ದಕ್ಷಿಣ ಕನ್ನಡ
ಅಂಬಿಕಾ ವಸತಿನಿಲಯಕ್ಕೆ ಎಫ್ಎಫ್ಎಸ್ಎಐ ಪ್ರಮಾಣಪತ್ರ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್ ಗೆ ಪುಡ್ ಸೇಫ್ಟಿ ಅಂಡ್ ಸ್ಟಾಂಡರ್ಡ್ಸ್ ಅಥಾರಿಟಿ ಆಫ್ ಇಂಡಿಯಾ ಸಂಸ್ಥೆಯಿಂದ ಪ್ರಮಾಣಪತ್ರ ದೊರೆತಿದೆ.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ಅನೇಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಂಬಿಕಾ ಹಾಸ್ಟೆಲ್ ಗಳಲ್ಲಿ ವಸತಿ ವ್ಯವಸ್ಥೆ ಹೊಂದಿದ್ದು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಪೂರಕವಾದ ಅತ್ಯಂತ ಶುಚಿ ರುಚಿಯಾದ ಶುದ್ಧ ಸಸ್ಯಾಹಾರಿ ಊಟ ಉಪಹಾರಗಳ ವ್ಯವಸ್ಥೆಯನ್ನು ಅಂಬಿಕಾ ಹಾಸ್ಟೆಲ್ ನ ಅಡುಗೆಮನೆ ಒದಗಿಸಿಕೊಡುತ್ತಿದೆ.
ಇತ್ತೀಚೆಗಷ್ಟೇ ಅಂಬಿಕಾ ಹಾಸ್ಟೆಲ್ ಗೆ ಸಂಬಂಧಿಸಿದಂತೆ ನೂತನ ಹಾಗೂ ಅತ್ಯಾಧುನಿಕ ವ್ಯವಸ್ಥೆಯ ಅಡಿಗೆ ಮನೆಯನ್ನು ನಿರ್ಮಿಸಿದ್ದು, ಆಹಾರದ ಗುಣಮಟ್ಟದ ಬಗೆಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಇದೀಗ ಆಹಾರದ ಗುಣಮಟ್ಟವನ್ನು ಪ್ರಮಾಣೀಕರಿಸುವ ಸರ್ಕಾರದ ಎಫ್ಎಫ್ಎಸ್ಎಐ ಪ್ರಮಾಣಪತ್ರವೂ ದೊರೆತಿರುವುದು ಗುಣಮಟ್ಟಕ್ಕೆ ಅಧಿಕೃತ ಮುದ್ರೆಯನ್ನೊದಗಿಸಿಕೊಟ್ಟಂತಾಗಿದೆ.
ಬಿಗ್ ನ್ಯೂಸ್
Puttur-ಎಸ್ಐಆರ್ ರದ್ದುಗೊಳಿಸುವವರೆಗೆ ಯಾವುದೇ ಚುನಾವಣೆ ನಡೆಸಬಾರದು: ಅನ್ವರ್ ಸಾದಾತ್ ಎಸ್.; ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಲು ಹಾಗೂ ಎಸ್ಐಆರ್ ರದ್ದುಗೊಳಿಸಲು ಆಗ್ರಹಿಸಿ ಕಬಕದಲ್ಲಿ ಎಸ್ಡಿಪಿಐ ಜಂತರ್ ಮಂತರ್ ಪ್ರತಿಭಟನಾ ಧರಣಿ
ಎಸ್ಐಆರ್ (SIR) ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವವರೆಗೆ ದೇಶದಲ್ಲಿ ಯಾವುದೇ ಚುನಾವಣೆಯನ್ನು ನಡೆಸಬಾರದು. ಮತದಾನದ ಹಕ್ಕು ಪ್ರತಿಯೊಬ್ಬ ಅರ್ಹ ನಾಗರಿಕನ ಸಾಂವಿಧಾನಿಕ ಹಕ್ಕಾಗಿದ್ದು, ಆ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಎಸ್. ಆಗ್ರಹಿಸಿದರು.
ಪುತ್ತೂರು: ಎಸ್ಐಆರ್ (SIR) ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವವರೆಗೆ ದೇಶದಲ್ಲಿ ಯಾವುದೇ ಚುನಾವಣೆಯನ್ನು ನಡೆಸಬಾರದು. ಮತದಾನದ ಹಕ್ಕು ಪ್ರತಿಯೊಬ್ಬ ಅರ್ಹ ನಾಗರಿಕನ ಸಾಂವಿಧಾನಿಕ ಹಕ್ಕಾಗಿದ್ದು, ಆ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಸಹಿಸಲು ಸಾಧ್ಯವಿಲ್ಲ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಎಸ್. ಆಗ್ರಹಿಸಿದರು.

ನವೆಂಬರ್ 24ರಂದು ಕಬಕ ಜಂಕ್ಷನ್ನಲ್ಲಿ ಜ್ಞಾನೇಶ್ ಕುಮಾರ್ ಅವರನ್ನು ವಜಾಗೊಳಿಸಬೇಕು ಹಾಗೂ ಎಸ್ಐಆರ್ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಂತರ್ ಮಂತರ್ ಪ್ರತಿಭಟನಾ ಧರಣಿಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಎಸ್ಐಆರ್ ಪ್ರಕ್ರಿಯೆಯಿಂದ ಅರ್ಹ ಮತದಾರರು ಮತದಾನದ ಹಕ್ಕನ್ನು ಕಳೆದುಕೊಳ್ಳುವ ಆತಂಕ ಎದುರಾಗಿದೆ. ಪ್ರಜಾಪ್ರಭುತ್ವದ ಮೂಲ ಆಶಯವಾದ ಮತದಾನದ ಹಕ್ಕನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದು, ಅರ್ಹ ಮತದಾರರಿಗೆ ಯಾವುದೇ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಯಂಗ್ ಡೆಮಾಕ್ರಟ್ಸ್ ಕೇರಳ ರಾಜ್ಯ ಸಮಿತಿ ಸದಸ್ಯರಾದ ಅಹ್ಮದ್ ನಿಸಾರ್ ಮಾತನಾಡಿ, ಸಂಘಪರಿವಾರದ ರಾಜಕೀಯ ನಿಲುವುಗಳು ಹಾಗೂ ಬಿಜೆಪಿ ಸರ್ಕಾರದ ನೀತಿಗಳನ್ನು ಟೀಕಿಸಿದರು. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಮತ್ತು ಸಂವಿಧಾನ ನೀಡಿರುವ ಹಕ್ಕುಗಳನ್ನು ರಕ್ಷಿಸುವ ಅಗತ್ಯವನ್ನು ಒತ್ತಿಹೇಳಿದ ಅವರು, ಎಸ್ಐಆರ್ ಪ್ರಕ್ರಿಯೆಯಿಂದ ಅರ್ಹ ಮತದಾರರಿಗೆ ಅನ್ಯಾಯವಾಗಬಾರದು ಎಂದು ಆಗ್ರಹಿಸಿದರು.
SDPI ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಅಡ್ವೊಕೇಟ್ ಮಜೀದ್ ಖಾನ್ ಮಾತನಾಡಿ, ಮತದಾನದ ಹಕ್ಕು ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಖಾತರಿಯಾಗಬೇಕು. ಎಸ್ಐಆರ್ ಪ್ರಕ್ರಿಯೆಯಿಂದ ಮತದಾರರ ಪಟ್ಟಿಯಲ್ಲಿ ಉಂಟಾಗಬಹುದಾದ ಲೋಪಗಳನ್ನು ತಡೆಯುವ ನಿಟ್ಟಿನಲ್ಲಿ ಈ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
WIM ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆ ಮಾತನಾಡಿ, ಮಹಿಳೆಯರು ಸೇರಿದಂತೆ ಸಮಾಜದ ಪ್ರತಿಯೊಬ್ಬ ಅರ್ಹ ನಾಗರಿಕನಿಗೂ ಮತದಾನದ ಹಕ್ಕು ಸಮಾನವಾಗಿ ದೊರೆಯಬೇಕು. ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಪರಿಸ್ಥಿತಿ ನಿರ್ಮಾಣವಾಗದಂತೆ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದರು.

ಮತದಾನ ವಂಚನೆ, ಬೆಲೆ ಏರಿಕೆ ವಿರುದ್ಧ ಹೆನ್ರಿ ಡಿಸೋಜಾ ಆಕ್ರೋಶ:
SDTU ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಹೆನ್ರಿ ಡಿಸೋಜಾ ಮಾತನಾಡಿ, ಮತದಾನದ ಹಕ್ಕು ಕಸಿಯುವ ಹುನ್ನಾರ ನಡೆಯುತ್ತಿದ್ದು, ಹಕ್ಕಿಗಾಗಿ ಹೋರಾಡುವವರನ್ನು ಜೈಲಿಗೆ ಹಾಕುವ ಪ್ರಯತ್ನ ಖಂಡನೀಯ ಎಂದರು. ಮತದಾನ ವಂಚನೆಯ ಆರೋಪ ಹೊತ್ತಿರುವ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ಅಧಿಕಾರದಿಂದ ವಜಾಗೊಳಿಸಿ, ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸಮಾಜಸೇವಕ ಹರೇಕಳ ಹಾಜಬ್ಬ ಅವರಂತಹವರ ಹೆಸರೇ ಮತದಾರರ ಪಟ್ಟಿಯಿಂದ ಕೈಬಿಟ್ಟು ಹೋಗಿದ್ದು, ಸುಮಾರು 13 ಕೋಟಿಗೂ ಅಧಿಕ ಮತದಾರರ ಹೆಸರುಗಳು ಪಟ್ಟಿಯಿಂದ ಡಿಲೀಟ್ ಆಗಿರುವುದು ಆತಂಕಕಾರಿಯಾಗಿದೆ ಎಂದರು. ಇದೇ ವೇಳೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಮಂಗಳೂರು ವಿಮಾನ ನಿಲ್ದಾಣದ ಖಾಸಗೀಕರಣ ಮತ್ತು ಪ್ರವೇಶ ಶುಲ್ಕ ವಸೂಲಾತಿಯ ವಿರುದ್ಧವೂ ಅವರು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು SDPI ಪುತ್ತೂರು ಕ್ಷೇತ್ರಾಧ್ಯಕ್ಷರಾದ ಅಶ್ರಫ್ ಬಾವು ವಹಿಸಿದ್ದರು.
ವೇದಿಕೆಯಲ್ಲಿ SDTU ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಹಮೀದ್ ಸಾಲ್ಮರ, SDPI ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪುತ್ತೂರು, ಕಾರ್ಯದರ್ಶಿಗಳಾದ ಅಶ್ರಫ್ ತಲಪಾಡಿ, ಶಾಕಿರ್ ಅಲಕೆಮಜಲು, ಉಪಾಧ್ಯಕ್ಷ ಇನಾಸ್ ರೊಡ್ರಿಗಸ್, ಸದಸ್ಯ ಸಿದ್ದೀಕ್ ಅಲೆಕ್ಕಾಡಿ, ಯಂಗ್ ಡೆಮಾಕ್ರಟ್ಸ್ ಮಂಗಳೂರು ಗ್ರಾಮಾಂತರ ಸದಸ್ಯರಾದ ಹಮ್ದಾ ಮೆಲ್ಕಾರ್, ಹಮೀದ್ ಪುತ್ತೂರು, SDPI ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಶಾಹುಲ್ ಹಮೀದ್ ಎಸ್.ಎಚ್., ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಇಸ್ಮಾಯಿಲ್ ಕೆಮ್ಮಾಯಿ ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಪುತ್ತೂರು ಕ್ಷೇತ್ರ ಸಮಿತಿ ಸದಸ್ಯ ಸಿರಾಜ್ ಕೂರ್ನಡ್ಕ ಮತ್ತು ತಂಡ ಎಸ್ಐಆರ್ ವಿರೋಧಿ ಹಾಡುಗಳನ್ನು ಹಾಡುವ ಮೂಲಕ ಪ್ರತಿಭಟನೆಗೆ ಧ್ವನಿಗೂಡಿಸಿದರು.
ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಸ್ವಾಗತಿಸಿದರು. ಪುತ್ತೂರು ನಗರ ಸಮಿತಿ ಅಧ್ಯಕ್ಷ ತಾಜುದ್ದೀನ್ ಸಾಲ್ಮರ ವಂದಿಸಿದರು. ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಸ್ಮಾನ್ ಎ.ಕೆ. ಕಾರ್ಯಕ್ರಮ ನಿರೂಪಿಸಿದರು.
ಅಪರಾಧ
Mangalore-ಚಿನ್ನ ಕಳ್ಳಸಾಗಣೆ ಜಾಲ: ಮಂಗಳೂರು ವಿಮಾನ ನಿಲ್ದಾಣದ ಇಬ್ಬರು ಸಿಬ್ಬಂದಿ ಸಹಿತ ಮೂವರು ಡಿಆರ್ಐ ವಶಕ್ಕೆ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಜಾಲಕ್ಕೆ ನೆರವು ನೀಡುತ್ತಿದ್ದ ಹೊರಗುತ್ತಿಗೆ ಸಂಸ್ಥೆಯ ಇಬ್ಬರು ಸಿಬ್ಬಂದಿ ಸೇರಿದಂತೆ ಮೂವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸುಮಾರು 2 ಕೋಟಿ ರೂ. ಮೌಲ್ಯದ 1.65 ಕೆ.ಜಿ. ಚಿನ್ನ ಹಾಗೂ 73 ಲಕ್ಷ ರೂ. ನಗದು ಸೇರಿದಂತೆ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಜಾಲಕ್ಕೆ ನೆರವು ನೀಡುತ್ತಿದ್ದ ಹೊರಗುತ್ತಿಗೆ ಸಂಸ್ಥೆಯ ಇಬ್ಬರು ಸಿಬ್ಬಂದಿ ಸೇರಿದಂತೆ ಮೂವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸುಮಾರು 2 ಕೋಟಿ ರೂ. ಮೌಲ್ಯದ 1.65 ಕೆ.ಜಿ. ಚಿನ್ನ ಹಾಗೂ 73 ಲಕ್ಷ ರೂ. ನಗದು ಸೇರಿದಂತೆ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಇಬ್ಬರು ಸಿಬ್ಬಂದಿಯಲ್ಲಿ ಒಬ್ಬರು ಮಂಗಳೂರು ಮೂಲದವರಾಗಿದ್ದು, ಮತ್ತೊಬ್ಬರು ಕಾಸರಗೋಡು ಮೂಲದವರು ಎಂದು ತಿಳಿದುಬಂದಿದೆ. ದುಬೈ ಹಾಗೂ ಕೇರಳ ಮೂಲದ ಚಿನ್ನ ಕಳ್ಳಸಾಗಣೆ ಜಾಲದೊಂದಿಗೆ ಸಂಪರ್ಕ ಹೊಂದಿ ಅಕ್ರಮ ಚಿನ್ನ ಸಾಗಾಟಕ್ಕೆ ನೆರವಾಗುತ್ತಿದ್ದ ಆರೋಪ ಇವರ ಮೇಲಿದೆ.
ವ್ಯವಸ್ಥಿತವಾಗಿ ನಡೆಯುತ್ತಿದ್ದ ಕಳ್ಳಸಾಗಣೆ
ದುಬೈ ಸೇರಿದಂತೆ ವಿದೇಶಗಳಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕರು, ಮಂಗಳೂರು ವಿಮಾನ ನಿಲ್ದಾಣದ ಇಮಿಗ್ರೇಷನ್ ಕೌಂಟರ್ ಬಳಿಯ ಶೌಚಾಲಯದಲ್ಲಿ ಚಿನ್ನವನ್ನು ಅಡಗಿಸಿಟ್ಟು ತೆರಳುತ್ತಿದ್ದರು ಎನ್ನಲಾಗಿದೆ. ಬಳಿಕ ಈ ಮಾಹಿತಿಯನ್ನು ಜಾಲದ ಸಂಪರ್ಕದಲ್ಲಿದ್ದ ವಿಮಾನ ನಿಲ್ದಾಣದ ಸಿಬ್ಬಂದಿಗೆ ತಲುಪಿಸಲಾಗುತ್ತಿತ್ತು. ವಿಮಾನಗಳ ನಿರ್ವಹಣಾ ಕಾರ್ಯ ಮುಗಿದ ಬಳಿಕ ಸಿಬ್ಬಂದಿ ಶೌಚಾಲಯಕ್ಕೆ ತೆರಳಿ, ಅಲ್ಲಿ ಅಡಗಿಸಿಟ್ಟ ಚಿನ್ನವನ್ನು ಹೊರತೆಗೆದು ತಮ್ಮ ಸಂಪರ್ಕದಲ್ಲಿದ್ದ ಕಳ್ಳಸಾಗಣೆದಾರರಿಗೆ ಹಸ್ತಾಂತರಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಖಚಿತ ಮಾಹಿತಿಯ ಮೇರೆಗೆ ಡಿಆರ್ಐ ಅಧಿಕಾರಿಗಳು ಆರೋಪಿಗಳ ಮೇಲೆ ನಿಗಾ ಇರಿಸಿದ್ದರು. ಅದರಂತೆ ನ. 23ರಂದು ಇಮಿಗ್ರೇಷನ್ ಕೌಂಟರ್ ಬಳಿಯ ಶೌಚಾಲಯದಿಂದ ಚಿನ್ನದ ಪೇಸ್ಟ್ ರೂಪದ ಎರಡು ಪ್ಯಾಕ್ಗಳನ್ನು ಹೊರತೆಗೆಯುತ್ತಿದ್ದ ಮಂಗಳೂರು ಮೂಲದ ಸಿಬ್ಬಂದಿಯನ್ನು ಅಧಿಕಾರಿಗಳು ಹಿಡಿದಿದ್ದಾರೆ.
ಈ ಚಿನ್ನವನ್ನು ಆತ ಕಾಸರಗೋಡು ಮೂಲದ ಮತ್ತೊಬ್ಬ ಸಿಬ್ಬಂದಿಗೆ ಹಸ್ತಾಂತರಿಸಬೇಕಿತ್ತು. ಬಳಿಕ ಆ ಸಿಬ್ಬಂದಿ ವಿಮಾನ ನಿಲ್ದಾಣದಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿರುವ ಸ್ಥಳಕ್ಕೆ ಚಿನ್ನವನ್ನು ಕೊಂಡೊಯ್ದು ಜಾಲದ ಮೂರನೇ ವ್ಯಕ್ತಿಗೆ ತಲುಪಿಸಲು ಯೋಜಿಸಿದ್ದ ಎನ್ನಲಾಗಿದೆ. ಅಧಿಕಾರಿಗಳು ತ್ವರಿತ ಕಾರ್ಯಾಚರಣೆ ನಡೆಸಿ ಉಳಿದ ಇಬ್ಬರನ್ನೂ ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸುಮಾರು 2 ಕೋಟಿ ರೂ. ಮೌಲ್ಯದ 1.65 ಕೆ.ಜಿ. ಚಿನ್ನ, 73 ಲಕ್ಷ ರೂ. ನಗದು, ಒಂದು ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಡಿ. 7ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
ಇದಕ್ಕೂ ಮೊದಲು 1.77 ಕೋಟಿ ರೂ. ಮೌಲ್ಯದ ಚಿನ್ನ ವಶ
ಇದಕ್ಕೂ ಮುನ್ನ ನ. 14ರಂದು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಕಾಸರಗೋಡು ಮೂಲದ ಇಬ್ಬರು ಪ್ರಯಾಣಿಕರು ದೇಹದೊಳಗೆ ಚಿನ್ನವನ್ನು ಅಡಗಿಸಿಕೊಂಡು ಸಾಗಿಸುತ್ತಿದ್ದ ವೇಳೆ ಡಿಆರ್ಐ ಅಧಿಕಾರಿಗಳ ವಶಕ್ಕೆ ಸಿಕ್ಕಿದ್ದರು. ಅವರಿಂದ ಸುಮಾರು 1.77 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಯ ಹಿತದೃಷ್ಟಿಯಿಂದ ಬಂಧಿತ ಆರೋಪಿಗಳ ಹೆಸರುಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ನಿಧನ ವಾರ್ತೆ
ಮಂಗಳೂರು: ಬೈಕ್ ಢಿಕ್ಕಿಯಿಂದ ಗಾಯಗೊಂಡಿದ್ದ ನರ್ಸಿಂಗ್ ವಿದ್ಯಾರ್ಥಿನಿ ಸಾವು
ರಾಷ್ಟ್ರೀಯ ಹೆದ್ದಾರಿ-66ರ ಪಂಪ್ವೆಲ್ ಸಮೀಪದ ಉಜ್ಯೋಡಿ ಗೋರಿಗುಡ್ಡ ಬಳಿ ಬೈಕ್ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಜ್ಯೋತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮಂಗಳೂರು: ರಾಷ್ಟ್ರೀಯ ಹೆದ್ದಾರಿ-66ರ ಪಂಪ್ವೆಲ್ ಸಮೀಪದ ಉಜ್ಯೋಡಿ ಗೋರಿಗುಡ್ಡ ಬಳಿ ಬೈಕ್ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ 19 ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಜ್ಯೋತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ನ. 14ರಂದು ಬೆಳಗ್ಗೆ ಜ್ಯೋತಿ ಹಾಗೂ ಅವರ ಸಂಬಂಧಿ ನಂದಿನಿ (19) ಗೋರಿಗುಡ್ಡ ಬಳಿ ರಸ್ತೆ ವಿಭಜಕ ದಾಟಿ ನಡೆದುಕೊಂಡು ಹೋಗುತ್ತಿದ್ದ ವೇಳೆ ತೊಕ್ಕೊಟ್ಟು ಕಡೆಯಿಂದ ನಂತೂರು ಕಡೆಗೆ ಸಂಚರಿಸುತ್ತಿದ್ದ ಬೈಕ್ ಢಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಇಬ್ಬರೂ ಗಾಯಗೊಂಡಿದ್ದು, ಬೈಕ್ನಲ್ಲಿದ್ದವರಿಗೂ ಗಾಯಗಳಾಗಿದ್ದವು. ಗಂಭೀರ ಗಾಯಗೊಂಡಿದ್ದ ಜ್ಯೋತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಜ್ಯೋತಿ ನಗರದ ಖಾಸಗಿ ಕಾಲೇಜೊಂದರಲ್ಲಿ ಜಿಎನ್ಎಂ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದರು.
ಮೂಲತಃ ಚಿಕ್ಕಮಗಳೂರಿನ ಶಿಳ್ಳೆಕ್ಯಾತ ಅಲೆಮಾರಿ ಸಮುದಾಯಕ್ಕೆ ಸೇರಿದ ಜ್ಯೋತಿಯ ಕುಟುಂಬ ಹಲವು ವರ್ಷಗಳಿಂದ ಮಂಗಳೂರಿನ ಕಣ್ಣೂರಿನಲ್ಲಿ ವಾಸವಾಗಿತ್ತು. ನೇತ್ರಾವತಿ ನದಿಯಲ್ಲಿ ತೆಪ್ಪದ ಮೂಲಕ ಮೀನು ಹಿಡಿಯುವ ವೃತ್ತಿಯನ್ನು ಕುಟುಂಬ ನಡೆಸುತ್ತಿತ್ತು. ಕುಟುಂಬದ ಹಿರಿಯ ಮಗಳಾಗಿದ್ದ ಜ್ಯೋತಿ ತಂದೆ, ತಾಯಿ, ಇಬ್ಬರು ಸಹೋದರರು ಹಾಗೂ ಸಹೋದರಿಯನ್ನು ಅಗಲಿದ್ದಾರೆ.
-
ಸ್ಥಳೀಯ18 hours agoValaalu toll plaza-ವಳಾಲು ಟೋಲ್ ಪ್ಲಾಜಾ ಕಾಮಗಾರಿ ಪೂರ್ಣ; ವಾರದೊಳಗೆ ಅಧಿಕೃತ ಘೋಷಣೆ ಸಾಧ್ಯ; ಬ್ರಹ್ಮರಕೂಟ್ಲು ಟೋಲ್ನಿಂದ ‘ಡಬಲ್ ಟೋಲ್’ ಆತಂಕ..!
-
ಕಾರ್ಯಕ್ರಮಗಳು23 hours agoPuttur-ಪುತ್ತೂರು: ನ.27ರಂದು ಅತ್ಯಾಧುನಿಕ ಬಹುಮಹಡಿ ವಾಣಿಜ್ಯ ಸೌಧ ‘ದ್ವಾರಕಾ ಕಮರ್ಶಿಯಲ್ಸ್’ ಲೋಕಾರ್ಪಣೆ; ಒಂದೇ ಸೂರಿನಡಿ ಹೈಪರ್ ಮಾರ್ಕೆಟ್ ಸಹಿತ ಹಲವು ಸೇವೆಗಳು
-
ಅಪರಾಧ19 hours agoRenukashwami murder case-ರೇಣುಕಾಸ್ವಾಮಿ ಕೊಲೆ ಪ್ರಕರಣ: ಮತ್ತಿಬ್ಬರು ಸಾಕ್ಷಿಗಳು ಉಲ್ಟಾ; ಪ್ರತಿಕೂಲ ಸಾಕ್ಷಿಗಳೆಂದು ಘೋಷಿಸಿದ ನ್ಯಾಯಾಲಯ
-
ಅಪರಾಧ23 hours agoExcise raid-ಬಾಳ್ತಿಲ, ಮೆಲ್ಕಾರ್ನಲ್ಲಿ ಅಬಕಾರಿ ದಾಳಿ: ₹20.37 ಲಕ್ಷ ಮೌಲ್ಯದ ಗೋವಾ ಮದ್ಯ, 2 ಕಾರುಗಳು ವಶ
-
ಕ್ರೀಡೆ23 hours agoVaibhav Suryavamshi-52 ಎಸೆತಗಳಲ್ಲಿ ದ್ವಿಶತಕ, 28 ಸಿಕ್ಸರ್ಗಳ ಅಬ್ಬರ; ಒಂದೇ ಪಂದ್ಯದಲ್ಲಿ ಎರಡು ವಿಶ್ವದಾಖಲೆ ಬರೆದ ಭಾರತದ ಯುವ ಆಟಗಾರ ವೈಭವ್ ಸೂರ್ಯವಂಶಿ
-
ಅಂತರ ರಾಜ್ಯ19 hours agoSabarimala-ಶಬರಿಮಲೆ: ದೇವಸ್ಥಾನ ಹಾಗೂ ಅಂಗಡಿಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ; ಅಂಗಡಿಗಳಿಗೆ ₹1 ಲಕ್ಷ ದಂಡ
-
ಅಪರಾಧ18 hours agoCyber scam-ಟೀ ಶರ್ಟ್ ಖರೀದಿಸಿದರೆ ಐ-ಫೋನ್ ಗಿಫ್ಟ್..! ಮಂಗಳೂರಿನ ವೈದ್ಯನಿಗೆ 1.65 ಲಕ್ಷ ರೂ. ಸೈಬರ್ ವಂಚನೆ
-
ಬಿಗ್ ನ್ಯೂಸ್20 hours agoChetan Prakash-ಧನ್ವಂತರಿ ಕ್ಲಿನಿಕಲ್ ಲ್ಯಾಬೋರೆಟರಿಯ ಚೇತನ್ ಪ್ರಕಾಶ್ ಕಜೆ ಯವರಿಗೆ ಗೋವಾ – ಕರ್ನಾಟಕ ಪ್ರಸ್ತುತಿ ಸಾಂಸ್ಕೃತಿಕ ಕಲಾ ಪರಿಷತ್ತು ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಧಕರಿಗೆ ನೀಡುವ ‘ವೈದ್ಯಕೀಯ ಸೇವಾರತ್ನ ಪ್ರಶಸ್ತಿ – 2026’ ಪ್ರಶಸ್ತಿ ಪ್ರಧಾನ















