ದಕ್ಷಿಣ ಕನ್ನಡ
ವಿಟ್ಲ: ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗಲೇ ಚಾಲೂಗೊಂಡ ಮರದ ಸಿಪ್ಪೆ ತೆಗೆಯುವ ಯಂತ್ರ; ನಾಲ್ವರು ಕಾರ್ಮಿಕರಿಗೆ ಗಂಭೀರ ಗಾಯ

ವಿಟ್ಲ: ಟ್ರ್ಯಾಕ್ಟರ್‌ಗೆ ಜೋಡಿಸಲಾಗಿದ್ದ ಮರದ ಸಿಪ್ಪೆ ತೆಗೆಯುವ ಯಂತ್ರವು ಪ್ರಯಾಣದ ವೇಳೆ ಏಕಾಏಕಿ ಚಾಲೂಗೊಂಡ ಪರಿಣಾಮ, ಟ್ರ್ಯಾಕ್ಟರ್‌ನಲ್ಲಿದ್ದ ನಾಲ್ವರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡ ಘಟನೆ ಅಡ್ಯನಡ್ಕ ಸಮೀಪ ನಡೆದಿದೆ.
ಮರದ ಸಿಪ್ಪೆ ತೆಗೆಯುವ ಯಂತ್ರವನ್ನು ಟ್ರ್ಯಾಕ್ಟರ್‌ಗೆ ಜೋಡಿಸಲಾಗಿತ್ತು. ಅದೇ ಟ್ರ್ಯಾಕ್ಟರ್‌ನಲ್ಲಿ ನಾಲ್ವರು ಕಾರ್ಮಿಕರು ಪ್ರಯಾಣಿಸುತ್ತಿದ್ದರು. ಟ್ರ್ಯಾಕ್ಟರ್ ಸ್ವಲ್ಪ ದೂರ ಸಾಗುತ್ತಿದ್ದಂತೆ ಅದರೊಂದಿಗೆ ಜೋಡಿಸಲಾಗಿದ್ದ ಯಂತ್ರವು ಏಕಾಏಕಿ ಚಾಲನೆಗೊಂಡಿದೆ. ಈ ವೇಳೆ ಕಾರ್ಮಿಕರು ಯಂತ್ರದತ್ತ ತಳ್ಳಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಗಾಯಾಳುಗಳು ಉತ್ತರ ಭಾರತದ ಮೂಲದ ಕಾರ್ಮಿಕರೆಂದು ಹೇಳಲಾಗಿದೆ. ಘಟನೆ ನಡೆದ ತಕ್ಷಣ ಸ್ಥಳೀಯ ರಿಕ್ಷಾ ಚಾಲಕರು ಹಾಗೂ ಅಡ್ಯನಡ್ಕ ಆಂಬ್ಯುಲೆನ್ಸ್ ಸಿಬ್ಬಂದಿ ಗಾಯಾಳುಗಳನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.
ವಿಟ್ಲ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸುಳ್ಯ
Corruption In Puttur Mescom alligation: ಪುತ್ತೂರು ಮೆಸ್ಕಾಂನಲ್ಲಿ ಭ್ರಷ್ಟಾಚಾರದ ಆರೋಪ: ಎಸ್‌ಐಟಿ ತನಿಖೆಗೆ ಆಗ್ರಹ | ಅಧಿಕಾರಿಯ ಪತ್ನಿ ಹೆಸರಿನಲ್ಲಿ ಗುತ್ತಿಗೆ, ಯುವತಿಯೊಂದಿಗೆ ಅನುಚಿತ ವರ್ತನೆ, ನಾಲ್ಕೇ ಮಂದಿಗೆ ಕಾಮಾಗಾರಿ ; ಜನಸಂಪರ್ಕ ಸಭೆಯಲ್ಲಿ ಆರೋಪಗಳ ಸುರಿಮಳೆ

ಪುತ್ತೂರು: ಮೆಸ್ಕಾಂ ಪುತ್ತೂರು ಕಚೇರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿರುವ ಗುತ್ತಿಗೆದಾರರು ಹಾಗೂ ಸಾರ್ವಜನಿಕರು, ಈ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ಮೆಸ್ಕಾಂ ವತಿಯಿಂದ ಬನ್ನೂರು ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪುತ್ತೂರು ನಗರ ಹಾಗೂ ಗ್ರಾಮಾಂತರ ಉಪವಿಭಾಗಗಳ ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿ, ಗುತ್ತಿಗೆ ಹಂಚಿಕೆ, ಸಿಬ್ಬಂದಿಯ ಹಾಜರಾತಿ ಮತ್ತು ವಿದ್ಯುತ್ ಸರಬರಾಜಿನ ಸಮಸ್ಯೆಗಳ ಕುರಿತು ಗಂಭೀರ ಆರೋಪಗಳು ಹಾಗೂ ದೂರುಗಳು ಕೇಳಿಬಂದವು.
ಸರ್ಕಾರದ ಸುತ್ತೋಲೆಯಂತೆ ಕಚೇರಿಯಲ್ಲಿ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಿಲ್ಲ. ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ. ಮೂರು ತಿಂಗಳಿಗಿಂತ ಹೆಚ್ಚು ಅವಧಿಗೆ ಪ್ರಭಾರ ಹುದ್ದೆ ನೀಡಬಾರದೆಂಬ ನಿಯಮ ಪಾಲನೆಯಾಗುತ್ತಿಲ್ಲ. ತಾಂತ್ರಿಕ ಅರ್ಹತೆಯಿಲ್ಲದ ವ್ಯಕ್ತಿಗಳಿಗೆ ಹೊರಗುತ್ತಿಗೆ ಏಜೆನ್ಸಿ ನೀಡುವ ಮೂಲಕ ನಿಯಮ ಉಲ್ಲಂಘಿಸಲಾಗುತ್ತಿದೆ, ನಾಲ್ಕು ಮಂದಿ ಗುತ್ತಿಗೆದಾರರ ಹೊರತು ಬೇರೆಯವರಿಗೆ ಕಾಮಗಾರಿ ಸಿಗುತ್ತಿಲ್ಲ ಎಂದು ಸಭೆಯಲ್ಲಿ ಆರೋಪಿಸಲಾಯಿತು.
ಕಚೇರಿಯ ಕೆಲಸ ಹೋಟೆಲ್‌ನಲ್ಲಿ ನಡೆಯುತ್ತಿದೆ!
ಗುತ್ತಿಗೆದಾರ ಲಕ್ಷ್ಮೀನಾರಾಯಣ ಮಾತನಾಡಿ, ಮೆಸ್ಕಾಂ ಕಚೇರಿಯಲ್ಲಿ ನಡೆಯಬೇಕಾದ ಕೆಲಸಗಳು ಬೊಳುವಾರಿನ ಹೋಟೆಲ್‌ನಲ್ಲಿ ನಡೆಯುತ್ತಿವೆ. ಕೆಲವು ಸಿಬ್ಬಂದಿ ಬೆಳಗ್ಗೆ 11ರಿಂದ 12 ಗಂಟೆಯವರೆಗೆ ಕಚೇರಿಗೆ ಬರುತ್ತಿಲ್ಲ. ಇದನ್ನು ಪ್ರಶ್ನಿಸುವವರೇ ಇಲ್ಲ. ನಾಲ್ವರು ಗುತ್ತಿಗೆದಾರರನ್ನು ಹೊರತುಪಡಿಸಿ ಉಳಿದವರಿಗೆ ಕಾಮಗಾರಿಗಳು ದೊರೆಯುತ್ತಿಲ್ಲ ಎಂದು ಆರೋಪಿಸಿದರು.

ಅರ್ಹತೆಯಿಲ್ಲದವರಿಗೆ ಕಾಮಗಾರಿ ನೀಡಿದ ಪರಿಣಾಮ ಅಪಘಾತ ಸಂಭವಿಸಿದರೆ ಹೊಣೆ ಯಾರು? ಉಪ್ಪಿನಂಗಡಿ ಹೆದ್ದಾರಿ ಬದಿಯ ವಿದ್ಯುತ್ ಕಂಬಗಳು ವಾಲಿಕೊಂಡಿದ್ದು, ಅವುಗಳನ್ನು ಸರಿಪಡಿಸುವವರು ಯಾರು ಎಂದು ಪ್ರಶ್ನಿಸಿದರು.
ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಬ್ಯಾಂಕ್ ಉದ್ಯೋಗಿಯೊಬ್ಬರ ವಾಹನ ಮತ್ತು ಸರ್ವೀಸ್ ಸ್ಟೇಷನ್ ವಾಹನದ ನಡುವೆ ಸಂಭವಿಸಿದ ಅಪಘಾತಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಿಲ್ಲ ಎಂದೂ ಆರೋಪಿಸಿದರು.
ಇದೇ ವೇಳೆ, ಮೆಸ್ಕಾಂ ಅಧಿಕಾರಿಯೊಬ್ಬರು ಗುತ್ತಿಗೆದಾರರ ಸಹಾಯಕಿ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪವನ್ನೂ ಪ್ರಸ್ತಾಪಿಸಿದರು. ಕೆಲಸದ ಅವಧಿಯಲ್ಲೇ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇಬ್ಬರು ಹಿರಿಯ ಅಧಿಕಾರಿಗಳು ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾರೆ ಎಂದು ದೂರಿದರು. ಮಹಿಳೆಯರ ಗೌರವ ಹಾಗೂ ಸುರಕ್ಷತೆಯನ್ನು ಕಾಪಾಡಲು ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಧಿಕಾರಿಯ ಪತ್ನಿ ಹೆಸರಿನಲ್ಲಿ ಗುತ್ತಿಗೆ: ಉತ್ತರಿಸಲು ತಡವರಿಸಿದ ಅಧಿಕಾರಿಗಳು
ಮೆಸ್ಕಾಂ ಅಧಿಕಾರಿಯೊಬ್ಬರು ತಮ್ಮ ಪತ್ನಿಯ ಹೆಸರಿನಲ್ಲಿ ಗುತ್ತಿಗೆ ನಡೆಸಲು ಸಿ-2 ಪರವಾನಗಿ ಹೊಂದಿದ್ದಾರೆ ಎಂಬ ಆರೋಪವೂ ಸಭೆಯಲ್ಲಿ ಕೇಳಿಬಂತು.
ಮೆಸ್ಕಾಂ ಅಧಿಕಾರಿಯ ಪತ್ನಿ ಹೆಸರಿನಲ್ಲಿ ಗುತ್ತಿಗೆ ನಡೆಸಲು ನಿಯಮದಲ್ಲಿ ಅವಕಾಶವಿದೆಯೇ? ಅಧಿಕಾರಿ ತಮ್ಮ ಪ್ರಭಾವ ಬಳಸಿ ಈ ಗುತ್ತಿಗೆಯ ಮೂಲಕ ಎಷ್ಟು ಕಾಮಗಾರಿಗಳನ್ನು ಪಡೆದುಕೊಂಡಿದ್ದಾರೆ ಎಂದು ಗುತ್ತಿಗೆದಾರರು ಪ್ರಶ್ನಿಸಿದರು. ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡಲು ಅಧಿಕಾರಿಗಳು ತಡವರಿಸಿದ್ದು, ಈ ಕುರಿತು ತನಿಖೆ ನಡೆಸುವುದಾಗಿ ಭರವಸೆ ನೀಡಿದರು.
ಪರಿವರ್ತಕಗಳ ಪೂರೈಕೆಗೆ ಒತ್ತಾಯ
ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೃಷ್ಣಪ್ರಶಾಂತ್ ಮಾತನಾಡಿ, ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳಿಗೆ ಕೊಳವೆಬಾವಿಗಳ ಅವಲಂಬನೆ ಹೆಚ್ಚಾಗುವ ಸಾಧ್ಯತೆಯಿದೆ. ಇದಕ್ಕೆ ಅನುಗುಣವಾಗಿ ಅಗತ್ಯ ವಿದ್ಯುತ್ ಪರಿವರ್ತಕಗಳನ್ನು ಒದಗಿಸಬೇಕು. ಹಿಂದಿ ಅಭಿವೃದ್ಧಿಗಾಗಿ ಸಂಗ್ರಹಿಸಿರುವ ₹15 ಸಾವಿರ ಇದುವರೆಗೂ ಬಳಕೆಯಾಗಿಲ್ಲ. ಗಂಗಾಕಲ್ಯಾಣ ಯೋಜನೆಯ ಕಾಮಗಾರಿಗಳಿಗೆ ಗುತ್ತಿಗೆದಾರರಿಗೆ ನಿಗದಿಪಡಿಸಿರುವ ಮೊತ್ತವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಬೆದ್ರಾಳದ ಪುತ್ರಮೂಲೆಯಲ್ಲಿನ ವಿದ್ಯುತ್ ಪರಿವರ್ತಕದ ಸಮಸ್ಯೆಯನ್ನು 2021ರಲ್ಲಿಯೇ ಇಲಾಖೆಯ ಗಮನಕ್ಕೆ ತಂದಿದ್ದರೂ ಪರಿಹಾರ ದೊರೆತಿಲ್ಲ ಎಂದು ಗ್ರಾಹಕ ಲಿಯೊ ದೂರಿದರು.
ಸಣ್ಣ ಪ್ರಮಾಣದ ಸಿಡಿಲು ಕಾಣಿಸಿಕೊಂಡರೂ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ರಾತ್ರಿ ವಿದ್ಯುತ್ ಹೋದರೆ ಬೆಳಗ್ಗೆಯವರೆಗೂ ಮರುಸ್ಥಾಪನೆಯಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಹಕ ಸುಧಾಕರ ರಾವ್ ಮಾತನಾಡಿ, ಆರ್ಯಾಪು ಭಾಗಕ್ಕೆ ಹೆಚ್ಚಿನ ಪವರ್‌ಮನ್‌ಗಳನ್ನು ನಿಯೋಜಿಸಬೇಕು. ವಿದ್ಯುತ್ ಮಾರ್ಗಗಳ ನಿರ್ವಹಣೆ ಹಾಗೂ ಪೊದೆಗಳನ್ನು ತೆರವುಗೊಳಿಸುವ ಕೆಲಸವನ್ನು ನಿಯಮಿತವಾಗಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಾಡಾವು ಭಾಗದಲ್ಲಿ ಸುಮಾರು 40 ವರ್ಷಗಳಿಂದ ವಿದ್ಯುತ್ ತಂತಿಗಳನ್ನು ಬದಲಾಯಿಸಿಲ್ಲ ಎಂಬ ದೂರೂ ಕೇಳಿಬಂತು. ಸಭೆಯಲ್ಲಿ ಒಟ್ಟು 16 ದೂರುಗಳು ದಾಖಲಾಗಿವೆ.
ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಮೆಸ್ಕಾಂ ಅಧೀಕ್ಷಕ ಎಂಜಿನಿಯರ್ ಕೃಷ್ಣರಾಜ್, ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಶಂಕರ್ ಉಪಸ್ಥಿತರಿದ್ದರು.
ಲಿಖಿತ ದೂರು ನೀಡಿದರೆ ತನಿಖೆ: ಕಾರ್ಯನಿರ್ವಾಹಕ ಎಂಜಿನಿಯರ್
ಗುತ್ತಿಗೆದಾರರ ಸಿಬ್ಬಂದಿಯೊಂದಿಗೆ ಮೆಸ್ಕಾಂ ಅಧಿಕಾರಿಯೊಬ್ಬರು ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಮಾಹಿತಿ ತಮ್ಮ ಗಮನಕ್ಕೂ ಬಂದಿದೆ. ಆದರೆ, ಈ ಘಟನೆ ಕಚೇರಿಯ ಒಳಗಡೆ ನಡೆದಿಲ್ಲ, ಹೊರಗಡೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಈ ಕುರಿತು ಖಚಿತ ಮಾಹಿತಿ ಇಲ್ಲ. ಇದುವರೆಗೆ ಯಾರೂ ಅಧಿಕೃತವಾಗಿ ದೂರು ನೀಡಿಲ್ಲ. ಘಟನೆ ಕುರಿತು ಹೊರಗಡೆ ಚರ್ಚೆಗಳು ನಡೆಯುತ್ತಿವೆ. ಇ ಲಿಖಿತ ದೂರು ಸಲ್ಲಿಸಿದರೆ ಅಗತ್ಯ ತನಿಖೆ ನಡೆಸಲು ಸಿದ್ಧರಿದ್ದೇವೆ ಎಂದು ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಸ್ಪಷ್ಟಪಡಿಸಿದರು.
ಶಿಕ್ಷಣ
Vivekananda-ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ – ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ಅಮೋಘ ಸಾಧನೆ
ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಅತ್ಯುತ್ತಮ ಸಾಧನೆಗೈದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿದ್ಯಾಭಾರತಿಯ ದಕ್ಷಿಣ ಮಧ್ಯಕ್ಷೇತ್ರವನ್ನು ಪ್ರತಿನಿಧಿಸಿದ್ದ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು 6 ಚಿನ್ನ, 1 ಬೆಳ್ಳಿ ಹಾಗೂ 2 ಕಂಚು ಸೇರಿದಂತೆ ಒಟ್ಟು 9 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಅತ್ಯುತ್ತಮ ಸಾಧನೆಗೈದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ವಿದ್ಯಾಭಾರತಿಯ ದಕ್ಷಿಣ ಮಧ್ಯಕ್ಷೇತ್ರವನ್ನು ಪ್ರತಿನಿಧಿಸಿದ್ದ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು 6 ಚಿನ್ನ, ೧ ಬೆಳ್ಳಿ ಹಾಗೂ 2 ಕಂಚು ಸೇರಿದಂತೆ ಒಟ್ಟು 9 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಈ ಹಿಂದೆ ನಡೆದ ಸ್ಪರ್ಧೆಗಳಲ್ಲಿ 100 ಮೀಟರ್ ಓಟದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಡಿಂಪಲ್ ಶೆಟ್ಟಿ ಹಾಗೂ ಎತ್ತರ ಜಿಗಿತದಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಮೋಕ್ಷಿತ್ ಚಿನ್ನದ ಪದಕ ಗಳಿಸಿದ್ದರು.
ಕೊನೆಯ ದಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಗುಣಶ್ರೀ ಅವರು ೧೦೦ ಮೀಟರ್ ಹರ್ಡಲ್ಸ್ ಓಟದಲ್ಲಿ ಚಿನ್ನದ ಪದಕ, 400 ಮೀಟರ್ ಹರ್ಡಲ್ಸ್ ಓಟದಲ್ಲಿ ಕಂಚಿನ ಪದಕ ಹಾಗೂ 400×100ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ (ಇವರು ದೇವುಮೂಲೆ ನಿವಾಸಿಗಳಾದ ಶ್ರೀನಿವಾಸ ನಾಯ್ಕ್ ಮತ್ತು ಹೇಮಾವತಿ ದಂಪತಿಯ ಪುತ್ರಿ).
ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ದಿವಿಜ್ಞಾ ಅವರು 200ಮೀಟರ್ ಓಟದಲ್ಲಿ ಚಿನ್ನದ ಪದಕ, 400 ಮೀಟರ್ ಓಟದಲ್ಲಿ ಬೆಳ್ಳಿಯ ಪದಕ ಹಾಗೂ 400×100ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ (ಇವರು ಮಲಾರ್ ನಿವಾಸಿಗಳಾದ ಶಿವಪ್ರಸಾದ್ ಯು.ಎ. ಮತ್ತು ಪವಿತ್ರ ದಂಪತಿಯ ಪುತ್ರಿ).
ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಪ್ರತೀಕ್ಷಾ ಅವರು 400×100ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಗಳಿಸಿದ್ದಾರೆ (ಇವರು ಮೂಡಂಬೈಲ್ ನಿವಾಸಿಗಳಾದ ಎಮ್ ಬಾಲಕೃಷ್ಣ ಹಾಗೂ ಶಶಿಕಲಾ ದಂಪತಿಯ ಪುತ್ರಿ).
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಡಿಂಪಲ್ ಶೆಟ್ಟಿ ಅವರು 400×100ಮೀಟರ್ ರಿಲೇಯಲ್ಲಿ ಚಿನ್ನದ ಪದಕ ಹಾಗೂ 200ಮೀಟರ್ ಓಟದಲ್ಲಿ ಕಂಚಿನ ಪದಕ ಗಳಿಸಿದ್ದಾರೆ. (ಇವರು ಮೇರ್ಲ ನಿವಾಸಿಗಳಾದ ಎ. ಉದಯ ಶೆಟ್ಟಿ ಮತ್ತು ಸುನಿತಾ ಯು. ಶೆಟ್ಟಿ ದಂಪತಿಯ ಪುತ್ರಿ).
ಇವರು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ಹಾಗೂ ಯತೀಶ್ ಇವರ ನೇತೃತ್ವದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ. ಇವರನ್ನು ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.
ಶಿಕ್ಷಣ
Vivekananda-ವಿವೇಕಾನಂದ ಸ್ವಾಯತ್ತ ಕಾಲೇಜಿನ ಸ್ನಾತಕ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ರ‍್ಯಾಂಕ್ ಪಟ್ಟಿ ಪ್ರಕಟ
ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ 2023-26 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಲ್ಲಿ ಒಟ್ಟು ಎಂಟು ರ‍್ಯಾಂಕ್ ಗಳನ್ನು ಘೋಷಿಸಲಾಗಿದೆ.
ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇದರ 2023-26 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಲ್ಲಿ ಒಟ್ಟು ಎಂಟು ರ‍್ಯಾಂಕ್ ಗಳನ್ನು ಘೋಷಿಸಲಾಗಿದೆ.

ಬಿ.ಎ ವಿಭಾಗದಲ್ಲಿ ಸುಮನಾ (91.41%) ಪ್ರಥಮ ರ‍್ಯಾಂಕ್ (ವಾಮನ ಆಚಾರ್ಯ ಮತ್ತು ಸುಮಿತಾ ದಂಪತಿಗಳ ಪುತ್ರಿ ), ಬಿಎಸ್ಸಿ ವಿಭಾಗದಲ್ಲಿ ಅನುಶ್ರೀ ಜಿ ಪ್ರಭು (96.38%) ಪ್ರಥಮ ರ‍್ಯಾಂಕ್ ( ಜಿ. ಪುರುಷೋತ್ತಮ ಪ್ರಭು, ಜಿ.ವಿದ್ಯಾ ಪ್ರಭು ದಂಪತಿಗಳ ಪುತ್ರಿ), ಬಿಬಿಎ ವಿಭಾಗದಲ್ಲಿ ಅನುಶ್ರೀ (94.21%) ಪ್ರಥಮ ರ‍್ಯಾಂಕ್ (ಪ್ರದೀಪ್, ಗೀತಾ. ಬಿ ದಂಪತಿಯ ಪುತ್ರಿ), ಬಿಕಾಂ ವಿಭಾಗದಲ್ಲಿ ಶರಣ್ಯ ವಿ.ಆರ್ (98.79%) ಪ್ರಥಮ ರ‍್ಯಾಂಕ್ ( ರಾಮಚಂದ್ರ ವಿ, ವಾಣಿ ರಾಮಚಂದ್ರ ದಂಪತಿಯ ಪುತ್ರಿ) ಹಾಗೂ ಸಿಂಧೂರ ವಿ.ಎಸ್ (98.29%) ದ್ವಿತೀಯ ರ‍್ಯಾಂಕ್ ( ಶ್ರೀ ಪತಿ ವಿ, ವೀಣಾ ಶ್ರೀಪತಿ ದಂಪತಿಯ ಪುತ್ರಿ) ಅಂತೆಯೇ ಬಿಸಿಎ ವಿಭಾಗದಲ್ಲಿ ಮಾಹಿ ಜೆ ಹೆಗ್ಡೆ (96.13%) ಪ್ರಥಮ ರ‍್ಯಾಂಕ್( ಜಯರಾಮ ಹೆಗ್ಡೆ, ಗಾಯತ್ರಿ ದೇವಿ ಪಿ ದಂಪತಿಯ ಪುತ್ರಿ), ಶ್ರೀನಿಧಿ ಎ (95.3%) ದ್ವಿತೀಯ ರ‍್ಯಾಂಕ್ ( ಗೋವಿಂದ ಪ್ರಸಾದ್, ವಿದ್ಯಾ ದಂಪತಿಯ ಪುತ್ರ) ಹಾಗೂ ಸಮೃದ್ಧಿ (94.96%) ತೃತೀಯ ರ‍್ಯಾಂಕ್ ( ಶೇಕರ ಪೂಜಾರಿ, ಸುಮಿತ್ರ ಬಿ ಕೆ ದಂಪತಿಯ ಪುತ್ರಿ)ಗಳನ್ನು ಗಳಿಸಿರುತ್ತಾರೆ.
ಸ್ನಾತಕೋತ್ತರ ಪದವಿಯಲ್ಲಿ 2024-26ರ ಸಾಲಿನಲ್ಲಿ ಒಟ್ಟು ಎರಡು ರಾಂಕ್ ಗಳು ಲಭಿಸಿದ್ದು ಎಂ.ಕಾಂ ವಿಭಾಗದಲ್ಲಿ ಪವನ್ ರಾಜ್ (9.05 ಸಿಜಿಪಿಎ) ಪ್ರಥಮ ರ‍್ಯಾಂಕ್( ರಘು ಮತ್ತು ಸುನಿತಾ ದಂಪತಿ ಪುತ್ರ), ಹಾಗೂ ಎಂ. ಎ ಜೆ ಎಂ ಸಿ ಯಲ್ಲಿ ಪಂಚಮಿ ಕುಮಾರಿ. ಬಿ (8.09 ಸಿಜಿಪಿಎ) ಪ್ರಥಮ ರ‍್ಯಾಂಕ್ ( ವೆಂಕಟರಮಣ ಭಟ್ ಬಿ ಮತ್ತು ಗುಣಶ್ರೀ ದಂಪತಿಯ ಪುತ್ರಿ) ಪಡೆದುಕೊಂಡಿರುತ್ತಾರೆ ಎಂದು ಕಾಲೇಜಿನ ಪ್ರಾಚಾರ್ಯ ಶ್ರೀಕೃಷ್ಣ ಗಣರಾಜ ಭಟ್ ಎಸ್ ಮತ್ತು ಪರೀಕ್ಷಾಂಗ ವಿಭಾಗದ ಕುಲಸಚಿವರಾದ ಪ್ರಕಾಶ್ ಕುಮಾರ್ ಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
-
ಸ್ಥಳೀಯ8 hours agoKukke Subrahmanya-ಕುಕ್ಕೆ ಸುಬ್ರಹ್ಮಣ್ಯ: ನದಿಗೆ ಹಾರಿದ ಮಹಿಳೆಗೆ ಮೊಸಳೆ ಕಚ್ಚಿ ಸಿಕ್ಕಿತು ಜೀವದಾನ..! ಸಾಯಲು ಹೋದವಳು ಬದುಕಿ ಬಂದ ವಿಚಿತ್ರ ಘಟನೆ..!
-
ರಾಜಕೀಯ14 hours agoGrihalakshmi-ಗೃಹಲಕ್ಷ್ಮಿಯರಿಗೆ ದೀಪಾವಳಿ ಗಿಫ್ಟ್: ಒಂದೇ ಬಾರಿಗೆ 3 ಕಂತಿನ ಹಣ ಬಿಡುಗಡೆ..!
-
ಸ್ಥಳೀಯ13 hours agoKadaba-ಕಡಬ: ಆಟೋ ಬಾಡಿಗೆ ಹಣ ಕೇಳಿದ್ದಕ್ಕೆ ಚಾಲಕನ ಮೇಲೆ ಹಲ್ಲೆ
-
ರಾಜಕೀಯ14 hours agoAbdul Al-Sayeed-ಅಮೆರಿಕದ ಸೆನೆಟ್ಗೆ ಭಟ್ಕಳದ ಅಳಿಯ ಅಬ್ದುಲ್ ಅಲ್ ಸಯೀದ್ ಆಯ್ಕೆ..!
-
ಬಿಗ್ ನ್ಯೂಸ್14 hours agoGhee and butter price-ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ..! ತುಪ್ಪ, ಬೆಣ್ಣೆ ದರವೂ ಏರಿಕೆ
-
ಸ್ಥಳೀಯ8 hours agoFertilizer-ಸದ್ದಿಲ್ಲದೆ ರಸಗೊಬ್ಬರ ಧಾರಣೆ ಏರಿಕೆ – ಸ್ಟಾಕ್ ಖಾಲಿ : ಕೃಷಿಕರಿಗೆ ಶಾಕ್
-
ಶಿಕ್ಷಣ12 hours agoVivekananda-ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಇಲ್ಲಿನ ವಿದ್ಯಾರ್ಥಿನಿ ರಾಷ್ಟ್ರಮಟ್ಟದ ಕ್ರಾಸ್-ಕಂಟ್ರಿ ಸ್ಪರ್ಧೆಗೆ ಆಯ್ಕೆ
-
ಶಿಕ್ಷಣ12 hours agoತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಗೆ ಕನಸುಗಳು 2026 ಕಾರ್ಯಕ್ರಮದಲ್ಲಿ ಹಲವಾರು ಪ್ರಶಸ್ತಿಗಳು


















