Uncategorized
ಪುತ್ತೂರು: ಐಷಾರಾಮಿ ಥಾರ್ ಕಾರಿನಲ್ಲಿ ಲಕ್ಷಾಂತರ ಮೌಲ್ಯದ ಡ್ರಗ್ಸ್ ಸಾಗಾಟ – ಕೇರಳದ ಮೂವರು ಎಂಡಿಎಂಎ ಕಿಂಗ್ಪಿನ್ಗಳ ಅರೆಸ್ಟ್, ಲಾಂಗ್ ಕಂಡು ಪೊಲೀಸರೇ ಶಾಕ್!

ಡ್ರಗ್ಸ್ ಸಾಗಿಸಲು ಹೈಟೆಕ್ ಕಾರು, ರಕ್ಷಣೆಗಾಗಿ ಮಸೆದ ತಲವಾರ್! ಪುತ್ತೂರಿನಲ್ಲಿ ಕೇರಳದ ಖತರ್ನಾಕ್ ಗ್ಯಾಂಗ್ ಅರೆಸ್ಟ್. ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋದ ಕಿಲಾಡಿಗಳನ್ನು ಸಿನಿಮಾ ಸ್ಟೈಲ್ನಲ್ಲಿ ಬೆನ್ನಟ್ಟಿ ಹಿಡಿದ ಸಂಪ್ಯ ಪೊಲೀಸರು. ಈ ಕರಾಳ ದಂಧೆಯ ಪೂರ್ಣ ವಿವರ ಇಲ್ಲಿದೆ.”
ಪುತ್ತೂರು : ಫೆ 19 : ಶಾಂತಿಯುತ ಪುತ್ತೂರಿನ ಮಣ್ಣಿನಲ್ಲಿ ಮಾದಕ ಲೋಕದ ಕರಾಳ ನೆರಳು ಚಾಚಲು ಯತ್ನಿಸಿದ್ದ ‘ಸಾವಿನ ವ್ಯಾಪಾರಿಗಳ’ ಸಂಚನ್ನು ಸಂಪ್ಯ ಪೊಲೀಸರು ವಿಫಲಗೊಳಿಸಿದ್ದಾರೆ. ಐಷಾರಾಮಿ ಕಪ್ಪು ಬಣ್ಣದ ಮಹೀಂದ್ರಾ ಥಾರ್ ಕಾರಿನಲ್ಲಿ ಹತ್ತಾರು ಯುವಕರ ಬದುಕನ್ನು ಬಲಿಪಡೆಯಬಲ್ಲ ‘ಎಂಡಿಎಂಎ’ (MDMA) ಎಂಬ ವಿಷವನ್ನು ಸಾಗಿಸುತ್ತಿದ್ದ ಕೇರಳ ಮೂಲದ ಮೂವರು ದುಷ್ಕರ್ಮಿಗಳನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ.
ಬಂಧಿತರಿಂದ ಕೇವಲ ಮಾದಕ ವಸ್ತುವಷ್ಟೇ ಅಲ್ಲ, ರಕ್ತ ಹರಿಸಲು ಸಿದ್ಧವಾಗಿದ್ದ ಮಸೆದ ‘ತಲವಾರ್’ ಪತ್ತೆಯಾಗಿದ್ದು, ಡ್ರಗ್ಸ್ ದಂಧೆಯ ಹಿಂದಿರುವ ಕ್ರೌರ್ಯದ ಮುಖವನ್ನು ಅನಾವರಣಗೊಳಿಸಿದೆ.
ಸಿನೆಮಾ ಸ್ಟೈಲ್ ಚೇಸಿಂಗ್: ಪೊಲೀಸರನ್ನ ಕಂಡು ಎಸ್ಕೇಪ್ ಆಗಲು ಯತ್ನ!
ಬುಧವಾರ ಪುತ್ತೂರು ಸಂಪ್ಯ ಗ್ರಾಮಾಂತರ ಠಾಣೆಯ ಎಸ್ಐ ಗುಣಪಾಲ ಜಿ. ಮತ್ತು ತಂಡ ಪರ್ಪುಂಜ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿತ್ತು. ಈ ವೇಳೆ ವೇಗವಾಗಿ ಬಂದ ಕೇರಳ ನೋಂದಣಿಯ ಕಪ್ಪು ಥಾರ್ ಕಾರನ್ನು ನಿಲ್ಲಿಸಲು ಪೊಲೀಸರು ಸೂಚಿಸಿದರು. ಆದರೆ, ಪೊಲೀಸರನ್ನು ಕಂಡೊಡನೆ ಕಾರಿನಲ್ಲಿದ್ದವರ ಮುಖದಲ್ಲಿ ಆತಂಕ ಮನೆಮಾಡಿತ್ತು. ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಲು ಮುಂದಾದ ಆರೋಪಿಗಳನ್ನು ಪೊಲೀಸರು ಹಠ ಬಿಡದೆ ಬೆನ್ನಟ್ಟಿ ಸುತ್ತುವರಿದು ಸೆರೆಹಿಡಿದರು.
ಥಾರ್ ಸೀಟಿನ ಅಡಿಯಲ್ಲಿತ್ತು ಮಸೆದ ತಲ್ವಾರ್ !
ಬಂಧಿತರಾದ ಮುಹಮ್ಮದ್ ಅಜ್ಮಲ್, ಇಸ್ಮಾಯಿಲ್ ಮತ್ತು ಸಂಶೀರ್ ಅವರನ್ನು ವಶಕ್ಕೆ ಪಡೆದು ಕಾರನ್ನು ತಪಾಸಣೆ ನಡೆಸಿದಾಗ ಪೊಲೀಸರೇ ದಂಗಾಗಿದ್ದಾರೆ. ಚಾಲಕನ ಸೀಟಿನ ಅಡಿಯಲ್ಲಿ ಮಿಂಚುವ ತಲವಾರ್ ಪತ್ತೆಯಾಗಿದೆ! “ಡ್ರಗ್ಸ್ ಡೀಲ್ ಮಾಡುವಾಗ ನಮ್ಮ ರಕ್ಷಣೆಗಾಗಿ ಮತ್ತು ಎದುರಾಳಿಗಳನ್ನು ಹೆದರಿಸಲು ಇದನ್ನು ಇಟ್ಟುಕೊಂಡಿದ್ದೇವೆ” ಎಂದು ಆರೋಪಿ ಇಸ್ಮಾಯಿಲ್ ಒಪ್ಪಿಕೊಂಡಿರುವುದು ಈ ದಂಧೆ ಎಷ್ಟು ಅಪಾಯಕಾರಿ ಎಂಬುದನ್ನು ಸಾಬೀತುಪಡಿಸಿದೆ. ಹಣಕ್ಕಾಗಿ ಯುವಕರನ್ನು ಮಾದಕ ವ್ಯಸನಿಗಳನ್ನಾಗಿ ಮಾಡುವುದಷ್ಟೇ ಅಲ್ಲ, ರಕ್ತಪಾತಕ್ಕೂ ಇವರು ಹೇಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ.
ಲಕ್ಷಾಂತರ ಮೌಲ್ಯದ ಎಂಡಿಎಂಎ ವಶ
ಬಂಧಿತರಿಂದ ಬರೋಬ್ಬರಿ 53.80 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಇದರ ಮಾರುಕಟ್ಟೆ ಮೌಲ್ಯ ಲಕ್ಷಾಂತರ ರೂಪಾಯಿಗಳಾಗಿದ್ದು, ಇಷ್ಟು ದೊಡ್ಡ ಮೊತ್ತದ ಮಾದಕ ವಸ್ತು ಪತ್ತೆಯಾಗಿರುವುದು ಪುತ್ತೂರು ಭಾಗದಲ್ಲಿ ಡ್ರಗ್ಸ್ ಜಾಲದ ಬೇರುಗಳು ಎಷ್ಟು ಆಳವಾಗಿ ಇಳಿದಿವೆ ಎಂಬುದಕ್ಕೆ ಸಾಕ್ಷಿಯಾಗಿದೆ. ಕೃತ್ಯಕ್ಕೆ ಬಳಸಿದ ಮಹೀಂದ್ರಾ ಥಾರ್ ಹಾಗೂ ಮಾರಕಾಸ್ತ್ರವನ್ನು ವಶಪಡಿಸಿಕೊಂಡಿರುವ ಪೊಲೀಸರು, ಆರೋಪಿಗಳ ವಿರುದ್ಧ NDPS ಮತ್ತು ಆರ್ಮ್ಸ್ ಆಕ್ಟ್ ಅಡಿಯಲ್ಲಿ ಕಠಿಣ ಪ್ರಕರಣ ದಾಖಲಿಸಿದ್ದಾರೆ.
ಈ ಆರೋಪಿಗಳು ಕೇರಳ ,ಗೋವಾ, ಹಾಗೂ ಕರ್ನಾಟಕ ರಾಜ್ಯಗಳಿಗೆ ಮಾದಕ ವಸ್ತುವನ್ನು ಸರಬರಾಜು ಮಾಡುತ್ತಿದ್ದು, ಇವರ ವಿರುದ್ಧ ಕೇರಳ ರಾಜ್ಯದ ಕೋಝಿಕೋಡು, ಕಣ್ಣೂರು, ವಯನಾಡ್ ಜಿಲ್ಲೆಗಳಲ್ಲಿ ಪ್ರಕರಣ ದಾಖಲಾಗಿದ್ದು ಅಲ್ಲಿನ ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದರು.
ಇನ್ನು ಆರೋಪಿಗಳ ಪೈಕಿ ಮುಹಮ್ಮದ್ ಅಜ್ಮಲ್ ಸಿ @ ಅಜ್ಜು ಎಂಬಾತನ ವಿರುದ್ಧ ಇತ್ತೀಚೆಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಅ.ಕ್ರ: 04/2026 ಕಲಂ 8C, 21(b),NDPS Act 1985 ರ ಪ್ರಕರಣದ ಆರೋಪಿಯಾಗಿರುತ್ತಾನೆ. ಅಜ್ಮಲ್ ಸಹಚರನಾದ ಇಸ್ಮಾಯಿಲ್ನ ಮೇಲೆ ಕೂಡ ಕೇರಳ ರಾಜ್ಯದ ಕೋಝಿಕೋಡು ಜಿಲ್ಲೆಯಲ್ಲಿ ಮಾದಕ ವಸ್ತು ಸಾಗಾಟದ ಪ್ರಕರಣ ದಾಖಲಾಗಿರುವುದಾಗಿದೆ.
ಮಾದಕ ಲೋಕದ ವಿಷಜಾಲ: ಪೋಷಕರೇ ಎಚ್ಚರ!
ಕೇರಳದಿಂದ ಪುತ್ತೂರು ಮಾರ್ಗವಾಗಿ ಸಾಗುತ್ತಿದ್ದ ಈ ಮಾದಕ ವಸ್ತು ಯಾರ ಕೈ ಸೇರುತ್ತಿತ್ತು? ಇದರ ಹಿಂದಿರುವ ಅಸಲಿ ಕಿಂಗ್ಪಿನ್ ಯಾರು? ಎಂಬ ಬಗ್ಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಐಷಾರಾಮಿ ಕಾರುಗಳಲ್ಲಿ ಬಂದು, ಕೈಯಲ್ಲಿ ಮಾರಕಾಸ್ತ್ರ ಹಿಡಿದು ತಿರುಗುವ ಇಂತಹ ದಂಧೆಕೋರರು ನಿಮ್ಮ ಮಕ್ಕಳನ್ನು ಗುರಿಯಾಗಿಸಬಹುದು. ಸಮಾಜವನ್ನು ಗೆದ್ದಲು ಹುಳದಂತೆ ತಿನ್ನುತ್ತಿರುವ ಈ ಡ್ರಗ್ಸ್ ದಂಧೆಯ ವಿರುದ್ಧ ಸಂಪ್ಯ ಪೊಲೀಸರ ಈ ಕಾರ್ಯಾಚರಣೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಪುತ್ತೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಪ್ರಮೋದ್ ಕುಮಾರ್, ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ಸುನಿಲ್ ಕುಮಾರ್, ದ.ಕ ಜಿಲ್ಲಾ ಡಿ.ಎಸ್.ಬಿ ವಿಭಾಗದ ಪೊಲೀಸ್ ನಿರೀಕ್ಷಕರಾದ ನಂದ ಕುಮಾರ್, ಪುತ್ತೂರು ಗ್ರಾಮಾಂತರ ಠಾಣಾ ಉಪನಿರೀಕ್ಷಕರಾದ ಗುಣಪಾಲ ಹಾಗೂ ಸುಶ್ಮಾ ಜೆ ಭಂಡಾರಿ ಹಾಗೂ ವಿಶೇಷ ತಂಡದ ಸಿಬ್ಬಂದಿಗಳಾದ ಅದ್ರಾಮ, ಪ್ರಶಾಂತ್ ರೈ, ಪ್ರಶಾಂತ್ ಎಂ, ಪ್ರವೀಣ್ ರೈ, ಹರ್ಷಿತ್, ಹಾಗೂ ಪುತ್ತೂರು ಗ್ರಾಮಾಂತರ ಠಾಣಾ ಸಿಬ್ಬಂಧಿಗಳಾದ ಪರಮೇಶ್ವರ ಗೌಡ, ಹರೀಶ್, ಸುಬ್ರಹ್ಮಣ್ಯ, ಬೀಮಸೇನ್, ಭವಿತ್ ರೈ, ನಾಗಾರಾಜ್, ಕಾರ್ತಿಕ್ ಜಿಲ್ಲಾ ಗಣಕ ಯಂತ್ರ ಸಿಬ್ಬಂದಿಗಳಾದ ದಿವಾಕರ್, ಸಂಪತ್ ಮತ್ತು ಗೃಹ ರಕ್ಷಕ ಸಿಬ್ಬಂದಿಗಳ ತಂಡ ಈ ಪ್ರಕರಣವನ್ನು ಭೇಧಿಸಿದೆ.
Uncategorized
Philomena-ಸಂತ ಫಿಲೋಮಿನಾ ಪ. ಪೂ ಕಾಲೇಜಿನಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಸಿದ್ಧತೆಯ ಕುರಿತು ಮಾಹಿತಿ ಕಾರ್ಯಗಾರ
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವಾಣಿಜ್ಯ ಸಂಘದ ಆಶ್ರಯದಲ್ಲಿ ನ 25 ರಂದು ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆಯ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು
ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ಹಾಗೂ ವಾಣಿಜ್ಯ ಸಂಘದ ಆಶ್ರಯದಲ್ಲಿ ನ 25 ರಂದು ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ
ಪರೀಕ್ಷಾ ಸಿದ್ಧತೆಯ ಕುರಿತು ಮಾಹಿತಿ ಕಾರ್ಯಗಾರವು ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಪುತ್ತೂರಿನ ಲಕ್ಷ್ಯ ಕೌನ್ಸೆಲಿಂಗ್ ಸೆಂಟರ್ ನ ಮಕ್ಕಳ
ಸಲಹೆಗಾರರಾದ ದುರ್ಗಾಪರಮೇಶ್ವರ ಭಟ್ ಮಾತನಾಡಿ, ವಿದ್ಯಾರ್ಥಿಗಳ ಯಶಸ್ಸಿನಲ್ಲಿ ಮಾರ್ಗದರ್ಶಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪರೀಕ್ಷಾ ಸಿದ್ಧತೆ ಮತ್ತು ತರಗತಿಯ ಶಿಸ್ತು ಅತೀ ಮುಖ್ಯವಾಗಿದ್ದು, ಇಂದಿನ ಸ್ಪರ್ಧಾತ್ಮಕ ಜಗತ್ತಿನ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳು ಸದಾ ಚುರುಕಾಗಿರಬೇಕು. ಕಾಲಕ್ಕೆ ತಕ್ಕಂತೆ ಆಗುವ ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದರ ಜೊತೆಗೆ, ಉತ್ತಮ ಮಾಹಿತಿ ಹಾಗೂ ಜ್ಞಾನವನ್ನು ನಿರಂತರವಾಗಿ ಪಡೆದುಕೊಳ್ಳುತ್ತಿರಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಾಣಿಜ್ಯ ವಿದ್ಯಾರ್ಥಿಗಳು ಮಾನಸಿಕವಾಗಿ ಅತ್ಯಂತ ದೃಢವಾಗಿರಬೇಕು. ಕೇವಲ ಪಠ್ಯಪುಸ್ತಕದ ಜ್ಞಾನಕ್ಕೆ ಮಾತ್ರ ಸೀಮಿತವಾಗದೆ, ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಕೌಶಲ್ಯ ಮತ್ತು ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು.
ವಾಣಿಜ್ಯ ಕ್ಷೇತ್ರದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ವಿದ್ಯಾರ್ಥಿಗಳಿಗೆ ಸದೃಢವಾದ ಮನಸ್ಸು ಇರಬೇಕು. ಹೊಸ ಆಲೋಚನೆಗಳು, ಸೃಜನಶೀಲತೆ ಮತ್ತು ವೃತ್ತಿಪರ ಕೌಶಲ್ಯಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಲು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ವಾಣಿಜ್ಯ ಸಂಘದ ನಿರ್ದೇಶಕರಾದ ಭರತ್ ಜಿ ಫೈ ಹಾಗೂ ಪೂರ್ಣಿಮಾ ಡಿ. ಎಸ್ ಉಪಸ್ಥಿತರಿದ್ದರು. ಕಾಲೇಜಿನ ಬೋಧಕ ಹಾಗೂ ಬೋಧಕೇತರ ವರ್ಗ ಮತ್ತು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿಗಳಾದ ದೇಶ್ನ ಎ. ಎಲ್ ಸ್ವಾಗತಿಸಿ, ಸ್ವಿನಿಕಾ ಎಸ್ ಲೋಬೋ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
Uncategorized
ಫುತ್ತೂರು : ಗುತ್ತಿಗೆದಾರರ ಸಹಾಯಕಿಗೆ ಲೈಂಗಿಕ ದೌರ್ಜನ್ಯ, ವಿಡಿಯೋ ಚಿತ್ರೀಕರಣ , ಕಾರು ಹತ್ತಿಸಲು ಯತ್ನ ಆರೋಪ; ಮೆಸ್ಕಾಂ ಸಿಬ್ಬಂದಿ ವಿರುದ್ಧ ಕೇಸ್

ಪುತ್ತೂರು: ವಿದ್ಯುತ್ ಕಾಮಗಾರಿಯ ಪರಿಶೀಲನೆಯ ನೆಪದಲ್ಲಿ ಗುತ್ತಿಗೆದಾರರ ಸಹಾಯಕಿಯನ್ನು ಸ್ವಂತ ಕಾರಿನಲ್ಲಿ ಕರೆದೊಯ್ದ ಮೆಸ್ಕಾಂ ಸಿಬ್ಬಂದಿಯೊಬ್ಬರು, ಮೆಸ್ಕಾಂ ಕ್ವಾಟ್ರಸ್ಗೆ ಬಲವಂತವಾಗಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಮೆಸ್ಕಾಂ ಸಿಬ್ಬಂದಿ ದುರ್ಗಾ ಸಿಂಗ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಪ್ರಕಾರ, ವಿದ್ಯುತ್ ಕಾಮಗಾರಿಯ ಪರಿಶೀಲನೆ ಮುಗಿದ ಬಳಿಕ ಮನೆಗೆ ಕರೆದೊಯ್ಯುವುದಾಗಿ ಹೇಳಿ ತಮ್ಮ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮೆಸ್ಕಾಂ ಕ್ವಾಟ್ರಸ್ಗೆ ಕರೆದೊಯ್ದು ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಕೃತ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ ಎನ್ನಲಾಗಿದೆ. ಮಹಿಳೆ ಬೊಬ್ಬೆ ಹಾಕಿ ಪ್ರತಿರೋಧ ವ್ಯಕ್ತಪಡಿಸಿ ಅಲ್ಲಿಂದ ತಪ್ಪಿಸಿಕೊಂಡು ಹೊರಬಂದಿದ್ದಾರೆ ಎಂದು ದೂರಲಾಗಿದೆ
ಘಟನೆ ಬಳಿಕ ಮೊಬೈಲ್ನಲ್ಲಿ ಚಿತ್ರೀಕರಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಈ ವಿಚಾರವನ್ನು ಯಾರಿಗಾದರೂ ತಿಳಿಸಿದರೆ ಉಂಗುರ ಕದ್ದಿರುವುದಾಗಿ ದೂರು ದಾಖಲಿಸುವುದಾಗಿ ಹೆದರಿಸಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಜನಸಂಪರ್ಕ ಸಭೆಯಲ್ಲೂ ಪ್ರಸ್ತಾಪವಾಗಿತ್ತು!
ಈ ಪ್ರಕರಣದ ವಿಚಾರ ನ.5ರಂದು ಪುತ್ತೂರಿನಲ್ಲಿ ನಡೆದ ಮೆಸ್ಕಾಂ ಪುತ್ತೂರು ನಗರ ಹಾಗೂ ಗ್ರಾಮಾಂತರ ಉಪವಿಭಾಗದ ಜನಸಂಪರ್ಕ ಸಭೆಯಲ್ಲೂ ಪ್ರಸ್ತಾಪವಾಗಿತ್ತು. ಗುತ್ತಿಗೆದಾರರ ಸಹಾಯಕಿಯೊಬ್ಬರಿಗೆ ದೌರ್ಜನ್ಯ ಎಸಗಿರುವ ಆರೋಪ ಹಾಗೂ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಲಾಗುತ್ತಿದೆ ಎಂಬ ಗಂಭೀರ ಆಕ್ಷೇಪ ಸಭೆಯಲ್ಲಿ ವ್ಯಕ್ತವಾಗಿತ್ತು. ಆದರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಸಮರ್ಪಕ ಉತ್ತರ ನೀಡದೆ ಅಧಿಕಾರಿಗಳು ನುಣುಚಿಕೊಂಡಿದ್ದರು ಎಂಬ ಆರೋಪವೂ ಕೇಳಿಬಂದಿತ್ತು.
ದೂರು ದಾಖಲಿಸಲು ಹಿಂದೇಟು?
ಸಂತ್ರಸ್ತ ಮಹಿಳೆ ಪ್ರಕರಣ ದಾಖಲಿಸುವ ಉದ್ದೇಶದಿಂದ ಒಂದು ದಿನದ ಹಿಂದೆ ಪೊಲೀಸ್ ಠಾಣೆಗೆ ತೆರಳಿದ್ದರೂ, ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಅವರನ್ನು ಸಂಪರ್ಕಿಸಿದ ಹಿನ್ನೆಲೆಯಲ್ಲಿ, ಅವರ ಸೂಚನೆಯ ಮೇರೆಗೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ದೇವಸ್ಥಾನದ ಮುಂಭಾಗದಲ್ಲೂ ಬೆದರಿಕೆ ಆರೋಪ
ಸೋಮವಾರ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ದುರ್ಗಾ ಸಿಂಗ್ ಅವರು ಸಂತ್ರಸ್ತೆಯನ್ನು ಕಾರಿಗೆ ಹತ್ತಿಸಲು ಯತ್ನಿಸಿದ್ದು, ವೇಗವಾಗಿ ಕಾರು ಚಲಾಯಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂಬ ಆರೋಪವನ್ನೂ ದೂರಿನಲ್ಲಿ ದಾಖಲಿಸಲಾಗಿದೆ.
ಕಾಮಗಾರಿಯ ಪರಿಶೀಲನೆಯ ನೆಪದಲ್ಲಿ ನಡೆದಿದೆಯೆನ್ನಲಾದ ಈ ಘಟನೆ, ಬಳಿಕ ಬೆದರಿಕೆ ಹಾಗೂ ಪ್ರಕರಣ ಮುಚ್ಚಿಹಾಕುವ ಯತ್ನದ ಆರೋಪಗಳೊಂದಿಗೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರಕರಣದ ಕುರಿತು ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.
Uncategorized
Vivekananda-ವಿವೇಕಾನಂದ ವಸತಿನಿಲಯದಲ್ಲಿ ತುಳಸಿಪೂಜೆ ಹಾಗೂ ಗೌರವಾರ್ಪಣೆ ಕಾರ್ಯಕ್ರಮ ಸಂಸ್ಕಾರಯುತ ಜೀವನದಿಂದ ನಿತ್ಯ ಸಂಭ್ರಮ:ವಿಜಯನಾರಾಯಣ ಕೆ.ಎಂ.
ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಗಳ ವಸತಿನಿಲಯದ ವತಿಯಿಂದ ನಡೆದ ತುಳಸಿಪೂಜೆ ಹಾಗೂ ವಸತಿ ನಿಲಯದ ಪಾಕಶಾಲಾ ಸಿಬ್ಬಂದಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ. ಮಾತನಾಡಿದರು.
ಪುತ್ತೂರು, ನ.21: ಪ್ರತಿಯೊಂದು ಪರ್ವಾಚರಣೆಗಳಿಗೂ ಅವುಗಳದ್ದಾದ ಹಿನ್ನೆಲೆಗಳಿದ್ದು ಹಿರಿಯರು ಅವುಗಳನ್ನು ಅರ್ಥಪೂರ್ಣವಾಗಿ ಆಚರಿಸಿ ನಮ್ಮ ತಲೆಮಾರಿಗೆ ಹಸ್ತಾಂತರಿಸಿದ್ದಾರೆ. ಯುವಕರಿಗೆ ವಿದ್ಯಾಭ್ಯಾಸ ಹಾಗೂ ಉದ್ಯೋಗ ಗಳಿಕೆ ಅತ್ಯಂತ ಮುಖ್ಯ ಹೌದು, ಆದರೆ ಬದುಕನ್ನು ಆ ಚೌಕಟ್ಟಿಗೆ ಮಾತ್ರ ಸೀಮಿತವಾಗಿಸದೇ ಅದರಿಂದಾಚೆಗಿನ ಅನೇಕ ಮೌಲ್ಯಯುತ ವಿಚಾರಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕ. ನಾವು ನಮ್ಮ ಹಿರಿಯರ ಜೀವನೋತ್ಸಾಹದಿಂದ ಪ್ರೇರಣೆ ಪಡೆದು ಅನುದಿನದ ಪ್ರತೀಕ್ಷಣವನ್ನು ಹಬ್ಬದಂತೆ ಕಾಣಬೇಕಲ್ಲದೇ ನಮ್ಮ ಉತ್ತಮ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸಬೇಕು ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯನಾರಾಯಣ ಕೆ.ಎಂ ನುಡಿದರು.
ಇವರು ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಗಳ ವಸತಿನಿಲಯದ ವತಿಯಿಂದ ನಡೆದ ತುಳಸಿಪೂಜೆ ಹಾಗೂ ವಸತಿ ನಿಲಯದ ಪಾಕಶಾಲಾ ಸಿಬ್ಬಂದಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ದೇವಿಚರಣ್ ರೈ, ದೀಪಾವಳಿಗೆ ಬಲಿ ಚಕ್ರವರ್ತಿ ಭೂಮಿಗೆ ಬರುತ್ತಾನೆ ಎನ್ನುವ ಹಿನ್ನೆಲೆಯಿದ್ದು ಮೂರು ದಿನಗಳ ಕಾಲ ಆಚರಿಸಲಾಗುತ್ತದೆ. ನಮ್ಮ ಹಬ್ಬಗಳು ಮತ್ತು ಪಾಲಿಸುವ ಸಂಸ್ಕೃತಿಯಿಂದ ಜೀವನುದ್ದಕ್ಕೂ ನಾವು ಅನೇಕ ವಿಷಯಗಳನ್ನು ಕಲಿಯುತ್ತೇವೆ. ಯುವಕರು ಜೀವನದ ನಿಜಾರ್ಥ ಏನೆಂಬುದನ್ನು ತಿಳಿಯುವ ಮೊದಲೇ ಅನಗತ್ಯ ಯೋಚನೆಗಳನ್ನು ಮೈಗೂಡಿಸಿಕೊಳ್ಳುವುದರ ಬದಲಾಗಿ ವಿದ್ಯಾಭ್ಯಾಸ ಹಾಗೂ ಉನ್ನತ ಸಂಸ್ಕಾರಗಳನ್ನು ಪಡೆದು ಸತ್ಪçಜೆಗಳಾಗಬೇಕು. ಹಬ್ಬದ ಒಳ್ಳೆಯ ವಾತಾವರಣ ಜೀವನದ ಉನ್ನತಿಗೆ ಸ್ಫೂರ್ತಿಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡಿದ ವಿವೇಕಾನಂದ ವಸತಿನಿಲಯದ ಅಧ್ಯಕ್ಷ ರಮೇಶ್ ಪ್ರಭು ಪಾಕಶಾಸ್ತ್ರ ಎನ್ನುವುದು ಅತ್ಯುನ್ನತವಾದ ಸೇವೆ. ಬಾಣಸಿಗರು, ನಿಲಯಪಾಲಕರು ಮೊದಲಾದ ಸಿಬ್ಬಂದಿಗಳು ತಮ್ಮ ಸಮರ್ಪಣಾಭಾವದಿಂದ ವಸತಿನಿಲಯದ ವಿದ್ಯಾರ್ಥಿಗಳ ಕ್ಷೇಮಕ್ಕೋಸ್ಕರ ಕೆಲಸ ನಿರ್ವಹಿಸುತ್ತಾರೆ. ಅವರಿಗೆ ಗೌರವ ಸಮರ್ಪಿಸುವ ಕಾರ್ಯ ಶ್ಲಾಘನೀಯವಾದುದು ಎಂದು ತಿಳಿಸಿದರು.
ವಿವೇಕಾನಂದ ವಸತಿನಿಲಯದಲ್ಲಿ ಸೇವೆ ಸಲ್ಲಿಸುವ ಪಾಕಶಾಲಾ, ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮವನ್ನು ವಿವೇಕಾನಂದ ವಸತಿನಿಲಯದ ಆಡಳಿತಾಧಿಕಾರಿ ಗೋವಿಂದ ರಾಜ ಶರ್ಮ ಸ್ವಾಗತಿಸಿ, ಕಾರ್ಯದರ್ಶಿ ಸಚಿನ್ ಶೆಣೈ ವಂದಿಸಿದರು. ವಸತಿನಿಲಯದ ವಿದ್ಯಾರ್ಥಿನಿ ದೀಪಿಕಾ ನಿರೂಪಿಸಿದರು.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿರುವ ವಿವಿಧ ವಸತಿನಿಲಯಗಳಲ್ಲಿ ತುಳಸಿಪೂಜೆ ನೆರವೇರಿತು.
ವಸತಿನಿಲಯದ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಸಿಡಿಮದ್ದು ಪ್ರದರ್ಶನ ಜರುಗಿದವು.
-
ನಿಧನ ವಾರ್ತೆ24 hours agoKankanadi-ಶಾಲೆಯಿಂದ ನಡೆದು ಹೋಗುತ್ತಿದ್ದ ಎರಡನೇ ಕ್ಲಾಸ್ ವಿದ್ಯಾರ್ಥಿಗೆ ಖಾಸಗಿ ಬಸ್ ಡಿಕ್ಕಿ; ಕಂಕನಾಡಿಯಲ್ಲಿ ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕ ಬಲಿ
-
ಸ್ಥಳೀಯ18 hours agoRakshit Shivaram-ವಳಾಲು ಟೋಲ್ ದರ ರೂ.250ಕ್ಕೆ ಏರಿಕೆ : ಬಿಜೆಪಿಯವರಿಗೂ ಪಾಲಿದೆಯಾ..? ಶಾಸಕರ ಮೌನಕ್ಕೆ ರಕ್ಷಿತ್ ಶಿವರಾಂ ಗರಂ
-
ಸ್ಥಳೀಯ24 hours agoDharmasthala-ಪಾಣೇರು ಬಸದಿ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ. 5 ಲಕ್ಷ ಅನುದಾನ
-
ಶಿಕ್ಷಣ23 hours agoVivekananda-ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮವರ್ಷದ ವಿದ್ಯಾರ್ಥಿಗಳ ಹೆತ್ತವರ ಮತ್ತು ಪೋಷಕರ ಸಭೆ
-
ಶಿಕ್ಷಣ23 hours agoPhilomena-ಪುತ್ತೂರು ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನಲ್ಲಿ 59ನೇ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭ
-
ಶಿಕ್ಷಣ23 hours agoSahyadri-ಸಹ್ಯಾದ್ರಿಯು ಮೂರನೇ ಅಂತರರಾಷ್ಟ್ರೀಯ ಸಮ್ಮೇಳನ, COSMIC-2026 ಉದ್ಘಾಟನೆ
-
ಶಿಕ್ಷಣ23 hours agoPhilomena-ಸಂತ ಫಿಲೋಮಿನಾ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ: ಸಂವಿಧಾನದ ಆಶಯಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಿ-– ಡಾ. ನಾರ್ಬರ್ಟ್ ಮಸ್ಕರೇನ್ಹಸ್















