ದಕ್ಷಿಣ ಕನ್ನಡ
ಪುತ್ತೂರು ದೇವಳದ ಸಭಾಭವನ ಶಿವನ ದೃಷ್ಟಿಗೆ ಅಡ್ಡಿ: ತೆಗೆಯುವುದೇ ಏಕೈಕ ಪರಿಹಾರ ಎಂದ ದೈವಜ್ಞರು;

ಪುತ್ತೂರು, ಜೂನ್ 24: ಇಲ್ಲಿನ ಐತಿಹಾಸಿಕ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಸಭಾಭವನವು ಸಾಕ್ಷಾತ್ ಮಹಾಲಿಂಗೇಶ್ವರನ ದೃಷ್ಟಿ ಸಂಚಾರಕ್ಕೆ ಅಡಚಣೆಯುಂಟು ಮಾಡುತ್ತಿದ್ದು, ಇದನ್ನು ಸಂಪೂರ್ಣವಾಗಿ ತೆಗೆದುಹಾಕುವುದೇ ಏಕೈಕ ಪರಿಹಾರ ಎಂದು ಖ್ಯಾತ ದೈವಜ್ಞ ನಿಟ್ಟೆ ಪ್ರಸನ್ನ ಆಚಾರ್ಯರು ಸ್ಪಷ್ಟಪಡಿಸಿದ್ದಾರೆ. ದೈವಬಲದ ಆಧಾರದಲ್ಲಿ ಇದಕ್ಕೆ ಬೇರೆ ಯಾವುದೇ ಪರ್ಯಾಯ ಪರಿಹಾರವಿಲ್ಲ ಎಂದು ಅವರು ದೃಢವಾಗಿ ನುಡಿದರು.
ಶಾಸಕ ಅಶೋಕ್ ಕುಮಾರ್ ರೈ ಅವರ ಸಲಹೆಯಂತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಮಂಗಳವಾರ ಆಯೋಜಿಸಿದ್ದ ಒಂದು ದಿನದ “ತಾಂಬೂಲ ಪ್ರಶ್ನಾ ಚಿಂತನೆ”ಯಲ್ಲಿ ಈ ಮಹತ್ವದ ವಿಷಯಗಳು ಬೆಳಕಿಗೆ ಬಂದವು. ಕಾರ್ಯಕ್ರಮದ ಆರಂಭದಲ್ಲಿ ದೈವಜ್ಞರನ್ನು ವಾದ್ಯಘೋಷಗಳೊಂದಿಗೆ ದೇವಳಕ್ಕೆ ಬರಮಾಡಿಕೊಳ್ಳಲಾಯಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ದೀಪ ಬೆಳಗಿಸಿ ಚಿಂತನಾ ಕಾರ್ಯಕ್ಕೆ ಚಾಲನೆ ನೀಡಿದರು.
ಕನ್ಯಾ ರಾಶಿಯು ಆರೂಢವಾಗಿ ಬಂದಿದ್ದು, ಮುಖ್ಯ ದೇವರಿಗೂ ದೇವಳದ ಆವರಣದಲ್ಲಿರುವ ಇತರ ದೇವತೆಗಳಿಗೂ ಸರಿಯಾದ ಸಂಪರ್ಕವಿಲ್ಲದಿರುವುದು ಹಾಗೂ ಇದರಿಂದ ಮಹಾಲಿಂಗೇಶ್ವರನಿಗೆ ಪೂರ್ಣ ತೃಪ್ತಿಯಾಗಿಲ್ಲದಿರುವುದು ದೇವಕಾರ್ಯಗಳಲ್ಲಿ ಕೆಲವು ಅಡೆತಡೆಗಳಿರುವುದನ್ನು ಸೂಚಿಸುತ್ತಿದೆ ಮತ್ತು ಕೆಲಸಗಳನ್ನು ವೇಗವಾಗಿ ಮಾಡಲು ಸಾಧ್ಯವಿಲ್ಲ ಎಂದು ಕಂಡು ಬಂತು.

ಅಯ್ಯಪ್ಪ ಸನ್ನಿಧಿ ಸ್ಥಳಾಂತರ ಅನಿವಾರ್ಯ
ಪ್ರಶ್ನಾ ಚಿಂತನೆಯಲ್ಲಿ ಅಯ್ಯಪ್ಪ ಸನ್ನಿಧಿಯ ಕುರಿತು ಆಳವಾದ ವಿಶ್ಲೇಷಣೆ ನಡೆಯಿತು. “ಪ್ರಾಚೀನ ಕಾಲದಿಂದಲೂ ಅಯ್ಯಪ್ಪ ದೇವರು ಇಲ್ಲಿನ ಪ್ರಧಾನ ದೇವತೆಯ ಪರಿವಾರ ದೇವತೆ ಯಾ ಉಪದೇವತೆಯಲ್ಲ. ಮಧ್ಯಕಾಲದಲ್ಲಿ ( ಶತಮಾನಗಳಷ್ಟು ಹಳೆಯದಾದ) ಆಗಮ ದೇವರಾಗಿ ಬಂದ ಅಯ್ಯಪ್ಪನನ್ನು, ಮಾಲಾಧಾರಿಗಳು (ದೀಕ್ಷಿತರು) ದೇವಸ್ಥಾನದ ಈಶಾನ್ಯ ಭಾಗದಲ್ಲಿ ಆರಾಧಿಸುತ್ತಿದ್ದರು. ಆದರೆ, ಬೇಕಾಬಿಟ್ಟಿ ದೇವರನ್ನು ಪ್ರತಿಷ್ಠೆ ಮಾಡುವುದು ಸರಿಯಲ್ಲ. ಮೂಲದಿಂದ ಆರಾಧಿಸಿಕೊಂಡು ಬಂದವರು ಪೂಜೆಯನ್ನು ಅರ್ಧಕ್ಕೆ ನಿಲ್ಲಿಸಿ ದೇವಸ್ಥಾನದ ಸುಪರ್ದಿಗೆ ಒಪ್ಪಿಸಿ ಹೋಗಿದ್ದು, ಒಮ್ಮೆ ಆರಂಭಿಸಿದ ಪೂಜಾವಿಧಿಗಳು ನಿಂತಿರುವುದು ದೇಗುಲಕ್ಕೆ ‘ಭಾದೆ’ ತಂದೊಡ್ಡಿದೆ,” ಎಂದು ದೈವಜ್ಞರು ವಿವರಿಸಿದರು.
ಪರಿಹಾರ:
ಅಯ್ಯಪ್ಪ ಮಂದಿರವು ಕ್ಷೇತ್ರದ ಪರಿಧಿಯಿಂದ ಹೊರಗಿರಬೇಕು. ಈಗ ಬಿಂಬವಿಟ್ಟ ವ್ಯವಸ್ಥೆಯೂ ಸರಿಯಿಲ್ಲ. ಆದ್ದರಿಂದ, ಅಯ್ಯಪ್ಪ ಭಕ್ತರದ್ದೇ ಆದ ಸಮಿತಿಯನ್ನು ರಚಿಸಿ, ದೇವಸ್ಥಾನ ಸಮಿತಿಯ ಸಹಕಾರದೊಂದಿಗೆ ದೇವಳದ ನೈರುತ್ಯ ಭಾಗದಲ್ಲಿ ಅರ್ಧಕ್ಕೆ ನಿಂತಿರುವ ಕಟ್ಟಡದ ಸ್ಥಳದಲ್ಲಿ ಭವ್ಯವಾದ ಮಂದಿರವನ್ನು ನಿರ್ಮಿಸಿ, ಅಲ್ಲಿ ಪೂಜಾ ಕೈಂಕರ್ಯಗಳನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಲಾಯಿತು.
ನಾಗ ಸನ್ನಿಧಿ ಮೂಲಸ್ಥಾನಕ್ಕೆ; ದಂಡ ಕಟ್ಟಿ ಸ್ಥಳಾಂತರಿಸಿ
“ನಾಗದೇವರು ಇಲ್ಲಿಗೆ ಬಂದದ್ದು ಹೇಗೆ?” ಎಂಬ ಪ್ರಶ್ನೆಯೊಂದಿಗೆ ಚಿಂತನೆ ನಡೆಸಿದ ದೈವಜ್ಞರು ವಾಸುಕಿ ನಾಗ ಸನ್ನಿಧಿಯನ್ನು ಅದರ ಮೂಲ ನಾಗ ಸನ್ನಿಧಿಯಲ್ಲೇ ಸೇರ್ಪಡೆಗೊಳಿಸಬೇಕು. ದೂರವಿದೆ ಎಂಬ ಕಾರಣಕ್ಕೆ ಮೂಲಸ್ಥಾನವನ್ನು ಉದಾಸೀನ ಮಾಡಬಾರದು.
ಪರಿಹಾರ:
ಅಯ್ಯಪ್ಪನ ಸ್ಥಾನ ನಿರ್ಣಯವಾದ ಕೂಡಲೇ ನಾಗನ ಸ್ಥಾನವನ್ನೂ ನಿರ್ಣಯಿಸಬೇಕು. ಈಗಿರುವ ನಾಗನ ಗುಡಿಯ ಬಿಂಬಗಳನ್ನು ಮೂಲಸ್ಥಾನದಲ್ಲಿ “ಚಿತ್ರಾಕೂಟ” ರಚಿಸಿ ಅಲ್ಲಿ ಪ್ರತಿಷ್ಠಾಪಿಸಿ ಆರಾಧಿಸಬೇಕು. ನಾಗನನ್ನು ದೇವಸ್ಥಾನಕ್ಕೆ ತಂದು ಸೇರಿಸಿದ ಎಲ್ಲರನ್ನೂ ಕರೆಸಿ, ಅವರಿಂದ ದಂಡ (ಪರಿಹಾರಾರ್ಥ ಕಾಣಿಕೆ) ಕಟ್ಟಿಸಿಕೊಂಡ ನಂತರವೇ ಮೂಲಸ್ಥಾನಕ್ಕೆ ಸೇರಿಸುವ ಕಾರ್ಯವನ್ನು ಮಾಡಬೇಕು ಎಂದು ದೈವಜ್ಞರು ತಿಳಿಸಿದರು.
ನವಗ್ರಹ ಗುಡಿ ಗೋಪುರಕ್ಕೆ
ನವಗ್ರಹ ಗುಡಿಯನ್ನು ದೇವಸ್ಥಾನದ ಒಳಾಂಗಣದಲ್ಲಿರುವ ಗೋಪುರದೊಳಗೆ ಸ್ಥಳಾಂತರಿಸಬಹುದು. ಇದರಲ್ಲಿ ಶನೈಶ್ಚರನಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು ಎಂದು ಸೂಚಿಸಲಾಯಿತು.
ಸಭಾಭವನಕ್ಕೆ ವಿಷ್ಣುಕೋಪ, ಸ್ಥಾನದೋಷ
ಸಭಾಭವನ ಕಟ್ಟಡವು ಅಪೂರ್ಣವಾಗಿರಲು ವಿಷ್ಣುಕೋಪವಿದ್ದು, ಕಟ್ಟಡದ ಸ್ಥಾನ ಮತ್ತು ಸೂತ್ರಗಳಲ್ಲಿ ದೋಷವಿದೆ. ಪದೇ ಪದೇ ದೋಷಪರಿಹಾರ ಕಾರ್ಯಗಳನ್ನು ಮಾಡುವ ಬದಲು, ಶಾಶ್ವತ ಮತ್ತು ಸರಿಯಾದ ವ್ಯವಸ್ಥೆ ಮಾಡುವುದು ಉತ್ತಮ. ಆದ್ದರಿಂದ, ಸಭಾಭವನವನ್ನು ತೆಗೆಯುವುದೇ ಅಂತಿಮ ಪರಿಹಾರ ಎಂದು ಅವರು ಒತ್ತಿ ಹೇಳಿದರು.
ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದ ಇತರ ಪ್ರಮುಖ ಅಂಶಗಳು:
• ದೇವಳದ ಕೆರೆಯ ನೀರನ್ನು ಬಳಸಿ ಕಾರಂಜಿ ನಿರ್ಮಿಸಬಾರದು.
• ಭಕ್ತರು ದೇವರನ್ನು ಹುಡುಕುವ ಸ್ಥಿತಿ ಬರಬಾರದು, ನೇರವಾಗಿ ದರ್ಶನಕ್ಕೆ ಅನುಕೂಲವಿರಬೇಕು.
• ದೇವಸ್ಥಾನದಲ್ಲಿ ಧಾರ್ಮಿಕ ವಿಚಾರಗಳಿಗೇ ಪ್ರಥಮ ಆದ್ಯತೆ, ಬೇರೆ ವಿಚಾರಗಳಿಗೆ ಹೆಚ್ಚಿನ ಮಹತ್ವ ಬೇಡ.
• ದೇವಳದ ಈಶಾನ್ಯ ಭಾಗದಲ್ಲಿ ಕೊಳಚೆ ನೀರು ನಿಲ್ಲುವುದು ದೈವಿಕ ದೃಷ್ಟಿಯಿಂದ ಉತ್ತಮವಲ್ಲ.
• ರಾಷ್ಟ್ರ ಧ್ವಜ ನಿರ್ಮಾಣಕ್ಕೆ ಯಾವುದೇ ತಡೆಯಿಲ್ಲ
.
ಈ ಸಂದರ್ಭದಲ್ಲಿ ದೈವಜ್ಞರ ಸಹಾಯಕ ಶ್ರೀನಿವಾಸ ಭಟ್, ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ, ವಿ.ಎಸ್. ಭಟ್ ಅವರು ಚಿಂತನಾ ವೇದಿಕೆಯಲ್ಲಿದ್ದರು. ಶಾಸಕ ಅಶೋಕ್ ಕುಮಾರ್ ರೈ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಸುಭಾಶ್ ರೈ ಬೆಳ್ಳಿಪ್ಪಾಡಿ, ದಿನೇಶ್ ಪಿ. ವಿ., ನಳಿನಿ ಪಿ. ಶೆಟ್ಟಿ, ಈಶ್ವರ ಬೇಡೆಕರ್, ಕೃಷ್ಣವೇಣಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್, ಹರೀಶ್ ಶೆಟ್ಟಿ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಶಿಕ್ಷಣ
Narendra-ನ.28 : ನರೇಂದ್ರ ಪ.ಪೂ.ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮ “ಪ್ರತಿಭಾ ಪರ್ವ”
2026-27 ನೇ ಶೈಕ್ಷಣಿಕ ಸಾಲಿನ ವಾರ್ಷಿಕೋತ್ಸವ ಸಂಭ್ರಮ “ ಪ್ರತಿಭಾ ಪರ್ವ” ಕಾರ‍್ಯಕ್ರಮವು ನವೆಂಬರ್ 28 , ಶನಿವಾರದಂದು ತೆಂಕಿಲದ ನರೇಂದ್ರ ಪ.ಪೂ. ಕಾಲೇಜಿನ ಹಂಸಧ್ವನಿ ಸಭಾಂಗಣದಲ್ಲಿ ಅಪರಾಹ್ನ 2 ಗಂಟೆಯಿಂದ ಪ್ರಾರಂಭಗೊಳ್ಳಲಿದೆ. ಅಪರಾಹ್ನ 3 ಗಂಟೆಯಿಂದ ಸಭಾ ಕಾರ‍್ಯಕ್ರಮ ನಡೆಯಲಿದ್ದು ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಶ ನಾಯಕ್ ಬಿ.ಸಿ. ಇವರು ವಹಿಸಿಕೊಳ್ಳಲಿದ್ದಾರೆ.
ಶಿಕ್ಷಣದ ಮೂಲಕ ಸಾಮಾಜಿಕ ಬದಲಾವಣೆಯ ಮಹತ್ತರ ಉದ್ದೇಶವನ್ನಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತಿರುವ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಘಟಕವಾದ ನರೇಂದ್ರ ಪದವಿ ಪೂರ್ವ ಕಾಲೇಜು ಶಿಕ್ಷಣದ ಮೂಲಕ ವಿದ್ಯಾರ್ಥಿಯ ಬೌಧ್ಧಿಕ, ಸಾಮಾಜಿಕ, ಭೌತಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ, ನೈತಿಕ,ಆಧ್ಯಾತ್ಮಿಕ ಮೌಲ್ಯಗಳಿಂದ ಪ್ರಬಲವಾಗಿರುವ ಬುದ್ಧಿಶಕ್ತಿಯನ್ನು ಉತ್ತೇಜಿಸಿ ಸದೃಢರನ್ನಾಗಿ ಬೆಳೆಸುವ ಉದ್ದೇಶವನ್ನು ಹೊಂದಿದೆ.
2017ರಲ್ಲಿ ತೆಂಕಿಲದ ವಿವೇಕನಗರದಲ್ಲಿ ಸ್ಥಾಪನೆಗೊಂಡ ಸಂಸ್ಥೆ ನರೇಂದ್ರ ಪದವಿ ಪೂರ್ವ ಕಾಲೇಜು ಇದೀಗ ಒಂಬತ್ತು ವರ್ಷಗಳ ಯಶಸ್ವಿ ಪಯಣವನ್ನು ಪೂರೈಸಿ, ಹತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಶುಭ ಸಂಭ್ರಮದಲ್ಲಿದೆ.
2026-27 ನೇ ಶೈಕ್ಷಣಿಕ ಸಾಲಿನ ವಾರ್ಷಿಕೋತ್ಸವ ಸಂಭ್ರಮ “ ಪ್ರತಿಭಾ ಪರ್ವ” ಕಾರ‍್ಯಕ್ರಮವು ನವೆಂಬರ್ 28 , ಶನಿವಾರದಂದು ತೆಂಕಿಲದ ನರೇಂದ್ರ ಪ.ಪೂ. ಕಾಲೇಜಿನ ಹಂಸಧ್ವನಿ ಸಭಾಂಗಣದಲ್ಲಿ ಅಪರಾಹ್ನ 2 ಗಂಟೆಯಿಂದ ಪ್ರಾರಂಭಗೊಳ್ಳಲಿದೆ. ಅಪರಾಹ್ನ 3 ಗಂಟೆಯಿಂದ ಸಭಾ ಕಾರ‍್ಯಕ್ರಮ ನಡೆಯಲಿದ್ದು ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಶ ನಾಯಕ್ ಬಿ.ಸಿ. ಇವರು ವಹಿಸಿಕೊಳ್ಳಲಿದ್ದಾರೆ.
ಮುಖ್ಯಅತಿಥಿಯಾಗಿ ಕರ್ನಾಟಕ ಹೈಕೋರ್ಟ್ನ ಹಿರಿಯ ವಕೀಲರು, ಕರ್ನಾಟಕದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಮತ್ತು ಕರ್ನಾಟಕ ಬ್ಯಾಂಕ್ ಲಿಮಿಟೆಡ್ ನ ಸ್ವತಂತ್ರ ನಿರ್ದೇಶಕರು ಮತ್ತು ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ನೂತನ ಆಡಳಿತ ಮಂಡಳಿಯ ಸದಸ್ಯರಾದ ಡಾ. ಎಮ್. ಅರುಣ್ ಶ್ಯಾಮ್ ರವರು ಭಾಗವಹಿಸಲಿದ್ದಾರೆ. ಇನ್ನೋರ್ವ ಅತಿಥಿಯಾಗಿ ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ರವೀಂದ್ರ ಪಿ. ಇವರು ಭಾಗವಹಿಸಲಿದ್ದಾರೆ.
ನವೆಂಬರ್ 28 ರಂದು ಅಪರಾಹ್ನ 2 ಗಂಟೆಯಿಂದ ವಿದ್ಯಾರ್ಥಿ ಸಾಧಕರಿಗೆ ಅಭಿನಂದನಾ ಸಮಾರಂಭ ಮತ್ತು ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕವಾಗಿ, ಸಾಂಸ್ಕೃತಿಕ ,ಕ್ರೀಡೆ ಮತ್ತು ಇನ್ನಿತರ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಣಾ ಕಾರ‍್ಯಕ್ರಮ“ ಪ್ರತಿಭಾ ಪುರಸ್ಕಾರ” ನಡೆಯಲಿದೆ. ಈ ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕರಾದ ಮಹಾಲಕ್ಷ್ಮೀ ಕೆ. ಇವರು ವಹಿಸಿಕೊಳ್ಳಲಿದ್ದಾರೆ.
ಮುಖ್ಯಅತಿಥಿಗಳಾಗಿ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳು ನರಿಮೊಗರು ಪುತ್ತೂರು ಇಲ್ಲಿನ ಮುಖ್ಯಗುರುಗಳಾದ ಪ್ರಸನ್ನ ಕೆ. ಅವರು ಭಾಗವಹಿಸಲಿದ್ದಾರೆ. ನರೇಂದ್ರ ಪ.ಪೂ. ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ರವೀಶ ನಾಯಕ್ ಬಿ.ಸಿ. , ಸದಸ್ಯರಾದ ಸತ್ಯನಾರಾಯಣ ಬಿ., ರಮೇಶ ನಾಯಕ್ ಕೆ., ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಗುಣಪಾಲ, ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ತೀರ್ಥರಾಜ್ ಕೆ. ಉಪಸ್ಥಿತಿ ಇರಲಿದ್ದಾರೆ. ಮತ್ತು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ದ್ವಿತೀಯ ವಿಜ್ಞಾನ ವಿಭಾಗದ ಶ್ರೀಶಾನ್ ಡಿ.ಕೆ., ಕನ್ನಿಕಾ ಕೆ.ಆರ್., ಪ್ರಥಮ ವಿಜ್ಞಾನ ವಿಭಾಗದ ಜೆ.ಶೃಜಾ ಭಾಗವಹಿಸಲಿದ್ದಾರೆ.ಸಭಾಕರ‍್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕರ‍್ಯಕ್ರಮಗಳು ನಡೆಯಲಿದೆ. ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಅಪರಾಧ
Punacha-ಪುಣಚದಲ್ಲಿ ಬೈಕ್‌ಗೆ ಕಾರು ಡಿಕ್ಕಿ; ಸವಾರನಿಗೆ ಗಂಭೀರ ಗಾಯ – ನಿಲ್ಲಿಸದೆ ಪರಾರಿಯಾದ ಕಾರು?
ಪುಣಚದಲ್ಲಿ ಬೈಕ್‌ಗೆ ಕಾರೊಂದು ಡಿಕ್ಕಿ ಹೊಡೆದು, ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ತೋರಣಕಟ್ಟೆಯಿಂದ ಪುಣಚ ಸಂಪರ್ಕಿಸುವ ರಸ್ತೆಯ ತಿರುವಿನಲ್ಲಿ ನಡೆದಿದೆ. ಅಪಘಾತದ ಬಳಿಕ ಕಾರು ನಿಲ್ಲಿಸದೆ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಪುತ್ತೂರು: ಪುಣಚದಲ್ಲಿ ಬೈಕ್‌ಗೆ ಕಾರೊಂದು ಡಿಕ್ಕಿ ಹೊಡೆದು, ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ತೋರಣಕಟ್ಟೆಯಿಂದ ಪುಣಚ ಸಂಪರ್ಕಿಸುವ ರಸ್ತೆಯ ತಿರುವಿನಲ್ಲಿ ನಡೆದಿದೆ.
ಬೈಕ್ ಸವಾರ ನಿಧಾನವಾಗಿ ರಸ್ತೆ ಏರುತ್ತಿದ್ದ ವೇಳೆ ಎದುರಿನಿಂದ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಗಾಯಗೊಂಡಿದ್ದು, ಅಪಘಾತದ ಬಳಿಕ ಕಾರು ನಿಲ್ಲಿಸದೆ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಅಪಘಾತದ ದೃಶ್ಯಗಳು ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಪಘಾತಕ್ಕೆ ಕಾರಣವಾದ ಕಾರು ಹಾಗೂ ಅದರ ಚಾಲಕನ ಪತ್ತೆಗೆ ಈ ದೃಶ್ಯಗಳು ಸಹಕಾರಿಯಾಗುವ ಸಾಧ್ಯತೆಯಿದೆ.
ಇನ್ನು ಅಪಘಾತಕ್ಕೆ ಕಾರಣವಾದ ಕಾರಿನ ಚಾಲಕನ ಬಗ್ಗೆ ಸ್ಥಳೀಯವಾಗಿ ವಿವಿಧ ಚರ್ಚೆಗಳು ನಡೆಯುತ್ತಿದ್ದು, ಅಪಘಾತದ ವೇಳೆ ಚಾಲಕ ಮದ್ಯದ ಅಮಲಿನಲ್ಲಿದ್ದನೇ ಎಂಬ ಬಗ್ಗೆಯೂ ಆರೋಪಗಳು ಕೇಳಿಬಂದಿವೆ. ಆದರೆ ಈ ಆರೋಪಗಳಿಗೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.
ಅಪರಾಧ
Punacha-ಪುಣಚ: ಪತ್ನಿಯನ್ನು ಕೊಲೆಗೈದು ಹೃದಯಾಘಾತವೆಂದು ಬಿಂಬಿಸಲು ಯತ್ನ: ಪತಿಗೆ 5 ವರ್ಷ ಜೈಲು..!
ಪತ್ನಿಯನ್ನು ಕೊಲೆಗೈದು ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಬಿಂಬಿಸಿ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ವಿಟ್ಲ: ಪತ್ನಿಯನ್ನು ಕೊಲೆಗೈದು ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ಬಿಂಬಿಸಿ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
2024ರ ಡಿಸೆಂಬರ್ 11ರಂದು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪುಣಚದಲ್ಲಿ ಈ ಘಟನೆ ನಡೆದಿತ್ತು. ಆರೋಪಿ ಸಂಜೀವ ನಾಯ್ಕ ತನ್ನ ಪತ್ನಿಗೆ ಹೃದಯಾಘಾತವಾಗಿದೆ ಎಂದು ನೆರೆಮನೆಯವರನ್ನು ನಂಬಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಆಸ್ಪತ್ರೆಯಲ್ಲಿ ವೈದ್ಯರು ಮಹಿಳೆ ಮೃತಪಟ್ಟಿರುವುದಾಗಿ ಘೋಷಿಸಿದ್ದರು.
ಮೃತದೇಹದ ಮೇಲೆ ಅನುಮಾನಾಸ್ಪದ ಗಾಯದ ಗುರುತುಗಳು ಕಂಡುಬಂದ ಹಿನ್ನೆಲೆಯಲ್ಲಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ವಿಟ್ಲ ಪೊಲೀಸ್ ಠಾಣೆಯ ನಿರೀಕ್ಷಕ ಹೆಚ್.ಇ. ನಾಗರಾಜ್ ಅವರು ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಆರೋಪಿ ಸಂಜೀವ ನಾಯ್ಕ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬಿಎನ್‌ಎಸ್ ಕಲಂ 105 ಭಾಗ-2ರ ಅಡಿಯಲ್ಲಿ ಆರೋಪಿಗೆ 5 ವರ್ಷಗಳ ಸಾದಾ ಜೈಲು ಶಿಕ್ಷೆ ಹಾಗೂ 5,000 ರೂ. ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದರೆ ಹೆಚ್ಚುವರಿಯಾಗಿ 6 ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.
ಅಲ್ಲದೆ, ಬಿಎನ್‌ಎಸ್ ಕಲಂ 240ರ ಅಡಿಯಲ್ಲಿ ಸಾಕ್ಷ್ಯನಾಶ ಹಾಗೂ ಸುಳ್ಳು ಮಾಹಿತಿ ನೀಡಿದ ಅಪರಾಧಕ್ಕೆ 6 ತಿಂಗಳ ಸಾದಾ ಜೈಲು ಶಿಕ್ಷೆಯನ್ನೂ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿ ನಾಯ್ಕ ವಾದ ಮಂಡಿಸಿದ್ದರು.
-
ಸುಳ್ಯ24 hours agoSuresh Raina-ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸುಳ್ಯದ ‘ರಸಪಾಕ ಗ್ರಾಂಡ್’ ಹೋಟೆಲ್ ಗೆ ಭೇಟಿ
-
ಸ್ಥಳೀಯ22 hours agoKadaba-ಕಡಬ: ಜಾಗದ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ; ಪರಸ್ಪರ ಹಲ್ಲೆ, ಜೀವಬೆದರಿಕೆ ಆರೋಪ; ಎರಡೂ ಕಡೆಯಿಂದ ಪ್ರಕರಣ ದಾಖಲು
-
ನಿಧನ ವಾರ್ತೆ5 hours agoMangaluru-ಮಂಗಳೂರು: ರಸ್ತೆ ದಾಟುತ್ತಿದ್ದ 2ನೇ ತರಗತಿ ವಿದ್ಯಾರ್ಥಿಯ ಮೇಲೆ ಬಸ್ ಹರಿದು ಸಾವು
-
ಮಂಗಳೂರು21 hours agoPriyanka Kharge-ಮಂಗಳೂರಿನಲ್ಲಿ ಭಾರತದ ಮೊದಲ ಸುಸ್ಥಿರ ಕರಾವಳಿ ಡೇಟಾ ಸೆಂಟರ್ ಸ್ಥಾಪನೆ : ತಣ್ಣೀರುಬಾವಿಯಲ್ಲಿ ಸ್ಥಳ ಪರಿಶೀಲಿಸಿದ ಸಚಿವ ಪ್ರಿಯಾಂಕ ಖರ್ಗೆ; ತಣ್ಣೀರು ಭಾವಿಯಲ್ಲಿ 49 ಎಕರೆ ಪ್ರದೇಶ ಗುರುತು; ಯೋಜನೆಯ ಕಾರ್ಯಸಾಧ್ಯತೆ ಪರಿಶೀಲನೆಗೆ ಕ್ರಮ – ಬಿಯಾಂಡ್ ಬೆಂಗಳೂರು ಆಶಯದಡಿ ಜಾಗತಿಕ ಮಟ್ಟದ ತಂತ್ರಜ್ಞಾನ ಪರಿಸರ ವ್ಯವಸ್ಥೆ ನಿರ್ಮಾಣಕ್ಕೆ ಮತ್ತೊಂದು ಹೆಜ್ಜೆ
-
ಅಪರಾಧ5 hours agoPunacha-ಪುಣಚದಲ್ಲಿ ಬೈಕ್‌ಗೆ ಕಾರು ಡಿಕ್ಕಿ; ಸವಾರನಿಗೆ ಗಂಭೀರ ಗಾಯ – ನಿಲ್ಲಿಸದೆ ಪರಾರಿಯಾದ ಕಾರು?
-
ಅಂತರ ರಾಜ್ಯ5 hours agoChennai Jain couple-ತಿರುಪತಿ ತಿಮ್ಮಪ್ಪನಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ಚಿನ್ನ, ವಜ್ರಾಭರಣ ಕಾಣಿಕೆ ನೀಡಿದ ಚೆನ್ನೈ ಜೈನ ದಂಪತಿ..!
-
ಅಪರಾಧ5 hours agoPunacha-ಪುಣಚ: ಪತ್ನಿಯನ್ನು ಕೊಲೆಗೈದು ಹೃದಯಾಘಾತವೆಂದು ಬಿಂಬಿಸಲು ಯತ್ನ: ಪತಿಗೆ 5 ವರ್ಷ ಜೈಲು..!
-
ರಾಜಕೀಯ5 hours agoKumaraswamy-ಹಳ್ಳಿಯ ಪ್ರತಿ ಹೆಣ್ಣುಮಕ್ಕಳಿಗೆ 2 ಹಸು ಉಚಿತ..! 2028ರ ಎನ್ಡಿಎ ಯೋಜನೆ ಘೋಷಿಸಿದ ಕುಮಾರಸ್ವಾಮಿ















