ಕ್ರೀಡೆ
Hockey-ನ್ಯೂಜಿಲೆಂಡ್ ತಂಡವನ್ನು ಬಗ್ಗುಬಡಿದ ಭಾರತೀಯ ಹಾಕಿ ತಂಡ; ಭಾರತಕ್ಕೆ ಮತ್ತೊಂದು ಪದಕ ಗೆಲ್ಲುವ ನಿರೀಕ್ಷೆ…!!
ನಿಖರ ನ್ಯೂಸ್ :- ಭಾರತದ ರಾಷ್ಟ್ರೀಯ ಕ್ರೀಡೆ ಎನ್ನಲಾಗುವ `ಹಾಕಿ’ ಅತ್ಯಂತ ಆಸಕ್ತಿದಾಯಕವಾದ ಕ್ರೀಡೆ. ಈಗಾಗಲೇ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಮನು ಭಾಕರ್ ಅವರು ಕಂಚಿನ ಪದಕ ಗೆಲ್ಲುವ ಮುಖೇನ ಖಾತೆ ತೆರೆದಿದ್ದಾರೆ. ಈ ಕಡೆಯಿಂದ ಮತ್ತೊಂದು ಶುಭ ಸುದ್ದಿ ಕೇಳಲು ಇಂಡಿಯಾ ರೆಡಿಯಾಗಿದೆ. ಟೋಕಿಯೊ ಒಲಿಂಪಿಕ್ಸ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಭಾರತೀಯ ಹಾಕಿ ತಂಡವು ಕಂಚಿನ ಪದಕ ಗೆದ್ದುಕೊಂಡಿತ್ತು. ಈ ಮೂಲಕ ಒಲಿಂಪಿಕ್ಸ್ನಲ್ಲಿ 41 ವರ್ಷಗಳ ಪದಕದ ಬರವನ್ನು ನೀಗಿಸಿದ್ದರು. ಇದೀಗ ಪ್ಯಾರಿಸ್ ಒಲಿಂಪಿಕ್ಸ್ನ ಮೊದಲ ಪಂದ್ಯದಲ್ಲೇ ಬಲಿಷ್ಠ ನ್ಯೂಝಿಲೆಂಡ್ ತಂಡದ ವಿರುದ್ಧ ಸೆಣಸಾಡಿ ಅವರ ಟೀಂನ್ನು ಬಗ್ಗು ಬಡಿದು ಟೀಮ್ ಇಂಡಿಯಾ ಶುಭಾರಂಭ ಮಾಡಿದೆ.

ಗೆಲುವಿನೊಂದಿಗೆ ಶುಭಾರಂಭ ಮಾಡಿದ ಭಾರತದ ಪುರುಷರ ಹಾಕಿ ತಂಡ…!
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಇದೀಗ ಮತ್ತೊಮ್ಮೆ ಭಾರತ ತನ್ನತ್ತ ಗಮನಸೆಳೆಯಲು ಸನ್ನದ್ಧವಾಗಿದೆ. ಪೂಲ್ ಬಿ ನಲ್ಲಿ ಕಣಕ್ಕಿಳಿದಿರುವ ಭಾರತ ತಂಡವು ತನ್ನ ಮೊದಲ ಪಂಧ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು 3-2 ಗೋಲುಗಳಿಂದ ಸೋಲಿಸಿದೆ. ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಭಾರತ ತಂಡವು ಆರಂಭದಲ್ಲಿ ಹಿನ್ನಡೆ ಅನುಭವಿಸಿತ್ತು. ಆದರೂ ಛಲಬಿಡದೆ ಈ ಹಂತ ತಲುಪಿದ್ದು ಮಾತ್ರ ವಿಶೇಷ.
ಮೊದಲಿಗೆ ಹೊಂದಾಣಿಕೆಯ ಆಟವೇನೂ ಮೂಡಿಬಂದಿರಲಿಲ್ಲ
8ನೇ ನಿಮಿಷದಲ್ಲೇ ಗೋಲು ಬಾರಿಸಿ 0-1 ಅಂತರದಿಂದ ಮುನ್ನಡೆ ಸಾಧಿಸಿದ್ದ ನ್ಯೂಝಿಲೆಂಡ್ ತಂಡವು ಭಾರತದ ವಿರುದ್ಧ ಪಾರುಪತ್ಯ ಮೆರೆದು ಹಿಗ್ಗಿತ್ತು. ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಭಾರತ ತಂಡವು ಹೆಚ್ಚು ತಪ್ಪು ಪಾಸ್‌ಗಳನ್ನು ನೀಡಿದ್ದರು. ಅಲ್ಲದೆ ಹೊಂದಾಣಿಕೆಯ ಆಟ ಮೂಡಿಬಂದಿರಲಿಲ್ಲ. ಆಟಗಾರರು ಕೂಡಾ ನಿರಾಶದಾಯಕರಾಗಿದ್ದರು. ಆದರೆ 24ನೇ ನಿಮಿಷದಲ್ಲಿ ಗೇಮ್ ಚೇಂಜ್ ಆಯಿತು. ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ಮನ್ದೀಪ್ ಸಿಂಗ್ ಯಶಸ್ವಿಯಾದರು. ಈ ಮೂಲಕ ಗೋಲುಗಳ ಅಂತರವನ್ನು 1-1 ಕ್ಕೇರಿಸಿದರು. ಗೋಲುಗಳು ಸಮಗೊಳ್ಳುತ್ತಿದ್ದಂತೆ ಭಾರತೀಯ ಆಟಗಾರರು ಪ್ರಬಲ ಪ್ರತಿದಾಳಿ ನಡೆಸಿದರು. ಪರಿಣಾಮ 34ನೇ ನಿಮಿಷದಲ್ಲಿ ವಿವೇಕ್ ಸಾಗರ್ ಪ್ರಸಾದ್ ನೀಡಿದ ಪಾಸ್ ಅನ್ನು ಮನ್ದೀಪ್ ಗೋಲು ಬಲೆಯೊಳಗೆ ತಲುಪಿಸಿದರು.
ಮುನ್ನಡೆ ಸಾಧಿಸಿದ್ದ ಭಾರತಕ್ಕೆ ಮತ್ತೆ ಬಂದು ಗುದ್ದಿದ ನ್ಯೂಜಿಲ್ಯಾಂಡ್
2-1 ಅಂತರದಿಂದ ಮುನ್ನಡೆ ಸಾಧಿಸಿ ಭಾರತ ತಂಡವು ಉತ್ತಮ ಪ್ರದರ್ಶನ ಮುಂದುವರೆಸಿತು. ಗೆಲ್ಲುವ ಉತ್ಸಾಹ ಕೂಡಾ ಅದಾಗಲೇ ಇಮ್ಮಡಿಯಾಗಿತ್ತು. ಆದರೆ 52ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ನ್ಯೂಝಿಲೆಂಢ್ ಸದುಪಯೋಗಪಡಿಸಿಕೊಂಡು ಗೋಲಿನ ಅಂತರವನ್ನು 2-2 ರಂತೆ ಸಮಗೊಳಿಸಿತು. ಇದರಿಂದ ಮತ್ತೆ ಪಂದ್ಯ ರಣರೋಚಕವಾಯಿತು. ಪ್ರೇಕ್ಷಕರ ಕುತೂಹಲವನ್ನು ಕೂಡಾ ಜಾಸ್ತಿ ಮಾಡಿತು.
ಪಂದ್ಯದ ಕೊನೇ ಕ್ಷಣದಲ್ಲಿ ಬದಲಾದ ಭಾರತದ ಲಕ್…!!
ಪಂದ್ಯವು ಇನ್ನೇನು ಡ್ರಾನಲ್ಲಿ ಅಂತ್ಯಗೊಳ್ಳಲಿದೆ ಅನ್ನುವಷ್ಟರಲ್ಲಿ ಭಾರತಕ್ಕೆ ಮತ್ತೊಮ್ಮೆ ಅದೃಷ್ಟ ಖುಲಾಯಿಸಿತು. ನ್ಯೂಝಿಲೆಂಡ್ ಆಟಗಾರ ಒಂದು ಫೌಲ್ ಮಾಡಿದರು. ಈ ತಪ್ಪಿನ ಪರಿಣಾಮ ಭಾರತಕ್ಕೆ 59ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಲಭಿಸಿತು. ಈ ಕೊನೆಯ ಅವಕಾಶವನ್ನು ನಾಯಕ ಹರ್ಮನ್‌ಪ್ರೀತ್ ಸಿಂಗ್ ಗೋಲಾಗಿ ಪರಿವರ್ತಿಸಿದರು. ಅತ್ಯಂತ ಚಾಣಾಕ್ಷತನದಿಂದ ಆಡಿದ ಆಟದಿಂದ ಭಾರತ ತಂಡವು 3-2 ಗೋಲುಗಳ ಅಂತರದಿಂದ ನ್ಯೂಝಿಲೆಂಡ್ ವಿರುದ್ಧ ರೋಚಕ ಜಯ ಸಾಧಿಸಿತು. ಇಂದು ಭಾರತ ತಂಡ ತನ್ನ ಎರಡನೇ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.
ಕ್ರೀಡೆ
India-West Indies match-ಒಂದೇ ODI ಪಂದ್ಯದಲ್ಲಿ 5 ಶತಕ: ಗುವಾಹಟಿಯಲ್ಲಿ ವಿಶ್ವದಾಖಲೆ ಬರೆದ ಭಾರತ–ವೆಸ್ಟ್ ಇಂಡೀಸ್ ಕದನ
ಗುವಾಹಟಿಯ ಬಾರಾಸ್ಪರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ–ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ದಾಖಲೆಯ ಪುಸ್ತಕ ಸೇರಿದೆ. ಪಂದ್ಯದಲ್ಲಿ ಒಂದೆರಡಲ್ಲ, ಬರೋಬ್ಬರಿ ಐದು ಶತಕಗಳು ದಾಖಲಾಗಿದ್ದು, ಇದರಲ್ಲಿ ಒಂದು ದ್ವಿಶತಕವೂ ಸೇರಿದೆ. 55 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.
ಗುವಾಹಟಿ: ಗುವಾಹಟಿಯ ಬಾರಾಸ್ಪರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಭಾರತ–ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ದಾಖಲೆಯ ಪುಸ್ತಕ ಸೇರಿದೆ. ಪಂದ್ಯದಲ್ಲಿ ಒಂದೆರಡಲ್ಲ, ಬರೋಬ್ಬರಿ ಐದು ಶತಕಗಳು ದಾಖಲಾಗಿದ್ದು, ಇದರಲ್ಲಿ ಒಂದು ದ್ವಿಶತಕವೂ ಸೇರಿದೆ. 55 ವರ್ಷಗಳ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ಜಾನ್ ಕ್ಯಾಂಬೆಲ್ (101), ಶಾಯಿ ಹೋಪ್ (104) ಹಾಗೂ ಅಮಿರ್ ಜಾಂಗೋ (114) ಅವರ ಶತಕಗಳ ನೆರವಿನಿಂದ 405 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಇದಕ್ಕೆ ಉತ್ತರವಾಗಿ ಭಾರತ ತಂಡದ ಆರಂಭಿಕರಾದ ನಾಯಕ ಶುಭಮನ್ ಗಿಲ್ ಹಾಗೂ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ಶತಕ ಸಿಡಿಸಿದರು. ಗಿಲ್ ಅಜೇಯ 223 ರನ್ ಗಳಿಸಿದರೆ, ರೋಹಿತ್ ಶರ್ಮಾ 101 ರನ್ ಬಾರಿಸಿದರು. ಇಬ್ಬರೂ ಮೊದಲ ವಿಕೆಟ್‌ಗೆ 255 ರನ್‌ಗಳ ಭರ್ಜರಿ ಜೊತೆಯಾಟವಾಡಿದರು.
ಒಂದೇ ಪಂದ್ಯದಲ್ಲಿ 5 ಶತಕ
1971ರಲ್ಲಿ ಮೊದಲ ಏಕದಿನ ಪಂದ್ಯ ನಡೆದ ಬಳಿಕ ಇದುವರೆಗೆ 5,023 ODI ಪಂದ್ಯಗಳು ನಡೆದಿವೆ. ಆದರೆ ಒಂದೇ ಪಂದ್ಯದಲ್ಲಿ ಐದು ಶತಕಗಳು ದಾಖಲಾಗಿರುವುದು ಇದೇ ಮೊದಲು.
ಇದಕ್ಕೂ ಮೊದಲು ಒಂದೇ ODI ಪಂದ್ಯದಲ್ಲಿ ನಾಲ್ಕು ಶತಕಗಳು ದಾಖಲಾಗಿದ್ದೇ ಗರಿಷ್ಠ ಸಾಧನೆಯಾಗಿತ್ತು. 1998ರಲ್ಲಿ ಲಾಹೋರ್‌ನಲ್ಲಿ ಪಾಕಿಸ್ತಾನ–ಆಸ್ಟ್ರೇಲಿಯಾ ಪಂದ್ಯ, 2013ರಲ್ಲಿ ನಾಗ್ಪುರದಲ್ಲಿ ಭಾರತ–ಆಸ್ಟ್ರೇಲಿಯಾ ಪಂದ್ಯ ಹಾಗೂ 2023ರಲ್ಲಿ ಹೈದರಾಬಾದ್‌ನಲ್ಲಿ ಪಾಕಿಸ್ತಾನ–ಶ್ರೀಲಂಕಾ ಪಂದ್ಯಗಳಲ್ಲಿ ತಲಾ ನಾಲ್ಕು ಶತಕಗಳು ದಾಖಲಾಗಿದ್ದವು.
ವಿಶೇಷವೆಂದರೆ, ಈ ಹಿಂದೆ ನಾಲ್ಕು ಶತಕಗಳು ದಾಖಲಾಗಿದ್ದ ಪಂದ್ಯಗಳೂ ಏಷ್ಯಾ ಖಂಡದಲ್ಲೇ ನಡೆದಿದ್ದವು.
ಒಂದೇ ಇನ್ನಿಂಗ್ಸ್‌ನಲ್ಲಿ 3 ಶತಕ
ವೆಸ್ಟ್ ಇಂಡೀಸ್ ತಂಡದ ಪರ ಜಾನ್ ಕ್ಯಾಂಬೆಲ್, ಶಾಯಿ ಹೋಪ್ ಮತ್ತು ಅಮಿರ್ ಜಾಂಗೋ ಶತಕ ಸಿಡಿಸುವ ಮೂಲಕ ಮತ್ತೊಂದು ಅಪರೂಪದ ದಾಖಲೆಗೂ ಕಾರಣರಾದರು. ಏಕದಿನ ಇತಿಹಾಸದಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿರುವುದು ಇದು ಆರನೇ ಬಾರಿ.
ಈ ಹಿಂದೆ 2015ರಲ್ಲಿ ದಕ್ಷಿಣ ಆಫ್ರಿಕಾ–ವೆಸ್ಟ್ ಇಂಡೀಸ್, 2015ರಲ್ಲಿ ದಕ್ಷಿಣ ಆಫ್ರಿಕಾ–ಭಾರತ, 2022ರಲ್ಲಿ ಇಂಗ್ಲೆಂಡ್–ನೆದರ್ಲ್ಯಾಂಡ್ಸ್, 2023ರಲ್ಲಿ ದಕ್ಷಿಣ ಆಫ್ರಿಕಾ–ಶ್ರೀಲಂಕಾ ಹಾಗೂ 2025ರಲ್ಲಿ ಆಸ್ಟ್ರೇಲಿಯಾ–ದಕ್ಷಿಣ ಆಫ್ರಿಕಾ ಪಂದ್ಯಗಳಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಸಿಡಿಸಿದ್ದರು.
ವೆಸ್ಟ್ ಇಂಡೀಸ್‌ಗೆ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿರುವುದು ಇದೇ ಮೊದಲ ಅನುಭವವಾಗಿದೆ. ಭಾರತ ವಿರುದ್ಧದ ಪಂದ್ಯದಲ್ಲಿ ಎದುರಾಳಿ ತಂಡವೊಂದು ಒಂದೇ ಇನ್ನಿಂಗ್ಸ್‌ನಲ್ಲಿ ಮೂರು ಶತಕಗಳನ್ನು ದಾಖಲಿಸಿರುವುದು ಇದು ಎರಡನೇ ಬಾರಿ.
ಇದರೊಂದಿಗೆ ಒಂದೇ ಇನ್ನಿಂಗ್ಸ್‌ನಲ್ಲಿ ಮೂವರು ಬ್ಯಾಟರ್‌ಗಳು ಶತಕ ಬಾರಿಸಿದರೂ ಪಂದ್ಯ ಸೋತ ಮೊದಲ ತಂಡ ಎಂಬ ಅನಪೇಕ್ಷಿತ ದಾಖಲೆಯೂ ವೆಸ್ಟ್ ಇಂಡೀಸ್ ಪಾಲಾಗಿದೆ.
ಕ್ರೀಡೆ
Asian Games-ಏಷ್ಯನ್ ಗೇಮ್ಸ್ ನಲ್ಲಿ ಮಿಂಚಿದ ಭಾರತದ ಮಹಿಳೆಯರು; 4×400 ರಿಲೇಯಲ್ಲಿ ಚಿನ್ನ, ಹೈಜಂಪ್-ಮಿಶ್ರ ರಿಲೇಯಲ್ಲಿ ಕಂಚು
ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಅಥ್ಲೆಟಿಕ್ಸ್ ತಂಡ ಪದಕಗಳ ಬೇಟೆ ಮುಂದುವರಿಸಿದೆ. ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ ಚಿನ್ನದ ಪದಕ ಗೆದ್ದಿದ್ದು, ಮಹಿಳೆಯರ ಹೈಜಂಪ್‌ನಲ್ಲಿ ಪೂಜಾ ಸಿಂಗ್ ಕಂಚಿನ ಪದಕ ಹಾಗೂ ಮಿಶ್ರ 4×100 ಮೀಟರ್ ರಿಲೇಯಲ್ಲಿ ಭಾರತ ಕಂಚಿನ ಪದಕ ಗೆದ್ದಿದೆ.
ನಗೋಯಾ: ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಅಥ್ಲೆಟಿಕ್ಸ್ ತಂಡ ಪದಕಗಳ ಬೇಟೆ ಮುಂದುವರಿಸಿದೆ. ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಭಾರತ ಚಿನ್ನದ ಪದಕ ಗೆದ್ದಿದ್ದು, ಮಹಿಳೆಯರ ಹೈಜಂಪ್‌ನಲ್ಲಿ ಪೂಜಾ ಸಿಂಗ್ ಕಂಚಿನ ಪದಕ ಹಾಗೂ ಮಿಶ್ರ 4×100 ಮೀಟರ್ ರಿಲೇಯಲ್ಲಿ ಭಾರತ ಕಂಚಿನ ಪದಕ ಗೆದ್ದಿದೆ.
4×400 ಮೀಟರ್ ರಿಲೇಯಲ್ಲಿ ಬಂಗಾರದ ಓಟ
ಮಹಿಳೆಯರ 4×400 ಮೀಟರ್ ರಿಲೇಯಲ್ಲಿ ಕಿರಣ್ ಪಹಾಲ್, ಎಂ.ಆರ್. ಪೂವಮ್ಮ, ಪ್ರಾಚಿ ಚೌಧರಿ ಹಾಗೂ ವಿಥ್ಯಾ ರಾಮರಾಜ್ ಅವರನ್ನೊಳಗೊಂಡ ಭಾರತ ತಂಡ 3:29.69 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ತನ್ನದಾಗಿಸಿಕೊಂಡಿತು. ಬಹ್ರೇನ್ 3:30.21 ಸಮಯದೊಂದಿಗೆ ಬೆಳ್ಳಿ ಹಾಗೂ ಚೀನಾ 3:31.02 ಸಮಯದೊಂದಿಗೆ ಕಂಚಿನ ಪದಕ ಗೆದ್ದವು.
ಈ ಗೆಲುವಿನೊಂದಿಗೆ ಏಷ್ಯನ್ ಗೇಮ್ಸ್ 2026ರಲ್ಲಿ ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾರತ ತನ್ನ ಮೊದಲ ಚಿನ್ನದ ಪದಕ ಗೆದ್ದಂತಾಗಿದೆ. ವಿಥ್ಯಾ ರಾಮರಾಜ್ ಅವರಿಗೆ ಇದು ಕೂಟದ ಮೂರನೇ ಪದಕವಾಗಿದೆ. ಅವರು ಈ ಹಿಂದೆ ಮಿಶ್ರ 4×400 ಮೀಟರ್ ರಿಲೇಯಲ್ಲಿ ಬೆಳ್ಳಿ ಹಾಗೂ ಮಹಿಳೆಯರ 400 ಮೀಟರ್ ಹರ್ಡಲ್ಸ್‌ನಲ್ಲಿ ಕಂಚು ಗೆದ್ದಿದ್ದರು.
ಹೈಜಂಪ್‌ನಲ್ಲಿ ಪೂಜಾಗೆ ಕಂಚು
ಮಹಿಳೆಯರ ಹೈಜಂಪ್ ಫೈನಲ್‌ನಲ್ಲಿ ಭಾರತದ ಪೂಜಾ ಸಿಂಗ್ 1.84 ಮೀಟರ್ ಎತ್ತರ ಜಿಗಿದು ಕಂಚಿನ ಪದಕ ಗೆದ್ದರು. 1.84 ಮೀಟರ್‌ವರೆಗಿನ ಎತ್ತರವನ್ನು ಅವರು ಯಶಸ್ವಿಯಾಗಿ ದಾಟಿದರೂ, 1.87 ಮೀಟರ್ ಎತ್ತರವನ್ನು ಮೂರು ಪ್ರಯತ್ನಗಳಲ್ಲೂ ದಾಟಲು ಸಾಧ್ಯವಾಗಲಿಲ್ಲ.
ಮಿಶ್ರ 4×100 ಮೀಟರ್ ರಿಲೇಯಲ್ಲಿ ಕಂಚು
ಗುರುಂದರ್‌ವೀರ್ ಸಿಂಗ್, ಸ್ನೇಹಾ ಸತ್ಯನಾರಾಯಣ, ಅನಿಮೇಶ್ ಕುಜುರ್ ಹಾಗೂ ಹರಿತಾ ಭದ್ರಾ ಅವರನ್ನೊಳಗೊಂಡ ಭಾರತ ತಂಡ ಮಿಶ್ರ 4×100 ಮೀಟರ್ ರಿಲೇಯಲ್ಲಿ 41.06 ಸೆಕೆಂಡ್‌ಗಳ ಋತುವಿನ ಅತ್ಯುತ್ತಮ ಸಮಯದೊಂದಿಗೆ ಕಂಚಿನ ಪದಕ ಗೆದ್ದಿತು.
ಚೀನಾ 40.78 ಸೆಕೆಂಡ್‌ಗಳಲ್ಲಿ ಚಿನ್ನ ಹಾಗೂ ಥೈಲ್ಯಾಂಡ್ 40.87 ಸೆಕೆಂಡ್‌ಗಳಲ್ಲಿ ಬೆಳ್ಳಿ ಪದಕ ಗೆದ್ದವು. ಭಾರತ 41.06 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆಯಿತು
ಕ್ರೀಡೆ
Fariba-ತಾಲಿಬಾನ್ ಆಡಳಿತದಲ್ಲಿ ಮಹಿಳೆಯರಿಗೆ ನಿರ್ಬಂಧ: ಪುರುಷರ ರೀತಿ ವೇಷ ಧರಿಸಿ ತರಬೇತಿ ಪಡೆದು ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಅಫ್ಘಾನಿಸ್ತಾನದ ಮೊದಲ ಮಹಿಳಾ ಕ್ರೀಡಾಪಟು ಫರೀಬಾ..!
ತಾಲಿಬಾನ್ ಆಡಳಿತದ ಕಠಿಣ ನಿರ್ಬಂಧಗಳು, ಹಿಂಸಾಚಾರ ಹಾಗೂ ಜೀವಭಯದ ನಡುವೆಯೂ ಕ್ರೀಡಾ ಕನಸನ್ನು ಜೀವಂತವಾಗಿರಿಸಿಕೊಂಡಿದ್ದ ಅಫ್ಘಾನಿಸ್ತಾನದ ಯುವ ಸೈಕ್ಲಿಸ್ಟ್ ಫರೀಬಾ ಹಾಶಿಮಿ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಐಚಿ-ನಗೋಯಾ: ತಾಲಿಬಾನ್ ಆಡಳಿತದ ಕಠಿಣ ನಿರ್ಬಂಧಗಳು, ಹಿಂಸಾಚಾರ ಹಾಗೂ ಜೀವಭಯದ ನಡುವೆಯೂ ಕ್ರೀಡಾ ಕನಸನ್ನು ಜೀವಂತವಾಗಿರಿಸಿಕೊಂಡಿದ್ದ ಅಫ್ಘಾನಿಸ್ತಾನದ ಯುವ ಸೈಕ್ಲಿಸ್ಟ್ ಫರೀಬಾ ಹಾಶಿಮಿ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಜಪಾನ್‌ನ ಐಚಿ ಪ್ರಾಂತ್ಯದ ಶಿನ್‌ಶಿರೋ ಸೈಕ್ಲಿಂಗ್ ರೋಡ್ ಕೋರ್ಸ್‌ನಲ್ಲಿ ಸೆ.22ರಂದು ನಡೆದ ಮಹಿಳೆಯರ 90.4 ಕಿ.ಮೀ. ವೈಯಕ್ತಿಕ ರೋಡ್ ರೇಸ್‌ನಲ್ಲಿ 23 ವರ್ಷದ ಫರೀಬಾ ಬೆಳ್ಳಿ ಪದಕ ಗೆದ್ದರು. ಇದರೊಂದಿಗೆ 2002ರ ಬಳಿಕ ಏಷ್ಯನ್ ಗೇಮ್ಸ್‌ನಲ್ಲಿ ಪದಕ ಗೆದ್ದ ಅಫ್ಘಾನಿಸ್ತಾನದ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ರೋಚಕವಾಗಿ ನಡೆದ ಫೈನಲ್‌ನಲ್ಲಿ ಫರೀಬಾ ಹಾಗೂ ಚಿನ್ನದ ಪದಕ ಗೆದ್ದ ಚೀನಾದ ಗುವೋ ಲಿ ಇಬ್ಬರೂ 2 ಗಂಟೆ 50 ನಿಮಿಷ 05 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಮೊದಲ ಎರಡು ಲ್ಯಾಪ್‌ಗಳಲ್ಲಿ ಫರೀಬಾ ಮುನ್ನಡೆ ಸಾಧಿಸಿದ್ದರು. ಆದರೆ ಅಂತಿಮ 300–400 ಮೀಟರ್‌ಗಳಲ್ಲಿ ಗುವೋ ಲಿ ಅತ್ಯಲ್ಪ ಅಂತರದಲ್ಲಿ ಮುನ್ನಡೆ ಪಡೆದು ಸ್ವರ್ಣ ಪದಕ ಗೆದ್ದರು. ಹಾಂಗ್‌ಕಾಂಗ್‌ನ ಲಿಯಾಂಗ್ ವಿಂಗ್ ಯೀ ಕಂಚಿನ ಪದಕ ಪಡೆದರು.
ಇದಕ್ಕೂ ಎರಡು ದಿನಗಳ ಮೊದಲು ನಡೆದ 24.2 ಕಿ.ಮೀ. ವೈಯಕ್ತಿಕ ಟೈಮ್ ಟ್ರಯಲ್ ಸ್ಪರ್ಧೆಯಲ್ಲಿ ಫರೀಬಾ ಏಳನೇ ಸ್ಥಾನ ಪಡೆದಿದ್ದರು.
ವೇಷ ಬದಲಿಸಿ ಸೈಕ್ಲಿಂಗ್ ತರಬೇತಿ
ಉತ್ತರ ಅಫ್ಘಾನಿಸ್ತಾನದ ಫರ್ಯಾಬ್ ಪ್ರಾಂತ್ಯದ ಫರೀಬಾ ತಮ್ಮ 15ನೇ ವಯಸ್ಸಿನಲ್ಲಿ ಅಕ್ಕ ಯುಲ್ದುಜ್ ಹಾಶಿಮಿ ಅವರ ಪ್ರೇರಣೆಯಿಂದ ಸೈಕ್ಲಿಂಗ್ ಆರಂಭಿಸಿದ್ದರು. ಮಹಿಳೆಯರು ಸಾರ್ವಜನಿಕವಾಗಿ ಸೈಕಲ್ ಚಲಾಯಿಸುವುದಕ್ಕೆ ವಿರೋಧವಿದ್ದ ಸಾಂಪ್ರದಾಯಿಕ ವಾತಾವರಣದಲ್ಲಿ ಗುರುತು ಪತ್ತೆಯಾಗದಂತೆ ಪುರುಷರ ವೇಷ ಧರಿಸಿ ಅವರು ತರಬೇತಿ ಪಡೆಯುತ್ತಿದ್ದರು.
ಮುಖಕ್ಕೆ ಎರಡು-ಮೂರು ಮಾಸ್ಕ್‌ಗಳು, ಹೆಡ್‌ಸ್ಕಾರ್ಫ್ ಹಾಗೂ ಸನ್‌ಗ್ಲಾಸ್ ಧರಿಸಿ ಸೈಕ್ಲಿಂಗ್ ಮಾಡುತ್ತಿದ್ದ ಫರೀಬಾ ಮತ್ತು ಅವರ ಸಹೋದರಿಗೆ ತರಬೇತಿ ವೇಳೆ ಜನರು ಕಲ್ಲು, ಬಾಟಲಿ ಎಸೆದು ನಿಂದಿಸುತ್ತಿದ್ದರು. ಇದೇ ವೇಳೆ ನಡೆದ ರಿಕ್ಷಾ ಅಪಘಾತದಲ್ಲಿ ಯುಲ್ದುಜ್ ಅವರ ಮಣಿಕಟ್ಟು ಮುರಿದ ಘಟನೆಯೂ ನಡೆದಿದೆ.
ತಾಲಿಬಾನ್ ಆಡಳಿತದ ಬಳಿಕ ದೇಶತ್ಯಾಗ
2020ರಲ್ಲಿ ಫರೀಬಾ ಮತ್ತು ಯುಲ್ದುಜ್ ಅಫ್ಘಾನಿಸ್ತಾನದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ 2021ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಕ್ರೀಡೆಗಳ ಮೇಲಿನ ನಿರ್ಬಂಧದಿಂದಾಗಿ ಅವರ ಕ್ರೀಡಾ ಬದುಕಿಗೂ ಸಂಕಷ್ಟ ಎದುರಾಯಿತು.
ಮಾಜಿ ವಿಶ್ವ ಚಾಂಪಿಯನ್ ಅಲೆಸ್ಸಾಂಡ್ರಾ ಕ್ಯಾಪೆಲ್ಲೊಟ್ಟೊ ಅವರ ನೆರವಿನಿಂದ ಸಹೋದರಿಯರು ಇಟಲಿಗೆ ವಲಸೆ ಹೋದರು. ಅಲ್ಲಿ ತರಬೇತಿ ಮುಂದುವರಿಸಿದ ಫರೀಬಾ 2022ರಲ್ಲಿ ಅಫ್ಘಾನ್ ರಾಷ್ಟ್ರೀಯ ಚಾಂಪಿಯನ್ ಆದರು. ಅಲ್ಲದೆ, UCI ರೇಸ್ ಗೆದ್ದ ಮೊದಲ ಅಫ್ಘಾನ್ ಮಹಿಳಾ ಸೈಕ್ಲಿಸ್ಟ್ ಎಂಬ ಸಾಧನೆ ಮಾಡಿದರು. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಅಫ್ಘಾನಿಸ್ತಾನವನ್ನು ಪ್ರತಿನಿಧಿಸಿದ್ದರು.
‘ಅಫ್ಘಾನ್ ಮಹಿಳೆಯರ ಶಕ್ತಿಯ ಸಂಕೇತ’
ಬೆಳ್ಳಿ ಪದಕ ಗೆದ್ದ ಬಳಿಕ ಮಾತನಾಡಿದ ಫರೀಬಾ, ಈ ಪದಕ ಅಫ್ಘಾನ್ ಮಹಿಳೆಯರ ಪ್ರತಿರೋಧ ಮತ್ತು ಶಕ್ತಿಯ ಸಂಕೇತವಾಗಿದೆ ಎಂದು ಹೇಳಿದರು.
“ನಾವು ಇಂದಿಗೂ ಬದುಕುಳಿದಿದ್ದೇವೆ ಮತ್ತು ಹೋರಾಡುತ್ತಿದ್ದೇವೆ ಎಂಬುದಕ್ಕೆ ಇದು ಸಾಕ್ಷಿ. ನನ್ನ ಮೇಲೆ ಬಿದ್ದ ಪ್ರತಿಯೊಂದು ಕಲ್ಲು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಶಕ್ತಿಯನ್ನು ನೀಡಿತು. ಮುಂದಿನ ಪೀಳಿಗೆಯ ಅಫ್ಘಾನ್ ಹೆಣ್ಣುಮಕ್ಕಳು ಯಾವುದೇ ಭಯವಿಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವಂತಾಗಲಿ” ಎಂದು ಅವರು ಆಶಯ ವ್ಯಕ್ತಪಡಿಸಿದರು.
ತಾಲಿಬಾನ್ ಆಡಳಿತದ ಬಳಿಕ ಅಫ್ಘಾನ್ ಮಹಿಳಾ ಕ್ರೀಡಾಪಟುಗಳ ಪರಿಸ್ಥಿತಿ ಜಾಗತಿಕ ಗಮನ ಸೆಳೆದಿದೆ. ನಿರಾಶ್ರಿತರಾಗಿರುವ ಅಫ್ಘಾನಿಸ್ತಾನದ ಮಹಿಳಾ ಕ್ರಿಕೆಟ್ ತಂಡ ಆಸ್ಟ್ರೇಲಿಯಾದಲ್ಲಿ ತರಬೇತಿ ಪಡೆಯುತ್ತಿರುವ ವರದಿಗಳೂ ಈ ಹಿಂದೆ ಪ್ರಕಟವಾಗಿದ್ದವು.
-
Uncategorized9 hours ago
ಬೋನಿಗೆ ಬಿದ್ದ ಅಪರೂಪದ ಕರಿ ಚಿರತೆ!
-
Uncategorized8 hours ago
ರಬ್ಬರ್ ಗೆ ಭರ್ಜರಿ ಬೆಲೆ; ರಬ್ಬರ್ ಶೀಟ್ ದರದಲ್ಲೂ ಏರಿಕೆ
-
Uncategorized6 hours ago
ಸಮುದ್ರಕ್ಕೆ ಇಳಿದಿದ್ದ ಉಜಿರೆ ಕಾಲೇಜಿನ ವಿದ್ಯಾರ್ಥಿ ಅಲೆಗಳ ಸೆಳೆತಕ್ಕೆ ಬಲಿ; ಮೃತದೇಹ ಪತ್ತೆ
-
Uncategorized10 hours ago
ಪುತ್ತೂರು–ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಶಾಸಕ ಅಶೋಕ್ ರೈ ಸೂಚನೆ
-
Uncategorized8 hours ago
ಪುತ್ತೂರು : ನಸುಕಿನ ಜಾವ ಹಳೇ ಕಟ್ಟಡದಲ್ಲಿ ಕಾಣಿಸಿದ ಬೆಂಕಿ – ಅನಾಹುತ ತಪ್ಪಿಸಲು ನೆರವಾದ ರವಿಕುಮಾರ್ ರೈ
-
Uncategorized7 hours ago
ಮುಂಬೈನಲ್ಲಿ ‘ಬನ’ ತುಳು ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ; ಎರಡೂ ಪ್ರೀಮಿಯರ್ ಶೋ ಹೌಸ್ಫುಲ್ |


















