ದಕ್ಷಿಣ ಕನ್ನಡ
Mundkur Ramdas Kamath ಮಂಗಳೂರಿನ ಹೆಸರಾಂತ ಉದ್ಯಮಿ ಮುಂಡ್ಕೂರು ರಾಮದಾಸ್ ಕಾಮತ್ ಅಸಹಜ ಸಾವಿನ ಪ್ರಕರಣದ ತನಿಖೆಗೆ ಹೆಚ್ಚಿದ ಒತ್ತಾಯ – ಎಸಿಪಿ ನೇತೃತ್ವದಲ್ಲಿ ತನಿಖೆ : ಕಮೀಷನರ್
ಮಂಗಳೂರಿನ ಹೆಸರಾಂತ ಉದ್ಯಮಿ ಮುಂಡ್ಕೂರು ರಾಮದಾಸ್ ಕಾಮತ್ (ಎಂ.ಆರ್.ಕಾಮತ್) ಅವರು ಅಸಹಜ ಸಾವಿನ ವಿಚಾರ ಸುಮಾರು ಒಂದು ತಿಂಗಳ ಬಳಿಕ ಮತ್ತೆ ಮುನ್ನಲೆಗೆ ಬಂದಿದೆ. ಈ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಿ ನಿಜಾಂಶವನ್ನು ಬಯಲಿಗೆಳೆಯಲು ವಿಶೇಷ ತನಿಖಾ ತಂಡ ರಚಿಸಬೇಕು’ ಎಂದು ಒತ್ತಾಯಿಸಿ ಉದ್ಯಮಿ ಬಿ.ಆರ್.ಶೆಟ್ಟಿ ಅವರು ತಮ್ಮ ಕಾನೂನು ಸಲಹಾ ಸಂಸ್ಥೆ ಮೂಲಕ ನಗರ ಪೊಲೀಸ್ ಕಮಿಷನರ್ ಅವರಿಗೆ ಪತ್ರ ಬರೆದಿದ್ದಾರೆ.
ಎಂ.ಆರ್. ಕಾಮತ್ (75) ಅವರು ಈಚಿನ ಮೂರು ತಿಂಗಳಿನಿಂದ ಯಾರ ಜೊತೆಗೆಲ್ಲ ಸಂಪರ್ಕದಲ್ಲಿದ್ದರೋ ಅವರನ್ನೆಲ್ಲ ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಬಿ.ಆರ್.ಶೆಟ್ಟಿ ಅವರು ತಮ್ಮ ಕಾನೂನು ಸಲಹಾ ಸಂಸ್ಥೆ ಕಾಮತ್ ಜ್ಯೂರಿಸ್ ಮೂಲಕ ನಗರ ಪೊಲೀಸ್ ಕಮಿಷನರ್ ಅವರಿಗೆ ಬರೆದ ಪತ್ರದ ಪ್ರತಿ ಮಾದ್ಯಮಗಳಿಗೆ ಲಭ್ಯವಾಗಿದೆ. ಪತ್ರ ತಲುಪಿರುವುದನ್ನು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಖಚಿತಪಡಿಸಿದ್ದಾರೆ.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹಸಚಿವರು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾ ನಿರೀಕ್ಷಕರಿಗೂ ಅವರು ಪತ್ರದ ಪ್ರತಿಯನ್ನು ಕಳುಹಿಸಿದ್ದಾರೆ.
‘ನಮ್ಮ ಕಕ್ಷಿದಾರರಾದ ಬಿ.ಆರ್.ಶೆಟ್ಟಿ ಅವರು ಯುಎಇಯ ದುಬೈನಲ್ಲಿ ಉದ್ಯಮಿಯಾಗಿದ್ದಾಗ ಎಂ.ಆರ್.ಕಾಮತ್ ಜೊತೆ ಸಂಸ್ಥೆಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡಿದ್ದು, ಅವರಿಬ್ಬರು ಉತ್ತಮ ಸ್ನೇಹಿತರಾಗಿದ್ದರು. ಕಷ್ಟಪಟ್ಟು ಗಳಿಸಿದ ಹಣವನ್ನು ವಿವಿಧ ಉದ್ದಿಮೆಗಳಲ್ಲಿ ತೊಡಗಿಸಿದ್ದ ಎಂ.ಆರ್.ಕಾಮತ್ ಅವರು ಕೋಟ್ಯಧಿಪತಿಯಾಗಿದ್ದರು. ಕೆಲ ವರ್ಷಗಳ ಹಿಂದೆ ಮಂಗಳೂರಿಗೆ ಮರಳಿ, ಇಲ್ಲೇ ನೆಲೆಸಿದ್ದರು. ಕೊಡುಗೈ ದಾನಿಯೂ ಆಗಿದ್ದ ಅವರು ಅನೇಕ ದೇವಸ್ಥಾನ ಹಾಗೂ ಮಠಗಳಿಗೆ ದೇಣಿಗೆ ನೀಡಿದ್ದರು. ಕಾಮತ್ ಅವರು ಸೆ. 17ರಂದು ಮೃತಪಟ್ಟಿರುವ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿ ಬಿ.ಆರ್.ಶೆಟ್ಟಿ ಅವರು ಆಘಾತಗೊಂಡಿದ್ದರು’ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
‘ಎಂ.ಆರ್. ಕಾಮತ್ ಅವರು ನಮ್ಮ ಕಕ್ಷಿದಾರರಿಗೆ 50 ವರ್ಷಗಳಿಂದ ಪರಿಚಿತರಾಗಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ದೃಢ ಇಚ್ಛಾಶಕ್ತಿ ಹಾಗೂ ಶಿಸ್ತಿನ ಮನುಷ್ಯರಾಗಿದ್ದ ಅವರ ಸಾವಿನ ಬಗ್ಗೆ ಅನುಮಾನಗಳಿವೆ. ಸಾರ್ವಜನಿಕ ವಲಯದಲ್ಲೂ ಅವರ ಸಾವಿನ ಬಗ್ಗೆ ಅನೇಕ ವದಂತಿ ಹಬ್ಬಿವೆ. ಹಾಗಾಗಿ ಕೂಲಂಕಷ ತನಿಖೆ ನಡೆಸಿ ಸತ್ಯಾಂಶ ಏನೆಂಬುದನ್ನು ಹೊರಗೆಡವಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ. ‘ಅವರು ಮೃತಪಟ್ಟು ಈಗಾಗಲೇ ಅನೇಕ ದಿನಗಳು ಕಳೆದಿದ್ದರೂ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ’ ಎಂದೂ ಪತ್ರದಲ್ಲಿ ದೂರಲಾಗಿದೆ.
‘ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾದ ದೃಶ್ಯಗಳನ್ನು ಪರಿಶೀಲಿಸಬೇಕು. ಆತ್ಮಹತ್ಯೆ ಮಾಡುವಂತೆ ಅವರಿಗೆ ಯಾರಾದರೂ ಕುಮ್ಮಕ್ಕು ನೀಡಿದ್ದಾರೆಯೇ? ಅವರು ಕೊಲೆಯಾಗಿದ್ದಾರೆಯೇ? ಅಥವಾ ಆತ್ಮಹತ್ಯೆ ಮಾಡಿಕೊಳ್ಳುವಂತೆ ಅವರನ್ನು ಬಲವಂತ ಪಡಿಸಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಬೇಕು’ ಎಂದೂ ಆಗ್ರಹಿಸಲಾಗಿದೆ.
ಎಸಿಪಿ ನೇತೃತ್ವದಲ್ಲಿ ತನಿಖೆ : ಕಮೀಷನರ್
ಇನ್ನೂ ಉದ್ಯಮಿ ಮುಂಡ್ಕೂರು ರಾಮದಾಸ್ ಕಾಮತ್ (75) ಅವರ ಆತ್ಮಹತ್ಯೆ ಪ್ರಕರಣದ ತನಿಖೆ ಎಸಿಪಿ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ಸೆ. 17ರಂದು ರಥಬೀದಿಯ ಫ್ಲ್ಯಾಟ್‌ನಲ್ಲಿ ರಾಮದಾಸ್ ಕಾಮತ್ ಅವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಘಟನೆಯ ಮೂರು ದಿನಗಳ ಅನಂತರ ಆತ್ಮಹತ್ಯೆಯ ಕಾರಣದ ಕುರಿತಾಗಿ ಅನುಮಾನ ವ್ಯಕ್ತಪಡಿಸಿ ಮಾಹಿತಿಗಳು ಬಂದವು. ಈ ಹಿನ್ನೆಲೆಯಲ್ಲಿ ಕೂಡಲೇ ಕೇಂದ್ರ ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇ ಶಿಸಲಾಗಿದೆ.
ಕುಟುಂಬ ಸದಸ್ಯರಿಗಿಲ್ಲ ಸಂದೇಹ
ಕಾಮತ್ ಅವರ ಸಾವಿನ ಬಗ್ಗೆ ಅವರ ಕುಟುಂಬಸ್ಥರು ಯಾವುದೇ ಸಂದೇಹ ವ್ಯಕ್ತಪಡಿಸಿ ದೂರು ನೀಡಿಲ್ಲ. ಆದಾಗ್ಯೂ ಯಾವುದೇ ಅನುಮಾನಗಳಿಗೆ ಆಸ್ಪದವಾಗಬಾರದೆಂಬ ಉದ್ದೇಶದಿಂದ ಎಸಿಪಿ ನೇತೃತ್ವದಲ್ಲಿಯೇ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ ?
ರಾಮದಾಸ್ ಕಾಮತ್ ಅವರು ಪತ್ನಿಯನ್ನು ಮುಂಡ್ಕೂರಿಗೆ ಬಿಟ್ಟು ಬಂದಿದ್ದರು. ಮರುದಿನ ತಾನು ಕೂಡ ಮುಂಡ್ಕೂರಿಗೆ ಬರುವುದಾಗಿ ಹೇಳಿದ್ದರು. ಆದರೆ ಹೋಗಿರಲಿಲ್ಲ. ಪತ್ನಿ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಆಗ ಪತ್ನಿ ಮಂಗಳೂರಿನಲ್ಲಿರುವ ತನ್ನ ತಂಗಿಯ ಮಕ್ಕಳಿಗೆ ತಿಳಿಸಿದರು. ಅವರು ಬಂದು ನೋಡಿದಾಗ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಸಾವಿನ ಕುರಿತು ಅನುಮಾನ
ರಾಮದಾಸ್ ಕಾಮತ್ ಆಗರ್ಭ ಶ್ರೀಮಂತರಾಗಿದ್ದು ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಹೇಳಿಕೊಳ್ಳುವಂತಹ ಯಾವುದೇ ಕಾರಣಗಳು ಇರಲಿಲ್ಲ . ತನ್ನ ಇಳಿ ವಯಸ್ಸಿನಲ್ಲೂ ಅತ್ಯಂತ ಕ್ರಿಯಾಶಿಲರಾಗಿದ್ದ ಅವರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದನ್ನು ಅವರ ಆಪ್ತ ವಲಯದವರಿಗೆ ನಂಬಲೂ ಸಾಧ್ಯವಾಗುತ್ತಿಲ್ಲ . ಎರಡು ವಾರಗಳ ಹಿಂದೆ ಮಂಗಳೂರಿನ ಇನ್ನೊರ್ವ ಶ್ರೀಮಂತ ಉದ್ಯಮಿ ಮಹೇಶ್ ಬಸ್ಸು ಮಾಲಕ ಪ್ರಕಾಶ್ (43) ರವರು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಎರಡು ನಿಗೂಢ ಸಾವುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದರ ನಿಗುಢತೆಯನ್ನು ಭೇದಿಸಿ ಸತ್ಯಾಸತ್ಯತೆಯನ್ನು ಬಯಲು ಮಾಡುವ ಹೊಣೆಗಾರಿಕೆ ಮಂಗಳೂರು ಪೊಲೀಸ್ ಕಮೀಷನರ್ ಮೇಲಿದೆ.
Mahesh Bus | ತುಳುನಾಡಿನ ಪ್ರಖ್ಯಾತ ‘ಮಹೇಶ್’ ಬಸ್ ಮಾಲಕ ನೇಣು ಬಿಗಿದು ಆತ್ಮಹತ್ಯೆ
ಮಂಗಳೂರು
Mulki-ಮೂಲ್ಕಿ: ಚಲಿಸುತ್ತಿದ್ದ ಮಂಗಳೂರು – ಕಾರ್ಕಳ ಎಕ್ಸ್ ಪ್ರೆಸ್ ಬಸ್‌ಗೆ ಬಡಿದ ಗಿಡುಗ: ಗಾಜು ಪುಡಿಪುಡಿ, ಪುತ್ತೂರು ಮೂಲದ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅವಘಡ
ಮೂಲ್ಕಿ ಸಮೀಪದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಮಂಗಳೂರು- ಕಾರ್ಕಳ ಎಕ್ಸ್‌ಪ್ರೆಸ್ ಬಸ್‌ನ ಮುಂಭಾಗದ ಗಾಜಿಗೆ ಗಿಡುಗವೊಂದು ಬಡಿದ ಪರಿಣಾಮ ಗಾಜು ಪುಡಿಪುಡಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಮಂಗಳೂರು: ಮೂಲ್ಕಿ ಸಮೀಪದ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಮಂಗಳೂರು- ಕಾರ್ಕಳ ಎಕ್ಸ್‌ಪ್ರೆಸ್ ಬಸ್‌ನ ಮುಂಭಾಗದ ಗಾಜಿಗೆ ಗಿಡುಗವೊಂದು ಬಡಿದ ಪರಿಣಾಮ ಗಾಜು ಪುಡಿಪುಡಿಯಾದ ಘಟನೆ ನಡೆದಿದೆ. ಘಟನೆಯಲ್ಲಿ ಒಬ್ಬರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ಲಕ್ಷ್ಮಿ ಗಣೇಶ್ ಹೆಸರಿನ ಎಕ್ಸ್‌ಪ್ರೆಸ್ ಬಸ್ ಸಂಚರಿಸುತ್ತಿದ್ದ ವೇಳೆ ಏಕಾಏಕಿ ಗಿಡುಗ ಬಸ್‌ನ ಮುಂಭಾಗದ ಗಾಜಿಗೆ ಬಡಿದಿದೆ. ಇದರಿಂದ ಗಾಜು ಒಡೆದು ಚೂರುಚೂರಾಗಿದೆ.
ಘಟನೆಯಿಂದ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾದರೂ, ಚಾಲಕ ಹರೀಶ್ ಪೂಜಾರಿ ಅವರು ವಿಚಲಿತರಾಗದೆ ಸಮಯಪ್ರಜ್ಞೆಯಿಂದ ಬಸ್ ನಿಲ್ಲಿಸಿದ್ದಾರೆ. ಅವರ ಈ ನಡೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಬಸ್ ಚಾಲಕ ಪುತ್ತೂರಿನ ಸಂಟ್ಯಾರು ಕೂರೇಲು ನಿವಾಸಿ ಹರೀಶ್ ಪೂಜಾರಿ ಮೇಲೆ ಗಾಜಿನ ಚೂರುಗಳು ಬಿದ್ದು ಗಾಯಗೊಂಡಿದ್ದರು ಅವರು ವೇಗವಾಗಿ ಹೋಗುತ್ತಿದ್ದ ಬಸ್ ನ್ನು ತಕ್ಷಣ ನಿಯಂತ್ರಿಸಿದ್ದಾರೆ. ಅವಘಡ ಸಂದರ್ಭ ಡ್ರೈವರ್ ಸ್ಟೇರೀಂಗ್ ಕೈಬಿಟ್ಟದ್ದರೂ ಬಸ್ ಡಿವೈಡರ್ ಹಾರಿ ಭಾರೀ ಅವಘಡ ಸಂಭವಿಸುತ್ತಿತ್ತು ಎನ್ನಲಾಗಿದೆ.
ಮಂಗಳೂರು
Ujire-ಭಾರೀ ಜನಸ್ತೋಮದೊಂದಿಗೆ ಸೌಜನ್ಯ ನ್ಯಾಯದ ನಡಿಗೆ
ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.

ಮಂಗಳೂರು: ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರುತನಿಖೆಗೆ ಆಗ್ರಹಿಸಿ ಸೌಜನ್ಯ ಪರ ಹೋರಾಟಗಾರರು ಉಜಿರೆಯಿಂದ ಬೆಳ್ತಂಗಡಿವರೆಗೆ ನ್ಯಾಯದ ನಡಿಗೆ ಹಮ್ಮಿಕೊಂಡಿದ್ದಾರೆ.
ಉಜಿರೆಯಿಂದ ಆರಂಭವಾದ ಬೃಹತ್ ಜಾಥಾದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು, ಮೌನ ಮೆರವಣಿಗೆಯ ಮೂಲಕ ಸೌಜನ್ಯಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಲಾಯಿತು. ಸುಮಾರು ಐದು ಕಿಲೋಮೀಟರ್ ದೂರದವರೆಗೆ ಹೋರಾಟಗಾರರು ನಡಿಗೆಯಲ್ಲಿ ಸಾಗಲಿದ್ದಾರೆ.
ನ್ಯಾಯದ ನಡಿಗೆಯ ಬಳಿಕ ಬೆಳ್ತಂಗಡಿಯ ಮೈದಾನದಲ್ಲಿ ಬೃಹತ್ ಅಭಿನಂದನಾ ಸಮಾವೇಶ ನಡೆಯಲಿದೆ. ಸೌಜನ್ಯ ಪರವಾಗಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದ ವಕೀಲರ ತಂಡಕ್ಕೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ವಕೀಲರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.
ಬಿಗ್ ನ್ಯೂಸ್
Kaavu-BIG BREAKING: ಕಾವು ಬಳಿ ಹೆದ್ದಾರಿಗೆ ಉರುಳಿದ ಮರಗಳು, ಹೈಟೆನ್ಷನ್ ವಿದ್ಯುತ್ ಕಂಬ : ಮಾಣಿ – ಮೈಸೂರು ಹೈವೆಯಲ್ಲಿ ವಾಹನ ಸಂಚಾರ ಸ್ಥಗಿತ
ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ಹೆದ್ದಾರಿಯ ಕಾವು ಬಳಿ ಮರ ಹಾಗೂ ಹೈಟೆನ್ಷನ್ ವಿದ್ಯುತ್ ಕಂಬ ರಸ್ತೆಗೆ ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸುಳ್ಯ, ಮಡಿಕೇರಿ ಹಾಗೂ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಪುತ್ತೂರು: ಭಾರೀ ಗಾಳಿ ಮಳೆಗೆ ಮಾಣಿ–ಮೈಸೂರು ಹೆದ್ದಾರಿಯ ಕಾವು ಬಳಿ ಮರ ಹಾಗೂ ಹೈಟೆನ್ಷನ್ ವಿದ್ಯುತ್ ಕಂಬ ರಸ್ತೆಗೆ ಉರುಳಿಬಿದ್ದ ಪರಿಣಾಮ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಸುಳ್ಯ, ಮಡಿಕೇರಿ ಹಾಗೂ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.
ಶುಕ್ರವಾರ (ಅ. 9) ಮಧ್ಯಾಹ್ನ ಸುಮಾರು 4 ಗಂಟೆಗೆ ಕಾವು ಪರಿಸರದಲ್ಲಿ ಭಾರೀ ಗಾಳಿ ಮಳೆಯಾಗಿದೆ. ಈ ವೇಳೆ ಮರ ಹಾಗೂ ವಿದ್ಯುತ್ ಕಂಬ ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದ್ದು, ಮಡ್ಯಂಗಳ , ಮದ್ಲ ಎಂಬಲ್ಲಿ ಹಲವು ಮರಗಳು ಧರೆಗುರುಳಿವೆ. ಪೆರಿಗೇರಿ ರಸ್ತೆಯಲ್ಲೂ ಒಂದು ಮರ ಧರೆಗುರುಳಿದೆ ಜೊತೆಗೆ ವಿದ್ಯುತ್ ತಂತಿಗಳೂ ರಸ್ತೆಗೆ ಬಿದ್ದಿವೆ. ಇದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಸ್ಥಳೀಯರ ನೆರವಿನೊಂದಿಗೆ ಮೆಸ್ಕಾಂ, ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮರ, ವಿದ್ಯುತ್ ಕಂಬ ಮತ್ತು ತಂತಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳದಲ್ಲಿ ಸಂಚಾರ ನಿಯಂತ್ರಿಸುತ್ತಿದ್ದಾರೆ.
ತೆರವು ಕಾರ್ಯಾಚರಣೆಗೆ ಸುಮಾರು 3ರಿಂದ 4 ಗಂಟೆಗಳ ಕಾಲ ಬೇಕಾಗುವ ಸಾಧ್ಯತೆಯಿದ್ದು, ಪುತ್ತೂರಿನಿಂದ ಮೈಸೂರು ಕಡೆಗೆ ತೆರಳುವ ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತೆ ಪುತ್ತೂರು ಗ್ರಾಮಾಂತರ ಠಾಣೆಯ ಎಸ್ಐ ಸುಷ್ಮಾ ಭಂಡಾರಿ ತಿಳಿಸಿದ್ದಾರೆ.
-
Uncategorized9 hours ago
ಬೋನಿಗೆ ಬಿದ್ದ ಅಪರೂಪದ ಕರಿ ಚಿರತೆ!
-
Uncategorized8 hours ago
ರಬ್ಬರ್ ಗೆ ಭರ್ಜರಿ ಬೆಲೆ; ರಬ್ಬರ್ ಶೀಟ್ ದರದಲ್ಲೂ ಏರಿಕೆ
-
Uncategorized6 hours ago
ಸಮುದ್ರಕ್ಕೆ ಇಳಿದಿದ್ದ ಉಜಿರೆ ಕಾಲೇಜಿನ ವಿದ್ಯಾರ್ಥಿ ಅಲೆಗಳ ಸೆಳೆತಕ್ಕೆ ಬಲಿ; ಮೃತದೇಹ ಪತ್ತೆ
-
Uncategorized10 hours ago
ಪುತ್ತೂರು–ಉಪ್ಪಿನಂಗಡಿ ರಸ್ತೆ ದುರಸ್ತಿಗೆ ಶಾಸಕ ಅಶೋಕ್ ರೈ ಸೂಚನೆ
-
Uncategorized8 hours ago
ಪುತ್ತೂರು : ನಸುಕಿನ ಜಾವ ಹಳೇ ಕಟ್ಟಡದಲ್ಲಿ ಕಾಣಿಸಿದ ಬೆಂಕಿ – ಅನಾಹುತ ತಪ್ಪಿಸಲು ನೆರವಾದ ರವಿಕುಮಾರ್ ರೈ
-
Uncategorized7 hours ago
ಮುಂಬೈನಲ್ಲಿ ‘ಬನ’ ತುಳು ಚಿತ್ರಕ್ಕೆ ಪ್ರೇಕ್ಷಕರ ಮೆಚ್ಚುಗೆ; ಎರಡೂ ಪ್ರೀಮಿಯರ್ ಶೋ ಹೌಸ್ಫುಲ್ |


















