Uncategorized
Dharmasthala Soujanya Case: ಧರ್ಮಸ್ಥಳ : ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ | ಮರು ತನಿಖೆಗೆ ಆದೇಶಿಸಿದ ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಏನೇನಿದೆ ?

ಬೆಂಗಳೂರು/ಬೆಳ್ತಂಗಡಿ: ಸುಮಾರು ಹದಿನೈದು ವರ್ಷಗಳ ಹಿಂದೆ ರಾಜ್ಯದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಧರ್ಮಸ್ಥಳ ಪಾಂಗಾಳ ನಿವಾಸಿ ಹಾಗೂ ಉಜಿರೆಯ ಕಾಲೇಜ್ ವಿದ್ಯಾರ್ಥಿನಿ 17 ವರ್ಷದ ಅಪ್ರಾಪ್ತ ಬಾಲಕಿ ಸೌಜನ್ಯಳ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಸಮಗ್ರ ಮರು ತನಿಖೆಗೆ (De novo investigation) ಸುಪ್ರೀಂ ಕೋರ್ಟ್ ಆದೇಶಿಸಿದ್ದು, ತನಿಖೆಗಾಗಿ ಸಮರ್ಥ ಹಿರಿಯ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (SIT) ರಚಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ:
2012ರ ಅಕ್ಟೋಬರ್ 9ರಂದು ಸಂಜೆ 4 ಗಂಟೆಗೆ ಕಾಲೇಜಿನಿಂದ ಹಿಂತಿರುಗುತ್ತಿದ್ದ ಕು| ಸೌಜನ್ಯ ನಾಪತ್ತೆಯಾಗಿದ್ದಳು. ಮರುದಿನ ಅಕ್ಟೋಬರ್ 10ರಂದು ಮಣ್ಣಸಂಕದ ಬಳಿಯ ಕಾಡಿನಲ್ಲಿ ಬಾಲಕಿಯ ಮೃತದೇಹವು ಅರ್ಧಬೆತ್ತಲೆ ಸ್ಥಿತಿಯಲ್ಲಿ, ಒಂದು ಕೈಯನ್ನು ಚೂಡಿದಾರ್ ಶಾಲಿನಿಂದ ಮರಕ್ಕೆ ಕಟ್ಟಿಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಾಗಿತ್ತು.
ಆರಂಭದಲ್ಲಿ ಬೆಳ್ತಂಗಡಿ ಪೊಲೀಸರು, ನಂತರ ಸಿಐಡಿ (CID) ಮತ್ತು ಕೊನೆಯಲ್ಲಿ ಸಿಬಿಐ (CBI) ತನಿಖೆ ನಡೆಸಿ ಸಂತೋಷ್ ರಾವ್ ಎಂಬಾತನೇ ಅಪರಾಧಿ ಎಂದು ಆರೋಪಪಟ್ಟಿ ಸಲ್ಲಿಸಿದ್ದವು. ಆದರೆ ಬೆಂಗಳೂರಿನ ಸೆಷನ್ಸ್ ನ್ಯಾಯಾಲಯವು ವಿಚಾರಣೆ ನಡೆಸಿ, ಸಾಕ್ಷ್ಯಾಧಾರಗಳ ಕೊರತೆ ಹಾಗೂ ತನಿಖೆಯಲ್ಲಿ ಗಂಭೀರ ಲೋಪಗಳು ಇರುವುದನ್ನು ಪರಿಗಣಿಸಿ 2023ರ ಜೂನ್ 16ರಂದು ಸಂತೋಷ್ ರಾವ್ ಅವರನ್ನು ದೋಷಮುಕ್ತಗೊಳಿಸಿ ( acquittal) ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಹಾಗೂ ಪ್ರಕರಣದ ನೈಜ ಅಪರಾಧಿಗಳನ್ನು ಪತ್ತೆಹಚ್ಚಲು ಕೋರಿ ಬಾಲಕಿಯ ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ್ದನ್ನು ಪ್ರಶ್ನಿಸಿ ಮೃತ ಬಾಲಕಿಯ ತಾಯಿ ಕುಸುಮಾವತಿ ಗೌಡ ಅವರು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ತೀರ್ಪಿನ ಪ್ರಮುಖಾಂಶಗಳು:
- ಮರು ತನಿಖೆಗೆ ಆದೇಶ: ಹೈಕೋರ್ಟ್ನ ಆದೇಶವನ್ನು ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್, ಸಿಆರ್ಪಿಸಿ ಕಲಮ್ 250/2012 ರ ಅಡಿಯಲ್ಲಿ ದಾಖಲಾದ ಪ್ರಕರಣದ ಮರು ತನಿಖೆಗೆ (De novo investigation) ಆದೇಶಿಸಿದೆ.
- ವಿಶೇಷ ತನಿಖಾ ತಂಡ (SIT) ರಚನೆ: ಆಧುನಿಕ ತನಿಖಾ ತಂತ್ರಜ್ಞಾನಗಳಲ್ಲಿ ಪರಿಣತಿ ಹೊಂದಿರುವ ಹಾಗೂ ಹಿರಿಯ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ಸಮರ್ಥ ತನಿಖಾಧಿಕಾರಿಗಳನ್ನು ಒಳಗೊಂಡ ಎಸ್ಐಟಿ (SIT) ತಂಡವನ್ನು ರಾಜ್ಯ ಸರ್ಕಾರವು ರಚಿಸಬೇಕು.
- ಹಳೆಯ ಅಧಿಕಾರಿಗಳಿಗೆ ಅವಕಾಶವಿಲ್ಲ: ಈ ಹಿಂದೆ ಬೆಳ್ತಂಗಡಿ ಪೊಲೀಸ್ ಠಾಣೆ, ಸಿಐಡಿ ಅಥವಾ ಸಿಬಿಐ ತನಿಖಾ ತಂಡಗಳಲ್ಲಿ ಕಾರ್ಯನಿರ್ವಹಿಸಿದ್ದ ಯಾವುದೇ ಅಧಿಕಾರಿಗೆ ಹೊಸ ಎಸ್ಐಟಿಯಲ್ಲಿ ಸ್ಥಾನ ನೀಡಬಾರದು.
- ಸಂತೋಷ್ ರಾವ್ ವಿಚಾರಣೆಗೆ ವಿನಾಯಿತಿ: ವಿಚಾರಣಾ ನ್ಯಾಯಾಲಯದಿಂದ ಈಗಾಗಲೇ ದೋಷಮುಕ್ತಗೊಂಡಿರುವ ಸಂತೋಷ್ ರಾವ್ ಅವರಿಗೆ ಸಂವಿಧಾನದ ವಿಧಿ 20(2) ಮತ್ತು ಸಿಆರ್ಪಿಸಿ ಕಲಮ್ 300ರಡಿ ರಕ್ಷಣೆ ಇರುವುದರಿಂದ, ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸುವಂತಿಲ್ಲ.
- ಕಾಲಮಿತಿ: ಹೊಸ ತನಿಖೆಯನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಿ ಸಂಬಂಧಪಟ್ಟ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು.
- 6ಇತರ ವ್ಯಕ್ತಿಗಳ ಬಗ್ಗೆ ನ್ಯಾಯಾಲಯ ಯಾವುದೇ ತೀರ್ಪು ನೀಡಿಲ್ಲ: ಮಲ್ಲಿಕ್ ಜೈನ್, ಧೀರಜ್ ಜೈನ್ ಮತ್ತು ಉದಯ್ ಜೈನ್ ಸೇರಿದಂತೆ ಯಾರ ಪಾತ್ರವೂ ಇದೆ ಎಂದು ನ್ಯಾಯಾಲಯ ಈ ಹಂತದಲ್ಲಿ ಹೇಳಿಲ್ಲ. ಅವರ ವಿರುದ್ಧ ಅಥವಾ ಪರವಾಗಿ ಯಾವುದೇ ಅಭಿಪ್ರಾಯವನ್ನು ನ್ಯಾಯಾಲಯ ವ್ಯಕ್ತಪಡಿಸಿಲ್ಲ.
ಹೊಸ SIT ಸ್ವತಂತ್ರವಾಗಿ ತನಿಖೆ ನಡೆಸಬೇಕು:
ನ್ಯಾಯಾಲಯವು ತನ್ನ ಆದೇಶದಲ್ಲಿ, ತನಿಖಾ ಏಜೆನ್ಸಿಗಳು ಆರಂಭಿಕ ಹಂತದಲ್ಲಿ (Golden hour) ಸರಿಯಾಗಿ ತನಿಖೆ ನಡೆಸದೆ ಪ್ರಮುಖ ಸಾಕ್ಷ್ಯಗಳನ್ನು ನಾಶಪಡಿಸಿವೆ ಮತ್ತು ನೈಜ ಅಪರಾಧಿಗಳನ್ನು ರಕ್ಷಿಸಲು ಯತ್ನಿಸಿವೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಬಾಲಕಿಗೆ ನ್ಯಾಯ ಒದಗಿಸಲು ಮತ್ತು ಸತ್ಯಾಸತ್ಯತೆಯನ್ನು ಹೊರತರಲು ಈ ಮರು ತನಿಖೆ ಅತ್ಯಾವಶ್ಯಕ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
Uncategorized
Philomena-ಸಂತ ಫಿಲೋಮಿನಾ ಪ. ಪೂ ಕಾಲೇಜಿನಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಸಿದ್ಧತೆಯ ಕುರಿತು ಮಾಹಿತಿ ಕಾರ್ಯಗಾರ
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವಾಣಿಜ್ಯ ಸಂಘದ ಆಶ್ರಯದಲ್ಲಿ ನ 25 ರಂದು ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಯ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು
ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವಾಣಿಜ್ಯ ಸಂಘದ ಆಶ್ರಯದಲ್ಲಿ ನ 25 ರಂದು ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ
ಪರೀಕ್ಷಾ ಸಿದ್ಧತೆಯ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಪುತ್ತೂರಿನ ಲಕ್ಷ್ಯ ಕೌನ್ಸೆಲಿಂಗ್ ಸೆಂಟರ್ ನ ಮಕ್ಕಳ
ಸಲಹೆಗಾರರಾದ ದುರ್ಗಾಪರಮೇಶ್ವರ ಭಟ್ ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಮಾರ್ಗದರ್ಶಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪರೀಕ್ಷಾ ಸಿದ್ಧತೆ ಮತ್ತು ತರಗತಿಯ ಶಿಸ್ತು ಅತೀ ಮುಖ್ಯವಾಗಿದ್ದು, ಇಂದಿನ ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳು ಸದಾ ಚುರುಕಾಗಿರಬೇಕು. ಕಾಲಕ್ಕೆ ತಕ್ಕಂತೆ ಆಗುವ ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದರ ಜೊತೆಗೆ, ಉತ್ತಮ ಮಾಹಿತಿ ಹಾಗೂ ಜ್ಞಾನವನ್ನು ನಿರಂತರವಾಗಿ ಪಡೆದುಕೊಳ್ಳುತ್ತಿರಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಾಣಿಜ್ಯ ವಿದ್ಯಾರ್ಥಿಗಳು ಮಾನಸಿಕವಾಗಿ ಅತ್ಯಂತ ದೃಢವಾಗಿರಬೇಕು. ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ, ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು.
ವಾಣಿಜ್ಯ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳಿಗೆ ಸದೃಢವಾದ ಮನಸ್ಸು ಇರಬೇಕು. ಹೊಸ ಆಲೋಚನೆಗಳು, ಸೃಜನಶೀಲತೆ ಮತ್ತು ವೃತ್ತಿಪರ ಕೌಶಲ್ಯಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ವಾಣಿಜ್ಯ ಸಂಘದ ನಿರ್ದೇಶಕರಾದ ಭರತ್ ಜಿ ಫೈ ಹಾಗೂ ಪೂರ್ಣಿಮಾ ಡಿ. ಎಸ್ ಉಪಸ್ಥಿತರಿದ್ದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗ ಮತ್ತು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿಗಳಾದ ದೇಶ್ನ ಎ. ಎಲ್ ಸ್ವಾಗತಿಸಿ, ಸ್ವಿನಿಕಾ ಎಸ್ ಲೋಬೋ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
Uncategorized
ಫುತ್ತೂರು : ಗುತ್ತಿಗೆದಾರರ ಸಹಾಯಕಿಗೆ ಲೈಂಗಿಕ ದೌರ್ಜನ್ಯ, ವಿಡಿಯೋ ಚಿತ್ರೀಕರಣ , ಕಾರು ಹತ್ತಿಸಲು ಯತ್ನ ಆರೋಪ; ಮೆಸ್ಕಾಂ ಸಿಬ್ಬಂದಿ ವಿರುದ್ಧ ಕೇಸ್

ಪುತ್ತೂರು: ವಿದ್ಯುತ್ ಕಾಮಗಾರಿಯ ಪರಿಶೀಲನೆಯ ನೆಪದಲ್ಲಿ ಗುತ್ತಿಗೆದಾರರ ಸಹಾಯಕಿಯನ್ನು ಸ್ವಂತ ಕಾರಿನಲ್ಲಿ ಕರೆದೊಯ್ದ ಮೆಸ್ಕಾಂ ಸಿಬ್ಬಂದಿಯೊಬ್ಬರು, ಮೆಸ್ಕಾಂ ಕ್ವಾಟ್ರಸ್ಗೆ ಬಲವಂತವಾಗಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಮೆಸ್ಕಾಂ ಸಿಬ್ಬಂದಿ ದುರ್ಗಾ ಸಿಂಗ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಪ್ರಕಾರ, ವಿದ್ಯುತ್ ಕಾಮಗಾರಿಯ ಪರಿಶೀಲನೆ ಮುಗಿದ ಬಳಿಕ ಮನೆಗೆ ಕರೆದೊಯ್ಯುವುದಾಗಿ ಹೇಳಿ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮೆಸ್ಕಾಂ ಕ್ವಾಟ್ರಸ್ಗೆ ಕರೆದೊಯ್ದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಕೃತ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ ಎನ್ನಲಾಗಿದೆ. ಮಹಿಳೆ ಬೊಬ್ಬೆ ಹಾಕಿ ಪ್ರತಿರೋಧ ವ್ಯಕ್ತಪಡಿಸಿ ಅಲ್ಲಿಂದ ತಪ್ಪಿಸಿಕೊಂಡು ಹೊರಬಂದಿದ್ದಾರೆ ಎಂದು ದೂರಲಾಗಿದೆ
ಘಟನೆ ಬಳಿಕ ಮೊಬೈಲ್ನಲ್ಲಿ ಚಿತ್ರೀಕರಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಉಂಗುರ ಕದ್ದಿರುವುದಾಗಿ ದೂರು ದಾಖಲಿಸುವುದಾಗಿ ಹೆದರಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜನಸಂಪರ್ಕ ಸಭೆಯಲ್ಲೂ ಪ್ರಸ್ತಾಪವಾಗಿತ್ತು!
ಈ ಪ್ರಕರಣದ ವಿಚಾರ ನ.5ರಂದು ಪುತ್ತೂರಿನಲ್ಲಿ ನಡೆದ ಮೆಸ್ಕಾಂ ಪುತ್ತೂರು ನಗರ ಹಾಗೂ ಗ್ರಾಮಾಂತರ ಉಪವಿಭಾಗದ ಜನಸಂಪರ್ಕ ಸಭೆಯಲ್ಲೂ ಪ್ರಸ್ತಾಪವಾಗಿತ್ತು. ಗುತ್ತಿಗೆದಾರರ ಸಹಾಯಕಿಯೊಬ್ಬರಿಗೆ ದೌರ್ಜನ್ಯ ಎಸಗಿರುವ ಆರೋಪ ಹಾಗೂ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ ಎಂಬ ಗಂಭೀರ ಆಕ್ಷೇಪ ಸಭೆಯಲ್ಲಿ ವ್ಯಕ್ತವಾಗಿತ್ತು. ಆದರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಮರ್ಪಕ ಉತ್ತರ ನೀಡದೆ ಅಧಿಕಾರಿಗಳು ನುಣುಚಿಕೊಂಡಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.
ದೂರು ದಾಖಲಿಸಲು ಹಿಂದೇಟು?
ಸಂತ್ರಸ್ತ ಮಹಿಳೆ ಪ್ರಕರಣ ದಾಖಲಿಸುವ ಉದ್ದೇಶದಿಂದ ಒಂದು ದಿನದ ಹಿಂದೆ ಪೊಲೀಸ್ ಠಾಣೆಗೆ ತೆರಳಿದ್ದರೂ, ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಅವರನ್ನು ಸಂಪರ್ಕಿಸಿದ ಹಿನ್ನೆಲೆಯಲ್ಲಿ, ಅವರ ಸೂಚನೆಯ ಮೇರೆಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ದೇವಸ್ಥಾನದ ಮುಂಭಾಗದಲ್ಲೂ ಬೆದರಿಕೆ ಆರೋಪ
ಸೋಮವಾರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ದುರ್ಗಾ ಸಿಂಗ್ ಅವರು ಸಂತ್ರಸ್ತೆಯನ್ನು ಕಾರಿಗೆ ಹತ್ತಿಸಲು ಯತ್ನಿಸಿದ್ದು, ವೇಗವಾಗಿ ಕಾರು ಚಲಾಯಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವನ್ನೂ ದೂರಿನಲ್ಲಿ ದಾಖಲಿಸಲಾಗಿದೆ.
ಕಾಮಗಾರಿಯ ಪರಿಶೀಲನೆಯ ನೆಪದಲ್ಲಿ ನಡೆದಿದೆಯೆನ್ನಲಾದ ಈ ಘಟನೆ, ಬಳಿಕ ಬೆದರಿಕೆ ಹಾಗೂ ಪ್ರಕರಣ ಮುಚ್ಚಿಹಾಕುವ ಯತ್ನದ ಆರೋಪಗಳೊಂದಿಗೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರಕರಣದ ಕುರಿತು ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.
Uncategorized
Vivekananda-ವಿವೇಕಾನಂದ ವಸತಿನಿಲಯದಲ್ಲಿ ತುಳಸಿಪೂಜೆ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಸಂಸ್ಕಾರಯುತ ಜೀವನದಿಂದ ನಿತ್ಯ ಸಂಭ್ರಮ:ವಿಜಯನಾರಾಯಣ ಕೆ.ಎಂ.
ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಗಳ ವಸತಿನಿಲಯದ ವತಿಯಿಂದ ನಡೆದ ತುಳಸಿಪೂಜೆ ಹಾಗೂ ವಸತಿ ನಿಲಯದ ಪಾಕಶಾಲಾ ಸಿಬ್ಬಂದಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ. ಮಾತನಾಡಿದರು.
ಪುತ್ತೂರು, ನ.21: ಪ್ರತಿಯೊಂದು ಪರ್ವಾಚರಣೆಗಳಿಗೂ ಅವುಗಳದ್ದಾದ ಹಿನ್ನೆಲೆಗಳಿದ್ದು ಹಿರಿಯರು ಅವುಗಳನ್ನು ಅರ್ಥಪೂರ್ಣವಾಗಿ ಆಚರಿಸಿ ನಮ್ಮ ತಲೆಮಾರಿಗೆ ಹಸ್ತಾಂತರಿಸಿದ್ದಾರೆ. ಯುವಕರಿಗೆ ವಿದ್ಯಾಭ್ಯಾಸ ಹಾಗೂ ಉದ್ಯೋಗ ಗಳಿಕೆ ಅತ್ಯಂತ ಮುಖ್ಯ ಹೌದು, ಆದರೆ ಬದುಕನ್ನು ಆ ಚೌಕಟ್ಟಿಗೆ ಮಾತ್ರ ಸೀಮಿತವಾಗಿಸದೇ ಅದರಿಂದಾಚೆಗಿನ ಅನೇಕ ಮೌಲ್ಯಯುತ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ನಾವು ನಮ್ಮ ಹಿರಿಯರ ಜೀವನೋತ್ಸಾಹದಿಂದ ಪ್ರೇರಣೆ ಪಡೆದು ಅನುದಿನದ ಪ್ರತೀಕ್ಷಣವನ್ನು ಹಬ್ಬದಂತೆ ಕಾಣಬೇಕಲ್ಲದೇ ನಮ್ಮ ಉತ್ತಮ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಬೇಕು ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ ನುಡಿದರು.
ಇವರು ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಗಳ ವಸತಿನಿಲಯದ ವತಿಯಿಂದ ನಡೆದ ತುಳಸಿಪೂಜೆ ಹಾಗೂ ವಸತಿ ನಿಲಯದ ಪಾಕಶಾಲಾ ಸಿಬ್ಬಂದಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದೇವಿಚರಣ್ ರೈ, ದೀಪಾವಳಿಗೆ ಬಲಿ ಚಕ್ರವರ್ತಿ ಭೂಮಿಗೆ ಬರುತ್ತಾನೆ ಎನ್ನುವ ಹಿನ್ನೆಲೆಯಿದ್ದು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ನಮ್ಮ ಹಬ್ಬಗಳು ಮತ್ತು ಪಾಲಿಸುವ ಸಂಸ್ಕೃತಿಯಿಂದ ಜೀವನುದ್ದಕ್ಕೂ ನಾವು ಅನೇಕ ವಿಷಯಗಳನ್ನು ಕಲಿಯುತ್ತೇವೆ. ಯುವಕರು ಜೀವನದ ನಿಜಾರ್ಥ ಏನೆಂಬುದನ್ನು ತಿಳಿಯುವ ಮೊದಲೇ ಅನಗತ್ಯ ಯೋಚನೆಗಳನ್ನು ಮೈಗೂಡಿಸಿಕೊಳ್ಳುವುದರ ಬದಲಾಗಿ ವಿದ್ಯಾಭ್ಯಾಸ ಹಾಗೂ ಉನ್ನತ ಸಂಸ್ಕಾರಗಳನ್ನು ಪಡೆದು ಸತ್ಪçಜೆಗಳಾಗಬೇಕು. ಹಬ್ಬದ ಒಳ್ಳೆಯ ವಾತಾವರಣ ಜೀವನದ ಉನ್ನತಿಗೆ ಸ್ಫೂರ್ತಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ವಿವೇಕಾನಂದ ವಸತಿನಿಲಯದ ಅಧ್ಯಕ್ಷ ರಮೇಶ್ ಪ್ರಭು ಪಾಕಶಾಸ್ತ್ರ ಎನ್ನುವುದು ಅತ್ಯುನ್ನತವಾದ ಸೇವೆ. ಬಾಣಸಿಗರು, ನಿಲಯಪಾಲಕರು ಮೊದಲಾದ ಸಿಬ್ಬಂದಿಗಳು ತಮ್ಮ ಸಮರ್ಪಣಾಭಾವದಿಂದ ವಸತಿನಿಲಯದ ವಿದ್ಯಾರ್ಥಿಗಳ ಕ್ಷೇಮಕ್ಕೋಸ್ಕರ ಕೆಲಸ ನಿರ್ವಹಿಸುತ್ತಾರೆ. ಅವರಿಗೆ ಗೌರವ ಸಮರ್ಪಿಸುವ ಕಾರ್ಯ ಶ್ಲಾಘನೀಯವಾದುದು ಎಂದು ತಿಳಿಸಿದರು.
ವಿವೇಕಾನಂದ ವಸತಿನಿಲಯದಲ್ಲಿ ಸೇವೆ ಸಲ್ಲಿಸುವ ಪಾಕಶಾಲಾ, ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮವನ್ನು ವಿವೇಕಾನಂದ ವಸತಿನಿಲಯದ ಆಡಳಿತಾಧಿಕಾರಿ ಗೋವಿಂದ ರಾಜ ಶರ್ಮ ಸ್ವಾಗತಿಸಿ, ಕಾರ್ಯದರ್ಶಿ ಸಚಿನ್ ಶೆಣೈ ವಂದಿಸಿದರು. ವಸತಿನಿಲಯದ ವಿದ್ಯಾರ್ಥಿನಿ ದೀಪಿಕಾ ನಿರೂಪಿಸಿದರು.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿರುವ ವಿವಿಧ ವಸತಿನಿಲಯಗಳಲ್ಲಿ ತುಳಸಿಪೂಜೆ ನೆರವೇರಿತು.
ವಸತಿನಿಲಯದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಿಡಿಮದ್ದು ಪ್ರದರ್ಶನ ಜರುಗಿದವು.
-
ನಿಧನ ವಾರ್ತೆ17 hours agoBeltangadi-ಬೆಳ್ತಂಗಡಿ: ವಿಷ ಸೇವಿಸಿ ಚಿಕಿತ್ಸೆ ಫಲಿಸದೆ ಐಟಿಐ ವಿದ್ಯಾರ್ಥಿ ಸಾವು
-
ನಿಧನ ವಾರ್ತೆ16 hours agoKolar-ಕೋಲಾರ: ಹೆದ್ದಾರಿ ಬದಿಯಲ್ಲಿ ಪಾರ್ಸೆಲ್ ರೂಪದಲ್ಲಿ ಮಹಿಳೆಯ ಮೃತದೇಹ ಪತ್ತೆ
-
ಅಂತರ ರಾಜ್ಯ16 hours agoViral video-ಚಲಿಸುತ್ತಿರುವ ರೈಲಿನ AC ಬೋಗಿಯಲ್ಲಿ ದೀಪ ಹಚ್ಚಿ ಆರತಿ, ಶಂಖನಾದ; ವೈರಲ್ ವಿಡಿಯೋಗೆ ರೈಲ್ವೆ ಪ್ರತಿಕ್ರಿಯೆ
-
ನಿಧನ ವಾರ್ತೆ16 hours agoKankanadi-ಶಾಲೆಯಿಂದ ನಡೆದು ಹೋಗುತ್ತಿದ್ದ ಎರಡನೇ ಕ್ಲಾಸ್ ವಿದ್ಯಾರ್ಥಿಗೆ ಖಾಸಗಿ ಬಸ್ ಡಿಕ್ಕಿ; ಕಂಕನಾಡಿಯಲ್ಲಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕ ಬಲಿ
-
ಸ್ಥಳೀಯ17 hours agoArrested-ಕುಂಭಾಶಿ ದೇವಸ್ಥಾನದಲ್ಲಿ ವೃದ್ಧೆಯ ಚಿನ್ನದ ಸರ ಕಳವು; ತಮಿಳುನಾಡಿನ ಮೂವರು ಮಹಿಳೆಯರ ಬಂಧನ
-
ಸ್ಥಳೀಯ10 hours agoRakshit Shivaram-ವಳಾಲು ಟೋಲ್ ದರ ರೂ.250ಕ್ಕೆ ಏರಿಕೆ : ಬಿಜೆಪಿಯವರಿಗೂ ಪಾಲಿದೆಯಾ..? ಶಾಸಕರ ಮೌನಕ್ಕೆ ರಕ್ಷಿತ್ ಶಿವರಾಂ ಗರಂ
-
ಅಂತರ ರಾಜ್ಯ16 hours agoWhatsApp-WhatsApp ಬಳಕೆದಾರರಿಗೆ CERT-In ಎಚ್ಚರಿಕೆ; ಡೇಟಾ ಕದಿಯುವ, ಅಳಿಸುವ ಅಪಾಯ..!
-
ಸ್ಥಳೀಯ16 hours agoDharmasthala-ಪಾಣೇರು ಬಸದಿ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 5 ಲಕ್ಷ ಅನುದಾನ















