ವರದಿಗಳು
ಸರಕಾರಿ ಅನುದಾನಿತ ಬ್ಯಾರಿ ಸಾಹಿತ್ಯ ಅಕಾಡೆಮಿಯ ಕಟ್ಟಡ ಶಿಲಾನ್ಯಾಸ ವಿರೋಧಿಸಿ ಬಿಜೆಪಿ, ಸಂಘ ಪರಿವಾರದಿಂದ ಪ್ರತಿಭಟನೆ | “ಉಸ್ತುವಾರಿ ಸಚಿವರು ಮನಸ್ಸು ಮಾಡಿದ್ದರೆ ಕೇವಲ ಒಂದು ಕರೆ ಮಾಡಿ ಈ ಕಾರ್ಯಕ್ರಮ ನಿಲ್ಲಿಸಬಹುದು” : ತನ್ನ ತರಾಟೆಗೆ ತೆಗೆದುಕೊಂಡ ಪ್ರತಿಭಟನಕಾರರ ಛೇಡಿಸಿದ ಯುಟಿ ಖಾದರ್ | ಪ್ರತಿಭಟನೆಯ ವಿರುದ್ದ ಕಿಡಿಕಾರಿದ ಬಿಜೆಪಿ ಮುಖಂಡ ರಹೀಂ ಉಚ್ಚಿಲ
ಮಂಗಳೂರು: ರಾಜ್ಯ ಸರ್ಕಾರದ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಬ್ಯಾರಿ ಸಾಹಿತ್ಯ ಅಕಾಡೆಮಿಯ ಕಟ್ಟಡ ನಿರ್ಮಾಣದ ಶಂಕು ಸ್ಥಾಪನೆಗೆ ಅಡಳಿತ ಪಕ್ಷ ಬಿಜೆಪಿಯಿಂದಲೇ ವಿರೋಧ ವ್ಯಕ್ತವಾದ ಘಟನೆ ನಗರದ ತೊಕ್ಕೊಟ್ಟು ಸಮೀಪ ಫೆ 26 ರಂದು ನಡೆದಿದೆ.
ನಗರದ ಹೊರ ವಲಯದ ತೊಕ್ಕೊಟ್ಟು ಜಂಕ್ಷನ್ ಬಳಿ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಕಚೇರಿ ಕಟ್ಟಡ ನಿರ್ಮಿಸಲು ಸರಕಾರ ಉದ್ದೇಶಿಸಿದೆ. ಇದರ ಶಂಕು ಸ್ಥಾಪನೆ ಸಮಾರಂಭವನ್ನು ಶನಿವಾರ ಆಯೊಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಜನಪ್ರತಿನಿಧಿಗಳು ಮತ್ತು ಸರ್ಕಾರದ ವಿವಿಧ ಅಧಿಕಾರಿಗಳನ್ನು ಆಹ್ವಾನಿಸಲಾಗಿತ್ತು.
ಏತನ್ಮಧ್ಯೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಸಂಘ ಪರಿವಾರದ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಬ್ಯಾರಿ ಸಾಹಿತ್ಯ ಅಕಾಡೆಮಿ ನಿರ್ಮಾಣ ಮಾಡೋದರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಉಳ್ಳಾಲ ಕೌನ್ಸಿಲರ್ ದಿನಕರ ಉಳ್ಳಾಲ ನೇತೃತ್ವದ ಅಬ್ಬಕ್ಕ ಉತ್ಸವ ಸಮಿತಿಯವರು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹಾಗೂ ಸಂಘ ಪರಿವಾರದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ತೊಡಗಿಸಿಕೊಂಡವರು.
ಸರಕಾರದ ವತಿಯಿಂದಲೇ ಬ್ಯಾರಿ ಸಾಹಿತ್ಯ ಅಕಾಡೆಮಿಯ ಕಚೇರಿ ನಿರ್ಮಾಣಕ್ಕೆ ಶಂಕುಸ್ಥಾಪನೆ ಸಮಾರಂಭಕ್ಕೆ ಎಲ್ಲಾ ಸಿದ್ಧತೆ ನಡೆಸಲಾಗಿತ್ತು . ಹಾಗಾಗಿಯೂ ಅದೇ ಸರಕಾರದ ಕಾರ್ಯಕರ್ತರು ಮುಖಂಡರು ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದು ವಿರೋಧಭಾಸದಂತೆ ಕಾಣಿಸಿದೆ. ಇದರ ಪರಿಣಾಮ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.
ಖಾದರ್ ಅವರನ್ನು ತರಾಟೆಗೆತ್ತಿಕೊಂಡ ಪ್ರತಿಭಟನಕಾರರು
ಈ ಮಧ್ಯೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕ, ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅವರ ಬಳಿ ಪ್ರತಿಭಟನಾ ನಿರತರು ಕಾರ್ಯಕ್ರಮಕ್ಕೆ ತೆರಳದಂತೆ ಮನವಿ ಮಾಡಿದರು. ಈ ವೇಳೆ ಪ್ರತಿಭಟನಾಕಾರರ ಜೊತೆ ಮಾತನಾಡಿದ ಯು.ಟಿ ಖಾದರ್, ‘ಇದೊಂದು ಸರಕಾರಿ ಕಾರ್ಯಕ್ರಮವಾದ ಕಾರಣ ಹಾಜರಾಗುವುದು ಅನಿವಾರ್ಯ ಎಂದರು. ಈ ವೇಳೆ ಶಾಸಕ ಖಾದರ್ ಹಾಗೂ ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆಯಿತು.

ಈ ಸಂದರ್ಭ ದಿ ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ.ನ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಮಾತನಾಡಿ, ಬ್ಯಾರಿ ಭವನ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ, ಆದರೆ ದೇಶದ ಪ್ರಥಮ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕ ನಮಗೆ ದೇವರಿದ್ದಂತೆ. ಅಬ್ಬಕ್ಕ ಭವನ ಇದುವರೆಗೆ ಯಾಕೆ ಆಗಿಲ್ಲ. ಎಲ್ಲೋ ಆಗಬೇಕಾದ ಬ್ಯಾರಿ ಭವನ ಇಲ್ಲಿಗೇಕೆ ? ಎಂದು ಖಾದರ್ ಬಳಿ ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಯು.ಟಿ.ಖಾದರ್ ಸದಾನಂದ ಗೌಡ ಮುಖ್ಯಮಂತ್ರಿ ಆಗಿದ್ದಾಗ ಅಬ್ಬಕ್ಕ ಭವನಕ್ಕೆ 2 ಕೋ.ರೂ.ಅನುದಾನ ಕೊಟ್ಟಿದ್ದರು. ಬಳಿಕ 4 ಕೋ.ರೂ.ಗೆ ಅದನ್ನು ಏರಿಸಲಾಗಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ 8 ಕೋ.ರೂ.ಅನುದಾನವನ್ನು ನಾನೇ ಬಿಡುಗಡೆ ಮಾಡಿಸಿದ್ದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹೌಸಿಂಗ್ ಬೋರ್ಡ್ ನಡುವಿನ ಹೊಂದಾಣಿಕೆ ಕೊರತೆಯಿಂದ ಕಾಮಗಾರಿ ತಡವಾಗಿದೆ. ಜಿಲ್ಲಾಧಿಕಾರಿ ಜೊತೆ ಚರ್ಚೆ ಮಾಡಿದಾಗ ಆರು ತಿಂಗಳಲ್ಲಿ ಆರಂಭಿಸುವ ಬಗ್ಗೆ ನೀಡಿದ್ದ ಭರವಸೆ ಪತ್ರವೂ ಇದೆ. ಅದರೂ ಕಾಮಗಾರಿ ಆಗದ ಬಗ್ಗೆ ವಿದಾನಸಭೆಯ ಭರವಸೆ ಸಮಿತಿಗೆ ಕಳಿಸಿ ಕ್ರಮಕ್ಕೆ ಸೂಚಿಸಲಾಗಿದೆ ಎಂದರು.

ಬ್ಯಾರಿ ಅಕಾಡಮಿಯಲ್ಲಿ ಎಲ್ಲಾ ಧರ್ಮೀಯರಿದ್ದಾರೆ. ಬ್ಯಾರಿ ಭವನವನ್ನು ನೀರುಮಾರ್ಗ ಸಮೀಪದ ಬೈತುರ್ಲಿಯಿಂದ ವರ್ಗಾಯಿಸುವಂತೆ ಅಲ್ಲಿನ ಶಾಸಕರು, ರಹೀಂ ಉಚ್ಚಿಲ್ ಬಳಿ ಮಾತುಕತೆ ನಡೆಸಿದ್ದರು. ಬಳಿಕ ಅಂದಿನ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವೇದವ್ಯಾಸ ಕಾಮತ್ ಅವರು ಶಾಸಕ ಡಾ.ಭರತ್ ಶೆಟ್ಟಿಯಿಂದ ಮನವಿ ಸ್ವೀಕರಿಸಿ ತಹಶೀಲ್ದಾರ್ ಜೊತೆ ಮುಡಾ ಕಚೇರಿಯಲ್ಲಿ ಸಭೆ ನಡೆಸಿದ್ದರು. ಆದರೆ ಅದರ ಬಗ್ಗೆಯಾಗಲೀ, ಜಾಗದ ಬಗ್ಗೆಯಾಗಲೀ ನನಗೆ ಮಾಹಿತಿ ನೀಡದೆ ಅವರೇ ತೀರ್ಮಾನ ಮಾಡಿದ್ದಾರೆ ಎಂದು ಖಾದರ್ ಹೇಳಿದರು.
ಉಸ್ತುವಾರಿ ಸಚಿವರು ಮನಸ್ಸು ಮಾಡಿದರೆ…
ನೀವು ಶಾಸಕರಾಗಿದ್ದಾಗ ನಿಮ್ಮನ್ನೇಕೆ ಕರೆದಿಲ್ಲ, ನೀವೂ ಜವಾಬ್ದಾರರು. ನೀವು ನಿಷ್ಕ್ರೀಯರಾದಂತೆ ಎನ್ನುವುದನ್ನು ಒಪ್ಪಿಕೊಳ್ಳಿ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಯು.ಟಿ. ಖಾದರ್, ಸರಕಾರಿ ಇಲಾಖೆಯ ಗುಮಾಸ್ತ, ಸಿಬ್ಬಂದಿ, ಅಧಿಕಾರಿಗಳ ವರ್ಗಾವಣೆಯ ಸಂದರ್ಭ ಬಿಜೆಪಿ ಅಧ್ಯಕ್ಷರ ಪತ್ರ ನಡೆಯುತ್ತದೆ. ಉಸ್ತುವಾರಿ ಸಚಿವರ ಹಿಂದೆ ಮುಂದೆ ನೀವೇ ಇದ್ದೀರಿ. ಅಕಾಡಮಿಯ ಕಚೇರಿ ಜಾಗದ ವಿಚಾರದಲ್ಲಿ ನೀವೇಕೆ ಸುಮ್ಮನಿದ್ದೀರಿ? ಈಗ ಮಾತ್ರ ನಾನು ಹೊಣೆ ಹೊರಬೇಕಾ? ಸರಕಾರವೇ ಒಪ್ಪಿಗೆ ನೀಡಿದ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ನನ್ನ ಜವಾಬ್ದಾರಿ. ಉಸ್ತುವಾರಿ ಸಚಿವರು ಮನಸ್ಸು ಮಾಡಿದ್ದರೆ ಕೇವಲ ಒಂದು ಕರೆ ಮಾಡಿ ಈ ಕಾರ್ಯಕ್ರಮವನ್ನು ನಿಲ್ಲಿಸಬಹುದಿತ್ತು. ಆದರೆ ಅವರು ಆ ಕೆಲಸ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಅಲೆಮಾರಿ-ಅರೆಅಲೆಮಾರಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಅಬ್ಬಕ್ಕ ಉತ್ಸವ ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ್, ಮಾಜಿ ಶಾಸಕ ಜಯರಾಮ ಶೆಟ್ಟಿ, ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಧನಲಕ್ಷ್ಮಿ ಗಟ್ಟಿ, ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ ಪಂಡಿತ್ ಹೌಸ್, ಉಪಾಧ್ಯಕ್ಷ ಯಶವಂತ್ ಅಮೀನ್ ಮತ್ತಿತರರು ಪ್ರತಿಭಟನೆಗೆ ನೇತೃತ್ವ ನೀಡಿದ್ದರು.
ಜಿಲ್ಲಾ ಉಸ್ತುವರಿ ಸಚಿವರು ಸಂಸದರು ಗೈರು
ಶಿಲಾನ್ಯಾಸ ನೆರವೇರಿಸಬೇಕಿದ್ದ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್‌ರ ಗೈರು ಹಾಜರಿಯಲ್ಲಿ ರಾಜ್ಯ ವಿಪಕ್ಷ ಉಪ ನಾಯಕ ಹಾಗೂ ಸ್ಥಳೀಯ ಶಾಸಕ ಯು.ಟಿ.ಖಾದರ್ ಶಿಲಾನ್ಯಾಸ ನೆರವೇರಿಸಿದರು. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವರಿ ಸಚಿವರ ಸಹಿತ ಜಿಲ್ಲೆಯ ಇತರ ಸಚಿವರು, ಸಂಸದರು ಗೈರಾಗಿದ್ದರು. ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ಕಾರ್ಯಕ್ರಮದ ಪಟ್ಟಿಯಲ್ಲಿ ಕೊಂಕಣಿ ಭವನಕ್ಕೆ ಶಿಲಾನ್ಯಾಸದ ಬಗ್ಗೆ ಉಲ್ಲೇಖಿಸಲಾಗಿತ್ತು. ಆದರೆ ಬ್ಯಾರಿ ಅಕಾಡಮಿಯ ಶಿಲಾನ್ಯಾಸದ ಬಗ್ಗೆ ಉಲ್ಲೇಖವಿರಲಿಲ್ಲ. ಸಚಿವರು ಮಂಗಳೂರಿನಲ್ಲೇ ಇದ್ದರೂ ಕೂಡ ತನ್ನದೇ ಇಲಾಖೆಯ ಅಧೀನದ ಕಾರ್ಯಕ್ರಮದಲ್ಲಿ ಭಾಗವಹಿಸದಿರುವುದು ಚರ್ಚೆಗೆ ಗ್ರಾಸವಾಗಿದೆ.
ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶಾಸಕ ಯು.ಟಿ.ಖಾದರ್ “ ಬ್ಯಾರಿ ಅಕಾಡಮಿಯ ಕಚೇರಿ ನಿರ್ಮಾಣದ ಶಿಲಾನ್ಯಾಸಕ್ಕೆ ಸರಕಾರವೇ ಅನುಮೋದನೆ ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಯ ಒಪ್ಪಿಗೆ ಪಡೆದು ಕಾರ್ಯಕ್ರಮ ನಡೆಯುತ್ತಿರುವಾಗ ಜನರನ್ನು ಸೇರಿಸಿಕೊಂಡು ಜಿಂದಾಬಾದ್, ಮುರ್ದಾಬಾದ್ ಎಂದು ಕೂಗಿಸಿ ಬಲಿಪಶು ಮಾಡುವುದು ಸರಿಯಲ್ಲ ಎಂದರು
ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲರವರು” ಇತರ ಅಕಾಡಮಿಗಳ ಭವನದ ಶಿಲಾನ್ಯಾಸವು ಗೌರವಯುತವಾಗಿ ಆಗುತ್ತದೆ, ಆದರೆ ನಾವು ಪೊಲೀಸರನ್ನಿಟ್ಟು ಶಿಲಾನ್ಯಾಸ ನಡೆಸಬೇಕಾಗಿದೆ. ಶಿಲಾನ್ಯಾಸಕ್ಕೆ ಅವಕಾಶ ಕೊಟ್ಟ ಬಿಜೆಪಿ, ಸಂಘಪರಿವಾರಕ್ಕೆ ಧನ್ಯವಾದಗಳು, ಸಚಿವರು ದೊಡ್ಡ ಮೊತ್ತದ ಅನುದಾನ ಕೊಟ್ಟಿದ್ದಾರೆ. ವಿರೋಧ ವ್ಯಕ್ತಪಡಿಸಿದವರಿಗೆ ದೈವ-ದೇವರಿಂದಲೇ ಉತ್ತರ ಸಿಗಲಿದೆ. ನಾಳೆ ಕಾಮಗಾರಿಗೆ ತೊಂದರೆ ಕೊಟ್ಟರೆ ಇಲಾಖೆ ನೋಡಿಕೊಳ್ಳಲಿದೆ ಎಂದರು
ಸಮಾರಂಭದಲ್ಲಿ ಉಳ್ಳಾಲ ನಗರ ಸಭೆಯ ಅಧ್ಯಕ್ಷ ಚಿತ್ರ ಕಲಾ, ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ಸ್ಥಾಯಿ ಸಮಿತಿ ಅಧ್ಯಕ್ಷ ಝರೀನ ರವೂಫ್, ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ, ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಪಾರೆ, ಮಂಗಳೂರು ವಿಶ್ವವಿದ್ಯಾನಿಲಯದ ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ.ಅಬೂಬಕ್ಕರ್ ಸಿದ್ದೀಕ್, ಅಧ್ಯಯನ ಪೀಠದ ಸದಸ್ಯರಾದ ಅಹ್ಮದ್ ಬಾವಾ ಪಡೀಲ್, ಅಬ್ದುಲ್ ರಹ್ಮಾನ್ ಕುತ್ತೆತ್ತೂರು, ಸಂಶುದ್ದೀನ್ ಮಡಿಕೇರಿ, ಬ್ಯಾರಿ ಸಾಹಿತ್ಯ ಅಕಾಡಮಿಯ ನಿಕಟಪೂರ್ವ ರಿಜಿಸ್ಟ್ರಾರ್ ಪೂರ್ಣಿಮಾ, ಹಾಲಿ ರಿಜಿಸ್ಟ್ರಾರ್ ಮನೋಹರ್ ಕಾಮತ್, ಸಾಮಾಜಿಕ ಮುಖಂಡ ಅಬ್ಬಾಸ್ ಉಚ್ಚಿಲ್, ಗುತ್ತಿಗೆದಾರ ಪ್ರಭಾಕರ ಯೆಯ್ಯಾಡಿ, ಅಕಾಡಮಿಯ ಸದಸ್ಯ ರಾಧಾಕೃಷ್ಣ ನಾವಡ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕ ಯುಟಿ ಖಾದರ್ ‘ಬಿಜೆಪಿ ಸರ್ಕಾರವೇ ಇರೋವಾಗ ಬಿಜೆಪಿ ಕಾರ್ಯಕರ್ತರೇ ಸೇರಿಕೊಂಡು ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ. ಸುಮ್ಮನೆ ಪ್ರತಿಭಟಿಸುವ ಬದಲು, ತಮ್ಮ ಸರ್ಕಾರದ ಮೂಲಕ ಯೋಜನೆಯನ್ನು ನಿಲ್ಲಿಸಬಹುದಲ್ಲಾ?’ ಎಂದು ಖಾದರ್ ಪ್ರಶ್ನಿಸಿದರು.
ಏನಿದು ವಿವಾದ?
ಕಳೆದ ವರ್ಷ ಕಚೇರಿಯ ನಿರ್ಮಾಣಕ್ಕೆ ಅಬ್ಬಕ್ಕ ಉತ್ಸವ ಸಮಿತಿಯಿಂದ ಪ್ರತಿಭಟನೆ ವ್ಯಕ್ತವಾಗಿತ್ತು. ಹಾಗಾಗಿ ಶಿಲಾನ್ಯಾಸ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಬಳಿಕ ಸಚಿವರು, ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಅಲ್ಲದೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ತದನಂತರ ಕೆಲವು ಮಂದಿ ಕಾಮಗಾರಿಗೆ ಅಡ್ಡಿಪಡಿಸಿದ ಕಾರಣ ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಳಿಸಲಾಗಿತ್ತು.
ಶನಿವಾರ ಮತ್ತೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಯುತ್ತಿದ್ದಾಗಲೇ ಬಿಜೆಪಿ ಮುಖಂಡರು, ಸಂಘ ಪರಿವಾರದ ಕಾರ್ಯಕರ್ತರು, ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಅಂತರ ರಾಜ್ಯ
Chennai Jain couple-ತಿರುಪತಿ ತಿಮ್ಮಪ್ಪನಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ಚಿನ್ನ, ವಜ್ರಾಭರಣ ಕಾಣಿಕೆ ನೀಡಿದ ಚೆನ್ನೈ ಜೈನ ದಂಪತಿ..!
ಚೆನ್ನೈ ಮೂಲದ ಜೈನ ದಂಪತಿ ತಿರುಪತಿ ತಿರುಮಲ ದೇವಸ್ಥಾನದ ಶ್ರೀ ವೆಂಕಟೇಶ್ವರ ಸ್ವಾಮಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ತೂಕದ ಚಿನ್ನ ಹಾಗೂ ವಜ್ರಾಭರಣಗಳನ್ನು ಕಾಣಿಕೆಯಾಗಿ ಅರ್ಪಿಸುವ ಮೂಲಕ ಅಪಾರ ಭಕ್ತಿ ಮೆರೆದಿದ್ದಾರೆ.
ತಿರುಪತಿ: ಚೆನ್ನೈ ಮೂಲದ ಜೈನ ದಂಪತಿ ತಿರುಪತಿ ತಿರುಮಲ ದೇವಸ್ಥಾನದ ಶ್ರೀ ವೆಂಕಟೇಶ್ವರ ಸ್ವಾಮಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ತೂಕದ ಚಿನ್ನ ಹಾಗೂ ವಜ್ರಾಭರಣಗಳನ್ನು ಕಾಣಿಕೆಯಾಗಿ ಅರ್ಪಿಸುವ ಮೂಲಕ ಅಪಾರ ಭಕ್ತಿ ಮೆರೆದಿದ್ದಾರೆ.
ಚೆನ್ನೈನ ವರ್ಧಮಾನ್ ಜೈನ್ ಮತ್ತು ರಾಧಿಕಾ ಜೈನ್ ದಂಪತಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಅರ್ಚಕರು ಹಾಗೂ ಪ್ರತಿನಿಧಿಗಳಿಗೆ ಈ ಅಮೂಲ್ಯ ಆಭರಣಗಳನ್ನು ಔಪಚಾರಿಕವಾಗಿ ಹಸ್ತಾಂತರಿಸಿದರು. ವಜ್ರಖಚಿತ ಚಿನ್ನಾಭರಣಗಳನ್ನು ಒಳಗೊಂಡ ಈ ಕಾಣಿಕೆ ದೇವಾಲಯದ ಇತಿಹಾಸದಲ್ಲಿನ ಗಮನಾರ್ಹ ದಾನಗಳಲ್ಲಿ ಒಂದಾಗಿದೆ.
ಸಮಾರಂಭದಲ್ಲಿ ದಂಪತಿಯ ಭಕ್ತಿಯನ್ನು ಶ್ಲಾಘಿಸಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, 206 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಶ್ರೀ ವೆಂಕಟೇಶ್ವರ ಸ್ವಾಮಿಗೆ ಅರ್ಪಿಸಿರುವುದು ಅಪರೂಪದ ಹಾಗೂ ಅಸಾಧಾರಣ ಭಕ್ತಿಯ ಪ್ರತೀಕವಾಗಿದೆ. ದೇವರ ಮೇಲಿನ ಅಪಾರ ಭಕ್ತಿ ಮತ್ತು ದೈವಿಕ ಪ್ರೇರಣೆಯಿಂದ ಈ ದಂಪತಿ ಇಂತಹ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿರುವುದು ತಮ್ಮ ಸೌಭಾಗ್ಯ ಎಂದು ಹೇಳಿದರು.
ತಿರುಮಲವು ನಂಬಿಕೆ, ಭಕ್ತಿ ಹಾಗೂ ಆಧ್ಯಾತ್ಮಿಕ ಸಂತೃಪ್ತಿಯ ಸಂಕೇತವಾಗಿದ್ದು, ಶ್ರೀ ಕೃಷ್ಣದೇವರಾಯರ ಕಾಲದಿಂದ ಇಂದಿನವರೆಗೂ ಭಕ್ತರ ಕಾಣಿಕೆ ಮತ್ತು ಭಕ್ತಿಪರಂಪರೆ ನಿರಂತರವಾಗಿ ಮುಂದುವರಿದಿದೆ ಎಂದು ನಾಯ್ಡು ಹೇಳಿದರು. ಪಲ್ಲವರು, ಚೋಳರು, ಚೇರರು, ಪಾಂಡ್ಯರು ಹಾಗೂ ಮೈಸೂರು ಮತ್ತು ಮರಾಠಾ ಅರಸರು ಹಿಂದಿನ ಕಾಲದಲ್ಲಿ ದೇವಾಲಯಕ್ಕೆ ಬೆಲೆಬಾಳುವ ಆಭರಣಗಳು ಮತ್ತು ಕಾಣಿಕೆಗಳನ್ನು ಅರ್ಪಿಸಿ ಶ್ರೀಮಂತಗೊಳಿಸಿರುವುದನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಅಲಿಪಿರಿ ಬಾಂಬ್ ದಾಳಿಯಿಂದ ತಾವು ಪಾರಾದ ಘಟನೆಯನ್ನು ನೆನಪಿಸಿಕೊಂಡ ಮುಖ್ಯಮಂತ್ರಿ, ಶ್ರೀ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದವೇ ತಮಗೆ ಮರುಜನ್ಮ ನೀಡಿತು ಎಂದು ಭಾವುಕರಾಗಿ ನುಡಿದರು.
ದೇವಾಲಯದ ಪಾವಿತ್ರ್ಯ ಕಾಪಾಡುವುದರ ಜೊತೆಗೆ ಗೋರಕ್ಷಣೆ, ವೈದಿಕ ಪರಂಪರೆ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವಂತೆ ಟಿಟಿಡಿಗೆ ಸೂಚಿಸಿದ ನಾಯ್ಡು, ‘ವೃಕೋ ಗೋವಿಂದಂ’ ಉಪಕ್ರಮಕ್ಕೆ ಉತ್ತೇಜನ ನೀಡುವುದಾಗಿ ತಿಳಿಸಿದರು. ಅಲ್ಲದೆ, ದೇವಾಲಯದ ಮೂಲಸೌಕರ್ಯ ವಿಸ್ತರಣೆ ಹಾಗೂ ಟಿಟಿಡಿ ಸಹಯೋಗದೊಂದಿಗೆ ಆಂಧ್ರಪ್ರದೇಶದಾದ್ಯಂತ 5,000 ದೇವಾಲಯಗಳನ್ನು ನಿರ್ಮಿಸುವ ಯೋಜನೆಯನ್ನೂ ಪ್ರಕಟಿಸಿದರು.
‘ಮಾನವ ಸೇವೆಯೇ ಮಾಧವ ಸೇವೆ’ ಎಂಬ ತತ್ವದಡಿ ಅನ್ನದಾನ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಉಪಕ್ರಮಗಳನ್ನು ಸರ್ಕಾರ ಮತ್ತಷ್ಟು ಬಲಪಡಿಸಲಿದೆ. ಶ್ರೀಮಂತರು ತಮ್ಮ ಸಂಪತ್ತನ್ನು ಸಮಾಜ ಕಲ್ಯಾಣ, ಆಧ್ಯಾತ್ಮಿಕ ಕಾರ್ಯಗಳು ಹಾಗೂ ಬಡವರ ಸೇವೆಗೆ ಬಳಸುವಂತೆ ಜೈನ ದಂಪತಿಯ ದಾನವನ್ನು ಮಾದರಿಯಾಗಿ ಉಲ್ಲೇಖಿಸಿ ಮುಖ್ಯಮಂತ್ರಿ ಕರೆ ನೀಡಿದರು.
ಅಂತರ ರಾಜ್ಯ
CM post battle-ಉತ್ತರ ಪ್ರದೇಶ ಬಿಜೆಪಿಯಲ್ಲಿ ಸಿಎಂ ಕುರ್ಚಿ ಕದನ: ಚುನಾವಣೆಗೂ ಮುನ್ನವೇ ಭಿನ್ನಮತ?
ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನವೇ ಆಡಳಿತಾರೂಢ ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ವಿಚಾರವಾಗಿ ರಾಜಕೀಯ ಚರ್ಚೆ ತೀವ್ರಗೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಹೇಳಿಕೆಗಳು ಪಕ್ಷದೊಳಗಿನ ನಾಯಕತ್ವದ ವಿಚಾರವನ್ನು ಮುನ್ನೆಲೆಗೆ ತಂದಿವೆ.
ಲಕ್ನೋ: ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನವೇ ಆಡಳಿತಾರೂಢ ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ವಿಚಾರವಾಗಿ ರಾಜಕೀಯ ಚರ್ಚೆ ತೀವ್ರಗೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಹೇಳಿಕೆಗಳು ಪಕ್ಷದೊಳಗಿನ ನಾಯಕತ್ವದ ವಿಚಾರವನ್ನು ಮುನ್ನೆಲೆಗೆ ತಂದಿವೆ.
ಪತ್ರಕರ್ತರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಮುಂದಿನ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಯೇ ಅಥವಾ ಬೇರೊಬ್ಬರು ಆ ಸ್ಥಾನಕ್ಕೇರುತ್ತಾರೆಯೇ ಎಂಬುದನ್ನು ತಾನು ನಿರ್ಧರಿಸುವುದಿಲ್ಲ ಎಂದು ಹೇಳಿದ್ದಾರೆ.
“ಬಿಜೆಪಿ ಅಭ್ಯರ್ಥಿಗಳು ಕಮಲದ ಚಿಹ್ನೆಯಡಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಚುನಾವಣೆ ಮುಗಿದ ಬಳಿಕ ಶಾಸಕರ ಸಭೆ ನಡೆಯಲಿದ್ದು, ಈ ಸಂದರ್ಭದಲ್ಲಿ ಕೇಂದ್ರದ ವೀಕ್ಷಕರು ಆಗಮಿಸಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸಲಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಮೌರ್ಯ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದು ಈಗಾಗಲೇ ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.
“ಪ್ರತಿಯೊಬ್ಬರೂ ಕಮಲದ ಚಿಹ್ನೆಯಡಿ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗುತ್ತದೆ. ನಾನೂ ಕಮಲದ ಚಿಹ್ನೆಯ ಮೇಲೆಯೇ ಸ್ಪರ್ಧಿಸುತ್ತೇನೆ. ಕಮಲದ ಹೂವೇ ನಮಗೆ ಎಲ್ಲವೂ” ಎಂದು ಯೋಗಿ ಹೇಳಿದ್ದಾರೆ. ಈ ಮೂಲಕ ಮುಂದಿನ ಚುನಾವಣೆಯಲ್ಲೂ ತಮ್ಮ ನಾಯಕತ್ವ ಮುಂದುವರಿಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್–ಎಸ್‌ಪಿ ಮೈತ್ರಿಯಲ್ಲೂ ಬಿಕ್ಕಟ್ಟು
ಇನ್ನೊಂದೆಡೆ, 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ವಿಚಾರವೂ ಬಿಕ್ಕಟ್ಟಿಗೆ ಕಾರಣವಾಗಿದೆ. ಕಾಂಗ್ರೆಸ್‌ಗೆ ಕೇವಲ 26 ಕ್ಷೇತ್ರಗಳನ್ನು ಬಿಟ್ಟುಕೊಡುವ ಎಸ್‌ಪಿ ಪ್ರಸ್ತಾವನೆಗೆ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಸಂಸದ ಹಾಗೂ ಕಾರ್ಯಾಧ್ಯಕ್ಷ ಇಮ್ರಾನ್ ಮಸೂದ್, “ನಾವೇನು ಭಿಕ್ಷುಕರೇ? ನಮಗೂ ಸ್ವಾಭಿಮಾನವಿದೆ. ಮಾತುಕತೆ ಇದೇ ರೀತಿ ಮುಂದುವರಿದರೆ ಮೈತ್ರಿ ಎಲ್ಲಿದೆ?” ಎಂದು ಎಸ್‌ಪಿ ವಿರುದ್ಧ ಕಿಡಿಕಾರಿದ್ದಾರೆ.
ಒಟ್ಟಿನಲ್ಲಿ, ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನವೇ ಬಿಜೆಪಿ ನಾಯಕತ್ವದ ವಿಚಾರ ಹಾಗೂ ಕಾಂಗ್ರೆಸ್–ಎಸ್‌ಪಿ ಸೀಟು ಹಂಚಿಕೆ ವಿವಾದಗಳು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ.
ಅಂತರ ರಾಜ್ಯ
Insurance policy-ವಿಮೆ ಇಲ್ಲದ ವಾಹನಗಳಿಗೆ ಕಡಿವಾಣ: ಹೊಸ ನಿಯಮ ಜಾರಿಗೆ ಕೇಂದ್ರ ಚಿಂತನೆ; ಕಾರಿಗೆ 4 ವರ್ಷ, ಬೈಕ್‌ಗೆ 6 ವರ್ಷಗಳ ವಿಮೆ
ವಿಮೆ ಇಲ್ಲದೆ ರಸ್ತೆಗಿಳಿಯುವ ವಾಹನಗಳ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಹೊಸ ಕ್ರಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಇದರ ಭಾಗವಾಗಿ ಕಾರುಗಳಿಗೆ ನಾಲ್ಕು ವರ್ಷ ಹಾಗೂ ದ್ವಿಚಕ್ರ ವಾಹನಗಳಿಗೆ ಆರು ವರ್ಷಗಳ ವಿಮಾ ಪಾಲಿಸಿಯನ್ನು ಪರಿಚಯಿಸುವ ಪ್ರಸ್ತಾವವಿದ್ದು, ಈ ಅವಧಿಗೆ ಅನ್ವಯವಾಗುವ ಪ್ರೀಮಿಯಂ ಅನ್ನು ಒಂದೇ ಬಾರಿಗೆ ಪಾವತಿಸುವ ವ್ಯವಸ್ಥೆ ರೂಪಿಸುವ ಕುರಿತು ಚರ್ಚೆ ನಡೆಯುತ್ತಿದೆ.
ಹೊಸದಿಲ್ಲಿ, ನ.25: ವಿಮೆ ಇಲ್ಲದೆ ರಸ್ತೆಗಿಳಿಯುವ ವಾಹನಗಳ ಸಮಸ್ಯೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಹೊಸ ಕ್ರಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ. ಇದರ ಭಾಗವಾಗಿ ಕಾರುಗಳಿಗೆ ನಾಲ್ಕು ವರ್ಷ ಹಾಗೂ ದ್ವಿಚಕ್ರ ವಾಹನಗಳಿಗೆ ಆರು ವರ್ಷಗಳ ವಿಮಾ ಪಾಲಿಸಿಯನ್ನು ಪರಿಚಯಿಸುವ ಪ್ರಸ್ತಾವವಿದ್ದು, ಈ ಅವಧಿಗೆ ಅನ್ವಯವಾಗುವ ಪ್ರೀಮಿಯಂ ಅನ್ನು ಒಂದೇ ಬಾರಿಗೆ ಪಾವತಿಸುವ ವ್ಯವಸ್ಥೆ ರೂಪಿಸುವ ಕುರಿತು ಚರ್ಚೆ ನಡೆಯುತ್ತಿದೆ.
ಪ್ರಸ್ತುತ ಹೊಸ ವಾಹನ ಖರೀದಿಸುವಾಗ ನೀಡಲಾಗುವ ವಿಮೆಯ ಅವಧಿ ಮುಗಿದ ಬಳಿಕ ಪ್ರತಿ ವರ್ಷ ವಿಮೆಯನ್ನು ನವೀಕರಿಸಬೇಕಾಗುತ್ತದೆ. ಆದರೆ ಅನೇಕ ವಾಹನ ಮಾಲೀಕರು ವಿಮೆ ನವೀಕರಿಸದೆ ವಾಹನ ಚಲಾಯಿಸುತ್ತಿರುವುದರಿಂದ ಈ ಸಮಸ್ಯೆ ನಿವಾರಿಸಲು ದೀರ್ಘಾವಧಿಯ ವಿಮಾ ಪಾಲಿಸಿಯನ್ನು ಪರಿಚಯಿಸುವ ಚಿಂತನೆ ನಡೆದಿದೆ.
ಇದರೊಂದಿಗೆ, ಹಿಂದಿನ ವರ್ಷ ವಾಹನದ ವಿರುದ್ಧ ದಾಖಲಾಗಿರುವ ನಿರ್ದಿಷ್ಟ ಸಂಚಾರ ನಿಯಮ ಉಲ್ಲಂಘನೆಗಳ ಆಧಾರದ ಮೇಲೆ ವಿಮಾ ಪ್ರೀಮಿಯಂ ಹೆಚ್ಚಿಸುವ ಪ್ರಸ್ತಾವವೂ ಇದೆ.
ಏನೇನು ಪ್ರಸ್ತಾವಗಳಿವೆ?
- ಕಾರುಗಳಿಗೆ ನಾಲ್ಕು ವರ್ಷ ಹಾಗೂ ದ್ವಿಚಕ್ರ ವಾಹನಗಳಿಗೆ ಆರು ವರ್ಷಗಳ ವಿಮಾ ಪಾಲಿಸಿ ಪರಿಚಯಿಸುವ ಚಿಂತನೆ.
- ವಿಮೆಯ ಸಂಪೂರ್ಣ ಅವಧಿಗೆ ಅನ್ವಯವಾಗುವ ಪ್ರೀಮಿಯಂ ಅನ್ನು ಒಂದೇ ಬಾರಿಗೆ ಪಾವತಿಸುವ ವ್ಯವಸ್ಥೆ.
- ಹಿಂದಿನ ವರ್ಷ ವಾಹನದ ವಿರುದ್ಧ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆಗಳ ಆಧಾರದ ಮೇಲೆ ವಿಮಾ ಪ್ರೀಮಿಯಂ ಹೆಚ್ಚಳ.
- ‘ವಿಮೆ ಇಲ್ಲದಿದ್ದರೆ ಇಂಧನವಿಲ್ಲ’ ಅಭಿಯಾನ ಆರಂಭಿಸುವಂತೆ ಸುಪ್ರೀಂಕೋರ್ಟ್‌ನ ರಸ್ತೆ ಸುರಕ್ಷತಾ ಸಮಿತಿ ಸೂಚನೆ.
- ಈ ಅಭಿಯಾನವನ್ನು ಪ್ರಾಯೋಗಿಕವಾಗಿ ಹರಿಯಾಣ ಮತ್ತು ಉತ್ತರ ಪ್ರದೇಶದ ತಲಾ ಐದು ಪೆಟ್ರೋಲ್ ಬಂಕ್‌ಗಳಲ್ಲಿ ಆರಂಭಿಸಲು ಸಲಹೆ.
- ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಗಳ ನಂಬರ್ ಪ್ಲೇಟ್ ಆಧರಿಸಿ ಕ್ಯಾಮೆರಾಗಳ ಮೂಲಕ ವಿಮೆಯ ಮಾನ್ಯತೆಯನ್ನು ಪರಿಶೀಲಿಸುವ ವ್ಯವಸ್ಥೆ.
-
ನಿಧನ ವಾರ್ತೆ18 hours agoMangaluru-ಮಂಗಳೂರು: ರಸ್ತೆ ದಾಟುತ್ತಿದ್ದ 2ನೇ ತರಗತಿ ವಿದ್ಯಾರ್ಥಿಯ ಮೇಲೆ ಬಸ್ ಹರಿದು ಸಾವು
-
ಬಿಗ್ ನ್ಯೂಸ್12 hours agoVitla-ವಿಟ್ಲ: ಚಿಕ್ಕಪ್ಪನನ್ನು ಕತ್ತಿಯಿಂದ ಕಡಿದು ಹತ್ಯೆಗೈದ ಯುವತಿ ಬಂಧನ
-
ಅಪರಾಧ18 hours agoPunacha-ಪುಣಚದಲ್ಲಿ ಬೈಕ್‌ಗೆ ಕಾರು ಡಿಕ್ಕಿ; ಸವಾರನಿಗೆ ಗಂಭೀರ ಗಾಯ – ನಿಲ್ಲಿಸದೆ ಪರಾರಿಯಾದ ಕಾರು?
-
ಅಂತರ ರಾಜ್ಯ18 hours agoChennai Jain couple-ತಿರುಪತಿ ತಿಮ್ಮಪ್ಪನಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ಚಿನ್ನ, ವಜ್ರಾಭರಣ ಕಾಣಿಕೆ ನೀಡಿದ ಚೆನ್ನೈ ಜೈನ ದಂಪತಿ..!
-
ಅಪರಾಧ18 hours agoPunacha-ಪುಣಚ: ಪತ್ನಿಯನ್ನು ಕೊಲೆಗೈದು ಹೃದಯಾಘಾತವೆಂದು ಬಿಂಬಿಸಲು ಯತ್ನ: ಪತಿಗೆ 5 ವರ್ಷ ಜೈಲು..!
-
ಬಿಗ್ ನ್ಯೂಸ್13 hours agoVirupaksha Bhat-ಮಹಾಲಿಂಗೇಶ್ವರ ದೇವಸ್ಥಾನದ ಕಾಮಗಾರಿಗಳಿಗೆ ಹೈಕೋರ್ಟ್ ತಡೆಯಾಜ್ಞೆ: ಅನುಮತಿಯಿಲ್ಲದ ಕಾಮಗಾರಿ, ಟೆಂಡರ್ ಪ್ರಕ್ರಿಯೆ ಮುಂದುವರಿಸದಂತೆ ಮಧ್ಯಂತರ ಆದೇಶ; ದೇವಸ್ಥಾನದ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ, ನಿಯಮಬದ್ಧ ಆಡಳಿತಕ್ಕೆ ಆಗ್ರಹ : ದೂರುದಾರ ವಿರೂಪಾಕ್ಷ ಭಟ್ ಪತ್ರಿಕಾಗೋಷ್ಟಿ
-
ರಾಜಕೀಯ18 hours agoKumaraswamy-ಹಳ್ಳಿಯ ಪ್ರತಿ ಹೆಣ್ಣುಮಕ್ಕಳಿಗೆ 2 ಹಸು ಉಚಿತ..! 2028ರ ಎನ್ಡಿಎ ಯೋಜನೆ ಘೋಷಿಸಿದ ಕುಮಾರಸ್ವಾಮಿ
-
ಅಪರಾಧ16 hours agoBantwal-ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ಗುಂಪುಗೂಡಿ ಗಲಾಟೆ; ಟೋಲ್ ಉಪಕರಣಗಳಿಗೆ ಹಾನಿ ಯತ್ನ – ಪ್ರಕರಣ ದಾಖಲು















