Uncategorized
Mangalore: ಕುಡಿತದ ಮತ್ತಿನಲ್ಲಿ ಬಾರ್‌ನಲ್ಲಿ ಯುವಕರ ಮಧ್ಯೆ ಮಾರಾಮಾರಿ – ಬಿಯರ್ ಬಾಟಲಿ, ಸೋಡಾ ಬಾಟಲಿಯಿಂದ ಮಾರಣಾಂತಿಕ ಹಲ್ಲೆ
ಮಂಗಳೂರಿನ ಹೊರವಲಯದ ಕೊಟ್ಟಾರ ಬಳಿಯ ಕೋಸ್ಟಲ್ ಬಾರ್ ನಲ್ಲಿ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಹಲ್ಲೆ ನಡೆಸುವ ಹಾಗೂ ಪರಸ್ಪರ ಜಗಳವಾಡುವ ವಿಡಿಯೋ ಬಾರ್ ನ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಬಿಯರ್ ಬಾಟಲಿ, ಸೋಡಾ ಬಾಟಲಿಯಿಂದ ಯುವಕನೊಬ್ಬನಿಗೆ ಮೂವರ ಯುವಕರ ತಂಡ ಮಾರಣಾಂತಿಕ ಹಲ್ಲೆ ನಡೆದಿದೆ. ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಅಶೋಕ್ ಪೂಜಾರಿ ಎಂಬಾತ ಬಿಯರ್ ಹಾಗೂ ಸೋಡಾ ಬಾಟಲಿಯಿಂದ ಹಲ್ಲೆಗೊಳಗಾದವ. ಇವರು ಬಾರ್ ನ ಕೌಂಟರ್ ಬಳಿಯೇ ರಕ್ತ ಚಿಮ್ಮುವಂತೆ ಹೊಡೆದಾಡಿಕೊಂಡಿದ್ದಾರೆ. ಕ್ಷುಲ್ಲಕ ವಿಚಾರಕ್ಕೆ ಗಲಾಟೆ ಶುರುವಾಗಿದ್ದು , ಮೊದಲು ಪರಸ್ಪರ ಮಾತಿನ ಚಕಮಕಿ ನಡೆದಿದ್ದು, ಬಳಿಕ ಹೋಯ ಕೈ ನಡೆದಿದೆ. ಈ ವೇಳೆ ಓರ್ವ ಯುವಕ ಅಶೋಕ್ ಪೂಜಾರಿ ಮೇಲೆ ಬಿಯರ್ ಬಾಟಲಿಯಿಂದ ತಲೆಗೆ ಭಾರಿಸಿದ್ದಾನೆ. ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದವನನ್ನು ರೀತು ಎಂದು ಗುರುತಿಸಲಾಗಿದೆ.

ಆರಂಭದಲ್ಲಿ ಪರಸ್ಪರ ಪರಿಚಿತರೇ ಆಗಿರುವ ಅನೂಪ್ ಮತ್ತು ರೀತು ಮಧ್ಯೆ ಯಾವುದೋ ವಿಷಯಕ್ಕೆ ಪರಸ್ಪರ ಮಾತಿನ ಚಕಮಕಿಯಾಗಿದೆ. ಈ ವೇಳೆ ಅಶೋಕ್ ಮದ್ಯೆ ಪ್ರವೇಶಿಸಿದ್ದಾರೆ. ಆಗ ರೀತು ಕೌಂಟರ್ ನಲ್ಲಿದ್ದ ಬಿಯರ್ ಬಾಟಲಿ ತೆಗೆದು ಅಶೋಕ್ ತಲೆಗೆ ಹೊಡೆದಿದ್ದಾನೆ. ಮತ್ತೆ ಅವರೆಲ್ಲಾರ ಮಧ್ಯೆ ನೂಕಾಟ ತಳ್ಳಾಟ ಹೊಡೆದಾಟ ನಡೆದಿದೆ. ಇದೇ ವೇಳೆ ಕೊಟ್ಟಾರ ಚೌಕಿಯ ವಿಶ್ವ ಎಂಬವನು ಅಶೋಕ್ ಮೇಲೆ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಬಿಯರ್ ಬಾಟಲಿ ಮತ್ತು ಸೋಡಾ ಬಾಟಲಿ ಚೂರಿನಿಂದ ತಲೆ, ಮುಖದ ಭಾಗಗಳಿಗೆ ತಿವಿದು ಕೊಲೆ ಯತ್ನ ನಡೆಸಿದ್ದಾರೆ. ತಲೆಗೆ, ಬೆನ್ನಿಗೆ ಮತ್ತು ಮುಖಕ್ಕೆ ಬಲವಾಗಿ ಹೊಡೆದು ರಕ್ತ ಚಿಮ್ಮುವಂತೆ ಹಲ್ಲೆ ನಡೆಸಲಾಗಿದೆ. ಗಾಯಾಳುವಿನ ತಲೆ, ಮುಖ, ಬೆನ್ನಿನ ಭಾಗಗಳಲ್ಲಿ ಹಾಗೂ ಮೂಗಿನ ಮೂಳೆ ಮುರಿತ ಒಳಗಾಗಿದೆ. ತೀವ್ರ ರಕ್ತಸ್ರಾವಕ್ಕೆ ಒಳಗಾದ ಅಶೋಕ್ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.


Uncategorized
ಪುತ್ತೂರು : ನಸುಕಿನ ಜಾವ ಹಳೇ ಕಟ್ಟಡದಲ್ಲಿ ಕಾಣಿಸಿದ ಬೆಂಕಿ – ಅನಾಹುತ ತಪ್ಪಿಸಲು ನೆರವಾದ ರವಿಕುಮಾರ್ ರೈ

ಪುತ್ತೂರು: ಪುತ್ತೂರು ಮುಖ್ಯರಸ್ತೆಯ ಸೋಜಾ ಅಲ್ಯೂಮಿನಿಯಂ ಸಂಸ್ಥೆಯ ಎದುರಿನ ವಾಸ್ತವ್ಯವಿಲ್ಲದ ಹಳೆಯ ಕಟ್ಟಡವೊಂದರಲ್ಲಿ ಶನಿವಾರ ನಸುಕಿನ 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.
ಕಟ್ಟಡದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದುದನ್ನು ಬೆಂಗಳೂರಿನಿಂದ ಪುತ್ತೂರಿಗೆ ಬರುತ್ತಿದ್ದ ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಹಾಗೂ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನಿರ್ದೇಶಕ ರವಿಕುಮಾರ್ ರೈ ಕೆದಂಬಾಡಿ ಮಠ ಅವರು ಗಮನಿಸಿದ್ದಾರೆ. ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ ಅವರು, ಪುತ್ತೂರು ನಗರ ಪೊಲೀಸ್ ಠಾಣೆಗೂ ತೆರಳಿ ಘಟನೆ ಕುರಿತು ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದ ಕೆಲವೇ ಹೊತ್ತಿನಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಸಮಯಕ್ಕೆ ಸರಿಯಾಗಿ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಬೆಂಕಿ ವ್ಯಾಪಕವಾಗಿ ಹರಡುವುದನ್ನು ತಡೆಯಲು ಸಾಧ್ಯವಾಯಿತು.
Uncategorized
ಬೋನಿಗೆ ಬಿದ್ದ ಅಪರೂಪದ ಕರಿ ಚಿರತೆ!

ಬೆಳ್ತಂಗಡಿ: ಸಾಮಾನ್ಯವಾಗಿ ಹಳದಿ ಅಥವಾ ಕಂದು ಬಣ್ಣದ ಮೈಮೇಲೆ ಕಪ್ಪು ಚುಕ್ಕೆಗಳನ್ನು ಹೊಂದಿರುವ ಚಿರತೆಗಳ ನಡುವೆ, ಸಂಪೂರ್ಣ ಕಪ್ಪು ಬಣ್ಣದಿಂದ ಗಮನ ಸೆಳೆಯುವ ಅಪರೂಪದ ಕರಿ ಚಿರತೆಯೊಂದು ಶಿರ್ಲಾಲು ಗ್ರಾಮದ ಮಣಿಲದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಸುಮಾರು ಎರಡು ವರ್ಷ ಪ್ರಾಯದ ಗಂಡು ಚಿರತೆ ಅ. 10ರಂದು ಸೆರೆಸಿಕ್ಕಿದ್ದು, ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.
ಮಣಿಲ ಪರಿಸರದಲ್ಲಿ ಚಿರತೆಯ ಚಲನವಲನ ಕಂಡುಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ವೇಣೂರು ವಲಯದ ಸಿಬ್ಬಂದಿ ಕೆಲವು ದಿನಗಳ ಹಿಂದೆ ಪದ್ಮನಾಭ ಅವರ ಮನೆಯ ಸಮೀಪ ಬೋನು ಇರಿಸಿದ್ದರು. ಶನಿವಾರ ಈ ಬೋನಿಗೆ ಕರಿ ಚಿರತೆ ಬಿದ್ದಿರುವುದು ಗಮನಕ್ಕೆ ಬಂದಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಚಿರತೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದರು.
ಚಿರತೆಯು ಆರೋಗ್ಯವಾಗಿದ್ದು, ಅರಣ್ಯ ಇಲಾಖೆಯ ಪಶುವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಸುರಕ್ಷಿತವಾಗಿ ಸಂರಕ್ಷಿತಾರಣ್ಯಕ್ಕೆ ಬಿಡಲಾಗುವುದು ಎಂದು ವೇಣೂರು ವಲಯ ಅರಣ್ಯಾಧಿಕಾರಿ ಭರತ್ ಯು.ಜಿ. ತಿಳಿಸಿದ್ದಾರೆ.
ಅಪರೂಪದ ಕರಿ ಚಿರತೆ; ಕುತೂಹಲಕ್ಕೆ ಕಾರಣ
ಸಾಮಾನ್ಯ ಚಿರತೆಗಳ ಮೈಮೇಲೆ ಹಳದಿ ಅಥವಾ ಕಂದು ಬಣ್ಣದ ಹಿನ್ನೆಲೆಯ ಮೇಲೆ ಕಪ್ಪು ಚುಕ್ಕೆಗಳಿರುತ್ತವೆ. ಆದರೆ, ಕರಿ ಚಿರತೆಗಳ ಮೈಮೇಲೆ ಕಪ್ಪು ಬಣ್ಣವೇ ಪ್ರಧಾನವಾಗಿದ್ದು, ಬೆಳಕಿನ ಕೋನಕ್ಕೆ ಅನುಗುಣವಾಗಿ ಅವುಗಳ ಮೈಮೇಲಿನ ಚುಕ್ಕೆಗಳು ಮಸುಕಾಗಿ ಗೋಚರಿಸುತ್ತವೆ. ದೇಹದಲ್ಲಿ ಮೆಲನಿನ್ ಎಂಬ ವರ್ಣದ್ರವ್ಯ ಹೆಚ್ಚಾಗಿ ಉತ್ಪತ್ತಿಯಾಗುವುದರಿಂದ ಈ ಚಿರತೆಗಳು ಕಪ್ಪಾಗಿ ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಮೆಲಾನಿಸ್ಟಿಕ್ ಚಿರತೆಗಳು ಎಂದು ಕರೆಯಲಾಗುತ್ತದೆ.
ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶಗಳು ಚಿರತೆ ಸೇರಿದಂತೆ ಹಲವು ವನ್ಯಜೀವಿಗಳ ಆವಾಸಸ್ಥಾನವಾಗಿವೆ. ಬೆಳ್ತಂಗಡಿ ತಾಲೂಕಿನಲ್ಲಿ ಚಿರತೆಗಳ ಓಡಾಟ ಹೊಸತಲ್ಲವಾದರೂ, ಕರಿ ಚಿರತೆ ಸೆರೆಯಾಗಿರುವುದು ವಿಶೇಷ ಗಮನ ಸೆಳೆದಿದೆ.
ಈ ಹಿಂದೆ ಶಿರ್ಲಾಲು ಪರಿಸರದಲ್ಲೇ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಹಳದಿ ಬಣ್ಣದ ಚಿರತೆಯೊಂದು ಸೆರೆಯಾಗಿತ್ತು. ಇದೀಗ ಅಪರೂಪದ ಕರಿ ಚಿರತೆ ಸಿಕ್ಕಿರುವುದು ಸ್ಥಳೀಯರಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಚಿರತೆಯನ್ನು ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ ಅಳದಂಗಡಿ ಶಾಖೆಯ ಉಪವಲಯ ಅರಣ್ಯಾಧಿಕಾರಿ ಹರಿಪ್ರಸಾದ್, ಗಸ್ತು ವನಪಾಲಕ ಮಂಜುನಾಥ್ ಬಿ.ಎಸ್., ಅರಣ್ಯ ವೀಕ್ಷಕರಾದ ವೆಂಕಪ್ಪ ನಾಯ್ಕ ಮತ್ತು ಪೂವಪ್ಪ ನಾಯ್ಕ ಹಾಗೂ ಸ್ಥಳೀಯರು ಭಾಗವಹಿಸಿದ್ದರು.
Uncategorized
ಪುತ್ತೂರು–ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಶಾಸಕ ಅಶೋಕ್ ರೈ ಸೂಚನೆ

ಪುತ್ತೂರು: ಮಳೆಯಿಂದಾಗಿ ಪುತ್ತೂರು–ಉಪ್ಪಿನಂಗಡಿ ರಸ್ತೆಯ ಕೆಮ್ಮಾಯಿ, ದಾರಂದಕುಕ್ಕು ಸೇರಿದಂತೆ ವಿವಿಧೆಡೆ ಹೊಂಡಗಳು ಸೃಷ್ಟಿಯಾಗಿದ್ದು, ವಾಹನ ಸವಾರರಿಗೆ ತೊಂದರೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಶಾಸಕ ಅಶೋಕ್ ರೈ ಅವರು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗೆ ಸೂಚಿಸಿದ್ದಾರೆ.
ರಸ್ತೆಯ ಕೆಲವು ಭಾಗಗಳಲ್ಲಿ ಹೊಂಡಗಳು ಉಂಟಾಗಿರುವ ಹಿನ್ನೆಲೆಯಲ್ಲಿ, ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಅವುಗಳನ್ನು ಮುಚ್ಚಬೇಕು. ರಸ್ತೆಗಳಲ್ಲಿ ಹೊಂಡಗಳಿರುವ ಕಡೆಗಳಲ್ಲಿ ತುರ್ತಾಗಿ ತೇಪೆ ಕಾಮಗಾರಿ ನಡೆಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಶಾಸಕರು ಸೂಚಿಸಿದ್ದಾರೆ.
ರಸ್ತೆಯಲ್ಲಿನ ಹೊಂಡಗಳಿಂದ ಸುಗಮ ವಾಹನ ಸಂಚಾರಕ್ಕೆ ಅಡಚಣೆಯಾಗುವ ಅಪಾಯವಿದ್ದು, ಅಪಘಾತಗಳ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಈ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ಎಲ್ಲಿ ಹೊಂಡಗಳಿವೆಯೋ ಅವುಗಳನ್ನು ತಕ್ಷಣ ಮುಚ್ಚಿ, ಹಾನಿಗೊಳಗಾದ ಭಾಗಗಳಿಗೆ ತುರ್ತಾಗಿ ತೇಪೆ ಹಾಕುವಂತೆ ಶಾಸಕರು ನಿರ್ದೇಶನ ನೀಡಿದ್ದಾರೆ.


















