Uncategorized
ಹನುಮಗಿರಿ: ಕೋದಂಡರಾಮ, ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಅದ್ದೂರಿ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ – ಕಂಚಿ ಶ್ರೀ, ರಾಜ್ಯಪಾಲರ ಸಹಿತ ಹಲವು ಗಣ್ಯರು ಭಾಗಿ

ಪುತ್ತೂರು: ಏಪ್ರಿಲ್ 9 ರಿಂದ 12 ರವರೆಗೆ ಹನುಮಗಿರಿಯ ಕೋದಂಡರಾಮ-ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯಲಿದೆ. ಈ ಸಂಬಂಧ ಸಕಲ ಸಿದ್ಧತೆಗಳು ಅಂತಿಮ ಹಂತ ತಲುಪಿವೆ ಎಂದು ಬ್ರಹ್ಮಕಲಶ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ತಿಳಿಸಿದರು.
ಹನಮಗಿರಿ ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಏಪ್ರಿಲ್ 10 ರಂದು ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್‌ಚಂದ್ ಗೆಹಲೋತ್ ಭಾಗವಹಿಸಲಿದ್ದು, ಅವರು ನೂತನವಾಗಿ ನಿರ್ಮಾಣ ಗೋಪುರವನ್ನು ಉದ್ಘಾಟಿಸಲಿದ್ದಾರೆ ಎಂದರು
ಶ್ರೀರಾಮ-ಹನುಮ ಜ್ಯೋತಿ ರಥಯಾತ್ರೆಗೆ ಭವ್ಯ ಸ್ವಾಗತ:
ಆಯೋಧ್ಯೆಯಿಂದ ತಂದ ರಾಮ ಜ್ಯೋತಿ ಹಾಗೂ ಅಂಜನಾದ್ರಿಯಿಂದ ತಂದ ಹನುಮ ಜ್ಯೋತಿ ಪುತ್ತೂರು ಸುಳ್ಯ ಹಾಗೂ ಕಾಸರಗೋಡಿನ ಒಟ್ಟು 60 ಗ್ರಾಮಗಳಿಗೆ ತೆರಳಿ ಪರ್ಯಾಟನೆ ಮಾಡುತ್ತಿದ್ದು ಏಪ್ರಿಲ್ 9 ರಂದು ಸಂಜೆ 3ಕ್ಕೆ ಹನುಮಗಿರಿ ಪ್ರವೇಶಿಸಲಿದೆ. ಈಶ್ವರಮಂಗಲ ಪಂಚಲಿಂಗೇಶ್ವರ ದೇವಳದಿಂದ ಹನುಮಗಿರಿ ತನಕ ಅದ್ದೂರಿ ರಥಯಾತ್ರೆ ಮೆರವಣಿಗೆ ನಡೆಯಲಿದೆ ಎಂದು ಕಟೀಲು ಹೇಳಿದರು.

ಏಪ್ರಿಲ್ 8 ರಂದು ಬೆಳಿಗ್ಗೆ ಉಗ್ರಾಣ ಮುಹೂರ್ತ ನಡೆಯಲಿದೆ. ಸಂಜೆ 3 ಗಂಟೆಗೆ ಪುತ್ತೂರಿನ ಮಹಾಲಿಂಗೇಶ್ವರ ದೇವಳದಿಂದ ದರ್ಬೆ ತನಕ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಜರುಗಲಿದೆ. ಬಳಿಕ ವಾಹನ ಜಾಥಾದ ಮೂಲಕ ಹಸಿರುವಾಣಿಯನ್ನು ಹನುಮಗಿರಿಗೆ ಕೊಂಡೊಯ್ದು ಸಮರ್ಪಿಸಲಾಗುವುದು ಎಂದರು.
ಏ 10 ರಂದು ಅಷ್ಟೋತ್ತರ ಶತನಾರಿಕೇಳ ಯಾಗ ನಡೆಯಲಿದ್ದು, ಇದರಲ್ಲಿ ರಾಜ್ಯಪಾಲರಾದ ಥಾವರ್‌ಚಂದ್ ಗೆಹಲೋತ್, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಉಪಸ್ಥಿತರಿರುವರು. ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಯಾಗ ಶಾಲೆಯನ್ನು ಉದ್ಘಾಟಿಸಲಿದ್ದಾರೆ.
ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶಾಭಿಷೇಕ:
ಏಪ್ರಿಲ್ 11 ರಂದು 10 ಕುಂಡಗಳಲ್ಲಿ ಶ್ರೀರಾಮ ತಾರಕ ಯಾಗ ನಡೆಯಲಿದೆ. ಏಪ್ರಿಲ್ 12 ರಂದು ಕೋದಂಡರಾಮ ಮತ್ತು ಪಂಚಮುಖಿ ಆಂಜನೇಯ ದೇವರ ಪ್ರತಿಷ್ಠಾಪನೆ, ಪರಿವಾರ ದೇವರ ಪ್ರತಿಷ್ಠಾಪನೆ, ಮತ್ತು ಬ್ರಹ್ಮಕಲಶಾಭಿಷೇಕ ಜರುಗಲಿದೆ. ರಾತ್ರಿ ದೇವರ ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆಯೊಂದಿಗೆ ಬ್ರಹ್ಮಕಲಶ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.
ಸಾಧು – ಸಂತರ ಸಮಾಗಮ
ಕಂಚಿಕಾಮಕೋಟಿ ಶ್ರೀಗಳು, ಸುಬ್ರಹ್ಮಣ್ಯ, ಎಡನೀರು, ಒಡಿಯೂರು, ಕನ್ಯಾನ ಶ್ರೀಗಳು ಸೇರಿದಂತೆ ಹಲವು ಪೀಠಾಧಿಪತಿಗಳು, ಸಾಧು-ಸಂತರು, ಮಠಾಧೀಶರು, ರಾಜವಂಸಸ್ಥರು ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಪ್ರತಿ ದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಭಜನೆ ನಡೆಯಲಿವೆ. ಏಪ್ರಿಲ್ 12 ರಂದು ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ವಿಶೇಷ ಆಕರ್ಷಣೆಯಾಗಲಿದೆ ಎಂದು ಸಮಿತಿ ತಿಳಿಸಿದೆ.
ಪತ್ರಿಕಾಗೋಷ್ಟಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ, ಸ್ವಾಗತ ಸಮಿತಿ ಅಧ್ಯಕ್ಷ ರವೀಶ್ ಪಡುಮಲೆ, ಬ್ರಹ್ಮಕಲಶ ಸಮಿತಿ ಉಪಾಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ಮುರಳೀಕೃಷ್ಣ ಹಸಂತಡ್ಕ, ಬೂಡಿಯಾರ್ ರಾಧಾಕೃಷ್ಣ ರೈ, ರವಿಕಿರಣ್ ಶೆಟ್ಟಿ, ಶಶಿಕುಮಾರ್ ರೈ ಬಾಲ್ಯೊಟ್ಟು, ಶ್ರೀರಾಮ ಪಕ್ಕಳ ಕರ್ನೂರುಗುತ್ತು, ಪ್ರಧಾನ ಕಾರ್ಯದರ್ಶಿಗಳಾದ ಆರ್.ಸಿ.ನಾರಾಯಣ ರೆಂಜ, ನಹುಷ ಪಳನೀರು ಉಪಸ್ಥಿತರಿದ್ದರು.
Uncategorized
Philomena-ಸಂತ ಫಿಲೋಮಿನಾ ಪ. ಪೂ ಕಾಲೇಜಿನಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಸಿದ್ಧತೆಯ ಕುರಿತು ಮಾಹಿತಿ ಕಾರ್ಯಗಾರ
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವಾಣಿಜ್ಯ ಸಂಘದ ಆಶ್ರಯದಲ್ಲಿ ನ 25 ರಂದು ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಯ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು
ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವಾಣಿಜ್ಯ ಸಂಘದ ಆಶ್ರಯದಲ್ಲಿ ನ 25 ರಂದು ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ
ಪರೀಕ್ಷಾ ಸಿದ್ಧತೆಯ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಪುತ್ತೂರಿನ ಲಕ್ಷ್ಯ ಕೌನ್ಸೆಲಿಂಗ್ ಸೆಂಟರ್ ನ ಮಕ್ಕಳ
ಸಲಹೆಗಾರರಾದ ದುರ್ಗಾಪರಮೇಶ್ವರ ಭಟ್ ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಮಾರ್ಗದರ್ಶಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪರೀಕ್ಷಾ ಸಿದ್ಧತೆ ಮತ್ತು ತರಗತಿಯ ಶಿಸ್ತು ಅತೀ ಮುಖ್ಯವಾಗಿದ್ದು, ಇಂದಿನ ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳು ಸದಾ ಚುರುಕಾಗಿರಬೇಕು. ಕಾಲಕ್ಕೆ ತಕ್ಕಂತೆ ಆಗುವ ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದರ ಜೊತೆಗೆ, ಉತ್ತಮ ಮಾಹಿತಿ ಹಾಗೂ ಜ್ಞಾನವನ್ನು ನಿರಂತರವಾಗಿ ಪಡೆದುಕೊಳ್ಳುತ್ತಿರಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಾಣಿಜ್ಯ ವಿದ್ಯಾರ್ಥಿಗಳು ಮಾನಸಿಕವಾಗಿ ಅತ್ಯಂತ ದೃಢವಾಗಿರಬೇಕು. ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ, ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು.
ವಾಣಿಜ್ಯ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳಿಗೆ ಸದೃಢವಾದ ಮನಸ್ಸು ಇರಬೇಕು. ಹೊಸ ಆಲೋಚನೆಗಳು, ಸೃಜನಶೀಲತೆ ಮತ್ತು ವೃತ್ತಿಪರ ಕೌಶಲ್ಯಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ವಾಣಿಜ್ಯ ಸಂಘದ ನಿರ್ದೇಶಕರಾದ ಭರತ್ ಜಿ ಫೈ ಹಾಗೂ ಪೂರ್ಣಿಮಾ ಡಿ. ಎಸ್ ಉಪಸ್ಥಿತರಿದ್ದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗ ಮತ್ತು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿಗಳಾದ ದೇಶ್ನ ಎ. ಎಲ್ ಸ್ವಾಗತಿಸಿ, ಸ್ವಿನಿಕಾ ಎಸ್ ಲೋಬೋ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
Uncategorized
ಫುತ್ತೂರು : ಗುತ್ತಿಗೆದಾರರ ಸಹಾಯಕಿಗೆ ಲೈಂಗಿಕ ದೌರ್ಜನ್ಯ, ವಿಡಿಯೋ ಚಿತ್ರೀಕರಣ , ಕಾರು ಹತ್ತಿಸಲು ಯತ್ನ ಆರೋಪ; ಮೆಸ್ಕಾಂ ಸಿಬ್ಬಂದಿ ವಿರುದ್ಧ ಕೇಸ್

ಪುತ್ತೂರು: ವಿದ್ಯುತ್ ಕಾಮಗಾರಿಯ ಪರಿಶೀಲನೆಯ ನೆಪದಲ್ಲಿ ಗುತ್ತಿಗೆದಾರರ ಸಹಾಯಕಿಯನ್ನು ಸ್ವಂತ ಕಾರಿನಲ್ಲಿ ಕರೆದೊಯ್ದ ಮೆಸ್ಕಾಂ ಸಿಬ್ಬಂದಿಯೊಬ್ಬರು, ಮೆಸ್ಕಾಂ ಕ್ವಾಟ್ರಸ್‌ಗೆ ಬಲವಂತವಾಗಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಮೆಸ್ಕಾಂ ಸಿಬ್ಬಂದಿ ದುರ್ಗಾ ಸಿಂಗ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಪ್ರಕಾರ, ವಿದ್ಯುತ್ ಕಾಮಗಾರಿಯ ಪರಿಶೀಲನೆ ಮುಗಿದ ಬಳಿಕ ಮನೆಗೆ ಕರೆದೊಯ್ಯುವುದಾಗಿ ಹೇಳಿ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮೆಸ್ಕಾಂ ಕ್ವಾಟ್ರಸ್‌ಗೆ ಕರೆದೊಯ್ದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ ಎನ್ನಲಾಗಿದೆ. ಮಹಿಳೆ ಬೊಬ್ಬೆ ಹಾಕಿ ಪ್ರತಿರೋಧ ವ್ಯಕ್ತಪಡಿಸಿ ಅಲ್ಲಿಂದ ತಪ್ಪಿಸಿಕೊಂಡು ಹೊರಬಂದಿದ್ದಾರೆ ಎಂದು ದೂರಲಾಗಿದೆ
ಘಟನೆ ಬಳಿಕ ಮೊಬೈಲ್‌ನಲ್ಲಿ ಚಿತ್ರೀಕರಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಉಂಗುರ ಕದ್ದಿರುವುದಾಗಿ ದೂರು ದಾಖಲಿಸುವುದಾಗಿ ಹೆದರಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜನಸಂಪರ್ಕ ಸಭೆಯಲ್ಲೂ ಪ್ರಸ್ತಾಪವಾಗಿತ್ತು!
ಈ ಪ್ರಕರಣದ ವಿಚಾರ ನ.5ರಂದು ಪುತ್ತೂರಿನಲ್ಲಿ ನಡೆದ ಮೆಸ್ಕಾಂ ಪುತ್ತೂರು ನಗರ ಹಾಗೂ ಗ್ರಾಮಾಂತರ ಉಪವಿಭಾಗದ ಜನಸಂಪರ್ಕ ಸಭೆಯಲ್ಲೂ ಪ್ರಸ್ತಾಪವಾಗಿತ್ತು. ಗುತ್ತಿಗೆದಾರರ ಸಹಾಯಕಿಯೊಬ್ಬರಿಗೆ ದೌರ್ಜನ್ಯ ಎಸಗಿರುವ ಆರೋಪ ಹಾಗೂ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ ಎಂಬ ಗಂಭೀರ ಆಕ್ಷೇಪ ಸಭೆಯಲ್ಲಿ ವ್ಯಕ್ತವಾಗಿತ್ತು. ಆದರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಮರ್ಪಕ ಉತ್ತರ ನೀಡದೆ ಅಧಿಕಾರಿಗಳು ನುಣುಚಿಕೊಂಡಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.
ದೂರು ದಾಖಲಿಸಲು ಹಿಂದೇಟು?
ಸಂತ್ರಸ್ತ ಮಹಿಳೆ ಪ್ರಕರಣ ದಾಖಲಿಸುವ ಉದ್ದೇಶದಿಂದ ಒಂದು ದಿನದ ಹಿಂದೆ ಪೊಲೀಸ್ ಠಾಣೆಗೆ ತೆರಳಿದ್ದರೂ, ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಅವರನ್ನು ಸಂಪರ್ಕಿಸಿದ ಹಿನ್ನೆಲೆಯಲ್ಲಿ, ಅವರ ಸೂಚನೆಯ ಮೇರೆಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ದೇವಸ್ಥಾನದ ಮುಂಭಾಗದಲ್ಲೂ ಬೆದರಿಕೆ ಆರೋಪ
ಸೋಮವಾರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ದುರ್ಗಾ ಸಿಂಗ್ ಅವರು ಸಂತ್ರಸ್ತೆಯನ್ನು ಕಾರಿಗೆ ಹತ್ತಿಸಲು ಯತ್ನಿಸಿದ್ದು, ವೇಗವಾಗಿ ಕಾರು ಚಲಾಯಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವನ್ನೂ ದೂರಿನಲ್ಲಿ ದಾಖಲಿಸಲಾಗಿದೆ.
ಕಾಮಗಾರಿಯ ಪರಿಶೀಲನೆಯ ನೆಪದಲ್ಲಿ ನಡೆದಿದೆಯೆನ್ನಲಾದ ಈ ಘಟನೆ, ಬಳಿಕ ಬೆದರಿಕೆ ಹಾಗೂ ಪ್ರಕರಣ ಮುಚ್ಚಿಹಾಕುವ ಯತ್ನದ ಆರೋಪಗಳೊಂದಿಗೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರಕರಣದ ಕುರಿತು ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.
Uncategorized
Vivekananda-ವಿವೇಕಾನಂದ ವಸತಿನಿಲಯದಲ್ಲಿ ತುಳಸಿಪೂಜೆ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಸಂಸ್ಕಾರಯುತ ಜೀವನದಿಂದ ನಿತ್ಯ ಸಂಭ್ರಮ:ವಿಜಯನಾರಾಯಣ ಕೆ.ಎಂ.
ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಗಳ ವಸತಿನಿಲಯದ ವತಿಯಿಂದ ನಡೆದ ತುಳಸಿಪೂಜೆ ಹಾಗೂ ವಸತಿ ನಿಲಯದ ಪಾಕಶಾಲಾ ಸಿಬ್ಬಂದಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ. ಮಾತನಾಡಿದರು.
ಪುತ್ತೂರು, ನ.21: ಪ್ರತಿಯೊಂದು ಪರ್ವಾಚರಣೆಗಳಿಗೂ ಅವುಗಳದ್ದಾದ ಹಿನ್ನೆಲೆಗಳಿದ್ದು ಹಿರಿಯರು ಅವುಗಳನ್ನು ಅರ್ಥಪೂರ್ಣವಾಗಿ ಆಚರಿಸಿ ನಮ್ಮ ತಲೆಮಾರಿಗೆ ಹಸ್ತಾಂತರಿಸಿದ್ದಾರೆ. ಯುವಕರಿಗೆ ವಿದ್ಯಾಭ್ಯಾಸ ಹಾಗೂ ಉದ್ಯೋಗ ಗಳಿಕೆ ಅತ್ಯಂತ ಮುಖ್ಯ ಹೌದು, ಆದರೆ ಬದುಕನ್ನು ಆ ಚೌಕಟ್ಟಿಗೆ ಮಾತ್ರ ಸೀಮಿತವಾಗಿಸದೇ ಅದರಿಂದಾಚೆಗಿನ ಅನೇಕ ಮೌಲ್ಯಯುತ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ನಾವು ನಮ್ಮ ಹಿರಿಯರ ಜೀವನೋತ್ಸಾಹದಿಂದ ಪ್ರೇರಣೆ ಪಡೆದು ಅನುದಿನದ ಪ್ರತೀಕ್ಷಣವನ್ನು ಹಬ್ಬದಂತೆ ಕಾಣಬೇಕಲ್ಲದೇ ನಮ್ಮ ಉತ್ತಮ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಬೇಕು ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ ನುಡಿದರು.
ಇವರು ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಗಳ ವಸತಿನಿಲಯದ ವತಿಯಿಂದ ನಡೆದ ತುಳಸಿಪೂಜೆ ಹಾಗೂ ವಸತಿ ನಿಲಯದ ಪಾಕಶಾಲಾ ಸಿಬ್ಬಂದಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದೇವಿಚರಣ್ ರೈ, ದೀಪಾವಳಿಗೆ ಬಲಿ ಚಕ್ರವರ್ತಿ ಭೂಮಿಗೆ ಬರುತ್ತಾನೆ ಎನ್ನುವ ಹಿನ್ನೆಲೆಯಿದ್ದು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ನಮ್ಮ ಹಬ್ಬಗಳು ಮತ್ತು ಪಾಲಿಸುವ ಸಂಸ್ಕೃತಿಯಿಂದ ಜೀವನುದ್ದಕ್ಕೂ ನಾವು ಅನೇಕ ವಿಷಯಗಳನ್ನು ಕಲಿಯುತ್ತೇವೆ. ಯುವಕರು ಜೀವನದ ನಿಜಾರ್ಥ ಏನೆಂಬುದನ್ನು ತಿಳಿಯುವ ಮೊದಲೇ ಅನಗತ್ಯ ಯೋಚನೆಗಳನ್ನು ಮೈಗೂಡಿಸಿಕೊಳ್ಳುವುದರ ಬದಲಾಗಿ ವಿದ್ಯಾಭ್ಯಾಸ ಹಾಗೂ ಉನ್ನತ ಸಂಸ್ಕಾರಗಳನ್ನು ಪಡೆದು ಸತ್ಪçಜೆಗಳಾಗಬೇಕು. ಹಬ್ಬದ ಒಳ್ಳೆಯ ವಾತಾವರಣ ಜೀವನದ ಉನ್ನತಿಗೆ ಸ್ಫೂರ್ತಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ವಿವೇಕಾನಂದ ವಸತಿನಿಲಯದ ಅಧ್ಯಕ್ಷ ರಮೇಶ್ ಪ್ರಭು ಪಾಕಶಾಸ್ತ್ರ ಎನ್ನುವುದು ಅತ್ಯುನ್ನತವಾದ ಸೇವೆ. ಬಾಣಸಿಗರು, ನಿಲಯಪಾಲಕರು ಮೊದಲಾದ ಸಿಬ್ಬಂದಿಗಳು ತಮ್ಮ ಸಮರ್ಪಣಾಭಾವದಿಂದ ವಸತಿನಿಲಯದ ವಿದ್ಯಾರ್ಥಿಗಳ ಕ್ಷೇಮಕ್ಕೋಸ್ಕರ ಕೆಲಸ ನಿರ್ವಹಿಸುತ್ತಾರೆ. ಅವರಿಗೆ ಗೌರವ ಸಮರ್ಪಿಸುವ ಕಾರ್ಯ ಶ್ಲಾಘನೀಯವಾದುದು ಎಂದು ತಿಳಿಸಿದರು.
ವಿವೇಕಾನಂದ ವಸತಿನಿಲಯದಲ್ಲಿ ಸೇವೆ ಸಲ್ಲಿಸುವ ಪಾಕಶಾಲಾ, ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮವನ್ನು ವಿವೇಕಾನಂದ ವಸತಿನಿಲಯದ ಆಡಳಿತಾಧಿಕಾರಿ ಗೋವಿಂದ ರಾಜ ಶರ್ಮ ಸ್ವಾಗತಿಸಿ, ಕಾರ್ಯದರ್ಶಿ ಸಚಿನ್ ಶೆಣೈ ವಂದಿಸಿದರು. ವಸತಿನಿಲಯದ ವಿದ್ಯಾರ್ಥಿನಿ ದೀಪಿಕಾ ನಿರೂಪಿಸಿದರು.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿರುವ ವಿವಿಧ ವಸತಿನಿಲಯಗಳಲ್ಲಿ ತುಳಸಿಪೂಜೆ ನೆರವೇರಿತು.
ವಸತಿನಿಲಯದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಿಡಿಮದ್ದು ಪ್ರದರ್ಶನ ಜರುಗಿದವು.
-
ಬಿಗ್ ನ್ಯೂಸ್19 hours agoVitla-ವಿಟ್ಲ: ಚಿಕ್ಕಪ್ಪನನ್ನು ಕತ್ತಿಯಿಂದ ಕಡಿದು ಹತ್ಯೆಗೈದ ಯುವತಿ ಬಂಧನ
-
ಅಪರಾಧ24 hours agoPunacha-ಪುಣಚದಲ್ಲಿ ಬೈಕ್ಗೆ ಕಾರು ಡಿಕ್ಕಿ; ಸವಾರನಿಗೆ ಗಂಭೀರ ಗಾಯ – ನಿಲ್ಲಿಸದೆ ಪರಾರಿಯಾದ ಕಾರು?
-
ಬಿಗ್ ನ್ಯೂಸ್19 hours agoVirupaksha Bhat-ಮಹಾಲಿಂಗೇಶ್ವರ ದೇವಸ್ಥಾನದ ಕಾಮಗಾರಿಗಳಿಗೆ ಹೈಕೋರ್ಟ್ ತಡೆಯಾಜ್ಞೆ: ಅನುಮತಿಯಿಲ್ಲದ ಕಾಮಗಾರಿ, ಟೆಂಡರ್ ಪ್ರಕ್ರಿಯೆ ಮುಂದುವರಿಸದಂತೆ ಮಧ್ಯಂತರ ಆದೇಶ; ದೇವಸ್ಥಾನದ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ, ನಿಯಮಬದ್ಧ ಆಡಳಿತಕ್ಕೆ ಆಗ್ರಹ : ದೂರುದಾರ ವಿರೂಪಾಕ್ಷ ಭಟ್ ಪತ್ರಿಕಾಗೋಷ್ಟಿ
-
ಅಪರಾಧ22 hours agoBantwal-ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ಗುಂಪುಗೂಡಿ ಗಲಾಟೆ; ಟೋಲ್ ಉಪಕರಣಗಳಿಗೆ ಹಾನಿ ಯತ್ನ – ಪ್ರಕರಣ ದಾಖಲು
-
ಶಿಕ್ಷಣ23 hours agoNarendra-ನ.28 : ನರೇಂದ್ರ ಪ.ಪೂ.ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮ “ಪ್ರತಿಭಾ ಪರ್ವ”
-
ನಿಧನ ವಾರ್ತೆ10 minutes agoBeltangadi-ಬೆಳ್ತಂಗಡಿ: ವಿಷ ಸೇವಿಸಿ ಚಿಕಿತ್ಸೆ ಫಲಿಸದೆ ಐಟಿಐ ವಿದ್ಯಾರ್ಥಿ ಸಾವು
-
ಸ್ಥಳೀಯ57 seconds agoArrested-ಕುಂಭಾಶಿ ದೇವಸ್ಥಾನದಲ್ಲಿ ವೃದ್ಧೆಯ ಚಿನ್ನದ ಸರ ಕಳವು; ತಮಿಳುನಾಡಿನ ಮೂವರು ಮಹಿಳೆಯರ ಬಂಧನ















