ಮಂಗಳೂರು
ಪುತ್ತೂರು : ಅಡಿಕೆಯನ್ನು ಜಗಿದು ಉಗಿಯುವ ವಸ್ತುವೆಂದಷ್ಟೇ ಪರಿಗಣಿಸಬೇಡಿ : ಅಡಿಕೆ ಬೆಳೆಗಾರರ ಹಕ್ಕೊತ್ತಾಯ ಸಮಾವೇಶದಲ್ಲಿ ಸರಕಾರಕ್ಕೆ ಕಟು ಶಬ್ದಗಳ ಸಂದೇಶ
ಪುತ್ತೂರು : ಜ 8 : ಅಡಿಕೆ ಕೇವಲ ಜಗಿದು ಉಗಿಯುವ ವಸ್ತು ಅಷ್ಟೇ ಅಲ್ಲ. ತೆಂಗಿನಕಾಯಿ ಹೇಗೆ ನಮಗೆ ಕಲ್ಪವೃಕ್ಷವೋ, ಅಡಿಕೆಯೂ ಹಾಗೆ ನಮ್ಮ ಪಾಲಿನ ಎರಡನೇ ಕಲ್ಪವೃಕ್ಷ. ಅಡಿಕೆಯ ಮಾನ ಹೋಗದಂತೆ ತಡೆಯುವ ಜವಾಬ್ದಾರಿ ಸರಕಾರದ ಮೇಲೂ ಇದೆ, ಕ್ಯಾಂಪ್ಕೋದಂಥ ಸಂಸ್ಥೆಗಳ ಮೇಲೂ ಇದೆ. ಸುಪ್ರೀಂ ಕೋರ್ಟ್ ಕಟಕಟೆಯಲ್ಲಿ ಅಡಿಕೆಯ ಮಾನ ಸಂರಕ್ಷಣೆ ಮಾಡಬೇಕು. ಅದು ಆರೋಗ್ಯಕ್ಕೆ ಹಾನಿಕರವಲ್ಲ, ಅದು ಆರೋಗ್ಯವರ್ಧಕ ಎಂದು ಸಾಬೀತು ಮಾಡಿ. ಇಲ್ಲದೇ ಹೋದಲ್ಲಿ ಅಡಿಕೆ ಬೆಳೆಗಾರರ ಕೋಪ ಎದುರಿಸುವ ಅನಿವಾರ್ಯತೆ ಎದುರಾಗಬಹುದು..!
ಇದು ಪುತ್ತೂರಿನಲ್ಲಿ ವಿಜಯ ಕರ್ನಾಟಕ ಪತ್ರಿಕೆ ಆಶ್ರಯದಲ್ಲಿ ಜನವರಿ ೪ರಂದು ಬುಧವಾರ ನಡೆದ ಜಿಲ್ಲಾ ಮಟ್ಟದ ಅಡಿಕೆ ಬೆಳೆಗಾರರ ಹಕ್ಕೊತ್ತಾಯ ಸಮಾವೇಶದಲ್ಲಿ ಕೈಗೊಂಡ ಹಕ್ಕೊತ್ತಾಯ ನಿರ್ಣಯ.
ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶವನ್ನು ಕ್ಯಾಂಪ್ಕೋ ಉಪಾಧ್ಯಕ್ಷರಾದ ಶಂ.ನಾ. ಖಂಡಿಗೆ ಉದ್ಘಾಟಿಸಿದರು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ವಿಟ್ಲ ಸಿಪಿಸಿಆರ್‌ಐ ಹಿರಿಯ ವಿಜ್ಞಾನಿ ಡಾ.ನಾಗರಾಜ್ ಎನ್.ಆರ್., ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರುಗಳಾದ ಪ್ರದೀಪ್ ಡಿಸೋಜ, ರೇಖಾ ಮುಖ್ಯ ಅತಿಥಿಗಳಾಗಿದ್ದರು.

ಬೆಳಗ್ಗೆ ೧೦.೩೦ಕ್ಕೆ ಆರಂಭಗೊಂಡ ಸಮಾವೇಶದಲ್ಲಿ ಅತಿಥಿ, ಉದ್ಘಾಟಕರ ಭಾಷಣಕ್ಕಿಂತಲೂ ಹೆಚ್ಚಿನ ಮಹತ್ವವನ್ನು ರೈತರ ಜತೆಗಿನ ಸಂವಾದಕ್ಕೆ ನೀಡಲಾಯಿತು. ಜಿಲ್ಲೆಯ ಮೂಲೆ ಮೂಲೆಯಿಂದ ಬಂದಿದ್ದ ರೈತರು ತಮ್ಮ ಅನುಭವ, ಅನಿಸಿಕೆ, ಆಗ್ರಹ, ಸಿಟ್ಟು, ಅಸಮಾಧಾನ, ಆಕ್ರೋಶ ಎಲ್ಲವನ್ನೂ ಮುಕ್ತವಾಗಿ ಹೊರಹಾಕಿದರು. ತಮ್ಮದೇ ಆದ ಹಕ್ಕೊತ್ತಾಯಗಳನ್ನು ಮಂಡಿಸಿದರು. ಇತ್ತೀಚೆಗೆ ಸಚಿವ ಆರಗ ಜ್ಞಾನೇಂದ್ರ ನೀಡಿದ ವಿವಾದಾಸ್ಪದ ಹೇಳಿಕೆಯೂ ಸಮವೇಶದಲ್ಲಿ ಆಕ್ರೋಶಕ್ಕೆ ಕಾರಣವಾಯಿತು.
ಸಮಾವೇಶದಲ್ಲಿ ಒಟ್ಟು 7 ಅಂಶಗಳ ಹಕ್ಕೊತ್ತಾಯ ಅಂಗೀಕರಿಸಿ ಅದನ್ನು ಸರಕಾರಕ್ಕೆ ಸಲ್ಲಿಸಲಾಯಿತು.
ಹಕ್ಕೋತ್ತಾಯಗಳು :
೧. ಅಡಿಕೆಯನ್ನು ಕೇವಲ ಜಗಿದು, ಉಗಿಯುವ ವಸ್ತುವೆಂದು ಪರಿಗಣಿಸದೆ ಆಹಾರ ವಸ್ತುಗಳಲ್ಲಿ ಮತ್ತು ವಿಶೇಷವಾಗಿ ಅಡಕೆಯಲ್ಲಿರುವ ಔಷಧೀಯ ಅಂಶಗಳ ಕಡೆಗೆ ಗಮನ ಹರಿಸಬೇಕು. ರೈತ ವಿಜ್ಞಾನಿಗಳು ಅಡಕೆಯಿಂದ ಅನೇಕ ಬಗೆಯ ಆಹಾರ ವಸ್ತುಗಳು, ಪಾನೀಯ, ಐಸ್‌ಕ್ರೀಂ ಮತ್ತಿತರ ತಿನಿಸುಗಳನ್ನು ತಯಾರಿಸಿದ್ದಾರೆ. ವಿದೇಶದಲ್ಲಿ ಅಡಿಕೆ ಆಧರಿತ ಆಹಾರ ವಸ್ತುಗಳು ಬಳಕೆಯಲ್ಲಿವೆ. ಅಡಕೆಯ ಮೌಲ್ಯವರ್ಧಿತ ಉತ್ಪನ್ನಗಳ ಸಂಶೋಧನೆಯತ್ತ ಸರಕಾರ ಗಮನ ಹರಿಸಬೇಕು.
೨. ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳಿಗೆ ಅಡಿಕೆಯಲ್ಲಿ ಔಷಧವಿದೆ ಎಂಬ ಅಂಶ ಈಗಾಗಲೇ ಪ್ರಾಥಮಿಕ ಸಂಶೋಧನೆಯಿಂದ ಬೆಳಕಿಗೆ ಬಂದಿರುವ ಮಾಹಿತಿ ಬಿತ್ತರಗೊಂಡಿದೆ. ಈ ನಿಟ್ಟಿನಲ್ಲಿ ಸರಕಾರ ಅಧಿಕೃತವಾಗಿ ಸಂಶೋಧನೆ ನಡೆಸಬೇಕು. ಅಡಿಕೆಯನ್ನು ಮೆಡಿಸಿನ್ ಪ್ಲ್ಯಾಂಟ್ (ಔಷಧೀಯ ಸಸ್ಯ) ಎಂದು ಘೋಷಿಸಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು.

೩. ಅಡಿಕೆ ಕ್ಯಾನ್ಸರ್‌ಕಾರಕ ಎಂಬ ಆಪಾದನೆ ಸರ್ವೋಚ್ಚ ನ್ಯಾಯಾಲಯದ ವಿಚಾರಣಾ ಹಂತದಲ್ಲಿದೆ. ಆಧಾರರಹಿತವಾದ ಈ ಆಪಾದನೆಯನ್ನು ಸುಳ್ಳೆಂದು ಸಾಬೀತುಪಡಿಸುವ ನಿಟ್ಟಿನಲ್ಲಿ ಕಟಿಬದ್ಧವಾದ ನ್ಯಾಯಾಂಗ ಹೋರಾಟ ಮಾಡಬೇಕಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಅಡಿಕೆ ಆರೋಗ್ಯಕ್ಕೆ ಉತ್ತೇಜಕ ಎಂಬ ವರದಿಯನ್ನು ನ್ಯಾಯಾಲಯಕ್ಕೆ ತಕ್ಷಣ ಸಲ್ಲಿಸಬೇಕು.
೪. ಅಡಿಕೆ ಆಮದು ಪ್ರಮಾಣ ಮತ್ತು ವಿದೇಶದಿಂದ ಅಡಿಕೆ ಕಳ್ಳಸಾಗಾಣಿಕೆ ಪ್ರಮಾಣ ಕಡಿಮೆಯಾದ ನಂತರ ಧಾರಣೆ ಏರುಗತಿಯಾಗಿದೆ. ಅಡಿಕೆ ಆಮದು ಪ್ರಮಾಣ ಮತ್ತೆ ಹಚ್ಚಳಗೊಂಡಲ್ಲಿ, ಕಳ್ಳಸಾಗಣಿಕೆ ನಿಯಂತ್ರಣ ತಪ್ಪಿದಲ್ಲಿ ಅಡಿಕೆ ಧಾರಣೆ ಕುಸಿಯುವ ಅಪಾಯವಿದೆ. ಹೀಗಾಗಿ ಆಮದು ನಿಯಂತ್ರಣ, ಆಮದು ಸುಂಕ ಹೆಚ್ಚಳ, ಕಳ್ಳಸಾಗಾಣಿಕೆ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೇಂದ್ರದ ಮೇಲೆ ರಾಜ್ಯ ಸರಕಾರ ಒತ್ತಡ ತರಬೇಕು.

೫. ಅಡಿಕೆ ಅಭಿವೃದ್ಧಿ ಮಂಡಳಿ ಸ್ಥಾಪಿಸಲು ಬೇಕಾದ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು.
೬. ಹಳದಿ ರೋಗ ಮತ್ತು ಎಲೆಚುಕ್ಕಿ ರೋಗದಿಂದ ಬೆಳೆಗಾರರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಇವರಿಗೆ ರೋಗ ನಷ್ಟದ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು. ಹವಾಮಾನ ಆಧರಿತ ಬೆಳೆ ವಿಮಾ ಯೋಜನೆಯಲ್ಲಿ ಪರಿಹಾರ ಮೊತ್ತವು ಹೆಕ್ಟೇರ್‌ಗೆ ಗರಿಷ್ಠ ೬೦ ಸಾವಿರ ರೂ. ಪ್ರಾಪ್ತಿಯಾಗಿದ್ದು, ಅಡಿಕೆ ಬೆಳೆಯು ರೋಗಕ್ಕೆ ತುತ್ತಾಗಿರುವ ಕಾರಣ ಈ ಮೊತ್ತವನ್ನು ೧ ಲಕ್ಷ ರೂ.ಗಳಿಗೆ ಏರಿಸಬೇಕು. ಹಳದಿ ರೋಗದ ಬಗ್ಗೆ ಸಂಶೋಧನೆ ಕೈಗೊಂಡು ಶಾಶ್ವತ ಔಷಧ ಕಂಡು ಹಿಡಿಯಬೇಕು.
೭. ಅಡಿಕೆ ಬೆಳೆಗಾರರ ಕಲ್ಯಾಣಕ್ಕೆ ಸಂಬಂಧಿಸಿ ಗೋರಖ್‌ಸಿಂಗ್ ಸಮಿತಿ ಸಲ್ಲಿಸಿದ ವರದಿಯ ಅಂಶಗಳನ್ನು ಅನುಷ್ಠಾನಗೊಳಿಸಬೇಕು.

ಹಕ್ಕೊತ್ತಾಯ ಜಾರಿಗೆ ಯತ್ನಿಸುವೆ: ಮಠಂದೂರು
ಸಮಾವೇಶದಲ್ಲಿ ಅಂಗೀಕಾರಗೊಂಡ ೭ ಹಕ್ಕೊತ್ತಾಯಗಳನ್ನು ಕೂಡ ಗಮನಿಸಿದ್ದೇವೆ. ಇವುಗಳ ಜಾರಿಗೆ ಸರಕಾರದ ಮಟ್ಟದಲ್ಲಿ ಯತ್ನಿಸುವೆ ಎಂದು ಶಾಸಕ ಸಂಜೀವ ಮಠಂದೂರು ಭರವಸೆ ನೀಡಿದರು.
ಅಡಿಕೆ ಮಂಡಳಿ ರಚನೆಯ ಲಾಭದ ಬಗ್ಗೆ ಚರ್ಚೆ ನಡೆಯಬೇಕಾಗಿದೆ. ಇದು ಅಷ್ಟೊಂದು ಪ್ರಯೋಜನಕಾರಿಯಲ್ಲ ಎಂಬುದು ನನ್ನ ವೈಯಕ್ತಿಕ ಅಭಿಮತ. ಉಳಿದ 6 ಅಂಶಗಳ ಕಡೆಗೆ ಗಮನ ಹರಿಸಿ, ಈ ಹಕ್ಕೊತ್ತಾಯದ ಜತೆಗೆ ನನ್ನ ಪತ್ರವನ್ನೂ ಇಟ್ಟು ತೋಟಗಾರಿಕೆ, ಕೃಷಿ, ಸಹಕಾರಿ ಇಲಾಖೆ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸುತ್ತೇನೆ. ಸ್ವತಃ ನಾನೇ ವಿಧಾನ ಮಂಡಲದಲ್ಲಿ ಪ್ರಸ್ತಾಪಿಸುತ್ತೇನೆ. ಗೋರಖ್‌ಸಿಂಗ್ ವರದಿ ಜಾರಿಯ ವಿಚಾರದಲ್ಲೂ ಪ್ರಯತ್ನಿಸುತ್ತೇನೆ. ರೋಗದಿಂದ ಬೆಳೆ ನಷ್ಟ ಹೊಂದಿದವರಿಗೆ ಪರಿಹಾರ ಕಲ್ಪಿಸಲು ಈಗಾಗಗೇ ಸರಕಾರ ಬಿಡುಗಡೆ ಮಾಡಿದ ಪ್ಯಾಕೇಜ್‌ನಲ್ಲಿ ಅವಕಾಶವಿದೆ ಎಂದವರು ನುಡಿದರು.

ಸಾವಯವ ಗೊಬ್ಬರ ತಯಾರಿಸಲಿದೆ ಕ್ಯಾಂಪ್ಕೋ
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಬೃಹತ್ ಪ್ರಮಾಣದ ಸಾವಯವ ಗೊಬ್ಬರ ತಯಾರಿಕಾ ಘಟಕ ನಿರ್ಮಿಸಲು ಕ್ಯಾಂಪ್ಕೋ ಸಂಸ್ಥೆ ನಿರ್ಧರಿಸಿದೆ. ಈ ಮೂಲಕ ಕ್ಯಾಂಪ್ಕೋ ಕಡೆಯಿಂದ ರೈತರಿಗೆ ಸಾವಯವ ಗೊಬ್ಬರ ಸಿಗಲಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಶಂ.ನಾ. ಖಂಡಿಗೆ ಹೇಳಿದರು.
ವಾರಣಾಸಿ ಸುಬ್ರಾಯ ಭಟ್ಟರ ಕಾಲದಿಂದಲೇ ಕ್ಯಾಂಪ್ಕೋ ಸಂಸ್ಥೆ ಬೆಳೆಗಾರರ ಪರವಾಗಿಯೇ ಕೆಲಸ ಮಾಡುತ್ತಾ ಬಂದಿದೆ. ಸಮಗ್ರ ಕೃಷಿಗೆ ಆದ್ಯತೆ ನೀಡುವ ಅಗತ್ಯವನ್ನು ಸುಬ್ರಾಯ ಭಟ್ಟರು ಅಂದೇ ಪ್ರತಿಪಾದಿಸಿದ್ದರು. ಅದರಂತೆ ಕ್ಯಾಂಪ್ಕೋ ಅಡಕೆಯ ಜತೆಗೆ ರಬ್ಬರ್, ಕಾಳುಮೆಣಸು, ಕೊಕ್ಕೊ ಇತ್ಯಾದಿಗಳನ್ನು ಖರೀದಿಸಲು ಅರಂಭಿಸಿತು. ಮುಂದಿನ 3 ತಿಂಗಳಲ್ಲಿ ಗೇರು ಖರೀದಿಸಲು ಅರಂಭಿಸಲಿದ್ದೇವೆ. ತೆಂಗು ಕೂಡ ಖರೀದಿಸಲು ಆಡಳಿತ ಮಂಡಳಿ ನಿರ್ಧರಿಸಿದ್ದು, ಅದು ಕೂಡ ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ಬರಲಿದೆ. ರೈತ ಬೆಳೆಯುವ ಎಲ್ಲ ಉತ್ಪನ್ನಗಳನ್ನು ಖರೀದಿಸುವುದು ನಮ್ಮ ಧ್ಯೇಯವಾಗಿದೆ ಎಂದರು.
ನಮ್ಮ ಆರ್ಥಿಕತೆಯ ಬೆನ್ನೆಲುಬಾಗಿರುವ ಅಡಕೆ ಪರಂಪರಾಗತವಾಗಿ ಬೆಳೆಯುತ್ತಿದ್ದ ಸಾಂಪ್ರದಾಯಿಕ ಬೆಳೆಯಾಗಿದ್ದರೂ, ಈಗ ಕರಾವಳಿ ಮಲೆನಾಡುಗಳಿಂದ ಬಯಲುಸೀಮೆಗೆ ವಿಸ್ತರಣೆಯಾಗುತ್ತಿದೆ. ಅಸ್ಸಾಂ, ಮೇಘಾಲಯ ಮುಂತಾದ ರಾಜ್ಯಗಳಿಗೂ ವಿಸ್ತರಣೆಯಾಗುತ್ತಿದೆ. ಇವತ್ತು ಯಾರೂ ನಿರೀಕ್ಷೆ ಮಾಡಿರದ ಧಾರಣೆ ಅಡಕೆಗೆ ಬಂದಿದೆ. ಆದರೆ ಪೂರೈಕೆ ಸಿಕ್ಕಾಪಟ್ಟೆ ಜಾಸ್ತಿಯಾದರೆ, ಬೇಡಿಕೆ ಹಿಂದೆ ಉಳಿದರೆ ಸಮಸ್ಯೆಯಾಗಬಹುದು. ತಿಂದು ಉಗುಳುವ ಅಡಕೆಯ ಮೌಲ್ಯವರ್ಧನೆ ಆದರೆ ಉತ್ತಮ. ಕೆಂಪಡಕೆಯ ಸಿಪ್ಪೆಯಿಂದ ಜೈವಿಕ ಇಂಧನ ತಯಾರಿಸಬಹುದಾಗಿದೆ ಎಂದು ಹೇಳಿದ ಅವರು, ಅಡಕೆಗೆ ಧಾರಣೆ ಕುಸಿಯದಂತೆ ಸೂಕ್ತ ಕ್ರಮಗಳನ್ನು ಕ್ಯಾಂಪ್ಕೋ ಕೈಗೊಳ್ಳುತ್ತದೆ. ೧.೩೦ ಲಕ್ಷ ಸದಸದ್ಯರನ್ನು ಹೊಂದಿರುವ ಕ್ಯಾಂಪ್ಕೋ ಸಂಸ್ಥೆ ಹಿಂದೆಯೂ ಬೆಳೆಗಾರರ ಪರವಾಗಿ ನಿಂತಿದೆ. ಮುಂದೆಯೂ ನಿಲ್ಲಲಿದೆ. ಬೆಳೆಗಾರರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಹೇಳಿದರು.
ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ ಎಂದು ಸಾಬೀತು ಮಾಡಲಿದ್ದೇವೆ
ಸುಪ್ರೀಂ ಕೋರ್ಟಿನಲ್ಲಿ ಗೆಲ್ಲಿಸುತ್ತೇವೆ ಅಡಿಕೆ ಆರೋಗ್ಯಕ್ಕೆ ಹಾನಿಕರ, ಅಡಿಕೆ ಕ್ಯಾನ್ಸರ್‌ಕಾರಕ ಎಂಬ ಮಾಹಿತಿ ಮುಂದಿಟ್ಟುಕೊಂಡು ಅಡಿಕೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ. ಇದರ ವಿರುದ್ಧ ಇಬ್ಬರು ವಕೀಲರ ಮೂಲಕ ಕ್ಯಾಂಪ್ಕೋ ಸಮರ್ಥವಾಗಿ ವಾದ ಮಂಡಿಸುತ್ತಿದ್ದು, ಅಡಿಕೆಯನ್ನು ಗೆಲ್ಲಿಸುವ ಕೆಲಸ ಮಾಡಲಿದೆ. ಇದೇ ವೇಳೆ ಅಡಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂಬ ಅಂಶವನ್ನು ನಿಟ್ಟೆ ವಿವಿಯಲ್ಲಿ ಸಂಶೋಧನೆ ಮಾಡಲಾಗುತ್ತಿದ್ದು, ಶೀಘ್ರ ವರದಿ ಬರಲಿದೆ. ಬಾಯಿ ಕ್ಯಾನ್ಸರ್‌ಗೆ ಅಡಕೆ ಔಷಧವಾಗಿದೆ ಎಂಬ ವರದಿಯೂ ಇದೆ. ಇದು ನಮಗೆ ಸು.ಕೋರ್ಟ್‌ನಲ್ಲಿ ಗೆಲ್ಲಲು ಪೂರಕವಾಗಲಿದೆ ಎಂದು ಶಂ.ನಾ. ಖಂಡಿಗೆ ಹೇಳಿದರು.
ಸಭೆಯ ಉದ್ಘಾಟನೆಗೂ ಮೊದಲು ವಿವೇಕಾನಂದ ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು .









ಶಿಕ್ಷಣ
Sahyadri College-ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ಹದಿನಾರನೇ ಎಂಜಿನಿಯರಿಂಗ್ ಪದವಿ ಪ್ರದಾನ ಸಮಾರಂಭ
ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್‌ಮೆಂಟ್, 2026ರ ಅಕ್ಟೋಬರ್ 10 ರಂದು ತನ್ನ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ (ಸ್ವಾಯತ್ತತೆಯ ಎರಡನೇ ಬ್ಯಾಚ್) 16ನೇ ಘಟಿಕೋತ್ಸವ ಸಮಾರಂಭವನ್ನು ಆಚರಿಸಿತು.

ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್‌ಮೆಂಟ್, 2026ರ ಅಕ್ಟೋಬರ್ 10 ರಂದು ತನ್ನ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ (ಸ್ವಾಯತ್ತತೆಯ ಎರಡನೇ ಬ್ಯಾಚ್) 16ನೇ ಘಟಿಕೋತ್ಸವ ಸಮಾರಂಭವನ್ನು ಆಚರಿಸಿತು. ವಿದ್ಯಾರ್ಥಿಗಳ ಶೈಕ್ಷಣಿಕ ಪಯಣದ ಪ್ರಮುಖ ಮೈಲಿಗಲ್ಲನ್ನು ಗುರುತಿಸುವ ಈ ಸಮಾರಂಭದಲ್ಲಿ ಆಡಳಿತ ಮಂಡಳಿ, ಬೋಧಕವರ್ಗ, ಪದವೀಧರರು ಮತ್ತು ಅವರ ಹಿತೈಷಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು, ನಂತರ ಪ್ರಾಂಶುಪಾಲರಾದ ಡಾ. ಎಸ್. ಎಸ್. ಇಂಜಗನೇರಿ ಅವರು ಸ್ವಾಗತ ಭಾಷಣದ ಮೂಲಕ ಸಭಿಕರನ್ನು ಸ್ವಾಗತಿಸಿದರು. ಎಲ್‌ಟಿಎಂ (LTM)ನ ಚೀಫ್ ಡೆಲಿವರಿ ಆಫೀಸರ್ ಆಗಿರುವ ಶ್ರೀ ಗುರುರಾಜ್ ದೇಶಪಾಂಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಘಟಿಕೋತ್ಸವ ಸಮಾರಂಭವನ್ನು ಅಧಿಕೃತವಾಗಿ ಉದ್ಘಾಟಿಸಿದರು.

ಉಪ ಪ್ರಾಂಶುಪಾಲರಾದ ಡಾ. ಸುಧೀರ್ ಶೆಟ್ಟಿ, ಮುಖ್ಯ ಅತಿಥಿ ಮತ್ತು ಪ್ರಾಂಶುಪಾಲರಿಂದ ಸನ್ಮಾನಿಸಲ್ಪಟ್ಟ ಚಿನ್ನದ ಪದಕ ವಿಜೇತರು ಮತ್ತು ಶ್ರೇಯಾಂಕ ಪಡೆದವರನ್ನು ಘೋಷಿಸಿದರು. ವಿದ್ಯಾರ್ಥಿಗಳ ಸಮರ್ಪಣೆ, ಪರಿಶ್ರಮ ಮತ್ತು ಶೈಕ್ಷಣಿಕ ಶ್ರೇಷ್ಠತೆಗೆ ಬದ್ಧತೆಯನ್ನು ಸನ್ಮಾನವು ಗುರುತಿಸಿತು.
ಮುಖ್ಯ ಅತಿಥಿಗಳಾದ ಶ್ರೀ ಗುರುರಾಜ್ ದೇಶಪಾಂಡೆ ಅವರು ಕೃತಕ ಬುದ್ಧಿಮತ್ತೆಯ (AI) ಪ್ರಭಾವವನ್ನು ಎತ್ತಿ ತೋರಿಸುವ ಸ್ಪೂರ್ತಿದಾಯಕ ಭಾಷಣ ಮಾಡಿದರು ಮತ್ತು ವಿಕಸನಗೊಳ್ಳುತ್ತಿರುವ ಜಗತ್ತಿನಲ್ಲಿ ಪ್ರಸ್ತುತವಾಗಿರಲು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಹೇಳಿದರು. ಅವರು ಪದವೀಧರರು ಪ್ರತಿದಿನ ಹೊಸದನ್ನು ಕಲಿಯಲು ಪ್ರೋತ್ಸಾಹಿಸಿದರು ಮತ್ತು ಬದಲಾಗುತ್ತಿರುವ ಸಂದರ್ಭಗಳಿಗೆ ಹೊಂದಿಕೊಳ್ಳಲು ಕಲಿಯುವುದನ್ನು ಬಿಟ್ಟು ಮತ್ತೆ ಕಲಿಯುವ ಅಗತ್ಯವನ್ನು ಹೇಳಿದರು.
ಪ್ರಸ್ತುತ ತಂತ್ರಜ್ಞಾನ-ಚಾಲಿತ ಜಗತ್ತಿನಲ್ಲಿ ಸಂವಹನ ಕೌಶಲ್ಯಗಳ ಮಹತ್ವವನ್ನು ಅವರು ಎತ್ತಿ ತೋರಿಸಿದರು ಮತ್ತು ಬ್ಯಾಂಕಿಂಗ್ ವಲಯದ ಬೆಳವಣಿಗೆಗೆ ಮಂಗಳೂರು ನೀಡಿದ ಕೊಡುಗೆಯನ್ನು ಗುರುತಿಸಿದರು.

ಅಲ್ಲದೆ, ಸಣ್ಣ ಹಾಗೂ ನಿರಂತರ ಅಭ್ಯಾಸಗಳು ಸಮಾಜದ ಮೇಲೆ ದೊಡ್ಡ ಪ್ರಭಾವವನ್ನು ಬೀರಬಲ್ಲವು ಎಂದು ಅವರು ಪ್ರತಿಪಾದಿಸಿದರು. ಸಾಧನೆಗೆ ಯಾವುದೇ ಅಡ್ಡದಾರಿಗಳಿಲ್ಲದಿರುವುದರಿಂದ, ಯಶಸ್ಸನ್ನು ಪಡೆಯಲು ಪರಿಶ್ರಮ, ಬದ್ಧತೆ ಮತ್ತು ತಾಳ್ಮೆ ಅತ್ಯಗತ್ಯ ಎಂಬುದನ್ನು ಅವರು ನೆನಪಿಸಿದರು. ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಮತ್ತು ದೃಢವಾದ ಮೌಲ್ಯಗಳನ್ನು ಎತ್ತಿಹಿಡಿಯುವುದು ಎಷ್ಟು ಮುಖ್ಯ ಎಂಬುದನ್ನೂ ಅವರು ಒತ್ತಿ ಹೇಳಿದರು. ಅಂತಿಮವಾಗಿ, ಪ್ರತಿಯೊಬ್ಬರೂ ಜೀವನಪರ್ಯಂತ ಕಲಿಯುವ ಮನೋಭಾವವನ್ನು ಅಳವಡಿಸಿಕೊಳ್ಳುವಂತೆ ಮತ್ತು ತಮ್ಮ ಗುರಿಗಳನ್ನು ಸಾಧಿಸಲು ಪರಿಣಾಮಕಾರಿಯಾಗಿ ಶ್ರಮಿಸುವಂತೆ ಅವರು ಪ್ರೋತ್ಸಾಹಿಸಿದರು.
ಟ್ರಸ್ಟಿ ಮತ್ತು ಆಡಳಿತಾಧಿಕಾರಿ ಶ್ರೀ ಕೃಷ್ಣ ಹೆಗ್ಡೆ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಪದವೀಧರರು ತಮ್ಮ ಶಿಕ್ಷಣದ ಈ ಮಹತ್ವದ ಹಂತವನ್ನು ತಲುಪಿದ್ದಕ್ಕಾಗಿ ಅಭಿನಂದಿಸಿದರು. ಅವರು ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಮಹತ್ವವನ್ನು ಹೇಳಿದರು ಮತ್ತು ವ್ಯಕ್ತಿಗಳನ್ನು ಜವಾಬ್ದಾರಿಯುತ ಮತ್ತು ನೈತಿಕ ನಾಗರಿಕರನ್ನಾಗಿ ರೂಪಿಸುವಲ್ಲಿ ಅದರ ಪಾತ್ರವನ್ನು ಎತ್ತಿ ತೋರಿಸಿದರು. ತಾಂತ್ರಿಕ ಪ್ರಗತಿಯ ಪ್ರಭಾವವನ್ನು ಅವರು ಚರ್ಚಿಸಿದರು ಮತ್ತು ನಿರಂತರ ಕಲಿಕೆ, ನಾವೀನ್ಯತೆ ಮತ್ತು ಸೃಜನಶೀಲತೆಯ ಮೂಲಕ ಬದಲಾಗುತ್ತಿರುವ ಕಾಲಕ್ಕೆ ಹೊಂದಿಕೊಳ್ಳುವ ಅಗತ್ಯವನ್ನು ಹೇಳಿದರು. ಉದಯೋನ್ಮುಖ ತಂತ್ರಜ್ಞಾನಗಳನ್ನು ಬಳಸುವಾಗ ಜವಾಬ್ದಾರಿಯನ್ನು ನಿರ್ವಹಿಸುವ ಮಹತ್ವವನ್ನು ಸಹ ಅವರು ಎತ್ತಿ ತೋರಿಸಿದರು.
ತಮ್ಮ ಮುಕ್ತಾಯದ ಮಾತುಗಳಲ್ಲಿ, ವಿದ್ಯಾರ್ಥಿಗಳಿಗೆ ಪೋಷಕರು ಮತ್ತು ಶಿಕ್ಷಕರ ನಿರಂತರ ಬೆಂಬಲ, ಮಾರ್ಗದರ್ಶನ ಮತ್ತು ಸಮರ್ಪಣೆಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು ಎಂದು ಶ್ರೀ ಕೃಷ್ಣ ಹೆಗ್ಡೆ ಹೇಳಿದರು.
ಗಣ್ಯರು ಮತ್ತು ಆಯಾ ವಿಭಾಗಗಳ ಮುಖ್ಯಸ್ಥರು ಈ ಕೆಳಗಿನ ವಿಭಾಗಗಳ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರಗಳನ್ನು ಪ್ರದಾನ ಮಾಡಿ, ಅವರ ಪದವಿಪೂರ್ವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕಾಗಿ ಔಪಚಾರಿಕವಾಗಿ ಗುರುತಿಸಿದರು: ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ (ಸಿಎಸ್), ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ – ಸೈಬರ್ ಸೆಕ್ಯುರಿಟಿ/ಕಂಪ್ಯೂಟರ್ ಇಂಟಿಗ್ರೇಟೆಡ್ (ಸಿಐ), ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ – ಕಂಪ್ಯೂಟರ್ ಸೈನ್ಸ್ ಮತ್ತು ಡಿಸೈನ್ (ಸಿಡಿ), ಇನ್ಫರ್ಮೇಷನ್ ಸೈನ್ಸ್ ಮತ್ತು ಎಂಜಿನಿಯರಿಂಗ್ (ಐಎಸ್), ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ (ಇಸಿ), ಮೆಕ್ಯಾನಿಕಲ್ ಎಂಜಿನಿಯರಿಂಗ್ (ಎಂಇ), ಮತ್ತು ರೊಬೊಟಿಕ್ಸ್ ಮತ್ತು ಆಟೊಮೇಷನ್ ಎಂಜಿನಿಯರಿಂಗ್ (ಆಎಂ).
ಸಮಾರಂಭದ ನಂತರ ಉಪ ಪ್ರಾಂಶುಪಾಲರಾದ ಡಾ. ಸುಧೀರ್ ಶೆಟ್ಟಿ ನೇತೃತ್ವದಲ್ಲಿ ಪ್ರಮಾಣ ವಚನ ಸ್ವೀಕರಿಸಲಾಯಿತು, ಈ ಸಂದರ್ಭದಲ್ಲಿ ಪದವೀಧರರು ಪದವಿ ಪ್ರಕ್ರಿಯೆಯ ಭಾಗವಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಶ್ರೀ ಸ್ಕಂದ ಗಣೇಶ್ ಪಿ. ವಿ. ಮತ್ತು ಕುಮಾರಿ ಆಶಿಕಾ ನಾಯರ್ ಅವರು ಪದವೀಧರರಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು ಹಾಗೂ ಸಹ್ಯಾದ್ರಿಯಲ್ಲಿನ ತಮ್ಮ ಶೈಕ್ಷಣಿಕ ಪಯಣವನ್ನು ಮೆಲುಕು ಹಾಕಿದರು. ಅವರ ಈ ಅನಿಸಿಕೆಗಳು ಸಮಾರಂಭಕ್ಕೆ ವೈಯಕ್ತಿಕ ಆಯಾಮವನ್ನು ನೀಡಿದವು ಮತ್ತು ಸಂಸ್ಥೆಯಲ್ಲಿನ ಅವಧಿಯಲ್ಲಿ ಪಡೆದ ಕಲಿಕೆಯ ಅನುಭವಗಳ ಮಹತ್ವವನ್ನು ಎತ್ತಿ ತೋರಿಸಿದವು.
ಸಂಶೋಧನೆ ಮತ್ತು ಅಭಿವೃದ್ಧಿ (R&D) ಹಾಗೂ ಸಲಹಾ ವಿಭಾಗದ ನಿರ್ದೇಶಕರಾದ ಡಾ. ಮಂಜಪ್ಪ ಸಾರಥಿ ಅವರು ವಂದನಾರ್ಪಣೆ ನೆರವೇರಿಸಿದರು; ಅವರು ಗಣ್ಯರು, ಆಡಳಿತ ಮಂಡಳಿ, ಬೋಧಕವರ್ಗ, ಸಂಘಟಕರು ಹಾಗೂ ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಮಾಪ್ತಿಯಾಯಿತು. ಸಹ್ಯಾದ್ರಿ 16ನೇ ಘಟಿಕೋತ್ಸವ ಸಮಾರಂಭವು ಪದವೀಧರರಿಗೆ ಒಂದು ಸ್ಮರಣೀಯ ಸಂದರ್ಭವಾಗಿತ್ತು; ಅವರು ತಮ್ಮ ಸಾಧನೆಗಳನ್ನು ಸಂಭ್ರಮಿಸುತ್ತಾ, ತಮ್ಮ ಜೀವನದ ಮುಂದಿನ ಹಂತದತ್ತ ದೃಷ್ಟಿಹರಿಸಿದರು.
ಮಂಗಳೂರು
Mangalore-ಮಂಗಳೂರು: ಅನೈತಿಕ ಸಂಬಂಧ ಶಂಕೆ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ
ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಉರುಂದಾಡಿಗುಡ್ಡೆಯಲ್ಲಿ ಮಹಿಳೆಯೊಬ್ಬರನ್ನು ಆಕೆಯ ಪತಿಯೇ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಪತ್ನಿಗೆ ಪರಪುರುಷನೊಂದಿಗೆ ಸಂಬಂಧವಿದೆ ಎಂಬ ಸಂಶಯವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು: ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಉರುಂದಾಡಿಗುಡ್ಡೆಯಲ್ಲಿ ಮಹಿಳೆಯೊಬ್ಬರನ್ನು ಆಕೆಯ ಪತಿಯೇ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ. ಪತ್ನಿಗೆ ಪರಪುರುಷನೊಂದಿಗೆ ಸಂಬಂಧವಿದೆ ಎಂಬ ಸಂಶಯವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ಮಹಿಳೆಯನ್ನು ವಿಜಯಪುರ ಜಿಲ್ಲೆಯ ಸೊನಾಲಿ (30) ಎಂದು ಗುರುತಿಸಲಾಗಿದೆ. ಆಕೆಯ ಪತಿ ಶಿವಲಿಂಗಪ್ಪ ಮಾದರ (40) ಕೊಲೆ ಆರೋಪಿಯಾಗಿದ್ದಾನೆ.
ದಂಪತಿ ಕಾವೂರು ಉರುಂದಾಡಿಗುಡ್ಡೆಯ ಹರೀಶ್ ಕುಮಾರ್ ಎಂಬವರ ಮನೆಯಲ್ಲಿ ಬಾಡಿಗೆಗೆ ವಾಸವಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೊನಾಲಿಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಸಂಬಂಧವಿದೆ ಎಂಬ ಅನುಮಾನ ಶಿವಲಿಂಗಪ್ಪನಿಗೆ ಇತ್ತು ಎನ್ನಲಾಗಿದೆ. ಈ ವಿಚಾರವಾಗಿ ದಂಪತಿ ನಡುವೆ ಹಲವು ಬಾರಿ ಜಗಳ ನಡೆದಿತ್ತು. ಭಾನುವಾರ ರಾತ್ರಿ ಕೂಡ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಆಕ್ರೋಶಗೊಂಡ ಶಿವಲಿಂಗಪ್ಪ ಮನೆಯಲ್ಲಿದ್ದ ಚಾಕುವಿನಿಂದ ಪತ್ನಿಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು
Mangalore Dasara-ಮಂಗಳೂರು ದಸರಾಕ್ಕೆ ಚಾಲನೆ: ಸಿಎಂ ಆಗಮನ ಮುಂದೂಡಿಕೆ
ಪ್ರಸಿದ್ಧ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವಕ್ಕೆ ರವಿವಾರ ವಿಧ್ಯುಕ್ತ ಚಾಲನೆ ದೊರೆಯಿತು. ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ದರ್ಬಾರು ಮಂಟಪದಲ್ಲಿ ವಿವಿಧ ದೇವಿ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಮೂಲಕ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಮಂಗಳೂರು: ಪ್ರಸಿದ್ಧ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವಕ್ಕೆ ರವಿವಾರ ವಿಧ್ಯುಕ್ತ ಚಾಲನೆ ದೊರೆಯಿತು. ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ದರ್ಬಾರು ಮಂಟಪದಲ್ಲಿ ವಿವಿಧ ದೇವಿ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಮೂಲಕ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ಬೆಳಗ್ಗೆ ಗುರುಪ್ರಾರ್ಥನೆ, ಪುಣ್ಯಾಹ ಹೋಮ ಹಾಗೂ ನವಕಲಶಾಭಿಷೇಕ ನೆರವೇರಿತು. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಶ್ರೀ ಮಹಾಗಣಪತಿ, ಶ್ರೀ ಶಾರದಾ ಮಾತೆ, ಆದಿಶಕ್ತಿ ಹಾಗೂ ಸ್ಕಂದಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ ಮತ್ತು ಕೂಷ್ಮಾಂಡಿನಿ ದೇವಿಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು.
ರವಿವಾರದ ರಜೆಯ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ದೇವಿಯರ ವಿಗ್ರಹಗಳ ಪ್ರತಿಷ್ಠಾಪನೆಯ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.
ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹಾಗೂ ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಕ್ಷೇತ್ರಾಡಳಿತ ಮಂಡಳಿಯ ಟ್ರಸ್ಟಿಗಳು, ಕ್ಷೇತ್ರ ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.
ಈ ಬಾರಿ ಮಹಿಳಾ ದಸರಾ ವಿಶೇಷ ಆಕರ್ಷಣೆ
ಕ್ಷೇತ್ರದ ಖಜಾಂಚಿ ಪದ್ಮರಾಜ್ ಆರ್. ಪೂಜಾರಿ ಮಾಧ್ಯಮದವರೊಂದಿಗೆ ಮಾತನಾಡಿ, ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಸಮಿತಿಯ ಸಹಯೋಗದೊಂದಿಗೆ ಈ ಬಾರಿಯ ಮಂಗಳೂರು ದಸರಾ ನಡೆಯುತ್ತಿದೆ ಎಂದು ತಿಳಿಸಿದರು.
ಕಳೆದ ವರ್ಷ ಆರಂಭಿಸಿದ್ದ ಮಕ್ಕಳ ದಸರಾ ಮತ್ತು ಕಿನ್ನಿಪಿಲಿ ಕಾರ್ಯಕ್ರಮಗಳನ್ನು ಈ ಬಾರಿಯೂ ಮುಂದುವರಿಸಲಾಗುವುದು. ಇದೇ ಮೊದಲ ಬಾರಿಗೆ ಮಹಿಳಾ ದಸರಾ ಆಯೋಜಿಸಲಾಗುತ್ತಿದ್ದು, ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳು ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಭಕ್ತರ ಬೇಡಿಕೆಯಂತೆ ಅಕ್ಟೋಬರ್ 20ರಂದು ಅಕ್ಷರಾಭ್ಯಾಸ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ. ಈ ಬಾರಿ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಶೇ. 25ರಿಂದ 30ರಷ್ಟು ಹೆಚ್ಚಾಗುವ ನಿರೀಕ್ಷೆಯಿದ್ದು, ವ್ಯವಸ್ಥಿತ ನಿರ್ವಹಣೆಗಾಗಿ ಒಂದು ಸಾವಿರಕ್ಕೂ ಹೆಚ್ಚು ಸ್ವಯಂಸೇವಕರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಆಗಮನ ಮುಂದೂಡಿಕೆ
ಸೋಮವಾರ ಸಂಜೆ 6.30ಕ್ಕೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮಂಗಳೂರು ದಸರಾ ಮಹೋತ್ಸವವನ್ನು ಉದ್ಘಾಟಿಸಬೇಕಿತ್ತು. ಆದರೆ ತುರ್ತು ಕಾರಣದಿಂದ ದೆಹಲಿಗೆ ತೆರಳಬೇಕಾದ ಹಿನ್ನೆಲೆಯಲ್ಲಿ ಅವರ ಪ್ರವಾಸ ರದ್ದಾಗಿದೆ. ಅಕ್ಟೋಬರ್ 15 ಅಥವಾ 16ರಂದು ಮುಖ್ಯಮಂತ್ರಿ ಕ್ಷೇತ್ರಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಪದ್ಮರಾಜ್ ಆರ್. ಪೂಜಾರಿ ತಿಳಿಸಿದರು.
-
ಅಂತರ ರಾಜ್ಯ16 hours agoKasaragod-ಕಾಸರಗೋಡು: ಮದುವೆ ರದ್ದು, ₹7.57 ಲಕ್ಷದ ಉಡುಗೊರೆ ವಾಪಸ್ ನೀಡದೆ ವಂಚನೆ ಆರೋಪ; ಯುವತಿ ಸಹಿತ ಮೂವರ ವಿರುದ್ಧ ಪ್ರಕರಣ
-
ಮಂಗಳೂರು10 hours agoMangalore-ಮಂಗಳೂರು: ಅನೈತಿಕ ಸಂಬಂಧ ಶಂಕೆ; ಪತ್ನಿಯನ್ನು ಚೂರಿಯಿಂದ ಇರಿದು ಕೊಂದ ಪತಿ
-
ಬಿಗ್ ನ್ಯೂಸ್11 hours agoGolithottu-ಗೋಳಿತ್ತೊಟ್ಟು: ತೋಡಿನ ನೀರಿನಲ್ಲಿ ಮೀನುಗಳ ಮಾರಣಹೋಮ; ತನಿಖೆಗೆ ಸ್ಥಳೀಯರ ಆಗ್ರಹ
-
ಸುಳ್ಯ14 hours agoSullia-ಸುಳ್ಯ: ಕಳ್ಳತನಕ್ಕೆ ಬಂದವನು ಮಕ್ಕಳನ್ನು ಕಂಡು ಪರಾರಿ; ಕೇರಳ ಮೂಲದ ಆರೋಪಿ ಬಂಧನ
-
ಬಿಗ್ ನ್ಯೂಸ್16 hours agoPuttur-ಪುತ್ತೂರು : ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ಒಳಚರಂಡಿ ಕಾಮಗಾರಿ ಟೆಂಡರ್ ಸ್ಥಗಿತಗೊಳಿಸಿ : ನಗರಸಭೆಗೆ ಮನವಿ
-
ಅಪರಾಧ14 hours agoUdupi-ಉಡುಪಿ: ಹೇಮಂತ್ ಪೂಜಾರಿ ಬೇಟೆಗೆ ಪೊಲೀಸರ ಬಲೆ; ಗ್ಯಾಂಗ್ಸ್ಟರ್ ಅನುಜ್ ಪಾಟೀಲ್ ವಶಕ್ಕೆ..!
-
ಸ್ಥಳೀಯ17 hours agoSharavuru-ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಂದ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭೇಟಿ
-
ಅಂತರ ರಾಜ್ಯ13 hours agoElon Musk-ಅಂಬಾನಿ ಮತ್ತು ಅವರ ಬೆಂಬಲಿಗರ ವಾದ ಹಾಸ್ಯಾಸ್ಪದವಾಗಿದೆ : ಸ್ಟಾರ್ ಲಿಂಕ್ ಕುರಿತು ಇಲಾನ್ ಮಸ್ಕ್


















