Uncategorized
MP Chauta-ಮಂಗಳೂರು ಏರ್‌ಪೋರ್ಟ್‌ಗೆ ತುರ್ತಾಗಿ “ಪಾಯಿಂಟ್ ಆಫ್ ಕಾಲ್ʼ ಸ್ಥಾನಮಾನ ನೀಡಲು ನಿಯಮ 377ರಡಿಯಲ್ಲಿ ಸಂಸದ ಕ್ಯಾ. ಚೌಟ ಲೋಕಸಭೆಯಲ್ಲಿ ಒತ್ತಾಯ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುರ್ತಾಗಿ “ಪಾಯಿಂಟ್ ಆಫ್ ಕಾಲ್ (PoC)” ಸ್ಥಾನ-ಮಾನ ನೀಡುವ ಅಗತ್ಯತೆಯನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ.
ನವದೆಹಲಿ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುರ್ತಾಗಿ “ಪಾಯಿಂಟ್ ಆಫ್ ಕಾಲ್ (PoC)” ಸ್ಥಾನ-ಮಾನ ನೀಡುವ ಅಗತ್ಯತೆಯನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಂದು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ.
ಲೋಕಸಭೆಯಲ್ಲಿ ನಿಯಮ 377ರಡಿಯಲ್ಲಿ ಈ ವಿಷಯದ ಬಗ್ಗೆ ಧ್ವನಿಯೆತ್ತಿರುವ ಸಂಸದ ಕ್ಯಾ. ಚೌಟ ಅವರು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಕರಾವಳಿ ಕರ್ನಾಟಕ ಮತ್ತು ನೆರೆಯ ಕೇರಳಕ್ಕೆ ಪ್ರಮುಖ ವಾಯುಯಾನ ಹೆಬ್ಬಾಗಿಲಾಗಿದೆ. ಈ ಏರ್‌ಪೋರ್ಟ್ 2024-25ರ ಅವಧಿಯಲ್ಲಿ 7.15 ಲಕ್ಷ ಅಂತಾರಾಷ್ಟ್ರೀಯ ಪ್ರಯಾಣಿಕರು ಸೇರಿದಂತೆ ಒಟ್ಟು ಸುಮಾರು 23.4 ಲಕ್ಷ ಪ್ರಯಾಣಿಕರ ಪ್ರಯಾಣವನ್ನು ನಿರ್ವಹಿಸಿದ್ದು, ಆ ಮೂಲಕ ಸುಮಾರು 16,800ಕ್ಕೂ ಹೆಚ್ಚು ವಿಮಾನಗಳ ಹಾರಾಟ ನಡೆಸಿವೆ. ಇದು ವಾರ್ಷಿಕವಾಗಿ ಶೇ.15ಕ್ಕಿಂತ ಹೆಚ್ಚು ಬೆಳವಣಿಗೆಯನ್ನು ದಾಖಲಿಸಿದೆ. ಈ ಅಂಕಿ-ಅಂಶಗಳು ವಿಮಾನ ನಿಲ್ದಾಣದ ಬೆಳವಣಿಗೆ ಮತ್ತು ವಾಣಿಜ್ಯ ಉತ್ತೇಜನದ ಪ್ರಾಮುಖ್ಯತೆಯನ್ನು ಸ್ಪಷ್ಟವಾಗಿ ಎತ್ತಿ ತೋರಿಸುತ್ತವೆ ಎಂದು ಹೇಳಿದ್ದಾರೆ.
ತುಳುನಾಡು ಪ್ರದೇಶಗಳ ಗಣನೀಯ ಸಂಖ್ಯೆಯ ಜನರು ಗಲ್ಫ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಔದ್ಯೋಗಿಕ ಸಮುದಾಯವು ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಮಂಗಳೂರು ವಿಮಾನ ನಿಲ್ದಾಣವನ್ನೇ ಹೆಚ್ಚು ಅವಲಂಬಿಸಿಕೊಂಡಿದೆ. ಆದರೆ, PoC (ಪಾಯಿಂಟ್ ಆಫ್ ಕಾಲ್) ಸ್ಥಾನಮಾನದ ಕೊರತೆಯಿಂದಾಗಿ ವಿದೇಶಿ ವಿಮಾನಯಾನ ಸಂಸ್ಥೆಗಳು ಇಲ್ಲಿಂದ ನೇರ ಅಂತಾರಾಷ್ಟ್ರೀಯ ಸೇವೆಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ, ಪ್ರಯಾಣಿಕರು ಬೆಂಗಳೂರು ಅಥವಾ ಕೊಚ್ಚಿನ್ ವಿಮಾನ ನಿಲ್ದಾಣದ ಮೂಲಕ ಸಂಚರಿಸಬೇಕಾದ ಪರಿಸ್ಥಿತಿಯಿದೆ. ಇದರಿಂದ, ಅನಿವಾಸಿ ಭಾರತೀಯ ಸಮುದಾಯಕ್ಕೆ ದುಬಾರಿ ವೆಚ್ಚ, ದೀರ್ಘ ಪ್ರಯಾಣದ ಸಮಯದ ಜತೆಗೆ ನಾನಾ ರೀತಿಯ ಅನಾನುಕೂಲತೆ ಎದುರಾಗುತ್ತಿದೆ ಎಂದು ಅವರು ಸದನದ ಗಮನಕ್ಕೆ ತಂದಿದ್ದಾರೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ PoC ಸ್ಥಾನಮಾನ ನೀಡುವುದರಿಂದ ಈ ಭಾಗದ ಜನರಿಗೆ ನೇರ ಅಂತಾರಾಷ್ಟ್ರೀಯ ಸಂಪರ್ಕ ಸಾಧ್ಯವಾಗುತ್ತದೆ. ಜತೆಗೆ ವಿಮಾನಯಾನ ಕಾರ್ಯಾಚರಣೆಗಳನ್ನು ಮತ್ತಷ್ಟು ವಿಸ್ತರಿಸುವುದಕ್ಕೆ ಅನುಕೂಲವಾಗುತ್ತದೆ. ಅಲ್ಲದೆ ವಿದೇಶದಲ್ಲಿ ದುಡಿಯುವ ವರ್ಗಕ್ಕೆ ಹಾಗೂ ಅವರ ಕುಟುಂಬಗಳ ಸುಗಮ ಪ್ರಯಾಣ ಸಾಧ್ಯವಾಗುತ್ತದೆ. ಈ ರೀತಿಯ ವಿಮಾನಯಾನ ಸಂಪರ್ಕವು ಸಹಜವಾಗಿಯೇ ಇಲ್ಲಿನ ವ್ಯಾಪಾರ ಮತ್ತು ಹೂಡಿಕೆ ಚಟುವಟಿಕೆಗಳಿಗೆ ಉತ್ತೇಜನ ನೀಡುತ್ತದೆ. ಇದು ಸಾಗರೋತ್ತರ ಉತ್ಪನ್ನಗಳ ರಫ್ತು, ಅಡಿಕೆ, ಗೋಡಂಬಿ ಸಂಸ್ಕರಣೆ ಮತ್ತು ಪೆಟ್ರೋಕೆಮಿಕಲ್ಸ್ ನಂತಹ ಪ್ರಾದೇಶಿಕ ಉದ್ಯಮಗಳಿಗೂ ಬೆಂಬಲ-ಉತ್ತೇಜನ ನೀಡುತ್ತದೆ. ಜೊತೆಗೆ ಮಂಗಳೂರು ವಿಶೇಷ ಆರ್ಥಿಕ ವಲಯದ (SEZ) ಬೆಳವಣಿಗೆಗೂ ಪೂರಕವಾಗಲಿದೆ ಎಂದು ಕ್ಯಾ. ಚೌಟ ಸದನಕ್ಕೆ ಮನವರಿಕೆ ಮಾಡಿದರು.
ಅಂತಾರಾಷ್ಟ್ರೀಯವಾಗಿ ನೇರ ಸಂಪರ್ಕ ವ್ಯವಸ್ಥೆ ಕಲ್ಪಿಸುವುದರಿಂದ ಕರಾವಳಿ ಭಾಗದ ಪ್ರವಾಸೋದ್ಯಮದ ಬೆಳವಣಿಗೆ ಜತೆಗೆ ಶಿಕ್ಷಣ ಕ್ಷೇತ್ರದ ಪ್ರಗತಿಯನ್ನು ಕೂಡ ಹೆಚ್ಚಿಸಬಹುದು. ಇದು ಎನ್.ಐ.ಟಿ.ಕೆ (NITK) ಸುರತ್ಕಲ್ ಮತ್ತು ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಂತಹ ಪ್ರತಿಷ್ಠಿತ ಸಂಸ್ಥೆಗಳ ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಸಂದರ್ಶಕರಿಗೆ ಅಂತಾರಾಷ್ಟ್ರೀಯ ವೇದಿಕೆಗಳಿಗೆ ಸುಲಭವಾಗಿ ಪ್ರಯಾಣಿಸುವುದಕ್ಕೂ ಅನುಕೂಲ ಕಲ್ಪಿಸುತ್ತದೆ ಎಂದೂ ಅವರು ವಿವರಿಸಿದರು.
ಈ ಹಿನ್ನಲೆಯಲ್ಲಿ ಮಾನ್ಯ ನಾಗರಿಕ ವಿಮಾನಯಾನ ಸಚಿವರು ಈ ವಿಚಾರದಲ್ಲಿ ಕೂಡಲೇ ಮಧ್ಯಪ್ರವೇಶ ಮಾಡಿ, ಮಂಗಳೂರು ವಿಮಾನ ನಿಲ್ದಾಣದ ಬಲವಾದ ಪ್ರಯಾಣಿಕರ ಬೇಡಿಕೆ, ಆರ್ಥಿಕ ಸಾಮರ್ಥ್ಯ ಮತ್ತು ಪ್ರಾದೇಶಿಕ ಮಹತ್ವವನ್ನು ಪರಿಗಣಿಸಿ ಆದಷ್ಟು ಬೇಗ ಈ ಏರ್‌ಪೋರ್ಟ್‌ಗೆ ಪಾಯಿಂಟ್ ಆಫ್ ಕಾಲ್ ಮಾನ್ಯತೆಯನ್ನು ನೀಡಬೇಕು. ಸಮತೋಲಿತ ಪ್ರಾದೇಶಿಕ ಅಭಿವೃದ್ಧಿ ಮತ್ತು ಜಾಗತಿಕ ಸಂಪರ್ಕ ವ್ಯವಸ್ಥೆ ಸುಧಾರಣೆ ಹಿತದೃಷ್ಟಿಯಿಂದಲೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ “ಪಾಯಿಂಟ್ ಆಫ್ ಕಾಲ್” (PoC) ಸ್ಥಾನಮಾನವನ್ನು ನೀಡಬೇಕೆಂದು ಅವರು ಮನವಿ ಮಾಡಿದರು.
Uncategorized
ಹಿರಿಯ ಸಹಕಾರಿ ಧುರೀಣ ಕೆ.ಕೆ. ನಾರಾಯಣ ಚಳ್ಳಂಗಾರು ನಿಧನ

ಕಲ್ಮಡ್ಕ: ತಾಲೂಕಿನ ಹಿರಿಯ ಸಹಕಾರಿ ಧುರೀಣ, ಸಾಮಾಜಿಕ ಮುಖಂಡ, ಬಹುಮುಖ ಚಿಂತಕ ಕಲ್ಮಡ್ಕ ಗ್ರಾಮದ ಚಳ್ಳಂಗಾರು ಕೆ.ಕೆ. ನಾರಾಯಣ (88) ಅವರು ವಯೋಸಹಜ ಅನಾರೋಗ್ಯದಿಂದ ಗುರುವಾರ ಸಂಜೆ ನಿಧನರಾದರು.
ಮಂಡಲ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ತಮ್ಮ ಅವಧಿಯಲ್ಲಿ ಗ್ರಾಮದಲ್ಲಿ ಅಭಿವೃದ್ಧಿಯ ಹೊಸ ಶಕೆಗೆ ನಾಂದಿ ಹಾಡಿದ್ದರು. ಕಲ್ಮಡ್ಕ ಸಹಕಾರಿ ಸಂಘದ ನಿರ್ದೇಶಕರಾಗಿ ಸಂಸ್ಥೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದ ಅವರು, ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದರು. ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು.
ಕಲ್ಮಡ್ಕ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ವಿಶೇಷ ಶ್ರಮ ವಹಿಸಿದ್ದ ಅವರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಅರ್ಥಧಾರಿಯಾಗಿ ಕಲಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದ ನಾರಾಯಣ ಅವರು, ಸಂಗಮ ಕಲಾ ಸಂಘದ ನಿರ್ದೇಶಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಉತ್ತಮ ಓದುಗ ಹಾಗೂ ವಿಮರ್ಶಕರಾಗಿದ್ದ ಅವರು ಸಾಹಿತ್ಯ, ಕಲೆ, ಸಹಕಾರ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಮೃತರು ಪತ್ನಿ ಸುಬ್ಬಮ್ಮ, ಪುತ್ರಿಯರಾದ ವಿದ್ಯಾ, ಜಯಶ್ರೀ, ದೀಪಿಕಾ, ಪುತ್ರ, ಕ್ಯಾಂಪ್ಕೋ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ನ್ಯಾಯವಾದಿ ಮುರಳಿಕೃಷ್ಣ ಚಳ್ಳಂಗಾರು, ಸೊಸೆ ರಮ್ಯಾ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Uncategorized
ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನ- ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಭಿಯಾನಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಚಾಲನೆ

ಪುತ್ತೂರು: ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಏಕತೆಯ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪುತ್ತೂರು ತಾಲೂಕಿನ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ 29ರವರೆಗೆ ನಡೆಯಲಿರುವ ಪಂಚಮುಖಿ ಆಂಜನೇಯ ಹವನದ ಪ್ರಚಾರಾರ್ಥ ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಭಿಯಾನಕ್ಕೆ ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ಚಾಲನೆ ನೀಡಿದರು.
ನ.19ರಂದು ಪುತ್ತೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ವೀರಾಂಜನೇಯ ಕ್ಷೇತ್ರದಲ್ಲಿ ನಡೆಯುವ ಪಂಚಮುಖಿ ಆಂಜನೇಯ ಹವನದ ಸ್ಟಿಕ್ಕರ್ ಅನ್ನು ಆಟೋ ರಿಕ್ಷಾಗಳಿಗೆ ಅಂಟಿಸುವ ಮೂಲಕ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಯಶಸ್ಸು ಕೋರಿದರು.
ಆಟೋ ರಿಕ್ಷಾಗಳ ಎದುರಿನ ಮತ್ತು ಹಿಂಬದಿಯ ಭಾಗಕ್ಕೆ ತಾವೆ ಸ್ವತಃ ಸ್ಟಿಕ್ಕರ್ ಅಂಟಿಸಿ ಎಲ್ಲರೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಪಂಚಮುಖಿ ಆಂಜನೇಯ ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳಿಕೃಷ್ಣ ಹಸಂತಡ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಧಾನ ಕಾರ್ಯದರ್ಶಿ ಸುನಿಲ್ ದಡ್ಡು, ಯಾಗ ಸಮಿತಿಯ ಪ್ರಮುಖರಾದ ಶ್ಯಾಮ ಸುದರ್ಶನ್ ಹೊಸಮೂಲೆ, ಜಯಂತ ಶೆಟ್ಟಿ ಕಂಬಳತ್ತಡ್ಕ, ಶ್ರೀಧರ್ ತೆಂಕಿಲ ಸಹಿತ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರು ಉಪಸ್ಥಿತರಿದ್ದರು.
Uncategorized
Puttur-ಪುತ್ತೂರು: ಕೃಷ್ಣನಗರದಲ್ಲಿ ಮನೆ ಕಳ್ಳತನ- 2.19 ಲಕ್ಷ ರೂ. ಮೌಲ್ಯದ ಸೊತ್ತು ಕಳವು
ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತರಾಗಿ ಊರಿಗೆ ತೆರಳಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಕಳ್ಳರು ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಹಣ ಕಳವು ಮಾಡಿರುವ ಘಟನೆ ಪುತ್ತೂರು ತಾಲೂಕಿನ ಚಿಕ್ಕಮುಡೂರು ಗ್ರಾಮದ ಕೃಷ್ಣನಗರದಲ್ಲಿ ನಡೆದಿದೆ.
ಪುತ್ತೂರು: ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕುಟುಂಬ ಸಮೇತರಾಗಿ ಊರಿಗೆ ತೆರಳಿದ್ದ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಕಳ್ಳರು ಮನೆಯ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಹಣ ಕಳವು ಮಾಡಿರುವ ಘಟನೆ ಪುತ್ತೂರು ತಾಲೂಕಿನ ಚಿಕ್ಕಮುಡೂರು ಗ್ರಾಮದ ಕೃಷ್ಣನಗರದಲ್ಲಿ ನಡೆದಿದೆ.
ಕೃಷ್ಣನಗರದಲ್ಲಿ ಉದಯ ಕುಮಾರ್ ಅವರಿಗೆ ಸೇರಿದ ಬಾಡಿಗೆ ಮನೆಯಲ್ಲಿ ಹಿರೇಬಂಡಾಡಿ ಮೂಲದ ಯತೀಶ್ ಅವರು ಕುಟುಂಬ ಸಮೇತರಾಗಿ ವಾಸವಾಗಿದ್ದಾರೆ. ಸಹೋದರ ತಿಲಕ್ ಅವರ ಮದುವೆ ಕಾರ್ಯಕ್ರಮದ ನಿಮಿತ್ತ ನ.12ರಂದು ರಾತ್ರಿ ಮನೆಗೆ ಬೀಗ ಹಾಕಿ ಕುಟುಂಬದೊಂದಿಗೆ ಹಿರೇಬಂಡಾಡಿ ಗ್ರಾಮದ ಕೆಮ್ಮಾರದಲ್ಲಿರುವ ತಮ್ಮ ಮನೆಗೆ ತೆರಳಿದ್ದರು.
ಮದುವೆ ಕಾರ್ಯಕ್ರಮ ಮುಗಿಸಿ, ನ.16ರಂದು ರಾತ್ರಿ ನಡೆಯಲಿದ್ದ ಔತಣಕೂಟಕ್ಕೆ ತೆರಳುವ ಮೊದಲು ಮಗುವಿನ ಬಟ್ಟೆ ಹಾಗೂ ಇತರ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಲು ಸಂಜೆ ವೇಳೆ ಬಾಡಿಗೆ ಮನೆಗೆ ಬಂದಾಗ ಮನೆಯ ಮುಂಭಾಗದ ಬಾಗಿಲಿನ ಬೀಗ ಮುರಿದಿರುವುದು ಗಮನಕ್ಕೆ ಬಂದಿದೆ.
ತಕ್ಷಣ ಮನೆಯೊಳಗೆ ತೆರಳಿ ಪರಿಶೀಲಿಸಿದಾಗ ಎರಡು ಕಬ್ಬಿಣದ ಕಪಾಟುಗಳ ಬಾಗಿಲುಗಳನ್ನು ಯಾವುದೋ ಸಾಧನದಿಂದ ಮೀಟಿ ತೆರೆಯಲಾಗಿತ್ತು. ಕಪಾಟಿನಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣ ಕಳವಾಗಿರುವುದು ಬೆಳಕಿಗೆ ಬಂದಿದೆ.
ಕಳ್ಳರು ಮೂರು ಜೊತೆ ಚಿನ್ನದ ಬೆಂಡೋಲೆ (12 ಗ್ರಾಂ), ಒಂದು ಮೂಗುತಿ (1 ಗ್ರಾಂ), ಮಗುವಿನ ಎರಡು ಜೊತೆ ಕಿವಿಯೋಲೆಗಳು (ಒಟ್ಟು 5 ಗ್ರಾಂ), ಎರಡು ಮಗುವಿನ ಬಳೆಗಳು (4 ಗ್ರಾಂ), 40 ಸಾವಿರ ರೂ. ಮೌಲ್ಯದ ಡೈಮಂಡ್ ಪೆಂಡೆಂಟ್ ಹಾಗೂ 3 ಸಾವಿರ ರೂ. ನಗದು ಹಣವನ್ನು ಕಳವು ಮಾಡಿದ್ದಾರೆ.
ಕಳವಾದ ಚಿನ್ನಾಭರಣಗಳ ಒಟ್ಟು ತೂಕ ಸುಮಾರು 22 ಗ್ರಾಂ ಆಗಿದ್ದು, ನಗದು ಹಣ ಹಾಗೂ ಡೈಮಂಡ್ ಪೆಂಡೆಂಟ್ ಸೇರಿದಂತೆ ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 2.19 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
ಶಿಕ್ಷಣ13 hours agoVivekananda-ವಿವೇಕಾನಂದ ಪಾಲಿಟೆಕ್ನಿಕ್ – ನೂತನ ಆಡಳಿತ ಮಂಡಳಿಯ ರಚನೆ : ಅಧ್ಯಕ್ಷರಾಗಿ ಕೃಷ್ಣಕುಮಾರ್ ಅತ್ರಿಜಾಲು, ಸಂಚಾಲಕರಾಗಿ ನರಸಿಂಹ ಪೈ
-
ಅಪರಾಧ7 hours agoMangalore-ಕಣಚೂರು ಮೆಡಿಕಲ್ ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿ ಅಪಹರಣ..! ಹಿಂದೂ ಯುವಕ ಲವ್ ಆರೋಪ – ವಿಡಿಯೋ ವೈರಲ್ : ತನಿಖೆಗೆ ಕಮಿಷನರ್ ಸೂಚನೆ
-
ಚಿನ್ನ-ಬೆಳ್ಳಿ ದರ12 hours agoGold Rate Today-ಆಭರಣಪ್ರಿಯರಿಗೆ ಗುಡ್ನ್ಯೂಸ್: ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ: 12 ಸಾವಿರ ರೂ. ಗಡಿಯೊಳಗೆ ಬಂದ ಆಭರಣ ಚಿನ್ನ..!
-
ಸ್ಥಳೀಯ12 hours agoBaindoor-ರೈಲಿನಲ್ಲಿ ಮೊಬೈಲ್ ಕಳವು, UPI ಮೂಲಕ ಹಣ ವರ್ಗಾವಣೆ: ಬೈಂದೂರು ಪೊಲೀಸರಿಂದ ಕುಖ್ಯಾತ ಆರೋಪಿ ಬಂಧನ
-
ಸಿನೆಮಾ11 hours agoArjun Sarja-ಪುತ್ರಿ ಐಶ್ವರ್ಯಾ ವಿರುದ್ಧ ಅವಹೇಳನಕಾರಿ ವರದಿ: ಮಾಧ್ಯಮಗಳ ವಿರುದ್ಧ ಸಿಡಿದೆದ್ದ ಅರ್ಜುನ್ ಸರ್ಜಾ; ಅಧಿಕೃತ ದೂರು ದಾಖಲು
-
ರಾಜಕೀಯ6 hours agoBJP leaders-ಗಡಿಪಾರಿಗೊಳಗಾದ ನರಸಿಂಹ ಮಾಣಿ ಮನೆಗೆ ಬಿಜೆಪಿ ಮುಖಂಡರ ಭೇಟಿ; ಕುಟುಂಬಕ್ಕೆ ಆತ್ಮಸ್ಥೈರ್ಯ
-
ಅಪರಾಧ12 hours agoMangalore-ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ: ಮತ್ತೊಂದು ಪೋಕ್ಸೋ ಪ್ರಕರಣದಲ್ಲಿ ಧರ್ಮಗುರು ಮರುಬಂಧನ
-
ಅಪರಾಧ12 hours agoManipal police-ಪಟಾಕಿ ಪ್ರಕರಣ: ಮಣಿಪಾಲ ಪೊಲೀಸರ ವಿರುದ್ಧ ದೌರ್ಜನ್ಯ ಆರೋಪ: ಸಿಎಂಗೆ ಇ-ಮೇಲ್ ಮಾಡಿದ ವಿದ್ಯಾರ್ಥಿಗಳು















