ಪುತ್ತೂರು
ಅಂದ್ರಟ್ಟದಲ್ಲಿ ಬೆದ್ರಾಳ ಹೊಳೆಗೆ ಸೇತುವೆ ನಿರ್ಮಾಣಕ್ಕೆ ಶಿಲಾನ್ಯಾಸ : ಅನುದಾನ ಸುಲಭ, ಪಕ್ಕದ ರಸ್ತೆ ಬಿಟ್ಟುಕೊಟ್ಟವರನ್ನು ಪ್ರಶಂಸಿಸಬೇಕು – ಅಶೋಕ್ ಕುಮಾರ್ ರೈ
ಪುತ್ತೂರು: ಜನರ ಸಹಕಾರದಿಂದ ರಸ್ತೆಗಳು ಅಭಿವೃದ್ದಿಯಾಗಲು ಸಾಧ್ಯ. ರಸ್ತೆಗಳಿಗೆ ಅನುದಾನ ಇಡುವುದು ಸುಲಭ, ಆದರೆ ಪಕ್ಕದ ರಸ್ತೆ ಬಿಟ್ಟುಕೊಟ್ಟರೆ ಮಾತ್ರ ಜೋಡಿಸುವ ಕೆಲಸ ಆಗುತ್ತದೆ. ಈ ನಿಟ್ಟಿನಲ್ಲಿ ಈ ಭಾಗದಲ್ಲಿ ರಸ್ತೆ ಬಿಟ್ಟುಕೊಟ್ಟವರನ್ನು ಪ್ರಶಂಸಿಸಬೇಕು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಬನ್ನೂರು ಗ್ರಾ.ಪಂ ವ್ಯಾಪ್ತಿಯ ಚಿಕ್ಕಮುಡ್ನೂರು ಗ್ರಾಮದ ಅಂದ್ರಟ್ಟದಲ್ಲಿ ಜಿಡೆಕಲ್ಲು ರಾಗಿದಕುಮೇರು ಮತ್ತು ಶಾಂತಿಗೋಡು ಗ್ರಾಮದ ಪುರುಷರಕಟ್ಟೆ ಸಂಪರ್ಕಿಸುವ ರಸ್ತೆಗೆ ರೂ. 1.80 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಜ.9ರಂದು ಅವರು ಹೊಳೆಯ ಪಕ್ಕದಲ್ಲೇ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಈ ಭಾಗದ ಜನರಿಗೆ ಮಳೆಗಾಲದಲ್ಲಿ ನಿರಂತರ ಹೋಗಲು ಸೇತುವೆ ನಿರ್ಮಾಣ ಆಗುತ್ತದೆ. ಇದರ ಜೊತೆಗೆ ರಸ್ತೆಗೆ ಜಾಗ ಬಿಟ್ಟುಕೊಟ್ಟವರನ್ನು ಅಭಿನಂದಿಸಬೇಕೆಂದ ಅವರು ಇವತ್ತು ಅನುದಾನಗಳು ಹರಿದು ಬರುತ್ತಿದೆ. ಇವತ್ತು ರೂ. 1.80 ಕೋಟಿ ವೆಚ್ಚದಲ್ಲಿ ಈ ಭಾಗದಲ್ಲಿ ಸೇತುವೆ ನಿರ್ಮಾಣ ಆಗುತ್ತದೆ. ಸುಮಾರು 7.5 ಮೀಟರ್ ಅಗಲ ಮತ್ತು ಸೇತುವೆ ಎರಡು ಕಡೆಯಲ್ಲಿ 50 ಮೀಟರ್ನಷ್ಟು ಡಾಮರೀಕರಣ ಆಗಲಿದೆ.
ಅದಷ್ಟು ಬೇಗ ಕಾಮಗಾರಿ ಮುಗಿದು ಜನರ ಬಳಕೆಗೆ ಪ್ರಯೋಜವಾಗಲಿ ಎಂದ ಅವರು ಚಿಕ್ಕಮುಡ್ನೂರು ಗ್ರಾಮದಕ್ಕೆ ಈ ವರ್ಷ ಬಹಳ ಅನುದಾನ ಬಂದಿದೆ.
ಯಾಕೆಂದರೆ ಕೆ.ಎಮ್.ಎಫ್ ಕೂಡಾ ಈ ಗ್ರಾಮಕ್ಕೆ ಬರುತ್ತದೆ. 170 ಕೋಟಿ ರೂಪಾಯಿ ಅನುದಾನದಲ್ಲಿ ಕೆಎಂಎಫ್ ಬಾಟ್ಲಿಂಗ್ ಪ್ಲಾಂಡ್ ಆರಂಭಗೊಳ್ಳುತ್ತದೆ. ಈಗಾಗಲೇ 15 ಎಕ್ರೆ ಜಾಗ ಖಾದಿರಿಸಲಾಗಿದೆ. ಮುಂದಿನ ದಿನ ಇನ್ನಷ್ಟು ಅನುದಾನ ನೀಡಲಾಗುತ್ತದೆ. ಒಟ್ಟಿನಲ್ಲಿ ಪುತ್ತೂರು ಟೂರಿಸಮ್ ಸೆಂಟರ್ ಆಗಬೇಕು. ಉದ್ದಿಮೆ ಬರಬೇಕು. ವಿದ್ಯಾಭ್ಯಾಸ ಇಲ್ಲದವರಿಂದ ಹಿಡಿದು ಡಬಲ್ಪದವಿ ಪಡೆದವರಿಗೂ ಕೆಲಸ ಸಿಗಬೇಕು ಎಂದರು.
ನರಿಮೊಗರು ಗ್ರಾ.ಪಂ ಮಾಜಿ ಸದಸ್ಯೆ ಮೋಹಿನಿ ಸುಂದರ ನಾಯ್ಕ, ತಾ.ಪಂ ಮಾಜಿ ಸದಸ್ಯ ಪರಮೇಶ್ವರ, ಕೊಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಕಾಂಗ್ರೆಸ ಮುಖಂಡ ಶಿವನಾಥ್ ರೈ ಮೇಗಿನಗುತ್ತು, ಕಾಂಗ್ರೆಸ್ ವಲಯದ್ಯಾಕ್ಷ ಲ್ಯಾನ್ಸಿ, ಹರೀಶ ಪಕ್ಕಳ, ಹನೀಫ್ ಪುಣ್ಚತ್ತಾರ್, ಜುನೈದ್ ದಾಸರಮೂಲೆ, ಅವಿನಾಶ್, ನಿತೇಶ್, ಅರುಣ, ಕಾರ್ತಿಕ್, ನಝೀರ್ ಮರಕ್ಕೂರ್, ಮಹಾಲಿಂಗ ನಾಯ್ಕ, ಚಂದ್ರಕಲಾ, ರಸ್ತೆಗೆ ಜಮೀನು ಬಿಟ್ಟುಕೊಟ್ಟ ಸುಂದರ ನಾಯ್ಕ, ಗೋಪಾಲ, ಆನಂದ, ಕಾರ್ತಿಕ್ ಶೆಟ್ಟಿ, ಕಿಟ್ಟಣ್ಣ ಶೆಟ್ಟಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ರೂ.75 ಕೋಟಿ ಅನುದಾನ ಬಿಡುಗಡೆಗೆ ಪ್ರಸ್ತಾವನೆ:
ಸರಕಾರದದಿಂದ ನಿರಂತರ ಅನುದಾನ ಹರಿದು ಬರುತ್ತಿದೆ. ಈಗಾಗಲೇ ರೂ. 75 ಕೋಟಿಯ ಅನುದಾನ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಮುಂದಿನ ತಿಂಗಳಲ್ಲಿ ರೂ.75 ಕೋಟಿ ಅನುದಾನ ಬಂದರೆ ಮುಂದೆ ಬಹುತೇಕ ರಸ್ತೆಗಳೆಲ್ಲ ಕಾಂಕ್ರೀಟಿಕರಣ ಆಗಲಿದೆ. ಇದರ ಜೊತೆಗೆ ಸರಕಾರದ ನಾಲ್ಕೈದು ಗ್ಯಾರಂಟಿ ಯೋಜನೆ ಜನರಿಗೆ ಬಹಳ ಪ್ರಯೋಜನ ಆಗುತ್ತಿದೆ.
ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು
ಬಹುಕಾಲದ ಬೇಡಿಕೆ ಈಡೇರಿಕೆಯ ಹಂತಕ್ಕೆ
ಅಂದ್ರಟ್ಟದಲ್ಲಿ ನನ್ನ ಅನುಭವಕ್ಕೆ ಬಂದಂತೆ ಸುಮಾರು ನೂರು ವರ್ಷದ ಹಳೆಯ ಹಲಗೆ ಅಣೆಕಟ್ಟು ಶಿಥಿಲಾವ್ಯವಸ್ಥೆಯಲ್ಲಿದ್ದು, ಆಗಿನ ಕಾಲದಲ್ಲೇ ಡಿ.ವಿ.ಸದಾನಂದ ಗೌಡರು ಶಾಸಕರಾಗಿದ್ದ ಸಮಯದಲ್ಲೇ ನಾವು ಸೇತುವೆಗೆ ಬೇಡಿಕೆ ಇಟ್ಟಿದ್ದೆವು. ಅದರೆ ಯಾವುದೇ ಪ್ರಯೋಜವಾಗಿಲ್ಲ. ಆ ಬಳಿಕ ರಸ್ತೆಗೆ ಜಾಗ ಬಿಟ್ಟುಕೊಟ್ಟ ಬಳಿಕ ಪಂಚಾಯತ್ ಅನುದಾನದಲ್ಲಿ ರಸ್ತೆ ಆಯಿತು. ಈಗ ನೂತನ ಶಾಸಕ ಅಶೋಕ್ ಕುಮಾರ್ ರೈ ಅವರು ನಮಗೆ ಸೇತುವೆ ನಿರ್ಮಾಣ ಮಾಡಿಸುವಲ್ಲಿ ಬಹಳ ದೊಡ್ಡ ಉಪಕಾರ ಮಾಡುವ ಮೂಲಕ ಭರವಸೆ ನೀಡಿದ್ದಾರೆ –
ಆನಂದ ಗೌಡ, ರಸ್ತೆ ಫಲಾನುಭವಿ
ಶಿಕ್ಷಣ
Vivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮವರ್ಷದ ವಿದ್ಯಾರ್ಥಿಗಳ ಹೆತ್ತವರ ಮತ್ತು ಪೋಷಕರ ಸಭೆ
ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲವಿಜ್ಞಾನ ವಿಭಾಗ ಮತ್ತು ಪೇರೆಂಟ್ ರಿಲೇಶನ್ ಸೆಲ್ ಇದರ ಸಂಯುಕ್ತ ಆಶ್ರಯದಲ್ಲಿ ಸಾವರ್ಕರ್ ಸಭಾಭವನದಲ್ಲಿ ನಡೆದ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಥಮ ವರ್ಷದ ವಿದ್ಯಾರ್ಥಿಗಳ ಹೆತ್ತವರ ಮತ್ತು ಪೋಷಕರ ಸಮಾಲೋಚನ ಸಭೆಯಲ್ಲಿ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಅಧ್ಯಕ್ಷ ರವಿಕೃಷ್ಣ ಡಿ. ಕಲ್ಲಾಜೆ ಮಾತನಾಡಿದರು.
ಪುತ್ತೂರು: ಕಾಲೇಜಿನ ಅತ್ಯುತ್ತಮ ಶೈಕ್ಷಣಿಕ ವಾತಾವರಣ, ಉಪನ್ಯಾಸಕರ ನಿರಂತರ ಮಾರ್ಗದರ್ಶನದ ಹೊರತಾಗಿ, ಹೆತ್ತವರೂ ಕೂಡಾ ತಮ್ಮ ಮಕ್ಕಳ ಓದುವ ಹವ್ಯಾಸವನ್ನು ಮತ್ತು ಶೈಕ್ಷಣಿಕ ಅಭಿವೃದ್ದಿಯನ್ನು ಹೆಚ್ಚಿಸಲು ಅವರನ್ನು ಸೂಕ್ತ ರೀತಿಯಲ್ಲಿ ಪ್ರೇರೇಪಿಸಬೇಕು ಎಂದು ಪುತ್ತೂರಿನ
ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ಅಧ್ಯಕ್ಷ ರವಿಕೃಷ್ಣ ಡಿ. ಕಲ್ಲಾಜೆ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಮೂಲವಿಜ್ಞಾನ ವಿಭಾಗ ಮತ್ತು ಪೇರೆಂಟ್ ರಿಲೇಶನ್ ಸೆಲ್ ಇದರ ಸಂಯುಕ್ತ ಆಶ್ರಯದಲ್ಲಿ ಸಾವರ್ಕರ್
ಸಭಾಭವನದಲ್ಲಿ ನಡೆದ ಪ್ರಸಕ್ತ ಶೈಕ್ಷಣಿಕ ವರ್ಷದ ಪ್ರಥಮ ವರ್ಷದ ವಿದ್ಯಾರ್ಥಿಗಳ ಹೆತ್ತವರ ಮತ್ತು
ಪೋಷಕರ ಸಮಾಲೋಚನ ಸಭೆಯಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ನವೀನ ಅಲೋಚನೆಗಳನ್ನು ಹಂಚಿಕೊಂಡಾಗ ಅದಕ್ಕೆ ಸೂಕ್ತ ಪ್ರೋತ್ಸಾಹವನ್ನು ನೀಡಿ, ಪ್ರಾಯೋಗಿಕ ಯೋಜನೆಗಳನ್ನು ಕೈಗೊಳ್ಳಲು ಅವರಿಗೆ ಸಹಕಾರವನ್ನು ನೀಡಬೇಕು ಇದರಿಂದಾಗಿ ಸಾಮಾಜಿಕವಾಗಿ ಉಪಯೋಗವಾಗುವಂತಹ ಹೊಸ ತಂತ್ರಜ್ಞಾನದ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.
ವಿದ್ಯಾರ್ಥಿಗಳ ಉತ್ತಮ ಶಿಸ್ತು ಮತ್ತು ನಡವಳಿಕೆಯ ಬಗ್ಗೆ ಹರ್ಷವ್ಯಕ್ತಪಡಿಸಿದ ಅವರು ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ತಮ್ಮ ಮಕ್ಕಳ ಶೈಕ್ಷಣಿಕ ಹಾಗೂ ಸರ್ವತೋಮುಖ ಏಳಿಗೆಗೆ ಕಾಲೇಜಿನ ಜತೆಗೆ ಪೋಷಕರೂ ಸಹಕರಿಸಬೇಕು ಎಂದರು.

ಕಾಲೇಜಿನ ದಾಖಲಾತಿ ಮತ್ತು ವಿದ್ಯಾರ್ಥಿಗಳ ನೇಮಕಾತಿಗೆ ಎಲ್ಲರೂ ಸಹಕಾರವನ್ನು ನೀಡುವುದರೊಂದಿಗೆ ಸಂಸ್ಥೆಯ ಬೆಳವಣಿಗೆಯಲ್ಲಿ ಪಾಲುದಾರರಾಗಬೇಕೆಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಪುರುಷೋತ್ತಮ ಚಿಪ್ಪಾರ್ ಮಾತನಾಡಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ತಿಳಿದುಕೊಳ್ಳುವುದಕ್ಕೆ ಪೋಷಕರು ನಿರಂತರ ಕಾಲೇಜಿನ
ಸಂಪರ್ಕದಲ್ಲಿರಬೇಕು ಎಂದರು.
ಸಂಸ್ಥೆಯ ನೇಮಕಾತಿಯಲ್ಲಿನ ಅಂಕಿ ಅಂಶಗಳು, ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ನೀಡಲಾಗುವ ಸಹಕಾರ ಮತ್ತು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ನಮ್ಮ ವಿದ್ಯಾರ್ಥಿಗಳ ಸಾಧನೆಯ
ಬಗ್ಗೆ ಅವರು ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಾಲೇಜು ತೆಗೆದುಕೊಳ್ಳುವ ನಿರ್ಧಾರಗಳಿಗೆ ಹೆತ್ತವರ ಸಹಕಾರ ಅಗತ್ಯ ಎಂದರು.
ವಿದ್ಯಾರ್ಥಿಗಳ ಹೆತ್ತವರು ಮತ್ತು ಪೋಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು ಮತ್ತು ತಮಗಿದ್ದ
ಸಂಶಯಗಳನ್ನು ನಿವಾರಿಸಿಕೊಂಡರು. ಸಭಾ ಕಾರ್ಯಕ್ರಮದ ಬಳಿಕ ತಮ್ಮ ಮಕ್ಕಳಿಗೆ ಕಲಿಸುವ ಎಲ್ಲಾ
ಪ್ರಾಧ್ಯಾಪಕರ ಜತೆ ಪೋಷಕರು ಸಂವಹನವನ್ನು ನಡೆಸಿದರು.
ಕಾಲೇಜು ಆಡಳಿತ ಮಂಡಳಿಯ ಸಂಚಾಲಕ ಪ್ರಸನ್ನ ದರ್ಬೆ, ನಿರ್ದೇಶಕರಾದ ಮನೋಜ್ ಕುಮಾರ್, ಸುಜಿತ್ ಕುಮಾರ್, ಕೆ.ಸುಬ್ರಮಣ್ಯ ಭಟ್, ಮೂಲ ವಿಜ್ಞಾನ ವಿಭಾಗದ ಸಂಯೋಜಕಿಯರಾದ ಡಾ.ಶ್ವೇತಾಂಬಿಕಾ.ಪಿ ಹಾಗೂ ಪ್ರೊ.ತೇಜಸ್ವಿನಿ.ಎಲ್.ಪಿ ಮತ್ತು ಪೇರೆಂಟ್ ರಿಲೇಶನ್ ಸೆಲ್ನ ಮುಖ್ಯ
ಸಂಯೋಜಕಿ ಶ್ರೀಶರಣ್ಯ.ಯು.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ.ಶ್ವೇತಾಂಬಿಕಾ.ಪಿ ಸ್ವಾಗತಿಸಿದರು. ಪ್ರೊ. ಶ್ರೀಶರಣ್ಯ ಯು.ಆರ್ ಪ್ರಸ್ತಾವನೆಗೈದರು. ಪ್ರೊ. ತೇಜಸ್ವಿನಿ.ಎಲ್.ಪಿ ವಂದನಾರ್ಪಣೆಗೈದರು. ಪ್ರೊ.ಹರ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.
ಶಿಕ್ಷಣ
Philomena-ಪುತ್ತೂರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ 59ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭ
ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 59ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ ಹಾಗೂ 10 ದಿನಗಳ ಪುಸ್ತಕ ಪ್ರದರ್ಶನವು ಸೋಮವಾರ, ನವೆಂಬರ್ 23, 2026 ರಂದು ನಡೆದ ಸಮಾರೋಪ ಸಮಾರಂಭದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಪುತ್ತೂರು, ನ.23: ಇಲ್ಲಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ 59ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆ ಹಾಗೂ 10 ದಿನಗಳ ಪುಸ್ತಕ ಪ್ರದರ್ಶನವು ಸೋಮವಾರ, ನವೆಂಬರ್ 23, 2026 ರಂದು ನಡೆದ ಸಮಾರೋಪ ಸಮಾರಂಭದೊಂದಿಗೆ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆಂಟನಿ ಪ್ರಕಾಶ್ ಮೊಂತೇರೊ ಅವರು ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು, ಹತ್ತು ದಿನಗಳ ಪರಿಣಾಮಕಾರಿ ಪುಸ್ತಕ ಪ್ರದರ್ಶನವನ್ನು ಆಯೋಜಿಸಿದ ಮತ್ತು ಕ್ಯಾಂಪಸ್ನಲ್ಲಿ ಉತ್ತಮ ಓದುವ ಸಂಸ್ಕೃತಿಯನ್ನು ಬೆಳೆಸಿದ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವನ್ನು ಅಭಿನಂದಿಸಿದರು.
ಗ್ರಂಥಾಲಯಗಳು ಶೈಕ್ಷಣಿಕ ಸಂಸ್ಥೆಯ ನಿಜವಾದ ಹೃದಯಭಾಗವಿದ್ದಂತೆ ಎಂದು ಒತ್ತಿಹೇಳಿದ ಅವರು, ವಿದ್ಯಾರ್ಥಿಗಳು ತಮ್ಮ ನಿಗದಿತ ಪಠ್ಯಕ್ರಮವನ್ನು ಮೀರಿ ಜೀವನಪರ್ಯಂತ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಡಿಜಿಟಲ್ ಪರದೆಗಳು ನೀಡಲಾಗದ ಆಳವಾದ ಜ್ಞಾನ, ವಿಮರ್ಶಾತ್ಮಕ ಚಿಂತನೆ ಮತ್ತು ವ್ಯಕ್ತಿತ್ವ ನಿರ್ಮಾಣವನ್ನು ಪುಸ್ತಕಗಳು ಮಾಡುತ್ತವೆ ಎಂದು ತಿಳಿಸಿದ
ಅವರು, ತಮ್ಮ ಸಮಗ್ರ ಅಭಿವೃದ್ಧಿ ಮತ್ತು ಸ್ಪರ್ಧಾತ್ಮಕ ಯಶಸ್ಸಿಗಾಗಿ ಕಾಲೇಜಿನ ಶ್ರೀಮಂತ ಗ್ರಂಥಾಲಯ ಸಂಪನ್ಮೂಲಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ನವೆಂಬರ್ 14ರಂದು ಉಪಪ್ರಾಂಶುಪಾಲ ಡಾ. ವಿಜಯಕುಮಾರ್ ಎಂ. ಅವರಿಂದ ಉದ್ಘಾಟನೆಗೊಂಡಿದ್ದ ವಿಸ್ತೃತ (ಸ್ನಾತಕೋತ್ತರ) ಗ್ರಂಥಾಲಯದಲ್ಲಿ ನಡೆದ ಹತ್ತು ದಿನಗಳ ಪುಸ್ತಕ ಪ್ರದರ್ಶನಕ್ಕೆ ಈ ಸಮಾರಂಭದ ಮೂಲಕ ಯಶಸ್ವಿ ತೆರೆ ಬಿದ್ದಿತು. ಪ್ರದರ್ಶನದ ಉದ್ದಕ್ಕೂ ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಜೀವನಚರಿತ್ರೆ, ವ್ಯಕ್ತಿತ್ವ ವಿಕಸನ ಮತ್ತು ಕೆಎಎಸ್ (KAS) ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪ್ರಸಿದ್ಧ ಲೇಖಕರ 750ಕ್ಕೂ ಹೆಚ್ಚು ಪುಸ್ತಕಗಳನ್ನು ವೀಕ್ಷಿಸಿದರು.
ಡಿಜಿಟಲ್ ವ್ಯಾಮೋಹದಿಂದ ದೂರವಿದ್ದು ಓದುವ ಮತ್ತು ಬರೆಯುವ ಹವ್ಯಾಸವನ್ನು ಬೆಳೆಸುವ ನಿಟ್ಟಿನಲ್ಲಿ ಕಾಲೇಜಿನ ‘ಗ್ರಂಥಾಲಯ ಮಾಸ’ (Library Month) ಉಪಕ್ರಮ ಮತ್ತು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಭಾಗವಾಗಿ ಈ ಹಿಂದೆ ಸಾಹಿತ್ಯಿಕ ಸ್ಪರ್ಧೆಗಳನ್ನೂ ಆಯೋಜಿಸಲಾಗಿತ್ತು. ಸಪ್ತಾಹದ ಪೂರ್ವಭಾವಿಯಾಗಿ, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವು ಪದವಿ ಮತ್ತು ಸ್ನಾತಕೋತ್ತರ
ವಿದ್ಯಾರ್ಥಿಗಳಿಗಾಗಿ ಎರಡು ಭಾಷಣ ಸ್ಪರ್ಧೆಗಳನ್ನು ಆಯೋಜಿಸಿತ್ತು. ಅಕ್ಟೋಬರ್ 5ರಂದು ಪ್ರದರ್ಶನ ಕಲೆಗಳ ಸಂಘದ ಸಹಯೋಗದೊಂದಿಗೆ ಇಂಗ್ಲಿಷ್ ಭಾಷಣ ಸ್ಪರ್ಧೆಯನ್ನು ಮತ್ತು ಅಕ್ಟೋಬರ್ 22ರಂದು ಹಿಂದಿ ವಿಭಾಗದ ಸಹಯೋಗದೊಂದಿಗೆ ಹಿಂದಿ ಭಾಷಣ ಸ್ಪರ್ಧೆಯನ್ನು ನಡೆಸಲಾಗಿತ್ತು.
ಅಭಿಪ್ರಾಯ ಹಂಚಿಕೆ ಅವಧಿಯಲ್ಲಿ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಡಿಂಪಲ್ ಜೆ. ಫೆರ್ನಾಂಡಿಸ್, ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಸುಜಿತ್, ದ್ವಿತೀಯ ಎಂ.ಎಸ್ಸಿ. ಗಣಿತಶಾಸ್ತ್ರ ವಿದ್ಯಾರ್ಥಿನಿ ಶ್ರೀದೇವಿ ಎನ್. ಮತ್ತು ದ್ವಿತೀಯ ಎಂ.ಕಾಂ. ವಿದ್ಯಾರ್ಥಿ ವಿಷ್ಣುಜಿತ್ ಎಂ.ಎ. ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಪರೀಕ್ಷಾಂಗ ಕುಲಸಚಿವ ಡಾ. ವಿನಯಚಂದ್ರ, ಐಕ್ಯೂಎಸಿ ಸಂಯೋಜಕ ಹಾಗೂ ಹಣಕಾಸು ಅಧಿಕಾರಿ ಡಾ. ಎಡ್ವಿನ್ ಎಸ್. ಡಿ’ಸೋಜಾ, ಸಾರ್ವಜನಿಕ ಸಂಪರ್ಕಾಧಿಕಾರಿ ಭಾರತಿ ಎಸ್. ರೈ, ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಪ್ರಕಾಶ್ ಡಿ’ಸೋಜಾ, ಪ್ರಾಧ್ಯಾಪಕರು ಹಾಗೂ ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ವ್ಯವಹಾರ ಆಡಳಿತ ಮತ್ತು ವೃತ್ತಿಪರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಶಾಂತ್ ರೈ ಕಾರ್ಯಕ್ರಮ ನಿರೂಪಿಸಿದರು. ಆಯ್ಕೆ ಶ್ರೇಣಿ ಗ್ರಂಥಪಾಲಕ ಅಬ್ದುಲ್ ರಹಮಾನ್ ಜಿ. ಅವರು ಸಮಾರಂಭಕ್ಕೆ ಆಗಮಿಸಿದ ಮತ್ತು ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಆಚರಣೆಗೆ
ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ವಂದಿಸಿದರು.
ಶಿಕ್ಷಣ
Philomena-ಸಂತ ಫಿಲೋಮಿನಾ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ: ಸಂವಿಧಾನದ ಆಶಯಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಿ-– ಡಾ. ನಾರ್ಬರ್ಟ್ ಮಸ್ಕರೇನ್ಹಸ್
ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನಲ್ಲಿ ನವೆಂಬರ್ 26ರಂದು ಆಯೋಜಿಸಲಾದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾಲೇಜಿನ ಕಲಾ ವಿಭಾಗದ ಡೀನ್ ಹಾಗೂ ಶೈಕ್ಷಣಿಕ ವಿಭಾಗದ ಕುಲಸಚಿವರಾದ ಡಾ. ನಾರ್ಬರ್ಟ್ ಮಸ್ಕರೇನ್ಹಸ್ ಮಾತನಾಡಿದರು.
ಪುತ್ತೂರು: ಭಾರತದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಹಕ್ಕುಗಳನ್ನು ನೀಡುವುದರ ಜೊತೆಗೆ ಕರ್ತವ್ಯಗಳನ್ನೂ ವಿಧಿಸಿದೆ. ಮೂಲಭೂತ ಹಕ್ಕುಗಳನ್ನು ಕೇಳುವ ಮೊದಲು, ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೂಲಭೂತ ಕರ್ತವ್ಯಗಳನ್ನು ಪಾಲಿಸುವ ಜವಾಬ್ದಾರಿಯನ್ನು ಅರಿತುಕೊಳ್ಳಬೇಕು ಎಂದು ಸಂತ ಫಿಲೋಮಿನಾ ಕಾಲೇಜಿನ ಕಲಾ ವಿಭಾಗದ ಡೀನ್ ಹಾಗೂ ಶೈಕ್ಷಣಿಕ ವಿಭಾಗದ ಕುಲಸಚಿವರಾದ ಡಾ. ನಾರ್ಬರ್ಟ್ ಮಸ್ಕರೇನ್ಹಸ್ ಹೇಳಿದರು.
ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ), ಪುತ್ತೂರಿನಲ್ಲಿ ನವೆಂಬರ್ 26ರಂದು ಆಯೋಜಿಸಲಾದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಭಾರತದ ಸಂವಿಧಾನವು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಉದಾತ್ತ ಆಶಯಗಳನ್ನು ಒಳಗೊಂಡಿದೆ. ಸಂವಿಧಾನವು ಕೇವಲ ಕಾನೂನುಗಳ ಸಂಕಲನವಲ್ಲ; ಅದು ವೈವಿಧ್ಯಮಯ ಸಂಸ್ಕೃತಿ, ಭಾಷೆ ಮತ್ತು ಧರ್ಮಗಳನ್ನು ಹೊಂದಿರುವ ಭಾರತೀಯರನ್ನು ಒಗ್ಗೂಡಿಸುವ ಪ್ರಜಾಪ್ರಭುತ್ವದ ಬುನಾದಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಂವಿಧಾನದ ಪ್ರಸ್ತಾವನೆಯ ಮಹತ್ವವನ್ನು ವಿವರಿಸಿದ ಅವರು, ಪ್ರಜಾಪ್ರಭುತ್ವವೆಂದರೆ ಕೇವಲ ಚುನಾವಣೆಗಳಲ್ಲಿ ಮತ ಚಲಾಯಿಸುವುದಲ್ಲ. ಕಾನೂನಿನ ಆಳ್ವಿಕೆಯನ್ನು ಗೌರವಿಸುವುದು, ವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವುದು, ಸಮಾನತೆಯನ್ನು ಎತ್ತಿಹಿಡಿಯುವುದು ಮತ್ತು ಅಧಿಕಾರದಲ್ಲಿರುವವರನ್ನು ಹೊಣಗಾರರನ್ನಾಗಿಸುವುದೂಪ್ರಜಾಪ್ರಭುತ್ವ ದ ಪ್ರಮುಖ ಲಕ್ಷಣಗಳಾಗಿವೆ ಎಂದರು.
ಜಾತಿ ಮತ್ತು ಧರ್ಮದ ಆಧಾರದ ಮೇಲಿನ ತಾರತಮ್ಯ, ಕೋಮುವಾದ, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ, ಭ್ರಷ್ಟಾಚಾರ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿನ ಸುಳ್ಳು ಸುದ್ದಿಗಳು ಸಂವಿಧಾನದ ಮೌಲ್ಯಗಳಿಗೆ ಸವಾಲಾಗಿವೆ. ವಿದ್ಯಾರ್ಥಿಗಳು ಯಾವುದೇ ಮಾಹಿತಿಯನ್ನು ನಂಬುವ ಅಥವಾ ಹಂಚಿಕೊಳ್ಳುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. ಯುವಜನತೆ ವಿಮರ್ಶಾತ್ಮಕ ಚಿಂತನೆ, ವೈಜ್ಞಾನಿಕ ಮನೋಭಾವ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು ಜಾತಿ, ಧರ್ಮ, ಭಾಷೆ ಮತ್ತು ಲಿಂಗದ ಭೇದವಿಲ್ಲದೆ ಪರಸ್ಪರ ಗೌರವದಿಂದ ನಡೆದುಕೊಳ್ಳಬೇಕು. ತಮ್ಮ ಮತದಾನದ ಹಕ್ಕನ್ನು ಜವಾಬ್ದಾರಿಯುತವಾಗಿ ಚಲಾಯಿಸುವುದರ ಜೊತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿಯೂ ತೊಡಗಿಸಿಕೊಳ್ಳಬೇಕು. ಸಂವಿಧಾನದ ಆಶಯಗಳು ನಮ್ಮ ದೈನಂದಿನ ನಡವಳಿಕೆಯಲ್ಲಿ ಪ್ರತಿಫಲಿಸಬೇಕು ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಆ್ಯಂಟನಿ ಪ್ರಕಾಶ್ ಮೊಂತೇರೊ ಅವರು ಮಾತನಾಡಿ, ಮೂಲಭೂತ ಹಕ್ಕುಗಳನ್ನು ಪ್ರತಿಪಾದಿಸುವುದರ ಜೊತೆಗೆ ಪ್ರತಿಯೊಬ್ಬರೂ ತಮ್ಮ ಮೂಲಭೂತ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪಾಲಿಸಬೇಕು. ಹಕ್ಕುಗಳು ಮತ್ತು ಕರ್ತವ್ಯಗಳ ನಡುವಿನ ಸಮತೋಲನವೇ ಜವಾಬ್ದಾರಿಯುತ ನಾಗರಿಕತ್ವದ ಆಧಾರವಾಗಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಸಂವಿಧಾನ ದಿನದ ಪ್ರತಿಜ್ಞಾ ವಿಧಿಯನ್ನು ಹಮ್ಮಿಕೊಳ್ಳಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ರೆ. ಡಾ. ಎ. ಪಿ. ಮೊಂತೆರೊ ಅವರು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಬೋಧಕ ವೃಂದ ಹಾಗೂ ವಿದ್ಯಾರ್ಥಿಗಳು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಮೌಲ್ಯಗಳು ಮತ್ತು ಆದರ್ಶಗಳನ್ನು ಎತ್ತಿಹಿಡಿದು, ಜವಾಬ್ದಾರಿಯುತ ನಾಗರಿಕರಾಗಿ ಕರ್ತವ್ಯಗಳನ್ನು ಪಾಲಿಸುವ ಪ್ರತಿಜ್ಞೆ ಕೈಗೊಂಡರು.
ಕಾರ್ಯಕ್ರಮದ ನಿರೂಪಣೆಯನ್ನು ಸಹಾಯಕ ಪ್ರಾಧ್ಯಾಪಕರಾದ ಪೃಥ್ವಿ ಕೆ. ನಿರ್ವಹಿಸಿದರು. ಪ್ರತೀಕ್ಷಾ ಸ್ವಾಗತಿಸಿ, ಶ್ರೀಮಣಿ ವಂದಿಸಿದರು. ದ್ವಿತೀಯ ಎಂ.ಎಸ್ಸಿ. ವಿದ್ಯಾರ್ಥಿನಿ ಸೌಪರ್ಣಿಕಾ ಮತ್ತು ತಂಡದವರು ಪ್ರಾರ್ಥನೆ ಸಲ್ಲಿಸಿದರು.
-
ಬಿಗ್ ನ್ಯೂಸ್21 hours agoVitla-ವಿಟ್ಲ: ಚಿಕ್ಕಪ್ಪನನ್ನು ಕತ್ತಿಯಿಂದ ಕಡಿದು ಹತ್ಯೆಗೈದ ಯುವತಿ ಬಂಧನ
-
ಬಿಗ್ ನ್ಯೂಸ್21 hours agoVirupaksha Bhat-ಮಹಾಲಿಂಗೇಶ್ವರ ದೇವಸ್ಥಾನದ ಕಾಮಗಾರಿಗಳಿಗೆ ಹೈಕೋರ್ಟ್ ತಡೆಯಾಜ್ಞೆ: ಅನುಮತಿಯಿಲ್ಲದ ಕಾಮಗಾರಿ, ಟೆಂಡರ್ ಪ್ರಕ್ರಿಯೆ ಮುಂದುವರಿಸದಂತೆ ಮಧ್ಯಂತರ ಆದೇಶ; ದೇವಸ್ಥಾನದ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ, ನಿಯಮಬದ್ಧ ಆಡಳಿತಕ್ಕೆ ಆಗ್ರಹ : ದೂರುದಾರ ವಿರೂಪಾಕ್ಷ ಭಟ್ ಪತ್ರಿಕಾಗೋಷ್ಟಿ
-
ನಿಧನ ವಾರ್ತೆ3 hours agoBeltangadi-ಬೆಳ್ತಂಗಡಿ: ವಿಷ ಸೇವಿಸಿ ಚಿಕಿತ್ಸೆ ಫಲಿಸದೆ ಐಟಿಐ ವಿದ್ಯಾರ್ಥಿ ಸಾವು
-
ನಿಧನ ವಾರ್ತೆ2 hours agoKolar-ಕೋಲಾರ: ಹೆದ್ದಾರಿ ಬದಿಯಲ್ಲಿ ಪಾರ್ಸೆಲ್ ರೂಪದಲ್ಲಿ ಮಹಿಳೆಯ ಮೃತದೇಹ ಪತ್ತೆ
-
ಸ್ಥಳೀಯ2 hours agoArrested-ಕುಂಭಾಶಿ ದೇವಸ್ಥಾನದಲ್ಲಿ ವೃದ್ಧೆಯ ಚಿನ್ನದ ಸರ ಕಳವು; ತಮಿಳುನಾಡಿನ ಮೂವರು ಮಹಿಳೆಯರ ಬಂಧನ
-
ಅಂತರ ರಾಜ್ಯ2 hours agoWhatsApp-WhatsApp ಬಳಕೆದಾರರಿಗೆ CERT-In ಎಚ್ಚರಿಕೆ; ಡೇಟಾ ಕದಿಯುವ, ಅಳಿಸುವ ಅಪಾಯ..!
-
ಅಂತರ ರಾಜ್ಯ2 hours agoViral video-ಚಲಿಸುತ್ತಿರುವ ರೈಲಿನ AC ಬೋಗಿಯಲ್ಲಿ ದೀಪ ಹಚ್ಚಿ ಆರತಿ, ಶಂಖನಾದ; ವೈರಲ್ ವಿಡಿಯೋಗೆ ರೈಲ್ವೆ ಪ್ರತಿಕ್ರಿಯೆ
-
ಅಂತರ ರಾಜ್ಯ2 hours agoWomen’s reservation-ಮಹಿಳಾ ಮೀಸಲಾತಿ, ಕ್ಷೇತ್ರ ಮರುವಿಂಗಡಣೆ ಮಸೂದೆಗೆ ಕೇಂದ್ರ ಸಂಪುಟ ಅಸ್ತು; ಲೋಕಸಭೆ ಸ್ಥಾನಗಳ ಸಂಖ್ಯೆ ಶೇ.50 ಹೆಚ್ಚಳ?















