ಪುತ್ತೂರು
ಉಪ್ಪಿನಂಗಡಿ: ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಡಿ ವಿರುದ್ಧ ಹಲವು ಗಂಭೀರ ಆರೋಪ : ಶಿಸ್ತುಕ್ರಮ ಕೈಗೊಳ್ಳುವಂತೆ ಇಲಾಖೆಗೆ ಆಗ್ರಹಿಸಿದ ಪಂಚಾಯತ್ ಸದಸ್ಯರು
ಉಪ್ಪಿನಂಗಡಿ: ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಡಿಯವರ ಗೈರು ಹಾಜರಿಯಿಂದ 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳು ರದ್ದುಗೊಂಡಿದ್ದು ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮೇಲೆ ಈ ಕೆಳಗಿನ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಪುತ್ತೂರು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಶಿಸ್ತು ಕ್ರಮಕ್ಕೆ ಆಗ್ರಹಿಸುವ ನಿರ್ಣಯವನ್ನು ಕೈಗೊಂಡು ಸಭೆಯನ್ನು ಮುಂದೂಡಲಾಯಿತು.
ಪ್ರವೀಣ್ ಕುಮಾರ್ ಡಿಯವರ ಮೇಲೆ ಕೇಳಿಬಂದಿರುವ ಆರೋಪಗಳು:
1.ಕಳೆದ ತಿಂಗಳ ಸಾಮಾನ್ಯ ಸಭೆ ರದ್ದಾಗಲು ಅಭಿವೃದ್ಧಿ ಅಧಿಕಾರಿ ತಾಲೂಕು ಪಂಚಾಯತಿನಲ್ಲಿ ಕ್ರಿಯಾಯೋಜನೆ ಅನುಮೋದನೆ ಪಡೆದು ಸಿದ್ಧವಾದರೂ ಪಂಚಾಯತಿಗೆ ಸಮಯಕ್ಕೆ ಸರಿಯಾಗಿ ತರದೆ 3 ತಿಂಗಳಿನಿಂದ ಕಾರ್ಯಗತಗೊಳಿಸದೇ ನಿರ್ಲಕ್ಷ್ಯ ಮಾಡಿರುವುದು
- ಅಧ್ಯಕ್ಷರು ಚರ್ಚಿಸಿದ ದಿನಾಂಕದಂದು ತಾನು ಲಭ್ಯವಿದ್ದೇನೆ ಎಂದು ಹೇಳಿ ಸಾಮಾನ್ಯ ಸಭೆಯ ದಿನಾಂಕ ನಿಗದಿ ಪಡಿಸಿ ಎಲ್ಲಾ ಸದಸ್ಯರಿಗೆ ಸಾಮಾನ್ಯ ಸಭೆಯ ಸೂಚನಾ ಪತ್ರವನ್ನು ವಿತರಿಸಿ ಯಾವುದೇ ಕಾರಣವನ್ನು ನೀಡದೇ ಗೈರು ಹಾಜರಾಗಿದ್ದು ಪಂಚಾಯತ್ ಅಭಿವೃದ್ಧಿ ಕಾರ್ಯ ಕುಂಠಿತಗೊಳಿಸಿರುವುದಲ್ಲದೆ ಪಂಚಾಯತ್ ಆಡಳಿತ ಮಂಡಳಿಯ ಹೆಸರಿಗೆ ಕಳಂಕ ತರಲು ಯತ್ನಿಸಿದ ಹಾಗೂ ಗ್ರಾಮಸ್ಥರು ಮತ್ತು ಆಡಳಿತ ಮಂಡಳಿಯ ನಡುವೆ ಗೊಂದಲ ಮತ್ತು ಸಂಘರ್ಷಕ್ಕೆ ಕಾರಣವಾಗುತ್ತಿರುವುದು.
- ವಸತಿ ಹಕ್ಕುಪತ್ರ ಕಾನೂನು ಪ್ರಕಾರ 9411ಎ ನೀಡಲು ಅವಕಾಶವಿದ್ದರೂ ಅದನ್ನು ನೀಡದೇ ಫಲಾನುಭವಿಗಳನ್ನು ಸತಾಯಿಸುತ್ತಿರುವ ಮತ್ತು ಒಂದು ರಾಜಕೀಯ ಪಕ್ಷದ ಸದಸ್ಯನಂತೆ ವರ್ತಿಸುತ್ತಿರುವುದು.
- ಗ್ರಾಮಸ್ಥರಿಗೆ 2447 ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ಆಡಳಿತ ಮಂಡಳಿ ಮತ್ತು ಗ್ರಾಮಸ್ಥರು ಮತ್ತು ಇಲಾಖೆ ಮುತುವರ್ಜಿ ವಹಿಸಿದರೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ಪ್ರವೀಣ್ ಕುಮಾರ್ ಡಿ ಯವರ ಅಸಹಕಾರದಿಂದಾಗಿ ಯೋಜನೆ ಕುಂಠಿತವಾಗಿರುವುದು.
- ನೆಕ್ಕಿಲಾಡಿ ಗ್ರಾಮದಲ್ಲಿ ಹಸಿ ಕಸವನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರಾದ ನವೀನ್ ಕುಮಾರ್ ಭಂಡಾರಿಯವರು ನಗರ ಸಭೆಯ ಘಟಕಕ್ಕೆ ನೀಡಲು ಮೌಖಿಕ ಆದೇಶ ನೀಡಿದರೂ ಹಾಗೂ ಆಡಳಿತ ಮಂಡಳಿ ಸಹಕಾರ ನೀಡಿದರೂ ಅನುಷ್ಠಾನಗೊಳಿಸಲು ಉದಾಸೀನತೆ ತೋರಿರುವುದು.
- ಸಾರ್ವಜನಿಕ ಸೊತ್ತನ್ನು ಹಾಳು ಮಾಡಲು ಯತ್ನಿಸಿದ ಕಿಡಿಗೇಡಿಗಳ ಚಹರೆಗಳು ಸಿ ಸಿ ಕ್ಯಾಮರಾದಲ್ಲಿ ದಾಖಲಾದರೂ ಪೋಲೀಸು ಠಾಣೆಗೆ ದೂರು ನೀಡದೇ ನಿರ್ಲಕ್ಷ್ಯ ವಹಿಸಿದ ಅಭಿವೃದ್ಧಿ ಅಧಿಕಾರಿಯವರಾದ ಪ್ರವೀಣ್ ಕುಮಾರ್ ಡಿ ಇವರ ಮೇಲೆ ಶಿಸ್ತು ಕ್ರಮ ಕೈಗೊಂಡು ಹಾನಿಗೊಳಗಾದ ಸಿ ಸಿ ಕ್ಯಾಮರಾದ ವೆಚ್ಚವನ್ನು ಪಿಡಿಓರವರಿಂದಲೇ ವಸೂಲಿ ಮಾಡುವಂತೆ ಆಗ್ರಹ.
- ಪಂಚಾಯತ್ನಲ್ಲಿ ನಡೆಯುವಂತಹ ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಪಂಚಾಯತಿನ ಸದಸ್ಯರಿಗೆ ತಿಳಿಸದೇ ಯೋಜನೆಗಳನ್ನು ವಿಫಲಗೊಳಿಸಲು ಯತ್ನಿಸುತ್ತಿರುವುದು.
- ಸಿಬ್ಬಂದಿಗಳಿಗೆ ಸರಕಾರದ ಕಾರ್ಮಿಕ ಇಲಾಖೆಯ ಆದೇಶದಂತೆ ಕನಿಷ್ಠವೇತನ ನೀಡಲು ಆಡಳಿತ ಮಂಡಳಿಯ ಒಪ್ಪಿಗೆ ಇದ್ದರೂ ಅದನ್ನು ಅನುಷ್ಠಾನ ಮಾಡದೇ ಸಿಬ್ಬಂದಿಗಳು ಮತ್ತು ಆಡಳಿತ ಮಂಡಳಿಯ ನಡುವೆ ವೈಮನಸ್ಸು ಉಂಟಾಗಲು ಕಾರಣಕರ್ತರಾಗಿರುವುದು.
- ಪಂಚಾಯತಿಗೆ ಆದಾಯ ಬರುವ ವಾಣಿಜ್ಯ ಸಂಕೀರ್ಣ ಮತ್ತು ಮರಳು ವಾಹನಗಳ ಶುಲ್ಕ ಸಂಗ್ರಹಣ ವಸೂಲಾತಿ ಮರುಟೆಂಡರ್ ಕರೆಯದೆ ಪಂಚಾಯತಿನ ಆದಾಯ ಕುಂಠಿತವಾಗಲು ಕಾರಣರಾಗಿರುವುದು.
- ಎಲ್ಲಾ ಕಾನೂಣಾತ್ಮಕ ದಾಖಲಾತಿಗಳು ಇದ್ದರೂ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೊಂಡ ಉದ್ಯಮ ಪರವಾನಿಗೆ ನೀಡಲು ಮೀನಾಮೇಶ ಎಣಿಸಿದ ಹಾಗೂ ಉದಾಸೀನತೆ ತೋರಿದ ಮತ್ತು ಇದನ್ನು ವಿಚಾರಿಸಿದ ಆ ವಾರ್ಡಿನ ಸದಸ್ಯರ ಜೊತೆ ಹಾಗೂ ಗ್ರಾಮಸ್ಥರ ಜೊತೆ ಅನುಚಿವಾಗಿ ವರ್ತಿಸಿರುವುದು.
- ಪ್ರಧಾನ ಮಂತ್ರಿ ಸುರಕ್ಷಾ ಯೋಜನೆಯನ್ನು ಎಲ್ಲಾ ಪಂಚಾಯತ್ ಗಳಲ್ಲೂ 100% ಫಲಾನುಭವಿಗಳನ್ನು ಸೇರಿಸಿಕೊಳ್ಳಲು ಸರ್ಕಾರದ ಆದೇಶವಿದ್ದರೂ ನೆಕ್ಕಿಲಾಡಿ ಗ್ರಾಮ ಪಂಚಾಯತಿನಲ್ಲಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಸೂಚನೆಯಂತೆ ಗ್ರಾಮ ಸಭೆಯಲ್ಲಿ ನೋಂದಾವಣೆ ಕಾರ್ಯಕ್ರಮ ಹಮ್ಮಿಕೊಳ್ಳಲು ಕರಪತ್ರ ಮುದ್ರಿಸಿ ಹಂಚಲು, ಸಾರ್ವಜನಿಕರಿಗೆ ಮಾಹಿತಿ ನೀಡಲು ಸಹಕಾರ ನೀಡದಿರುವುದು.
- ಅಧ್ಯಕ್ಷರು ಚಲನವಲನ ಪುಸ್ತಕವನ್ನು ಪರಿಶೀಲಿಸಿದಾಗ ಒಂದೇ ಕಾಲಂನಲ್ಲಿ 2 ಕಾರಣಗಳು ಮತ್ತು 2 ಪೆನ್ನಿನ ಶಾಯಿ ನಮೂದಾಗಿದ್ದು ಮೇಲ್ನೋಟಕ್ಕೆ ಕಂಡು ಬಂದಿದ್ದು ಇದರ ಮೇಲೆ ಸಂಶಯವಿರುವ ಕಾರಣ ಇದರ ಪೇಜನ್ನು ಜೆರಾಕ್ಸ್ ಮಾಡಿ ಅದನ್ನು ತನಿಖೆಗೆ ಸಲ್ಲಿಸುವುದು.
- 15ನೇ ಹಣಕಾಸಿನ ಅನುದಾನ ಖರ್ಚು ಮಾಡಲು ಅವಧಿ ಮುಗಿಯುತ್ತಾ ಬಂದರೂ ಕ್ರಿಯಾಯೋಜನೆ ತಯಾರಿಸಿದರೂ ಅದನ್ನು ಸದ್ಬಳಕೆ ಮಾಡದೆ ಅನುದಾನ ಉಪಯೋಗ ಮಾಡದೇ ನಿರ್ಲಕ್ಷ್ಯ ವಹಿಸಿರುವುದು.
- ಸ್ವಾತಂತ್ರೋತ್ಸವ ದಿನಾಚರಣೆಯ ಸಂದರ್ಭದಲ್ಲಿ ವಂದೇ ಮಾತರಂ ಹಾಡದೇ ಮತ್ತು ಗಾಂಧೀಜಿಯವರ ಹಾಗೂ ಸಂವಿಧಾನ ಶಿಲ್ಲಿ ಡಾ. ಅಂಬೇಡ್ಕರ್ ರವರ ಭಾವಚಿತ್ರವನ್ನು ಇಡದೇ ಅವಮಾನ ಮಾಡಿರುವುದು.
ಈ ಮೇಲಿನ ಆರೋಪಗಳು ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ಪ್ರವೀಣ್ ಕುಮಾರ್ ಡಿ ಇವರ ಮೇಲೆ ಇರುವುದರಿಂದ ಕಾರ್ಯನಿರ್ವಹಣಾಧಿಕಾರಿ ತಾಲೂಕು ಪಂಚಾಯತ್ ಪುತ್ತೂರು ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಲ್ಲಾ ಪಂಚಾಯತ್ ಮಂಗಳೂರುರವರು ಇಲಾಖೆಯು ಮುಖಾಂತರ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ವಿನಂತಿಯನ್ನು ಮಾಡಲಾಯಿತು.
ಖಂಡನಾ ಸಭೆ ನೆರವೇರಿದಾಗ 34 ನೆಕ್ಕಿಲಾಡಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ., ಹಾಗೂ ಸದಸ್ಯರುಗಳಾದ ಪ್ರಶಾಂತ್ ಎನ್., ಕೆ ರಮೇಶ್ ನಾಯ್, ವಿಜಯ ಕುಮಾರ್, ಹರೀಶ್ ಕೆ., ಶ್ರೀಮತಿ ಸ್ವಪ್ನ, ವೇದಾವತಿ, ತುಳಸಿ, ರತ್ನಾವತಿ, ಗೀತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ
Ashok janamana 2026 : ಪುತ್ತೂರಿನಲ್ಲಿ ಅದ್ದೂರಿ ‘ಅಶೋಕ ಜನಮನ-2026’ ಸಂಭ್ರಮಕ್ಕೆ ಕ್ಷಣಗಣನೆ ! ಬಿ.ಕೆ. ಹರಿಪ್ರಸಾದ್, ಕೃಷ್ಣ ಬೈರೇಗೌಡ, ಯು.ಟಿ. ಖಾದರ್ ಸಹಿತ ರಾಜಕೀಯ, ಧಾರ್ಮಿಕ ಗಣ್ಯರ ಸಮಾಗಮ

ಪುತ್ತೂರು: ದೀಪಾವಳಿಯ ಸಂಭ್ರಮವನ್ನು ಜನಸಾಮಾನ್ಯರೊಂದಿಗೆ ಹಂಚಿಕೊಳ್ಳುವ ಮೂಲಕ ಸೇವೆ, ಸಹಕಾರ ಹಾಗೂ ಮಾನವೀಯತೆಯ ಸಂದೇಶ ಸಾರುತ್ತಿರುವ ಪುತ್ತೂರಿನ ಹೆಮ್ಮೆಯ ‘ಅಶೋಕ ಜನಮನ-2026’ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ರೈ ಎಸ್ಟೇಟ್ ಎಜುಕೇಷನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಆಯೋಜಿಸಲಾಗಿರುವ ಈ ಬೃಹತ್ ಜನಸೇವಾ ಕಾರ್ಯಕ್ರಮ ನ.22ರಂದು (ರವಿವಾರ) ಬೆಳಿಗ್ಗೆ 9 ಗಂಟೆಯಿಂದ ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿದೆ.
ಸುಮಾರು ಒಂದು ಲಕ್ಷ ಜನರಿಗೆ ದೀಪಾವಳಿ ಉಡುಗೊರೆ ವಿತರಿಸುವ ಬೃಹತ್ ಸಂಕಲ್ಪದೊಂದಿಗೆ ಆಯೋಜಿಸಲಾಗಿರುವ ಕಾರ್ಯಕ್ರಮಕ್ಕೆ ಸುಮಾರು ₹4 ಕೋಟಿ ವೆಚ್ಚ ಮಾಡಲಾಗುತ್ತಿದೆ. ಉಡುಗೊರೆ ವಿತರಣೆ ಮಾತ್ರವಲ್ಲದೆ, ಬೃಹತ್ ಅನ್ನದಾನ, ದೋಸೆ ಮೇಳ ಸೇರಿದಂತೆ ಹಲವು ವಿಶೇಷ ವ್ಯವಸ್ಥೆಗಳು ಈ ಬಾರಿಯ ಜನಮನದ ಆಕರ್ಷಣೆಯಾಗಲಿವೆ. ಪುತ್ತೂರು ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಾಗಗಳಿಂದಲೂ ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿದ್ದು, ಕೊಂಬೆಟ್ಟು ಕ್ರೀಡಾಂಗಣ ಜನಸಾಗರಕ್ಕೆ ಸಾಕ್ಷಿಯಾಗಲಿದೆ.
14 ವರ್ಷಗಳ ಜನಸೇವೆಯ ಪಯಣ; ಜನಮನದಲ್ಲಿ ವಿಶೇಷ ಸ್ಥಾನ!
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಮಾಜದ ಬಡವರು, ಮಧ್ಯಮ ವರ್ಗದವರು ಸೇರಿದಂತೆ ಎಲ್ಲ ವರ್ಗದ ಜನರೊಂದಿಗೆ ಹಬ್ಬದ ಸಂತೋಷ ಹಂಚಿಕೊಳ್ಳುವ ಆಶಯದೊಂದಿಗೆ ಆರಂಭಗೊಂಡ ‘ಅಶೋಕ ಜನಮನ’ ಇಂದು ಪುತ್ತೂರಿನ ಪ್ರಮುಖ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಕಳೆದ 14 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ತನ್ನ ವ್ಯಾಪ್ತಿ ಹಾಗೂ ಜನಪ್ರಿಯತೆಯನ್ನು ವಿಸ್ತರಿಸಿಕೊಂಡಿದೆ. ರಾಜಕೀಯ, ಜಾತಿ, ಧರ್ಮದ ಭೇದವಿಲ್ಲದೆ ಪ್ರತಿಯೊಬ್ಬರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ಉಡುಗೊರೆ ಪಡೆದುಕೊಳ್ಳುವ ಮುಕ್ತ ಅವಕಾಶ ಇದರ ವಿಶೇಷತೆಯಾಗಿದೆ.
ಶಾಸಕ ಅಶೋಕ್ ಕುಮಾರ್ ರೈ ಅವರು ತಮ್ಮ ಉದ್ಯಮದ ಮೂಲಕ ಗಳಿಸಿದ ಸಂಪನ್ಮೂಲದ ಒಂದು ಭಾಗವನ್ನು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸುವ ಉದ್ದೇಶದಿಂದ ಈ ಸೇವಾ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಹೀಗಾಗಿ ಅಶೋಕ ಜನಮನ ಕೇವಲ ಉಡುಗೊರೆ ವಿತರಣಾ ಕಾರ್ಯಕ್ರಮವಾಗಿ ಉಳಿಯದೆ, ಜನರೊಂದಿಗೆ ಬೆರೆಯುವ ಮತ್ತು ಹಬ್ಬದ ಸಂತೋಷವನ್ನು ಹಂಚಿಕೊಳ್ಳುವ ಬೃಹತ್ ವೇದಿಕೆಯಾಗಿ ರೂಪುಗೊಂಡಿದೆ.
ಒಂದು ಲಕ್ಷ ಮಂದಿಗೆ ಉಡುಗೊರೆ; ಮನೆಮಂದಿಗೆಲ್ಲ ದೀಪಾವಳಿ ಕೊಡುಗೆ!
ಈ ಬಾರಿಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಬೃಹತ್ ಉಡುಗೊರೆ ವಿತರಣೆಯಾಗಿದೆ. ಸುಮಾರು ಒಂದು ಲಕ್ಷ ಮಂದಿಗೆ ಉಡುಗೊರೆ ತಲುಪಿಸುವ ಗುರಿ ಹೊಂದಲಾಗಿದ್ದು, ಸಾರ್ವಜನಿಕರಿಗಾಗಿ ವಿವಿಧ ಅಗತ್ಯ ವಸ್ತುಗಳನ್ನು ಸಿದ್ಧಪಡಿಸಲಾಗಿದೆ.
ಸೀರೆ, ಬೆಡ್ಶೀಟ್, ಬಾತ್ ಟವೆಲ್, ತಟ್ಟೆ, ಬಟ್ಟಲು, ಗ್ಲಾಸ್ ಸೇರಿದಂತೆ ವಿವಿಧ ವಸ್ತುಗಳನ್ನು ಉಡುಗೊರೆಯಾಗಿ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಹಬ್ಬದ ಸಂದರ್ಭದಲ್ಲಿ ಮನೆಮಂದಿಗೆ ಉಪಯುಕ್ತವಾಗುವ ವಸ್ತುಗಳನ್ನು ನೀಡುವ ಮೂಲಕ ಪ್ರತಿಯೊಂದು ಕುಟುಂಬದಲ್ಲೂ ದೀಪಾವಳಿಯ ಸಂತೋಷ ಮೂಡಿಸುವ ಪ್ರಯತ್ನ ಇದಾಗಿದೆ.
ಉಡುಗೊರೆ ವಿತರಣೆಗೆ ಪ್ರತ್ಯೇಕ ಕೌಂಟರ್ಗಳು ಹಾಗೂ ವ್ಯವಸ್ಥಿತ ನಿರ್ವಹಣೆಗೆ ವಿಶೇಷ ತಂಡಗಳನ್ನು ನಿಯೋಜಿಸುವ ಮೂಲಕ ಜನದಟ್ಟಣೆಯನ್ನು ನಿಯಂತ್ರಿಸಲು ಸಿದ್ಧತೆ ಮಾಡಲಾಗಿದೆ.
ಒಂದು ಲಕ್ಷ ದೋಸೆ; 60 ಸಾವಿರಕ್ಕೂ ಅಧಿಕ ಮಂದಿಗೆ ಭರ್ಜರಿ ಅನ್ನದಾನ!
ಅಶೋಕ ಜನಮನದ ಮತ್ತೊಂದು ವಿಶೇಷ ಆಕರ್ಷಣೆ ಬೃಹತ್ ದೋಸೆ ಮೇಳ. ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಬೆಳಗ್ಗಿನಿಂದಲೇ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುಮಾರು ಒಂದು ಲಕ್ಷ ದೋಸೆಗಳನ್ನು ತಯಾರಿಸಿ ವಿತರಿಸುವ ಗುರಿ ಹೊಂದಲಾಗಿದೆ.
ಇದರೊಂದಿಗೆ ಮಧ್ಯಾಹ್ನ ಸುಮಾರು 60 ಸಾವಿರಕ್ಕೂ ಅಧಿಕ ಮಂದಿಗೆ ಅನ್ನದಾನ ಆಯೋಜಿಸಲಾಗಿದೆ. ಸಾವಿರಾರು ಜನರು ಏಕಕಾಲದಲ್ಲಿ ಆಗಮಿಸುವ ಹಿನ್ನೆಲೆಯಲ್ಲಿ ಆಹಾರ ವಿತರಣೆ ಹಾಗೂ ಜನರ ಸಂಚಾರಕ್ಕೆ ಅಗತ್ಯ ವ್ಯವಸ್ಥೆಗಳನ್ನು ರೂಪಿಸಲಾಗಿದೆ. ಬೆಳಗ್ಗಿನಿಂದ ಸಂಜೆಯವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಿರುವುದು ವಿಶೇಷವಾಗಿದೆ.
ರಾಜಕೀಯ ನಾಯಕರ ದಂಡು; ಸಚಿವರು, ಮಾಜಿ ಸಚಿವರ ಉಪಸ್ಥಿತಿ
ಕಾರ್ಯಕ್ರಮಕ್ಕೆ ರಾಜ್ಯಮಟ್ಟದ ರಾಜಕೀಯ ನಾಯಕರು, ಸಚಿವರು, ಮಾಜಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಲಿದ್ದಾರೆ.
ವಿಧಾನ ಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಕರ್ನಾಟಕ ಸರಕಾರದ ಆರೋಗ್ಯ ಸಚಿವ ಯು.ಟಿ. ಖಾದರ್, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಾಜಿ ಸಚಿವರಾದ ಬಿ. ರಮಾನಾಥ ರೈ, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿ’ಸೋಜಾ, ಪಿ.ವಿ. ಮೋಹನ್ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾಂಗ್ರೆಸ್ ಮುಖಂಡರಾದ ಹರೀಶ್ ಕುಮಾರ್, ಜಿ.ಆರ್. ಲೋಬೊ, ಗಫೂರ್, ಲಾವಣ್ಯ ಬಲ್ಲಾಳ್, ಟಿ.ಎಂ. ಶಹೀದ್, ಶಾಲೆಟ್ ಪಿಂಟೋ, ಮಹಮ್ಮದ್ ಆಲಿ, ಮಹಮ್ಮದ್ ಬಡಗನ್ನೂರು, ಚಂದ್ರಹಾಸ ಶೆಟ್ಟಿ, ಪ್ರಸಾದ್ ಕೌಶಲ್ ಶೆಟ್ಟಿ, ಎಂ.ಬಿ. ವಿಶ್ವನಾಥ ರೈ, ಪಝಲ್ ರಹೀಂ, ಪ್ರವೀಣ್ ಚಂದ್ರ ಆಳ್ವ, ಮುರಳೀಧರ ರೈ ಮಠಂತಬೆಟ್ಟು, ರಾಜಾರಾಮ್, ಕೃಷ್ಣಪ್ರಸಾದ್ ಆಳ್ವ, ಪದ್ಮನಾಭ ಪೂಜಾರಿ ಆಳ್ಕೆ, ಯು.ಟಿ. ತೌಸಿಫ್, ಜೋಕಿಂ ಡಿಸೋಜಾ, ಉಷಾ ಅಂಚನ್, ದಿವಾಕರ ದಾಸ್ ನೇರ್ಲಾಜೆ ಹಾಗೂ ಪ್ರಸನ್ನ ಕುಮಾರ್ ಶೆಟ್ಟಿ ಉಪಸ್ಥಿತರಿರಲಿದ್ದಾರೆ.
ಇದಲ್ಲದೆ ಸಂತೋಷ್ ಕುಮಾರ್ ಶೆಟ್ಟಿ, ಪದ್ಮರಾಜ್ ಆರ್. ಪೂಜಾರಿ, ಎಂ.ಎಸ್. ಮಹಮ್ಮದ್, ರಕ್ಷಿತ್ ಶಿವರಾಮ್, ಮಿಥುನ್ ರೈ, ಇನಾಯತ್ ಆಲಿ, ಹೇಮನಾಥ ಶೆಟ್ಟಿ ಕಾವು, ದುರ್ಗಾಪ್ರಸಾದ್ ರೈ ಕುಂಬ್ರ, ಉಮಾನಾಥ ಶೆಟ್ಟಿ, ಅಮಲ ರಾಮಚಂದ್ರ, ಮಲ್ಲಿಕಾ ಪಕ್ಕಳ, ಕೃಷ್ಣಪ್ಪ ಸುಳ್ಯ, ರಘು ಬೆಳ್ಳಿಪ್ಪಾಡಿ, ಈಶ್ವರ ಭಟ್ ಪಂಜಿಗುಡ್ಡೆ ಹಾಗೂ ರಾಧಾಕೃಷ್ಣ ನಾಯಕ್ ಉಪ್ಪಿನಂಗಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಯತಿವರ್ಯರಿಂದ ಧಾರ್ಮಿಕ ಆಶೀರ್ವಚನ
ಕಾರ್ಯಕ್ರಮಕ್ಕೆ ಧಾರ್ಮಿಕ ಮೆರುಗು ನೀಡಲು ಹಿಂದೂ ಸಮಾಜದ ಯತಿವರ್ಯರು ಆಗಮಿಸಲಿದ್ದಾರೆ. ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಈಶ ವಿಠಲದಾಸ ಸ್ವಾಮೀಜಿ ಹಾಗೂ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಧಾರ್ಮಿಕ ಆಶೀರ್ವಚನ ನೀಡಲಿದ್ದಾರೆ.
ಮಳೆ ಕಾರಣದಿಂದ ಮುಂದೂಡಿಕೆಯಾಗಿದ್ದ ಕಾರ್ಯಕ್ರಮ
ನವೆಂಬರ್ 8ರಂದು ನಡೆಯಬೇಕಿದ್ದ ಅಶೋಕ ಜನಮನ ಕಾರ್ಯಕ್ರಮವನ್ನು ನಿರಂತರ ಮಳೆ ಹಾಗೂ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನವೆಂಬರ್ 22ಕ್ಕೆ ಮುಂದೂಡಲಾಗಿತ್ತು. ಇದೀಗ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥಿತವಾಗಿ ಆಯೋಜಿಸಲು ಟ್ರಸ್ಟ್ ಮುಂದಾಗಿದೆ.
ಹಬ್ಬದ ಸಂಭ್ರಮಕ್ಕೆ ಜನಮನದ ಸ್ಪರ್ಶ
ಒಂದು ಕಡೆ ಬೃಹತ್ ಉಡುಗೊರೆ ವಿತರಣೆ, ಮತ್ತೊಂದೆಡೆ ಅನ್ನದಾನ ಹಾಗೂ ದೋಸೆ ಮೇಳ, ಇನ್ನೊಂದೆಡೆ ರಾಜಕೀಯ ಮತ್ತು ಧಾರ್ಮಿಕ ಗಣ್ಯರ ಸಮಾಗಮ. ಹೀಗೆ ಹಲವು ವಿಶೇಷತೆಗಳನ್ನು ಒಳಗೊಂಡಿರುವ ಅಶೋಕ ಜನಮನ-2026 ಪುತ್ತೂರಿನಲ್ಲಿ ಮತ್ತೊಂದು ಬೃಹತ್ ಜನಸಂಗಮಕ್ಕೆ ವೇದಿಕೆಯಾಗಲಿದೆ.
ದೀಪಾವಳಿ ಎಂದರೆ ಕೇವಲ ಬೆಳಕಿನ ಹಬ್ಬವಲ್ಲ, ಸಂತೋಷವನ್ನು ಹಂಚಿಕೊಳ್ಳುವ ಹಬ್ಬವೂ ಹೌದು ಎಂಬ ಆಶಯದೊಂದಿಗೆ ರೂಪುಗೊಂಡಿರುವ ಈ ಕಾರ್ಯಕ್ರಮದಲ್ಲಿ ಕ್ಷೇತ್ರದ ಜನರು ಪಕ್ಷಾತೀತವಾಗಿ ಭಾಗವಹಿಸಿ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಶಾಸಕ ಅಶೋಕ್ ಕುಮಾರ್ ರೈ ಹಾಗೂ ರೈ ಎಸ್ಟೇಟ್ ಟ್ರಸ್ಟ್ನ ಸಂಘಟಕರು ಮನವಿ ಮಾಡಿದ್ದಾರೆ.
ರಾಜಕೀಯ
BJP leaders-ಗಡಿಪಾರಿಗೊಳಗಾದ ನರಸಿಂಹ ಮಾಣಿ ಮನೆಗೆ ಬಿಜೆಪಿ ಮುಖಂಡರ ಭೇಟಿ; ಕುಟುಂಬಕ್ಕೆ ಆತ್ಮಸ್ಥೈರ್ಯ
ಗಡಿಪಾರಿಗೊಳಗಾದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರ ನಿವಾಸಕ್ಕೆ ಬಿಜೆಪಿ ಮುಖಂಡರಾದ ಸಹಜ್ ರೈ ಬಳಜ್ಜ, ಪ್ರಸನ್ನ ದರ್ಬೆ ಹಾಗೂ ಅಜಿತ್ ರೈ ಹೊಸಮನೆ ಭೇಟಿ ನೀಡಿ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
ಪುತ್ತೂರು: ಗಡಿಪಾರಿಗೊಳಗಾದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರ ನಿವಾಸಕ್ಕೆ ಬಿಜೆಪಿ ಮುಖಂಡರಾದ ಸಹಜ್ ರೈ ಬಳಜ್ಜ, ಪ್ರಸನ್ನ ದರ್ಬೆ ಹಾಗೂ ಅಜಿತ್ ರೈ ಹೊಸಮನೆ ಭೇಟಿ ನೀಡಿ ಕುಟುಂಬದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.
ನರಸಿಂಹ ಮಾಣಿ ಅವರು ಎದುರಿಸುತ್ತಿರುವ ಪ್ರಸಕ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರಿಗೆ ಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಈ ಭೇಟಿ ನಡೆಯಿತು. ಈ ಸಂದರ್ಭದಲ್ಲಿ ಅವರ ತಾಯಿಯ ಯೋಗಕ್ಷೇಮ ವಿಚಾರಿಸಿದ ಮುಖಂಡರು, ಧೈರ್ಯ ಕಳೆದುಕೊಳ್ಳದೆ ಆತ್ಮವಿಶ್ವಾಸದಿಂದ ಇರುವಂತೆ ಪ್ರೇರಣೆ ನೀಡಿದರು.

ಸಾಮಾಜಿಕ ಹಾಗೂ ಸಂಘಟನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತರ ಕುಟುಂಬದೊಂದಿಗೆ ಸಮಾಜ ನಿಲ್ಲಬೇಕು ಎಂಬ ಆಶಯವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಲಾಯಿತು.
ಭೇಟಿಯ ವೇಳೆ ಬಿಜೆಪಿ ಪುತ್ತೂರು ಮಂಡಲ ಉಪಾಧ್ಯಕ್ಷ ರತನ್ ರೈ ಕುಂಬ್ರ, ಪುತ್ತೂರು ಯುವಮೋರ್ಚಾ ನಗರ ಮಂಡಲ ಅಧ್ಯಕ್ಷ ನಿತೇಶ್ ನೆಲಪ್ಪಾಲು, ಯುವಮೋರ್ಚಾದ ಪವನ್ ಶೆಟ್ಟಿ ಕಂಬಳತ್ತಡ್ಡ, ಪ್ರೀತಮ್ ಶೆಟ್ಟಿ ಪೆರ್ನೆ, ಆದೇಶ್ ಶೆಟ್ಟಿ ಉಪ್ಪಿನಂಗಡಿ, ವಿಶ್ವನಾಥ ಕುಲಾಲ್ ಹಾಗೂ ಹಿಂದೂ ಜಾಗರಣ ವೇದಿಕೆಯ ರಾಜೇಶ್ ಉಪಸ್ಥಿತರಿದ್ದರು.
ಬಿಗ್ ನ್ಯೂಸ್
Muraleedhar Rai-ಮೆಸ್ಕಾಂ ನಿರ್ದೇಶಕರಾಗಿ ಮುರಳೀಧರ ರೈ ಮಠಂತಬೆಟ್ಟು ಸರ್ಕಾರದಿಂದ ನೇಮಕ
ರಾಜ್ಯ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ನಿಗಮಗಳು, ಮಂಡಳಿಗಳು ಹಾಗೂ ಪ್ರಾಧಿಕಾರಗಳಿಗೆ 81 ಮಂದಿಯನ್ನು ನಿರ್ದೇಶಕರು ಹಾಗೂ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಈ ಪೈಕಿ ಮೆಸ್ಕಾಂ ನಿರ್ದೇಶಕರಾಗಿ ಕಾಂಗ್ರೆಸ್ ಮುಖಂಡ ಮುರಳೀಧರ ರೈ ಮಠಂತಬೆಟ್ಟು ಅವರು ನೇಮಕಗೊಂಡಿದ್ದಾರೆ.
ಉಪ್ಪಿನಂಗಡಿ: ರಾಜ್ಯ ಸರಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ನಿಗಮಗಳು, ಮಂಡಳಿಗಳು ಹಾಗೂ ಪ್ರಾಧಿಕಾರಗಳಿಗೆ 81 ಮಂದಿಯನ್ನು ನಿರ್ದೇಶಕರು ಹಾಗೂ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಈ ಪೈಕಿ ಮೆಸ್ಕಾಂ ನಿರ್ದೇಶಕರಾಗಿ ಕಾಂಗ್ರೆಸ್ ಮುಖಂಡ ಮುರಳೀಧರ ರೈ ಮಠಂತಬೆಟ್ಟು ಅವರು ನೇಮಕಗೊಂಡಿದ್ದಾರೆ.
ಕೋಡಿಂಬಾಡಿ ಮಠಂತಬೆಟ್ಟುವಿನ ಪ್ರತಿಷ್ಠಿತ ಬಂಟ ಕುಟುಂಬದ ಹಿರಿಯ ಕಾಂಗ್ರೆಸ್ ಮುಖಂಡ ಅನಂತ ರೈಯವರ ಪುತ್ರ ಮುರಳೀಧರ ರೈ ಮಠಂತಬೆಟ್ಟು ಅವರು ಹಿರಿಯರ ಕಾಲದಿಂದಲೇ ಕಾಂಗ್ರೆಸ್ ಕುಟುಂಬದಲ್ಲಿ ಬೆಳೆದು ಬಂದವರು.ಬೂತ್ ಮಟ್ಟದಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಸುಮಾರು ವರ್ಷಗಳ ಕಾಲ ವಲಯ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷನಾಗಿ ಜನ ಸೇವೆ ಆರಂಭಿದ ಇವರು ಉಪ್ಪಿನಂಗಡಿ-ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡವರು. ಪ್ರಸ್ತುತ ದ.ಕ.ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿರುವ ಮುರಳೀಧರ ರೈಯವರನ್ನು ಇದೀಗ ಕರ್ನಾಟಕ ಸರಕಾರ ಮೆಸ್ಕಾಂ ನಿರ್ದೇಶಕರಾಗಿ ನೇಮಕ ಮಾಡಿದೆ.
-
ಅಪರಾಧ19 hours agoMangalore-ಕಣಚೂರು ಮೆಡಿಕಲ್ ಕಾಲೇಜು ಆವರಣದಲ್ಲೇ ವಿದ್ಯಾರ್ಥಿನಿ ಅಪಹರಣ..! ಹಿಂದೂ ಯುವಕ ಲವ್ ಆರೋಪ – ವಿಡಿಯೋ ವೈರಲ್ : ತನಿಖೆಗೆ ಕಮಿಷನರ್ ಸೂಚನೆ
-
ರಾಜಕೀಯ18 hours agoBJP leaders-ಗಡಿಪಾರಿಗೊಳಗಾದ ನರಸಿಂಹ ಮಾಣಿ ಮನೆಗೆ ಬಿಜೆಪಿ ಮುಖಂಡರ ಭೇಟಿ; ಕುಟುಂಬಕ್ಕೆ ಆತ್ಮಸ್ಥೈರ್ಯ
-
ಚಿನ್ನ-ಬೆಳ್ಳಿ ದರ24 hours agoGold Rate Today-ಆಭರಣಪ್ರಿಯರಿಗೆ ಗುಡ್ನ್ಯೂಸ್: ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ: 12 ಸಾವಿರ ರೂ. ಗಡಿಯೊಳಗೆ ಬಂದ ಆಭರಣ ಚಿನ್ನ..!
-
ಬಿಗ್ ನ್ಯೂಸ್17 hours agoHigh Court-Social Media ಅಕೌಂಟ್ ಇದ್ದ ಮಾತ್ರಕ್ಕೆ ಮನಸ್ಸಿಗೆ ಬಂದಿದ್ದನ್ನೆಲ್ಲ ಪೋಸ್ಟ್ ಮಾಡುವ Free Licence ಇಲ್ಲ : ಬೆಳ್ತಂಗಡಿಯ ಮೋಹನ್ ಬೋಳಂಗಡಿ – ಶುಭಾ ರೈ ವಿರುದ್ಧ ದಾಖಲಾದ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ಎಚ್ಚರಿಕೆ
-
ಸಿನೆಮಾ23 hours agoArjun Sarja-ಪುತ್ರಿ ಐಶ್ವರ್ಯಾ ವಿರುದ್ಧ ಅವಹೇಳನಕಾರಿ ವರದಿ: ಮಾಧ್ಯಮಗಳ ವಿರುದ್ಧ ಸಿಡಿದೆದ್ದ ಅರ್ಜುನ್ ಸರ್ಜಾ; ಅಧಿಕೃತ ದೂರು ದಾಖಲು
-
ಸ್ಥಳೀಯ24 hours agoBaindoor-ರೈಲಿನಲ್ಲಿ ಮೊಬೈಲ್ ಕಳವು, UPI ಮೂಲಕ ಹಣ ವರ್ಗಾವಣೆ: ಬೈಂದೂರು ಪೊಲೀಸರಿಂದ ಕುಖ್ಯಾತ ಆರೋಪಿ ಬಂಧನ
-
ಅಪರಾಧ24 hours agoManipal police-ಪಟಾಕಿ ಪ್ರಕರಣ: ಮಣಿಪಾಲ ಪೊಲೀಸರ ವಿರುದ್ಧ ದೌರ್ಜನ್ಯ ಆರೋಪ: ಸಿಎಂಗೆ ಇ-ಮೇಲ್ ಮಾಡಿದ ವಿದ್ಯಾರ್ಥಿಗಳು
-
ನಿಧನ ವಾರ್ತೆ17 hours agoSavitri Devi-ಸಿಎಂ ಯೋಗಿ ಆದಿತ್ಯನಾಥ್ ತಾಯಿ ಸಾವಿತ್ರಿ ದೇವಿ ನಿಧನ















