ಕಾರ್ಯಕ್ರಮಗಳು
Ambika Vidyalaya-ಅಂಬಿಕಾ ವಿದ್ಯಾಲಯದಲ್ಲಿ ಶೃಂಗೇರಿ ಜಗದ್ಗುರುಗಳ ಸಾರ್ವಜನಿಕ ಗುರುವಂದನೆ ಮತ್ತು ದಶಾಂಬಿಕೋತ್ಸವ ಸಮಾರೋಪ ಸಮಾರಂಭ
ಪುತ್ತೂರು: ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಪುತ್ತೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಅಂಬಿಕಾ ವಿದ್ಯಾಲಯ (ಸಿಬಿಎಸ್ಇ) ತನ್ನ ಸ್ಥಾಪನೆಯ ದಶಮಾನೋತ್ಸವವನ್ನು ವರ್ಷಪೂರ್ತಿ ನಾನಾ ಕಾರ್ಯಕ್ರಮಗಳ ಮೂಲಕ ದಶಾಂಬಿಕೋತ್ಸವ ಹೆಸರಿನಲ್ಲಿ ಆಚರಿಸಿದೆ. ಇದರ ಸಮಾರೋಪ ಸಮಾರಂಭ ಏ. 25ರಂದು ಪುತ್ತೂರು ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಕ್ಯಾಂಪಸ್ನ ಶ್ರೀ ಶಂಕರ ಸಭಾಭವನದಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಶ್ರೀ ಶೃಂಗೇರಿ ಪೀಠದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಭಾಗವಹಿಸಲಿದ್ದಾರೆ. ಇದೇ ವೇಳೆ ಪೂಜ್ಯ ಸ್ವಾಮೀಜಿಯವರಿಗೆ ಸಾರ್ವಜನಿಕ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.
ಶ್ರೀಮಜ್ಜಗದ್ಗುರು ಅಭಿವಂದನಾ ಸಮಿತಿ ಮತ್ತು ಅಂಬಿಕಾ ವಿದ್ಯಾಲಯದ ಸಂಚಾಲಕರಾದ ಸುಬ್ರಹ್ಮಣ್ಯ ನಟ್ಟೋಜ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಶೃಂಗೇರಿ ಕ್ಷೇತ್ರಕ್ಕೂ ಅಂಬಿಕಾ ವಿದ್ಯಾಸಂಸ್ಥೆಗಳಿಗೂ ಅವಿನಾಭಾವ ಸಂಬಂಧವಿದೆ. ಅಂಬಿಕಾ ವಿದ್ಯಾಲಯದ ನಾಮಫಲಕವನ್ನು ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾ ಸ್ವಾಮೀಜಿ ಅವರು 2014ರಲ್ಲಿ ಅನಾವರಣಗೊಳಿಸಿದ್ದರು. 2016ರಲ್ಲಿ ಶ್ರೀಗಳು ತಮ್ಮ ಉತ್ತರಾಧಿಕಾರಿ ಶಿಷ್ಯರಾದ ಶ್ರೀ ಶ್ರೀ ವಿಧುಶೇಖರ ಭಾರತೀ ಶ್ರೀಗಳ ಜತೆಗೂಡಿ ಪುತ್ತೂರಿಗೆ ಆಗಮಿಸಿ ವಸತಿಯುತ ಅಂಬಿಕಾ ಪ.ಪೂ. ವಿದ್ಯಾಲಯ ಲೋಕಾರ್ಪಣೆಗೊಳಿಸಿದ್ದರು. 2019ರಲ್ಲಿ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ಅಂಬಿಕಾ ಮಹಾವಿದ್ಯಾಲಯವನ್ನು ಬಪ್ಪಳಿಗೆಯಲ್ಲಿ ಲೋಕಾರ್ಪಣೆ ಮಾಡಿದ್ದರು. 2021ರಲ್ಲಿ ಅಂಬಿಕಾ ವಿದ್ಯಾಲಯಕ್ಕೆ ಸಿಬಿಎಸ್ಇ ಮಾನ್ಯತೆ ದೊರಕಿದಾಗ ಶ್ರೀ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ಶೃಂಗೇರಿಯಲ್ಲಿ ಅಂಬಿಕಾ ವಿದ್ಯಾಲಯ ಸಿಬಿಎಸ್ಇ ನಾಮಫಲಕ ಅನಾವರಣ ಮಾಡಿದ್ದರು. ಇದೀಗ ದಶಾಂಬಿಕೋತ್ಸವ ಸಮಾರಂಭಕ್ಕೆ ಶ್ರೀಗಳು ಬರುತ್ತಿದ್ದಾರೆ ಎಂದವರು ನುಡಿದರು.
ಶ್ರೀ ಸರಸ್ವತೀ ಹೋಮ:
ಏ.25ರಂದು ಬೆಳಗ್ಗೆ 9 ಗಂಟೆಗೆ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ಶ್ರೀ ಸರಸ್ವತಿ ಹೋಮದ ಪೂರ್ಣಾಹುತಿ ನಡೆಯಲಿದೆ. ಇದಾದ ಬಳಿಕ ದಶಾಂಬಿಕೋತ್ಸವ ಸಮಾರಂಭ ಸಮಾರಂಭ ನಡೆಯಲಿದ್ದು, ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ಅಂಬಿಕಾ ಮಹಾ ವಿದ್ಯಾಲಯದ ಉಪನ್ಯಾಸಕರಾದ ತೇಜಶಂಕರ ಸೋಮಯಾಜಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ ಎಂದರು.
ಗುರುವಂದನೆ:
ಶೃಂಗೇರಿ ಜಗದ್ಗುರುಗಳ ಸಾರ್ವಜನಿಕ ಗುರುವಂದನೆ ಮತ್ತು ದಶಾಂಬಿಕೋತ್ಸವ ಸಮಾರೋಪ ಸಮಾರಂಭ ಏಕಕಾಲದಲ್ಲಿ ನಡೆಯಲಿದೆ. ಗುರುವಂದನೆಯ ಉದ್ದೇಶದಿಂದ ಹಿಂದೂ ಧರ್ಮದ ಸರ್ವ ಸಮುದಾಯಗಳ ಮುಖಂಡರನ್ನು ಒಳಗೊಂಡ ಅಭಿವಂದನಾ ಸಮಿತಿ ರಚಿಸಲಾಗಿದೆ ಎಂದು ಸುಬ್ರಹ್ಮಣ್ಯ ನಟ್ಟೋಜ ವಿವರಿಸಿದರು.
ಏ.24ರಂದು ಸಂಜೆ 6 ಗಂಟೆಗೆ ಜಗದ್ಗುರುಗಳು ಪುತ್ತೂರು ಪುರಪ್ರವೇಶ ಮಾಡಲಿದ್ದಾರೆ. ಕಬಕ ಸಮೀಪದ ಪೋಳ್ಯ ಮಠದ ಬಳಿ ಸ್ವಾಮೀಜಿಗಳಿಗೆ ಪೂರ್ಣಕುಂಭ ಸ್ವಾಗತ ಕೋರಿ, ಧೂಳೀ ಪಾದ ಪೂಜೆ ಮಾಡಲಾಗುವುದು. ಅಂದು ಬಪ್ಪಳಿಗೆಯ ಅಂಬಿಕಾ ವಿದ್ಯಾಲಯದಲ್ಲಿ ಮೊಕ್ಕಾಂ ಹೂಡಲಿರುವ ಶ್ರೀಗಳು ರಾತ್ರಿ ಪಟ್ಟದ ದೇವರಾದ ಶ್ರೀ ಚಂದ್ರಮೌಳೀಶ್ವರ ಪೂಜೆ ಮಾಡಲಿದ್ದಾರೆ.
25ರಂದು ಬೆಳಗ್ಗೆ ನಡೆಯುವ ಗುರುವಂದನಾ ಕಾರ್ಯಕ್ರಮದಲ್ಲಿ ಜಗದ್ಗುರುಗಳಿಗೆ ಪಾದುಕಾ ಪೂಜೆ ಮತ್ತು ಭಿಕ್ಷಾವಂದನೆ ನಡೆಯಲಿದೆ. ಈ ಸಂದರ್ಭದಲ್ಲಿ ಭಕ್ತರು ಶ್ರೀಗಳಿಗೆ ಪಾದುಕಾ ಪೂಜೆ ಸಲ್ಲಿಸಲು ಅವಕಾಶವಿದೆ. ಆಸಕ್ತರು ಮುಂಚಿತವಾಗಿಯೇ ಅಭಿವಂದನಾ ಸಮಿತಿಯನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮ ಬಳಿಕ ಶ್ರೀಗಳು ಮಂತ್ರಾಕ್ಷತೆ ನೀಡಲಿದ್ದು, ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಮಜ್ಜಗದ್ಗುರು ಅಭಿವಂದನಾ ಸಮಿತಿಯ ಅಧ್ಯಕ್ಷರಾದ ಶಶಾಂಕ್ ಕೊಟೇಚಾ, ಪ್ರಧಾನ ಕಾರ್ಯದರ್ಶಿ ಬಿ. ಐತ್ತಪ್ಪ ನಾಯ್ಕ್ö, ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್, ಅಂಬಿಕಾ ವಿದ್ಯಾಲಯ ಪ್ರಿನ್ಸಿಪಾಲ್ ಮಾಲತಿ ಡಿ., ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರಾದ ಸೀಮಾ ನಾಗರಾಜ್ ಉಪಸ್ಥಿತರಿದ್ದರು.
ಕಾರ್ಯಕ್ರಮಗಳು
Medland Cup-2026-ಮೆಡ್ಲ್ಯಾಂಡ್ ಆಸ್ಪತ್ರೆಯ ವಾರ್ಷಿಕ ಸಂಭ್ರಮ: ನ.29ರಂದು ‘ಮೆಡ್ಲ್ಯಾಂಡ್ ಕಪ್-2026’ ಕ್ರಿಕೆಟ್ ಪಂದ್ಯಾಟ
ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಥಮ ವರ್ಷದ ಸೇವಾ ಸಂಭ್ರಮದ ಅಂಗವಾಗಿ ವಿವಿಧ ಇಲಾಖೆಗಳ ಎಂಟು ತಂಡಗಳ ನಡುವಿನ ಆಹ್ವಾನಿತ ಕ್ರಿಕೆಟ್ ಪಂದ್ಯಾಟ ‘ಮೆಡ್ಲ್ಯಾಂಡ್ ಕಪ್-2026’ ನ.29ರಂದು ಪುತ್ತೂರಿನ ಸಂಪ್ಯ ಕಮ್ಮಾಡಿ ಮೈದಾನದಲ್ಲಿ ನಡೆಯಲಿದೆ.
ಪುತ್ತೂರು: ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಥಮ ವರ್ಷದ ಸೇವಾ ಸಂಭ್ರಮದ ಅಂಗವಾಗಿ ವಿವಿಧ ಇಲಾಖೆಗಳ ಎಂಟು ತಂಡಗಳ ನಡುವಿನ ಆಹ್ವಾನಿತ ಕ್ರಿಕೆಟ್ ಪಂದ್ಯಾಟ ‘ಮೆಡ್ಲ್ಯಾಂಡ್ ಕಪ್-2026’ ನ.29ರಂದು ಪುತ್ತೂರಿನ ಸಂಪ್ಯ ಕಮ್ಮಾಡಿ ಮೈದಾನದಲ್ಲಿ ನಡೆಯಲಿದೆ.

ಪುತ್ತೂರಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂಸ್ಥೆಗಳ ಪ್ರತಿನಿಧಿಗಳನ್ನು ಒಳಗೊಂಡ ಎಂಟು ತಂಡಗಳು ಈ ಕ್ರೀಡಾಕೂಟದಲ್ಲಿ ಸೆಣಸಾಡಲಿವೆ. ಪುತ್ತೂರು ಪೊಲೀಸ್ ಎಲೆವೆನ್, ಫಾರೆಸ್ಟ್ ಎಲೆವೆನ್, ಮೆಡ್ಲ್ಯಾಂಡ್ ಫಾಲ್ಕನ್ಸ್, ಪುತ್ತೂರು ಬಾರ್ ಅಸೋಸಿಯೇಷನ್, ಮೆಸ್ಕಾಂ ಪುತ್ತೂರು ಪರ್ಲ್ಸ್, ಕ್ಯಾಂಪ್ಕೋ ಪುತ್ತೂರು, ಕೆಎಸ್ಆರ್ಟಿಸಿ ಪುತ್ತೂರು ಹಾಗೂ ಸಿಎಂಸಿ ಎಲೆವೆನ್ ಪುತ್ತೂರು ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿವೆ.
ಆಸ್ಪತ್ರೆಯ ಒಂದು ವರ್ಷದ ವೈದ್ಯಕೀಯ ಸೇವೆಯ ಸಂಭ್ರಮವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ವಿವಿಧ ಇಲಾಖೆಗಳ ನಡುವೆ ಪರಸ್ಪರ ಬಾಂಧವ್ಯ ವೃದ್ಧಿಸುವುದರ ಜತೆಗೆ ಕ್ರೀಡಾಸ್ಫೂರ್ತಿ, ತಂಡದ ಒಗ್ಗಟ್ಟು ಹಾಗೂ ಸ್ನೇಹಭಾವವನ್ನು ಉತ್ತೇಜಿಸುವುದು ಪಂದ್ಯಾಟದ ಆಶಯವಾಗಿದೆ.
ಈ ಕುರಿತು ಮಾಹಿತಿ ನೀಡಿದ ಮೆಡ್ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯ ಹಿರಿಯ ವೈದ್ಯ ಡಾ. ವಿಶಾಲ್ ಅವರು, ಆಸ್ಪತ್ರೆಯ ಪ್ರಥಮ ವರ್ಷದ ಸಂಭ್ರಮವನ್ನು ಕ್ರೀಡಾಕೂಟದ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮಗಳು
Silver Jubilee-ಸವಣೂರು ವಿದ್ಯಾರಶ್ಮಿ ವಿದ್ಯಾಲಯಕ್ಕೆ 25ನೇ ವರ್ಷದ ಸಂಭ್ರಮ: ಡಿ.26ರಂದು ಬೆಳ್ಳಿಹಬ್ಬ ʻರಜತ ರಶ್ಮಿʼ; ಜ ಸಮಾಲೋಚನಾ ಸಭೆಯಲ್ಲಿ ಸವಣೂರು ಸೀತಾರಾಮ ರೈ ಘೋಷಣೆ
ರಾಜ್ಯದಲ್ಲಿಯೇ ಶಿಕ್ಷಣ ಕ್ಷೇತ್ರದಲ್ಲಿ ಹೆಸರನ್ನು ಮಾಡಿರುವ ವಿದ್ಯಾಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಬೆಳ್ಳಿಹಬ್ಬ ಆಚರಣೆಯ ಸಮಾರಂಭ ರಜತ ರಶ್ಮಿ ದ. 26 ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕ ಸಹಕಾರರತ್ನ ಸವಣೂರು ಸೀತಾರಾಮ ರೈ ಹೇಳಿದರು.
ಪುತ್ತೂರು: ರಾಜ್ಯದಲ್ಲಿಯೇ ಶಿಕ್ಷಣ ಕ್ಷೇತ್ರದಲ್ಲಿ ಹೆಸರನ್ನು ಮಾಡಿರುವ ವಿದ್ಯಾಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಬೆಳ್ಳಿಹಬ್ಬ ಆಚರಣೆಯ ಸಮಾರಂಭ ರಜತ ರಶ್ಮಿ ದ. 26 ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಸಂಸ್ಥೆಯ ಸಂಚಾಲಕ ಸಹಕಾರರತ್ನ ಸವಣೂರು ಸೀತಾರಾಮ ರೈ ಹೇಳಿದರು.
ನ. 24 ರಂದು ಸಂಸ್ಥೆಯ ಸಭಾಂಗಣದಲ್ಲಿ ಬೆಳ್ಳಿಹಬ್ಬ ಆಚರಣೆಯ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ನಮ್ಮ ಸಂಸ್ಥೆಯು 2001 ಮೇ 23 ರಂದು ಪ್ರಾರಂಭಗೊಂಡಿತು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಅಂಗ್ಗಮಾಧ್ಯಮ ಶಿಕ್ಷಣದೊಂದಿಗೆ ಸಕಲ ಸೌಲಭ್ಯಗಳನ್ನು ಒಳಗೊಂಡ ವ್ಯವಸ್ಥೆಯನ್ನು ನೀಡುವುದರ ಜೊತೆಗೆ ರಾಜ್ಯದ ನಾನಾ ಜಿಲ್ಲೆಗಳ ವಿದ್ಯಾರ್ಥಿಗಳು ಕಲಿಕೆಗೆ ಇಲ್ಲಿಗೆ ಆಗಮಿಸಿ, ಉತ್ತಮ ಶಿಕ್ಷಣ ಪಡೆದು, ಇಂದು ದೇಶ-ವಿದೇಶಗಳಲ್ಲಿ ಉನ್ನತವಾದ ಹುದ್ದೆಗಳಲ್ಲಿ ಇದ್ದಾರೆ. ಇದು ನಮಗೆ ತುಂಬಾ ಸಂತೋಷದ ವಿಚಾರ, ಸಂಸ್ಥೆಯ ಬೆಳ್ಳಿಹಬ್ಬವನ್ನು ಅರ್ಥಪೂರ್ಣ ಕಾರ್ಯಕ್ರಮವಾಗಿ ರೂಪಿಸುವ ನಿಟ್ಟಿನಲ್ಲಿ ದ. 26 ರಂದು ಬೆಳಿಗ್ಗೆ ಸವಣೂರು ಬಸದಿ ವಠಾರದಿಂದ ಮುಖ್ಯರಸ್ತೆಯಾಗಿ ಸಂಸ್ಥೆಯ ವಠಾರಕ್ಕೆ ಅದ್ದೂರಿಯಾದ ಮೆರವಣಿಗೆಯನ್ನು ಆಯೋಜಿಸಲಿವೆ.
ಬಳಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿವೆ ಎಂದು ಹೇಳಿದರು.
ವೈವಿಧ್ಯಮಯ 40 ಸ್ಟಾಲ್ಗಳು: ರಜತ ಸಂಭ್ರಮದ ನಿಟ್ಟಿನಲ್ಲಿ ನಾವು ಸಂಸ್ಥೆಯ ಅವರಣದಲ್ಲಿ 40 ಬಗೆಯ ವಿವಿಧ ಸ್ಟಾಲ್ಗಳನ್ನು ಹಾಕಲಿವೆ. ಈ ಸ್ಟಾಲ್ನಲ್ಲಿ ಜಿಲ್ಲೆಯ ವಿವಿಧ ಕಡೆಯಿಂದ ಅನೇಕ ಬಗೆಯ ವಸ್ತುಗಳ ಮಾರಾಟ, ಪ್ರದರ್ಶನ ಇರಲಿದೆ ಎಂದು ಸೀತಾರಾಮ ರೈ ತಿಳಿಸಿದರು.
ಮಾದರಿ ಕಾರ್ಯಕ್ರಮ ಆಗಬೇಕು-ಬಾಲ್ಯೊಟ್ಟು: `ರಜತರಶ್ಮಿ’ ಕಾರ್ಯಕ್ರಮದ ಗೌರವಾಧ್ಯಕ್ಷ ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಅವರು ಮಾತನಾಡಿ ಕಾರ್ಯಕ್ರಮ ಸಂಘಟಿಸುವುದರಲ್ಲಿ ಸೀತಾರಾಮ ರೈ ಅವರು ಬಹಳಷ್ಟು ಹೆಸರನ್ನು ಪಡೆದಿದ್ದಾರೆ, ವಿದ್ಯಾರಶ್ಮಿ ವಿದ್ಯಾಲಯ ಮತ್ತು ಆದರ್ಶ ವಿವಿಧೋzಶ ಸಹಕಾರ ಸಂಸ್ಥೆಗಳನ್ನು ಸ್ಥಾಪಿಸಿರುವ ಸೀತಾರಾಮ ರೈ ಅವರನ್ನು ವಿದ್ಯಾರಶ್ಮಿ ಸಂಸ್ಥೆಯ ರಜತ ಸಂಭ್ರಮ ಕಾರ್ಯಕ್ರಮದಲ್ಲಿ ಸವಣೂರು ಬಸದಿ ವಠಾರದಿಂದ ವಿದ್ಯಾರಶ್ಮಿ ವಿದ್ಯಾಲಯದ ತನಕ ರಥದ ಮೂಲಕ ವೈಭವಯುತವಾದ ಮೆರವಣಿಗೆಯಲ್ಲಿ ಕರೆತರಲಾಗುವುದು, ಮೆರವಣಿಗೆಯನ್ನು ವಿಶೇಷ ರೀತಿಯಲ್ಲಿ ಆಯೋಜಿಸಲಾಗುವುದು.
ಕಲ್ಲಡ್ಕಗೊಂಬೆಗಳ ಕುಣಿತದೊಂದಿಗೆ ಮೆರವಣಿಗೆಯ ಮೆರಗು ಹೆಚ್ಚಲಿದೆ ಎಂದರು. ಸೀತಾರಾಮ ರೈ ಓರ್ವ ಸಾಧಕರು, ಅವರ ನೇತೃತೃದಲ್ಲಿ ನಡೆಯುವ ಸಂಸ್ಥೆಯ ಬೆಳ್ಳಿಹಬ್ಬ ಮಾದರಿ ಕಾರ್ಯಕ್ರಮವಾಗಬೇಕು ಎಂದು ಬಾಲ್ಯೊಟ್ಟು ಹೇಳಿದರು.
ನ್ಯಾಯವಾದಿ ಎನ್.ಜಯಪ್ರಕಾಶ್ ರೈ ಸುಳ್ಯ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಪ್ರಮುಖರಾದ ಪಿ.ಡಿ. ಕೃಷ್ಣಕುಮಾರ್ ರೈ ದೇವಸ್ಯ, ಸುದರ್ಶನ್ ನಾಕ್ ಕಂಪ, ಕುಸುಮಾ ಶೆಟ್ಟಿ ಕೆರೆಕ್ಕೋಡಿ, ಸುರೇಶ್ ರೈ ಸೂಡಿಮುಳ್ಳು, ಪತ್ರಕರ್ತ ದುರ್ಗಾಕುಮಾರ್ ನಾಯರ್ಕೆರೆ ವಿವಿಧ ಸಲಹೆ-ಸೂಚನೆಗಳನ್ನು ನೀಡಿದರು. ವೇದಿಕೆಯಲ್ಲಿ ವಿದ್ಯಾರಶ್ಮಿ ವಿದ್ಯಾಲಯದ ಟ್ರಸ್ಟಿಗಳಾದ ಎನ್.ಸುಂದರ ರೈ ಸವಣೂರು, ರಶ್ಮಿ ಅಶ್ವಿನ್ ಶೆಟ್ಟಿ ಸವಣೂರು, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ| ರಾಜಲಕ್ಷ್ಮಿ ಎಸ್ ರೈ, ಸಂಸ್ಥೆಯ ರಕ್ಷಕ-ಶಿಕ್ಷಕ ಅಧ್ಯಕ್ಷ ಡಾ. ಜೀವನ್ ಪ್ರಕಾಶ್ ರೈ ಉಪಸ್ಥಿತರಿದ್ದರು.
ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ ಸ್ವಾಗತಿಸಿ, ಉಪನ್ಯಾಸಕಿ ಕಸ್ತೂರಿ ವಂದಿಸಿದರು. ಶಿಕ್ಷಕಿ ಚೇತನಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಪ್ರತಿಭಾ ಸ್ಮರಣ ಸಂಚಿಕೆ ತಯಾರಿಯ ಬಗ್ಗೆ ಮಾಹಿತಿ ನೀಡಿದರು. ಸಮಾರಂಭದಲ್ಲಿ ಜಿ.ಪಂ, ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ, ಸವಣೂರು ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ನಡುಬೈಲು, ಸವಣೂರು ಬೊಳ್ಳಿಬೊಲ್ಪು ತುಳುಕೂಟದ ಅಧ್ಯಕ್ಷ ಸತೀಶ್ ಬಲ್ಯಾಯ ಕನ್ನಡಕುಮೇರು, ಸವಣೂರು ಗ್ರಾ.ಪಂ, ಮಾಜಿ ಅಧ್ಯಕ್ಷೆ ರಾಜೀವಿ ವಿ.ಶೆಟ್ಟಿ ಕೆಡೆಂಜಿ, ಸಂಗೀತ ಪ್ರತಿಭೆ ಅಖಿಲಾ ನೆಕ್ರಾಜೆ, ಶಾಲಾ ಎಸ್ಡಿಎಂಸಿ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.
ರಜತ ರಶ್ಮಿ ಊರಿನ ಹಬ್ಬ
ವಿದ್ಯಾರಶ್ಮಿ ವಿದ್ಯಾಲಯದ ರಜತ ಸಂಭ್ರಮದ ಬೆಳ್ಳಿಹಬ್ಬ `ರಜತ ರಶ್ಮಿ’ ದ. 26 ರಂದು ದಿನಪೂರ್ತಿ ಅದ್ದೂರಿಯಾಗಿ ನಡೆಯಲಿದೆ. ಈ ಸುಂದರವಾದ ಕಾರ್ಯಕ್ರಮ ಅರ್ಥಪೂರ್ಣ ರೀತಿಯಲ್ಲಿ ನಡೆಯುವಲ್ಲಿ ಸಂಸ್ಥೆಯಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳು, ಊರ-ಪರವೂರ ಹಿತೈಷಿಗಳ ಪೂರ್ಣ ಸಹಕಾರ ಅಗತ್ಯ ಇದೆ. ರಜತ ರಶ್ಮಿ ಕಾರ್ಯಕ್ರಮ ಊರಿನ ಹಬ್ಬದಂತೆ ಆಗಲಿದೆ.
-ಸವಣೂರು ಸೀತಾರಾಮ ರೈ, ಸಂಚಾಲಕರು, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳು ಸವಣೂರು
ಕಾರ್ಯಕ್ರಮಗಳು
Puttur-ಪುತ್ತೂರು: ನ.27ರಂದು ಅತ್ಯಾಧುನಿಕ ಬಹುಮಹಡಿ ವಾಣಿಜ್ಯ ಸೌಧ ‘ದ್ವಾರಕಾ ಕಮರ್ಶಿಯಲ್ಸ್’ ಲೋಕಾರ್ಪಣೆ; ಒಂದೇ ಸೂರಿನಡಿ ಹೈಪರ್ ಮಾರ್ಕೆಟ್ ಸಹಿತ ಹಲವು ಸೇವೆಗಳು
ನಿರ್ಮಾಣ ಕ್ಷೇತ್ರದಲ್ಲಿ ಕಳೆದ 22 ವರ್ಷಗಳಿಂದ ತನ್ನದೇ ಆದ ಛಾಪು ಮೂಡಿಸಿರುವ ದ್ವಾರಕಾ ಸಂಸ್ಥೆಯು ಪುತ್ತೂರಿನ ದರ್ಬೆಯಲ್ಲಿ ಸ್ವಂತ ನಿವೇಶನದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ವಾಣಿಜ್ಯ ಸೌಧ ‘ದ್ವಾರಕಾ ಕಮರ್ಶಿಯಲ್ಸ್’ ನ.27ರಂದು ಲೋಕಾರ್ಪಣೆಗೊಳ್ಳಲಿದೆ. ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಒಂದೇ ಸೂರಿನಡಿ ವಿವಿಧ ಸಂಸ್ಥೆಗಳ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸುವ ಪರಿಕಲ್ಪನೆಯೊಂದಿಗೆ ಈ ವಾಣಿಜ್ಯ ಸೌಧ ರೂಪುಗೊಂಡಿದೆ.
ಪುತ್ತೂರು: ನಿರ್ಮಾಣ ಕ್ಷೇತ್ರದಲ್ಲಿ ಕಳೆದ 22 ವರ್ಷಗಳಿಂದ ತನ್ನದೇ ಆದ ಛಾಪು ಮೂಡಿಸಿರುವ ದ್ವಾರಕಾ ಸಂಸ್ಥೆಯು ಪುತ್ತೂರಿನ ದರ್ಬೆಯಲ್ಲಿ ಸ್ವಂತ ನಿವೇಶನದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ವಾಣಿಜ್ಯ ಸೌಧ ‘ದ್ವಾರಕಾ ಕಮರ್ಶಿಯಲ್ಸ್’ ನ.27ರಂದು ಲೋಕಾರ್ಪಣೆಗೊಳ್ಳಲಿದೆ. ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಒಂದೇ ಸೂರಿನಡಿ ವಿವಿಧ ಸಂಸ್ಥೆಗಳ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸುವ ಪರಿಕಲ್ಪನೆಯೊಂದಿಗೆ ಈ ವಾಣಿಜ್ಯ ಸೌಧ ರೂಪುಗೊಂಡಿದೆ ಎಂದು ದ್ವಾರಕಾ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನಿರ್ಮಾಣ ಕ್ಷೇತ್ರದಲ್ಲಿ ಎರಡು ದಶಕಗಳಿಗೂ ಅಧಿಕ ಪಯಣ ನಡೆಸಿರುವ ಸಂಸ್ಥೆಯು ಆರಂಭದಲ್ಲಿ ಪಡೀಲು ಬಾಳಪ್ಪ ಕಾಂಪ್ಲೆಕ್ಸ್, ಬೊಳುವಾರು, ಕಬಕ ಹಾಗೂ ಸರ್ಕಾರಿ ನೌಕರರ ಕಟ್ಟಡದಲ್ಲಿ ಕಚೇರಿ ಹೊಂದಿ ಕಾರ್ಯಾಚರಿಸುತ್ತಿತ್ತು. ಇದೀಗ ಸ್ವಂತ ಕಟ್ಟಡದಲ್ಲಿ ಸಂಸ್ಥೆಯ ಕಚೇರಿ ಆರಂಭವಾಗುತ್ತಿರುವುದು ಸಂತಸದ ವಿಚಾರ. ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಒಂದೇ ಸೂರಿನಡಿ ವಿವಿಧ ಸೇವೆಗಳನ್ನು ಒದಗಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆ
ನೂತನ ವಾಣಿಜ್ಯ ಸೌಧದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ್ವಾರಕಾ ಪ್ರತಿಷ್ಠಾನದ ಗೌರವಾಧ್ಯಕ್ಷ ಹರಿಕೃಷ್ಣ ಭಟ್ ಅರ್ತ್ಯಡ್ಕ ವಹಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಶಿಕ್ಷಣ ಕರ್ಮಯೋಗಿ ಪದ್ಮಶ್ರೀ ಡಾ. ಹರೇಕಳ ಹಾಜಬ್ಬ, ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ವಿದ್ಯಾರಶ್ಮಿ ಸಮೂಹ ವಿದ್ಯಾಸಂಸ್ಥೆಗಳ ಸಂಚಾಲಕ ಸವಣೂರು ಕೆ. ಸೀತಾರಾಮ ರೈ, ಮಾಸ್ಟರ್ ಪ್ಲಾನರಿ ಸಂಸ್ಥೆಯ ಎಸ್.ಕೆ. ಆನಂದ ಕುಮಾರ್, ಹಿರಿಯ ಉದ್ಯಮಿ ಮಂಜುನಾಥ್ ನಾಯಕ್, ಐಶ್ವರ್ಯ ಕನ್ಸ್ಟ್ರಕ್ಷನ್ನ ರಘುರಾಮ ಭಟ್ ಉಪ್ಪಂಗಳ, ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ರೆ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೋ, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ ನಡುಬೈಲು, ಪುತ್ತೂರು ನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ, ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ನಗರಸಭೆ ಪೌರಾಯುಕ್ತೆ ವಿದ್ಯಾ ಎಂ. ಕಾಳೆ, ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಕಾರ್ಯದರ್ಶಿ ಗುರುಪ್ರಸಾದ್ ಎ.ಬಿ. ಹಾಗೂ ಹೋಟೆಲ್ ಅಶ್ವಿನಿ ಮಾಲಕ ಕರುಣಾಕರ ರೈ ದೇರ್ಲ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ ಎಂದು ಗೋಪಾಲಕೃಷ್ಣ ಭಟ್ ವಿವರಿಸಿದರು.
‘ದ್ವಾರಕಾ ಮಂಗಲ್ ಹೈಪರ್ ಮಾರ್ಕೆಟ್’ ಪ್ರಮುಖ ಆಕರ್ಷಣೆ
ನಾಲ್ಕು ಅಂತಸ್ತಿನ ಈ ವಾಣಿಜ್ಯ ಸೌಧದ ನೆಲಹಂತ ಹಾಗೂ ಮೊದಲ ಮಹಡಿಯಲ್ಲಿ ದ್ವಾರಕಾ ಮಂಗಲ್ ಹೈಪರ್ ಮಾರ್ಕೆಟ್ ಕಾರ್ಯಾಚರಿಸಲಿದೆ. ಇಲ್ಲಿ ದ್ವಾರಕಾ ಹಾಲಿನ ಉತ್ಪನ್ನಗಳು, ತರಕಾರಿ, ದಿನಸಿ ಸಾಮಗ್ರಿಗಳು, ಹಣ್ಣು, ಚಾಟ್ಸ್, ಜ್ಯೂಸ್, ಕೂಲ್ಝೋನ್, ಬೇಕರಿ ತಿನಿಸುಗಳು, ಸ್ಟೇಶನರಿ ಸೇರಿದಂತೆ ಗ್ರಾಹಕರ ನಿತ್ಯ ಬಳಕೆಯ ನೂರಾರು ವಸ್ತುಗಳು ಮಿತದರದಲ್ಲಿ ಲಭ್ಯವಾಗಲಿವೆ.
ಎರಡನೇ ಮಹಡಿಯಲ್ಲಿ ಹಾರ್ಡ್ವೇರ್, ಸ್ಯಾನಿಟರಿ, ಟೈಲ್ಸ್, ಪೇಂಟ್ಸ್, ಯುನಿಸೆಕ್ಸ್ ಸಲೂನ್, ಡೆಂಟಲ್ ಕ್ಲಿನಿಕ್, ಸಾಫ್ಟ್ವೇರ್ ಸಂಸ್ಥೆ, ಚಾರ್ಟರ್ಡ್ ಅಕೌಂಟೆಂಟ್ ಕಚೇರಿ ಹಾಗೂ ಟೆಕ್ಸ್ಟೈಲ್ಸ್ ಮಳಿಗೆಗಳು ಕಾರ್ಯನಿರ್ವಹಿಸಲಿವೆ.
ಮೂರನೇ ಮಹಡಿಯಲ್ಲಿ ದ್ವಾರಕಾ ಸಮೂಹ ಸಂಸ್ಥೆಗಳ ಪ್ರಧಾನ ಕಚೇರಿ ಇರಲಿದ್ದು, ನಾಲ್ಕನೇ ಮಹಡಿಯಲ್ಲಿ ಸುಮಾರು 200 ಮಂದಿ ಆಸೀನರಾಗಬಹುದಾದ ಸುಸಜ್ಜಿತ ಸಭಾಂಗಣ ನಿರ್ಮಿಸಲಾಗಿದೆ.
ಆಧುನಿಕ ಸೌಲಭ್ಯಗಳೊಂದಿಗೆ ಸುಸಜ್ಜಿತ ಕಟ್ಟಡ
ಗ್ರಾಹಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಕಟ್ಟಡದ ಬೇಸ್ಮೆಂಟ್ನಲ್ಲಿ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುಮಾರು 20 ಕಾರುಗಳನ್ನು ನಿಲುಗಡೆ ಮಾಡಬಹುದಾಗಿದೆ. ಕಟ್ಟಡದಲ್ಲಿ ಲಿಫ್ಟ್ ವ್ಯವಸ್ಥೆ ಸೇರಿದಂತೆ ವಿವಿಧ ಆಧುನಿಕ ಸೌಲಭ್ಯಗಳನ್ನು ಒದಗಿಸಲಾಗಿದೆ.
-
ಕ್ರೈಂ24 hours agoMurder-ಕನ್ಯಾನ: ಚಿಕ್ಕಪ್ಪನ ಎದೆಗೆ ಕತ್ತಿಯಿಂದ ಇರಿದು ಹತ್ಯೆಗೈದ ಯುವತಿ ಅರೆಸ್ಟ್
-
ಸ್ಥಳೀಯ17 hours agoValaalu toll plaza-ವಳಾಲು ಟೋಲ್ ಪ್ಲಾಜಾ ಕಾಮಗಾರಿ ಪೂರ್ಣ; ವಾರದೊಳಗೆ ಅಧಿಕೃತ ಘೋಷಣೆ ಸಾಧ್ಯ; ಬ್ರಹ್ಮರಕೂಟ್ಲು ಟೋಲ್ನಿಂದ ‘ಡಬಲ್ ಟೋಲ್’ ಆತಂಕ..!
-
ನಿಧನ ವಾರ್ತೆ23 hours agoAccident-ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಭೀಕರ ಅಪಘಾತ: 8 ವರ್ಷದ ಬಾಲಕಿ ಸೇರಿ ಇಬ್ಬರು ಸ್ಥಳದಲ್ಲೇ ಸಾವು; ನಾಲ್ವರ ಸ್ಥಿತಿ ಗಂಭೀರ
-
ಕಾರ್ಯಕ್ರಮಗಳು22 hours agoPuttur-ಪುತ್ತೂರು: ನ.27ರಂದು ಅತ್ಯಾಧುನಿಕ ಬಹುಮಹಡಿ ವಾಣಿಜ್ಯ ಸೌಧ ‘ದ್ವಾರಕಾ ಕಮರ್ಶಿಯಲ್ಸ್’ ಲೋಕಾರ್ಪಣೆ; ಒಂದೇ ಸೂರಿನಡಿ ಹೈಪರ್ ಮಾರ್ಕೆಟ್ ಸಹಿತ ಹಲವು ಸೇವೆಗಳು
-
ಅಪರಾಧ22 hours agoExcise raid-ಬಾಳ್ತಿಲ, ಮೆಲ್ಕಾರ್ನಲ್ಲಿ ಅಬಕಾರಿ ದಾಳಿ: ₹20.37 ಲಕ್ಷ ಮೌಲ್ಯದ ಗೋವಾ ಮದ್ಯ, 2 ಕಾರುಗಳು ವಶ
-
ಅಪರಾಧ18 hours agoRenukashwami murder case-ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತಿಬ್ಬರು ಸಾಕ್ಷಿಗಳು ಉಲ್ಟಾ; ಪ್ರತಿಕೂಲ ಸಾಕ್ಷಿಗಳೆಂದು ಘೋಷಿಸಿದ ನ್ಯಾಯಾಲಯ
-
ಬಿಗ್ ನ್ಯೂಸ್23 hours agoRakesh Shetty-ಸ್ಟಿಂಗ್ ಆಪರೇಷನ್ ಪ್ರಕರಣ: ಜಾಮೀನು ಅರ್ಜಿ ವಾಪಸ್ ಪಡೆದ ರಾಕೇಶ್ ಶೆಟ್ಟಿ
-
ಕ್ರೀಡೆ22 hours agoVaibhav Suryavamshi-52 ಎಸೆತಗಳಲ್ಲಿ ದ್ವಿಶತಕ, 28 ಸಿಕ್ಸರ್ಗಳ ಅಬ್ಬರ; ಒಂದೇ ಪಂದ್ಯದಲ್ಲಿ ಎರಡು ವಿಶ್ವದಾಖಲೆ ಬರೆದ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ















