ಮಂಗಳೂರು
D.K.-ವಿದೇಶಿ ಉದ್ಯೋಗದ ಆಮಿಷ; ದ.ಕ.ದಲ್ಲಿ 300ಕ್ಕೂ ಹೆಚ್ಚು ಜನರಿಗೆ ವೀಸಾ ಹೆಸರಲ್ಲಿ ವಂಚನೆ
ಸಾವಿರಾರು ಜನರು ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿದ್ದಾರೆ. ಅವರನ್ನು ಕಂಡು ಇತರರೂ ವಿದೇಶಿ ಉದ್ಯೋಗದ ಕನಸು ಕಾಣುತ್ತಾರೆ. ಕೇಂದ್ರ ಸರ್ಕಾರದ ವಲಸೆ ವಿಭಾಗದಿಂದ ಮಾನ್ಯತೆ ಪಡೆದ ಏಜೆನ್ಸಿಗಳನ್ನು ಸಂಪರ್ಕಿಸಿದರೆ ಯಾವುದೇ ತೊಂದರೆಯಿಲ್ಲ. ಆದರೆ, ಅನಧಿಕೃತ ಮಾರ್ಗದಲ್ಲಿ ವೀಸಾ ಪಡೆಯಲು ಯತ್ನಿಸಿ ವಂಚನೆಗೆ ಒಳಗಾಗುತ್ತಿದ್ದಾರೆ” ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್. ಹೇಳಿದರು.
ಮಂಗಳೂರು: ರಸಾಯನ ವಿಜ್ಞಾನದಲ್ಲಿ ಎಂ.ಎಸ್‌ಸಿ ಪದವೀಧರೆಯಾಗಿದ್ದ ನರಿಕೊಂಬುವಿನ ಯುವತಿಯೊಬ್ಬಳಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವ ಭರವಸೆಯೊಡ್ಡಿ, ಆಕೆಯ ತಂದೆ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಪಡೆದು ಒಂದು ಏಜೆನ್ಸಿಗೆ ₹6 ಲಕ್ಷ ನೀಡಿದ್ದರು. ಆದರೆ, ಆಕೆಗೆ ವಿದೇಶದಲ್ಲಿ ಉದ್ಯೋಗ ಸಿಗಲಿಲ್ಲ. ಇದರ ಜೊತೆಗೆ, ಆಕೆಯ ಮದುವೆಗಾಗಿ ತಂದೆ ತಯಾರಿಸಿದ್ದ ಚಿನ್ನಾಭರಣಗಳೂ ಸಾಲಗಾರರಿಗೆ ಸಿಕ್ಕಿಹೋದವು.
“ಒಬ್ಬ ಧರ್ಮಗುರು ನನ್ನ ಮಗಳಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿ ₹3 ಲಕ್ಷ ತೆಗೆದುಕೊಂಡು ನಕಲಿ ವೀಸಾ ನೀಡಿ ವಂಚಿಸಿದ. ನಾನು ನನ್ನ ಬಂಧುಗಳು ಮತ್ತು ಗೆಳೆಯರನ್ನು ಸೇರಿಸಿ 30ಕ್ಕೂ ಹೆಚ್ಚು ಜನರನ್ನು ಆತನಿಗೆ ಪರಿಚಯಿಸಿದ್ದೆ. ಅವರೆಲ್ಲರನ್ನೂ ಆತ ವಂಚಿಸಿದ್ದಾನೆ. ನನ್ನ ಪರಿಚಯದಿಂದ ಆತನಿಗೆ ಹಣ ನೀಡಿದವರ ಬೈಗುಳಕ್ಕೆ ನಾನು ಎಷ್ಟೋ ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದಿದ್ದೇನೆ” ಎಂದು ಕ್ರೈಸ್ತ ಮಹಿಳೆಯೊಬ್ಬರು ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿದರು.
ವಿದೇಶದಲ್ಲಿ ಉದ್ಯೋಗದ ಕನಸಿನೊಂದಿಗೆ, ಉತ್ತಮ ಸಂಬಳದ ಆಸೆಯಿಂದ, ನಕಲಿ ಏಜೆನ್ಸಿಗಳಿಗೆ ಹಣ ನೀಡಿ ನೂರಾರು ಜನರು ವಂಚನೆಗೊಳಗಾಗಿದ್ದಾರೆ. ಕಳೆದ ಎರಡು-ಮೂರು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ 400ಕ್ಕೂ ಹೆಚ್ಚು ಜನರು ಇಂತಹ ಮೋಸಕ್ಕೆ ಒಳಗಾಗಿದ್ದಾರೆ. ಆದರೆ, ದಾಖಲಾದ ಪ್ರಕರಣಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಆರೋಪಿಗಳಿಗೆ ಶಿಕ್ಷೆಯಾಗಿದ್ದು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ.
“ಈ ಪ್ರದೇಶದ ಸಾವಿರಾರು ಜನರು ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿದ್ದಾರೆ. ಅವರನ್ನು ಕಂಡು ಇತರರೂ ವಿದೇಶಿ ಉದ್ಯೋಗದ ಕನಸು ಕಾಣುತ್ತಾರೆ. ಕೇಂದ್ರ ಸರ್ಕಾರದ ವಲಸೆ ವಿಭಾಗದಿಂದ ಮಾನ್ಯತೆ ಪಡೆದ ಏಜೆನ್ಸಿಗಳನ್ನು ಸಂಪರ್ಕಿಸಿದರೆ ಯಾವುದೇ ತೊಂದರೆಯಿಲ್ಲ. ಆದರೆ, ಅನಧಿಕೃತ ಮಾರ್ಗದಲ್ಲಿ ವೀಸಾ ಪಡೆಯಲು ಯತ್ನಿಸಿ ವಂಚನೆಗೆ ಒಳಗಾಗುತ್ತಿದ್ದಾರೆ” ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್. ಹೇಳಿದರು.
“ಹಣ ನೀಡಿದವರು ಇಂದಿಲ್ಲದಿದ್ದರೆ ನಾಳೆ ವೀಸಾ ಸಿಗಬಹುದು ಎಂದು ತಿಂಗಳುಗಟ್ಟಲೆ ಕಾಯುತ್ತಾರೆ. ಇದರಿಂದ ವಂಚನೆಯ ಬಗ್ಗೆ ದೂರು ದಾಖಲಾಗುವಾಗ ತಡವಾಗಿರುತ್ತದೆ. ಆಗಲೇ ಆರೋಪಿಗಳು ನೂರಾರು ಜನರನ್ನು ವಂಚಿಸಿ ತಲೆಮರೆಸಿಕೊಂಡಿರುತ್ತಾರೆ” ಎಂದು ಅವರು ವಿವರಿಸಿದರು.
“ವಂಚನೆ ಮಾಡಿರುವ ಆರೋಪಿಗಳು ತಮ್ಮ ವಿರುದ್ಧ ಎಫ್‌ಐಆರ್ ದಾಖಲಾಗುವುದನ್ನೇ ಕಾಯುತ್ತಿರುತ್ತಾರೆ. ಇಂತಹ ಪ್ರಕರಣಗಳಲ್ಲಿ ಆರೋಪಿಗಳಿಗೆ ಏಳು ವರ್ಷಕ್ಕಿಂತ ಕಡಿಮೆ ಶಿಕ್ಷೆಯಿದ್ದು, ಸುಲಭವಾಗಿ ಜಾಮೀನು ಸಿಗುತ್ತದೆ. ಕೆಲವು ವರ್ಷ ಜೈಲಿನಲ್ಲಿದ್ದು ಹೊರಬಂದರೂ, ಅನಧಿಕೃತವಾಗಿ ಗಳಿಸಿದ ಕೋಟಿಗಟ್ಟಲೆ ಹಣಕ್ಕೆ ಏನೂ ಆಗದು ಎಂಬ ದುರಾಲೋಚನೆಯಲ್ಲಿ ಇವರು ಇರುತ್ತಾರೆ” ಎಂದು ಒಬ್ಬ ಪೊಲೀಸ್ ಅಧಿಕಾರಿ ತಿಳಿಸಿದರು.
“ವಿದೇಶದಲ್ಲಿ ಉದ್ಯೋಗದ ಭರವಸೆಯೊಡ್ಡಿ ಹಣ ಪಡೆದು ವಂಚಿಸುವವರನ್ನು ಕಾನೂನಿನ ಕಟ್ಟುಪಾಡಿಗೆ ಒಳಪಡಿಸಲು, ಆರೋಪಿಗಳ ಹಿಂದಿನ ಅಪರಾಧ ಚಟುವಟಿಕೆಗಳ ಮಾಹಿತಿಯನ್ನು ಸಂಗ್ರಹಿಸಿ, ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ (ಕೋಕಾ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳುತ್ತಿದ್ದೇವೆ” ಎಂದು ಅಪರಾಧ ವಿಭಾಗದ ಡಿಸಿಪಿ ಕೆ. ರವಿಶಂಕರ್ ತಿಳಿಸಿದರು.
“ಎಸಿಪಿ ಅಥವಾ ಇನ್ಸ್‌ಪೆಕ್ಟರ್‌ಗಳು ತಮ್ಮ ವ್ಯಾಪ್ತಿಯಲ್ಲಿರುವ ವಿದೇಶಿ ಉದ್ಯೋಗ ಏಜೆನ್ಸಿಗಳ ಕಚೇರಿಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಾರೆ. ಪೊಲೀಸ್ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ವಲಸೆ ನಿಯಮಗಳ ಬಗ್ಗೆ ಇಮಿಗ್ರೇಷನ್ ಅಧಿಕಾರಿಗಳಿಂದ ತರಬೇತಿ ನೀಡಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಇಂತಹ ವಂಚನೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ” ಎಂದು ಅವರು ಹೇಳಿದರು.
ಕಂಪನಿಯಿಂದ 289 ಜನರಿಗೆ ವೀಸಾ ವಂಚನೆ
ಆರೋಪಿಗಳಾದ ದಿಲ್ ಶಾದ್ ಸತ್ತಾರ್ ಖಾನ್ ಮತ್ತು ಸಾಹುಕಾರಿ ಕಿಶೋರ್ ಕುಮಾರ್, ಮಸಿವುಲ್ಲಾ ಖಾನ್ ಎಂಬಾತನನ್ನು ತಮ್ಮ ಸಂಸ್ಥೆಗೆ ಸೇರಿಸಿಕೊಂಡು, ಬೆಂದೂರುವೆಲ್‌ನ ‘ಎಸ್ಸೆಲ್ ವಿಲ್ಕಾನ್’ ಕಟ್ಟಡದಲ್ಲಿ ‘ಹೈರ್ ಗ್ಲೋ ಎಲೆಗಂಟ್ ಓವರ್‌ಸೀಸ್ ಇಂಟರ್‌ನ್ಯಾಷನಲ್ (ಒಪಿಸಿ) ಪ್ರೈ. ಲಿ.’ ಕಂಪನಿಯನ್ನು ಪ್ರಾರಂಭಿಸಿದ್ದರು. ‘ಮರೈನ್ ಆಫ್‌ಶೋರ್’ ಕಂಪನಿಯಿಂದ ಉದ್ಯೋಗಕ್ಕೆ ವೀಸಾ ಕೊಡಿಸುವ ಜಾಹೀರಾತು ನೀಡಿ, 289 ಅಭ್ಯರ್ಥಿಗಳಿಂದ ₹4.5 ಕೋಟಿ ಹಣ ಪಡೆದು ವಂಚಿಸಿದ್ದರು. ಈ ಬಗ್ಗೆ 2025ರ ಮೇ ತಿಂಗಳಲ್ಲಿ ನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಮಾಹಿತಿ ನೀಡಿದರು.
ವಂಚಕ ಆರೋಪಿಯ ಬಂಧನ
ಉದ್ಯೋಗ ವೀಸಾ ಕೊಡಿಸುವುದಾಗಿ ನಂಬಿಸಿ, ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಪಡೆದು 30ಕ್ಕೂ ಹೆಚ್ಚು ಜನರನ್ನು ವಂಚಿಸಿದ ಆರೋಪಿಯಾದ ಸುಧೀರ್ ರಾವ್ ವಿ.ಆರ್. (42) ಎಂಬಾತನನ್ನು 2023ರ ಏಪ್ರಿಲ್‌ನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಆತನ ವಿರುದ್ಧ ಸುರತ್ಕಲ್, ಮಂಗಳೂರು ಪೂರ್ವ, ಮಂಗಳೂರು ದಕ್ಷಿಣ, ಕಂಕನಾಡಿ, ನಗರ, ಮೂಡುಬಿದಿರೆ, ಮತ್ತು ಬಂಟ್ವಾಳ ಠಾಣೆಗಳಲ್ಲಿ ಎಫ್‌ಐಆರ್‌ಗಳು ದಾಖಲಾಗಿವೆ.
ಅನಧಿಕೃತ ಏಜೆನ್ಸಿ ನಡೆಸುವುದು ಅಪರಾಧ
ವಿದೇಶಾಂಗ ವ್ಯವಹಾರ ಸಚಿವಾಲಯದಿಂದ ಅಧಿಕೃತ ಪ್ರಮಾಣಪತ್ರವಿಲ್ಲದೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ವಿದೇಶದಲ್ಲಿ ಉದ್ಯೋಗ ಒದಗಿಸುವ ವ್ಯವಹಾರದಲ್ಲಿ ತೊಡಗುವುದು 1983ರ ವಲಸೆ ಕಾಯ್ದೆಯ ಸೆಕ್ಷನ್ 10ರ ಅಡಿ ಅಪರಾಧವಾಗಿದೆ. ಸೆಕ್ಷನ್ 24ರ ಅಡಿ ಇಂತಹವರಿಗೆ ಶಿಕ್ಷೆ ವಿಧಿಸಬಹುದು ಎಂದು ವಲಸಿಗರ ರಕ್ಷಣಾ ವಿಭಾಗದ ಅಧಿಕಾರಿ ಅವನೀಶ್ ಶುಕ್ಲ ತಿಳಿಸಿದರು. ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. “ವಿದೇಶಕ್ಕೆ ಉದ್ಯೋಗಕ್ಕಾಗಿ ತೆರಳುವವರು ಏಜೆನ್ಸಿಗಳ ಸಹಾಯ ಪಡೆಯುವಾಗ ಅವು ಅಧಿಕೃತವೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಕೇಂದ್ರ ಸರ್ಕಾರದ ವೆಬ್‌ಸೈಟ್ (www.emigrate.gov.in) ಅಥವಾ ವಲಸಿಗರ ರಕ್ಷಣಾ ವಿಭಾಗಕ್ಕೆ (poebengaluru@mea.gov.in) ಇಮೇಲ್ ಮೂಲಕ ಇದನ್ನು ಪರಿಶೀಲಿಸಬಹುದು” ಎಂದು ಅವರು ಸಲಹೆ ನೀಡಿದರು. 1983ರ ವಲಸೆ ಕಾಯ್ದೆಯಡಿ ಏಜೆನ್ಸಿಗಳು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇದಕ್ಕಾಗಿ ಪಿಒಇ ಸಹಾಯವಾಣಿ (1800-11-3090) ಸಂಪರ್ಕಿಸಬಹುದು ಎಂದರು.
ಪ್ರಮುಖ ದಾಖಲಾದ ಪ್ರಕರಣಗಳು (2023ರ ನಂತರ)
• ಕಂಕನಾಡಿಯ ‘ದಿ ಲೆಜಂಡ್ಸ್ ಐಇಎಲ್‌ಟಿಎಸ್’ ಸಂಸ್ಥೆಯ ಹೆಸರಿನಲ್ಲಿ ಜಾಹೀರಾತು ನೀಡಿ, ಜಿಲ್ಲೆಯ ನೂರಾರು ಜನರನ್ನು ವಂಚಿಸಿದ ಆರೋಪದ ಮೇಲೆ ಅಲ್ವಿನ್ ಡಿಮೆಲ್ಲೊ ವಿರುದ್ಧ ವಿವಿಧ ಠಾಣೆಗಳಲ್ಲಿ ದೂರು.
• ಸಿಂಗಪುರದಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ₹4.70 ಲಕ್ಷ ಪಡೆದು ಮಹಿಳೆಯನ್ನು ವಂಚಿಸಿದ ಬಗ್ಗೆ 2024ರ ಆಗಸ್ಟ್‌ನಲ್ಲಿ ಸುರತ್ಕಲ್ ಠಾಣೆಯಲ್ಲಿ ಎಫ್‌ಐಆರ್.
• ಉದ್ಯೋಗ ವೀಸಾ ಕೊಡಿಸುವುದಾಗಿ ₹1.97 ಲಕ್ಷ ಪಡೆದು ವಂಚಿಸಿದ ಆರೋಪದ ಮೇಲೆ ಕದ್ರಿ ಶಿವಭಾಗ್‌ನ ಮರಿಯ ಜೋಸೆಫ್ (54) ಮತ್ತು ಜೋಸೆಫ್ (59) ವಿರುದ್ಧ 2024ರ ಆಗಸ್ಟ್‌ನಲ್ಲಿ ಬಜಪೆ ಠಾಣೆಯಲ್ಲಿ ಎಫ್‌ಐಆರ್.
• ಇಸ್ರೇಲ್‌ನಲ್ಲಿ ಉದ್ಯೋಗ ವೀಸಾ ಕೊಡಿಸುವುದಾಗಿ ₹7.5 ಲಕ್ಷ ಪಡೆದು ಮಹಿಳೆಯನ್ನು ವಂಚಿಸಿದ ಬಗ್ಗೆ 2025ರ ಜನವರಿಯಲ್ಲಿ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಎಫ್‌ಐಆರ್.
• ಉದ್ಯೋಗ ವೀಸಾ ಭರವಸೆಯೊಡ್ಡಿ ₹19.20 ಲಕ್ಷ ವಂಚಿಸಿದ ಆರೋಪದ ಮೇಲೆ ಮೊಹಮ್ಮದ್ ಅಜ್ಞಾನ್ ಮತ್ತು ತೌಸೀಫ್ ವಿರುದ್ಧ 2025ರ ಅಕ್ಟೋಬರ್ 28ರಂದು ಕಂಕನಾಡಿ ಠಾಣೆಯಲ್ಲಿ ಎಫ್‌ಐಆರ್.
“ವಿದೇಶದಲ್ಲಿ ಉದ್ಯೋಗ ಒದಗಿಸುವ ಏಜೆನ್ಸಿಗಳು ಅಧಿಕೃತವೇ ಎಂಬುದನ್ನು ಪರಿಶೀಲಿಸದೆ ವ್ಯವಹಾರ ಮಾಡಬಾರದು. ಇದರಿಂದ ಕೈಸುಟ್ಟುಕೊಳ್ಳುವ ಸಾಧ್ಯತೆ ಇದೆ” – ಸುಧೀರ್ ಕುಮಾರ್ ರೆಡ್ಡಿ ಸಿ.ಎಚ್., ಮಂಗಳೂರು ಪೊಲೀಸ್ ಕಮಿಷನರ್.
“ವಿದೇಶದಲ್ಲಿ ಉದ್ಯೋಗ ಭರವಸೆಯೊಡ್ಡಿ ಹಣ ಪಡೆಯುವವರ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು. ಯುವ ವಿದ್ಯಾರ್ಥಿಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ” – ಕೆ. ರವಿಶಂಕರ್, ಡಿಸಿಪಿ, ಅಪರಾಧ ತಡೆ ವಿಭಾಗ.
ಮಂಗಳೂರು
Mulki-ಮೂಲ್ಕಿ: ಚಲಿಸುತ್ತಿದ್ದ ಮಂಗಳೂರು – ಕಾರ್ಕಳ ಎಕ್ಸ್ ಪ್ರೆಸ್ ಬಸ್‌ಗೆ ಬಡಿದ ಗಿಡುಗ: ಗಾಜು ಪುಡಿಪುಡಿ, ಪುತ್ತೂರು ಮೂಲದ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅವಘಡ
ಮೂಲ್ಕಿ ಸಮೀಪದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಮಂಗಳೂರು- ಕಾರ್ಕಳ ಎಕ್ಸ್‌ಪ್ರೆಸ್ ಬಸ್‌ನ ಮುಂಭಾಗದ ಗಾಜಿಗೆ ಗಿಡುಗವೊಂದು ಬಡಿದ ಪರಿಣಾಮ ಗಾಜು ಪುಡಿಪುಡಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರು: ಮೂಲ್ಕಿ ಸಮೀಪದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಮಂಗಳೂರು- ಕಾರ್ಕಳ ಎಕ್ಸ್‌ಪ್ರೆಸ್ ಬಸ್‌ನ ಮುಂಭಾಗದ ಗಾಜಿಗೆ ಗಿಡುಗವೊಂದು ಬಡಿದ ಪರಿಣಾಮ ಗಾಜು ಪುಡಿಪುಡಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಲಕ್ಷ್ಮಿ ಗಣೇಶ್ ಹೆಸರಿನ ಎಕ್ಸ್‌ಪ್ರೆಸ್ ಬಸ್ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಗಿಡುಗ ಬಸ್‌ನ ಮುಂಭಾಗದ ಗಾಜಿಗೆ ಬಡಿದಿದೆ. ಇದರಿಂದ ಗಾಜು ಒಡೆದು ಚೂರುಚೂರಾಗಿದೆ.
ಘಟನೆಯಿಂದ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾದರೂ, ಚಾಲಕ ಹರೀಶ್ ಪೂಜಾರಿ ಅವರು ವಿಚಲಿತರಾಗದೆ ಸಮಯಪ್ರಜ್ಞೆಯಿಂದ ಬಸ್ ನಿಲ್ಲಿಸಿದ್ದಾರೆ. ಅವರ ಈ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬಸ್ ಚಾಲಕ ಪುತ್ತೂರಿನ ಸಂಟ್ಯಾರು ಕೂರೇಲು ನಿವಾಸಿ ಹರೀಶ್ ಪೂಜಾರಿ ಮೇಲೆ ಗಾಜಿನ ಚೂರುಗಳು ಬಿದ್ದು ಗಾಯಗೊಂಡಿದ್ದರು ಅವರು ವೇಗವಾಗಿ ಹೋಗುತ್ತಿದ್ದ ಬಸ್ ನ್ನು ತಕ್ಷಣ ನಿಯಂತ್ರಿಸಿದ್ದಾರೆ. ಅವಘಡ ಸಂದರ್ಭ ಡ್ರೈವರ್ ಸ್ಟೇರೀಂಗ್ ಕೈಬಿಟ್ಟದ್ದರೂ ಬಸ್ ಡಿವೈಡರ್ ಹಾರಿ ಭಾರೀ ಅವಘಡ ಸಂಭವಿಸುತ್ತಿತ್ತು ಎನ್ನಲಾಗಿದೆ.
ಮಂಗಳೂರು
Ujire-ಭಾರೀ ಜನಸ್ತೋಮದೊಂದಿಗೆ ಸೌಜನ್ಯ ನ್ಯಾಯದ ನಡಿಗೆ
ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.

ಮಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.
ಉಜಿರೆಯಿಂದ ಆರಂಭವಾದ ಬೃಹತ್ ಜಾಥಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು, ಮೌನ ಮೆರವಣಿಗೆಯ ಮೂಲಕ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಲಾಯಿತು. ಸುಮಾರು ಐದು ಕಿಲೋಮೀಟರ್ ದೂರದವರೆಗೆ ಹೋರಾಟಗಾರರು ನಡಿಗೆಯಲ್ಲಿ ಸಾಗಲಿದ್ದಾರೆ.
ನ್ಯಾಯದ ನಡಿಗೆಯ ಬಳಿಕ ಬೆಳ್ತಂಗಡಿಯ ಮೈದಾನದಲ್ಲಿ ಬೃಹತ್ ಅಭಿನಂದನಾ ಸಮಾವೇಶ ನಡೆಯಲಿದೆ. ಸೌಜನ್ಯ ಪರವಾಗಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ವಕೀಲರ ತಂಡಕ್ಕೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ವಕೀಲರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳೂರು
MRPL accident-MRPL ಅವಘಡದಲ್ಲಿ ಮೃತಪಟ್ಟ ಕರ್ಕಡ ಕುಟುಂಬಕ್ಕೆ EPFO ಕ್ಲೈಮ್ ಸಂದಾಯ
MRPL ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO), ಮಂಗಳೂರು ಪ್ರಾದೇಶಿಕ ಕಚೇರಿಯು, 30.09.2026 ರಂದು ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನಲ್ಲಿ ಸಂಭವಿಸಿದ ಕೈಗಾರಿಕಾ ಅಪಘಾತದಲ್ಲಿ ಮರಣ ಹೊಂದಿದ ಭವಿಷ್ಯ ನಿಧಿ ಚಂದಾದಾರರಾದ ದಿವಂಗತ ಮನೀಶ್ ಕರ್ಕಡ ಅವರ ಕುಟುಂಬದ ಅವಲಂಬಿತರ ಸಾಮಾಜಿಕ ಭದ್ರತಾ ಸೌಲಭ್ಯಗಳ ಕ್ಷೇಮುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗಿದೆ.
ಮಂಗಳೂರು : MRPL ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO), ಮಂಗಳೂರು ಪ್ರಾದೇಶಿಕ ಕಚೇರಿಯು, 30.09.2026 ರಂದು ಮಂಗಳೂರು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ನಲ್ಲಿ ಸಂಭವಿಸಿದ ಕೈಗಾರಿಕಾ ಅಪಘಾತದಲ್ಲಿ ಮರಣ ಹೊಂದಿದ ಭವಿಷ್ಯ ನಿಧಿ ಚಂದಾದಾರರಾದ ದಿವಂಗತ ಮನೀಶ್ ಕರ್ಕಡ ಅವರ ಕುಟುಂಬದ ಅವಲಂಬಿತರ ಸಾಮಾಜಿಕ ಭದ್ರತಾ ಸೌಲಭ್ಯಗಳ ಕ್ಷೇಮುಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲಾಗಿದೆ.
ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO) ವತಿಯಿಂದ ಕುಟುಂಬಕ್ಕೆ ಪಾವತಿಸಬೇಕಾದ ಉದ್ಯೋಗಿಗಳ ಭವಿಷ್ಯ ನಿಧಿ ಹಾಗೂ ಉದ್ಯೋಗಿಗಳ ಠೇವಣಿ ಆಧಾರಿತ ವಿಮಾ ಸೌಲಭ್ಯಗಳ ಕ್ಷೇಮುಗಳನ್ನು ಇತ್ಯರ್ಥಪಡಿಸಲಾಗಿದೆ.
ಇದರೊಂದಿಗೆ ಉದ್ಯೋಗಿಗಳ ಪಿಂಚಣಿ ಯೋಜನೆ 2026ರ ಅಡಿಯಲ್ಲಿ, ಮಾಸಿಕ ಪಿಂಚಣಿಯನ್ನೂ ಮಂಜೂರು ಮಾಡಿ ಪಾವತಿ ಪ್ರಾರಂಭಿಸಲಾಗಿದೆ. ಈ ಎಲ್ಲಾ ಸೌಲಭ್ಯಗಳನ್ನು 08.10.2026 ರಂದು ಇತ್ಯರ್ಥಪಡಿಸಿ ಜಾರಿಗೊಳಿಸಲಾಗಿದೆ ಹಾಗೂ ಮೊತ್ತವನ್ನು ಪಾವತಿಸಲಾಗಿದೆ.
ದುಃಖತಪ್ತ ಕುಟುಂಬಕ್ಕೆ ಸಂತಾಪ ಹಾಗೂ ಸಾಂತ್ವನ ಸಲ್ಲಿಸುವ ಉದ್ದೇಶದಿಂದ, ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಾದ ಸಂದೀಪ್ ಬಿಸ್ವಾಸ್ ಅವರು, ಸಹಾಯಕ ಭವಿಷ್ಯ ನಿಧಿ ಆಯುಕ್ತರಾದ ಅಂಕಿತ್ ಸಿಂಗ್ ಹಾಗೂ ಪ್ರವರ್ತನಾಧಿಕಾರಿಯಾದ ಶ್ರೀಮತಿ ಅನಿತಾ ಆರ್ ಅವರೊಂದಿಗೆ 09.10.2026 ರಂದು ದಿವಂಗತ ಶ್ರೀ ಮನೀಶ್ ಕರ್ಕಡ ಅವರ ನಿವಾಸಕ್ಕೆ ಭೇಟಿ ನೀಡಿ, ಫಲಾನುಭವಿಗೆ ಪಿಂಚಣಿ ಪಾವತಿ ಆದೇಶವನ್ನು (PPO) ಹಸ್ತಾಂತರಿಸಿದರು. ಈ ಭೇಟಿಯು ಸಂಕಷ್ಟದ ಸಂದರ್ಭದಲ್ಲಿ ತನ್ನ ಸದಸ್ಯರ ಕುಟುಂಬಗಳೊಂದಿಗೆ ನಿಲ್ಲುವ EPFO ಸಂಸ್ಥೆಯ ಮಾನವೀಯ ಕಾಳಜಿ ಮತ್ತು ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಅನಿರೀಕ್ಷಿತ ದುರಂತಗಳ ಸಂದರ್ಭದಲ್ಲಿ ತನ್ನ ಸದಸ್ಯರ ಕುಟುಂಬಗಳಿಗೆ ಸಲ್ಲಬೇಕಾದ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಸಕಾಲದಲ್ಲಿ ಒದಗಿಸುವುದು EPFO ಸಂಸ್ಥೆಯ ಬದ್ಧತೆಯಾಗಿದೆ ಎಂಬುದನ್ನು ಈ ತ್ವರಿತ ಇತ್ಯರ್ಥವು ಮತ್ತೊಮ್ಮೆ ದೃಢಪಡಿಸಿದೆ.
EPFO ಸಂಸ್ಥೆಯು ಮೃತ ಸದಸ್ಯರ ಕುಟುಂಬಕ್ಕೆ ತನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದು, ಈ ಕಷ್ಟದ ಸಮಯದಲ್ಲಿ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡಲು ಬದ್ಧವಾಗಿದೆ.
-
ನಿಧನ ವಾರ್ತೆ12 hours agoMumbai-ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ದುರಂತ ಅಂತ್ಯ? ಸರಪಳಿಯಿಂದ ಕಾಲು ಕಟ್ಟಿದ ಸ್ಥಿತಿಯಲ್ಲಿ ಶವ ಪತ್ತೆ
-
ಮಂಗಳೂರು10 hours agoUjire-ಭಾರೀ ಜನಸ್ತೋಮದೊಂದಿಗೆ ಸೌಜನ್ಯ ನ್ಯಾಯದ ನಡಿಗೆ
-
ಮಂಗಳೂರು8 hours agoMulki-ಮೂಲ್ಕಿ: ಚಲಿಸುತ್ತಿದ್ದ ಮಂಗಳೂರು – ಕಾರ್ಕಳ ಎಕ್ಸ್ ಪ್ರೆಸ್ ಬಸ್‌ಗೆ ಬಡಿದ ಗಿಡುಗ: ಗಾಜು ಪುಡಿಪುಡಿ, ಪುತ್ತೂರು ಮೂಲದ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅವಘಡ
-
ಅಂತರ ರಾಜ್ಯ12 hours agoArrested-ಕಾಸರಗೋಡು: ಮದುವೆಯ ನೆಪದಲ್ಲಿ ಹತ್ತಾರು ಯುವತಿಯರಿಗೆ ವಂಚನೆ: ಮದುವೆಯಾದ ಮೂರೇ ದಿನಕ್ಕೆ ಚಿನ್ನ, ಹಣದೊಂದಿಗೆ ಪರಾರಿ; ಆರೋಪಿ ಬಿಜು ಆಂಟನಿ ಬಂಧನ
-
ರಾಜ್ಯ11 hours agoRobotic technology-ರೋಬೋಟಿಕ್ ತಂತ್ರಜ್ಞಾನದ ಅದ್ಭುತ: ಸ್ಪೇನ್ನಲ್ಲಿ ಕುಳಿತು ಕರ್ನಾಟಕದ ಮಹಿಳೆಗೆ ಹೃದಯ ಶಸ್ತ್ರಚಿಕಿತ್ಸೆ
-
ಅಂತರ ರಾಜ್ಯ11 hours agoJantar Mantar-ಸಿಜೆಪಿ ಪ್ರತಿಭಟನೆಗೆ ದೆಹಲಿಯಲ್ಲಿ ಬಿಗಿ ಭದ್ರತೆ – ಪಂಚರ್ ಆಗಲು ರಸ್ತೆಗಳಿಗೆ ತಡೆಬೇಲಿ..! ವಿಮಾನದಲ್ಲೇ ಅಭಿಜಿತ್ ದಿಪ್ಕೆ ಪೊಲೀಸ್ ವಶಕ್ಕೆ..! ಸಾವಿರಕ್ಕೂ ಮಿಕ್ಕಿ ಪ್ರತಿಭಟನಾಕಾರರೂ ವಶಕ್ಕೆ-ಸುಪ್ರೀಂ ಕೋರ್ಟ್ ವಕೀಲರಿಗೆ ತಡೆ..! ತೀವ್ರ ಅಡೆತಡೆಗಳ ನಡುವೆ ಜಂತರ್ ಮಂತರ್ ಗೆ ಹರಿದು ಬರುತ್ತಿರುವ ಜನಸಾಗರ
-
ಅಂತರ ರಾಜ್ಯ11 hours agoBy-election results-ಉಪಚುನಾವಣೆ ಫಲಿತಾಂಶ: ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬಿಜೆಪಿಗೆ ಭರ್ಜರಿ ಮುನ್ನಡೆ, ತಮಿಳುನಾಡಿನಲ್ಲಿ ಟಿವಿಕೆ ಅಬ್ಬರ
-
ಅಂತರ ರಾಜ್ಯ13 hours agoDhruv Rati-BIG BREAKING: ದೆಹಲಿಯ ಜಂತರ್ ಮಂತರ್ ನಲ್ಲಿ ಸಿಜೆಪಿ ಪ್ರತಿಭಟನೆ ಹಿನ್ನಲೆ – ಯೂಟ್ಯೂಬರ್ ಧ್ರುವ್ ರಾಠಿ ಪೊಲೀಸ್ ವಶಕ್ಕೆ?


















