ರಾಜಕೀಯ
Mathandur-ಮುಡಾ ಮಾದರಿ ಪುತ್ತೂರು ಸರ್ಕಾರಿ ಆಸ್ಪತ್ರೆ ಜಾಗ ನುಂಗಲು ಕಾಂಗ್ರೆಸ್ ಹಾಗೂ ಶಾಸಕ ಅಶೋಕ್ ರೈ ಯತ್ನ : ಮಾಜಿ ಶಾಸಕ ಮಠಂದೂರು ಗಂಭೀರ ಆರೋಪ
ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಮಂಜೂರಾದ ಜಮೀನನ್ನು ರದ್ದು ಪಡಿಸಿ ಪುತ್ತೂರು ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಗೆ ಮಂಜೂರು ನೀಡುವ ಹುನ್ನಾರ ನಡೆಯುತ್ತಿದೆ. ವಕ್ಸ್ ಆಸ್ತಿ, ಮೂಡಾದಂತೆ ಈಗ ಪುತ್ತೂರಿನಲ್ಲಿ ಸರಕಾರಿ ಆಸ್ಪತ್ರೆಯ ಜಾಗ ನುಂಗಲು ಮುಂದಾಗಿದ್ದಾರೆ. ಟ್ರಸ್ಟ್ ಹೆಸರಿನಲ್ಲಿ ಸರಕಾರಿ ಆಸ್ಪತ್ರೆಯ ಕಬಳಿಕೆಯ ಹುನ್ನಾರ ನಡೆಯುತ್ತಿದ್ದು ಇದನ್ನು ಬಿಜೆಪಿ ಖಂಡಿಸುತ್ತಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಎಚ್ಚರಿಸಿದ್ದಾರೆ.
ಪುತ್ತೂರು: ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಮಂಜೂರಾದ ಜಮೀನನ್ನು ರದ್ದು ಪಡಿಸಿ ಪುತ್ತೂರು ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಗೆ ಮಂಜೂರು ನೀಡುವ ಹುನ್ನಾರ ನಡೆಯುತ್ತಿದೆ. ವಕ್ಸ್ ಆಸ್ತಿ, ಮೂಡಾದಂತೆ ಈಗ ಪುತ್ತೂರಿನಲ್ಲಿ ಸರಕಾರಿ ಆಸ್ಪತ್ರೆಯ ಜಾಗ ನುಂಗಲು ಮುಂದಾಗಿದ್ದಾರೆ. ಟ್ರಸ್ಟ್ ಹೆಸರಿನಲ್ಲಿ ಸರಕಾರಿ ಆಸ್ಪತ್ರೆಯ ಕಬಳಿಕೆಯ ಹುನ್ನಾರ ನಡೆಯುತ್ತಿದ್ದು ಇದನ್ನು ಬಿಜೆಪಿ ಖಂಡಿಸುತ್ತಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಎಚ್ಚರಿಸಿದ್ದಾರೆ.
ನ.21ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಠಾಚಾರ, ಹಗರಣಗಳು ಸ್ವಜನ ಪಕ್ಷಪಾತದಲ್ಲಿ ತುಂಬಿ ತುಳುಕಿದೆ. ದ.ಕ ಜಿಲ್ಲೆ ಇದಕ್ಕೆ ಹೊರತಾಗಿತ್ತು. ಆದರೆ ಈಗ ರಾಜ್ಯದಲ್ಲಿ ನಡೆಯುವ ವಿದ್ಯಾಮಾನಗಳು ಪುತ್ತೂರಿನಲ್ಲಿಯೂ ನಡೆಯುತ್ತಿದೆ. ಸರಕಾರಿ ಆಸ್ಪತ್ರೆಗೆ ಕಾದಿರಿಸಿದ ಜಾಗವನ್ನು ಖಾಸಗಿ ಟ್ರಸ್ಟ್ ಒಂದಕ್ಕೆ ನೀಡಲು ತಹಶೀಲ್ದಾರ್, ನಗರ ಸಭೆ, ಸರಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಯವರಿಗೆ ಪತ್ರವೊಂದು ದೊರೆತಿದ್ದು ಇನ್ನು ಮುಂದೆ ಪುತ್ತೂರಿನಲ್ಲಿ ಯಾವುದೇ ಇಲಾಖೆ ಜಾಗ ಉಳಿಯುವುದಿಲ್ಲ ಎಂಬ ಅನುಮಾನ ಕಾಡುತ್ತಿದೆ. ಪುತ್ತೂರಿನ ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ನಿಂದ ಅಶೋಕ್ ಕುಮಾರ್ ರೈ ಎಂಬವರ ಹೆಸರಿನಲ್ಲಿ 16-07-2024ರಂದು ಮುಖ್ಯಮಂತ್ರಿಯವರಿಗೆ ಪತ್ರವೊಂದನ್ನು ಬರೆದಿದ್ದು ಟ್ರಸ್ಟ್ ಕಚೇರಿ ಕಟ್ಟಡ ನಿರ್ಮಾಣಕ್ಕೆ ನಗರ ಸಭಾ ವ್ಯಾಪ್ತಿಯ ಸ.ನಂ 131/14ಎರಲ್ಲಿ 0.80ರಲ್ಲಿ ಸಾರ್ವಜನಿಕ ಆಸ್ಪತ್ರೆಯ ಉದ್ದೇಶಗಳಿಗೆ ಕಾಯ್ದಿರಿಸಿದ್ದ ಜಮೀನನ್ನು ರದ್ದುಪಡಿಸಿ ಅದರಲ್ಲಿ 0.30ಸೆಂಟ್ಸ್ ಜಾಗವನ್ನು ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಇದರ ಕಟ್ಟಡ ನಿರ್ಮಾಣಕ್ಕೆ ಕಾಯ್ದಿರಿಸುವಂತೆ ಇಲಾಖೆ ಶಿಪಾರಸ್ಸು ಮಾಡುವಂತೆ ಪತ್ರದಲ್ಲಿ ತಿಳಿಸಲಾಗಿದೆ.
ಟ್ರಸ್ಟ್ ಪತ್ರಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸದ್ರಿ ಟ್ರಸ್ಟ್ಗೆ ಜಮೀನು ನೀಡುವ ಬಗ್ಗೆ ಕ್ರಮ ವಹಿಸಲು ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದು 4 ತಿಂಗಳ ಒಳಗಾಗಿ ಸದ್ರಿ ಜಮೀನಿನ ಮಂಜೂರಾತಿ ಮಾಡುವಂತೆ ಆದೇಶಿಸಿದ್ದಾರೆ. ಅಪರ ಮುಖ್ಯ ಕಾರ್ಯದರ್ಶಿಯವರು ಕ್ರಮ ವಹಿಸಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿಗಳು ಸದರಿ ಆಸ್ಪತ್ರೆಯ ಜಾಗವನ್ನು ಉಲ್ಲೇಖಿಸಿ 30ಸೆಂಟ್ಸ್ ಬದಲು 10ಸೆಂಟ್ಸ್ ಜಾಗವನ್ನು ಮಂಜೂರು ಮಾಡಲು ಭೂ ಮಾಪನಾ ಇಲಾಖೆ, ತಹಶೀಲ್ದಾರ್, ಕಂದಾಯ ನಿರೀಕ್ಷಕರಿಗೆ ಆದೇಶಿಸಿದ್ದಾರೆ. ತಹಶೀಲ್ದಾರ್ರವರು ಪತ್ರಿಕಾ ಪ್ರಕಟಣೆಗಾಗಿ ನಗರ ಸಭೆ ಹಾಗೂ ಇಲಾಖಾ ಅಭಿಪ್ರಾಯಕ್ಕಾಗಿ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಿಗೆ ಪತ್ರ ಕಳುಹಿಸಿದ್ದಾರೆ. ಜಮೀನು ಮಂಜೂರು ಮಾಡಲು ತುರ್ತಾಗಿ ಮುಂದಾಗಿದ್ದು ನೋಡಿದರೆ ಇದರ ಹಿಂದೆ ಯಾವುದೋ ಪ್ರಬಲವಾದ ಶಕ್ತಿ ಇದ್ದಂತೆ ಕಾಣುತ್ತಿದೆ ಎಂದು ಆರೋಪಿಸಿದರು.
ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಯಾರದ್ದು? ಅದು ಯಾವಾಗ ಆರಂಭವಾಯಿತು. ಪುತ್ತೂರಿನಲ್ಲಿ ಅದರ ಕಚೇರಿ ಎಲ್ಲಿದೆ. ಅದರ ಸೇವೆಗಳು ಏನು. ಈ ಟ್ರಸ್ಟ್ನ ಪದಾಧಿಕಾರಿಗಳು ಯಾರು ? ಅದರ ಕಾರ್ಯವ್ಯಾಪ್ತಿ ಏನು ? ಅದು ಪುತ್ತೂರು ತಾಲೂಕಿನಲ್ಲಿ ನಡೆಸಿದ ಜನಪರ ಕಾರ್ಯಗಳು ಏನು ? ಸದರಿ ಟ್ರಸ್ಟ್ ಇದರ ಉದ್ದೇಶ ಏನು ? ಸದರಿ ಟ್ರಸ್ಟ್ ಇದಕ್ಕೆ ಸಾರ್ವಜನಿಕ ಆಸ್ಪತ್ರೆ ಇದಕ್ಕೆ ಮೀಸಲಾದ ಜಮೀನನ್ನು ನೀಡಬೇಕಾದ ಅಗತ್ಯತೆ ಏನು ? ಸರಕಾರಿ ಇಲಾಖೆಗಳಿಗೆ ಸ್ವಂತ ಸೂರು ಇಲ್ಲದ ಸಮಯದಲ್ಲಿ ಖಾಸಗಿ ಟ್ರಸ್ಟ್ ಗೆ ಸಾರ್ವಜನಿಕ ಆಸ್ಪತ್ರೆಯ ಜಮೀನನ್ನು ರದ್ದು ಪಡಿಸಿ ನೀಡುವ ಅಗತ್ಯತೆ ಏನಿದೆ.? ಈ ಮೊದಲೇ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಹಲವಾರು ಖಾಸಗಿ ಟ್ರಸ್ಟ್ ಗಳು, ಇಲಾಖೆಗಳು, ಸಮುದಾಯದ ಅರ್ಜಿಗಳನ್ನು ಕಂದಾಯ ಇಲಾಖೆಯು ಇಷ್ಟು ತ್ವರಿತವಾಗಿ ಯಾಕೆ ವಿಲೇಮಾಡಲು ಬಯಸಲಿಲ್ಲ? ಈ ಹಿಂದೆಯೇ ಅರ್ಜಿ ನೀಡಿದ ಸಂಸ್ಥೆಗಳ, ಸಮುದಾಯಗಳ ಇಲಾಖೆಗಳ ಅರ್ಜಿಗಳನ್ನು ಬದಿಗಿರಿಸಿ ಈ ಖಾಸಗಿ ಟ್ರಸ್ಟ್ ಇದಕ್ಕೆ ಯಾಕೆ ಜಮೀನು ನೀಡಲು ಕಂದಾಯ ಇಲಾಖೆ ಮುಂದಾಗಿದೆ ಎಂದು ಅವರು ಪ್ರಶ್ನಿಸಿದರು.
ವ್ಯಾಲ್ಯುವೇಬಲ್ ಜಾಗ ಮಂಜೂರು ಮಾಡುವ ಭರವಸೆ:
ಶಾಸಕ ಅಶೋಕ್ ಕುಮಾರ್ ರೈಯವರು ಕೆಲದಿನಗಳ ಹಿಂದೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿ ಕಟ್ಟಡ ನಿರ್ಮಾಣಕ್ಕೆ ಪುತ್ತೂರಿನ ಹೃದಯ ಭಾಗದಲ್ಲಿ ವ್ಯಾಲ್ಯುವೇಬಲ್ ಜಾಗವನ್ನು ಮಂಜೂರು ಮಾಡಲಾಗುವುದಾಗಿ ತಿಳಿಸಿದ್ದರು. ಆ ವ್ಯಾಲ್ಯುವೇಬಲ್ ಜಾಗ ಇದೇ ಇರಬಹುದಾ? ಪ್ರಿಯದರ್ಶಿನಿ ಚಾರಿಟೇಬಲ್ ಟ್ರಸ್ಟ್ ಮೂಲಕ ಸರಕಾರಿ ಆಸ್ಪತ್ರೆಯ ಜಾಗವನ್ನು ಕಬಳಿಸಿ, ಬಳಿಕ ಅದನ್ನು ಕಾಂಗ್ರೆಸ್ ಪಕ್ಷದ ಕಚೇರಿಗೆ ನೀಡುವ ಹುನ್ನಾರ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು. ಮೌಲ್ಯ ಮಾಪಕರ ಪ್ರಕಾರ ಇಲ್ಲಿ ಸೆಂಟ್ಸ್ ರೂ.30ಲಕ್ಷದಷ್ಟು ಬೆಲೆಯಿದೆ. 30 ಸೆಂಟ್ಸ್ಗೆ 9 ಕೋಟಿ ಬೆಲೆಯಿದೆ. ಇಂತಹ ಬೆಲೆಯ ಜಾಗವನ್ನು ಟ್ರಸ್ಟ್ ನೀಡುವ ಉದ್ದೇಶವೇನು ಎಂದು ಪ್ರಶ್ನಿಸಿದರು.
ಈ ಹಿಂದೆ ಶಕುಂತಳಾ ಟಿ ಶೆಟ್ಟಿ ಯವರು ಶಾಸಕರಾಗಿದ್ದ ಸಂದರ್ಭದಲ್ಲಿ ಮೆಡಿಕಲ್ ಕಾಲೇಜಿಗೆ 40ಎಕರೆ ಜಾಗವನ್ನು ಕಾದಿರಿಸಿದ್ದರು. ನನ್ನ ಅವಧಿಯಲ್ಲಿ ಅದನ್ನು ಮುಂದುವರಿಸಿದಾಗ ಮೆಡಿಕಲ್ ಕಾಲೇಜು ಮಂಜೂರಾಗಬೇಕಾದರೆ 300ಬೆಡ್ ಆಸ್ಪತ್ರೆಯ ಅವಶ್ಯಕತೆಯಿತ್ತು. ಅದಕ್ಕಾಗಿ ಆಸ್ಪತ್ರೆ ಸುತ್ತ ಮುತ್ತಲಿನ ಉಪನೋಂದಾವಣಾಧಿಕಾರಿ ಕಚೇರಿ, ಸಬ್ ಜೈಲು, ಕಂದಾಯ ಇಲಾಖೆಯ ಜಾಗ ಹಾಗೂ ಅಂಬೇಡ್ಕರ್ ಭವನಕ್ಕೆ ಕಾದಿರಿಸಿದ 19 ಸೆಂಟ್ಸ್ ಜಾಗ ಸೇರಿದಂತೆ ಒಟ್ಟು 6 ಎಕರೆ ಜಾಗವನ್ನು ಸರಕಾರಿ ಆಸ್ಪತ್ರೆಯ ಉದ್ದೇಶಗಳಿಗೆ ಪಹಣಿಯೂ ರಚಿಸಲಾಗಿದೆ. 300 ಬೆಡ್ ಆಸ್ಪತ್ರೆಯ ನಿರ್ಮಾಣಕ್ಕೆ ನೀಲ ನಕಾಶೆ ಸಿದ್ದಪಡಿಸಿ ರೂ.180ಕೋಟಿ ಅಂದಾಜು ಪಟ್ಟಿಯನ್ನು ತಯಾರಿಸಲಾಗಿತ್ತು ಎಂದರು.
ವಿಧಾನ ಸೌಧವನ್ನೂ ಟ್ರಸ್ಟ್ ಗೆ ಹಸ್ತಾಂತರಿಸಬಹುದು:
ಎಲ್ಲೆಲ್ಲಿಯೂ ಜಾಗವನ್ನು ನುಂಗುವುದನ್ನು ಕೇಳಿದ್ದೇವೆ. ಒಬ್ಬ ಮುಖ್ಯಮಂತ್ರಿಯೇ ನೇರವಾಗಿ ಟ್ರಸ್ಟ್ನ ಅಧ್ಯಕ್ಷರಾಗಿರುವ ಶಾಸಕರಿಗೆ ಆರೋಗ್ಯ ಇಲಾಖೆಯ ಜಾಗ ರದ್ದು ಮಾಡಿ ಟ್ರಸ್ಟ್ ನೀಡುವ ಉದ್ದೇಶ ಏನು? ಬಡವರ ಆಸ್ಪತ್ರೆಯ ಜಾಗವನ್ನು ಈ ರೀತಿಯಾಗಿ ನುಂಗುವುದಾದರೆ ಮುಂದಿನ ದಿನಗಳಲ್ಲಿ ವಿಧಾನ ಸೌಧದ ಜಾಗವನ್ನೂ ಯಾವುದೋ ಟ್ರಸ್ಟ್ಗೆ ಈ ಸರಕಾರ ಹಾಗೂ ಮುಖ್ಯ ಮಂತ್ರಿಗಳು ಹಸ್ತಾಂತರಿಸಲು ಹಿಂದೆ ಮುಂದೆ ನೋಡಲಿಕ್ಕಿಲ್ಲ. ಜನಪ್ರತಿನಿಧಿಗಳಿಗೆ ಸಾರ್ವಜನಿಕ ಹಿತಾಶಕ್ತಿಯಿರಬೇಕು. ಸಾರ್ವಜನಿಕ ಆಸ್ತಿಗಳನ್ನು ರಕ್ಷಣೆ ಮಾಡಬೇಕಾದ ಅವರೇ ನುಂಗುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಜಿಲ್ಲೆಯ 6 ಶಾಸಕರು ವಿಧಾನ ಸಭೆಯಲ್ಲಿ ಹಾಗೂ 2 ಪರಿಷತ್ ಸದಸ್ಯರು ವಿಧಾನ ಪರಿಷತ್ನಲ್ಲಿ ಧ್ವನಿ ಎತ್ತಲಿದ್ದಾರೆ. ಪಕ್ಷದ ಮುಖಾಂತರ ಕಾನೂನಾತ್ಮಕ ಹೋರಾಟ ನಡೆಯಲಿದೆ. ಸಂಸದರು, ಶಾಸಕರು, ಪರಿಷತ್ ಸದಸ್ಯರು ಹಾಗೂ ಪಕ್ಷದ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಇದಕ್ಕೆ ಪ್ರೇರಣೆ ನೀಡುವ, ಕಾನೂನು ಬಾಹಿರವಾಗಿ ನಡೆಯುವ ಭ್ರಷ್ಟ ಅಧಿಕಾರಿಗಳ ವಿರುದ್ಧವೂ ಹೋರಾಟ ನಡೆಯಲಿದೆ. ಸರಕಾರಿ ಆಸ್ಪತ್ರೆಯ ಒಂದಿಂಚ್ಚು ಜಾಗವನ್ನು ಯಾರಿಗೂ ನೀಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಸರಕಾರಿ ಆಸ್ತಿಯನ್ನು ನುಂಗಿ ನೀರು ಕುಡಿಯುವ ಯೋಚನೆ ಮಾಡುತ್ತಿದ್ದಾರೆ. ವಕ್ಸ್ ಮೂಡಾ ಆಯ್ತು. ಈಗ ಪುತ್ತೂರಿನಲ್ಲಿ ಸರಕಾರಿ ಆಸ್ಪತ್ರೆಯ ಜಾಗ ನುಂಗಲು ಬಂದಿದ್ದಾರೆ. ಈ ಸರಕಾರದಲ್ಲಿ ಭೂ ಕಳ್ಳತನ ರಾಜಾರೋಷವಾಗಿ ನಡೆಯುತ್ತಿದೆ. 300 ಬೆಡ್ ಆಸ್ಪತ್ರೆ ನಿರ್ಮಾಣಕ್ಕೆ ಯೋಜನೆ ಸಿದ್ಧವಾಗಿರುವ ಜಾಗವನ್ನು ನುಂಗಲು ಮುಂದಾಗಿದ್ದಾರೆ. ಇವರಿಗೆ ಸಾರ್ವಜನಿಕರ ಹಿತಾಶಕ್ತಿಯಿಲ್ಲ. ವೈಯಕ್ತಿಕ ಹಿತಾಶಕ್ತಿ ಮಾತ್ರ. ಸರಕಾರಿ ಆಸ್ಪತ್ರೆಯ ಜಮೀನನ್ನೇ ಮಾರಾಟ ಮಾಡುವ ಉದ್ದೇಶ ಹೊಂದಿರುವವರಿಂದ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು, ಸರಕಾರಿ ಆಸ್ಪತ್ರೆಯ ಅಭಿವೃದ್ಧಿ ಕಾಣುವ ಭರವಸೆ ಇದೆಯಾ ಎಂದು ಪ್ರಶ್ನಿಸಿದರು.
ಎಲ್ಲವನ್ನು ಗುಟ್ಟಾಗಿ ಖುದ್ದು ಶಾಸಕರೇ ಮಾಡಿದ್ದಾರೆ
ಎಲ್ಲಾ ಜಾಗ ಸೇರಿಸಿ 80 ಸೆಂಟ್ಸ್ನಲ್ಲಿ 19 ಸೆಂಟ್ಸ್ನಲ್ಲಿ 19 ಸೆಂಟ್ಸ್ ಜಾಗ ಅಂಬೇಡ್ಕರ್ ಭವನಕ್ಕೆ ಮಂಜೂರಾಗಿತ್ತು. ಸರಕಾರಿ ಅಸ್ಪತ್ರೆಯ ಅಭಿವೃದ್ಧಿಗಾಗಿ ದಲಿತ ಸಂಘಟನೆಯವರನ್ನು ಅಂದಿನ ಸಹಾಯಕ ಆಯುಕ್ತರಾಗಿದ್ದ ಯತೀಶ್ ಉಲ್ಲಾಳ್ ನೇತೃತ್ವದಲ್ಲಿ ಮನವೊಳಿಸಿ ಸರಕಾರಿ ಆಸ್ಪತ್ರೆಗೆ ನೀಡಲಾಗಿತ್ತು. ಇಲ್ಲಿನ 19 ಸೆಂಟ್ಸ್ ಬದಲು ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಬನ್ನೂರು ಸಮೀಪ 60 ಸೆಂಟ್ಸ್ ಜಾಗವನ್ನು ಕಾದಿರಿಸಲಾಗಿದೆ.
ಇಂಡಿಯನ್ ಮೆಡಿಕಲ್ ಕೌನ್ಸಿಲ್ನ ಮಾರ್ಗದರ್ಶನದಂತೆ ಸರಕಾರಿ ಮೆಡಿಕಲ್ ಕಾಲೇಜಿಗೆ 300ಬೆಡ್ ಆಸ್ಪತ್ರೆಯ ಆವಶ್ಯಕತೆಯಿದೆ. ಅದಕ್ಕಾಗಿ 300ಬೆಡ್ನ ಆಸ್ಪತ್ರೆ ಮಾಡಲು ಮುಂದಾಗಿದ್ದೆ. ಸರಕಾರಿ ಆಸ್ಪತ್ರೆಯನ್ನು ಎಲ್ಲಿಯೂ ಮೂಲೆಯಲ್ಲಿ ಕಟ್ಟಿದರೆ ಹೇಗೆ. ಅಲ್ಲಿಗೆ ರೋಗಿಗಳು ಹೋಗಲು ಸಾಧ್ಯವಿದೆಯಾ. ಮೆಡಿಕಲ್ ಕಾಲೇಜು ಎಲ್ಲಿ ಬೇಕಾದರೂ ಕಟ್ಟಬಹುದು. ಕಲಿಯುವ ವಿದ್ಯಾರ್ಥಿಗಳು ಎಲ್ಲಿ ಬೇಕಾದರೂ ಹೋಗಬಹುದು. ವಿಟ್ಲದಲ್ಲಿಯೂ ಆಸ್ಪತ್ರೆಯ ಜಾಗವನ್ನು ಪಕ್ಷದ ಕಚೇರಿಗೆ ನೀಡಲು ಮುಂದಾಗಿದ್ದರು. ಆದರೆ ಅಲ್ಲಿ ಪಟ್ಟಣ ಪಂಚಾಯತ್ನವರು ವಿರೋಧಿಸಿದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿರಲಿಲ್ಲ. ಇವರು ಹುಡುಕುವುದೇ ಸರಕಾರಿ ಆಸ್ಪತ್ರೆಯ ಜಾಗ. ಮಂಗಳೂರಿನ ಕಾಂಗ್ರೆಸ್ ಪಕ್ಷದ ಕಚೇರಿಯೂ ಪ್ರಿಯದರ್ಶಿನಿ ಟ್ರಸ್ಟ್ನ ಹೆಸರಿನಲ್ಲಿರುವ ಮಾಹಿತಿಯಿದೆ. ಪುತ್ತೂರಿನಲ್ಲಿ ಭೂ ಕಬಳಿಕೆಯ ಪ್ರಥಮ ಪ್ರಕರಣವಾಗಿದೆ. ಬಿಜೆಪಿಯಿಂದ ತಹಶೀಲ್ದಾರ್, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಆಸ್ಪತ್ರೆಯ ಜಾಗವನ್ನು ಟ್ರಸ್ಟ್ಗೆ ನೀಡುವುದನ್ನು ಅಧಿಕಾರಿಗಳು ತಿರಸ್ಕಾರ ಮಾಡದಿದ್ದರೆ ಬಿಜೆಪಿ ಹೋರಾಟ ಮಾಡಲಿದೆ. ಯಾವುದೇ ಇಲಾಖೆಗಳಿಗೆ ಕಾದಿರಿಸಿದ ಜಾಗವನ್ನು ನೀಡುವುದನ್ನ ಬಿಜೆಪಿ ವಿರೋಧಿಸುತ್ತಿದೆ ಎಂದರು.
ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲ ಅಧ್ಯಕ್ಷ ಪಿ.ಬಿ. ಶಿವಕುಮಾರ್ ಕಲ್ಲಿಮಾರ್, ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಅಂತರ ರಾಜ್ಯ
Controversial statement-“ಅಮೆರಿಕ–ಪಾಕ್ ಯುದ್ಧ ನಡೆದರೆ ಪಾಕಿಸ್ತಾನದ ಪರ ನಿಲ್ಲುತ್ತೇವೆ” – ರಾಜಸ್ಥಾನ ಬಿಜೆಪಿ ಅಧ್ಯಕ್ಷನಿಂದ ವಿವಾದಾತ್ಮಕ ಹೇಳಿಕೆ..!
ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ನೆರೆಯ ರಾಷ್ಟ್ರ ಎಂಬ ಕಾರಣಕ್ಕೆ ಪಾಕಿಸ್ತಾನದ ಪರವಾಗಿ ಭಾರತ ನಿಲ್ಲಲಿದೆ ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ರಾಥೋರ್ ನೀಡಿರುವ ವಿವಾದಾತ್ಮಕ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅವರ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರು ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಹೊಸದಿಲ್ಲಿ: ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ನೆರೆಯ ರಾಷ್ಟ್ರ ಎಂಬ ಕಾರಣಕ್ಕೆ ಪಾಕಿಸ್ತಾನದ ಪರವಾಗಿ ಭಾರತ ನಿಲ್ಲಲಿದೆ ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ರಾಥೋರ್ ನೀಡಿರುವ ವಿವಾದಾತ್ಮಕ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಅವರ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರು ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಗುರುವಾರ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮದನ್ ರಾಥೋರ್, “ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ, ಪಾಕಿಸ್ತಾನ ನಮ್ಮ ನೆರೆಯ ರಾಷ್ಟ್ರವಾಗಿರುವುದರಿಂದ ನಾವು ಅದರ ಪರವಾಗಿ ನಿಲ್ಲುತ್ತೇವೆ. ಆದರೆ, ನಮ್ಮ ಆಂತರಿಕ ವಿಷಯಗಳ ವಿಚಾರದಲ್ಲಿ ಭಾರತದ ಪರವಾಗಿ ನಿಲ್ಲುತ್ತೇವೆ. ಈ ವ್ಯತ್ಯಾಸವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು” ಎಂದು ಹೇಳಿದ್ದಾರೆ.
ಕಾಂಗ್ರೆಸ್ನಿಂದ ತೀವ್ರ ಖಂಡನೆ
ರಾಥೋರ್ ಅವರ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಶಮಾ ಮೊಹಮ್ಮದ್, ಇದನ್ನು ರಾಷ್ಟ್ರವಿರೋಧಿ ಹೇಳಿಕೆ ಎಂದು ಟೀಕಿಸಿದ್ದಾರೆ. ಭಾರತದ ಸೈನಿಕರು ಮತ್ತು ನಾಗರಿಕರ ಸಾವಿಗೆ ಕಾರಣವಾಗುವ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ನಾಯಕನ ಹೇಳಿಕೆಗೆ ಪಕ್ಷದ ವರಿಷ್ಠರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
“ಪಾಕಿಸ್ತಾನದ ಪರವಾಗಿ ನಿಲ್ಲುವುದಾಗಿ ರಾಜಸ್ಥಾನ ಬಿಜೆಪಿ ಅಧ್ಯಕ್ಷರು ಹೇಳಿರುವುದು ಬಿಜೆಪಿಯ ನಿಲುವಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಇದೇ ಅಭಿಪ್ರಾಯ ಹೊಂದಿದ್ದಾರೆಯೇ? ಇಲ್ಲದಿದ್ದರೆ, ಈ ಹೇಳಿಕೆ ನೀಡಿದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು” ಎಂದು ಶಮಾ ಮೊಹಮ್ಮದ್ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಸಂಯೋಜಕ ಸಂದೀಪ್ ಗುಪ್ತಾ ಕೂಡ ರಾಥೋರ್ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ. ಈ ಹೇಳಿಕೆಯು ಪಾಕಿಸ್ತಾನದ ಬಗ್ಗೆ ಬಿಜೆಪಿಗಿರುವ ಒಲವನ್ನು ಬಹಿರಂಗಪಡಿಸಿದೆ ಎಂದು ಆರೋಪಿಸಿರುವ ಅವರು, ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ–ಪಾಕಿಸ್ತಾನ ಒಂದೇ ಡಿಎನ್ಎ: ಎಎಪಿ ಟೀಕೆ
ಈ ವಿವಾದಕ್ಕೆ ಆಮ್ ಆದ್ಮಿ ಪಕ್ಷದ ನಾಯಕರೂ ಧ್ವನಿಗೂಡಿಸಿದ್ದಾರೆ. ದಿಲ್ಲಿ ಎಎಪಿ ಘಟಕದೊಂದಿಗೆ ಗುರುತಿಸಿಕೊಂಡಿರುವ ಯುವ ಘಟಕದ ರಾಜ್ಯಾಧ್ಯಕ್ಷ ರಮೇಶ್ ಮಟಿಯಾಲ ಹಾಗೂ ಎಎಪಿ ನಾಯಕ ವಿನಯ್ ಮಹಾಬಲ್ ಮಿಶ್ರಾ ಅವರು ರಾಥೋರ್ ಅವರ ಭಾಷಣದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇದೇ ವೇಳೆ, ಬಿಜೆಪಿ ಮತ್ತು ಪಾಕಿಸ್ತಾನದ ನಡುವೆ ಸೈದ್ಧಾಂತಿಕ ಸಾಮ್ಯತೆಯಿದೆ ಎಂದು ಆರೋಪಿಸಿರುವ ಎಎಪಿ ಉತ್ತರ ಪ್ರದೇಶ ಘಟಕದ ಉಪಾಧ್ಯಕ್ಷ ರಾಮ್ ಗುಪ್ತಾ, ರಾಥೋರ್ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ.
“ಇನ್ನೂ ಯಾರಿಗಾದರೂ ಅನುಮಾನವಿದೆಯೇ? ಬಿಜೆಪಿ ಮತ್ತು ಪಾಕಿಸ್ತಾನ ಎರಡೂ ಒಂದೇ ಡಿಎನ್ಎ ಹೊಂದಿವೆ. ಅಮೆರಿಕ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದರೆ ನಾವು ಪಾಕಿಸ್ತಾನದ ಪರವಾಗಿ ನಿಲ್ಲುತ್ತೇವೆ ಎಂದು ರಾಜಸ್ಥಾನ ಬಿಜೆಪಿ ಅಧ್ಯಕ್ಷ ಮದನ್ ರಾಥೋರ್ ಹೇಳಿದ್ದಾರೆ” ಎಂದು ಅವರು ‘ಎಕ್ಸ್’ನಲ್ಲಿ ಬರೆದುಕೊಂಡಿದ್ದಾರೆ.
ರಾಥೋರ್ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತು ಎಎಪಿ ನಾಯಕರು ಬಿಜೆಪಿಯನ್ನು ಗುರಿಯಾಗಿಸಿಕೊಂಡಿದ್ದು, ಈ ವಿಚಾರ ರಾಜಕೀಯ ವಲಯದಲ್ಲಿ ವಾಗ್ವಾದಕ್ಕೆ ಕಾರಣವಾಗಿದೆ.
ರಾಜಕೀಯ
Sting operation case-ಸ್ಟಿಂಗ್ ಆಪರೇಷನ್ ಕೇಸ್ : ಎಸ್ಐಟಿ ಅಥವಾ ಸಿಐಡಿ? ಸಚಿವ ಸಂಪುಟದಲ್ಲಿ ಏನು ನಿರ್ಧಾರ ಆಯಿತು ?
ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ನಡೆಸಬೇಕೇ? ನಡೆಸುವುದಾದರೆ ಯಾವ ತನಿಖಾ ಸಂಸ್ಥೆಗೆ ವಹಿಸಬೇಕು? ಎಂಬ ವಿಚಾರ ಸಂಪುಟ ಸಭೆಯಲ್ಲಿ ಮತ್ತೆ ಪ್ರಸ್ತಾಪವಾಗಿದೆ. ಆದರೆ, ತನಿಖೆಯ ಸ್ವರೂಪದ ಕುರಿತು ಸಚಿವರ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಡಲಾಗಿದೆ ಎಂದು ವರದಿಯಾಗಿದೆ.
ಬೆಂಗಳೂರು, ಅ. 15: ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆ ನಡೆಸಬೇಕೇ? ನಡೆಸುವುದಾದರೆ ಯಾವ ತನಿಖಾ ಸಂಸ್ಥೆಗೆ ವಹಿಸಬೇಕು? ಎಂಬ ವಿಚಾರ ಸಂಪುಟ ಸಭೆಯಲ್ಲಿ ಮತ್ತೆ ಪ್ರಸ್ತಾಪವಾಗಿದೆ. ಆದರೆ, ತನಿಖೆಯ ಸ್ವರೂಪದ ಕುರಿತು ಸಚಿವರ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ಅವರ ವಿವೇಚನೆಗೆ ಬಿಡಲಾಗಿದೆ ಎಂದು ವರದಿಯಾಗಿದೆ.
ಸಭೆಯ ಆರಂಭದಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಕರಣಕ್ಕೆ ಸಂಬಂಧಿಸಿದ ಬೆಳವಣಿಗೆಗಳನ್ನು ಸಂಪುಟದ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವುದು ಸೂಕ್ತ ಎಂದು ಕೆಲವು ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇನ್ನು ಕೆಲವು ಸಚಿವರು ಯಾವುದೇ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಎನ್ನಲಾಗಿದೆ.
ಎಸ್ಐಟಿ ರಚನೆಯಾಗುತ್ತಾ? ಸಿಐಡಿ ತನಿಖೆಯಾಗುತ್ತಾ?
ಪ್ರಕರಣದ ತನಿಖೆಗೆ ಹಿರಿಯ ಹಾಗೂ ಸಮರ್ಥ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಬೇಕೇ ಅಥವಾ ಅಪರಾಧ ತನಿಖಾ ಇಲಾಖೆ (ಸಿಐಡಿ)ಗೆ ವಹಿಸಬೇಕೇ ಎಂಬ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಆದರೆ, ತನಿಖೆ ನಡೆಸುವ ಅಗತ್ಯ ಮತ್ತು ಅದರ ಸ್ವರೂಪದ ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.
ಸಚಿವರ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಮುಖ್ಯಮಂತ್ರಿ ಅವರಿಗೆ ಬಿಡಲಾಗಿದೆ ಎಂದು ತಿಳಿದುಬಂದಿದೆ.
ಸಂಪುಟ ಸಭೆಯ ಬಳಿಕ ಮಾತನಾಡಿದ ಕೆಲವು ಸಚಿವರು, ಈ ವಿಷಯ ಚರ್ಚೆಯಾಗಿಲ್ಲ ಎಂದು ಹೇಳಿದರೆ, ಇನ್ನು ಕೆಲವರು ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲಾಗಿದೆ ಎಂದು ತಿಳಿಸಿದ್ದಾರೆ.
ಮುಕ್ತ ಮತ್ತು ಪಾರದರ್ಶಕ ತನಿಖೆಗೆ ಒತ್ತು
ಈ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಅಗತ್ಯವಿದ್ದರೆ ಪ್ರಕರಣದ ಬಗ್ಗೆ ಪ್ರತ್ಯೇಕ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.
“ಪ್ರಕರಣ ನಡೆದು ಈಗಷ್ಟೇ ಎರಡು ದಿನಗಳಾಗಿವೆ. 48 ಗಂಟೆಗಳಲ್ಲಿ ಮಾಡಬೇಕಾದ ಕೆಲಸಗಳನ್ನೆಲ್ಲ ಮಾಡಿದ್ದೇವೆ. ತನಿಖೆ ಮುಕ್ತ ಮತ್ತು ಪಾರದರ್ಶಕವಾಗಿರಬೇಕು ಎಂಬುದು ನಮ್ಮ ಆಶಯ. ಸಿದ್ದರಾಮಯ್ಯ ಅವರ ಘನತೆಗಿಂತ ಹೆಚ್ಚಿನದು ಯಾವುದೂ ಇಲ್ಲ” ಎಂದು ಅವರು ತಿಳಿಸಿದ್ದಾರೆ.
ಒಟ್ಟಿನಲ್ಲಿ, ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯನ್ನು ಎಸ್ಐಟಿಗೆ ವಹಿಸಲಾಗುತ್ತದೆಯೇ ಅಥವಾ ಸಿಐಡಿಗೆ ಒಪ್ಪಿಸಲಾಗುತ್ತದೆಯೇ ಎಂಬ ಕುತೂಹಲ ಮುಂದುವರಿದಿದ್ದು, ಮುಖ್ಯಮಂತ್ರಿ ಅವರ ಮುಂದಿನ ನಿರ್ಧಾರದತ್ತ ರಾಜಕೀಯ ವಲಯ ಗಮನ ಹರಿಸಿದೆ.
ರಾಜಕೀಯ
H.D. Kumaraswamy-ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ : ಬಾಂಬ್ ಸಿಡಿಸಿದ ಎಚ್.ಡಿ. ಕುಮಾರಸ್ವಾಮಿ – ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಷಡ್ಯಂತ್ರದಲ್ಲಿ ಕೃಪಾ ಆಳ್ವ..! ಗಂಭೀರ ಆರೋಪ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಷಡ್ಯಂತ್ರದಲ್ಲಿ ಕರಾವಳಿ ಭಾಗದ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಷಡ್ಯಂತ್ರದಲ್ಲಿ ಕರಾವಳಿ ಭಾಗದ ಕಾಂಗ್ರೆಸ್ ನಾಯಕಿ ಕೃಪಾ ಆಳ್ವ ಭಾಗಿಯಾಗಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಮೊದಲ ಆಡಳಿತಾವಧಿಯಲ್ಲಿ ಕೃಪಾ ಆಳ್ವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು ಎಂದು ಹೇಳಿದರು. ಸಿದ್ದರಾಮಯ್ಯ ವಿರುದ್ಧ ನಡೆದ ಸ್ಟಿಂಗ್ ಆಪರೇಷನ್ನಲ್ಲಿ ಅವರು ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.
ಗೃಹ ಸಚಿವರ ವಿರುದ್ಧವೂ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಅಧಿಕಾರ ಇದೆ ಎಂಬ ಕಾರಣಕ್ಕೆ ಏನು ಬೇಕಾದರೂ ಮಾಡಬಹುದೇ ಎಂದು ಪ್ರಶ್ನಿಸಿದರು. “ಗೃಹ ಇಲಾಖೆ ನಿಮ್ಮಪ್ಪನದ್ದಾ? ನನ್ನ ಕಾರ್ಯಕರ್ತರನ್ನು ಬಂಧಿಸುತ್ತೀರಾ? ನಾನೇ ನಿಮ್ಮ ಕಚೇರಿಗೆ ಬರುತ್ತೇನೆ. ತಾಕತ್ತಿದ್ದರೆ ನನ್ನನ್ನೇ ಬಂಧಿಸಿ ನೋಡೋಣ” ಎಂದು ಸವಾಲು ಹಾಕಿದರು.
ತಮ್ಮ ಮೇಲೆ ಅನುಮಾನ ಬಂದರೆ ಬಂಧಿಸುವುದಾಗಿ ಹೇಳುವವರು, ಮುಖ್ಯಮಂತ್ರಿ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಯ ಬಗ್ಗೆ ಏಕೆ ಅನುಮಾನ ವ್ಯಕ್ತಪಡಿಸಿಲ್ಲ ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿಯನ್ನು ಉದ್ದೇಶಪೂರ್ವಕವಾಗಿ ಸಿಲುಕಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
ತಮ್ಮ ಪುತ್ರನ ಪೋಸ್ಟರ್ ಅಂಟಿಸಿದ ಘಟನೆ ಉಲ್ಲೇಖಿಸಿದ ಕುಮಾರಸ್ವಾಮಿ, ಈ ಸಂದರ್ಭದಲ್ಲಿ ಪ್ರಿಯಾಂಕ್ ಖರ್ಗೆ ಎಲ್ಲಿ ಹೋಗಿದ್ದರು ಎಂದು ಪ್ರಶ್ನಿಸಿದರು. ಹೆದರಿಕೆ, ಬೆದರಿಕೆಗಳಿಗೆ ತಾವು ಬಗ್ಗುವುದಿಲ್ಲ. ಬೇಕಾದರೆ ಕಮಿಷನರ್ ಕಚೇರಿಗೆ ಬರುತ್ತೇನೆ, ಬಂಧಿಸಿ ಎಂದು ಸವಾಲು ಹಾಕಿದರು.
ಜೆ.ಪಿ. ನಗರದ ಮನೆಯಲ್ಲಿ ತಾವು ಎಲೆಕ್ಟ್ರಾನಿಕ್ ಉಪಕರಣಗಳನ್ನು ಇಟ್ಟುಕೊಂಡಿದ್ದೇವೆಯೇ ಎಂದು ಪ್ರಶ್ನಿಸಿದ ಅವರು, ಅಧಿಕಾರವನ್ನು ನ್ಯಾಯಯುತವಾಗಿ ಬಳಸಬೇಕು ಎಂದರು. ಸ್ಟಿಂಗ್ ಆಪರೇಷನ್ ನಡೆಸಿದವರನ್ನು ಏಕೆ ಬಂಧಿಸಿಲ್ಲ? ಪೊಲೀಸ್ ಅಧಿಕಾರಿಯನ್ನು ಕೊಲೆ ಮಾಡುವುದಾಗಿ ಹೇಳಿದ ವ್ಯಕ್ತಿಯ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಇದೇ ವೇಳೆ, ತಾವು ಬಳಸಿದ ಪದಗಳ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ತಾವು ಈ ಮಟ್ಟದ ಪದಗಳನ್ನು ಬಳಸಿರಲಿಲ್ಲ. ಆದರೆ, ಮತ್ತೊಬ್ಬರು ಬಳಸಿದ ಪದಗಳಿಂದ ಆಕ್ರೋಶಗೊಂಡು ಪ್ರತಿಕ್ರಿಯಿಸಿದ್ದೇನೆ. ಇದಕ್ಕಾಗಿ ಜನರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.


















