ಅಂತರ ರಾಜ್ಯ
‘Sanchar Saathi’ app-‘ಸಂಚಾರ್ ಸಾಥಿ’ ಆ್ಯಪ್ ಕಡ್ಡಾಯವಲ್ಲ: ವಿವಾದದ ಬಳಿಕ ಕೇಂದ್ರದ ಸ್ಪಷ್ಟನೆ
ಸಂಚಾರ್ ಸಾಥಿ ಆ್ಯಪ್ ಅನ್ನು ಡಿಲೀಟ್ ಆಗದಂತೆ ಮೊಬೈಲ್‌ನಲ್ಲಿ ಅಳವಡಿಸಬೇಕು ಎಂಬ ಸರ್ಕಾರದ ಸೂಚನೆಗೆ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ಪಷ್ಟನೆ ನೀಡಿದ್ದಾರೆ. “ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಸಕ್ರಿಯಗೊಳಿಸುವುದು ಬಳಕೆದಾರರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಇದು ಕಡ್ಡಾಯವಲ್ಲ,” ಎಂದು ಸಚಿವರು ತಿಳಿಸಿದ್ದಾರೆ.
ಹೊಸದಿಲ್ಲಿ: ಆನ್‌ಲೈನ್ ವಂಚನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಸಂಚಾರ್ ಸಾಥಿ’ (Sanchar Saathi) ಆ್ಯಪ್ ಅನ್ನು ಮೊಬೈಲ್‌ಗಳಲ್ಲಿ ಕಡ್ಡಾಯವಾಗಿ ಅಳವಡಿಸುವ ವಿಚಾರ ವಿವಾದಕ್ಕೆ ಕಾರಣವಾಗಿದೆ. ಈ ಆ್ಯಪ್ ಅನ್ನು ಡಿಲೀಟ್ ಆಗದಂತೆ ಮೊಬೈಲ್‌ನಲ್ಲಿ ಅಳವಡಿಸಬೇಕು ಎಂಬ ಸರ್ಕಾರದ ಸೂಚನೆಗೆ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸ್ಪಷ್ಟನೆ ನೀಡಿದ್ದಾರೆ.
“ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಸಕ್ರಿಯಗೊಳಿಸುವುದು ಬಳಕೆದಾರರ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಇದು ಕಡ್ಡಾಯವಲ್ಲ,” ಎಂದು ಸಚಿವರು ತಿಳಿಸಿದ್ದಾರೆ.
ವಿವಾದದ ಹಿನ್ನೆಲೆಯೇನು?
ಸೈಬರ್ ಸುರಕ್ಷತೆಯ ಹೆಸರಿನಲ್ಲಿ ‘ಸಂಚಾರ್ ಸಾಥಿ’ ಆ್ಯಪ್ ಅನ್ನು ದೇಶದ ಎಲ್ಲಾ ಮೊಬೈಲ್‌ಗಳಲ್ಲಿ ಮೊದಲೇ ಇನ್‌ಸ್ಟಾಲ್ (Pre-installed) ಮಾಡಿರಬೇಕು ಹಾಗೂ ಅದನ್ನು ಬಳಕೆದಾರರು ಡಿಲೀಟ್ ಮಾಡಲು ಸಾಧ್ಯವಾಗದಂತೆ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಬೇಕು ಎಂದು ಕೇಂದ್ರ ಸರ್ಕಾರ ಮೊಬೈಲ್ ತಯಾರಕ ಕಂಪನಿಗಳಿಗೆ ಸೂಚಿಸಿತ್ತು. ಈಗ ಬಳಕೆಯಲ್ಲಿರುವ ಮೊಬೈಲ್‌ಗಳಿಗೂ ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ 90 ದಿನಗಳ ಒಳಗೆ ಈ ಆ್ಯಪ್ ತಲುಪಿಸಲು ನಿರ್ದೇಶನ ನೀಡಿತ್ತು. ಇದು ಗೌಪ್ಯತೆಯ ಉಲ್ಲಂಘನೆ ಮತ್ತು ಕದ್ದಾಲಿಕೆಯ ಭೀತಿಗೆ ಕಾರಣವಾಗಿತ್ತು.
ಸಚಿವರ ಸ್ಪಷ್ಟನೆ ಏನು?
ವಿರೋಧ ವ್ಯಕ್ತವಾದ ನಂತರ ಪ್ರತಿಕ್ರಿಯಿಸಿದ ಸಚಿವ ಸಿಂಧಿಯಾ, “ದೂರಸಂಪರ್ಕ ಇಲಾಖೆ ಅಭಿವೃದ್ಧಿಪಡಿಸಿದ ಈ ಆ್ಯಪ್‌ನಲ್ಲಿ ಯಾವುದೇ ಬೇಹುಗಾರಿಕೆ ಅಥವಾ ಕರೆಗಳ ಕದ್ದಾಲಿಕೆ ಇರುವುದಿಲ್ಲ. ಗೌಪ್ಯತೆಯ ಬಗ್ಗೆ ಕಾಳಜಿ ಇರುವವರು ಮತ್ತು ಸರ್ಕಾರದ ಕಣ್ಣಾವಲಿನ ಭಯವಿದ್ದವರು ಈ ಆ್ಯಪ್ ಅನ್ನು ನಿಸ್ಸಂಕೋಚವಾಗಿ ಡಿಲೀಟ್ ಮಾಡಬಹುದು,” ಎಂದು ಹೇಳಿದ್ದಾರೆ. ಆದರೆ, ಫೋನ್ ತಯಾರಕರಿಗೆ ನೀಡಲಾದ ಕಡ್ಡಾಯ ಅಳವಡಿಕೆಯ ಆದೇಶವನ್ನು ಸರ್ಕಾರ ಇನ್ನೂ ಅಧಿಕೃತವಾಗಿ ಹಿಂಪಡೆದಿಲ್ಲ ಎಂಬುದು ಗೊಂದಲಕ್ಕೆ ಕಾರಣವಾಗಿದೆ.
ವಿಪಕ್ಷಗಳ ಆಕ್ಷೇಪ:
ಈ ವಿಚಾರ ಈಗ ರಾಜಕೀಯ ತಿರುವು ಪಡೆದಿದ್ದು, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಇದನ್ನು ‘ಸ್ನೂಪಿಂಗ್ ಆ್ಯಪ್’ (ಗೂಢಚರ್ಯೆಯ ಆ್ಯಪ್) ಎಂದು ಕರೆದರೆ, ಸಂಸದೆ ಪ್ರಿಯಾಂಕಾ ಚತುರ್ವೇದಿ “ಇದು ಬಿಗ್ ಬಾಸ್ ಮಾದರಿಯ ಕಣ್ಣಾವಲು,” ಎಂದು ಟೀಕಿಸಿದ್ದಾರೆ. ಕೆಲವರು ಇದನ್ನು ಇಸ್ರೇಲ್‌ನ ಪೆಗಾಸಸ್ ಸ್ಪೈವೇರ್‌ಗೆ ಹೋಲಿಸಿ, ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.
ಏನಿದು ಸಂಚಾರ್ ಸಾಥಿ?
ಮೇ 2023ರಂದು ಸ್ಥಾಪಿಸಲಾದ ಈ ಪೋರ್ಟಲ್ ಮೊಬೈಲ್ ಅಪ್ಲಿಕೇಶನ್ ಮತ್ತು ವೆಬೈಟ್ ಆಗಿಯೂ ಲಭ್ಯವಿದೆ. ದೂರಸಂಪರ್ಕ ಇಲಾಖೆ ಮೊಬೈಲ್ ಬಳಕೆದಾರರ ಭದ್ರತೆ ಮತ್ತು ಜಾಗೃತಿಯನ್ನು ಹೆಚ್ಚಿಸಲು ಈ ಅಪ್ಲಿಕೇಶನ್ ಅನ್ನು ತಯಾರಿಸಿದೆ ಎಂದು ಹೇಳಿಕೊಂಡಿದೆ.
ಇದೀಗ ಇದರ ಬಳಕೆ ಜನರ ಆಯ್ಕೆಗೆ ಬಿಟ್ಟಿದೆ. ದುರುದ್ದೇಶಪೂರಿತ ವೆಬ್ ಲಿಂಕ್ ಗಳ ಬಗ್ಗೆ ಮತ್ತು ಕಳೆದು ಹೋದ ಮೊಬೈಲ್ ಫೋನ್ ಗಳನ್ನು ನಿರ್ಬಂಧಿಸುವುದು ಮತ್ತು ವರದಿ ಮಾಡಬಹುದಾಗಿದೆ. ಆದರೆ ಶೀಘ್ರವೇ ಈ ಅಪ್ಲಿಕೇಶನ್ ಪ್ರತಿ ಫೋನ್ ನಲ್ಲಿ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಅಪ್ಲಿಕೇಶನ್ ಕುರಿತ ಕಾಳಜಿ ಏನು?
ಎಲ್ಲಾ ಸ್ಮಾರ್ಟ್ ಫೋನ್ ತಯಾರಕರಿಗೆ ದೂರಸಂಪರ್ಕ ಇಲಾಖೆ ಹೊಸ ಮೊಬೈಲ್ ಸಾಧನಗಳಲ್ಲಿ ಸಂಚಾರ್ ಸಾಥಿಯನ್ನು ಮೊದಲೇ ಸ್ಥಾಪಿಸುವಂತೆ ಸೂಚಿಸಿದೆ. “ಅಪ್ಲಿಕೇಶನ್ ಸುಲಭವಾಗಿ ಗೋಚರಿಸಬೇಕು ಮತ್ತು ಬಳಕೆದಾರರು ಸುಲಭವಾಗಿ ಪ್ರವೇಶಿಸುವಂತೆ ಇರಬೇಕು. ಅದರ ಕಾರ್ಯಗಳನ್ನು ನಿಷ್ಕ್ರಿಯಗೊಳಿಸಲಾಗಿಲ್ಲ ಅಥವಾ ನಿರ್ಬಂಧಿಸಲಾಗಿಲ್ಲ ಎಂದು ಖಚಿತಪಡಿಸಬೇಕು. ಈಗಾಗಲೇ ಬಳಸುತ್ತಿರುವ ಸಾಧನಗಳು ಸಾಪ್ಟ್‌ವೇರ್ ನವೀಕರಣದ ಮೂಲಕ ಅಪ್ಲಿಕೇಶನ್ ಅನ್ನು ಸ್ವೀಕರಿಸುವಂತಿರಬೇಕು” ಎಂದು ಕೇಂದ್ರ ಸರ್ಕಾರ ಆದೇಶಿಸಿತ್ತು. ಇದರಿಂದಾಗಿ ಸ್ಮಾರ್ಟ್ ಫೋನ್ ಬಳಕೆದಾರರು ಕದ್ದಾಲಿಕೆಯ ಆತಂಕ ವ್ಯಕ್ತಪಡಿಸಿದ್ದರು. ಸ್ಮಾರ್ಟ್ ಫೋನ್ ತಯಾರಕರ ಜೊತೆಗೂ ಘರ್ಷಣೆಗೆ ಇದು ಕಾರಣವಾಗಿದೆ.
ಸಂಚಾರ ಸಾಥಿ ಒದಗಿಸುವ ಸೇವೆಗಳು
ಬಳಕೆದಾರರ ಹೆಸರಿನಲ್ಲಿರುವ ಮೊಬೈಲ್ ಸಂಪರ್ಕಗಳ ಸಂಖ್ಯೆಯನ್ನು ತಿಳಿದುಕೊಳ್ಳಲು ಮತ್ತು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ವಿಶ್ವಾಸಾರ್ಹ ಸಂಪರ್ಕ ವಿವರಗಳನ್ನು ಪರಿಶೀಲಿಸಲು ನೆರವಾಗುತ್ತದೆ. ಬಳಕೆದಾರರರು ಅಪ್ಲಿಕೇಶನ್ ಮೂಲಕ ವಂಚನೆ ವರದಿ ಮಾಡುವಾಗ ತಮ್ಮ ಐಎಂಇಐ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವ ಅಗತ್ಯವಿಲ್ಲ.
ಈ ಅಪ್ಲಿಕೇಶನ್ ಬಳಕೆದಾರರ ಹೆಸರಿನಲ್ಲಿರುವ ಮೊಬೈಲ್ ಸಂಪರ್ಕಗಳನ್ನು ಪರಿಶೀಲಿಸುವುದು. ಹ್ಯಾಂಡೈಟ್ ನಿಜವೇ ಎಂದು ಪರಿಶೀಲಿಸುವುದು ಮತ್ತು ಅನುಮಾನಾಸ್ಪದ ಸಂವಹನ ಅಥವಾ ಸ್ಕ್ಯಾಮ್ಗಳನ್ನು ವರದಿ ಮಾಡುವಂತಹ ಸೇವೆಗಳನ್ನು ಒದಗಿಸುತ್ತದೆ. ಪೋನ್ನಲ್ಲಿ ಒಟಿಪಿ ಪರಿಶೀಲನೆ ಇಲ್ಲದೆಯೇ, ಭಾರತೀಯ ಸಂಖ್ಯೆ ಮಾತ್ರವಲ್ಲದೆ, ಅಂತರರಾಷ್ಟ್ರೀಯ ಕರೆಯನ್ನೂ ವರದಿ ಮಾಡಲು ಅವಕಾಶ ನೀಡುತ್ತದೆ.
ಸಂಚಾರ ಸಾಥಿಯ ಲಾಭವೇನು?
ಈ ವೆಬ್ಸೈಟ್ ಪ್ರಕಾರ ಯೋಜನೆಯಡಿ 42.14 ಲಕ್ಷಕ್ಕೂ ಹೆಚ್ಚು ಮೊಬೈಲ್ಗಳನ್ನು ಬ್ಲಾಕ್ ಮಾಡಲಾಗಿದೆ. 26.11 ಲಕ್ಷಕ್ಕೂ ಹೆಚ್ಚು ಕಳೆದು ಹೋದ ಮೊಬೈಲ್ ಸೆಟ್ ಗಳನ್ನು ಪತ್ತೆಹಚ್ಚಲಾಗಿದೆ. ತಮ್ಮ ಹೆಸರಿನಲ್ಲಿರುವ ನೋಂದಾಯಿಸಲಾದ ಮೊಬೈಲ್ ಸಂಪರ್ಕಗಳ ಮಾಹಿತಿ ಪಡೆಯಲು ಬಯಸುವ ವ್ಯಕ್ತಿಗಳಿಂದ 288 ಲಕ್ಷಕ್ಕೂ ಹೆಚ್ಚು ವಿನಂತಿಗಳನ್ನು ಸ್ವೀಕರಿಸಲಾಗಿದ್ದು, 254 ಲಕ್ಷಕ್ಕೂ ಹೆಚ್ಚು ವಿನಂತಿಗಳನ್ನು ಪರಿಹರಿಸಲಾಗಿದೆ. ಪ್ರಸ್ತುತ ಅಪ್ಲಿಕೇಶನ್ 1.14 ಕೋಟಿಗೂ ಹೆಚ್ಚು ನೋಂದಣಿಗಳನ್ನು ಹೊಂದಿದೆ. ಗೂಗಲ್ ಪ್ಲೇಸ್ಟೋರ್ನಿಂದ 1 ಕೋಟಿಗೂ ಹೆಚ್ಚು ಡೌನ್ ಲೋಡ್‌ಗಳು ಮತ್ತು ಆಪಲ್ ಸ್ಟೋರ್ನಿಂದ 9.5 ಲಕ್ಷಕ್ಕೂ ಹೆಚ್ಚು ಡೌನ್ ಲೋಡ್‌ಗಳು ಆಗಿದೆ.
ಅಪ್ಲಿಕೇಶನ್ ಕಡ್ಡಾಯವೇ?
ಇದೀಗ ತಯಾರಿಸಿ ಚಾಲ್ತಿಯಲ್ಲಿರುವ ಸಾಧನಗಳಲ್ಲಿ ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಸಾಫೇರ್ ನವೀಕರಣದ ಮೂಲಕ ತೂರಿಸುವಂತೆ ಕೇಂದ್ರ ಸರ್ಕಾರ ಫೋನ್ ತಯಾರಕರಿಗೆ ತಿಳಿಸಿದೆ. ಈ ನವೀಕರಣಕ್ಕೆ 90 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ವಿವಾದದ ನಂತರ ಸಮಜಾಯಿಶಿ ನೀಡಿದರೂ, ಆದೇಶವನ್ನು ಹಿಂಪಡೆದಿಲ್ಲ.
ಅಂತರ ರಾಜ್ಯ
Jantar Mantar-ಸಿಜೆಪಿ ಪ್ರತಿಭಟನೆಗೆ ದೆಹಲಿಯಲ್ಲಿ ಬಿಗಿ ಭದ್ರತೆ – ಪಂಚರ್ ಆಗಲು ರಸ್ತೆಗಳಿಗೆ ತಡೆಬೇಲಿ..! ವಿಮಾನದಲ್ಲೇ ಅಭಿಜಿತ್ ದಿಪ್ಕೆ ಪೊಲೀಸ್ ವಶಕ್ಕೆ..! ಸಾವಿರಕ್ಕೂ ಮಿಕ್ಕಿ ಪ್ರತಿಭಟನಾಕಾರರೂ ವಶಕ್ಕೆ-ಸುಪ್ರೀಂ ಕೋರ್ಟ್ ವಕೀಲರಿಗೆ ತಡೆ..! ತೀವ್ರ ಅಡೆತಡೆಗಳ ನಡುವೆ ಜಂತರ್ ಮಂತರ್ ಗೆ ಹರಿದು ಬರುತ್ತಿರುವ ಜನಸಾಗರ
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ಕರೆ ನೀಡಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ನಗರದ ವಿವಿಧೆಡೆ ಹಾಗೂ ಗಡಿ ಪ್ರದೇಶಗಳಲ್ಲಿ ಈಗಾಗಲೇ ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಕಾಕ್‌ರೋಚ್ ಜನತಾ ಪಾರ್ಟಿ (ಸಿಜೆಪಿ) ಕರೆ ನೀಡಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ನಗರದ ವಿವಿಧೆಡೆ ಹಾಗೂ ಗಡಿ ಪ್ರದೇಶಗಳಲ್ಲಿ ಈಗಾಗಲೇ ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದೊಳಗೆ ಪ್ರವೇಶಿಸಿದ ಪೊಲೀಸರು ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಂತರ್ ಮಂತರ್ ನಲ್ಲಿ ಕ್ಷಣ ಕ್ಷಣ ಪ್ರತಿಭಟಕಾರರ ಸಂಖ್ಯೆ ಭಾರಿ ಏರುತ್ತಿದೆ.
ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಜಂತರ್ ಮಂತರ್ ಗೆ ಆಗಮಿಸಿದ ನೂರಾರು ಸುಪ್ರೀಂ ಕೋರ್ಟಿನ ವಕೀಲರನ್ನು ಪೊಲೀಸರು ತಡೆಹಿಡಿದಿದ್ದಾರೆ ಎಂದು ವರದಿಯಾಗಿದೆ.
ನೋಯ್ಡಾ–ದೆಹಲಿ ಗಡಿ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಪ್ರತಿಭಟನಾಕಾರರನ್ನು ಬಸ್‌ಗಳಲ್ಲಿ ಕರೆದೊಯ್ದು ವಶಕ್ಕೆ ಪಡೆಯಲಾಗಿದೆ. ಇನ್ನೂ ಟಯರ್ ಪಂಚರ್ ಆಗುವ ಕಬ್ಬಿಣದ ಬೇಲಿಯನ್ನು ಪೊಲೀಸರು ರಸ್ತೆಗಳಲ್ಲಿ ಇಟ್ಟಿರುವ ಪ್ರತಿಭಟನಕಾರರು ಆರೋಪಿಸಿದ್ದಾರೆ. ಮತ್ತೂ ನಿರ್ದಿಷ್ಟ ಸ್ಥಳಗಳಲ್ಲಿ ಮೊಬೈಲ್ ನೆಟ್‌ವರ್ಕ್ ಗಳನ್ನು ಪೊಲೀಸರ ನಿರ್ದೇಶನದ ಮೇರೆಗೆ ಟೆಲಿಕಾಂ ಕಂಪೆನಿಗಳು ನಿಷ್ಕ್ರಿಯಗೊಳಿಸಿರುವ ಬಗ್ಗೆಯೂ ಆರೋಪಗಳು ವ್ಯಕ್ತವಾಗಿದೆ.
ಭದ್ರತಾ ವ್ಯವಸ್ಥೆಯ ಭಾಗವಾಗಿ 20 ಸಾವಿರಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ 200ಕ್ಕೂ ಹೆಚ್ಚು ಕಂಪನಿಗಳನ್ನು ನಿಯೋಜಿಸಲಾಗಿದೆ. ವಿಶೇಷವಾಗಿ ಕೇಂದ್ರ ದೆಹಲಿ, ಕನ್ನಾಟ್ ಪ್ಲೇಸ್ ಹಾಗೂ ನಗರದ ಪ್ರವೇಶ ಗಡಿ ಭಾಗಗಳಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ.
ಕನ್ನಾಟ್ ಪ್ಲೇಸ್ ಪ್ರದೇಶವನ್ನು 20 ವಲಯಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ವಲಯದ ಭದ್ರತಾ ಜವಾಬ್ದಾರಿಯನ್ನು ಡಿಸಿಪಿ ಅಥವಾ ಐಪಿಎಸ್ ಅಧಿಕಾರಿಗಳಿಗೆ ವಹಿಸಲಾಗಿದೆ. ಅಧಿಕಾರಿಗಳ ನೇತೃತ್ವದಲ್ಲಿ ವಿವಿಧೆಡೆ ಪಥಸಂಚಲನ ನಡೆಸಿ ಭದ್ರತಾ ಸಿದ್ಧತೆಗಳನ್ನು ಪರಿಶೀಲಿಸಲಾಗಿದೆ.
ಸಂದೇಹಾಸ್ಪದ ವಾಹನಗಳನ್ನು ತಡೆದು ಪರಿಶೀಲಿಸಲು ತುರ್ತು ಬಳಕೆಯ ಸ್ಪೈಕ್ ಸ್ಟ್ರಿಪ್‌ಗಳನ್ನು ಸಿದ್ಧವಾಗಿಡಲಾಗಿದೆ. ಭದ್ರತಾ ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಕಾನ್‌ಸ್ಟೆಬಲ್‌ಗಳು ಹಾಗೂ ಇನ್‌ಸ್ಪೆಕ್ಟರ್‌ಗಳಂತಹ ಕೆಳಹಂತದ ಪೊಲೀಸ್ ಸಿಬ್ಬಂದಿಗೂ ಬಾಡಿ ಕ್ಯಾಮೆರಾಗಳನ್ನು ಒದಗಿಸಲಾಗಿದೆ.
ಸಾರ್ವಜನಿಕರ ಸಾಮಾನ್ಯ ಸಂಚಾರಕ್ಕೆ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಅನುಮತಿಯಿಲ್ಲದ ಪ್ರತಿಭಟನೆಯಲ್ಲಿ ಭಾಗವಹಿಸಲು ಮುಂದಾಗುವವರನ್ನು ತಕ್ಷಣ ವಶಕ್ಕೆ ಪಡೆಯಲಾಗುವುದು ಹಾಗೂ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅಂತರ ರಾಜ್ಯ
By-election results-ಉಪಚುನಾವಣೆ ಫಲಿತಾಂಶ: ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬಿಜೆಪಿಗೆ ಭರ್ಜರಿ ಮುನ್ನಡೆ, ತಮಿಳುನಾಡಿನಲ್ಲಿ ಟಿವಿಕೆ ಅಬ್ಬರ
ಒಂದು ಲೋಕಸಭಾ ಕ್ಷೇತ್ರ ಮತ್ತು ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಬಹುತೇಕ ಪೂರ್ಣಗೊಂಡಿದ್ದು ಅಸ್ಸಾಂನ ನಾಗೌನ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭಾರೀ ಮುನ್ನಡೆ ಸಾಧಿಸಿದ್ದರೆ, ತಮಿಳುನಾಡಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ.
ಹೊಸದಿಲ್ಲಿ: ಒಂದು ಲೋಕಸಭಾ ಕ್ಷೇತ್ರ ಮತ್ತು ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಬಹುತೇಕ ಪೂರ್ಣಗೊಂಡಿದ್ದು, ವಿವಿಧ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಡುವಿನ ಪೈಪೋಟಿ ಗಮನ ಸೆಳೆದಿದೆ. ಅಸ್ಸಾಂನ ನಾಗೌನ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭಾರೀ ಮುನ್ನಡೆ ಸಾಧಿಸಿದ್ದರೆ, ತಮಿಳುನಾಡಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಪಶ್ಚಿಮ ಬಂಗಾಳದ ಎರಡು ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆದಿದೆ.
ಪಶ್ಚಿಮ ಬಂಗಾಳದ ರೇಜಿನಗರ ಮತ್ತು ನಂದಿಗ್ರಾಮ, ತಮಿಳುನಾಡಿನ ಮಧುರಂಟಕಂ ಮತ್ತು ಧಾರಾಪುರಂ ಹಾಗೂ ಪುದುಚೇರಿಯ ತಟ್ಟನಚಾವಡಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಇದರ ಜತೆಗೆ ಅಸ್ಸಾಂನ ನಾಗೌನ್ ಲೋಕಸಭಾ ಕ್ಷೇತ್ರಕ್ಕೂ ಚುನಾವಣೆ ನಡೆದಿತ್ತು. ಲಭ್ಯವಿರುವ ಮಾಹಿತಿಯ ಪ್ರಕಾರ, ಕೆಲವು ಕ್ಷೇತ್ರಗಳಲ್ಲಿ ಫಲಿತಾಂಶದ ಚಿತ್ರಣ ಸ್ಪಷ್ಟವಾಗಿದ್ದರೂ ಚುನಾವಣಾ ಆಯೋಗದ ಅಧಿಕೃತ ಪ್ರಕಟಣೆ ಬಾಕಿಯಿದೆ.
ನಾಗೌನ್‌ನಲ್ಲಿ ಬಿಜೆಪಿಗೆ ಭಾರೀ ಮುನ್ನಡೆ
ಅಸ್ಸಾಂನ ನಾಗೌನ್ ಲೋಕಸಭಾ ಕ್ಷೇತ್ರವು ಈ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರದ್ಯುತ್ ಬೊರ್ದೊಲೊಯಿ ಅವರು ಬಿಜೆಪಿ ಅಭ್ಯರ್ಥಿ ಸುರೇಶ್ ಬೋರಾ ವಿರುದ್ಧ 2,12,231 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಬಳಿಕ ಪ್ರದ್ಯುತ್ ಬೊರ್ದೊಲೊಯಿ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ದಿಸ್ಪುರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಹೀಗಾಗಿ ನಾಗೌನ್ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು.
ಸದ್ಯದ ಮಾಹಿತಿಯ ಪ್ರಕಾರ, ಬಿಜೆಪಿ ಅಭ್ಯರ್ಥಿ ದೇವಶಿಸ್ ಶರ್ಮಾ ಅವರು ಎಐಯುಡಿಎಫ್ ಅಭ್ಯರ್ಥಿ ಬದ್ರುದ್ದೀನ್ ಅಜ್ಮಲ್ ವಿರುದ್ಧ ಸುಮಾರು 1.2 ಲಕ್ಷ ಮತಗಳ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಿಬಾಮಣಿ ಬೋರಾ ಮೂರನೇ ಸ್ಥಾನದಲ್ಲಿದ್ದಾರೆ ಎಂದು ವರದಿಯಾಗಿದೆ.
ಪಶ್ಚಿಮ ಬಂಗಾಳದ ಎರಡು ಕ್ಷೇತ್ರಗಳಲ್ಲಿ ಪೈಪೋಟಿ
ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಸಿರಾಣಿ ರಥ್ ಅವರು ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ವಿರುದ್ಧ ಸುಮಾರು 1.05 ಲಕ್ಷ ಮತಗಳ ಮುನ್ನಡೆ ಸಾಧಿಸಿದ್ದಾರೆ ಎಂದು ಲಭ್ಯವಿರುವ ಮಾಹಿತಿ ತಿಳಿಸಿದೆ.
ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಹಿನ್ನೆಲೆಯಲ್ಲಿ ನಂದಿಗ್ರಾಮ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು ಎನ್ನಲಾಗಿದೆ.
ಇನ್ನು ರೇಜಿನಗರ ಕ್ಷೇತ್ರದಲ್ಲಿ ಸಖಾರವ್ ಸರ್ಕಾರ್ ಅವರು ಎಜೆಯುಪಿ ಅಭ್ಯರ್ಥಿ ಗೋಲಂ ನಬಿ ಆಜಾದ್ ವಿರುದ್ಧ ಸುಮಾರು 38 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ ಎಂದು ವರದಿಯಾಗಿದೆ. ಈ ಕ್ಷೇತ್ರದಲ್ಲಿಯೂ ಮತ ಎಣಿಕೆಯ ಬೆಳವಣಿಗೆಗಳ ಮೇಲೆ ರಾಜಕೀಯ ವಲಯದ ಗಮನ ನೆಟ್ಟಿದೆ.
ತಮಿಳುನಾಡಿನಲ್ಲಿ ಟಿವಿಕೆ ಅಭ್ಯರ್ಥಿಗಳಿಗೆ ಮುನ್ನಡೆ
ತಮಿಳುನಾಡಿನ ಮಧುರಂಟಕಂ ಮತ್ತು ಧಾರಾಪುರಂ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ಮಧುರಂಟಕಂ ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ಮರಗತಂ ಕುಮಾರವೇಲು ಅವರು ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಸುಮಾರು 6 ಸಾವಿರ ಮತಗಳ ಮುನ್ನಡೆ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಎಐಎಡಿಎಂಕೆ ಅಭ್ಯರ್ಥಿಯಾಗಿದ್ದ ಅವರು, ನಂತರ ಟಿವಿಕೆ ಸೇರಿ ಸ್ಪರ್ಧಿಸಿದ್ದರು ಎನ್ನಲಾಗಿದೆ.
ಧಾರಾಪುರಂ ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ಪಿ. ಸತ್ಯಭಾಮಾ ಅವರು ಡಿಎಂಕೆ ಅಭ್ಯರ್ಥಿ ವಿರುದ್ಧ ಸುಮಾರು 9,600 ಮತಗಳ ಮುನ್ನಡೆ ಸಾಧಿಸಿದ್ದಾರೆ ಎಂದು ವರದಿಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸತ್ಯಭಾಮಾ, ಡಿಎಂಕೆ ಅಭ್ಯರ್ಥಿ ಟಿ. ಇಂದಿರಾಣಿ ವಿರುದ್ಧ 16,727 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿತ್ತು.
ಪುದುಚೇರಿಯಲ್ಲಿ ಎನ್‌ಡಿಎ ಅಭ್ಯರ್ಥಿಗೆ ಗೆಲುವು
ಪುದುಚೇರಿಯ ತಟ್ಟನಚಾವಡಿ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಆಲ್ ಇಂಡಿಯಾ ಎನ್.ಆರ್. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಆನಂದ್ ಅವರು ಕಾಂಗ್ರೆಸ್ ಅಭ್ಯರ್ಥಿ ಇ. ವಿನಾಯಗಂ ವಿರುದ್ಧ 8,482 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಲಭ್ಯವಿರುವ ಮಾಹಿತಿ ತಿಳಿಸಿದೆ.
ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎನ್. ರಂಗಸ್ವಾಮಿ ಅವರು ತಟ್ಟನಚಾವಡಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು ಎನ್ನಲಾಗಿದೆ.
ಉಪಚುನಾವಣೆಯ ಅಧಿಕೃತ ಫಲಿತಾಂಶ ಪ್ರಕಟವಾದ ಬಳಿಕ ವಿವಿಧ ರಾಜ್ಯಗಳ ರಾಜಕೀಯ ಲೆಕ್ಕಾಚಾರಗಳ ಮೇಲೆ ಇದರ ಪರಿಣಾಮದ ಚಿತ್ರಣ ಮತ್ತಷ್ಟು ಸ್ಪಷ್ಟವಾಗಲಿದೆ.
ಅಂತರ ರಾಜ್ಯ
Arrested-ಕಾಸರಗೋಡು: ಮದುವೆಯ ನೆಪದಲ್ಲಿ ಹತ್ತಾರು ಯುವತಿಯರಿಗೆ ವಂಚನೆ: ಮದುವೆಯಾದ ಮೂರೇ ದಿನಕ್ಕೆ ಚಿನ್ನ, ಹಣದೊಂದಿಗೆ ಪರಾರಿ; ಆರೋಪಿ ಬಿಜು ಆಂಟನಿ ಬಂಧನ
ವೈದ್ಯ, ಎಂಜಿನಿಯರ್ ಎಂದು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಹತ್ತಾರು ಯುವತಿಯರಿಗೆ ವಂಚಿಸಿ ಚಿನ್ನಾಭರಣ ಹಾಗೂ ಹಣದೊಂದಿಗೆ ಪರಾರಿಯಾಗುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣ ಸೇರಿದಂತೆ ಹಲವು ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಯನಾಡು ಜಿಲ್ಲೆಯ ಮಾನಂತವಾಡಿ, ವೆಳ್ಳರ, ಚೆನ್ನಿಕ್ಕರ ನಿವಾಸಿ ಬಿಜು ಆಂಟನಿ (45) ಬಂಧಿತ ಆರೋಪಿ.
ಕಾಸರಗೋಡು: ವೈದ್ಯ, ಎಂಜಿನಿಯರ್ ಎಂದು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಹತ್ತಾರು ಯುವತಿಯರಿಗೆ ವಂಚಿಸಿ ಚಿನ್ನಾಭರಣ ಹಾಗೂ ಹಣದೊಂದಿಗೆ ಪರಾರಿಯಾಗುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣ ಸೇರಿದಂತೆ ಹಲವು ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ವಯನಾಡು ಜಿಲ್ಲೆಯ ಮಾನಂತವಾಡಿ, ವೆಳ್ಳರ, ಚೆನ್ನಿಕ್ಕರ ನಿವಾಸಿ ಬಿಜು ಆಂಟನಿ (45) ಬಂಧಿತ ಆರೋಪಿ.
ಚೇರ್ತಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಸುಲ್ತಾನ್ ಬತ್ತೇರಿ ಮೂಲದ ಪತ್ನಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದ ವೇಳೆ ಆತ ಸಿಕ್ಕಿಬಿದ್ದಿದ್ದಾನೆ ಎಂದು ತಿಳಿದುಬಂದಿದೆ.
ವೈದ್ಯನೆಂದು ನಂಬಿಸಿ ಅತ್ಯಾಚಾರ ಆರೋಪ
ವೈದ್ಯನೆಂದು ಪರಿಚಯಿಸಿಕೊಂಡು ತಳಿಪರಂಬ ಮೂಲದ ಯುವತಿಯೊಬ್ಬಳನ್ನು ಮಂಜೇಶ್ವರದ ಹೊಸಂಗಡಿಯ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪ ಬಿಜು ಆಂಟನಿ ವಿರುದ್ಧವಿದೆ. ಈ ಸಂಬಂಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯುವತಿಯಿಂದ ಮೂರೂವರೆ ಪವನ್ ಚಿನ್ನಾಭರಣವನ್ನೂ ಪಡೆದಿದ್ದಾನೆ ಎಂದು ಆರೋಪಿಸಲಾಗಿದೆ.
ಮದುವೆಯಾದ ಮೂರೇ ದಿನಕ್ಕೆ ಪರಾರಿ
ಆರೋಪಿ 2020ರಲ್ಲಿ ತನ್ನ ವಂಚನೆಯ ಜಾಲ ಆರಂಭಿಸಿದ್ದ ಎನ್ನಲಾಗಿದೆ. ಚೇರ್ತಲ ಸಮೀಪದ ನಿವಾಸಿ ರಮ್ಯಾ ಎಂಬ ಯುವತಿಯನ್ನು ರಾಜೇಶ್ ಎಂಬ ಹೆಸರಿನಲ್ಲಿ ಮದುವೆಯಾಗಿದ್ದ ಆತ, ಮದುವೆಯಾದ ಮೂರನೇ ದಿನವೇ ₹30 ಸಾವಿರ ನಗದು ಮತ್ತು ಏಳು ಪವನ್ ಚಿನ್ನಾಭರಣ ಪಡೆದುಕೊಂಡು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ರಮ್ಯಾ ನೀಡಿದ ದೂರಿನ ಮೇರೆಗೆ ಚೇರ್ತಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಆರೋಪಿಯನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಇದೀಗ ಸುಮಾರು ಆರು ವರ್ಷಗಳ ಬಳಿಕ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜು ಆಂಟನಿಯನ್ನು ಬಂಧಿಸಲಾಗಿದೆ.
ಬೇರೆ ಬೇರೆ ಹೆಸರುಗಳಲ್ಲಿ ವಂಚನೆ
ವೈದ್ಯನೆಂದು ಹೇಳಿಕೊಂಡು ಮದುವೆ ಜಾಹೀರಾತುಗಳನ್ನು ನೀಡುವ ಮೂಲಕ ಮಹಿಳೆಯರನ್ನು ಪರಿಚಯಿಸಿಕೊಳ್ಳುತ್ತಿದ್ದ ಆರೋಪಿ, ಬಳಿಕ ಮದುವೆಯಾಗುವುದಾಗಿ ನಂಬಿಸಿ ಅವರಿಂದ ಚಿನ್ನಾಭರಣ ಹಾಗೂ ಹಣ ಪಡೆದು ಪರಾರಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಿಧ ಸ್ಥಳಗಳಲ್ಲಿ ಬೇರೆ ಬೇರೆ ಹೆಸರುಗಳನ್ನು ಬಳಸಿಕೊಂಡು ಮಹಿಳೆಯರಿಗೆ ವಂಚಿಸುತ್ತಿದ್ದ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಆರೋಪಿಯ ವಿರುದ್ಧದ ಪ್ರಕರಣಗಳ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
-
ನಿಧನ ವಾರ್ತೆ23 hours agoMumbai-ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ದುರಂತ ಅಂತ್ಯ? ಸರಪಳಿಯಿಂದ ಕಾಲು ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆ
-
ಮಂಗಳೂರು19 hours agoMulki-ಮೂಲ್ಕಿ: ಚಲಿಸುತ್ತಿದ್ದ ಮಂಗಳೂರು – ಕಾರ್ಕಳ ಎಕ್ಸ್ ಪ್ರೆಸ್ ಬಸ್ಗೆ ಬಡಿದ ಗಿಡುಗ: ಗಾಜು ಪುಡಿಪುಡಿ, ಪುತ್ತೂರು ಮೂಲದ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅವಘಡ
-
ಮಂಗಳೂರು22 hours agoUjire-ಭಾರೀ ಜನಸ್ತೋಮದೊಂದಿಗೆ ಸೌಜನ್ಯ ನ್ಯಾಯದ ನಡಿಗೆ
-
ಅಂತರ ರಾಜ್ಯ23 hours agoArrested-ಕಾಸರಗೋಡು: ಮದುವೆಯ ನೆಪದಲ್ಲಿ ಹತ್ತಾರು ಯುವತಿಯರಿಗೆ ವಂಚನೆ: ಮದುವೆಯಾದ ಮೂರೇ ದಿನಕ್ಕೆ ಚಿನ್ನ, ಹಣದೊಂದಿಗೆ ಪರಾರಿ; ಆರೋಪಿ ಬಿಜು ಆಂಟನಿ ಬಂಧನ
-
ರಾಜ್ಯ23 hours agoRobotic technology-ರೋಬೋಟಿಕ್ ತಂತ್ರಜ್ಞಾನದ ಅದ್ಭುತ: ಸ್ಪೇನ್ನಲ್ಲಿ ಕುಳಿತು ಕರ್ನಾಟಕದ ಮಹಿಳೆಗೆ ಹೃದಯ ಶಸ್ತ್ರಚಿಕಿತ್ಸೆ
-
ಅಂತರ ರಾಜ್ಯ23 hours agoJantar Mantar-ಸಿಜೆಪಿ ಪ್ರತಿಭಟನೆಗೆ ದೆಹಲಿಯಲ್ಲಿ ಬಿಗಿ ಭದ್ರತೆ – ಪಂಚರ್ ಆಗಲು ರಸ್ತೆಗಳಿಗೆ ತಡೆಬೇಲಿ..! ವಿಮಾನದಲ್ಲೇ ಅಭಿಜಿತ್ ದಿಪ್ಕೆ ಪೊಲೀಸ್ ವಶಕ್ಕೆ..! ಸಾವಿರಕ್ಕೂ ಮಿಕ್ಕಿ ಪ್ರತಿಭಟನಾಕಾರರೂ ವಶಕ್ಕೆ-ಸುಪ್ರೀಂ ಕೋರ್ಟ್ ವಕೀಲರಿಗೆ ತಡೆ..! ತೀವ್ರ ಅಡೆತಡೆಗಳ ನಡುವೆ ಜಂತರ್ ಮಂತರ್ ಗೆ ಹರಿದು ಬರುತ್ತಿರುವ ಜನಸಾಗರ
-
ಅಪರಾಧ19 hours agoBantwal-ಬಂಟ್ವಾಳ: 17 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಆರೋಪಿ ಅರೆಸ್ಟ್..!
-
ಅಂತರ ರಾಜ್ಯ23 hours agoBy-election results-ಉಪಚುನಾವಣೆ ಫಲಿತಾಂಶ: ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬಿಜೆಪಿಗೆ ಭರ್ಜರಿ ಮುನ್ನಡೆ, ತಮಿಳುನಾಡಿನಲ್ಲಿ ಟಿವಿಕೆ ಅಬ್ಬರ


















