ಬಿಗ್ ನ್ಯೂಸ್
ಜ.24 ಮತ್ತು 25 ರಂದು ಪುತ್ತೂರಿನ 24 ಬಾರ್ ಬಂದ್ ಗೆ ಜಿಲ್ಲಾಧಿಕಾರಿ ಆದೇಶ : ಕಂಬಳ ಕೂಟದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಆದೇಶ..!
ಕಂಬಳ ಕೂಟದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಪುತ್ತೂರು ಕೋಟಿ ಚೆನ್ನಯ ಕಂಬಳದ ಪ್ರಯುಕ್ತ ದಿನಾಂಕ 24.1.2026ನೇ ಬೆಳಿಗ್ಗೆ 6 ಗಂಟೆಯಿಂದ 25.1.2026ನೇ ಮಧ್ಯರಾತ್ರಿ 12 ಗಂಟೆಯವರೆಗೆ ಪುತ್ತೂರು ನಗರದಲ್ಲಿರುವ 24 ಬಾರ್ ಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರು ಗದ್ದೆಯಲ್ಲಿ 33 ನೇ ವರ್ಷದ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳವು ದಿನಾಂಕ:24.01.2026 ರಿಂದ ಪ್ರಾರಂಭಗೊಂಡು ದಿನಾಂಕ:25.01.2026 ರವರೆಗೆ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಸುಮಾರು 10,000 ರಿಂದ 15,000 ಮಂದಿ ಸೇರುವ ನಿರೀಕ್ಷೆ ಇರುವುದಾಗಿ ಹಾಗೂ ಪುತ್ತೂರು ನಗರ ಠಾಣಾ ಸರಹದ್ದು ಮತೀಯವಾಗಿ ಅತೀ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಅಲ್ಲದೇ 2024 ನೇ ಸಾಲಿನಲ್ಲಿ ಭಿನ್ನ ಕೋಮಿನ ಯುವಕನಿಂದ ಆದಂತಹ ಘಟನೆಯಿಂದ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಇದರಿಂದ ಪುತ್ತೂರು ನಗರ ಠಾಣೆಯಲ್ಲಿ ಜನ ಸೇರಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿರುವುದಾಗಿ ಹಾಗೂ ಕಂಬಳ ನಡೆಯುವ ಸಮಯದಲ್ಲಿ ಕಿಡಿಗೇಡಿಗಳು ಅಮಲು ಪದಾರ್ಥ ಸೇವಿಸಿಕೊಂಡು ಕಿರುಕುಳ ಉಂಟುಮಾಡುವುದನ್ನು ತಪ್ಪಿಸಲು ಪುತ್ತೂರು ನಗರದಲ್ಲಿರುವ ಎಲ್ಲಾ ಬಾರ್ ಮತ್ತು ವೈನ್ಶಾಪ್, ಮತ್ತು ಸರಕಾರಿ ಮದ್ಯ ಮಳಿಗೆಯನ್ನು ದಿನಾಂಕ:24.01.2026 ರಂದು ಬೆಳಿಗ್ಗೆ 06.00 ಗಂಟೆಯಿಂದ ದಿನಾಂಕ:25.01.2026 ರ ರಾತ್ರಿ 12.00 ಗಂಟೆಯವರೆಗೆ ಮುಚ್ಚಲು ಆದೇಶಿಸುವಂತೆ ಕೋರಿ ಪೊಲೀಸ್ ಅಧೀಕ್ಷಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರು ಉಲ್ಲೇಖ(1)ರಂತೆ ಈ ಕಛೇರಿಗೆ ಪ್ರಸ್ತಾವನೆಯನ್ನು ಸಲ್ಲಿಸಿರುತ್ತಾರೆ.
ಅಬಕಾರಿ ಉಪ ಆಯುಕ್ತರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರು ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕಂಬಳ ಕಾರ್ಯಕ್ರಮಕ್ಕೆ ಯಾವುದೇ ಮದ್ಯದಂಗಡಿಗಳನ್ನು ಬಂದ್ ಇರಿಸಿರುವುದಿಲ್ಲ ಹಾಗೂ ಪೊಲೀಸ್ ಅಧೀಕ್ಷಕರ ವರದಿಯಲ್ಲಿ ನಮೂದಿಸಿರುವ ಕ್ರ.ಸಂ. 20. ಆಶ್ಮಿ ಬಾರ್ & ರೆಸ್ಟೋರೆಂಟ್ ಬೈಪಾಸ್ ಬಪ್ಪಳಿಗೆ ಸನ್ನದು ಕಾರ್ಯಾಚರಿಸುತ್ತಿರುವುದಿಲ್ಲ, ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ 33 ನೇ ವರ್ಷದ ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳವು ದಿನಾಂಕ:24.01.2026 ರಿಂದ ಪ್ರಾರಂಭಗೊಂಡು 25.01.2026 ರವರೆಗೆ ನಡೆಯಲಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸದರಿ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಮೂದಿಸಿರುವ ಒಟ್ಟು 7 ಅಬಕಾರಿ ಸನ್ನದುಗಳನ್ನು ಮಾತ್ರ ಬಂದ್ ಇರಿಸಿ ಆದೇಶ ಹೊರಡಿಸಲು ಅಬಕಾರಿ ಉಪ ಆಯುಕ್ತರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರು ಉಲ್ಲೇಖ(2) ರಂತೆ ಈ ಕಛೇರಿಗೆ ವರದಿಯನ್ನು ಸಲ್ಲಿಸಿರುತ್ತಾರೆ.
ಪೊಲೀಸ್ ಅಧೀಕ್ಷಕರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಹಾಗೂ ಅಬಕಾರಿ ಉಪ ಆಯುಕ್ತರು, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಇವರು ಸಲ್ಲಿಸಿರುವ ಪ್ರಸ್ತಾವನೆಯನ್ನು ಪರಿಶೀಲಿಸಿದೆ.
ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರು ಗದ್ದೆಯಲ್ಲಿ 33 ನೇ ವರ್ಷದ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳದ ಪ್ರಯುಕ್ತ 2:24.01.2026 ಬೆಳಿಗ್ಗೆ 06 ಗಂಟೆಯಿಂದ 25.01.2026 ಮಧ್ಯರಾತ್ರಿ 12 ಗಂಟೆಯವರೆಗೆ ಈ ಕೆಳಕಂಡ ಕೋಷ್ಟಕದಲ್ಲಿ ನಮೂದಿಸಿರುವ ಮದ್ಯದಂಗಡಿಗಳನ್ನು ಮುಚ್ಚಲು ಹಾಗೂ ಈ ಸಂದರ್ಭದಲ್ಲಿ ಎಲ್ಲಾ ರೀತಿಯ ಅಮಲು ಪದಾರ್ಥಗಳನ್ನು ಮಾರಾಟ ಮಾಡದಂತೆ ಆದೇಶಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಬಿಗ್ ನ್ಯೂಸ್
Vitla-ವಿಟ್ಲ: ಚಿಕ್ಕಪ್ಪನನ್ನು ಕತ್ತಿಯಿಂದ ಕಡಿದು ಹತ್ಯೆಗೈದ ಯುವತಿ ಬಂಧನ
ಕನ್ಯಾನ ಗ್ರಾಮದ ನಂದರಬೆಟ್ಟು ನಿವಾಸಿ ಚೆನ್ನಯ್ಯ ಪೂಜಾರಿ (45) ಅವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಆರೋಪದಲ್ಲಿ ರಿಶಿಕಾ (24) ಎಂಬ ಯುವತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ವಿಟ್ಲ: ಕನ್ಯಾನ ಗ್ರಾಮದ ನಂದರಬೆಟ್ಟು ನಿವಾಸಿ ಚೆನ್ನಯ್ಯ ಪೂಜಾರಿ (45) ಅವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಆರೋಪದಲ್ಲಿ ರಿಶಿಕಾ (24) ಎಂಬ ಯುವತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಚೆನ್ನಯ್ಯ ಪೂಜಾರಿ ಮದ್ಯಪಾನ ಮಾಡಿ ತನ್ನ ಅಣ್ಣನ ಮಗಳಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಸಂದರ್ಭ ಯುವತಿ ಕತ್ತಿಯಿಂದ ಬೀಸಿದಾಗ ಅದು ಚೆನ್ನಯ್ಯ ಪೂಜಾರಿ ಅವರ ಎದೆಗೆ ತಾಗಿ ಗಂಭೀರ ಗಾಯಗೊಂಡಿದ್ದರು.
ಗಾಯಗೊಂಡ ಅವರನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಪುತ್ತೂರಿಗೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಕುಟುಂಬದೊಳಗಿನ ಕಲಹ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಿಶಿಕಾಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಿಗ್ ನ್ಯೂಸ್
Virupaksha Bhat-ಮಹಾಲಿಂಗೇಶ್ವರ ದೇವಸ್ಥಾನದ ಕಾಮಗಾರಿಗಳಿಗೆ ಹೈಕೋರ್ಟ್ ತಡೆಯಾಜ್ಞೆ: ಅನುಮತಿಯಿಲ್ಲದ ಕಾಮಗಾರಿ, ಟೆಂಡರ್ ಪ್ರಕ್ರಿಯೆ ಮುಂದುವರಿಸದಂತೆ ಮಧ್ಯಂತರ ಆದೇಶ; ದೇವಸ್ಥಾನದ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ, ನಿಯಮಬದ್ಧ ಆಡಳಿತಕ್ಕೆ ಆಗ್ರಹ : ದೂರುದಾರ ವಿರೂಪಾಕ್ಷ ಭಟ್ ಪತ್ರಿಕಾಗೋಷ್ಟಿ
ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಪೂರ್ವಾನುಮತಿ ಪಡೆಯದೆ ಕೈಗೊಳ್ಳಲಾಗುತ್ತಿದೆ ಎನ್ನಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಟೆಂಡರ್ ಪ್ರಕ್ರಿಯೆಗಳಿಗೆ ಕರ್ನಾಟಕ ಉಚ್ಚ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ನ.23ರಂದು ನೀಡಿರುವ ಈ ಆದೇಶವು ಮುಂದಿನ ವಿಚಾರಣೆಯವರೆಗೆ ಜಾರಿಯಲ್ಲಿರಲಿದ್ದು, ಇಲಾಖಾ ನಿಯಮಗಳನ್ನು ಉಲ್ಲಂಘಿಸಿ ಯಾವುದೇ ಕಾಮಗಾರಿ ನಡೆಸದಂತೆ ದೇವಸ್ಥಾನದ ಆಡಳಿತ ಸಮಿತಿ ಹಾಗೂ ಸರಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ ಎಂದು ಮಚ್ಚಿಮಲೆ ವಿರೂಪಾಕ್ಷ ಭಟ್ ತಿಳಿಸಿದ್ದಾರೆ.
ಪುತ್ತೂರು: ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಪೂರ್ವಾನುಮತಿ ಪಡೆಯದೆ ಕೈಗೊಳ್ಳಲಾಗುತ್ತಿದೆ ಎನ್ನಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಟೆಂಡರ್ ಪ್ರಕ್ರಿಯೆಗಳಿಗೆ ಕರ್ನಾಟಕ ಉಚ್ಚ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ನ.23ರಂದು ನೀಡಿರುವ ಈ ಆದೇಶವು ಮುಂದಿನ ವಿಚಾರಣೆಯವರೆಗೆ ಜಾರಿಯಲ್ಲಿರಲಿದ್ದು, ಇಲಾಖಾ ನಿಯಮಗಳನ್ನು ಉಲ್ಲಂಘಿಸಿ ಯಾವುದೇ ಕಾಮಗಾರಿ ನಡೆಸದಂತೆ ದೇವಸ್ಥಾನದ ಆಡಳಿತ ಸಮಿತಿ ಹಾಗೂ ಸರಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ ಎಂದು ಮಚ್ಚಿಮಲೆ ವಿರೂಪಾಕ್ಷ ಭಟ್ ತಿಳಿಸಿದ್ದಾರೆ.
ಪುತ್ತೂರು ವಾರ್ತಾಭವನದಲ್ಲಿ ನ.25ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಧಾರ್ಮಿಕ ದತ್ತಿ ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ. ಸಮರ್ಪಕ ಅನುಮೋದನೆ ಪಡೆಯದೆ ಕಾಮಗಾರಿಗಳನ್ನು ನಡೆಸಿರುವುದು, ಹಣಕಾಸಿನ ನಿರ್ವಹಣೆಯಲ್ಲಿ ಲೋಪದೋಷಗಳು ಹಾಗೂ ದೇವಸ್ಥಾನದ ದೈನಂದಿನ ಆಡಳಿತದಲ್ಲಿ ಪಾರದರ್ಶಕತೆಯ ಕೊರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಕಾನೂನು ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.
ಈ ಸಂಬಂಧ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದು, ಇಲಾಖಾ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ. ಇದೇ ವಿಚಾರವಾಗಿ ಮಚ್ಚಿಮಲೆ ವಿರೂಪಾಕ್ಷ ಭಟ್ ಮತ್ತು ದಿನೇಶ್ ಜೈನ್ ಅವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ W.P. No. 32628/2026ರಡಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರು ಸಲ್ಲಿಸಿದ ದಾಖಲೆಗಳು ಮತ್ತು ಮನವಿಯನ್ನು ಪರಿಗಣಿಸಿರುವ ನ್ಯಾಯಾಲಯವು ನ.23ರಂದು ಮುಂದಿನ ವಿಚಾರಣೆಯವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದು ಅವರು ವಿವರಿಸಿದರು.
ಅಭಿವೃದ್ಧಿ ಸಮಿತಿ ರಚನೆ ಬಗ್ಗೆಯೂ ಆಕ್ಷೇಪ
ದೇವಸ್ಥಾನದಲ್ಲಿ ರಚಿಸಲಾಗಿರುವ ಅಭಿವೃದ್ಧಿ ಸಮಿತಿಯ ರಚನೆಯೇ ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳಿಗೆ ಅನುಗುಣವಾಗಿಲ್ಲ ಎಂಬುದು ಅರ್ಜಿದಾರರ ಪ್ರಮುಖ ಆಕ್ಷೇಪವಾಗಿದೆ. ಇಲಾಖೆಯಿಂದ ಅನುಮೋದನೆ ಪಡೆಯದ ಜೀರ್ಣೋದ್ಧಾರ ಅಥವಾ ಅಭಿವೃದ್ಧಿ ಸಮಿತಿಯ ಹೆಸರಿನಲ್ಲಿ ಭಕ್ತರಿಂದ ಹಣ ಸಂಗ್ರಹಿಸುವುದು, ಕಾಮಗಾರಿಗಳನ್ನು ಕೈಗೊಳ್ಳುವುದು ಹಾಗೂ ಅನಧಿಕೃತ ಸಭೆಗಳನ್ನು ನಡೆಸುವುದು ನಿಯಮಬಾಹಿರವಾಗಿದೆ ಎಂದು ವಿರೂಪಾಕ್ಷ ಭಟ್ ಆರೋಪಿಸಿದರು.
ಅನುಮೋದನೆ ಪಡೆಯದ ಸಮಿತಿಯ ಹೆಸರಿನಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿರುವುದು ಮತ್ತು ಪತ್ರಿಕೆಗಳಲ್ಲಿ ಟೆಂಡರ್ ಪ್ರಕಟಣೆಗಳನ್ನು ನೀಡಿರುವುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದರು. ಇಲಾಖೆಯ ಅಧಿಕೃತ ಅನುಮೋದನೆ ಹಾಗೂ ನಿಗದಿತ ಪ್ರಕ್ರಿಯೆಗಳನ್ನು ಪಾಲಿಸದೆ ಇಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ದೂರಿದರು.
ಉತ್ತರ ಭಾಗದ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಆಕ್ಷೇಪ
ದೇವಸ್ಥಾನದ ಉತ್ತರ ಭಾಗದ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದರ ಬಗ್ಗೆಯೂ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಈ ಕಾಮಗಾರಿಗೆ ಧಾರ್ಮಿಕ ದತ್ತಿ ಇಲಾಖೆಯ ಪೂರ್ವಾನುಮತಿ ಪಡೆದಿಲ್ಲ. ಅಲ್ಲದೆ, ಇದೇ ಜಮೀನಿಗೆ ಸಂಬಂಧಿಸಿದಂತೆ ಬೇರೆ ಬೇರೆ ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿಯಿದ್ದು, ತಡೆಯಾಜ್ಞೆಗಳಿದ್ದರೂ ಕಾಮಗಾರಿ ಮುಂದುವರಿಸಲಾಗಿದೆ ಎಂಬುದು ಅರ್ಜಿದಾರರ ಆರೋಪವಾಗಿದೆ.
ಐದು ಕಟ್ಟೆಗಳ ತೆರವು, ನೂತನ ಶಿಲಾಮಯ ಕಟ್ಟಡ ನಿರ್ಮಾಣ
ದೇವಸ್ಥಾನದ ಹೊರಾಂಗಣದಲ್ಲಿದ್ದ ಐದು ಹಳೆಯ ಕಟ್ಟೆಗಳನ್ನು ತೆರವುಗೊಳಿಸಿ, ಧಾರ್ಮಿಕ ದತ್ತಿ ಇಲಾಖೆಯ ಅನುಮತಿ ಪಡೆಯದೆ ನೂತನ ಶಿಲಾಮಯ ಕಟ್ಟಡ ನಿರ್ಮಿಸಲಾಗಿದೆ ಎಂದು ವಿರೂಪಾಕ್ಷ ಭಟ್ ಆರೋಪಿಸಿದರು. ಈ ಕಾಮಗಾರಿಗೆ ಸಂಬಂಧಿಸಿದಂತೆ ಅನಧಿಕೃತವಾಗಿ ಹಣ ಸಂಗ್ರಹಿಸಲಾಗಿದ್ದು, ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸದೆ ಸರಕಾರದ ನಿಯಮಾವಳಿಗಳನ್ನು ಪಾಲಿಸದೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ ಎಂದು ದೂರಿದರು.
ಇದಲ್ಲದೆ, ದೇವಸ್ಥಾನಕ್ಕೆ ಸಂಬಂಧಿಸಿದ ನವಗ್ರಹ ಗುಡಿ, ಅಯ್ಯಪ್ಪ ಸನ್ನಿಧಿ ಹಾಗೂ ನಟರಾಜ ವೇದಿಕೆ ಸಭಾಂಗಣವನ್ನು ತೆರವುಗೊಳಿಸುವ ಸಂದರ್ಭದಲ್ಲಿಯೂ ಸರಕಾರದ ನಿಯಮದಂತೆ ಟೆಂಡರ್ ಪ್ರಕ್ರಿಯೆ ಮತ್ತು ಮೌಲ್ಯಮಾಪನ ನಡೆಸಿಲ್ಲ. ಅಗತ್ಯ ಇಲಾಖಾ ಅನುಮೋದನೆಯನ್ನೂ ಪಡೆದಿಲ್ಲ ಎಂದು ಅವರು ಆರೋಪಿಸಿದರು.
ಚಿನ್ನದ ಮುಖವಾಡಕ್ಕೆ ಚಿನ್ನ ಸಂಗ್ರಹ: ಸಮರ್ಪಕ ಮಾಹಿತಿ ಇಲ್ಲವೆಂಬ ಆರೋಪ
ಶ್ರೀ ದೇವರಿಗೆ ಚಿನ್ನದ ಮುಖವಾಡ ನಿರ್ಮಿಸುವ ಉದ್ದೇಶದಿಂದ ಭಕ್ತರಿಂದ ಕಾಣಿಕೆ ರೂಪದಲ್ಲಿ ಚಿನ್ನ ಸಂಗ್ರಹಿಸಲಾಗುತ್ತಿದೆ. ಆದರೆ ಈ ಸಂಬಂಧ ಧಾರ್ಮಿಕ ದತ್ತಿ ಇಲಾಖೆಯ ಸಮರ್ಪಕ ಅನುಮತಿ ಪಡೆಯಲಾಗಿದೆಯೇ, ಆಗಮ ಪಂಡಿತರ ಅಭಿಪ್ರಾಯ ಹಾಗೂ ವರದಿ ಪಡೆಯಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಸಂಗ್ರಹಿಸಲಾದ ಚಿನ್ನದ ನಿರ್ವಹಣೆ ಮತ್ತು ಅದರ ಲೆಕ್ಕಪತ್ರಗಳ ಕುರಿತು ದೇವಸ್ಥಾನದಲ್ಲಿ ಸಮರ್ಪಕ ಮಾಹಿತಿ ಲಭ್ಯವಿಲ್ಲ ಎಂಬ ವಿಚಾರವನ್ನೂ ನ್ಯಾಯಾಲಯದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ದೇವಸ್ಥಾನದ ಆಡಳಿತ ಸಮಿತಿ ನೇಮಕಗೊಂಡ ಬಳಿಕ ನಿರ್ವಹಿಸಲಾದ ವಾರ್ಷಿಕ ಲೆಕ್ಕಪತ್ರಗಳಲ್ಲಿನ ಲೋಪದೋಷಗಳ ಬಗ್ಗೆಯೂ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ದೇವಸ್ಥಾನದ ಆಡಳಿತದಲ್ಲಿ ಇಲಾಖಾ ನಿಯಮಗಳ ಉಲ್ಲಂಘನೆ ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಅಧಿಕಾರ ಬಳಕೆಯಲ್ಲಿನ ಲೋಪಗಳ ಬಗ್ಗೆಯೂ ಕಾನೂನು ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.
ನ್ಯಾಯಾಲಯದ ಆದೇಶ ಪಾಲನೆಗೆ ಆಗ್ರಹ
ನ್ಯಾಯಾಲಯ ನೀಡಿರುವ ಮಧ್ಯಂತರ ತಡೆಯಾಜ್ಞೆಯ ಪ್ರಕಾರ, ಮುಂದಿನ ವಿಚಾರಣೆಯವರೆಗೆ ಇಲಾಖೆಯ ಅನುಮತಿ ಇಲ್ಲದ ಕಾಮಗಾರಿಗಳನ್ನು ನಡೆಸುವಂತಿಲ್ಲ. ಈಗಾಗಲೇ ಕರೆಯಲಾಗಿರುವ ನಿಯಮಬಾಹಿರ ಟೆಂಡರ್ ಪ್ರಕ್ರಿಯೆಗಳನ್ನು ಮುಂದುವರಿಸುವಂತಿಲ್ಲ. ಅನುಮೋದನೆ ಪಡೆಯದ ಜೀರ್ಣೋದ್ಧಾರ ಸಮಿತಿಯ ಹೆಸರಿನಲ್ಲಿ ಕಾಮಗಾರಿಗಳನ್ನು ನಡೆಸಲು ಅಥವಾ ಸಭೆಗಳನ್ನು ಆಯೋಜಿಸಿ ಕಾಮಗಾರಿಗಳನ್ನು ಮುಂದುವರಿಸಲು ಅವಕಾಶವಿಲ್ಲ. ಕಾಮಗಾರಿಗಳ ಹೆಸರನ್ನು ಬದಲಾಯಿಸಿ ಆದೇಶದ ವ್ಯಾಪ್ತಿಯಿಂದ ಹೊರಬಂದು ಮುಂದುವರಿಸುವ ಪ್ರಯತ್ನವೂ ಮಾಡಬಾರದು ಎಂಬುದು ನ್ಯಾಯಾಲಯದ ಆದೇಶದ ಆಶಯವಾಗಿದೆ ಎಂದು ವಿರೂಪಾಕ್ಷ ಭಟ್ ತಿಳಿಸಿದರು.
ನ್ಯಾಯಾಲಯದ ಆದೇಶವನ್ನು ಪ್ರತಿವಾದಿಗಳು ಗೌರವಿಸಬೇಕು. ಆದೇಶದ ವ್ಯಾಪ್ತಿಗೆ ಒಳಪಡುವ ಕಾಮಗಾರಿಗಳನ್ನು ತಕ್ಷಣ ಸ್ಥಗಿತಗೊಳಿಸಿ, ಮುಂದಿನ ದಿನಗಳಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಧಾರ್ಮಿಕ ದತ್ತಿ ಇಲಾಖೆಯ ಕಾನೂನುಬದ್ಧ ಅನುಮೋದನೆ ಮತ್ತು ಪಾರದರ್ಶಕ ಟೆಂಡರ್ ಪ್ರಕ್ರಿಯೆಯ ಮೂಲಕವೇ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ದೇವಸ್ಥಾನದ ಅಭಿವೃದ್ಧಿಗೆ ವಿರೋಧವಿಲ್ಲ
ದೇವಸ್ಥಾನದ ಅಭಿವೃದ್ಧಿಗೆ ನಮ್ಮ ಯಾವುದೇ ವಿರೋಧವಿಲ್ಲ. ದೇವಸ್ಥಾನ ಇನ್ನಷ್ಟು ಅಭಿವೃದ್ಧಿಯಾಗಬೇಕು, ಭಕ್ತರಿಗೆ ಉತ್ತಮ ಸೌಲಭ್ಯಗಳು ದೊರೆಯಬೇಕು ಎಂಬುದೇ ನಮ್ಮ ಆಶಯ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಇಲಾಖಾ ನಿಯಮಗಳನ್ನು ಮೀರಿ, ಕಾನೂನುಬಾಹಿರವಾಗಿ ಕಾಮಗಾರಿಗಳನ್ನು ನಡೆಸುವುದನ್ನು ಒಪ್ಪಲು ಸಾಧ್ಯವಿಲ್ಲ. ದೇವಸ್ಥಾನದ ಆಡಳಿತದಲ್ಲಿ ಗೊಂದಲ ಸೃಷ್ಟಿಯಾಗದೆ ಪಾರದರ್ಶಕ ವ್ಯವಸ್ಥೆ ಇರಬೇಕು. ಭಕ್ತರ ಧಾರ್ಮಿಕ ಶ್ರದ್ಧೆ ಮತ್ತು ನಂಬಿಕೆಗೆ ಧಕ್ಕೆಯಾಗದಂತೆ ದೇವಸ್ಥಾನದ ಆಡಳಿತ ನಡೆಯಬೇಕು. ಕಾನೂನುಬದ್ಧ ಅನುಮೋದನೆ, ನಿಯಮಾನುಸಾರ ಹಣಕಾಸಿನ ನಿರ್ವಹಣೆ ಹಾಗೂ ಪಾರದರ್ಶಕತೆಯೊಂದಿಗೆ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎಂದು ಮಚ್ಚಿಮಲೆ ವಿರೂಪಾಕ್ಷ ಭಟ್ ಒತ್ತಾಯಿಸಿದರು.
ಅಂತರ ರಾಜ್ಯ
Chennai Jain couple-ತಿರುಪತಿ ತಿಮ್ಮಪ್ಪನಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ಚಿನ್ನ, ವಜ್ರಾಭರಣ ಕಾಣಿಕೆ ನೀಡಿದ ಚೆನ್ನೈ ಜೈನ ದಂಪತಿ..!
ಚೆನ್ನೈ ಮೂಲದ ಜೈನ ದಂಪತಿ ತಿರುಪತಿ ತಿರುಮಲ ದೇವಸ್ಥಾನದ ಶ್ರೀ ವೆಂಕಟೇಶ್ವರ ಸ್ವಾಮಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ತೂಕದ ಚಿನ್ನ ಹಾಗೂ ವಜ್ರಾಭರಣಗಳನ್ನು ಕಾಣಿಕೆಯಾಗಿ ಅರ್ಪಿಸುವ ಮೂಲಕ ಅಪಾರ ಭಕ್ತಿ ಮೆರೆದಿದ್ದಾರೆ.
ತಿರುಪತಿ: ಚೆನ್ನೈ ಮೂಲದ ಜೈನ ದಂಪತಿ ತಿರುಪತಿ ತಿರುಮಲ ದೇವಸ್ಥಾನದ ಶ್ರೀ ವೆಂಕಟೇಶ್ವರ ಸ್ವಾಮಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ತೂಕದ ಚಿನ್ನ ಹಾಗೂ ವಜ್ರಾಭರಣಗಳನ್ನು ಕಾಣಿಕೆಯಾಗಿ ಅರ್ಪಿಸುವ ಮೂಲಕ ಅಪಾರ ಭಕ್ತಿ ಮೆರೆದಿದ್ದಾರೆ.
ಚೆನ್ನೈನ ವರ್ಧಮಾನ್ ಜೈನ್ ಮತ್ತು ರಾಧಿಕಾ ಜೈನ್ ದಂಪತಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಅರ್ಚಕರು ಹಾಗೂ ಪ್ರತಿನಿಧಿಗಳಿಗೆ ಈ ಅಮೂಲ್ಯ ಆಭರಣಗಳನ್ನು ಔಪಚಾರಿಕವಾಗಿ ಹಸ್ತಾಂತರಿಸಿದರು. ವಜ್ರಖಚಿತ ಚಿನ್ನಾಭರಣಗಳನ್ನು ಒಳಗೊಂಡ ಈ ಕಾಣಿಕೆ ದೇವಾಲಯದ ಇತಿಹಾಸದಲ್ಲಿನ ಗಮನಾರ್ಹ ದಾನಗಳಲ್ಲಿ ಒಂದಾಗಿದೆ.
ಸಮಾರಂಭದಲ್ಲಿ ದಂಪತಿಯ ಭಕ್ತಿಯನ್ನು ಶ್ಲಾಘಿಸಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, 206 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಶ್ರೀ ವೆಂಕಟೇಶ್ವರ ಸ್ವಾಮಿಗೆ ಅರ್ಪಿಸಿರುವುದು ಅಪರೂಪದ ಹಾಗೂ ಅಸಾಧಾರಣ ಭಕ್ತಿಯ ಪ್ರತೀಕವಾಗಿದೆ. ದೇವರ ಮೇಲಿನ ಅಪಾರ ಭಕ್ತಿ ಮತ್ತು ದೈವಿಕ ಪ್ರೇರಣೆಯಿಂದ ಈ ದಂಪತಿ ಇಂತಹ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿರುವುದು ತಮ್ಮ ಸೌಭಾಗ್ಯ ಎಂದು ಹೇಳಿದರು.
ತಿರುಮಲವು ನಂಬಿಕೆ, ಭಕ್ತಿ ಹಾಗೂ ಆಧ್ಯಾತ್ಮಿಕ ಸಂತೃಪ್ತಿಯ ಸಂಕೇತವಾಗಿದ್ದು, ಶ್ರೀ ಕೃಷ್ಣದೇವರಾಯರ ಕಾಲದಿಂದ ಇಂದಿನವರೆಗೂ ಭಕ್ತರ ಕಾಣಿಕೆ ಮತ್ತು ಭಕ್ತಿಪರಂಪರೆ ನಿರಂತರವಾಗಿ ಮುಂದುವರಿದಿದೆ ಎಂದು ನಾಯ್ಡು ಹೇಳಿದರು. ಪಲ್ಲವರು, ಚೋಳರು, ಚೇರರು, ಪಾಂಡ್ಯರು ಹಾಗೂ ಮೈಸೂರು ಮತ್ತು ಮರಾಠಾ ಅರಸರು ಹಿಂದಿನ ಕಾಲದಲ್ಲಿ ದೇವಾಲಯಕ್ಕೆ ಬೆಲೆಬಾಳುವ ಆಭರಣಗಳು ಮತ್ತು ಕಾಣಿಕೆಗಳನ್ನು ಅರ್ಪಿಸಿ ಶ್ರೀಮಂತಗೊಳಿಸಿರುವುದನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಅಲಿಪಿರಿ ಬಾಂಬ್ ದಾಳಿಯಿಂದ ತಾವು ಪಾರಾದ ಘಟನೆಯನ್ನು ನೆನಪಿಸಿಕೊಂಡ ಮುಖ್ಯಮಂತ್ರಿ, ಶ್ರೀ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದವೇ ತಮಗೆ ಮರುಜನ್ಮ ನೀಡಿತು ಎಂದು ಭಾವುಕರಾಗಿ ನುಡಿದರು.
ದೇವಾಲಯದ ಪಾವಿತ್ರ್ಯ ಕಾಪಾಡುವುದರ ಜೊತೆಗೆ ಗೋರಕ್ಷಣೆ, ವೈದಿಕ ಪರಂಪರೆ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವಂತೆ ಟಿಟಿಡಿಗೆ ಸೂಚಿಸಿದ ನಾಯ್ಡು, ‘ವೃಕೋ ಗೋವಿಂದಂ’ ಉಪಕ್ರಮಕ್ಕೆ ಉತ್ತೇಜನ ನೀಡುವುದಾಗಿ ತಿಳಿಸಿದರು. ಅಲ್ಲದೆ, ದೇವಾಲಯದ ಮೂಲಸೌಕರ್ಯ ವಿಸ್ತರಣೆ ಹಾಗೂ ಟಿಟಿಡಿ ಸಹಯೋಗದೊಂದಿಗೆ ಆಂಧ್ರಪ್ರದೇಶದಾದ್ಯಂತ 5,000 ದೇವಾಲಯಗಳನ್ನು ನಿರ್ಮಿಸುವ ಯೋಜನೆಯನ್ನೂ ಪ್ರಕಟಿಸಿದರು.
‘ಮಾನವ ಸೇವೆಯೇ ಮಾಧವ ಸೇವೆ’ ಎಂಬ ತತ್ವದಡಿ ಅನ್ನದಾನ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಉಪಕ್ರಮಗಳನ್ನು ಸರ್ಕಾರ ಮತ್ತಷ್ಟು ಬಲಪಡಿಸಲಿದೆ. ಶ್ರೀಮಂತರು ತಮ್ಮ ಸಂಪತ್ತನ್ನು ಸಮಾಜ ಕಲ್ಯಾಣ, ಆಧ್ಯಾತ್ಮಿಕ ಕಾರ್ಯಗಳು ಹಾಗೂ ಬಡವರ ಸೇವೆಗೆ ಬಳಸುವಂತೆ ಜೈನ ದಂಪತಿಯ ದಾನವನ್ನು ಮಾದರಿಯಾಗಿ ಉಲ್ಲೇಖಿಸಿ ಮುಖ್ಯಮಂತ್ರಿ ಕರೆ ನೀಡಿದರು.
-
ನಿಧನ ವಾರ್ತೆ17 hours agoMangaluru-ಮಂಗಳೂರು: ರಸ್ತೆ ದಾಟುತ್ತಿದ್ದ 2ನೇ ತರಗತಿ ವಿದ್ಯಾರ್ಥಿಯ ಮೇಲೆ ಬಸ್ ಹರಿದು ಸಾವು
-
ಬಿಗ್ ನ್ಯೂಸ್11 hours agoVitla-ವಿಟ್ಲ: ಚಿಕ್ಕಪ್ಪನನ್ನು ಕತ್ತಿಯಿಂದ ಕಡಿದು ಹತ್ಯೆಗೈದ ಯುವತಿ ಬಂಧನ
-
ಅಪರಾಧ16 hours agoPunacha-ಪುಣಚದಲ್ಲಿ ಬೈಕ್ಗೆ ಕಾರು ಡಿಕ್ಕಿ; ಸವಾರನಿಗೆ ಗಂಭೀರ ಗಾಯ – ನಿಲ್ಲಿಸದೆ ಪರಾರಿಯಾದ ಕಾರು?
-
ಅಂತರ ರಾಜ್ಯ17 hours agoChennai Jain couple-ತಿರುಪತಿ ತಿಮ್ಮಪ್ಪನಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ಚಿನ್ನ, ವಜ್ರಾಭರಣ ಕಾಣಿಕೆ ನೀಡಿದ ಚೆನ್ನೈ ಜೈನ ದಂಪತಿ..!
-
ಅಪರಾಧ17 hours agoPunacha-ಪುಣಚ: ಪತ್ನಿಯನ್ನು ಕೊಲೆಗೈದು ಹೃದಯಾಘಾತವೆಂದು ಬಿಂಬಿಸಲು ಯತ್ನ: ಪತಿಗೆ 5 ವರ್ಷ ಜೈಲು..!
-
ಬಿಗ್ ನ್ಯೂಸ್12 hours agoVirupaksha Bhat-ಮಹಾಲಿಂಗೇಶ್ವರ ದೇವಸ್ಥಾನದ ಕಾಮಗಾರಿಗಳಿಗೆ ಹೈಕೋರ್ಟ್ ತಡೆಯಾಜ್ಞೆ: ಅನುಮತಿಯಿಲ್ಲದ ಕಾಮಗಾರಿ, ಟೆಂಡರ್ ಪ್ರಕ್ರಿಯೆ ಮುಂದುವರಿಸದಂತೆ ಮಧ್ಯಂತರ ಆದೇಶ; ದೇವಸ್ಥಾನದ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ, ನಿಯಮಬದ್ಧ ಆಡಳಿತಕ್ಕೆ ಆಗ್ರಹ : ದೂರುದಾರ ವಿರೂಪಾಕ್ಷ ಭಟ್ ಪತ್ರಿಕಾಗೋಷ್ಟಿ
-
ರಾಜಕೀಯ17 hours agoKumaraswamy-ಹಳ್ಳಿಯ ಪ್ರತಿ ಹೆಣ್ಣುಮಕ್ಕಳಿಗೆ 2 ಹಸು ಉಚಿತ..! 2028ರ ಎನ್ಡಿಎ ಯೋಜನೆ ಘೋಷಿಸಿದ ಕುಮಾರಸ್ವಾಮಿ
-
ಅಪರಾಧ15 hours agoBantwal-ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ಗುಂಪುಗೂಡಿ ಗಲಾಟೆ; ಟೋಲ್ ಉಪಕರಣಗಳಿಗೆ ಹಾನಿ ಯತ್ನ – ಪ್ರಕರಣ ದಾಖಲು















