿದೆ . ಇದರ ಬೆನ್ನಲೇ ಶ್ರೀಕ್ಷೇತ್ರವು ಮಾದ್ಯಮ ಹೇಳಿಕೆ ಬಿಡುಗಡೆ ಮಾಡಿದೆ
ಬಿಗ್ ನ್ಯೂಸ್
Bail rejected-ಸಿದ್ದರಾಮಯ್ಯ ವಿರುದ್ಧದ ‘ಸ್ಟಿಂಗ್’ ಪ್ರಕರಣ: ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿ 6 ಮಂದಿಯ ಜಾಮೀನು ಅರ್ಜಿ ವಜಾ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ವಿಡಿಯೋ ಚಿತ್ರೀಕರಣ ಹಾಗೂ ಅದನ್ನು ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿದಂತೆ ಆರು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಇದರಿಂದ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಾದ ಪರಿಸ್ಥಿತಿ ಎದುರಾಗಿದೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ವಿಡಿಯೋ ಚಿತ್ರೀಕರಣ ಹಾಗೂ ಅದನ್ನು ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿದಂತೆ ಆರು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ. ಇದರಿಂದ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಾದ ಪರಿಸ್ಥಿತಿ ಎದುರಾಗಿದೆ.
ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್ ನಡೆಸಲಾಗಿದೆ ಎಂದು ಹೇಳಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ವಿಡಿಯೋ ಕುರಿತು ಸಿದ್ದರಾಮಯ್ಯ ಅವರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇಂದ್ರ ಅಪರಾಧ ವಿಭಾಗ (CCB) ಪೊಲೀಸರು ತನಿಖೆ ಕೈಗೊಂಡಿದ್ದರು.
ಪ್ರಕರಣದ ತನಿಖೆಯ ಭಾಗವಾಗಿ ಪವರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಶೆಟ್ಟಿ, ಕಾಂಗ್ರೆಸ್ನಿಂದ ಉಚ್ಚಾಟಿತರಾಗಿರುವ ಕೃಪಾ ಆಳ್ವಾ, ಪ್ರಜ್ವಲ್ ಪ್ರಸಾದ್, ಚಂದನ್ ಎಚ್.ಎಸ್., ಕೆ.ವಿ. ಪ್ರಶಾಂತ್ ಕುಮಾರ್ ಹಾಗೂ ವಿನೋದ್ ಕುಮಾರ್ ಅವರಿಗೆ ಸಿಸಿಬಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಆರು ಮಂದಿ ಆರೋಪಿಗಳು ಬಂಧನದ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿಗಳ ವಿಚಾರಣೆ ನಡೆಯುವವರೆಗೆ ನ್ಯಾಯಾಲಯ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು.
ಆದರೆ, ನವೆಂಬರ್ 20ರಂದು ವಿಚಾರಣೆ ಪೂರ್ಣಗೊಳಿಸಿದ 66ನೇ ಸಿಸಿಎಚ್ ನ್ಯಾಯಾಲಯ ಆರು ಮಂದಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದೆ. ಈ ಹಿಂದೆ ಮಧ್ಯಂತರ ರಕ್ಷಣೆ ನೀಡುವಾಗ, ಅಂತಿಮವಾಗಿ ನಿರೀಕ್ಷಣಾ ಜಾಮೀನು ದೊರೆಯದಿದ್ದಲ್ಲಿ ತನಿಖಾಧಿಕಾರಿಗಳ ಮುಂದೆ ಶರಣಾಗುವಂತೆ ನ್ಯಾಯಾಲಯ ಷರತ್ತು ವಿಧಿಸಿತ್ತು ಎನ್ನಲಾಗಿದೆ.
ಇದೀಗ ಜಾಮೀನು ಅರ್ಜಿಗಳು ವಜಾಗೊಂಡಿರುವುದರಿಂದ ಆರೋಪಿಗಳು ಪೊಲೀಸರಿಗೆ ಶರಣಾಗಬೇಕಿದ್ದು, ಇಲ್ಲವಾದಲ್ಲಿ ಬಂಧನಕ್ಕೆ ಒಳಗಾಗುವ ಸಾಧ್ಯತೆ ಎದುರಾಗಿದೆ.
ದಕ್ಷಿಣ ಕನ್ನಡ
Ashok janamana 2026 : ಪುತ್ತೂರಿನಲ್ಲಿ ಅದ್ದೂರಿ ‘ಅಶೋಕ ಜನಮನ-2026’ ಸಂಭ್ರಮಕ್ಕೆ ಕ್ಷಣಗಣನೆ ! ಬಿ.ಕೆ. ಹರಿಪ್ರಸಾದ್, ಕೃಷ್ಣ ಬೈರೇಗೌಡ, ಯು.ಟಿ. ಖಾದರ್ ಸಹಿತ ರಾಜಕೀಯ, ಧಾರ್ಮಿಕ ಗಣ್ಯರ ಸಮಾಗಮ

ಪುತ್ತೂರು: ದೀಪಾವಳಿಯ ಸಂಭ್ರಮವನ್ನು ಜನಸಾಮಾನ್ಯರೊಂದಿಗೆ ಹಂಚಿಕೊಳ್ಳುವ ಮೂಲಕ ಸೇವೆ, ಸಹಕಾರ ಹಾಗೂ ಮಾನವೀಯತೆಯ ಸಂದೇಶ ಸಾರುತ್ತಿರುವ ಪುತ್ತೂರಿನ ಹೆಮ್ಮೆಯ ‘ಅಶೋಕ ಜನಮನ-2026’ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ರೈ ಎಸ್ಟೇಟ್ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಆಯೋಜಿಸಲಾಗಿರುವ ಈ ಬೃಹತ್ ಜನಸೇವಾ ಕಾರ್ಯಕ್ರಮ ನ.22ರಂದು (ರವಿವಾರ) ಬೆಳಿಗ್ಗೆ 9 ಗಂಟೆಯಿಂದ ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಸುಮಾರು ಒಂದು ಲಕ್ಷ ಜನರಿಗೆ ದೀಪಾವಳಿ ಉಡುಗೊರೆ ವಿತರಿಸುವ ಬೃಹತ್ ಸಂಕಲ್ಪದೊಂದಿಗೆ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೆ ಸುಮಾರು ₹4 ಕೋಟಿ ವೆಚ್ಚ ಮಾಡಲಾಗುತ್ತಿದೆ. ಉಡುಗೊರೆ ವಿತರಣೆ ಮಾತ್ರವಲ್ಲದೆ, ಬೃಹತ್ ಅನ್ನದಾನ, ದೋಸೆ ಮೇಳ ಸೇರಿದಂತೆ ಹಲವು ವಿಶೇಷ ವ್ಯವಸ್ಥೆಗಳು ಈ ಬಾರಿಯ ಜನಮನದ ಆಕರ್ಷಣೆಯಾಗಲಿವೆ. ಪುತ್ತೂರು ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದಲೂ ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿದ್ದು, ಕೊಂಬೆಟ್ಟು ಕ್ರೀಡಾಂಗಣ ಜನಸಾಗರಕ್ಕೆ ಸಾಕ್ಷಿಯಾಗಲಿದೆ.
14 ವರ್ಷಗಳ ಜನಸೇವೆಯ ಪಯಣ; ಜನಮನದಲ್ಲಿ ವಿಶೇಷ ಸ್ಥಾನ!
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಮಾಜದ ಬಡವರು, ಮಧ್ಯಮ ವರ್ಗದವರು ಸೇರಿದಂತೆ ಎಲ್ಲ ವರ್ಗದ ಜನರೊಂದಿಗೆ ಹಬ್ಬದ ಸಂತೋಷ ಹಂಚಿಕೊಳ್ಳುವ ಆಶಯದೊಂದಿಗೆ ಆರಂಭಗೊಂಡ ‘ಅಶೋಕ ಜನಮನ’ ಇಂದು ಪುತ್ತೂರಿನ ಪ್ರಮುಖ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಕಳೆದ 14 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ತನ್ನ ವ್ಯಾಪ್ತಿ ಹಾಗೂ ಜನಪ್ರಿಯತೆಯನ್ನು ವಿಸ್ತರಿಸಿಕೊಂಡಿದೆ. ರಾಜಕೀಯ, ಜಾತಿ, ಧರ್ಮದ ಭೇದವಿಲ್ಲದೆ ಪ್ರತಿಯೊಬ್ಬರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಡುಗೊರೆ ಪಡೆದುಕೊಳ್ಳುವ ಮುಕ್ತ ಅವಕಾಶ ಇದರ ವಿಶೇಷತೆಯಾಗಿದೆ.
ಶಾಸಕ ಅಶೋಕ್ ಕುಮಾರ್ ರೈ ಅವರು ತಮ್ಮ ಉದ್ಯಮದ ಮೂಲಕ ಗಳಿಸಿದ ಸಂಪನ್ಮೂಲದ ಒಂದು ಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುವ ಉದ್ದೇಶದಿಂದ ಈ ಸೇವಾ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಹೀಗಾಗಿ ಅಶೋಕ ಜನಮನ ಕೇವಲ ಉಡುಗೊರೆ ವಿತರಣಾ ಕಾರ್ಯಕ್ರಮವಾಗಿ ಉಳಿಯದೆ, ಜನರೊಂದಿಗೆ ಬೆರೆಯುವ ಮತ್ತು ಹಬ್ಬದ ಸಂತೋಷವನ್ನು ಹಂಚಿಕೊಳ್ಳುವ ಬೃಹತ್ ವೇದಿಕೆಯಾಗಿ ರೂಪುಗೊಂಡಿದೆ.
ಒಂದು ಲಕ್ಷ ಮಂದಿಗೆ ಉಡುಗೊರೆ; ಮನೆಮಂದಿಗೆಲ್ಲ ದೀಪಾವಳಿ ಕೊಡುಗೆ!
ಈ ಬಾರಿಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಬೃಹತ್ ಉಡುಗೊರೆ ವಿತರಣೆಯಾಗಿದೆ. ಸುಮಾರು ಒಂದು ಲಕ್ಷ ಮಂದಿಗೆ ಉಡುಗೊರೆ ತಲುಪಿಸುವ ಗುರಿ ಹೊಂದಲಾಗಿದ್ದು, ಸಾರ್ವಜನಿಕರಿಗಾಗಿ ವಿವಿಧ ಅಗತ್ಯ ವಸ್ತುಗಳನ್ನು ಸಿದ್ಧಪಡಿಸಲಾಗಿದೆ.
ಸೀರೆ, ಬೆಡ್ಶೀಟ್, ಬಾತ್ ಟವೆಲ್, ತಟ್ಟೆ, ಬಟ್ಟಲು, ಗ್ಲಾಸ್ ಸೇರಿದಂತೆ ವಿವಿಧ ವಸ್ತುಗಳನ್ನು ಉಡುಗೊರೆಯಾಗಿ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಹಬ್ಬದ ಸಂದರ್ಭದಲ್ಲಿ ಮನೆಮಂದಿಗೆ ಉಪಯುಕ್ತವಾಗುವ ವಸ್ತುಗಳನ್ನು ನೀಡುವ ಮೂಲಕ ಪ್ರತಿಯೊಂದು ಕುಟುಂಬದಲ್ಲೂ ದೀಪಾವಳಿಯ ಸಂತೋಷ ಮೂಡಿಸುವ ಪ್ರಯತ್ನ ಇದಾಗಿದೆ.
ಉಡುಗೊರೆ ವಿತರಣೆಗೆ ಪ್ರತ್ಯೇಕ ಕೌಂಟರ್ಗಳು ಹಾಗೂ ವ್ಯವಸ್ಥಿತ ನಿರ್ವಹಣೆಗೆ ವಿಶೇಷ ತಂಡಗಳನ್ನು ನಿಯೋಜಿಸುವ ಮೂಲಕ ಜನದಟ್ಟಣೆಯನ್ನು ನಿಯಂತ್ರಿಸಲು ಸಿದ್ಧತೆ ಮಾಡಲಾಗಿದೆ.
ಒಂದು ಲಕ್ಷ ದೋಸೆ; 60 ಸಾವಿರಕ್ಕೂ ಅಧಿಕ ಮಂದಿಗೆ ಭರ್ಜರಿ ಅನ್ನದಾನ!
ಅಶೋಕ ಜನಮನದ ಮತ್ತೊಂದು ವಿಶೇಷ ಆಕರ್ಷಣೆ ಬೃಹತ್ ದೋಸೆ ಮೇಳ. ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಬೆಳಗ್ಗಿನಿಂದಲೇ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುಮಾರು ಒಂದು ಲಕ್ಷ ದೋಸೆಗಳನ್ನು ತಯಾರಿಸಿ ವಿತರಿಸುವ ಗುರಿ ಹೊಂದಲಾಗಿದೆ.
ಇದರೊಂದಿಗೆ ಮಧ್ಯಾಹ್ನ ಸುಮಾರು 60 ಸಾವಿರಕ್ಕೂ ಅಧಿಕ ಮಂದಿಗೆ ಅನ್ನದಾನ ಆಯೋಜಿಸಲಾಗಿದೆ. ಸಾವಿರಾರು ಜನರು ಏಕಕಾಲದಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಆಹಾರ ವಿತರಣೆ ಹಾಗೂ ಜನರ ಸಂಚಾರಕ್ಕೆ ಅಗತ್ಯ ವ್ಯವಸ್ಥೆಗಳನ್ನು ರೂಪಿಸಲಾಗಿದೆ. ಬೆಳಗ್ಗಿನಿಂದ ಸಂಜೆಯವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಿರುವುದು ವಿಶೇಷವಾಗಿದೆ.
ರಾಜಕೀಯ ನಾಯಕರ ದಂಡು; ಸಚಿವರು, ಮಾಜಿ ಸಚಿವರ ಉಪಸ್ಥಿತಿ
ಕಾರ್ಯಕ್ರಮಕ್ಕೆ ರಾಜ್ಯಮಟ್ಟದ ರಾಜಕೀಯ ನಾಯಕರು, ಸಚಿವರು, ಮಾಜಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಲಿದ್ದಾರೆ.
ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಕರ್ನಾಟಕ ಸರಕಾರದ ಆರೋಗ್ಯ ಸಚಿವ ಯು.ಟಿ. ಖಾದರ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಾಜಿ ಸಚಿವರಾದ ಬಿ. ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿ’ಸೋಜಾ, ಪಿ.ವಿ. ಮೋಹನ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಹರೀಶ್ ಕುಮಾರ್, ಜಿ.ಆರ್. ಲೋಬೊ, ಗಫೂರ್, ಲಾವಣ್ಯ ಬಲ್ಲಾಳ್, ಟಿ.ಎಂ. ಶಹೀದ್, ಶಾಲೆಟ್ ಪಿಂಟೋ, ಮಹಮ್ಮದ್ ಆಲಿ, ಮಹಮ್ಮದ್ ಬಡಗನ್ನೂರು, ಚಂದ್ರಹಾಸ ಶೆಟ್ಟಿ, ಪ್ರಸಾದ್ ಕೌಶಲ್ ಶೆಟ್ಟಿ, ಎಂ.ಬಿ. ವಿಶ್ವನಾಥ ರೈ, ಪಝಲ್ ರಹೀಂ, ಪ್ರವೀಣ್ ಚಂದ್ರ ಆಳ್ವ, ಮುರಳೀಧರ ರೈ ಮಠಂತಬೆಟ್ಟು, ರಾಜಾರಾಮ್, ಕೃಷ್ಣಪ್ರಸಾದ್ ಆಳ್ವ, ಪದ್ಮನಾಭ ಪೂಜಾರಿ ಆಳ್ಕೆ, ಯು.ಟಿ. ತೌಸಿಫ್, ಜೋಕಿಂ ಡಿಸೋಜಾ, ಉಷಾ ಅಂಚನ್, ದಿವಾಕರ ದಾಸ್ ನೇರ್ಲಾಜೆ ಹಾಗೂ ಪ್ರಸನ್ನ ಕುಮಾರ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ.
ಇದಲ್ಲದೆ ಸಂತೋಷ್ ಕುಮಾರ್ ಶೆಟ್ಟಿ, ಪದ್ಮರಾಜ್ ಆರ್. ಪೂಜಾರಿ, ಎಂ.ಎಸ್. ಮಹಮ್ಮದ್, ರಕ್ಷಿತ್ ಶಿವರಾಮ್, ಮಿಥುನ್ ರೈ, ಇನಾಯತ್ ಆಲಿ, ಹೇಮನಾಥ ಶೆಟ್ಟಿ ಕಾವು, ದುರ್ಗಾಪ್ರಸಾದ್ ರೈ ಕುಂಬ್ರ, ಉಮಾನಾಥ ಶೆಟ್ಟಿ, ಅಮಲ ರಾಮಚಂದ್ರ, ಮಲ್ಲಿಕಾ ಪಕ್ಕಳ, ಕೃಷ್ಣಪ್ಪ ಸುಳ್ಯ, ರಘು ಬೆಳ್ಳಿಪ್ಪಾಡಿ, ಈಶ್ವರ ಭಟ್ ಪಂಜಿಗುಡ್ಡೆ ಹಾಗೂ ರಾಧಾಕೃಷ್ಣ ನಾಯಕ್ ಉಪ್ಪಿನಂಗಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಯತಿವರ್ಯರಿಂದ ಧಾರ್ಮಿಕ ಆಶೀರ್ವಚನ
ಕಾರ್ಯಕ್ರಮಕ್ಕೆ ಧಾರ್ಮಿಕ ಮೆರುಗು ನೀಡಲು ಹಿಂದೂ ಸಮಾಜದ ಯತಿವರ್ಯರು ಆಗಮಿಸಲಿದ್ದಾರೆ. ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಈಶ ವಿಠಲದಾಸ ಸ್ವಾಮೀಜಿ ಹಾಗೂ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಧಾರ್ಮಿಕ ಆಶೀರ್ವಚನ ನೀಡಲಿದ್ದಾರೆ.
ಮಳೆ ಕಾರಣದಿಂದ ಮುಂದೂಡಿಕೆಯಾಗಿದ್ದ ಕಾರ್ಯಕ್ರಮ
ನವೆಂಬರ್ 8ರಂದು ನಡೆಯಬೇಕಿದ್ದ ಅಶೋಕ ಜನಮನ ಕಾರ್ಯಕ್ರಮವನ್ನು ನಿರಂತರ ಮಳೆ ಹಾಗೂ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನವೆಂಬರ್ 22ಕ್ಕೆ ಮುಂದೂಡಲಾಗಿತ್ತು. ಇದೀಗ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥಿತವಾಗಿ ಆಯೋಜಿಸಲು ಟ್ರಸ್ಟ್ ಮುಂದಾಗಿದೆ.
ಹಬ್ಬದ ಸಂಭ್ರಮಕ್ಕೆ ಜನಮನದ ಸ್ಪರ್ಶ
ಒಂದು ಕಡೆ ಬೃಹತ್ ಉಡುಗೊರೆ ವಿತರಣೆ, ಮತ್ತೊಂದೆಡೆ ಅನ್ನದಾನ ಹಾಗೂ ದೋಸೆ ಮೇಳ, ಇನ್ನೊಂದೆಡೆ ರಾಜಕೀಯ ಮತ್ತು ಧಾರ್ಮಿಕ ಗಣ್ಯರ ಸಮಾಗಮ. ಹೀಗೆ ಹಲವು ವಿಶೇಷತೆಗಳನ್ನು ಒಳಗೊಂಡಿರುವ ಅಶೋಕ ಜನಮನ-2026 ಪುತ್ತೂರಿನಲ್ಲಿ ಮತ್ತೊಂದು ಬೃಹತ್ ಜನಸಂಗಮಕ್ಕೆ ವೇದಿಕೆಯಾಗಲಿದೆ.
ದೀಪಾವಳಿ ಎಂದರೆ ಕೇವಲ ಬೆಳಕಿನ ಹಬ್ಬವಲ್ಲ, ಸಂತೋಷವನ್ನು ಹಂಚಿಕೊಳ್ಳುವ ಹಬ್ಬವೂ ಹೌದು ಎಂಬ ಆಶಯದೊಂದಿಗೆ ರೂಪುಗೊಂಡಿರುವ ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಜನರು ಪಕ್ಷಾತೀತವಾಗಿ ಭಾಗವಹಿಸಿ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಶಾಸಕ ಅಶೋಕ್ ಕುಮಾರ್ ರೈ ಹಾಗೂ ರೈ ಎಸ್ಟೇಟ್ ಟ್ರಸ್ಟ್ನ ಸಂಘಟಕರು ಮನವಿ ಮಾಡಿದ್ದಾರೆ.
ಅಪರಾಧ
Mangalore-ಮಂಗಳೂರು: ಕೆಲಸ ಮಾಡಿದ ಹಣ ನೀಡದ ವಿಚಾರಕ್ಕೆ ಮನೆ ಮಾಲೀಕನ ಕೊಲೆ; ಆರೋಪಿಗೆ ಜೀವಾವಧಿ ಶಿಕ್ಷೆ, ಮತ್ತೊಬ್ಬ ಖುಲಾಸೆ
ಕೆಲಸ ಮಾಡಿದ ಹಣ ನೀಡದ ವಿಚಾರಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣದಲ್ಲಿ ಮೊದಲನೇ ಆರೋಪಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದ ಎರಡನೇ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಮಂಗಳೂರು: ಕೆಲಸ ಮಾಡಿದ ಹಣ ನೀಡದ ವಿಚಾರಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣದಲ್ಲಿ ಮೊದಲನೇ ಆರೋಪಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದ ಎರಡನೇ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದ ಮಲ್ಲಿ ಲೇಔಟ್ನಲ್ಲಿರುವ ಸುರೇಂದ್ರನ್ ಅವರ ಮನೆಯಲ್ಲಿ 2020ರ ನವೆಂಬರ್ 3ರಂದು ಈ ಕೊಲೆ ನಡೆದಿತ್ತು.
ಪ್ರಕರಣದ ಮೊದಲನೇ ಆರೋಪಿ ಸಂತು ಅಲಿಯಾಸ್ ಸಂತೋಷ್, ತಾನು ಕೆಲಸ ಮಾಡಿದ ಹಣವನ್ನು ಸುರೇಂದ್ರನ್ ನೀಡಿಲ್ಲವೆಂದು ಎರಡನೇ ಆರೋಪಿ ಸಿದ್ದು ಅಲಿಯಾಸ್ ಸಿದ್ದಪ್ಪನೊಂದಿಗೆ ಹಣ ಕೇಳಲು ಅವರ ಮನೆಗೆ ತೆರಳಿದ್ದನು. ಈ ವೇಳೆ ಸಿದ್ದಪ್ಪನ ಪ್ರೇರಣೆಯಿಂದ ಸಂತೋಷ್ ಮನೆಯೊಳಗೆ ಹೋಗಿ ಸುರೇಂದ್ರನ್ ಅವರಲ್ಲಿ ಹಣ ಕೇಳಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಜಗಳ ವಿಕೋಪಕ್ಕೆ ತಿರುಗಿದಾಗ ಸಂತೋಷ್ ಪೇಪರ್ ಕತ್ತರಿಸುವ ಬ್ಲೇಡ್ನಿಂದ ಸುರೇಂದ್ರನ್ ಅವರ ಕುತ್ತಿಗೆ, ಮುಖ ಹಾಗೂ ತಲೆಯ ಭಾಗಕ್ಕೆ ಕೊಯ್ದಿದ್ದಾನೆ. ಅಲ್ಲದೆ, ವ್ಯಾಯಾಮಕ್ಕೆ ಬಳಸುವ ರಾಡ್ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪ್ರಕರಣದ ಆರೋಪಪಟ್ಟಿಯಲ್ಲಿ ತಿಳಿಸಲಾಗಿತ್ತು.
ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 88/2020ರಂತೆ ಐಪಿಸಿ ಕಲಂ 302, 392, 201, 114 ಜೊತೆಗೆ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಕಾವೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಘವ್ ಪಡೀಲ್ ಅವರು ಸಂತೋಷ್ ಮತ್ತು ಸಿದ್ದಪ್ಪನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತನಿಖೆ ಪೂರ್ಣಗೊಳಿಸಿ ಇಬ್ಬರು ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು, ಸಾಕ್ಷ್ಯಾಧಾರಗಳ ಪರಿಶೀಲನೆಯ ಬಳಿಕ ಮೊದಲನೇ ಆರೋಪಿ ಸಂತು ಅಲಿಯಾಸ್ ಸಂತೋಷ್ ದೋಷಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಎರಡನೇ ಆರೋಪಿ ಸಿದ್ದು ಅಲಿಯಾಸ್ ಸಿದ್ದಪ್ಪನನ್ನು ಖುಲಾಸೆಗೊಳಿಸಿದ್ದಾರೆ.
ಆರೋಪಿಗೆ ವಿಧಿಸಿದ ಶಿಕ್ಷೆ:
- ಐಪಿಸಿ ಕಲಂ 302 (ಕೊಲೆ): ಜೀವಾವಧಿ ಶಿಕ್ಷೆ ಹಾಗೂ 25,000 ರೂ. ದಂಡ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಜೈಲು ಶಿಕ್ಷೆ.
- ಐಪಿಸಿ ಕಲಂ 392 (ದರೋಡೆ): ಎರಡು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 5,000 ರೂ. ದಂಡ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಒಂದು ತಿಂಗಳ ಶಿಕ್ಷೆ.
- ಐಪಿಸಿ ಕಲಂ 201 (ಸಾಕ್ಷ್ಯ ನಾಶ): ಆರು ತಿಂಗಳ ಕಾರಾಗೃಹ ಶಿಕ್ಷೆ ಹಾಗೂ 2,000 ರೂ. ದಂಡ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ 15 ದಿನಗಳ ಶಿಕ್ಷೆ.
ಒಟ್ಟು 32,000 ರೂ. ದಂಡದ ಮೊತ್ತದಲ್ಲಿ 7,000 ರೂ. ಸರಕಾರಕ್ಕೆ ಹಾಗೂ 25,000 ರೂ.ಗಳನ್ನು ಕೊಲೆಯಾದ ಸುರೇಂದ್ರನ್ ಅವರ ಪತ್ನಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ಅವರು ವಾದ ಮಂಡಿಸಿದ್ದರು.
-
ಅಪರಾಧ18 hours agoMangalore-ಕಣಚೂರು ಮೆಡಿಕಲ್ ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿ ಅಪಹರಣ..! ಹಿಂದೂ ಯುವಕ ಲವ್ ಆರೋಪ – ವಿಡಿಯೋ ವೈರಲ್ : ತನಿಖೆಗೆ ಕಮಿಷನರ್ ಸೂಚನೆ
-
ರಾಜಕೀಯ18 hours agoBJP leaders-ಗಡಿಪಾರಿಗೊಳಗಾದ ನರಸಿಂಹ ಮಾಣಿ ಮನೆಗೆ ಬಿಜೆಪಿ ಮುಖಂಡರ ಭೇಟಿ; ಕುಟುಂಬಕ್ಕೆ ಆತ್ಮಸ್ಥೈರ್ಯ
-
ಚಿನ್ನ-ಬೆಳ್ಳಿ ದರ23 hours agoGold Rate Today-ಆಭರಣಪ್ರಿಯರಿಗೆ ಗುಡ್ನ್ಯೂಸ್: ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ: 12 ಸಾವಿರ ರೂ. ಗಡಿಯೊಳಗೆ ಬಂದ ಆಭರಣ ಚಿನ್ನ..!
-
ಬಿಗ್ ನ್ಯೂಸ್17 hours agoHigh Court-Social Media ಅಕೌಂಟ್ ಇದ್ದ ಮಾತ್ರಕ್ಕೆ ಮನಸ್ಸಿಗೆ ಬಂದಿದ್ದನ್ನೆಲ್ಲ ಪೋಸ್ಟ್ ಮಾಡುವ Free Licence ಇಲ್ಲ : ಬೆಳ್ತಂಗಡಿಯ ಮೋಹನ್ ಬೋಳಂಗಡಿ – ಶುಭಾ ರೈ ವಿರುದ್ಧ ದಾಖಲಾದ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಎಚ್ಚರಿಕೆ
-
ಸಿನೆಮಾ22 hours agoArjun Sarja-ಪುತ್ರಿ ಐಶ್ವರ್ಯಾ ವಿರುದ್ಧ ಅವಹೇಳನಕಾರಿ ವರದಿ: ಮಾಧ್ಯಮಗಳ ವಿರುದ್ಧ ಸಿಡಿದೆದ್ದ ಅರ್ಜುನ್ ಸರ್ಜಾ; ಅಧಿಕೃತ ದೂರು ದಾಖಲು
-
ಸ್ಥಳೀಯ23 hours agoBaindoor-ರೈಲಿನಲ್ಲಿ ಮೊಬೈಲ್ ಕಳವು, UPI ಮೂಲಕ ಹಣ ವರ್ಗಾವಣೆ: ಬೈಂದೂರು ಪೊಲೀಸರಿಂದ ಕುಖ್ಯಾತ ಆರೋಪಿ ಬಂಧನ
-
ಅಪರಾಧ23 hours agoMangalore-ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ: ಮತ್ತೊಂದು ಪೋಕ್ಸೋ ಪ್ರಕರಣದಲ್ಲಿ ಧರ್ಮಗುರು ಮರುಬಂಧನ
-
ಅಪರಾಧ23 hours agoManipal police-ಪಟಾಕಿ ಪ್ರಕರಣ: ಮಣಿಪಾಲ ಪೊಲೀಸರ ವಿರುದ್ಧ ದೌರ್ಜನ್ಯ ಆರೋಪ: ಸಿಎಂಗೆ ಇ-ಮೇಲ್ ಮಾಡಿದ ವಿದ್ಯಾರ್ಥಿಗಳು















