ಮಂಗಳೂರು
Budget 2024 ವಿಕಸಿತ ಭಾರತಕ್ಕೆ ಮುನ್ನುಡಿ ಬರೆದ ಬಜೆಟ್ : ಬಿಜೆಪಿ ಕಾರ್ಯದರ್ಶಿ ಕ್ಯಾಪ್ಟನ್ ಬೃಜೇಶ್ ಚೌಟ ಬಣ್ಣನೆ
ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತದ ಪರಿಕಲ್ಪನೆಯಡಿ 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸುವ ನಿಟ್ಟಿನಲ್ಲಿ ವಿತ್ತ ಮಂತ್ರಿ ನಿರ್ಮಲಾ ಸೀತಾರಮನ್ರವರು ಮಂಡಿಸಿದ ದೂರದೃಷ್ಟಿಯ, ಪ್ರಗತಿಶೀಲ ಮತ್ತು ವಿತ್ತೀಯ ಶಿಸ್ತಿನ ಮಧ್ಯಂತರ ಬಜೆಟ್ 2024ನ್ನು ಬಿಜೆಪಿ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬೃಜೇಶ್ ಚೌಟ ಸ್ವಾಗತಿಸಿದ್ದಾರೆ.
ವಿಕಸಿತ ಭಾರತದ 4 ಸ್ತಂಭಗಳಾದ ಯುವಜನತೆ, ಬಡವರು, ಮಹಿಳೆಯರು ಮತ್ತು ರೈತರನ್ನು ಸಶಕ್ತಗೊಳಿಸುವ ಮೂಲಕ 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಭರವಸೆಯನ್ನು ಈ ಬಜೆಟ್ ನೀಡುತ್ತದೆ ಎಂದು ಅವರು ಗುಣಗಾನ ಮಾಡಿದ್ದಾರೆ
ಈ ಬಜೆಟ್ನಲ್ಲಿ ವಿತ್ತೀಯ ಕೊರತೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಬಂಡವಾಳ ವೆಚ್ಚಕ್ಕೆ ಐತಿಹಾಸಿಕ ಗರಿಷ್ಠ 11,11,111 ಕೋಟಿ ರೂಪಾಯಿಗಳನ್ನು ನೀಡುವ ಮೂಲಕ ಭಾರತದ ಆಧುನಿಕ ಮೂಲಸೌಕರ್ಯ ನಿರ್ಮಾಣದೊಂದಿಗೆ ಯುವಜನತೆಗೆ ಹೊಸ ಉದ್ಯೋಗಾವಕಾಶಗಳನ್ನು ಕಲ್ಪಿಸಲಿದೆ. ಸ್ಕಿಲ್ ಇಂಡಿಯಾ ಮಿಷನ್ ಯೋಜನೆಯಡಿ 1.4 ಕೋಟಿ ಯುವಕರಿಗೆ ತರಬೇತಿ ನೀಡಲಾಗಿದ್ದು, ಪುನರ್ ಕೌಶಲ್ಯ ಯೋಜನೆಯಡಿ 54 ಲಕ್ಷ ಯುವಕರಿಗೆ ತರಬೇತಿ ನೀಡಲಾಗಿದೆ. ದೇಶದಲ್ಲಿ 3,000 ಐಟಿಐ, 7 ಐಐಟಿ, 16 ಐಐಐಟಿಎಸ್, 7 ಐಐಎಂಎಸ್, 15 ಎಐಐಎಂಎಸ್ ನ್ನು ನಿರ್ಮಿಸಿರುವ ಕಾರ್ಯ ಶ್ಲಾಘನೀಯ ಎಂದು ಚೌಟ ಬಜೆಟ್ ಅನ್ನು ಕೊಂಡಾಡಿದ್ದಾರೆ
ಮೀನುಗಾರಿಕೆಗೆ ಹೊಸ ಸಚಿವಾಲಯ ಸ್ಥಾಪನೆ, ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಮೂಲಕ ಬಡ, ಮಧ್ಯಮ ವರ್ಗದವರ ಅಭಿವೃದ್ಧಿ ಹಾಗೂ ಈ ಯೋಜನೆಯಡಿಯಲ್ಲಿ ಮೀನುಗಾರರ ಆರ್ಥಿಕತೆಯ ಅಭಿವೃದ್ಧಿಯ ಜೊತೆಗೆ 55 ಲಕ್ಷ ಉದ್ಯೋಗ ಸೃಷ್ಟಿಯಿಂದ ಕರಾವಳಿ ರಾಜ್ಯಗಳ ಅಭಿವೃದ್ಧಿಯ ಜೊತೆಗೆ ನಮ್ಮ ಕರಾವಳಿ ಕರ್ನಾಟಕಕ್ಕೆ ವಿಶೇಷ ಕೊಡುಗೆಯಾಗಲಿದೆ ಎಂದರು
ರೂ 6.21 ಲಕ್ಷ ಕೋಟಿಯ ರಕ್ಷಣಾ ಕ್ಷೇತ್ರದ ಅನುದಾನ ನಮ್ಮ ಸೇನೆಗೆ ಇನ್ನಷ್ಟು ಬಲ ನೀಡಲಿದ್ದು, ಗಡಿಯ ರಕ್ಷಣೆ ಹಾಗೂ ಸೇನೆಯ ಸೌಕರ್ಯಗಳ ಆಧುನೀಕರಣಕ್ಕೆ ನೆರವಾಗಲಿದೆ. ಇದು ಹೆಚ್ಚಿನ ಭದ್ರತೆಗೆ ಇನ್ನಷ್ಟು ಪ್ರೋತ್ಸಾಹ ನೀಡಲಿದೆ. ಉತ್ಪಾದನೆಯ ವಿಷಯದಲ್ಲಿ ದೇಶವನ್ನು ಸ್ವತಂತ್ರಗೊಳಿಸುವ ಗುರಿಯೊಂದಿಗೆ ರಕ್ಷಣಾ ವಲಯದಲ್ಲಿ ಆತ್ಮನಿರ್ಭರತೆಯನ್ನು ಸಾಧಿಸಲಿದೆ ಎಂದರು
ದೇಶದ ಹಲವು ನಗರಗಳಲ್ಲಿ ಮೆಟ್ರೋ ರೈಲು ಮಾರ್ಗ ವಿಸ್ತರಣೆಗೆ ಅನುದಾನ, ಭವಿಷ್ಯದ ಸಾರಿಗೆ ಎಂದೇ ಬಿಂಬಿತವಾಗಿರುವ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಹಾಗೂ ಚಾರ್ಜಿಂಗ್ ಸ್ಟೇಷನ್ ಹೆಚ್ಚಳಕ್ಕೆ ಆದ್ಯತೆ, 40 ಸಾವಿರ ಹಳೆಯ ರೀತಿಯ ರೈಲ್ವೆ ಬೋಗಿಗಳನ್ನು ವಂದೇ ಭಾರತ್ ಬೋಗಿಗಳಾಗಿ ಪರಿವರ್ತನೆ, ಉಡಾನ್ ಯೋಜನೆಗೆ 517 ಹೊಸ ಮಾರ್ಗ ರೂಪಿಸುವ ಮೂಲಕ ಸಣ್ಣ ನಗರಗಳಿಗೂ ವಿಮಾನಯಾನ ಸೇವೆ ಒದಗಿಸುವ ಯೋಜನೆ ಅತ್ಯಂತ ಸ್ವಾಗತಾರ್ಹ ಬೆಳವಣಿಗೆ ಎಂದು ಶ್ಲ್ಯಾಘಿಸಿದ್ದಾರೆ
ರಾಜ್ಯಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಬಡ್ಡಿರಹಿತ ಸಾಲ ನೀಡುವ ಮೂಲಕ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದಂತಾಗಿದೆ. ಡೈರಿ ಉದ್ಯಮದಲ್ಲಿ ತೊಡಗಿರುವ ಕೃಷಿಕರಿಗೆ ನೆರವು, ರಾಸುಗಳಲ್ಲಿ ಕಂಡು ಬರುವ ಕಾಲು ಬಾಯಿ ರೋಗ ತಡೆಗೆ ಕ್ರಮ, ಪಿಎಂ ಫಸಲ್ ಬೀಮಾ ಯೋಜನೆಯಡಿ 4 ಕೋಟಿ ಕೃಷಿಕರಿಗೆ ಬೆಳೆ ವಿಮೆ, ಕೊಯ್ಲಿನ ನಂತರ ಕೃಷಿ ಉತ್ಪನ್ನಗಳ ಮಾರಾಟ ಹಾಗೂ ಸಂಸ್ಕರಣೆಗೆ ಖಾಸಗಿ ಹಾಗೂ ಸಾರ್ವಜನಿಕ ವಲಯದ ಸಹಭಾಗಿತ್ವದ ಪರಿಕಲ್ಪನೆ ಶ್ಲಾಘನೀಯ ನಡೆ.
ದೇಶದ ಎಲ್ಲ ಜಿಲ್ಲೆಗಳಲ್ಲೂ ಆಸ್ಪತ್ರೆ ಸ್ಥಾಪನೆ, 9 ರಿಂದ 14 ವರ್ಷದೊಳಗಿನ ಬಾಲಕಿಯರಿಗೆ ಗರ್ಭಕಂಠದ ಕ್ಯಾನ್ಸರ್ಗೆ ಲಸಿಕೆ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ್ ವಿಸ್ತರಣೆಯ ಮೂಲಕ ಆರೋಗ್ಯ ರಕ್ಷೆ ಒದಗಿಸಲಾಗಿದೆ.
ಈ ಮಧ್ಯಂತರ ಬಜೆಟ್ ಚುನಾವಣಾ ಪೂರ್ವ ಘೋಷಣೆಗಳ ಬಜೆಟ್ ಆಗದೆ ಜನ ಸಾಮಾನ್ಯನ ಜೀವನಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿಯವರ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ಪ್ರಯಾಸ್, ಸಬ್ ಕಾ ವಿಶ್ವಾಸ್” ಎನ್ನುವ ದೂರ ದೃಷ್ಟಿಯ ಘೋಷಣೆಯನ್ನು ಸಕಾರಗೊಳಿಸುವ ವಿಕಸಿತ ಭಾರತಕ್ಕೆ ಮುನ್ನುಡಿ ಬರೆದ ಅತ್ಯಂತ ಸ್ವಾಗತರ್ಹ ಬಜೆಟ್ ಇದಾಗಿದೆ ಎಂದು ಕ್ಯಾಪ್ಟನ್ ಚೌಟ ಬಣ್ಣಿಸಿದ್ದಾರೆ
ನಿಧನ ವಾರ್ತೆ
Mangaluru-ಮಂಗಳೂರು: ರಸ್ತೆ ದಾಟುತ್ತಿದ್ದ 2ನೇ ತರಗತಿ ವಿದ್ಯಾರ್ಥಿಯ ಮೇಲೆ ಬಸ್ ಹರಿದು ಸಾವು
ಶಾಲೆ ಮುಗಿಸಿ ಮನೆಗೆ ತೆರಳಲು ರಸ್ತೆ ದಾಟುತ್ತಿದ್ದ 2ನೇ ತರಗತಿಯ ವಿದ್ಯಾರ್ಥಿಯ ಮೇಲೆ ಖಾಸಗಿ ಬಸ್ ಹರಿದ ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದ 7 ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದಾರುಣ ಘಟನೆ ನಗರದ ಕಂಕನಾಡಿಯಲ್ಲಿ ನಡೆದಿದೆ. ಕಂಕನಾಡಿಯ ಸೈಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಮೃತಪಟ್ಟ ದುರ್ದೈವಿ.
ಮಂಗಳೂರು: ಶಾಲೆ ಮುಗಿಸಿ ಮನೆಗೆ ತೆರಳಲು ರಸ್ತೆ ದಾಟುತ್ತಿದ್ದ 2ನೇ ತರಗತಿಯ ವಿದ್ಯಾರ್ಥಿಯ ಮೇಲೆ ಖಾಸಗಿ ಬಸ್ ಹರಿದ ಪರಿಣಾಮ, ಗಂಭೀರವಾಗಿ ಗಾಯಗೊಂಡಿದ್ದ 7 ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದಾರುಣ ಘಟನೆ ನಗರದ ಕಂಕನಾಡಿಯಲ್ಲಿ ನಡೆದಿದೆ.
ಕಂಕನಾಡಿಯ ಸೈಂಟ್ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಮೃತಪಟ್ಟ ದುರ್ದೈವಿ.
ನ.25ರಂದು ಸಂಜೆ ಸುಮಾರು 4.15ರ ವೇಳೆಗೆ ಶಾಲೆ ಮುಗಿದ ಬಳಿಕ ಬಾಲಕ ಮನೆಗೆ ತೆರಳಲು ಶಾಲೆಯ ಮುಂಭಾಗದಲ್ಲಿರುವ ಕಂಕನಾಡಿ–ಫಳ್ನೀರ್ ರಸ್ತೆಯನ್ನು ದಾಟುತ್ತಿದ್ದ. ಈ ವೇಳೆ ಫಳ್ನೀರ್ ಕಡೆಗೆ ತೆರಳಲು ನಿಂತಿದ್ದ ಖಾಸಗಿ ಬಸ್ ಚಾಲಕ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಏಕಾಏಕಿ ಬಸ್ಸನ್ನು ಬಲಕ್ಕೆ ತಿರುಗಿಸಿ ಚಲಾಯಿಸಿದ್ದಾನೆ ಎನ್ನಲಾಗಿದೆ.
ಬಸ್ಸಿನ ಬಲಭಾಗ ಬಾಲಕನಿಗೆ ಡಿಕ್ಕಿಯಾದ ಪರಿಣಾಮ ಆತ ರಸ್ತೆಗೆ ಎಸೆಯಲ್ಪಟ್ಟಿದ್ದು, ಬಸ್ಸಿನ ಬಲ ಹಿಂಬದಿಯ ಚಕ್ರ ಬಾಲಕನ ಮೇಲೆ ಹರಿದಿದೆ. ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಬಸ್ ಚಾಲಕ ಹಾಗೂ ಸ್ಥಳೀಯರು ತಕ್ಷಣವೇ ಸಮೀಪದ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಂಜೆ 5.50ರ ಸುಮಾರಿಗೆ ಬಾಲಕ ಮೃತಪಟ್ಟಿದ್ದಾನೆ.
ಮಂಗಳೂರು
Priyanka Kharge-ಮಂಗಳೂರಿನಲ್ಲಿ ಭಾರತದ ಮೊದಲ ಸುಸ್ಥಿರ ಕರಾವಳಿ ಡೇಟಾ ಸೆಂಟರ್ ಸ್ಥಾಪನೆ : ತಣ್ಣೀರುಬಾವಿಯಲ್ಲಿ ಸ್ಥಳ ಪರಿಶೀಲಿಸಿದ ಸಚಿವ ಪ್ರಿಯಾಂಕ ಖರ್ಗೆ; ತಣ್ಣೀರು ಭಾವಿಯಲ್ಲಿ 49 ಎಕರೆ ಪ್ರದೇಶ ಗುರುತು; ಯೋಜನೆಯ ಕಾರ್ಯಸಾಧ್ಯತೆ ಪರಿಶೀಲನೆಗೆ ಕ್ರಮ – ಬಿಯಾಂಡ್ ಬೆಂಗಳೂರು ಆಶಯದಡಿ ಜಾಗತಿಕ ಮಟ್ಟದ ತಂತ್ರಜ್ಞಾನ ಪರಿಸರ ವ್ಯವಸ್ಥೆ ನಿರ್ಮಾಣಕ್ಕೆ ಮತ್ತೊಂದು ಹೆಜ್ಜೆ
ಮಂಗಳೂರಿನ ತಣ್ಣೀರ್ಭವಿಯಲ್ಲಿ ಭಾರತದ ಮೊದಲ ಸುಸ್ಥಿರ ಕರಾವಳಿ ಡೇಟಾ ಸೆಂಟರ್ ಸ್ಥಾಪಿಸುವ ಸಾಧ್ಯತೆಯನ್ನು ಕರ್ನಾಟಕ ಸರ್ಕಾರ ಪರಿಶೀಲಿಸುತ್ತಿದೆ. ರಾಜ್ಯದ ಡಿಜಿಟಲ್ ಮೂಲಸೌಕರ್ಯವನ್ನು ವಿಸ್ತರಿಸುವುದರ ಜೊತೆಗೆ ಪರಿಸರದ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನ ಆಧಾರಿತ ಅಭಿವೃದ್ಧಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಮಂಗಳೂರು, ನ.26: ಮಂಗಳೂರಿನ ತಣ್ಣೀರ್ಭವಿಯಲ್ಲಿ ಭಾರತದ ಮೊದಲ ಸುಸ್ಥಿರ ಕರಾವಳಿ ಡೇಟಾ ಸೆಂಟರ್ ಸ್ಥಾಪಿಸುವ ಸಾಧ್ಯತೆಯನ್ನು ಕರ್ನಾಟಕ ಸರ್ಕಾರ ಪರಿಶೀಲಿಸುತ್ತಿದೆ. ರಾಜ್ಯದ ಡಿಜಿಟಲ್ ಮೂಲಸೌಕರ್ಯವನ್ನು ವಿಸ್ತರಿಸುವುದರ ಜೊತೆಗೆ ಪರಿಸರದ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನ ಆಧಾರಿತ ಅಭಿವೃದ್ಧಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮಂಗಳೂರಿನ ತಣ್ಣೀರ್ಭವಿಯಲ್ಲಿರುವ ಪ್ರಸ್ತಾವಿತ ಸ್ಥಳವನ್ನು ಪರಿಶೀಲಿಸಿದರು. ಇಲ್ಲಿ ಸುಮಾರು 49 ಎಕರೆ ಭೂಮಿಯನ್ನು ಯೋಜನೆಯ ಕಾರ್ಯಸಾಧ್ಯತೆ ಪರಿಶೀಲನೆಗಾಗಿ ಗುರುತಿಸಲಾಗಿದೆ.
ಈ ಉಪಕ್ರಮದ ಕುರಿತು ಮಾತನಾಡಿದ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಅವರು, “ನಾವು ಒಪ್ಪಿಕೊಂಡರೂ, ಒಪ್ಪಿಕೊಳ್ಳದಿದ್ದರೂ ಎಐ (AI) ಈಗ ನಮ್ಮ ಬದುಕಿನ ಭಾಗವಾಗಿದೆ. ಎಐ ಯುಗದಲ್ಲಿ ಡೇಟಾ ಸೆಂಟರ್ಗಳು ಅತ್ಯಗತ್ಯ ಮೂಲಸೌಕರ್ಯಗಳಾಗಿವೆ. ಆದರೆ, ನೀರು ಮತ್ತು ವಿದ್ಯುತ್ನ್ನು ಸಮರ್ಥವಾಗಿ ಬಳಸಿಕೊಂಡು, ಪರಿಸರದ ಮೇಲಿನ ನಮ್ಮ ಜವಾಬ್ದಾರಿಗಳಿಗೆ ಯಾವುದೇ ಧಕ್ಕೆಯಾಗದಂತೆ ಈ ಮಹತ್ವದ ಮೂಲಸೌಕರ್ಯವನ್ನು ಸುಸ್ಥಿರ ರೀತಿಯಲ್ಲಿ ಅಭಿವೃದ್ಧಿಪಡಿಸುವುದು ನಮ್ಮ ಹೊಣೆಗಾರಿಕೆಯಾಗಿದೆ. ತಂತ್ರಜ್ಞಾನ ಆಧಾರಿತ ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಸುಸ್ಥಿರತೆ ಎರಡೂ ಪರಸ್ಪರ ಪೂರಕವಾಗಿ ಸಾಗಬಲ್ಲವು ಎಂಬುದನ್ನು ತೋರಿಸುವುದು ನಮ್ಮ ಉದ್ದೇಶವಾಗಿದೆ” ಎಂದರು.
ಕರ್ನಾಟಕ ಸುಸ್ಥಿರ ಡೇಟಾ ಸೆಂಟರ್ ನೀತಿ 2026–2031ರ ಅಡಿಯಲ್ಲಿ ಈ ಉಪಕ್ರಮವನ್ನು ಪರಿಶೀಲಿಸಲಾಗುತ್ತಿದ್ದು, ನವೀಕರಿಸಬಹುದಾದ ಇಂಧನ ಬಳಕೆ, ಸುಧಾರಿತ ಶೀತಲೀಕರಣ ತಂತ್ರಜ್ಞಾನಗಳು ಮತ್ತು ಪರಿಸರ ಸ್ನೇಹಿ ಡಿಜಿಟಲ್ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ.
ಒಟ್ಟು 49 ಎಕರೆ ಭೂಮಿಯಲ್ಲಿ, ಅನ್ವಯವಾಗುವ ಕರಾವಳಿ ನಿಯಂತ್ರಣ ವಲಯದ (CRZ) ನಿಯಮಗಳ ಪ್ರಕಾರ ಸುಮಾರು 20 ಎಕರೆ ಪ್ರದೇಶದಲ್ಲಿ ಶಾಶ್ವತ ನಿರ್ಮಾಣ ಕೈಗೊಳ್ಳಲು ಅವಕಾಶವಿದೆ ಎಂದು ಅಂದಾಜಿಸಲಾಗಿದೆ. ಮುಂದಿನ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಸ್ಥಳದ ಕಾರ್ಯಸಾಧ್ಯತೆ, ಮೂಲಸೌಕರ್ಯದ ಅಗತ್ಯತೆಗಳು ಹಾಗೂ ಪರಿಸರ ಸಂಬಂಧಿತ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುವುದು.
ಸ್ಥಳದ ಸೂಕ್ತತೆ, ಅಗತ್ಯ ಮೂಲಸೌಕರ್ಯಗಳ ಗುರುತಿಸುವಿಕೆ ಮತ್ತು ಸಮಗ್ರ ಶ್ವೇತಪತ್ರ ಸಿದ್ಧಪಡಿಸುವ ಉದ್ದೇಶದಿಂದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಇತರ ಸಂಬಂಧಪಟ್ಟ ಪಾಲುದಾರರೊಂದಿಗೆ ಸರ್ಕಾರ ಸಮಾಲೋಚನೆ ನಡೆಸಲಿದೆ. ಈ ಶ್ವೇತಪತ್ರದಲ್ಲಿ ಸ್ಥಳದ ಅವಕಾಶಗಳು, ಮಿತಿಗಳು ಮತ್ತು ಅಭಿವೃದ್ಧಿಯ ಸಾಧ್ಯತೆಗಳನ್ನು ವಿವರಿಸಲಾಗುವುದು. ಖಾಸಗಿ ವಲಯದ ಕಂಪನಿಗಳು ಹಾಗೂ ಸಂಭಾವ್ಯ ಹೂಡಿಕೆದಾರರೊಂದಿಗೆ ಚರ್ಚೆ ನಡೆಸಲು ಇದು ಆಧಾರವಾಗಲಿದೆ.
ಎಐ ಯುಗಕ್ಕೆ ಸುಸ್ಥಿರ ಡಿಜಿಟಲ್ ಮೂಲಸೌಕರ್ಯ
ಕೃತಕ ಬುದ್ಧಿಮತ್ತೆ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳ ತ್ವರಿತ ಬೆಳವಣಿಗೆಯೊಂದಿಗೆ ಡೇಟಾ ಸೆಂಟರ್ಗಳು ಡಿಜಿಟಲ್ ಆರ್ಥಿಕತೆಯ ಅತ್ಯಗತ್ಯ ಮೂಲಸೌಕರ್ಯಗಳಾಗಿ ಹೊರಹೊಮ್ಮುತ್ತಿವೆ. ಈ ಬೆಳವಣಿಗೆಯ ಜೊತೆಗೆ ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆ ಮತ್ತು ಪರಿಸರ ಸಂರಕ್ಷಣಾ ಕ್ರಮಗಳಿಗೂ ಆದ್ಯತೆ ನೀಡುವುದು ಕರ್ನಾಟಕದ ಉದ್ದೇಶವಾಗಿದೆ.
ಕರ್ನಾಟಕ ಸುಸ್ಥಿರ ಡೇಟಾ ಸೆಂಟರ್ ನೀತಿ 2026–2031ರ ಅಡಿಯಲ್ಲಿ, ಪರಿಸರದ ಜವಾಬ್ದಾರಿಗಳನ್ನು ಮೂಲಸೌಕರ್ಯ ಅಭಿವೃದ್ಧಿಯ ಕೇಂದ್ರವಾಗಿಟ್ಟುಕೊಂಡು ರಾಜ್ಯದಲ್ಲಿ 1 GW ಸಾಮರ್ಥ್ಯದ ಡೇಟಾ ಸೆಂಟರ್ ಮೂಲಸೌಕರ್ಯವನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ.
ತಣ್ಣೀರ್ಭವಿಯಲ್ಲಿ ಪ್ರಸ್ತಾವಿತವಾಗಿರುವ ಡೇಟಾ ಸೆಂಟರ್ನಲ್ಲಿ ನವೀಕರಿಸಬಹುದಾದ ಇಂಧನ, ಇಂಧನ ದಕ್ಷತೆಯ ಕಾರ್ಯಾಚರಣೆಗಳು, ಸುಧಾರಿತ ಶೀತಲೀಕರಣ ತಂತ್ರಜ್ಞಾನಗಳು ಮತ್ತು ಜವಾಬ್ದಾರಿಯುತ ನೀರಿನ ನಿರ್ವಹಣೆಗೆ ಒತ್ತು ನೀಡುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಮೂಲಕ ಕರಾವಳಿ ಪರಿಸರಕ್ಕೆ ಪೂರಕವಾಗಿ ಬೃಹತ್ ಡಿಜಿಟಲ್ ಮೂಲಸೌಕರ್ಯವನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದನ್ನು ತೋರಿಸುವುದು ಉದ್ದೇಶವಾಗಿದೆ.
ಮಂಗಳೂರು, ಮಣಿಪಾಲ ಮತ್ತು ಉಡುಪಿ: ಉದಯೋನ್ಮುಖ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರಗಳು
ಪ್ರಸ್ತಾವಿತ ಡೇಟಾ ಸೆಂಟರ್ ಕರ್ನಾಟಕದ ಕರಾವಳಿ ಭಾಗವನ್ನು ಸಮೃದ್ಧ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವಾಗಿ ರೂಪಿಸುವ ರಾಜ್ಯದ ವಿಶಾಲ ದೂರದೃಷ್ಟಿಯ ಭಾಗವಾಗಿದೆ. ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs), ಸ್ಟಾರ್ಟ್ಅಪ್ಗಳು, ಡೀಪ್ಟೆಕ್, ಸಾಗರ ಜೈವಿಕ ತಂತ್ರಜ್ಞಾನ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ಆದ್ಯತೆ ನೀಡುವ ಮೂಲಕ ಮಂಗಳೂರು, ಮಣಿಪಾಲ ಮತ್ತು ಉಡುಪಿಯನ್ನು ಪರಸ್ಪರ ಪೂರಕವಾದ ತಂತ್ರಜ್ಞಾನ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಪೂರಕವಾಗಿ ಉದ್ಯಮಗಳ ಸಹಭಾಗಿತ್ವದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಪ್ರತಿಭಾ ವಿಕಸನಕ್ಕೂ ಒತ್ತು ನೀಡಲಾಗುತ್ತಿದೆ.
ಈ ಪ್ರದೇಶವು ಈಗಾಗಲೇ ಸುಮಾರು ₹5,000 ಕೋಟಿ ಮೌಲ್ಯದ ಐಟಿ ರಫ್ತುಗಳನ್ನು ದಾಖಲಿಸಿದ್ದು, ಕರ್ನಾಟಕದ ತಂತ್ರಜ್ಞಾನ ಆರ್ಥಿಕತೆಗೆ ತನ್ನ ಕೊಡುಗೆಯನ್ನು ಹೆಚ್ಚಿಸುತ್ತಿದೆ. ಹೊಸ ಹೂಡಿಕೆಗಳನ್ನು ಆಕರ್ಷಿಸುವುದು, ನ್ಯಾನೋ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಸ್ಥಾಪನೆಗೆ ಉತ್ತೇಜನ ನೀಡುವುದು ಮತ್ತು ಸ್ಥಳೀಯ ಪ್ರತಿಭೆಗಳಿಗೆ ಉನ್ನತ ಮೌಲ್ಯದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಈ ಬೆಳವಣಿಗೆಯನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರ ಹೆಚ್ಚಿನ ಅವಕಾಶಗಳನ್ನು ಕಾಣುತ್ತಿದೆ.
ಬಿಯಾಂಡ್ ಬೆಂಗಳೂರು ಎಂಬ ದೂರದೃಷ್ಟಿಯ ಮೂಲಕ ರಾಜ್ಯದಾದ್ಯಂತ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ತಂತ್ರಜ್ಞಾನ ಕ್ಲಸ್ಟರ್ಗಳನ್ನು ನಿರ್ಮಿಸಲು ಕರ್ನಾಟಕ ಬದ್ಧವಾಗಿದೆ. ಈ ಮೂಲಕ ನಾವೀನ್ಯತೆ, ಹೂಡಿಕೆ ಮತ್ತು ಉದ್ಯೋಗಾವಕಾಶಗಳು ಬೆಂಗಳೂರು ಮಹಾನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.
ಪ್ರಸ್ತಾವಿತ ಸುಸ್ಥಿರ ಕರಾವಳಿ ಡೇಟಾ ಸೆಂಟರ್ ಮುಂದಿನ ತಲೆಮಾರಿನ ಡಿಜಿಟಲ್ ಮೂಲಸೌಕರ್ಯ, ಖಾಸಗಿ ವಲಯದ ಸಹಭಾಗಿತ್ವ ಮತ್ತು ಪರಿಸರ ಜವಾಬ್ದಾರಿಯನ್ನು ಒಂದೆಡೆ ತರುವ ಮಹತ್ವದ ಅವಕಾಶವಾಗಿದೆ. ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಸುಸ್ಥಿರತೆ ಒಟ್ಟೊಟ್ಟಿಗೆ ಸಾಗಬಲ್ಲವು ಎಂಬುದನ್ನು ತೋರಿಸುವ ಮೂಲಕ ಸದೃಢ ಹಾಗೂ ಭವಿಷ್ಯದ ಅಗತ್ಯಗಳಿಗೆ ಸನ್ನದ್ಧವಾಗಿರುವ ತಂತ್ರಜ್ಞಾನ ಆರ್ಥಿಕತೆಯನ್ನು ನಿರ್ಮಿಸುವುದು ಕರ್ನಾಟಕದ ವಿಶಾಲ ಉದ್ದೇಶವಾಗಿದೆ.
ಅಪರಾಧ
Mangalore-ಚಿನ್ನ ಕಳ್ಳಸಾಗಣೆ ಜಾಲ: ಮಂಗಳೂರು ವಿಮಾನ ನಿಲ್ದಾಣದ ಇಬ್ಬರು ಸಿಬ್ಬಂದಿ ಸಹಿತ ಮೂವರು ಡಿಆರ್ಐ ವಶಕ್ಕೆ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಜಾಲಕ್ಕೆ ನೆರವು ನೀಡುತ್ತಿದ್ದ ಹೊರಗುತ್ತಿಗೆ ಸಂಸ್ಥೆಯ ಇಬ್ಬರು ಸಿಬ್ಬಂದಿ ಸೇರಿದಂತೆ ಮೂವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸುಮಾರು 2 ಕೋಟಿ ರೂ. ಮೌಲ್ಯದ 1.65 ಕೆ.ಜಿ. ಚಿನ್ನ ಹಾಗೂ 73 ಲಕ್ಷ ರೂ. ನಗದು ಸೇರಿದಂತೆ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆ ಜಾಲಕ್ಕೆ ನೆರವು ನೀಡುತ್ತಿದ್ದ ಹೊರಗುತ್ತಿಗೆ ಸಂಸ್ಥೆಯ ಇಬ್ಬರು ಸಿಬ್ಬಂದಿ ಸೇರಿದಂತೆ ಮೂವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಸುಮಾರು 2 ಕೋಟಿ ರೂ. ಮೌಲ್ಯದ 1.65 ಕೆ.ಜಿ. ಚಿನ್ನ ಹಾಗೂ 73 ಲಕ್ಷ ರೂ. ನಗದು ಸೇರಿದಂತೆ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಇಬ್ಬರು ಸಿಬ್ಬಂದಿಯಲ್ಲಿ ಒಬ್ಬರು ಮಂಗಳೂರು ಮೂಲದವರಾಗಿದ್ದು, ಮತ್ತೊಬ್ಬರು ಕಾಸರಗೋಡು ಮೂಲದವರು ಎಂದು ತಿಳಿದುಬಂದಿದೆ. ದುಬೈ ಹಾಗೂ ಕೇರಳ ಮೂಲದ ಚಿನ್ನ ಕಳ್ಳಸಾಗಣೆ ಜಾಲದೊಂದಿಗೆ ಸಂಪರ್ಕ ಹೊಂದಿ ಅಕ್ರಮ ಚಿನ್ನ ಸಾಗಾಟಕ್ಕೆ ನೆರವಾಗುತ್ತಿದ್ದ ಆರೋಪ ಇವರ ಮೇಲಿದೆ.
ವ್ಯವಸ್ಥಿತವಾಗಿ ನಡೆಯುತ್ತಿದ್ದ ಕಳ್ಳಸಾಗಣೆ
ದುಬೈ ಸೇರಿದಂತೆ ವಿದೇಶಗಳಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕರು, ಮಂಗಳೂರು ವಿಮಾನ ನಿಲ್ದಾಣದ ಇಮಿಗ್ರೇಷನ್ ಕೌಂಟರ್ ಬಳಿಯ ಶೌಚಾಲಯದಲ್ಲಿ ಚಿನ್ನವನ್ನು ಅಡಗಿಸಿಟ್ಟು ತೆರಳುತ್ತಿದ್ದರು ಎನ್ನಲಾಗಿದೆ. ಬಳಿಕ ಈ ಮಾಹಿತಿಯನ್ನು ಜಾಲದ ಸಂಪರ್ಕದಲ್ಲಿದ್ದ ವಿಮಾನ ನಿಲ್ದಾಣದ ಸಿಬ್ಬಂದಿಗೆ ತಲುಪಿಸಲಾಗುತ್ತಿತ್ತು. ವಿಮಾನಗಳ ನಿರ್ವಹಣಾ ಕಾರ್ಯ ಮುಗಿದ ಬಳಿಕ ಸಿಬ್ಬಂದಿ ಶೌಚಾಲಯಕ್ಕೆ ತೆರಳಿ, ಅಲ್ಲಿ ಅಡಗಿಸಿಟ್ಟ ಚಿನ್ನವನ್ನು ಹೊರತೆಗೆದು ತಮ್ಮ ಸಂಪರ್ಕದಲ್ಲಿದ್ದ ಕಳ್ಳಸಾಗಣೆದಾರರಿಗೆ ಹಸ್ತಾಂತರಿಸುತ್ತಿದ್ದರು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಖಚಿತ ಮಾಹಿತಿಯ ಮೇರೆಗೆ ಡಿಆರ್ಐ ಅಧಿಕಾರಿಗಳು ಆರೋಪಿಗಳ ಮೇಲೆ ನಿಗಾ ಇರಿಸಿದ್ದರು. ಅದರಂತೆ ನ. 23ರಂದು ಇಮಿಗ್ರೇಷನ್ ಕೌಂಟರ್ ಬಳಿಯ ಶೌಚಾಲಯದಿಂದ ಚಿನ್ನದ ಪೇಸ್ಟ್ ರೂಪದ ಎರಡು ಪ್ಯಾಕ್ಗಳನ್ನು ಹೊರತೆಗೆಯುತ್ತಿದ್ದ ಮಂಗಳೂರು ಮೂಲದ ಸಿಬ್ಬಂದಿಯನ್ನು ಅಧಿಕಾರಿಗಳು ಹಿಡಿದಿದ್ದಾರೆ.
ಈ ಚಿನ್ನವನ್ನು ಆತ ಕಾಸರಗೋಡು ಮೂಲದ ಮತ್ತೊಬ್ಬ ಸಿಬ್ಬಂದಿಗೆ ಹಸ್ತಾಂತರಿಸಬೇಕಿತ್ತು. ಬಳಿಕ ಆ ಸಿಬ್ಬಂದಿ ವಿಮಾನ ನಿಲ್ದಾಣದಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿರುವ ಸ್ಥಳಕ್ಕೆ ಚಿನ್ನವನ್ನು ಕೊಂಡೊಯ್ದು ಜಾಲದ ಮೂರನೇ ವ್ಯಕ್ತಿಗೆ ತಲುಪಿಸಲು ಯೋಜಿಸಿದ್ದ ಎನ್ನಲಾಗಿದೆ. ಅಧಿಕಾರಿಗಳು ತ್ವರಿತ ಕಾರ್ಯಾಚರಣೆ ನಡೆಸಿ ಉಳಿದ ಇಬ್ಬರನ್ನೂ ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸುಮಾರು 2 ಕೋಟಿ ರೂ. ಮೌಲ್ಯದ 1.65 ಕೆ.ಜಿ. ಚಿನ್ನ, 73 ಲಕ್ಷ ರೂ. ನಗದು, ಒಂದು ಕಾರು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಮೂವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಡಿ. 7ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ.
ಇದಕ್ಕೂ ಮೊದಲು 1.77 ಕೋಟಿ ರೂ. ಮೌಲ್ಯದ ಚಿನ್ನ ವಶ
ಇದಕ್ಕೂ ಮುನ್ನ ನ. 14ರಂದು ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಕಾಸರಗೋಡು ಮೂಲದ ಇಬ್ಬರು ಪ್ರಯಾಣಿಕರು ದೇಹದೊಳಗೆ ಚಿನ್ನವನ್ನು ಅಡಗಿಸಿಕೊಂಡು ಸಾಗಿಸುತ್ತಿದ್ದ ವೇಳೆ ಡಿಆರ್ಐ ಅಧಿಕಾರಿಗಳ ವಶಕ್ಕೆ ಸಿಕ್ಕಿದ್ದರು. ಅವರಿಂದ ಸುಮಾರು 1.77 ಕೋಟಿ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಯ ಹಿತದೃಷ್ಟಿಯಿಂದ ಬಂಧಿತ ಆರೋಪಿಗಳ ಹೆಸರುಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
-
ಸುಳ್ಯ20 hours agoSuresh Raina-ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸುಳ್ಯದ ‘ರಸಪಾಕ ಗ್ರಾಂಡ್’ ಹೋಟೆಲ್ ಗೆ ಭೇಟಿ
-
ಅಂತರ ರಾಜ್ಯ23 hours agoCM post battle-ಉತ್ತರ ಪ್ರದೇಶ ಬಿಜೆಪಿಯಲ್ಲಿ ಸಿಎಂ ಕುರ್ಚಿ ಕದನ: ಚುನಾವಣೆಗೂ ಮುನ್ನವೇ ಭಿನ್ನಮತ?
-
ಅಂತರ ರಾಜ್ಯ23 hours agoInsurance policy-ವಿಮೆ ಇಲ್ಲದ ವಾಹನಗಳಿಗೆ ಕಡಿವಾಣ: ಹೊಸ ನಿಯಮ ಜಾರಿಗೆ ಕೇಂದ್ರ ಚಿಂತನೆ; ಕಾರಿಗೆ 4 ವರ್ಷ, ಬೈಕ್ಗೆ 6 ವರ್ಷಗಳ ವಿಮೆ
-
ಸ್ಥಳೀಯ20 hours agoUppinangadi-ಉಪ್ಪಿನಂಗಡಿ: ಇಂದಿನಿಂದ ವಳಾಲು ಟೋಲ್ ಕಾರ್ಯಾರಂಭ; ಶೀಘ್ರದಲ್ಲೇ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು..!
-
ಬಿಗ್ ನ್ಯೂಸ್23 hours agoTulu language-ತುಳು ಭಾಷೆ ಅನುಷ್ಠಾನಕ್ಕೆ ಸರ್ಕಾರದಿಂದ ಅಧಿಕೃತ ಆದೇಶ; ಸರ್ಕಾರಿ ಕಚೇರಿಗಳಲ್ಲೂ ತುಳುವಿಗೆ ಮನ್ನಣೆ..!
-
ಅಂತರ ರಾಜ್ಯ23 hours agoWhatsApp-ವಾಟ್ಸಾಪ್ನಲ್ಲಿ ಬಂತು ಹೊಸ ಫೀಚರ್; ಎರಡು ವಾರ ಮೊದಲೇ ಮೆಸೇಜ್ ಟೈಪ್ ಮಾಡಿ ಶೆಡ್ಯೂಲ್ ಮಾಡುವ ಅವಕಾಶ..!
-
ಸ್ಥಳೀಯ17 hours agoKadaba-ಕಡಬ: ಜಾಗದ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ; ಪರಸ್ಪರ ಹಲ್ಲೆ, ಜೀವಬೆದರಿಕೆ ಆರೋಪ; ಎರಡೂ ಕಡೆಯಿಂದ ಪ್ರಕರಣ ದಾಖಲು
-
ಅಪರಾಧ23 hours agoGym protein powder-ಸ್ಟೆರಾಯ್ಡ್, ಹಾನಿಕಾರಕ ರಾಸಾಯನಿಕ ಬೆರೆಸಿರುವ ಶಂಕೆ; ಜಿಮ್ ಪ್ರೊಟೀನ್ ಪೌಡರ್ ಗುಣಮಟ್ಟ ಪರೀಕ್ಷೆಗೆ ಸರ್ಕಾರ ಸಿದ್ಧತೆ















