Uncategorized
ಜೈಲಿನಿಂದ ಬಿಡುಗಡೆಗೊಂಡಿದ ನಟೋರಿಯಸ್ ರೌಡಿ ಆಕಾಶಭವನ ಶರಣ್ ಮತ್ತೆ ಅಂದರ್ | ಅಂಡರ್ ವರ್ಲ್ಡ್ ನಲ್ಲಿ ʼಹವಾʼ ಸೃಷ್ಟಿಸಲು ಸಹಚರರ ಜತೆ ಸೇರಿ ರೌಡಿ ಶೀಟರ್ ಗೆ ಬೆದರಿಕೆ ಹಾಕಿದ್ದ ಹಾಗೂ ಬೈಕ್ ಸವಾರನನ್ನು ಸುಲಿಗೆ ಮಾಡಿದ್ದ
ಮಂಗಳೂರು : ಜ 14 : ಎರಡು ತಿಂಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದ ನಟೋರಿಯಸ್ ಕ್ರಿಮಿನಲ್ ಆಕಾಶಭವನ ಶರಣ್ ಯಾನೆ ಶರಣ್ ರೋಹಿದಾಸ್ ಮತ್ತೊಂದು ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ಮತ್ತೆ ಜೈಲು ಪಾಲಾಗಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಈತನ ವಿರುದ್ದ ಕೊಲೆ, ಅತ್ಯಾಚಾರ, ರಾಬರಿಯಂತಹ ಹೀನ ಕೃತ್ಯ ಎಸಗಿರುವ ಬಗ್ಗೆ ಪ್ರಕರಣಗಳು ದಾಖಲಾಗಿವೆ.
ಜೈಲಿನಿಂದ ಹೊರ ಬಂದ ತಿಂಗಳ ಒಳಗಡೆ ಈತ ತನ್ನ ಸಹಚರರ ಜತೆ ಸೇರಿ ಬೈಕ್ ಸವಾರನೊಬ್ಬನನ್ನು ತಡೆದು ಸುಲಿಗೆ ಮಾಡಿದ್ದಾನೆ. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಕೃತ್ಯ ನಡೆದ ತಿಂಗಳ ಬಳಿಕ ಆರೋಪಿ ಆಕಾಶಭವನ ಶರಣ್ ಹಾಗೂ ಆತನ ಸಹಚರರನ್ನು ಬಂಧಿಸಿದ್ದಾರೆ. ಕಳೆದ ಎರಡು ವರ್ಷಕ್ಕೂ ಅಧಿಕ ಕಾಲ ಜೈಲು ಕಂಬಿ ಎಣಿಸುತ್ತಿದ್ದ ಈತ ನ .12 ರಂದು ಬಿಡುಗಡೆಗೊಂಡಿದ್ದ.
ಅದಾದ ಹೆಚ್ಚು ಕಮ್ಮಿ ಒಂದು ತಿಂಗಳ ಒಳಗಡೆ ಅಂದರೇ ಡಿ 8 ರಂದು ರಾತ್ರಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೇಳಾರು ನಂದಿನಿ ಸೇತುವೆ ಬಳಿ ಈತ ಹಾಗೂ ಇವನ 4 ಮಂದಿ ಸಹಚರರು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಹಳೆಯಂಗಡಿ ನಿವಾಸಿಯೊಬ್ಬರನ್ನು ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ ಮೊಬೈಲ್ , ನಗದು ರೂ. 3000 ಹಾಗೂ ದ್ವಿಚಕ್ರ ವಾಹನವನ್ನು ಕಿತ್ತುಕೊಂಡಿದ್ದರು. ಈ ಬಗ್ಗೆ ದ್ವಿಚಕ್ರ ವಾಹನ ಸವಾರ ಸುರತ್ಕಲ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಮಂಗಳೂರು ಸಿಸಿಬಿ ಪೊಲೀಸರು ಆಕಾಶಭವನ ಶರಣ್ ರೋಹಿದಾಸ್ (38) ಹಾಗೂ ಆತನ ಇತರ ನಾಲ್ವರು ಸಹಚರರನ್ನು ಬಂಧಿಸಿದ್ದಾರೆ. ಕಂಕನಾಡಿ ನಿವಾಸಿ ಅನಿಲ್ ಕುಮಾರ್ ಸಾಲ್ಯಾನ್ ಯಾನೆ ಅನಿಲ್ ಪಂಪ್ವೆಲ್(40), ಬಜ್ಪೆ ನಿವಾಸಿ ಸೈನಾಲ್ ಡಿ ಸೋಜಾ(22), ಪರಂಗಿಪೇಟೆ ನಿವಾಸಿ ಪ್ರಸಾದ್ (39), ಜಪ್ಪಿನಮೊಗರು ನಿವಾಸಿ ಚೇತನ್ ಕೊಟ್ಟಾರಿ(35) ಬಂಧಿತ ಇತರರು. ಇವರೆಲ್ಲಾ ಗ್ಯಾಂಗ್ ಮುಖಂಡ ಶರಣ್ ಅಣತಿಯಂತೆ ಕೃತ್ಯ ಎಸಗಿದವರು.

ಪ್ರಮುಖ ಆರೋಪಿ ಆಕಾಶ್ ಭವನ ಶರಣ್ ವಿರುದ್ದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 6 ಕೊಲೆ, 2 ಅತ್ಯಾಚಾರ, 2 ಕೊಲೆ ಯತ್ನ, 2 ದರೋಡೆಗೆ ಯತ್ನ, 4 ಹಲ್ಲೆ, 1 ದರೋಡೆ ಮತ್ತು ಎನ್ ಡಿಪಿಎಸ್ ಕಾಯ್ದೆ, ಕಳವು, ಹಫ್ತಾ ವಸೂಲಿ ಸೇರಿದಂತೆ 22 ಪ್ರಕರಣಗಳು ದಾಖಲಾಗಿವೆ. ಈತನ ಮೇಲೆ ಕಾವೂರು ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದೆ. ಈತನಿಗೆ ವಿದೇಶದಲ್ಲಿ ಅಡಗಿರುವ ಕೆಲ ಭೂಗತ ಪಾತಕಿಗಳ ಕಾಂಟ್ಯಕ್ಟ್ ಇದ್ದು ಅವರ ಇಷಾರೆಯ ಮೇರೆಗೂ ಪಾತಕ ಕೃತ್ಯಗಳನ್ನು ಎಸಗಿರುವುದನ್ನು ಈಗಾಗಲೇ ಪೊಲೀಸರು ಕಂಡುಕೊಂಡಿದ್ದಾರೆ. ನಟೋರಿಯಸ್ ರೌಡಿ ಎಲಿಮೆಂಟ್ ದ.ಕ ಜಿಲ್ಲೆಯ ವಿಟ್ಲದ ಪ್ರಸ್ತುತ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ವಿಕ್ಕಿ ಶೆಟ್ಟಿಗೂ ಈತನಿಗೂ ನಿಕಟ ಸಂಪರ್ಕಗಳಿವೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.
ಸುರತ್ಕಲ್ ರಾಬರಿ ಪ್ರಕರಣದ ಬಂಧಿತರ ವಿಚಾರಣೆ ವೇಳೆ ಆರೋಪಿಗಳು ತಂಡವಾಗಿ ಇನ್ನೊಂದು ದುಷ್ಕೃತ್ಯಕ್ಕೆ ಸಂಚು ರೂಪಿಸಿದ್ದು ಪತ್ತೆಯಾಗಿದೆ. ತನ್ನ ವಿರೋಧಿ ಗುಂಪಿನ ರೌಡಿಶೀಟರ್ಗೆ ಬೆದರಿಕೆ ಹಾಕಿರುವುದು ಹಾಗೂ ಇದಕ್ಕೆ ಸುರತ್ಕಲ್ ನಲ್ಲಿ ಸುಲಿಗೆ ಮಾಡಿದ ಮೊಬೈಲ್ ಫೋನ್ ಅನ್ನು ಬಳಕೆ ಮಾಡಿರುವುದನ್ನು ಆರೋಪಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ. ಅಂಡರ್ ವರ್ಲ್ಡ್ ದುನಿಯಾದಲ್ಲಿ ಹವಾ ಸೃಷ್ಟಿಸಲು ಹಾಗೂ ಆ ಮೂಲಕ ತಾನೊಬ್ಬ ಕುಖ್ಯಾತ ಹಾಗೂ ಡೇಂಜರಸ್ ರೌಡಿ ಎಂಬ ಭಯವನ್ನು ಸಮಾಜದ ಮಧ್ಯೆ ಬಿತ್ತುವ ಉದ್ದೇಶದಿಂದ ಶರಣ್ ಈ ರೀತಿ ಬೆದರಿಕೆ ಹಾಕಿರುವುದು ತನಿಖೆಯಿಂದ ತಿಳಿದುಬಂದಿದೆ.

ಆರೋಪಿಗಳ ಪೈಕಿ ಅನಿಲ್ ಪಂಪ್ʼವೆಲ್ ಎಂಬಾತನು ಈ ಹಿಂದೆ ಶರಣ್ ರೋಹಿದಾಸ್ ಆಕಾಶಭವನ ಇಷಾರೆಯಲ್ಲಿ ನಡೆದ ಚಿತ್ರ ನಟ , ಫೈನಾನ್ಸಿಯರ್ ಸುರೇಂದ್ರ ಬಂಟ್ವಾಳ ಕೊಲೆ ಪ್ರಕರಣದಲ್ಲಿ ಬಾಗಿಯಾಗಿದ್ದ. ಈ ಕೊಲೆಯನ್ನು ಶರಣ್ ಬೆಳಗಾವಿಯ ಹಿಂಡಾಲಗ ಜೈಲಿನಲ್ಲಿ ಕೂತು ಮಾಡಿಸಿದ್ದ. ಬಂಟ್ವಾಳ ನಗರ ಠಾಣೆಯಲ್ಲಿ ದಾಖಲದ ಸುರೇಂದ್ರ ಕೊಲೆ ಪ್ರಕರಣದಲ್ಲಿ ಶರಣ್ ಪ್ರಮುಖ ಆರೋಪಿಯಾಗಿದ್ದಾನೆ.
ಅನಿಲ್ ಪಂಪ್ʼವೆಲ್ ವಿರುದ್ದ ಸುರೇಂದ್ರ ಮರ್ಡರ್ ಜತೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇಕ್ಬಾಲ್ ಕೊಲೆ ಪ್ರಕರಣ, ಕಂಕನಾಡಿ ನಗರ ಠಾಣೆಯಲ್ಲಿ 2 ಕೊಲೆ ಯತ್ನ ಪ್ರಕರಣ, ಬರ್ಕೆ ಪೊಲೀಸ್ ಠಾಣೆಯಲ್ಲಿ ಉದ್ಯಮಿಯೊಬ್ಬರಿಗೆ ಶೂಟೌಟ್ ಮಾಡಿ ಕೊಲೆಗೆ ಯತ್ನಿಸಿದ ಪ್ರಕರಣ ದಾಖಲಾಗಿದೆ. ಈತ ಕೂಡ ರೌಡಿಶೀಟರ್ ಆಗಿದ್ದು ಈತನ ವಿರುದ್ದ ಕಂಕನಾಡಿ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದೆ. ಪ್ರಕರಣದಲ್ಲಿ ಬಂಧಿತಬಾಗಿರುವ ಇನ್ನೊಬ್ಬ ಆರೋಪಿ ಸೈನಲ್ ಡಿ ಸೋಜಾ ಎಂಬಾತ ಈ ಹಿಂದೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಗಣೇಶ್ ಎಂಬಾತನ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಈ ಪ್ರಕರಣದಲ್ಲಿ ಅನಿಲ್ ಪಂಪ್ವೆಲ್ ಕೂಡ ಭಾಗಿಯಾಗಿದ್ದ
15 ದಿನಗಳ ಹಿಂದೆ ರೌಡಿಶೀಟ್ ಪಟ್ಟಿಯಿಂದ ಕೈ ಬಿಡಲಾದವನ ಹೆಸರು ಮತ್ತೆ ರೌಡಿಶೀಟರ್ ನಲ್ಲಿ !
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯಗಳಿಂದ ದೂರವಾಗಿ ಸಮಾಜದಲ್ಲಿ ಉತ್ತಮ ನಡತೆಯೊಂದಿಗೆ ಜೀವನ ರೂಪಿಸಿಕೊಂಡ ಹಲವು ಮಂದಿಯ ಹೆಸರನ್ನು ಇತ್ತೀಚೆಗೆ ರೌಡಿ ಶೀಟ್ ಪಟ್ಟಿಯಿಂದ ತೆಗೆದು ಹಾಕಲಾಗಿತ್ತು. ಅದರಲ್ಲಿ ಇದೀಗ ಬಂಧಿತನಾಗಿರುವ ಆರೋಪಿ ಚೇತನ ಕೊಟ್ಟಾರಿ ಸೇರಿದ್ದ. ಈ ಪ್ರಕರಣದ ಬಳಿಕ ಆತನ ಮೇಲೆ ಹೊಸತಾಗಿ ರೌಡಿಶೀಟರ್ ತೆರೆಯಲಾಗಿದೆ. ಇನ್ನೂ ಶರಣ್ ವಿರುದ್ದ ಗೂಂಡಾಕಾಯ್ದೆ ಹೇರುವ ಬಗ್ಗೆಯೂ ನಡೆಯುತ್ತಿದೆಯೆಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ
ಗೋಷ್ಠಿಯಲ್ಲಿ ಡಿಸಿಪಿಗಳಾದ ದಿನೇಶ್ ಕುಮಾರ್, ಹರಿರಾಂ ಶಂಕರ್, ಎಸಿಪಿ ರವೀಶ್ ಮೊದಲಾದವರು ಉಪಸ್ಥಿತರಿದ್ದರು.
Uncategorized
Philomena-ಸಂತ ಫಿಲೋಮಿನಾ ಪ. ಪೂ ಕಾಲೇಜಿನಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಸಿದ್ಧತೆಯ ಕುರಿತು ಮಾಹಿತಿ ಕಾರ್ಯಗಾರ
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವಾಣಿಜ್ಯ ಸಂಘದ ಆಶ್ರಯದಲ್ಲಿ ನ 25 ರಂದು ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಯ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು
ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವಾಣಿಜ್ಯ ಸಂಘದ ಆಶ್ರಯದಲ್ಲಿ ನ 25 ರಂದು ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ
ಪರೀಕ್ಷಾ ಸಿದ್ಧತೆಯ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಪುತ್ತೂರಿನ ಲಕ್ಷ್ಯ ಕೌನ್ಸೆಲಿಂಗ್ ಸೆಂಟರ್ ನ ಮಕ್ಕಳ
ಸಲಹೆಗಾರರಾದ ದುರ್ಗಾಪರಮೇಶ್ವರ ಭಟ್ ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಮಾರ್ಗದರ್ಶಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪರೀಕ್ಷಾ ಸಿದ್ಧತೆ ಮತ್ತು ತರಗತಿಯ ಶಿಸ್ತು ಅತೀ ಮುಖ್ಯವಾಗಿದ್ದು, ಇಂದಿನ ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳು ಸದಾ ಚುರುಕಾಗಿರಬೇಕು. ಕಾಲಕ್ಕೆ ತಕ್ಕಂತೆ ಆಗುವ ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದರ ಜೊತೆಗೆ, ಉತ್ತಮ ಮಾಹಿತಿ ಹಾಗೂ ಜ್ಞಾನವನ್ನು ನಿರಂತರವಾಗಿ ಪಡೆದುಕೊಳ್ಳುತ್ತಿರಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಾಣಿಜ್ಯ ವಿದ್ಯಾರ್ಥಿಗಳು ಮಾನಸಿಕವಾಗಿ ಅತ್ಯಂತ ದೃಢವಾಗಿರಬೇಕು. ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ, ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು.
ವಾಣಿಜ್ಯ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳಿಗೆ ಸದೃಢವಾದ ಮನಸ್ಸು ಇರಬೇಕು. ಹೊಸ ಆಲೋಚನೆಗಳು, ಸೃಜನಶೀಲತೆ ಮತ್ತು ವೃತ್ತಿಪರ ಕೌಶಲ್ಯಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ವಾಣಿಜ್ಯ ಸಂಘದ ನಿರ್ದೇಶಕರಾದ ಭರತ್ ಜಿ ಫೈ ಹಾಗೂ ಪೂರ್ಣಿಮಾ ಡಿ. ಎಸ್ ಉಪಸ್ಥಿತರಿದ್ದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗ ಮತ್ತು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿಗಳಾದ ದೇಶ್ನ ಎ. ಎಲ್ ಸ್ವಾಗತಿಸಿ, ಸ್ವಿನಿಕಾ ಎಸ್ ಲೋಬೋ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
Uncategorized
ಫುತ್ತೂರು : ಗುತ್ತಿಗೆದಾರರ ಸಹಾಯಕಿಗೆ ಲೈಂಗಿಕ ದೌರ್ಜನ್ಯ, ವಿಡಿಯೋ ಚಿತ್ರೀಕರಣ , ಕಾರು ಹತ್ತಿಸಲು ಯತ್ನ ಆರೋಪ; ಮೆಸ್ಕಾಂ ಸಿಬ್ಬಂದಿ ವಿರುದ್ಧ ಕೇಸ್

ಪುತ್ತೂರು: ವಿದ್ಯುತ್ ಕಾಮಗಾರಿಯ ಪರಿಶೀಲನೆಯ ನೆಪದಲ್ಲಿ ಗುತ್ತಿಗೆದಾರರ ಸಹಾಯಕಿಯನ್ನು ಸ್ವಂತ ಕಾರಿನಲ್ಲಿ ಕರೆದೊಯ್ದ ಮೆಸ್ಕಾಂ ಸಿಬ್ಬಂದಿಯೊಬ್ಬರು, ಮೆಸ್ಕಾಂ ಕ್ವಾಟ್ರಸ್ಗೆ ಬಲವಂತವಾಗಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಮೆಸ್ಕಾಂ ಸಿಬ್ಬಂದಿ ದುರ್ಗಾ ಸಿಂಗ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಪ್ರಕಾರ, ವಿದ್ಯುತ್ ಕಾಮಗಾರಿಯ ಪರಿಶೀಲನೆ ಮುಗಿದ ಬಳಿಕ ಮನೆಗೆ ಕರೆದೊಯ್ಯುವುದಾಗಿ ಹೇಳಿ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮೆಸ್ಕಾಂ ಕ್ವಾಟ್ರಸ್ಗೆ ಕರೆದೊಯ್ದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಕೃತ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ ಎನ್ನಲಾಗಿದೆ. ಮಹಿಳೆ ಬೊಬ್ಬೆ ಹಾಕಿ ಪ್ರತಿರೋಧ ವ್ಯಕ್ತಪಡಿಸಿ ಅಲ್ಲಿಂದ ತಪ್ಪಿಸಿಕೊಂಡು ಹೊರಬಂದಿದ್ದಾರೆ ಎಂದು ದೂರಲಾಗಿದೆ
ಘಟನೆ ಬಳಿಕ ಮೊಬೈಲ್ನಲ್ಲಿ ಚಿತ್ರೀಕರಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಉಂಗುರ ಕದ್ದಿರುವುದಾಗಿ ದೂರು ದಾಖಲಿಸುವುದಾಗಿ ಹೆದರಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜನಸಂಪರ್ಕ ಸಭೆಯಲ್ಲೂ ಪ್ರಸ್ತಾಪವಾಗಿತ್ತು!
ಈ ಪ್ರಕರಣದ ವಿಚಾರ ನ.5ರಂದು ಪುತ್ತೂರಿನಲ್ಲಿ ನಡೆದ ಮೆಸ್ಕಾಂ ಪುತ್ತೂರು ನಗರ ಹಾಗೂ ಗ್ರಾಮಾಂತರ ಉಪವಿಭಾಗದ ಜನಸಂಪರ್ಕ ಸಭೆಯಲ್ಲೂ ಪ್ರಸ್ತಾಪವಾಗಿತ್ತು. ಗುತ್ತಿಗೆದಾರರ ಸಹಾಯಕಿಯೊಬ್ಬರಿಗೆ ದೌರ್ಜನ್ಯ ಎಸಗಿರುವ ಆರೋಪ ಹಾಗೂ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ ಎಂಬ ಗಂಭೀರ ಆಕ್ಷೇಪ ಸಭೆಯಲ್ಲಿ ವ್ಯಕ್ತವಾಗಿತ್ತು. ಆದರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಮರ್ಪಕ ಉತ್ತರ ನೀಡದೆ ಅಧಿಕಾರಿಗಳು ನುಣುಚಿಕೊಂಡಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.
ದೂರು ದಾಖಲಿಸಲು ಹಿಂದೇಟು?
ಸಂತ್ರಸ್ತ ಮಹಿಳೆ ಪ್ರಕರಣ ದಾಖಲಿಸುವ ಉದ್ದೇಶದಿಂದ ಒಂದು ದಿನದ ಹಿಂದೆ ಪೊಲೀಸ್ ಠಾಣೆಗೆ ತೆರಳಿದ್ದರೂ, ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಅವರನ್ನು ಸಂಪರ್ಕಿಸಿದ ಹಿನ್ನೆಲೆಯಲ್ಲಿ, ಅವರ ಸೂಚನೆಯ ಮೇರೆಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ದೇವಸ್ಥಾನದ ಮುಂಭಾಗದಲ್ಲೂ ಬೆದರಿಕೆ ಆರೋಪ
ಸೋಮವಾರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ದುರ್ಗಾ ಸಿಂಗ್ ಅವರು ಸಂತ್ರಸ್ತೆಯನ್ನು ಕಾರಿಗೆ ಹತ್ತಿಸಲು ಯತ್ನಿಸಿದ್ದು, ವೇಗವಾಗಿ ಕಾರು ಚಲಾಯಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವನ್ನೂ ದೂರಿನಲ್ಲಿ ದಾಖಲಿಸಲಾಗಿದೆ.
ಕಾಮಗಾರಿಯ ಪರಿಶೀಲನೆಯ ನೆಪದಲ್ಲಿ ನಡೆದಿದೆಯೆನ್ನಲಾದ ಈ ಘಟನೆ, ಬಳಿಕ ಬೆದರಿಕೆ ಹಾಗೂ ಪ್ರಕರಣ ಮುಚ್ಚಿಹಾಕುವ ಯತ್ನದ ಆರೋಪಗಳೊಂದಿಗೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರಕರಣದ ಕುರಿತು ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.
Uncategorized
Vivekananda-ವಿವೇಕಾನಂದ ವಸತಿನಿಲಯದಲ್ಲಿ ತುಳಸಿಪೂಜೆ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಸಂಸ್ಕಾರಯುತ ಜೀವನದಿಂದ ನಿತ್ಯ ಸಂಭ್ರಮ:ವಿಜಯನಾರಾಯಣ ಕೆ.ಎಂ.
ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಗಳ ವಸತಿನಿಲಯದ ವತಿಯಿಂದ ನಡೆದ ತುಳಸಿಪೂಜೆ ಹಾಗೂ ವಸತಿ ನಿಲಯದ ಪಾಕಶಾಲಾ ಸಿಬ್ಬಂದಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ. ಮಾತನಾಡಿದರು.
ಪುತ್ತೂರು, ನ.21: ಪ್ರತಿಯೊಂದು ಪರ್ವಾಚರಣೆಗಳಿಗೂ ಅವುಗಳದ್ದಾದ ಹಿನ್ನೆಲೆಗಳಿದ್ದು ಹಿರಿಯರು ಅವುಗಳನ್ನು ಅರ್ಥಪೂರ್ಣವಾಗಿ ಆಚರಿಸಿ ನಮ್ಮ ತಲೆಮಾರಿಗೆ ಹಸ್ತಾಂತರಿಸಿದ್ದಾರೆ. ಯುವಕರಿಗೆ ವಿದ್ಯಾಭ್ಯಾಸ ಹಾಗೂ ಉದ್ಯೋಗ ಗಳಿಕೆ ಅತ್ಯಂತ ಮುಖ್ಯ ಹೌದು, ಆದರೆ ಬದುಕನ್ನು ಆ ಚೌಕಟ್ಟಿಗೆ ಮಾತ್ರ ಸೀಮಿತವಾಗಿಸದೇ ಅದರಿಂದಾಚೆಗಿನ ಅನೇಕ ಮೌಲ್ಯಯುತ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ನಾವು ನಮ್ಮ ಹಿರಿಯರ ಜೀವನೋತ್ಸಾಹದಿಂದ ಪ್ರೇರಣೆ ಪಡೆದು ಅನುದಿನದ ಪ್ರತೀಕ್ಷಣವನ್ನು ಹಬ್ಬದಂತೆ ಕಾಣಬೇಕಲ್ಲದೇ ನಮ್ಮ ಉತ್ತಮ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಬೇಕು ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ ನುಡಿದರು.
ಇವರು ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಗಳ ವಸತಿನಿಲಯದ ವತಿಯಿಂದ ನಡೆದ ತುಳಸಿಪೂಜೆ ಹಾಗೂ ವಸತಿ ನಿಲಯದ ಪಾಕಶಾಲಾ ಸಿಬ್ಬಂದಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದೇವಿಚರಣ್ ರೈ, ದೀಪಾವಳಿಗೆ ಬಲಿ ಚಕ್ರವರ್ತಿ ಭೂಮಿಗೆ ಬರುತ್ತಾನೆ ಎನ್ನುವ ಹಿನ್ನೆಲೆಯಿದ್ದು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ನಮ್ಮ ಹಬ್ಬಗಳು ಮತ್ತು ಪಾಲಿಸುವ ಸಂಸ್ಕೃತಿಯಿಂದ ಜೀವನುದ್ದಕ್ಕೂ ನಾವು ಅನೇಕ ವಿಷಯಗಳನ್ನು ಕಲಿಯುತ್ತೇವೆ. ಯುವಕರು ಜೀವನದ ನಿಜಾರ್ಥ ಏನೆಂಬುದನ್ನು ತಿಳಿಯುವ ಮೊದಲೇ ಅನಗತ್ಯ ಯೋಚನೆಗಳನ್ನು ಮೈಗೂಡಿಸಿಕೊಳ್ಳುವುದರ ಬದಲಾಗಿ ವಿದ್ಯಾಭ್ಯಾಸ ಹಾಗೂ ಉನ್ನತ ಸಂಸ್ಕಾರಗಳನ್ನು ಪಡೆದು ಸತ್ಪçಜೆಗಳಾಗಬೇಕು. ಹಬ್ಬದ ಒಳ್ಳೆಯ ವಾತಾವರಣ ಜೀವನದ ಉನ್ನತಿಗೆ ಸ್ಫೂರ್ತಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ವಿವೇಕಾನಂದ ವಸತಿನಿಲಯದ ಅಧ್ಯಕ್ಷ ರಮೇಶ್ ಪ್ರಭು ಪಾಕಶಾಸ್ತ್ರ ಎನ್ನುವುದು ಅತ್ಯುನ್ನತವಾದ ಸೇವೆ. ಬಾಣಸಿಗರು, ನಿಲಯಪಾಲಕರು ಮೊದಲಾದ ಸಿಬ್ಬಂದಿಗಳು ತಮ್ಮ ಸಮರ್ಪಣಾಭಾವದಿಂದ ವಸತಿನಿಲಯದ ವಿದ್ಯಾರ್ಥಿಗಳ ಕ್ಷೇಮಕ್ಕೋಸ್ಕರ ಕೆಲಸ ನಿರ್ವಹಿಸುತ್ತಾರೆ. ಅವರಿಗೆ ಗೌರವ ಸಮರ್ಪಿಸುವ ಕಾರ್ಯ ಶ್ಲಾಘನೀಯವಾದುದು ಎಂದು ತಿಳಿಸಿದರು.
ವಿವೇಕಾನಂದ ವಸತಿನಿಲಯದಲ್ಲಿ ಸೇವೆ ಸಲ್ಲಿಸುವ ಪಾಕಶಾಲಾ, ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮವನ್ನು ವಿವೇಕಾನಂದ ವಸತಿನಿಲಯದ ಆಡಳಿತಾಧಿಕಾರಿ ಗೋವಿಂದ ರಾಜ ಶರ್ಮ ಸ್ವಾಗತಿಸಿ, ಕಾರ್ಯದರ್ಶಿ ಸಚಿನ್ ಶೆಣೈ ವಂದಿಸಿದರು. ವಸತಿನಿಲಯದ ವಿದ್ಯಾರ್ಥಿನಿ ದೀಪಿಕಾ ನಿರೂಪಿಸಿದರು.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿರುವ ವಿವಿಧ ವಸತಿನಿಲಯಗಳಲ್ಲಿ ತುಳಸಿಪೂಜೆ ನೆರವೇರಿತು.
ವಸತಿನಿಲಯದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಿಡಿಮದ್ದು ಪ್ರದರ್ಶನ ಜರುಗಿದವು.
-
ನಿಧನ ವಾರ್ತೆ8 hours agoBeltangadi-ಬೆಳ್ತಂಗಡಿ: ವಿಷ ಸೇವಿಸಿ ಚಿಕಿತ್ಸೆ ಫಲಿಸದೆ ಐಟಿಐ ವಿದ್ಯಾರ್ಥಿ ಸಾವು
-
ನಿಧನ ವಾರ್ತೆ8 hours agoKolar-ಕೋಲಾರ: ಹೆದ್ದಾರಿ ಬದಿಯಲ್ಲಿ ಪಾರ್ಸೆಲ್ ರೂಪದಲ್ಲಿ ಮಹಿಳೆಯ ಮೃತದೇಹ ಪತ್ತೆ
-
ಅಂತರ ರಾಜ್ಯ7 hours agoViral video-ಚಲಿಸುತ್ತಿರುವ ರೈಲಿನ AC ಬೋಗಿಯಲ್ಲಿ ದೀಪ ಹಚ್ಚಿ ಆರತಿ, ಶಂಖನಾದ; ವೈರಲ್ ವಿಡಿಯೋಗೆ ರೈಲ್ವೆ ಪ್ರತಿಕ್ರಿಯೆ
-
ನಿಧನ ವಾರ್ತೆ7 hours agoKankanadi-ಶಾಲೆಯಿಂದ ನಡೆದು ಹೋಗುತ್ತಿದ್ದ ಎರಡನೇ ಕ್ಲಾಸ್ ವಿದ್ಯಾರ್ಥಿಗೆ ಖಾಸಗಿ ಬಸ್ ಡಿಕ್ಕಿ; ಕಂಕನಾಡಿಯಲ್ಲಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕ ಬಲಿ
-
ಸ್ಥಳೀಯ8 hours agoArrested-ಕುಂಭಾಶಿ ದೇವಸ್ಥಾನದಲ್ಲಿ ವೃದ್ಧೆಯ ಚಿನ್ನದ ಸರ ಕಳವು; ತಮಿಳುನಾಡಿನ ಮೂವರು ಮಹಿಳೆಯರ ಬಂಧನ
-
ಅಂತರ ರಾಜ್ಯ8 hours agoWhatsApp-WhatsApp ಬಳಕೆದಾರರಿಗೆ CERT-In ಎಚ್ಚರಿಕೆ; ಡೇಟಾ ಕದಿಯುವ, ಅಳಿಸುವ ಅಪಾಯ..!
-
ಅಂತರ ರಾಜ್ಯ7 hours agoWomen’s reservation-ಮಹಿಳಾ ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಕೇಂದ್ರ ಸಂಪುಟ ಅಸ್ತು; ಲೋಕಸಭೆ ಸ್ಥಾನಗಳ ಸಂಖ್ಯೆ ಶೇ.50 ಹೆಚ್ಚಳ?
-
ಸ್ಥಳೀಯ7 hours agoDharmasthala-ಪಾಣೇರು ಬಸದಿ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 5 ಲಕ್ಷ ಅನುದಾನ















