ರಾಜಕೀಯ
Mallikarjun Kharge | ರಜಾಕಾರರ ಅಮಾನುಷ ದಾಳಿಗೆ ಇಡೀ ಕುಟುಂಬವನ್ನೇ ಕಳೆದುಕೊಂಡ ಮಗು ಇಂದು ನಿಜಾಮನ ಸೊಕ್ಕು ಮುರಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ – ಇಲ್ಲಿದೆ ವಲಸೆ ಕೂಲಿ ಕಾರ್ಮಿಕನ ಮಗ, ಮಲ್ಲಿಕಾರ್ಜುನ ಖರ್ಗೆಯ ಜೀವನದಲ್ಲಿ ನಡೆದ ಯಾರೂ ಕಂಡುಕೇಳರಿಯದಂತಹ ದಾರುಣ ಕತೆ..!
ನಿನ್ನೆಯಷ್ಟೆ ಕರ್ನಾಟಕದ ಕಾಂಗ್ರೇಸ್ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಕಾಂಗ್ರೇಸ್‍ನ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಯಾರ ಜೀವನದಲ್ಲೂ ನಡೆಯಬಾರದಂತ ಘಟನೆ ಖರ್ಗೆ ಜೀವನದಲ್ಲಿ ನಡೆದಿದೆ ಅದೇನು ಇಲ್ಲಿ ಓದಿ :
ಅದು ಹೈದ್ರಾಬಾದ್ ನಿಜಾಮನ ಹಿಡಿತದಿಂದ ಬಿಡುಗಡೆಯಾಗಲು ಹೈದ್ರಾಬಾದ್-ಕರ್ನಾಟಕ ಭಾಗದ ಜನ ಸಿಡಿದೆದ್ದ ಕಾಲ.
ಅಂದ ಹಾಗೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕರೂ ಗುಲ್ಬರ್ಗ,ರಾಯಚೂರು(ಈಗಿನ ಕೊಪ್ಪಳವೂ ಸೇರಿ)ಬಳ್ಳಾರಿ ಸೇರಿದಂತೆ ಕನ್ನಡ ಭಾಷಿಕರೇ ಹೆಚ್ಚಾಗಿದ್ದ ಮೂರು ಜಿಲ್ಲೆಗಳು ಹೈದ್ರಾಬಾದ್ ಸಂಸ್ಥಾನದಲ್ಲಿದ್ದವು.ಜತೆಗೇ ಬೀದರ್ ನ ಕೆಲ ಭಾಗಗಳಲ್ಲೂ ನಿಜಾಮನ ಹಿಡಿತವಿತ್ತು.
ಒಟ್ಟಿನಲ್ಲಿ ತೆಲಂಗಾಣದ ಎಂಟು ಜಿಲ್ಲೆಗಳು,ಮರಾಠವಾಡದ ಐದು ಹಾಗೂ ಕರ್ನಾಟಕದ ಮೂರು ಜಿಲ್ಲೆಗಳು ಹೈದ್ರಾಬಾದ್ ಸಂಸ್ಥಾನದ ತೆಕ್ಕೆಯಲ್ಲಿದ್ದವು.ದೇಶಕ್ಕೆ ಸ್ವಾತಂತ್ರ್ಯ ಬಂದರೂ,ಭಾರತದ ಒಕ್ಕೂಟದೊಳಗೆ ಸೇರಲು ನಿಜಾಮ ಮಿರ್ ಉಸ್ಮಾನ್ ಅಲೀಖಾನ್ ಬಹಾದ್ದೂರ್ ತಯಾರಿರಲಿಲ್ಲ.
ದೇಶದ ಐನೂರಾ ಅರವತ್ತೈದರಷ್ಟು ಸಂಸ್ಥಾನಗಳ ಪೈಕಿ ಹೈದ್ರಾಬಾದ್ ಸಂಸ್ಥಾನವೇ ಶ್ರೀಮಂತ ಸಂಸ್ಥಾನ.ಐವತ್ತು ಲಕ್ಷ ಎಕರೆಯಷ್ಟು ಜಮೀನು ನಿಜಾಮನ ಸ್ವಂತ ಆಸ್ತಿಯಾಗಿತ್ತು ಅಂದರೆ ಊಹಿಸಿ. ಅದೇ ರೀತಿ ಆತನ ವಾರ್ಷಿಕ ಆದಾಯ ಎರಡೂವರೆ ಕೋಟಿ ರೂಪಾಯಿಗಳಷ್ಟು ದೊಡ್ಡದಿತ್ತು.
1941 ರ ಜನಗಣತಿಯ ಪ್ರಕಾರ ಈ ಸಂಸ್ಥಾನದ ಜನ ಸಂಖ್ಯೆ ಒಂದು ಕೋಟಿ ಅರವತ್ಮೂರು ಲಕ್ಷಕ್ಕೂ ಹೆಚ್ಚು.ಈ ಪೈಕಿ ಎಪ್ಪತ್ತು ಲಕ್ಷ ಮಂದಿ ತೆಲುಗರು,ನಲವತ್ತು ಲಕ್ಷ ಮರಾಠಿಗರು ಹಾಗೂ ಇಪ್ಪತ್ತು ಲಕ್ಷ ಕನ್ನಡ ಭಾಷಿಕರು ಇದ್ದರು.
ನಿಜಾಮರಲ್ಲಿ ಮೀರ್ ಉಸ್ಮಾನ್ ಅಲಿ ಖಾನ್ ಅಧಿಕಾರಕ್ಕೆ ಬಂದ ಕಾಲಕ್ಕೆ ದೇಶದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಕೂಗು ಜೋರಾಗಿತ್ತು.
ಈ ಸಂದರ್ಭದಲ್ಲಿ ಬ್ರಿಟಿಷರಿಗೆ ನಿಷ್ಟನಾಗಿದ್ದ ನಿಜಾಮ,ತನ್ನದೇ ಒಂದು ಸೈನ್ಯ ಕಟ್ಟಿಕೊಂಡ.ಅದರ ಹೆಸರು ಇತ್ತೆಹಾದ್ ಮುಸ್ಲಿಮಿನ್. ಕಾಲ ಕ್ರಮೇಣ ಈ ಪಡೆಗೆ ರಜಾಕಾರರ ಪಡೆ ಎಂಬ ಹೆಸರು ಬಂತು. ದೇಶಕ್ಕೆ ಸ್ವಾತಂತ್ರ್ಯ ಬಂದ ಕಾಲಕ್ಕಾಗಲೇ ಈ ಪಡೆಯಲ್ಲಿ ಒಂದು ಲಕ್ಷ ಜನರಿದ್ದರು.
ದೇಶಕ್ಕೇನೋ ಸ್ವಾತಂತ್ರ್ಯ ಬಂತು. ಆದರೆ ಹೈದ್ರಾಬಾದ್-ಕರ್ನಾಟಕ ಭಾಗಕ್ಕೆ ಮಾತ್ರ ಸ್ವಾತಂತ್ರ್ಯ ಬರಲಿಲ್ಲ. ಹೀಗಾಗಿ ರಮಾನಂದ ತೀರ್ಥರು ಸೇರಿದಂತೆ ಹಲವು ನಾಯಕರು ನಿಜಾಮನಿಗೆ ಸೆಡ್ಡು ಹೊಡೆದು ಹೋರಾಟಕ್ಕಿಳಿದರು. ಭಾರತದ ಒಕ್ಕೂಟದೊಳಕ್ಕೆ ಸೇರಬಯಸದ ನಿಜಾಮ, ಪಾಕಿಸ್ತಾನದ ಜನಕ ಮಹಮದಾಲಿ ಜಿನ್ನಾ ಅವರ ಜತೆ ಮಾತುಕತೆ ನಡೆಸಿ,ಪಾಕಿಸ್ತಾನಕ್ಕೆ ಸೇರುವ ಬಯಕೆ ತೋಡಿಕೊಂಡ.
ಆತನ ರಜಾಕಾರರ ಪಡೆ, ಸಂಸ್ಥಾನದಿಂದ ಬಿಡುಗಡೆ ಹೊಂದಲು ಯತ್ನಿಸಿದ ಜನರನ್ನು ಸಿಕ್ಕ ಸಿಕ್ಕಂತೆ ಬಡಿಯಿತು. ಅವರ ಮೇಲೆ ದೌರ್ಜನ್ಯ,ಅತ್ಯಾಚಾರ,ಸುಲಿಗೆ ನಡೆಸಿತು. ಅಸಂಖ್ಯಾತ ಜನರನ್ನು ಕೊಂದು ಹಾಕಿತು.
ಒಂದು ಹಂತದಲ್ಲಿ ರಜಾಕಾರರ ಪಡೆ ಯಾವ ಮಟ್ಟಕ್ಕೆ ಬೆಳೆದಿತ್ತು ಎಂದರೆ ಸ್ವತ: ನಿಜಾಮನೂ ಅದರ ಮೇಲಿನ ಹಿಡಿತ ಕಳೆದುಕೊಳ್ಳುತ್ತಾ ಬಂದಿದ್ದ. ಸಾರಿಗೆ,ಹಣಕಾಸು ಸೇರಿದಂತೆ ಬಹುತೇಕ ವಿಷಯಗಳಲ್ಲಿ ಹಿಡಿತ ಸಾಧಿಸಿದ್ದ ರಜಾಕಾರರು, ಹೈದ್ರಾಬಾದ್ ಸಂಸ್ಥಾನದಿಂದ ಹೊರಬರಲು ಯತ್ನಿಸಿದವರ ವಿರುದ್ಧ ಸಿಕ್ಕ ಸಿಕ್ಕಂತೆ ದೌರ್ಜನ್ಯವೆಸಗಿದರು.
ಇಂತಹ ಕಾಲದಲ್ಲೇ ಬೀದರ್ ಜಿಲ್ಲೆ, ಹುಮ್ನಾಬಾದ್ ತಾಲ್ಲೂಕಿನ ವರವಟ್ಟಿ ಗ್ರಾಮದ ಮೇಲೆ ಒಂದು ದಿನ ರಜಾಕಾರರ ಅಮಾನುಷ ಧಾಳಿ ನಡೆಯಿತು. ಆ ಧಾಳಿ ಎಷ್ಟು ಅಮಾನುಷವಾಗಿತ್ತೆಂದರೆ ಆ ಗ್ರಾಮದ ಹಲವಾರು ಮಂದಿ,ರಜಾಕಾರರ ಅಟ್ಟಹಾಸಕ್ಕೆ ಸಜೀವ ದಹನವಾದರು.
ಈ ಪೈಕಿ ಒಂದು ಕುಟುಂಬದ ಮನೆಯೊಡತಿ ಮತ್ತು ಮೂರು ಮಕ್ಕಳು ಸೇರಿದಂತೆ ನಾಲ್ಕು ಮಂದಿಯಿದ್ದ ಒಂದು ಗುಡಿಸಲೂ ಧಗಧಗನೆ ಹತ್ತಿ ಉರಿಯಿತು.ರಜಾಕಾರರ ಅಟ್ಟಹಾಸಕ್ಕೆ ಬಲಿಯಾದ ಆ ಕುಟುಂಬದ ಯಜಮಾನರ ಹೆಸರು ಮಾಪಣ್ಣ!
ಕೆಲಸಕ್ಕೆಂದು ಹೊರಗೆ ಹೋಗಿದ್ದ ಪರಿಣಾಮವಾಗಿ ಮಾಪಣ್ಣ ಅವರು ರಜಾಕಾರರ ಅಟ್ಟಹಾಸಕ್ಕೆ ಸಿಲುಕದೆ ಬಚಾವಾದರು.ಆದರೆ ಬಂದು ನೋಡುತ್ತಾರೆ. ಎಲ್ಲಿದೆ ಗುಡಿಸಲು? ಪತ್ನಿ ಹಾಗೂ ಮಕ್ಕಳ ಸಮೇತ ಬೂದಿಯಾಗಿದೆ. ಕಂಗಾಲಾದ ಮಾಪಣ್ಣ ಅತ್ತಿತ್ತ ತಿರುಗಿ ನೋಡುತ್ತಾರೆ.
ಒಂದು ಮರಕ್ಕೆ ಸೀರೆಯನ್ನು ಜೋಕಾಲಿಯ ತರ ಕಟ್ಟಲಾಗಿದೆ.ಆ ಜೋಕಾಲಿಯಲ್ಲಿ ಒಂದು ಮಗು ಮಲಗಿದೆ. ಹಾಗೆ ಜೋಕಾಲಿಯಲ್ಲಿ ಮಲಗಿದ್ದ ಕಾರಣಕ್ಕಾಗಿ ಮಗು ಬಚಾವಾಗಿದೆ. ಅದೊಂದೇ ರಜಾಕಾರರ ಧಾಳಿಯ ನಡುವೆಯೂ ಬದುಕುಳಿದ ಮಾಪಣ್ಣ ಅವರ ಮಗು.
ತಕ್ಷಣ ಮಗುವನ್ನು ಎತ್ತಿಕೊಂಡ ಮಾಪಣ್ಣ ನೆರೆಯ ಗುಲ್ಬರ್ಗಕ್ಕೆ ಹೋದರು. ಇದಾದ ಸ್ವಲ್ಪ ಸಮಯದಲ್ಲೇ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ನೇತೃತ್ವದ ಕಾಂಗ್ರೇಸ್ ಸರ್ಕಾರದ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲರು, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಗುಪ್ತ ಸಭೆ ನಡೆಸಿ ‘ಆಪರೇಶನ್ ಪೋಲೋ ‘ ಎನ್ನುವ ಕಾರ್ಯಚರಣೆಯನ್ನು 1948 ರ ಸೆಪ್ಟೆಂಬರ್ 13 ರಂದು ಭಾರತೀಯ ಸೈನ್ಯವನ್ನು ಹೈದ್ರಾಬಾದ್ ಸಂಸ್ಥಾನಕ್ಕೆ ನುಗ್ಗಿಸಿದರು. ಪರಿಣಾಮ ? ಬೇರೆ ದಾರಿ ಕಾಣದ ನಿಜಾಮ, ಹೈದ್ರಾಬಾದ್ ಸಂಸ್ಥಾನ ಭಾರತೀಯ ಒಕ್ಕೂಟದೊಳಕ್ಕೆ ಸೇರುವುದನ್ನು ಅಸಹಾಯಕವಾಗಿ ನೋಡಬೇಕಾಯಿತು. ಈಗಲೂ
ಈ ಮಧ್ಯೆ ವರವಟ್ಟಿಯಿಂದ ಗುಲ್ಬರ್ಗಕ್ಕೆ ಬಂದ ಮಾಪಣ್ಣ ಅಲ್ಲಿನ ಎಂ.ಎಸ್.ಕೆ.ಮಿಲ್ ನಲ್ಲಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದರು. ಕಷ್ಟ ಪಟ್ಟು ದುಡಿದು ತಮ್ಮ ಮಗುವನ್ನು ಬೆಳೆಸಿದರು. ಮುಂದೆ ಅದೇ ಮಗು ದೊಡ್ಡದಾಯಿತು.ಕಷ್ಟ ಪಟ್ಟು ಓದಿದ್ದರ ಫಲವಾಗಿ ಕಾರ್ಖಾನೆಯ ಕಾನೂನು ಸಲಹೆಗಾರರ ಪಟ್ಟ ಸಿಕ್ಕಿತು.ಸಂಯುಕ್ತ ಮಜದೂರ್ ಸಂಘಟನೆಯ ಮುಖಂಡತ್ವವೂ ದಕ್ಕಿತು.
ಅಷ್ಟೇ ಅಲ್ಲ,ದೊಡ್ಡದಾದ ಈ ಮಗು ಕಾರ್ಖಾನೆಯ ನೂರಾರು ಮಂದಿ ಬಡ ಕಾರ್ಮಿಕರಿಗೆ ಸ್ವಂತ ಸೂರು ಕಟ್ಟಿಕೊಟ್ಟಿತು. ಒಂದು ಕಾಲದಲ್ಲಿ ರಜಾಕಾರರ ಕ್ರೌರ್ಯಕ್ಕೆ ಸಿಲುಕಿ ಕುಟುಂಬವನ್ನೇ ಕಳೆದುಕೊಂಡ ಆ ಮಗು ಈ ರೀತಿ ನೂರಾರು ಜನರಿಗೆ ಸೂರು ನಿರ್ಮಿಸಿಕೊಟ್ಟಿದ್ದಷ್ಟೇ ಅಲ್ಲ.
ಹೀಗೆ ರಜಾಕಾರರ ಧಾಳಿಗೆ ಬಲಿಯಾಗಿ ತಂದೆಯನ್ನು ಹೊರತುಪಡಿಸಿ ಉಳಿದೆಲ್ಲರನ್ನೂ ಕಳೆದುಕೊಂಡರೂ ತಲೆ ಎತ್ತಿ ನಿಂತ, ಮಂತ್ರಿಯಾಗಿ,ಪ್ರತಿಪಕ್ಷದ ನಾಯಕರಾಗಿ, ರಾಜ್ಯ ಕಾಂಗ್ರೆಸ್ ನ ಅಧ್ಯಕ್ಷರಾಗಿ, ರೈಲ್ವೇ ಸಚಿವರಾಗಿ,ಈಗ ರಾಷ್ಟ್ರೀಯ ಕಾಂಗ್ರೆಸ್ ನ ಸಂಸದೀಯ ನಾಯಕನಾಗಿ ಬೆಳೆದ ಆ ಮಗುವೇ ಎಂ.ಮಲ್ಲಿಕಾರ್ಜುನ ಖರ್ಗೆ..! ನಿನ್ನೆ ಕಾಂಗ್ರೇಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು.
ರಾಜಕೀಯ ಎಂಟ್ರಿ : 80ರ ಹರೆಯದ ಖರ್ಗೆ ಅವರ ಸಾಮಾಜಿಕ, ರಾಜಕೀಯ ಹಾದಿ ಬಲು ವೈಶಿಷ್ಟ್ಯ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವರವಟ್ಟಿ ಎಂಬ ಪುಟ್ಟ ಗ್ರಾಮ ಜನ್ಮಭೂಮಿಯಾದರೆ, ಕಲಬುರಗಿ ಕರ್ಮಭೂಮಿ, ರಜಾಕಾರರ ದಾಳಿಯಿಂದ ಇಡೀ ಕುಟುಂಬ ಕಳೆದುಕೊಂಡು ಹೊಟ್ಟೆಪಾಡಿಗಾಗಿ ಕೆಲಸ ಅರಸಿ ತಂದೆ ಮಾಪಣ್ಣ ಕಲಬುರಗಿಗೆ ಗುಳೆ ಬಂದರು. ಎಂಎಸ್‌ಕೆ ಮಿಲ್‌ನಲ್ಲಿ ಕಾರ್ಮಿಕರಾಗಿ ಸೇರಿದರು. ತಂದೆ ಕೆಲಸ ಮಾಡುತ್ತಿದ್ದ ಕಾರ್ಖಾನೆ ಖರ್ಗೆ ಅವರನ್ನು ಕಾರ್ಮಿಕ ಚಳವಳಿಗೆ ಧುಮುಕಿಸಿತು. 70ರ ದಶಕದಲ್ಲಿ ಮಜದೂರು ಸಂಘದ ಮುಖಂಡರಾಗಿ ಆರಂಭಿಸಿದ ಇವರ ಕಾರ್ಮಿಕ ಹೋರಾಟ ಮುಂದೆ ರಾಜಕೀಯಕ್ಕೆ ಗಟ್ಟಿ ನೆಲೆ ಒದಗಿಸಿತು. ಆರು ದಶಕದ ರಾಜಕೀಯ ಜೀವನದಲ್ಲಿ ಖರ್ಗೆ ಸಾಕಷ್ಟು ಏಳು-ಬೀಳು ಕಂಡವರು. ಆದರೆ ಎಂಥದ್ದೇ ಪರಿಸ್ಥಿತಿ ಬಂದರೂ, ಏನೇ ಸವಾಲು ಎದುರಾದರೂ ಯಾವತ್ತೂ ಪಕ್ಷನಿಷ್ಠೆ ಬಿಟ್ಟಿಲ್ಲ. ತತ್ವ, ಸಿದ್ಧಾಂತಗಳೊಂದಿಗೆ ರಾಜಿ ಮಾಡಿಕೊಂಡಿಲ್ಲ. ಏಕಪಕ್ಷ ನಿಷ್ಠೆಯು ಒಲ್ಲೆ ಎಂದರೂ ಇಂದು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ಕಲ್ಪಿಸಿದೆ.
ಕೊಟ್ಟ ಕೆಲಸಕ್ಕೆ ನ್ಯಾಯ: ಸರ್ಕಾರ ಅಥವಾ ಪಕ್ಷದಲ್ಲಿ ತಮಗೆ ವಹಿಸಿದ ಕೆಲಸಕ್ಕೆ ನ್ಯಾಯ ಒದಗಿಸಿರುವುದು ಖರ್ಗೆ ಹೆಗ್ಗಳಿಕೆ. ಶಿಕ್ಷಣ ಸಚಿವರಾಗಿ ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ತರುವಲ್ಲಿ ಶ್ರಮಿಸಿದರು. ಎಸ್‌ಸಿ-ಎಸ್‌ಟಿ ಆಡಳಿತ ಮಂಡಳಿಗಳ ಶಿಕ್ಷಣ ಸಂಸ್ಥೆಗಳಿಗೆ ಅನುದಾನ, ಬ್ಯಾಕ್‌ಲಾಗ್ ಹುದ್ದೆಗಳನ್ನು ತುಂಬುವಲ್ಲಿ ಖರ್ಗೆ ಪಾತ್ರ ಗಣನೀಯ, ಕಂದಾಯ ಸಚಿವರಾಗಿ ಭೂ ಸುಧಾರಣಾ ಕಾಯ್ದೆ ಪರಿಣಾಮಕಾರಿ ಜಾರಿಯಾಗುವಂತೆ ನೋಡಿಕೊಂಡರು. ಭೂ ನ್ಯಾಯಮಂಡಳಿಗಳ ರಚನೆ, ಮಿನಿ ವಿಧಾನಸೌಧಗಳ ಕಲ್ಪನೆ ಇವರದ್ದೆ, ಸಹಕಾರ ಸಚಿವರಾಗಿ ಪರಿಶಿಷ್ಟರಿಗೆ ಮೀಸಲಾತಿ ತಂದರು. ಕೈಗಾರಿಕಾ ಸಚಿವರಾಗಿ ಎಸ್‌ಸಿ-ಎಸ್‌ಟಿ ಸಬ್ಸಿಡಿ ಶೇ.20ರಿಂದ 40ಕ್ಕೆ ಏರಿಕೆ. ಪೊಲೀಸ್ ಇಲಾಖೆಯ ಆಧುನೀಕರಣ, ಇಡೀ ದೇಶದಲ್ಲಿಯೇ ಮೊದಲ ಸೈಬರ್ ಪೊಲೀಸ್ ಠಾಣೆಯ ಸ್ಥಾಪನೆ ಮಾಡಿದರು. ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿ ದುಡಿಯುವ ವರ್ಗಗಳಿಗೆ ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆ, ಪಿಂಚಣಿ, ಪಿಎಫ್ ಕಚೇರಿಗಳ ಕಂಪ್ಯೂಟರೀಕರಣ, ಕಲಬುರಗಿಯಲ್ಲಿ ಇಎಸ್‌ಐ ಮೆಡಿಕಲ್ ಕಾಲೇಜು, ಆಸ್ಪತ್ರೆ, ಇಡೀ ದೇಶದ ಇಎಸ್‌ಐ ಆಸ್ಪತ್ರೆಗಳ ನವೀಕರಣ ಹೀಗೆ ಸಾಧನೆಗಳ ಪಟ್ಟಿ ಸಾಗುತ್ತದೆ.
ಖರ್ಗೆ ವಿವರ :
ಹೆಸರು: ಮಲ್ಲಿಕಾರ್ಜುನ ಖರ್ಗೆ
ತಂದೆ: ಮಲ್ಲಪ್ಪ
ತಾಯಿ: ಸಾಯಿಬವ್ವ
ಹುಟ್ಟಿದ ದಿನಾಂಕ: 21-07-1942 ಹುಟ್ಟಿದ ಸ್ಥಳ: ವರವಟ್ಟಿ, ಭಾಲ್ಕಿ ತಾಲೂಕು
ವಿದ್ಯಾಭ್ಯಾಸ: ಬಿಎ, ಎಲ್‌ಎಲ್‌ಬಿ
ಮದುವೆ: 13-5-1968 ಪತ್ನಿ: ರಾಧಾಬಾಯಿ
ಮಕ್ಕಳು: ಮೂರು ಗಂಡು, ಇಬ್ಬರು ಹೆಣ್ಣು ಮಕ್ಕಳು
1965-66: ಕಲಬುರಗಿ ವಿಜ್ಞಾನ, ಕಲಾ ಕಾಲೇಜಿನ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ
1966-67: ಕಾನೂನು ಕಾಲೇಜು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ
1969: ಕಲಬುಗರಿ ನಗರ ಕಾಂಗ್ರೆಸ್ ಅಧ್ಯಕ್ಷ
1972: ಮೊದಲ ಬಾರಿ ಶಾಸಕ
1976-78: ಪ್ರಾಥಮಿಕ ಶಿಕ್ಷಣ ರಾಜ್ಯ ಸಚಿವ
1979: ಆರ್‌ಡಿಆರ್‌ಪಿ ಸಚಿವ
1980-83: ಕಂದಾಯ ಸಚಿವ
1983: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ
1985: ವಿಧಾನಸಭೆ ಪ್ರತಿಪಕ್ಷದ ಉಪನಾಯಕ
1990-92: ಕಂದಾಯ ಹಾಗೂ ಆರ್‌ಡಿಪಿಆರ್ ಸಚಿವ
1992-94: ಸಹಕಾರ, ಬೃಹತ್ ಕೈಗಾರಿಕೆ ಸಚಿವ
1996-99: ವಿಧಾನಸಭೆ ಪ್ರತಿಪಕ್ಷದ ನಾಯಕ
1999-2004: ಗೃಹ, ಮೂಲಸೌಕರ್ಯ, ಸಣ್ಣ ನೀರಾವರಿ ಸಚಿವ
2004-06: ಸಾರಿಗೆ, ಜಲ ಸಂಪನ್ಮೂಲ, ಸಣ್ಣ ನೀರಾವರಿ ಸಚಿವ
2008-09: ವಿಧಾನಸಭೆ ವಿರೋಧ ಪಕ್ಷದ ನಾಯಕ
2005-08: ಕೆಪಿಸಿಸಿ ಅಧ್ಯಕ್ಷ
2009: ಲೋಕಸಭೆಗೆ ಆಯ್ಕೆ, ಕಾರ್ಮಿಕ ಸಚಿವ
2013-14: ರೈಲ್ವೆ ಸಚಿವ
2014-19: ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ
2018: ಎಐಸಿಸಿ ಪ್ರಧಾನ ಕಾರ್ಯದರ್ಶಿ
2020: ರಾಜ್ಯಸಭೆಗೆ ಆಯ್ಕೆ, ಪ್ರತಿಪಕ್ಷದ ನಾಯಕ
2022: ಎಐಸಿಸಿ ಅಧ್ಯಕ್ಷರಾಗಿ ಆಯ್ಕೆ
ರಾಜ್ಯದ 2ನೇ, ದಕ್ಷಿಣದ ಹತ್ತನೇ ಅಧ್ಯಕ್ಷ:
ಎಐಸಿಸಿಗೆ ರಾಜ್ಯದಿಂದ ಅಧ್ಯಕ್ಷರಾಗುತ್ತಿರುವ ಎರಡನೇಯವರು ಮಲ್ಲಿಕಾರ್ಜುನ ಖರ್ಗೆ, ದಕ್ಷಿಣದ ರಾಜ್ಯಗಳಿಂದ ಇದುವರೆಗೂ ಒಂಬತ್ತು ಮಂದಿ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನ ನಿರ್ವಹಿಸಿದ್ದು, ಖರ್ಗೆ 10 ನೇಯವರಾಗಿದ್ದಾರೆ. ಎಸ್. ನಿಜಲಿಂಗಪ್ಪ ಅವರು 1968ರಿಂದ 1969ರ ತನಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮೊದಲು ಹಾಗೂ ಆನಂತರ ಈ ಹುದ್ದೆಗೆ ರಾಜ್ಯದಿಂದ ಯಾರೊಬ್ಬರೂ ಆಯ್ಕೆಯಾಗಿರಲಿಲ್ಲ. ದಕ್ಷಿಣದ ರಾಜ್ಯಗಳಿಂದ ಪಾನಪಕ್ಕಂ ಆನಂದಚಾರ್ಲು (1891) ಈ ಹುದ್ದೆ ಅಲಂಕರಿಸಿದ ಮೊದಲಿಗರು. ಆಬಳಿಕ ಸಿ.ಶಂಕರನ್‌ನಾಯರ್ (1897), ಸಿ. ವಿಜಯರಾಘವನ್ (1920), ಶ್ರೀನಿವಾಸ ಐಯ್ಯಂಗಾರ್ (1926), ನೀಲಂ ಸಂಜೀವರೆಡ್ಡಿ (1960-62), ಕೆ. ಕಾಮರಾಜ್ (1964-66), ಎಸ್.ನಿಜಲಿಂಗಪ್ಪ (1968 69), ಕಾಪು ಬ್ರಹ್ಮಾನಂದರೆಡ್ಡಿ (1977), ಪಿ.ವಿ. ನರಸಿಂಹರಾವ್ (1992-94) ಹಾಗೂ ಮಲ್ಲಿಕಾರ್ಜುನ ಖರ್ಗೆ (2022)
ಕುಟುಂಬದ ಪರಿಚಯ:
1968ರಲ್ಲಿ ಖರ್ಗೆ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ದೊಡ್ಮನೆ ಕುಟುಂಬದ ರಾಧಾಬಾಯಿ ಜತೆಗೆ ವಿವಾಹವಾದರು. ರಾಹುಲ್, ಪ್ರಿಯಾಂಕ್, ಮಿಲಿಂದ್, ಜಯಶ್ರೀ, ಪ್ರಿಯದರ್ಶಿನಿ ಮಕ್ಕಳು. ನಾನಾ ಕೆಲಸಕಾರ್ಯ ನಿಮಿತ್ತ ಖರ್ಗೆ ಮನೆ ಬಿಟ್ಟು ಸುತ್ತಾಟ ಮಾಡುತ್ತಿದ್ದರು. ಈ ಸ್ಥಿತಿಯಲ್ಲಿ ಪತ್ನಿ ರಾಧಾಬಾಯಿ ಪತಿಯ ಕೆಲಸಕ್ಕೆ ಬೆಂಬಲಿಸುವ ಜತೆ ಜತೆಯಲ್ಲೇ ಎಲ್ಲ ಮಕ್ಕಳನ್ನು ಚೆನ್ನಾಗಿ ಓದಿಸಿ, ಸುಂಸ್ಕೃತರಾಗಿಸಿ ಬೆಳೆಸಿದರು. ಇಬ್ಬರೂ ಪುತ್ರಿಯರು ವೈದ್ಯರಿದ್ದಾರೆ. ದೊಡ್ಡ ಮಗ ರಾಹುಲ್ ಕಲಬುರಗಿ ಬುದ್ಧವಿಹಾರ ಟ್ರಸ್ಟ್ ಅಧ್ಯಕ್ಷರು. ಎರಡನೇ ಮಗ ಪ್ರಿಯಾಂಕ್ ಶಾಸಕ. ಮಿಲಿಂದ್ ಪುಣೆಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಕುಟುಂಬದಲ್ಲಿ ಪ್ರಿಯಾಂಕ್ ಮಾತ್ರ ರಾಜಕೀಯಕ್ಕೆ ಬಂದಿದ್ದಾರೆ. ಖರ್ಗೆ ಯಶಸ್ಸಿನಲ್ಲಿ ಅರ್ಧಾಂಗಿನಿ ರಾಧಾಬಾಯಿ ಪಾತ್ರ ಅರ್ಧಕ್ಕೂ ಹೆಚ್ಚು. ಹೀಗಂತ ಅನೇಕ ಸಂದರ್ಭಗಳಲ್ಲಿ ಸ್ವತಃ ಖರ್ಗೆ ಹೇಳಿಕೊಂಡಿದ್ದಾರೆ.
ರಾಜಕೀಯ
Kumaraswamy-ಹಳ್ಳಿಯ ಪ್ರತಿ ಹೆಣ್ಣುಮಕ್ಕಳಿಗೆ 2 ಹಸು ಉಚಿತ..! 2028ರ ಎನ್‌ಡಿಎ ಯೋಜನೆ ಘೋಷಿಸಿದ ಕುಮಾರಸ್ವಾಮಿ
ರಾಜ್ಯದಲ್ಲಿ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಎನ್‌ಡಿಎ ಅಧಿಕಾರಕ್ಕೆ ಬಂದರೆ ಗ್ರಾಮೀಣ ಪ್ರದೇಶದ ಪ್ರತಿ ಹೆಣ್ಣುಮಕ್ಕಳಿಗೆ ಎರಡು ಹಸುಗಳನ್ನು ಉಚಿತವಾಗಿ ನೀಡುವುದಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಎನ್‌ಡಿಎ ಅಧಿಕಾರಕ್ಕೆ ಬಂದರೆ ಗ್ರಾಮೀಣ ಪ್ರದೇಶದ ಪ್ರತಿ ಹೆಣ್ಣುಮಕ್ಕಳಿಗೆ ಎರಡು ಹಸುಗಳನ್ನು ಉಚಿತವಾಗಿ ನೀಡುವುದಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.
ಗುರುವಾರ ಬೆಂಗಳೂರಿನ ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2028ರಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಹಳ್ಳಿಗಳಲ್ಲಿನ ಪ್ರತಿ ಹೆಣ್ಣುಮಕ್ಕಳಿಗೆ ಎರಡು ಹಸುಗಳನ್ನು ನೀಡುವ ಯೋಜನೆ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳಿಗಾಗಿ ಚಿಕ್ಕಚಿಕ್ಕ ಮಕ್ಕಳೊಂದಿಗೆ ಪ್ರತಿಭಟನೆ ನಡೆಸುತ್ತಿದ್ದರೂ, ಸರ್ಕಾರ ಅವರ ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದರು. ಮುಖ್ಯಮಂತ್ರಿಗಳು ಅಧಿಕಾರಿಗಳೊಂದಿಗೆ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳುತ್ತಾರೆ. ಆದರೆ, ಭಾರತ್ ಜೋಡೋ ಸಂಘಗಳ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರಿಗೆ ಪ್ರತಿ ಪಂಚಾಯತ್‌ಗೆ 10 ಲಕ್ಷ ರೂ.ಗಳಂತೆ ಒಟ್ಟು 1,000 ಕೋಟಿ ರೂ. ನೀಡಲು ಯಾವ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಪ್ರಶ್ನಿಸಿದರು.
1,000 ಕೋಟಿ ರೂ. ನೀಡಲು ಯಾವ ಅಧಿಕಾರಿ ಸಲಹೆ ನೀಡಿದರು? ಅಷ್ಟು ಹಣವನ್ನು ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿದ್ದರೆ, ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸಿ ಅವರ ಗೌರವಧನ ಹೆಚ್ಚಿಸಲು 350 ಕೋಟಿ ರೂ. ನೀಡಲು ಸಾಧ್ಯವಿಲ್ಲವೇ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಮಂಗಳೂರು
Priyanka Kharge-ಮಂಗಳೂರಿನಲ್ಲಿ ಭಾರತದ ಮೊದಲ ಸುಸ್ಥಿರ ಕರಾವಳಿ ಡೇಟಾ ಸೆಂಟರ್ ಸ್ಥಾಪನೆ : ತಣ್ಣೀರುಬಾವಿಯಲ್ಲಿ ಸ್ಥಳ ಪರಿಶೀಲಿಸಿದ ಸಚಿವ ಪ್ರಿಯಾಂಕ ಖರ್ಗೆ; ತಣ್ಣೀರು ಭಾವಿಯಲ್ಲಿ 49 ಎಕರೆ ಪ್ರದೇಶ ಗುರುತು; ಯೋಜನೆಯ ಕಾರ್ಯಸಾಧ್ಯತೆ ಪರಿಶೀಲನೆಗೆ ಕ್ರಮ – ಬಿಯಾಂಡ್ ಬೆಂಗಳೂರು ಆಶಯದಡಿ ಜಾಗತಿಕ ಮಟ್ಟದ ತಂತ್ರಜ್ಞಾನ ಪರಿಸರ ವ್ಯವಸ್ಥೆ ನಿರ್ಮಾಣಕ್ಕೆ ಮತ್ತೊಂದು ಹೆಜ್ಜೆ
ಮಂಗಳೂರಿನ ತಣ್ಣೀರ್‌ಭವಿಯಲ್ಲಿ ಭಾರತದ ಮೊದಲ ಸುಸ್ಥಿರ ಕರಾವಳಿ ಡೇಟಾ ಸೆಂಟರ್ ಸ್ಥಾಪಿಸುವ ಸಾಧ್ಯತೆಯನ್ನು ಕರ್ನಾಟಕ ಸರ್ಕಾರ ಪರಿಶೀಲಿಸುತ್ತಿದೆ. ರಾಜ್ಯದ ಡಿಜಿಟಲ್ ಮೂಲಸೌಕರ್ಯವನ್ನು ವಿಸ್ತರಿಸುವುದರ ಜೊತೆಗೆ ಪರಿಸರದ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನ ಆಧಾರಿತ ಅಭಿವೃದ್ಧಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಮಂಗಳೂರು, ನ.26: ಮಂಗಳೂರಿನ ತಣ್ಣೀರ್‌ಭವಿಯಲ್ಲಿ ಭಾರತದ ಮೊದಲ ಸುಸ್ಥಿರ ಕರಾವಳಿ ಡೇಟಾ ಸೆಂಟರ್ ಸ್ಥಾಪಿಸುವ ಸಾಧ್ಯತೆಯನ್ನು ಕರ್ನಾಟಕ ಸರ್ಕಾರ ಪರಿಶೀಲಿಸುತ್ತಿದೆ. ರಾಜ್ಯದ ಡಿಜಿಟಲ್ ಮೂಲಸೌಕರ್ಯವನ್ನು ವಿಸ್ತರಿಸುವುದರ ಜೊತೆಗೆ ಪರಿಸರದ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನ ಆಧಾರಿತ ಅಭಿವೃದ್ಧಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮಂಗಳೂರಿನ ತಣ್ಣೀರ್‌ಭವಿಯಲ್ಲಿರುವ ಪ್ರಸ್ತಾವಿತ ಸ್ಥಳವನ್ನು ಪರಿಶೀಲಿಸಿದರು. ಇಲ್ಲಿ ಸುಮಾರು 49 ಎಕರೆ ಭೂಮಿಯನ್ನು ಯೋಜನೆಯ ಕಾರ್ಯಸಾಧ್ಯತೆ ಪರಿಶೀಲನೆಗಾಗಿ ಗುರುತಿಸಲಾಗಿದೆ.
ಈ ಉಪಕ್ರಮದ ಕುರಿತು ಮಾತನಾಡಿದ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಅವರು, “ನಾವು ಒಪ್ಪಿಕೊಂಡರೂ, ಒಪ್ಪಿಕೊಳ್ಳದಿದ್ದರೂ ಎಐ (AI) ಈಗ ನಮ್ಮ ಬದುಕಿನ ಭಾಗವಾಗಿದೆ. ಎಐ ಯುಗದಲ್ಲಿ ಡೇಟಾ ಸೆಂಟರ್‌ಗಳು ಅತ್ಯಗತ್ಯ ಮೂಲಸೌಕರ್ಯಗಳಾಗಿವೆ. ಆದರೆ, ನೀರು ಮತ್ತು ವಿದ್ಯುತ್‌ನ್ನು ಸಮರ್ಥವಾಗಿ ಬಳಸಿಕೊಂಡು, ಪರಿಸರದ ಮೇಲಿನ ನಮ್ಮ ಜವಾಬ್ದಾರಿಗಳಿಗೆ ಯಾವುದೇ ಧಕ್ಕೆಯಾಗದಂತೆ ಈ ಮಹತ್ವದ ಮೂಲಸೌಕರ್ಯವನ್ನು ಸುಸ್ಥಿರ ರೀತಿಯಲ್ಲಿ ಅಭಿವೃದ್ಧಿಪಡಿಸುವುದು ನಮ್ಮ ಹೊಣೆಗಾರಿಕೆಯಾಗಿದೆ. ತಂತ್ರಜ್ಞಾನ ಆಧಾರಿತ ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಸುಸ್ಥಿರತೆ ಎರಡೂ ಪರಸ್ಪರ ಪೂರಕವಾಗಿ ಸಾಗಬಲ್ಲವು ಎಂಬುದನ್ನು ತೋರಿಸುವುದು ನಮ್ಮ ಉದ್ದೇಶವಾಗಿದೆ” ಎಂದರು.
ಕರ್ನಾಟಕ ಸುಸ್ಥಿರ ಡೇಟಾ ಸೆಂಟರ್ ನೀತಿ 2026–2031ರ ಅಡಿಯಲ್ಲಿ ಈ ಉಪಕ್ರಮವನ್ನು ಪರಿಶೀಲಿಸಲಾಗುತ್ತಿದ್ದು, ನವೀಕರಿಸಬಹುದಾದ ಇಂಧನ ಬಳಕೆ, ಸುಧಾರಿತ ಶೀತಲೀಕರಣ ತಂತ್ರಜ್ಞಾನಗಳು ಮತ್ತು ಪರಿಸರ ಸ್ನೇಹಿ ಡಿಜಿಟಲ್ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ.
ಒಟ್ಟು 49 ಎಕರೆ ಭೂಮಿಯಲ್ಲಿ, ಅನ್ವಯವಾಗುವ ಕರಾವಳಿ ನಿಯಂತ್ರಣ ವಲಯದ (CRZ) ನಿಯಮಗಳ ಪ್ರಕಾರ ಸುಮಾರು 20 ಎಕರೆ ಪ್ರದೇಶದಲ್ಲಿ ಶಾಶ್ವತ ನಿರ್ಮಾಣ ಕೈಗೊಳ್ಳಲು ಅವಕಾಶವಿದೆ ಎಂದು ಅಂದಾಜಿಸಲಾಗಿದೆ. ಮುಂದಿನ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಸ್ಥಳದ ಕಾರ್ಯಸಾಧ್ಯತೆ, ಮೂಲಸೌಕರ್ಯದ ಅಗತ್ಯತೆಗಳು ಹಾಗೂ ಪರಿಸರ ಸಂಬಂಧಿತ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುವುದು.
ಸ್ಥಳದ ಸೂಕ್ತತೆ, ಅಗತ್ಯ ಮೂಲಸೌಕರ್ಯಗಳ ಗುರುತಿಸುವಿಕೆ ಮತ್ತು ಸಮಗ್ರ ಶ್ವೇತಪತ್ರ ಸಿದ್ಧಪಡಿಸುವ ಉದ್ದೇಶದಿಂದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಇತರ ಸಂಬಂಧಪಟ್ಟ ಪಾಲುದಾರರೊಂದಿಗೆ ಸರ್ಕಾರ ಸಮಾಲೋಚನೆ ನಡೆಸಲಿದೆ. ಈ ಶ್ವೇತಪತ್ರದಲ್ಲಿ ಸ್ಥಳದ ಅವಕಾಶಗಳು, ಮಿತಿಗಳು ಮತ್ತು ಅಭಿವೃದ್ಧಿಯ ಸಾಧ್ಯತೆಗಳನ್ನು ವಿವರಿಸಲಾಗುವುದು. ಖಾಸಗಿ ವಲಯದ ಕಂಪನಿಗಳು ಹಾಗೂ ಸಂಭಾವ್ಯ ಹೂಡಿಕೆದಾರರೊಂದಿಗೆ ಚರ್ಚೆ ನಡೆಸಲು ಇದು ಆಧಾರವಾಗಲಿದೆ.
ಎಐ ಯುಗಕ್ಕೆ ಸುಸ್ಥಿರ ಡಿಜಿಟಲ್ ಮೂಲಸೌಕರ್ಯ
ಕೃತಕ ಬುದ್ಧಿಮತ್ತೆ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳ ತ್ವರಿತ ಬೆಳವಣಿಗೆಯೊಂದಿಗೆ ಡೇಟಾ ಸೆಂಟರ್‌ಗಳು ಡಿಜಿಟಲ್ ಆರ್ಥಿಕತೆಯ ಅತ್ಯಗತ್ಯ ಮೂಲಸೌಕರ್ಯಗಳಾಗಿ ಹೊರಹೊಮ್ಮುತ್ತಿವೆ. ಈ ಬೆಳವಣಿಗೆಯ ಜೊತೆಗೆ ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆ ಮತ್ತು ಪರಿಸರ ಸಂರಕ್ಷಣಾ ಕ್ರಮಗಳಿಗೂ ಆದ್ಯತೆ ನೀಡುವುದು ಕರ್ನಾಟಕದ ಉದ್ದೇಶವಾಗಿದೆ.
ಕರ್ನಾಟಕ ಸುಸ್ಥಿರ ಡೇಟಾ ಸೆಂಟರ್ ನೀತಿ 2026–2031ರ ಅಡಿಯಲ್ಲಿ, ಪರಿಸರದ ಜವಾಬ್ದಾರಿಗಳನ್ನು ಮೂಲಸೌಕರ್ಯ ಅಭಿವೃದ್ಧಿಯ ಕೇಂದ್ರವಾಗಿಟ್ಟುಕೊಂಡು ರಾಜ್ಯದಲ್ಲಿ 1 GW ಸಾಮರ್ಥ್ಯದ ಡೇಟಾ ಸೆಂಟರ್ ಮೂಲಸೌಕರ್ಯವನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ.
ತಣ್ಣೀರ್‌ಭವಿಯಲ್ಲಿ ಪ್ರಸ್ತಾವಿತವಾಗಿರುವ ಡೇಟಾ ಸೆಂಟರ್‌ನಲ್ಲಿ ನವೀಕರಿಸಬಹುದಾದ ಇಂಧನ, ಇಂಧನ ದಕ್ಷತೆಯ ಕಾರ್ಯಾಚರಣೆಗಳು, ಸುಧಾರಿತ ಶೀತಲೀಕರಣ ತಂತ್ರಜ್ಞಾನಗಳು ಮತ್ತು ಜವಾಬ್ದಾರಿಯುತ ನೀರಿನ ನಿರ್ವಹಣೆಗೆ ಒತ್ತು ನೀಡುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಮೂಲಕ ಕರಾವಳಿ ಪರಿಸರಕ್ಕೆ ಪೂರಕವಾಗಿ ಬೃಹತ್ ಡಿಜಿಟಲ್ ಮೂಲಸೌಕರ್ಯವನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದನ್ನು ತೋರಿಸುವುದು ಉದ್ದೇಶವಾಗಿದೆ.
ಮಂಗಳೂರು, ಮಣಿಪಾಲ ಮತ್ತು ಉಡುಪಿ: ಉದಯೋನ್ಮುಖ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರಗಳು
ಪ್ರಸ್ತಾವಿತ ಡೇಟಾ ಸೆಂಟರ್ ಕರ್ನಾಟಕದ ಕರಾವಳಿ ಭಾಗವನ್ನು ಸಮೃದ್ಧ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವಾಗಿ ರೂಪಿಸುವ ರಾಜ್ಯದ ವಿಶಾಲ ದೂರದೃಷ್ಟಿಯ ಭಾಗವಾಗಿದೆ. ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs), ಸ್ಟಾರ್ಟ್‌ಅಪ್‌ಗಳು, ಡೀಪ್‌ಟೆಕ್, ಸಾಗರ ಜೈವಿಕ ತಂತ್ರಜ್ಞಾನ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ಆದ್ಯತೆ ನೀಡುವ ಮೂಲಕ ಮಂಗಳೂರು, ಮಣಿಪಾಲ ಮತ್ತು ಉಡುಪಿಯನ್ನು ಪರಸ್ಪರ ಪೂರಕವಾದ ತಂತ್ರಜ್ಞಾನ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಪೂರಕವಾಗಿ ಉದ್ಯಮಗಳ ಸಹಭಾಗಿತ್ವದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಪ್ರತಿಭಾ ವಿಕಸನಕ್ಕೂ ಒತ್ತು ನೀಡಲಾಗುತ್ತಿದೆ.
ಈ ಪ್ರದೇಶವು ಈಗಾಗಲೇ ಸುಮಾರು ₹5,000 ಕೋಟಿ ಮೌಲ್ಯದ ಐಟಿ ರಫ್ತುಗಳನ್ನು ದಾಖಲಿಸಿದ್ದು, ಕರ್ನಾಟಕದ ತಂತ್ರಜ್ಞಾನ ಆರ್ಥಿಕತೆಗೆ ತನ್ನ ಕೊಡುಗೆಯನ್ನು ಹೆಚ್ಚಿಸುತ್ತಿದೆ. ಹೊಸ ಹೂಡಿಕೆಗಳನ್ನು ಆಕರ್ಷಿಸುವುದು, ನ್ಯಾನೋ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಸ್ಥಾಪನೆಗೆ ಉತ್ತೇಜನ ನೀಡುವುದು ಮತ್ತು ಸ್ಥಳೀಯ ಪ್ರತಿಭೆಗಳಿಗೆ ಉನ್ನತ ಮೌಲ್ಯದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಈ ಬೆಳವಣಿಗೆಯನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರ ಹೆಚ್ಚಿನ ಅವಕಾಶಗಳನ್ನು ಕಾಣುತ್ತಿದೆ.
ಬಿಯಾಂಡ್ ಬೆಂಗಳೂರು ಎಂಬ ದೂರದೃಷ್ಟಿಯ ಮೂಲಕ ರಾಜ್ಯದಾದ್ಯಂತ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ತಂತ್ರಜ್ಞಾನ ಕ್ಲಸ್ಟರ್‌ಗಳನ್ನು ನಿರ್ಮಿಸಲು ಕರ್ನಾಟಕ ಬದ್ಧವಾಗಿದೆ. ಈ ಮೂಲಕ ನಾವೀನ್ಯತೆ, ಹೂಡಿಕೆ ಮತ್ತು ಉದ್ಯೋಗಾವಕಾಶಗಳು ಬೆಂಗಳೂರು ಮಹಾನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.
ಪ್ರಸ್ತಾವಿತ ಸುಸ್ಥಿರ ಕರಾವಳಿ ಡೇಟಾ ಸೆಂಟರ್ ಮುಂದಿನ ತಲೆಮಾರಿನ ಡಿಜಿಟಲ್ ಮೂಲಸೌಕರ್ಯ, ಖಾಸಗಿ ವಲಯದ ಸಹಭಾಗಿತ್ವ ಮತ್ತು ಪರಿಸರ ಜವಾಬ್ದಾರಿಯನ್ನು ಒಂದೆಡೆ ತರುವ ಮಹತ್ವದ ಅವಕಾಶವಾಗಿದೆ. ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಸುಸ್ಥಿರತೆ ಒಟ್ಟೊಟ್ಟಿಗೆ ಸಾಗಬಲ್ಲವು ಎಂಬುದನ್ನು ತೋರಿಸುವ ಮೂಲಕ ಸದೃಢ ಹಾಗೂ ಭವಿಷ್ಯದ ಅಗತ್ಯಗಳಿಗೆ ಸನ್ನದ್ಧವಾಗಿರುವ ತಂತ್ರಜ್ಞಾನ ಆರ್ಥಿಕತೆಯನ್ನು ನಿರ್ಮಿಸುವುದು ಕರ್ನಾಟಕದ ವಿಶಾಲ ಉದ್ದೇಶವಾಗಿದೆ.
ಅಂತರ ರಾಜ್ಯ
CM post battle-ಉತ್ತರ ಪ್ರದೇಶ ಬಿಜೆಪಿಯಲ್ಲಿ ಸಿಎಂ ಕುರ್ಚಿ ಕದನ: ಚುನಾವಣೆಗೂ ಮುನ್ನವೇ ಭಿನ್ನಮತ?
ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನವೇ ಆಡಳಿತಾರೂಢ ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ವಿಚಾರವಾಗಿ ರಾಜಕೀಯ ಚರ್ಚೆ ತೀವ್ರಗೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಹೇಳಿಕೆಗಳು ಪಕ್ಷದೊಳಗಿನ ನಾಯಕತ್ವದ ವಿಚಾರವನ್ನು ಮುನ್ನೆಲೆಗೆ ತಂದಿವೆ.
ಲಕ್ನೋ: ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನವೇ ಆಡಳಿತಾರೂಢ ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ವಿಚಾರವಾಗಿ ರಾಜಕೀಯ ಚರ್ಚೆ ತೀವ್ರಗೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಹೇಳಿಕೆಗಳು ಪಕ್ಷದೊಳಗಿನ ನಾಯಕತ್ವದ ವಿಚಾರವನ್ನು ಮುನ್ನೆಲೆಗೆ ತಂದಿವೆ.
ಪತ್ರಕರ್ತರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಮುಂದಿನ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಯೇ ಅಥವಾ ಬೇರೊಬ್ಬರು ಆ ಸ್ಥಾನಕ್ಕೇರುತ್ತಾರೆಯೇ ಎಂಬುದನ್ನು ತಾನು ನಿರ್ಧರಿಸುವುದಿಲ್ಲ ಎಂದು ಹೇಳಿದ್ದಾರೆ.
“ಬಿಜೆಪಿ ಅಭ್ಯರ್ಥಿಗಳು ಕಮಲದ ಚಿಹ್ನೆಯಡಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಚುನಾವಣೆ ಮುಗಿದ ಬಳಿಕ ಶಾಸಕರ ಸಭೆ ನಡೆಯಲಿದ್ದು, ಈ ಸಂದರ್ಭದಲ್ಲಿ ಕೇಂದ್ರದ ವೀಕ್ಷಕರು ಆಗಮಿಸಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸಲಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಮೌರ್ಯ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದು ಈಗಾಗಲೇ ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.
“ಪ್ರತಿಯೊಬ್ಬರೂ ಕಮಲದ ಚಿಹ್ನೆಯಡಿ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗುತ್ತದೆ. ನಾನೂ ಕಮಲದ ಚಿಹ್ನೆಯ ಮೇಲೆಯೇ ಸ್ಪರ್ಧಿಸುತ್ತೇನೆ. ಕಮಲದ ಹೂವೇ ನಮಗೆ ಎಲ್ಲವೂ” ಎಂದು ಯೋಗಿ ಹೇಳಿದ್ದಾರೆ. ಈ ಮೂಲಕ ಮುಂದಿನ ಚುನಾವಣೆಯಲ್ಲೂ ತಮ್ಮ ನಾಯಕತ್ವ ಮುಂದುವರಿಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್–ಎಸ್‌ಪಿ ಮೈತ್ರಿಯಲ್ಲೂ ಬಿಕ್ಕಟ್ಟು
ಇನ್ನೊಂದೆಡೆ, 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ವಿಚಾರವೂ ಬಿಕ್ಕಟ್ಟಿಗೆ ಕಾರಣವಾಗಿದೆ. ಕಾಂಗ್ರೆಸ್‌ಗೆ ಕೇವಲ 26 ಕ್ಷೇತ್ರಗಳನ್ನು ಬಿಟ್ಟುಕೊಡುವ ಎಸ್‌ಪಿ ಪ್ರಸ್ತಾವನೆಗೆ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಸಂಸದ ಹಾಗೂ ಕಾರ್ಯಾಧ್ಯಕ್ಷ ಇಮ್ರಾನ್ ಮಸೂದ್, “ನಾವೇನು ಭಿಕ್ಷುಕರೇ? ನಮಗೂ ಸ್ವಾಭಿಮಾನವಿದೆ. ಮಾತುಕತೆ ಇದೇ ರೀತಿ ಮುಂದುವರಿದರೆ ಮೈತ್ರಿ ಎಲ್ಲಿದೆ?” ಎಂದು ಎಸ್‌ಪಿ ವಿರುದ್ಧ ಕಿಡಿಕಾರಿದ್ದಾರೆ.
ಒಟ್ಟಿನಲ್ಲಿ, ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನವೇ ಬಿಜೆಪಿ ನಾಯಕತ್ವದ ವಿಚಾರ ಹಾಗೂ ಕಾಂಗ್ರೆಸ್–ಎಸ್‌ಪಿ ಸೀಟು ಹಂಚಿಕೆ ವಿವಾದಗಳು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ.
-
ನಿಧನ ವಾರ್ತೆ13 hours agoMangaluru-ಮಂಗಳೂರು: ರಸ್ತೆ ದಾಟುತ್ತಿದ್ದ 2ನೇ ತರಗತಿ ವಿದ್ಯಾರ್ಥಿಯ ಮೇಲೆ ಬಸ್ ಹರಿದು ಸಾವು
-
ಬಿಗ್ ನ್ಯೂಸ್7 hours agoVitla-ವಿಟ್ಲ: ಚಿಕ್ಕಪ್ಪನನ್ನು ಕತ್ತಿಯಿಂದ ಕಡಿದು ಹತ್ಯೆಗೈದ ಯುವತಿ ಬಂಧನ
-
ಅಪರಾಧ12 hours agoPunacha-ಪುಣಚದಲ್ಲಿ ಬೈಕ್ಗೆ ಕಾರು ಡಿಕ್ಕಿ; ಸವಾರನಿಗೆ ಗಂಭೀರ ಗಾಯ – ನಿಲ್ಲಿಸದೆ ಪರಾರಿಯಾದ ಕಾರು?
-
ಅಂತರ ರಾಜ್ಯ13 hours agoChennai Jain couple-ತಿರುಪತಿ ತಿಮ್ಮಪ್ಪನಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ಚಿನ್ನ, ವಜ್ರಾಭರಣ ಕಾಣಿಕೆ ನೀಡಿದ ಚೆನ್ನೈ ಜೈನ ದಂಪತಿ..!
-
ಅಪರಾಧ12 hours agoPunacha-ಪುಣಚ: ಪತ್ನಿಯನ್ನು ಕೊಲೆಗೈದು ಹೃದಯಾಘಾತವೆಂದು ಬಿಂಬಿಸಲು ಯತ್ನ: ಪತಿಗೆ 5 ವರ್ಷ ಜೈಲು..!
-
ರಾಜಕೀಯ13 hours agoKumaraswamy-ಹಳ್ಳಿಯ ಪ್ರತಿ ಹೆಣ್ಣುಮಕ್ಕಳಿಗೆ 2 ಹಸು ಉಚಿತ..! 2028ರ ಎನ್‌ಡಿಎ ಯೋಜನೆ ಘೋಷಿಸಿದ ಕುಮಾರಸ್ವಾಮಿ
-
ಬಿಗ್ ನ್ಯೂಸ್7 hours agoVirupaksha Bhat-ಮಹಾಲಿಂಗೇಶ್ವರ ದೇವಸ್ಥಾನದ ಕಾಮಗಾರಿಗಳಿಗೆ ಹೈಕೋರ್ಟ್ ತಡೆಯಾಜ್ಞೆ: ಅನುಮತಿಯಿಲ್ಲದ ಕಾಮಗಾರಿ, ಟೆಂಡರ್ ಪ್ರಕ್ರಿಯೆ ಮುಂದುವರಿಸದಂತೆ ಮಧ್ಯಂತರ ಆದೇಶ; ದೇವಸ್ಥಾನದ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ, ನಿಯಮಬದ್ಧ ಆಡಳಿತಕ್ಕೆ ಆಗ್ರಹ : ದೂರುದಾರ ವಿರೂಪಾಕ್ಷ ಭಟ್ ಪತ್ರಿಕಾಗೋಷ್ಟಿ
-
ಅಪರಾಧ10 hours agoBantwal-ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ಗುಂಪುಗೂಡಿ ಗಲಾಟೆ; ಟೋಲ್ ಉಪಕರಣಗಳಿಗೆ ಹಾನಿ ಯತ್ನ – ಪ್ರಕರಣ ದಾಖಲು















