ನಿಧನ ವಾರ್ತೆ
British businessman-ಲಿಂಗ ವರ್ಧನೆ ಶಸ್ತ್ರಚಿಕಿತ್ಸೆಗೊಳಗಾದ ಬ್ರಿಟಿಷ್ ಉದ್ಯಮಿ ಸಾವು; 7 ಕೋಟಿ ಮೌಲ್ಯದ ಚಿನ್ನದ ಶವಪೆಟ್ಟಿಗೆಯಲ್ಲಿ ಅಂತ್ಯಕ್ರಿಯೆ..!
ಬ್ರಿಟಿಷ್-ನೈಜೀರಿಯನ್ ಮೂಲದ ಖ್ಯಾತ ಉದ್ಯಮಿ ಮತ್ತು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಇಗೋ ‘ಟೈನಿ’ ಉಬಿರಿಬೋ (43) ಅವರು ಥೈಲ್ಯಾಂಡ್‌ನಲ್ಲಿ ಲಿಂಗ ವರ್ಧನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬೆನ್ನಲ್ಲೇ ಸಂಭವಿಸಿದ ವೈದ್ಯಕೀಯ ಅನಾಹುತದಿಂದ ಮೃತಪಟ್ಟಿದ್ದಾರೆ. ಆದರೆ, ಅವರ ಸಾವಿಗಿಂತ ಹೆಚ್ಚಾಗಿ ಅವರ ಅಂತ್ಯಸಂಸ್ಕಾರಕ್ಕೆ ಬಳಸಲಾದ ಭವ್ಯವಾದ ಚಿನ್ನದ ಶವಪೆಟ್ಟಿಗೆ ಈಗ ವಿಶ್ವದಾದ್ಯಂತ ಸುದ್ದಿಯಾಗಿದೆ.
ಲಂಡನ್: ಬ್ರಿಟಿಷ್-ನೈಜೀರಿಯನ್ ಮೂಲದ ಖ್ಯಾತ ಉದ್ಯಮಿ ಮತ್ತು ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಇಗೋ ‘ಟೈನಿ’ ಉಬಿರಿಬೋ (43) ಅವರು ಥೈಲ್ಯಾಂಡ್‌ನಲ್ಲಿ ಲಿಂಗ ವರ್ಧನೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಬೆನ್ನಲ್ಲೇ ಸಂಭವಿಸಿದ ವೈದ್ಯಕೀಯ ಅನಾಹುತದಿಂದ ಮೃತಪಟ್ಟಿದ್ದಾರೆ. ಆದರೆ, ಅವರ ಸಾವಿಗಿಂತ ಹೆಚ್ಚಾಗಿ ಅವರ ಅಂತ್ಯಸಂಸ್ಕಾರಕ್ಕೆ ಬಳಸಲಾದ ಭವ್ಯವಾದ ಚಿನ್ನದ ಶವಪೆಟ್ಟಿಗೆ ಈಗ ವಿಶ್ವದಾದ್ಯಂತ ಸುದ್ದಿಯಾಗಿದೆ.
ಏನಿದು ಘಟನೆ?:
ವರದಿಯ ಪ್ರಕಾರ, ಉಬಿರಿಬೋ ಅವರು ಮಾರ್ಚ್ 5 ರಂದು ತಮ್ಮ ಪತ್ನಿಯೊಂದಿಗೆ ಥೈಲ್ಯಾಂಡ್‌ನ ಬ್ಯಾಂಕಾಕ್‌ಗೆ ಪ್ರವಾಸ ತೆರಳಿದ್ದರು. ಅಲ್ಲಿನ ಕ್ಲಿನಿಕ್ ಒಂದರಲ್ಲಿ ಲಿಂಗ ವರ್ಧನೆಗಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಈ ವೇಳೆ ಅವರಿಗೆ ಹಯಾಲೂರಿನಿಕ್ ಆಸಿಡ್ ಮತ್ತು ಲಿಡೋಕೇನ್ ಚುಚ್ಚುಮದ್ದು ನೀಡಲಾಗಿತ್ತು.
ಚಿಕಿತ್ಸೆಯ ನಂತರ ದಂಪತಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದಾಗ, ಉಬಿರಿಬೋ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯ ಸುಖುಟ್ವಿಟ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲೇ ಅವರ ಸ್ಥಿತಿ ಗಂಭೀರವಾಗಿತ್ತು. ವೈದ್ಯರು ಪರೀಕ್ಷೆ ನಡೆಸುವ ಮೊದಲೇ ಅವರು ಕೊನೆಯುಸಿರೆಳೆದಿದ್ದಾರೆ.
ಸಾವಿಗೆ ಕಾರಣವೇನು?:
ಶಸ್ತ್ರಚಿಕಿತ್ಸೆಯ ನಂತರ ರಕ್ತ ಹೆಪ್ಪುಗಟ್ಟಿ ಶ್ವಾಸಕೋಶದ ರಕ್ತನಾಳಗಳು ಕಟ್ಟಿಕೊಳ್ಳುವ ‘ಪಲ್ಮನರಿ ಎಂಬೋಲಿಸಮ್’ (Pulmonary Embolism) ಸಮಸ್ಯೆಯಿಂದಾಗಿ ಅವರು ಮೃತಪಟ್ಟಿದ್ದಾರೆ ಎಂದು ಲಂಡನ್‌ನ ಕೊರೊನರ್ ತನಿಖಾ ವರದಿ ದೃಢಪಡಿಸಿದೆ.
7 ಕೋಟಿಯ ಶವಪೆಟ್ಟಿಗೆ:
ಉದ್ಯಮಿ ಉಬಿರಿಬೋ ಅವರ ನಿಧನದ ನಂತರ, ಅವರ ಪಾರ್ಥಿವ ಶರೀರವನ್ನು ಲಂಡನ್‌ಗೆ ತರಲಾಗಿತ್ತು. ಅಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಸುಮಾರು $745,000 (ಅಂದಾಜು ₹7.03 ಕೋಟಿ) ಮೌಲ್ಯದ ಚಿನ್ನದ ಲೇಪಿತ ಶವಪೆಟ್ಟಿಗೆಯನ್ನು ಬಳಸಲಾಗಿತ್ತು. ಈ ಭವ್ಯ ಅಂತ್ಯಕ್ರಿಯೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.
ಲಿಂಗ ವರ್ಧನೆ ಶಸ್ತ್ರಚಿಕಿತ್ಸೆ (Penile Enlargement Surgery) ಎಂದರೆ ಪುರುಷರ ಜನನಾಂಗದ ಗಾತ್ರ ಅಥವಾ ಉದ್ದವನ್ನು ಹೆಚ್ಚಿಸಲು ಮಾಡಿಸಿಕೊಳ್ಳುವ ಕಾಸ್ಮೆಟಿಕ್ ಸರ್ಜರಿಯಾಗಿದೆ. ಆದರೆ ಇಂತಹ ಶಸ್ತ್ರಚಿಕಿತ್ಸೆಗಳು ಕೆಲವೊಮ್ಮೆ ಪ್ರಾಣಕ್ಕೆ ಕಂಟಕವಾಗುವ ಸಾಧ್ಯತೆ ಇರುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ
ನಿಧನ ವಾರ್ತೆ
Puttur-ಮುಕ್ರಂಪಾಡಿಯಲ್ಲಿ ಸ್ಕೂಟರ್–ರಿಕ್ಷಾ ಡಿಕ್ಕಿ: ಪುತ್ತೂರು ಅಂಚೆ ಇಲಾಖೆ ಮಹಿಳಾ ಸಿಬ್ಬಂದಿ ಮೃತ್ಯು
ಪುತ್ತೂರು ನಗರದ ಮುಕ್ರಂಪಾಡಿಯಲ್ಲಿ ಸ್ಕೂಟರ್ ಮತ್ತು ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಅಂಚೆ ಇಲಾಖೆಯ ಮಹಿಳಾ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಮೃತರನ್ನು ಮಮತಾ ಎಂದು ಗುರುತಿಸಲಾಗಿದೆ. ಇವರು ಪುತ್ತೂರಿನ ಅಂಚೆ ಇಲಾಖೆಯಲ್ಲಿ ಪೋಸ್ಟಲ್ ಅಸಿಸ್ಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಪುತ್ತೂರು: ನಗರದ ಮುಕ್ರಂಪಾಡಿಯಲ್ಲಿ ಸ್ಕೂಟರ್ ಮತ್ತು ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಅಂಚೆ ಇಲಾಖೆಯ ಮಹಿಳಾ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ.
ಮೃತರನ್ನು ಮಮತಾ ಎಂದು ಗುರುತಿಸಲಾಗಿದೆ. ಇವರು ಪುತ್ತೂರಿನ ಅಂಚೆ ಇಲಾಖೆಯಲ್ಲಿ ಪೋಸ್ಟಲ್ ಅಸಿಸ್ಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ನಿನ್ನೆ ಸಂಜೆ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮೃತರು ಪುತ್ತೂರು ಕೆಎಸ್‌ಆರ್‌ಟಿಸಿಯಲ್ಲಿ ಟ್ರಾಫಿಕ್ ಕಂಟ್ರೋಲರ್ ಆಗಿರುವ ಸೀತಾರಾಮ ಅವರ ಪತ್ನಿಯಾಗಿದ್ದು, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ನಿಧನ ವಾರ್ತೆ
Cheruvayal Raman-ಸಾಂಪ್ರದಾಯಿಕ ಭತ್ತದ ತಳಿಗಳ ಸಂರಕ್ಷಕ, ಪದ್ಮಶ್ರೀ ಪುರಸ್ಕೃತ ಚೆರುವಯಲ್ ರಾಮನ್ ನಿಧನ
ಕೇರಳದ ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂರಕ್ಷಿಸುವುದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಪದ್ಮಶ್ರೀ ಪುರಸ್ಕೃತ ಬುಡಕಟ್ಟು ಸಮುದಾಯದ ರೈತ ಚೆರುವಯಲ್ ರಾಮನ್ (74) ಅವರು ಬುಧವಾರ ನಿಧನರಾಗಿದ್ದಾರೆ.
ತಿರುವನಂತಪುರಂ, ಅ.15: ಕೇರಳದ ಸಾಂಪ್ರದಾಯಿಕ ಭತ್ತದ ತಳಿಗಳನ್ನು ಸಂರಕ್ಷಿಸುವುದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಪದ್ಮಶ್ರೀ ಪುರಸ್ಕೃತ ಬುಡಕಟ್ಟು ಸಮುದಾಯದ ರೈತ ಚೆರುವಯಲ್ ರಾಮನ್ (74) ಅವರು ಬುಧವಾರ ನಿಧನರಾಗಿದ್ದಾರೆ. ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕೇರಳದ ವಯನಾಡು ಜಿಲ್ಲೆಯ ಮಾನಂತವಾಡಿ ಸಮೀಪದ ಕಮ್ಮನಂ ನಿವಾಸಿಯಾಗಿದ್ದ ರಾಮನ್ ಅವರು, ಅಳಿವಿನಂಚಿನಲ್ಲಿದ್ದ 45ಕ್ಕೂ ಹೆಚ್ಚು ಸ್ಥಳೀಯ ಭತ್ತದ ತಳಿಗಳನ್ನು ಸಂರಕ್ಷಿಸುವ ಮೂಲಕ ದೇಶದ ಗಮನ ಸೆಳೆದಿದ್ದರು. ದಶಕಗಳ ಕಾಲ ಸಾಂಪ್ರದಾಯಿಕ ಸಾವಯವ ಕೃಷಿ ಪದ್ಧತಿಗಳನ್ನು ಅನುಸರಿಸಿದ್ದ ಅವರು, ಕೃಷಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ನಿರಂತರವಾಗಿ ಶ್ರಮಿಸಿದ್ದರು.
10ನೇ ವಯಸ್ಸಿನಿಂದಲೇ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು
1952ರ ಜೂನ್ 6ರಂದು ಜನಿಸಿದ್ದ ರಾಮನ್, ಕಮ್ಮನಂ ನವೋದಯ ಲೋವರ್ ಪ್ರೈಮರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಬಳಿಕ ತಮ್ಮ 10ನೇ ವಯಸ್ಸಿನಿಂದಲೇ ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಕೃಷಿಯ ಮೇಲಿನ ಅಪಾರ ಆಸಕ್ತಿಯಿಂದಾಗಿ 1969ರಲ್ಲಿ ಕಣ್ಣೂರು ಜಿಲ್ಲಾ ವೈದ್ಯಕೀಯ ಕಚೇರಿಯಲ್ಲಿ (DMO) ದೊರೆತ ಸರ್ಕಾರಿ ಉದ್ಯೋಗವನ್ನೂ ಅವರು ತಿರಸ್ಕರಿಸಿದ್ದರು.
ಕುರುಚ್ಯ ಬುಡಕಟ್ಟು ಸಮುದಾಯಕ್ಕೆ ಸೇರಿದ ರಾಮನ್, ತಮ್ಮ ಕೃಷಿ ಭೂಮಿಯಲ್ಲಿ ಸಾಂಪ್ರದಾಯಿಕ ತರಕಾರಿಗಳು, ಔಷಧೀಯ ಸಸ್ಯಗಳು ಹಾಗೂ ವಿವಿಧ ಜಾತಿಯ ಮರಗಳನ್ನು ಬೆಳೆಸಿ ಸಂರಕ್ಷಿಸಿದ್ದರು.
ಸಾಂಪ್ರದಾಯಿಕ ವಿಧಾನದಲ್ಲಿ ಬೀಜ ಸಂರಕ್ಷಣೆ
ಭತ್ತದ ಬೀಜಗಳನ್ನು ಸಂರಕ್ಷಿಸಲು ರಾಮನ್ ಅವರು ಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸುತ್ತಿದ್ದರು. ಕೊಯ್ಲು ಮಾಡಿದ ಭತ್ತವನ್ನು ಒಂದು ವಾರದವರೆಗೆ ಬಿಸಿಲು ಮತ್ತು ಇಬ್ಬನಿಗೆ ಒಡ್ಡಿದ ಬಳಿಕ, ಬೀಜಗಳನ್ನು ಬಿಸಿಮಾಡಿದ ಬಿದಿರಿನ ಪಾತ್ರೆಗಳಲ್ಲಿ ಹಾಗೂ ಹುಲ್ಲಿನಿಂದ ತಯಾರಿಸಿದ ಬುಟ್ಟಿಗಳಲ್ಲಿ ಸಂಗ್ರಹಿಸುತ್ತಿದ್ದರು. ಈ ವಿಧಾನದಿಂದ ಬೀಜಗಳ ಮೊಳಕೆಯೊಡೆಯುವ ಸಾಮರ್ಥ್ಯವನ್ನು ಎರಡು ವರ್ಷಗಳವರೆಗೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿತ್ತು.
2011ರಲ್ಲಿ ಹೈದರಾಬಾದ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಜೀವವೈವಿಧ್ಯ ಸಂರಕ್ಷಣಾ ಸಮ್ಮೇಳನದಲ್ಲಿ 11 ದೇಶಗಳ ಪ್ರತಿನಿಧಿಗಳ ನಡುವೆ ಕೇರಳದ ರೈತ ಸಮುದಾಯವನ್ನು ರಾಮನ್ ಪ್ರತಿನಿಧಿಸಿದ್ದರು.
ಸ್ಥಳೀಯ ಸಸ್ಯ ಪ್ರಭೇದಗಳ ಸಂರಕ್ಷಣೆ ಹಾಗೂ ಪರಿಸರ ಸ್ನೇಹಿ ಕೃಷಿಗೆ ನೀಡಿದ ಕೊಡುಗೆಯನ್ನು ಗುರುತಿಸಿ, 2023ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಇದಕ್ಕೂ ಮೊದಲು 2016ರಲ್ಲಿ ರಾಷ್ಟ್ರೀಯ ಸಸ್ಯ ಜೀನೋಮ್ ಸಂರಕ್ಷಕ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಅವರಿಗೆ ಲಭಿಸಿದ್ದವು.
ಗಣ್ಯರಿಂದ ಸಂತಾಪ
ರಾಮನ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಕೇರಳದ ಮುಖ್ಯಮಂತ್ರಿ ವಿ.ಡಿ. ಸತೀಶನ್, ಅವರನ್ನು ವಯನಾಡಿನ ಕೃಷಿ ಪರಂಪರೆಯ ರಕ್ಷಕ ಎಂದು ಬಣ್ಣಿಸಿದ್ದಾರೆ. ಭವಿಷ್ಯದ ಪೀಳಿಗೆಗಾಗಿ ಸಾಂಪ್ರದಾಯಿಕ ಭತ್ತದ ತಳಿಗಳನ್ನು ಉಳಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದ್ದಾರೆ.
ಸ್ಥಳೀಯ ಭತ್ತದ ತಳಿಗಳ ಸಂರಕ್ಷಣೆ, ಸಾವಯವ ಕೃಷಿ ಮತ್ತು ಜೀವವೈವಿಧ್ಯ ರಕ್ಷಣೆಗೆ ತಮ್ಮ ಬದುಕನ್ನೇ ಅರ್ಪಿಸಿದ್ದ ಚೆರುವಯಲ್ ರಾಮನ್ ಅವರ ನಿಧನದಿಂದ ಕೃಷಿ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದೆ.
ನಿಧನ ವಾರ್ತೆ
ಪುತ್ತೂರು: ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕ ಶಿವಪ್ರಸಾದ್ ಜಿ.ಎಸ್. ನಿಧನ
ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪುತ್ತೂರಿನ ನೆಹರೂನಗರ ನಿವಾಸಿ ಶಿವಪ್ರಸಾದ್ ಜಿ.ಎಸ್. (45) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಪುತ್ತೂರು: ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪುತ್ತೂರಿನ ನೆಹರೂನಗರ ನಿವಾಸಿ ಶಿವಪ್ರಸಾದ್ ಜಿ.ಎಸ್. (45) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಜ್ವರದಿಂದ ಬಳಲುತ್ತಿದ್ದ ಅವರು ಅ.14ರಂದು ಕರ್ತವ್ಯಕ್ಕೆ ತೆರಳದೆ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅ.15ರ ಮುಂಜಾನೆ ಸುಮಾರು 2 ಗಂಟೆಯ ವೇಳೆಗೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಮನೆಯವರು ಅವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆದೊಯ್ದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಶಿವಪ್ರಸಾದ್ ಅವರು ಸುಳ್ಯ ತಾಲೂಕು ಪಂಚಾಯತ್‌ನಲ್ಲಿ ಅಕ್ಷರ ದಾಸೋಹ ವಿಭಾಗದ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಆರಂಭಿಸಿದ್ದರು. ಎರಡು ವರ್ಷಗಳ ಹಿಂದೆ ಪದೋನ್ನತಿ ಹೊಂದಿ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ವರ್ಗಾವಣೆಗೊಂಡಿದ್ದರು.
ಸುಳ್ಯ ತಾಲೂಕಿನ ಉಬರಡ್ಕದ ಹುಳಿಯಡ್ಕ ನಿವಾಸಿ ಶಿವರಾಮ ನಾಯಕ್ ಅವರ ಪುತ್ರರಾಗಿದ್ದ ಶಿವಪ್ರಸಾದ್, ಪುತ್ತೂರಿನ ನೆಹರೂನಗರ ಸಮೀಪ ವಾಸವಾಗಿದ್ದರು.


















