Uncategorized
ಗ್ರಾಮೀಣ ವಿದ್ಯಾರ್ಥಿಗಳಿಗೆ ಮಡಿಯಾಲದಲ್ಲಿ ಉಚಿತ ಎಐ ಪದವಿ ಶಿಕ್ಷಣ ಕೇಂದ್ರ; ನ. 30ರಂದು ನಾರಾಯಣ ಭಟ್ ಜನ್ಮಶತಾಬ್ದಿ ಸ್ಮರಣಾರ್ಥ ಭೂಮಿಪೂಜೆ; 2027–28ರಿಂದ 30 ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಯೋಜನೆ

ಮಡಿಯಾಲ: ನಗರ ಪ್ರದೇಶಗಳ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರುವ ಆಧುನಿಕ ತಂತ್ರಜ್ಞಾನ ಶಿಕ್ಷಣವನ್ನು ಗ್ರಾಮೀಣ ಪ್ರತಿಭೆಗಳಿಗೂ ತಲುಪಿಸುವ ಮಹತ್ವಾಕಾಂಕ್ಷೆಯ ಯೋಜನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಡಿಯಾಲದಲ್ಲಿ ಸಾಕಾರಗೊಳ್ಳುತ್ತಿದೆ. ಕೃತಕ ಬುದ್ಧಿಮತ್ತೆ (ಎಐ) ಮತ್ತು ಮೆಷಿನ್ ಲರ್ನಿಂಗ್‌ನಂತಹ ಭವಿಷ್ಯದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಉಚಿತ ಉನ್ನತ ಶಿಕ್ಷಣ ಒದಗಿಸುವ ಉದ್ದೇಶದಿಂದ ಶ್ರೀ ಮಡಿಯಾಲ ನಾರಾಯಣ ಭಟ್ ಉನ್ನತ ಶಿಕ್ಷಣ ಕೇಂದ್ರ ಸ್ಥಾಪನೆಯಾಗುತ್ತಿದೆ.
ಶ್ರೀ ಮಡಿಯಾಲ ನಾರಾಯಣ ಭಟ್ ಅವರ ಜನ್ಮಶತಾಬ್ದಿ ಸ್ಮರಣಾರ್ಥ ಸ್ಥಾಪನೆಯಾಗುತ್ತಿರುವ ಈ ಕೇಂದ್ರಕ್ಕೆ ನವೆಂಬರ್ 30ರಂದು ಭೂಮಿಪೂಜೆ ನಡೆಯಲಿದೆ. ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಸೋಮವಾರ ಬೆಳಿಗ್ಗೆ 10.30ಕ್ಕೆ ಭೂಮಿಪೂಜೆ ನೆರವೇರಿಸಲಿದ್ದಾರೆ.
ಪ್ರಶಾಂತಿ ಬಾಲಮಂದಿರ ಟ್ರಸ್ಟ್ ಆಶ್ರಯದಲ್ಲಿ, ಶ್ರೀ ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾಗಿ ಈ ಶಿಕ್ಷಣ ಕೇಂದ್ರ ಕಾರ್ಯಾರಂಭ ಮಾಡಲಿದೆ. ಆರ್ಥಿಕ ಪರಿಸ್ಥಿತಿ ಅಥವಾ ಗ್ರಾಮೀಣ ಪ್ರದೇಶದ ಹಿನ್ನಲೆ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅಡ್ಡಿಯಾಗಬಾರದು ಎಂಬ ಆಶಯದೊಂದಿಗೆ ಯೋಜನೆ ರೂಪಿಸಲಾಗಿದೆ.
ಆರಂಭಿಕ ಹಂತದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಮೆಷಿನ್ ಲರ್ನಿಂಗ್‌ಗೆ ವಿಶೇಷ ಆದ್ಯತೆ ನೀಡುವ ಬಿ.ಎಸ್ಸಿ. ಕಂಪ್ಯೂಟರ್ ಸೈನ್ಸ್ ಪದವಿ ಕಾರ್ಯಕ್ರಮ ಆರಂಭಿಸಲು ಉದ್ದೇಶಿಸಲಾಗಿದೆ. 2027–28ನೇ ಶೈಕ್ಷಣಿಕ ವರ್ಷದಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದ್ದು, ಮೊದಲ ಹಂತದಲ್ಲಿ 30 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಪ್ರವೇಶ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಬಾಲಕ ಮತ್ತು ಬಾಲಕಿಯರಿಬ್ಬರಿಗೂ ಪ್ರವೇಶಾವಕಾಶ ಇರಲಿದೆ.
ಪಠ್ಯಕ್ರಮವು ಕೇವಲ ಸೈದ್ಧಾಂತಿಕ ಅಧ್ಯಯನಕ್ಕೆ ಸೀಮಿತವಾಗದೆ ಪ್ರಾಯೋಗಿಕ ಕಲಿಕೆ, ಯೋಜನಾ ಆಧಾರಿತ ತರಬೇತಿ, ಸಂಶೋಧನೆ ಹಾಗೂ ಉದ್ಯಮ ಕ್ಷೇತ್ರಕ್ಕೆ ಅಗತ್ಯವಾದ ಕೌಶಲಾಭಿವೃದ್ಧಿಗೆ ಒತ್ತು ನೀಡಲಿದೆ. ಆಧುನಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳನ್ನು ಉದ್ಯೋಗ ಮತ್ತು ಸಂಶೋಧನೆಗೆ ಸಜ್ಜುಗೊಳಿಸುವುದು ಇದರ ಉದ್ದೇಶವಾಗಿದೆ.
ಕ್ಯಾಂಪಸ್‌ನಲ್ಲಿ ಆಧುನಿಕ ತರಗತಿ ಕೊಠಡಿಗಳು, ಪ್ರಯೋಗಾಲಯಗಳು ಹಾಗೂ ಆಡಳಿತ ವಿಭಾಗ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತದೆ. ಮೊದಲ ಹಂತದ ಕಾಮಗಾರಿಗಳು 2027ರ ಮೇ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಮುಂದಿನ ಹಂತದಲ್ಲಿ ವಿದ್ಯಾರ್ಥಿಗಳ ವಸತಿ ವ್ಯವಸ್ಥೆ, ಹೆಚ್ಚುವರಿ ಶೈಕ್ಷಣಿಕ ಕಾರ್ಯಕ್ರಮಗಳು, ಉದ್ಯಮ ಸಹಯೋಗ ಮತ್ತು ಸಂಶೋಧನಾ ಚಟುವಟಿಕೆಗಳನ್ನು ವಿಸ್ತರಿಸುವ ಯೋಜನೆಯಿದೆ.
ನಾರಾಯಣ ಭಟ್ ಅವರ ಶೈಕ್ಷಣಿಕ ಕೊಡುಗೆ ಮತ್ತು ಆದರ್ಶಗಳನ್ನು ಸ್ಮರಿಸುವುದರ ಜತೆಗೆ, ಅವರ ಜನ್ಮಶತಾಬ್ದಿಯನ್ನು ಸಮಾಜಮುಖಿ ಕಾರ್ಯದ ಮೂಲಕ ಆಚರಿಸುವ ಉದ್ದೇಶದಿಂದ ಹುಟ್ಟೂರಿನಲ್ಲೇ ಈ ಕೇಂದ್ರ ಸ್ಥಾಪಿಸಲಾಗುತ್ತಿದೆ ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ತಿಳಿಸಿದ್ದಾರೆ.
“ಉನ್ನತ ತಂತ್ರಜ್ಞಾನ ಶಿಕ್ಷಣವು ನಗರಗಳಲ್ಲಿರುವ ಅಥವಾ ಆರ್ಥಿಕವಾಗಿ ಅನುಕೂಲವಿರುವ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಬಾರದು. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಎಐ ಮತ್ತು ಮೆಷಿನ್ ಲರ್ನಿಂಗ್‌ನಂತಹ ಭವಿಷ್ಯದ ಕ್ಷೇತ್ರಗಳಲ್ಲಿ ಕಲಿಕೆ, ಸಂಶೋಧನೆ ಮತ್ತು ನಾವೀನ್ಯತೆಗೆ ಅವಕಾಶ ಸಿಗಬೇಕು. ಆರ್ಥಿಕ ಹಿನ್ನೆಲೆ ಯಾವುದಾದರೂ ಇರಲಿ, ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಮೂಲಕ ಇಂತಹ ಅವಕಾಶ ಕಲ್ಪಿಸುವುದು ನಮ್ಮ ಆಶಯ” ಎಂದು ಅವರು ಹೇಳಿದ್ದಾರೆ.
ಗ್ರಾಮೀಣ ಪರಿಸರದಲ್ಲೇ ಆಧುನಿಕ ತಂತ್ರಜ್ಞಾನ ಶಿಕ್ಷಣ ಮತ್ತು ಸಂಶೋಧನೆಗೆ ಅವಕಾಶ ಕಲ್ಪಿಸುವ ಮೂಲಕ ಮಡಿಯಾಲವನ್ನು ಉನ್ನತ ಶಿಕ್ಷಣದ ಹೊಸ ಕೇಂದ್ರವನ್ನಾಗಿ ರೂಪಿಸುವ ಆಶಯ ಈ ಯೋಜನೆಯಲ್ಲಿದೆ ಎಂದು ಯೋಜನಾ ನಿರ್ದೇಶಕ ಮಡಿಯಾಲ ಶಶಾಂಕ್ ನಾರಾಯಣ ಭಟ್ ತಿಳಿಸಿದ್ದಾರೆ.
Uncategorized
ಪುತ್ತೂರು : ಅಡಿಕೆ ತೆಗೆಯುವಾಗ ಕಂಗಿನಿಂದ ಬಿದ್ದು ಗಂಭೀರ ಗಾಯ: ಚಿಕಿತ್ಸೆಗೆ ₹8 ಲಕ್ಷದ ಅಗತ್ಯ; ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಬಡ ಕುಟುಂಬ

ಪುತ್ತೂರು: ಅಡಿಕೆ ತೆಗೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಂಗಿನಿಂದ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಪಡ್ನೂರು ಗ್ರಾಮದ 55 ವರ್ಷದ ಕರಿಯ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆಗೆ ಸುಮಾರು ₹8 ಲಕ್ಷ ವೆಚ್ಚವಾಗುವ ಅಂದಾಜಿದ್ದು, ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸುವುದು ಅಸಾಧ್ಯವಾಗಿದೆ. ಹೀಗಾಗಿ ಮಾನವೀಯ ಮನಸ್ಸಿನ ದಾನಿಗಳ ನೆರವಿಗಾಗಿ ಕುಟುಂಬ ಎದುರು ನೋಡುತ್ತಿದೆ.
ಪುತ್ತೂರು ತಾಲೂಕಿನ ಪಡ್ನೂರು ಗ್ರಾಮದ ಪಡ್ಡಾಯೂರು ಎಂಬಲ್ಲಿ ಅಡಿಕೆ ಮರದಿಂದ ಅಡಿಕೆ ತೆಗೆಯುತ್ತಿದ್ದ ವೇಳೆ ಕರಿಯ ಅವರು ಆಕಸ್ಮಿಕವಾಗಿ ಕಂಗಿನಿಂದ ಕೆಳಕ್ಕೆ ಬಿದ್ದಿದ್ದಾರೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕರಿಯ ಅವರು ಪಡ್ನೂರು ಗ್ರಾಮದ ಗುರುಂಪುನಾರ್ ಎಂಬಲ್ಲಿ ಕೇವಲ ಮೂರು ಸೆಂಟ್ಸ್ ಜಾಗದಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಕುಟುಂಬದ ಏಕೈಕ ಆಧಾರಸ್ತಂಭವಾಗಿರುವ ಇವರು ದುಡಿಮೆಯಿಂದಲೇ ಸಂಸಾರವನ್ನು ನಿಭಾಯಿಸುತ್ತಿದ್ದರು. ಪತ್ನಿ ಮನೆಗೆಲಸ ನೋಡಿಕೊಳ್ಳುತ್ತಿದ್ದು, ಮಗ ಬಾಡಿಗೆ ರಿಕ್ಷಾ ಓಡಿಸುತ್ತಿದ್ದಾರೆ. ಮಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕುಟುಂಬದ ಆರ್ಥಿಕ ಸ್ಥಿತಿಯೂ ತೀರಾ ದುರ್ಬಲವಾಗಿದೆ.
ಇದರ ಜತೆಗೆ ಕರಿಯ ಅವರು ದೈವದ ಚಾಕರಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ದೊಂದಿ (ಜೀಟಿಗೆ) ತಯಾರಿಸುವುದರಲ್ಲಿ ನಿಪುಣರಾಗಿದ್ದಾರೆ. ತಮ್ಮ ಶ್ರಮ ಹಾಗೂ ಕೌಶಲದಿಂದ ಕುಟುಂಬವನ್ನು ಮುನ್ನಡೆಸುತ್ತಿದ್ದ ಅವರಿಗೆ ಈಗ ಅನಿರೀಕ್ಷಿತ ಅಪಘಾತ ಜೀವನಕ್ಕೆ ದೊಡ್ಡ ಹೊಡೆತ ನೀಡಿದೆ.
ಒಂದೆಡೆ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಹೊರೆ, ಮತ್ತೊಂದೆಡೆ ಕುಟುಂಬದ ಮುಂದಿನ ಜೀವನದ ಚಿಂತೆ. ಸುಮಾರು ₹8 ಲಕ್ಷದಷ್ಟು ಚಿಕಿತ್ಸಾ ವೆಚ್ಚವನ್ನು ಭರಿಸುವ ಸಾಮರ್ಥ್ಯ ಈ ಬಡ ಕುಟುಂಬಕ್ಕಿಲ್ಲ. ಸಂಕಷ್ಟದ ಈ ಸಂದರ್ಭದಲ್ಲಿ ಕರಿಯ ಅವರ ಚಿಕಿತ್ಸೆಗೆ ನೆರವಾಗುವ ಮೂಲಕ ಮಾನವೀಯತೆ ಮೆರೆಯಬೇಕಿದೆ.
ಆದ್ದರಿಂದ ಕರಿಯ ಅವರ ಕುಟುಂಬವು ದಾನಿಗಳು, ಸಂಘ-ಸಂಸ್ಥೆಗಳು ಹಾಗೂ ಸಹೃದಯಿ ಸಾರ್ವಜನಿಕರಲ್ಲಿ ಆರ್ಥಿಕ ನೆರವಿಗಾಗಿ ಮನವಿ ಮಾಡಿದೆ. ಕೆಳಗೆ ನೀಡಿರುವ ಕರಿಯ ಅವರ ಮಗನ (ಮಹೇಶ್ ) ಬ್ಯಾಂಕ್ ಖಾತೆಯ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ತಮ್ಮ ಕೈಲಾದಷ್ಟು ಧನಸಹಾಯ ನೀಡುವಂತೆ ಕುಟುಂಬ ವಿನಂತಿಸಿದೆ.

ನಿಮ್ಮ ನೆರವಿನ ಪ್ರತಿಯೊಂದು ರೂಪಾಯಿಯೂ ಕರಿಯ ಅವರ ಚಿಕಿತ್ಸೆಗೆ ಆಸರೆಯಾಗುವುದರ ಜತೆಗೆ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಬದುಕುವ ಭರವಸೆಯಾಗಲಿದೆ.
Uncategorized
ಕಾರ್ಯಕರ್ತರ ಶ್ರಮದಲ್ಲಿ ನೆಲಪ್ಪಾಲು ವೀರಾಂಜನೇಯ ಕ್ಷೇತ್ರ ನಿರ್ಮಾಣ: ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ | ಶ್ರೀ ಪಂಚಮುಖಿ ಆಂಜನೇಯ ಯಾಗದ ಅಂಗವಾಗಿ ಧರ್ಮಸಭೆ

ಪುತ್ತೂರು: ಹಿಂದೂ ಆರಾಧನಾ ಕೇಂದ್ರಗಳು ಸಮಾಜದ ಎಲ್ಲ ವರ್ಗಗಳ ಜನರ ಶ್ರದ್ಧೆ ಮತ್ತು ಬದ್ಧತೆಯಿಂದ ನಿರ್ಮಾಣವಾಗುತ್ತವೆ. ಕಾರ್ಯಕರ್ತರ ಪರಿಶ್ರಮದ ಫಲವಾಗಿ ದೇವಸ್ಥಾನ ನಿರ್ಮಾಣಗೊಂಡಿರುವುದು ನೆಲಪ್ಪಾಲಿನ ವಿಶೇಷ. ಆಂಜನೇಯ ಹಿಂದೂ ಸಮಾಜಕ್ಕೆ ಆದರ್ಶ ವ್ಯಕ್ತಿತ್ವವಾಗಿದ್ದು, ಅವರ ಆರಾಧನೆಯ ಮೂಲಕ ಧರ್ಮದ ಕುರಿತು ಜಾಗೃತಿ ಮೂಡಿಸಲು ಸಾಧ್ಯ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ನೆಲಪ್ಪಾಲು ಶ್ರೀ ವೀರಾಂಜನೇಯ ಕ್ಷೇತ್ರದಲ್ಲಿ ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಶ್ರೀಗುರುಕೃಷ್ಣ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಪಂಚಮುಖಿ ಆಂಜನೇಯ ಯಾಗದ ಅಂಗವಾಗಿ ಆಯೋಜಿಸಲಾದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಅಯೋಧ್ಯೆ ರಾಮಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ್ ಜೀ ಮಾತನಾಡಿ, ಹನುಮಂತನ ಆರಾಧನೆ ಮತ್ತು ಅನುಗ್ರಹ ದೊರೆತಾಗ ರಾಮನ ದರ್ಶನ ಸಾಧ್ಯವಾಗುತ್ತದೆ. ಸಮಾಜದ ಮೇಲಿನ ಆಕ್ರಮಣಗಳನ್ನು ಕಂಡು ಮೌನವಾಗಿರುವವರು ನಿಜವಾದ ಹನುಮ ಭಕ್ತರಾಗಲು ಸಾಧ್ಯವಿಲ್ಲ. ಪರಾಕ್ರಮ ಪ್ರದರ್ಶಿಸಿದಾಗ ಮಾತ್ರ ಹನುಮಂತನ ಆರಾಧನೆಗೆ ನಿಜವಾದ ಅರ್ಥ ಬರುತ್ತದೆ. ಶ್ರದ್ಧಾ ಕೇಂದ್ರಗಳಲ್ಲಿ ಯುವಕರಿಗಾಗಿ ವ್ಯಾಯಾಮ ಶಾಲೆಗಳನ್ನು ಆರಂಭಿಸುವ ಕಾರ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ವಕೀಲ ಡಾ. ಅರುಣ್ ಶ್ಯಾಮ್, ಯಾಗ ಸಮಿತಿ ಸಂಚಾಲಕ ಜೀವಂದರ ಜೈನ್, ಪ್ರಧಾನ ಕಾರ್ಯದರ್ಶಿ ಮುರಳೀಕೃಷ್ಣ ಹಸಂತಡ್ಕ ಮತ್ತಿತರರು ಉಪಸ್ಥಿತರಿದ್ದರು.
Uncategorized
Philomena-ಸಂತ ಫಿಲೋಮಿನಾ ಪ. ಪೂ ಕಾಲೇಜಿನಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಸಿದ್ಧತೆಯ ಕುರಿತು ಮಾಹಿತಿ ಕಾರ್ಯಗಾರ
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವಾಣಿಜ್ಯ ಸಂಘದ ಆಶ್ರಯದಲ್ಲಿ ನ 25 ರಂದು ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಯ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು
ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವಾಣಿಜ್ಯ ಸಂಘದ ಆಶ್ರಯದಲ್ಲಿ ನ 25 ರಂದು ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ
ಪರೀಕ್ಷಾ ಸಿದ್ಧತೆಯ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಪುತ್ತೂರಿನ ಲಕ್ಷ್ಯ ಕೌನ್ಸೆಲಿಂಗ್ ಸೆಂಟರ್ ನ ಮಕ್ಕಳ
ಸಲಹೆಗಾರರಾದ ದುರ್ಗಾಪರಮೇಶ್ವರ ಭಟ್ ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಮಾರ್ಗದರ್ಶಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪರೀಕ್ಷಾ ಸಿದ್ಧತೆ ಮತ್ತು ತರಗತಿಯ ಶಿಸ್ತು ಅತೀ ಮುಖ್ಯವಾಗಿದ್ದು, ಇಂದಿನ ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳು ಸದಾ ಚುರುಕಾಗಿರಬೇಕು. ಕಾಲಕ್ಕೆ ತಕ್ಕಂತೆ ಆಗುವ ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದರ ಜೊತೆಗೆ, ಉತ್ತಮ ಮಾಹಿತಿ ಹಾಗೂ ಜ್ಞಾನವನ್ನು ನಿರಂತರವಾಗಿ ಪಡೆದುಕೊಳ್ಳುತ್ತಿರಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಾಣಿಜ್ಯ ವಿದ್ಯಾರ್ಥಿಗಳು ಮಾನಸಿಕವಾಗಿ ಅತ್ಯಂತ ದೃಢವಾಗಿರಬೇಕು. ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ, ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು.
ವಾಣಿಜ್ಯ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳಿಗೆ ಸದೃಢವಾದ ಮನಸ್ಸು ಇರಬೇಕು. ಹೊಸ ಆಲೋಚನೆಗಳು, ಸೃಜನಶೀಲತೆ ಮತ್ತು ವೃತ್ತಿಪರ ಕೌಶಲ್ಯಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ವಾಣಿಜ್ಯ ಸಂಘದ ನಿರ್ದೇಶಕರಾದ ಭರತ್ ಜಿ ಫೈ ಹಾಗೂ ಪೂರ್ಣಿಮಾ ಡಿ. ಎಸ್ ಉಪಸ್ಥಿತರಿದ್ದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗ ಮತ್ತು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿಗಳಾದ ದೇಶ್ನ ಎ. ಎಲ್ ಸ್ವಾಗತಿಸಿ, ಸ್ವಿನಿಕಾ ಎಸ್ ಲೋಬೋ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
-
Uncategorized37 minutes ago
ಪುತ್ತೂರು : ಅಡಿಕೆ ತೆಗೆಯುವಾಗ ಕಂಗಿನಿಂದ ಬಿದ್ದು ಗಂಭೀರ ಗಾಯ: ಚಿಕಿತ್ಸೆಗೆ ₹8 ಲಕ್ಷದ ಅಗತ್ಯ; ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಬಡ ಕುಟುಂಬ
-
Uncategorized7 hours ago
ಕಾರ್ಯಕರ್ತರ ಶ್ರಮದಲ್ಲಿ ನೆಲಪ್ಪಾಲು ವೀರಾಂಜನೇಯ ಕ್ಷೇತ್ರ ನಿರ್ಮಾಣ: ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ | ಶ್ರೀ ಪಂಚಮುಖಿ ಆಂಜನೇಯ ಯಾಗದ ಅಂಗವಾಗಿ ಧರ್ಮಸಭೆ















