ಸಿನೆಮಾ
Kerala-ಕೇರಳದ ಖ್ಯಾತ ನಟಿಯನ್ನು ಫೈವ್ ಸ್ಟಾರ್ ಹೊಟೇಲ್ ಗೆ ಕರೆದ ಶಾಸಕ : ಗಂಭೀರ ಆರೋಪ
ಮಲಯಾಳಂ ಚಿತ್ರರಂಗದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಖ್ಯಾತ ನಟಿಯೊಬ್ಬರು ಶಾಸಕರೊಬ್ಬರು ತಮಗೆ ಲೈಂಗಿಕ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ತಿರುವನಂತಪುರಂ: ಮಲಯಾಳಂ ಚಿತ್ರರಂಗದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದ್ದು, ಖ್ಯಾತ ನಟಿಯೊಬ್ಬರು ಶಾಸಕರೊಬ್ಬರು ತಮಗೆ ಲೈಂಗಿಕ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಮಲಯಾಳಂ ನಟಿ ರಿನಿ ಜಾರ್ಜ್ ಅವರು, ಪ್ರಮುಖ ರಾಜಕೀಯ ಪಕ್ಷದ ಯುವ ನಾಯಕರೊಬ್ಬರು ಕಳೆದ ಮೂರು ವರ್ಷಗಳಿಂದ ತಮಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸುತ್ತಿದ್ದು, ಪಂಚತಾರಾ ಹೋಟೆಲ್ಗೆ ಬರಲು ಆಹ್ವಾನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಹಲವು ದೂರುಗಳನ್ನು ನೀಡಿದರೂ ಪಕ್ಷದ ಅಧಿಕಾರಿಗಳು ಕ್ರಮ ಕೈಗೊಳ್ಳದೇ ನಿಷ್ಕ್ರಿಯರಾಗಿದ್ದಾರೆ ಎಂದು ಅವರು ದೂರಿದ್ದಾರೆ.
ಆರೋಪಿಯ ಹೆಸರು ಅಥವಾ ಪಕ್ಷದ ಹೆಸರನ್ನು ಬಹಿರಂಗಪಡಿಸಲು ನಟಿ ನಿರಾಕರಿಸಿದ್ದರೂ, ಕೇರಳದ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಾಂಗ್ರೆಸ್ ಶಾಸಕ ರಾಹುಲ್ ಮಂಕೂಟ್ಟಿಲ್ ಅವರನ್ನು ಆರೋಪಿಸಿದ್ದು, ಪಾಲಕ್ಕಾಡ್ ಜಿಲ್ಲೆಯ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದೆ. ಆದರೆ, ಮಂಕೂಟ್ಟಿಲ್ ಅಥವಾ ಕಾಂಗ್ರೆಸ್ನಿಂದ ಇನ್ನೂ ಅಧಿಕೃತ ಹೇಳಿಕೆ ಬಂದಿಲ್ಲವಾದರೂ, ಪಕ್ಷದ ನಾಯಕತ್ವವು ವರದಿಯನ್ನು ಕೋರಿದೆ ಎಂದು ಮೂಲಗಳು ತಿಳಿಸಿವೆ.
ನಟಿಯ ಆರೋಪವೇನು?
ಸಾಮಾಜಿಕ ಮಾಧ್ಯಮದ ಮೂಲಕ ರಾಜಕಾರಣಿಯೊಂದಿಗೆ ಸಂಪರ್ಕಕ್ಕೆ ಬಂದೆ. ಮೂರು ವರ್ಷಗಳ ಹಿಂದೆ ಮೊದಲ ಬಾರಿಗೆ ಆಕ್ಷೇಪಾರ್ಹ ಸಂದೇಶಗಳನ್ನು ಸ್ವೀಕರಿಸಿದೆ. ಹಲವು ಬಾರಿ ಪಂಚತಾರಾ ಹೋಟೆಲ್ನಲ್ಲಿ ಕೊಠಡಿ ಕಾಯ್ದಿರಿಸಿ ಕಾಯುತ್ತಿರುವುದಾಗಿ, ಕೂಡಲೇ ಬರಲು ಒತ್ತಾಯಿಸಿದ್ದರು. ಅವರ ಬಗ್ಗೆ ನನ್ನ ಮನಸ್ಸಿನಲ್ಲಿದ್ದ ಇಮೇಜ್ ಛಿದ್ರಗೊಂಡಿದೆ. ದೂರು ನೀಡಿದ ನಂತರವೂ ಅವರಿಗೆ ಪಕ್ಷದೊಳಗೆ ಪ್ರಮುಖ ಸ್ಥಾನಗಳನ್ನು ನೀಡಲಾಗಿದೆ. ಭದ್ರತಾ ಕಾರಣಗಳಿಂದ ಹಾಗೂ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಕಡಿಮೆಯಿರುವುದರಿಂದ ದೂರನ್ನು ಮುಂದುವರಿಸುತ್ತಿಲ್ಲ. ರಾಜಕೀಯ ಪಕ್ಷವನ್ನು ಮುಜುಗರಕ್ಕೀಡು ಮಾಡಲು ಬಯಸುವುದಿಲ್ಲ. ಆದರೆ, ಮಹಿಳೆಯರನ್ನು ಬೆಂಬಲಿಸಲು ಮಾತನಾಡುತ್ತಿದ್ದೇನೆ ಎಂದು ರಿನಿ ಜಾರ್ಜ್ ಹೇಳಿದರು.
ಯಾರು ಆ ನಾಯಕ?
ಮೂಲಗಳ ಪ್ರಕಾರ, ನಟಿ ರಿನಿ ಜಾರ್ಜ್ ಆರೋಪಿಸಿರುವುದು ಕಾಂಗ್ರೆಸ್ ನಾಯಕನ ಮೇಲೆ. ಪಾಲಕ್ಕಾಡ್ ಶಾಸಕ ಹಾಗೂ ಕೇರಳ ಯೂತ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಮಂಕೂಟ್ಟಿಲ್ (ರಾಹುಲ್ ಮಾಂಕೂಟ್ಟತಿಲ್) ಮೇಲೆ ಈ ಗಂಭೀರ ಆರೋಪಗಳು ಬಿದ್ದಿವೆ. ರಿನಿ ಜಾರ್ಜ್ ಮಾತ್ರವಲ್ಲದೇ, ಬರಹಗಾರ್ತಿ ಹನಿ ಭಾಸ್ಕರನ್ ಕೂಡ ರಾಹುಲ್ ವಿರುದ್ಧ ಕಿರುಕುಳ ಆರೋಪ ಮಾಡಿದ್ದಾರೆ. ಇದಲ್ಲದೇ, ಬೇರೆ ನಾಯಕರ ಹೆಂಡತಿಯರು ಮತ್ತು ಹೆಣ್ಣುಮಕ್ಕಳಿಗೂ ಇದೇ ರೀತಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.
ಪ್ರಶ್ನಿಸಿದಾಗ, ‘ನೀನು ಯಾರಿಗಾದರೂ ಹೇಳಬಹುದು, ಯಾರೂ ಗಮನ ಕೊಡಲ್ಲ’ ಎಂದು ಆ ನಾಯಕ ಹೇಳಿದ್ದರು ಎಂದು ರಿನಿ ಜಾರ್ಜ್ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಎಲ್ಲ ಹುದ್ದೆಗಳಿಗೆ ರಾಜಿನಾಮೆ
ರಾಹುಲ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಗಳು ಕೇಳಿಬರುತ್ತಿದ್ದಂತೆಯೇ, ಮುಜುಗರಕ್ಕೀಡಾದ ಕೇರಳ ಕಾಂಗ್ರೆಸ್ ಘಟಕವು ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಗೆ ರಾಜಿನಾಮೆ ನೀಡುವಂತೆ ಸೂಚಿಸಿತ್ತು. ಈ ಸೂಚನೆಯ ಬೆನ್ನಲ್ಲೇ ರಾಹುಲ್ ಕೂಡ ಎಲ್ಲ ಹುದ್ದೆಗಳಿಂದ ರಾಜಿನಾಮೆ ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೇ, ಪಕ್ಷದ ಸ್ಥಾನಗಳಿಂದ ಅಥವಾ ಪಕ್ಷದಿಂದ ತೆಗೆದುಹಾಕಿದರೂ, ಅವರು ವಿಧಾನಸಭೆಯ ಸ್ವತಂತ್ರ ಸದಸ್ಯರಾಗಿ ಮುಂದುವರಿಯಬಹುದು ಎಂದು ಕಾಂಗ್ರೆಸ್ ಮೂಲವೊಂದು ಹೇಳಿದೆ. ರಾಹುಲ್ ಪಾಲಕ್ಕಾಡ್ನ ಹಾಲಿ ಶಾಸಕರಾಗಿದ್ದು, ಪಕ್ಷದ ಸದಸ್ಯತ್ವವನ್ನು ರದ್ದುಗೊಳಿಸುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಸಿನೆಮಾ
Aakasham Lo Ok Tara-ಬಾಕ್ಸ್ ಆಫೀಸ್ನಲ್ಲಿ ದುಲ್ಕರ್ ಸಲ್ಮಾನ್ ಅಬ್ಬರ: 4 ದಿನಕ್ಕೆ 20 ಕೋಟಿ ರೂ. ಗಳಿಸಿದ ‘ಆಕಾಶಮ್ ಲೋ ಒಕ ತಾರ’
ಮಲಯಾಳಂ ಚಿತ್ರರಂಗದ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಅಭಿನಯದ ತೆಲುಗು ಸಿನಿಮಾ ‘ಆಕಾಶಮ್ ಲೋ ಒಕ ತಾರ’ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಚಿತ್ರ, ದಿನದಿಂದ ದಿನಕ್ಕೆ ತನ್ನ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.
ಹೈದರಾಬಾದ್: ಮಲಯಾಳಂ ಚಿತ್ರರಂಗದ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಅಭಿನಯದ ತೆಲುಗು ಸಿನಿಮಾ ‘ಆಕಾಶಮ್ ಲೋ ಒಕ ತಾರ’ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಚಿತ್ರ, ದಿನದಿಂದ ದಿನಕ್ಕೆ ತನ್ನ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದೆ.
ಸಿನಿಮಾದ ನೈಜ ಯಶಸ್ಸನ್ನು ನಿರ್ಧರಿಸುವಲ್ಲಿ ಸೋಮವಾರದ ಕಲೆಕ್ಷನ್ ಪ್ರಮುಖ ಪಾತ್ರ ವಹಿಸುತ್ತದೆ. ಈ ಪರೀಕ್ಷೆಯಲ್ಲೂ ‘ಆಕಾಶಮ್ ಲೋ ಒಕ ತಾರ’ ಯಶಸ್ವಿಯಾಗಿದ್ದು, ಸೋಮವಾರ ಒಂದೇ ದಿನ ಬರೋಬ್ಬರಿ 4 ಕೋಟಿ ರೂಪಾಯಿ ಗಳಿಸಿದೆ. ವಿಶೇಷವೆಂದರೆ, ಈ ಗಳಿಕೆ ಚಿತ್ರದ ಮೊದಲ ದಿನದ ಕಲೆಕ್ಷನ್ಗಿಂತ ಶೇ.10ರಷ್ಟು ಹೆಚ್ಚಾಗಿದೆ.
ಚಿತ್ರ ಬಿಡುಗಡೆಯಾಗಿ ನಾಲ್ಕು ದಿನಗಳಲ್ಲಿ ಭಾರತದ ಬಾಕ್ಸ್ ಆಫೀಸ್ನಲ್ಲಿ ಒಟ್ಟು 20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದೇ ವೇಗ ಮುಂದುವರಿದರೆ ಮೊದಲ ವಾರದ ಅಂತ್ಯಕ್ಕೆ 30 ಕೋಟಿ ರೂಪಾಯಿ ಗಡಿ ದಾಟುವ ನಿರೀಕ್ಷೆಯಿದೆ. ಮುಂದಿನ ವಾರವೂ ಉತ್ತಮ ಪ್ರದರ್ಶನ ಮುಂದುವರಿಸಿದರೆ ಚಿತ್ರ ಹಿಟ್ ಪಟ್ಟಿಗೆ ಸೇರುವ ಸಾಧ್ಯತೆಯಿದೆ. ಈ ಮೂಲಕ ತೆಲುಗು ಚಿತ್ರರಂಗದಲ್ಲಿ ದುಲ್ಕರ್ ಸಲ್ಮಾನ್ ಅವರ ಯಶಸ್ಸಿನ ಓಟ ಮುಂದುವರಿದಂತಾಗಲಿದೆ.
ಪವನ್ ಸಾಧಿನೇನಿ ನಿರ್ದೇಶನದ ಈ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ಗೆ ನಾಯಕಿಯಾಗಿ ಹೊಸ ಪ್ರತಿಭೆ ಸಾತ್ವಿಕಾ ವೀರವಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರುತಿ ಹಾಸನ್, ರುಹಾನಿ ಶರ್ಮಾ, ಸ್ವಾಸಿಕಾ, ಮುರಳಿ ಶರ್ಮಾ, ಗೌತಮ್ ವಾಸುದೇವ್ ಮೆನನ್, ಗೆಟಪ್ ಶ್ರೀನು ಹಾಗೂ ಪ್ರವೀಣ್ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸಿನೆಮಾ
Dawood-‘ಧುರಂಧರ್ ‘ ನಲ್ಲಿ ದಾವೂದ್ ನ ತೋರಿಸಿದ ರೀತಿ ವಾಸ್ತವವಲ್ಲ…! ಮೋಸ್ಟ್ ವಾಂಟೆಡ್ ಪಾತಕಿ ಈಗ ಹೇಗಿದ್ದಾನೆ ಗೊತ್ತೇ..? ಮಾಜಿ FBI ಅಧಿಕಾರಿ ಹೇಳಿದ್ದೇನೂ..?
‘ಧುರಂಧರ್’ ಸಿನಿಮಾದಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಾ ಹಾಸಿಗೆ ಹಿಡಿದಿರುವ ವೃದ್ಧನಂತೆ ಚಿತ್ರಿಸಲಾಗಿರುವ ದಾವೂದ್, ವಾಸ್ತವದಲ್ಲಿ ಇನ್ನೂ ಸಕ್ರಿಯನಾಗಿದ್ದು ತನ್ನ ಅಪರಾಧ ಜಾಲವನ್ನು ಮುನ್ನಡೆಸುತ್ತಿದ್ದಾನೆ ಎಂದು ಅಮೆರಿಕದ ಮಾಜಿ ಎಫ್ಬಿಐ ಅಧಿಕಾರಿ ಕಮ್ರಾನ್ ಫರೀದಿ ಇಂಡಿಯಾ ಟುಡೇಗೆ ನೀಡಿದ ಪಾಡ್ಕಾಸ್ಟ್ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ನವದೆಹಲಿ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟಗಳ ಬಳಿಕ ಭಾರತದಿಂದ ಪರಾರಿಯಾಗಿ ಪಾಕಿಸ್ತಾನದಲ್ಲಿ ನೆಲೆಸಿದ್ದಾನೆ ಎನ್ನಲಾದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬದುಕು ಇಂದಿಗೂ ನಿಗೂಢವಾಗಿದೆ. ಕಳೆದ ಹಲವು ವರ್ಷಗಳಿಂದ ಆತನ ಯಾವುದೇ ಅಧಿಕೃತ ಛಾಯಾಚಿತ್ರ ಸಾರ್ವಜನಿಕವಾಗಿ ಲಭ್ಯವಾಗಿಲ್ಲ. ಇದೀಗ ದಾವೂದ್ನ ಡಿ-ಕಂಪನಿಯೊಳಗೆ ರಹಸ್ಯವಾಗಿ ಕಾರ್ಯನಿರ್ವಹಿಸಿದ್ದಾಗಿ ಹೇಳಿಕೊಂಡಿರುವ ಅಮೆರಿಕದ ಮಾಜಿ ಎಫ್ಬಿಐ ಅಧಿಕಾರಿ ಕಮ್ರಾನ್ ಫರೀದಿ, ಡಾನ್ನ ವೈಯಕ್ತಿಕ ಜೀವನ, ಭದ್ರತಾ ವ್ಯವಸ್ಥೆ ಹಾಗೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆಗಿನ ಸಂಪರ್ಕದ ಕುರಿತು ಹಲವು ಅಚ್ಚರಿಯ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
‘ಧುರಂಧರ್’ ಸಿನಿಮಾದಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಾ ಹಾಸಿಗೆ ಹಿಡಿದಿರುವ ವೃದ್ಧನಂತೆ ಚಿತ್ರಿಸಲಾಗಿರುವ ದಾವೂದ್, ವಾಸ್ತವದಲ್ಲಿ ಇನ್ನೂ ಸಕ್ರಿಯನಾಗಿದ್ದು ತನ್ನ ಅಪರಾಧ ಜಾಲವನ್ನು ಮುನ್ನಡೆಸುತ್ತಿದ್ದಾನೆ ಎಂಬುದು ಫರೀದಿ ಅವರ ಪ್ರಮುಖ ಹೇಳಿಕೆ. ಇಂಡಿಯಾ ಟುಡೇಗೆ ನೀಡಿದ ಪಾಡ್ಕಾಸ್ಟ್ ಸಂದರ್ಶನದಲ್ಲಿ ಅವರು ಈ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಧುರಂಧರ್ ಸಿನಿಮಾದ ದಾವೂದ್ಗೂ ನೈಜ ವ್ಯಕ್ತಿಗೂ ವ್ಯತ್ಯಾಸ!
‘ಧುರಂಧರ್’ ಚಿತ್ರದಲ್ಲಿ ‘ಬಡೇ ಸಾಹಬ್’ ಎಂದು ಉಲ್ಲೇಖಿಸಲಾಗಿರುವ ದಾವೂದ್ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾನೆ. ಆದರೆ, ದಾವೂದ್ ಜೊತೆ ಹಲವು ಪಾರ್ಟಿ ಹಾಗೂ ವ್ಯವಹಾರಿಕ ಸಭೆಗಳಲ್ಲಿ ಭಾಗವಹಿಸಿದ್ದೇನೆ ಎಂದು ಹೇಳಿಕೊಂಡಿರುವ ಫರೀದಿ, ಆತ ಇಂದಿಗೂ ತನ್ನ ಅಪರಾಧ ಜಾಲದ ಕಾರ್ಯಾಚರಣೆಗಳನ್ನು ನಿಯಂತ್ರಿಸುತ್ತಿದ್ದಾನೆ ಎಂದು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಮಾದಕವಸ್ತು ವ್ಯಾಪಾರದ ಮೇಲೂ ದಾವೂದ್ ನಿಗಾ ಇರಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ಪಾಕಿಸ್ತಾನದ ಭದ್ರತಾ ವಲಯದಲ್ಲಿ ಆತನನ್ನು ‘ಬಡೇ ಸಾಹಬ್’ ಅಥವಾ ‘ಬಡೆ ವಾಲೆ’ ಎಂದು ಕರೆಯಲಾಗುತ್ತದೆ ಎಂದಿದ್ದಾರೆ.
ಕರಾಚಿಯ ಕ್ಲಿಫ್ಟನ್ನಲ್ಲೇ ಡಾನ್ ವಾಸ!
ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾದರೂ ದಾವೂದ್ ತನ್ನ ವಾಸಸ್ಥಳವನ್ನು ಬದಲಿಸಿಲ್ಲ. ಕರಾಚಿಯ ಅತ್ಯಂತ ಬಿಗಿ ಭದ್ರತೆಯ ಕ್ಲಿಫ್ಟನ್ ಪ್ರದೇಶದಲ್ಲಿ ಕುಟುಂಬದ ಸದಸ್ಯರೊಂದಿಗೆ ವಾಸಿಸುತ್ತಿದ್ದಾನೆ ಎಂದು ಫರೀದಿ ಹೇಳಿಕೊಂಡಿದ್ದಾರೆ.
ಆದರೆ, ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾದ ಸಂದರ್ಭಗಳಲ್ಲಿ ಆತ ಇಸ್ಲಾಮಾಬಾದ್ ಸೇರಿದಂತೆ ಮೂರು ಸುರಕ್ಷಿತ ಅಡಗುತಾಣಗಳಿಗೆ ಸ್ಥಳಾಂತರಗೊಳ್ಳುತ್ತಾನೆ ಎಂದು ತಿಳಿಸಿದ್ದಾರೆ.
ದಾವೂದ್ ನಿವಾಸದ ಕೆಳಗೆ ರಹಸ್ಯ ಸುರಂಗವಿದೆ ಎಂಬ ವದಂತಿಯನ್ನು ತಳ್ಳಿಹಾಕಿರುವ ಅವರು, ಮನೆಯ ಹಿಂಭಾಗದಿಂದ ಜನಸಂದಣಿ ಹೆಚ್ಚಿರುವ ದರ್ಗಾವೊಂದಕ್ಕೆ ಸಂಪರ್ಕ ಕಲ್ಪಿಸುವ ಪರ್ಯಾಯ ನಿರ್ಗಮನ ಮಾರ್ಗವಿದೆ ಎಂದು ಹೇಳಿದ್ದಾರೆ.
ಡಿ-ಕಂಪನಿಯೊಳಗೆ ನುಸುಳಿದ್ದೇಗೆ?
ದಾವೂದ್ನ ಅಪರಾಧ ಜಾಲದೊಳಗೆ ತಾನು ಹೇಗೆ ಪ್ರವೇಶಿಸಿದೆ ಎಂಬುದನ್ನೂ ಫರೀದಿ ವಿವರಿಸಿದ್ದಾರೆ. 1995ರಲ್ಲಿ ಎಫ್ಬಿಐಗೆ ಸೇರ್ಪಡೆಯಾಗಿದ್ದ ತಮಗೆ 2009ರಲ್ಲಿ ದಾವೂದ್ ಗ್ಯಾಂಗ್ನೊಳಗೆ ರಹಸ್ಯವಾಗಿ ನುಸುಳುವ ಜವಾಬ್ದಾರಿ ನೀಡಲಾಗಿತ್ತು ಎಂದು ಹೇಳಿದ್ದಾರೆ.
ಈ ಕಾರ್ಯಾಚರಣೆಗಾಗಿ ರಷ್ಯಾದ ಮಾಫಿಯಾ ಸದಸ್ಯನಂತೆ ಗುರುತಿಸಿಕೊಂಡು, ತಮ್ಮ ಪಾಕಿಸ್ತಾನಿ ಮೂಲವನ್ನು ಮರೆಮಾಚಿದ್ದಾಗಿ ತಿಳಿಸಿದ್ದಾರೆ. ದಾವೂದ್ನ ಆಪ್ತ ಸಹಚರ ಜಬೀರ್ ಮೊತಿವಾಲಾ ಮೂಲಕ ಆತನಿಗೆ ಪರಿಚಯವಾಗಿತ್ತು ಎಂದಿದ್ದಾರೆ.
2018ರಲ್ಲಿ ಲಂಡನ್ನಲ್ಲಿ ಜಬೀರ್ ಮೊತಿವಾಲಾ ಬಂಧನಕ್ಕೂ ತಾನೇ ಕಾರಣ ಎಂದು ಫರೀದಿ ಹೇಳಿಕೊಂಡಿದ್ದಾರೆ. ಕರಾಚಿಯಲ್ಲಿ ಡಿ-ಕಂಪನಿಗಾಗಿ ಹವಾಲಾ ಹಣಕಾಸು ವ್ಯವಹಾರಗಳನ್ನು ಸ್ಥಾಪಿಸಲು ಸಹಾಯ ಮಾಡಿದ್ದಾಗಿಯೂ ತಿಳಿಸಿದ್ದಾರೆ. ದಾವೂದ್ನ ಸಹೋದರ ಅನೀಸ್ ಇಬ್ರಾಹಿಂ ಪುತ್ರ ಅಲಿ ಕಾಸ್ಕರ್ ತಮ್ಮ ಮಾಹಿತಿಯ ಪ್ರಮುಖ ಮೂಲವಾಗಿದ್ದ ಎಂದು ಹೇಳಿದ್ದಾರೆ.
ರಾತ್ರಿ 10ರ ಬಳಿಕವೇ ಹೊರಗೆ ಬರುವ ಡಾನ್!
ದಾವೂದ್ನ ದಿನಚರಿಯ ಕುರಿತು ಮಾತನಾಡಿರುವ ಫರೀದಿ, ಆತ ಹಗಲು ಹೊತ್ತಿನಲ್ಲಿ ಮನೆಯಿಂದ ಹೊರಬರುವುದಿಲ್ಲ ಎಂದು ತಿಳಿಸಿದ್ದಾರೆ. ರಾತ್ರಿ 10 ಗಂಟೆಯ ಬಳಿಕ ಹೊರಗೆ ಬಂದು, ಮುಂಜಾನೆ ಫಜರ್ ಪ್ರಾರ್ಥನೆಗೂ ಮುನ್ನ ಮನೆಗೆ ಮರಳುತ್ತಾನೆ. ಈ ಕಾರಣದಿಂದ ಆತನನ್ನು ‘ರಾತ್ ಕಾ ಬಾದ್ಶಾ’ ಎಂದು ಕರೆಯಲಾಗುತ್ತದೆ ಎಂದಿದ್ದಾರೆ.
ದಾವೂದ್ಗೆ ದಿನದ 24 ಗಂಟೆಯೂ ಬಿಗಿ ಭದ್ರತೆ ಇರುತ್ತದೆ. ಸುಮಾರು 35ರಿಂದ 45 ಮಂದಿ ಭದ್ರತಾ ಸಿಬ್ಬಂದಿ ಆತನ ಸುತ್ತಲೂ ಕಾವಲು ಕಾಯುತ್ತಾರೆ. ಅವರ ಬಳಿ ಎಕೆ-47 ಸೇರಿದಂತೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿರುತ್ತವೆ ಎಂದು ಫರೀದಿ ಆರೋಪಿಸಿದ್ದಾರೆ.
ದಾವೂದ್ನ ಭದ್ರತಾ ವ್ಯವಸ್ಥೆಯನ್ನು ಛೋಟಾ ಶಕೀಲ್ ನಿರ್ವಹಿಸುತ್ತಾನೆ. ಆತ ಪಾಕಿಸ್ತಾನದ ಐಎಸ್ಐ ಜೊತೆ ಸಂಪರ್ಕ ಹೊಂದಿದ್ದು, ಪ್ರತಿ ಶುಕ್ರವಾರ ಆ ಸಂಸ್ಥೆಯ ಕೇಂದ್ರ ಕಚೇರಿಗೆ ತೆರಳಿ ಭದ್ರತಾ ವರದಿಗಳನ್ನು ಪಡೆಯುತ್ತಾನೆ ಎಂದು ಫರೀದಿ ಹೇಳಿದ್ದಾರೆ.
ದಾವೂದ್ ಮತ್ತು ಛೋಟಾ ಶಕೀಲ್ ದುಬೈನಿಂದ ತರಿಸಿಕೊಂಡಿರುವ ಗುಂಡು ನಿರೋಧಕ ವಾಹನಗಳಲ್ಲಿ ಸಂಚರಿಸುತ್ತಾರೆ. ಬಾಂಬ್, ರಾಕೆಟ್ ಹಾಗೂ ಸ್ನೈಪರ್ ದಾಳಿಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಈ ವಾಹನಗಳಿಗಿದೆ ಎಂದು ತಿಳಿಸಿದ್ದಾರೆ.
ಐಎಸ್ಐ, ಲಷ್ಕರ್ ಜೊತೆ ನಂಟಿನ ಆರೋಪ
ದಾವೂದ್ ಪಾಕಿಸ್ತಾನದ ಐಎಸ್ಐ ಆಶ್ರಯದಲ್ಲಿದ್ದಾನೆ ಎಂದು ಫರೀದಿ ನೇರ ಆರೋಪ ಮಾಡಿದ್ದಾರೆ. ಲಷ್ಕರ್-ಎ-ತೊಯ್ಬಾ ಸಂಘಟನೆ ಹಾಗೂ 26/11 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಹಫೀಜ್ ಸಯೀದ್ ಜೊತೆ ದಾವೂದ್ಗೆ ನಿಕಟ ವ್ಯವಹಾರಿಕ ಸಂಪರ್ಕವಿದೆ ಎಂದೂ ಹೇಳಿದ್ದಾರೆ.
1993ರ ಮುಂಬೈ ಸ್ಫೋಟ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಟೈಗರ್ ಮೆಮನ್ ಬಗ್ಗೆಯೂ ಮಾತನಾಡಿರುವ ಅವರು, ಮೆಮನ್ ಹೆಚ್ಚು ಹೊರಗೆ ಸಂಚರಿಸುವುದಿಲ್ಲ ಎಂದಿದ್ದಾರೆ. ಇದೇ ವೇಳೆ, ಅನೀಸ್ ಇಬ್ರಾಹಿಂ ಮತ್ತು ಛೋಟಾ ಶಕೀಲ್ ನಡುವೆ ಗ್ಯಾಂಗ್ನ ನಿಯಂತ್ರಣ ಹಾಗೂ ಉತ್ತರಾಧಿಕಾರದ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ ಎಂದು ಆರೋಪಿಸಿದ್ದಾರೆ.
ಐಷಾರಾಮಿ ಜೀವನ, ಕೊಕೇನ್ ಸೇವನೆ, ಎರಡನೇ ಮದುವೆ!
ಧಾರ್ಮಿಕ ವ್ಯಕ್ತಿಯಂತೆ ತನ್ನನ್ನು ಬಿಂಬಿಸಿಕೊಳ್ಳುವ ದಾವೂದ್ ಖಾಸಗಿ ಬದುಕಿನಲ್ಲಿ ಐಷಾರಾಮಿ ಜೀವನ ನಡೆಸುತ್ತಾನೆ ಎಂದು ಫರೀದಿ ಆರೋಪಿಸಿದ್ದಾರೆ. ಮುಜ್ರಾ ನೃತ್ಯ ಕಾರ್ಯಕ್ರಮಗಳನ್ನು ವೀಕ್ಷಿಸುವ ಆಸಕ್ತಿ ಹೊಂದಿದ್ದಾನೆ. ಹಿಂದೆ ಮದ್ಯ ಸೇವಿಸುತ್ತಿದ್ದ ಆತ ಇದೀಗ ಕೊಕೇನ್ ಸೇವನೆಗೆ ಹೆಚ್ಚು ಒಲವು ತೋರಿದ್ದಾನೆ ಎಂದು ಹೇಳಿದ್ದಾರೆ.
ದಾವೂದ್ಗಾಗಿ ತಾನೇ ಮದ್ಯ ಖರೀದಿಸಿದ್ದಾಗಿ ಹಾಗೂ ಸುಮಾರು 1.78 ಲಕ್ಷ ರೂಪಾಯಿ ಮೌಲ್ಯದ ದುಬಾರಿ ಮದ್ಯದ ಬಾಟಲಿಯನ್ನು ಆತ ತರಿಸಿಕೊಂಡಿದ್ದಾಗಿ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಕರಾಚಿಯ ’22 ಜಮ್ಮಮಾ’ ಎಂಬ ಅತ್ಯಂತ ಬಿಗಿ ಭದ್ರತೆಯ, ಶಬ್ದ ನಿರೋಧಕ ಕಟ್ಟಡದಲ್ಲಿ ದಾವೂದ್ ಪಾಕಿಸ್ತಾನದ ಅಧಿಕಾರಿಗಳು ಮತ್ತು ಉದ್ಯಮಿಗಳೊಂದಿಗೆ ಸಭೆ ನಡೆಸುತ್ತಾನೆ ಎಂದಿದ್ದಾರೆ.
ಒಂದು ಸಂದರ್ಭದಲ್ಲಿ ತನ್ನ ಸಹಾಯಕನಿಗೆ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ನಲ್ಲಿ ಉದ್ಯೋಗ ಕೊಡಿಸುವ ಸಲುವಾಗಿ ದಾವೂದ್ ಮಧ್ಯರಾತ್ರಿಯಲ್ಲಿ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರಿಗೆ ಕರೆ ಮಾಡಿದ್ದನ್ನು ನೋಡಿದ್ದೇನೆ ಎಂದೂ ಫರೀದಿ ಹೇಳಿಕೊಂಡಿದ್ದಾರೆ.
ಇದಲ್ಲದೆ, ದಾವೂದ್ ಪಾಕಿಸ್ತಾನದಲ್ಲಿ ಎರಡನೇ ಮದುವೆಯಾಗಿದ್ದಾನೆ ಎಂಬ ಮಾಹಿತಿಯನ್ನೂ ಅವರು ಬಹಿರಂಗಪಡಿಸಿದ್ದಾರೆ. ಆಯೇಷಾ ಭಾಭಿ ಎಂದು ಕರೆಯಲಾಗುವ ಈ ಮಹಿಳೆ ದಾವೂದ್ಗಿಂತ ಸುಮಾರು 20 ವರ್ಷ ಚಿಕ್ಕವಳು. ಆಕೆ ಕರಾಚಿಯಲ್ಲಿ ಕಪ್ಪು ಬಣ್ಣದ ಮರ್ಸಿಡಿಸ್ ಕಾರಿನಲ್ಲಿ ಸಂಚರಿಸುತ್ತಾಳೆ ಎಂದು ತಿಳಿಸಿದ್ದಾರೆ.
2023ರಲ್ಲಿ ದಾವೂದ್ನ ಸಹೋದರಿ ಹಸೀನಾ ಪಾರ್ಕರ್ ಪುತ್ರ ಅಲಿಶಾ ಪಾರ್ಕರ್ ಕೂಡ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮುಂದೆ ಇದೇ ರೀತಿಯ ಮಾಹಿತಿ ನೀಡಿದ್ದ ಎನ್ನಲಾಗಿದೆ. ಮೊದಲ ಪತ್ನಿ ಮೆಹಜಬೀನ್ ಜೊತೆಗಿನ ವಿವಾಹ ಸಂಬಂಧ ಮುಂದುವರಿದಿರುವಾಗಲೇ ದಾವೂದ್ ಪಾಕಿಸ್ತಾನದ ಪಠಾಣ್ ಸಮುದಾಯದ ಮಹಿಳೆಯನ್ನು ಎರಡನೇ ಮದುವೆಯಾಗಿದ್ದಾನೆ ಎಂದು ಅಲಿಶಾ ಹೇಳಿದ್ದ.
ದಾವೂದ್ ಜೊತೆಗಿದ್ದ ಮುಂಬೈನ ಫಕೀರ!
ದಾವೂದ್ ಪಾಕಿಸ್ತಾನಕ್ಕೆ ತೆರಳುವಾಗ ಮುಂಬೈ ಮೂಲದ ‘ಇಸ್ಲಾಂ ಬಾಬಾ’ ಎಂಬ ಫಕೀರನನ್ನೂ ತನ್ನೊಂದಿಗೆ ಕರೆದೊಯ್ದಿದ್ದ ಎಂದು ಫರೀದಿ ತಿಳಿಸಿದ್ದಾರೆ. ಡಿ-ಕಂಪನಿಯ ಯಾವುದೇ ಕಾರ್ಯಾಚರಣೆ ಆರಂಭಿಸುವ ಮೊದಲು ಈ ಫಕೀರನ ಅನುಮತಿ ಪಡೆಯಲಾಗುತ್ತದೆ ಎಂಬ ಕುತೂಹಲಕಾರಿ ವಿಚಾರವನ್ನೂ ಅವರು ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ, ದಶಕಗಳಿಂದ ನಿಗೂಢವಾಗಿರುವ ದಾವೂದ್ ಇಬ್ರಾಹಿಂನ ವೈಯಕ್ತಿಕ ಬದುಕು, ಭದ್ರತಾ ವ್ಯವಸ್ಥೆ ಹಾಗೂ ಅಪರಾಧ ಜಾಲದ ಕುರಿತು ಕಮ್ರಾನ್ ಫರೀದಿ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಆದರೆ, ಸಂದರ್ಶನದಲ್ಲಿ ಅವರು ನೀಡಿರುವ ಮಾಹಿತಿಗಳಿಗೆ ಸ್ವತಂತ್ರ ದೃಢೀಕರಣ ಲಭ್ಯವಾಗಿರುವ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಈ ಹೇಳಿಕೆಗಳನ್ನು ದೃಢಪಟ್ಟ ಅಧಿಕೃತ ಮಾಹಿತಿಯೆಂದು ಪರಿಗಣಿಸಲಾಗದು.
ಸಿನೆಮಾ
Arjun Sarja-ಪುತ್ರಿ ಐಶ್ವರ್ಯಾ ವಿರುದ್ಧ ಅವಹೇಳನಕಾರಿ ವರದಿ: ಮಾಧ್ಯಮಗಳ ವಿರುದ್ಧ ಸಿಡಿದೆದ್ದ ಅರ್ಜುನ್ ಸರ್ಜಾ; ಅಧಿಕೃತ ದೂರು ದಾಖಲು
ಹಿರಿಯ ಪುತ್ರಿ ಐಶ್ವರ್ಯಾ ಅವರ ವೈಯಕ್ತಿಕ ಜೀವನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಧಾರರಹಿತ ಮತ್ತು ಅವಹೇಳನಕಾರಿ ಆರೋಪಗಳ ವಿರುದ್ಧ ಬಹುಭಾಷಾ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಅರ್ಜುನ್ ಸರ್ಜಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಅಧಿಕೃತ ದೂರು ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ಚೆನ್ನೈ: ಹಿರಿಯ ಪುತ್ರಿ ಐಶ್ವರ್ಯಾ ಅವರ ವೈಯಕ್ತಿಕ ಜೀವನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಧಾರರಹಿತ ಮತ್ತು ಅವಹೇಳನಕಾರಿ ಆರೋಪಗಳ ವಿರುದ್ಧ ಬಹುಭಾಷಾ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಅರ್ಜುನ್ ಸರ್ಜಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಅಧಿಕೃತ ದೂರು ಸಲ್ಲಿಸಿರುವುದಾಗಿ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಅರ್ಜುನ್ ಸರ್ಜಾ ಅವರ ಕಿರಿಯ ಪುತ್ರಿಯ ವಿವಾಹ ಸಮಾರಂಭದಲ್ಲಿ ಅಳಿಯ ಉಮಾಪತಿ ರಾಮಯ್ಯ ಅವರು ಹೆಚ್ಚಾಗಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ, ಐಶ್ವರ್ಯಾ ಮತ್ತು ಉಮಾಪತಿ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿಗಳು ಕೆಲವು ಆನ್ಲೈನ್ ಪೋರ್ಟಲ್ಗಳಲ್ಲಿ ಪ್ರಕಟವಾಗಿದ್ದವು. ಇದರ ಬೆನ್ನಲ್ಲೇ ಕೆಲವು ಮಾಧ್ಯಮಗಳು ಐಶ್ವರ್ಯಾ ಅವರನ್ನು ಮದ್ಯವ್ಯಸನಿ ಎಂದು ಬಿಂಬಿಸುವ ವರದಿಗಳನ್ನೂ ಪ್ರಸಾರ ಮಾಡಿದ್ದವು.
ಈ ವರದಿಗಳ ವಿರುದ್ಧ ಇನ್ಸ್ಟಾಗ್ರಾಮ್ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅರ್ಜುನ್ ಸರ್ಜಾ, ವ್ಯಕ್ತಿಯ ಗೌರವ ಮತ್ತು ಘನತೆಯ ವಿಚಾರದಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ ಎಂದು ಖಡಕ್ ಸಂದೇಶ ನೀಡಿದ್ದಾರೆ.
“ಕಲಾವಿದರ ಸಾರ್ವಜನಿಕ ಜೀವನದಲ್ಲಿ ಊಹಾಪೋಹಗಳು ಮತ್ತು ಟೀಕೆಗಳು ಸಹಜ. ಆದರೆ ಊಹಾಪೋಹಗಳಿಗೂ ಉದ್ದೇಶಪೂರ್ವಕವಾಗಿ ಆಧಾರರಹಿತ ಆರೋಪಗಳನ್ನು ಹರಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಸಾರ್ವಜನಿಕ ವಿಮರ್ಶೆಯ ಹೆಸರಿನಲ್ಲಿ ಕಟ್ಟುಕಥೆಗಳನ್ನು ಸೃಷ್ಟಿಸಲು ಅಥವಾ ವ್ಯಕ್ತಿಯ ಚಾರಿತ್ರ್ಯವಧೆ ಮಾಡಲು ಯಾರಿಗೂ ಅಧಿಕಾರವಿಲ್ಲ. ಯಾವುದೇ ಆಧಾರವಿಲ್ಲದೆ ಮಹಿಳೆಯೊಬ್ಬರನ್ನು ಮದ್ಯವ್ಯಸನಿ ಎಂದು ಕರೆಯುವುದು ಅತ್ಯಂತ ಬೇಜವಾಬ್ದಾರಿಯುತ ಮತ್ತು ಸ್ವೀಕಾರಾರ್ಹವಲ್ಲದ ವರ್ತನೆ” ಎಂದು ಅವರು ಕಿಡಿಕಾರಿದ್ದಾರೆ.
ಮೌನವನ್ನು ಒಪ್ಪಿಗೆ ಎಂದು ಭಾವಿಸಬೇಡಿ
ತಂದೆಯಾಗಿ ಪುತ್ರಿಯ ವಿರುದ್ಧದ ಇಂತಹ ಆರೋಪಗಳನ್ನು ಸಹಿಸಿಕೊಂಡು ಮೌನವಾಗಿರಲು ಸಾಧ್ಯವಿಲ್ಲ ಎಂದು ಅರ್ಜುನ್ ಸರ್ಜಾ ಸ್ಪಷ್ಟಪಡಿಸಿದ್ದಾರೆ.
“ಮೌನವೇ ಅತ್ಯಂತ ಘನತೆಯ ಪ್ರತಿಕ್ರಿಯೆ ಎಂದು ನಾವು ನಂಬಿದ್ದೇವೆ. ಆದರೆ ನಮ್ಮ ಮೌನವನ್ನು ಒಪ್ಪಿಗೆ ಎಂದು ಭಾವಿಸಬಾರದು. ತಪ್ಪು ಮಾಹಿತಿಯನ್ನು ಪದೇಪದೆ ಹರಡಲು ಅವಕಾಶ ನೀಡಲೂ ಸಾಧ್ಯವಿಲ್ಲ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಧಿಕೃತ ದೂರು ಸಲ್ಲಿಸಿ ಸೂಕ್ತ ಕ್ರಮಕ್ಕೆ ಮುಂದಾಗಿದ್ದೇವೆ” ಎಂದು ತಿಳಿಸಿದ್ದಾರೆ.
ಇದು ಕೇವಲ ತಮ್ಮ ಪುತ್ರಿಗೆ ಸಂಬಂಧಿಸಿದ ವಿಚಾರವಲ್ಲ. ಮಹಿಳೆಯರ ಘನತೆಗೆ ಧಕ್ಕೆ ಉಂಟಾದಾಗ ಹಾಗೂ ಅವರ ವೈಯಕ್ತಿಕ ಆಯ್ಕೆಗಳನ್ನು ಸಾರ್ವಜನಿಕವಾಗಿ ಪ್ರಶ್ನಿಸಿದಾಗ ಎದುರಾಗುವ ನೋವಿನ ವಿಚಾರವೂ ಹೌದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕುಟುಂಬದ ಬೆಂಬಲವಿಲ್ಲದ ಮಹಿಳೆಯರಿಗೆ ಇಂತಹ ಆರೋಪಗಳು ಮತ್ತಷ್ಟು ನೋವುಂಟುಮಾಡಬಹುದು. ಯಾವುದೇ ಮಹಿಳೆ ಇಂತಹ ಪರಿಸ್ಥಿತಿಯನ್ನು ಏಕಾಂಗಿಯಾಗಿ ಎದುರಿಸುವಂತಾಗಬಾರದು ಅಥವಾ ತನ್ನ ಜೀವನಶೈಲಿಯನ್ನು ಸಮರ್ಥಿಸಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಾರದು ಎಂದು ಅರ್ಜುನ್ ಸರ್ಜಾ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.
-
ಸುಳ್ಯ21 hours agoSuresh Raina-ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸುಳ್ಯದ ‘ರಸಪಾಕ ಗ್ರಾಂಡ್’ ಹೋಟೆಲ್ ಗೆ ಭೇಟಿ
-
ಅಂತರ ರಾಜ್ಯ24 hours agoCM post battle-ಉತ್ತರ ಪ್ರದೇಶ ಬಿಜೆಪಿಯಲ್ಲಿ ಸಿಎಂ ಕುರ್ಚಿ ಕದನ: ಚುನಾವಣೆಗೂ ಮುನ್ನವೇ ಭಿನ್ನಮತ?
-
ಸ್ಥಳೀಯ21 hours agoUppinangadi-ಉಪ್ಪಿನಂಗಡಿ: ಇಂದಿನಿಂದ ವಳಾಲು ಟೋಲ್ ಕಾರ್ಯಾರಂಭ; ಶೀಘ್ರದಲ್ಲೇ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು..!
-
ಸ್ಥಳೀಯ18 hours agoKadaba-ಕಡಬ: ಜಾಗದ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ; ಪರಸ್ಪರ ಹಲ್ಲೆ, ಜೀವಬೆದರಿಕೆ ಆರೋಪ; ಎರಡೂ ಕಡೆಯಿಂದ ಪ್ರಕರಣ ದಾಖಲು
-
ಅಪರಾಧ24 hours agoGym protein powder-ಸ್ಟೆರಾಯ್ಡ್, ಹಾನಿಕಾರಕ ರಾಸಾಯನಿಕ ಬೆರೆಸಿರುವ ಶಂಕೆ; ಜಿಮ್ ಪ್ರೊಟೀನ್ ಪೌಡರ್ ಗುಣಮಟ್ಟ ಪರೀಕ್ಷೆಗೆ ಸರ್ಕಾರ ಸಿದ್ಧತೆ
-
ಮಂಗಳೂರು18 hours agoPriyanka Kharge-ಮಂಗಳೂರಿನಲ್ಲಿ ಭಾರತದ ಮೊದಲ ಸುಸ್ಥಿರ ಕರಾವಳಿ ಡೇಟಾ ಸೆಂಟರ್ ಸ್ಥಾಪನೆ : ತಣ್ಣೀರುಬಾವಿಯಲ್ಲಿ ಸ್ಥಳ ಪರಿಶೀಲಿಸಿದ ಸಚಿವ ಪ್ರಿಯಾಂಕ ಖರ್ಗೆ; ತಣ್ಣೀರು ಭಾವಿಯಲ್ಲಿ 49 ಎಕರೆ ಪ್ರದೇಶ ಗುರುತು; ಯೋಜನೆಯ ಕಾರ್ಯಸಾಧ್ಯತೆ ಪರಿಶೀಲನೆಗೆ ಕ್ರಮ – ಬಿಯಾಂಡ್ ಬೆಂಗಳೂರು ಆಶಯದಡಿ ಜಾಗತಿಕ ಮಟ್ಟದ ತಂತ್ರಜ್ಞಾನ ಪರಿಸರ ವ್ಯವಸ್ಥೆ ನಿರ್ಮಾಣಕ್ಕೆ ಮತ್ತೊಂದು ಹೆಜ್ಜೆ
-
ನಿಧನ ವಾರ್ತೆ2 hours agoMangaluru-ಮಂಗಳೂರು: ರಸ್ತೆ ದಾಟುತ್ತಿದ್ದ 2ನೇ ತರಗತಿ ವಿದ್ಯಾರ್ಥಿಯ ಮೇಲೆ ಬಸ್ ಹರಿದು ಸಾವು
-
ಅಂತರ ರಾಜ್ಯ2 hours agoChennai Jain couple-ತಿರುಪತಿ ತಿಮ್ಮಪ್ಪನಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ಚಿನ್ನ, ವಜ್ರಾಭರಣ ಕಾಣಿಕೆ ನೀಡಿದ ಚೆನ್ನೈ ಜೈನ ದಂಪತಿ..!















