ಅಂತರ ರಾಜ್ಯ
Supreme Court-ಹಳೆ ಮತದಾರರಿಗೆ ಮತ್ತೆ ಫಾರ್ಮ್-6 ಏಕೆ? ಚುನಾವಣಾ ಆಯೋಗವನ್ನು ತೀವ್ರ ತರಾಟೆಗೆತ್ತಿಕೊಂಡ ಸುಪ್ರೀಂ ಕೋರ್ಟ್
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಕೈಬಿಡುವ ವಿಚಾರವಾಗಿ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗವನ್ನು ತೀವ್ರವಾಗಿ ಪ್ರಶ್ನಿಸಿದೆ. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರು ವಿಳಾಸ ಬದಲಾಯಿಸಿದಾಗ ಹೊಸ ನೋಂದಣಿಗಾಗಿ ಬಳಸುವ ಫಾರ್ಮ್-6 ಅನ್ನು ಮತ್ತೆ ಏಕೆ ಸಲ್ಲಿಸಬೇಕು ಎಂದು ನ್ಯಾಯಪೀಠ ಪ್ರಶ್ನಿಸಿದೆ.
ಹೊಸದಿಲ್ಲಿ, ಅ.28: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ಕೈಬಿಡುವ ವಿಚಾರವಾಗಿ ಸುಪ್ರೀಂ ಕೋರ್ಟ್ ಚುನಾವಣಾ ಆಯೋಗವನ್ನು ತೀವ್ರವಾಗಿ ಪ್ರಶ್ನಿಸಿದೆ. ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರು ವಿಳಾಸ ಬದಲಾಯಿಸಿದಾಗ ಹೊಸ ನೋಂದಣಿಗಾಗಿ ಬಳಸುವ ಫಾರ್ಮ್-6 ಅನ್ನು ಮತ್ತೆ ಏಕೆ ಸಲ್ಲಿಸಬೇಕು ಎಂದು ನ್ಯಾಯಪೀಠ ಪ್ರಶ್ನಿಸಿದೆ.
ದಿಲ್ಲಿಯ ಎಸ್‌ಐಆರ್ ಪ್ರಕ್ರಿಯೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೋಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠ ನಡೆಸಿತು.
ವಿಳಾಸ ಬದಲಾವಣೆಗೆ ಫಾರ್ಮ್-8 ಬಳಸಬಹುದಲ್ಲವೇ?
2026ರ ಮತದಾರರ ಪಟ್ಟಿಯಲ್ಲಿ ಈಗಾಗಲೇ ಹೆಸರು ಹೊಂದಿದ್ದು, ಬಳಿಕ ವಿಳಾಸ ಬದಲಾಯಿಸಿರುವವರಿಗೂ ಹೊಸ ಮತದಾರರಂತೆ ಫಾರ್ಮ್-6 ಭರ್ತಿ ಮಾಡಲು ಸೂಚಿಸುತ್ತಿರುವುದೇಕೆ ಎಂದು ಮುಖ್ಯ ನ್ಯಾಯಮೂರ್ತಿ ಪ್ರಶ್ನಿಸಿದರು. ಇಂತಹ ಸಂದರ್ಭಗಳಲ್ಲಿ ವಿಳಾಸ ಬದಲಾವಣೆಗೆ ಸಂಬಂಧಿಸಿದ ಫಾರ್ಮ್-8 ಬಳಸಲು ಅವಕಾಶ ನೀಡಬಹುದಲ್ಲವೇ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದರು.
ಫಾರ್ಮ್-6, 7 ಮತ್ತು 8ಗಳು ನಿಗದಿತ ನಮೂನೆಗಳಾಗಿದ್ದು, ಅವುಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂಬುದನ್ನೂ ನ್ಯಾಯಪೀಠ ಉಲ್ಲೇಖಿಸಿತು.
ಕಾರ್ಮಿಕರ ಹೆಸರು ಕೈಬಿಡುವುದು ಸರಿಯಲ್ಲ
ಮಹಾನಗರಗಳಲ್ಲಿ ದಿನಗೂಲಿ ಕಾರ್ಮಿಕರು ಹಾಗೂ ವ್ಯಾಪಾರಿಗಳು ಉದ್ಯೋಗದ ಕಾರಣದಿಂದ ಆಗಾಗ್ಗೆ ತಮ್ಮ ವಾಸಸ್ಥಳ ಬದಲಾಯಿಸುತ್ತಿರುತ್ತಾರೆ. ಇಂತಹವರು ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಕೆಲಸದ ನಿಮಿತ್ತ ಹೊರಗಿರಬಹುದು. ಈ ಕಾರಣಕ್ಕೆ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಸಂಪೂರ್ಣವಾಗಿ ಕೈಬಿಡುವುದು ಸೂಕ್ತವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ನ್ಯಾಯಮೂರ್ತಿ ಜೋಯ್‌ಮಾಲ್ಯ ಬಾಗ್ಚಿ ಅವರು ಮತದಾನದ ಹಕ್ಕಿನ ಮಹತ್ವವನ್ನು ಒತ್ತಿಹೇಳಿದರು. ಬಿಎಲ್‌ಒಗಳು ಮನೆಗೆ ಭೇಟಿ ನೀಡಿದಾಗ ಎನ್ಯೂಮರೇಷನ್ ನಮೂನೆ ನೀಡಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯ ಮತದಾನದ ಹಕ್ಕನ್ನು ಶಾಶ್ವತವಾಗಿ ಕಸಿದುಕೊಳ್ಳಬಹುದೇ ಎಂದು ಪ್ರಶ್ನಿಸಿದರು.
ಫಾರ್ಮ್ ಸಲ್ಲಿಕೆ ಸರಳಗೊಳಿಸಲು ಸೂಚನೆ
ಸದ್ಯ ಚುನಾವಣೆಗಳು ಇಲ್ಲದಿರುವುದರಿಂದ ಅಕ್ಟೋಬರ್ 30ರ ಗಡುವನ್ನು ಕಟ್ಟುನಿಟ್ಟಾಗಿ ಪರಿಗಣಿಸಬಾರದು ಎಂದು ನ್ಯಾಯಪೀಠ ತಿಳಿಸಿತು. ಮತದಾರರು ಫಾರ್ಮ್-6 ಮತ್ತು ಫಾರ್ಮ್-8 ಅನ್ನು ಸುಲಭವಾಗಿ ಸಲ್ಲಿಸಲು ಸೂಕ್ತ ಕಾರ್ಯವಿಧಾನ ರೂಪಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತು.
ಅಂತರ ರಾಜ್ಯ
Mobile charging-ರೈಲು ಪ್ರಯಾಣಿಕರೇ ಗಮನಿಸಿ: ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಮೊಬೈಲ್ ಚಾರ್ಜಿಂಗ್‌ಗೆ ನಿರ್ಬಂಧ
ರೈಲಿನಲ್ಲಿ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್ ಸ್ಫೋಟಗೊಂಡ ಘಟನೆ ಬಳಿಕ, ಬೆಂಕಿ ಅವಘಡಗಳ ಅಪಾಯ ತಡೆಯುವ ಉದ್ದೇಶದಿಂದ ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ರೈಲು ಬೋಗಿಗಳಲ್ಲಿ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಚಾರ್ಜ್ ಮಾಡುವುದರ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರೈಲ್ವೆ ಮಂಡಳಿ ಎಲ್ಲ ರೈಲ್ವೆ ವಲಯಗಳಿಗೆ ನಿರ್ದೇಶನ ನೀಡಿದೆ.
ಹೊಸದಿಲ್ಲಿ, ಅ.28: ರೈಲಿನಲ್ಲಿ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್ ಸ್ಫೋಟಗೊಂಡ ಘಟನೆ ಬಳಿಕ, ಬೆಂಕಿ ಅವಘಡಗಳ ಅಪಾಯ ತಡೆಯುವ ಉದ್ದೇಶದಿಂದ ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ರೈಲು ಬೋಗಿಗಳಲ್ಲಿ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಚಾರ್ಜ್ ಮಾಡುವುದರ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರೈಲ್ವೆ ಮಂಡಳಿ ಎಲ್ಲ ರೈಲ್ವೆ ವಲಯಗಳಿಗೆ ನಿರ್ದೇಶನ ನೀಡಿದೆ.
ಅಕ್ಟೋಬರ್ 26ರಂದು ಹೊರಡಿಸಿದ ಪತ್ರದಲ್ಲಿ, ದಕ್ಷಿಣ ಪೂರ್ವ ರೈಲ್ವೆ ವಲಯದಲ್ಲಿ ನಡೆದ ಘಟನೆಯೊಂದರಲ್ಲಿ ನಿಗದಿತ ಸಮಯದಲ್ಲಿ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸ್ವಿಚ್ ಆಫ್ ಮಾಡಲು ಸಿಬ್ಬಂದಿ ವಿಫಲರಾಗಿದ್ದರು. ಈ ವೇಳೆ ಚಾರ್ಜ್‌ಗೆ ಇಡಲಾಗಿದ್ದ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್ ಸ್ಫೋಟಗೊಂಡಿತ್ತು ಎಂದು ರೈಲ್ವೆ ಮಂಡಳಿ ತಿಳಿಸಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಂಡಳಿ, ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಕಡ್ಡಾಯವಾಗಿ ಆಫ್ ಮಾಡುವುದನ್ನು ಖಚಿತಪಡಿಸಿಕೊಳ್ಳುವಂತೆ ಸಂಬಂಧಪಟ್ಟ ಸಿಬ್ಬಂದಿಗೆ ಸೂಚನೆ ನೀಡಲು ಎಲ್ಲ ರೈಲ್ವೆ ವಲಯಗಳಿಗೆ ನಿರ್ದೇಶಿಸಿದೆ.
ನಿಯಮ ಪಾಲನೆಗೆ ಹಠಾತ್ ತಪಾಸಣೆ
ಚಾರ್ಜಿಂಗ್ ನಿಷೇಧದ ನಿಯಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಂಬಂಧಪಟ್ಟ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಬೇಕು ಎಂದು ಮಂಡಳಿ ಸೂಚಿಸಿದೆ. ಅಲ್ಲದೆ, ಅಧಿಕಾರಿಗಳು ಮತ್ತು ಮೇಲ್ವಿಚಾರಕರು ಹಠಾತ್ ತಪಾಸಣೆ ನಡೆಸುವ ಮೂಲಕ ನಿಯಮ ಪಾಲನೆಯಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಲಾಗಿದೆ.
2014ರಲ್ಲೇ ಹೊರಡಿಸಲಾಗಿತ್ತು ಆದೇಶ
2013ರಲ್ಲಿ ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗದ ಹಜೂರ್ ಸಾಹಿಬ್ ನಾಂದೇಡ್–ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್‌ನ ಎಸಿ 3-ಟೈರ್ ಬೋಗಿಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಈ ಘಟನೆಯ ಬಳಿಕ 2014ರ ಜೂನ್‌ನಲ್ಲಿ ರೈಲ್ವೆ ಮಂಡಳಿಯು ಎಸಿ ಬೋಗಿಗಳಲ್ಲಿ ರಾತ್ರಿ 11ರಿಂದ ಬೆಳಗ್ಗೆ 5ರವರೆಗೆ ಚಾರ್ಜಿಂಗ್ ಪಾಯಿಂಟ್‌ಗಳನ್ನು ಆಫ್ ಮಾಡುವಂತೆ ಆದೇಶಿಸಿತ್ತು.
ಇದೀಗ ಪವರ್ ಬ್ಯಾಂಕ್ ಸ್ಫೋಟದ ಘಟನೆ ಹಿನ್ನೆಲೆಯಲ್ಲಿ, ಈಗಾಗಲೇ ಜಾರಿಯಲ್ಲಿರುವ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಲ್ಲ ರೈಲ್ವೆ ವಲಯಗಳಿಗೆ ಮತ್ತೊಮ್ಮೆ ಸೂಚನೆ ನೀಡಲಾಗಿದೆ.
ಅಂತರ ರಾಜ್ಯ
Nagpur-RSS ಭದ್ರಕೋಟೆ ನಾಗ್ಪುರದಲ್ಲಿ ಬಿಜೆಪಿಗೆ ಶಾಕ್ : ಪದವೀಧರ ಕ್ಷೇತ್ರ ಕಾಂಗ್ರೆಸ್ ಪಾಲು
ಮಹಾರಾಷ್ಟ್ರ ವಿಧಾನ ಪರಿಷತ್‌ನ ನಾಗಪುರ ವಿಭಾಗದ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿರುವ ಪ್ರದೇಶದಲ್ಲಿ ಬಿಜೆಪಿಗೆ ಆಘಾತ ನೀಡಿದೆ.
ನಾಗಪುರ: ಮಹಾರಾಷ್ಟ್ರ ವಿಧಾನ ಪರಿಷತ್‌ನ ನಾಗಪುರ ವಿಭಾಗದ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಸತತ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿರುವ ಪ್ರದೇಶದಲ್ಲಿ ಬಿಜೆಪಿಗೆ ಆಘಾತ ನೀಡಿದೆ.
ಸುದೀರ್ಘ ಮತ ಎಣಿಕೆ ಪ್ರಕ್ರಿಯೆಯ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಅಭಿಜಿತ್ ಗೋವಿಂದರಾವ್ ವಂಜಾರಿ ಅವರು ಬಿಜೆಪಿಯ ಸುಧಾಕರ್ ಕೊಣ್ಣೆ ಅವರನ್ನು 3,271 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ತವರು ನಗರವಾಗಿರುವ ನಾಗಪುರವು ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರತಿನಿಧಿಸುವ ಲೋಕಸಭಾ ಕ್ಷೇತ್ರವೂ ಆಗಿದೆ. ಅಲ್ಲದೆ, ಆರೆಸ್ಸೆಸ್‌ನ ಕೇಂದ್ರ ಕಚೇರಿಯೂ ಇದೇ ನಗರದಲ್ಲಿದೆ. ಬಿಜೆಪಿ ಹಾಗೂ ಆರೆಸ್ಸೆಸ್ ಪ್ರಬಲ ಹಿಡಿತ ಹೊಂದಿರುವ ಪ್ರದೇಶದಲ್ಲಿ ಕಾಂಗ್ರೆಸ್ ಸಾಧಿಸಿರುವ ಈ ಗೆಲುವು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ನಾಲ್ಕು ರಾಜ್ಯಗಳ ಎಂಎಲ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮೊದಲ ಗೆಲುವು
ಕರ್ನಾಟಕ, ಬಿಹಾರ, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರ ಸೇರಿದಂತೆ ನಾಲ್ಕು ರಾಜ್ಯಗಳ ಒಟ್ಟು 28 ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಈ ಗೆಲುವಿನೊಂದಿಗೆ ತನ್ನ ಖಾತೆ ತೆರೆದಿದೆ.
ವಕೀಲ ಹಾಗೂ ಶಿಕ್ಷಣ ತಜ್ಞರಾಗಿರುವ ಅಭಿಜಿತ್ ವಂಜಾರಿ ಅವರು 2020ರಲ್ಲಿಯೂ ನಾಗಪುರ ಪದವೀಧರ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಇದೀಗ ಸತತ ಎರಡನೇ ಬಾರಿಗೆ ಆಯ್ಕೆಯಾಗುವ ಮೂಲಕ ಮಹಾರಾಷ್ಟ್ರ ವಿಧಾನ ಪರಿಷತ್‌ನಲ್ಲಿ ಮತ್ತೊಂದು ಅವಧಿಗೆ ಪ್ರವೇಶ ಪಡೆದಿದ್ದಾರೆ.
ಕಾಂಗ್ರೆಸ್, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಹಾಗೂ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಒಳಗೊಂಡ ಪ್ರತಿಪಕ್ಷಗಳ ಮಹಾವಿಕಾಸ್ ಅಘಾಡಿ (ಎಂವಿಎ) ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿಯಾಗಿ ವಂಜಾರಿ ಕಣಕ್ಕಿಳಿದಿದ್ದರು.
ಮತ ಎಣಿಕೆ ವೇಳೆ ಘರ್ಷಣೆ
ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ವಿರುದ್ಧ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಮತ ಎಣಿಕೆ ನಡೆಯುತ್ತಿದ್ದ ಮಾನಕಾಪುರ ಒಳಾಂಗಣ ಕ್ರೀಡಾಂಗಣದ ಹೊರಭಾಗದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆಯೂ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಿದರು.
ಮತದಾರರು ನಮ್ಮ ಕೈಹಿಡಿದರು: ವಂಜಾರಿ
ಗೆಲುವಿನ ಬಳಿಕ ಅಕ್ಟೋಬರ್ 28ರಂದು ಪ್ರತಿಕ್ರಿಯಿಸಿದ ಅಭಿಜಿತ್ ವಂಜಾರಿ, ನಾಗಪುರದಲ್ಲಿ ಬಿಜೆಪಿ ತನ್ನ ಎಲ್ಲ ನಾಯಕರು ಹಾಗೂ ಸಂಪನ್ಮೂಲಗಳನ್ನು ಬಳಸಿಕೊಂಡು ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸಿತ್ತು. ಆದರೂ ಮತದಾರರು ಕಾಂಗ್ರೆಸ್ ಪರ ನಿಂತಿದ್ದಾರೆ ಎಂದು ಹೇಳಿದರು.
ಬಿಜೆಪಿ ತನ್ನ ಸಂಪೂರ್ಣ ಶಕ್ತಿಯನ್ನು ಪ್ರಯೋಗಿಸಿತ್ತು. ಪಕ್ಷದ ಎಲ್ಲ ಪ್ರಮುಖ ನಾಯಕರು ನಾಗಪುರದಲ್ಲಿಯೇ ಬೀಡುಬಿಟ್ಟಿದ್ದರು. ಇಷ್ಟೆಲ್ಲ ಪ್ರಯತ್ನಗಳ ನಡುವೆಯೂ ಮತದಾರರು ನಮ್ಮನ್ನು ಬೆಂಬಲಿಸಿದ್ದಾರೆ ಎಂದು ವಂಜಾರಿ ಸಂತಸ ವ್ಯಕ್ತಪಡಿಸಿದರು.
ಅಂತರ ರಾಜ್ಯ
High Court-ಅನ್ಯಧರ್ಮದವರಿಗೆ ಹಿಂದೂ ದೇಗುಲ ಪ್ರವೇಶ ನಿರ್ಬಂಧ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು
ಅನ್ಯ ಧರ್ಮದ ಗುರುತುಗಳನ್ನು ಧರಿಸಿದ ಹಿಂದೂಯೇತರರು ಹಾಗೂ ದೇವರ ಮೇಲೆ ಭಕ್ತಿ ಅಥವಾ ಗೌರವವಿಲ್ಲದವರನ್ನು ಆಗಮ ಶಾಸ್ತ್ರ ಪಾಲಿಸುವ ದೇವಾಲಯಗಳಿಗೆ ಪ್ರವೇಶಿಸಲು ಅನುಮತಿಸಬಾರದು ಎಂದು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.
ಮಧುರೈ, ಅ.28: ಅನ್ಯ ಧರ್ಮದ ಗುರುತುಗಳನ್ನು ಧರಿಸಿದ ಹಿಂದೂಯೇತರರು ಹಾಗೂ ದೇವರ ಮೇಲೆ ಭಕ್ತಿ ಅಥವಾ ಗೌರವವಿಲ್ಲದವರನ್ನು ಆಗಮ ಶಾಸ್ತ್ರ ಪಾಲಿಸುವ ದೇವಾಲಯಗಳಿಗೆ ಪ್ರವೇಶಿಸಲು ಅನುಮತಿಸಬಾರದು ಎಂದು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.
ಮಧುರೈಯ ಕೆ. ತಂಗಂ ವೆಂಕಟೇಶ್ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಈ ತೀರ್ಪು ನೀಡಿರುವ ಮದ್ರಾಸ್ ಹೈಕೋರ್ಟ್ ವಿಭಾಗೀಯ ಪೀಠವು, ದೇವಾಲಯದ ಗೌರವ ಪಾಲಿಸುವ ಒಪ್ಪಂದಕ್ಕೆ ಸಹಿ ಹಾಕದವರನ್ನು ಧ್ವಜಸ್ತಂಭ ದಾಟಲು ಬಿಡಬಾರದು. ಇಂತಹ ಪ್ರವೇಶದಿಂದ ದೇಗುಲದ ಪಾವಿತ್ರ್ಯಕ್ಕೆ ಧಕ್ಕೆ ಉಂಟಾಗುತ್ತದೆ ಎಂದಿದೆ.
ಆದರೆ ಇದು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ, ಶಿರಡಿ ಸಾಯಿಬಾಬಾ ದೇಗುಲಕ್ಕೆ ಅನ್ವಯಿಸುವುದಿಲ್ಲ. ಏಕೆಂದರೆ ಈ ದೇಗುಲಗಳು ಧರ್ಮ ಮೀರಿ ಭಕ್ತರನ್ನು ಹೊಂದಿದ್ದು, ಆಗಮ ಶಾಸ್ತ್ರದಡಿಯೂ ಬರುವುದಿಲ್ಲ. ಆಗಮ ಶಾಸ್ತ್ರದಡಿ ನಿಯಮ ಪಾಲಿಸುವ ದೇವಸ್ಥಾನಗಳಿಗೆ ಈ ನಿಯಮ ಅನ್ವಯಿಸುತ್ತದೆ ಎಂದು ಪೀಠ ಸ್ಪಷ್ಟಪಡಿಸಿದೆ.
ಇದೇ ವೇಳೆ ಮಧುರೈಯ ಟಿವಿಕೆ ಶಾಸಕ ಬದ್ರುದ್ದೀನ್ ಮುಸ್ತಫಾ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಪೀಠ, ಪರಿಶೀಲನೆಯ ಹೆಸರಿನಲ್ಲಿ ಮಧುರೈ ಮೀನಾಕ್ಷಿ ದೇವಾಲಯ ವನ್ನು ಪ್ರವೇಶಿಸಿದ್ದ ಮುಸ್ತಫಾ, ಶಾಸಕನಾಗಿ ತನಗೆ ಪ್ರವೇಶದ ಹಕ್ಕಿದೆ ಎಂದಿದ್ದರು.
ಅಲ್ಲದೆ ಕುಂಭಾಭಿಷೇಕದ ಸಂದರ್ಭದಲ್ಲೂ ಗೋಪುರದ ಬಳಿ ತೆರಳಿದ್ದರು. ಇದೇ ಶಾಸಕ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದಿರುವುದು ವಿಪರ್ಯಾಸ ಎಂದಿದೆ. ಅಲ್ಲದೆ ಕ್ರೈಸ್ತ ಧರ್ಮೀಯರಾದ ಸಿಎಂ ವಿಜಯ್ ನಿಗದಿತ ಒಪ್ಪಂದಕ್ಕೆ ಸಹಿ ಹಾಕದೆ ತಿರುಚೆಂದೂರು ದೇಗುಲಕ್ಕೆ ಪ್ರವೇಶಿಸಿದ್ದನ್ನೂ ಗಮನಿಸಿದ್ದೇವೆ. ಆದರೆ ಅದೇ ವಿಜಯ್, ಮೀನಾಕ್ಷಿ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸುವಾಗ ದೇಗುಲದ ಒಪ್ಪಂದಕ್ಕೆ ಸಹಿ ಹಾಕಿದ್ದು, ಅದನ್ನು ನಾವು ಶ್ಲಾಘಿಸುತ್ತೇವೆ. ಕ್ರೈಸ್ತ ಧರ್ಮದವರಾದ ಸಿಎಂ ವಿಜಯ್ ಅವರನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ಕೇಳಲಾಗಿಲ್ಲ. ದೇವರ ಮೇಲಿನ ಅವರ ಭಕ್ತಿಯನ್ನು ದೃಢೀಕರಿಸಲು ಮಾತ್ರ ಕೇಳಲಾಯಿತು ಎಂದು ಪೀಠ ಹಲವು ಉದಾಹರಣೆಗಳನ್ನು ನೀಡಿದೆ.
-
ಮಂಗಳೂರು22 hours ago
ಫರಂಗಿಪೇಟೆಯಲ್ಲಿ ಸ್ಟುಡಿಯೋ ಮಾಲೀಕನನ್ನು ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ ಕೇಸ್: ನಾಲ್ವರಿಗೆ 7 ವರ್ಷ ಜೈಲು ಶಿಕ್ಷೆ
-
ದಕ್ಷಿಣ ಕನ್ನಡ10 hours ago
ಕೆದಿಲ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ₹6.86 ಕೋಟಿ ವಂಚನೆ ಆರೋಪ: ಕಾರ್ಯನಿರ್ವಾಹಣಾಧಿಕಾರಿ ಹಾಗೂ ಮಹಿಳೆ ವಿರುದ್ಧ FIR
-
ಅಪರಾಧ8 hours agoPuttur-ಪುತ್ತೂರು : ಕಾಲೇಜ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ದೂರು: ಪ್ರಕರಣ ದಾಖಲು
-
ಮಂಗಳೂರು8 hours agoSoujanya Case-Big Breaking: ಸೌಜನ್ಯ ಮರುತನಿಖೆಯಲ್ಲಿ ಮಹತ್ವದ ಬೆಳವಣಿಗೆ : SIT ವಿಚಾರಣೆಗೆ ಆಗಮಿಸಿದ ಎಸ್ಐ ಯೋಗೀಶ್ – ಸಿಐಡಿ ಡಿವೈಎಸ್ಪಿ ರುದ್ರಮುನಿ – ಭಾಸ್ಕರ್ ರೈ
-
ಅಂತರ ರಾಜ್ಯ8 hours agoHigh Court-ಅನ್ಯಧರ್ಮದವರಿಗೆ ಹಿಂದೂ ದೇಗುಲ ಪ್ರವೇಶ ನಿರ್ಬಂಧ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು
-
ನಿಧನ ವಾರ್ತೆ7 hours agoUppinangadi-ತೆಂಗಿನಕಾಯಿ ಕೀಳಲು ಉಪ್ಪಿನಂಗಡಿಯಿಂದ ಕರೆದೊಯ್ದ ಕಾರ್ಮಿಕ ಶಿವಮೊಗ್ಗದಲ್ಲಿ ನಿಗೂಢ ಸಾವು; ದೂರು ದಾಖಲು
-
ಅಪರಾಧ7 hours agoPuttur-ಪುತ್ತೂರು: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ; ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
-
ಸ್ಥಳೀಯ8 hours agoSIT investigation-ಧರ್ಮಸ್ಥಳ ಎಸ್ಐಟಿ ತನಿಖೆ : ಅಸಹಜ ಸಾವು ,ನಾಪತ್ತೆ ಪ್ರಕರಣಗಳ ತನಿಖೆ : ಎಸ್ಐಟಿ ವ್ಯಾಪ್ತಿ ವಿಸ್ತರಣೆಗೆ ಸರ್ಕಾರಕ್ಕೆ ಒತ್ತಡ ತರಲು ಶಾಸಕ ಹರೀಶ್ ಪೂಂಜಾಗೆ ಮನವಿ..!


















