ದಕ್ಷಿಣ ಕನ್ನಡ
ಮಂಗಳೂರು : ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ – ಧರ್ಮಗುರು ಬಂಧನ,

ಮಂಗಳೂರು, ಅ. 18: ಬಾಲಕನ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಚರ್ಚ್‌ವೊಂದರ ಧರ್ಮಗುರು ಫಾ. ಸಿಪ್ರಿಯನ್ ಪಿಂಟೋ (63) ಅವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಸಕಲೇಶಪುರದಲ್ಲಿರುವ ಸಂಬಂಧಿಕರೊಬ್ಬರ ಮನೆಯಿಂದ ಬಂಧಿಸಿ ಮಂಗಳೂರಿಗೆ ಕರೆತಂದಿದ್ದಾರೆ.
ಸಂತ್ರಸ್ತ ಬಾಲಕ ನೀಡಿದ ದೂರಿನ ಆಧಾರದಲ್ಲಿ ಪಾಂಡೇಶ್ವರ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಫಾ. ಸಿಪ್ರಿಯನ್ ಪಿಂಟೋ ಅವರು ಚಾಕೊಲೇಟ್ ನೀಡಿ ಬಾಲಕನನ್ನು ಪುಸಲಾಯಿಸಿ, ಚರ್ಚ್‌ನ ಕೊಠಡಿಯೊಂದಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಬೆಂಗಳೂರು, ಕೇರಳ ಸೇರಿದಂತೆ ವಿವಿಧೆಡೆ ಶೋಧ ಕಾರ್ಯ ನಡೆಸಿದ್ದರು. ಬಳಿಕ ಸಕಲೇಶಪುರದಲ್ಲಿ ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ನಗರ ಪೊಲೀಸ್ ಆಯುಕ್ತ ಸುಧೀರ್‌ಕುಮಾರ್ ರೆಡ್ಡಿ, ಅಗತ್ಯ ವಿಚಾರಣೆ ಹಾಗೂ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದರು.
ದಕ್ಷಿಣ ಕನ್ನಡ
ಸೌತಡ್ಕ ದೇವಸ್ಥಾನದ ಬಳಿ ಹೂವಿನ ಅಂಗಡಿ ವಿಚಾರವಾಗಿ ಗಲಾಟೆ: ಎರಡೂ ಕಡೆಯಿಂದ ದೂರು, ಪ್ರಕರಣ ದಾಖಲು

ಬೆಳ್ತಂಗಡಿ: ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಬಳಿಯ ಅಂಗಡಿಯಲ್ಲಿ ವ್ಯಾಪಾರ ನಡೆಸುವ ವಿಚಾರವಾಗಿ ನಡೆದ ಗಲಾಟೆ, ಹಲ್ಲೆ ಹಾಗೂ ಸೊತ್ತುಗಳಿಗೆ ಹಾನಿ ಮಾಡಿದ ಆರೋಪಕ್ಕೆ ಸಂಬಂಧಿಸಿ ಎರಡೂ ಕಡೆಯಿಂದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಕೊಕ್ಕಡ ನಿವಾಸಿ ಕೃಷ್ಣಭಟ್ ನೀಡಿದ ದೂರಿನ ಪ್ರಕಾರ, ಆ. 18ರಂದು ಬೆಳಗ್ಗೆ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಸೇವಾ ಟ್ರಸ್ಟ್‌ಗೆ ಸೇರಿದ ಕಟ್ಟಡದ ಅಂಗಡಿಯಲ್ಲಿ ರಾಘವ ಭಂಡಾರಿ ಮತ್ತು ಅವರ ಕೆಲಸಗಾರರು ವ್ಯಾಪಾರ ನಡೆಸುತ್ತಿದ್ದ ವೇಳೆ, ಈ ಹಿಂದೆ ಅಲ್ಲಿ ವ್ಯಾಪಾರ ಮಾಡುತ್ತಿದ್ದ ಹರಿಶ್ಚಂದ್ರ, ಅವರ ಪತ್ನಿ, ಮಕ್ಕಳು ಹಾಗೂ ಇತರರು ಅಂಗಡಿಗೆ ಪ್ರವೇಶಿಸಿ ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆಯಲ್ಲಿ ಕಟ್ಟಡ ಹಾಗೂ ಅಂಗಡಿಯಲ್ಲಿದ್ದ ಸೊತ್ತುಗಳಿಗೆ ಸುಮಾರು 25 ಸಾವಿರ ರೂ. ನಷ್ಟ ಉಂಟಾಗಿದೆ. ಅಲ್ಲದೆ, ರಾಘವ ಭಂಡಾರಿ ಮತ್ತು ಅವರ ಕೆಲಸಗಾರರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದೇ ಘಟನೆಯನ್ನು ಮುಂದಿಟ್ಟುಕೊಂಡು ಹರಿಶ್ಚಂದ್ರ ಅವರ ಪತ್ನಿಯೂ ಪ್ರತ್ಯೇಕ ದೂರು ನೀಡಿದ್ದಾರೆ. ದೂರಿನ ಪ್ರಕಾರ, ಹರಿಶ್ಚಂದ್ರ ಅವರು ಅಂಗಡಿಯಲ್ಲಿ ವ್ಯಾಪಾರ ನಡೆಸುತ್ತಿದ್ದ ವೇಳೆ ರಾಘವ ಭಂಡಾರಿ, ಲಿಂಗಪ್ಪ, ಕಿಶೋರ್ ಮತ್ತು ಚೇತನ್ ಎಂಬವರು ಅಂಗಡಿಗೆ ಅಕ್ರಮವಾಗಿ ಪ್ರವೇಶಿಸಿ ಸೊತ್ತುಗಳನ್ನು ಹೊರಗೆ ಎಸೆದಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ, ಹರಿಶ್ಚಂದ್ರ, ಅವರ ಪತ್ನಿ ಹಾಗೂ ಕೆಲಸಗಾರರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಅನುಚಿತವಾಗಿ ವರ್ತಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ದೂರಿನ ಆಧಾರದಲ್ಲಿಯೂ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಕ್ಷಿಣ ಕನ್ನಡ
ಉಪ್ಪಿನಂಗಡಿಯಲ್ಲಿ ಬಾರ್ ಸಮೀಪ ತಲವಾರು ಪ್ರದರ್ಶನ: ಇಬ್ಬರು ಪೊಲೀಸ್ ವಶಕ್ಕೆ

ಉಪ್ಪಿನಂಗಡಿ: ಬಾರ್ ಸಮೀಪ ನಡೆದ ಮಾತಿನ ಚಕಮಕಿ ಗಲಾಟೆಗೆ ತಿರುಗಿದ್ದು, ಈ ವೇಳೆ ತಲವಾರು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಭೀತಿ ಮೂಡಿಸಿದ ಆರೋಪದ ಮೇಲೆ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅ.18ರಂದು ರಾತ್ರಿ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಶೆಣೈ ರಸ್ತೆಯಲ್ಲಿರುವ ಬಾರ್ ಸಮೀಪ ಮಂಜುನಾಥ್, ವಿಶ್ವನಾಥ ಹಾಗೂ ಮತ್ತೋರ್ವ ವ್ಯಕ್ತಿಯ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಗಲಾಟೆ ಸಂಭವಿಸಿದೆ ಎನ್ನಲಾಗಿದೆ.
ಈ ವೇಳೆ ಮಂಜುನಾಥ್ ಎಂಬಾತ ತನ್ನ ಬಳಿಯಿದ್ದ ತಲವಾರನ್ನು ಸಾರ್ವಜನಿಕವಾಗಿ ಪ್ರದರ್ಶಿಸಿ ಭೀತಿ ಉಂಟುಮಾಡಿದ್ದಾನೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉಪ್ಪಿನಂಗಡಿ ಪೊಲೀಸರು ಮಂಜುನಾಥ್ ಹಾಗೂ ವಿಶ್ವನಾಥನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ.
ಅಪರಾಧ
ಪುತ್ತೂರು ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹಲ್ಲೆ, ಜೀವ ಬೆದರಿಕೆ ಆರೋಪ

ಪುತ್ತೂರು: ನಗರದ ಲಾಡ್ಜ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಮೂವರು ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿರುವ ಆರೋಪ ಕೇಳಿಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲ ನಿವಾಸಿ ಮಹಮ್ಮದ್ ರಿಫಾಯಿ (27) ಹಲ್ಲೆಗೊಳಗಾದವರು ಎಂದು ತಿಳಿದುಬಂದಿದೆ.
ಅ. 17ರಂದು ರಾತ್ರಿ ರಿಫಾಯಿ ಅವರು ಪುತ್ತೂರಿನ ಲಾಡ್ಜ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಫಾರೂಕ್, ಸೋನು ಹಾಗೂ ಇಷಾನ್ ಎಂಬವರು ಅಲ್ಲಿಗೆ ಬಂದು ಅವಾಚ್ಯವಾಗಿ ಬೈದು, ಜೀವ ಬೆದರಿಕೆ ಒಡ್ಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ರಿಫಾಯಿ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), 2023ರ ಕಲಂ 126(2), 352, 351(2) ಹಾಗೂ 115(2)ರಂತೆ ಪ್ರಕರಣ ದಾಖಲಾಗಿದೆ.
ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.
-
ಅಪರಾಧ16 hours ago
ಸೌತಡ್ಕ ದೇವಸ್ಥಾನದ ಹೂವಿನ ಅಂಗಡಿ ವಿಚಾರದಲ್ಲಿ ಮಾರಾಮಾರಿ; ಮಹಿಳೆಯರ ಮೇಲೆ ಹಲ್ಲೆ ಆರೋಪ
-
ಅಪರಾಧ16 hours ago
ಪುತ್ತೂರು ಲಾಡ್ಜ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಹಲ್ಲೆ, ಜೀವ ಬೆದರಿಕೆ ಆರೋಪ
-
ದಕ್ಷಿಣ ಕನ್ನಡ16 hours ago
ಬಂಟ್ವಾಳ : ಹಣ ವಾಪಸ್ ಕೇಳಿದ್ದಕ್ಕೆ ಚೂರಿ ಇರಿತ ಆರೋಪ: ಆರೋಪಿ ಪೊಲೀಸ್ ವಶಕ್ಕೆ
-
ದಕ್ಷಿಣ ಕನ್ನಡ53 minutes ago
ಉಪ್ಪಿನಂಗಡಿಯಲ್ಲಿ ಬಾರ್ ಸಮೀಪ ತಲವಾರು ಪ್ರದರ್ಶನ: ಇಬ್ಬರು ಪೊಲೀಸ್ ವಶಕ್ಕೆ
-
ದಕ್ಷಿಣ ಕನ್ನಡ35 minutes ago
ಸೌತಡ್ಕ ದೇವಸ್ಥಾನದ ಬಳಿ ಹೂವಿನ ಅಂಗಡಿ ವಿಚಾರವಾಗಿ ಗಲಾಟೆ: ಎರಡೂ ಕಡೆಯಿಂದ ದೂರು, ಪ್ರಕರಣ ದಾಖಲು




















