Uncategorized
ಪುತ್ತೂರು: ಅರುಣಾ ಕಲಾಮಂದಿರದಲ್ಲಿ ಬೃಹತ್ ಸ್ವದೇಶಿ ಮತ್ತು ಆಹಾರ ಮೇಳ: ಗ್ರಾಹಕರಿಂದ ಭರ್ಜರಿ ರೆಸ್ಪಾನ್ಸ್!

ಪುತ್ತೂರು: ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸುವ ಮತ್ತು ಜನರಿಗೆ ರುಚಿಕರವಾದ ಆಹಾರದ ಅನುಭವ ನೀಡುವ ಉದ್ದೇಶದಿಂದ ಪುತ್ತೂರಿನ ಅರುಣಾ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಬೃಹತ್ ಆಹಾರ ಮೇಳ ಮತ್ತು ಸ್ವದೇಶಿ ಮೇಳಕ್ಕೆ ಗ್ರಾಹಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಈ ಮೇಳಕ್ಕೆ ರಜಾ ದಿನವಾದ ಭಾನುವಾರ ಜನಸಾಗರವೇ ಹರಿದುಬಂದಿದ್ದು, ಸೋಮವಾರ ಕೊನೆಯ ದಿನವಾದ ಇಂದು ಸಹ ನಿರೀಕ್ಷೆಗೂ ಮೀರಿ ಜನ ಸೇರುವ ಸಾಧ್ಯತೆ ಇದೆ. ಕುಂದಾಪುರದ ಬೆನಕ ಇವೆಂಟ್ಸ್ ಆಯೋಜಿಸಿರುವ ಈ ಮೇಳವು ಆಗಸ್ಟ್ 31ರಂದು ಆರಂಭವಾಗಿದ್ದು, ಸೆಪ್ಟೆಂಬರ್ 3ರಂದು ತೆರೆ ಕಾಣಲಿದೆ.
70ಕ್ಕೂ ಅಧಿಕ ಸ್ಟಾಲ್ಗಳಲ್ಲಿ ವೈವಿಧ್ಯಮಯ ಉತ್ಪನ್ನಗಳು!
ಈ ಮೇಳದಲ್ಲಿ 70ಕ್ಕೂ ಹೆಚ್ಚು ಸ್ಟಾಲ್ಗಳು ಭಾಗವಹಿಸಿದ್ದು, ವಿವಿಧ ಬಗೆಯ ಉತ್ಪನ್ನಗಳನ್ನು ಪ್ರದರ್ಶಿಸಿವೆ. ಪುತ್ತೂರಿನ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿಲ್ಲದ ಅನೇಕ ವಿಶಿಷ್ಟ ಉತ್ಪನ್ನಗಳು ಇಲ್ಲಿ ದೊರೆಯುತ್ತಿದ್ದು, ಗ್ರಾಹಕರು ಉತ್ಸಾಹದಿಂದ ಖರೀದಿಸುತ್ತಿದ್ದಾರೆ. ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಮೇಳವು ತೆರೆದಿರುತ್ತದೆ ಮತ್ತು ಪ್ರವೇಶ ಸಂಪೂರ್ಣ ಉಚಿತವಾಗಿದೆ.

ಏನೇನಿದೆ ಈ ಮೇಳದಲ್ಲಿ?
- ಆಹಾರ: ಲೈವ್ ಜಿಲೇಬಿ ಮತ್ತು ಹೋಳಿಗೆಯ ಹಲವು ಸ್ಟಾಲ್ಗಳು, ರುಚಿರುಚಿಯಾದ ತಿಂಡಿ ತಿನಿಸುಗಳು, ಉತ್ತರ ಮತ್ತು ದಕ್ಷಿಣ ಭಾರತದ ವೈವಿಧ್ಯಮಯ ಆಹಾರಗಳು, ಸಾವಯವ ಪದಾರ್ಥಗಳು, ಸಿರಿಧಾನ್ಯಗಳು, ಹೋಮ್ಮೇಡ್ ಕಾಂಡಿಮೆಂಟ್ಸ್ ಮತ್ತು ಉಪ್ಪಿನಕಾಯಿಗಳು ಗ್ರಾಹಕರ ಗಮನ ಸೆಳೆದಿವೆ.
- ಸ್ವದೇಶಿ ಉತ್ಪನ್ನಗಳು: ನೈಸರ್ಗಿಕ ಸೌಂದರ್ಯ ವರ್ಧಕಗಳು, ಖಾದಿ ಉತ್ಪನ್ನಗಳು, ನಿತ್ಯ ಬಳಕೆಯ ವಸ್ತುಗಳು, ಆಯುರ್ವೇದ ಉತ್ಪನ್ನಗಳು, ಫ್ಯಾನ್ಸಿ ಸೀರೆಗಳು, ಗೃಹ ಅಲಂಕಾರಿಕಾ ವಸ್ತುಗಳು, ರೆಡಿಮೇಡ್ ಉಡುಪುಗಳು, ಚನ್ನಪಟ್ಟಣದ ಗೊಂಬೆಗಳು, ಇಳಕಲ್ ಸೀರೆಗಳು, ಒನ್ ಗ್ರಾಂ ಗೋಲ್ಡ್ ಜ್ಯುವೆಲ್ಲರಿ, ಮಕ್ಕಳ ಉಡುಪುಗಳು, ಹಪ್ಪಳ, ಸಂಡಿಗೆ, ಆದಿವಾಸಿ ಹರ್ಬಲ್ ಹೇರ್ ಆಯಿಲ್ಸ್ ಸೇರಿದಂತೆ ಹಲವು ವಿಭಿನ್ನ ಬಗೆಯ ಮಳಿಗೆಗಳು ಇಲ್ಲಿವೆ.
- ವಿಶೇಷ ಆಕರ್ಷಣೆ: ಮಾವು, ಹಲಸು, ಹೂವಿನ ಗಿಡಗಳು ಮತ್ತು ತರಕಾರಿ ಬೀಜಗಳ ಮಳಿಗೆಯೂ ಇದ್ದು, ಗಿಡಪ್ರಿಯರನ್ನು ಆಕರ್ಷಿಸುತ್ತಿದೆ. ಅಲ್ಲದೆ, ಹಳೆಯ ಜರಿ ಸೀರೆಗಳನ್ನು ಮಾರಾಟ ಮಾಡಲು ಜನರಿಗೆ ಅವಕಾಶ ಕಲ್ಪಿಸಲಾಗಿದೆ.
ಉದ್ದೇಶ ಸ್ಪಷ್ಟ: ಸ್ವದೇಶಿ ಉತ್ಪನ್ನಗಳತ್ತ ಜನರನ್ನು ಸೆಳೆಯುವುದು
ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಸ್ವದೇಶಿ ಉತ್ಪನ್ನಗಳತ್ತ ಜನರನ್ನು ಸೆಳೆಯುವುದು. ಸಾಗರ, ಕುಮಟಾ, ಅಂಕೋಲ, ಭಟ್ಕಳಗಳಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿದ್ದ ಈ ಮೇಳ ಇದೀಗ ಪುತ್ತೂರಿನಲ್ಲಿ ನಡೆಯುತ್ತಿದೆ. ಇದರ ಜತೆಗೆ ಆಹಾರ ಮೇಳವನ್ನು ಆಯೋಜಿಸುವ ಮೂಲಕ ಜನರಿಗೆ ವಿಭಿನ್ನ ಅನುಭವ ನೀಡುವ ಪ್ರಯತ್ನ ಮಾಡಲಾಗಿದೆ. ಈ ಮೇಳಕ್ಕೆ ಭೇಟಿ ನೀಡಿ, ಭರ್ಜರಿ ಶಾಪಿಂಗ್ ಮಾಡುವ ಮೂಲಕ ಸಣ್ಣ ಉದ್ಯಮಿಗಳು ಮತ್ತು ಗೃಹ ಉತ್ಪನ್ನ ತಯಾರಕರಿಗೆ ತಮ್ಮ ಬೆಂಬಲ ನೀಡುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಇಂದೇ ಕೊನೆಯ ದಿನ! ತಪ್ಪದೇ ಭೇಟಿ ನೀಡಿ.
ಪುತ್ತೂರಿನ ಅರುಣಾ ಕಲಾಮಂದಿರದಲ್ಲಿ ನಡೆಯುತ್ತಿರುವ ಈ ಬೃಹತ್ ಸ್ವದೇಶಿ ಮತ್ತು ಆಹಾರ ಮೇಳಕ್ಕೆ ಇಂದೇ (ಸೆಪ್ಟೆಂಬರ್ 3, ಸೋಮವಾರ) ಕೊನೆಯ ದಿನ. ಸ್ಥಳೀಯ ಉತ್ಪನ್ನಗಳನ್ನು ಪ್ರೋತ್ಸಾಹಿಸಲು ಮತ್ತು ರುಚಿಕರವಾದ ಆಹಾರವನ್ನು ಆಸ್ವಾದಿಸಲು ಇದೊಂದು ಉತ್ತಮ ಅವಕಾಶ. ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಭೇಟಿ ನೀಡಿ, ಈ ಮೇಳದ ಸದುಪಯೋಗ ಪಡೆದುಕೊಳ್ಳಿ.
Uncategorized
Philomena-ಫಿಲೋಮಿನಾ ಪ.ಪೂ. ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಾಗಾರ
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವೃತ್ತಿ ಮಾರ್ಗದರ್ಶನ ವಿಭಾಗದ ಆಶ್ರಯದಲ್ಲಿ ನ 20 ರಂದು ಕಾಲೇಜು ಸಭಾಂಗಣದಲ್ಲಿ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು.
ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವೃತ್ತಿ ಮಾರ್ಗದರ್ಶನ ವಿಭಾಗದ ಆಶ್ರಯದಲ್ಲಿ ನ 20 ರಂದು ಕಾಲೇಜು ಸಭಾಂಗಣದಲ್ಲಿ ವೃತ್ತಿ ಮಾರ್ಗದರ್ಶನದ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ವಂದನ ಶಂಕರ್ ಮಾತನಾಡಿ, ಪಿ ಯು ಸಿ ನಂತರದ ಅವಕಾಶಗಳು, ಇಂಜಿನಿಯರಿಂಗ್ ವಿಭಾಗಗಳಲ್ಲಿ ಇರುವ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿದರು.
ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾದ ಚೇತನ್ ಮಾತನಾಡಿ, ಮಾದಕ ವಸ್ತುಗಳು ಹಾಗೂ ದೂಮಪಾನದ ವ್ಯಸನ ನಮ್ಮ ನೆನಪಿನ ಶಕ್ತಿಯನ್ನು ಕುಗ್ಗಿಸುತ್ತದೆ ಮತ್ತು ಕ್ಯಾನ್ಸರ್ ನಂತಹ ಮಾರಕ ರೋಗಗಳಿಗೆ ದಾರಿ ಮಾಡಿಕೊಡುತ್ತದೆ. ಹಾಗೆಯೇ ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ ನಮ್ಮ ಏಕಾಗ್ರತೆಯನ್ನು ಭಂಗ ಗೊಳಿಸುತ್ತದೆ ಎಂದು ಹೇಳಿದರು.

ವೃತ್ತಿ ಮಾರ್ಗದರ್ಶನ ವಿಭಾಗದ ನಿರ್ದೇಶಕರಾದ ರವಿಪ್ರಸಾದ್ ಬಿ. ಜಿ ನಿರಂಜನ್ ಜಿ. ಯು, ಕವಿತಾ ಕೆ ಹಾಗೂ ಕಾಲೇಜಿನ ಬೋಧಕ /ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Uncategorized
ಹಿರಿಯ ಸಹಕಾರಿ ಧುರೀಣ ಕೆ.ಕೆ. ನಾರಾಯಣ ಚಳ್ಳಂಗಾರು ನಿಧನ

ಕಲ್ಮಡ್ಕ: ತಾಲೂಕಿನ ಹಿರಿಯ ಸಹಕಾರಿ ಧುರೀಣ, ಸಾಮಾಜಿಕ ಮುಖಂಡ, ಬಹುಮುಖ ಚಿಂತಕ ಕಲ್ಮಡ್ಕ ಗ್ರಾಮದ ಚಳ್ಳಂಗಾರು ಕೆ.ಕೆ. ನಾರಾಯಣ (88) ಅವರು ವಯೋಸಹಜ ಅನಾರೋಗ್ಯದಿಂದ ಗುರುವಾರ ಸಂಜೆ ನಿಧನರಾದರು.
ಮಂಡಲ ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ತಮ್ಮ ಅವಧಿಯಲ್ಲಿ ಗ್ರಾಮದಲ್ಲಿ ಅಭಿವೃದ್ಧಿಯ ಹೊಸ ಶಕೆಗೆ ನಾಂದಿ ಹಾಡಿದ್ದರು. ಕಲ್ಮಡ್ಕ ಸಹಕಾರಿ ಸಂಘದ ನಿರ್ದೇಶಕರಾಗಿ ಸಂಸ್ಥೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದ ಅವರು, ಸಹಕಾರ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದರು. ಪ್ರಗತಿಪರ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದರು.
ಕಲ್ಮಡ್ಕ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ವಿಶೇಷ ಶ್ರಮ ವಹಿಸಿದ್ದ ಅವರು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಯಕ್ಷಗಾನದ ಅರ್ಥಧಾರಿಯಾಗಿ ಕಲಾ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದ ನಾರಾಯಣ ಅವರು, ಸಂಗಮ ಕಲಾ ಸಂಘದ ನಿರ್ದೇಶಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಉತ್ತಮ ಓದುಗ ಹಾಗೂ ವಿಮರ್ಶಕರಾಗಿದ್ದ ಅವರು ಸಾಹಿತ್ಯ, ಕಲೆ, ಸಹಕಾರ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಮೃತರು ಪತ್ನಿ ಸುಬ್ಬಮ್ಮ, ಪುತ್ರಿಯರಾದ ವಿದ್ಯಾ, ಜಯಶ್ರೀ, ದೀಪಿಕಾ, ಪುತ್ರ, ಕ್ಯಾಂಪ್ಕೋ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ನ್ಯಾಯವಾದಿ ಮುರಳಿಕೃಷ್ಣ ಚಳ್ಳಂಗಾರು, ಸೊಸೆ ರಮ್ಯಾ ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
Uncategorized
ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ಪಂಚಮುಖಿ ಆಂಜನೇಯ ಹವನ- ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಭಿಯಾನಕ್ಕೆ ವಿಪಕ್ಷ ನಾಯಕ ಆರ್ ಅಶೋಕ್ ಚಾಲನೆ

ಪುತ್ತೂರು: ಲೋಕಕಲ್ಯಾಣ ಹಾಗೂ ಹಿಂದೂ ಸಮಾಜದ ಏಕತೆಯ ಸಂಕಲ್ಪದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪುತ್ತೂರು ತಾಲೂಕಿನ ನೆಲಪ್ಪಾಲು ವೀರಾಂಜನೇಯ ಕ್ಷೇತ್ರದಲ್ಲಿ ನ.26ರಿಂದ 29ರವರೆಗೆ ನಡೆಯಲಿರುವ ಪಂಚಮುಖಿ ಆಂಜನೇಯ ಹವನದ ಪ್ರಚಾರಾರ್ಥ ಆಟೋ ರಿಕ್ಷಾಗಳಿಗೆ ಸ್ಟಿಕ್ಕರ್ ಅಭಿಯಾನಕ್ಕೆ ವಿಧಾನಸಭೆಯ ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ಚಾಲನೆ ನೀಡಿದರು.
ನ.19ರಂದು ಪುತ್ತೂರಿನಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ವೀರಾಂಜನೇಯ ಕ್ಷೇತ್ರದಲ್ಲಿ ನಡೆಯುವ ಪಂಚಮುಖಿ ಆಂಜನೇಯ ಹವನದ ಸ್ಟಿಕ್ಕರ್ ಅನ್ನು ಆಟೋ ರಿಕ್ಷಾಗಳಿಗೆ ಅಂಟಿಸುವ ಮೂಲಕ ಚಾಲನೆ ನೀಡಿ ಕಾರ್ಯಕ್ರಮಕ್ಕೆ ಯಶಸ್ಸು ಕೋರಿದರು.
ಆಟೋ ರಿಕ್ಷಾಗಳ ಎದುರಿನ ಮತ್ತು ಹಿಂಬದಿಯ ಭಾಗಕ್ಕೆ ತಾವೆ ಸ್ವತಃ ಸ್ಟಿಕ್ಕರ್ ಅಂಟಿಸಿ ಎಲ್ಲರೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ಪಂಚಮುಖಿ ಆಂಜನೇಯ ಯಾಗ ಸಮಿತಿ ಪ್ರಧಾನ ಕಾರ್ಯದರ್ಶಿ ಮುರಳಿಕೃಷ್ಣ ಹಸಂತಡ್ಕ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಪ್ರಧಾನ ಕಾರ್ಯದರ್ಶಿ ಸುನಿಲ್ ದಡ್ಡು, ಯಾಗ ಸಮಿತಿಯ ಪ್ರಮುಖರಾದ ಶ್ಯಾಮ ಸುದರ್ಶನ್ ಹೊಸಮೂಲೆ, ಜಯಂತ ಶೆಟ್ಟಿ ಕಂಬಳತ್ತಡ್ಕ, ಶ್ರೀಧರ್ ತೆಂಕಿಲ ಸಹಿತ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರು ಉಪಸ್ಥಿತರಿದ್ದರು.















