ಮನರಂಜನೆ
Apollo Circus-ಪುತ್ತೂರಿನಲ್ಲಿ ಪ್ರೇಕ್ಷಕರನ್ನು ಮೋಡಿ ಮಾಡುತ್ತಿರುವ ಅಪೋಲೋ ಸರ್ಕಸ್; 20 ವರ್ಷಗಳಿಂದ ದೇಶಾದ್ಯಂತ ಧೂಳೆಬ್ಬಿಸಿದ ತಂಡದಿಂದ ಮುಂದಿನ 25 ದಿನ ಮುಕ್ರಂಪಾಡಿಯಲ್ಲಿ ಸೂಪರ್ ಡ್ಯೂಪರ್ ಶೋ
ಸರ್ಕಸ್ – ಮೂರು ಅಕ್ಷರಗಳ ಪದ ಶತಮಾನಗಳಿಂದ ಭಾರತೀಯರನ್ನು ಆಕರ್ಷಿಸಿದೆ. ಇಂದು ಸೋಷಿಯಲ್ ಮೀಡಿಯಾಗಳಲ್ಲಿ ಶಾರ್ಟ್ಸ್ ಮತ್ತು ರೀಲ್ಸ್ ಗಳ ಹಾವಳಿ ನಡುವೆ ದೂರದರ್ಶನ ಮಾಧ್ಯಮಗಳು ಕಾಲಿಡುವ ಮುಂಚೆ ಜನರನ್ನು ರಂಜಿಸುತ್ತಿದ್ದುದು ಈ ಸರ್ಕಸ್ ಗಳು.

ಕೈಯಲ್ಲಿ ಪಾಪ್ಕಾರ್ನ್ ಮತ್ತು ಪಾಪ್ಸಿಕಲ್ ಬಾಟಲ್ ಹಿಡಿದುಕೊಂಡು, ಸರ್ಕಸ್ ಕಲಾವಿದರು ತಮ್ಮ ಚಮತ್ಕಾರಗಳನ್ನು ಹಗ್ಗದಿಂದ ಜಿಗಿಯುವ ಮೂಲಕ, ರಿಂಗ್ಮಾಸ್ಟರ್ನ ಟ್ಯೂನ್ಗಳಿಗೆ ನೃತ್ಯ ಮಾಡುವ 120 ನಿಮಿಷಗಳ ಪ್ರದರ್ಶನವನ್ನು ಎವೆಯಿಕ್ಕದೆ ನೋಡಿದಾಗ ನಮ್ಮನ್ನು ಬೇರೆಯ ಲೋಕಕ್ಕೆ ಕೊಂಡೊಯ್ಯುತ್ತದೆ.
ಪುತ್ತೂರು ಮಹಾತೋಭಾರ ಶ್ರೀ ಮಹಾಲೀಂಗೇಶ್ವರನ ನೆಲ, ಏಪ್ರಿಲ್ ತಿಂಗಳೆಂದರೆ ಇಲ್ಲಿ ಜಾತ್ರೆ ವಾತಾವರಣ. ಹತ್ತೂರಿನಲ್ಲಿರುವ ಪುತ್ತೂರಿನವರು ಒಂದು ಸೇರುವ ಸಮಯ. ಅವರ ನೆಂಟರಿಷ್ಟರು, ಬಂಧು ಬಳಗದವರು ಬಂದು ಸೇರುವ ಸಮಯ. ಹೀಗಾಗಿ ಜಾತ್ರೆ ಗದ್ದೆ ತುಂಬಾ ಪುತ್ತೂರಿಗರ ಕಲರವ ಕೇಳಿಸುತ್ತದೆ. ಹತ್ತೂರಿಗೂ ಅದು ಹಬ್ಬುತ್ತದೆ . ಆದರೇ ಈ ಬಾರಿ ಇದಕ್ಕೆ ಇನ್ನಷ್ಟು ಮೆರಗು ತುಂಬಲು ಅಪೋಲೊ ಸರ್ಕಸ್ ಪುತ್ತೂರಿಗೆ ಬಂದಿದೆ.
ಮುಕ್ರಂಪಾಡಿಯ ಹನುಮ ವಿಹಾರ ಮೈದಾನದಲ್ಲಿ ‘ಅಪೋಲೋ ಸರ್ಕಸ್’ ಭರ್ಜರಿಯಾಗಿ ಆರಂಭಗೊಂಡಿದ್ದು ಮೊದಲ ವಾರದಲ್ಲೆ ಪ್ರೇಕ್ಷಕರ ಮನಸೂರೆಗೊಂಡಿದೆ. ನೂರಕ್ಕೂ ಅಧಿಕ ಆಟಗಾರರು ಪ್ರದರ್ಶಿಸುವ ವಿಭಿನ್ನ ವಿನೂತನ ಕಲಾ ಪ್ರದರ್ಶನಕ್ಕೆ ವೀಕ್ಷಕರು ಮಂತ್ರಮುಗ್ಧಗೊಂಡಿದ್ದಾರೆ.
ಅಪೋಲೋ ಸರ್ಕಸ್ ತನ್ನ ಪೂರ್ಣ ಪ್ರಮಾಣದ ಮೋಡಿ ಮಾಡುವ 120 ನಿಮಿಷಗಳ ನವೀನ ಮಾದರಿಯ ಸರ್ಕಸ್ನ್ನು ಪ್ರದರ್ಶಿಸುತ್ತಿದೆ. ಅಪೋಲೋ ತಂಡ ಮೈ ರೋಮಾಂಚನಗೊಳಿಸುವ ಬಬಲ್ ಶೋ, ಸ್ಕೇಟಿಂಗ್, ಲ್ಯಾಡರ್ ಬ್ಯಾಲೆನ್ಸ್, ಸ್ವಾರ್ಡ್ಆಕ್ಟ್, ಕ್ಯೂಬ್ ಜಗ್ಲಿಂಗ್, ರೊಲ್ಲಾ ಬೊಲ್ಲಾ, ಹುಲಾ ಹೂಪ್ ಮತ್ತು ಏರಿಯಲ್ ರೋಪ್ ಜೊತೆಗೆ ವಿದೂಷಕ ಸಹಿತ ಅನೇಕ ಮನರಂಜನೆ ಆಟಗಳನ್ನು ಪ್ರದರ್ಶಿಸುತ್ತಿದೆ.
ಪ್ರದರ್ಶನದ ವಿವರ : ಪ್ರತಿದಿನ 3 ಆಟಗಳಿದ್ದು, ಮಧ್ಯಾಹ್ನ 1 ಗಂಟೆಗೆ, ಸಂಜೆ 4 ಗಂಟೆಗೆ ಮತ್ತು ರಾತ್ರಿ 7 ಗಂಟೆಗೆ ಪ್ರದರ್ಶನಗೊಳ್ಳಲಿದೆ.
ಮಣಿಪುರಿ, ನೇಪಾಳ, ಅಸಾಮಿ ಡಾರ್ಜಿಲಿಂಗ್ ಸೇರಿದಂತೆ ಇನ್ನಿತರ ಕಡೆಗಳ ನೂರಕ್ಕಿಂತ ಅಧಿಕ ಮಹಿಳೆಯರು ಹಾಗೂ ಪುರುಷ ಕಲಾವಿದರು ಈ ತಂಡದಲ್ಲಿದ್ದಾರೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕಲರ್ ಲೈಟ್ಸ್ ನಲ್ಲಿ ವಿವಿಧ ಪ್ರದರ್ಶನಗಳು. ಸುಮಾರು ಎರಡು ಗಂಟೆಗಳ ಕಾಲ ನಡೆಯಲಿದ್ದು, ದಿನದಲ್ಲಿ ಮೂರು ಶೋ ನಡೆಯಲಿದೆ. ಇದೀಗಾಗಲೇ ತಂಡವು ಮೈದಾನದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮಾ.30 ರಿಂದ ಪ್ರದರ್ಶನ ಆರಂಭಗೊಳ್ಳಲಿದೆ ಎಂದು ತಂಡದ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.
ಸಿನೆಮಾ
Aakasham Lo Ok Tara-ಬಾಕ್ಸ್ ಆಫೀಸ್ನಲ್ಲಿ ದುಲ್ಕರ್ ಸಲ್ಮಾನ್ ಅಬ್ಬರ: 4 ದಿನಕ್ಕೆ 20 ಕೋಟಿ ರೂ. ಗಳಿಸಿದ ‘ಆಕಾಶಮ್ ಲೋ ಒಕ ತಾರ’
ಮಲಯಾಳಂ ಚಿತ್ರರಂಗದ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಅಭಿನಯದ ತೆಲುಗು ಸಿನಿಮಾ ‘ಆಕಾಶಮ್ ಲೋ ಒಕ ತಾರ’ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಚಿತ್ರ, ದಿನದಿಂದ ದಿನಕ್ಕೆ ತನ್ನ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.
ಹೈದರಾಬಾದ್: ಮಲಯಾಳಂ ಚಿತ್ರರಂಗದ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಅಭಿನಯದ ತೆಲುಗು ಸಿನಿಮಾ ‘ಆಕಾಶಮ್ ಲೋ ಒಕ ತಾರ’ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಚಿತ್ರ, ದಿನದಿಂದ ದಿನಕ್ಕೆ ತನ್ನ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.
ಸಿನಿಮಾದ ನೈಜ ಯಶಸ್ಸನ್ನು ನಿರ್ಧರಿಸುವಲ್ಲಿ ಸೋಮವಾರದ ಕಲೆಕ್ಷನ್ ಪ್ರಮುಖ ಪಾತ್ರ ವಹಿಸುತ್ತದೆ. ಈ ಪರೀಕ್ಷೆಯಲ್ಲೂ ‘ಆಕಾಶಮ್ ಲೋ ಒಕ ತಾರ’ ಯಶಸ್ವಿಯಾಗಿದ್ದು, ಸೋಮವಾರ ಒಂದೇ ದಿನ ಬರೋಬ್ಬರಿ 4 ಕೋಟಿ ರೂಪಾಯಿ ಗಳಿಸಿದೆ. ವಿಶೇಷವೆಂದರೆ, ಈ ಗಳಿಕೆ ಚಿತ್ರದ ಮೊದಲ ದಿನದ ಕಲೆಕ್ಷನ್ಗಿಂತ ಶೇ.10ರಷ್ಟು ಹೆಚ್ಚಾಗಿದೆ.
ಚಿತ್ರ ಬಿಡುಗಡೆಯಾಗಿ ನಾಲ್ಕು ದಿನಗಳಲ್ಲಿ ಭಾರತದ ಬಾಕ್ಸ್ ಆಫೀಸ್ನಲ್ಲಿ ಒಟ್ಟು 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದೇ ವೇಗ ಮುಂದುವರಿದರೆ ಮೊದಲ ವಾರದ ಅಂತ್ಯಕ್ಕೆ 30 ಕೋಟಿ ರೂಪಾಯಿ ಗಡಿ ದಾಟುವ ನಿರೀಕ್ಷೆಯಿದೆ. ಮುಂದಿನ ವಾರವೂ ಉತ್ತಮ ಪ್ರದರ್ಶನ ಮುಂದುವರಿಸಿದರೆ ಚಿತ್ರ ಹಿಟ್ ಪಟ್ಟಿಗೆ ಸೇರುವ ಸಾಧ್ಯತೆಯಿದೆ. ಈ ಮೂಲಕ ತೆಲುಗು ಚಿತ್ರರಂಗದಲ್ಲಿ ದುಲ್ಕರ್ ಸಲ್ಮಾನ್ ಅವರ ಯಶಸ್ಸಿನ ಓಟ ಮುಂದುವರಿದಂತಾಗಲಿದೆ.
ಪವನ್ ಸಾಧಿನೇನಿ ನಿರ್ದೇಶನದ ಈ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ಗೆ ನಾಯಕಿಯಾಗಿ ಹೊಸ ಪ್ರತಿಭೆ ಸಾತ್ವಿಕಾ ವೀರವಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರುತಿ ಹಾಸನ್, ರುಹಾನಿ ಶರ್ಮಾ, ಸ್ವಾಸಿಕಾ, ಮುರಳಿ ಶರ್ಮಾ, ಗೌತಮ್ ವಾಸುದೇವ್ ಮೆನನ್, ಗೆಟಪ್ ಶ್ರೀನು ಹಾಗೂ ಪ್ರವೀಣ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಿನೆಮಾ
Dawood-‘ಧುರಂಧರ್ ‘ ನಲ್ಲಿ ದಾವೂದ್ ನ ತೋರಿಸಿದ ರೀತಿ ವಾಸ್ತವವಲ್ಲ…! ಮೋಸ್ಟ್ ವಾಂಟೆಡ್ ಪಾತಕಿ ಈಗ ಹೇಗಿದ್ದಾನೆ ಗೊತ್ತೇ..? ಮಾಜಿ FBI ಅಧಿಕಾರಿ ಹೇಳಿದ್ದೇನೂ..?
‘ಧುರಂಧರ್’ ಸಿನಿಮಾದಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಾ ಹಾಸಿಗೆ ಹಿಡಿದಿರುವ ವೃದ್ಧನಂತೆ ಚಿತ್ರಿಸಲಾಗಿರುವ ದಾವೂದ್, ವಾಸ್ತವದಲ್ಲಿ ಇನ್ನೂ ಸಕ್ರಿಯನಾಗಿದ್ದು ತನ್ನ ಅಪರಾಧ ಜಾಲವನ್ನು ಮುನ್ನಡೆಸುತ್ತಿದ್ದಾನೆ ಎಂದು ಅಮೆರಿಕದ ಮಾಜಿ ಎಫ್ಬಿಐ ಅಧಿಕಾರಿ ಕಮ್ರಾನ್ ಫರೀದಿ ಇಂಡಿಯಾ ಟುಡೇಗೆ ನೀಡಿದ ಪಾಡ್ಕಾಸ್ಟ್ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನವದೆಹಲಿ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟಗಳ ಬಳಿಕ ಭಾರತದಿಂದ ಪರಾರಿಯಾಗಿ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎನ್ನಲಾದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬದುಕು ಇಂದಿಗೂ ನಿಗೂಢವಾಗಿದೆ. ಕಳೆದ ಹಲವು ವರ್ಷಗಳಿಂದ ಆತನ ಯಾವುದೇ ಅಧಿಕೃತ ಛಾಯಾಚಿತ್ರ ಸಾರ್ವಜನಿಕವಾಗಿ ಲಭ್ಯವಾಗಿಲ್ಲ. ಇದೀಗ ದಾವೂದ್ನ ಡಿ-ಕಂಪನಿಯೊಳಗೆ ರಹಸ್ಯವಾಗಿ ಕಾರ್ಯನಿರ್ವಹಿಸಿದ್ದಾಗಿ ಹೇಳಿಕೊಂಡಿರುವ ಅಮೆರಿಕದ ಮಾಜಿ ಎಫ್ಬಿಐ ಅಧಿಕಾರಿ ಕಮ್ರಾನ್ ಫರೀದಿ, ಡಾನ್ನ ವೈಯಕ್ತಿಕ ಜೀವನ, ಭದ್ರತಾ ವ್ಯವಸ್ಥೆ ಹಾಗೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆಗಿನ ಸಂಪರ್ಕದ ಕುರಿತು ಹಲವು ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
‘ಧುರಂಧರ್’ ಸಿನಿಮಾದಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಾ ಹಾಸಿಗೆ ಹಿಡಿದಿರುವ ವೃದ್ಧನಂತೆ ಚಿತ್ರಿಸಲಾಗಿರುವ ದಾವೂದ್, ವಾಸ್ತವದಲ್ಲಿ ಇನ್ನೂ ಸಕ್ರಿಯನಾಗಿದ್ದು ತನ್ನ ಅಪರಾಧ ಜಾಲವನ್ನು ಮುನ್ನಡೆಸುತ್ತಿದ್ದಾನೆ ಎಂಬುದು ಫರೀದಿ ಅವರ ಪ್ರಮುಖ ಹೇಳಿಕೆ. ಇಂಡಿಯಾ ಟುಡೇಗೆ ನೀಡಿದ ಪಾಡ್ಕಾಸ್ಟ್ ಸಂದರ್ಶನದಲ್ಲಿ ಅವರು ಈ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಧುರಂಧರ್ ಸಿನಿಮಾದ ದಾವೂದ್ಗೂ ನೈಜ ವ್ಯಕ್ತಿಗೂ ವ್ಯತ್ಯಾಸ!
‘ಧುರಂಧರ್’ ಚಿತ್ರದಲ್ಲಿ ‘ಬಡೇ ಸಾಹಬ್’ ಎಂದು ಉಲ್ಲೇಖಿಸಲಾಗಿರುವ ದಾವೂದ್ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾನೆ. ಆದರೆ, ದಾವೂದ್ ಜೊತೆ ಹಲವು ಪಾರ್ಟಿ ಹಾಗೂ ವ್ಯವಹಾರಿಕ ಸಭೆಗಳಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿಕೊಂಡಿರುವ ಫರೀದಿ, ಆತ ಇಂದಿಗೂ ತನ್ನ ಅಪರಾಧ ಜಾಲದ ಕಾರ್ಯಾಚರಣೆಗಳನ್ನು ನಿಯಂತ್ರಿಸುತ್ತಿದ್ದಾನೆ ಎಂದು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮಾದಕವಸ್ತು ವ್ಯಾಪಾರದ ಮೇಲೂ ದಾವೂದ್ ನಿಗಾ ಇರಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಪಾಕಿಸ್ತಾನದ ಭದ್ರತಾ ವಲಯದಲ್ಲಿ ಆತನನ್ನು ‘ಬಡೇ ಸಾಹಬ್’ ಅಥವಾ ‘ಬಡೆ ವಾಲೆ’ ಎಂದು ಕರೆಯಲಾಗುತ್ತದೆ ಎಂದಿದ್ದಾರೆ.
ಕರಾಚಿಯ ಕ್ಲಿಫ್ಟನ್ನಲ್ಲೇ ಡಾನ್ ವಾಸ!
ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾದರೂ ದಾವೂದ್ ತನ್ನ ವಾಸಸ್ಥಳವನ್ನು ಬದಲಿಸಿಲ್ಲ. ಕರಾಚಿಯ ಅತ್ಯಂತ ಬಿಗಿ ಭದ್ರತೆಯ ಕ್ಲಿಫ್ಟನ್ ಪ್ರದೇಶದಲ್ಲಿ ಕುಟುಂಬದ ಸದಸ್ಯರೊಂದಿಗೆ ವಾಸಿಸುತ್ತಿದ್ದಾನೆ ಎಂದು ಫರೀದಿ ಹೇಳಿಕೊಂಡಿದ್ದಾರೆ.
ಆದರೆ, ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾದ ಸಂದರ್ಭಗಳಲ್ಲಿ ಆತ ಇಸ್ಲಾಮಾಬಾದ್ ಸೇರಿದಂತೆ ಮೂರು ಸುರಕ್ಷಿತ ಅಡಗುತಾಣಗಳಿಗೆ ಸ್ಥಳಾಂತರಗೊಳ್ಳುತ್ತಾನೆ ಎಂದು ತಿಳಿಸಿದ್ದಾರೆ.
ದಾವೂದ್ ನಿವಾಸದ ಕೆಳಗೆ ರಹಸ್ಯ ಸುರಂಗವಿದೆ ಎಂಬ ವದಂತಿಯನ್ನು ತಳ್ಳಿಹಾಕಿರುವ ಅವರು, ಮನೆಯ ಹಿಂಭಾಗದಿಂದ ಜನಸಂದಣಿ ಹೆಚ್ಚಿರುವ ದರ್ಗಾವೊಂದಕ್ಕೆ ಸಂಪರ್ಕ ಕಲ್ಪಿಸುವ ಪರ್ಯಾಯ ನಿರ್ಗಮನ ಮಾರ್ಗವಿದೆ ಎಂದು ಹೇಳಿದ್ದಾರೆ.
ಡಿ-ಕಂಪನಿಯೊಳಗೆ ನುಸುಳಿದ್ದೇಗೆ?
ದಾವೂದ್ನ ಅಪರಾಧ ಜಾಲದೊಳಗೆ ತಾನು ಹೇಗೆ ಪ್ರವೇಶಿಸಿದೆ ಎಂಬುದನ್ನೂ ಫರೀದಿ ವಿವರಿಸಿದ್ದಾರೆ. 1995ರಲ್ಲಿ ಎಫ್ಬಿಐಗೆ ಸೇರ್ಪಡೆಯಾಗಿದ್ದ ತಮಗೆ 2009ರಲ್ಲಿ ದಾವೂದ್ ಗ್ಯಾಂಗ್ನೊಳಗೆ ರಹಸ್ಯವಾಗಿ ನುಸುಳುವ ಜವಾಬ್ದಾರಿ ನೀಡಲಾಗಿತ್ತು ಎಂದು ಹೇಳಿದ್ದಾರೆ.
ಈ ಕಾರ್ಯಾಚರಣೆಗಾಗಿ ರಷ್ಯಾದ ಮಾಫಿಯಾ ಸದಸ್ಯನಂತೆ ಗುರುತಿಸಿಕೊಂಡು, ತಮ್ಮ ಪಾಕಿಸ್ತಾನಿ ಮೂಲವನ್ನು ಮರೆಮಾಚಿದ್ದಾಗಿ ತಿಳಿಸಿದ್ದಾರೆ. ದಾವೂದ್ನ ಆಪ್ತ ಸಹಚರ ಜಬೀರ್ ಮೊತಿವಾಲಾ ಮೂಲಕ ಆತನಿಗೆ ಪರಿಚಯವಾಗಿತ್ತು ಎಂದಿದ್ದಾರೆ.
2018ರಲ್ಲಿ ಲಂಡನ್ನಲ್ಲಿ ಜಬೀರ್ ಮೊತಿವಾಲಾ ಬಂಧನಕ್ಕೂ ತಾನೇ ಕಾರಣ ಎಂದು ಫರೀದಿ ಹೇಳಿಕೊಂಡಿದ್ದಾರೆ. ಕರಾಚಿಯಲ್ಲಿ ಡಿ-ಕಂಪನಿಗಾಗಿ ಹವಾಲಾ ಹಣಕಾಸು ವ್ಯವಹಾರಗಳನ್ನು ಸ್ಥಾಪಿಸಲು ಸಹಾಯ ಮಾಡಿದ್ದಾಗಿಯೂ ತಿಳಿಸಿದ್ದಾರೆ. ದಾವೂದ್ನ ಸಹೋದರ ಅನೀಸ್ ಇಬ್ರಾಹಿಂ ಪುತ್ರ ಅಲಿ ಕಾಸ್ಕರ್ ತಮ್ಮ ಮಾಹಿತಿಯ ಪ್ರಮುಖ ಮೂಲವಾಗಿದ್ದ ಎಂದು ಹೇಳಿದ್ದಾರೆ.
ರಾತ್ರಿ 10ರ ಬಳಿಕವೇ ಹೊರಗೆ ಬರುವ ಡಾನ್!
ದಾವೂದ್ನ ದಿನಚರಿಯ ಕುರಿತು ಮಾತನಾಡಿರುವ ಫರೀದಿ, ಆತ ಹಗಲು ಹೊತ್ತಿನಲ್ಲಿ ಮನೆಯಿಂದ ಹೊರಬರುವುದಿಲ್ಲ ಎಂದು ತಿಳಿಸಿದ್ದಾರೆ. ರಾತ್ರಿ 10 ಗಂಟೆಯ ಬಳಿಕ ಹೊರಗೆ ಬಂದು, ಮುಂಜಾನೆ ಫಜರ್ ಪ್ರಾರ್ಥನೆಗೂ ಮುನ್ನ ಮನೆಗೆ ಮರಳುತ್ತಾನೆ. ಈ ಕಾರಣದಿಂದ ಆತನನ್ನು ‘ರಾತ್ ಕಾ ಬಾದ್ಶಾ’ ಎಂದು ಕರೆಯಲಾಗುತ್ತದೆ ಎಂದಿದ್ದಾರೆ.
ದಾವೂದ್ಗೆ ದಿನದ 24 ಗಂಟೆಯೂ ಬಿಗಿ ಭದ್ರತೆ ಇರುತ್ತದೆ. ಸುಮಾರು 35ರಿಂದ 45 ಮಂದಿ ಭದ್ರತಾ ಸಿಬ್ಬಂದಿ ಆತನ ಸುತ್ತಲೂ ಕಾವಲು ಕಾಯುತ್ತಾರೆ. ಅವರ ಬಳಿ ಎಕೆ-47 ಸೇರಿದಂತೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿರುತ್ತವೆ ಎಂದು ಫರೀದಿ ಆರೋಪಿಸಿದ್ದಾರೆ.
ದಾವೂದ್ನ ಭದ್ರತಾ ವ್ಯವಸ್ಥೆಯನ್ನು ಛೋಟಾ ಶಕೀಲ್ ನಿರ್ವಹಿಸುತ್ತಾನೆ. ಆತ ಪಾಕಿಸ್ತಾನದ ಐಎಸ್ಐ ಜೊತೆ ಸಂಪರ್ಕ ಹೊಂದಿದ್ದು, ಪ್ರತಿ ಶುಕ್ರವಾರ ಆ ಸಂಸ್ಥೆಯ ಕೇಂದ್ರ ಕಚೇರಿಗೆ ತೆರಳಿ ಭದ್ರತಾ ವರದಿಗಳನ್ನು ಪಡೆಯುತ್ತಾನೆ ಎಂದು ಫರೀದಿ ಹೇಳಿದ್ದಾರೆ.
ದಾವೂದ್ ಮತ್ತು ಛೋಟಾ ಶಕೀಲ್ ದುಬೈನಿಂದ ತರಿಸಿಕೊಂಡಿರುವ ಗುಂಡು ನಿರೋಧಕ ವಾಹನಗಳಲ್ಲಿ ಸಂಚರಿಸುತ್ತಾರೆ. ಬಾಂಬ್, ರಾಕೆಟ್ ಹಾಗೂ ಸ್ನೈಪರ್ ದಾಳಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಈ ವಾಹನಗಳಿಗಿದೆ ಎಂದು ತಿಳಿಸಿದ್ದಾರೆ.
ಐಎಸ್ಐ, ಲಷ್ಕರ್ ಜೊತೆ ನಂಟಿನ ಆರೋಪ
ದಾವೂದ್ ಪಾಕಿಸ್ತಾನದ ಐಎಸ್ಐ ಆಶ್ರಯದಲ್ಲಿದ್ದಾನೆ ಎಂದು ಫರೀದಿ ನೇರ ಆರೋಪ ಮಾಡಿದ್ದಾರೆ. ಲಷ್ಕರ್-ಎ-ತೊಯ್ಬಾ ಸಂಘಟನೆ ಹಾಗೂ 26/11 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಹಫೀಜ್ ಸಯೀದ್ ಜೊತೆ ದಾವೂದ್ಗೆ ನಿಕಟ ವ್ಯವಹಾರಿಕ ಸಂಪರ್ಕವಿದೆ ಎಂದೂ ಹೇಳಿದ್ದಾರೆ.
1993ರ ಮುಂಬೈ ಸ್ಫೋಟ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಟೈಗರ್ ಮೆಮನ್ ಬಗ್ಗೆಯೂ ಮಾತನಾಡಿರುವ ಅವರು, ಮೆಮನ್ ಹೆಚ್ಚು ಹೊರಗೆ ಸಂಚರಿಸುವುದಿಲ್ಲ ಎಂದಿದ್ದಾರೆ. ಇದೇ ವೇಳೆ, ಅನೀಸ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ನಡುವೆ ಗ್ಯಾಂಗ್ನ ನಿಯಂತ್ರಣ ಹಾಗೂ ಉತ್ತರಾಧಿಕಾರದ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ ಎಂದು ಆರೋಪಿಸಿದ್ದಾರೆ.
ಐಷಾರಾಮಿ ಜೀವನ, ಕೊಕೇನ್ ಸೇವನೆ, ಎರಡನೇ ಮದುವೆ!
ಧಾರ್ಮಿಕ ವ್ಯಕ್ತಿಯಂತೆ ತನ್ನನ್ನು ಬಿಂಬಿಸಿಕೊಳ್ಳುವ ದಾವೂದ್ ಖಾಸಗಿ ಬದುಕಿನಲ್ಲಿ ಐಷಾರಾಮಿ ಜೀವನ ನಡೆಸುತ್ತಾನೆ ಎಂದು ಫರೀದಿ ಆರೋಪಿಸಿದ್ದಾರೆ. ಮುಜ್ರಾ ನೃತ್ಯ ಕಾರ್ಯಕ್ರಮಗಳನ್ನು ವೀಕ್ಷಿಸುವ ಆಸಕ್ತಿ ಹೊಂದಿದ್ದಾನೆ. ಹಿಂದೆ ಮದ್ಯ ಸೇವಿಸುತ್ತಿದ್ದ ಆತ ಇದೀಗ ಕೊಕೇನ್ ಸೇವನೆಗೆ ಹೆಚ್ಚು ಒಲವು ತೋರಿದ್ದಾನೆ ಎಂದು ಹೇಳಿದ್ದಾರೆ.
ದಾವೂದ್ಗಾಗಿ ತಾನೇ ಮದ್ಯ ಖರೀದಿಸಿದ್ದಾಗಿ ಹಾಗೂ ಸುಮಾರು 1.78 ಲಕ್ಷ ರೂಪಾಯಿ ಮೌಲ್ಯದ ದುಬಾರಿ ಮದ್ಯದ ಬಾಟಲಿಯನ್ನು ಆತ ತರಿಸಿಕೊಂಡಿದ್ದಾಗಿ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಕರಾಚಿಯ ’22 ಜಮ್ಮಮಾ’ ಎಂಬ ಅತ್ಯಂತ ಬಿಗಿ ಭದ್ರತೆಯ, ಶಬ್ದ ನಿರೋಧಕ ಕಟ್ಟಡದಲ್ಲಿ ದಾವೂದ್ ಪಾಕಿಸ್ತಾನದ ಅಧಿಕಾರಿಗಳು ಮತ್ತು ಉದ್ಯಮಿಗಳೊಂದಿಗೆ ಸಭೆ ನಡೆಸುತ್ತಾನೆ ಎಂದಿದ್ದಾರೆ.
ಒಂದು ಸಂದರ್ಭದಲ್ಲಿ ತನ್ನ ಸಹಾಯಕನಿಗೆ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ನಲ್ಲಿ ಉದ್ಯೋಗ ಕೊಡಿಸುವ ಸಲುವಾಗಿ ದಾವೂದ್ ಮಧ್ಯರಾತ್ರಿಯಲ್ಲಿ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ಕರೆ ಮಾಡಿದ್ದನ್ನು ನೋಡಿದ್ದೇನೆ ಎಂದೂ ಫರೀದಿ ಹೇಳಿಕೊಂಡಿದ್ದಾರೆ.
ಇದಲ್ಲದೆ, ದಾವೂದ್ ಪಾಕಿಸ್ತಾನದಲ್ಲಿ ಎರಡನೇ ಮದುವೆಯಾಗಿದ್ದಾನೆ ಎಂಬ ಮಾಹಿತಿಯನ್ನೂ ಅವರು ಬಹಿರಂಗಪಡಿಸಿದ್ದಾರೆ. ಆಯೇಷಾ ಭಾಭಿ ಎಂದು ಕರೆಯಲಾಗುವ ಈ ಮಹಿಳೆ ದಾವೂದ್ಗಿಂತ ಸುಮಾರು 20 ವರ್ಷ ಚಿಕ್ಕವಳು. ಆಕೆ ಕರಾಚಿಯಲ್ಲಿ ಕಪ್ಪು ಬಣ್ಣದ ಮರ್ಸಿಡಿಸ್ ಕಾರಿನಲ್ಲಿ ಸಂಚರಿಸುತ್ತಾಳೆ ಎಂದು ತಿಳಿಸಿದ್ದಾರೆ.
2023ರಲ್ಲಿ ದಾವೂದ್ನ ಸಹೋದರಿ ಹಸೀನಾ ಪಾರ್ಕರ್ ಪುತ್ರ ಅಲಿಶಾ ಪಾರ್ಕರ್ ಕೂಡ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮುಂದೆ ಇದೇ ರೀತಿಯ ಮಾಹಿತಿ ನೀಡಿದ್ದ ಎನ್ನಲಾಗಿದೆ. ಮೊದಲ ಪತ್ನಿ ಮೆಹಜಬೀನ್ ಜೊತೆಗಿನ ವಿವಾಹ ಸಂಬಂಧ ಮುಂದುವರಿದಿರುವಾಗಲೇ ದಾವೂದ್ ಪಾಕಿಸ್ತಾನದ ಪಠಾಣ್ ಸಮುದಾಯದ ಮಹಿಳೆಯನ್ನು ಎರಡನೇ ಮದುವೆಯಾಗಿದ್ದಾನೆ ಎಂದು ಅಲಿಶಾ ಹೇಳಿದ್ದ.
ದಾವೂದ್ ಜೊತೆಗಿದ್ದ ಮುಂಬೈನ ಫಕೀರ!
ದಾವೂದ್ ಪಾಕಿಸ್ತಾನಕ್ಕೆ ತೆರಳುವಾಗ ಮುಂಬೈ ಮೂಲದ ‘ಇಸ್ಲಾಂ ಬಾಬಾ’ ಎಂಬ ಫಕೀರನನ್ನೂ ತನ್ನೊಂದಿಗೆ ಕರೆದೊಯ್ದಿದ್ದ ಎಂದು ಫರೀದಿ ತಿಳಿಸಿದ್ದಾರೆ. ಡಿ-ಕಂಪನಿಯ ಯಾವುದೇ ಕಾರ್ಯಾಚರಣೆ ಆರಂಭಿಸುವ ಮೊದಲು ಈ ಫಕೀರನ ಅನುಮತಿ ಪಡೆಯಲಾಗುತ್ತದೆ ಎಂಬ ಕುತೂಹಲಕಾರಿ ವಿಚಾರವನ್ನೂ ಅವರು ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ, ದಶಕಗಳಿಂದ ನಿಗೂಢವಾಗಿರುವ ದಾವೂದ್ ಇಬ್ರಾಹಿಂನ ವೈಯಕ್ತಿಕ ಬದುಕು, ಭದ್ರತಾ ವ್ಯವಸ್ಥೆ ಹಾಗೂ ಅಪರಾಧ ಜಾಲದ ಕುರಿತು ಕಮ್ರಾನ್ ಫರೀದಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆದರೆ, ಸಂದರ್ಶನದಲ್ಲಿ ಅವರು ನೀಡಿರುವ ಮಾಹಿತಿಗಳಿಗೆ ಸ್ವತಂತ್ರ ದೃಢೀಕರಣ ಲಭ್ಯವಾಗಿರುವ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಈ ಹೇಳಿಕೆಗಳನ್ನು ದೃಢಪಟ್ಟ ಅಧಿಕೃತ ಮಾಹಿತಿಯೆಂದು ಪರಿಗಣಿಸಲಾಗದು.
ಸಿನೆಮಾ
Arjun Sarja-ಪುತ್ರಿ ಐಶ್ವರ್ಯಾ ವಿರುದ್ಧ ಅವಹೇಳನಕಾರಿ ವರದಿ: ಮಾಧ್ಯಮಗಳ ವಿರುದ್ಧ ಸಿಡಿದೆದ್ದ ಅರ್ಜುನ್ ಸರ್ಜಾ; ಅಧಿಕೃತ ದೂರು ದಾಖಲು
ಹಿರಿಯ ಪುತ್ರಿ ಐಶ್ವರ್ಯಾ ಅವರ ವೈಯಕ್ತಿಕ ಜೀವನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಧಾರರಹಿತ ಮತ್ತು ಅವಹೇಳನಕಾರಿ ಆರೋಪಗಳ ವಿರುದ್ಧ ಬಹುಭಾಷಾ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಅರ್ಜುನ್ ಸರ್ಜಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಅಧಿಕೃತ ದೂರು ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ಚೆನ್ನೈ: ಹಿರಿಯ ಪುತ್ರಿ ಐಶ್ವರ್ಯಾ ಅವರ ವೈಯಕ್ತಿಕ ಜೀವನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಧಾರರಹಿತ ಮತ್ತು ಅವಹೇಳನಕಾರಿ ಆರೋಪಗಳ ವಿರುದ್ಧ ಬಹುಭಾಷಾ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಅರ್ಜುನ್ ಸರ್ಜಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಅಧಿಕೃತ ದೂರು ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿಯ ವಿವಾಹ ಸಮಾರಂಭದಲ್ಲಿ ಅಳಿಯ ಉಮಾಪತಿ ರಾಮಯ್ಯ ಅವರು ಹೆಚ್ಚಾಗಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ, ಐಶ್ವರ್ಯಾ ಮತ್ತು ಉಮಾಪತಿ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಗಳು ಕೆಲವು ಆನ್ಲೈನ್ ಪೋರ್ಟಲ್ಗಳಲ್ಲಿ ಪ್ರಕಟವಾಗಿದ್ದವು. ಇದರ ಬೆನ್ನಲ್ಲೇ ಕೆಲವು ಮಾಧ್ಯಮಗಳು ಐಶ್ವರ್ಯಾ ಅವರನ್ನು ಮದ್ಯವ್ಯಸನಿ ಎಂದು ಬಿಂಬಿಸುವ ವರದಿಗಳನ್ನೂ ಪ್ರಸಾರ ಮಾಡಿದ್ದವು.
ಈ ವರದಿಗಳ ವಿರುದ್ಧ ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅರ್ಜುನ್ ಸರ್ಜಾ, ವ್ಯಕ್ತಿಯ ಗೌರವ ಮತ್ತು ಘನತೆಯ ವಿಚಾರದಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ ಎಂದು ಖಡಕ್ ಸಂದೇಶ ನೀಡಿದ್ದಾರೆ.
“ಕಲಾವಿದರ ಸಾರ್ವಜನಿಕ ಜೀವನದಲ್ಲಿ ಊಹಾಪೋಹಗಳು ಮತ್ತು ಟೀಕೆಗಳು ಸಹಜ. ಆದರೆ ಊಹಾಪೋಹಗಳಿಗೂ ಉದ್ದೇಶಪೂರ್ವಕವಾಗಿ ಆಧಾರರಹಿತ ಆರೋಪಗಳನ್ನು ಹರಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಾರ್ವಜನಿಕ ವಿಮರ್ಶೆಯ ಹೆಸರಿನಲ್ಲಿ ಕಟ್ಟುಕಥೆಗಳನ್ನು ಸೃಷ್ಟಿಸಲು ಅಥವಾ ವ್ಯಕ್ತಿಯ ಚಾರಿತ್ರ್ಯವಧೆ ಮಾಡಲು ಯಾರಿಗೂ ಅಧಿಕಾರವಿಲ್ಲ. ಯಾವುದೇ ಆಧಾರವಿಲ್ಲದೆ ಮಹಿಳೆಯೊಬ್ಬರನ್ನು ಮದ್ಯವ್ಯಸನಿ ಎಂದು ಕರೆಯುವುದು ಅತ್ಯಂತ ಬೇಜವಾಬ್ದಾರಿಯುತ ಮತ್ತು ಸ್ವೀಕಾರಾರ್ಹವಲ್ಲದ ವರ್ತನೆ” ಎಂದು ಅವರು ಕಿಡಿಕಾರಿದ್ದಾರೆ.
ಮೌನವನ್ನು ಒಪ್ಪಿಗೆ ಎಂದು ಭಾವಿಸಬೇಡಿ
ತಂದೆಯಾಗಿ ಪುತ್ರಿಯ ವಿರುದ್ಧದ ಇಂತಹ ಆರೋಪಗಳನ್ನು ಸಹಿಸಿಕೊಂಡು ಮೌನವಾಗಿರಲು ಸಾಧ್ಯವಿಲ್ಲ ಎಂದು ಅರ್ಜುನ್ ಸರ್ಜಾ ಸ್ಪಷ್ಟಪಡಿಸಿದ್ದಾರೆ.
“ಮೌನವೇ ಅತ್ಯಂತ ಘನತೆಯ ಪ್ರತಿಕ್ರಿಯೆ ಎಂದು ನಾವು ನಂಬಿದ್ದೇವೆ. ಆದರೆ ನಮ್ಮ ಮೌನವನ್ನು ಒಪ್ಪಿಗೆ ಎಂದು ಭಾವಿಸಬಾರದು. ತಪ್ಪು ಮಾಹಿತಿಯನ್ನು ಪದೇಪದೆ ಹರಡಲು ಅವಕಾಶ ನೀಡಲೂ ಸಾಧ್ಯವಿಲ್ಲ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಧಿಕೃತ ದೂರು ಸಲ್ಲಿಸಿ ಸೂಕ್ತ ಕ್ರಮಕ್ಕೆ ಮುಂದಾಗಿದ್ದೇವೆ” ಎಂದು ತಿಳಿಸಿದ್ದಾರೆ.
ಇದು ಕೇವಲ ತಮ್ಮ ಪುತ್ರಿಗೆ ಸಂಬಂಧಿಸಿದ ವಿಚಾರವಲ್ಲ. ಮಹಿಳೆಯರ ಘನತೆಗೆ ಧಕ್ಕೆ ಉಂಟಾದಾಗ ಹಾಗೂ ಅವರ ವೈಯಕ್ತಿಕ ಆಯ್ಕೆಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸಿದಾಗ ಎದುರಾಗುವ ನೋವಿನ ವಿಚಾರವೂ ಹೌದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕುಟುಂಬದ ಬೆಂಬಲವಿಲ್ಲದ ಮಹಿಳೆಯರಿಗೆ ಇಂತಹ ಆರೋಪಗಳು ಮತ್ತಷ್ಟು ನೋವುಂಟುಮಾಡಬಹುದು. ಯಾವುದೇ ಮಹಿಳೆ ಇಂತಹ ಪರಿಸ್ಥಿತಿಯನ್ನು ಏಕಾಂಗಿಯಾಗಿ ಎದುರಿಸುವಂತಾಗಬಾರದು ಅಥವಾ ತನ್ನ ಜೀವನಶೈಲಿಯನ್ನು ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಾರದು ಎಂದು ಅರ್ಜುನ್ ಸರ್ಜಾ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.
-
Uncategorized18 hours ago
ಫುತ್ತೂರು : ಗುತ್ತಿಗೆದಾರರ ಸಹಾಯಕಿಗೆ ಲೈಂಗಿಕ ದೌರ್ಜನ್ಯ, ವಿಡಿಯೋ ಚಿತ್ರೀಕರಣ , ಕಾರು ಹತ್ತಿಸಲು ಯತ್ನ ಆರೋಪ; ಮೆಸ್ಕಾಂ ಸಿಬ್ಬಂದಿ ವಿರುದ್ಧ ಕೇಸ್
-
ನಿಧನ ವಾರ್ತೆ23 hours agoBabu Gowda-ಧರ್ಮಸ್ಥಳ: ದಿ. ಸೌಜನ್ಯ ಅಜ್ಜ ಪಾಂಗಳ ನಿವಾಸಿ ಬಾಬು ಗೌಡ ನಿಧನ
-
ಕ್ರೈಂ4 hours agoMurder-ಕನ್ಯಾನ: ಚಿಕ್ಕಪ್ಪನ ಎದೆಗೆ ಕತ್ತಿಯಿಂದ ಇರಿದು ಹತ್ಯೆಗೈದ ಯುವತಿ ಅರೆಸ್ಟ್
-
ಅಂತರ ರಾಜ್ಯ23 hours agoPunjab election-6 ವರ್ಷಗಳ ಬಳಿಕ ಮತ್ತೆ ಒಂದಾದ ಬಿಜೆಪಿ–ಅಕಾಲಿದಳ; 2027ರ ಪಂಜಾಬ್ ಚುನಾವಣೆಗೆ ಮೈತ್ರಿ ಘೋಷಣೆ
-
ರಾಜಕೀಯ23 hours agoRural election-ಗ್ರಾಮೀಣ ಚುನಾವಣೆ ಅಖಾಡ ಸಜ್ಜು: ಅಂತಿಮ ಮೀಸಲಾತಿ ಪಟ್ಟಿ ಪ್ರಕಟ; ಜನವರಿಯಲ್ಲಿ ಮತದಾನ ಸಾಧ್ಯತೆ..!
-
ಅಂತರ ರಾಜ್ಯ23 hours agoSreejit Ravi-ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ: ಮಲಯಾಳಂ ನಟ ಶ್ರೀಜಿತ್ ರವಿಗೆ 1 ವರ್ಷ ಜೈಲು
-
ಬಿಗ್ ನ್ಯೂಸ್4 hours agoRakesh Shetty-ಸ್ಟಿಂಗ್ ಆಪರೇಷನ್ ಪ್ರಕರಣ: ಜಾಮೀನು ಅರ್ಜಿ ವಾಪಸ್ ಪಡೆದ ರಾಕೇಶ್ ಶೆಟ್ಟಿ
-
ನಿಧನ ವಾರ್ತೆ4 hours agoAccident-ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ ಭೀಕರ ಅಪಘಾತ: 8 ವರ್ಷದ ಬಾಲಕಿ ಸೇರಿ ಇಬ್ಬರು ಸ್ಥಳದಲ್ಲೇ ಸಾವು; ನಾಲ್ವರ ಸ್ಥಿತಿ ಗಂಭೀರ















