ಅಪರಾಧ
Red stone-ಕೆಂಪುಕಲ್ಲಿನ ರಾಜಧನ 58.82% ಇಳಿದರೂ ಗಣಿ ಮಾಫಿಯಾ ಸುಲಿಗೆ ಮುಂದುವರಿಕೆ : ಜನಸಾಮಾನ್ಯರು ಕಂಗಾಲು
ರಾಜ್ಯ ಸರ್ಕಾರ ಕೆಂಪುಕಲ್ಲು ಗಣಿಗಾರಿಕೆಯ ಮೇಲಿನ ರಾಜಧನವನ್ನು ಶೇ. 58.82ರಷ್ಟು ಇಳಿಕೆ ಮಾಡಿದ್ದರೂ, ಕೆಂಪುಕಲ್ಲಿನ ಬೆಲೆ ಮಾತ್ರ ದುಬಾರಿಯಾಗಿಯೇ ಉಳಿದಿದೆ. ರಾಜಸ್ವ ಇಳಿಕೆಯಾಗಿದ್ದರೂ, ಕೆಂಪುಕಲ್ಲು ಗಣಿಗಾರಿಕೆ ನಡೆಸುವವರು ಪ್ರತಿ ಕಲ್ಲಿಗೆ ₹50-₹55 ವಸೂಲಿ ಮಾಡುತ್ತಿದ್ದು, ಇದು ಬಡವರು, ಮಧ್ಯಮ ವರ್ಗದವರು ಮತ್ತು ಉದ್ಯಮಿಗಳಿಗೆ ದೊಡ್ಡ ಹೊರೆಯಾಗಿದೆ.
ಮಂಗಳೂರು: ರಾಜ್ಯ ಸರ್ಕಾರ ಕೆಂಪುಕಲ್ಲು ಗಣಿಗಾರಿಕೆಯ ಮೇಲಿನ ರಾಜಧನವನ್ನು ಶೇ. 58.82ರಷ್ಟು ಇಳಿಕೆ ಮಾಡಿದ್ದರೂ, ಕೆಂಪುಕಲ್ಲಿನ ಬೆಲೆ ಮಾತ್ರ ದುಬಾರಿಯಾಗಿಯೇ ಉಳಿದಿದೆ. ರಾಜಸ್ವ ಇಳಿಕೆಯಾಗಿದ್ದರೂ, ಕೆಂಪುಕಲ್ಲು ಗಣಿಗಾರಿಕೆ ನಡೆಸುವವರು ಪ್ರತಿ ಕಲ್ಲಿಗೆ ₹50-₹55 ವಸೂಲಿ ಮಾಡುತ್ತಿದ್ದು, ಇದು ಬಡವರು, ಮಧ್ಯಮ ವರ್ಗದವರು ಮತ್ತು ಉದ್ಯಮಿಗಳಿಗೆ ದೊಡ್ಡ ಹೊರೆಯಾಗಿದೆ.
ಈ ಹಿಂದೆ ರಾಜ್ಯ ಸರ್ಕಾರ ಗಣಿಗಾರಿಕೆ ಮೇಲೆ ಹೊಸ ತೆರಿಗೆ ವಿಧಿಸಿದ್ದರಿಂದ ಗಣಿ ಉದ್ಯಮ ಗಣನೀಯವಾಗಿ ಕುಂಠಿತಗೊಂಡಿತ್ತು. ಮರಳುಗಾರಿಕೆ, ಕೆಂಪುಕಲ್ಲು ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಉದ್ಯಮಗಳು ಸ್ತಬ್ಧವಾಗಿದ್ದವು. ಇದರ ಪರಿಣಾಮವಾಗಿ ಮನೆ ನಿರ್ಮಾಣ, ವಸತಿ ಸಂಕೀರ್ಣ ಮತ್ತು ಕಟ್ಟಡ ಉದ್ಯಮ ವಲಯ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಇದನ್ನು ವಿರೋಧಿಸಿ ಉದ್ಯಮಿಗಳು, ಗುತ್ತಿಗೆದಾರರು ಮತ್ತು ಜನಪ್ರತಿನಿಧಿಗಳು ರಾಜಧನ ಇಳಿಕೆಗೆ ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸಿದ್ದರು.
ತೆರಿಗೆ ಏರಿಕೆ ಮತ್ತು ಪ್ರತಿಭಟನೆ:
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಪ್ರಕಾರ, ಈ ಹಿಂದೆ 10 ಟನ್ (ಸುಮಾರು 400 ಕೆಂಪುಕಲ್ಲು) ಕೆಂಪುಕಲ್ಲಿಗೆ ₹50 ರಾಯಲ್ಟಿ ಕಟ್ಟಬೇಕಾಗಿತ್ತು. ಇದು ₹120 ರವರೆಗೂ ಏರಿಕೆಯಾಗಿತ್ತು. ಆದರೆ, ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿ 10 ಟನ್ ಕೆಂಪುಕಲ್ಲಿಗೆ ರಾಯಲ್ಟಿ ₹700, ಡಿಎಂಎಫ್ ₹70, ಎಪಿ ₹280, 2ಡಿ ₹1,050 ಸೇರಿದಂತೆ ಒಟ್ಟು ₹2,564 ರಾಜಧನ ಕಟ್ಟಲು ಆದೇಶಿಸಿತ್ತು.
ಈ ಅತಿಯಾದ ರಾಜಧನವನ್ನು ಖಂಡಿಸಿ ಗಣಿ ಉದ್ಯಮಿಗಳು ಗಣಿಗಾರಿಕೆಯನ್ನು ಸ್ಥಗಿತಗೊಳಿಸಿ ಪ್ರತಿಭಟಿಸಿದ್ದರು. ಜಿಲ್ಲಾಡಳಿತವೂ ಅಕ್ರಮ ಗಣಿಗಾರಿಕೆ ಮತ್ತು ಕೆಂಪುಕಲ್ಲು ಸಾಗಾಟದ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡಿದ್ದರಿಂದ ಕರಾವಳಿ ಜಿಲ್ಲೆಯಲ್ಲಿ ಗಣಿಗಾರಿಕೆ ಸಂಪೂರ್ಣ ಸ್ಥಗಿತಗೊಂಡಿತ್ತು.
ಸಮಸ್ಯೆಗೆ ಪರಿಹಾರದ ಪ್ರಯತ್ನ:
ಗಣಿಗಾರಿಕೆ ಸ್ಥಗಿತದಿಂದ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದ್ದರಿಂದ ಸರ್ಕಾರದ ಮೇಲೆ ಒತ್ತಡ ಹೆಚ್ಚಾಯಿತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸ್ಪೀಕರ್ ಯು.ಟಿ. ಖಾದರ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮತ್ತು ಗಣಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳ ಮುಂದಾಳತ್ವದಲ್ಲಿ ಸಿವಿಲ್ ಗುತ್ತಿಗೆದಾರರ ಸಂಘ, ಗಣಿ ಉದ್ಯಮಿಗಳು ಮತ್ತು ಕ್ರೆಡೈ ಪದಾಧಿಕಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ರಾಜಸ್ವ ಇಳಿಕೆ ಮಾಡುವ ಬಗ್ಗೆ ಸಹಮತಕ್ಕೆ ಬರಲಾಯಿತು.
ರಾಜಧನ ಇಳಿಕೆ:
ಬೆಂಗಳೂರಿನ ಸಭೆಯಲ್ಲಿ ಕೆಂಪುಕಲ್ಲಿನ ದರ, ರಾಜಸ್ವ ಮತ್ತು ಇತರ ಸಾಧಕ-ಬಾಧಕಗಳ ಬಗ್ಗೆ ಸಮಗ್ರ ಚರ್ಚೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಾಯಿತು. ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ರಾಜಸ್ವ ಧನವನ್ನು ₹920ಕ್ಕೆ ಅಂತಿಮಗೊಳಿಸಲಾಯಿತು. ಇದರಿಂದ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದ ಒಂದು ಹಂತದ ಸಮಸ್ಯೆ ಬಗೆಹರಿದಿತ್ತು.
ಸುಲಿಗೆ ಮುಂದುವರಿಕೆ ಮತ್ತು ಆಗ್ರಹ:
ರಾಜ್ಯ ಸರ್ಕಾರ ರಾಜಸ್ವ ಧನವನ್ನು ಶೇ. 58.80ರಷ್ಟು ಇಳಿಕೆ ಮಾಡಿದರೂ, ಗಣಿ ಉದ್ಯಮಿಗಳು ರಾಜಸ್ವ ಏರಿಕೆ ನೆಪದಲ್ಲಿ ದರವನ್ನು ಇಳಿಸದೆ ಹಿಂದಿನಂತೆಯೇ ಸುಲಿಗೆ ಮಾಡುತ್ತಿದ್ದಾರೆ. ಪ್ರಸ್ತುತ ಒಂದು ಕೆಂಪು ಕಲ್ಲಿನ ಬೆಲೆ ₹50-₹55ಕ್ಕೆ ಏರಿದ್ದು, 10 ಟನ್ ಕೆಂಪುಕಲ್ಲಿಗೆ ₹18,000 ರಿಂದ ₹20,000 ವಸೂಲಿ ಮಾಡುತ್ತಿದ್ದಾರೆ. ಇದರಲ್ಲಿ ಸರ್ಕಾರಕ್ಕೆ ಸಂದಾಯವಾಗುತ್ತಿರುವುದು ಕೇವಲ ₹920 ಮಾತ್ರ. ಈ ದರ ಏರಿಕೆಯಿಂದಾಗಿ ಬಡವರು, ಮಧ್ಯಮ ವರ್ಗದವರು, ಕಟ್ಟಡ ಉದ್ಯಮಿಗಳು ಮತ್ತು ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಮಧ್ಯಪ್ರವೇಶಿಸಿ, ರಾಜಧನ ಹೆಸರಿನಲ್ಲಿ ಕೆಂಪುಕಲ್ಲಿನ ದರವನ್ನು ಅವೈಜ್ಞಾನಿಕವಾಗಿ ಏರಿಸಿರುವುದರ ಬಗ್ಗೆ ಪರಿಶೀಲನೆ ನಡೆಸಬೇಕು. ಸರ್ಕಾರದ ರಾಜಧನಕ್ಕೆ ತಕ್ಕಂತೆ ಕೆಂಪುಕಲ್ಲಿನ ದರವನ್ನು ಇಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವಂತೆ ಆಗ್ರಹಿಸಲಾಗಿದೆ.
ದ.ಕ. ಸಿವಿಲ್ ಗುತ್ತಿಗೆದಾರರ ಅಸೋಸಿಯೇಷನ್ ಅಧ್ಯಕ್ಷ ಮಹಾಬಲ ಕೊಟ್ಟಾರಿ ಮಾತನಾಡಿ, “ಜಿಲ್ಲೆಯಲ್ಲಿ ₹30ಕ್ಕೆ ದೊರೆಯುತ್ತಿದ್ದ ಕಲ್ಲಿನ ದರ ಈಗ ₹55ಕ್ಕೆ ಏರಿಕೆಯಾಗಿದೆ. ರಾಜ್ಯ ಸರ್ಕಾರ ರಾಜಧನ ಇಳಿಕೆ ಮಾಡಿದರೂ ಕೆಂಪುಕಲ್ಲಿನ ದರ ಇಳಿಕೆಯಾಗಿಲ್ಲ. ಈ ದರದಲ್ಲಿ 1,200 ಚದರಡಿ ವಿಸ್ತೀರ್ಣದ ಮನೆಗೆ ಸುಮಾರು ₹3 ಲಕ್ಷದವರೆಗೆ ಹೆಚ್ಚುವರಿ ಹೊರೆಯಾಗಲಿದೆ. ಈ ದರದಲ್ಲಿ ನಮಗೂ ಮನೆ ನಿರ್ಮಾಣ ಕಾಮಗಾರಿ ಸಾಧ್ಯವಿಲ್ಲ. ನಾವು ದರ ಏರಿಕೆ ಮಾಡಿದರೆ ಜನಸಾಮಾನ್ಯರಿಗೆ ಮನೆ ಕಟ್ಟಲು ಸಮಸ್ಯೆಯಾಗಲಿದೆ” ಎಂದರು.
ಹಿರಿಯ ಭೂ ವಿಜ್ಞಾನಿ, ದ.ಕ. ಸಂದೀಪ್ ಜಿ.ಯು. “ರಾಜ್ಯ ಸರ್ಕಾರ ಕೆಂಪು ಕಲ್ಲಿನ ರಾಜಧನವನ್ನು ₹920ಕ್ಕೆ ಇಳಿಸಿದ ಮೇಲೂ ಕೆಂಪುಕಲ್ಲು ಗಣಿಗಾರಿಕೆ ನಡೆಸುವವರು ಕಲ್ಲಿನ ದರವನ್ನು ಇಳಿಸದಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ಬಗ್ಗೆ ನಾವು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದರು.
ಅಂತರ ರಾಜ್ಯ
Arrested-14ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿ ಅಪಹರಣಕಾರರ ಬೇಡಿಕೆಯಂತೆ 25ಲಕ್ಷ ರೂ ನೀಡಿದರೂ ಮರಳಿ ಬಾರದ ಶಿಕ್ಷಕನ ಪ್ರಕರಣಕ್ಕೆ ಮಹತ್ವದ ತಿರುವು..!
14 ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ತ್ರಿಪುರದ ಶಾಲಾ ಶಿಕ್ಷಕರ ಅಪಹರಣ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಅಪಹರಣಕಾರರ ಬೇಡಿಕೆಯಂತೆ ಕುಟುಂಬಸ್ಥರು ಸುಮಾರು ₹25 ಲಕ್ಷ ಸುಲಿಗೆ ಹಣ ನೀಡಿದ್ದರೂ ಮರಳಿ ಬಾರದ ಶಿಕ್ಷಕನ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಪುರ ಪೊಲೀಸರ ಅಪರಾಧ ತನಿಖಾ ದಳ (CID) ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಪ್ರಮುಖ ಶಂಕಿತನೊಬ್ಬನನ್ನು ಬಂಧಿಸಿದೆ.
ಅಗರ್ತಲಾ: ಬರೋಬ್ಬರಿ 14 ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದ ತ್ರಿಪುರದ ಶಾಲಾ ಶಿಕ್ಷಕರ ಅಪಹರಣ ಪ್ರಕರಣ ಇದೀಗ ಮಹತ್ವದ ತಿರುವು ಪಡೆದುಕೊಂಡಿದೆ. ಅಪಹರಣಕಾರರ ಬೇಡಿಕೆಯಂತೆ ಕುಟುಂಬಸ್ಥರು ಸುಮಾರು ₹25 ಲಕ್ಷ ಸುಲಿಗೆ ಹಣ ನೀಡಿದ್ದರೂ ಮರಳಿ ಬಾರದ ಶಿಕ್ಷಕನ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಪುರ ಪೊಲೀಸರ ಅಪರಾಧ ತನಿಖಾ ದಳ (CID) ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಪ್ರಮುಖ ಶಂಕಿತನೊಬ್ಬನನ್ನು ಬಂಧಿಸಿದೆ.
ಬಾಜು ಎಂದು ಗುರುತಿಸಲಾಗಿರುವ ಆರೋಪಿಯನ್ನು ಗುರುವಾರ ಬಂಧಿಸಿ ಅಗರ್ತಲಾಗೆ ಕರೆತರಲಾಗಿದೆ. ಬಳಿಕ ಪಶ್ಚಿಮ ತ್ರಿಪುರದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ (CJM) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯವು ನಾಲ್ಕು ದಿನಗಳ ಕಾಲ ಸಿಐಡಿ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಏನಿದು 14 ವರ್ಷಗಳ ಹಿಂದಿನ ಪ್ರಕರಣ?
ಅಗರ್ತಲಾದ ಭಾಟಿ ಅಭಯನಗರ ನಿವಾಸಿ ಆಶಿಶ್ ಸೋಮ್ (40) ಎಂಬ ಶಾಲಾ ಶಿಕ್ಷಕರು 2011ರ ಮೇ 28ರಂದು ನಿಗೂಢವಾಗಿ ನಾಪತ್ತೆಯಾಗಿದ್ದರು. ಮರದ ವ್ಯಾಪಾರದಲ್ಲಿಯೂ ತೊಡಗಿಸಿಕೊಂಡಿದ್ದ ಅವರು, ವ್ಯವಹಾರದ ನಿಮಿತ್ತ ಕಾಂಚನ್ಪುರಕ್ಕೆ ತೆರಳಿದ ಬಳಿಕ ಮನೆಗೆ ವಾಪಸಾಗಿರಲಿಲ್ಲ.
ಶಿಕ್ಷಕರು ನಾಪತ್ತೆಯಾದ ಕೆಲವೇ ದಿನಗಳಲ್ಲಿ ಅವರನ್ನು ಅಪಹರಿಸಿರುವುದಾಗಿ ಹೇಳಿಕೊಂಡು ಕುಟುಂಬಸ್ಥರಿಗೆ ದೂರವಾಣಿ ಕರೆಗಳು ಬಂದಿದ್ದವು. ಅಪಹರಣಕಾರರು ಹಣಕ್ಕೆ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಕುಟುಂಬಸ್ಥರು ವಿವಿಧ ಹಂತಗಳಲ್ಲಿ ಸುಮಾರು ₹25 ಲಕ್ಷ ಹಣವನ್ನು ನೀಡಿದ್ದಾರೆ. ಆದರೆ ಹಣ ಪಡೆದ ಬಳಿಕವೂ ಶಿಕ್ಷಕರನ್ನು ಬಿಡುಗಡೆ ಮಾಡಿರಲಿಲ್ಲ. ಹಲವು ವರ್ಷಗಳ ಕಾಲ ಅವರ ಸುಳಿವು ಕೂಡ ಪತ್ತೆಯಾಗಿರಲಿಲ್ಲ.
ಸಮಾಧಿಗಳಲ್ಲಿ ಪತ್ತೆಯಾದ ಅಸ್ಥಿಪಂಜರದಿಂದ ತನಿಖೆಗೆ ವೇಗ
ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು. ತನಿಖೆಯ ವೇಳೆ ಶಿಕ್ಷಕ ಆಶಿಶ್ ಸೋಮ್ ಅವರ ವ್ಯಾಪಾರ ಪಾಲುದಾರ ಎನ್ನಲಾದ ಹೊಸೈನ್ ಅಹ್ಮದ್ ಕೂಡ ಅಪಹರಣ ಪ್ರಕರಣದ ಶಂಕಿತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಬಂಧಿತ ಬಾಜುವನ್ನು ವಿಚಾರಣೆ ನಡೆಸಲಾಗುತ್ತಿದ್ದು, ಆತ ಹಲವು ಮಹತ್ವದ ಮಾಹಿತಿಗಳನ್ನು ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ.
ಇದೇ ವರ್ಷದ ಸೆಪ್ಟೆಂಬರ್ 16ರಂದು ಅಸ್ಸಾಂನ ಕರೀಂಗಂಜ್ ಜಿಲ್ಲೆಯ ಸೋನ್ಸಿಲ್ ಪ್ರದೇಶದ ಸ್ಮಶಾನವೊಂದರ ಮೂರು ಸಮಾಧಿಗಳಿಂದ ಅಪರಿಚಿತ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿದ್ದವು. ಈ ಬೆಳವಣಿಗೆ ಪ್ರಕರಣದ ತನಿಖೆಗೆ ಹೊಸ ವೇಗ ನೀಡಿದೆ.
ಪತ್ತೆಯಾದ ಅಸ್ಥಿಪಂಜರದ ಅವಶೇಷಗಳು ನಾಪತ್ತೆಯಾಗಿರುವ ಆಶಿಶ್ ಸೋಮ್ ಅವರದ್ದೇ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಅವರ ಕುಟುಂಬ ಸದಸ್ಯರ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿದ್ದಾರೆ. ಸದ್ಯ ಡಿಎನ್ಎ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದ್ದು, ಅದರ ಬಳಿಕ ಪ್ರಕರಣದ ಹಲವು ನಿಗೂಢ ಸಂಗತಿಗಳು ಬಯಲಾಗುವ ನಿರೀಕ್ಷೆಯಿದೆ.
ಸ್ಥಳೀಯ
Bail-ಬೆಳ್ತಂಗಡಿ: ಯತೀಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ರಿಲೀಫ್; ಮತ್ತಿಬ್ಬರಿಗೆ ಜಾಮೀನು
ಗುರುವಾಯನಕೆರೆಯ ಅಲಾದಿಕೊಟ್ಟಿಗೆಯಲ್ಲಿ ಕಳೆದ ಜೂನ್ 1ರಂದು ನಡೆದ ಪೆರ್ನೆ ಮೂಲದ ಯತೀಶ್ ಗೌಡ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಉಳಿದ ಇಬ್ಬರು ಆರೋಪಿಗಳಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೂವರು ಆರೋಪಿಗಳಿಗೂ ಜಾಮೀನು ದೊರೆತಂತಾಗಿದೆ.
ಬೆಳ್ತಂಗಡಿ: ಗುರುವಾಯನಕೆರೆಯ ಅಲಾದಿಕೊಟ್ಟಿಗೆಯಲ್ಲಿ ಕಳೆದ ಜೂನ್ 1ರಂದು ನಡೆದ ಪೆರ್ನೆ ಮೂಲದ ಯತೀಶ್ ಗೌಡ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಉಳಿದ ಇಬ್ಬರು ಆರೋಪಿಗಳಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದರೊಂದಿಗೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಮೂವರು ಆರೋಪಿಗಳಿಗೂ ಜಾಮೀನು ದೊರೆತಂತಾಗಿದೆ.
ಪ್ರಕರಣದ ಆರೋಪಿಗಳಾದ ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲಿನ ಯಶೋಧರ ಹಾಗೂ ಕಡಬ ತಾಲೂಕಿನ ಚಾರ್ವಾಕದ ಮೋಹನ್ ಅವರಿಗೆ ಮಂಗಳೂರಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದೆ.
ಕೆಲ ದಿನಗಳ ಹಿಂದೆಯಷ್ಟೇ ಇದೇ ಪ್ರಕರಣದ ಮತ್ತೊಬ್ಬ ಆರೋಪಿ, ಬೆಳ್ತಂಗಡಿ ತಾಲೂಕಿನ ಪಡಂಗಡಿಯ ಇಬ್ರಾಹಿಂ ಅವರಿಗೂ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಪ್ರಕರಣದ ಹಿನ್ನೆಲೆ:
ಜೂನ್ 1ರಂದು ಬೆಳಗ್ಗೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ಅಲಾದಿಕೊಟ್ಟಿಗೆ ಎಂಬಲ್ಲಿ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.
ಬಳಿಕ ಮೃತ ವ್ಯಕ್ತಿ ಪೆರ್ನೆ ಮೂಲದ ಯತೀಶ್ ಗೌಡ ಎಂಬುದು ಗುರುತಿಸಲ್ಪಟ್ಟಿತ್ತು. ಅವರ ಸಹೋದರ ನಿತಿನ್ ಹಾಗೂ ಸಂಬಂಧಿಕರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹದ ಗುರುತು ಪತ್ತೆಹಚ್ಚಿದ್ದರು.
ಪ್ರಕರಣದ ತನಿಖೆ ನಡೆಸಿದ ಬೆಳ್ತಂಗಡಿ ಪೊಲೀಸರು ಕೊಲೆ ಆರೋಪದಡಿ ಯಶೋಧರ, ಮೋಹನ್ ಹಾಗೂ ಇಬ್ರಾಹಿಂ ಎಂಬ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದೀಗ ಪ್ರಕರಣದ ಮೂವರು ಆರೋಪಿಗಳಿಗೂ ನ್ಯಾಯಾಲಯದಿಂದ ಜಾಮೀನು ದೊರೆತಿದೆ.
ಅಪರಾಧ
Mangalore-ಮಂಗಳೂರು: ಕೆಲಸ ಮಾಡಿದ ಹಣ ನೀಡದ ವಿಚಾರಕ್ಕೆ ಮನೆ ಮಾಲೀಕನ ಕೊಲೆ; ಆರೋಪಿಗೆ ಜೀವಾವಧಿ ಶಿಕ್ಷೆ, ಮತ್ತೊಬ್ಬ ಖುಲಾಸೆ
ಕೆಲಸ ಮಾಡಿದ ಹಣ ನೀಡದ ವಿಚಾರಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣದಲ್ಲಿ ಮೊದಲನೇ ಆರೋಪಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದ ಎರಡನೇ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಮಂಗಳೂರು: ಕೆಲಸ ಮಾಡಿದ ಹಣ ನೀಡದ ವಿಚಾರಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಪ್ರಕರಣದಲ್ಲಿ ಮೊದಲನೇ ಆರೋಪಿಗೆ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದ ಎರಡನೇ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದ ಮಲ್ಲಿ ಲೇಔಟ್ನಲ್ಲಿರುವ ಸುರೇಂದ್ರನ್ ಅವರ ಮನೆಯಲ್ಲಿ 2020ರ ನವೆಂಬರ್ 3ರಂದು ಈ ಕೊಲೆ ನಡೆದಿತ್ತು.
ಪ್ರಕರಣದ ಮೊದಲನೇ ಆರೋಪಿ ಸಂತು ಅಲಿಯಾಸ್ ಸಂತೋಷ್, ತಾನು ಕೆಲಸ ಮಾಡಿದ ಹಣವನ್ನು ಸುರೇಂದ್ರನ್ ನೀಡಿಲ್ಲವೆಂದು ಎರಡನೇ ಆರೋಪಿ ಸಿದ್ದು ಅಲಿಯಾಸ್ ಸಿದ್ದಪ್ಪನೊಂದಿಗೆ ಹಣ ಕೇಳಲು ಅವರ ಮನೆಗೆ ತೆರಳಿದ್ದನು. ಈ ವೇಳೆ ಸಿದ್ದಪ್ಪನ ಪ್ರೇರಣೆಯಿಂದ ಸಂತೋಷ್ ಮನೆಯೊಳಗೆ ಹೋಗಿ ಸುರೇಂದ್ರನ್ ಅವರಲ್ಲಿ ಹಣ ಕೇಳಿದ್ದಾನೆ. ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಜಗಳ ವಿಕೋಪಕ್ಕೆ ತಿರುಗಿದಾಗ ಸಂತೋಷ್ ಪೇಪರ್ ಕತ್ತರಿಸುವ ಬ್ಲೇಡ್ನಿಂದ ಸುರೇಂದ್ರನ್ ಅವರ ಕುತ್ತಿಗೆ, ಮುಖ ಹಾಗೂ ತಲೆಯ ಭಾಗಕ್ಕೆ ಕೊಯ್ದಿದ್ದಾನೆ. ಅಲ್ಲದೆ, ವ್ಯಾಯಾಮಕ್ಕೆ ಬಳಸುವ ರಾಡ್ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪ್ರಕರಣದ ಆರೋಪಪಟ್ಟಿಯಲ್ಲಿ ತಿಳಿಸಲಾಗಿತ್ತು.
ಈ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 88/2020ರಂತೆ ಐಪಿಸಿ ಕಲಂ 302, 392, 201, 114 ಜೊತೆಗೆ 34ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಕಾವೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಘವ್ ಪಡೀಲ್ ಅವರು ಸಂತೋಷ್ ಮತ್ತು ಸಿದ್ದಪ್ಪನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತನಿಖೆ ಪೂರ್ಣಗೊಳಿಸಿ ಇಬ್ಬರು ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು, ಸಾಕ್ಷ್ಯಾಧಾರಗಳ ಪರಿಶೀಲನೆಯ ಬಳಿಕ ಮೊದಲನೇ ಆರೋಪಿ ಸಂತು ಅಲಿಯಾಸ್ ಸಂತೋಷ್ ದೋಷಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಎರಡನೇ ಆರೋಪಿ ಸಿದ್ದು ಅಲಿಯಾಸ್ ಸಿದ್ದಪ್ಪನನ್ನು ಖುಲಾಸೆಗೊಳಿಸಿದ್ದಾರೆ.
ಆರೋಪಿಗೆ ವಿಧಿಸಿದ ಶಿಕ್ಷೆ:
- ಐಪಿಸಿ ಕಲಂ 302 (ಕೊಲೆ): ಜೀವಾವಧಿ ಶಿಕ್ಷೆ ಹಾಗೂ 25,000 ರೂ. ದಂಡ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಜೈಲು ಶಿಕ್ಷೆ.
- ಐಪಿಸಿ ಕಲಂ 392 (ದರೋಡೆ): ಎರಡು ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 5,000 ರೂ. ದಂಡ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ ಒಂದು ತಿಂಗಳ ಶಿಕ್ಷೆ.
- ಐಪಿಸಿ ಕಲಂ 201 (ಸಾಕ್ಷ್ಯ ನಾಶ): ಆರು ತಿಂಗಳ ಕಾರಾಗೃಹ ಶಿಕ್ಷೆ ಹಾಗೂ 2,000 ರೂ. ದಂಡ. ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿಯಾಗಿ 15 ದಿನಗಳ ಶಿಕ್ಷೆ.
ಒಟ್ಟು 32,000 ರೂ. ದಂಡದ ಮೊತ್ತದಲ್ಲಿ 7,000 ರೂ. ಸರಕಾರಕ್ಕೆ ಹಾಗೂ 25,000 ರೂ.ಗಳನ್ನು ಕೊಲೆಯಾದ ಸುರೇಂದ್ರನ್ ಅವರ ಪತ್ನಿಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ್ ಅವರು ವಾದ ಮಂಡಿಸಿದ್ದರು.
-
ಮಂಗಳೂರು15 hours agoMangalore-ಮಂಗಳೂರು ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಹೊಸ ತಿರುವು: ಮನೆಯವರ ಜೊತೆ ತೆರಳಲು ಯುವತಿ ನಕಾರ..!
-
ಅಂತರ ರಾಜ್ಯ20 hours agoFormer CBI officer-ಅಧಿಕಾರ, ಹಣ, ಐಷಾರಾಮಿ ಬದುಕಿಗೆ ಗುಡ್ಬೈ; ಗುಹೆಯಲ್ಲಿ ಧ್ಯಾನ ಮಾಡುತ್ತಿರುವ ಮಾಜಿ ಸಿಬಿಐ ಅಧಿಕಾರಿ..!
-
ಬಿಗ್ ನ್ಯೂಸ್22 hours agoBail rejected-ಸಿದ್ದರಾಮಯ್ಯ ವಿರುದ್ಧದ ‘ಸ್ಟಿಂಗ್’ ಪ್ರಕರಣ: ಕೃಪಾ ಆಳ್ವಾ, ರಾಕೇಶ್ ಶೆಟ್ಟಿ ಸೇರಿ 6 ಮಂದಿಯ ಜಾಮೀನು ಅರ್ಜಿ ವಜಾ
-
ಅಂತರ ರಾಜ್ಯ14 hours agoArrested-14ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿ ಅಪಹರಣಕಾರರ ಬೇಡಿಕೆಯಂತೆ 25ಲಕ್ಷ ರೂ ನೀಡಿದರೂ ಮರಳಿ ಬಾರದ ಶಿಕ್ಷಕನ ಪ್ರಕರಣಕ್ಕೆ ಮಹತ್ವದ ತಿರುವು..!
-
ಸಿನೆಮಾ20 hours agoDawood-‘ಧುರಂಧರ್ ‘ ನಲ್ಲಿ ದಾವೂದ್ ನ ತೋರಿಸಿದ ರೀತಿ ವಾಸ್ತವವಲ್ಲ…! ಮೋಸ್ಟ್ ವಾಂಟೆಡ್ ಪಾತಕಿ ಈಗ ಹೇಗಿದ್ದಾನೆ ಗೊತ್ತೇ..? ಮಾಜಿ FBI ಅಧಿಕಾರಿ ಹೇಳಿದ್ದೇನೂ..?
-
ನಿಧನ ವಾರ್ತೆ21 hours agoHeart attack-ಸಾಲಿಗ್ರಾಮ: ಕಚೇರಿಯಲ್ಲೇ ಹೃದಯಾಘಾತ; ಬಹುಮುಖ ಪ್ರತಿಭೆ ದಿನೇಶ್ ಹೊಳ್ಳ ನಿಧನ
-
ನಿಧನ ವಾರ್ತೆ21 hours agoMudbidri-ಮಂಗಳೂರಿನಲ್ಲಿ ಮೇಲ್ಛಾವಣಿ ಕೆಲಸದ ವೇಳೆ ಅವಘಡ: ಮೂಡುಬಿದಿರೆ ತಾ.ಪಂ. ಮಾಜಿ ಉಪಾಧ್ಯಕ್ಷ ಸಾವು
-
ನಿಧನ ವಾರ್ತೆ21 hours agoOne-sided love-ಇನ್ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಮೇಲಿನ ಒನ್ಸೈಡೆಡ್ ಲವ್; ಹಲ್ಲೆಗೊಳಗಾದ ಯುವಕ ಸಾವು















