ರಾಜಕೀಯ
ಎಂ-ನರೇಗಾ ಹೆಸರು ಬದಲಾವಣೆ : ಮೋದಿ ಸರ್ಕಾರಕ್ಕೆ ‘ಹೆಸರು ಬದಲಾಯಿಸುವ ಸಚಿವಾಲಯ’ವನ್ನು ಪ್ರಾರಂಭಿಸಬಹುದು : ನಿರ್ಮಲ ಭಾರತ್ ನ್ನು ಸ್ವಚ್ಚ ಭಾರತ್ ಸೇರಿದಂತೆ ಯುಪಿಎ ಸರ್ಕಾರ ತಂದ 25 ಯೋಜನೆಗಳ ಹೆಸರು ಬದಲಿಸಿದ್ದೇ ಸಾಧನೆ – ಸಿಎಂ ಸಿದ್ದರಾಮಯ್ಯ ಅಕ್ರೋಶ
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂ-ನರೇಗಾ)ಯ ಹೆಸರು ಮತ್ತು ಸ್ವರೂಪವನ್ನು ಬದಲಾಯಿಸಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಬಡವರು ಮತ್ತು ಮಹಾತ್ಮ ಗಾಂಧೀಜಿ ಬಗೆಗಿನ ತಮ್ಮ ದ್ವೇಷವನ್ನು ತಾವೇ ಬಯಲು ಮಾಡಿಕೊಂಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಎಂ-ನರೇಗಾ ಯೋಜನೆಯ ಹೆಸರು ಬದಲಾವಣೆಗೆ ತಯಾರಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಪ್ಪತ್ತು ವರ್ಷಗಳ ಹಿಂದೆ ಯುಪಿಎ ಸರ್ಕಾರ ಜಾರಿಗೊಳಿಸಿದ್ದ ನರೇಗಾ ಯೋಜನೆ ಗ್ರಾಮೀಣ ಪ್ರದೇಶದಲ್ಲಿನ ನಿರುದ್ಯೋಗ ಮತ್ತು ಬಡತನ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಪ್ರತಿಯೊಬ್ಬ ವ್ಯಕ್ತಿಗೂ ಉದ್ಯೋಗದ ಹಕ್ಕನ್ನು ಖಾತರಿಗೊಳಿಸಿದ ಈ ಯೋಜನೆ ದೇಶ-ವಿದೇಶದ ಆರ್ಥಿಕ ತಜ್ಞರ ಶ್ಲಾಘನೆಯನ್ನು ಪಡೆದಿದೆ. ನರೇಗಾವು ಉದ್ಯೋಗ ಖಾತರಿ ನೀಡುವ ಒಂದು ನೈಜ ಯೋಜನೆಯಾಗಿತ್ತು, ಆದರೆ ನರೇಂದ್ರ ಮೋದಿ ಅವರ ಸರ್ಕಾರದಡಿ ಪ್ರಸ್ತಾಪಿತ ಹೊಸ ರಚನೆಯು ಆ ಖಾತರಿಯನ್ನು ಕಸಿಯಲಿದೆ ಮತ್ತು ಉದ್ಯೋಗದ ಭರವಸೆಯನ್ನು ರಾಜಕೀಯ ನಾಯಕರ ಇಚ್ಛೆಗೆ ಬಿಟ್ಟುಬಿಡುತ್ತದೆ. ಇದು ಜಾತಿ ತಾರತಮ್ಯ ಮತ್ತು ಸಾಮಾಜಿಕ ಅಸಮಾನತೆಯನ್ನು ಇನ್ನಷ್ಟು ಆಳವಾಗಿಸಲಿದೆ ಎಂದರು.
ಕೇಂದ್ರ ಸರ್ಕಾರವೇ ಸಂಪೂರ್ಣ ವೆಚ್ಚವನ್ನು ಭರಿಸುವ ನರೇಗಾ ಯೋಜನೆಯ ಸ್ವರೂಪವನ್ನೇ ಬದಲಾಯಿಸಿರುವ ಎನ್ ಡಿ ಎ ಸರ್ಕಾರ, ಯೋಜನೆಯ ಶೇಕಡಾ 40ರಷ್ಟು ವೆಚ್ಚವನ್ನು ರಾಜ್ಯ ಸರ್ಕಾಗಳ ತಲೆಗೆ ಕಟ್ಟಿರುವುದು ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ದಿನದಿಂದ ಅನುಸರಿಸಿಕೊಂಡು ಬರುತ್ತಿರುವ ಒಕ್ಕೂಟ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಈ ನಡೆಯಿಂದ ಬಡವರು ಕೆಲಸ ಹುಡುಕಿಕೊಂಡು ವಲಸೆ ಹೋಗುವುದು ಹೆಚ್ಚಾಗಲಿದೆ. ಏಕೆಂದರೆ ಪ್ರಸ್ತಾಪಿತ ರೂಪದಲ್ಲಿ ಸ್ವಂತ ಸ್ಥಳದಲ್ಲಿ ಉದ್ಯೋಗ ಖಾತರಿಯಿಲ್ಲ, ಜೀವನ ನಿರ್ವಹಣೆಗಾಗಿ ಕುಟುಂಬಗಳು ದೂರದ ಪ್ರದೇಶಗಳಿಗೆ ಪ್ರಯಾಣ ಮಾಡಬೇಕಾಗಲಿದೆ.
ಗ್ರಾಮಸ್ವರಾಜ್ಯದ ಕನಸನ್ನು ಬಿತ್ತಿಹೋಗಿದ್ದ ಮಹಾತ್ಮ ಗಾಂಧೀಜಿಯವರ ಹೆಸರನ್ನು ಈ ಯೋಜನೆಗೆ ಇಟ್ಟಿರುವುದು ಅರ್ಥಪೂರ್ಣವಾದ ನಿರ್ಧಾರವಾಗಿತ್ತು. ವಿದೇಶದಲ್ಲಿ ಸುತ್ತಾಡುವಾಗ ಗಾಂಧಿ ಭಜನೆ ಮಾಡುವ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಮಾತ್ರ ಗಾಂಧೀಜಿ ಹೆಸರನ್ನು ಅಳಿಸಿಹಾಕುವ ಹುನ್ನಾರಗಳನ್ನು ನಡೆಸುತ್ತಲೇ ಇದ್ದಾರೆ. ಗಾಂಧೀಜಿಯವರ ಹಂತಕ ಗೋಡ್ಸೆಯನ್ನು ಮೆರೆಸಲು ಹೊರಟಿರುವ ಪರಿವಾರದಿಂದ ಇದಕ್ಕಿಂತ ಬೇರೆಯಾದುದನ್ನು ಹೇಗೆ ನಿರೀಕ್ಷಿಸಲು ಸಾಧ್ಯ.! ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನರೇಂದ್ರ ಮೋದಿ ಅವರು ಯುಪಿಎ ಸರ್ಕಾರದಡಿ ಆರಂಭಗೊಂಡ ಪ್ರಮುಖ ಯೋಜನೆಗಳನ್ನು ಉಳಿಸುವ ಅಥವಾ ಬಲಪಡಿಸುವ ಬದಲು, ಕೇವಲ ಹೆಸರು ಬದಲಾಯಿಸುವುದಕ್ಕೆ ಸೀಮಿತವಾಗಿದೆ. ಈ ಸರ್ಕಾರಕ್ಕೆ “ಹೆಸರು ಬದಲಾಯಿಸುವ ಸಚಿವಾಲಯ”ವನ್ನು ಆರಂಭಿಸುವುದು ಸೂಕ್ತವಾಗಿರುತ್ತದೆ. ಪ್ರಧಾನಮಂತ್ರಿಯೇ ಆ ಸಚಿವಾಲಯದ ನೇತೃತ್ವವನ್ನು ವಹಿಸುವುದು ಇನ್ನಷ್ಟು ಅರ್ಥಪೂರ್ಣವಾಗಿರಲಿದೆ.
ಹಿಂದಿನ ಸರ್ಕಾರಗಳಡಿ ಆರಂಭಗೊಂಡ 25ಕ್ಕೂ ಹೆಚ್ಚು ಪ್ರಮುಖ ಕಾರ್ಯಕ್ರಮಗಳನ್ನು ಈಗಿನ ಸರ್ಕಾರವು ಕೇವಲ ಹೆಸರು ಬದಲಾಯಿಸಿದೆ ಅಥವಾ ಮರುಪ್ಯಾಕೇಜ್ ಮಾಡಿದೆ. ನಿರ್ಮಲ ಭಾರತ್ ಅಭಿಯಾನವನ್ನು ಸ್ವಚ್ಛ ಭಾರತ್ ಮಿಷನ್ ಎಂದು ಮರುನಾಮಕರಣ ಮಾಡಲಾಯಿತು. ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡಿಪಾಸಿಟ್ ಅಕೌಂಟ್ ಯೋಜನೆಯನ್ನು ಪ್ರಧಾನ ಮಂತ್ರಿ ಜನ್ ಧನ್ ಯೋಜನಾ ಎಂದು ಮರುಬ್ರಾಂಡ್ ಮಾಡಲಾಯಿತು. ಅದೇ ರೀತಿ ರಾಜೀವ್ ಗ್ರಾಮೀಣ ವಿದ್ಯುದೀಕರಣ ಯೋಜನೆಯನ್ನು ದೀನ್ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಗೆ ಸೇರಿಸಲಾಯಿತು. ಜವಾಹರಲಾಲ್ ನೆಹರು ರಾಷ್ಟ್ರೀಯ ನಗರ ನವೀಕರಣ ಮಿಷನ್ (ಜೆಎನ್‌ಎನ್‌ಯುಆರ್‌ಎಂ) ಅನ್ನು ಅಟಲ್ ಮಿಷನ್ ಫಾರ್ ರಿಜುವಿನೇಷನ್ ಅಂಡ್ ಅರ್ಬನ್ ಟ್ರಾನ್ಸ್‌ಫಾರ್ಮೇಷನ್ (ಅಮ್ರುತ್) ಎಂದು ಪರಿವರ್ತಿಸಲಾಯಿತು. ಈ ಬದಲಾವಣೆಗಳು ಮೂಲ ಉದ್ದೇಶವನ್ನು ಮೂಲಭೂತವಾಗಿ ಬಲಪಡಿಸುವ ಅಥವಾ ವಿಸ್ತರಿಸುವ ಬದಲು, ಕೇವಲ ಹೆಸರು ಬದಲಾಯಿಸುವ ನಿರಂತರ ಮಾದರಿಯನ್ನು ಪ್ರತಿಬಿಂಬಿಸುತ್ತವೆ ಎಂದು ವಿವರಿಸಿದರು.
ಬಡವರ ಅನ್ನದ ಬಟ್ಟಲಿಗೆ ಕೈ ಹಾಕಿರುವ, ಬಾಪೂಜಿಗೆ ಅವಮಾನ ಮಾಡಿರುವ ಮತ್ತು ರಾಜ್ಯ ಸರ್ಕಾರಗಳ ಕತ್ತು ಹಿಸುಕಲು ಹೊರಟಿರುವ ನರೇಂದ್ರಮೋದಿ ಸರ್ಕಾರದ ಈ ಜನವಿರೋಧಿ ನಿರ್ಧಾರವನ್ನು ನಮ್ಮ ಪಕ್ಷ ಮತ್ತು ಸರ್ಕಾರ ಉಗ್ರವಾಗಿ ಖಂಡಿಸುತ್ತದೆ. ಇದರ ವಿರುದ್ದ ರಾಜ್ಯವ್ಯಾಪಿ ಹೋರಾಟವನ್ನು ನಡೆಸಲಿದೆ.
ನರೇಗಾ ಯೋಜನೆಯನ್ನು ಅದರ ಮೂಲಸ್ವರೂಪದಲ್ಲಿಯೇ ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಯೋಜನೆಯ ಲಕ್ಷಾಂತರ ಫಲಾನುಭವಿಗಳು ಕೂಡಾ ವಹಿಸಿಕೊಳ್ಳಬೇಕಾಗಿದೆ. ರಾಜ್ಯದ ಬಿಜೆಪಿ ನಾಯಕರನ್ನು ಹಿಡಿದುನಿಲ್ಲಿಸಿ ಈ ಅನ್ಯಾಯದ ವಿರುದ್ಧ ಪಕ್ಷಾತೀತವಾಗಿ ದನಿ ಎತ್ತುವಂತೆ ಒತ್ತಡ ಹೇರಬೇಕು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಅಂತರ ರಾಜ್ಯ
By-election results-ಉಪಚುನಾವಣೆ ಫಲಿತಾಂಶ: ಪಶ್ಚಿಮ ಬಂಗಾಳ, ಅಸ್ಸಾಂನಲ್ಲಿ ಬಿಜೆಪಿಗೆ ಭರ್ಜರಿ ಮುನ್ನಡೆ, ತಮಿಳುನಾಡಿನಲ್ಲಿ ಟಿವಿಕೆ ಅಬ್ಬರ
ಒಂದು ಲೋಕಸಭಾ ಕ್ಷೇತ್ರ ಮತ್ತು ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಬಹುತೇಕ ಪೂರ್ಣಗೊಂಡಿದ್ದು ಅಸ್ಸಾಂನ ನಾಗೌನ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭಾರೀ ಮುನ್ನಡೆ ಸಾಧಿಸಿದ್ದರೆ, ತಮಿಳುನಾಡಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ.
ಹೊಸದಿಲ್ಲಿ: ಒಂದು ಲೋಕಸಭಾ ಕ್ಷೇತ್ರ ಮತ್ತು ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಬಹುತೇಕ ಪೂರ್ಣಗೊಂಡಿದ್ದು, ವಿವಿಧ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಡುವಿನ ಪೈಪೋಟಿ ಗಮನ ಸೆಳೆದಿದೆ. ಅಸ್ಸಾಂನ ನಾಗೌನ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭಾರೀ ಮುನ್ನಡೆ ಸಾಧಿಸಿದ್ದರೆ, ತಮಿಳುನಾಡಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ. ಪಶ್ಚಿಮ ಬಂಗಾಳದ ಎರಡು ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆದಿದೆ.
ಪಶ್ಚಿಮ ಬಂಗಾಳದ ರೇಜಿನಗರ ಮತ್ತು ನಂದಿಗ್ರಾಮ, ತಮಿಳುನಾಡಿನ ಮಧುರಂಟಕಂ ಮತ್ತು ಧಾರಾಪುರಂ ಹಾಗೂ ಪುದುಚೇರಿಯ ತಟ್ಟನಚಾವಡಿ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಇದರ ಜತೆಗೆ ಅಸ್ಸಾಂನ ನಾಗೌನ್ ಲೋಕಸಭಾ ಕ್ಷೇತ್ರಕ್ಕೂ ಚುನಾವಣೆ ನಡೆದಿತ್ತು. ಲಭ್ಯವಿರುವ ಮಾಹಿತಿಯ ಪ್ರಕಾರ, ಕೆಲವು ಕ್ಷೇತ್ರಗಳಲ್ಲಿ ಫಲಿತಾಂಶದ ಚಿತ್ರಣ ಸ್ಪಷ್ಟವಾಗಿದ್ದರೂ ಚುನಾವಣಾ ಆಯೋಗದ ಅಧಿಕೃತ ಪ್ರಕಟಣೆ ಬಾಕಿಯಿದೆ.
ನಾಗೌನ್‌ನಲ್ಲಿ ಬಿಜೆಪಿಗೆ ಭಾರೀ ಮುನ್ನಡೆ
ಅಸ್ಸಾಂನ ನಾಗೌನ್ ಲೋಕಸಭಾ ಕ್ಷೇತ್ರವು ಈ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರದ್ಯುತ್ ಬೊರ್ದೊಲೊಯಿ ಅವರು ಬಿಜೆಪಿ ಅಭ್ಯರ್ಥಿ ಸುರೇಶ್ ಬೋರಾ ವಿರುದ್ಧ 2,12,231 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಬಳಿಕ ಪ್ರದ್ಯುತ್ ಬೊರ್ದೊಲೊಯಿ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ದಿಸ್ಪುರ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಹೀಗಾಗಿ ನಾಗೌನ್ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಿತು.
ಸದ್ಯದ ಮಾಹಿತಿಯ ಪ್ರಕಾರ, ಬಿಜೆಪಿ ಅಭ್ಯರ್ಥಿ ದೇವಶಿಸ್ ಶರ್ಮಾ ಅವರು ಎಐಯುಡಿಎಫ್ ಅಭ್ಯರ್ಥಿ ಬದ್ರುದ್ದೀನ್ ಅಜ್ಮಲ್ ವಿರುದ್ಧ ಸುಮಾರು 1.2 ಲಕ್ಷ ಮತಗಳ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಿಬಾಮಣಿ ಬೋರಾ ಮೂರನೇ ಸ್ಥಾನದಲ್ಲಿದ್ದಾರೆ ಎಂದು ವರದಿಯಾಗಿದೆ.
ಪಶ್ಚಿಮ ಬಂಗಾಳದ ಎರಡು ಕ್ಷೇತ್ರಗಳಲ್ಲಿ ಪೈಪೋಟಿ
ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಸಿರಾಣಿ ರಥ್ ಅವರು ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ವಿರುದ್ಧ ಸುಮಾರು 1.05 ಲಕ್ಷ ಮತಗಳ ಮುನ್ನಡೆ ಸಾಧಿಸಿದ್ದಾರೆ ಎಂದು ಲಭ್ಯವಿರುವ ಮಾಹಿತಿ ತಿಳಿಸಿದೆ.
ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಹಿನ್ನೆಲೆಯಲ್ಲಿ ನಂದಿಗ್ರಾಮ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು ಎನ್ನಲಾಗಿದೆ.
ಇನ್ನು ರೇಜಿನಗರ ಕ್ಷೇತ್ರದಲ್ಲಿ ಸಖಾರವ್ ಸರ್ಕಾರ್ ಅವರು ಎಜೆಯುಪಿ ಅಭ್ಯರ್ಥಿ ಗೋಲಂ ನಬಿ ಆಜಾದ್ ವಿರುದ್ಧ ಸುಮಾರು 38 ಸಾವಿರ ಮತಗಳ ಮುನ್ನಡೆ ಸಾಧಿಸಿದ್ದಾರೆ ಎಂದು ವರದಿಯಾಗಿದೆ. ಈ ಕ್ಷೇತ್ರದಲ್ಲಿಯೂ ಮತ ಎಣಿಕೆಯ ಬೆಳವಣಿಗೆಗಳ ಮೇಲೆ ರಾಜಕೀಯ ವಲಯದ ಗಮನ ನೆಟ್ಟಿದೆ.
ತಮಿಳುನಾಡಿನಲ್ಲಿ ಟಿವಿಕೆ ಅಭ್ಯರ್ಥಿಗಳಿಗೆ ಮುನ್ನಡೆ
ತಮಿಳುನಾಡಿನ ಮಧುರಂಟಕಂ ಮತ್ತು ಧಾರಾಪುರಂ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ಟಿವಿಕೆ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ಮಧುರಂಟಕಂ ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ಮರಗತಂ ಕುಮಾರವೇಲು ಅವರು ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಸುಮಾರು 6 ಸಾವಿರ ಮತಗಳ ಮುನ್ನಡೆ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಎಐಎಡಿಎಂಕೆ ಅಭ್ಯರ್ಥಿಯಾಗಿದ್ದ ಅವರು, ನಂತರ ಟಿವಿಕೆ ಸೇರಿ ಸ್ಪರ್ಧಿಸಿದ್ದರು ಎನ್ನಲಾಗಿದೆ.
ಧಾರಾಪುರಂ ಕ್ಷೇತ್ರದಲ್ಲಿ ಟಿವಿಕೆ ಅಭ್ಯರ್ಥಿ ಪಿ. ಸತ್ಯಭಾಮಾ ಅವರು ಡಿಎಂಕೆ ಅಭ್ಯರ್ಥಿ ವಿರುದ್ಧ ಸುಮಾರು 9,600 ಮತಗಳ ಮುನ್ನಡೆ ಸಾಧಿಸಿದ್ದಾರೆ ಎಂದು ವರದಿಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸತ್ಯಭಾಮಾ, ಡಿಎಂಕೆ ಅಭ್ಯರ್ಥಿ ಟಿ. ಇಂದಿರಾಣಿ ವಿರುದ್ಧ 16,727 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಈ ಕ್ಷೇತ್ರದಲ್ಲಿ ಉಪಚುನಾವಣೆ ನಡೆದಿತ್ತು.
ಪುದುಚೇರಿಯಲ್ಲಿ ಎನ್‌ಡಿಎ ಅಭ್ಯರ್ಥಿಗೆ ಗೆಲುವು
ಪುದುಚೇರಿಯ ತಟ್ಟನಚಾವಡಿ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಆಲ್ ಇಂಡಿಯಾ ಎನ್.ಆರ್. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಆನಂದ್ ಅವರು ಕಾಂಗ್ರೆಸ್ ಅಭ್ಯರ್ಥಿ ಇ. ವಿನಾಯಗಂ ವಿರುದ್ಧ 8,482 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ಲಭ್ಯವಿರುವ ಮಾಹಿತಿ ತಿಳಿಸಿದೆ.
ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎನ್. ರಂಗಸ್ವಾಮಿ ಅವರು ತಟ್ಟನಚಾವಡಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು ಎನ್ನಲಾಗಿದೆ.
ಉಪಚುನಾವಣೆಯ ಅಧಿಕೃತ ಫಲಿತಾಂಶ ಪ್ರಕಟವಾದ ಬಳಿಕ ವಿವಿಧ ರಾಜ್ಯಗಳ ರಾಜಕೀಯ ಲೆಕ್ಕಾಚಾರಗಳ ಮೇಲೆ ಇದರ ಪರಿಣಾಮದ ಚಿತ್ರಣ ಮತ್ತಷ್ಟು ಸ್ಪಷ್ಟವಾಗಲಿದೆ.
ರಾಜಕೀಯ
Sanjeev Mathandur-ಬೆಳೆ ವಿಮೆ ಪರಿಹಾರದಲ್ಲಿ ತಾರತಮ್ಯ; ‘ಷಡ್ಯಂತ್ರ, ಭ್ರಷ್ಟಾಚಾರದ ಶಂಕೆ’ – ಸಂಜೀವ ಮಠಂದೂರು
ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗುತ್ತಿದ್ದು, ಇದರ ಹಿಂದೆ ಷಡ್ಯಂತ್ರ ಹಾಗೂ ಭ್ರಷ್ಟಾಚಾರದ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತು ಸಮಗ್ರ ಹಾಗೂ ಕೂಲಂಕಷ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ರೈತರಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ಪರಿಹಾರ ವಿತರಣೆಯಲ್ಲಿ ಅನ್ಯಾಯವಾಗುತ್ತಿದ್ದು, ಇದರ ಹಿಂದೆ ಷಡ್ಯಂತ್ರ ಹಾಗೂ ಭ್ರಷ್ಟಾಚಾರದ ಶಂಕೆ ವ್ಯಕ್ತವಾಗುತ್ತಿದೆ. ಈ ಕುರಿತು ಸಮಗ್ರ ಹಾಗೂ ಕೂಲಂಕಷ ತನಿಖೆ ನಡೆಸಬೇಕು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದ್ದಾರೆ.
ಅ.8ರಂದು ಪುತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 2025-26ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಂಬತ್ತು ತಾಲೂಕುಗಳ ರೈತರು ಒಟ್ಟು ₹294.26 ಕೋಟಿ ವಿಮಾ ಮೊತ್ತ ಪಾವತಿಸಿದ್ದಾರೆ. ಆದರೆ ಸುಮಾರು ₹840 ಕೋಟಿ ಪರಿಹಾರ ಬರಬೇಕಿದ್ದು, ವಾಸ್ತವವಾಗಿ ರೈತರಿಗೆ ಎಷ್ಟು ಮೊತ್ತ ವಿತರಿಸಲಾಗಿದೆ ಎಂಬುದನ್ನು ಸರಕಾರ ಹಾಗೂ ವಿಮಾ ಕಂಪನಿಗಳು ಅಂಕಿ-ಅಂಶಗಳ ಸಹಿತ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ರೈತರು ಪಾವತಿಸಿದ ವಿಮಾ ಮೊತ್ತಕ್ಕೆ ಅನುಗುಣವಾಗಿ ಎಷ್ಟು ಪರಿಹಾರ ನೀಡಲಾಗಿದೆ? ಗ್ರಾಮದಿಂದ ಗ್ರಾಮಕ್ಕೆ ಪರಿಹಾರ ಮೊತ್ತದಲ್ಲಿ ವ್ಯತ್ಯಾಸವಾಗಲು ಕಾರಣವೇನು? ಯಾವ ವೈಜ್ಞಾನಿಕ ಮಾನದಂಡದ ಆಧಾರದಲ್ಲಿ ಪರಿಹಾರ ನಿಗದಿಪಡಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.
ಟರ್ಮ್‌ಶೀಟ್ ಬದಲಾದ ಬಳಿಕ ಸಮಸ್ಯೆ
2023-24ನೇ ಸಾಲಿನವರೆಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯ ಪರಿಹಾರ ವಿತರಣೆಯಲ್ಲಿ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದ ಸಮಸ್ಯೆ ಇರಲಿಲ್ಲ. ಆದರೆ ಬಳಿಕ ಟರ್ಮ್‌ಶೀಟ್ ಬದಲಾವಣೆಯಾದ ನಂತರ ಸಮಸ್ಯೆಗಳು ಆರಂಭವಾಗಿವೆ ಎಂದು ಮಠಂದೂರು ಆರೋಪಿಸಿದರು.
ಒಂದೇ ತಾಲೂಕು, ಹೋಬಳಿ ಹಾಗೂ ಒಂದೇ ರೀತಿಯ ಭೌಗೋಳಿಕ ಪರಿಸ್ಥಿತಿಯಲ್ಲಿರುವ ಗ್ರಾಮಗಳ ನಡುವೆ ಪರಿಹಾರ ಮೊತ್ತದಲ್ಲಿ ಭಾರಿ ವ್ಯತ್ಯಾಸ ಕಂಡುಬರುತ್ತಿದೆ. ಕೆಲವೆಡೆ ಕೇವಲ 100 ಮೀಟರ್ ಅಂತರದಲ್ಲಿರುವ ರೈತರಿಗೂ ₹10 ಸಾವಿರದಿಂದ ₹15 ಸಾವಿರದವರೆಗೆ ವ್ಯತ್ಯಾಸವಾಗುತ್ತಿದೆ. ಪಂಚಾಯಿತಿಯಿಂದ ಪಂಚಾಯಿತಿಗೆ, ಗ್ರಾಮದಿಂದ ಗ್ರಾಮಕ್ಕೆ ಪರಿಹಾರ ಬದಲಾಗುತ್ತಿರುವುದರ ಹಿಂದಿನ ಕಾರಣವನ್ನು ಪರಿಶೀಲಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರಕಾರವೂ ವಿಮಾ ಮೊತ್ತದ ಶೇ.20ರಷ್ಟು ಪಾಲು ಪಾವತಿಸುತ್ತಿರುವುದರಿಂದ ವಿಮಾ ಕಂಪನಿಗಳ ಕಾರ್ಯವೈಖರಿ ಕುರಿತು ರಾಜ್ಯ ಸರಕಾರವೇ ತನಿಖೆ ನಡೆಸಬೇಕು. ರೈತರಿಗೆ ಅನ್ಯಾಯವಾಗುತ್ತಿದ್ದರೂ ಸರಕಾರ ಕಣ್ಮುಚ್ಚಿ ಕುಳಿತಿದೆ ಎಂದು ಅವರು ಆರೋಪಿಸಿದರು.
274 ಗ್ರಾಮ ಪಂಚಾಯಿತಿಗಳ ಪೈಕಿ 231 ಮಳೆ ಮಾಪಕ ಮಾತ್ರ ಕಾರ್ಯನಿರ್ವಹಣೆ
ಬಿಜೆಪಿ ಸತ್ಯಶೋಧನ ಸಮಿತಿ ಜಿಲ್ಲೆಯ ಒಂಬತ್ತು ತಾಲೂಕುಗಳಲ್ಲಿ ನಡೆಸಿದ ಅಧ್ಯಯನದಲ್ಲಿ ಹಲವು ಕಡೆ ಮಳೆ ಮಾಪಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಕಂಡುಬಂದಿದೆ. ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿತ್ತು. ಬಳಿಕ ಕೆಲವು ಮಳೆ ಮಾಪಕಗಳ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯ 274 ಗ್ರಾಮ ಪಂಚಾಯಿತಿಗಳಲ್ಲಿ ಮಳೆ ಮಾಪಕಗಳನ್ನು ಅಳವಡಿಸಲಾಗಿದ್ದು, 231 ಮಾತ್ರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. 20 ಹೋಬಳಿ ಮಟ್ಟದಲ್ಲಿ ಉಷ್ಣಾಂಶ ಮಾಪಕಗಳಿವೆ. ಮಳೆ ಹಾಗೂ ಉಷ್ಣಾಂಶದ ದಾಖಲೆಗಳ ಆಧಾರದಲ್ಲಿ ಟರ್ಮ್‌ಶೀಟ್ ಪ್ರಕಾರ ವಿಮಾ ಪರಿಹಾರ ನಿರ್ಧರಿಸಲಾಗುತ್ತದೆ ಎಂದು ವಿವರಿಸಿದರು.
‘ಗ್ರಾಮಕ್ಕೊಂದು ಮಾನದಂಡ ಸಲ್ಲ’
ತಾಲೂಕಿನ ಎಲ್ಲ ಗ್ರಾಮಗಳ ರೈತರಿಗೆ ಒಂದೇ ಮಾನದಂಡದಲ್ಲಿ ವಿಮಾ ಪರಿಹಾರ ನೀಡಬೇಕು. ಒಂದು ಗ್ರಾಮಕ್ಕೆ ಗರಿಷ್ಠ ಪರಿಹಾರ ನೀಡಲು ಅನ್ವಯಿಸುವ ಮಾನದಂಡವಿದ್ದರೆ, ಅದೇ ಮಾನದಂಡವನ್ನು ಇತರ ಗ್ರಾಮಗಳಿಗೂ ಅನ್ವಯಿಸಬೇಕು. ಪಂಚಾಯಿತಿ, ಹೋಬಳಿ ಹಾಗೂ ಗ್ರಾಮವಾರು ಪ್ರತ್ಯೇಕ ಮಾನದಂಡಗಳಿಂದ ಪರಿಹಾರ ನೀಡಿದರೆ ರೈತರು ಬೆಳೆ ವಿಮಾ ಯೋಜನೆಯ ಮೇಲಿನ ವಿಶ್ವಾಸ ಕಳೆದುಕೊಳ್ಳಲಿದ್ದಾರೆ ಎಂದು ಮಠಂದೂರು ಹೇಳಿದರು.
2025-26ನೇ ಸಾಲಿನಲ್ಲಿ ರೈತರು ಶೇ.5, ರಾಜ್ಯ ಸರಕಾರ ಶೇ.20 ಹಾಗೂ ಕೇಂದ್ರ ಸರಕಾರ ಶೇ.10ರಷ್ಟು ಪಾಲನ್ನು ಪಾವತಿಸಿವೆ. ಜಿಲ್ಲೆಯ ರೈತರಿಂದ ₹42.03 ಕೋಟಿ, ಕೇಂದ್ರದಿಂದ ₹84.07 ಕೋಟಿ ಹಾಗೂ ರಾಜ್ಯದಿಂದ ₹168.14 ಕೋಟಿ ಸೇರಿದಂತೆ ಒಟ್ಟು ₹294.26 ಕೋಟಿ ವಿಮಾ ಮೊತ್ತ ಪಾವತಿಯಾಗಿದೆ ಎಂದರು.
ರೈತರು ಪ್ರತಿ ಹೆಕ್ಟೇರ್ ಅಡಿಕೆಗೆ ₹6,475 ಹಾಗೂ ಕಾಳುಮೆಣಸಿಗೆ ₹2,377ರಂತೆ ವಿಮಾ ಮೊತ್ತ ಪಾವತಿಸಿದ್ದಾರೆ. ಆದರೆ ಬಜತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ₹45 ಸಾವಿರ ವಿಮಾ ಮೊತ್ತ ಪಾವತಿಸಿದ್ದರೂ ಕೆಲ ರೈತರಿಗೆ ಪ್ರತಿ ಹೆಕ್ಟೇರ್‌ಗೆ ಕನಿಷ್ಠ ₹10,800 ಮಾತ್ರ ಪರಿಹಾರ ದೊರೆತಿದೆ. ಅದೇ ಪ್ರದೇಶದ ಕೆಲವು ರೈತರ ಖಾತೆಗೆ ₹51,824 ಪರಿಹಾರ ಜಮೆಯಾಗಿರುವುದಾಗಿ ಅವರು ತಿಳಿಸಿದರು.
‘ರಾಜ್ಯ ಸರಕಾರ ರೈತ ವಿರೋಧಿ’
ಅಡಿಕೆ ಬೆಳೆಗಾರರು ವಿಮಾ ಮೊತ್ತ ಪಾವತಿಸಿದರೂ ಸಮರ್ಪಕ ಪರಿಹಾರ ದೊರೆಯುತ್ತಿಲ್ಲ. ಮತ್ತೊಂದೆಡೆ ಅಡಿಕೆ ಧಾರಣೆಯಲ್ಲೂ ಕುಸಿತವಾಗಿದೆ. ಹಿಂದಿನ ಅವಧಿಯಲ್ಲಿ ರೈತರಿಗೆ ದೊರೆಯುತ್ತಿದ್ದ ಕಿಸಾನ್ ಸನ್ಮಾನ್ ಹಾಗೂ ವಿದ್ಯಾನಿಧಿ ಯೋಜನೆಗಳನ್ನು ಈಗಿನ ಸರಕಾರ ಸ್ಥಗಿತಗೊಳಿಸಿದೆ. ರೈತರಿಗೆ ಒಂದಲ್ಲೊಂದು ರೀತಿಯಲ್ಲಿ ತೊಂದರೆ ನೀಡುತ್ತಿರುವ ರಾಜ್ಯ ಸರಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಮಠಂದೂರು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಲ್ಲಿಮಾರ್, ಬಿಜೆಪಿ ವಕ್ತಾರ ರಾಜೇಶ್ ಬನ್ನೂರು ಹಾಗೂ ರೈತ ಮೋರ್ಚಾ ಅಧ್ಯಕ್ಷ ಶರತ್ನಂದ ಬೈಪಾಡಿತ್ತಾಯ ಉಪಸ್ಥಿತರಿದ್ದರು.
ಅಂತರ ರಾಜ್ಯ
DK Shivakumar-‘ಸ್ಟಿಂಗ್ ಆಪರೇಷನ್’ ಬಗ್ಗೆ ಎಲ್ಲಾ ಮಾಹಿತಿ ಇದೆ..! ಚರ್ಚೆಗೆಂದು ಬಂದು ಏನೇನು ಮಾಡಿದ್ದಾರೆ ಎಂದು ಗೊತ್ತಿದೆ : ಇದರ ಪಿತಾಮಹ ಯಾರೆಂದೂ ತಿಳಿದಿದೆ : ಡಿಕೆಶಿ ಸ್ಫೋಟಕ ಹೇಳಿಕೆ
ಮುಖ್ಯಮಂತ್ರಿ ಆದ ಬಳಿಕ ನನ್ನನ್ನೇ ಟ್ರ್ಯಾಪ್ ಮಾಡಲು ಕೆಲವರು ಪ್ರಯತ್ನಿಸಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ(ಅ8) ಹೇಳಿಕೆ ನೀಡಿ “ಸ್ಟಿಂಗ್ ಆಪರೇಷನ್” ವಿಚಾರದ ಚರ್ಚೆ ವಿಚಾರದಲ್ಲಿ ಇನ್ನಷ್ಟು ಕುತೂಹಲ ಮೂಡಿಸುವಂತೆ ಮಾಡಿದ್ದಾರೆ.
ನವದೆಹಲಿ: ಮುಖ್ಯಮಂತ್ರಿ ಆದ ಬಳಿಕ ನನ್ನನ್ನೇ ಟ್ರ್ಯಾಪ್ ಮಾಡಲು ಕೆಲವರು ಪ್ರಯತ್ನಿಸಿದ್ದರು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗುರುವಾರ(ಅ8) ಹೇಳಿಕೆ ನೀಡಿ “ಸ್ಟಿಂಗ್ ಆಪರೇಷನ್” ವಿಚಾರದ ಚರ್ಚೆ ವಿಚಾರದಲ್ಲಿ ಇನ್ನಷ್ಟು ಕುತೂಹಲ ಮೂಡಿಸುವಂತೆ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ”ನನ್ನ ಬಳಿ “ಸ್ಟಿಂಗ್ ಆಪರೇಷನ್” ಬಗ್ಗೆ ಎಲ್ಲ ಮಾಹಿತಿ ಇದೆ. ನಾನು ಸಿಎಂ ಆದ ಬಳಿಕ ಕೆಲವರು ಬಂದಿದ್ದರು. ಫೋಟೋ ಬೇಕಿದ್ದರೆ ನೀಡುತ್ತೇನೆ, ಚರ್ಚೆಗೆಂದು ಬಂದು ಏನೇನು ಮಾಡಿದ್ದಾರೆ ಎಂಬುದು ಗೊತ್ತಿದೆ. ಈ ವಿಚಾರದ ಹಿಂದಿನ ಪಿತಾಮಹ ಯಾರು ಎಂಬುದೂ ಗೊತ್ತಿದೆ. ಯಾರು ಹಣಕಾಸಿನ ನೆರವು ನೀಡುತ್ತಿದ್ದಾರೆ ಎಂಬ ಮಾಹಿತಿಯೂ ಇದೆ.ನಾನು ಜವಾಬ್ದಾರಿಯುತ ಸ್ಥಾನದಲ್ಲಿರುವುದರಿಂದ ಸುಮ್ಮನೆ ಮಾತನಾಡುವುದಿಲ್ಲ. ಎಲ್ಲ ಸಾಕ್ಷ್ಯಾಧಾರಗಳು ಇವೆ” ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಫಾರ್ಮ್-7 ಮುದ್ರಣ
ಬಿಜೆಪಿ ಕಾರ್ಯಕರ್ತರು ಅಲ್ಪಸಂಖ್ಯಾಕರ ಮತಗಳನ್ನು ದೊಡ್ಡ ಪ್ರಮಾಣದಲ್ಲಿ ಅಳಿಸಲು, ಮತದಾರರ ವಿವರಗಳನ್ನು ಮೊದಲೇ ಭರ್ತಿ ಮಾಡಲಾಗಿರುವ ಫಾರ್ಮ್-7ಗಳನ್ನು ಮುದ್ರಿಸಿ ಬಳಸಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಮತದಾರರ ವಿವರಗಳನ್ನು ಮೊದಲೇ ನಮೂದಿಸಿರುವ ಫಾರ್ಮ್-7ಗಳನ್ನು ಪ್ರದರ್ಶಿಸಿದ ಅವರು, ಈ ಫಾರ್ಮ್‌ಗಳನ್ನು ಬಿಜೆಪಿಯವರು ಮತದಾರರ ಹೆಸರುಗಳನ್ನು ಅಳಿಸಲು ಬಳಸಿದ್ದಾರೆ ಎಂದು ಆರೋಪಿಸಿದರು.
‘ಫಾರ್ಮ್-7 ದುರ್ಬಳಕೆಯನ್ನು ತಡೆಯಲು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಯಾವುದೇ ಕ್ರಮ ಕೈಗೊಂಡಿಲ್ಲ. ಇಡೀ ಜಗತ್ತು ಈ ಬೆಳವಣಿಗೆಯನ್ನು ಗಮನಿಸುತ್ತಿದೆ’ ಎಂದು ಶಿವಕುಮಾರ್ ಹೇಳಿದರು.
ಜಿಎಸ್‌ಟಿ ಮಂಡಳಿ ಸಭೆಗೆ ದೆಹಲಿಗೆ
ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಬಂದಿರುವುದಾಗಿ ತಿಳಿಸಿದ ಶಿವಕುಮಾರ್, ‘ಇಂದು ಕೆಲವು ಮಹತ್ವದ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ’ ಎಂದರು.
ರಾಹುಲ್ ಗಾಂಧಿ ಉತ್ತಮ ಕೆಲಸ ಮಾಡುತ್ತಿದ್ದಾರೆ
ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ದೇಶಾದ್ಯಂತ ನಡೆದಿರುವ ಬೆಳವಣಿಗೆಗಳು ಈಗಾಗಲೇ ಬಹಿರಂಗಗೊಂಡಿವೆ. ಚುನಾವಣಾ ಆಯೋಗದ ಸದಸ್ಯರೂ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ನ್ಯಾಯಾಲಯಗಳೂ ಇದನ್ನು ಗಮನಕ್ಕೆ ತೆಗೆದುಕೊಂಡಿವೆ. ಸೂಕ್ತ ನಿರ್ದೇಶನ ನೀಡಿದ ನ್ಯಾಯಾಲಯಗಳಿಗೆ ನಾನು ಕೃತಜ್ಞನಾಗಿದ್ದೇನೆ’ ಎಂದರು.
‘ನನ್ನ ರಾಜ್ಯದಲ್ಲಿ ಲಕ್ಷಾಂತರ ಮತದಾರರ ಹೆಸರುಗಳನ್ನು ಅಳಿಸಲು ಪ್ರಯತ್ನಿಸಲಾಗುತ್ತಿದೆ. ಫಾರ್ಮ್-7 ಅರ್ಜಿಗಳನ್ನು ಬಿಜೆಪಿ ಕೇಂದ್ರ ಕಚೇರಿಯಲ್ಲೇ ಮುದ್ರಿಸಲಾಗಿದೆ ಎಂಬ ಆರೋಪವಿದೆ. ನಾವು ದೂರು ಸಲ್ಲಿಸಿದ ಬಳಿಕ ಅವರು ಕೂಡಲೇ ಹಲವು ಬಿಎಲ್‌ಒಗಳನ್ನು ಸಂಪರ್ಕಿಸಿ, ಆ ಫಾರ್ಮ್‌ಗಳನ್ನು ವಾಪಸ್ ಪಡೆದಿದ್ದಾರೆ. ಇದು ಅಪರಾಧವಲ್ಲವೇ? ತಡೆಯುವ ಮುನ್ನವೇ ಮತದಾರರ ಹೆಸರುಗಳನ್ನು ಅಳಿಸುವ ಪ್ರಯತ್ನ ನಡೆದಿತ್ತು’ ಎಂದು ಸಿಎಂ ಪ್ರಶ್ನಿಸಿದರು.
ಸ್ಟಿಂಗ್ ಆಪರೇಷನ್
ಡಿ.ಕೆ.ಶಿವಕುಮಾರ್ ಅವರೇ ಸಚಿವ ಸಂಪುಟ ಸಭೆಯಲ್ಲಿ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಈ ಎಚ್ಚರಿಕೆ ನೀಡಿರುವುದು ಈಗ ತೀವ್ರ ಚರ್ಚೆಗೆ ಕಾರಣವಾಗಿದ್ದು, ವಿಪಕ್ಷಗಳಿಂದ ಕೆಲ ಸಚಿವರು ‘ಟಾರ್ಗೆಟ್’ ಆಗಿದ್ದು, ರಹಸ್ಯ ಕಾರ್ಯಾಚರಣೆ ನಡೆಸಲು ತಂಡಗಳನ್ನೇ ರಚನೆ ಮಾಡಲಾಗಿದೆ ಎಂಬುದಾಗಿ ಹೇಳಿದ್ದಾರೆನ್ನಲಾಗಿದೆ. ಈ ಬೆಳವಣಿಗೆ ಬಗ್ಗೆ ವಿಪಕ್ಷಗಳು ಖಾರವಾದ ಪ್ರತಿಕ್ರಿಯೆಯನ್ನೂ ನೀಡಿವೆ.
-
Uncategorized12 hours ago
ಸಮುದ್ರಕ್ಕೆ ಇಳಿದಿದ್ದ ಉಜಿರೆ ಕಾಲೇಜಿನ ವಿದ್ಯಾರ್ಥಿ ಅಲೆಗಳ ಸೆಳೆತಕ್ಕೆ ಬಲಿ; ಮೃತದೇಹ ಪತ್ತೆ
-
Uncategorized15 hours ago
ಬೋನಿಗೆ ಬಿದ್ದ ಅಪರೂಪದ ಕರಿ ಚಿರತೆ!
-
Uncategorized14 hours ago
ರಬ್ಬರ್ ಗೆ ಭರ್ಜರಿ ಬೆಲೆ; ರಬ್ಬರ್ ಶೀಟ್ ದರದಲ್ಲೂ ಏರಿಕೆ
-
Uncategorized16 hours ago
ಪುತ್ತೂರು–ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಶಾಸಕ ಅಶೋಕ್ ರೈ ಸೂಚನೆ
-
Uncategorized15 hours ago
ಪುತ್ತೂರು : ನಸುಕಿನ ಜಾವ ಹಳೇ ಕಟ್ಟಡದಲ್ಲಿ ಕಾಣಿಸಿದ ಬೆಂಕಿ – ಅನಾಹುತ ತಪ್ಪಿಸಲು ನೆರವಾದ ರವಿಕುಮಾರ್ ರೈ
-
Uncategorized14 hours ago
ಮುಂಬೈನಲ್ಲಿ ‘ಬನ’ ತುಳು ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ; ಎರಡೂ ಪ್ರೀಮಿಯರ್ ಶೋ ಹೌಸ್ಫುಲ್ |


















