ಕ್ರೈಂ
Bangalore-ಜಾತ್ರೆಯಲ್ಲಿ ಶುರುವಾದ ಲವ್, ಹೋಟೆಲ್ ರೂಮಲ್ಲಿ ಮರ್ಡರ್ – 36ರ ಹರೆಯದ ವಿವಾಹಿತೆಯನ್ನು ಓಯೋ ರೂಮಲ್ಲಿ 17 ಬಾರಿ ಇರಿದು ಕೊಂದ ಆಂಟಿ ಸಿಗದೇ ಹುಚ್ಚನಂತಾಗಿದ್ದ 24ರ ಹರೆಯದ ಪ್ರೇಮಿ
ಅನೈತಿಕ ಸಂಬಂಧವೊಂದು ಎಂತಹ ಘೋರ ಅಂತ್ಯ ಕಾಣಬಹುದು ಎಂಬುದಕ್ಕೆ ರಾಜಧಾನಿ ಬೆಂಗಳೂರು ಮತ್ತೊಮ್ಮೆ ಸಾಕ್ಷಿಯಾಗಿದೆ. “ನನ್ನವಳಲ್ಲದ ಮೇಲೆ ಆಕೆ ಯಾರಿಗೂ ಸಿಗಬಾರದು” ಎಂಬ ವಿಕೃತ ಮನಸ್ಥಿತಿಯಿಂದ ಪ್ರೇರಿತನಾದ ಟೆಕ್ಕಿ ಪ್ರಿಯಕರನೊಬ್ಬ, ತನ್ನ ವಿವಾಹಿತ ಪ್ರಿಯತಮೆಯನ್ನು ಓಯೋ ಹೋಟೆಲ್ ಕೋಣೆಗೆ ಕರೆದೊಯ್ದು, ಬರೋಬ್ಬರಿ 17 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದಿದ್ದಾನೆ.
ಬೆಂಗಳೂರು: ಅನೈತಿಕ ಸಂಬಂಧವೊಂದು ಎಂತಹ ಘೋರ ಅಂತ್ಯ ಕಾಣಬಹುದು ಎಂಬುದಕ್ಕೆ ರಾಜಧಾನಿ ಬೆಂಗಳೂರು ಮತ್ತೊಮ್ಮೆ ಸಾಕ್ಷಿಯಾಗಿದೆ. “ನನ್ನವಳಲ್ಲದ ಮೇಲೆ ಆಕೆ ಯಾರಿಗೂ ಸಿಗಬಾರದು” ಎಂಬ ವಿಕೃತ ಮನಸ್ಥಿತಿಯಿಂದ ಪ್ರೇರಿತನಾದ ಟೆಕ್ಕಿ ಪ್ರಿಯಕರನೊಬ್ಬ, ತನ್ನ ವಿವಾಹಿತ ಪ್ರಿಯತಮೆಯನ್ನು ಓಯೋ ಹೋಟೆಲ್ ಕೋಣೆಗೆ ಕರೆದೊಯ್ದು, ಬರೋಬ್ಬರಿ 17 ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದಿದ್ದಾನೆ.
ಈ ಭೀಕರ ಕೃತ್ಯದ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿ, ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.
ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಕೆಂಗೇರಿ ನಿವಾಸಿ ಹರಿಣಿ (36) ಕೊಲೆಯಾದ ದುರ್ದೈವಿ. ಆರೋಪಿ ಯಶಸ್ (25) ಟೆಕ್ ಉದ್ಯೋಗಿ.
ಓಯೋ ರೂಮಲ್ಲಿ ರಕ್ತದೋಕುಳಿ.
ಹರಿಣಿಯಿಂದ ದೂರವಾಗುತ್ತಿದ್ದೇನೆ ಎಂಬ ಕೋಪದಲ್ಲಿದ್ದ ಯಶಸ್, ಆಕೆಯನ್ನು ಮುಗಿಸಿಬಿಡಲು ಪಕ್ಕಾ ಪ್ಲ್ಯಾನ್ ಮಾಡಿದ್ದ. ಶುಕ್ರವಾರ ಆಕೆಯನ್ನು ಪ್ರೀತಿಯಿಂದ ಮಾತನಾಡಿಸಿ, ಪೂರ್ಣ ಪ್ರಜ್ಞಾ ಲೇಔಟ್‌ನಲ್ಲಿರುವ ಓಯೋ ರೂಮಿಗೆ ಕರೆತಂದಿದ್ದಾನೆ. ಅಲ್ಲಿ ಇಬ್ಬರ ನಡುವೆ ಮಾತುಕತೆ ನಡೆದ ಬಳಿಕ, ತನ್ನಲ್ಲಿದ್ದ ಚಾಕುವಿನಿಂದ ಹರಿಣಿಯ ಕತ್ತು, ಎದೆ, ಹೊಟ್ಟೆ ಸೇರಿದಂತೆ ದೇಹದ ಹಲವು ಭಾಗಗಳಿಗೆ ಮನಬಂದಂತೆ 17 ಬಾರಿ ಇರಿದಿದ್ದಾನೆ. ನರಳಿ ನರಳಿ ಪ್ರಾಣ ಬಿಟ್ಟ ಹರಿಣಿಯ ದೇಹವನ್ನು ಬೆತ್ತಲೆಗೊಳಿಸಿ ತನ್ನ ವಿಕೃತ ಮನಸ್ಸನ್ನು ಪ್ರದರ್ಶಿಸಿದ್ದಾನೆ.
ಕೊಲೆ, ಆತ್ಮಹತ್ಯೆ ಯತ್ನ, ಶರಣಾಗತಿ!
ಪ್ರಿಯತಮೆಯ ರಕ್ತದ ಕೋಡಿ ಹರಿಸಿ, ಆಕೆಯ ಪ್ರಾಣಪಕ್ಷಿ ಹಾರಿಹೋದದ್ದನ್ನು ಖಚಿತಪಡಿಸಿಕೊಂಡ ಯಶಸ್, ನೇರವಾಗಿ ಮನೆಗೆ ತೆರಳಿದ್ದಾನೆ. ಅಲ್ಲಿ ತನ್ನ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ವಿಫಲಯತ್ನ ನಡೆಸಿದ್ದಾನೆ. ನಂತರ ತಾನೇ ನೇರವಾಗಿ ಕೆಂಗೇರಿ ಪೊಲೀಸ್ ಠಾಣೆಗೆ ಹೋಗಿ, “ನಾನೊಬ್ಬಳನ್ನು ಕೊಲೆ ಮಾಡಿದ್ದೇನೆ” ಎಂದು ಶರಣಾಗಿದ್ದಾನೆ. ಘಟನೆ ನಡೆದಿದ್ದು ಸುಬ್ರಹ್ಮಣ್ಯಪುರ ವ್ಯಾಪ್ತಿಯಾದ್ದರಿಂದ, ಕೆಂಗೇರಿ ಪೊಲೀಸರು ಆರೋಪಿಯನ್ನು ಅಲ್ಲಿನ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಜಾತ್ರೆಯಲ್ಲಿ ಶುರುವಾಗಿ, ಕೊಲೆಯಲ್ಲಿ ಅಂತ್ಯವಾದ ಪ್ರೇಮ!
ಕೆಲ ತಿಂಗಳ ಹಿಂದೆ ಸ್ಥಳೀಯ ಜಾತ್ರೆಯೊಂದರಲ್ಲಿ ಹರಿಣಿ ಮತ್ತು ಯಶಸ್ ಪರಿಚಯವಾಗಿತ್ತು. ಫೋನ್ ನಂಬರ್ ವಿನಿಮಯವಾಗಿ, ಚಾಟಿಂಗ್, ಡೇಟಿಂಗ್ ಶುರುವಾಗಿ, ಸ್ನೇಹವು ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಈ ವಿಷಯ ಹರಿಣಿಯ ಪತಿ ದಾಸೇಗೌಡರಿಗೆ ತಿಳಿದಾಗ, ಅವರು ಆಕೆಯ ಫೋನ್ ಕಿತ್ತುಕೊಂಡು ಮನೆಯಲ್ಲಿ ಕೂಡಿಹಾಕಿದ್ದರು. ಆದರೆ, ಕೆಲವು ದಿನಗಳ ಬಳಿಕ ಹರಿಣಿ ಮತ್ತೆ ಯಶಸ್‌ನನ್ನು ಸಂಪರ್ಕಿಸಿದ್ದಳು.
ತನ್ನಿಂದ ದೂರ ಸರಿಯುತ್ತಿದ್ದಾಳೆ, ತನ್ನನ್ನು ತಪ್ಪಿಸುತ್ತಿದ್ದಾಳೆ ಎಂದು ಭಾವಿಸಿದ ಯಶಸ್, “ಆಕೆ ನನಗೆ ಸಿಗದಿದ್ದರೆ, ಬೇರೆ ಯಾರಿಗೂ ಸಿಗಬಾರದು” ಎಂದು ನಿರ್ಧರಿಸಿ ಈ ಭೀಕರ ಕೃತ್ಯ ಎಸಗಿದ್ದಾನೆ.
ಪೊಲೀಸ್ ತನಿಖೆ ಚುರುಕು
ಸುಬ್ರಹ್ಮಣ್ಯಪುರ ಇನ್‌ಸ್ಪೆಕ್ಟರ್ ರಾಜು ಮತ್ತು ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಎಫ್‌ಎಸ್‌ಎಲ್ ತಂಡದ ಸಹಾಯದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ವಿಚಾರಣೆ ವೇಳೆ ಯಶಸ್, “ಹೌದು, ನಾನೇ ಕೊಂದೆ. ಅವಳು ನನ್ನನ್ನು ತಪ್ಪಿಸಿಕೊಳ್ಳುತ್ತಿದ್ದಳು, ಅದಕ್ಕೆ ಮುಗಿಸಿಬಿಟ್ಟೆ” ಎಂದು ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.
ಕ್ರೈಂ
Murder-7 ಮಂದಿಯ ಹತ್ಯೆ ಪ್ರಕರಣ: ಶವದ ಜೊತೆ ಖಾರದ ಪುಡಿ, ಒಣಮೆಣಸಿನಕಾಯಿ ತುಂಬಿಸುತ್ತಿದ್ದ ಹಂತಕ..!
ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಮೃತದೇಹಗಳನ್ನು ವಿಲೇವಾರಿ ಮಾಡುವುದಕ್ಕೂ ಮುನ್ನ ಆರೋಪಿ ಇಂದುಶೇಖರ್ ಅನುಸರಿಸಿದ್ದ ಆಘಾತಕಾರಿ ತಂತ್ರಗಳು ಬೆಳಕಿಗೆ ಬಂದಿವೆ.
ಬೆಂಗಳೂರು: ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಮೃತದೇಹಗಳನ್ನು ವಿಲೇವಾರಿ ಮಾಡುವುದಕ್ಕೂ ಮುನ್ನ ಆರೋಪಿ ಇಂದುಶೇಖರ್ ಅನುಸರಿಸಿದ್ದ ಆಘಾತಕಾರಿ ತಂತ್ರಗಳು ಬೆಳಕಿಗೆ ಬಂದಿವೆ.
ಏಳು ಮಂದಿಯನ್ನು ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ ಬಳಿಕ ಮೃತದೇಹಗಳ ಕೈ-ಕಾಲುಗಳನ್ನು ಹಗ್ಗದಿಂದ ಕಟ್ಟಿದ್ದ ಆರೋಪಿ, ಸೆಲೋ ಟೇಪ್ ಸುತ್ತಿ ಗೋಣಿ ಚೀಲ ಹಾಗೂ ಬೆಡ್‌ಶೀಟ್‌ಗಳಲ್ಲಿ ಪ್ಯಾಕ್ ಮಾಡಿದ್ದ ಎನ್ನಲಾಗಿದೆ. ಈ ವೇಳೆ ಮೃತದೇಹಗಳ ಮೇಲೆ ಖಾರದ ಪುಡಿ ಸಿಂಪಡಿಸಿ, ಒಣಮೆಣಸಿನಕಾಯಿಗಳನ್ನೂ ಹಾಕಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶಿರಾಡಿಘಾಟ್‌ನಲ್ಲಿ ಪತ್ತೆಯಾದ ನಳಿನಿ ಮತ್ತು ಶಂಕರ್ ಅವರ ಮೃತದೇಹಗಳ ಪರಿಶೀಲನೆ ವೇಳೆ ಒಣಮೆಣಸಿನಕಾಯಿ ಹಾಗೂ ಖಾರದ ಪುಡಿ ಪತ್ತೆಯಾಗಿದೆ. ಪ್ರಾಣಿ, ಪಕ್ಷಿಗಳು ಮೃತದೇಹಗಳನ್ನು ಕಿತ್ತು ತಿನ್ನದಂತೆ ತಡೆಯಲು ಹಾಗೂ ಪೊಲೀಸ್ ಶ್ವಾನಗಳಿಗೆ ಮೃತದೇಹಗಳ ಸುಳಿವು ಸಿಗದಂತೆ ಮಾಡಲು ಆರೋಪಿ ಈ ತಂತ್ರ ಅನುಸರಿಸಿದ್ದ ಎನ್ನಲಾಗಿದೆ. ಇದರಿಂದ ಪೊಲೀಸರಿಗೆ ತನ್ನನ್ನು ಪತ್ತೆಹಚ್ಚಲು ಕಷ್ಟವಾಗಬಹುದು ಎಂದು ಆತ ಭಾವಿಸಿದ್ದ ಎಂದು ಮೂಲಗಳು ತಿಳಿಸಿವೆ.
ಮಗಳಿಗೆ 10 ದಿನಗಳ ಪೊಲೀಸ್ ವಶ
ಸರಣಿ ಹತ್ಯೆ ಪ್ರಕರಣದಲ್ಲಿ ತಂದೆಗೆ ಸಹಕರಿಸಿದ ಆರೋಪ ಎದುರಿಸುತ್ತಿರುವ ಮಗಳನ್ನು ಬಾಲ ನ್ಯಾಯಮಂಡಳಿಗೆ ಹಾಜರುಪಡಿಸಿದ ಪೊಲೀಸರು, 10 ದಿನಗಳ ವಶಕ್ಕೆ ಪಡೆದು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ.
ಇನ್ನೊಂದೆಡೆ ಪೊಲೀಸ್ ವಶದಲ್ಲಿರುವ ಇಂದುಶೇಖರ್‌ನನ್ನು ತನಿಖಾಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಪತ್ನಿಯ ಕಿರುಕುಳದ ಆರೋಪದ ಜೊತೆಗೆ ಆಸ್ತಿ ವಿಚಾರಕ್ಕಾಗಿ ಹತ್ಯೆ ನಡೆಸಿರುವ ಸಾಧ್ಯತೆಯ ಆಯಾಮದಲ್ಲಿಯೂ ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.
ಮನೆಗೆ ಲುಮಿನಾಲ್ ಪರೀಕ್ಷೆ
ಹತ್ಯೆಯಾದವರ ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಮತ್ತೊಂದೆಡೆ, ಆರೋಪಿಯ ಮನೆಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಹಾಗೂ ಸುಕೋ ತಂಡಗಳು ತಾಂತ್ರಿಕ ಮತ್ತು ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸಿವೆ.
ಆರೋಪಿ ರುಬ್ಬುವ ಕಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ ಬಳಿಕ ಮನೆಯ ಹಾಲ್, ಸ್ನಾನಗೃಹ ಹಾಗೂ ರುಬ್ಬುವ ಕಲ್ಲಿನ ಮೇಲಿದ್ದ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸಿದ್ದ ಎನ್ನಲಾಗಿದೆ. ಹೀಗಾಗಿ ಕಣ್ಣಿಗೆ ಕಾಣದ ರಕ್ತದ ಗುರುತುಗಳನ್ನು ಪತ್ತೆಹಚ್ಚಲು ತಜ್ಞರು ಮನೆಯಲ್ಲಿ ಲುಮಿನಾಲ್ ಪರೀಕ್ಷೆ ನಡೆಸಿದ್ದಾರೆ.
ಏನಿದು ಲುಮಿನಾಲ್ ಪರೀಕ್ಷೆ?
ಲುಮಿನಾಲ್ ಪರೀಕ್ಷೆಯು ಕಣ್ಣಿಗೆ ಕಾಣದ ರಕ್ತದ ಕಲೆಗಳನ್ನು ಪತ್ತೆಹಚ್ಚಲು ಬಳಸುವ ವೈಜ್ಞಾನಿಕ ವಿಧಾನವಾಗಿದೆ. ರಕ್ತವಿರುವ ಸ್ಥಳವನ್ನು ಸ್ವಚ್ಛಗೊಳಿಸಿದರೂ ರಕ್ತದಲ್ಲಿರುವ ಹಿಮೋಗ್ಲೋಬಿನ್‌ನ ಅಂಶಗಳು ಉಳಿದಿರಬಹುದು. ಅಂತಹ ಸ್ಥಳಗಳಿಗೆ ನಿರ್ದಿಷ್ಟ ರಾಸಾಯನಿಕ ದ್ರಾವಣವನ್ನು ಸಿಂಪಡಿಸಿದಾಗ ರಾಸಾಯನಿಕ ಪ್ರತಿಕ್ರಿಯೆಯಿಂದ ಬೆಳಕು ಕಾಣಿಸಿಕೊಳ್ಳುತ್ತದೆ. ಈ ಮೂಲಕ ಸ್ವಚ್ಛಗೊಳಿಸಲಾದ ಸ್ಥಳಗಳಲ್ಲಿಯೂ ರಕ್ತದ ಗುರುತುಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ.
ಲುಮಿನಾಲ್ ಪರೀಕ್ಷೆ ವೇಳೆ ಸಂಗ್ರಹಿಸಿದ ಮಾದರಿಗಳನ್ನು ಹೆಚ್ಚಿನ ಪರೀಕ್ಷೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕ್ರೈಂ
Murder-ಬೆಂಗಳೂರು: ಕುಟುಂಬದವರ ಎದುರೇ ರಿಯಲ್ ಎಸ್ಟೇಟ್ ಉದ್ಯಮಿ ಬರ್ಬರ ಹತ್ಯೆ
ರಾಜಧಾನಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಹಾಡಹಗಲೇ ಕುಟುಂಬದವರ ಎದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ. ಹತ್ಯೆಯಾದವರನ್ನು ಚರಣ್ ಗೌಡ (39) ಎಂದು ಗುರುತಿಸಲಾಗಿದೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಹಾಡಹಗಲೇ ಕುಟುಂಬದವರ ಎದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.
ಹತ್ಯೆಯಾದವರನ್ನು ಚರಣ್ ಗೌಡ (39) ಎಂದು ಗುರುತಿಸಲಾಗಿದೆ.
ಶುಕ್ರವಾರ ಬೆಳಗ್ಗೆ ಸುಮಾರು 10.30ರ ವೇಳೆಗೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಮೀಪ ಚರಣ್ ಗೌಡ ಅವರು ಕುಟುಂಬದವರೊಂದಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಬಂದ ಇಬ್ಬರು ದುಷ್ಕರ್ಮಿಗಳು ಏಕಾಏಕಿ ಅವರ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ದುಷ್ಕರ್ಮಿಗಳು ಕುಟುಂಬದವರ ಎದುರೇ ಚರಣ್ ಗೌಡ ಅವರ ಮೇಲೆ ಮನಬಂದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ತೀವ್ರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿಗಳು ಆಯುಧಗಳ ಸಮೇತ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಹಳೆಯ ದ್ವೇಷದ ಶಂಕೆ
ಚರಣ್ ಗೌಡ ಅವರ ಹತ್ಯೆಗೆ ಹಳೆಯ ದ್ವೇಷವೇ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಂಬಂಧಿಸಿದಂತೆ ಅವರಿಗೆ ಕೆಲವರೊಂದಿಗೆ ವೈಷಮ್ಯವಿತ್ತು ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ, ಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.
ಘಟನಾ ಸ್ಥಳಕ್ಕೆ ಯಲಹಂಕ ನ್ಯೂಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
ಕ್ರೈಂ
Seven murder case-ಏಳು ಕೊಲೆ ಪ್ರಕರಣಕ್ಕೆ ₹4 ಕೋಟಿ ಆಸ್ತಿ ನಂಟು? ತಂದೆ-ಮಗಳನ್ನು ಒಟ್ಟಿಗೆ ಕೂರಿಸಿ ವಿಚಾರಣೆ; ಮಗಳಿಗೆ ಆಸ್ತಿ ಆಮಿಷವೊಡ್ಡಿ ಸಂಚಿಗೆ ಬಳಸಿಕೊಂಡ ತಂದೆ
ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಅತ್ತೆ ಮನೆಯ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಪಡೆಯುವ ಉದ್ದೇಶದಿಂದ ಆರೋಪಿ ಇಂದುಶೇಖರ್ ಹತ್ಯೆಗಳಿಗೆ ಸಂಚು ರೂಪಿಸಿದ್ದನೇ ಎಂಬ ಶಂಕೆ ಪೊಲೀಸರಲ್ಲಿ ಮೂಡಿದೆ. ಈ ಹಿನ್ನೆಲೆಯಲ್ಲಿ ಕೌಟುಂಬಿಕ ಕಲಹದ ಜತೆಗೆ ಹಣಕಾಸಿನ ವ್ಯವಹಾರ ಮತ್ತು ಆಸ್ತಿ ವಿವಾದದ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.
ಬೆಂಗಳೂರು: ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಅತ್ತೆ ಮನೆಯ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಪಡೆಯುವ ಉದ್ದೇಶದಿಂದ ಆರೋಪಿ ಇಂದುಶೇಖರ್ ಹತ್ಯೆಗಳಿಗೆ ಸಂಚು ರೂಪಿಸಿದ್ದನೇ ಎಂಬ ಶಂಕೆ ಪೊಲೀಸರಲ್ಲಿ ಮೂಡಿದೆ. ಈ ಹಿನ್ನೆಲೆಯಲ್ಲಿ ಕೌಟುಂಬಿಕ ಕಲಹದ ಜತೆಗೆ ಹಣಕಾಸಿನ ವ್ಯವಹಾರ ಮತ್ತು ಆಸ್ತಿ ವಿವಾದದ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.
ಪತ್ನಿ ಹಾಗೂ ಆಕೆಯ ತವರು ಮನೆಯವರು ನೀಡುತ್ತಿದ್ದ ಮಾನಸಿಕ ಕಿರುಕುಳ ಮತ್ತು ಹಿಂಸೆಯನ್ನು ಸಹಿಸಲಾಗದೆ ಎಲ್ಲರನ್ನೂ ಮನೆಗೆ ಕರೆಸಿ ಹತ್ಯೆ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ. ಆದರೆ, ಕೌಟುಂಬಿಕ ಕಲಹವೇ ಹತ್ಯೆಗಳಿಗೆ ಪ್ರಮುಖ ಕಾರಣವೇ ಅಥವಾ ಇದರ ಹಿಂದೆ ಬೇರೆ ಉದ್ದೇಶಗಳಿವೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಮೂರ್ನಾಲ್ಕು ಕೋಟಿ ಆಸ್ತಿಗಾಗಿ ಹತ್ಯೆ ಸಂಚು?
ಶ್ರೀರಾಂಪುರದಲ್ಲಿ ಅಜ್ಜಿಗೆ ಸೇರಿದ ಸುಮಾರು ₹3ರಿಂದ ₹4 ಕೋಟಿ ಮೌಲ್ಯದ ಆಸ್ತಿ ಇದೆ. ಈ ಆಸ್ತಿಯಲ್ಲಿ ಅತ್ತೆ, ಮಾವ ಸೇರಿದಂತೆ ಕುಟುಂಬದ ಇತರ ಸದಸ್ಯರಿಗೂ ಪಾಲು ನೀಡಬೇಕಾಗುತ್ತದೆ. ಎಲ್ಲರನ್ನೂ ಹತ್ಯೆ ಮಾಡಿದರೆ ಆಸ್ತಿಯನ್ನು ಯಾರೊಂದಿಗೂ ಹಂಚಿಕೊಳ್ಳುವ ಅಗತ್ಯವಿರುವುದಿಲ್ಲ ಎಂದು ಆರೋಪಿ ಇಂದುಶೇಖರ್ ತನ್ನ ಮಗಳಿಗೆ ಆಮಿಷವೊಡ್ಡಿ ಸಂಚಿನಲ್ಲಿ ಭಾಗಿಯಾಗಿಸಿದ್ದ ಎನ್ನಲಾಗಿದೆ.
ತಂದೆಯ ಮಾತು ನಂಬಿದ ಪಿಯುಸಿ ವಿದ್ಯಾರ್ಥಿನಿ ಹತ್ಯೆ ಕೃತ್ಯದಲ್ಲಿ ಸಹಕರಿಸಿರುವುದು ತನಿಖೆಯಿಂದ ತಿಳಿದುಬಂದಿದೆ. ವಿಚಾರಣೆ ವೇಳೆ, ‘ತಂದೆ ಹೇಳಿದ ಕೆಲಸವನ್ನಷ್ಟೇ ಮಾಡುತ್ತಿದ್ದೆ. ಬೇರೆ ಏನೂ ಗೊತ್ತಿಲ್ಲ’ ಎಂದು ಆಕೆ ಹೇಳಿದ್ದಾಳೆ ಎನ್ನಲಾಗಿದೆ.
ವಿಚಾರಣೆಗೆ ತಂದೆ ಮತ್ತು ಮಗಳು ಸಮರ್ಪಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನೂ ಒಟ್ಟಿಗೆ ಕೂರಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಅಪ್ರಾಪ್ತ ವಯಸ್ಸಿನ ಕಾರಣ ಕಾನೂನು ರಕ್ಷಣೆ?
ಹತ್ಯೆ ನಡೆದ ಸಂದರ್ಭದಲ್ಲಿ ಆರೋಪಿಯ ಮಗಳಿಗೆ 17 ವರ್ಷ ವಯಸ್ಸಾಗಿತ್ತು. ನವೆಂಬರ್ 8ರಂದು ಆಕೆ 18 ವರ್ಷಕ್ಕೆ ಕಾಲಿಟ್ಟಿದ್ದಾಳೆ. ಕೃತ್ಯ ನಡೆದ ಸಮಯದಲ್ಲಿ ಅಪ್ರಾಪ್ತೆಯಾಗಿದ್ದ ಕಾರಣ ಬಾಲ ನ್ಯಾಯ ಕಾಯ್ದೆಯಡಿ ಕಾನೂನು ರಕ್ಷಣೆ ದೊರೆಯುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಮುಂದಾಗಿದ್ದಾರೆ.
ಮೃತದೇಹ ಸಾಗಣೆ, ಸಾಕ್ಷ್ಯ ನಾಶಕ್ಕೂ ಸಂಚು!
ಏಳು ಮಂದಿಯ ಹತ್ಯೆಯ ಬಳಿಕ ಮೃತದೇಹಗಳನ್ನು ಸಾಗಿಸುವುದು ಹಾಗೂ ಸಾಕ್ಷ್ಯಗಳನ್ನು ನಾಶಪಡಿಸುವುದಕ್ಕೂ ಆರೋಪಿ ಮೊದಲೇ ಯೋಜನೆ ರೂಪಿಸಿದ್ದ ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಈಗಾಗಲೇ ಮೃತರ ಅಂತ್ಯಕ್ರಿಯೆ ನೆರವೇರಿಸಿರುವ ಕುಟುಂಬದವರು ಶ್ರೀರಂಗಪಟ್ಟಣದಲ್ಲಿ ಅಸ್ಥಿ ವಿಸರ್ಜನೆ ಮಾಡಿದ್ದಾರೆ. ಏಳು ಮಂದಿಯ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಹತ್ಯೆಗೆ ಬಳಸಿದ ವಿಧಾನ ಸೇರಿದಂತೆ ಹಲವು ಮಹತ್ವದ ಸಂಗತಿಗಳು ತಿಳಿದುಬರಲಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆಸ್ತಿ ವಿವಾದವೂ ಹತ್ಯೆಗೆ ಪ್ರಮುಖ ಕಾರಣ: ಪೊಲೀಸ್ ಆಯುಕ್ತ
ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಮಾತನಾಡಿ, ಸರಣಿ ಹತ್ಯೆ ಪ್ರಕರಣದಲ್ಲಿ ಆರೋಪಿಯ ವೈಯಕ್ತಿಕ ದ್ವೇಷದ ಜತೆಗೆ ಹಣಕಾಸಿನ ವಿಚಾರವೂ ಪ್ರಮುಖ ಕಾರಣವಾಗಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ.
ಎಲ್ಲ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ ಬಳಿಕ ತನಿಖಾಧಿಕಾರಿಯೂ ಆಗಿರುವ ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ಅವರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.
-
ಬಿಗ್ ನ್ಯೂಸ್24 hours agoNeralakatte-Big Breaking: ನೇರಳಕಟ್ಟೆ : ಲಾರಿ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ 14ರ ಬಾಲಕಿ ದುರ್ಮರಣ
-
ಶಿಕ್ಷಣ8 hours agoVivekananda-ವಿವೇಕಾನಂದ ಪಾಲಿಟೆಕ್ನಿಕ್ – ನೂತನ ಆಡಳಿತ ಮಂಡಳಿಯ ರಚನೆ : ಅಧ್ಯಕ್ಷರಾಗಿ ಕೃಷ್ಣಕುಮಾರ್ ಅತ್ರಿಜಾಲು, ಸಂಚಾಲಕರಾಗಿ ನರಸಿಂಹ ಪೈ
-
ಚಿನ್ನ-ಬೆಳ್ಳಿ ದರ7 hours agoGold Rate Today-ಆಭರಣಪ್ರಿಯರಿಗೆ ಗುಡ್ನ್ಯೂಸ್: ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ: 12 ಸಾವಿರ ರೂ. ಗಡಿಯೊಳಗೆ ಬಂದ ಆಭರಣ ಚಿನ್ನ..!
-
ಸ್ಥಳೀಯ7 hours agoBaindoor-ರೈಲಿನಲ್ಲಿ ಮೊಬೈಲ್ ಕಳವು, UPI ಮೂಲಕ ಹಣ ವರ್ಗಾವಣೆ: ಬೈಂದೂರು ಪೊಲೀಸರಿಂದ ಕುಖ್ಯಾತ ಆರೋಪಿ ಬಂಧನ
-
ಸಿನೆಮಾ6 hours agoArjun Sarja-ಪುತ್ರಿ ಐಶ್ವರ್ಯಾ ವಿರುದ್ಧ ಅವಹೇಳನಕಾರಿ ವರದಿ: ಮಾಧ್ಯಮಗಳ ವಿರುದ್ಧ ಸಿಡಿದೆದ್ದ ಅರ್ಜುನ್ ಸರ್ಜಾ; ಅಧಿಕೃತ ದೂರು ದಾಖಲು
-
ಅಪರಾಧ7 hours agoManipal police-ಪಟಾಕಿ ಪ್ರಕರಣ: ಮಣಿಪಾಲ ಪೊಲೀಸರ ವಿರುದ್ಧ ದೌರ್ಜನ್ಯ ಆರೋಪ: ಸಿಎಂಗೆ ಇ-ಮೇಲ್ ಮಾಡಿದ ವಿದ್ಯಾರ್ಥಿಗಳು
-
ಅಪರಾಧ7 hours agoMangalore-ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ: ಮತ್ತೊಂದು ಪೋಕ್ಸೋ ಪ್ರಕರಣದಲ್ಲಿ ಧರ್ಮಗುರು ಮರುಬಂಧನ
-
ಆರೋಗ್ಯ7 hours agoBantwal-ಆಯುಷ್ಮಾನ್ ಭಾರತ್ ಯೋಜನೆಯಡಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಹಿಪ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆ ಯಶಸ್ವಿ















