ರಾಜಕೀಯ
ಪುತ್ತೂರು : ಎರಡು ಪ್ರಬಲ ಸಮುದಾಯಗಳ ನಡುವೆ ಗೊಂದಲ ಹುಟ್ಟು ಹಾಕಿದ ವೈರಲ್ ವಿಡಿಯೋ ; ರಾಜಕೀಯ ವಲಯದಲ್ಲಿ ಭಾರೀ ಚರ್ಚೆ
ಪುತ್ತೂರು : ನ 1: ಪುತ್ತೂರು ಸುಳ್ಯ ಹಾಗೂ ಬೆಳ್ತಂಗಡಿ ಭಾಗದಲ್ಲಿ ರಾಜಕೀಯವಾಗಿ ಪ್ರಭಲವಾಗಿರುವ ಎರಡು ಸಮುದಾಯಗಳ ನಡುವೆ ಗೊಂದಲ ಸೃಷ್ಟಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅವಿಭಜಿತ ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಈ ಎರಡು ಸಮುದಾಯಗಳು ಪ್ರಭಲ ಸಂಘಟನೆ ಹೊಂದಿವೆ. ಹಾಗಿದ್ದೂ ಎರಡು ಸಮುದಾಯದ ಸಂಘಗಳು ಈ ಬಗ್ಗೆ ಮೌನಕ್ಕೆ ಶರಣಾಗಿರುವುದು ಖಂಡನೆ ವ್ಯಕ್ತಪಡಿಸದಿರುವುದು ಆ ಎರಡು ಸಮುದಾಯಗಳ ಜನರಿಗೆ ಅಶ್ಚರ್ಯವನ್ನು ಉಂಟು ಮಾಡಿದೆ.
ಕಡಬ ತಾಲೂಕಿನ ಸವಣೂರು ಸಮೀಪದ ಕೆಡೆಂಜಿಯ ವ್ಯಕ್ತಿಯೊಬ್ಬರು ತನ್ನ ಸಮುದಾಯದವರು ಸೇರಿದ್ದ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಸಭೆಯಲ್ಲಿದ್ದವರು ಅದನ್ನು ವಿಡಿಯೋ ಮಾಡಿ ಹರಿ ಬಿಟ್ಟಿದ್ದು ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ದಲ್ಲಿ ಜಿಲ್ಲೆಯ ಮತ್ತೊಂದು ಪ್ರಭಲ ಸಮುದಾಯವೊಂದನ್ನು ಕೆಡಂಜಿಯ ವ್ಯಕ್ತಿ ಉಲ್ಲೇಖಿಸಿದ್ದು, ಅದರಲ್ಲಿನ ವ್ಯಕ್ತಿಗಳು ರಾಜಕೀಯವಾಗಿ ತನ್ನ ಸಮುದಾಯವನ್ನು ಹೇಗೆ ಬದಿಗೆ ಸರಿಸುತ್ತಾರೆ ಎಂಬ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.
ಅವರು ಸಭೆಯಲ್ಲಿ ಆಡಿದ ಮಾತುಗಳು ಮತ್ತೊಂದು ಸಮುದಾಯದ ಜನರ ಆಕ್ಷೇಪಕ್ಕೆ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ನಮ್ಮ ಸಮುದಾಯದ ನಾಯಕರು ಸ್ವ ಪರಿಶ್ರಮ, ಸಾಮಾರ್ಥ್ಯ ಹಾಗೂ ಪ್ರತಿಭೆಯಿಂದ ನಾಯಕತ್ವ ಪಡೆಯುತ್ತಿದ್ದು, ಈ ವೇಳೆ ಅವರು ಇನ್ನೊಂದು ಜಾತಿ ಅಥಾವ ಸಮುದಾಯವನ್ನು ಬದಿಗೆ ಸರಿಸುವ ಕೆಲಸ ಮಾಡುತ್ತಿಲ್ಲ . ಸಮುದಾಯದ ನಾಯಕರುಗಳ ಬೆಳವಣಿಗೆಯನ್ನು ಸಹಿಸದೇ ಈ ರೀತಿಯ ಕುತ್ಸಿತ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆ ಸಮುದಾಯದ ಹಲವರು ಸಾರ್ವಜನಿಕವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ
ಆದರೇ ಇನ್ನೊಂದೆಡೆ ಆ ವ್ಯಕ್ತಿ ಆಡಿದ ಮಾತಿನಲ್ಲಿ ಸತ್ಯಾಂಶವಿದೆ ಎನ್ನುವ ಮಾತುಗಳನ್ನು ಭಾಷಣ ಮಾಡಿದ ವ್ಯಕ್ತಿಯ ಸಮುದಾಯಕ್ಕೆ ಸೇರಿದ ಹಲವರು ಹೇಳುತ್ತಿದ್ದು , ಇದಕ್ಕಾಗಿ ನಾವು ಹಲವು ಸಾಕ್ಷ್ಯಗಳನ್ನು ನೀಡಲಿದ್ದೇವೆ ಎಂದಿದ್ದಾರೆ. ಧಾರ್ಮಿಕ ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದ ಚಟುವಟಿಕೆಗಳಲ್ಲಿ ಕೆಡೆಂಜಿಯವರು ಉಲ್ಲೇಖಿಸಿದ ಸಮುದಾಯದವರು ವೇದಿಕೆಗಳಲ್ಲಿ ಸ್ಥಾನ ಪಡೆಯುತ್ತಿದ್ದು, ನಮ್ಮನ್ನು ಇತರ ಚಟುವಟಿಕೆಗಳಿಗಷ್ಟೆ ಬಳಸಿಕೊಳ್ಳುತ್ತಿದ್ದಾರೆ. ಹೀಗಾಗಿಯೇ ನಮ್ಮ ಸಮುದಾಯದವರಿಗೆ ಅರ್ಹತೆಯಿದ್ದು ಅವಕಾಶಗಳು ಸಿಗುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ.
ಹೀಗೆ ಎರಡು ಸಮುದಾಯದವರು ಈ ವಿಚಾರದ ಬಗ್ಗೆ ಗಹನವಾದ ಚರ್ಚೆಯಲ್ಲಿ ಮುಳುಗಿದ್ದು, ತಮ್ಮ ತಮ್ಮ ಸಮುದಾಯದ ಬೆಂಬಲಕ್ಕೆ ನಿಂತಂತೆ ಮೇಲ್ನೋಟಕ್ಕೆ ಕಾಣುತ್ತಿದೆ. ಆದರೇ ಎರಡೂ ಸಮುದಾಯದ ನಾಯಕರುಗಳು ತಮ್ಮ ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಹೇಳಿಕೆ ನೀಡಲು ಮುಂದೆ ಬರುತ್ತಿಲ್ಲ
ಈ ಎರಡು ಸಮುದಾಯಗಳು ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ದೊಡ್ಡ ರಾಜಕೀಯ ಶಕ್ತಿಯಾಗಿದೆ. 1999ರ ವಿಧಾನ ಸಭಾ ಚುನಾವಣೆಯಿಂದ ಅವಲೋಕಿಸಿದರೇ ಈ ಎರಡು ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳೆ ಗೆದ್ದು ಪುತ್ತೂರಿನ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೇ ಚುನಾವಣಾ ಕಣದಲ್ಲಿ ಈ ಎರಡು ಸಮುದಾಯದ ಎದುರಾಳಿಗಳ ನಡುವೆಯೇ ನೇರ ಹಣಾಹಣಿ ಕಳೆದ 25 ವರ್ಷಗಳಿಂದ ನಡೆಯುತ್ತಿದೆ. ಅದರಲ್ಲೂ ಒಂದು ಸಮುದಾಯವಂತೂ ಪುತ್ತೂರು ವಿಧಾನ ಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದ ಬಳಿಕದಿಂದ ಈ ಕ್ಷೇತ್ರದ ಮೇಲೆ ತನ್ನ ಛಾಪನ್ನು ಒತ್ತಿದೆ.
1978 ಹಾಗೂ 1985 ರಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆ ಹೊರತು ಪಡಿಸಿ ಈ ಕ್ಷೇತ್ರದಲ್ಲಿ ನಡೆದ ಎಲ್ಲ ವಿಧಾನ ಸಭಾ ಚುನಾವಣೆಯಲ್ಲಿ ಈ ಎರಡು ಸಮುದಾಯಗಳ ಪೈಕಿ ಕನಿಷ್ಟ ಒಂದು ಸಮುದಾಯದವರು ಪ್ರಥಮ ಅಥವಾ ದ್ವಿತೀಯ ಸ್ಥಾನ ಪಡೆದಿರುವುದು ವಿಶೇಷ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ರಾಜಕೀಯ ವಲಯದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ.
ಅಲ್ಲದೇ ವಿಡಿಯೋದಲ್ಲಿ ಮಾತನಾಡಿರುವವರು ಶಾಸಕರ ಆಪ್ತರು, ಆ ಶಾಸಕರಿಗೆ ಈ ಬಾರಿ ಅವರ ಪಕ್ಷ ಟಿಕೆಟ್ ನೀಡುವ ಸಾಧ್ಯತೆ ಕಮ್ಮಿ, ಅವರ ಬದಲು ಇನ್ನೊಂದು ಸಮುದಾಯಕ್ಕೆ ಸೇರಿದ ಅಭ್ಯರ್ಥಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿರುವ ಹಿನ್ನಲೆಯಲ್ಲಿ ಅವರ ಬೆಂಬಲಿಗರು ಜಾತಿ ಕಾರ್ಡ್ ಬಳಸುತ್ತಿದ್ದಾರೆ. ಅದರ ಮುಂದುವರಿದ ಭಾಗವೇ ಈ ಭಾಷಣ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಆದರೇ ರಾಜಕೀಯ ಪಂಡಿತರ ಈ ವಾದದಲ್ಲಿ ಎಷ್ಟು ಸತ್ಯಾಂಶವಿದೆ ಎನ್ನುವುದು ಸದ್ಯದ ಕುತೂಹಲ.
ಇನ್ನು ಪುತ್ತೂರು ಹಿಂದುತ್ವದ ಭದ್ರಕೋಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ . ಆದರೇ ಇಲ್ಲೂ ಕೂಡ ಚುನಾವಣೆಗೆ ಟಿಕೆಟ್ ನೀಡುವ ಸಂದರ್ಭ ಎಲ್ಲ ರಾಜಕೀಯ ಪಕ್ಷಗಳು ಜಾತಿ ಲೆಕ್ಕಚಾರ ನಡೆಸಿಯೇ ಟಿಕೆಟ್ ನೀಡುವುದು ಗುಟ್ಟಾಗಿ ಉಳಿದಿಲ್ಲ . ಆದರೇ ಈಗ ವಿಡಿಯೋ ವೈರಲ್ ಆದ ಘಟನೆಯೂ ಹಿಂದೂ ಸಂಘಟನೆಯ ಕಾರ್ಯಕರ್ತರ ಆಕ್ರೋಶಕ್ಕೂ ಕಾರಣವಾಗಿದೆ.
ರಾಜಕೀಯ
Kumaraswamy-ಹಳ್ಳಿಯ ಪ್ರತಿ ಹೆಣ್ಣುಮಕ್ಕಳಿಗೆ 2 ಹಸು ಉಚಿತ..! 2028ರ ಎನ್ಡಿಎ ಯೋಜನೆ ಘೋಷಿಸಿದ ಕುಮಾರಸ್ವಾಮಿ
ರಾಜ್ಯದಲ್ಲಿ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಎನ್ಡಿಎ ಅಧಿಕಾರಕ್ಕೆ ಬಂದರೆ ಗ್ರಾಮೀಣ ಪ್ರದೇಶದ ಪ್ರತಿ ಹೆಣ್ಣುಮಕ್ಕಳಿಗೆ ಎರಡು ಹಸುಗಳನ್ನು ಉಚಿತವಾಗಿ ನೀಡುವುದಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಎನ್ಡಿಎ ಅಧಿಕಾರಕ್ಕೆ ಬಂದರೆ ಗ್ರಾಮೀಣ ಪ್ರದೇಶದ ಪ್ರತಿ ಹೆಣ್ಣುಮಕ್ಕಳಿಗೆ ಎರಡು ಹಸುಗಳನ್ನು ಉಚಿತವಾಗಿ ನೀಡುವುದಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.
ಗುರುವಾರ ಬೆಂಗಳೂರಿನ ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2028ರಲ್ಲಿ ರಾಜ್ಯದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಹಳ್ಳಿಗಳಲ್ಲಿನ ಪ್ರತಿ ಹೆಣ್ಣುಮಕ್ಕಳಿಗೆ ಎರಡು ಹಸುಗಳನ್ನು ನೀಡುವ ಯೋಜನೆ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳಿಗಾಗಿ ಚಿಕ್ಕಚಿಕ್ಕ ಮಕ್ಕಳೊಂದಿಗೆ ಪ್ರತಿಭಟನೆ ನಡೆಸುತ್ತಿದ್ದರೂ, ಸರ್ಕಾರ ಅವರ ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದರು. ಮುಖ್ಯಮಂತ್ರಿಗಳು ಅಧಿಕಾರಿಗಳೊಂದಿಗೆ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳುತ್ತಾರೆ. ಆದರೆ, ಭಾರತ್ ಜೋಡೋ ಸಂಘಗಳ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರಿಗೆ ಪ್ರತಿ ಪಂಚಾಯತ್ಗೆ 10 ಲಕ್ಷ ರೂ.ಗಳಂತೆ ಒಟ್ಟು 1,000 ಕೋಟಿ ರೂ. ನೀಡಲು ಯಾವ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಪ್ರಶ್ನಿಸಿದರು.
1,000 ಕೋಟಿ ರೂ. ನೀಡಲು ಯಾವ ಅಧಿಕಾರಿ ಸಲಹೆ ನೀಡಿದರು? ಅಷ್ಟು ಹಣವನ್ನು ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿದ್ದರೆ, ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸಿ ಅವರ ಗೌರವಧನ ಹೆಚ್ಚಿಸಲು 350 ಕೋಟಿ ರೂ. ನೀಡಲು ಸಾಧ್ಯವಿಲ್ಲವೇ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಮಂಗಳೂರು
Priyanka Kharge-ಮಂಗಳೂರಿನಲ್ಲಿ ಭಾರತದ ಮೊದಲ ಸುಸ್ಥಿರ ಕರಾವಳಿ ಡೇಟಾ ಸೆಂಟರ್ ಸ್ಥಾಪನೆ : ತಣ್ಣೀರುಬಾವಿಯಲ್ಲಿ ಸ್ಥಳ ಪರಿಶೀಲಿಸಿದ ಸಚಿವ ಪ್ರಿಯಾಂಕ ಖರ್ಗೆ; ತಣ್ಣೀರು ಭಾವಿಯಲ್ಲಿ 49 ಎಕರೆ ಪ್ರದೇಶ ಗುರುತು; ಯೋಜನೆಯ ಕಾರ್ಯಸಾಧ್ಯತೆ ಪರಿಶೀಲನೆಗೆ ಕ್ರಮ – ಬಿಯಾಂಡ್ ಬೆಂಗಳೂರು ಆಶಯದಡಿ ಜಾಗತಿಕ ಮಟ್ಟದ ತಂತ್ರಜ್ಞಾನ ಪರಿಸರ ವ್ಯವಸ್ಥೆ ನಿರ್ಮಾಣಕ್ಕೆ ಮತ್ತೊಂದು ಹೆಜ್ಜೆ
ಮಂಗಳೂರಿನ ತಣ್ಣೀರ್ಭವಿಯಲ್ಲಿ ಭಾರತದ ಮೊದಲ ಸುಸ್ಥಿರ ಕರಾವಳಿ ಡೇಟಾ ಸೆಂಟರ್ ಸ್ಥಾಪಿಸುವ ಸಾಧ್ಯತೆಯನ್ನು ಕರ್ನಾಟಕ ಸರ್ಕಾರ ಪರಿಶೀಲಿಸುತ್ತಿದೆ. ರಾಜ್ಯದ ಡಿಜಿಟಲ್ ಮೂಲಸೌಕರ್ಯವನ್ನು ವಿಸ್ತರಿಸುವುದರ ಜೊತೆಗೆ ಪರಿಸರದ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನ ಆಧಾರಿತ ಅಭಿವೃದ್ಧಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಮಂಗಳೂರು, ನ.26: ಮಂಗಳೂರಿನ ತಣ್ಣೀರ್ಭವಿಯಲ್ಲಿ ಭಾರತದ ಮೊದಲ ಸುಸ್ಥಿರ ಕರಾವಳಿ ಡೇಟಾ ಸೆಂಟರ್ ಸ್ಥಾಪಿಸುವ ಸಾಧ್ಯತೆಯನ್ನು ಕರ್ನಾಟಕ ಸರ್ಕಾರ ಪರಿಶೀಲಿಸುತ್ತಿದೆ. ರಾಜ್ಯದ ಡಿಜಿಟಲ್ ಮೂಲಸೌಕರ್ಯವನ್ನು ವಿಸ್ತರಿಸುವುದರ ಜೊತೆಗೆ ಪರಿಸರದ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನ ಆಧಾರಿತ ಅಭಿವೃದ್ಧಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮಂಗಳೂರಿನ ತಣ್ಣೀರ್ಭವಿಯಲ್ಲಿರುವ ಪ್ರಸ್ತಾವಿತ ಸ್ಥಳವನ್ನು ಪರಿಶೀಲಿಸಿದರು. ಇಲ್ಲಿ ಸುಮಾರು 49 ಎಕರೆ ಭೂಮಿಯನ್ನು ಯೋಜನೆಯ ಕಾರ್ಯಸಾಧ್ಯತೆ ಪರಿಶೀಲನೆಗಾಗಿ ಗುರುತಿಸಲಾಗಿದೆ.
ಈ ಉಪಕ್ರಮದ ಕುರಿತು ಮಾತನಾಡಿದ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಅವರು, “ನಾವು ಒಪ್ಪಿಕೊಂಡರೂ, ಒಪ್ಪಿಕೊಳ್ಳದಿದ್ದರೂ ಎಐ (AI) ಈಗ ನಮ್ಮ ಬದುಕಿನ ಭಾಗವಾಗಿದೆ. ಎಐ ಯುಗದಲ್ಲಿ ಡೇಟಾ ಸೆಂಟರ್ಗಳು ಅತ್ಯಗತ್ಯ ಮೂಲಸೌಕರ್ಯಗಳಾಗಿವೆ. ಆದರೆ, ನೀರು ಮತ್ತು ವಿದ್ಯುತ್ನ್ನು ಸಮರ್ಥವಾಗಿ ಬಳಸಿಕೊಂಡು, ಪರಿಸರದ ಮೇಲಿನ ನಮ್ಮ ಜವಾಬ್ದಾರಿಗಳಿಗೆ ಯಾವುದೇ ಧಕ್ಕೆಯಾಗದಂತೆ ಈ ಮಹತ್ವದ ಮೂಲಸೌಕರ್ಯವನ್ನು ಸುಸ್ಥಿರ ರೀತಿಯಲ್ಲಿ ಅಭಿವೃದ್ಧಿಪಡಿಸುವುದು ನಮ್ಮ ಹೊಣೆಗಾರಿಕೆಯಾಗಿದೆ. ತಂತ್ರಜ್ಞಾನ ಆಧಾರಿತ ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಸುಸ್ಥಿರತೆ ಎರಡೂ ಪರಸ್ಪರ ಪೂರಕವಾಗಿ ಸಾಗಬಲ್ಲವು ಎಂಬುದನ್ನು ತೋರಿಸುವುದು ನಮ್ಮ ಉದ್ದೇಶವಾಗಿದೆ” ಎಂದರು.
ಕರ್ನಾಟಕ ಸುಸ್ಥಿರ ಡೇಟಾ ಸೆಂಟರ್ ನೀತಿ 2026–2031ರ ಅಡಿಯಲ್ಲಿ ಈ ಉಪಕ್ರಮವನ್ನು ಪರಿಶೀಲಿಸಲಾಗುತ್ತಿದ್ದು, ನವೀಕರಿಸಬಹುದಾದ ಇಂಧನ ಬಳಕೆ, ಸುಧಾರಿತ ಶೀತಲೀಕರಣ ತಂತ್ರಜ್ಞಾನಗಳು ಮತ್ತು ಪರಿಸರ ಸ್ನೇಹಿ ಡಿಜಿಟಲ್ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ.
ಒಟ್ಟು 49 ಎಕರೆ ಭೂಮಿಯಲ್ಲಿ, ಅನ್ವಯವಾಗುವ ಕರಾವಳಿ ನಿಯಂತ್ರಣ ವಲಯದ (CRZ) ನಿಯಮಗಳ ಪ್ರಕಾರ ಸುಮಾರು 20 ಎಕರೆ ಪ್ರದೇಶದಲ್ಲಿ ಶಾಶ್ವತ ನಿರ್ಮಾಣ ಕೈಗೊಳ್ಳಲು ಅವಕಾಶವಿದೆ ಎಂದು ಅಂದಾಜಿಸಲಾಗಿದೆ. ಮುಂದಿನ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಸ್ಥಳದ ಕಾರ್ಯಸಾಧ್ಯತೆ, ಮೂಲಸೌಕರ್ಯದ ಅಗತ್ಯತೆಗಳು ಹಾಗೂ ಪರಿಸರ ಸಂಬಂಧಿತ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುವುದು.
ಸ್ಥಳದ ಸೂಕ್ತತೆ, ಅಗತ್ಯ ಮೂಲಸೌಕರ್ಯಗಳ ಗುರುತಿಸುವಿಕೆ ಮತ್ತು ಸಮಗ್ರ ಶ್ವೇತಪತ್ರ ಸಿದ್ಧಪಡಿಸುವ ಉದ್ದೇಶದಿಂದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಇತರ ಸಂಬಂಧಪಟ್ಟ ಪಾಲುದಾರರೊಂದಿಗೆ ಸರ್ಕಾರ ಸಮಾಲೋಚನೆ ನಡೆಸಲಿದೆ. ಈ ಶ್ವೇತಪತ್ರದಲ್ಲಿ ಸ್ಥಳದ ಅವಕಾಶಗಳು, ಮಿತಿಗಳು ಮತ್ತು ಅಭಿವೃದ್ಧಿಯ ಸಾಧ್ಯತೆಗಳನ್ನು ವಿವರಿಸಲಾಗುವುದು. ಖಾಸಗಿ ವಲಯದ ಕಂಪನಿಗಳು ಹಾಗೂ ಸಂಭಾವ್ಯ ಹೂಡಿಕೆದಾರರೊಂದಿಗೆ ಚರ್ಚೆ ನಡೆಸಲು ಇದು ಆಧಾರವಾಗಲಿದೆ.
ಎಐ ಯುಗಕ್ಕೆ ಸುಸ್ಥಿರ ಡಿಜಿಟಲ್ ಮೂಲಸೌಕರ್ಯ
ಕೃತಕ ಬುದ್ಧಿಮತ್ತೆ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳ ತ್ವರಿತ ಬೆಳವಣಿಗೆಯೊಂದಿಗೆ ಡೇಟಾ ಸೆಂಟರ್ಗಳು ಡಿಜಿಟಲ್ ಆರ್ಥಿಕತೆಯ ಅತ್ಯಗತ್ಯ ಮೂಲಸೌಕರ್ಯಗಳಾಗಿ ಹೊರಹೊಮ್ಮುತ್ತಿವೆ. ಈ ಬೆಳವಣಿಗೆಯ ಜೊತೆಗೆ ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆ ಮತ್ತು ಪರಿಸರ ಸಂರಕ್ಷಣಾ ಕ್ರಮಗಳಿಗೂ ಆದ್ಯತೆ ನೀಡುವುದು ಕರ್ನಾಟಕದ ಉದ್ದೇಶವಾಗಿದೆ.
ಕರ್ನಾಟಕ ಸುಸ್ಥಿರ ಡೇಟಾ ಸೆಂಟರ್ ನೀತಿ 2026–2031ರ ಅಡಿಯಲ್ಲಿ, ಪರಿಸರದ ಜವಾಬ್ದಾರಿಗಳನ್ನು ಮೂಲಸೌಕರ್ಯ ಅಭಿವೃದ್ಧಿಯ ಕೇಂದ್ರವಾಗಿಟ್ಟುಕೊಂಡು ರಾಜ್ಯದಲ್ಲಿ 1 GW ಸಾಮರ್ಥ್ಯದ ಡೇಟಾ ಸೆಂಟರ್ ಮೂಲಸೌಕರ್ಯವನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ.
ತಣ್ಣೀರ್ಭವಿಯಲ್ಲಿ ಪ್ರಸ್ತಾವಿತವಾಗಿರುವ ಡೇಟಾ ಸೆಂಟರ್ನಲ್ಲಿ ನವೀಕರಿಸಬಹುದಾದ ಇಂಧನ, ಇಂಧನ ದಕ್ಷತೆಯ ಕಾರ್ಯಾಚರಣೆಗಳು, ಸುಧಾರಿತ ಶೀತಲೀಕರಣ ತಂತ್ರಜ್ಞಾನಗಳು ಮತ್ತು ಜವಾಬ್ದಾರಿಯುತ ನೀರಿನ ನಿರ್ವಹಣೆಗೆ ಒತ್ತು ನೀಡುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಮೂಲಕ ಕರಾವಳಿ ಪರಿಸರಕ್ಕೆ ಪೂರಕವಾಗಿ ಬೃಹತ್ ಡಿಜಿಟಲ್ ಮೂಲಸೌಕರ್ಯವನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದನ್ನು ತೋರಿಸುವುದು ಉದ್ದೇಶವಾಗಿದೆ.
ಮಂಗಳೂರು, ಮಣಿಪಾಲ ಮತ್ತು ಉಡುಪಿ: ಉದಯೋನ್ಮುಖ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರಗಳು
ಪ್ರಸ್ತಾವಿತ ಡೇಟಾ ಸೆಂಟರ್ ಕರ್ನಾಟಕದ ಕರಾವಳಿ ಭಾಗವನ್ನು ಸಮೃದ್ಧ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವಾಗಿ ರೂಪಿಸುವ ರಾಜ್ಯದ ವಿಶಾಲ ದೂರದೃಷ್ಟಿಯ ಭಾಗವಾಗಿದೆ. ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs), ಸ್ಟಾರ್ಟ್ಅಪ್ಗಳು, ಡೀಪ್ಟೆಕ್, ಸಾಗರ ಜೈವಿಕ ತಂತ್ರಜ್ಞಾನ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ಆದ್ಯತೆ ನೀಡುವ ಮೂಲಕ ಮಂಗಳೂರು, ಮಣಿಪಾಲ ಮತ್ತು ಉಡುಪಿಯನ್ನು ಪರಸ್ಪರ ಪೂರಕವಾದ ತಂತ್ರಜ್ಞಾನ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಪೂರಕವಾಗಿ ಉದ್ಯಮಗಳ ಸಹಭಾಗಿತ್ವದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಪ್ರತಿಭಾ ವಿಕಸನಕ್ಕೂ ಒತ್ತು ನೀಡಲಾಗುತ್ತಿದೆ.
ಈ ಪ್ರದೇಶವು ಈಗಾಗಲೇ ಸುಮಾರು ₹5,000 ಕೋಟಿ ಮೌಲ್ಯದ ಐಟಿ ರಫ್ತುಗಳನ್ನು ದಾಖಲಿಸಿದ್ದು, ಕರ್ನಾಟಕದ ತಂತ್ರಜ್ಞಾನ ಆರ್ಥಿಕತೆಗೆ ತನ್ನ ಕೊಡುಗೆಯನ್ನು ಹೆಚ್ಚಿಸುತ್ತಿದೆ. ಹೊಸ ಹೂಡಿಕೆಗಳನ್ನು ಆಕರ್ಷಿಸುವುದು, ನ್ಯಾನೋ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಸ್ಥಾಪನೆಗೆ ಉತ್ತೇಜನ ನೀಡುವುದು ಮತ್ತು ಸ್ಥಳೀಯ ಪ್ರತಿಭೆಗಳಿಗೆ ಉನ್ನತ ಮೌಲ್ಯದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಈ ಬೆಳವಣಿಗೆಯನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರ ಹೆಚ್ಚಿನ ಅವಕಾಶಗಳನ್ನು ಕಾಣುತ್ತಿದೆ.
ಬಿಯಾಂಡ್ ಬೆಂಗಳೂರು ಎಂಬ ದೂರದೃಷ್ಟಿಯ ಮೂಲಕ ರಾಜ್ಯದಾದ್ಯಂತ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ತಂತ್ರಜ್ಞಾನ ಕ್ಲಸ್ಟರ್ಗಳನ್ನು ನಿರ್ಮಿಸಲು ಕರ್ನಾಟಕ ಬದ್ಧವಾಗಿದೆ. ಈ ಮೂಲಕ ನಾವೀನ್ಯತೆ, ಹೂಡಿಕೆ ಮತ್ತು ಉದ್ಯೋಗಾವಕಾಶಗಳು ಬೆಂಗಳೂರು ಮಹಾನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.
ಪ್ರಸ್ತಾವಿತ ಸುಸ್ಥಿರ ಕರಾವಳಿ ಡೇಟಾ ಸೆಂಟರ್ ಮುಂದಿನ ತಲೆಮಾರಿನ ಡಿಜಿಟಲ್ ಮೂಲಸೌಕರ್ಯ, ಖಾಸಗಿ ವಲಯದ ಸಹಭಾಗಿತ್ವ ಮತ್ತು ಪರಿಸರ ಜವಾಬ್ದಾರಿಯನ್ನು ಒಂದೆಡೆ ತರುವ ಮಹತ್ವದ ಅವಕಾಶವಾಗಿದೆ. ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಸುಸ್ಥಿರತೆ ಒಟ್ಟೊಟ್ಟಿಗೆ ಸಾಗಬಲ್ಲವು ಎಂಬುದನ್ನು ತೋರಿಸುವ ಮೂಲಕ ಸದೃಢ ಹಾಗೂ ಭವಿಷ್ಯದ ಅಗತ್ಯಗಳಿಗೆ ಸನ್ನದ್ಧವಾಗಿರುವ ತಂತ್ರಜ್ಞಾನ ಆರ್ಥಿಕತೆಯನ್ನು ನಿರ್ಮಿಸುವುದು ಕರ್ನಾಟಕದ ವಿಶಾಲ ಉದ್ದೇಶವಾಗಿದೆ.
ಅಂತರ ರಾಜ್ಯ
CM post battle-ಉತ್ತರ ಪ್ರದೇಶ ಬಿಜೆಪಿಯಲ್ಲಿ ಸಿಎಂ ಕುರ್ಚಿ ಕದನ: ಚುನಾವಣೆಗೂ ಮುನ್ನವೇ ಭಿನ್ನಮತ?
ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನವೇ ಆಡಳಿತಾರೂಢ ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ವಿಚಾರವಾಗಿ ರಾಜಕೀಯ ಚರ್ಚೆ ತೀವ್ರಗೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಹೇಳಿಕೆಗಳು ಪಕ್ಷದೊಳಗಿನ ನಾಯಕತ್ವದ ವಿಚಾರವನ್ನು ಮುನ್ನೆಲೆಗೆ ತಂದಿವೆ.
ಲಕ್ನೋ: ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನವೇ ಆಡಳಿತಾರೂಢ ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ವಿಚಾರವಾಗಿ ರಾಜಕೀಯ ಚರ್ಚೆ ತೀವ್ರಗೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಹೇಳಿಕೆಗಳು ಪಕ್ಷದೊಳಗಿನ ನಾಯಕತ್ವದ ವಿಚಾರವನ್ನು ಮುನ್ನೆಲೆಗೆ ತಂದಿವೆ.
ಪತ್ರಕರ್ತರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಮುಂದಿನ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಯೇ ಅಥವಾ ಬೇರೊಬ್ಬರು ಆ ಸ್ಥಾನಕ್ಕೇರುತ್ತಾರೆಯೇ ಎಂಬುದನ್ನು ತಾನು ನಿರ್ಧರಿಸುವುದಿಲ್ಲ ಎಂದು ಹೇಳಿದ್ದಾರೆ.
“ಬಿಜೆಪಿ ಅಭ್ಯರ್ಥಿಗಳು ಕಮಲದ ಚಿಹ್ನೆಯಡಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಚುನಾವಣೆ ಮುಗಿದ ಬಳಿಕ ಶಾಸಕರ ಸಭೆ ನಡೆಯಲಿದ್ದು, ಈ ಸಂದರ್ಭದಲ್ಲಿ ಕೇಂದ್ರದ ವೀಕ್ಷಕರು ಆಗಮಿಸಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸಲಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಮೌರ್ಯ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದು ಈಗಾಗಲೇ ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.
“ಪ್ರತಿಯೊಬ್ಬರೂ ಕಮಲದ ಚಿಹ್ನೆಯಡಿ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗುತ್ತದೆ. ನಾನೂ ಕಮಲದ ಚಿಹ್ನೆಯ ಮೇಲೆಯೇ ಸ್ಪರ್ಧಿಸುತ್ತೇನೆ. ಕಮಲದ ಹೂವೇ ನಮಗೆ ಎಲ್ಲವೂ” ಎಂದು ಯೋಗಿ ಹೇಳಿದ್ದಾರೆ. ಈ ಮೂಲಕ ಮುಂದಿನ ಚುನಾವಣೆಯಲ್ಲೂ ತಮ್ಮ ನಾಯಕತ್ವ ಮುಂದುವರಿಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್–ಎಸ್ಪಿ ಮೈತ್ರಿಯಲ್ಲೂ ಬಿಕ್ಕಟ್ಟು
ಇನ್ನೊಂದೆಡೆ, 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ವಿಚಾರವೂ ಬಿಕ್ಕಟ್ಟಿಗೆ ಕಾರಣವಾಗಿದೆ. ಕಾಂಗ್ರೆಸ್ಗೆ ಕೇವಲ 26 ಕ್ಷೇತ್ರಗಳನ್ನು ಬಿಟ್ಟುಕೊಡುವ ಎಸ್ಪಿ ಪ್ರಸ್ತಾವನೆಗೆ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಸಂಸದ ಹಾಗೂ ಕಾರ್ಯಾಧ್ಯಕ್ಷ ಇಮ್ರಾನ್ ಮಸೂದ್, “ನಾವೇನು ಭಿಕ್ಷುಕರೇ? ನಮಗೂ ಸ್ವಾಭಿಮಾನವಿದೆ. ಮಾತುಕತೆ ಇದೇ ರೀತಿ ಮುಂದುವರಿದರೆ ಮೈತ್ರಿ ಎಲ್ಲಿದೆ?” ಎಂದು ಎಸ್ಪಿ ವಿರುದ್ಧ ಕಿಡಿಕಾರಿದ್ದಾರೆ.
ಒಟ್ಟಿನಲ್ಲಿ, ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನವೇ ಬಿಜೆಪಿ ನಾಯಕತ್ವದ ವಿಚಾರ ಹಾಗೂ ಕಾಂಗ್ರೆಸ್–ಎಸ್ಪಿ ಸೀಟು ಹಂಚಿಕೆ ವಿವಾದಗಳು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ.
-
ನಿಧನ ವಾರ್ತೆ13 hours agoMangaluru-ಮಂಗಳೂರು: ರಸ್ತೆ ದಾಟುತ್ತಿದ್ದ 2ನೇ ತರಗತಿ ವಿದ್ಯಾರ್ಥಿಯ ಮೇಲೆ ಬಸ್ ಹರಿದು ಸಾವು
-
ಬಿಗ್ ನ್ಯೂಸ್7 hours agoVitla-ವಿಟ್ಲ: ಚಿಕ್ಕಪ್ಪನನ್ನು ಕತ್ತಿಯಿಂದ ಕಡಿದು ಹತ್ಯೆಗೈದ ಯುವತಿ ಬಂಧನ
-
ಅಪರಾಧ12 hours agoPunacha-ಪುಣಚದಲ್ಲಿ ಬೈಕ್ಗೆ ಕಾರು ಡಿಕ್ಕಿ; ಸವಾರನಿಗೆ ಗಂಭೀರ ಗಾಯ – ನಿಲ್ಲಿಸದೆ ಪರಾರಿಯಾದ ಕಾರು?
-
ಅಂತರ ರಾಜ್ಯ13 hours agoChennai Jain couple-ತಿರುಪತಿ ತಿಮ್ಮಪ್ಪನಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ಚಿನ್ನ, ವಜ್ರಾಭರಣ ಕಾಣಿಕೆ ನೀಡಿದ ಚೆನ್ನೈ ಜೈನ ದಂಪತಿ..!
-
ಅಪರಾಧ12 hours agoPunacha-ಪುಣಚ: ಪತ್ನಿಯನ್ನು ಕೊಲೆಗೈದು ಹೃದಯಾಘಾತವೆಂದು ಬಿಂಬಿಸಲು ಯತ್ನ: ಪತಿಗೆ 5 ವರ್ಷ ಜೈಲು..!
-
ರಾಜಕೀಯ13 hours agoKumaraswamy-ಹಳ್ಳಿಯ ಪ್ರತಿ ಹೆಣ್ಣುಮಕ್ಕಳಿಗೆ 2 ಹಸು ಉಚಿತ..! 2028ರ ಎನ್ಡಿಎ ಯೋಜನೆ ಘೋಷಿಸಿದ ಕುಮಾರಸ್ವಾಮಿ
-
ಬಿಗ್ ನ್ಯೂಸ್7 hours agoVirupaksha Bhat-ಮಹಾಲಿಂಗೇಶ್ವರ ದೇವಸ್ಥಾನದ ಕಾಮಗಾರಿಗಳಿಗೆ ಹೈಕೋರ್ಟ್ ತಡೆಯಾಜ್ಞೆ: ಅನುಮತಿಯಿಲ್ಲದ ಕಾಮಗಾರಿ, ಟೆಂಡರ್ ಪ್ರಕ್ರಿಯೆ ಮುಂದುವರಿಸದಂತೆ ಮಧ್ಯಂತರ ಆದೇಶ; ದೇವಸ್ಥಾನದ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ, ನಿಯಮಬದ್ಧ ಆಡಳಿತಕ್ಕೆ ಆಗ್ರಹ : ದೂರುದಾರ ವಿರೂಪಾಕ್ಷ ಭಟ್ ಪತ್ರಿಕಾಗೋಷ್ಟಿ
-
ಅಪರಾಧ10 hours agoBantwal-ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ಗುಂಪುಗೂಡಿ ಗಲಾಟೆ; ಟೋಲ್ ಉಪಕರಣಗಳಿಗೆ ಹಾನಿ ಯತ್ನ – ಪ್ರಕರಣ ದಾಖಲು















