ರಾಜಕೀಯ
‘Bharat Rice’-ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ‘ಭಾರತ್ ಅಕ್ಕಿ’ ಯೋಜನೆ ನಾಲ್ಕೇ ತಿಂಗಳಿಗೆ ಸ್ಥಗಿತ..! ಕಾರಣ ಏನೂ ಗೊತ್ತೇ..?
ಬೆಂಗಳೂರು: ಜುಲೈನಿಂದ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ‘ಭಾರತ್ ಅಕ್ಕಿ’ ಯೋಜನೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಈ ಯೋಜನೆಯಡಿ 29 ರೂ.ಗೆ ಅಕ್ಕಿ, 27.50 ರೂ.ಗೆ ಗೋದಿಹಿಟ್ಟು ಹಾಗೂ 60 ರೂ.ಗೆ ಕಡ್ಲೆಬೇಳೆ ವಿತರಣೆ ಮಾಡಲಾಗುತ್ತಿತ್ತು.
ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ದಿನಸಿ ವಿತರಿಸುವುದು ‘ಭಾರತ್ ಅಕ್ಕಿ’ ಯೋಜನೆಯ ಉದ್ದೇಶವಾಗಿತ್ತು. ಭಾರತ್ ಅಕ್ಕಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆಯಿತ್ತು. ಜೂ.10 ರವರೆಗೆ ಕೇಂದ್ರದ ಆದೇಶದಂತೆ ಸಾಮಗ್ರಿಗಳನ್ನು ಸರಬರಾಜು ಮಾಡಲಾಗಿತ್ತು. ಆನಂತರ ಪೂರೈಕೆಯಾಗಿಲ್ಲ. ಆದುದರಿಂದ ಸದ್ಯಕ್ಕೆ ವಿತರಣೆ ಸ್ಥಗಿತಗೊಳಿಸಲಾಗಿದೆ.
ಕೇಂದ್ರ ಸರಕಾರ 2024ರ ಫೆಬ್ರವರಿ 2ರಂದು ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಸೆಳೆಯುವ ಉದ್ದೇಶದಿಂದ ಕಡಿಮೆ ದರದಲ್ಲಿ ಗುಣಮಟ್ಟದ ಅಕ್ಕಿ ವಿತರಿಸಲು ಈ ಯೋಜನೆಯನ್ನು ಆರಂಭಿಸಿತು. ನ್ಯಾಷನಲ್ ಅಗ್ರಿಕಲ್ಚರ್ ಕೋ ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ ಲಿಮಿಟೆಡ್ (ನಾಫೆಡ್) ರಿಯಾಯಿತಿ ದರದ ಭಾರತ್ ಅಕ್ಕಿ, ಬೇಳೆ, ಗೋಧಿ ಹಿಟ್ಟಿನ ಮಾರಾಟದ ಜವಾಬ್ದಾರಿ ಹೊತ್ತಿತ್ತು.
ಆರಂಭದಲ್ಲಿ ರಾಜ್ಯದ ಕೆಲವೆಡೆ ಟೆಂಪೋಗಳಲ್ಲಿ ತಂದು ನಿಲ್ಲಿಸಿಕೊಂಡು ಹೆಸರು, ಮೊಬೈಲ್ ಸಂಖ್ಯೆ ನಮೂದಿಸಿಕೊಂಡು ಹತ್ತು ಕೆ.ಜಿ. ಅಕ್ಕಿ ಮತ್ತು ಕೆಲವು ಜಿಲ್ಲೆಗಳಲ್ಲಿ ಹತ್ತು ಕೆ.ಜಿ. ಗೋಧಿಹಿಟ್ಟನ್ನು ವಿತರಿಸಲಾಗುತ್ತಿತ್ತು. ಕೆಲವೆಡೆ ತೊಗರಿಬೇಳೆ ನೀಡುವುದಾಗಿ ಘೋಷಿಸಲಾಗಿತ್ತು. ಆದರೆ ಹೆಚ್ಚು ವಿತರಣೆಯಾಗಲಿಲ್ಲ.
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಇರುವವರಿಗೆ ಉಚಿತವಾಗಿ ಪ್ರತಿ ವ್ಯಕ್ತಿಗೆ ಐದು ಕೆ.ಜಿ. ಅಕ್ಕಿ ವಿತರಿಸಲಾಗುತ್ತಿದೆ. ಎಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಕೆ.ಜಿ.ಗೆ 15 ರೂ.ನಂತೆ 10 ಕೆ.ಜಿ. ಅಕ್ಕಿ ವಿತರಿಸಲಾಗುತ್ತದೆ. ಆದರೆ, ಈ ಎರಡೂ ಬಗೆಯ ಪಡಿತರ ಚೀಟಿಯಿಲ್ಲದ ಲಕ್ಷಾಂತರ ಕುಟುಂಬಗಳು ರಾಜ್ಯದಲ್ಲಿವೆ. ಅದರಲ್ಲೂ ಬಡತನದಿಂದ ಬಳಲುತ್ತಿರುವವರ ಸಂಖ್ಯೆ ಸಾಕಷ್ಟಿದೆ. ನಾನಾ ಕಾರಣಗಳಿಂದ ವಲಸೆ ಬಂದವರು, ಕೂಲಿ ಕಾರ್ಮಿಕರು, ಪಡಿತರ ಚೀಟಿ ಹೊಂದಿಲ್ಲದವರು 29 ರೂ.ಗೆ ಗುಣಮಟ್ಟದ ಅಕ್ಕಿ ಸಿಗುತ್ತದೆ ಎಂದು ಖುಷಿಪಟ್ಟಿದ್ದರು. ಆದರೆ, ಕೆಲವರು ಹುಡುಕಿ ಹುಡುಕಿ ಸುಸ್ತಾದರು. ಇದೀಗ ಅದು ಸ್ಥಗಿತಗೊಂಡಿದೆ.
5 ಸಾವಿರ ಟನ್ ಮಾರಾಟ
”ಬೆಂಗಳೂರಿನಲ್ಲಿ 5 ಮೊಬೈಲ್ ವ್ಯಾನ್ಗಳೂ ಸೇರಿದಂತೆ ರಾಜ್ಯದೆಲ್ಲೆಡೆ ಬೆರಳೆಣಿಕೆ ಮೊಬೈಲ್ ವ್ಯಾನ್ಗಳ ಮೂಲಕ ಅಕ್ಕಿ ಮಾರಾಟ ಮಾಡಲಾಗುತ್ತಿತ್ತು. ಭಾರತ್ ಅಕ್ಕಿಗೆ ಗ್ರಾಹಕರಿಂದ ಹೆಚ್ಚಿನ ಬೇಡಿಕೆಯಿದ್ದು, ಈವರೆಗೆ ಅಕ್ಕಿ, ಗೋಧಿ ಹಿಟ್ಟು, ಕಡ್ಲೆಬೇಳೆ ಸೇರಿದಂತೆ ಸುಮಾರು 5 ಸಾವಿರ ಟನ್ ಮಾರಾಟ ಮಾಡಲಾಗಿದೆ” ಎಂದು ನಾಫೆಡ್ನ ಕರ್ನಾಟಕ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ.
ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜು ಸಮೀಪದ ನಾಫೆಡ್ ಕಚೇರಿ ಆವರಣ, ರಿಲಯನ್ಸ್ ಮಾರ್ಟ್, ಜಿಯೊ ಮಾರ್ಟ್ ಸೇರಿದಂತೆ ಕೆಲವು ಮಾಲ್ಗಳು ಮತ್ತು ಮೊಬೈಲ್ ವ್ಯಾನ್ಗಳ ಮೂಲಕ ಭಾರತ್ ಅಕ್ಕಿ ಮಾರಾಟ ಮಾಡಲಾಗುತ್ತಿತ್ತು. ಬೆಂಗಳೂರು ಹೊರತುಪಡಿಸಿ ಆಯ್ದ ಜಿಲ್ಲೆಗಳಲ್ಲಿ ಕಡಲೆ ಬೇಳೆಯನ್ನು ಪ್ರತಿ ಕೆ.ಜಿ.ಗೆ 60 ರೂ.ನಂತೆ 5 ಕೆ.ಜಿ. ಸಾಮರ್ಥ್ಯದ ಬ್ಯಾಗ್ ನೀಡಲಾಗುತ್ತಿತ್ತು.
ಭಾರತ್ ಅಕ್ಕಿ ಸದ್ಯ ದಾಸ್ತಾನಿಲ್ಲ. ಜೂನ್ ತಿಂಗಳ ಮಧ್ಯದವರೆಗೆ ಸರಬರಾಜಾಗಿತ್ತು. ದಾಸ್ತಾನು ಇರುವವರೆಗೆ ವಿತರಿಸಲಾಯಿತು. ಜುಲೈ 1ರಿಂದ ವಿತರಣೆಗೆ ದಿನಸಿ ಇಲ್ಲ. ಇದೀಗ ಕೇಂದ್ರ ಸರಕಾರ ಭಾರತ್ ಅಕ್ಕಿ ವಿತರಣೆ ಸಂಬಂಧ ಹೊಸ ನೀತಿ ಜಾರಿಗೆ ತರಲು ಚಿಂತನೆ ಮಾಡಿದೆ. ಹೊಸ ನೀತಿಯಲ್ಲಿ ಏನೇನು ಅಂಶಗಳಿರುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ವಿನಯ್ಕುಮಾರ್, ನಾಫೆಡ್ ಕರ್ನಾಟಕ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ.
ಕುಂಠಿತಗೊಂಡ ಭತ್ತಉತ್ಪಾದನೆ
ಕಳೆದ ವರ್ಷ ಮಳೆ ಕೊರತೆಯಿಂದಾಗಿ ಭತ್ತದ ಉತ್ಪಾದನೆ ಕುಂಠಿತಗೊಂಡಿದೆ. ಹೀಗಿರುವಾಗ 29 ರೂ.ಗೆ ಭಾರತ್ ಅಕ್ಕಿ ವಿತರಿಸುವುದು ಸರಕಾರಕ್ಕೆ ಭಾರಿ ಹೊರೆಯಾಗುತ್ತದೆ. ಅಲ್ಲದೆ, ದೇಶಾದ್ಯಂತ ಈ ಯೋಜನೆ ಜಾರಿಯಲ್ಲಿರುವುದರಿಂದ ಪೂರೈಕೆ ಕಷ್ಟ. ಹೀಗಾಗಿ, ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
ಭಾರತ್ ಅಕ್ಕಿ’ ಯೋಜನೆ:
- 2024ರ ಫೆ.2 ರಿಂದ ಆರಂಭ
- ಅಕ್ಕಿ 29 ರೂ., ಗೋಧಿಹಿಟ್ಟು 27.50 ರೂ. ಕಡ್ಲೆಬೇಳೆ 60 ರೂ.
- ಅಕ್ಕಿ, ಗೋಧಿ ತಲಾ 10 ಕೆ.ಜಿ., ಕಡ್ಲೆಬೇಳೆ 5 ಕೆ.ಜಿ. ಬ್ಯಾಗ್
- ಮೊಬೈಲ್ ವ್ಯಾನ್ಗಳು, ಮಾಲ್ಗಳಲ್ಲಿ ವಿತರಿಸಲಾಗುತ್ತಿತ್ತು
ಸ್ಥಳೀಯ
Rakshit Shivaram-ವಳಾಲು ಟೋಲ್ ದರ ರೂ.250ಕ್ಕೆ ಏರಿಕೆ : ಬಿಜೆಪಿಯವರಿಗೂ ಪಾಲಿದೆಯಾ..? ಶಾಸಕರ ಮೌನಕ್ಕೆ ರಕ್ಷಿತ್ ಶಿವರಾಂ ಗರಂ
ಉಪ್ಪಿನಂಗಡಿ ಸಮೀಪದ ವಳಾಲು ಟೋಲ್ ಗೇಟ್ನಲ್ಲಿ ಏಕಾಏಕಿ ಟೋಲ್ ದರ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತೀವ್ರವಾಗಿ ಖಂಡಿಸಿದ್ದಾರೆ. ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹಾಗೂ ಬಿಜೆಪಿ ನಾಯಕರು, ಕೇಂದ್ರ ಸರ್ಕಾರದ ಟೋಲ್ ದರ ಏರಿಕೆ ವಿರುದ್ಧ ಮೌನ ವಹಿಸಿರುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಬೆಳ್ತಂಗಡಿ: ಉಪ್ಪಿನಂಗಡಿ ಸಮೀಪದ ವಳಾಲು ಟೋಲ್ ಗೇಟ್ನಲ್ಲಿ ಏಕಾಏಕಿ ಟೋಲ್ ದರ ಹೆಚ್ಚಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತೀವ್ರವಾಗಿ ಖಂಡಿಸಿದ್ದಾರೆ. ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹಾಗೂ ಬಿಜೆಪಿ ನಾಯಕರು, ಕೇಂದ್ರ ಸರ್ಕಾರದ ಟೋಲ್ ದರ ಏರಿಕೆ ವಿರುದ್ಧ ಮೌನ ವಹಿಸಿರುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ರಕ್ಷಿತ್ ಶಿವರಾಂ, ವಳಾಲು ಟೋಲ್ ಗೇಟ್ನಲ್ಲಿ ವಾಹನ ಸವಾರರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಮೂಲಕ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಹೊಸ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸುವ ಸಂದರ್ಭದಲ್ಲೇ ರಸ್ತೆ ತೆರಿಗೆ ಪಾವತಿಸಲಾಗುತ್ತಿದ್ದರೂ, ರಸ್ತೆ ಬಳಕೆಯ ಹೆಸರಿನಲ್ಲಿ ಮತ್ತೆ ಮತ್ತೆ ಟೋಲ್ ಶುಲ್ಕ ಹೆಚ್ಚಿಸುತ್ತಿರುವುದು ಎಷ್ಟು ಸಮಂಜಸ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ನಿಯಮಗಳ ಪ್ರಕಾರ ಎರಡು ಟೋಲ್ ಪ್ಲಾಜಾಗಳ ನಡುವೆ ನಿಗದಿತ ಅಂತರ ಇರಬೇಕು. ಆದರೆ, ಬ್ರಹ್ಮರಕೊಟ್ಟು ಟೋಲ್ ಗೇಟ್ನಿಂದ 35 ಕಿ.ಮೀ.ಗಿಂತ ಕಡಿಮೆ, ಕೇವಲ 32 ಕಿ.ಮೀ. ಅಂತರದಲ್ಲೇ ವಳಾಲು ಟೋಲ್ ಆರಂಭಿಸಿ ಎರಡು ಕಡೆ ಶುಲ್ಕ ವಸೂಲಿ ಮಾಡುತ್ತಿರುವುದು ನಿಯಮಬಾಹಿರ ಎಂದು ರಕ್ಷಿತ್ ಶಿವರಾಂ ದೂರಿದ್ದಾರೆ.
ವಳಾಲು ಭಾಗದ ಸ್ಥಳೀಯರು ಬ್ಯಾಂಕ್, ಸಹಕಾರಿ ಹಾಲು ಡಿಪೋ, ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳಿಗೆ ತೆರಳುವಂತಹ ದೈನಂದಿನ ಚಟುವಟಿಕೆಗಳಿಗೂ ಪ್ರತಿನಿತ್ಯ ₹250 ವರೆಗೆ ಟೋಲ್ ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಜನವಿರೋಧಿ ಟೋಲ್ ದರ ಏರಿಕೆ ವಿರುದ್ಧ ಧ್ವನಿ ಎತ್ತದಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಟೀಕಿಸಿದ್ದಾರೆ.
ವಾಹನ ಸವಾರರಿಗೆ ಹೊರೆಯಾಗುವ ರೀತಿಯಲ್ಲಿ ಟೋಲ್ ದರ ಹೆಚ್ಚಿಸಿರುವ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಪ್ರಶ್ನಿಸುವ ಧೈರ್ಯ ಶಾಸಕರಿಗಿದೆಯೇ ಎಂದು ರಕ್ಷಿತ್ ಶಿವರಾಂ ಸವಾಲು ಹಾಕಿದ್ದಾರೆ.
ವಳಾಲು ಟೋಲ್ ದರ ಏರಿಕೆಯನ್ನು ತಕ್ಷಣ ಮರುಪರಿಶೀಲಿಸಿ ಜನಸಾಮಾನ್ಯರಿಗೆ ನ್ಯಾಯ ಒದಗಿಸಬೇಕು. ಟೋಲ್ ದರ ನಿಗದಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದರ ಜೊತೆಗೆ ಸ್ಥಳೀಯರಿಗೆ ವಿನಾಯಿತಿ ನೀಡಬೇಕು. ಬ್ರಹ್ಮರಕೊಟ್ಟು ಟೋಲ್ ಗೇಟ್ ತೆರವುಗೊಳಿಸಬೇಕು ಹಾಗೂ ಬೆಳ್ತಂಗಡಿ ತಾಲೂಕಿನ ಪಣಕಜೆಯಲ್ಲಿ ಉದ್ದೇಶಿತ ಟೋಲ್ ಗೇಟ್ ಯೋಜನೆಯನ್ನು ಕೈಬಿಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅಂತರ ರಾಜ್ಯ
Women’s reservation-ಮಹಿಳಾ ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಕೇಂದ್ರ ಸಂಪುಟ ಅಸ್ತು; ಲೋಕಸಭೆ ಸ್ಥಾನಗಳ ಸಂಖ್ಯೆ ಶೇ.50 ಹೆಚ್ಚಳ?
ಕ್ಷೇತ್ರ ಮರುವಿಂಗಡಣೆ ಮೂಲಕ ಮಹಿಳಾ ಮೀಸಲಾತಿ ಜಾರಿಗೆ ತರುವ ಉದ್ದೇಶದ ಸಂವಿಧಾನ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.
ಹೊಸದಿಲ್ಲಿ: ಕ್ಷೇತ್ರ ಮರುವಿಂಗಡಣೆ ಮೂಲಕ ಮಹಿಳಾ ಮೀಸಲಾತಿ ಜಾರಿಗೆ ತರುವ ಉದ್ದೇಶದ ಸಂವಿಧಾನ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ವರದಿಯಾಗಿದೆ.
ಮುಂದಿನ ವಾರ ಸಂಸತ್ತಿನಲ್ಲಿ ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ಅಂಗೀಕರಿಸುವ ಪ್ರಯತ್ನಕ್ಕೆ ವೇಗ ನೀಡುವ ಉದ್ದೇಶದಿಂದ ಶುಕ್ರವಾರ ಕೇಂದ್ರ ಸಚಿವ ಸಂಪುಟವು ಮಹತ್ವದ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ.
ಪ್ರಸ್ತಾವನೆಯ ಪ್ರಕಾರ, ಎಲ್ಲಾ ರಾಜ್ಯಗಳಲ್ಲೂ ಸಮಾನ ಅನುಪಾತದಲ್ಲಿ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಶೇ.50ರಷ್ಟು ಹೆಚ್ಚಿಸುವ ಯೋಜನೆ ರೂಪಿಸಲಾಗಿದೆ. ಈ ಕ್ರಮವು ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಆತಂಕಗಳನ್ನು ನಿವಾರಿಸುವ ನಿಟ್ಟಿನಲ್ಲಿ ಪ್ರಮುಖ ಬೇಡಿಕೆಗೆ ಅನುಗುಣವಾಗಿದೆ ಎಂದು ಹೇಳಲಾಗಿದೆ.
ರಾಜಕೀಯ
Kumaraswamy-ಹಳ್ಳಿಯ ಪ್ರತಿ ಹೆಣ್ಣುಮಕ್ಕಳಿಗೆ 2 ಹಸು ಉಚಿತ..! 2028ರ ಎನ್ಡಿಎ ಯೋಜನೆ ಘೋಷಿಸಿದ ಕುಮಾರಸ್ವಾಮಿ
ರಾಜ್ಯದಲ್ಲಿ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಎನ್ಡಿಎ ಅಧಿಕಾರಕ್ಕೆ ಬಂದರೆ ಗ್ರಾಮೀಣ ಪ್ರದೇಶದ ಪ್ರತಿ ಹೆಣ್ಣುಮಕ್ಕಳಿಗೆ ಎರಡು ಹಸುಗಳನ್ನು ಉಚಿತವಾಗಿ ನೀಡುವುದಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಎನ್ಡಿಎ ಅಧಿಕಾರಕ್ಕೆ ಬಂದರೆ ಗ್ರಾಮೀಣ ಪ್ರದೇಶದ ಪ್ರತಿ ಹೆಣ್ಣುಮಕ್ಕಳಿಗೆ ಎರಡು ಹಸುಗಳನ್ನು ಉಚಿತವಾಗಿ ನೀಡುವುದಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.
ಗುರುವಾರ ಬೆಂಗಳೂರಿನ ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2028ರಲ್ಲಿ ರಾಜ್ಯದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಹಳ್ಳಿಗಳಲ್ಲಿನ ಪ್ರತಿ ಹೆಣ್ಣುಮಕ್ಕಳಿಗೆ ಎರಡು ಹಸುಗಳನ್ನು ನೀಡುವ ಯೋಜನೆ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳಿಗಾಗಿ ಚಿಕ್ಕಚಿಕ್ಕ ಮಕ್ಕಳೊಂದಿಗೆ ಪ್ರತಿಭಟನೆ ನಡೆಸುತ್ತಿದ್ದರೂ, ಸರ್ಕಾರ ಅವರ ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದರು. ಮುಖ್ಯಮಂತ್ರಿಗಳು ಅಧಿಕಾರಿಗಳೊಂದಿಗೆ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳುತ್ತಾರೆ. ಆದರೆ, ಭಾರತ್ ಜೋಡೋ ಸಂಘಗಳ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರಿಗೆ ಪ್ರತಿ ಪಂಚಾಯತ್ಗೆ 10 ಲಕ್ಷ ರೂ.ಗಳಂತೆ ಒಟ್ಟು 1,000 ಕೋಟಿ ರೂ. ನೀಡಲು ಯಾವ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಪ್ರಶ್ನಿಸಿದರು.
1,000 ಕೋಟಿ ರೂ. ನೀಡಲು ಯಾವ ಅಧಿಕಾರಿ ಸಲಹೆ ನೀಡಿದರು? ಅಷ್ಟು ಹಣವನ್ನು ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿದ್ದರೆ, ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸಿ ಅವರ ಗೌರವಧನ ಹೆಚ್ಚಿಸಲು 350 ಕೋಟಿ ರೂ. ನೀಡಲು ಸಾಧ್ಯವಿಲ್ಲವೇ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.















