ಬಿಗ್ ನ್ಯೂಸ್
Hindu Jagaran Vedike-ಇ.ಡಿ ಹೆಸರಲ್ಲಿ ಹಲವು ದರೋಡೆಯಾಗಿದೆ..! ಪೊಲೀಸರ ಹೆಸರಲ್ಲಿ ಮನೆಯಿಂದ ಹೊರ ಕರೆಸಿ ಹಿಂದೂ ನಾಯಕರ ಹತ್ಯೆಯಾದರೆ ಯಾರು ಹೊಣೆ..? ಹಿಂದೂ ಜಾಗರಣ ವೇದಿಕೆ ಪ್ರಶ್ನೆ
ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳ ನಂತರ ನಡೆದ ಬೆಳವಣಿಗೆಗಳ ಬಗ್ಗೆ ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದೆ.
ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಕೋಮು ಗಲಭೆಗಳ ನಂತರ ನಡೆದ ಬೆಳವಣಿಗೆಗಳ ಬಗ್ಗೆ ಹಿಂದೂ ಜಾಗರಣ ವೇದಿಕೆ ತೀವ್ರವಾಗಿ ಖಂಡಿಸಿದೆ.
ಹಿಂಜಾವೇ ಕರ್ನಾಟಕ ದಕ್ಷಿಣ ಪ್ರಾಂತದ ಸಂಚಾಲಕರಾದ ದೋ.ಕೇಶವಮೂರ್ತಿ ಪತ್ರಿಕಾ ಪ್ರಕಟನೆ ಹೊರಡಿಸಿದ್ದು, ಅದರಲ್ಲಿ ಈ ರೀತಿ ವಿವರಿಸಲಾಗಿದೆ,
ಕರಾವಳಿ ಜಿಲ್ಲೆಗಳಲ್ಲಿ ನಡೆದ ಇತ್ತೀಚಿನ ಬೆಳವಣಿಗೆಗಳು ಸಮಾಧಾನಕರವಲ್ಲ. ಹಿಂದೂ ಸಮಾಜ ಹಿಂಸೆಯನ್ನ ಎಂದಿಗೂ ಒಪ್ಪುವುದಿಲ್ಲ, ಎಂದಿಗೂ ಸಮರ್ಥಿಸುವುದಿಲ್ಲ. ಈಗ ನಡೆದಿರುವ ಘಟನೆಗಳು, ಹತ್ಯೆಗಳ ಬಗ್ಗೆ ಮತ್ತಷ್ಟು ಅನಾವಶ್ಯಕ ಚರ್ಚೆಗಳನ್ನು ಎಸಗದೆ, ಪ್ರತೀಕಾರವೂ ಪ್ರಚೋದನೆಯೂ ಇತ್ಯಾದಿಗಳ ವಿಮರ್ಶೆಗಳನ್ನ ನಿಲ್ಲಿಸಿ ಕರಾವಳಿ ಜಿಲ್ಲೆಗಳಲ್ಲಿ ಸಾಮಾಜಿಕ ಶಾಂತಿಯನ್ನು ತರುವಂತಹ ಎಲ್ಲಾ ಪ್ರಯತ್ನಗಳನ್ನು ಹಿಂದು ಜಾಗರಣ ವೇದಿಕೆ ಸ್ವಾಗತಿಸುತ್ತದೆ. ಆ ಹಿನ್ನೆಲೆಯಲ್ಲಿ ಸರ್ಕಾರ ತೆಗೆದುಕೊಳ್ಳುವ ಎಲ್ಲಾ ದಿಟ್ಟ ಕ್ರಮಗಳನ್ನು ಹಿಂದೂ ಸಮಾಜವಾಗಿ ನಾವು ಬೆಂಬಲಿಸುತ್ತೇವೆ. ಆದರೆ ಸರ್ಕಾರದ ನಿಲುವುಗಳು, ಧೋರಣೆಗಳು ಅನುಮಾನಾಸ್ಪದವಾಗಿ ಕಂಡಿದ್ದು ಅಲ್ಪಸಂಖ್ಯಾತರನ್ನು ಓಲೈಸುವ ಕಡೆಗೆ ತನ್ನ ಪಕ್ಷಪಾತಿ ನಿಲುವನ್ನು ದಿನದಿಂದ ದಿನಕ್ಕೆ ಹೆಚ್ಚಿಸುತ್ತಿರುವಂತಹ ವಾತಾವರಣ ಕಂಡುಬರುತ್ತಿದೆ. ಇದು ಕರಾವಳಿ ಜಿಲ್ಲೆಗಳಲ್ಲಿ ಶಾಂತಿಯನ್ನು ಸ್ಥಾಪಿಸುವ ಬದಲು ಶಾಂತಿ ಕದಡುವ ಕ್ರಮಗಳಾಗಿ ಪರಿವರ್ತನೆಯಾಗುವ ಸಾಧ್ಯತೆಗಳು ಕಂಡುಬರುತ್ತಿದೆ ಎಂದು ಹೇಳಿದ್ದಾರೆ.
ಸರ್ಕಾರದ ರಾಜಕೀಯ ನಿಲುವುಗಳು ಏನೇ ಇದ್ದರೂ ಕಾನೂನು ಸುವ್ಯವಸ್ಥೆಯನ್ನು ಸಾಮಾಜಿಕ ಶಾಂತಿಯನ್ನು ಪ್ರತಿಷ್ಠಾಪಿಸುವ ಹೊಣೆಗಾರಿಕೆ ಜಿಲ್ಲೆಯ ಆಡಳಿತದ್ದಾಗಿದೆ. ಈ ಜಿಲ್ಲಾಡಳಿತವು ಜಿಲ್ಲಾಧಿಕಾರಿಯಾಗಿರಬಹುದು ಅಥವಾ ಪೊಲೀಸ್ ಇಲಾಖೆಯೇ ಆಗಿರಬಹುದು ಅವರು ಪಕ್ಷಪಾತಿಯಾಗಿ ನಡೆದುಕೊಳ್ಳದೆ ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕೆನ್ನುವುದು ಭಾರತದ ಸಂವಿಧಾನದ ಆಶಯ. ಆ ಸಂವಿಧಾನದ ಆಶಯದಂತೆ ಜಿಲ್ಲಾಡಳಿತವು ಕರ್ತವ್ಯವನ್ನ ನಿರ್ವಹಿಸಬೇಕಾಗಿದೆ. ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆಯ ಹೆಸರಿನಲ್ಲಿ, ಶಾಂತಿಯ ಪ್ರತಿಷ್ಠಾಪನೆಯ ಹೆಸರಿನಲ್ಲಿ ಕೈಗೊಳ್ಳುತ್ತಿರುವ ಕ್ರಮಗಳು ಮೇಲ್ನೋಟಕ್ಕೆ ಕಾನೂನು ಬಾಹಿರವಾಗಿ ಕಂಡಿದ್ದು ಜವಾಬ್ದಾರಿಯುತ ಪೊಲೀಸ್ ಅಧಿಕಾರಿಗಳ ಹೇಳಿಕೆಗಳು ಪಕ್ಷಪಾತಿಯಾಗಿ ಕಂಡುಬರುತ್ತಲಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಹಿಂದೂ ಸಮಾಜ ಭಾವಿಸುತ್ತದೆ ಎಂದು ಅವರು ಹೇಳಿದರು.
ದಕ್ಷತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿರುವ ಪೊಲೀಸ್ ಅಧಿಕಾರಿಯೋರ್ವರೂ ಒಂದು ಕೋಮಿನ ಪರವಾಗಿ ಮತ್ತೊಂದು ಸಮುದಾಯವನ್ನು ಹತ್ತಿಕ್ಕುವ ಯತ್ನದಲ್ಲಿ ತೊಡಗಿದ್ದಾರೆಯೇ ಎಂಬ ಅನುಮಾನ ಬಹುಸಂಖ್ಯಾತ ಸಮಾಜದ್ದಾಗಿದೆ. ಈ ತೋರ್ಪಡಿಕೆಯನ್ನ, ಈ ದೃಶ್ಯವನ್ನು ಇಲಾಖೆಯು ಎಚ್ಚರಿಕೆಯಿಂದ ಗಮನಿಸಬೇಕೆಂದು ಹಿಂದು ಜಾಗರಣ ವೇದಿಕೆಯು ಆಗ್ರಹಿಸುತ್ತದೆ.
ಮನೆ ಮನೆಗಳಿಗೆ ನುಗ್ಗಿ ಸಾಮಾಜಿಕ ಕಾರ್ಯಕರ್ತರನ್ನು ಅವರ ಕುಟುಂಬ ವರ್ಗವನ್ನು ಬೆದರಿಸುವ ತಂತ್ರಕ್ಕೆ ಕೈ ಹಾಕಿರುವುದು ಸಮರ್ಥನೀಯವಲ್ಲ ಮತ್ತು ಆ ಕುರಿತು ಸ್ಪಷ್ಟನೆಯನ್ನ ಕೊಡುವ ಬರದಲ್ಲಿ ಕಮ್ಯುನಲ್ ಸಂಘಟನೆಗಳೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿರುವವರು ಎಂಬ ಪದವನ್ನು ಬಳಸಿರುವುದು ಅರ್ಥಹೀನವಾಗಿದೆ. ಯಾವ ಸಂಘಟನೆ ಕಮ್ಯುನಲ್ ಎನ್ನುವುದನ್ನು ನಿರ್ಧರಿಸುವುದಕ್ಕೆ ಅಧಿಕಾರಿಗಳು ಅನುಸರಿಸುವ ಮಾನದಂಡ ಏನು? ಎನ್ನುವುದು ಪ್ರಶ್ನೆಯಾಗಿದೆ.
ಅಲ್ಲದೇ ಕರಾವಳಿ ಜಿಲ್ಲೆಗಳ ಬಹುತೇಕ ಸಂಘಟನೆಗಳು ಕಾನೂನು ಬದ್ಧವಾದ ಸಂಘಟನೆಗಳಾಗಿದೆ. ಯಾವುದೇ ಸರ್ಕಾರಗಳು ಆ ಸಂಘಟನೆಗಳನ್ನ ನಿರ್ಬಂಧಿಸಿರುವುದಿಲ್ಲ, ನಿಷೇಧಿಸಿರುವುದಿಲ್ಲ. ಕಾನೂನು ಬಾಹಿರ ಸಂಘಟನೆ, Unlawful ಸಂಘಟನೆ ಎಂದು ಘೋಷಿಸಿರುವುದಿಲ್ಲ. ಅಂತಹ ಸಂಘಟನೆಗಳ ಕಾರ್ಯಕರ್ತರ ಮನೆಗಳಿಗೆ ಮಧ್ಯರಾತ್ರಿಯಲ್ಲಿ ನುಗ್ಗುವ ಪೊಲೀಸರು ಅನಾವಶ್ಯಕವಾದ ಬೆದರಿಕೆಯನ್ನು ಒಡ್ದುತ್ತಿದ್ದು, ಅದನ್ನ ಪ್ರಶ್ನಿಸುವವರನ್ನ ಬಂಧಿಸುವ ಮತ್ತು ಅವರ ಮೇಲೆ ಉಗ್ರ ಕಾನೂನು ಕ್ರಮ ಕೈಗೊಳ್ಳುವ ಬೆದರಿಕೆಯನ್ನು ಅಧಿಕಾರಿಯು ಬಹಿರಂಗವಾಗಿ ಒಡ್ದುತ್ತಿರುವುದು ಅವರ ಸ್ಥಾನಕ್ಕೆ ಶೋಭೆ ತರುವಂತಹದ್ದು ಆಗಿರುವುದಿಲ್ಲ.
ಉದಾಹರಣೆಗೆ ಕಡಬದಲ್ಲಿ ಕಾನೂನುಬಾಹಿರ ಸಂಘಟನೆ ಅಥವಾ ಕಮ್ಯುನಲ್ ಸಂಘಟನೆ ಎಂದು ನಿರ್ಧರಿಸಿದ್ದು ಯಾರು? ಅದಕ್ಕೆ ಇರುವ ಮಾನದಂಡ ಏನು? ಕೆಲವು ಕಡೆಗಳಲ್ಲಿ ಯಾವುದೇ ಸಂಘಟನೆಗಳೊಂದಿಗೆ ಸಂಬಂಧ, ಸಂಪರ್ಕವೇ ಇಲ್ಲದಿರುವಂತಹ ಹಿಂದೂ ಯುವಕರ ಮನೆಗಳಿಗೆ ತೆರಳುವ ಪೊಲೀಸರು ಬೆದರಿಕೆಯನ್ನು ಒಡ್ದುತ್ತಿದ್ದಾರೆ. ಜಿಪಿಎಸ್ ಫೋಟೋ ತೆಗೆಯುವ, ತಂತ್ರವನ್ನು, ಬೆದರಿಕೆಯನ್ನ ಒಡ್ದುತ್ತಿದ್ದಾರೆ. ಇದ್ಯಾವುದೂ ಕೂಡ ಸಹಿಸುವ ಕ್ರಮ ಅಲ್ಲ ಹಾಗೂ ಶಾಂತಿಯನ್ನು ಕಾನೂನು ಸುವ್ಯವಸ್ಥೆಯನ್ನು ಪ್ರತಿಷ್ಠಾಪಿಸುವ ದಾರಿ ಅಲ್ಲ ಎನ್ನುವುದನ್ನು ಹಿಂದು ಜಾಗರಣ ವೇದಿಕೆ ತಿಳಿಸಲು ಇಷ್ಟಪಡುತ್ತದೆ. ಈ ರೀತಿ ಮುಂದುವರಿದಲ್ಲಿ,ಕಾನೂನುಬಾಹಿರವಾಗಿ ಕ್ರಮಕ್ಕೆ ಕೈ ಹಾಕಿದಲ್ಲಿ ಬೇಲಿಯೇ ಎದ್ದು ಹೊಲವನ್ನು ಮೆಂದಂತೆ ಆಗುವುದು ನಿಶ್ಚಿತ, ಅದನ್ನ ಕರಾವಳಿಯ ಜಾಗೃತ ಸಮಾಜ ಸಹಿಸುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಹಿಂದು ಜಾಗರಣ ವೇದಿಕೆ ನೀಡಲು ಬಯಸುತ್ತದೆ ಎಂದು ತಿಳಿಸಿದ್ದಾರೆ.
ಮಧ್ಯರಾತ್ರಿಯಲ್ಲಿ ಪೊಲೀಸರು ಮನೆ ಮನೆಗೆ ನುಗ್ಗುವುದನ್ನು ಸಮರ್ಥಿಸುವ ಅಧಿಕಾರಿಗಳೇ, ಈ ರೀತಿಯಲ್ಲಿ ಮಧ್ಯರಾತ್ರಿಯಲ್ಲಿ ಪೊಲೀಸರ ಹೆಸರಿನಲ್ಲಿ ಮನೆಮನೆಗಳಿಗೆ ನುಗ್ಗುವುದನ್ನು ದುಷ್ಕರ್ಮಿಗಳು ದುರುಪಯೋಗಪಡಿಸಿಕೊಂಡು ಪೊಲೀಸರ ವೇಷದಲ್ಲಿ ಬಂದು ಅವರನ್ನು ಮನೆಯಿಂದ ಹೊರಗೆ ಕರೆತಂದು ಹತ್ಯೆಗೈದರೆ ಇದರ ಹೊಣೆಯನ್ನ ಯಾರು ಹೊತ್ತುಕೊಳ್ಳುತ್ತಾರೆ? ಇದೇ ಕರಾವಳಿಯ ಜಿಲ್ಲೆಯಲ್ಲಿ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಪೊಲೀಸರ ವೇಷಧರಿಸಿ ಮಧ್ಯರಾತ್ರಿ ರಾಜಕೀಯ ನಾಯಕರೊಬ್ಬರ ಮನೆಗೆ ಬಂದು ಅಪಹರಿಸಿ ಹತ್ಯೆಗೈದ ಇತಿಹಾಸ ಇನ್ನೂ ಹಸಿರಾಗಿದೆ. ED ಅಧಿಕಾರಿಗಳ ಹೆಸರಿನಲ್ಲಿ ಮನೆ ದರೋಡೆ ಯತ್ನ ನಡೆದಿರುವುದೂ ಕಣ್ಣಮುಂದಿದೆ.
ಪೊಲೀಸರ ಈ ರೀತಿಯ ವರ್ತನೆಗಳು ಹತ್ಯೆ ಮಾಡುವಂತಹ ಮತಾಂದರಿಗೆ ಪ್ರೇರಣೆ ಆಗಬಹುದು. ಈ ರೀತಿಯಲ್ಲಿ ಯಾವುದಾದರೂ ಹಿಂದುಗಳ ಹತ್ಯೆ ಆದಲ್ಲಿ ಅದರ ಹೊಣೆಯನ್ನ ಪೊಲೀಸರು ಅಥವಾ ಜಿಲ್ಲಾಡಳಿತ ಹೊತ್ತುಕೊಳ್ಳಲು ತಯಾರಿದೆಯೇ? ಇಂತಹ ಅಸಂಬದ್ಧ ಕ್ರಮಗಳನ್ನು ಕೈಗೊಂಡು ಅದನ್ನ ಸಮರ್ಥಿಸಿಕೊಳ್ಳುವ ಬದಲು ಕಾನೂನು ಬದ್ದವಾದ ಕ್ರಮಗಳಿಗೆ ಇಲಾಖೆ ಮುಂದಾಗಬೇಕೆ ಹೊರತು ಮಧ್ಯರಾತ್ರಿಗಳಲ್ಲಿ ಮನೆಗಳಿಗೆ ನುಗ್ಗುವ ಆ ಮೂಲಕ ದುಷ್ಕರ್ಮಿಗಳಿಗೆ ಉತ್ತೇಜನ ಕೊಡುವ ಕೆಲಸಕ್ಕೆ ಇಲಾಖೆ ಕೈಹಾಕಬಾರದು, ಇಂತಹ ಕಾನೂನುಬಾಹಿರ ಕ್ರಮಗಳಿಂದ ಜಿಲ್ಲಾಡಳಿತ ಹಿಂದಕ್ಕೆ ಸರಿಯಬೇಕೆಂದು ಇಲಾಖೆಯನ್ನು ಹಿಂದು ಜಾಗರಣ ವೇದಿಕೆಯು ಆಗ್ರಹಿಸುತ್ತದೆ. ಅದನ್ನು ಮೀರಿಯೂ ವರ್ತನೆಗಳು ಆರಂಭವಾದಲ್ಲಿ ಸಮಾಜವು ಅದರ ವಿರುದ್ಧ ಪ್ರಜಾಸತ್ತಾತ್ಮಕವಾದಂತಹ ಪ್ರಚಂಡ ಆಂದೋಲನಕ್ಕೆ ಕರೆ ಕೊಡುವುದು ಅನಿವಾರ್ಯವಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಹಿಂದು ಜಾಗರಣ ವೇದಿಕೆ ನೀಡಬಯಸುತ್ತದೆ.
ಮತ್ತೊಮ್ಮೆ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ವರ್ತಿಸಬೇಕು ರಾಜಕೀಯ ಪಕ್ಷಗಳ ಆಡಳಿತದ ಕೈಗೊಂಬೆ ಆಗಬಾರದೆಂದು ಆ ಮೂಲಕ ಬಹುಸಂಖ್ಯಾತ ಸಮಾಜದ ಸ್ವಾತಂತ್ರ್ಯವನ್ನ ಹತ್ತಿಕ್ಕುವ ಕ್ರಮಕ್ಕೆ ಕೈಹಾಕಬಾರದೆಂದು ಹಿಂದು ಜಾಗರಣ ವೇದಿಕೆಯು ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.
ಬಿಗ್ ನ್ಯೂಸ್
Vitla-ವಿಟ್ಲ: ಚಿಕ್ಕಪ್ಪನನ್ನು ಕತ್ತಿಯಿಂದ ಕಡಿದು ಹತ್ಯೆಗೈದ ಯುವತಿ ಬಂಧನ
ಕನ್ಯಾನ ಗ್ರಾಮದ ನಂದರಬೆಟ್ಟು ನಿವಾಸಿ ಚೆನ್ನಯ್ಯ ಪೂಜಾರಿ (45) ಅವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಆರೋಪದಲ್ಲಿ ರಿಶಿಕಾ (24) ಎಂಬ ಯುವತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ವಿಟ್ಲ: ಕನ್ಯಾನ ಗ್ರಾಮದ ನಂದರಬೆಟ್ಟು ನಿವಾಸಿ ಚೆನ್ನಯ್ಯ ಪೂಜಾರಿ (45) ಅವರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ ಆರೋಪದಲ್ಲಿ ರಿಶಿಕಾ (24) ಎಂಬ ಯುವತಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದು, ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಚೆನ್ನಯ್ಯ ಪೂಜಾರಿ ಮದ್ಯಪಾನ ಮಾಡಿ ತನ್ನ ಅಣ್ಣನ ಮಗಳಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಸಂದರ್ಭ ಯುವತಿ ಕತ್ತಿಯಿಂದ ಬೀಸಿದಾಗ ಅದು ಚೆನ್ನಯ್ಯ ಪೂಜಾರಿ ಅವರ ಎದೆಗೆ ತಾಗಿ ಗಂಭೀರ ಗಾಯಗೊಂಡಿದ್ದರು.
ಗಾಯಗೊಂಡ ಅವರನ್ನು ತಕ್ಷಣ ಆಂಬ್ಯುಲೆನ್ಸ್ ಮೂಲಕ ಪುತ್ತೂರಿಗೆ ಕರೆದೊಯ್ಯಲಾಗಿತ್ತು. ಆದರೆ, ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.
ಕುಟುಂಬದೊಳಗಿನ ಕಲಹ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಿಶಿಕಾಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಿಗ್ ನ್ಯೂಸ್
Virupaksha Bhat-ಮಹಾಲಿಂಗೇಶ್ವರ ದೇವಸ್ಥಾನದ ಕಾಮಗಾರಿಗಳಿಗೆ ಹೈಕೋರ್ಟ್ ತಡೆಯಾಜ್ಞೆ: ಅನುಮತಿಯಿಲ್ಲದ ಕಾಮಗಾರಿ, ಟೆಂಡರ್ ಪ್ರಕ್ರಿಯೆ ಮುಂದುವರಿಸದಂತೆ ಮಧ್ಯಂತರ ಆದೇಶ; ದೇವಸ್ಥಾನದ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ, ನಿಯಮಬದ್ಧ ಆಡಳಿತಕ್ಕೆ ಆಗ್ರಹ : ದೂರುದಾರ ವಿರೂಪಾಕ್ಷ ಭಟ್ ಪತ್ರಿಕಾಗೋಷ್ಟಿ
ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಪೂರ್ವಾನುಮತಿ ಪಡೆಯದೆ ಕೈಗೊಳ್ಳಲಾಗುತ್ತಿದೆ ಎನ್ನಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಟೆಂಡರ್ ಪ್ರಕ್ರಿಯೆಗಳಿಗೆ ಕರ್ನಾಟಕ ಉಚ್ಚ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ನ.23ರಂದು ನೀಡಿರುವ ಈ ಆದೇಶವು ಮುಂದಿನ ವಿಚಾರಣೆಯವರೆಗೆ ಜಾರಿಯಲ್ಲಿರಲಿದ್ದು, ಇಲಾಖಾ ನಿಯಮಗಳನ್ನು ಉಲ್ಲಂಘಿಸಿ ಯಾವುದೇ ಕಾಮಗಾರಿ ನಡೆಸದಂತೆ ದೇವಸ್ಥಾನದ ಆಡಳಿತ ಸಮಿತಿ ಹಾಗೂ ಸರಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ ಎಂದು ಮಚ್ಚಿಮಲೆ ವಿರೂಪಾಕ್ಷ ಭಟ್ ತಿಳಿಸಿದ್ದಾರೆ.
ಪುತ್ತೂರು: ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಪೂರ್ವಾನುಮತಿ ಪಡೆಯದೆ ಕೈಗೊಳ್ಳಲಾಗುತ್ತಿದೆ ಎನ್ನಲಾದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಟೆಂಡರ್ ಪ್ರಕ್ರಿಯೆಗಳಿಗೆ ಕರ್ನಾಟಕ ಉಚ್ಚ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ನ.23ರಂದು ನೀಡಿರುವ ಈ ಆದೇಶವು ಮುಂದಿನ ವಿಚಾರಣೆಯವರೆಗೆ ಜಾರಿಯಲ್ಲಿರಲಿದ್ದು, ಇಲಾಖಾ ನಿಯಮಗಳನ್ನು ಉಲ್ಲಂಘಿಸಿ ಯಾವುದೇ ಕಾಮಗಾರಿ ನಡೆಸದಂತೆ ದೇವಸ್ಥಾನದ ಆಡಳಿತ ಸಮಿತಿ ಹಾಗೂ ಸರಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ ಎಂದು ಮಚ್ಚಿಮಲೆ ವಿರೂಪಾಕ್ಷ ಭಟ್ ತಿಳಿಸಿದ್ದಾರೆ.
ಪುತ್ತೂರು ವಾರ್ತಾಭವನದಲ್ಲಿ ನ.25ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಸ್ಥಾನದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಧಾರ್ಮಿಕ ದತ್ತಿ ಇಲಾಖೆಯ ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ. ಸಮರ್ಪಕ ಅನುಮೋದನೆ ಪಡೆಯದೆ ಕಾಮಗಾರಿಗಳನ್ನು ನಡೆಸಿರುವುದು, ಹಣಕಾಸಿನ ನಿರ್ವಹಣೆಯಲ್ಲಿ ಲೋಪದೋಷಗಳು ಹಾಗೂ ದೇವಸ್ಥಾನದ ದೈನಂದಿನ ಆಡಳಿತದಲ್ಲಿ ಪಾರದರ್ಶಕತೆಯ ಕೊರತೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಕಾನೂನು ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು.
ಈ ಸಂಬಂಧ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದು, ಇಲಾಖಾ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ. ಇದೇ ವಿಚಾರವಾಗಿ ಮಚ್ಚಿಮಲೆ ವಿರೂಪಾಕ್ಷ ಭಟ್ ಮತ್ತು ದಿನೇಶ್ ಜೈನ್ ಅವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ W.P. No. 32628/2026ರಡಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿದಾರರು ಸಲ್ಲಿಸಿದ ದಾಖಲೆಗಳು ಮತ್ತು ಮನವಿಯನ್ನು ಪರಿಗಣಿಸಿರುವ ನ್ಯಾಯಾಲಯವು ನ.23ರಂದು ಮುಂದಿನ ವಿಚಾರಣೆಯವರೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ ಎಂದು ಅವರು ವಿವರಿಸಿದರು.
ಅಭಿವೃದ್ಧಿ ಸಮಿತಿ ರಚನೆ ಬಗ್ಗೆಯೂ ಆಕ್ಷೇಪ
ದೇವಸ್ಥಾನದಲ್ಲಿ ರಚಿಸಲಾಗಿರುವ ಅಭಿವೃದ್ಧಿ ಸಮಿತಿಯ ರಚನೆಯೇ ಧಾರ್ಮಿಕ ದತ್ತಿ ಇಲಾಖೆಯ ನಿಯಮಗಳಿಗೆ ಅನುಗುಣವಾಗಿಲ್ಲ ಎಂಬುದು ಅರ್ಜಿದಾರರ ಪ್ರಮುಖ ಆಕ್ಷೇಪವಾಗಿದೆ. ಇಲಾಖೆಯಿಂದ ಅನುಮೋದನೆ ಪಡೆಯದ ಜೀರ್ಣೋದ್ಧಾರ ಅಥವಾ ಅಭಿವೃದ್ಧಿ ಸಮಿತಿಯ ಹೆಸರಿನಲ್ಲಿ ಭಕ್ತರಿಂದ ಹಣ ಸಂಗ್ರಹಿಸುವುದು, ಕಾಮಗಾರಿಗಳನ್ನು ಕೈಗೊಳ್ಳುವುದು ಹಾಗೂ ಅನಧಿಕೃತ ಸಭೆಗಳನ್ನು ನಡೆಸುವುದು ನಿಯಮಬಾಹಿರವಾಗಿದೆ ಎಂದು ವಿರೂಪಾಕ್ಷ ಭಟ್ ಆರೋಪಿಸಿದರು.
ಅನುಮೋದನೆ ಪಡೆಯದ ಸಮಿತಿಯ ಹೆಸರಿನಲ್ಲಿ ಟೆಂಡರ್ ಪ್ರಕ್ರಿಯೆ ನಡೆಸಿರುವುದು ಮತ್ತು ಪತ್ರಿಕೆಗಳಲ್ಲಿ ಟೆಂಡರ್ ಪ್ರಕಟಣೆಗಳನ್ನು ನೀಡಿರುವುದಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದರು. ಇಲಾಖೆಯ ಅಧಿಕೃತ ಅನುಮೋದನೆ ಹಾಗೂ ನಿಗದಿತ ಪ್ರಕ್ರಿಯೆಗಳನ್ನು ಪಾಲಿಸದೆ ಇಂತಹ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ದೂರಿದರು.
ಉತ್ತರ ಭಾಗದ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಆಕ್ಷೇಪ
ದೇವಸ್ಥಾನದ ಉತ್ತರ ಭಾಗದ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದರ ಬಗ್ಗೆಯೂ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ. ಈ ಕಾಮಗಾರಿಗೆ ಧಾರ್ಮಿಕ ದತ್ತಿ ಇಲಾಖೆಯ ಪೂರ್ವಾನುಮತಿ ಪಡೆದಿಲ್ಲ. ಅಲ್ಲದೆ, ಇದೇ ಜಮೀನಿಗೆ ಸಂಬಂಧಿಸಿದಂತೆ ಬೇರೆ ಬೇರೆ ನ್ಯಾಯಾಲಯಗಳಲ್ಲಿ ಪ್ರಕರಣಗಳು ಬಾಕಿಯಿದ್ದು, ತಡೆಯಾಜ್ಞೆಗಳಿದ್ದರೂ ಕಾಮಗಾರಿ ಮುಂದುವರಿಸಲಾಗಿದೆ ಎಂಬುದು ಅರ್ಜಿದಾರರ ಆರೋಪವಾಗಿದೆ.
ಐದು ಕಟ್ಟೆಗಳ ತೆರವು, ನೂತನ ಶಿಲಾಮಯ ಕಟ್ಟಡ ನಿರ್ಮಾಣ
ದೇವಸ್ಥಾನದ ಹೊರಾಂಗಣದಲ್ಲಿದ್ದ ಐದು ಹಳೆಯ ಕಟ್ಟೆಗಳನ್ನು ತೆರವುಗೊಳಿಸಿ, ಧಾರ್ಮಿಕ ದತ್ತಿ ಇಲಾಖೆಯ ಅನುಮತಿ ಪಡೆಯದೆ ನೂತನ ಶಿಲಾಮಯ ಕಟ್ಟಡ ನಿರ್ಮಿಸಲಾಗಿದೆ ಎಂದು ವಿರೂಪಾಕ್ಷ ಭಟ್ ಆರೋಪಿಸಿದರು. ಈ ಕಾಮಗಾರಿಗೆ ಸಂಬಂಧಿಸಿದಂತೆ ಅನಧಿಕೃತವಾಗಿ ಹಣ ಸಂಗ್ರಹಿಸಲಾಗಿದ್ದು, ಯಾವುದೇ ಟೆಂಡರ್ ಪ್ರಕ್ರಿಯೆ ನಡೆಸದೆ ಸರಕಾರದ ನಿಯಮಾವಳಿಗಳನ್ನು ಪಾಲಿಸದೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ ಎಂದು ದೂರಿದರು.
ಇದಲ್ಲದೆ, ದೇವಸ್ಥಾನಕ್ಕೆ ಸಂಬಂಧಿಸಿದ ನವಗ್ರಹ ಗುಡಿ, ಅಯ್ಯಪ್ಪ ಸನ್ನಿಧಿ ಹಾಗೂ ನಟರಾಜ ವೇದಿಕೆ ಸಭಾಂಗಣವನ್ನು ತೆರವುಗೊಳಿಸುವ ಸಂದರ್ಭದಲ್ಲಿಯೂ ಸರಕಾರದ ನಿಯಮದಂತೆ ಟೆಂಡರ್ ಪ್ರಕ್ರಿಯೆ ಮತ್ತು ಮೌಲ್ಯಮಾಪನ ನಡೆಸಿಲ್ಲ. ಅಗತ್ಯ ಇಲಾಖಾ ಅನುಮೋದನೆಯನ್ನೂ ಪಡೆದಿಲ್ಲ ಎಂದು ಅವರು ಆರೋಪಿಸಿದರು.
ಚಿನ್ನದ ಮುಖವಾಡಕ್ಕೆ ಚಿನ್ನ ಸಂಗ್ರಹ: ಸಮರ್ಪಕ ಮಾಹಿತಿ ಇಲ್ಲವೆಂಬ ಆರೋಪ
ಶ್ರೀ ದೇವರಿಗೆ ಚಿನ್ನದ ಮುಖವಾಡ ನಿರ್ಮಿಸುವ ಉದ್ದೇಶದಿಂದ ಭಕ್ತರಿಂದ ಕಾಣಿಕೆ ರೂಪದಲ್ಲಿ ಚಿನ್ನ ಸಂಗ್ರಹಿಸಲಾಗುತ್ತಿದೆ. ಆದರೆ ಈ ಸಂಬಂಧ ಧಾರ್ಮಿಕ ದತ್ತಿ ಇಲಾಖೆಯ ಸಮರ್ಪಕ ಅನುಮತಿ ಪಡೆಯಲಾಗಿದೆಯೇ, ಆಗಮ ಪಂಡಿತರ ಅಭಿಪ್ರಾಯ ಹಾಗೂ ವರದಿ ಪಡೆಯಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಸಂಗ್ರಹಿಸಲಾದ ಚಿನ್ನದ ನಿರ್ವಹಣೆ ಮತ್ತು ಅದರ ಲೆಕ್ಕಪತ್ರಗಳ ಕುರಿತು ದೇವಸ್ಥಾನದಲ್ಲಿ ಸಮರ್ಪಕ ಮಾಹಿತಿ ಲಭ್ಯವಿಲ್ಲ ಎಂಬ ವಿಚಾರವನ್ನೂ ನ್ಯಾಯಾಲಯದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ದೇವಸ್ಥಾನದ ಆಡಳಿತ ಸಮಿತಿ ನೇಮಕಗೊಂಡ ಬಳಿಕ ನಿರ್ವಹಿಸಲಾದ ವಾರ್ಷಿಕ ಲೆಕ್ಕಪತ್ರಗಳಲ್ಲಿನ ಲೋಪದೋಷಗಳ ಬಗ್ಗೆಯೂ ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ದೇವಸ್ಥಾನದ ಆಡಳಿತದಲ್ಲಿ ಇಲಾಖಾ ನಿಯಮಗಳ ಉಲ್ಲಂಘನೆ ಹಾಗೂ ಕಾರ್ಯನಿರ್ವಹಣಾಧಿಕಾರಿಗಳ ಅಧಿಕಾರ ಬಳಕೆಯಲ್ಲಿನ ಲೋಪಗಳ ಬಗ್ಗೆಯೂ ಕಾನೂನು ಹೋರಾಟ ನಡೆಸಲಾಗುತ್ತಿದೆ ಎಂದು ಹೇಳಿದರು.
ನ್ಯಾಯಾಲಯದ ಆದೇಶ ಪಾಲನೆಗೆ ಆಗ್ರಹ
ನ್ಯಾಯಾಲಯ ನೀಡಿರುವ ಮಧ್ಯಂತರ ತಡೆಯಾಜ್ಞೆಯ ಪ್ರಕಾರ, ಮುಂದಿನ ವಿಚಾರಣೆಯವರೆಗೆ ಇಲಾಖೆಯ ಅನುಮತಿ ಇಲ್ಲದ ಕಾಮಗಾರಿಗಳನ್ನು ನಡೆಸುವಂತಿಲ್ಲ. ಈಗಾಗಲೇ ಕರೆಯಲಾಗಿರುವ ನಿಯಮಬಾಹಿರ ಟೆಂಡರ್ ಪ್ರಕ್ರಿಯೆಗಳನ್ನು ಮುಂದುವರಿಸುವಂತಿಲ್ಲ. ಅನುಮೋದನೆ ಪಡೆಯದ ಜೀರ್ಣೋದ್ಧಾರ ಸಮಿತಿಯ ಹೆಸರಿನಲ್ಲಿ ಕಾಮಗಾರಿಗಳನ್ನು ನಡೆಸಲು ಅಥವಾ ಸಭೆಗಳನ್ನು ಆಯೋಜಿಸಿ ಕಾಮಗಾರಿಗಳನ್ನು ಮುಂದುವರಿಸಲು ಅವಕಾಶವಿಲ್ಲ. ಕಾಮಗಾರಿಗಳ ಹೆಸರನ್ನು ಬದಲಾಯಿಸಿ ಆದೇಶದ ವ್ಯಾಪ್ತಿಯಿಂದ ಹೊರಬಂದು ಮುಂದುವರಿಸುವ ಪ್ರಯತ್ನವೂ ಮಾಡಬಾರದು ಎಂಬುದು ನ್ಯಾಯಾಲಯದ ಆದೇಶದ ಆಶಯವಾಗಿದೆ ಎಂದು ವಿರೂಪಾಕ್ಷ ಭಟ್ ತಿಳಿಸಿದರು.
ನ್ಯಾಯಾಲಯದ ಆದೇಶವನ್ನು ಪ್ರತಿವಾದಿಗಳು ಗೌರವಿಸಬೇಕು. ಆದೇಶದ ವ್ಯಾಪ್ತಿಗೆ ಒಳಪಡುವ ಕಾಮಗಾರಿಗಳನ್ನು ತಕ್ಷಣ ಸ್ಥಗಿತಗೊಳಿಸಿ, ಮುಂದಿನ ದಿನಗಳಲ್ಲಿ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಧಾರ್ಮಿಕ ದತ್ತಿ ಇಲಾಖೆಯ ಕಾನೂನುಬದ್ಧ ಅನುಮೋದನೆ ಮತ್ತು ಪಾರದರ್ಶಕ ಟೆಂಡರ್ ಪ್ರಕ್ರಿಯೆಯ ಮೂಲಕವೇ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ದೇವಸ್ಥಾನದ ಅಭಿವೃದ್ಧಿಗೆ ವಿರೋಧವಿಲ್ಲ
ದೇವಸ್ಥಾನದ ಅಭಿವೃದ್ಧಿಗೆ ನಮ್ಮ ಯಾವುದೇ ವಿರೋಧವಿಲ್ಲ. ದೇವಸ್ಥಾನ ಇನ್ನಷ್ಟು ಅಭಿವೃದ್ಧಿಯಾಗಬೇಕು, ಭಕ್ತರಿಗೆ ಉತ್ತಮ ಸೌಲಭ್ಯಗಳು ದೊರೆಯಬೇಕು ಎಂಬುದೇ ನಮ್ಮ ಆಶಯ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಇಲಾಖಾ ನಿಯಮಗಳನ್ನು ಮೀರಿ, ಕಾನೂನುಬಾಹಿರವಾಗಿ ಕಾಮಗಾರಿಗಳನ್ನು ನಡೆಸುವುದನ್ನು ಒಪ್ಪಲು ಸಾಧ್ಯವಿಲ್ಲ. ದೇವಸ್ಥಾನದ ಆಡಳಿತದಲ್ಲಿ ಗೊಂದಲ ಸೃಷ್ಟಿಯಾಗದೆ ಪಾರದರ್ಶಕ ವ್ಯವಸ್ಥೆ ಇರಬೇಕು. ಭಕ್ತರ ಧಾರ್ಮಿಕ ಶ್ರದ್ಧೆ ಮತ್ತು ನಂಬಿಕೆಗೆ ಧಕ್ಕೆಯಾಗದಂತೆ ದೇವಸ್ಥಾನದ ಆಡಳಿತ ನಡೆಯಬೇಕು. ಕಾನೂನುಬದ್ಧ ಅನುಮೋದನೆ, ನಿಯಮಾನುಸಾರ ಹಣಕಾಸಿನ ನಿರ್ವಹಣೆ ಹಾಗೂ ಪಾರದರ್ಶಕತೆಯೊಂದಿಗೆ ಅಭಿವೃದ್ಧಿ ಕಾರ್ಯಗಳು ನಡೆಯಬೇಕು ಎಂದು ಮಚ್ಚಿಮಲೆ ವಿರೂಪಾಕ್ಷ ಭಟ್ ಒತ್ತಾಯಿಸಿದರು.
ಅಂತರ ರಾಜ್ಯ
Chennai Jain couple-ತಿರುಪತಿ ತಿಮ್ಮಪ್ಪನಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ಚಿನ್ನ, ವಜ್ರಾಭರಣ ಕಾಣಿಕೆ ನೀಡಿದ ಚೆನ್ನೈ ಜೈನ ದಂಪತಿ..!
ಚೆನ್ನೈ ಮೂಲದ ಜೈನ ದಂಪತಿ ತಿರುಪತಿ ತಿರುಮಲ ದೇವಸ್ಥಾನದ ಶ್ರೀ ವೆಂಕಟೇಶ್ವರ ಸ್ವಾಮಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ತೂಕದ ಚಿನ್ನ ಹಾಗೂ ವಜ್ರಾಭರಣಗಳನ್ನು ಕಾಣಿಕೆಯಾಗಿ ಅರ್ಪಿಸುವ ಮೂಲಕ ಅಪಾರ ಭಕ್ತಿ ಮೆರೆದಿದ್ದಾರೆ.
ತಿರುಪತಿ: ಚೆನ್ನೈ ಮೂಲದ ಜೈನ ದಂಪತಿ ತಿರುಪತಿ ತಿರುಮಲ ದೇವಸ್ಥಾನದ ಶ್ರೀ ವೆಂಕಟೇಶ್ವರ ಸ್ವಾಮಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ತೂಕದ ಚಿನ್ನ ಹಾಗೂ ವಜ್ರಾಭರಣಗಳನ್ನು ಕಾಣಿಕೆಯಾಗಿ ಅರ್ಪಿಸುವ ಮೂಲಕ ಅಪಾರ ಭಕ್ತಿ ಮೆರೆದಿದ್ದಾರೆ.
ಚೆನ್ನೈನ ವರ್ಧಮಾನ್ ಜೈನ್ ಮತ್ತು ರಾಧಿಕಾ ಜೈನ್ ದಂಪತಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಅರ್ಚಕರು ಹಾಗೂ ಪ್ರತಿನಿಧಿಗಳಿಗೆ ಈ ಅಮೂಲ್ಯ ಆಭರಣಗಳನ್ನು ಔಪಚಾರಿಕವಾಗಿ ಹಸ್ತಾಂತರಿಸಿದರು. ವಜ್ರಖಚಿತ ಚಿನ್ನಾಭರಣಗಳನ್ನು ಒಳಗೊಂಡ ಈ ಕಾಣಿಕೆ ದೇವಾಲಯದ ಇತಿಹಾಸದಲ್ಲಿನ ಗಮನಾರ್ಹ ದಾನಗಳಲ್ಲಿ ಒಂದಾಗಿದೆ.
ಸಮಾರಂಭದಲ್ಲಿ ದಂಪತಿಯ ಭಕ್ತಿಯನ್ನು ಶ್ಲಾಘಿಸಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, 206 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಶ್ರೀ ವೆಂಕಟೇಶ್ವರ ಸ್ವಾಮಿಗೆ ಅರ್ಪಿಸಿರುವುದು ಅಪರೂಪದ ಹಾಗೂ ಅಸಾಧಾರಣ ಭಕ್ತಿಯ ಪ್ರತೀಕವಾಗಿದೆ. ದೇವರ ಮೇಲಿನ ಅಪಾರ ಭಕ್ತಿ ಮತ್ತು ದೈವಿಕ ಪ್ರೇರಣೆಯಿಂದ ಈ ದಂಪತಿ ಇಂತಹ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿರುವುದು ತಮ್ಮ ಸೌಭಾಗ್ಯ ಎಂದು ಹೇಳಿದರು.
ತಿರುಮಲವು ನಂಬಿಕೆ, ಭಕ್ತಿ ಹಾಗೂ ಆಧ್ಯಾತ್ಮಿಕ ಸಂತೃಪ್ತಿಯ ಸಂಕೇತವಾಗಿದ್ದು, ಶ್ರೀ ಕೃಷ್ಣದೇವರಾಯರ ಕಾಲದಿಂದ ಇಂದಿನವರೆಗೂ ಭಕ್ತರ ಕಾಣಿಕೆ ಮತ್ತು ಭಕ್ತಿಪರಂಪರೆ ನಿರಂತರವಾಗಿ ಮುಂದುವರಿದಿದೆ ಎಂದು ನಾಯ್ಡು ಹೇಳಿದರು. ಪಲ್ಲವರು, ಚೋಳರು, ಚೇರರು, ಪಾಂಡ್ಯರು ಹಾಗೂ ಮೈಸೂರು ಮತ್ತು ಮರಾಠಾ ಅರಸರು ಹಿಂದಿನ ಕಾಲದಲ್ಲಿ ದೇವಾಲಯಕ್ಕೆ ಬೆಲೆಬಾಳುವ ಆಭರಣಗಳು ಮತ್ತು ಕಾಣಿಕೆಗಳನ್ನು ಅರ್ಪಿಸಿ ಶ್ರೀಮಂತಗೊಳಿಸಿರುವುದನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಅಲಿಪಿರಿ ಬಾಂಬ್ ದಾಳಿಯಿಂದ ತಾವು ಪಾರಾದ ಘಟನೆಯನ್ನು ನೆನಪಿಸಿಕೊಂಡ ಮುಖ್ಯಮಂತ್ರಿ, ಶ್ರೀ ವೆಂಕಟೇಶ್ವರ ಸ್ವಾಮಿಯ ಆಶೀರ್ವಾದವೇ ತಮಗೆ ಮರುಜನ್ಮ ನೀಡಿತು ಎಂದು ಭಾವುಕರಾಗಿ ನುಡಿದರು.
ದೇವಾಲಯದ ಪಾವಿತ್ರ್ಯ ಕಾಪಾಡುವುದರ ಜೊತೆಗೆ ಗೋರಕ್ಷಣೆ, ವೈದಿಕ ಪರಂಪರೆ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವಂತೆ ಟಿಟಿಡಿಗೆ ಸೂಚಿಸಿದ ನಾಯ್ಡು, ‘ವೃಕೋ ಗೋವಿಂದಂ’ ಉಪಕ್ರಮಕ್ಕೆ ಉತ್ತೇಜನ ನೀಡುವುದಾಗಿ ತಿಳಿಸಿದರು. ಅಲ್ಲದೆ, ದೇವಾಲಯದ ಮೂಲಸೌಕರ್ಯ ವಿಸ್ತರಣೆ ಹಾಗೂ ಟಿಟಿಡಿ ಸಹಯೋಗದೊಂದಿಗೆ ಆಂಧ್ರಪ್ರದೇಶದಾದ್ಯಂತ 5,000 ದೇವಾಲಯಗಳನ್ನು ನಿರ್ಮಿಸುವ ಯೋಜನೆಯನ್ನೂ ಪ್ರಕಟಿಸಿದರು.
‘ಮಾನವ ಸೇವೆಯೇ ಮಾಧವ ಸೇವೆ’ ಎಂಬ ತತ್ವದಡಿ ಅನ್ನದಾನ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದ ಉಪಕ್ರಮಗಳನ್ನು ಸರ್ಕಾರ ಮತ್ತಷ್ಟು ಬಲಪಡಿಸಲಿದೆ. ಶ್ರೀಮಂತರು ತಮ್ಮ ಸಂಪತ್ತನ್ನು ಸಮಾಜ ಕಲ್ಯಾಣ, ಆಧ್ಯಾತ್ಮಿಕ ಕಾರ್ಯಗಳು ಹಾಗೂ ಬಡವರ ಸೇವೆಗೆ ಬಳಸುವಂತೆ ಜೈನ ದಂಪತಿಯ ದಾನವನ್ನು ಮಾದರಿಯಾಗಿ ಉಲ್ಲೇಖಿಸಿ ಮುಖ್ಯಮಂತ್ರಿ ಕರೆ ನೀಡಿದರು.
-
ನಿಧನ ವಾರ್ತೆ8 hours agoMangaluru-ಮಂಗಳೂರು: ರಸ್ತೆ ದಾಟುತ್ತಿದ್ದ 2ನೇ ತರಗತಿ ವಿದ್ಯಾರ್ಥಿಯ ಮೇಲೆ ಬಸ್ ಹರಿದು ಸಾವು
-
ಅಪರಾಧ7 hours agoPunacha-ಪುಣಚದಲ್ಲಿ ಬೈಕ್ಗೆ ಕಾರು ಡಿಕ್ಕಿ; ಸವಾರನಿಗೆ ಗಂಭೀರ ಗಾಯ – ನಿಲ್ಲಿಸದೆ ಪರಾರಿಯಾದ ಕಾರು?
-
ಅಂತರ ರಾಜ್ಯ8 hours agoChennai Jain couple-ತಿರುಪತಿ ತಿಮ್ಮಪ್ಪನಿಗೆ 206 ಕೋಟಿ ರೂ. ಮೌಲ್ಯದ 121 ಕೆ.ಜಿ. ಚಿನ್ನ, ವಜ್ರಾಭರಣ ಕಾಣಿಕೆ ನೀಡಿದ ಚೆನ್ನೈ ಜೈನ ದಂಪತಿ..!
-
ಅಪರಾಧ8 hours agoPunacha-ಪುಣಚ: ಪತ್ನಿಯನ್ನು ಕೊಲೆಗೈದು ಹೃದಯಾಘಾತವೆಂದು ಬಿಂಬಿಸಲು ಯತ್ನ: ಪತಿಗೆ 5 ವರ್ಷ ಜೈಲು..!
-
ರಾಜಕೀಯ8 hours agoKumaraswamy-ಹಳ್ಳಿಯ ಪ್ರತಿ ಹೆಣ್ಣುಮಕ್ಕಳಿಗೆ 2 ಹಸು ಉಚಿತ..! 2028ರ ಎನ್ಡಿಎ ಯೋಜನೆ ಘೋಷಿಸಿದ ಕುಮಾರಸ್ವಾಮಿ
-
ಅಪರಾಧ6 hours agoBantwal-ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಪ್ಲಾಜಾದಲ್ಲಿ ಗುಂಪುಗೂಡಿ ಗಲಾಟೆ; ಟೋಲ್ ಉಪಕರಣಗಳಿಗೆ ಹಾನಿ ಯತ್ನ – ಪ್ರಕರಣ ದಾಖಲು
-
ಬಿಗ್ ನ್ಯೂಸ್2 hours agoVitla-ವಿಟ್ಲ: ಚಿಕ್ಕಪ್ಪನನ್ನು ಕತ್ತಿಯಿಂದ ಕಡಿದು ಹತ್ಯೆಗೈದ ಯುವತಿ ಬಂಧನ
-
ಶಿಕ್ಷಣ24 hours agoPhilomena-ನ 27 ಮತ್ತು 28 ರಂದು ಸಂತ ಪಿಲೋಮಿನಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ















