ರಾಜಕೀಯ
AAP Dakshina Kannada | ಗುಜರಾತಿನಲ್ಲಿ 40 ವರ್ಷ ಆಡಳಿತ ಮಾಡಿದ ಮೋದಿ, ಷಾ ಈಗ ಶಾಲೆಗಳಿಗೆ ಹೊರಟಿದ್ದಾರೆ : ಇದು ಆಪ್ ಎಫೆಕ್ಟ್ : ದಕ್ಷಿಣಕನ್ನಡ ಆಪ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ರಾಜ್ಯ ಅಧ್ಯಕ್ಷ ಪೃಥ್ವಿ ರೆಡ್ಡಿ
ಮಂಗಳೂರು: ನಮ್ಮ ದೇಶದಲ್ಲಿ ಆಮ್ ಆದ್ಮಿ ಪಕ್ಷ ಕಡಿಮೆ ಅವಧಿಯಲ್ಲೇ ಜನಜಾಮಾನ್ಯರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದು, ದೆಹಲಿ, ಪಂಜಾಬ್ ರಾಜ್ಯಗಳ ಅನಂತರ ನಾವು ಗುಜರಾತ್ ರಾಜ್ಯ ವಿಧಾನಸಭಾ ಚುನಾವಣೆಯನ್ನು ಗೆಲ್ಲಲಿದ್ದೇವೆ ಎಂದು ಭರವಸೆಯನ್ನು ದೇಶದಲ್ಲಿ ಆಮ್ ಆದ್ಮಿ ಪಕ್ಷದ (AAP Dakshina Kannada) ರಾಜ್ಯ ಅಧ್ಯಕ್ಷ ಪೃಥ್ವಿ ರೆಡ್ಡಿ ವ್ಯಕ್ತಪಡಿಸಿದ್ದಾರೆ.
ಅವರು ಮಂಗಳೂರು ಡಾನ್ ಬಾಸ್ಕೋ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆಮ್ ಆದ್ಮಿ ಪಕ್ಷದ ವತಿಯಂದ ಆಯೋಜಿಸಲಾದ ಪಕ್ಷದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿ ಎಎಪಿ ಸರಕಾರದ ಬಂದಾಗ ಉತ್ತಮ ಗುಣಮಟ್ಟದ ಶಿಕ್ಷಣಸೌಲಭ್ಯ, ವೈದ್ಯಕೀಯ ಸೌಲಭ್ಯದೊಂದಿಗೆ ಶೂನ್ಯ ಪರ್ಸೆಂಟ್ ಕಮೀಷನ್ ನೂರು ಪರ್ಸೆಂಟ್ ಕೆಲಸ ಮಾಡಿ ತೋರಿಸುತ್ತೇವೆ ಎಂದು ಪೃಥ್ವಿ ರೆಡ್ಡಿ ಭರವಸೆ ನೀಡಿದರು.
ಗುಜರಾತ್ ರಾಜ್ಯದಲ್ಲಿ 40 ವರ್ಷಗಳಿಂದ ಆಡಳಿತ ನಡೆಸುತ್ತಿದ್ದರು ಬಿಜೆಪಿ ಮುಖಂಡರಾದ ನರೇಂದ್ರ ಮೋದಿ, ಅಮಿತ್ ಶಾ ಈಗ ಶಾಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಶಿಕ್ಷಣ ಸೌಲಭ್ಯಗಳ ಬಗ್ಗೆ ವಿದ್ಯಾರ್ಥಿಗಳು ಈಗ ರಾಹುಲ್ ಗಾಂಧಿಯವರನ್ನು ಪ್ರಶ್ನಿಸುತ್ತಿದ್ದಾರೆ. ಇದು ಆಮ್ ಆದ್ಮಿ ಪಕ್ಷದ ಸಾಧನೆಯಾಗಿದೆ.
ಕರ್ನಾಟಕದ ಜನತೆ ಮೂರು ಪಕ್ಷಗಳನ್ನು ಕೂಡ ಕಡೆಗಣಿಸಿ ಎಎಪಿಗೆ ಬೆಂಬಲ ನೀಡುತ್ತಾರೆ. ನಾವು ಜನರಲ್ಲಿ ಓಟು ಕೇಳಬೇಕಾಗಿಲ್ಲ. ನಾವು ಇದ್ದೇವೆ ಎಂದು ಪ್ರತಿ ಬೂತುಗಳಲ್ಲಿ ಕೂಡ ಮನವರಿಕೆ ಮಾಡಿದರೆ ಸಾಕು ಎಂದು ಪೃಥ್ವಿ ರೆಡ್ಡಿ ಹೇಳಿದರು.
ಕರಾವಳಿಯ ಜಿಲ್ಲೆಗಳಲ್ಲಿ ಪಕ್ಷವನ್ನು ಕಟ್ಟಲು ಸಾಧ್ಯವಿದೆ ಎಂಬ ವಿಶ್ವಾಸವನ್ನು ದೊಡ್ಡ ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರು ನೀಡಿದ್ದಾರೆ ಎಂದವರು ಹೇಳಿದರು.
ಮಂಗಳೂರು ಅಭಿವೃದ್ಧಿ ಆಗಿಲ್ಲ ರಸ್ತೆ ಹೆದ್ದಾರಿ, ಸಮುದ್ರ ಮಾರ್ಗ, ವಿಮಾನ ನಿಲ್ದಾಣ, ಈ ಮೂರು ಮೂಲಭೂತ ಸೌಲಭ್ಯಗಳು ಇರುವ ನಗರ ರಾಜ್ಯದಲ್ಲಿ ಬೇರೊಂದಿಲ್ಲ. ಇದರೊಂದಿಗೆ ಉತ್ತಮ ಶೈಕ್ಷಣಿಕೆ ಸೌಲಭ್ಯ ಇದ್ದರೂ ಯಾವುದೇ ಸರಕಾರಗಳು ಮಂಗಳೂರಿನ ಅಭಿವೃದ್ದಿಗೆ ಆದ್ಯತೆ ನೀಡಿಲ್ಲ. ಎಲ್ಲ ಅಭಿವೃದ್ಧಿಗಳು ಬೆಂಗಳೂರು ಕೇಂದ್ರಿತ ಆಗಿರುವುದು ಸರಿಯಲ್ಲ ಎಂದವರು ಹೇಳಿದರು.
‘ನವದೆಹಲಿಯಲ್ಲಿ ಸರ್ಕಾರಿ ಶಾಲೆಗಳು ಶೇ 99ಕ್ಕಿಂತಲೂ ಹೆಚ್ಚು ಫಲಿತಾಂಶ ದಾಖಲಿಸುತ್ತಿವೆ. ಅಲ್ಲಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಐಐಟಿ, ನೀಟ್ ಪರೀಕ್ಷೆಗಳಲ್ಲೂ ಉತ್ತಮ ಸಾಧನೆ ತೋರಿದ್ದಾರೆ. ನಮ್ಮ ರಾಜ್ಯದಲ್ಲಿ ವ್ಯತಿರಿಕ್ತ ಸ್ಥಿತಿ ಇದೆ. ಇಲ್ಲಿ ಸರ್ಕಾರಿ ಶಾಲಾ ಮಕ್ಕಳ ಪೋಷಕರಿಂದಲೂ ತಿಂಗಳಿಗೆ 100 ರೂಪಾಯಿ ಶುಲ್ಕ ಪಡೆಯಲು ಸರ್ಕಾರ ಮುಂದಾಗಿದೆ’ ಎಂದರು.
‘ನವದೆಹಲಿ ಹಾಗೂ ಪಂಜಾಬ್ ಸರ್ಕಾರಗಳು ಭ್ರಷ್ಟಾಚಾರದ ವಿರುದ್ಧ ಶೂನ್ಯ ಸಹನೆ ತೋರಿಸುತ್ತಿವೆ. ಆದರೆ, ನಮ್ಮ ರಾಜ್ಯದಲ್ಲಿ ಸರ್ಕಾರವೇ ಶೇ 40 ಪರ್ಸೆಂಟ್ ಕಮಿಷನ್ ದಂಧೆಯ ಹಿಂದೆ ಬಿದ್ದಿದೆ. ನಮ್ಮಲ್ಲೂ ಸಕಾರಾತ್ಮಕ ಬದಲಾವಣೆಗಳು ಆಗಬೇಕಲ್ಲವೇ’ ಎಂದು ಪ್ರಶ್ನಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9 ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ಆದರೆ ಒಂದೇ ಒಂದು ಸರ್ಕಾರಿ ವೈದ್ಯಕೀಯ ಕಾಲೇಜೂ ಇಲ್ಲ. ಹಣ ಇದ್ದವರಿಗೆ ಮಾತ್ರ ಉನ್ನತ ಶಿಕ್ಷಣ ಎಂಬ ಸ್ಥಿತಿ ಇದೆ ಎಂದರು.
ಸುರತ್ಕಲ್ ಟೋಲ್ ಗೇಟ್ ಅಕ್ರಮ ಎಂದು ಎಲ್ಲರೂ ಒಪ್ಪಿದ್ದಾರೆ. ಹೀಗಿದ್ದರೂ ಅದನ್ನು ಬಿಜೆಪಿ ನೇತೃತ್ವದ ಸರ್ಕಾರ ತೆರವುಗೊಳಿಸಿಲ್ಲ. ಅದರ ಬದಲು, ಸಂಸದ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ಅವಧಿಯಲ್ಲಿ ಅದನ್ನು ನಿರ್ಮಿಸಲಾಗಿದೆ ಎಂದು ಹೇಳುತ್ತಾರೆ. ಕಾಂಗ್ರೆಸ್ ಆಳ್ವಿಕೆಯಿಂದ ಬೇಸತ್ತು ಜನರು ಬಿಜೆಪಿಯನ್ನು ಗೆಲ್ಲಿಸಿದ್ದರು ಎಂಬುದು ನಳಿನ್ ಅವರಿಗೆ ಗೊತ್ತಿಲ್ಲವೇ. ಟೋಲ್ ಗೇಟ್ ರದ್ದುಪಡಿಸಲು ವಿಳಂಬ ಯಾಕೆ ಎಂದವರು ಪ್ರಶ್ನಿಸಿದರು.
ನಮ್ಮ ಕ್ಲಿನಿಕ್ ಕಾರ್ಯಕ್ರಮವನ್ನು ಆರಂಭಿಸುವ ಮೂಲಕ ರಾಜ್ಯ ಸರ್ಕಾರವು ಎಎಪಿಯ ಕಾರ್ಯಕ್ರಮಗಳನ್ನು ನಕಲಿ ಮಾಡುತ್ತಿದೆ.ಪ್ರತಿಪಕ್ಷ ಅದನ್ನು ಕಾಪಿ ಮಾಡುತ್ತದೆ ಎಂದರೆ ಅದರ ಅರ್ಥವೇನು. ಚೆನ್ನಾಗಿದೆ ಎಂದಲ್ಲವೇ ಎಂದ ಅವರು ಇದು ನಮ್ಮ ಪಕ್ಷದ ಆಡಳಿತಕ್ಕೆ ಸಿಕ್ಕ ಮನ್ನಣೆಯಾಗಿದೆ ಎಂದರು.ನವದಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ನೋಟಿನಲ್ಲಿ ಲಕ್ಷ್ಮೀ ಮತ್ತು ಗಣಪತಿಯ ಚಿತ್ರ ಮುದ್ರಿಸಬೇಕು ಎಂದು ಹೇಳಿಕೆ ನೀಡಿದ್ದನ್ನು ಸಮರ್ಥಿಸಿಕೊಂಡ ಅವರು, ಜಾತಿ ಧರ್ಮಗಳು ವಾಸ್ತವ. ಅವುಗಳನ್ನು ಬಳಸಿ ವಿಭಜನೆಯ ರಾಜಕೀಯವನ್ನು ನಾವು ಮಾಡುವುದಿಲ್ಲ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಿಂದ ಕನಿಷ್ಟ ಒಂದೆರಡು ಶಾಸಕರನ್ನು ಗೆಲ್ಲಿಸಿಕೊಡುವ ಪ್ರಯತ್ನ ಮಾಡುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಸಂತೋಷ್ ಕಾಮತ್ ಹೇಳಿದರು.
ಸಮಾವೇಶಕ್ಕೂ ಮುನ್ನ ನಗರದ ಸೋಜ ಆರ್ಕೇಡಿನಲ್ಲಿ ಆಮ್ ಆದ್ಮಿ ಪಕ್ಷದ ನೂತನ ಕಚೇರಿಯನ್ನು ಎಎಪಿ ಹಿತೈಷಿ ಮೈಕಲ್ ಡಿ ಸೋಜ ಅವರು ಉದ್ಘಾಟಿಸಿದರು.
ಆಮ್ ಆದ್ಮಿ ಜಾತಿ, ಧರ್ಮ ಭೇದಭಾವ ಇಲ್ಲದ ಪಕ್ಷವಾಗಿದ್ದು, ಭ್ರಷ್ಟಚಾರ ರಹಿತವಾಗಿ ಆಡಳಿತ ನೀಡುವ ದೇಶದ ಏಕೈಕ ಪಕ್ಷವಾಗಿದೆ. ಉತ್ತಮ ದೇಶವನ್ನು ಕಟ್ಟಲು ಜನರು ಆಮ್ ಆದ್ಮಿಯನ್ನು ಬೆಂಬಲಿಸಬೇಕು ಎಂದು ಮೈಕಲ್ ಡಿ ಸೋಜ ಹೇಳಿದರು.
ವೇದಿಕೆಯಲ್ಲಿ ಪಕ್ಷದ ರಾಜ್ಯ ಜತೆ ಕಾರ್ಯದರ್ಶಿ ವಿವೇಕಾನಂದ ಸಾಲಿನ್ಸ್, ರಾಷ್ಟ್ರೀಯ ಸಮಿತಿ ಸದಸ್ಯ ಅಶೋಕ ಎಡಮಲೆ, ಮಂಗಳೂರು ವಿಧಾನಸಭಾ ಕ್ಷೇತ್ರದ ಮಹಿಳಾ ಘಟಕದ ಅಧ್ಯಕ್ಷೆ ಬೆನೆಟ್ ನವಿತಾ ಮೊರಾಸ್, ಉಡುಪಿ ಜಿಲ್ಲಾಧ್ಯಕ್ಷ ದಿವಾಕರ್ ಸನಿಲ್, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಬಾಲಕೃಷ್ಣ ನಾಯ್ಕ, ಮೂಡಬಿದಿರೆ ವಿಧಾನಸಭಾ ಕ್ಷೇತ್ರದ ವಿಜಯನಾಥ ವಿಠಲ ಶೆಟ್ಟಿ, ಪುತ್ತೂರು ವಿಧಾನಸಭಾ ಕ್ಷೇತ್ರದ ಡಾ.ಬಿ.ಕೆ.ವಿಶುಕುಮಾರ್, ಸುಳ್ಯ ವಿಧಾನಸಭಾ ಕ್ಷೇತ್ರದ ಸುಮನ ಬೆಳ್ಳಾರ್ಕರ್, ಜಿಲ್ಲಾ ಕಾರ್ಯದರ್ಶಿ ವೇಣು ಗೋಪಾಲ್ ಉಪಸ್ಥಿತರಿದ್ದರು.
ದಿಟ್ಟ ಮಹಿಳಾ ಹೋರಾಟಗಾರ್ತಿ ಎಂದು ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರನ್ನು ಪೃಥ್ವಿ ರೆಡ್ಡಿ ಅವರು ಅಭಿನಂದಿಸಿದರು. ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ನಾಡಗೀತೆ ಸಹಿತ ಕನ್ನಡ ಭಾವಗೀತೆಗಳನ್ನು ಹಾಡಲಾಯಿತು.
ಮೊದಲಿಗೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ನಗರದ ಪಂಪ್ ವೆಲ್ ವೃತ್ತದಿಂದ ಅಂಬೇಡ್ಕರ್ ವೃತ್ತದ ತನಕ ಮೆರವಣಿಗೆ ನಡೆಸಿದರು. ಪುರುಷೋತ್ತಮ ಕೊಲ್ಪೆ ಸ್ವಾಗತಿಸಿದರು. ಸಂದೀಪ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಉಪಮೇಯರ್ ಗಂಡನಿಂದ ಬೆದರಿಕೆಗೆ ಆಮ್ ಆದ್ಮಿ ಆಕ್ರೋಶ :
ಮಂಗಳೂರುಃ ಕರಾವಳಿಯಲ್ಲಿ ಅಮ್ ಆದ್ಮಿ ಪಕ್ಷದ ಕಾರ್ಯಕರ್ತರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದನ್ನು ಶ್ಲಾಘಿಸಿ ಎಎಪಿ ಸಮಾವೇಶದಲ್ಲಿ ಮಾತನಾಡಿದ ಹಿರಿಯ ಬಿಜೆಪಿ ಕಾರ್ಯಕರ್ತ ನಾರಾಯಣ ಪ್ರಭು ಅವರಿಗೆ ಜೀವ ಬೆದರಿಕೆ ನೀಡಿದ ಮಂಗಳೂರು ನಗರಪಾಲಿಕೆ ಉಪಮೇಯರ್ ಗಂಡನ ವಿರುದ್ಧ ಆಮ್ ಆದ್ಮಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿ ರಾಜ್ಯ ಘಟಕದ ಅಧ್ಯಕ್ಷ ಪೃಥ್ವಿ ರೆಡ್ಡಿ ಅವರು, ಮಂಗಳೂರಿಂತಹ ಸುಶಿಕ್ಷಿತ ನಾಗರಿಕರ ಊರಿನಲ್ಲಿ ನಾರಾಯಣ ಪ್ರಭು ಅವರಂತಹ ಹಿರಿಯರ ಮನೆಗೆ ನುಗ್ಗಿ ಹೊಡೆದು ಹಾಕುತ್ತೇವೆ ಎಂದು ಜೀವ ಬೆದರಿಕೆ ಘಟನೆಗಳು ನಡೆದಾಗ ನಾಗರಿಕರು ಕೇವಲ ಸಿಟ್ಟಾದರೆ ಸಾಲದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಬೇಕು. ನಾರಾಯಣ ಪ್ರಭು ಅವರಿಗೆ ಪೊಲೀಸ್ ರಕ್ಷಣೆ ನೀಡಬೇಕು. ಅವರ ಬೆಂಬಲಕ್ಕೆ ಪಕ್ಷ ಸದಾ ನಿಲ್ಲುತ್ತದೆ ಎಂದರು.
ಜನಸಂಘದ ಕಾಲದಿಂದ ಕಾರ್ಯಕರ್ತರಾಗಿದ್ದ ನಾರಾಯಣ ಪ್ರಭು ಅವರು ವಾಸಿಸುವ 41ನೇ ವಾರ್ಡ್ ಪರಿಸರದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಆಗಿದ್ದು ಅದನ್ನು ಬಗೆಹರಿಸುವಲ್ಲಿ ಆಡಳಿತ ನಡೆಸುವವರಿಗೆ ಯೋಗ್ಯತೆ ಇಲ್ಲ ಎಂದವರು ಹೇಳಿಕೆ ನೀಡಿರುವುದಕ್ಕೆ ಪ್ರತಿಯಾಗಿ ಉಪಮೇಯರ್ ಪೂರ್ಣಿಮಾ ಅವರ ಗಂಡ ದೂರವಾಣಿ ಮೂಲಕ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗುವುದು.
ಕಾರ್ಪೋರೇಟರ್ ಆಗಿ ಕೆಲಸ ಮಾಡಲು ಆಗುವುದಿಲ್ಲವಾದರೆ ಮನೆಯಲ್ಲಿ ಇರಬಹುದಲ್ಲ, ಯಾಕೆ ಕಾರ್ಪೋರೇಟರ್ ಆಗಬೇಕಾಗಿತ್ತು. ಕಾರ್ಪೋರೇಟರ್ ಗಂಡನು ಹೆಂಡತಿಯ ಪರವಾಗಿ ಓಡಾಡುವ ವ್ಯವಸ್ಥೆ ಬೇಕೆ ಎಂದು ನಾರಾಯಣ ಪ್ರಭು ಅವರು ಎಎಪಿ ಸಮಾವೇಶದಲ್ಲಿ ಹೇಳಿದ್ದರು.
ಇಂತಹ ಅನ್ಯಾಯಗಳ ವಿರುದ್ಧ ಆಮ್ ಆದ್ಮಿ ಪಾರ್ಟಿ ಕಾನೂನು ಬದ್ಧವಾಗಿ ಹೋರಾಟ ನಡೆಸುತ್ತದೆ ಎಂದು ರೆಡ್ಡಿ ಹೇಳಿದರು.
ರಾಜಕೀಯ
Kumaraswamy-ಹಳ್ಳಿಯ ಪ್ರತಿ ಹೆಣ್ಣುಮಕ್ಕಳಿಗೆ 2 ಹಸು ಉಚಿತ..! 2028ರ ಎನ್ಡಿಎ ಯೋಜನೆ ಘೋಷಿಸಿದ ಕುಮಾರಸ್ವಾಮಿ
ರಾಜ್ಯದಲ್ಲಿ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಎನ್ಡಿಎ ಅಧಿಕಾರಕ್ಕೆ ಬಂದರೆ ಗ್ರಾಮೀಣ ಪ್ರದೇಶದ ಪ್ರತಿ ಹೆಣ್ಣುಮಕ್ಕಳಿಗೆ ಎರಡು ಹಸುಗಳನ್ನು ಉಚಿತವಾಗಿ ನೀಡುವುದಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.
ಬೆಂಗಳೂರು: ರಾಜ್ಯದಲ್ಲಿ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟದ ಎನ್ಡಿಎ ಅಧಿಕಾರಕ್ಕೆ ಬಂದರೆ ಗ್ರಾಮೀಣ ಪ್ರದೇಶದ ಪ್ರತಿ ಹೆಣ್ಣುಮಕ್ಕಳಿಗೆ ಎರಡು ಹಸುಗಳನ್ನು ಉಚಿತವಾಗಿ ನೀಡುವುದಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಘೋಷಿಸಿದ್ದಾರೆ.
ಗುರುವಾರ ಬೆಂಗಳೂರಿನ ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2028ರಲ್ಲಿ ರಾಜ್ಯದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಹಳ್ಳಿಗಳಲ್ಲಿನ ಪ್ರತಿ ಹೆಣ್ಣುಮಕ್ಕಳಿಗೆ ಎರಡು ಹಸುಗಳನ್ನು ನೀಡುವ ಯೋಜನೆ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರು ತಮ್ಮ ಬೇಡಿಕೆಗಳಿಗಾಗಿ ಚಿಕ್ಕಚಿಕ್ಕ ಮಕ್ಕಳೊಂದಿಗೆ ಪ್ರತಿಭಟನೆ ನಡೆಸುತ್ತಿದ್ದರೂ, ಸರ್ಕಾರ ಅವರ ಬೇಡಿಕೆಗಳಿಗೆ ಸ್ಪಂದಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದರು. ಮುಖ್ಯಮಂತ್ರಿಗಳು ಅಧಿಕಾರಿಗಳೊಂದಿಗೆ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳುತ್ತಾರೆ. ಆದರೆ, ಭಾರತ್ ಜೋಡೋ ಸಂಘಗಳ ಹೆಸರಿನಲ್ಲಿ ಕಾಂಗ್ರೆಸ್ ಮುಖಂಡರಿಗೆ ಪ್ರತಿ ಪಂಚಾಯತ್ಗೆ 10 ಲಕ್ಷ ರೂ.ಗಳಂತೆ ಒಟ್ಟು 1,000 ಕೋಟಿ ರೂ. ನೀಡಲು ಯಾವ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಪ್ರಶ್ನಿಸಿದರು.
1,000 ಕೋಟಿ ರೂ. ನೀಡಲು ಯಾವ ಅಧಿಕಾರಿ ಸಲಹೆ ನೀಡಿದರು? ಅಷ್ಟು ಹಣವನ್ನು ನೀಡಲು ಸರ್ಕಾರಕ್ಕೆ ಸಾಧ್ಯವಾಗುತ್ತಿದ್ದರೆ, ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಸ್ಪಂದಿಸಿ ಅವರ ಗೌರವಧನ ಹೆಚ್ಚಿಸಲು 350 ಕೋಟಿ ರೂ. ನೀಡಲು ಸಾಧ್ಯವಿಲ್ಲವೇ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಮಂಗಳೂರು
Priyanka Kharge-ಮಂಗಳೂರಿನಲ್ಲಿ ಭಾರತದ ಮೊದಲ ಸುಸ್ಥಿರ ಕರಾವಳಿ ಡೇಟಾ ಸೆಂಟರ್ ಸ್ಥಾಪನೆ : ತಣ್ಣೀರುಬಾವಿಯಲ್ಲಿ ಸ್ಥಳ ಪರಿಶೀಲಿಸಿದ ಸಚಿವ ಪ್ರಿಯಾಂಕ ಖರ್ಗೆ; ತಣ್ಣೀರು ಭಾವಿಯಲ್ಲಿ 49 ಎಕರೆ ಪ್ರದೇಶ ಗುರುತು; ಯೋಜನೆಯ ಕಾರ್ಯಸಾಧ್ಯತೆ ಪರಿಶೀಲನೆಗೆ ಕ್ರಮ – ಬಿಯಾಂಡ್ ಬೆಂಗಳೂರು ಆಶಯದಡಿ ಜಾಗತಿಕ ಮಟ್ಟದ ತಂತ್ರಜ್ಞಾನ ಪರಿಸರ ವ್ಯವಸ್ಥೆ ನಿರ್ಮಾಣಕ್ಕೆ ಮತ್ತೊಂದು ಹೆಜ್ಜೆ
ಮಂಗಳೂರಿನ ತಣ್ಣೀರ್ಭವಿಯಲ್ಲಿ ಭಾರತದ ಮೊದಲ ಸುಸ್ಥಿರ ಕರಾವಳಿ ಡೇಟಾ ಸೆಂಟರ್ ಸ್ಥಾಪಿಸುವ ಸಾಧ್ಯತೆಯನ್ನು ಕರ್ನಾಟಕ ಸರ್ಕಾರ ಪರಿಶೀಲಿಸುತ್ತಿದೆ. ರಾಜ್ಯದ ಡಿಜಿಟಲ್ ಮೂಲಸೌಕರ್ಯವನ್ನು ವಿಸ್ತರಿಸುವುದರ ಜೊತೆಗೆ ಪರಿಸರದ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನ ಆಧಾರಿತ ಅಭಿವೃದ್ಧಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಮಂಗಳೂರು, ನ.26: ಮಂಗಳೂರಿನ ತಣ್ಣೀರ್ಭವಿಯಲ್ಲಿ ಭಾರತದ ಮೊದಲ ಸುಸ್ಥಿರ ಕರಾವಳಿ ಡೇಟಾ ಸೆಂಟರ್ ಸ್ಥಾಪಿಸುವ ಸಾಧ್ಯತೆಯನ್ನು ಕರ್ನಾಟಕ ಸರ್ಕಾರ ಪರಿಶೀಲಿಸುತ್ತಿದೆ. ರಾಜ್ಯದ ಡಿಜಿಟಲ್ ಮೂಲಸೌಕರ್ಯವನ್ನು ವಿಸ್ತರಿಸುವುದರ ಜೊತೆಗೆ ಪರಿಸರದ ಜವಾಬ್ದಾರಿಯನ್ನು ಗಮನದಲ್ಲಿಟ್ಟುಕೊಂಡು ತಂತ್ರಜ್ಞಾನ ಆಧಾರಿತ ಅಭಿವೃದ್ಧಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.
ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮಂಗಳೂರಿನ ತಣ್ಣೀರ್ಭವಿಯಲ್ಲಿರುವ ಪ್ರಸ್ತಾವಿತ ಸ್ಥಳವನ್ನು ಪರಿಶೀಲಿಸಿದರು. ಇಲ್ಲಿ ಸುಮಾರು 49 ಎಕರೆ ಭೂಮಿಯನ್ನು ಯೋಜನೆಯ ಕಾರ್ಯಸಾಧ್ಯತೆ ಪರಿಶೀಲನೆಗಾಗಿ ಗುರುತಿಸಲಾಗಿದೆ.
ಈ ಉಪಕ್ರಮದ ಕುರಿತು ಮಾತನಾಡಿದ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಅವರು, “ನಾವು ಒಪ್ಪಿಕೊಂಡರೂ, ಒಪ್ಪಿಕೊಳ್ಳದಿದ್ದರೂ ಎಐ (AI) ಈಗ ನಮ್ಮ ಬದುಕಿನ ಭಾಗವಾಗಿದೆ. ಎಐ ಯುಗದಲ್ಲಿ ಡೇಟಾ ಸೆಂಟರ್ಗಳು ಅತ್ಯಗತ್ಯ ಮೂಲಸೌಕರ್ಯಗಳಾಗಿವೆ. ಆದರೆ, ನೀರು ಮತ್ತು ವಿದ್ಯುತ್ನ್ನು ಸಮರ್ಥವಾಗಿ ಬಳಸಿಕೊಂಡು, ಪರಿಸರದ ಮೇಲಿನ ನಮ್ಮ ಜವಾಬ್ದಾರಿಗಳಿಗೆ ಯಾವುದೇ ಧಕ್ಕೆಯಾಗದಂತೆ ಈ ಮಹತ್ವದ ಮೂಲಸೌಕರ್ಯವನ್ನು ಸುಸ್ಥಿರ ರೀತಿಯಲ್ಲಿ ಅಭಿವೃದ್ಧಿಪಡಿಸುವುದು ನಮ್ಮ ಹೊಣೆಗಾರಿಕೆಯಾಗಿದೆ. ತಂತ್ರಜ್ಞಾನ ಆಧಾರಿತ ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಸುಸ್ಥಿರತೆ ಎರಡೂ ಪರಸ್ಪರ ಪೂರಕವಾಗಿ ಸಾಗಬಲ್ಲವು ಎಂಬುದನ್ನು ತೋರಿಸುವುದು ನಮ್ಮ ಉದ್ದೇಶವಾಗಿದೆ” ಎಂದರು.
ಕರ್ನಾಟಕ ಸುಸ್ಥಿರ ಡೇಟಾ ಸೆಂಟರ್ ನೀತಿ 2026–2031ರ ಅಡಿಯಲ್ಲಿ ಈ ಉಪಕ್ರಮವನ್ನು ಪರಿಶೀಲಿಸಲಾಗುತ್ತಿದ್ದು, ನವೀಕರಿಸಬಹುದಾದ ಇಂಧನ ಬಳಕೆ, ಸುಧಾರಿತ ಶೀತಲೀಕರಣ ತಂತ್ರಜ್ಞಾನಗಳು ಮತ್ತು ಪರಿಸರ ಸ್ನೇಹಿ ಡಿಜಿಟಲ್ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ.
ಒಟ್ಟು 49 ಎಕರೆ ಭೂಮಿಯಲ್ಲಿ, ಅನ್ವಯವಾಗುವ ಕರಾವಳಿ ನಿಯಂತ್ರಣ ವಲಯದ (CRZ) ನಿಯಮಗಳ ಪ್ರಕಾರ ಸುಮಾರು 20 ಎಕರೆ ಪ್ರದೇಶದಲ್ಲಿ ಶಾಶ್ವತ ನಿರ್ಮಾಣ ಕೈಗೊಳ್ಳಲು ಅವಕಾಶವಿದೆ ಎಂದು ಅಂದಾಜಿಸಲಾಗಿದೆ. ಮುಂದಿನ ನಿರ್ಧಾರಗಳನ್ನು ಕೈಗೊಳ್ಳುವ ಮೊದಲು ಸ್ಥಳದ ಕಾರ್ಯಸಾಧ್ಯತೆ, ಮೂಲಸೌಕರ್ಯದ ಅಗತ್ಯತೆಗಳು ಹಾಗೂ ಪರಿಸರ ಸಂಬಂಧಿತ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುವುದು.
ಸ್ಥಳದ ಸೂಕ್ತತೆ, ಅಗತ್ಯ ಮೂಲಸೌಕರ್ಯಗಳ ಗುರುತಿಸುವಿಕೆ ಮತ್ತು ಸಮಗ್ರ ಶ್ವೇತಪತ್ರ ಸಿದ್ಧಪಡಿಸುವ ಉದ್ದೇಶದಿಂದ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಇತರ ಸಂಬಂಧಪಟ್ಟ ಪಾಲುದಾರರೊಂದಿಗೆ ಸರ್ಕಾರ ಸಮಾಲೋಚನೆ ನಡೆಸಲಿದೆ. ಈ ಶ್ವೇತಪತ್ರದಲ್ಲಿ ಸ್ಥಳದ ಅವಕಾಶಗಳು, ಮಿತಿಗಳು ಮತ್ತು ಅಭಿವೃದ್ಧಿಯ ಸಾಧ್ಯತೆಗಳನ್ನು ವಿವರಿಸಲಾಗುವುದು. ಖಾಸಗಿ ವಲಯದ ಕಂಪನಿಗಳು ಹಾಗೂ ಸಂಭಾವ್ಯ ಹೂಡಿಕೆದಾರರೊಂದಿಗೆ ಚರ್ಚೆ ನಡೆಸಲು ಇದು ಆಧಾರವಾಗಲಿದೆ.
ಎಐ ಯುಗಕ್ಕೆ ಸುಸ್ಥಿರ ಡಿಜಿಟಲ್ ಮೂಲಸೌಕರ್ಯ
ಕೃತಕ ಬುದ್ಧಿಮತ್ತೆ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳ ತ್ವರಿತ ಬೆಳವಣಿಗೆಯೊಂದಿಗೆ ಡೇಟಾ ಸೆಂಟರ್ಗಳು ಡಿಜಿಟಲ್ ಆರ್ಥಿಕತೆಯ ಅತ್ಯಗತ್ಯ ಮೂಲಸೌಕರ್ಯಗಳಾಗಿ ಹೊರಹೊಮ್ಮುತ್ತಿವೆ. ಈ ಬೆಳವಣಿಗೆಯ ಜೊತೆಗೆ ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆ ಮತ್ತು ಪರಿಸರ ಸಂರಕ್ಷಣಾ ಕ್ರಮಗಳಿಗೂ ಆದ್ಯತೆ ನೀಡುವುದು ಕರ್ನಾಟಕದ ಉದ್ದೇಶವಾಗಿದೆ.
ಕರ್ನಾಟಕ ಸುಸ್ಥಿರ ಡೇಟಾ ಸೆಂಟರ್ ನೀತಿ 2026–2031ರ ಅಡಿಯಲ್ಲಿ, ಪರಿಸರದ ಜವಾಬ್ದಾರಿಗಳನ್ನು ಮೂಲಸೌಕರ್ಯ ಅಭಿವೃದ್ಧಿಯ ಕೇಂದ್ರವಾಗಿಟ್ಟುಕೊಂಡು ರಾಜ್ಯದಲ್ಲಿ 1 GW ಸಾಮರ್ಥ್ಯದ ಡೇಟಾ ಸೆಂಟರ್ ಮೂಲಸೌಕರ್ಯವನ್ನು ನಿರ್ಮಿಸುವ ಗುರಿಯನ್ನು ಹೊಂದಲಾಗಿದೆ.
ತಣ್ಣೀರ್ಭವಿಯಲ್ಲಿ ಪ್ರಸ್ತಾವಿತವಾಗಿರುವ ಡೇಟಾ ಸೆಂಟರ್ನಲ್ಲಿ ನವೀಕರಿಸಬಹುದಾದ ಇಂಧನ, ಇಂಧನ ದಕ್ಷತೆಯ ಕಾರ್ಯಾಚರಣೆಗಳು, ಸುಧಾರಿತ ಶೀತಲೀಕರಣ ತಂತ್ರಜ್ಞಾನಗಳು ಮತ್ತು ಜವಾಬ್ದಾರಿಯುತ ನೀರಿನ ನಿರ್ವಹಣೆಗೆ ಒತ್ತು ನೀಡುವ ಸಾಧ್ಯತೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಮೂಲಕ ಕರಾವಳಿ ಪರಿಸರಕ್ಕೆ ಪೂರಕವಾಗಿ ಬೃಹತ್ ಡಿಜಿಟಲ್ ಮೂಲಸೌಕರ್ಯವನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದನ್ನು ತೋರಿಸುವುದು ಉದ್ದೇಶವಾಗಿದೆ.
ಮಂಗಳೂರು, ಮಣಿಪಾಲ ಮತ್ತು ಉಡುಪಿ: ಉದಯೋನ್ಮುಖ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರಗಳು
ಪ್ರಸ್ತಾವಿತ ಡೇಟಾ ಸೆಂಟರ್ ಕರ್ನಾಟಕದ ಕರಾವಳಿ ಭಾಗವನ್ನು ಸಮೃದ್ಧ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವಾಗಿ ರೂಪಿಸುವ ರಾಜ್ಯದ ವಿಶಾಲ ದೂರದೃಷ್ಟಿಯ ಭಾಗವಾಗಿದೆ. ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCCs), ಸ್ಟಾರ್ಟ್ಅಪ್ಗಳು, ಡೀಪ್ಟೆಕ್, ಸಾಗರ ಜೈವಿಕ ತಂತ್ರಜ್ಞಾನ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ಆದ್ಯತೆ ನೀಡುವ ಮೂಲಕ ಮಂಗಳೂರು, ಮಣಿಪಾಲ ಮತ್ತು ಉಡುಪಿಯನ್ನು ಪರಸ್ಪರ ಪೂರಕವಾದ ತಂತ್ರಜ್ಞಾನ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಪೂರಕವಾಗಿ ಉದ್ಯಮಗಳ ಸಹಭಾಗಿತ್ವದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಪ್ರತಿಭಾ ವಿಕಸನಕ್ಕೂ ಒತ್ತು ನೀಡಲಾಗುತ್ತಿದೆ.
ಈ ಪ್ರದೇಶವು ಈಗಾಗಲೇ ಸುಮಾರು ₹5,000 ಕೋಟಿ ಮೌಲ್ಯದ ಐಟಿ ರಫ್ತುಗಳನ್ನು ದಾಖಲಿಸಿದ್ದು, ಕರ್ನಾಟಕದ ತಂತ್ರಜ್ಞಾನ ಆರ್ಥಿಕತೆಗೆ ತನ್ನ ಕೊಡುಗೆಯನ್ನು ಹೆಚ್ಚಿಸುತ್ತಿದೆ. ಹೊಸ ಹೂಡಿಕೆಗಳನ್ನು ಆಕರ್ಷಿಸುವುದು, ನ್ಯಾನೋ ಜಾಗತಿಕ ಸಾಮರ್ಥ್ಯ ಕೇಂದ್ರಗಳ ಸ್ಥಾಪನೆಗೆ ಉತ್ತೇಜನ ನೀಡುವುದು ಮತ್ತು ಸ್ಥಳೀಯ ಪ್ರತಿಭೆಗಳಿಗೆ ಉನ್ನತ ಮೌಲ್ಯದ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಈ ಬೆಳವಣಿಗೆಯನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರ ಹೆಚ್ಚಿನ ಅವಕಾಶಗಳನ್ನು ಕಾಣುತ್ತಿದೆ.
ಬಿಯಾಂಡ್ ಬೆಂಗಳೂರು ಎಂಬ ದೂರದೃಷ್ಟಿಯ ಮೂಲಕ ರಾಜ್ಯದಾದ್ಯಂತ ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ತಂತ್ರಜ್ಞಾನ ಕ್ಲಸ್ಟರ್ಗಳನ್ನು ನಿರ್ಮಿಸಲು ಕರ್ನಾಟಕ ಬದ್ಧವಾಗಿದೆ. ಈ ಮೂಲಕ ನಾವೀನ್ಯತೆ, ಹೂಡಿಕೆ ಮತ್ತು ಉದ್ಯೋಗಾವಕಾಶಗಳು ಬೆಂಗಳೂರು ಮಹಾನಗರ ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ ರಾಜ್ಯದ ಇತರ ಭಾಗಗಳಿಗೂ ವಿಸ್ತರಿಸುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.
ಪ್ರಸ್ತಾವಿತ ಸುಸ್ಥಿರ ಕರಾವಳಿ ಡೇಟಾ ಸೆಂಟರ್ ಮುಂದಿನ ತಲೆಮಾರಿನ ಡಿಜಿಟಲ್ ಮೂಲಸೌಕರ್ಯ, ಖಾಸಗಿ ವಲಯದ ಸಹಭಾಗಿತ್ವ ಮತ್ತು ಪರಿಸರ ಜವಾಬ್ದಾರಿಯನ್ನು ಒಂದೆಡೆ ತರುವ ಮಹತ್ವದ ಅವಕಾಶವಾಗಿದೆ. ಆರ್ಥಿಕ ಬೆಳವಣಿಗೆ ಮತ್ತು ಪರಿಸರ ಸುಸ್ಥಿರತೆ ಒಟ್ಟೊಟ್ಟಿಗೆ ಸಾಗಬಲ್ಲವು ಎಂಬುದನ್ನು ತೋರಿಸುವ ಮೂಲಕ ಸದೃಢ ಹಾಗೂ ಭವಿಷ್ಯದ ಅಗತ್ಯಗಳಿಗೆ ಸನ್ನದ್ಧವಾಗಿರುವ ತಂತ್ರಜ್ಞಾನ ಆರ್ಥಿಕತೆಯನ್ನು ನಿರ್ಮಿಸುವುದು ಕರ್ನಾಟಕದ ವಿಶಾಲ ಉದ್ದೇಶವಾಗಿದೆ.
ಅಂತರ ರಾಜ್ಯ
CM post battle-ಉತ್ತರ ಪ್ರದೇಶ ಬಿಜೆಪಿಯಲ್ಲಿ ಸಿಎಂ ಕುರ್ಚಿ ಕದನ: ಚುನಾವಣೆಗೂ ಮುನ್ನವೇ ಭಿನ್ನಮತ?
ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನವೇ ಆಡಳಿತಾರೂಢ ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ವಿಚಾರವಾಗಿ ರಾಜಕೀಯ ಚರ್ಚೆ ತೀವ್ರಗೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಹೇಳಿಕೆಗಳು ಪಕ್ಷದೊಳಗಿನ ನಾಯಕತ್ವದ ವಿಚಾರವನ್ನು ಮುನ್ನೆಲೆಗೆ ತಂದಿವೆ.
ಲಕ್ನೋ: ಮುಂಬರುವ 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೂ ಮುನ್ನವೇ ಆಡಳಿತಾರೂಢ ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ವಿಚಾರವಾಗಿ ರಾಜಕೀಯ ಚರ್ಚೆ ತೀವ್ರಗೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ ಹೇಳಿಕೆಗಳು ಪಕ್ಷದೊಳಗಿನ ನಾಯಕತ್ವದ ವಿಚಾರವನ್ನು ಮುನ್ನೆಲೆಗೆ ತಂದಿವೆ.
ಪತ್ರಕರ್ತರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಮುಂದಿನ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಯೇ ಅಥವಾ ಬೇರೊಬ್ಬರು ಆ ಸ್ಥಾನಕ್ಕೇರುತ್ತಾರೆಯೇ ಎಂಬುದನ್ನು ತಾನು ನಿರ್ಧರಿಸುವುದಿಲ್ಲ ಎಂದು ಹೇಳಿದ್ದಾರೆ.
“ಬಿಜೆಪಿ ಅಭ್ಯರ್ಥಿಗಳು ಕಮಲದ ಚಿಹ್ನೆಯಡಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಚುನಾವಣೆ ಮುಗಿದ ಬಳಿಕ ಶಾಸಕರ ಸಭೆ ನಡೆಯಲಿದ್ದು, ಈ ಸಂದರ್ಭದಲ್ಲಿ ಕೇಂದ್ರದ ವೀಕ್ಷಕರು ಆಗಮಿಸಿ ಮುಂದಿನ ಮುಖ್ಯಮಂತ್ರಿ ಯಾರು ಎಂಬುದನ್ನು ನಿರ್ಧರಿಸಲಿದ್ದಾರೆ” ಎಂದು ಅವರು ತಿಳಿಸಿದ್ದಾರೆ.
ಮೌರ್ಯ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬುದು ಈಗಾಗಲೇ ಎಲ್ಲರಿಗೂ ತಿಳಿದಿದೆ ಎಂದು ಹೇಳಿದ್ದಾರೆ.
“ಪ್ರತಿಯೊಬ್ಬರೂ ಕಮಲದ ಚಿಹ್ನೆಯಡಿ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗುತ್ತದೆ. ನಾನೂ ಕಮಲದ ಚಿಹ್ನೆಯ ಮೇಲೆಯೇ ಸ್ಪರ್ಧಿಸುತ್ತೇನೆ. ಕಮಲದ ಹೂವೇ ನಮಗೆ ಎಲ್ಲವೂ” ಎಂದು ಯೋಗಿ ಹೇಳಿದ್ದಾರೆ. ಈ ಮೂಲಕ ಮುಂದಿನ ಚುನಾವಣೆಯಲ್ಲೂ ತಮ್ಮ ನಾಯಕತ್ವ ಮುಂದುವರಿಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್–ಎಸ್ಪಿ ಮೈತ್ರಿಯಲ್ಲೂ ಬಿಕ್ಕಟ್ಟು
ಇನ್ನೊಂದೆಡೆ, 2027ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷ (ಎಸ್ಪಿ) ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ವಿಚಾರವೂ ಬಿಕ್ಕಟ್ಟಿಗೆ ಕಾರಣವಾಗಿದೆ. ಕಾಂಗ್ರೆಸ್ಗೆ ಕೇವಲ 26 ಕ್ಷೇತ್ರಗಳನ್ನು ಬಿಟ್ಟುಕೊಡುವ ಎಸ್ಪಿ ಪ್ರಸ್ತಾವನೆಗೆ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ಸಂಸದ ಹಾಗೂ ಕಾರ್ಯಾಧ್ಯಕ್ಷ ಇಮ್ರಾನ್ ಮಸೂದ್, “ನಾವೇನು ಭಿಕ್ಷುಕರೇ? ನಮಗೂ ಸ್ವಾಭಿಮಾನವಿದೆ. ಮಾತುಕತೆ ಇದೇ ರೀತಿ ಮುಂದುವರಿದರೆ ಮೈತ್ರಿ ಎಲ್ಲಿದೆ?” ಎಂದು ಎಸ್ಪಿ ವಿರುದ್ಧ ಕಿಡಿಕಾರಿದ್ದಾರೆ.
ಒಟ್ಟಿನಲ್ಲಿ, ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನವೇ ಬಿಜೆಪಿ ನಾಯಕತ್ವದ ವಿಚಾರ ಹಾಗೂ ಕಾಂಗ್ರೆಸ್–ಎಸ್ಪಿ ಸೀಟು ಹಂಚಿಕೆ ವಿವಾದಗಳು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿವೆ.
-
ನಿಧನ ವಾರ್ತೆ13 hours agoMangaluru-ಮಂಗಳೂರು: ರಸ್ತೆ ದಾಟುತ್ತಿದ್ದ 2ನೇ ತರಗತಿ ವಿದ್ಯಾರ್ಥಿಯ ಮೇಲೆ ಬಸ್ ಹರಿದು ಸಾವು
-
ಬಿಗ್ ನ್ಯೂಸ್7 hours agoVitla-ವಿಟ್ಲ: ಚಿಕ್ಕಪ್ಪನನ್ನು ಕತ್ತಿಯಿಂದ ಕಡಿದು ಹತ್ಯೆಗೈದ ಯುವತಿ ಬಂಧನ
-
ಅಪರಾಧ12 hours agoPunacha-ಪುಣಚದಲ್ಲಿ ಬೈಕ್ಗೆ ಕಾರು ಡಿಕ್ಕಿ; ಸವಾರನಿಗೆ ಗಂಭೀರ ಗಾಯ – ನಿಲ್ಲಿಸದೆ ಪರಾರಿಯಾದ ಕಾರು?
-
ಅಂತರ ರಾಜ್ಯ13 hours agoChennai Jain couple-ತಿರುಪತಿ ತಿಮ್ಮಪ್ಪನಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ಚಿನ್ನ, ವಜ್ರಾಭರಣ ಕಾಣಿಕೆ ನೀಡಿದ ಚೆನ್ನೈ ಜೈನ ದಂಪತಿ..!
-
ಅಪರಾಧ12 hours agoPunacha-ಪುಣಚ: ಪತ್ನಿಯನ್ನು ಕೊಲೆಗೈದು ಹೃದಯಾಘಾತವೆಂದು ಬಿಂಬಿಸಲು ಯತ್ನ: ಪತಿಗೆ 5 ವರ್ಷ ಜೈಲು..!
-
ರಾಜಕೀಯ13 hours agoKumaraswamy-ಹಳ್ಳಿಯ ಪ್ರತಿ ಹೆಣ್ಣುಮಕ್ಕಳಿಗೆ 2 ಹಸು ಉಚಿತ..! 2028ರ ಎನ್ಡಿಎ ಯೋಜನೆ ಘೋಷಿಸಿದ ಕುಮಾರಸ್ವಾಮಿ
-
ಬಿಗ್ ನ್ಯೂಸ್7 hours agoVirupaksha Bhat-ಮಹಾಲಿಂಗೇಶ್ವರ ದೇವಸ್ಥಾನದ ಕಾಮಗಾರಿಗಳಿಗೆ ಹೈಕೋರ್ಟ್ ತಡೆಯಾಜ್ಞೆ: ಅನುಮತಿಯಿಲ್ಲದ ಕಾಮಗಾರಿ, ಟೆಂಡರ್ ಪ್ರಕ್ರಿಯೆ ಮುಂದುವರಿಸದಂತೆ ಮಧ್ಯಂತರ ಆದೇಶ; ದೇವಸ್ಥಾನದ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ, ನಿಯಮಬದ್ಧ ಆಡಳಿತಕ್ಕೆ ಆಗ್ರಹ : ದೂರುದಾರ ವಿರೂಪಾಕ್ಷ ಭಟ್ ಪತ್ರಿಕಾಗೋಷ್ಟಿ
-
ಅಪರಾಧ10 hours agoBantwal-ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ಗುಂಪುಗೂಡಿ ಗಲಾಟೆ; ಟೋಲ್ ಉಪಕರಣಗಳಿಗೆ ಹಾನಿ ಯತ್ನ – ಪ್ರಕರಣ ದಾಖಲು















